Powered By Blogger

Saturday, October 23, 2021

ಪಾರ್ವತಿ ಜಿ ಐತಾಳ್ - ಚಾಂದ್ರಿಯಾಣದ ಸುಯಾತ್ರಿ } ಪ್ರೊ/ ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತ ಉಪನ್ಯಾಸಗಳ ಸಂಕಲನ } Sripati Tantri

ಕೃತಿಯ ಹೆಸರು : ಚಾಂದ್ರಿಯಾಣದ ಸುಯಾತ್ರಿ ( ಪ್ರೊ.ಶ್ರೀಪತಿ ತಂತ್ರಿಯವರ ಕೃತಿಗಳ ಕುರಿತಾದ ಉಪನ್ಯಾಸಗಳ ಸಂಕಲನ) ಸಂಪಾದಕರು : ಮಂಜುನಾಥ ಭಟ್ ಹಾರ್ಯಾಡಿ ಪ್ರಕಾಶಕರು : ಆರ್ ಜಿ.ಪೈ ಸಂಶೋಧನಾ ಕೇಂದ್ರ ಉಡುಪಿ. ಪ್ರೊ.ಪಿ.ಶ್ರೀಪತಿ ತಂತ್ರಿಯವರು ನಾಡಿನ ಶ್ರೇಷ್ಠ ಸಾಂಸ್ಕೃತಿಕ ಚಿಂತಕರು, ಲೇಖಕರು ಮತ್ತು ಸಮಾಜಶಾಸ್ತ್ರಜ್ಞರು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ನಿವೃತ್ತಿಯ ನಂತರವೂ ನಿರಂತರವಾಗಿ ಚಟುವಟಿಕೆಯಲ್ಲಿದ್ದವರು. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ, ಕಾಲೇಜುಗಳ ಪ್ರಾಂಶುಪಾಲರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ತೊಡಗಿ ಇಂದಿನ ತನಕವೂ ಒಂದಿಲ್ಲೊಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದವರು. ಸಮಾಜಶಾಸ್ತ್ರಜ್ಞರಾಗಿ ಅವರು ಬರೆದ ಅಪೂರ್ವ ಕೃತಿಗಳನ್ನು ಪರಿಗಣಿಸಿ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾನಿಲಯವು ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತ್ತು. ಅವರಿಗೆ 75 ವರ್ಷಗಳು ತುಂಬಿದಾಗ ಉಡುಪಿಯ ಜನತೆ ಅವರ ಅಭಿನಂದನಾ ಸಮಾರಂಭ ಏರ್ಪಡಿಸಿ 'ಶ್ರೀಪದ'ಎಂಬ ಗ್ರಂಥವನ್ನೂ ಹೊರತಂದಿದ್ದರು. ಈಗ ಅವರ ಎಂಬತ್ತನೆಯ ವರ್ಷವನ್ನು ಅವರ ಸಲಹೆಯಂತೆ ಅವರ ಅಮೂಲ್ಯ ಕೃತಿಯಾದ 'ಆಜೀವಿಕರು' ಇದರ ಕುರಿತಾದ ಚರ್ಚೆಯ ಮೂಲಕ ಆಚರಿಸಿ 'ಚಾಂದ್ರಿಯಾಣದ ಸುಯಾತ್ರಿ' ಎಂಬ ಸುಂದರ ಶೀರ್ಷಿಕೆಯುಳ್ಳ ಕೃತಿಯನ್ನು ಪ್ರಕಟಿಸಿದ್ದಾರೆ. ನಾಡಿನ ಸುಪ್ರಸಿದ್ಧ ಚಿಂತಕರು ಹಾಗೂ ವಿದ್ವನ್ಮಣಿಗಳು ಮಾತನಾಡಿದ ಈ ವಿಚಾರಸಂಕಿರಣದಲ್ಲಿ ಅವರು ಮಾಡಿದ ಭಾಷಣಗಳನ್ನು ಸಂಪಾದನೆ ಮಾಡುವ ಗುರುತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಮಂಜುನಾಥ ಭಟ್, ಹಾರ್ಯಾಡಿ ಅವರು. 'ಆಜೀವಿಕರು' ಬೌದ್ಧ ಹಾಗೂ ಜೈನಧರ್ಮಗಳ ಹಾಗೆಯೇ ಒಂದು ಪಂಥ. ಆದರೆ ಬೌದ್ಧ-ಜೈನ ಪಂಥಗಳಿಗೆ ಸಿಕ್ಕಿದ ಪ್ರಚಾರ ಅದಕ್ಕೆ ಸ್ವಲ್ಪವೂ ಸಿಗಲಿಲ್ಲ. ಮಸ್ಕಿರಿ ಗೋಶಾಲ ಅನ್ನುವವನು ಸ್ಥಾಪಿಸಿದ ಈ ಪಂಥವು ಬದುಕನ್ನು ಮುಖ್ಯವಾಗಿ ನಿಯತಿವಾದದ ದೃಷ್ಟಿಯಿಂದ ವ್ಯಾಖ್ಯಾನಿಸುತ್ತದೆ. ತಂತ್ರಿಯವರು ಬರೆದ ಈ ಕೃತಿಯು ಅವರ ಭಾರತೀಯ ಪ್ರಾಚೀನ ಸಾಹಿತ್ಯ ಮೂಲದ ಸಮಾಜ ಶಾಸ್ತ್ರೀಯ ಚಿಂತನೆಗಳ ಮೂಲಕ ಬಂದಿದೆ. 'ಆಜೀವಿಕರು-ವೇದೋತ್ತರ ದಾರ್ಶನಿಕ ಬೆಳವಣಿಗೆಗಳು'ಎಂಬ ಶೀರ್ಷಿಕೆಯುಳ್ಳ ಇದು ವೇದಕಾಲದ ಬಗೆಗೂ ವಾಸ್ತು, ತಂತ್ರ ಮತ್ತು ಆಗಮಶಾಸ್ತ್ರಗಳ ಬಗೆಗೂ ಬಹಳಷ್ಟು ಹೊಸ ವಿಚಾರಗಳನ್ನು ಹೇಳುತ್ತದೆ. ಪ್ರಾಚೀನ ಕೃತಿಗಳಲ್ಲಿ ಕಾಣುವ ಭಾಷಾ ಕ್ಲಿಷ್ಟತೆಯಿಲ್ಲದೆ ಆಸಕ್ತಿಯಿರುವ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಹೇಳಲು ಪ್ರಯತ್ನಿಸುತ್ತದೆ ಅನ್ನುವುದು ಇಲ್ಲಿನ ಉಪನ್ಯಾಸಕರ ಅಭಿಪ್ರಾಯ. ಹಿಂದಿನ ವ್ಯಾಖ್ಯಾನಕಾರರಿಗಿಂತ ಭಿನ್ನವಾಗಿ ತಮ್ಮ ಅಭಿಪ್ರಾಯಗಳನ್ನು ತಾರ್ಕಿಕ ಸಮರ್ಥನೆಯೊಂದಿಗೆ ತಮ್ಮ ಇತರ ಕೃತಿಗಳಲ್ಲಿ ಮಾಡಿದಂತೆ ತಂತ್ರಿಯವರು ಇಲ್ಲಿಯೂ ಮಂಡಿಸಿದ್ದಾರೆ. ವೇದಗಳು ಎಲ್ಲರೂ ನಂಬಿರುವಂತೆ 'ಪರಾವಿದ್ಯೆ'ಯಲ್ಲ, ಬದಲಾಗಿ ಇತಿಹಾಸ, ಪುರಾಣ, ಸಾಮಾಜಿಕ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿದ ನಂತರ ಅಧ್ಯಯನ ಮಾಡಬೇಕಾದ 'ಅಪರಾವಿದ್ಯೆ' ಅನ್ನುತ್ತಾರೆ. 'ಸನಾತನ' ಅನ್ನುವ ಪದಕ್ಕೆ ಎಲ್ಲರೂ ತಿಳಿದಿರುವಂತೆ ಪ್ರಾಚೀನ ಎಂಬ ಅರ್ಥ ಮಾತ್ರವಲ್ಲ, ನೂತನ ಎಂಬ ಅರ್ಥವೂ ಇದೆ. ಆದ್ದರಿಂದ ಹಿಂದೂ ಧರ್ಮವನ್ನು ಸನೂತನ ಧರ್ಮ, ಅಂದರೆ ಸದಾ ಹರಿಯುವ ನದಿಯಂತೆ ಹೊಸದನ್ನು ಸೇರಿಸಿಕೊಳ್ಳಲು ಸಿದ್ಧವಿರುವ ಧರ್ಮ ಅನ್ನಬಹುದು ಅನ್ನುತ್ತಾರೆ. ಜಾತಿ ಜಾತಿಯೆಂದು ಬಡಿದಾಡಿಕೊಳ್ಳುವವರು ವೇದ- ಉಪನಿಷತ್ತುಗಳ ಕಾಲದಿಂದಲೂ ಚಾತುರ್ವಣ್ಯ ಪದ್ಧತಿಯಿತ್ತು ಮತ್ತು ಜಾತಿಯ ಹೆಸರಿನಲ್ಲಿ ಬ್ರಾಹ್ಮಣರು ಇತರರನ್ನು ಶೋಷಿಸುತ್ತಿದ್ದರು ಅನ್ನುವವರು ವೇದ ಮತ್ತು ಉಪನಿಷತ್ರುಗಳಲ್ಲಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅನ್ನುತ್ತಾರೆ. ಉಪನಿಷತ್ ವ್ಯಾಖ್ಯಾನಕಾರ ಸಾಯಣರೇ ಛಾಂದೋಗ್ಯೋಪನಿಷತ್ತಿನಲ್ಲಿ ಬರುವ ಪಂಚಜನಾಃ ಎಂಬ ಪದವನ್ನು ಚಾತುರ್ವಣ್ಯಕ್ಕೆ ತಳಕು ಹಾಕಿದ್ದಾರೆ, ಆದರೆ ಅದು ತಪ್ಪು ಎಂದು ತಂತ್ರಿಯವರು ಸ್ಥಾಪಿಸುತ್ತಾರೆ. ಬೌದ್ಧ ಧರ್ಮವನ್ನು ಕೊಂಡಾಡುವವರು ಅದರ ತತ್ವಗಳು ಮತ್ತು ಉಪನಿಷತ್ತಿನ ತತ್ವಗಳ ನಡುವಣ ಸ್ಪಷ್ಟ ಸಾಮ್ಯವನ್ನೇಕೆ ಗಮನಿಸುವುದಿಲ್ಲ , ತತ್ವಮಸಿ(ನೀನು ಅದೇ ಆಗಿರುವೆ)ಎಂಬ ಹೇಳಿಕೆಯಲ್ಲಿ ಭ್ರಮನಿರಸನದ ಸೂಚನೆಯಿದೆ ಅನ್ನುವವರು ಆ ಭ್ರಮನಿರಸನವನ್ನೇ ಭ್ರಮೆಯಿಂದ ಮುಕ್ತಿ ಎಂದು ಧನಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಕೇಳುತ್ತಾರೆ. ಇಂಥ ನೂರಾರು ಚರ್ಚೆಗಳಿಗೆ ಆಸ್ಪದ ನೀಡುವ 'ಆಜೀವಿಕರು'ಕೃತಿಯ ಬಗ್ಗೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಡಾ.ರಾಜಾರಾಂ ತೋಳ್ಪಾಡಿ, ಡಾ.ಪ್ರಭಾಕರ ಜೋಷಿ, ಸುಬ್ರಹ್ಮಣ್ಯಭಟ್ ಗುಂಡಿಬೈಲು, ಪ್ರೊ.ವರದೇಶ್ ಹಿರೇಗಂಗೆಯವರ ಅಭಿಪ್ರಾಯಗಳು ಈ ಕೃತಿಯಲ್ಲಿವೆ. ತಮ್ಮ ಪ್ರಧಾನ ಕ್ಷೇತ್ರವಾದ ಸಮಾಜಶಾಸ್ತ್ರ ಮಾತ್ರವಲ್ಲದೆ ಸಂಸ್ಕೃತ ಸಾಹಿತ್ಯದ ಬಗೆಗೂ ಅಪಾರ ಜ್ಞಾನ ರಾಶಿಯನ್ನು ತಮ್ಮದಾಗಿಸಿದ ತಂತ್ರಿಯವರನ್ನು ವಿಶ್ವೇಶತೀರ್ಥ ಶ್ರೀಪಾದಂಗಳವರು 'ಚಲಿಸುವ ವಿಶ್ವಕೋಶ'ಎಂಬುದಾಗಿ ವ್ಯಾಖ್ಯಾನಿಸುತ್ತಾರೆ. ಮುಂದಿನ ಭಾಗದಲ್ಲಿ ತಂತ್ರಿಯವರ ಶೈಕ್ಷಣಿಕ ಚಿಂತನೆಗಳು ಮತ್ತು ಅವರು ಸಮಾಜ ಶಾಸ್ತ್ರವನ್ನು ಪಾಶ್ಚಾತ್ಯ ಶೈಲಿಯನ್ನು ಅನುಸರಿಸುವ ಇತರರಿಗಿಂತ ಭಿನ್ನ ರೀತಿಯಲ್ಲಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವ ವಿಧಾನದ ಕುರಿತು ಡಾ.ಸುಧಾರಾವ್, ಪ್ರೊ.ಭೈರಪ್ಪ, ಪ್ರೊ.ಎಡಪಡಿತ್ತಾಯರ ನಿಲುವುಗಳಿವೆ. ಅಲ್ಲದೆ ಓರ್ವ ಗುರುಗಳಾಗಿ, ಸ್ನೇಹಿತರಾಗಿ , ಮಾರ್ಗದರ್ಶಕರಾಗಿ ತಂತ್ರಿಯವರನ್ನು ಕಂಡ ಅಮೆರಿಕದ ಅಭಿಮಾನಿಗಳು ಬರೆದ ಲೇಖನಗಳೂ ಇವೆ. ತಂತ್ರಿಯವರ ಗುರುಗಳಾದ ಇರಾವತಿ ಕರ್ವೆಯವರ ಬಹು ಮುಖ್ಯ ಮಹಾ ಕಾದಂಬರಿ 'ಯುಗಾಂತ'(ಮಹಾಭಾರತದ ಕುರಿತಾದ ಕಥೆ)ವನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ಬಗ್ಗೆಯೂ ಇಲ್ಲಿ ಎಲ್ಲ ಭಾಷಣಕಾರರು ಉಲ್ಲೇಖಿಸಿದ್ದಾರೆ. ಧ್ವನಿಮುದ್ರಿಕೆಯಿಂದ ಭಾಷಣಗಳನ್ನು ಸಂಗ್ರಹಿಸುವುದು, ವಾಕ್ಯಗಳಿಗೆ ಸರಿಯಾದ ರೂಪ ಕೊಡುವುದು ಸುಲಭದ ಕೆಲಸವಲ್ಲ. ಆದ್ದರಿಂದ ಇಲ್ಲಿ ಎಲ್ಲ ಭಾಷಣಗಳನ್ನು ತಮ್ಮದೇ ಭಾಷೆಯಲ್ಲಿ ಅಚ್ಚುಕಟ್ಟಾಗಿ ಅಕ್ಷರಕ್ಕಿಳಿಸಿದ ಮಂಜುನಾಥ ಭಟ್ಟರ ಪ್ರತಿಭೆ- ಪರಿಶ್ರಮಗಳು ಅಭಿನಂದನೀಯ. ಪಾರ್ವತಿ ಜಿ.ಐತಾಳ್

No comments:

Post a Comment