ಬಾಗವಾಳಿನ ಈ ಶಾಸನ (ಬಾಗಿವಾಳು) ಮೊತ್ತೊಂದು ಬಹಳ ಮಹತ್ವದ ಶಾಸನ.
ಈ ಶಾಸನವೂ ಕುಮಾರ ಕಂಪಣ ಒಡೆಯರನ ಉಲ್ಲೇಖಿಸುತ್ತದೆ. ಕ್ರಿ.ಶ 1352ರ ಕಾಲಮಾನದ್ದಾಗಿದೆ. ಈ ಶಾಸನವೂ ವಾಸ್ತವವಾಗಿ ಒಂದು ವೀರಗಲ್ಲು. ಈ ಶಾಸನದಲ್ಲಿ ಬೇಲೂರಿನ ಮೇಲೆ ಕುಮಾರ ಕಂಪಣ್ಣೊಡೆಯನು ಮಾಡಿದ ದಾಳಿಯೊಂದನ್ನು ಉಲ್ಲೇಖಿಸುತ್ತದೆ. ವೀರನೊಬ್ಬ ಈ ಸಂದರ್ಭದಲ್ಲಿ ಹೋರಾಡಿ ಮಡಿದ. ಇದುವರೆಗೆ ಈ ಅಂಶ ತಿಳಿದಿರಲಿಲ್ಲ. ಕಂಚಿಯ ಸಮೀಪವಿರುವ ರಾಜಗಂಭೀರಮಲೈಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಅಳುತ್ತಿದ್ದ ಶಂಬುವರಾಯನ ವಿರುದ್ದ, ಒಂದನೇ ಬುಕ್ಕನ ಮಗನಾದ ಕಂಪಣನು ಹೋರಾಡಿದನೆಂಬುದು ತಿಳಿದ ಸಂಗತಿ. ಯುವರಾಜ ಕಂಪಣನು ಶಂಬುವರಾಯನನ್ನು ಸೋಲಿಸಿ ವಿಜಯನಗರ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದನು. ಅನಂತರ ಕಂಪನು ಮದುರೆಯತ್ತ ಮುಂದುವರೆದು ಪ್ರಾಂತೀಯ ರಾಜ್ಯಪಾಲನಾದ ಜಲಾಲುದ್ದಿನ್ ಅಹ್ಸಾನ್ ಷಾಹನನ್ನು ಸೋಲಿಸಿದರು, ಕಣ್ಣಾನೂರುಕೊಪ್ಪಂ ಆತನ ಕೈವಶವಾಯಿತು. ತರುವಾಯ ಆತ ತಿರುಪತಿಯಲ್ಲಿ ಇಡಲಾಗಿದ್ದ ಶ್ರೀರಂಗನಾಥನ ಪ್ರತಿಮೆಯನ್ನು ಮರಳಿ ಶ್ರೀರಂಗಕ್ಕೆ ತಂದು ಪ್ರತಿಷ್ಠಾಪನೆ ಮಾಡಿಸಿದನು. ಹಾಗೆಯೇ ಕಣ್ಣಾನೂರುಕೊಪ್ಪಂ ನಲ್ಲಿ ಪೊಯ್ಸಳೇಶ್ವರ (ಹೊಯ್ಸಳೇಶ್ವರ) ದೇವರ ಪ್ರತಿಷ್ಠೆಯನ್ನು ಮಾಡಿಸಿದನು. ಮುನ್ನೆಡೆದ ಆತ ಮದುರೆ ಸುಲ್ತಾನನನ್ನು ಸೋಲಿಸಿ ಮಧುರಾನಗರವನ್ನು ಸ್ವಾಧೀನಪಡಿಸಿಕೊಂಡನು. ಈ ಮಹಾವಿಜಯವನ್ನು ಆತನ ಪತ್ನಿಯಾದ ಗಂಗಾಂಬಿಕೆ ತನ್ನ "ಮಧುರಾವಿಜಯಂ" ಎಂಬ ಕಾವ್ಯದಲ್ಲಿ ವರ್ಣಿಸಿದ್ದಾಳೆ. ಹೀಗೆ ಕಂಪಣ ಒಡೆಯರನು ದಖ್ಖನನಲ್ಲಿ ವಿಜಯನಗರದ ಆಳ್ವಿಕೆಗೆ ಭದ್ರಬುನಾದಿಯನ್ನು ಹಾಕಿದನು. ಮದುರೆಯತ್ತ ಸಾಗುವ ಮೊದಲು ಆತ ಬೇಲೂರು ರಾಜ್ಯದ ಮೇಲೆ ದಾಳಿಮಾಡಿದ್ದಿರಬೇಕು ಹಾಗೂ ಅದನ್ನು ಒಂದನೇ ಬುಕ್ಕನ ರಾಜ್ಯಕ್ಕೆ ಸೇರಿಸಿದ್ದಿರಬೇಕು. ಈ ಶಾಸನವೂ ಕಂಪಣ ಒಡೆಯರನ ದಿಗ್ವಿಜಯವನ್ನು ತಿಳಿಸಿಕೊಡುತ್ತದೆ.
ಅರಿಸೀಕೆರೆಯ ಬಾಗವಾಳು(ಬಾಗಿವಾಳು) ಗ್ರಾಮದ ಪ್ರಾಚೀನ ಕಲ್ಲೇಶ್ವರ ದೇವಾಲಯ ಮುಂದೆ ಇದೆ, ಈ ಕಲ್ಲೇಶ್ವರ ದೇವಾಲಯವೂ ಬಹಳ ಪ್ರಾಚೀನವಾಗಿಯೇ ಅವನತಿಯಾಗಿದೆ, ಅದೇ ಸ್ಥಳದಲ್ಲಿ ಸೋಮೇಶ್ವರ ದೇವಾಲಯ ನಿರ್ಮಾಣಗೊಂಡಿದೆ. ಈಗಲೂ ಈ ಶಾಸನವೂ ದೇವಾಲಯದ ಮುಂದೆ ಬಿಲ್ವಪತ್ರೆಯ ಮರದ ಕೆಳಗಡೆ ಇದೆ, ಊರಿನ ಜನ ಶಾಸನ ಸಂರಕ್ಷಿಸಿದ್ದಾರೆ. ಹಾಗಾಗಿ ಊರಿನ ಸಮಸ್ತ ಜನತೆಗೆ ಅಭಿನಂದನೆಗಳು.
ಎಸ್ ಟಿ ಆರ್
No comments:
Post a Comment