Powered By Blogger

Monday, October 19, 2020

ಡಾ/ ರಾಘವ ನಂಬಿಯಾರ್ - ಹಿರಿಯಡಕ ಗೋಪಾಲ ರಾವ್ -ಮದ್ದಳೆಯ ಮೋಡಿಗಾರ ಶತಾಯುಶಿ

 ಮದ್ದಳೆಯ ಮೋಡಿಗಾರ ಶತಾಯುಷಿ

ಗುರು ಹಿರಿಯಡಕ ಗೋಪಾಲರಾವ್ ನಾದಲೀನ
ಯಕ್ಷಗಾನದ ದಂತಕತೆ ಗುರು ಹಿರಿಯಡಕ ಗೋಪಾಲ ರಾವ್ ತಮ್ಮ ನೂರ ಒಂದನೆ ವಯಸ್ಸಿನ ಹತ್ತು ತಿಂಗಳನ್ನು ಕಳೆದು ದಿನಾಂಕ 17 - 10 - 2020 ರಂದು ರಾತ್ರಿ 8.30ರ ವೇಳೆಗೆ ಹಿರಿಯಡಕದ ಓಂತಿಬೆಟ್ಟಿನ ಸ್ವಗೃಹದಲ್ಲಿ ನಿಧನರಾದರು. ಅವರು ಪುತ್ರ ಯಕ್ಷಗಾನ ಕಲಾವಿದ ರಾಮಮೂರ್ತಿ ರಾವ್ ಮತ್ತು ಬಳಗವನ್ನೂ ಅಪಾರ ಬಂಧುಗಳು, ಶಿಷ್ಯರು ಮತ್ತು ಅಭಿಮಾನಿಗಳ ಸಂದೋಹವನ್ನೂ ಅಗಲಿ ನಾದಲೀನರಾದರು.
ಮೊನ್ನೆ ಅ.15 ಸಂಜೆ ಭಾಗವತ ಕಡೆಕಾರು ಅನಂತಪದ್ಮನಾಭ ಭಟ್ಟರು ಹಾಡಿದ ಪದಕ್ಕೆ ಅವರು ಮದ್ದಳೆ ನುಡಿಸಿದ್ದರು. ಆದರೆ ಅವರ ಕಾಯದ ಕಸುವು ಇಳಿಯುತ್ತಲೆ ಇತ್ತೆಂಬುದು ವೇದ್ಯವಾಗುತಿತ್ತು.
ಬಡಗುತಿಟ್ಟು ಯಕ್ಷಗಾನದ ಇತಿಹಾಸಪುರುಷ ಕುಂಜಾಲು ಶೇಷಗಿರಿ ಭಾಗವತರ ಮದ್ದಳೆ ಜತೆಗಾರನಾಗಿ ಪರಂಪರಾಗತ ರೀತಿಯ ಯಕ್ಷಗಾನ ಆಟದ ಮಾದರಿಯನ್ನು ಬಹುಕಾಲ ಯಕ್ಷಗಾನದ ಕುಲರಸಿಕರಿಗೆ ಉಣಬಡಿಸಿದವರು ಗೋಪಾಲರಾಯರು.
ಮೊದಲು ವೇಷಧಾರಿಯಾಗಿ ಹಿರಿಯಡಕ ಮೇಳದಲ್ಲಿ ತಿರುಗಾಟ ನಡೆಸುವ ಮೂಲಕ ವ್ಯವಸಾಯಿ ಕಲಾವಿದ ಜೀವನವನ್ನು 1934ರಲ್ಲಿ ಆರಂಭಿಸಿದ ಗೋಪಾಲರಾಯರು ಮದ್ದಳೆಗಾರನಾಗಿ ಬದಲಿ ಮುಂದೆ ಪೆರ್ಡೂರು, ಅಮೃತೇಶ್ವರಿ ಮತ್ತು ಮಂದರ್ತಿ ಮೇಳಗಳಲ್ಲಿ ಇಪ್ಪತ್ತನೆ ಶತಮಾನದ ಮಹಾನ್ ಕಲಾವಿದರಿಗೆ ಗೌರವಾರ್ಹ ಒಡನಾಡಿಯಾಗಿ ಧನ್ಯರಾದವರು. 1967ರಲ್ಲಿ ಮೇಳದ ತಿರುಗಾಟದಿಂದ ವಿರಮಿಸಿದರೂ ಡಾ. ಶಿವರಾಮ ಕಾರಂತರು ಆರಂಭಿಸಿದ ಯಕ್ಷಗಾನದ ಶಿಕ್ಷಣದಲ್ಲಿ ಮಹತ್ತರ ಯೋಗದಾನ ನೀಡಿದ್ದಲ್ಲದೆ ಯಕ್ಷಗಾನದ ಪ್ರಥಮ ಪಿಎಚ್ ಡಿ ಪದವಿ ಗಳಿಸಲು ಅಮೆರಿಕನ್ ಕನ್ಯೆ ಮಾರ್ತಾ ಆಶ್ಟನ್ ಅವರಿಗೆ ಮಾರ್ಗದರ್ಶನ ನೀಡಿ ಸಫಲರಾದರು.
ಮದ್ದಳೆಗಾರಿಕೆ ಅವರ ಪ್ರಧಾನ ಪಾತ್ರವಾದರೂ ಆಟದ ಸರ್ವಾಂಗೀಣ ಅರಿವಿನ ಗಣಿಯಾಗಿದ್ದರು ರಾಯರು. ಈ ಲೇಖಕ ದೊಂದಿ ಬೆಳಕಿನ ಆಟದ ಅಭಿಯಾನ ನಡೆಸಲು ಮತ್ತು ಹಳಗಾಲದ ಆಟದ ವೈಖರಿಯನ್ನು ಪುನಾರಚಿಸಲು ಮಾಹಿತಿ ಹಾಗೂ ಸಕ್ರಿಯ ಬೆಂಬಲವನ್ನು ನೀಡಿದವರು ಅವರು ಮತ್ತು ಅವರ ಪುತ್ರ ರಾಮಮೂರ್ತಿ ಅವರು. ನನ್ನ ಕನಸಾಗಿದ್ದ ಪೂರ್ವರಂಗದ ಅರ್ಧನಾರಿ ಕುಣಿತದ ಪುನಾರಚನೆಯನ್ನು ಬಡಗುತಿಟ್ಟಿನಲ್ಲಿ ಈಡೇರಿಸುವಲ್ಲಿ ಗೋಪಾಲರಾಯರ ಮದ್ದಳೆ-ಹಾಡಿಕೆಯ ವಿನ್ಯಾಸ, ಅವರ ನಿರ್ರ್ದೇಶನದಲ್ಲಿ ರಾಮಮೂರ್ತಿ ಅವರ ನಾಟ್ಯ ಪ್ರಧಾನವಾಗಿತ್ತು. ಈ ಲೇಖಕನ 'ಹಿಮ್ಮೇಳ' ಗ್ರಂಥ ರಚನೆಯಲ್ಲಿ , ಮಾಹಿತಿ ನೀಡಿಕೆಯಲ್ಲಿ, ಅವರು ಬಹು ಧಾರಾಳಿಯಾಗಿದ್ದರು.
ಇವತ್ತು ಬಡಗುತಿಟ್ಟಿನ ಪ್ರಧಾನ ಚರ್ಮವಾದ್ಯವಾಗಿರುವ ಕಿರಿದು ಗಾತ್ರದ ತೀವ್ರ ನಾದದ 'ಏರುಮದ್ದಳೆ'ಯ ಜನಕ ಇವರು. ಶೇಷಗಿರಿ ಭಾಗವತರಿಗೆ ಅದು ಅಚ್ಚುಮೆಚ್ಚು ಆಗಿತ್ತು. ಇವತ್ತೂ ಆಟದ ಅಪರಾರ್ಧ ಏರು ಮದ್ದಳೆಯ ಕಾಲವೇ.
ಕಲಾಜೀವನದೊಂದಿಗೆ ತಮ್ಮ ಪಿತ್ರಾರ್ಜಿತ ವೃತ್ತಿಗಳಲ್ಲಿ ಒಂದಾದ ಆಯುರ್ವೇದ ವೈದ್ಯದಲ್ಲೂ ಅವರದು ಬೇಡಿಕೆಯುಳ್ಳ ಸೇವೆಯಾಗಿತ್ತು. ಜತೆಗೆ ಹೋಮಿಯೋಪೆಥಿ ವೈದ್ಯಕೀಯ ಕಲಿತು ತಮ್ಮ ಚಿಕಿತ್ಸಾ ಸಾಧ್ಯತೆಯನ್ನು ಹೆಚ್ಚಿಸಿಕೊಂಡರು. ಮೇಳದ ತಿರುಗಾಟದ ವೇಳೆಯೂ ಇವರ ವೈದ್ಯಕೀಯ ಸೇವೆ ಅಲ್ಲಲ್ಲಿಯ ಸ್ಥಳೀಯರಿಗೆ ಉಪಕರಿಸುತ್ತಿತ್ತು.
ಅವರಿಗೆ ಶತಾಯುಷಿ ಸಂಭ್ರಮದ ಭಾಗವಾಗಿ ಕಾಜಾರಗುತ್ತುಶಾಲೆಯಲ್ಲಿ ಊರಅಭಿಮಾನಿಗಳು, ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ ದೊಡ್ಡ ಮಟ್ಟದಲ್ಲಿ ಸಂಮಾನ ಸಮಾರಂಭ ಏರ್ಪಡಿಸಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(2018) ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದಶ್ರೀ' ಪ್ರಶಸ್ತಿ, ಅಕಾಡೆಮಿಯ 'ರಜತಮಹೋತ್ಸವ ಪ್ರಶಸ್ತಿ', ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(1972), ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ(1997) ಇತ್ಯಾದಿ ಅನೇಕ ಸನ್ಮಾನ, ಪ್ರಶಸ್ತಿಗಳೂ ಗೋಪಾಲ ಗುರುವಿಗೆ ಬಂದಿವೆ.
ಯಕ್ಷಗಾನದ ಅಭಿಜಾತತೆ ಗೋಪಾಲರಾಯರೊಂದಿಗೆ ಕೊನೆಗೊಂಡಿತೇ ಎಂಬ ಗುಮಾನಿಗೆ ಈಗ ಎಡೆಯಾಗಿದೆ. ಆದರೂ ಅವರ ಸಂದರ್ಶನದ ಮೂಲಕ ಹೊರಬಂದಿರುವ ಎರಡು ಪುಸ್ತಕಗಳು - 'ಮದ್ದಳೆಯ ಮಾಯಾಲೋಕ' ಮತ್ತು 'ರಂಗವಿದ್ಯೆಯ ಹೊಲಬು' - ಆತ್ಮಚರಿತ್ರೆಯ ಜತೆಗೆ ಯಕ್ಷಗಾನ ಮೇಳ ತಿರುಗಾಟದ ಚರಿತ್ರೆಯಾಗಿಯೂ ಆಟದ ಮಾಳ್ಕೆಯ ವಿಧಾನದ ಬೋಧಕ ಪಠ್ಯವಾಗಿಯೂ ಮುಂದಿನ ತಲೆಮಾರುಗಳ ಮಾರ್ಗದರ್ಶನಕ್ಕಾಗಿ ಅವರು ನೀಡಿದ್ದಾರೆ. ಕಠಿನ ಜೀವನವಿಧಾನವಾದರೂ ಯಕ್ಷಗಾನದ ಕಲಾವಿದನೊಬ್ಬ ಶತಾಯುಷಿಯಾಗಬಲ್ಲ ಎಂಬುದಕ್ಕೆ ನಮ್ಮ ಕಾಲದಲ್ಲಿ ಒಂದು ಮಾದರಿಯನ್ನು ಮೊದಲಬಾರಿಗೆ ಅವರು ಹಾಕಿಕೊಟ್ಟಿದ್ದಾರೆ. ಯಕ್ಷಗಾನದ ಚರಿತ್ರೆಯಲ್ಲಿ ಹಿರಿಯಡಕ ಗೋಪಾಲರಾಯರ ಹೆಸರು ಅಜರಾಮರವಾಗಿರುತ್ತದೆ.
Ashoka Vardhana, Ramadas Kundantaya and 45 others
53 Comments
Like
Comment

No comments:

Post a Comment