Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Saturday, September 12, 2020
Monday, September 7, 2020
Sunday, September 6, 2020
Saturday, September 5, 2020
ದತ್ತಾತ್ರಿ ಎಮ್. ರಾಮಣ್ಣ - ಕೆಂಪು ಮುಡಿಯ ಹೆಣ್ಣು { ಒರ್ಹಾನ್ ಪಮುಕ್ /ಒ. ಎಲ್. ನಾಗಭೂಷಣ ಸ್ವಾಮಿ } O. L. NAGABHUSHANA SWAMI
ಕೆಂಪು ಮುಡಿಯ ಹೆಣ್ಣು
ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಒರ್ಹಾನ್ ಪಮುಕ್‌ರ ‘ದ ರೆಡ್ ಹೇರ್ಡ್ ವುಮನ್’ ಕಾದಂಬರಿಯನ್ನು ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಉತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ. ರವಿಕುಮಾರರ ಅಭಿನವ ಪ್ರಕಾಶನವು ಪುಸ್ತಕವನ್ನು ಅಚ್ಚುಕಟ್ಟಾಗಿ ಪ್ರಕಟಿಸಿದೆ. ಪಮುಕ್‌ರಂತಹ ಬರಹಗಾರರ ಇತ್ತೀಚಿನ ಕೃತಿ ಕನ್ನಡಕ್ಕೆ ಬರುತ್ತಿರುವುದು ಹೆಮ್ಮೆಯ ವಿಚಾರ. ಪಮುಕ್ ಟರ್ಕಿಷ್ ಭಾಷೆಯಲ್ಲಿ ಬರೆಯುವುದರಿಂದ ಅವರ ಕೃತಿಗಳು ನಮಗೆ ಲಭ್ಯವಾಗುವುದು ಇಂಗ್ಲಿಷಿನಲ್ಲಿ. ಇದೊಂದು ಕಾದಂಬರಿಯನ್ನು ಬಿಟ್ಟು ಅವರ ಹಿಂದಿನ ಕಾದಂಬರಿಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಸೋಮಾರಿತನವೂ ಒಮ್ಮೊಮ್ಮೆ ಅನಿರೀಕ್ಷಿತ ಫಲ ಕೊಡುತ್ತದೆ. ಆಗ ಇಂಗ್ಲಿಷಿನಲ್ಲಿ ಓದದ್ದಿದ್ದಕ್ಕೆ ಈಗ ಅದೇ ಪುಸ್ತಕವನ್ನು ಕನ್ನಡದಲ್ಲಿ ಓದುವ ಅದೃಷ್ಟ ಕೂಡಿಬಂತು.
ಪಮುಕ್ ಒಬ್ಬ ಅದ್ಭುತ ಕತೆಗಾರ. ಪುರಾಣ, ಇತಿಹಾಸ, ರಾಜಕೀಯ, ಮತ್ತು ಆಧುನಿಕತೆಯನ್ನು ಅವರು ಬೆರೆಸುವ ರೀತಿ ಅನನ್ಯ. ಅವರು ತಮ್ಮ ಪ್ರಾದೇಶಿಕ ಹಿನ್ನೆಲೆಯನ್ನು ಕತೆಯಲ್ಲಿ ತರುವ ರೀತಿ ಮತ್ತು ಆ ಹಿನ್ನೆಲೆ ಇರದ ನನ್ನಂತಹ ಓದುಗರನ್ನು ತಲುಪುವಲ್ಲಿಯೇ ಅವರ ಕುಶಲಮತಿ ಅಡಗಿದೆ. ನಮ್ಮ ಭರತ ಖಂಡದಂತೆಯೇ ಟರ್ಕಿ ಕೂಡ ಅನೇಕ ವಿಪ್ಲವಗಳ ದೇಶ. ಟರ್ಕಿಯ ವಿಶೇಷವೆಂದರೆ ಅದು ಪೂರ್ವಕ್ಕೂ ಮತ್ತು ಪಶ್ಚಿಮಕ್ಕೂ ನಡುವೆ ಸೇತುವೆಯಂತಿರುವ ಭೂಭಾಗ. ಒಂದು ಕೈಯಲ್ಲಿ ಅದು ಯುರೋಪನ್ನು ಹಿಡಿದಿದ್ದರೆ ಇನ್ನೊಂದು ಕೈಯಲ್ಲಿ ಅರಬ್-ಏಷ್ಯಾವನ್ನು ಹಿಡಿದಿದೆ. ಪಶ್ಚಿಮದ ಆಧುನಿಕತೆ ಮತ್ತು ಪೂರ್ವದ ಸಾಂಪ್ರದಾಯಕತೆ ಟರ್ಕಿಯಲ್ಲಿ ಒಂದಕ್ಕೊಂದು ಬೆರೆತು, ಘರ್ಷಿಸಿ, ಪ್ರೀತಿಸಿ, ದ್ವೇಷಿಸಿ ಅನೇಕ ಬಣ್ಣಗಳನ್ನು ಹುಟ್ಟುಹಾಕುತ್ತವೆ. ಆ ಬಣ್ಣಗಳೇ ಪಮುಕ್‌ರ ವಸ್ತು (ಬಣ್ಣಗಳು ಎಂದು ವಿಶೇಷವಾಗಿ ಹೇಳುತ್ತಿದ್ದೇನೆ, ಏಕೆಂದರೆ ಪಮುಕ್‌ರು ಸಾಹಿತ್ಯಕ್ಕೂ ಮೊದಲು ಚಿತ್ರಕಲಾವಿದನಾಗಲು ಹೊರಟವರು).
ಈ ಕಾದಂಬರಿಯಲ್ಲಿ ಎರಡು ಪುರಾಣಗಳು ಒಂದಕ್ಕೊಂದು ಘರ್ಷಿಸುತ್ತವೆ. ಗ್ರೀಕ್ ಪುರಾಣದ ಈಡಿಪಸ್ ತನಗರಿವಿಲ್ಲದಂತೆ ತನ್ನ ತಂದೆಯನ್ನೇ ಕೊಂದು ರಾಜನಾಗಿ ತಾಯಿಯನ್ನು ವಿವಾಹವಾಗಿರುತ್ತಾನೆ. ಪರ್ಶಿಯಾದ (ಈಗಿನ ಇರಾನ್‌ನ) ಸೊಹ್ರಾಬ್ ರುಸ್ತುಂ ಕತೆಯಲ್ಲಿ ಸುಲ್ತಾನ ರುಸ್ತುಂ ತನಗರಿವಿಲ್ಲದೆ ತನ್ನ ಮಗ ಸೊಹ್ರಾಬನನ್ನು ಕೊಲ್ಲುತ್ತಾನೆ. ಪಶ್ಚಿಮದ್ದು ‘ಪಿತೃಹತ್ಯೆ’, ಪೂರ್ವದ್ದು ‘ಪುತ್ರಹತ್ಯೆ’. ಎರಡು ಪುರಾತನ ಪ್ರತಿಮೆಗಳು ಎರಡು ಹಿರಿಯ ನಾಗರೀಕತೆಗಳಿಂದ ಬಂದು ಟರ್ಕಿಯಲ್ಲಿ ಸಂಧಿಸುತ್ತವೆ. ಪಿತೃ-ಪುತ್ರರಲ್ಲಿ ಸತ್ತವರು ಯಾರೇ ಆದರೂ ರೋದಿಸುವವಳು ಒಬ್ಬಳೇ, ಪತ್ನಿ ಮತ್ತು ತಾಯಿ ಎನ್ನಿಸಿಕೊಂಡವಳು. ಹಾಗೆಂದು ಈ ಕಾದಂಬರಿ ಪೌರಾಣಿಕ ಕತೆಯಲ್ಲ, ಪಕ್ಕಾ ಆಧುನಿಕ ಬದುಕಿನ ಕತೆ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿಯವರ ಅನುವಾದ ಕಾದಂಬರಿಯನ್ನು ಕನ್ನಡದ ಕತೆಯನ್ನಾಗಿಸಿದೆ. ನಿರೂಪಣೆಯಲ್ಲಾಗಲಿ ಅಥವಾ ಸಂಭಾಷಣೆಯಲ್ಲಾಗಲಿ ಸಾಮಾನ್ಯವಾಗಿ ಅನುವಾದಗಳಲ್ಲಿ ಕಾಣುವ ಕೃತ್ರಿಮತೆ ಇಲ್ಲಿ ಇಲ್ಲ. ಇಂಗ್ಲಿಷ್ ವಾಕ್ಯಗಳು ಕನ್ನಡಕ್ಕೆ ಅನುವಾದಗೊಂಡಿಲ್ಲ ಬದಲಿಗೆ ರೂಪಾಂತರಗೊಂಡಿವೆ. ಕನ್ನಡದ ಸಹಜತೆಯನ್ನು ಧರಿಸಿವೆ. ಇಸ್ತಾಂಬುಲ್ ಹೆಸರು ತೆಗೆದು ಬೆಂಗಳೂರು ಎಂದು ಮಾಡಿದರೆ ಇದು ಯಾವ ವ್ಯತ್ಯಾಸವೂ ಇಲ್ಲದೆ ಈ ಭೌಗೋಳಿಕ ಭಾಗದ ಕತೆಯೇ ಆಗಿಬಿಡುತ್ತದೆ. ಸಾಹಿತ್ಯಾಸಕ್ತರು ಖಂಡಿತಕ್ಕೂ ಓದಬೇಕಾದ ಪುಸ್ತಕವಿದು.
ದತ್ತಾತ್ರಿ ಎಂ ರಾಮಣ್ಣ
37KV Subramanyam, Sadananda Bhat Vaijayanta and 35 others
2 Comments
Like
Comment
Share
Subscribe to:
Posts (Atom)