Powered By Blogger

Tuesday, October 13, 2020

ವಸುಧೇಂದ್ರ - ಕಲಾವಿದ ಮೋಹನ ಸೋನ -MOHANA SONA by VASUDHENDRA

 ನಾನು ಕಲಾವಿದ ಮೋಹನ ಸೋನಾ ಅವರನ್ನು ಭೇಟಿಯಾಗಿದ್ದು ಅನಿರೀಕ್ಷಿತವಾಗಿತ್ತು. ಒಮ್ಮೆ ಅಬ್ಬರದ ಮಳೆಯ ಚಂದವನ್ನು ಸವಿಯಲೆಂದು ಸುಳ್ಯದ ಬಳಿಯ ಕನಕಮಜಲುಗೆ ಹೋಗಿದ್ದೆ. ಆ ಊರಲ್ಲಿದ್ದ ನನ್ನ ಮಿತ್ರ ಲಕ್ಷ್ಮೀನಾರಾಯಣ ಕಜಗದ್ದೆ ನನ್ನನ್ನು ಆಹ್ವಾನಿಸಿದ್ದ. ಅವರ ಮನೆಯಲ್ಲಿಯೇ ಮೂರು ದಿನ ಉಳಿದು, ಎಡೆಬಿಡದೆ ಸುರಿಯುವ ಮಳೆಯನ್ನು ಜಗುಲಿಯಲ್ಲಿ ಕುಳಿತು ನೋಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಅಪರೂಪಕ್ಕೆ ಒಂದು ಸಂಜೆ ಮಳೆ ಕಡಿಮೆ ಆದಾಗ "ಬರೀ ಮನೆಯಲ್ಲಿಯೇ ಕುಳಿತು ನಿಮಗೆ ಬೇಸರವಾಗಿರುತ್ತದೆ. ಇಲ್ಲೊಬ್ಬರು ಕಲಾವಿದರನ್ನು ಪರಿಚಯಿಸಿ ಕೊಡುವೆ. ಬನ್ನಿ" ಎಂದು ಲಕ್ಷ್ಮೀನಾರಾಯಣ ತನ್ನ ಬೈಕಿನಲ್ಲಿ ಮೋಹನ ಸೋನಾ ಅವರ ಮನೆಗೆ ಕರೆದುಕೊಂಡು ಹೋಗಿದ್ದ.

ಮಲೆನಾಡಿನ ಮಧ್ಯದ ಮನೆಯದು. ಸುತ್ತಲೂ ಹಸಿರು ಚೆಲ್ಲಿಕೊಂಡು, ಮೂಗನ್ನು ಮಾತ್ರ ಕೆಂಪಗೆ ಇಟ್ಟುಕೊಂಡ ಗಿಣಿಯ ಮೂತಿಯಂತೆ ಅವರ ಹೆಂಚಿನ ಮನೆಯಿತ್ತು. ರಸ್ತೆಯಿಳಿದು, ಒಂದು ಪುಟ್ಟ ಹಳ್ಳವನ್ನು ಸಂಕದ ಮೂಲಕ ದಾಟಿ ಅವರ ಮನೆ ತಲುಪಬೇಕಾಗಿತ್ತು. ಅಂಗಳದ ತುಂಬಾ ಆಕಾಶಕ್ಕೆ ಮುಖಮಾಡಿ ನಿಂತ ತೆಂಗು-ಕಂಗಿನ ಮರಗಳು ಮಳೆಯ ನೀರಿನಲ್ಲಿ ಸೊಗಸಾದ ಪ್ರತಿಬಿಂಬಗಳನ್ನು ಚೆಲ್ಲಿದ್ದವು. ನಡುಮನೆಯಲ್ಲಿ ಕುಳಿತರೆ ಪಕ್ಕದ ಮನೆಯವರ ಒಗ್ಗರಣೆಯ ಪರಿಮಳ ಆಸ್ವಾದಿಸಬಹುದಾದ ಬಯಲುಸೀಮೆಯವನು ನಾನು. ಮಲೆನಾಡಿದ ಈ ವಿಶಾಲ ಏಕಾಂತ ಮನೆಗಳು ನನಗೆ ಅಚ್ಚರಿಯನ್ನೂ, ಭಯವನ್ನೂ, ಸಂತಸವನ್ನೂ ಏಕಕಾಲದಲ್ಲಿ ತುಂಬುತ್ತವೆ. ಅವೆಲ್ಲಾ ಭಾವಗಳನ್ನು ತುಂಬಿಕೊಂಡೇ ಅವರನ್ನು ಭೇಟಿಯಾಗಿದ್ದೆ.
ಆ ಹೊತ್ತಿನಲ್ಲಿ ಅವರ ಮನೆಯಲ್ಲಿ ಅದಷ್ಟೇ ಒಂದು ಕಲಾಕಮ್ಮಟ ಮುಕ್ತಾಯಗೊಂಡಿತ್ತು. ನಾಡಿನ ಯುವಕಲಾವಿದರನ್ನು ತಮ್ಮ ಮನೆಯಲ್ಲಿ ಸೇರಿಸಿ, ಅವರಿಗೆ ಅಲ್ಲಿಯೇ ಊಟ-ವಸತಿ ಅನುಕೂಳ ಮಾಡಿಕೊಟ್ಟು, ಅವರಿಗೆಲ್ಲಾ ಕಲೆಯ ತರಬೇತಿಯನ್ನು ಕೊಟ್ಟಿದ್ದರು. ಆ ಯುವಕಲಾವಿದರೆಲ್ಲಾ ಮಾಡಿದ ಕಲಾಕೃತಿಗಳನ್ನು ಮನೆಯ ಗೋಡೆಗಳ ಮೇಲೆ ಸೊಗಸಾಗಿ ಪ್ರದರ್ಶನ ಮಾಡಿದ್ದರು. ಅವನ್ನೆಲ್ಲಾ ಬೆರಗಿನಲ್ಲಿ ನೋಡುತ್ತಾ ಹೋಗಿದ್ದೆ. ಒಂದೆರಡು ಕಲಾಕೃತಿಗಳನ್ನು ನಾನು ದಿಟ್ಟಿಸಿದಾಗ ಮಾತ್ರ "ಅದು ನಾನು ಮಾಡಿದ್ದು" ಎಂದು ಸಂಕೋಚದಿಂದ ಹೇಳಿಕೊಂಡಿದ್ದರು.
ಅವರದು ಸಂಕೋಚದ ಪ್ರವೃತ್ತಿ. ಮಾತು ಕಡಿಮೆ. ಆದರೆ ಮೋಹನರ ಕೃತಿಗಳು ಮಾತ್ರ ಅಪ್ಪಟ ’ಸೋನಾ’. ಅವರ ರೇಖಾಚಿತ್ರಗಳನ್ನು ನೋಡಿ ಬೆರಗಾಗಿತ್ತು. ’ನಮ್ಮ ಪುಸ್ತಕವೊಂದಕ್ಕೆ ಚಿತ್ರಗಳನ್ನು ಮಾಡಿಕೊಡುವಿರಾ?’ ಎಂದು ಸಂಕೋಚದಿಂದಲೇ ಕೇಳಿದ್ದೆ. ಸುಮ್ಮನೆ ನಕ್ಕು ತಲೆಯಾಡಿಸಿದ್ದರು. ಅನಂತರ ನಾನು ಆ ವರ್ಷದ ಪುಸ್ತಕಗಳನ್ನು ಮಾಡುವಾಗ ಅವರಿಗೆ ಕರೆ ಮಾಡಿ, ಮತ್ತೊಮ್ಮೆ ಕೋರಿಕೆಯನ್ನು ಇಟ್ಟಿದ್ದೆ. ’ಹುಲಿರಾಯ’ ಎನ್ನುವ ಹುಲಿಬೇಟೆಗೆ ಸಂಬಂಧಿಸಿದ ಪುಸ್ತಕವನ್ನು ಛಂದ ಪುಸ್ತಕದಿಂದ ಪ್ರಕಟಿಸುತ್ತಿದ್ದೆ. ಹತ್ತನೇ ತರಗತಿ ಓದುತ್ತಿರುವ ಕೀರ್ತಿರಾಜ್ ಎನ್ನುವ ಕುಂದಾಪುರದ ಹುಡುಗನೊಬ್ಬ ಆ ಕತೆಗಳನ್ನು ಬರೆದಿದ್ದ. ಅದಕ್ಕೆ ಒಂದೆರಡು ರೇಖಾಚಿತ್ರಗಳು ಬೇಕು ಎಂದಾಗ, ಅತ್ಯಂತ ಪ್ರೀತಿಯಿಂದ ಇಡೀ ಹಸ್ತಪ್ರತಿಯನ್ನು ಓದಿ ಹತ್ತಾರು ರೇಖಾಚಿತ್ರಗಳನ್ನು ಮಾಡಿ ಕಳುಹಿಸಿದ್ದರು. ಆ ರೇಖಾಚಿತ್ರಗಳು ಅದೆಷ್ಟು ಆಕರ್ಷಕವಾಗಿದ್ದವೆಂದರೆ, ಅವುಗಳದೇ ಒಂದು ಪ್ರತ್ಯೇಕ ಪುಸ್ತಕವನ್ನು ಮಾಡಬಹುದಿತ್ತು. ಮಲೆನಾಡನಲ್ಲಿಯೇ ಬದುಕಿದ, ಬೇಟೆಯ ಕತೆಗಳನ್ನು ಕೇಳುತ್ತಲೇ ಬೆಳೆದ ಮೋಹನ ಸೋನಾ ಅವರಿಗೆ ಈ ಚಿತ್ರಗಳನ್ನು ಬರೆಯುವುದು ಸಂತಸ ತಂದಿರಬೇಕು. ಆದ್ದರಿಂದ ಭರಪೂರ ಚಿತ್ರಗಳನ್ನು ರಚಿಸಿ ಕಳುಹಿಸಿದ್ದರು. ಯಾವ ಚಿತ್ರವನ್ನೂ ಕೈ ಬಿಡದೆ, ಅಷ್ಟನ್ನೂ ಆ ಪುಸ್ತಕಕ್ಕೆ ಸೇರಿಸಿದ್ದೆವು (ಗೆಳೆಯ ಅಪಾರ ಪುಸ್ತಕದ ಒಳಪುಟಗಳನ್ನು ನೋಡಿಕೊಂಡಿದ್ದ). ಆದ್ದರಿಂದ ಆ ಕೃತಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಟಗಳು ಮೋಹನ ಸೋನಾ ಅವರ ಚಿತ್ರಗಳಿಂದ ನಳನಳಿಸುತ್ತವೆ. ಮುಂದೆ ಮತ್ತೊಮ್ಮೆ ಸುನಂದಾ ಪ್ರಕಾಶ ಕಡಮೆ ಅವರ ಕಾದಂಬರಿಗೂ ರೇಖಾಚಿತ್ರಗಳನ್ನು ಮಾಡಿಕೊಟ್ಟಿದ್ದರು. ಅತ್ಯಂತ ಅಚ್ಚರಿಯೆನ್ನುವಂತೆ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಬೆಂಗಳೂರಿಗೆ ಬಂದು ಹೋಗಿದ್ದರು.
ಸಾಹಿತಿಗಳ ಪುಸ್ತಕಗಳ ಯಶಸ್ಸಿಗೆ ನಮ್ಮ ಕಲಾವಿದರು ಅತ್ಯಂತ ಮುಖ್ಯವಾಗಿರುತ್ತಾರೆ. ನಮ್ಮ ಛಂದ ಪುಸ್ತಕದ ಹಲವಾರು ಪುಸ್ತಕಗಳಿಗೆ ಅತ್ಯುತ್ತಮ ರೇಖಾಚಿತ್ರಗಳನ್ನು ಕಲಾವಿದರು ಒದಗಿಸಿ ಕೊಟ್ಟು ಅವುಗಳ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಪುಸ್ತಕಗಳ ಯಶಸ್ಸಿಗೆ ಲೇಖಕರಷ್ಟೇ ಸಮಪಾಲು ಅವರಿಗೂ ನಾವು ನೀಡಬೇಕು. ಅವರ ಆ ಅಪರೂಪದ ಚಿತ್ರಗಳಿಗೆ ನಾವು ಕೊಡುವ ಗೌರವ ಧನ ಅತ್ಯಂತ ಕಡಿಮೆಯಾದದ್ದು. ಕನ್ನಡದ ಪುಸ್ತಕೋದ್ಯಮದಲ್ಲಿ ಅಂತಹ ದೊಡ್ಡ ಮೊತ್ತವನ್ನೂ ಕೊಡಲು ಸಾಧ್ಯವಾಗುವಂತಹ ಆದಾಯವೂ ಇರುವುದಿಲ್ಲ. ಆದರೂ ಅವರು ಪ್ರೀತಿಯಿಂದ ನಮ್ಮೊಡನೆ ಸಹಕರಿಸುತ್ತಲೇ ಬಂದಿದ್ದಾರೆ.
ಮೋಹನ ಸೋನಾ ಅವರಿಗೆ ನನ್ನ ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಕೃತಿ ತುಂಬಾ ಇಷ್ಟವಾಗಿತ್ತು. ತಾವು ನಿವೃತ್ತಿಯಾಗುವ ಹೊತ್ತಿನಲ್ಲಿ (ಅಥವಾ ಮತ್ತೊಂದು ಸಂದರ್ಭ, ಸರಿಯಾಗಿ ನೆನಪಿಲ್ಲ) ಗೆಳೆಯರಿಗೆ ಕೊಡಲೆಂದು ಅದರ ಹತ್ತು ಪ್ರತಿಗಳನ್ನು ನನ್ನಿಂದ ತರಿಸಿಕೊಂಡಿದ್ದರು. ಅನಂತರವೂ ಆಗೊಮ್ಮೆ ಈಗೊಮ್ಮೆ ನನ್ನೊಡನೆ ಮಾತಾಡುತ್ತಿದ್ದರು. ಕುಮಾರವ್ಯಾಸನ ಕೃತಿಗೆ ಹೊಂದುವಂತಹ ಕೆಲವು ಚಿತ್ರಗಳನ್ನು ಮಾಡಿಕೊಡಲು ಕೇಳಿಕೊಂಡಿದ್ದೆ. ಕಾರವಾರದ ಬಳಿ ಯಾವುದೋ ರಾಕ್ ಗಾರ್ಡನ್‌ಗೆ ಕೆಲಸ ಮಾಡುತ್ತಿರುವುದಾಗಿಯೂ, ಅನಂತರ ಮಾಡಿಕೊಡುವುದಾಗಿಯೂ ಹೇಳಿದ್ದರು.
ಈಗ ಅವರು ನಿಧನವಾದ ಸುದ್ದಿ ಗೆಳೆಯರಿಂದ ತಿಳಿಯುತ್ತಿದೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಹಿರಿಯ ಕಲಾವಿದರಿಗೆ ನನ್ನ ಅಂತಿಮ ನಮನಗಳನ್ನು ಅರ್ಪಿಸುತ್ತಿದ್ದೇನೆ.
ಕಲಾವಿದರ ಫೋಟೋ ಕೃಪೆ: ದಿನೇಶ್ ಹೊಳ್ಳ
KL Chandrashekhar Aijoor, Ajit Harishi and 156 others
32 Comments
8 Shares
Like
Comment
Share

No comments:

Post a Comment