Powered By Blogger

Saturday, October 31, 2020

ಎಸ್. ಟಿ. ಆರ್ - ಬಾಗವಾಳಿನ ಶಾಸನ -ಕಂಪಣ ಒಡೆಯರ್ BAGEVALU INSCRIPTION KAMPANA ODEYAR

 ಬಾಗವಾಳಿನ ಈ ಶಾಸನ (ಬಾಗಿವಾಳು) ಮೊತ್ತೊಂದು ಬಹಳ ಮಹತ್ವದ ಶಾಸನ.

ಈ ಶಾಸನವೂ ಕುಮಾರ ಕಂಪಣ ಒಡೆಯರನ ಉಲ್ಲೇಖಿಸುತ್ತದೆ. ಕ್ರಿ.ಶ 1352ರ ಕಾಲಮಾನದ್ದಾಗಿದೆ. ಈ ಶಾಸನವೂ ವಾಸ್ತವವಾಗಿ ಒಂದು ವೀರಗಲ್ಲು. ಈ ಶಾಸನದಲ್ಲಿ ಬೇಲೂರಿನ ಮೇಲೆ ಕುಮಾರ ಕಂಪಣ್ಣೊಡೆಯನು ಮಾಡಿದ ದಾಳಿಯೊಂದನ್ನು ಉಲ್ಲೇಖಿಸುತ್ತದೆ. ವೀರನೊಬ್ಬ ಈ ಸಂದರ್ಭದಲ್ಲಿ ಹೋರಾಡಿ ಮಡಿದ. ಇದುವರೆಗೆ ಈ ಅಂಶ ತಿಳಿದಿರಲಿಲ್ಲ. ಕಂಚಿಯ ಸಮೀಪವಿರುವ ರಾಜಗಂಭೀರಮಲೈಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅಳುತ್ತಿದ್ದ ಶಂಬುವರಾಯನ ವಿರುದ್ದ, ಒಂದನೇ ಬುಕ್ಕನ ಮಗನಾದ ಕಂಪಣನು ಹೋರಾಡಿದನೆಂಬುದು ತಿಳಿದ ಸಂಗತಿ. ಯುವರಾಜ ಕಂಪಣನು ಶಂಬುವರಾಯನನ್ನು ಸೋಲಿಸಿ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದನು. ಅನಂತರ ಕಂಪನು ಮದುರೆಯತ್ತ ಮುಂದುವರೆದು ಪ್ರಾಂತೀಯ ರಾಜ್ಯಪಾಲನಾದ ಜಲಾಲುದ್ದಿನ್ ಅಹ್ಸಾನ್ ಷಾಹನನ್ನು ಸೋಲಿಸಿದರು, ಕಣ್ಣಾನೂರುಕೊಪ್ಪಂ ಆತನ ಕೈವಶವಾಯಿತು. ತರುವಾಯ ಆತ ತಿರುಪತಿಯಲ್ಲಿ ಇಡಲಾಗಿದ್ದ ಶ್ರೀರಂಗನಾಥನ ಪ್ರತಿಮೆಯನ್ನು ಮರಳಿ ಶ್ರೀರಂಗಕ್ಕೆ ತಂದು ಪ್ರತಿಷ್ಠಾಪನೆ ಮಾಡಿಸಿದನು. ಹಾಗೆಯೇ ಕಣ್ಣಾನೂರುಕೊಪ್ಪಂ ನಲ್ಲಿ ಪೊಯ್ಸಳೇಶ್ವರ (ಹೊಯ್ಸಳೇಶ್ವರ) ದೇವರ ಪ್ರತಿಷ್ಠೆಯನ್ನು ಮಾಡಿಸಿದನು. ಮುನ್ನೆಡೆದ ಆತ ಮದುರೆ ಸುಲ್ತಾನನನ್ನು ಸೋಲಿಸಿ ಮಧುರಾನಗರವನ್ನು ಸ್ವಾಧೀನಪಡಿಸಿಕೊಂಡನು. ಈ ಮಹಾವಿಜಯವನ್ನು ಆತನ ಪತ್ನಿಯಾದ ಗಂಗಾಂಬಿಕೆ ತನ್ನ "ಮಧುರಾವಿಜಯಂ" ಎಂಬ ಕಾವ್ಯದಲ್ಲಿ ವರ್ಣಿಸಿದ್ದಾಳೆ. ಹೀಗೆ ಕಂಪಣ ಒಡೆಯರನು ದಖ್ಖನನಲ್ಲಿ ವಿಜಯನಗರದ ಆಳ್ವಿಕೆಗೆ ಭದ್ರಬುನಾದಿಯನ್ನು ಹಾಕಿದನು. ಮದುರೆಯತ್ತ ಸಾಗುವ ಮೊದಲು ಆತ ಬೇಲೂರು ರಾಜ್ಯದ ಮೇಲೆ ದಾಳಿಮಾಡಿದ್ದಿರಬೇಕು ಹಾಗೂ ಅದನ್ನು ಒಂದನೇ ಬುಕ್ಕನ ರಾಜ್ಯಕ್ಕೆ ಸೇರಿಸಿದ್ದಿರಬೇಕು. ಈ ಶಾಸನವೂ ಕಂಪಣ ಒಡೆಯರನ ದಿಗ್ವಿಜಯವನ್ನು ತಿಳಿಸಿಕೊಡುತ್ತದೆ.
ಅರಿಸೀಕೆರೆಯ ಬಾಗವಾಳು(ಬಾಗಿವಾಳು) ಗ್ರಾಮದ ಪ್ರಾಚೀನ ಕಲ್ಲೇಶ್ವರ ದೇವಾಲಯ ಮುಂದೆ ಇದೆ, ಈ ಕಲ್ಲೇಶ್ವರ ದೇವಾಲಯವೂ ಬಹಳ ಪ್ರಾಚೀನವಾಗಿಯೇ ಅವನತಿಯಾಗಿದೆ, ಅದೇ ಸ್ಥಳದಲ್ಲಿ ಸೋಮೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಈಗಲೂ ಈ ಶಾಸನವೂ ದೇವಾಲಯದ ಮುಂದೆ ಬಿಲ್ವಪತ್ರೆಯ ಮರದ ಕೆಳಗಡೆ ಇದೆ, ಊರಿನ ಜನ ಶಾಸನ ಸಂರಕ್ಷಿಸಿದ್ದಾರೆ. ಹಾಗಾಗಿ ಊರಿನ ಸಮಸ್ತ ಜನತೆಗೆ ಅಭಿನಂದನೆಗಳು.
ಎಸ್ ಟಿ ಆರ್
10

Friday, October 30, 2020

ಡಾ/ ಮಹೇಶ್ವರಿ ಯು- ಶಂಬಾ ಜೋಶಿ { ಮಲ್ಲೇಪುರಂ ವೆಂಕಟೇಶ -]

 ಶಂಬಾ ಜೋಶಿ- ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕøತ ಕನ್ನಡ ಲೇಖಕರ ಕೃತಿಸರಣಿ

                ನವ ಕರ್ನಾಟಕ ಪ್ರಕಟಣೆ

                ಲೇಖಕರು: ಮಲ್ಲೇಪುರಂ ವೆಂಕಟೇಶ ಸಂ: ಪ್ರಧಾನ ಗುರುದತ್ತ

                ಒಟ್ಟು 96 ಪುಟಗಳ ಈ ಕಿರುಹೊತ್ತಗೆಯಲ್ಲಿ ಕನ್ನಡದ ಈ  ನುಡಿದಿಗ್ಗಜನ ಭವ್ಯ ವ್ಯಕ್ತಿತ್ವವನ್ನು  ಅವರ ಕೃತಿಗಳ ಸಂಕ್ಷಿಪ್ತ ಪರಿಶೀಲನೆಯೊಂದಿಗೆ  ಮಾಡಿಕೊಡುವ ದಿಟ್ಟತನವನ್ನು ಮೆರೆದವರು ಮಲ್ಲೇಪುರಂ ವೆಂಕಟೇಶರು.

                ಶಂಕರ ಬಾಳಾ ದೀಕ್ಷಿತ ಜೋಷಿ 1896-1991ರ ನಿಡುಗಾಲದ ಬದುಕಿನಲ್ಲಿ ಅನನ್ಯ ಸಂಶೋಧಕರಾಗಿ, ಸಂಸ್ಕತಿ ಚಿಂತಕರಾಗಿ ಮೂಡಿಸಿದ ಛಾಪು ವಿಶೇಷವಾದದ್ದು.ಪರಿಮಿತವಾದ ಶೈಕ್ಷಣಿಕ ಹಿನ್ನೆಲೆಯೊಂದಿಗೆ ಅವರು ಆಶ್ರಯಿಸಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಧ್ಯಾಪನ ವೃತ್ತಿಯನ್ನು. ಯಾವುದೇ ವಿಶ್ವವಿದ್ಯಾಲಯಗಳ ಆಸರೆ ಬೆಂಬಲಗಳಿಲ್ಲದೆಯೇ ಒಂಟಿಸಲಗನಂತೆ ಜ್ಞಾನಪಿಪಾಸುವಾಗಿ ಒಂದರ ಮೇಲೊಂದರಂತೆ ಅವರು ಕೈಗೆತ್ತಿಕೊಂಡ ಶೋಧನೆಗಳು ದಂಗುಪಡಿಸುತ್ತವೆ.  ಮಲ್ಲೇಪುರಂ ಪರಿಚಯಿಸುವ  ಶಂಬಾ ಅವರ -ಕಣ್ಮರೆಯಾದ ಕನ್ನಡ, ಕನ್ನುಡಿಯ ಹುಟ್ಟು,ಕನ್ನಡದ ನೆಲೆ ಹಾಗೆಯೇ ಶೀಖರಪ್ರಾಯವಾದ ಕರ್ಣಾಟಕ ಸಂಸ್ಕøತಿಯ ಪೂರ್ವಪೀಠಿಕೆ- ಈ ಮುಂತಾದ  ಕೃತಿಗಳು  ಅವರ ಬಹುಶ್ರುತತ್ವವನ್ನು , ಬಹುಶಿಸ್ತೀಯ ನೆಲೆಗಳಿಂದ ಸಾಗುವ ಅವರ ಸಂಶೋಧನೆಯ ದಾರಿಯನ್ನು ಶ್ರುತಪಡಿಸುತ್ತವೆ.ಮರಾಠಿಪ್ರಾಬಲ್ಯದ ಪರಿಸರದಲ್ಲಿ ಕನ್ನಡವನ್ನು ಒಲಿಸಿಕೊಂಡು ಕರ್ನಾಟಕ ಏಕೀಕರಣದಲ್ಲಿಯೂ ತೊಡಗಿಸಿಕೊಂಡು  ಅದಕ್ಕೆ ಅಗತ್ಯವಾಗಿದ್ದ ಬೌದ್ಧಿಕ ತಳಹದಿಯನ್ನು ಗಟ್ಟಿಗೊಳೊಸಿದ ಗಟ್ಟಿಗನಾಗಿ ಶಂಬಾ ಮೆರೆದದ್ದನ್ನು ಈ ಕೃತಿಗಳ ತಿರುಳು ಸಾರುತ್ತದೆ.

                ಭಾಷಾ ಶಾಸ್ತ್ರ, ಸಮಾಜ ಶಾಸ್ತ್ರ,ಮೌಖಿಕ ಆಕರಗಳು, ಲಿಖಿತ ಆಕರಗಳು ,ಏನೆಲ್ಲವನ್ನೂ ಬಳಸಿಕೊಂಡು ಕಂನುಡಿಯ ಹುಟ್ಟಿನ ಬಗ್ಗೆ ತಲಸ್ಪರ್ಶಿಯಾಗಿ ಅವರು ಶೋಧಿಸಿದ್ದನ್ನು ,ದ್ರಾವಿಡ ಪದಕ್ಕೆ ಪರ್ಯಾಯವಾಗಿ ಅವರೇ ಸೃಷ್ಟಿಸಿದ 'ಕಂದಮಿಳು' ಎಂಬ ಪದದ ಮೂಲಕವಾಗಿ ನುಡಿಯ ಪ್ರಾಚೀನತೆಯನ್ನು 

ನಾಡಿನಲ್ಲಿ ಅದು ಹಬ್ಬಿದ ರೀತಿಯನ್ನು ಕೆದಕಿ ಕೆದಕಿ ಅವರು ಬಣ್ಣಿಸಿದ ಬಗೆ ಇತ್ಯಾದಿಗಳನ್ನು ಲೇಖಕರು ಮನೋಜ್ಞವಾಗಿ ನಿರೂಪಿಸಿದ್ದಾರೆ.ನುಡಿಶೋಧದ ಹಿನ್ನೆಲೆಯಾಗಿ ಶಂಬಾ ಅವರ ಪ್ರಾರ್ಥನೆಯ ಸೊಲ್ಲುಗಳು ಗಮನೀಯ.

                 ಹೊನ್ನ ಮುಸುಕನ್ನು ಓಸರಿಸಿ ತಾಯ್ ನನ್ನಿಯೇ

                ನಿನ್ನ ಮೊಗವನ್ನು ತೋರೆ

                ಬನ್ನಬಡುತಿಹೆ ನಾನು ನಿನ್ನ ದರುಶನಕಾಗಿ

                ಹಡೆದಮ್ಮ ವರವ ನೀಡೆ

                ( ಶಂಬಾ ಅವರ ಮೊದಲ ಸ್ವತಂತ್ರ ಕವಿತೆಯಾಗಿ ಮಲ್ಲೇಪುರಂ ಇದನ್ನು ದಾಖಲಿಸಿದ್ದಾರೆ.)

                ಮಹಾರಾಷ್ಟ್ರಕ್ಕೆ ಇರುವ ಕನ್ನಡದ ಋಣ, ಕನ್ನಡವು ತನ್ನ ವ್ಯಾಪಕತೆಯಿಂದ ಸೀಮಿತತೆಗೆ ಇಳಿದದ್ದು- ಇತ್ಯಾದಿಗಳನ್ನು ಶಂಬಾ ಸಾಧಾರ ಚರ್ಚಿಸುತ್ತಾರೆ.ಆಲೂರು ವೆಂಕಟರಾಯರ ಕರ್ನಾಟಕ ಗತವೈಭವದ್ದು ಕನ್ನಡ ಪ್ರಜ್ಞೆಯ ಜಾಗೃತಿಯ ಒಂದು ದಾರಿಯಾದರೆ ಶಂಬಾ ಅವರ ಕೃತಿಗಳದ್ದು ಇನ್ನೊಂದು ದಾರಿ. ನಾಡಿನ ಸಾಂಸ್ಕತಿಕ ಪುನಾರಚನೆಗೆ ಎರಡೂ ಅಗತ್ಯವಾಗಿದ್ದುವು.ಚರಿತ್ರೆಯನ್ನು ವೈಭವೀಕರಿಸುವುದಾಗಲೀ ಆಧ್ಯಾತ್ಮೀಕರಿಸುವುದಾಗಲೀ ಮಾಡದೆ ಸತ್ಯದ ನವದರ್ಶನವಾಗಬೇಕಾದರೆ-"ಭಾಷಾ ಶಾಸ್ತ್ರವು ಕೊಡುವ ಸಲಹೆ ಸೂಚನೆಗಳು ಸಮಾಜವಿಕಾಸ ಶಾಸ್ತ್ರ,ವಂಶವಿಜ್ಞಾನ,ಪುರಾಣಶಾಸ್ತ್ರಪರಂಪರೆ,ಧರ್ಮ, ಮಾನವ ಶಾಸ್ತ್ರ ಅಥವಾ ಪುರಾತನ ವಸ್ತುವಿಜ್ಞಾನ- ಇಂತಹ ಬೇರೆ ಬೇರೆ ಶಾಖೆಯ ಶಾಸ್ತ್ರಗಳ ಬೆಂಬಲವೂ ದೊರೆತರೆ ಮಾತ್ರ ಆ ಮಾತನ್ನು ನಿಶ್ಚಿತಸಿದ್ಧಾಂತವಲ್ಲದಿದ್ದರೂ ವಿಚಾರಾರ್ಹವೆಂದು ಸಂಗ್ರಹಿಸಿ ಮುಂದಡಿಯಿಡಲು ಅಡ್ಡಿಯಿಲ್ಲ. ಇವೆಲ್ಲ ಶಾಸ್ತ್ರಗಳಲ್ಲಿ ಪಾರಂಗತರಾದ ವಿದ್ವಾಂಸರು ಈ ಕೆಲಸವನ್ನು ಎಂದು ಕೈಗೊಳ್ಳುವರೋ ಅದು ಕರ್ನಾಟಕದ ಇತಿಹಾಸದ ಸುವರ್ಣದಿನ. ಆದರೆ ಅಲ್ಲಿಯವರೆಗೆ ಉಳಿದವರು ತಮ್ಮ ಅಭ್ಯಾಸದಲ್ಲಿ ಹೊಳೆದುದನ್ನು ತಿಳಿದುದನ್ನು ಅರಿತುದನ್ನು , ಕುರಿತುದನ್ನು ಸಂಗ್ರಹಿಸಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುವುದು ಅಪರಾಧವಾದೀತೆ?" ಎಂದು ಶಂಬಾಜೋಶಿಯವರು( ಕಂನಾಡು ಕರ್ನಾಟಕ- ಶಂಬಾ 

ಕೃತಿಸಂಪುಟ- 1999- ಪು266ರಲ್ಲಿ) ಓರ್ವ ನಿಜವಿದ್ವಾಂಸನಿಗೆ ಸಹಜವಾದ ವಿನಯದಿಂದಲೂ ಕಾಳಜಿಯಿಂದಲೂ ಪ್ರಶ್ನಿಸಿದ್ದನ್ನು ಮಲ್ಲೇಪುರಂ ಅವರು ಉಲ್ಲೇಖಿಸುತ್ತಾರೆ.

                ಮಲ್ಲೇಪುರಂ ಅವರು ಗುರುತಿಸುವಂತೆ ಶಂಬಾ ಇಡಿಯಾದ ಆಕೃತಿಯ ಮುಖಾಂತರ ಒಟ್ಟುಸಂಸ್ಕತಿಯ ಆಶಯವನ್ನು ಗ್ರಹಿಸಿಕೊಳ್ಳುವ ತವಕದಿಂದ ಮುಂದುವರಿದವರು.ಕನ್ನಡ ಸಂಸ್ಕತಿಸಮಸ್ಯೆಗಳ ಬೇರನ್ನು ಭಾರತೀಯ ಸಂಸ್ಕತಿಯ ಅಂತರ್ ನೆಲೆಗಳ ಹಾಸು ಮತ್ತು ಹೊಕ್ಕುಗಳಲ್ಲಿ ಹುಡುಕಿಕೊಳ್ಳುವ ಪ್ರಯತ್ನ ಮಾಡಿದರು.

                ಶಂಬಾ ಅವರ ಸಂಶೋಧನೆಯ ಹೆಜ್ಜೆಗಳು ಯಾವ ಯಾವ ನೆಲೆಗಳಲ್ಲಿ ಸಾಗಿದ್ದವು ಎನ್ನುವುದು ಕುತೂಹಲಕರ.

                1. ಭೌಗೋಳಿಕ ವ್ಯಾಪ್ತಿಯ ನೆಲೆಗಳು(ನರ್ಮದಾ, ಕಾವೇರಿ ಸೀಮೆಗಳು)

                2.ಜಾನಾಂಗೀಯ ಅಧ್ಯಯನದ ನೆಲೆಗಳು( ಹಟ್ಟಿಗಾರರು- ದ್ರವಿಡ, ಹಟ್ಟೀಕಾರ, ತುರುವ,ಕುರುವ, ಪಶುಪಾಲನೆಯ ಪತ್ತಿಜನ- ಪಟ್ಟಿಜನ- ಹೀಗೆ)

                3.ಭಾಷಿಕ ಅಂತ:ಪ್ರಮಾಣದ ನೆಲೆಗಳು( ಸ್ಥಳನಾಮಗಳು, ಇನ್ನಿತರ ಶಬ್ದಮೂಲಗಳು)

                4.ಆಚರಣಾ ಮೂಲದ ನೆಲೆಗಳು( ಮಾನವಮಿ, ದೀಪಾವಳಿ, ಗೋಕ್ರೀಡನ ಇತ್ಯಾದಿ)

                5.ದೈವತ ಕತೆಗಳು, ಸಾಂಕೇತಿಕ ಆಕೃತಿಗಳ ನೆಲೆಗಳು( ಗೊಂಡರದೇವ, ಖಂಡೋಬಾ,ಮಲ್ಲಯ್ಯ, ಮಾಳವ್ವೆ, ಗ್ರಾಮದೇವತೆಗಳು ಇತ್ಯಾದಿ)

                 ಕನ್ನಡ ಸಂಸ್ಕತಿಯ ಶೋಧನೆಯೊಂದಿಗೆ ಆರಂಭಗೊಂಡ ಅವರ ಪಯಣವು ಮರಾಠಿ ಸಂಸ್ಕತಿಶೋಧನೆ, ವೀರಶೈವಮತದ ಬೇರುಗಳನ್ನು ಪತ್ತೆ ಮಾಡುವಲ್ಲಿ, ಋಗ್ವೇದಸಾರ,ನಾಗಪ್ರತಿಮಾವಿಚಾರದ ಕುರಿತಾದ ಅನ್ವೇಷಣೆಯಲ್ಲಿ ಭಾರತೀಯ ಸಂಸ್ಕತಿಯ ಶೋಧದ ಕಡೆಗೆ ಮುಂದುವರಿಯುತ್ತದೆ.ಮುಂದೆ ಅದು ಜಾಗತಿಕ ಸಂಸ್ಕೃತಿಯತ್ತ

ವಿಸ್ತರಿಸುತ್ತದೆ.ಪ್ರವಾಹಪತಿತರ ಕರ್ಮ ಹಿಂದೂ  ಎಂಬ ಧರ್ಮ,ಬುದ್ಧನ ಜಾತಕ ಮುಂತಾದ ಕೃತಿಗಳು ಇದಕ್ಕೆ ಸಾಕ್ಷಿಯಾಗಿವೆಯೆಂದು ಮಲ್ಲೇಪುರಂ ಹೇಳುತ್ತಾರೆ.ಗ್ರೀಕ್, ಈಜಿಪ್ಟ್,ಮೆಸಪೊಟೇಮಿಯಾ ಹಾಗೂ ಭಾರತೀಯ ಸಾಮಾಜಿಕ ಧಾರ್ಮಿಕ ನೆಲೆಗಳ ತುಲನಾತ್ಮಕ ವಿವೇಚನೆ ಮಾನವ ಸಂಸ್ಕತಿಯನ್ನು ವಿವರಿಸಿಕೊಳ್ಳುವ ಅವರ ಪ್ರಯತ್ನವಾಗಿ ಅದರ ಹಿಂದೆ ವಿಶಾಲವಾದ ಮಾನವ ಧರ್ಮದತ್ತ ತುಡಿಯುವ ಶಂಬಾ ಅವರ ಮನಸ್ಸನ್ನು ಲೇಖಕರು  ಗುರುತಿಸುತ್ತಾರೆ.

                 ಸಂಸ್ಕ್ರತಿಯ ಒಳಸುಳಿಗಳು ಜಾನಪದದಲ್ಲಿ ಬೇರುಬಿಟ್ಟಿರುವುದನ್ನು  ಮಾತೃದೇವತೆಯ ಆರಾಧನೆ ಆದಿಮ ಸಂಸ್ಕತಿಯಲ್ಲಿ ನೆಲೆಗೊಂಡದ್ದನ್ನು, ಮಾತೃಪ್ರಧಾನ ಮೌಲ್ಯಗಳು ಪುರುಷಪ್ರಧಾನ ವೈದಿಕ ಸಂಸ್ಕತಿಗಿಂತ ಮೊದಲೇ ಇಲ್ಲಿ ಬದುಕಿದ್ದನ್ನು ಕೊನೆಗೆ ವೈದಿಕ ಸಂಸ್ಕತಿಯು ತನ್ನೊಡಲಲ್ಲಿ ಅವುಗಳನ್ನು ಸ್ವೀಕರಿಸಿದ್ದನ್ನು ಶಂಬಾ ಅನಾವರಣಗೊಳಿಸಿದ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾರೆ.ಕನ್ನಡದ ಮೂಲ ಸ್ಥಾನ ನರ್ಮದಾ ನದಿಯ ತೀರಪ್ರಾಂತವಿರಬೇಕೆನ್ನುವ ಅವರ ತರ್ಕ, ಅದಕ್ಕೆ ಅವರು ಕಂಡು ಕೊಳ್ಳುವ ಆಧಾರಗಳು ಮಹತ್ವಪೂರ್ಣವಾದವು.

                ಇಂದಿನ ಅವಗತಿಗಳಿಗೂ ಅವಸರ್ಪಿಣಿ ರೂಪಕ್ಕೂ ನಿನ್ನೆಯೇ ಕಾರಣವಾಗಬಲ್ಲದೆಂಬುದನ್ನ ತಮ್ಮ ಬರಹಗಳ ಮೂಲಕ ಅವರು ಮಂಡಿಸಿದ್ದು ವಿಶೇಷ.ಇಂದಿನ ಪಡಿಪಾಟಲು ಮತ್ತು ವಿಸಂಗತಿಗಳನ್ನು ಸರಿಪಡಿಸಿಕೊಳ್ಳದೆ ನಾಳೆಯ ಭವಿಷ್ಯಕ್ಕೆ ಅರ್ಥ ಇರುವುದಿಲ್ಲವೆಂಬ  ಶಂಬಾ ತತ್ವಚಿಂತನೆಯು ಕೂಡ ಬಹಳ ಮುಖ್ಯವಾದದ್ದು.' ನಿನ್ನೆ ಮುಖ್ಯ ಎಂದರೆ ಅದು ಪರಿಮಿತ. ನಾಳೆಯೂ ಮುಖ್ಯ ಎಂದರೆ ಅದು ಅಪರಿಮಿತ " ಈ ಎಚ್ಚರ ಬೇಕು ಎನ್ನುವುದು ಅವರ ಇಂಗಿತವಾಗಿ ಮಲ್ಲೇಪುರಂ ಅವರು ಕಾಣುತ್ತಾರೆ.

                 ಒಟ್ಟಿನಲ್ಲಿ ಶಂಬಾ ಅವರ ವಿದ್ವತ್ತು ಪ್ರತಿಭೆಗಳ ಕುರಿತು ಅಪ್ಪಟ ಅಭಿಮಾನವೂ ಅರಿವೂ ಉಳ್ಳ  ಲೇಖಕರು  ಈ ಕೃತಿಯಲ್ಲಿ ಅವರ ಮಹೋನ್ನತ ಚೇತನಕ್ಕೆ ನ್ಯಾಯ ಒದಗಿಸಿದ್ದಾರೆ. ಮುಂದಿನ ಪೀಳಿಗೆಗೆ ಒಂದು ಸ್ಫೂರ್ತಿಯನ್ನು ನೀಡಿದ್ದಾರೆ


ಶಂಬಾ ಅವರ ಸಾವಿನ ಬೆನ್ನಲ್ಲೆ ಅವರ ಬಾಳ ಸಂಗಾತಿ ಪಾರ್ವತಿಯ ಮರಣವೂ ಜರಗಿ ಇಬ್ಬರನ್ನೂ ಒಂದೇ ಚಿತೆಯಲ್ಲಿ ಸಂಸ್ಕಾರ ಮಾಡಲಾಯಿತು ಎನ್ನುವ ವಿಚಾರವನ್ನು  ಲೇಖಕರು ಉಲ್ಲೇಖಿಸಿದ್ದು ಒಂದು ವಿಶೇಷ ಘಟನೆಯಾಗಿ ಮನಸ್ಸಿನಲ್ಲಿ ಉಳಿಯುತ್ತದೆ.

 

ಮಹೇಶ್ವರಿ.ಯು


ಮುರಳೀಧರ ಉಪಾಧ್ಯ ಹಿರಿಯಡಕ - ಬಿ. ವಿ. ಕಾರಂತರ ಕೊಡುಗೆ Muraleedhara Upadhya on BV Karanth_Kannada

Monday, October 26, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಮ್. ಜಾನಕಿ ಅವರ "ಕುದುರುದ ಕೇದಗೆ "{ ತುಳು ಕಾದಂಬರಿ 1994 }

 

ಪುಸ್ತಕ ಪರಿಚಯ

 

 

·        ಕುದುರುದ ಕೇದಗೆ

ಲೇ : ಎಂ. ಜಾನಕಿ ಬ್ರಹ್ಮಾವರ

ಪ್ರ  : ಹೇಮಾಂಶು ಪ್ರಕಾಶನ,

ದೃಶ್ಯ' ಗೊಲ್ಲಚ್ಟಿಲ್,

ದೇರೆಬೈಲು,

ಮಂಗಳೂರು - 575 006

ಮೊದಲ ಮುದ್ರಣ : 1994

ಬೆಲೆ : ರೂ.27

 

     ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರ ಚೊಚ್ಚಲ ತುಳು ಕಾದಂಬರಿ- `ಕುದುರುದ ಕೇದಗೆ', ತುಳುನಾಡಿನ ಹಳ್ಳಿಯೊಂದರ ದಲಿತರ ಅಸಹಾಯಕತೆಯನ್ನು ಅನಾವರಣಗೊಳಿಸುವ ಸಾಮಾಜಿಕ ಕಾದಂಬರಿ ತನ್ನ ಕಲಾತ್ಮಕ ಕುಸುರಿ ಕೆಲಸದಿಂದ ಗಮನ ಸೆಳೆಯುತ್ತವೆ.

     ನೀಲಕ್ಕನ ಮಗ ಶಂಕರ ನೌಕಾಪಡೆ ಯಲ್ಲಿರುವ ಯುವಕ. ರಜೆಯಲ್ಲಿ ಊರಿಗೆ ಬಂದಿರುವ ಶಂಕರನ ಮನಸ್ಸಲ್ಲಿ ಅವನ ಬಾಲ್ಯ ಕಾಲದ ನೆನಪುಗಳು ತುಂಬಿವೆ. ದಲಿತ ಐತನ ಮಗ ವಾಸು ಅನಾರೋಗ್ಯದಿಂದ ನರಳುತ್ತಿದ್ದಾನೆ. ಅವನನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖಿಯಾಗಿಸುವ ಶಂಕರನ ಪ್ರಯತ್ನ ವಿಫಲವಾಗುತ್ತದೆ. ತನ್ನೂರಿನ ದಲಿತ ಯುವತಿ ಕುಸುಮಳ ಅಪಹರಣ ಪ್ರಯತ್ನದ ಸುಳಿವು ತಿಳಿದ ಶಂಕರ ಅವಳನ್ನುರಕ್ಷಿಸಲು ಪ್ರಯತ್ನಿಸುತ್ತಾನೆ. ಅವನು ಕುಸುಮಳನ್ನು ಮದುವೆಯಾಗುವ ಕನಸು ಕಾಣುತ್ತಿರುವಾಗ ಅವಳ ಅಪಹರಣವಾಗುತ್ತದೆ. ಮುಂಬಯಿಯ ಸೂಳೆಗೇರಿಯ ದಲಾಲಿಗಳು ಅವಳನ್ನು ಅಪಹರಿಸಿದರು ಎಂಬ ಸೂಚನೆ ಕಾದಂಬರಿಯಲ್ಲಿದೆ. ಕುಸುಮಳ ತಾಯಿ ಕಮಲಕ್ಕ ಊರಿನ ಗರೋಡಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹತಾಶನಾದ ಶಂಕರ ತನ್ನ ಉದ್ಯೋಗಕ್ಕೆ ಹಿಂದಿರುಗುತ್ತಾನೆ.

   ಗ್ರಾಮೀಣ ಸಮಾಜದ ದಲಿತರ ಸ್ಥಿತಿ-ಗತಿ `ಕುದುರುದ ಕೇದಗೆ' ದೃಷ್ಟಿ ಕೇಂದ್ರವಾಗಿದೆ. ಬಿಲ್ಲವ ಜಾತಿಯ ಯುವಕ ಶಂಕರನಿಗೆ ದಲಿತರ ಕುರಿತು ಪ್ರಾಮಾಣಿಕವಾದ ಸಹಾನುಭೂತಿ ಇದೆ. ದಲಿತ ವಾಸುವಿನ ಹೆಣ ಹೊರಲು ಶಂಕರನ ಸ್ವಜಾತಿಯವರು ನಿರಾಕರಿಸುತ್ತಾರೆ. ವಾಸುವಿನ ಸಾವಿಗೆ ಹಳ್ಳಿಯ ಜನರ ಮೂಢನಂಬಿಕೆಯೂ ಕಾರಣವಾಗಿದೆ. ಯಕ್ಷಗಾನ ಪ್ರದರ್ಶನದಂದು ನಡೆಯುವ ಗೂಂಡಾ ಆಕ್ರಮಣ, ದಲಿತ ಯುವತಿಯ ಅಪಹರಣ, ಗರೋಡಿಯ ಕಾಣಿಕೆ ಡಬ್ಬಿಯಿಂದ ಕಳವು- ಇವು ಹಳ್ಳಿಯ ಅವಗತಿಯನ್ನು ಸೂಚಿಸುತ್ತವೆ. ವ್ಯವಸ್ಥೆಯ ಪ್ರತಿನಿಧಿಗಳಾಗಿರುವ ಪೊಲೀಸರು ಕಮಲಕ್ಕನ `ಪೋಸ್ಟ್ ಮಾರ್ಟಮ್' ಮಾಡಿಸುತ್ತಾರೆ. ಆದರೆ ಅವರು ಕುಸುಮಳನ್ನು ಪತ್ತೆ ಹಚ್ಚಬಲ್ಲರೆಂಬ ಭರವಸೆ ಇಲ್ಲ. ದಲಿತ ಐತ ಅಸಹಾಯಕನಾಗಿ ಊರು ಬಿಟ್ಟು ಹೋಗುತ್ತಾನೆ.

   ಕಾದಂಬರಿಯ ನಾಯಕ ಶಂಕರನ ದೃಷ್ಟಿಕೋನದ ತಂತ್ರವಿರುವ ಕೃತಿಯಲ್ಲಿ ಹಲವು ಧ್ವನಿಪೂರ್ಣ, ಸಾಂಕೇತಿಕ ವಿವರಗಳಿವೆ. ಕುಸುಮಳ ಅಪಹರಣವನ್ನು ಸೂಚಿಸುವ ಹದ್ದು - ಕೋಳಿಮರಿಯ ಸಂಕೇತ ಒಂದು ಒಳ್ಳೆಯ ಉದಾಹರಣೆ. ವಸ್ತುವಿನ ಸೀಮಿತ ಚೌಕಟ್ಟಿನಿಂದಾಗಿ ಕೃತಿ ನೀಳ್ಗತೆ ಮತ್ತು ಕಿರುಕಾದಂಬರಿಗಳ ಗಡಿಯಲ್ಲಿ ನಿಲ್ಲುತ್ತವೆ.

   `ಕುದುರುದ ಕೇದಗೆ'ಯಲ್ಲಿ ಭರವಸೆ ಮೂಡಿಸುವ ಉದಯೋನ್ಮುಖ ತುಳು ಲೇಖಕಿಯೊಬ್ಬರು ಕಾಣಲು ಸಿಗುತ್ತಾರೆ. ಮಹಾಲಿಂಗರ `ನಾಣಜ್ಜೆರ್ ಸುದೆ ತಿರ್ಗಾಯೆರ್' ಕಾದಂಬರಿಯ ಆನಂತರ ಪ್ರಕಟವಾಗಿರುವ ಒಂದು ಗಮನಾರ್ಹ ಕಲಾತ್ಮಕ ಕೃತಿ - ``ಕುದುರುದ ಕೇದಗೆ''.

 

 

·