Powered By Blogger

Saturday, October 23, 2021

ಅಕ್ಷತಾ ಕೃಷ್ಣಮೂರ್ತಿ- ಗಜಲ್… | ಅವಧಿ । Akshatha krishnamoorthy

ಅಕ್ಷತಾ ಕೃಷ್ಣಮೂರ್ತಿ- ಗಜಲ್… | ಅವಧಿ । AVADHI

ಇಗ್ಗಪ್ಪ ಹೆಗಡೇ ವಿವಾಹ ಪ್ರಸಂಗ | ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ | ಡಾ. ಶ್ರೀಪಾದ ಭಟ್ /KARKAKIVENKATARAMANA SHASTRI / Dr Sripada Bhat

ಬಳೆ.ಡಾ.ಪಿಬಿ ಪ್ರಸನ್ನ ಕಥೆಗೆ ಸುರೇಶ ಹೆಗಡೆ ಪ್ರಸ್ತುತಿ.Bale.Dr PB Prasanna stor...

ಪಾರ್ವತಿ ಜಿ ಐತಾಳ್ - ಚಾಂದ್ರಿಯಾಣದ ಸುಯಾತ್ರಿ } ಪ್ರೊ/ ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತ ಉಪನ್ಯಾಸಗಳ ಸಂಕಲನ } Sripati Tantri

ಕೃತಿಯ ಹೆಸರು : ಚಾಂದ್ರಿಯಾಣದ ಸುಯಾತ್ರಿ ( ಪ್ರೊ.ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತಾದ ಉಪನ್ಯಾಸಗಳ ಸಂಕಲನ) ಸಂಪಾದಕರು : ಮಂಜುನಾಥ ಭಟ್ ಹಾರ್ಯಾಡಿ ಪ್ರಕಾಶಕರು : ಆರ್ ಜಿ.ಪೈ ಸಂಶೋಧನಾ ಕೇಂದ್ರ ಉಡುಪಿ. ಪ್ರೊ.ಪಿ.ಶ್ರೀಪತಿ ತಂತ್ರಿಯವರು ನಾಡಿನ ಶ್ರೇಷ್ಠ ಸಾಂಸ್ಕೃತಿಕ ಚಿಂತಕರು, ಲೇಖಕರು ಮತ್ತು ಸಮಾಜಶಾಸ್ತ್ರಜ್ಞರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ನಿವೃತ್ತಿಯ ನಂತರವೂ ನಿರಂತರವಾಗಿ ಚಟುವಟಿಕೆಯಲ್ಲಿದ್ದವರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ, ಕಾಲೇಜುಗಳ ಪ್ರಾಂಶುಪಾಲರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ತೊಡಗಿ ಇಂದಿನ ತನಕವೂ ಒಂದಿಲ್ಲೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದವರು. ಸಮಾಜಶಾಸ್ತ್ರಜ್ಞರಾಗಿ ಅವರು ಬರೆದ ಅಪೂರ್ವ ಕೃತಿಗಳನ್ನು ಪರಿಗಣಿಸಿ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತ್ತು. ಅವರಿಗೆ 75 ವರ್ಷಗಳು ತುಂಬಿದಾಗ ಉಡುಪಿಯ ಜನತೆ ಅವರ ಅಭಿನಂದನಾ ಸಮಾರಂಭ ಏರ್ಪಡಿಸಿ 'ಶ್ರೀಪದ'ಎಂಬ ಗ್ರಂಥವನ್ನೂ ಹೊರತಂದಿದ್ದರು. ಈಗ ಅವರ ಎಂಬತ್ತನೆಯ ವರ್ಷವನ್ನು ಅವರ ಸಲಹೆಯಂತೆ ಅವರ ಅಮೂಲ್ಯ ಕೃತಿಯಾದ 'ಆಜೀವಿಕರು' ಇದರ ಕುರಿತಾದ ಚರ್ಚೆಯ ಮೂಲಕ ಆಚರಿಸಿ 'ಚಾಂದ್ರಿಯಾಣದ ಸುಯಾತ್ರಿ' ಎಂಬ ಸುಂದರ ಶೀರ್ಷಿಕೆಯುಳ್ಳ ಕೃತಿಯನ್ನು ಪ್ರಕಟಿಸಿದ್ದಾರೆ. ನಾಡಿನ ಸುಪ್ರಸಿದ್ಧ ಚಿಂತಕರು ಹಾಗೂ ವಿದ್ವನ್ಮಣಿಗಳು ಮಾತನಾಡಿದ ಈ ವಿಚಾರಸಂಕಿರಣದಲ್ಲಿ ಅವರು ಮಾಡಿದ ಭಾಷಣಗಳನ್ನು ಸಂಪಾದನೆ ಮಾಡುವ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಮಂಜುನಾಥ ಭಟ್, ಹಾರ್ಯಾಡಿ ಅವರು. 'ಆಜೀವಿಕರು' ಬೌದ್ಧ ಹಾಗೂ ಜೈನಧರ್ಮಗಳ ಹಾಗೆಯೇ ಒಂದು ಪಂಥ. ಆದರೆ ಬೌದ್ಧ-ಜೈನ ಪಂಥಗಳಿಗೆ ಸಿಕ್ಕಿದ ಪ್ರಚಾರ ಅದಕ್ಕೆ ಸ್ವಲ್ಪವೂ ಸಿಗಲಿಲ್ಲ. ಮಸ್ಕಿರಿ ಗೋಶಾಲ ಅನ್ನುವವನು ಸ್ಥಾಪಿಸಿದ ಈ ಪಂಥವು ಬದುಕನ್ನು ಮುಖ್ಯವಾಗಿ ನಿಯತಿವಾದದ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. ತಂತ್ರಿಯವರು ಬರೆದ ಈ ಕೃತಿಯು ಅವರ ಭಾರತೀಯ ಪ್ರಾಚೀನ ಸಾಹಿತ್ಯ ಮೂಲದ ಸಮಾಜ ಶಾಸ್ತ್ರೀಯ ಚಿಂತನೆಗಳ ಮೂಲಕ ಬಂದಿದೆ. 'ಆಜೀವಿಕರು-ವೇದೋತ್ತರ ದಾರ್ಶನಿಕ ಬೆಳವಣಿಗೆಗಳು'ಎಂಬ ಶೀರ್ಷಿಕೆಯುಳ್ಳ ಇದು ವೇದಕಾಲದ ಬಗೆಗೂ ವಾಸ್ತು, ತಂತ್ರ ಮತ್ತು ಆಗಮಶಾಸ್ತ್ರಗಳ ಬಗೆಗೂ ಬಹಳಷ್ಟು ಹೊಸ ವಿಚಾರಗಳನ್ನು ಹೇಳುತ್ತದೆ. ಪ್ರಾಚೀನ ಕೃತಿಗಳಲ್ಲಿ ಕಾಣುವ ಭಾಷಾ ಕ್ಲಿಷ್ಟತೆಯಿಲ್ಲದೆ ಆಸಕ್ತಿಯಿರುವ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಹೇಳಲು ಪ್ರಯತ್ನಿಸುತ್ತದೆ ಅನ್ನುವುದು ಇಲ್ಲಿನ ಉಪನ್ಯಾಸಕರ ಅಭಿಪ್ರಾಯ. ಹಿಂದಿನ ವ್ಯಾಖ್ಯಾನಕಾರರಿಗಿಂತ ಭಿನ್ನವಾಗಿ ತಮ್ಮ ಅಭಿಪ್ರಾಯಗಳನ್ನು ತಾರ್ಕಿಕ ಸಮರ್ಥನೆಯೊಂದಿಗೆ ತಮ್ಮ ಇತರ ಕೃತಿಗಳಲ್ಲಿ ಮಾಡಿದಂತೆ ತಂತ್ರಿಯವರು ಇಲ್ಲಿಯೂ ಮಂಡಿಸಿದ್ದಾರೆ. ವೇದಗಳು ಎಲ್ಲರೂ ನಂಬಿರುವಂತೆ 'ಪರಾವಿದ್ಯೆ'ಯಲ್ಲ, ಬದಲಾಗಿ ಇತಿಹಾಸ, ಪುರಾಣ, ಸಾಮಾಜಿಕ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ ನಂತರ ಅಧ್ಯಯನ ಮಾಡಬೇಕಾದ 'ಅಪರಾವಿದ್ಯೆ' ಅನ್ನುತ್ತಾರೆ. 'ಸನಾತನ' ಅನ್ನುವ ಪದಕ್ಕೆ ಎಲ್ಲರೂ ತಿಳಿದಿರುವಂತೆ ಪ್ರಾಚೀನ ಎಂಬ ಅರ್ಥ ಮಾತ್ರವಲ್ಲ, ನೂತನ ಎಂಬ ಅರ್ಥವೂ ಇದೆ. ಆದ್ದರಿಂದ ಹಿಂದೂ ಧರ್ಮವನ್ನು ಸನೂತನ ಧರ್ಮ, ಅಂದರೆ ಸದಾ ಹರಿಯುವ ನದಿಯಂತೆ ಹೊಸದನ್ನು ಸೇರಿಸಿಕೊಳ್ಳಲು ಸಿದ್ಧವಿರುವ ಧರ್ಮ ಅನ್ನಬಹುದು ಅನ್ನುತ್ತಾರೆ. ಜಾತಿ ಜಾತಿಯೆಂದು ಬಡಿದಾಡಿಕೊಳ್ಳುವವರು ವೇದ- ಉಪನಿಷತ್ತುಗಳ ಕಾಲದಿಂದಲೂ ಚಾತುರ್ವಣ್ಯ ಪದ್ಧತಿಯಿತ್ತು ಮತ್ತು ಜಾತಿಯ ಹೆಸರಿನಲ್ಲಿ ಬ್ರಾಹ್ಮಣರು ಇತರರನ್ನು ಶೋಷಿಸುತ್ತಿದ್ದರು ಅನ್ನುವವರು ವೇದ ಮತ್ತು ಉಪನಿಷತ್ರುಗಳಲ್ಲಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನ್ನುತ್ತಾರೆ. ಉಪನಿಷತ್ ವ್ಯಾಖ್ಯಾನಕಾರ ಸಾಯಣರೇ ಛಾಂದೋಗ್ಯೋಪನಿಷತ್ತಿನಲ್ಲಿ ಬರುವ ಪಂಚಜನಾಃ ಎಂಬ ಪದವನ್ನು ಚಾತುರ್ವಣ್ಯಕ್ಕೆ ತಳಕು ಹಾಕಿದ್ದಾರೆ, ಆದರೆ ಅದು ತಪ್ಪು ಎಂದು ತಂತ್ರಿಯವರು ಸ್ಥಾಪಿಸುತ್ತಾರೆ. ಬೌದ್ಧ ಧರ್ಮವನ್ನು ಕೊಂಡಾಡುವವರು ಅದರ ತತ್ವಗಳು ಮತ್ತು ಉಪನಿಷತ್ತಿನ ತತ್ವಗಳ ನಡುವಣ ಸ್ಪಷ್ಟ ಸಾಮ್ಯವನ್ನೇಕೆ ಗಮನಿಸುವುದಿಲ್ಲ , ತತ್ವಮಸಿ(ನೀನು ಅದೇ ಆಗಿರುವೆ)ಎಂಬ ಹೇಳಿಕೆಯಲ್ಲಿ ಭ್ರಮನಿರಸನದ ಸೂಚನೆಯಿದೆ ಅನ್ನುವವರು ಆ ಭ್ರಮನಿರಸನವನ್ನೇ ಭ್ರಮೆಯಿಂದ ಮುಕ್ತಿ ಎಂದು ಧನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಕೇಳುತ್ತಾರೆ. ಇಂಥ ನೂರಾರು ಚರ್ಚೆಗಳಿಗೆ ಆಸ್ಪದ ನೀಡುವ 'ಆಜೀವಿಕರು'ಕೃತಿಯ ಬಗ್ಗೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಡಾ.ರಾಜಾರಾಂ ತೋಳ್ಪಾಡಿ, ಡಾ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯಭಟ್ ಗುಂಡಿಬೈಲು, ಪ್ರೊ.ವರದೇಶ್ ಹಿರೇಗಂಗೆಯವರ ಅಭಿಪ್ರಾಯಗಳು ಈ ಕೃತಿಯಲ್ಲಿವೆ. ತಮ್ಮ ಪ್ರಧಾನ ಕ್ಷೇತ್ರವಾದ ಸಮಾಜಶಾಸ್ತ್ರ ಮಾತ್ರವಲ್ಲದೆ ಸಂಸ್ಕೃತ ಸಾಹಿತ್ಯದ ಬಗೆಗೂ ಅಪಾರ ಜ್ಞಾನ ರಾಶಿಯನ್ನು ತಮ್ಮದಾಗಿಸಿದ ತಂತ್ರಿಯವರನ್ನು ವಿಶ್ವೇಶತೀರ್ಥ ಶ್ರೀಪಾದಂಗಳವರು 'ಚಲಿಸುವ ವಿಶ್ವಕೋಶ'ಎಂಬುದಾಗಿ ವ್ಯಾಖ್ಯಾನಿಸುತ್ತಾರೆ. ಮುಂದಿನ ಭಾಗದಲ್ಲಿ ತಂತ್ರಿಯವರ ಶೈಕ್ಷಣಿಕ ಚಿಂತನೆಗಳು ಮತ್ತು ಅವರು ಸಮಾಜ ಶಾಸ್ತ್ರವನ್ನು ಪಾಶ್ಚಾತ್ಯ ಶೈಲಿಯನ್ನು ಅನುಸರಿಸುವ ಇತರರಿಗಿಂತ ಭಿನ್ನ ರೀತಿಯಲ್ಲಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವ ವಿಧಾನದ ಕುರಿತು ಡಾ.ಸುಧಾರಾವ್, ಪ್ರೊ.ಭೈರಪ್ಪ, ಪ್ರೊ.ಎಡಪಡಿತ್ತಾಯರ ನಿಲುವುಗಳಿವೆ. ಅಲ್ಲದೆ ಓರ್ವ ಗುರುಗಳಾಗಿ, ಸ್ನೇಹಿತರಾಗಿ , ಮಾರ್ಗದರ್ಶಕರಾಗಿ ತಂತ್ರಿಯವರನ್ನು ಕಂಡ ಅಮೆರಿಕದ ಅಭಿಮಾನಿಗಳು ಬರೆದ ಲೇಖನಗಳೂ ಇವೆ. ತಂತ್ರಿಯವರ ಗುರುಗಳಾದ ಇರಾವತಿ ಕರ್ವೆಯವರ ಬಹು ಮುಖ್ಯ ಮಹಾ ಕಾದಂಬರಿ 'ಯುಗಾಂತ'(ಮಹಾಭಾರತದ ಕುರಿತಾದ ಕಥೆ)ವನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ಬಗ್ಗೆಯೂ ಇಲ್ಲಿ ಎಲ್ಲ ಭಾಷಣಕಾರರು ಉಲ್ಲೇಖಿಸಿದ್ದಾರೆ. ಧ್ವನಿಮುದ್ರಿಕೆಯಿಂದ ಭಾಷಣಗಳನ್ನು ಸಂಗ್ರಹಿಸುವುದು, ವಾಕ್ಯಗಳಿಗೆ ಸರಿಯಾದ ರೂಪ ಕೊಡುವುದು ಸುಲಭದ ಕೆಲಸವಲ್ಲ. ಆದ್ದರಿಂದ ಇಲ್ಲಿ ಎಲ್ಲ ಭಾಷಣಗಳನ್ನು ತಮ್ಮದೇ ಭಾಷೆಯಲ್ಲಿ ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿದ ಮಂಜುನಾಥ ಭಟ್ಟರ ಪ್ರತಿಭೆ- ಪರಿಶ್ರಮಗಳು ಅಭಿನಂದನೀಯ. ಪಾರ್ವತಿ ಜಿ.ಐತಾಳ್

Sunday, October 17, 2021

ಶೂದ್ರ ಶ್ರೀನಿವಾಸ್ -ರಾಮಚಂದ್ರ ಶರ್ಮ / Ramachandra Sharma / Shudra Srinivas/

ರಾಮಚಂದ್ರ ಶರ್ಮ ನಾಲ್ಕು ಮಾತು ಬಿ.ಸಿ.ರಾಮಚಂದ್ರ ಶರ್ಮ ಎಂದಾಕ್ಷಣ ನೆನಪಿನ ನಾನಾ ಸಂಗತಿಗಳು ಗರಿಗೆದರಿ ನಿಲ್ಲುತ್ತವೆ. ಯಾಕೆಂದರೆ ಅಷ್ಟರಮಟ್ಟಿಗೆ ಅವರು ತಮ್ಮ ಬದುಕಿನ ಕಾಲಘಟ್ಟದಲ್ಲಿ ಕ್ರಿಯಾಶೀಲರಾಗಿದ್ದವರು.ಅದರಲ್ಲೂ ನವ್ಯಕಾವ್ಯದ ಪ್ರಾರಂಭದ ಹಂತದಲ್ಲಿ ಅದರ ಬಗ್ಗೆ ನಡೆಯುತ್ತಿದ್ದ ಎಲ್ಲಾ ವಿಧವಾದ ವಾಗ್ವಾದ , ಸಂವಾದಗಳಲ್ಲಿ ಗೋಪಾಲಕೃಷ್ಣ ಅಡಿಗರು ಮತ್ತು ರಾಮಚಂದ್ರ ಶರ್ಮ ಅವರು ಅದಕ್ಕೆ ಚೇತೋಹಾರಿತನ ತುಂಬಿದವರು. ಇವರಿಗೆ ಪೂರಕವಾಗಿ ಯು.ಆರ್.ಅನಂತಮೂರ್ತಿ , ಲಂಕೇಶ್, ಶಾಂತಿನಾಥ ದೇಸಾಯಿ ,ಕೆ.ವಿ.ತಿರುಮಲೇಶ್, ಹೆಚ್.ಎಂ.ಚನ್ನಯ್ಯ ಮುಂತಾದವರ ಮಾತು ಮತ್ತು ಬರವಣಿಗೆ ಆ ಎಲ್ಲಾ ವಾಗ್ವಾದಗಳಿಗೆ ಚೈತನ್ಯಶೀಲತೆಯನ್ನು ತಂದುಕೊಡುತ್ತಿತ್ತು. ನಾವು ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದಾಗ ರಾಮಚಂದ್ರ ಶರ್ಮ ಅವರು ವಿದೇಶದ ಇಥಿಯೋಪಿಯಾದಿಂದ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬಂದಾಗ ಕಡ್ಡಾಯವಾಗಿ ನಾವು ಅವರ ಕವಿತೆಗಳ ಓದು ಮತ್ತು ಮಾತು ಕೇಳಿಸಿಕೊಳ್ಳುವ ಸದಾವಕಾಶ ಲಭಿಸಿತ್ತು.ಅದರಲ್ಲೂ ನಾನು ಆನರ್ಸ್ ವಿದ್ಯಾರ್ಥಿಯಾಗಿದ್ದಾಗ ಅವರ ಕವಿತೆಗಳ ಚರ್ಚೆ ಎಷ್ಟು ಗಂಭೀರವಾಗಿ ನಡೆಯುತ್ತಿತ್ತು. ಇಪ್ಪತ್ಮೂರು ವರ್ಷ ಇಥಿಯೋಪಿಯಾ , ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತಮಟ್ಟದ ಶಿಕ್ಷಣ ತಜ್ಞರಾಗಿ ಕೆಲಸ ನಿರ್ವಹಿಸಿದ ಮೇಲೆ ಭಾರತಕ್ಕೆ ಹಿಂದಿರುಗಿ ಬಂದರು. ಇಲ್ಲಿಗೆ ಬಂದ ಮೇಲೆ ಸುಮಾರು ಇಪ್ಪತ್ನಾಲ್ಕು ವರ್ಷಗಳಿಗೂ ಮೇಲ್ಪಟ್ಟು ಅವರ ಜೊತೆಗಿನ ಸ್ಮರಣೀಯ ಒಡನಾಟವನ್ನು ಮರೆಯಲು ಸಾದ್ಯವಿಲ್ಲ. ಇದಕ್ಕೆ ಕೇಂದ್ರ ವ್ಯಕ್ತಿಯಾಗಿ ಲಂಕೇಶ್ ಅವರು ಸಾಂಸ್ಕೃತಿಕ ಸಂಪರ್ಕ ಸೇತುವೆಯಾಗಿದ್ದರು.ಅಲ್ಲಿ ಕೆ.ಮರುಳಸಿದ್ದಪ್ಪ, ಡಿ.ಆರ್.ನಾಗರಾಜ್ , ಕವಿ ಸಿದ್ಧಲಿಂಗಯ್ಯ , ಡಾ.ಕೆ.ಎಂ.ಶ್ರೀನಿವಾಸ ಗೌಡ , ಬಸವರಾಜ ಅರಸ್ ,ಅಗ್ರಹಾರ ಹಾಗೂ ಹೊರಗಡೆಯಿಂದ ತೇಜಸ್ವಿ ,ಕೆ.ರಾಮದಾಸ್, ಯು.ಆರ್.ಅನಂತಮೂರ್ತಿ, ಲಕ್ಷ್ಮೀಶ ತೊಳ್ಪಾಡಿ ,ಕೆ.ವಿ.ತಿರುಮಲೇಶ್ ,ಕಿ.ರಂ.ನಾ ಮುಂತಾದವರು ಬಂದಾಗ ಮಾತುಕತೆಗೆ ಎಂಥ ಅನನ್ಯತೆ ತುಂಬಿಕೊಳ್ಳುತ್ತಿತ್ತು.ಆಗ ಸಾಹಿತ್ಯ ಕುರಿತ ಲವಲವಿಕೆಯ ಮಾತು ಮತ್ತು ಕಾವ್ಯದ ಓದು ಆಪ್ತವಾಗಿರುತ್ತಿತ್ತು. ಶರ್ಮ ಅವರಿಗೆ ಕಾವ್ಯದ ಓದು ಮತ್ತು ಅದನ್ನು ಕುರಿತ ಮಾತುಕತೆ ಎಂದರೆ ಎಲ್ಲಿಲ್ಲದ ಚೈತನ್ಯ ಶೀಲತೆ ತುಂಬಿಕೊಳ್ಳುತ್ತಿತ್ತು.ಅಂದರೆ : ಕಾವ್ಯ ಮತ್ತು ಸಾಹಿತ್ಯದ ಬಗ್ಗೆ ಅವರಿಗೆ ಅಷ್ಟೊಂದು ಆರಾಧನೆಯ ಭಾವ ಇತ್ತು.ಈ ಕಾರಣದಿಂದ ಅವರು ತಮ್ಮೊಂದಿಗೆ ವಿದೇಶದಿಂದ ತಂದ ಕಾರಿನಲ್ಲಿ ಡಿ.ಆರ್ ಮತ್ತು ನಾನು ಕರ್ನಾಟಕದ ಎಂತೆಂಥ ಕಡೆ ಸುತ್ತಾಡಿದ್ದೇವೆ. ಕಾರು ಓಡಿಸುವಾಗ ಅತ್ಯಂತ ಮೌನಿಯಾಗಿ ನಮ್ಮ ತುಂಟತನದ ಮಾತುಗಳಿಗೆ ಸ್ಪಂದಿಸುತ್ತಿದ್ದ ಕ್ರಮವೇ ಅಪೂರ್ವವಾದದ್ದು. ' ಶೂದ್ರ ' ದ ಎಲ್ಲಾ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.ಹಾಗೆ ನೋಡಿದರೆ ಅವರ ' ಈ ಶತಮಾನದ ನೂರು ಇಂಗ್ಲೀಷ್ ಕವಿತೆಗಳು ' ಸಂಕಲನವನ್ನು ಶೂದ್ರ ವೇದಿಕೆ ಮೂಲಕ ಬಿಡುಗಡೆ ಮಾಡುವಾಗ ಎಂಥ ಹಿರಿಯ ಲೇಖಕರೆಲ್ಲ ಭಾಗಿಯಾಗಿದ್ದರು. ಮುಂದೆ ' ಜಾಗೃತ ಸಾಹಿತ್ಯ ಸಮಾವೇಶ ' ನಡೆದಾಗ ನಮ್ಮೊಂದಿಗೆ ಎಷ್ಟು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಅವರೊಂದಿಗೆ ಅವರ ' ಅನನ್ಯ ' ವೇದಿಕೆಯ ಜೊತೆ ' ಶೂದ್ರ ' ಸೇರಿಸಿಕೊಂಡು ತಿಂಗಳ ಕೊನೆಯ ಶನಿವಾರ ಎಂತೆಂಥ ಅರ್ಥಪೂರ್ಣ ಸಂವಾದಗಳನ್ನು ನಡೆಸಿದೆವು. ಇದಕ್ಕೆ ಡಿ.ಆರ್ ಮತ್ತು ಕಿ.ರಂ ಅವರ ಮಾರ್ಗದರ್ಶನ ಇತ್ತು.ಮತ್ತೊಂದು ‌ ಲವಲವಿಕೆಯ ಭಾಗವಹಿಸುವಿಕೆ ಎಂದರೆ : ಪ್ರತಿವಾರ ಎರಡು ದಿವಸ ನಾವು ಕಾರ್ಡ್ಸ್ ಆಡಲು ಲಂಕೇಶ್ ಅವರ ಕಛೇರಿಯಲ್ಲಿ ಸೇರಿದಾಗ ಎಷ್ಟು ತನ್ಮಯತೆಯಿಂದ ಭಾಗಿ ಯಾಗುತ್ತಿದ್ದರು.ಅವರಿಗೆ ಕಾವ್ಯದಷ್ಟೇ ಕಾರ್ಡ್ಸ್ ಆಡುವುದರ ಬಗ್ಗೆ ಗಾಢವಾದ ವ್ಯಾಮೋಹವಿತ್ತು.ಇಂಥ ತುಂಬು ಮನಸ್ಸಿನ ವ್ಯಕ್ತಿತ್ವದ ಶರ್ಮ ಅವರು ಡಿ.ಆರ್ ಮತ್ತು ಲಂಕೇಶ್ ನಿಧನರಾದಾಗ ತುಂಬಾ ವೇದನೆಗೆ ಒಳಗಾಗಿದ್ದರು.ಹಾಗೆಯೇ ನಾನು ಅವರ ಕೊನೆಯ ದಿನಗಳ ದೈಹಿಕ ನೋವನ್ನು ಹತ್ತಿರ ದಿಂದ ಕಂಡವನು.ಈ ಕೃತಿಯನ್ನು ನನಗೆ ನಾನಾ ಕಾರಣಗಳಿಗಾಗಿ ಪ್ರಿಯರಾದ ಶಾ.ಬಾಲೂರಾವ್ ಅವರ ಬಹುದೊಡ್ಡ ವ್ಯಕ್ತಿತ್ವಕ್ಕೆ ಅರ್ಪಿಸುತ್ತಿರುವೆ.ಅವರು ಶರ್ಮ ಅವರಿಗೂ ಆಪ್ತರಾಗಿದ್ದವರು. ಇಂಥ ಮಹತ್ವದ ಲೇಖಕ ಮತ್ತು ಕವಿ ರಾಮಚಂದ್ರ ಶರ್ಮ ಅವರನ್ನು ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬರೆದು ಕೊಡಲು ಕವಿ ಸಿದ್ದಲಿಂಗಯ್ಯ ಮತ್ತು ಅದರ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಅವರು ಸೂಚಿಸಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಮತ್ತೆ ಮತ್ತೆ ಒತ್ತಡ ತರುತ್ತಿದ್ದವರು ಕವಿ ಸಿದ್ದಲಿಂಗಯ್ಯ ಅವರು. ಕೊನೆಗೆ ನಾನು ಸಿದ್ದಪಡಿಸಿ ಕೊಟ್ಟಾಗ ಸಂತೋಷದಿಂದ ನನಗೆ ಧನ್ಯವಾದ ಸೂಚಿಸಿದ್ದರು.ಅವರು ಆಸ್ಪತ್ರೆಗೆ ಹೋಗುವ ನಾಲ್ಕು ದಿವಸಗಳ ಮುಂಚೆ " ಗುರುಗಳೇ ಜಾಗ್ರತೆ ಪುಸ್ತಕ ಹೊರ ತರುತ್ತೇವೆ.ಬಿಡುಗಡೆಯ ಕಾರ್ಯಕ್ರಮ ಇಟ್ಟುಕೊಳ್ಳೋಣ " ಎಂದಿದ್ದರು.ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವೆ. ಹಾಗೆಯೇ ಮತ್ತೆ ಮತ್ತೆ ಒತ್ತಡ ತಂದು ಬರೆಸಿದ ಮಹಾಲಿಂಗೇಶ್ವರ ಭಟ್ ಅವರಿಗೆ ಋಣಿಯಾಗಿರುವೆ. ಇದನ್ನು ಬರೆಯುವ ವಿಷಯ ತಿಳಿದು ನನ್ನ ಗುರುಗಳು ಮತ್ತು ಮಾರ್ಗದರ್ಶಕರಾದ ಡಾ.ಕೆ.ಮರುಳಸಿದ್ದಪ್ಪ ಅವರು " ಶೂದ್ರ ಸಂತೋಷ ನೀವು ಬರೆಯುತ್ತಿರುವುದು. ಜಾಗ್ರತೆ ಬರೆದು ಕೊಡಿ " ಎಂದಿದ್ದರು.ಇದೇ ಸಮಯದಲ್ಲಿ ಗೆಳೆಯರಾದ ಪ್ರೊ.ದಂಡಪ್ಪ , ಡಾ.ಎಚ್.ಎಸ್.ಮಾಧವರಾವ್ ಮತ್ತು ಬಸವರಾಜ ಮೇಗಲಕೇರಿ ಅವರಿಗೆ ಕೃತಜ್ಞತೆ ಗಳನ್ನು ಅರ್ಪಿಸುವೆ.ಹಾಗೆಯೇ ಸುಂದರವಾದ ಶರ್ಮರ ಭಾವಚಿತ್ರ ಕೊಟ್ಟ ಪ್ರಸಿದ್ಧ ಛಾಯಾಗ್ರಾಹಕ ಎ.ಎನ್.ಮುಕುಂದ್, ಅಕಾದೆಮಿಯ ಸುರೇಶ್ ಅವರಿಗೆ. ಶೂದ್ರ ಶ್ರೀನಿವಾಸ್ ಬೆನ್ನುಡಿ ಬಿ.ಸಿ.ರಾಮಚಂದ್ರ ಶರ್ಮ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದ್ದವರು. ಕವಿಯಾಗಿ ,ಕಥೆಗಾರರಾಗಿ ಹಾಗೂ ಅನುವಾದಕರಾಗಿ ಅತ್ಯಂತ ಮಹತ್ವದ ಲೇಖಕರು.( 1925-2005 ) ಅಷ್ಟೇ ಅಲ್ಲ ಶಿಕ್ಷಣ ತಜ್ಞರಾಗಿ ಇಪ್ಪತ್ಮೂರು ವರ್ಷ ಇಥಿಯೋಪಿಯಾ ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ ವಾಪಸ್ಸು ಬಂದರು.ನವ್ಯಕಾವ್ಯ ಸಂದರ್ಭಕ್ಕೆ ಬಹು ದೊಡ್ಡ ಕೊಡುಗೆಯನ್ನು ಕೊಟ್ಟವರು.ಅವರ ಶ್ರೀಮತಿ ಪದ್ಮ ಮತ್ತು ಶರ್ಮ ಅವರು ಜೊತೆಗೂಡಿ ಕನ್ನಡದ ಕೆಲವು ಮುಖ್ಯ ಕೃತಿ ಗಳನ್ನು ಇಂಗ್ಲೀಷ್ ಭಾಷೆಗೆ ಅಚ್ಚುಕಟ್ಟಾಗಿ ಅನುವಾದಿಸಿ ವಿಮರ್ಶಕರ ಮೆಚ್ಚಿಗೆ ಪಡೆದರು.ತಮ್ಮ ಬದುಕಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಲೋಕಕ್ಕೆ ಕೆಲವು ಅಪೂರ್ವ ಮೆಲುಕು ಹಾಕಬಹುದಾದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ------ ಸಾಹಿತ್ಯ ಅಕಾದೆಮಿಯ ' ಭಾರತೀಯ ಸಾಹಿತ್ಯ ನಿರ್ಮಾಪಕರು ' ಮಾಲಿಕೆಗಾಗಿ ಬಿ.ಸಿ.ರಾಮಚಂದ್ರ ಶರ್ಮ ಅವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಕುರಿತು ಬರೆದು ಕೊಟ್ಟಿರುವ ಶೂದ್ರ ಶ್ರೀನಿವಾಸ್ ಅವರು ಕನ್ನಡದ ಹಿರಿಯ ಲೇಖಕರು.' ಶೂದ್ರ ' ಸಾಹಿತ್ಯ ಪತ್ರಿಕೆಯ ಮೂಲಕ ನಾಲ್ಕು ದಶಕಗಳಿಗೂ ಮೇಲ್ಪಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮುಖ್ಯರಾಗಿರು ವಂಥವರು.ಲೇಖಕರಾಗಿ ,ಕಾದಂಬರಿಕಾರ ರಾಗಿ ,ಕಥೆಗಾರರಾಗಿ , ಅಂಕಣಕಾರ ರಾಗಿ, ಜೀವನಚರಿತ್ರೆಕಾರರಾಗಿ ಗಂಭೀರವಾಗಿ ತೊಡಗಿಸಿಕೊಂಡವರು. ಪ್ರವಾಸ ಕಥನ ಕೂಡ ಇವರಿಗೆ ಪ್ರಿಯವಾದ ವಿಷಯ. ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರ್ತಿಸಿಕೊಂಡಿದ್ದಾರೆ.

ಉದಯಕುಮಾರ ಹಬ್ಬು- " ಅಸಂಗ " { ರಾಘವೇಂದ್ರ ಪ್ರಭು ಅವರ ಕಥಾ ಸಂಕಲನ }

"ಅಸಂಗ" ಎಂಬ ವಿಶಿಷ್ಟ ಶೀರ್ಷಿಕೆಯನ್ನು ಹೊತ್ತ ಈ ಕಥಾಸಂಲನವನ್ನು ಬರೆದವರು ಶ್ರೀ ರಾಘವೇಂದ್ರ ಪ್ರಭುಗಳು, ಕೆನರಾ ಕಾಲೇಜು, ಮಂಗಳೂರಿನಲ್ಲಿ ಮೂರು ದಶಕಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ೧೯೯೮ ರಲ್ಲಿ ನಿವೃತ್ತಿಗೊಂಡವರು. ಈ ಕೃತಿಕಾರನ ವಿಶೇಷತೆ ಏನೆಂದರೆ ತಮ್ಮ‌,೮೦ ರ ಪ್ರಾಯದಲ್ಲಿ ಇಂಥದೊಂದು ಅಚ್ಚುಕಟ್ಟಾದ ಅರ್ಥಪೂರ್ಣ ಕಥಾಸಂಕಲನ ಪ್ರಕಟಿಸಿದ್ದುದು. ಈ ಸಣ್ಣ ಕತೆಗಳನ್ನು ಬರೆಯಲು ಹಲವಾರು ಗ್ರಂಥಗಳನ್ನು ಓದಿದ್ದಲ್ಲದೆ ಡಾ ನಾ ದಾಮೋದರ ಶೆಟ್ಟರ ಶಿಷ್ಯತ್ವ ಪಡೆದು ಬರವಣಿಗೆಯ ಬಗ್ಗೆ ತರಬೇತು ಪಡೆದವರು. ಇಷ್ಟಲ್ಲದೆ ಜನಪ್ರಿಯ ಕಾದಂಬರಿಕಾರ, ಕಥೆಗಾರ ಡಾ. ಕೆ. ಎನ್.‌ಗಣೇಶಯ್ಯ ಅವರ ಬೆಂಬಲ ಮತ್ತು ಪ್ರೇರಣೆ. ಈ ಕಥಾಸಂಕಲನದ ಶೀರ್ಷಿಕೆ "ಅಸಂಗ". ಈ ಪದ ಬೃಹದಾರಣ್ಯಕೋಪಷನಿತ್ತನಲ್ಲಿ ಬರುವ ಪದ. ಅಸಂಗ ಎಂದರೆ ಸಂಗರಹಿತ, ಏಕಾಂಗಿ.unattached ಎಂಬೀ ಅರ್ಥವನ್ನು ಈ ಕತೆಗಳ ಮೂಲಕ ಹೇಳಲು ಪ್ರಭುಗಳು ಪ್ರಯತ್ನಿಸಿದ್ದಾರೆ. ಪ್ರಭುಗಳ ಓದಿನ ಹರಹು ತುಂಬ ವಿಶಾಲವಾದುದು. ಸನಾತನ ಧರ್ಮದ ಉದ್ಗ್ರಂಥಗಳನ್ನು ಅಧ್ಯಯನ ಮಾಡಿರುವರಲ್ಲದೆ ಜಿಡ್ಡು ಕೃಷ್ಣಮೂರ್ತಿ, ಓಶೋ ಇವರ ವಿಚಾರಗಳನ್ನು ಕೂಡ ಇಲ್ಲಿನ ಕತೆಗಳಲ್ಲಿ ಬಳಕೆಯಾಗಿವೆ. ಮನುಷ್ಯ ಏಕಾಂಗಿಯಾಗಿಯೆ ಈ ಭೂಮಿಯಲ್ಲಿ ಹುಟ್ಟುತ್ತಾನೆ, ಏಕಾಂಗಿಯಾಗಿಯೆ ಇಲ್ಲಿಂದ ನಿರ್ಗಮಿಸುತ್ತಾನೆ.‌ವ್ಯಕ್ತಮಧ್ಯದಲ್ಲಿ ನಾನಾ ಆಸೆ, ಅಕಾಂಕ್ಷೆಗಳಿಗೆ ಬಲಿಯಾಗಿ ತನ್ನತನವನ್ನು ಅರಿಯಲು ಸೋಲುತ್ತಾನೆ. ಅಸಂಗೋಹಂ ಕಮಲದ‌ ಎಲೆಗಳಂತೆ ಯಾವ ಆಕರ್ಷಣೆಗೂ ಪಕ್ಕಾಗದೆ ಬದುಕಿನ ನಿಜ ಗುರಿಯ ಸಾಕ್ಷಾತ್ಕಾರ ಪಡೆಯಬೇಕು ಎಂಬುದೆ ಈ ಕತೆಗಾರನ ಅಂಬೋಣ. ಈ ಕತಾಸಂಲನದಲ್ಲಿ ಒಂಬತ್ತು ಕತೆಗಳಿವೆ. ಪ್ರತಿಯೊಂದು ಕತೆ ಗಂಡು- ಹೆಣ್ಣಿನ ಸಂಬಂಧಗಳ ವಿವಿಧ ಆಯಾಮಗಳನ್ನು ಅಭಿವ್ಯಕ್ತಿಸಲಾಗಿವೆ. " ಅಸಂಗ" ಕತೆಯಲ್ಲಿ ಸಂಧ್ಯಾಕಾಲೇಜಿನ ಪ್ರಾಧ್ಯಾಪಕನೊಬ್ಬ ಮದುವೆಯಾದ ಕೆಲವೆ ದಿವಸಗಳಲ್ಲಿ ಹೆಂಡತಿ ದುರ್ಘಟನೆಯಲ್ಲಿ ಮೃತಪಡುತ್ತಾಳೆ. ಅವನು ದಿನಕಳೆದ ಹಾಗೆ ಓರ್ವ ವಿವಾಹಿತ ಹೆಣ್ಣಿನ ಸಂಪರ್ಕಕ್ಕೆ ಬರುತ್ತಾನೆ. ಅವಳು ಅವನ ವಿದ್ಯಾರ್ಥಿನಿಯೂ ಆಗಿರುತ್ತಾಳೆ. ಅವಳ ವೈವಾಹಿಕ ಬದುಕು ಸುಗಮವಾಗಿರುವುದಿಲ್ಲ. ಈ ಪ್ರಾಧ್ಯಾಪಕ ಅವಳ ಕುರಿತು ಮೋಹ ಬೆಳೆಸಿಕೊಳ್ಳುತ್ತಾನೆ. ಆದರೆ ಅವಳಿಗೆ ಇವನ ಬಗ್ಗೆ ಮೋಹ ಇರುವುದಿಲ್ಲ. ಅವನು ಮುಂದುವರಿದಂತೆ ಅವಳು ಅವನನ್ನು ತಪ್ಪು ತಿಳಿಯುತ್ತಾಳೆ.‌ಮತ್ತು ಒಂದು ದಿನ ಅವನ ಬದುಕಿನಿಂದ ನಿರ್ಗಮಿಸಿಬಿಡುತ್ತಾಳೆ.ಕುಸಿದು ಹೋದ ಪ್ರಾಧ್ಯಾಪಕನಿಗೆ ಅವನ ಗೆಳೆಯರು ಧೈರ್ಯ ತುಂಬುತ್ತಾರೆ. ಮತ್ತು ಅವನು ಸ್ವಾಮೀಜಿಯ ಅಸಂಗೋಹಂ ಪ್ರವಚನ ಕೇಳಿ ಕಮಲದ ಎಲೆಯಂತಾಗಬೇಕೆಂದು ಪ್ರವಚನ ಕೇಳುತ್ತಾನೆ. ಅಂತ್ಯ ಏನೆಂದಯ ಕತೆ ಹೇಳುವುದಿಲ್ಲ. ಅದು ಓದುಗರ ಊಹೆಗೆ ಬಿಟ್ಟದ್ದು‌ ಈ ಕತೆಯಎಂದೆನಿಸಿತು ಬೇಕಿದ್ದರೆ ಒಂದು ಕಾದಂಬರಿಯನ್ನಾಗಿಯೂ ಕೂಡ ಬೆಳೆಸಬಹುದು. ಎರಡನೆಯ ಕತೆ ಘಂಟಾನಾದ ಗುಜರಾತಿನ ಬೆಟ್ ದ್ವಾರಕ್ ಎಂಬಲ್ಲಿನ ಅರಬ್ಬಿ ಸಮುದ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ದೇವಾಲಯಗಳ ಘಂಟಾನಾದ ಕೇಳಿಸುತ್ತಿದೆಯಂತೆ. ಇದನ್ನು ಜಾಲತಾಣದಲ್ಲಿ ನೋಡಿದ ಅವಿನಾಶ್ ಎಂಬ ಮೂವತ್ತಾರರ ತರುಣ ಅದಕ್ಕಾಗಿ ಗುಜರಾತಿಗೆ ಹೊರಟು ನಿಲ್ಲುತ್ತಾನೆ. ಅಲ್ಲಿ ಜಪ್ಪಯ್ಯ ಎಂದರೂ ಘಂಟಾನಾದ ಕೇಳುವುದಿಲ್ಲ.ಆದರೆ ಅಲ್ಲಿ ಕುಂದನ್ ಎಂಬ ಸುಂದರ ಯುವತಿಯ ಸಂಪರ್ಕಕ್ಕೆ ಬಂದು ಅವರಿಬ್ಬರೂ ಒಂದಾಗುತ್ತಾರೆ. ಅಧ್ಯಾತ್ಮದಲ್ಲಿ ಭಕ್ತಿಪರವಶನಾದ ಅವಿನಾಶ್ ನಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ತನ್ನ ಬ್ರಹ್ಮಚರ್ಯ ನಷ್ಟಗೊಂಡಿತು ಎಂದು ಚಿಂತಿಸುತ್ತಾನೆ. ತನ್ನ ಈ ಹೀನ ಸ್ಥಿತಿಗೆ ಕುಂದನ್ ಕಾರಣಳೆ? ಇದು ಮಾಯೆಯಲ್ಲದೆ ಮತ್ತೇನು? ಎಂದು ಚಿಂತನೆ ನಡೆಸಿ ಗುರುಗಳಿಗೆ ಸಂಪೂರ್ಣ ಶರಣಾಗುತ್ತಾನೆ‌ ಹೀಗೆ ಭಕ್ತಿ ಮಾರ್ಗದಿಂದ ಇಂದ್ರಿಯ ಆಸೆಗಳನ್ನು ನಿಯಂತ್ರಿಸಿಕೊಳ್ಳುತ್ತಾನೆ. ನಾಡುನುಡಿಯ ವಿಧ್ವಂಸಕರು ಈಕತೆ ಲವ್ ಜೇಹಾದ್ ಇದರ ದುಷ್ಪರಿಣಾಮಗಳನ್ನು ಹೇಳುವ ಕತೆ. ಚಿಗುರೆಲೆಯೊಡನೆ ಸಂವಾದ ಕತೆಯು ತತ್ವಶಾಸ್ತ್ರ ಪರಿಣಿತರಾದ ವಯಸ್ದಾದ ಪ್ರಾಧ್ಯಾಪಕ ಮತ್ತು ಅವರ ಹದಿಹರೆಯದ ಶಿಷ್ಯೆಯ ನಡುವೆ ನಡೆದ ಅಧ್ಯಾತ್ಮಿಕ ಚರ್ಚೆ. ಇದೆ‌ ಈ ಕತೆಯಲ್ಲಿ ಜಿಡ್ಡುಕೃಷ್ಣ ಮೂರ್ತಿಯವರ ತತ್ವದ ಚಿಂತನ ಮಂಥನವಿದೆ. ಹುಡುಗಿ ಜಿಡ್ಡು ಕೃಷ್ಣಮೂರ್ತಿ ಅವರ ಆಶ್ರಮಕ್ಕೆ ಪ್ರಾಧ್ಯಾಪಕರೊಟ್ಟಿಗೆ ಹೋಗಿ ಪ್ರಬುದ್ಧಳಾಗಿ ಬದುಕನ್ನು ರೂಪಿಸಿಕೊಳ್ಳುವ ಕತೆ ಇದೆ. ಪಕ್ಷಾಂತರಿ ಕತೆಯಲ್ಲಿ ಎಡಪಂಥೀಯ ಬುದ್ಧಿಜೀವಿಗಳ ದ್ವಿಮುಖ ವ್ಯಕ್ತಿತ್ವವನ್ನು ವಿಡಂಬನೆಗೊಳಪಡಿಸಲಾಗಿದೆ. ಜೋಡಿಕಾಮನ ಬಿಲ್ಲು ಈ ಕತೆಯಲ್ಲಿ ಪ್ರೀತಿಸಿ ಮದುವೆಯಾಗಬೇಕೆಂದಿರುವ ಜೋಡಿಯಲ್ಲಿ ಯುವಕ ದುರ್ಘಟನೆಗೊಳಗಾಗಿ ಕೈಕಾಲು ಮುರಿದು ನಪುಂಸಕನಾಗಿಬಿಡುತ್ತಾನೆ. ಈ ದುರಂತವನ್ನು ಹೆಣ್ಣು ಹೇಗೆ ಸ್ವೀಕರಿಸುತ್ತಾಳೆ. ಇದುವೆ ಕತೆಯ ಸಾರ. ಅವಳು ತಾನು ಅವಿವಾಹಿತೆಯಾಗಿದ್ದುಕೊಂಡು, ಸ್ವತಂತ್ರವಾಗಿದ್ದುಕೊಂಡು, ಒಂಟಿತನವೆಂಬ ಅದ್ಭುತ ವಿದ್ಯಮಾನವನ್ನು ಹೇಗಿದೆಯೊ ಹಾಗೆ ವೀಕ್ಷಿಸುತ್ತ ಜೀವನ ಕಳೆಯಲೇ?" ಈ ಪ್ರಶ್ನೆಯೊಂದಿಗೆ ಕತೆ ಕೊನೆಗೊಳ್ಳುತ್ತದೆ. ಇದನ್ನು ಒಂದು ಕಾದಂಬರಿಯನ್ನಾಗಿ ಬೆಳೆಸಿಕೊಳ್ಖುವ ಎಲ್ಲ ಅವಕಾಶವಿದೆ. ಈ ಕತಾಸಂಕಲನದಲ್ಲಿ ಮುಂದಿನ ಕತೆ ಗೋಪುರದ ಗಂಟೆ. ಇದು ಒಂದು ಪರಿಣಾಮಕಾರಿ ಕತೆ. ಥಾಮಸ್ ಇವನು ಇಗರ್ಜಿಯ ಗಂಟೆ ಬಾರಿಸುವವ. ಅಪ್ಪ ಕುಡುಕ. ತಾಯಿ ಮಲ್ಲಿಗೆಯನ್ನು ಬೆಳೆದು ಮಾರಿ ಜೀವನ ಸಾಗಿಸುತ್ತಿದ್ದಳು. ಥಾಮಸ್ ಎಂಟು ವರ್ಷ ಪ್ರಾಯದವನಾಗುವಾಗ ಪೋಲಿಯೊ ರೋಗಬಡಿದು ಎರಡು ಕಂಕುಳಲ್ಲಿ ಊರುಗೋಲು ಇಲ್ಲದೆ ನಡೆಯಲಾರ. ಅವನು ಪರಿಸ್ಥಿತಿಯನ್ನು ಕಂಡು ಇಗರ್ಜಿಯ ಪಾಲನಾ ಸಮೀತಿಯ ಉಪಾಧ್ಯಕ್ಷರು ಅನುಕಂಪದ ನೆಲೆಯಲ್ಲಿ ಥಾಮಸ್ ನಿಗೆ ಇಗರ್ಜಿಯ ಮಿರ್ ನ್ಯಾಮ್ ನೌಕರಿಯನ್ನು ದಯಪಾಲಿಸಿತ್ತಾರೆ. ಇಗರ್ಜಿಯ ಗಂಟೆ ಬಾರಿಸುವ ಕೆಲಸ. ಅವನು ಯುವಕನಾಗುತ್ತಿದ್ದಂತೆ ಜ್ಯೂಲಿಯಾನಾ ಎಂಬ ಹುಡುಗಿ ಥಾಮಸ್ ನನ್ನು ಪ್ರೀತಿಸತೊಡಗುತ್ತಾರೆ. ಘಂಡಾಗೋಪುರದಲ್ಲಿ ಪರಸ್ಪರ ಆಲಿಂಗನ ಚುಂಬನ ಕೊಟ್ಟು ಕೊಳ್ಳುತ್ತಾರೆ. ಇದನ್ನು ಕಂಡ ಪಾದರಿ ಕ್ಲೆಮಂಟನಿಗೆ ಹೊಟ್ಟೆಕಿಚ್ಚು. ಹೊಂಚು ಹಾಕಿ ಪಾದರಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಾನೆ. ಮತ್ತು ಜ್ಯೂಲಿಯಾನಾ ಅಲ್ಲಿಂದ ಹೊರಬಿದ್ದಾಗ ಪಾದರಿಗೆ ಹೆದರಿಕೆ. ಜ್ಯೂಲಿಯಾನಾ ಪೋಲಿಸ್ ಕಂಪ್ಲೇಂಟ್ ಕೊಟ್ಟರೆ ತನ್ನ ಮುಖಭಂಗವಾಗುವುದೆಂದು ತಿಳಿದು. ಆ ಅತ್ಯಾಚಾರ ಆರೋಪವನ್ನು ಥಾಮಸ್ ನ ತಲೆಗೆ ಕಟ್ಡಿತ್ತಾನೆ.ಇದರಿಂದ ಘಾಸಿಗೊಂಡ ಥಾಮಸ್ ನೇಣುಹಾಕಿಕೊಂಡು ಸಾಯುತ್ತಾನೆ.‌ಜ್ಯೂಲಿಯಾನಾ ಕೂಡ ನೇಣು ಹಾಕಿಕೊಂಡು ಸಾಯುತ್ತಾಳೆ. ಮತ್ತೆ ಈ ಅತ್ಯಾಚಾರದ ಹಿಂದೆ ಪಾದ್ರಿಯ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಬಿಷಪ್ಪರು ಇದನ್ನು ಹೇಗಾದರೂ ಮಾಡಿ ಮುಚ್ಚಿಹಾಲು ನೋಡಿದರು. ಆದರೆ ಜನರ ಒತ್ತಡದ ಮೇತೆಗೆ ಪಾದರಿಯನ್ನು ಪೋಕಿಸರು ಅರೆಸ್ಟ್ ಮಾಡುವುದರೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಕೊನೆಯ ಕತೆ ಮೃಗಜಲದ ಬೆಂಬತ್ತಿ ಈ ಕತೆಯಲ್ಲಿ ಜಿಡ್ಡು ಕೃಷ್ಣಮೂರ್ತಿ ಮತ್ತು ಓಶೋನ ಸೆಕ್ಸ್ ಕುರಿತ ವಿಚಾರಗಳ ಕುರಿತಾದ ಅವರ ಪ್ರೇಮದ‌ ಪ್ರೀತಿಯ ವ್ಯಾಖ್ಯಾನದ ಸಂಕಥನವಿದೆ. ಡ್ರಗ್ಸ್ ಮಾಫಿಯಾದಲ್ಲಿ ಕೈಯಾಡಿಸಿ ನಾರಾಯಣ ಪ್ರಭು ಎಂಬವನು ಒಂದು ವರ್ಷ ಜೈಲುಶಿಕ್ಷೆಗೆ ಒಳಗಾಗುತ್ತಾನೆ..ಅವನು ಜೈಲಿನಿಂದ‌ ಹೊರಬಂದ ಮೇಲೆ ಅಣ್ಣನ ಮನೆಗೆ ಹೋಗುತ್ತಾನೆ. ಹೆಂಡತಿ ಅಹಲ್ಯಾ ತನ್ನನ್ನು ಹೇಗೆ ಸ್ವೀಕರಿಸಿಯಾಳು ಎಂಬ ಬಗ್ಗೆ ಅವನಿಗೆ ಅನುಮಾನವಿರುತ್ತದೆ‌.‌ಜಿಡ್ಡು ಕೃಷ್ಣಮೂರ್ತಿಯವರ ಉಪನ್ಯಾಸ ಮತ್ತು ಓಶೋನ ಉಪನ್ಯಾಸ ನಾರಾಯಣ ಪ್ರಭು ಮೇಲೆ ತುಂಬ ಪ್ರಭಾವ ಬಿದ್ದಂತೆ ತೋರುತ್ತದೆ. ಅವನು ಹೆಂಡತಿಗೆ ಹೇಳುತ್ತಾನೆ:"'ಅಹಲ್ಯಾಬಾಯಿ. ನೀನು ಎಂದಾದರೂ ಒಂದು ತೊಟ್ಟು ಪ್ರೀತಿ ನೀಡಿದ್ದೀಯಾ? ನಿನ್ನ ಪ್ರಪಂಚವೆಂದರೆ ನೀನು ಮಗು ಮತ್ತು ಶಾಲೆಯ ಸಂಬಳ. ನೀನು ಎಂದೋ ನನ್ನನ್ನು ಮಾನಸಿಕವಾಗಿ ಡೈವೋರ್ಸ್ ಮಾಡಿದ್ದಿ‌. ಪ್ರೀತಿಯ ಅರ್ಥ ತಿಳಿಯದೆ ನೀನು ಪ್ರೀತಿಯನ್ನು ಹೇಗೆ ಕೊಡಬಲ್ಲೆ! " ಇಷ್ಟು ಹೇಳಿ "ನಾನು ಹಿಮಾಲಯಕ್ಕೆ ಹೋಗಿ ಕೊನೆಗಾಲದವರೆಗೂ ಅಲ್ಲೇ ಇರುತ್ತೇನೆ‌" ಎಂದು ಹೇಳಿ ಹೊರಟುಬಿಡುತ್ತಾನೆ. ತಮ್ಮ ೮೦ ರ ಹರೆಯದಲ್ಲಿ ಕತೆ ಹೇಳಬೇಕು ಜನರಿಗೆ ತಲುಪಿಸಬೇಕು ಎಂಬ ಹಂಬಲವುಳ್ಳ ಪ್ರಭುಗಳ ಕತೆಗಳಿಗೆ ವಿಮರ್ಶೆ ಬೇಕೆ? ಚೆನ್ನಾಗಿ ಬರೆದಿದ್ದಾರೆ. ಉದಯಕುಮಾರ ಹಬ್ಬು

Through the poet's eye | ಎ . ಕೆ . ರಾಮಾನುಜನ್ ಸಂದರ್ಶನ { ಎಚ್. ಎಸ್. ಶಿವಪ್ರಕಾಶ್ }

Through the poet's eye | Deccan Herald: An interview of AKR by renowned Kannada poet and playwright H S Shivaprakash was aired on All India Radio, Bengaluru, on August 9, 1988. The stalwarts’ discussion on literature, translation and poetry is as relevant today as it was on the day they spoke and continues to provide us insights well into the 21st century. This is the transcript translated from the Kannada by

Monday, October 11, 2021

ಸುಧಾ ಅಡುಕಳ - ಶಯ್ಯಾ ಗೃಹದ ಸುದ್ದಿಗಳು { ಕವನ ಸಂಕಲನ - ಶೋಭಾ ನಾಯಕ }

ಸುದ್ದಿಯಾದ ಶಯ್ಯಾಗೃಹದ ಸುದ್ದಿಗಳು.... ಲೈಂಗಿಕ ಮಡಿವಂತಿಕೆಯೆಂಬುದು ನಮ್ಮ ದೇಶದಲ್ಲಿ ಲಿಂಗಾಧಾರಿತವಾಗಿ ರೂಪುಗೊಂಡಿದೆ. ಶೃಂಗಾರದ ರೂಪು ತಳೆಯದೇ ಅವೆಂದಿಗೂ ಹೊರಬರಲಾರವು. ಬರುವ ಸುದ್ದಿಗಳೆಲ್ಲವೂ ಗಂಡಿನ ನೋಟಗಳೇ ಹೊರತು ಹೆಣ್ಣ ಮಾತುಗಳಲ್ಲ. ಹಾಗೆ ನೋಡಿದರೆ ನಮ್ಮ ಹಿಂದಿನ ತಲೆಮಾರುಗಳೇ ವಾಸಿ. ಗುಟ್ಟಾಗಿಯಾದರೂ ರಾತ್ರಿಯ ಅನುಭವಗಳನ್ನು ತಮ್ಮೊಳಗೆ ಹಂಚಿಕೊಂಡು ಹಗುರಾಗುತ್ತಿದ್ದರು. ಆದರೆ ಈ ಗಾಂವ್ಟಿ ಅನುಭವ ಬರಹವಾದದ್ದಂತೂ ಇಲ್ಲ. ತೊರವೆ ರಾಮಾಯಣದ ರಾಮಸೀತೆಯರ ಶಯ್ಯಾಗಾರದಿಂದ ಹಿಡಿದು ಇಂದಿನ ಬೆಡ್ ರೂಮ್ ಕಥೆಗಳೆಲ್ಲವೂ ಗಂಡಿನ ನೆಲೆಯಲ್ಲೇ ನಿರೂಪಿತ. ಆಧುನಿಕ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚಂತೆ ಸುಳಿಯುತ್ತಿದ್ದ ಹೆಣ್ಣ ಲೈಂಗಿಕತೆಯ ಒಳನೋಟಗಳು ಈ ಕವನಸಂಕಲನದಲ್ಲಿ ಬಿರುಮಳೆಯಾಗಿ ಸುರಿದಿವೆ. ಸಂಕೋಚ ಮತ್ತು ಹಿಂಜರಿಕೆಯ ಭಯಬಿಟ್ಟು ಕಾವ್ಯನಾಯಿಕೆ ತನ್ನ ಶಯ್ಯಾಗಾರದ ಖಾಸ್ ಅನುಭವಗಳನ್ನು ಬಿಚ್ಚಿಟ್ಟಿದ್ದಾಳೆ. ಎಷ್ಟು ಬೇಕೋ ಅಷ್ಟೇ ಕ್ವಚಿತ್ ಮಾತುಗಳಲ್ಲಿ ಹೇಳಬೇಕಾದುದನ್ನು ಹೇಳಿ ಮುಗಿಸುತ್ತಾಳೆ. ಸ್ವೀಕಾರದ ಹಂಗು ಮೀರಿ ಹೊರಬಂದ ಸಾಲುಗಳಿವು. ಹಾಗೆ ನೋಡಿದರೆ ಅಕ್ಕನೂ ಏನನ್ನೂ ಬಚ್ಚಿಟ್ಟುಕೊಂಡವಳಲ್ಲ. ವಸನವಳಿದ ದೇಹಕ್ಕೆ ಕೇಶರಾಶಿಯ ಮರೆಮಾಡುವ ಲೋಕ ಅದನ್ನು ಕೇಳಿಸಿಕೊಂಡಿರಲಿಲ್ಲ ಅಷ್ಟೆ. ಕವಯತ್ರಿ ಶೋಭಾನಾಯಕ ಕೇಳಿಸುವ ಛಾತಿಯಲ್ಲೇ ಹೇಳಿದ್ದಾರೆ. ಹೆಣ್ಣ ಅಭಿವ್ಯಕ್ತಿಗೆ ಹೊಸದೊಂದು ಕಾಲುದಾರಿಯನ್ನು ತೆರೆದಿದ್ದಾರೆ. ಬಟ್ಟೆಯುಟ್ಟವರ ಮುಂದೆ ಬೆತ್ತಲೆ ಕವಿತೆಗಳ ಕತ್ತು ಹಿಸುಕುವುದೂ ಒಂದು ಕೊಲೆಯೆ ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು ದುರಂತವೆಂದರೆ, ಓದಬೇಕಾದ ನೀನು ಕುರುಡನಲ್ಲ ನಾನು ನರಳುವಾಗ ನಿನಗೆ ಸಿಗುವ ಸುಖದ ಹೆಸರು: ಅಹಂ ಶಯ್ಯಾಗಾರದ ಸುದ್ದಿಗಳು ಇನ್ನೊಬ್ಬರ ಬಾಯಿಯ ತಾಂಬೂಲವಾಗುವುದು ಅವರವರ ಶಯ್ಯಾಗೃಹಗಳು ಶವಾಗಾರಗಳಾದಾಗಲೇ! ಈ ನನ್ನ ಮೊಲೆಗಳು; ಸದಾ ಉರಿವ ಒಲೆಗಳು ಬರೀಹಾಲು ಬಯಸುವ ನಿನಗೆ ಬೆಂಕಿಯ ಭುಗಿಲನ್ನೂ ಕುಡಿಸಬಲ್ಲವು ಬರಿಯ ಪತಿಯಂದಿರ ಹೆಸರಿನ ವ್ರತ ಮಾಡಲೆಂದು ಪತಿವ್ರತೆಯಾದರೆ ಏನು ಬಂತು? ಅವನು ಅನುಭವ ನಾನು ಮಂಟಪ! ............... ಹ್ಹಹ್ಹಾ..... ಕವನಸಂಕಲನವನ್ನೇ ಇಲ್ಲಿ ಮತ್ತೆ ಬರೆಯಲಾರೆ. ನೀವೂ ಸಾಧ್ಯವಾದರೆ ಕೇಳಿ ಹೆಣ್ಣಿನ ಶಯ್ಯಾಗಾರದ ಸುದ್ದಿಗಳನ್ನು....

Sunday, October 3, 2021

ಗಿರಿಜಾ ಶಾಸ್ರಿ - ಕೆ. ಸತ್ಯನಾರಾಯಣ ಅವರ " ಅವರವರಭವಕ್ಕೆ , ಓದುಗರ ಭಕುತಿಗೆ "/ GIRIJA SHASTRY / K. Satyanarayana

ಕೆ. ಸತ್ಯನಾರಾಯಣ ಅವರ "ಅವರವರ ಭವಕ್ಕೆ ಓದುಗರ ಭಕುತಿಗೆ..." ನಮಗೆ ಗೊತ್ತಿರುವುದು ಭಾವ ಮತ್ತು ಭಕ್ತಿ. 'ಭವಿ' ಎನ್ನುವ ಶಬ್ದ ಕೂಡ ಇದೆ. ಆದರೆ ಅದು ಭಕ್ತಿಗೆ ವಿರುದ್ಧನೆಲೆಯದು. ಇಲ್ಲಿ ಭವ ಮತ್ತು ಭಕ್ತಿ ಎರಡನ್ನೂ ಒಟ್ಟಿಗೆ ತಂದಿದ್ದಾರೆ. ಅವು ಪ್ರತ್ಯೇಕವಾಗಿ ಇರುವುದಿಲ್ಲ. ಬದುಕಿನಲ್ಲಿ ಒಟ್ಟಿಗೇ ಇರುತ್ತವೆ. ಭೌತಿಕ ಮತ್ತು ಅಭೌತಿಕ ಸಂಘರ್ಷಗಳು ( ಇದು ಒಂದರೊಳಗೆ ಇನ್ನೊಂದು ಹೊಗುವ, ಸೃಜನಶೀಲ ಮತ್ತು ಆತ್ಮ ಕಥನದ ನಡುವಿನ ಸಂಘರ್ಷವೂ ಇರಬಹುದು) ಬದುಕಿನ ವಾಸ್ತವಗಳು. ಎನ್ನುವುದನ್ನು ಹೇಳುತ್ತಿದ್ದಾರೇನೋ ಎಂದೆನಿಸುತ್ತದೆ. ಸ್ವ ದ ಪರಿವೀಕ್ಷಣೆಯ ಪರಿಯನ್ನು ಪರೀಕ್ಷೆಗೆ ಒಡ್ಡಿದ್ದಾರೆ ಎಂದೂ ಎನಿಸುತ್ತದೆ. ಅವರ ಇತರ ಸೃಜನಾತ್ಮಕ ಮತ್ತು ಗದ್ಯ ಕೃತಿಗಳಲ್ಲಿ ಎದ್ದು ಕಾಣುವ ಮಧ್ಯಮ ಮಾರ್ಗ( grey area) ಮೇಲಿನ ಯೋಚನೆಗೆ ಸಮರ್ಥನೆ ನೀಡುತ್ತದೆ. 'ಓದುಗರ ಭಕುತಿಗೆ' ಎಂದಿದ್ದರೂ ಕೂಡ ಅದು ಓದುಗರ ಭವವನ್ನೂ ನಿರ್ದೇಶಿಸುತ್ತಿದೆ ಎಂದೆನಿಸುತ್ತದೆ. ಲೇಖಕರ ಭವವನ್ನು ಓದುಗರು ತಮ್ಮ ಭವಗಳ ಮೂಲಕವಾಗಿಯೇ ಅರ್ಥಮಾಡಿಕೊಳ್ಳುತ್ತಾರೆ.ನಾವು ಓದುವುದೆಂದರೆ ನಮಗೆ ಪರಿಚಯವಾದದ್ದರ ಮೂಲಕವೇ ಅಪರಿಚಿತವಾದದ್ದರಕಡೆಗೆ ಸಾಗುವುದಲ್ಲವೇ? ಇಲ್ಲಿ ಓದುಗ ಮತ್ತು ಲೇಖಕರನ್ನು ಒಟ್ಟಾಗಿಯೇ ಅಧ್ಯಯನದ ಗ್ರಹಿಕೆಗೆ ತೆಗೆದುಕೊಂಡಿರುವುದು ಈ ಕೃತಿಯ ಮಹತ್ವ ಮತ್ತು ಹೊಸತನ. ಇಲ್ಲಿ ಕಾಣುವುದು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಅವರ ವ್ಯಾಪಕ ಓದು. (ಗಾಂಧಿ, ವರ್ಜೀನಿಯಾ ವುಲ್ಫ್ , ಡಾಲಸ್ಟಾಯ್ ಮುಂತಾದವರ ಬರಹಗಳ ಮಹತ್ವವನ್ನು ಪ್ರಸ್ತಾಪಿಸಿರುವುದು) ಅವುಗಳ ಜೊತೆಗೆ ಕನ್ನಡ ಏಳು ಲೇಖಕರ ಗೋಪಾಲಕೃಷ್ಣ ಅಡಿಗ, ಯು.ಆರ್ . ಅನಂತಮೂರ್ತಿ, ಭೈರಪ್ಪ, ಲಂಕೇಶ್, ಸಿದ್ಧಲಿಂಗಯ್ಯ ತೇಜಸ್ವಿ ( ಜೀವನ ಚರಿತ್ರೆ) ಅವರ ಆತ್ಮಕಥಾನಕಗಳ ಭಾಗಗಳನ್ನು ತುಲನಾತ್ಮಕವಾಗಿ ನೋಡಿರುವುದು. ಬರಹಗಾರನೊಬ್ಬನಿಗೆ ಆತ್ಮಚರಿತ್ರೆ ಬರೆಯುವ ಅಗತ್ಯವಾದರೂ ಏನು? ಯಾವ ಕಾರಣಕ್ಕಾಗಿ ಬರೆಯಬೇಕು? ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆ ಇವುಗಳ ನಡುವಿನ ಅಂತರವಾದರೂ ಏನು? ಅವುಗಳ ಸಾಮ್ಯ ಮತ್ತು ಭಿನ್ನತೆ, ಆತ್ಮಚರಿತ್ರೆ ಯ ಇತಿಹಾಸ, ಸ್ವರೂಪ ವ್ಯಾಖ್ಯೆ ಮುಂತಾದ ತಾತ್ವಿಕ ಚರ್ಚೆ ಈ ಕೃತಿಯ ಮೊದಲ ಭಾಗದಲ್ಲಿದೆ. ಪ್ರತಿಯೊಬ್ಬ ಲೇಖಕನೂ ತನ್ನ ಬಾಲ್ಯ, ಯೌವ್ವನ ವೃದ್ಧಾಪ್ಯ , ಸಾವಿನ ವಾಸನೆ ( ಸಿದ್ಧಲಿಂಯ್ಯನವರ ಹೊರತಾಗಿ) ಮುಂತಾದವುಗಳನ್ನು ಹೇಗೆ ಅನುಸಂಧಾನ ಮಾಡುತ್ತಾನೆ? ಹಾಗೆ ಮಾಡುವಾಗ ಏಳು ಜನರಲ್ಲಿ ಕಂಡು ಬರುವ ವೈಶಿಷ್ಟ್ಯ ಮತ್ತು ಭಿನ್ನತೆಗಳನ್ನು ಬಹಳ ವಿವರವಾಗಿ ಚರ್ಚಿಸಿದ್ದಾರೆ. ಇವುಗಳನ್ನು ನಿರ್ವಹಿಸುವುದರಲ್ಲಿ ಲೇಖಕರ ಅಪ್ರಜ್ಞಾಪೂರ್ವಕ ವೆಂದು ಮೇಲು ನೋಟಕ್ಕೆ ಕಾಣಿಸುವ ಆದರೆ ಪ್ರಜ್ಞಾಪೂರ್ವಕವಾದ ವಿಸ್ಮೃತಿ ಮತ್ತು ನೆನಪುಗಳು ಕಣ್ಣಾಮುಚ್ಚಾಲೆಯಾಡುವ ( ಜಾಣಮರೆವು) ಸ್ವರೂಪವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಅವಲೋಕನೆಯಲ್ಲಿ ಲೇಖಕರು ತಮ್ಮ ಆತ್ಮಚರಿತ್ರೆಯನ್ನೂ ಗಮನಕ್ಕೆ ತೆಗೆದುಕೊಂಡಿರುವುದು ವಿಶೇಷ. ಎಲ್ಲವನ್ನೂ ಬಿಚ್ಚಿಡಬೇಕೇ? ಯಾವುದನ್ನು ಬಚ್ಚಿಡಬೇಕು? ಆತ್ಮಚರಿತ್ರೆ ಬರಹ ಒಡ್ಡುವ ಆರಂಭ ಮತ್ತು ಮುಕ್ತಾಯದ ಸವಾಲುಗಳು ಯಾವ ಸ್ವರೂಪದ್ದು? ಲೇಖಕನ ಬರಹದ ಶೈಲಿಯಲ್ಲಿಯೇ ಸತ್ಯದ ಅನಾವರಣಕ್ಕಿಂತ ಹೆಚ್ಚಾಗಿ ಓದುಗರನ್ನು ಮೆಚ್ಚಿಸುವ ಧೋರಣೆಯೇ ಅಡಗಿದೆಯೇ? ಸ್ವಾನುಕಂಪದಿಂದ ಆಗುವ ಮಾನಸಿಕ ವಾಸ್ತವ ಪ್ರಯೋಜನಗಳಾದರೂ ಏನು? ಹೀಗೆ ಬಿಚ್ಚಿಡುವ ಮತ್ತು ಬಚ್ಚಿಡುವ ಯತ್ನದಲ್ಲಿ ಲೇಖಕನಿಗೆ ಸಾಮಾಜಿಕ ಬದ್ಧತೆಯೇನಾದರೂ ಇರಬೇಕೇ? ಲೇಖಕನ ಸ್ವಾತಂತ್ರ್ಯ ದ ಹುರುಪನ್ನು ಓದುಗರು ಹೇಗೆ ಸ್ವೀಕರಿಸಬಲ್ಲರು? ಮುಂತಾದ ಅನೇಕ ಪ್ರಶ್ನೆಗಳನ್ನು ಈ ಕೃತಿ ಎತ್ತುತ್ತದೆ. ತಮ್ಮ ಕಾಲದ ಮಹತ್ವ ದ ಸಂದರ್ಭಗಳಾದ, ಬೂಸ ಪ್ರಕರಣ, ತುರ್ತು ಪರಿಸ್ಥಿತಿ, ಬರಹಗಾರ ರ ಒಕ್ಕೂಟದ ಸಂದರ್ಭಗಳಲ್ಲಿ ಕೆಲವು ಲೇಖಕರ ಪ್ರತಿಕ್ರಿಯೆಗಳನ್ನು ದಾಖಲಿಸಿರುವುದು ಬಹಳ ಮುಖ್ಯವಾದ ಸಂಗತಿ. ನನಗೆ ಇರುವ ಒಂದೇ ಆಕ್ಷೇಪವೆಂದರೆ ಇಲ್ಲಿನ ಲೇಖಕಿಯರ ಗೈರು ಹಾಜರಿ. ಇಲ್ಲಿರುವ ಲೇಖಕರೆಲ್ಲ ತಮ್ಮ ಬದುಕಿನಲ್ಲಿ ಸುಳಿದ ಹೆಣ್ಣುಗಳ ಬಗ್ಗೆ ಅವರೊಡನೆ ಇದ್ದ ಸಂಬಂಧಗಳ ಬಗ್ಗೆ ಕೆಲವರು ನಿರ್ಭಿಡೆಯಾಗಿ, ಪ್ರಬುದ್ಧವಾಗಿ ( ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ) ಇನ್ನೂ ಕೆಲವರು ಸೂಕ್ಷ್ಮ ವಾಗಿ, (ಅಡಿಗರು)ಮತ್ತೊಬ್ಬರು ಹಸಿ ಹಸಿಯಾಗಿ, ವಕ್ರವಾಗಿ ನೋಡಿದ್ದಾರೆ. ಭೋಗದ ಸಾಮಾಗ್ರಿಯಾಗಿ ಕಂಡಿದ್ದಾರೆ. (ಲಂಕೇಶ್), ಬೇರೆಯವರ ಬಂಧಗಳ ಮೂಲಕ ಕಂಡಿದ್ದಾರೆ ( ಸಿದ್ದಲಿಂಗಯ್ಯ) ಭೈರಪ್ಪನವರಿಗೆ ಬಾಲ್ಯದ ಬಡತನವೇ ಮುಖ್ಯವಾಗಿ ಕೌಟುಂಬಿಕ ಬಿರುಕುಗಳೇ ಹೆಚ್ಚಾಗಿ ಕಂಡಿವೆ. ಆದರೂ ಇವರು ಯಾರೂ ಹೆಣ್ಣನ್ನು ಗಂಭೀರವಾಗಿ ತೆಗೆದುಕೊಂಡವರಲ್ಲ ಎಂಬ ಲೇಖಕರ ಧ್ವನಿಯನ್ನು ಬಸವರಾಜ ಕಲ್ಗುಡಿಯವರು ಮುನ್ನುಡಿಯಲ್ಲಿ ಸರಿಯಾಗಿಯೇ ಗಮನಿಸಿದ್ದಾರೆ. ಅಲ್ಲಲ್ಲಿ ಇಂದಿರಾ ಲಂಕೇಶ್ ಮತ್ತು ರಾಜೇಶ್ವರಿಯವರ ಬರಹಗಳನ್ನು ಉಲ್ಲೇಖಿಸಿರುವುದು ಸಮಾಧಾನಕರವಾಗಿ ಕಂಡರೂ ಅವರು ಪೂರ್ಣಪ್ರಮಾಣದ ಲೇಖಕಿಯರಲ್ಲ,‌ ಅಲ್ಲದೇ ಏಳು ಲೇಖಕರ ಜೀವನ ಚರಿತ್ರೆ ಯ ಬಗ್ಗೆ ನಡೆಸಿರುವ ಗಂಭೀರ ಅಧ್ಯಯನಕ್ಕೆ ಆನುಷಂಗಿಕವಾಗಿ ಒದಗಿ ಬಂದಿರುವ ಭಾಗಗಳಂತೆ ಮಾತ್ರ ಅವು ಕಾಣುತ್ತವೆ ಈ ನೆಲೆಯಲ್ಲಿ ಅನುಬಂಧದಲ್ಲಿ ಒದಗಿಸಲಾಗಿರುವ ಸಂಗೀತ ಕೋಣೆ ಮತ್ತು ಜೆ.ಕೆ. ಅವರಬಗ್ಗೆ ಬರೆದ ರಾಧಾಹೇಳಿದ ಕತೆ ಬಹಳ ಮಹತ್ವವಾದುದು. ಕನ್ನಡದ ಮಹಿಳಾ ಆತ್ಮ /ಜೀವನ ಚರಿತ್ರೆ ‌ಮತ್ತು ಇತರ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಜೀವನ ಚರಿತ್ರೆ ಗಳಲ್ಲಿ ಒಂದನ್ನಾದರೂ ಪೂರ್ಣ ಅಧ್ಯಯನಕ್ಕೆ ಒಳಪಡಿಸಿದ್ದರೆ ಅಧ್ಯಯನಕ್ಕೆ ಒಂದು ಅಖಂಡವಾದ ದೃಷ್ಟಿ ಪ್ರಾಪ್ತವಾಗುತ್ತಿತ್ತು ಎಂಬುದು ನನ್ನ humble ಆದ ಅನಿಸಿಕೆ. ಮಹಿಳಾ ಆತ್ಮ ‌ಚರಿತ್ರೆಯನ್ನು ದಲಿತ ಆತ್ಮ ಚರಿತ್ರೆಯೊಂದಿಗೆ ( ಇದರ ಉಲ್ಲೇಖ ಕ್ವಚಿತ್ತಾಗಿ ಈ ಕೃತಿಯಲ್ಲಿ ಬಂದಿದೆ) ತೌಲನಿಕವಾಗಿ ಯಾರಾದರೂ ಅಭ್ಯಾಸಮಾಡಿದರೆ ಅದು ಒಂದು ಸಾಂಸ್ಕೃತಿಕ ಅಧ್ಯಯನವಾದೀತು. ಭಾರತೀಯ ಭಾಷೆಗಳ ಮಹಿಳಾ ಆತ್ಮ ಚರಿತ್ರೆಗಳು ( ಉದಾ: ಊರ್ಮಿಳಾ ಪವಾರ್, ಬಾಮಾ, ಮಾಧವಿ ದೇಸಾಯಿ,ಅಮೃತಾಪೀತಂ ಮುಂತಾದವರು) ಪ್ರತ್ಯೇಕ ಅಧ್ಯಯನವನ್ನೇ ಬೇಡುತ್ತದೆ. ಇದು ನಮ್ಮ ಕಾಲದ ತುರ್ತುಕೂಡಾ ಆಗಿದೆ ಎಂದಷ್ಟೇ ಹೇಳ ಬಯಸುವೆ. ಕೆ. ಸತ್ಯನಾರಾಯಣ ಅವರು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಬಹಳ ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಶ್ರೀಧರ್ ಅವರು ಹೇಳಿರುವ ಮಾತು ಸರಿಯಾಗಿಯೇ ಇದೆ. ಮುಂದಿನ‌ವರು ಕೈಗೊಳ್ಳುವ ಅಧ್ಯಯನಗಳಿಗೆ ಇದು ದಾರಿಮಾಡಿ ಕೊಡಲಿ ಎಂದು ಆಶಿಸುತ್ತೇನೆ. ಮುಖ್ಯವಾಗಿ ಈ ಕೃತಿಯ ಅಧ್ಯಯನದ ಶಿಸ್ತು, ಕೃತಿಯ ಕೊನೆಗೆ ಅವರು ಕೊಟ್ಟಿರುವ ಆಕರಗಳು, ಅಧ್ಯಯನದ ವಿಭಾಗ ಕ್ರಮ ಎಲ್ಲವೂ ಹೊಸದೆಂದೆನಿಸಿ ಇದೊಂದು ಎಂಫಿಲ್ ಅಥವಾ ಪಿ.ಎಚ್.ಡಿ ಪ್ರಬಂಧದ ಹಾಗೆ ಕಂಡಿತು. ಅವರ ಮಾತುಗಳಲ್ಲೇ ಹೇಳುವುದಾದರೆ ಈಗ ಈ ಪದವಿಗಳನ್ನು ಕಟ್ಟಿಕೊಂಡು ಅವರು ಏನು ಮಾಡಬೇಕಾಗಿದೆ? ಈಗಾಗಲೇ ಅವರಿಗೆ ಗೌರವ ಡಾಕ್ಟರೇಟ್ ದೊರಕಿದೆ. ಇಂತಹ ಅಧ್ಯಯನಶೀಲ ಪುಸ್ತಕವನ್ನು ಪ್ರಕಟಿಸಿದ, ಅದನ್ನು ಪ್ರೀತಿಯಿಂದ ನಮಗೂ ಕಳುಹಿಸಿದ ಮಿತ್ರರಾದ ಕೆ.ಸತ್ಯನಾರಾಯಣ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು. ಪರಸ್ಪರ ಪ್ರಕಾಶನ: ೧೯೨೧.ಬೆಂಗಳೂರು ಅಧಿಕೃತ ಮಾರಾಟಗಾರರು ವಂಶಿ ಪಬ್ಲಿಕೇಷನ್ಸ್ ನೆಲಮಂಗಲ 97430 5511