Powered By Blogger

Tuesday, January 11, 2022

ಮರೆಯಾದ ಸಾಹಿತ್ಯ ಸಂಕ್ರಮಣ I ಚಂಪಾ ನುಡಿನಮನ I Prof Chandrashekhar Patil

ರಹಮತ್ ತರೀಕೆರೆ -ಚಂಪಾ " ಒಂದಾನೊಂದು ಕಾಲಕ್ಕ "

ಚಂಪಾ: 'ಒಂದಾನೊಂದು ಕಾಲಕ್ಕ' ನನ್ನ ಬರೆಹದ ಬದುಕಿನ ಮೊದಲ ಘಟ್ಟದಲ್ಲಿ, ಗಾಢ ಪ್ರಭಾವ ಬೀರಿದ ಸಂಗತಿಗಳಲ್ಲಿ ಚಂಪಾರ ಬರೆಹ, ಚಳುವಳಿಗಾರ ವ್ಯಕ್ತಿತ್ವ, `ಸಂಕ್ರಮಣ’ ಪತ್ರಿಕೆ ಮತ್ತು ಅವರಿದ್ದ ಬಂಡಾಯ ಸಾಹಿತ್ಯ ಚಳುವಳಿಗಳೂ ಸೇರಿವೆ. ನನ್ನನ್ನು ಸದಾ ಕಾಡುವ, ಅಷ್ಟೇನೂ ದಿಟ್ಟತನವಿಲ್ಲದ ನನ್ನ ವ್ಯಕ್ತಿತ್ವದ ಮಿತಿಯನ್ನೂ ಕಾಣಿಸುವ ಅವರ ಕವನಗಳಲ್ಲಿ 'ಒಂದಾನೊಂದು ಕಾಲಕ್ಕ' ಕೂಡ ಒಂದು. ಕಾವ್ಯದ ಪ್ರೇರಣೆಯನ್ನು ಸಾಮಾನ್ಯವಾಗಿ ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ ವಿಶಿಷ್ಟಾನುಭವದಲ್ಲಿ, ಅವರ ಕೈವಶವಾಗಿರುವ ಕಸುಬುದಾರಿಕೆಯಲ್ಲಿ ಹುಡುಕುವ ಪದ್ಧತಿಯಿದೆಯಷ್ಟೆ. ಆದರೆ ಕವಿತೆ ಹುಟ್ಟುವ ಈ ಪ್ರೇರಣ ಮೂಲಗಳಲ್ಲಿ ಚಾರಿತ್ರಿಕ ಒತ್ತಡವೂ ಒಂದು. ಸಾಮಾನ್ಯವಾಗಿ ಉಸಿರುಗಟ್ಟುವ ಒತ್ತಡಗಳಲ್ಲಿ ಹುಟ್ಟುವ ಎಲ್ಲ ನಮೂನೆಯ ಬರೆಹಗಳು, ತಮ್ಮ ಸಂವೇದನೆಯ ಪ್ರಾಮಾಣಿಕತೆಯಿಂದ ಸಹಜತೆಯಿಂದ ಓದುಗರ ಎದೆತಾಕಿ ಸಂವಾದ ಮಾಡುವ ಸ್ಪಂದನಶೀಲ ಗುಣವನ್ನು ಪಡೆದಿರುತ್ತವೆ. ಹೀಗಾಗಿಯೇ ಸಾಧಾರಣ ಕವಿಗಳೂ ಮೃತ್ಯುವಿನ ಅಂಚಿನಲ್ಲಿ ತಲ್ಲಣಭಾವದಿಂದ ಧಗಧಗಿಸುವ ಕವಿತೆಗಳನ್ನು ಬರೆದಿರುವ ನಿದರ್ಶನಗಳಿವೆ. ಕಾಫ್ಕಾನ `ರೂಪಾಂತರ’, ಕಾಮೂನ `ಪ್ಲೇಗ್’, ಬ್ರಿಟಿಶರ ಆಳ್ವಿಕೆಯಲ್ಲಿದ್ದಾಗ ಬೇಂದ್ರೆಯವರ `ನರಬಲಿ’ ಕವಿತೆ, ಸಿದ್ಧಲಿಂಗಯ್ಯನವರ `ಹೊಲೆಮಾದಿಗರ ಹಾಡು’ಅಥವಾ ಟಿಪ್ಪು ಕುರಿತ ಜನಪದರ ಲಾವಣಿಗಳು ಹುಟ್ಟಿದ್ದು ಇಂತಹ ಅದಮನೀಯ ಒತ್ತಡಗಳಲ್ಲೇ. `ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೊ’ ಎಂಬ ಚೀತ್ಕಾರ ಕೇಳಿಸುವಂತಿರುವ ಜನಪದ ತ್ರಿಪದಿಯೂ ಸನ್ನಿವೇಶದ ಕೂಸೇ ಆಗಿದೆ. ದರ್ವಿಶ್ ಮುಂತಾದ ಪ್ಯಾಲಸ್ತೈನೀ ಕವಿಗಳ ಕವಿತೆಗಳಲ್ಲಿ ತಮ್ಮ ಮನೆ-ತೋಟಗಳನ್ನು ಉಳಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯನ್ನಾಗಿಸಿಕೊಂಡು ನಡೆಸುತ್ತಿರುವ ಸೆಣಸಾಟವು, ತುಂಬಿದ ಅಣೆಕಟ್ಟೆಯಿಂದ ರಭಸವಾಗಿ ಧುಮಿಕ್ಕುವ ಜಲದಂತೆ ಭಾವಾವೇಗದಲ್ಲಿ ಹೊಮ್ಮುವುದಕ್ಕೂ ಇದುವೇ ಕಾರಣ. ಕುಮಾರವ್ಯಾಸನಲ್ಲಿ ಬರುವ `ಅರಸುರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು’ ಎಂಬ ಸಾಲುಗಳು, ರಾಜಧರ್ಮದ ನಿರ್ಲಿಪ್ತ ಬೋಧೆಯ ಭಾಗವಾಗಿ ಅಳವಡಿಕೆಯಾಗಿರುವುದು ದಿಟ. ಆದರೆ ಕವಿ ಅವನ್ನು ರಚಿಸುವಾಗ ತಾನು ಪಟ್ಟಿರುವ ಯಾವುದೊ ಆಳವಾದ ಸಂವೇದನೆಯನ್ನು ತುಂಬಿರಬಹುದು ಎಂಬಂತೆ ಅಲ್ಲಿ ವಿಷಾದವೂ ಮಡುಗಟ್ಟಿದೆ. ಎಂತಲೇ ಈ ಸಾಲುಗಳು ಬಿಕ್ಕಟ್ಟಿನಲ್ಲಿ ನಾಡು ಹಾಯುವಾಗೆಲ್ಲ ಬಳಕೆಗೊಳ್ಳುತ್ತ, ನಮಗಾಗೇ ಈಗ ರಚಿತವಾದವು ಎಂಬಂತೆ ಆವರ್ತನೆಗೊಳ್ಳುತ್ತಿವೆ. ತುರ್ತುಪರಿಸ್ಥಿತಿ ವಿರುದ್ಧ ಬಂದ ಕವಿತೆಗಳ ಸಂಕಲನದ (`ಆಪತ್ಕಾಲೀನ ಕವಿತೆಗಳು’ ಸಂ. ಕಿ.ರಂ.ನಾಗರಾಜ), ಈ ಸಾಲುಗಳನ್ನು ಮೊದಲಿಗೇ ಉದ್ಧರಿಸಲಾಗಿದೆ. ಚಂಪಾ ಅವರು ಎಮರ್ಜನ್ಸಿಯ ಹೊತ್ತಲ್ಲಿ ಬರೆದ `ಒಂದಾನೊಂದು ಕಾಲಕ್ಕೆ’ ಕವನವು, ಮೇಲ್ಕಾಣಿಸಿದ ತಾತ್ವಿಕ ರಾಜಕಾರಣದ ಮತ್ತು ಕಾವ್ಯಮೀಮಾಸೆಯ ಚೌಕಟ್ಟಿನೊಳಗೇ ಹುಟ್ಟಿದೆ.. ಇದೇನೂ ಕನ್ನಡದ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಒಂದಾಗಿ ಪರಿಗಣಿತವಾಗಿಲ್ಲ. ಆದರೆ ಸರಳವಾದ ಸಾದಾಸೀದಾ ಪದ್ಯವಾಗಿರುವ ಇದರೊಳಗೆ ತುಂಬಿಕೊಂಡಿರುವ ದುಗುಡ ಮತ್ತು ಉತ್ಕಟತೆಗಳು, ಸ್ವಾತಂತ್ರ್ಯದ ಬೇಡಿಕೆಯ ಭಾವವನ್ನು ನಮ್ಮ ಹೃದಯದೊಳಗೆ ಹುಗಿಸಿ ಕಂಪನ ಹುಟ್ಟಿಸುವಷ್ಟು ತೀವ್ರವಾಗಿವೆ. `ಓ ಎನ್ನ ದೇಶಬಾಂಧವರೇ’ (೧೯೭೭) ಸಂಕಲನದಲ್ಲಿರುವ ಆ ಕವಿತೆ ಹೀಗಿದೆ: ಒಂದಾನೊಂದು ಕಾಲಕ್ಕೆ, ಗೆಳೆಯರೆ ಈ ಬಾನಿಗೆ ಅಂಚೆಂಬುದು ಇರಲಿಲ್ಲ. ಈ ನೆಲಕ್ಕೆ ಗಡಿಯೆಂಬುದು ಇರಲಿಲ್ಲ. ನೀವು ಕೂಗಿದ್ದೇ ಆಗ ಕಾವ್ಯವಾಗಿತ್ತು. ಕೇಳುವವರಿರಲಿಲ್ಲ ನೀವು ಹಿಡಿದದ್ದೇ ಆಗ ಹಾದಿಯಾಗಿತ್ತು ತುಳಿಯುವವರಿರಲಿಲ್ಲ ನಿಮ್ಮ ಬಾಯಿಗೆ ಈಗ ಬಟ್ಟೆ ತುರುಕಿದ್ದಾರೆ. ನಿಮ್ಮ ಕಾಲಿಗೆ ಈಗ ಬೇಡಿ ಬಿಗಿದಿದ್ದಾರೆ ನೀವೀಗ ಸ್ವಲ್ಪ ಝಾಡಿಸಿದರೆ ಕಾಲು, ಬೇಡಿ ಹರಿಯಲಿಕ್ಕಿಲ್ಲ; ಆದರೆ ಬಾನಲ್ಲಿ ಹಾಲುಹಾದಿ ಮೂಡುತ್ತದೆ. ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು ಶಬ್ದ ಹೊರಡಲಿಕ್ಕಿಲ್ಲ; ಆದರೆ ನೆಲವೇ ಎದೆ ಬಿರಿತು ಹಾಡುತ್ತದೆ. ಕವನವು `ಒಂದಾನೊಂದು ಕಾಲಕ್ಕೆ’ ಎಂಬ ಕಾಲಸೂಚಕ ಪದಗುಚ್ಛದ ಮೂಲಕ ಗತಕಾಲದ ಚರಿತ್ರೆಯಲ್ಲಿದ್ದ ಒಂದು ಸ್ವತಂತ್ರ ಅವಸ್ಥೆಯನ್ನು ಸೂಚಿಸುವ ಮೂಲಕ ಆರಂಭವಾಗುತ್ತದೆ. ಆಗಿದ್ದ ಸ್ವಾತಂತ್ರ್ಯವನ್ನು ಗಡಿಯಿಲ್ಲದ ನೆಲ, ಅಂಚಿಲ್ಲದ ಬಾನು, ಕೂಗಿದರೂ ಕಾವ್ಯವಾಗುವ ಮತ್ತು ಹಿಡಿದಿದ್ದೇ ಹಾದಿಯಾಗುವ ಮುಕ್ತತೆಯ ಚಿತ್ರಗಳ ಮೂಲಕ ಮುಂದಿಡಲಾಗುತ್ತದೆ. ಆದರೆ ಲೋಕದ ಚರಿತ್ರೆ ಬಲ್ಲವರಿಗೆ ತಿಳಿದಿದೆ, ಎಲ್ಲ ಕಾಲಕ್ಕೂ ಸ್ವಾತಂತ್ರ್ಯ ಕಸಿದುಕೊಳ್ಳುವ ಶಕ್ತಿಗಳಿದ್ದವು. ಅವುಗಳ ವಿರುದ್ಧ ದನಿಯೆತ್ತಿ ಸತ್ತವರೂ ಗೆದ್ದವರೂ ಕೂಡ ಇದ್ದರು. ಸ್ವಾತಂತ್ರ್ಯ ಹರಣ ಮತ್ತು ಅದನ್ನು ಪಡೆಯುವುದಕ್ಕೆ ಮಾಡುವ ಸಂಘರ್ಷ, ಅದಕ್ಕಾಗಿ ಸಿಕ್ಕ ಮರಣ-ಗೆಲುವುಗಳು ನಿರಂತರವಾಗಿವೆ. ಆದರೆ ಗತದಲ್ಲಿ ಅನಿರ್ಬಂಧಿತವಾದ ಸ್ವಾತಂತ್ರ್ಯವಿತ್ತು ಎಂದು ಕವಿತೆ ಪ್ರಕೃತಿಯ ಚಿತ್ರಗಳ ಮೂಲಕ ತುಸು ಉತ್ಪ್ರೇಕ್ಷೆಯಲ್ಲಿ ಹೇಳುತ್ತಿರುವುದು ವರ್ತಮಾನದಲ್ಲಿ ಅದಿಲ್ಲ ಎಂದು ವಾಸ್ತವವನ್ನು ಸೂಚಿಸಲು; ಚರಿತ್ರೆಯ ನೆನಪುಗಳ ಜಡವಾದ ವರ್ತಮಾನದಲ್ಲಿ ಕ್ರಿಯಾಶೀಲತೆ ಹುಟ್ಟಿಸಲಿ ಎಂದು ಪ್ರೇರಿಸಲು. ಇಲ್ಲಿ ಕವಿಯು ಜನತೆಯ ನಾಯಕನಾಗಿದ್ದಾನೆ. ಹೀಗಾಗಿ ಜನರ ಸ್ವಾತಂತ್ರ್ಯ ಮತ್ತು ಅವನ ಸ್ವಾತಂತ್ರ್ಯಗಳೆರಡೂ ಇಲ್ಲಿ ಏಕೀಭವಿಸಿವೆ. ಎರಡನೇ ಚಿಕ್ಕದಾದ ಪದ್ಯಖಂಡವು ವರ್ತಮಾನದಲ್ಲಿ ಈ ಸ್ವಾತಂತ್ರ್ಯಗಳು ಕಸಿಯಲ್ಪಟ್ಟ ದಾರುಣ ಸನ್ನಿವೇಶದ ಚಿತ್ರವನ್ನು ಮುಂದಿಡುತ್ತದೆ. ಆದರೆ ಈ ಬಂಧನದ ದಾರುಣತೆ ಖಾಯಮ್ಮೇನಲ್ಲ. ಅದನ್ನು ನಿವಾರಿಸಬಹುದು. ಇದಕ್ಕಾಗಿ ದಂಗೆ ಚಳುವಳಿ ಹೋರಾಟ ಮುಂತಾದ ಮಹತ್ವಾಕಾಂಕ್ಷೆಯ ಭಾರವಾದ ಪ್ರಯತ್ನಗಳನ್ನು ಕವಿತೆ ಮುಂದಿಡುತ್ತಿಲ್ಲ. ಬದಲಾಗಿ `ಸ್ವಲ್ಪ ಕಾಲು ಝಾಡಿಸಲು’ `ಮೌನ ಮುರಿಯಲು’ `ಸ್ವಲ್ಪ ಹೆಣಗಲು’ ಸೂಚಿಸುತ್ತದೆ. ವ್ಯಕ್ತಿಗಳು ತಮ್ಮ ಪರಿಮಿತಿಯಲ್ಲೇ ಮಾಡುವ ಇಂತಹ ಸಣ್ಣಪುಟ್ಟ ಮಿಸುಗಾಟದಿಂದ ಇಡೀ ವ್ಯವಸ್ಥೆಯನ್ನು ಪಲ್ಲಟಿಸುವ ಮಹಾಕ್ರಾಂತಿ ಸಂಭವಿಸಿದೆ ಹೋಗಬಹುದು. ಆದರೆ ಅಂತಹ ಅದಕ್ಕೆ ಬೇಕಾದ ನಡಿಗೆಯಂತೂ ಶುರುವಾಗುತ್ತದೆ. ಸಂಪೂರ್ಣ ಸ್ವಾತಂತ್ರ್ಯವು ನಾಡಿನ ಸಮುದಾಯವು ಪ್ರಜ್ಞೆ ಮತ್ತು ಪ್ರತಿರೋಧ ಗುಣವನ್ನು ಪಡೆದುಕೊಂಡು ಕೆಟ್ಟ ವ್ಯವಸ್ಥೆಯ ವಿರುದ್ಧ ಸಂಘಟಿತ ದನಿಯೆತ್ತಿದಾಗ ಮಾತ್ರ ಸಾಧ್ಯ. ಅದು ಸದ್ಯಕ್ಕೆ ತಕ್ಷಣ ಸಾಧ್ಯವಾಗುವ ಸನ್ನಿವೇಶವಿಲ್ಲ. ಆದರೆ ಅದುವೇ ನಿಷ್ಕ್ರಿಯತೆಗೂ ಕಾರಣವಾಬೇಕಿಲ್ಲ. ಬದಲಾವಣೆ ಎಂಬ ದೀರ್ಘ ಯಾನವು ಸಣ್ಣಹೆಜ್ಜೆಗಳ ಮೂಲಕವೇ ಆರಂಭವಾಗುತ್ತದೆ. ಅಂತಹ ಮಿಸುಕಾಟ ಮಾಡಿದರೆ ಪರಿಣಾಮ ಹಾಲಹಾದಿ ಮೂಡುತ್ತದೆ; ನೆಲವೇ ಎದೆಬಿರಿತು ಹಾಡುತ್ತದೆ. ನಿರ್ದಿಷ್ಟ ಹಾಡಿನ ಭಾವವು ಮನುಕುಲವು ಮತ್ತೆಮತ್ತೆ ಎದುರಿಸುವ ಸಮಸ್ಯೆಯನ್ನು ಕುರಿತು ಇದ್ದಾಗ, ಅದು ನಾನಾ ವಿನ್ಯಾಸದಲ್ಲಿ ಬೇರೆಬೇರೆ ಭಾಷೆಯಲ್ಲಿ ಎಲ್ಲ ಕಾಲಘಟ್ಟದಲ್ಲೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ದುಷ್ಟ ಸರ್ವಾಧಿಕಾರಗಳ ಅಡಿಯಲ್ಲಿ ಉಸಿರುಗಟ್ಟುವ ಸನ್ನಿವೇಶದಲ್ಲಿ ಬದುಕುವ ಎಲ್ಲ ಸಮಾಜಗಳು, ತಮ್ಮ ಎದೆಯ ದನಿಯೆಂದೇ ಹಾಡಿಕೊಳ್ಳುವಷ್ಟು ಈ ಕವಿತೆ ಸಾಧಾರಣೀಕರಣವನ್ನು ಪಡೆದಿದೆ. ಹೀಗಾಗಿಯೇ ಇದರ ಭಾವವು ಗಂಡಾಳಿಕೆ ಸಮಾಜದಲ್ಲಿರುವ ವಿವಾಹ ಮತ್ತು ಕುಟುಂಬ ಮುಂತಾದ ವ್ಯವಸ್ಥೆಗಳಲ್ಲಿ ನಲುಗುತ್ತಿರುವ ಸ್ತ್ರೀಯರ ದನಿಯಾಗುವಂತಿದೆ; ಕನ್ನಡದ ಮಹಿಳಾ ಸಂವೇದನೆಯ ಕಾವ್ಯದಲ್ಲಿ ಇದರ ಪ್ರತಿಬಿಂಬಗಳನ್ನು ಕಾಣಬಹುದು; ಜೆಎನ್ಯು ವಿದ್ಯಾರ್ಥಿಗಳು ಕೂಗಿದ ಆಜಾದಿ ಘೋಷಣೆಯಲ್ಲಿ ಇದು ಅನುರಣನಗೊಂಡಿತು; ಈಗಲೂ ಟರ್ಕಿಯ ಕುರ್ದಿಶರ, ಇಸ್ರೇಲಿ ಹುಕೂಮತ್ತಿನಲ್ಲಿರುವ ಪ್ಯಾಲಸ್ತೇನಿಯರ, ಚೀನಾದ ಪಾದದಡಿ ಅಪ್ಪಚ್ಚಿಯಾಗಿರುವ ವುಗೈರ್ ಮುಸ್ಲಿಮರ ಹಾಗೂ ಟಿಬೆಟಿಯನ್ ಬೌದ್ಧರ, ಬರ್ಮಾದ ರೋಹಿಂಗ್ಯಾಗಳ ಎದೆಯೊಳಗೆ ಈ ಕವನ ಹಲವಾರು ವಿನ್ಯಾಸಗಳಲ್ಲಿ ರೂಪುಗೊಳ್ಳುತ್ತಿರಬಹುದು. ಬಾಬಾ ಸಾಹೇಬರು ಬೌದ್ಧಧರ್ಮವನ್ನು ಸ್ವೀಕಾರ ಮಾಡುವ ಮುನ್ನ ಇದೇ ಭಾವವುಳ್ಳ ಮಾತುಗಳನ್ನು ಆಡಿದರು ಮತ್ತು ಬರೆದರು. ಸಾರಾ ಅಬೂಬಕರ್ ಅವರ ಕಥನದ ನಾಯಕಿಯರಲ್ಲಿ ಈ ಪದ್ಯವು ಬೇರೆ ಧಾಟಿಲಯದಲ್ಲಿ ಕಟ್ಟಲ್ಪಟ್ಟಿದೆ. ಸಿದ್ಧಲಿಂಗಯ್ಯನವರ `ಎಲ್ಲಿಗೆ ಬಂತು ಯಾರಿಗೆ ಬಂತು ಸ್ವಾತಂತ್ರ್ಯ' ಕವನದಲ್ಲಿ ಈ ಹಾಡಿನ ಭಾವವು ಹೋರಾಟದ ಮೊದಲು ಹುಟ್ಟುವ ಸಹಜವಾದ ಕಟುಪ್ರಶ್ನೆಯಂತೆ ಕೇಳಲ್ಪಟ್ಟಿದೆ. ಶತಮಾನದ ಹಿಂದೆ ರವೀಂದ್ರನಾಥ ಟಾಗೂರರು ಗೀತಾಂಜಲಿ ಸಂಕಲನದಲ್ಲಿ ಸೇರಿಸಿದ `ವೇರ್ ದಿ ಮೈಂಡ್ ಈಸ್’ ಎಂಬ ಗೀತೆಯಲ್ಲಿ ಈ ಕವನದ ಭಾವವು ದೇಶಕಟ್ಟುವ ತತ್ವವಾಗಿ ಈಗಾಗಲೇ ಹೇಳಲ್ಪಟ್ಟಿದೆ. `ಆನುಒಲಿದಂತೆ ಹಾಡುವ’ ಎಂಬ ಬಸವಣ್ಣನವರ ವಚನ, ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನ ಈ ಪದ್ಯದ ಮೂಲಮಾತೃಕೆಗಳಾಗಿದ್ದರೆ ಆಶ್ಚರ್ಯವಿಲ್ಲ. ಎಲ್ಲ ದಮನಿತ ಸಮಾಜ ಕುಟುಂಬ ಧರ್ಮ ದೇಶಗಳಲ್ಲಿ ಬದುಕುವ ಪ್ರಜ್ಞಾವಂತರಿಗೂ, ಸಂವೇದನಶೀಲರಿಗೆ ಸ್ವಾತಂತ್ರ್ಯ ಬಯಸುವವರಿಗೂ, ಈ ಕವನ ತಮ್ಮದೇ ಸ್ವಾತಂತ್ರ್ಯದ ಅಭೀಪ್ಸೆಯ ಹಾಡೆನಿಸುತ್ತದೆ. ಈಗ ತಾಲಿಬಾನಿಗಳ ಕೋವಿಗೈಯಲ್ಲಿ ಸಿಲುಕಿರುವ ಆಫಘಾನಿಸ್ಥಾನದ ಮಹಿಳೆಯರು ಮತ್ತು ಕಲಾವಿದರು ಇಂತಗ ಗೀತೆಗಳನ್ನು ಒಳಗೇ ಹಾಡುತ್ತಿರಬಹುದು. ನಿರ್ದಿಷ್ಟ ಲಿಂಗ, ಜಾತಿ, ಧರ್ಮಗಳಲ್ಲಿ ಹುಟ್ಟಿದ ಕಾರಣಕ್ಕೇ ಈಗ ಇಂಡಿಯಾದ ಬೀದಿಹಾದಿಗಳಲ್ಲಿ ಬಡಿಸಿಕೊಂಡು ಸಾಯುತ್ತಿರುವ ಮಹಿಳೆಯರೂ ದಲಿತರೂ ಮುಸ್ಲಿಮರೂ ಕ್ರೈಸ್ತರೂ ಈ ಹಾಡನ್ನು ಹಾಡಬಹುದು. ನಾಡಿನ ಇಕ್ಕಟ್ಟಿನ ಗಳಿಗೆಗಳಲ್ಲಿ ಚಂಪಾ, ನಮ್ಮ ಆತ್ಮಗಳಿಗೆ ಹತ್ತಿದ ತುಕ್ಕನ್ನು ತೆಗೆದು ಅರದಲ್ಲಿ ಉಜ್ಜಿ ಝಗಝಗಿಸುವ ಕತ್ತಿಯಾಗಿಸಬಲ್ಲ ಇಂತಹ ಕವನಗಳನ್ನು, ಯಾವುದೇ ಶ್ರೇಷ್ಠತೆಯ ಮಹಾತ್ವಾಕ್ಷಾಂಕ್ಷೆಯಿಲ್ಲದೆ ಸಹಜ ತುಡಿತದಲ್ಲಿ ಬರೆದರೆಂಬುದೇ, ಅವರ ಚಾರಿತ್ರಕ ಮಹತ್ವವನ್ನು ಸಾಬೀತುಗೊಳಿಸುವ ಸಂಗತಿಯಾಗಿದೆ. ಪಟ: ೩೧ ವರುಷಗಳ ಹಿಂದೆ ಬೀದರದಲ್ಲಿ ನಡೆದ ಕಾರ್ಯಕ್ರಮದ್ದು: ನನ್ನ ಬದಿ ಬಿಳಿಮಲೆ, ಚೆನ್ನಣ್ಣ, ಚಂಪಾ, ಸಬರದ ಹಾಗೂ ಕಾರ್ಯಕ್ರಮದ ನಿರೂಪಕಿ ಯಶೋದಮ್ಮ ಸಿದ್ದಬಟ್ಟೆ) 45 Comments Giridhar Karkala ನಮನಗಳು · Reply · 23h

ಪಾರ್ವತಿ ಐತಾಳ್ - ಡಾ/ ಎನ್ ಟಿ ಭಟ್ ಅವರ -ಭಾಷಾಂತರ-ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ /Dr N T BHAT

ಕೃತಿಯ ಹೆಸರು : ಭಾಷಾಂತರ-ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ ಲೇಖಕರು : ಡಾ.ಎನ್.ಟಿ.ಭಟ್ ಪ್ರ : ಮಣಿಪಾಲ ಯುನಿವರ್ಸಲ್ ಪ್ರೆಸ್, ಮಣಿಪಾಲ ಭಾಷಾಂತರ ಜಗತ್ತಿಗೊಂದು ಪ್ರಾಯೋಗಿಕ ಪ್ರವೇಶ 'ಭಾಷಾಂತರ-ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ' ಭಾಷಾಂತರ ಕಾರ್ಯದಲ್ಲಿ ಆಸಕ್ತರಿಗೆ ನೆರವಾಗಬಲ್ಲ ಒಂದು ಅತ್ಯುತ್ತಮ ಕೈಪಿಡಿ. ಇತ್ತಿಚೆಗೆ ಮಣಿಪಾಲದ ಯುನಿವರ್ಸಲ್ ಪ್ರೆಸ್ ಪ್ರಕಟಿಸಿರುವ ಈ ಕೃತಿಯನ್ನು ಕನ್ನಡ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಪಾಂಡಿತ್ಯವಿರುವ ಹಿರಿಯ ಭಾಷಾಂತರಕಾರರಾದ ಡಾ.ಎನ್.ಟಿ.ಭಟ್ ರಚಿಸಿರುವುದು ಮಂಡಿಸಲಾದ ವಿಷಯಗಳಿಗೆ ಅಧಿಕೃತತೆ ಒದಗಿಸಿದೆ. ಭಾಷಾಂತರವು ಇಂದು ಬಹಳಷ್ಟು ಬೆಳವಣಿಗೆಯನ್ನು ಸಾಧಿಸಿದ ಮತ್ತು ಮಹತ್ವವನ್ನು ಪಡೆದುಕೊಂಡ ಒಂದು ಕ್ಷೇತ್ರ. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಭಾಷೆ-ಭಾಷೆಗಳ ನಡುವೆ ಸಂಪರ್ಕ ಮತ್ತು ಸಂವಹನಗಳ ಅಗತ್ಯ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಭಾಷಾಂತರಕಾರರಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಪರಿಸ್ಥಿತಿಯ ವಿಪರ್ಯಾಸವೆಂದರೆ ಭಾಷಾಂತರದಲ್ಲಿ ಹೊಸದಾಗಿ ತೊಡಗಿಕೊಳ್ಳುವ ಯುವ ಬರಹಗಾರರ ಸಂಖ್ಯೆ ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ದೃಷ್ಟಿಯಿಂದ ಹೊಸದಾಗಿ ಕ್ಷೇತ್ರವನ್ನು ಪ್ರವೇಶಿಸುವ ಭಾಷಾಂತರಕಾರರಿಗೆ ಆರಂಭಿಕ ಹಂತದಲ್ಲಿ ಈ ಕೃತಿ ಬಹಳ ಸಹಾಯಕವಾಗ ಬಲ್ಲುದು. 'ಭಾಷಾಂತರ-ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ' ಕೃತಿಯಲ್ಲಿ ಐದು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಪೀಠಿಕೆಯ ರೂಪದಲ್ಲಿ ಭಾಷಾಂತರದ ಕುರಿತಾದ ಹಲವಾರು ವಿಷಯಗಳ ಕುರಿತು ಲೇಖಕರು ಚರ್ಚೆ ನಡೆಸಿದ್ದಾರೆ. ಭಾಷಾಂತರ ಪದದ ನಿರ್ವಚನೆ, ಭಾಷಾಂತರವು ಯಾಕೆ ಅನಿವಾರ್ಯ, ಭಾಷಾಂತರವು ಹೇಗೆ ಒಂದು ಸಮಸ್ಯಾತ್ಮಕ ಪ್ರಕ್ರಿಯೆಯಾಗಿದೆ, ಒಂದೇ ಸಾಂಸ್ಕ್ರತಿಕ ಹಿನ್ನೆಲೆಯ ಭಾಷೆಗಳ ನಡುವಣ ಭಾಷಾಂತರಕ್ಕಿರುವ ಸೌಲಭ್ಯಗಳು ಯಾವುವು, ಭಾಷಾಂತರಕಾರನ ಅರ್ಹತೆಗಳೇನು, ಭಾಷಾಂತರಕಾರನಿಗೆ ಬೇಕಾದ ಸೌಕರ್ಯಗಳು ಮತ್ತು ಪರಿಕರಗಳು ಯಾವುವು, ಭಾಷಾಂತರದ ತಾತ್ವಿಕ ಪ್ರಯೋಜನಗಳೇನು, ಭಾಷಾಂತರದ ಸಂದರ್ಭಗಳು ಯಾವುವು, ಮೂಲ ಕೃತಿಕಾರ ಮತ್ತು ಭಾಷಾಂತರಕಾರನ ನಡುವಣ ಸಂಬಂಧ ಹೇಗಿರಬೇಕು, ಭಾಷಾಂತರದ ಪ್ರಕಾರಗಳು ಯಾವುವು- ಇವೇ ಮುಂತಾದ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರಗಳನ್ನು ಕೊಡುತ್ತಾರೆ. ೨ನೇ ಅಧ್ಯಾಯದಲ್ಲಿ ಸುಮಾರು ೧೩೬ ಪುಟಗಳಷ್ಟು ದೀರ್ಘವಾಗಿ ಇಂಗ್ಲೀಷ್-ಕನ್ನಡಗಳ ನಡುವಣ ಭಾಷಾಂತರ ಪ್ರಾತ್ಯಕ್ಷಿಕೆಯಿದೆ. ನೂರಾರು ಸರಳ ಉದಾಹರಣೆಗಳ ಮೂಲಕ ಈ ಕೆಲಸವನ್ನು ಓದುಗನಿಗೆ ಸುಲಭ ಗ್ರಾಹ್ಯವಾಗುವ ರೀತಿಯಲ್ಲಿ ಲೇಖಕರು ನಡೆಸಿ ಕೊಟ್ಟಿದ್ದಾರೆ. ಅಧ್ಯಾಯ ೩ರಲ್ಲಿ ಭಾಷಾಂತರ ಮಾಡಿದ ನಂತರ ಲಕ್ಷ್ಯ ಭಾಷೆಯಲ್ಲಾಗುವ ಬದಲಾವಣೆಗಳನ್ನು ಪರಿಗಣಿಸಿ ಭಾಷಾಂತರದ ಕುರಿತಾದ ಕೆಲವು ನಿಯಮಗಳನ್ನು ಹೇಗೆ ರೂಪಿಸಬಹುದೆಂಬುದನ್ನು ಲೇಖಕರು ನಿರೂಪಿಸುತ್ತಾರೆ. ಭಾಷಾಂತರ ಮಾಡಿದಾಗ ವಾಕ್ಯ ವಿನ್ಯಾಸದಲ್ಲಿ ಮಾತ್ರವಲ್ಲದೆ ವಿಷಯಗಳನ್ನು ಪ್ರಸ್ತಾಪಿಸುವ ರೀತಿಯಲ್ಲೂ ಬದಲಾವಣೆಗಳಾಗಬಹುದು ಎಂಬುದಕ್ಕೆ ಉದಾಹರಣೆಗಳನ್ನು ಕೊಡುತ್ತಾರೆ. ಭಿನ್ನ ಪದಗಳ ಅನುಕ್ರಮ, ವಿಶೇಷಣಗಳ ಅನುಕ್ರಮ, ನಾಮಪದ-ಸಂಬಂಧವಾಚಕ ಪದ, ಕರ್ತೃಪದ-ಕ್ರಿಯಾಪದ, ಮುಖ್ಯ ವಾಕ್ಯ ಖಂಡ-ಅಧೀನ ವಾಕ್ಯ ಖಂಡ, ಸಮಾನಾರ್ಥಕ ಪದ, ಪಾರಿಭಾಷಿಕ ಪದ- ಹೀಗೆ ಅನೇಕ ಸಂದರ್ಭಗಳಲ್ಲಿ ಭಾಷಾಂತರ ಮಾಡುವ ಬಗೆಯನ್ನು ವಿವರಿಸುತ್ತಾರೆ. ಭಾಷಾಂತರಕಾರನಿಗೆ ಮೂಲಕೃತಿಯ ಭಾಷೆಯ ಸಾಂಸ್ಕೃತಿಕ ಹಿನ್ನೆಲೆ ಚೆನ್ನಾಗಿ ತಿಳಿದಿದ್ದರೆ ಭಾಷಾಂತರ ಕೃತಿಯ ಗುಣಮಟ್ಟ ಉತ್ಕೃಷ್ಟವಾಗಿರಲು ಸಾಧ್ಯವೆಂದು ಹೇಳುತ್ತಾರೆ. ಕ್ಲಿಷ್ಟ ವಾಕ್ಯ ವಿನ್ಯಾಸವನ್ನು ಸರಳೀಕರಿಸುವುದು ಹೇಗೆ, ಮೂಲವಾಕ್ಯದಲ್ಲಿರುವ ಅಲಂಕಾರವನ್ನು ಉಳಿಸಿಕೊಳ್ಳುವುದು ಹೇಗೆ, ಕರ್ತರಿ-ಕರ್ಮಣಿ ಪ್ರಯೋಗಗಳನ್ನು ಬಳಸುವುದು ಹೇಗೆ, ಮೂಲದ ಆಶಯಕ್ಕೆ ನಿಷ್ಠವಾಗಿರುವುದು ಹೇಗೆ ಮತ್ತು ವಾಕ್ಯಾನುಸಂಧಾನ ಹೇಗಿರಬೇಕು ಎಂಬಿತ್ಯಾದಿ ವಿಷಯಗಳನ್ನು ಮನಮುಟ್ಟುವಂತೆ ವಿವರಿಸುತ್ತಾರೆ. ಒಟ್ಟು ೨೯ ಪುಟಗಳ ಈ ಅಧ್ಯಾಯದಲ್ಲಿ ಭಾಷಾಂತರದ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳು ನಮಗೆ ಸಿಗುತ್ತವೆ. ೪೯ಪುಟಗಳಿರುವ ೪ನೇ ಅಧ್ಯಾಯದಲ್ಲಿ ಸಂಕ್ಷಿಪ್ತ ಭಾಷಾಂತರ ಕೋಶ ಮತ್ತು ೨೬ಪುಟಗಳ ಕೊನೆಯ ಅಧ್ಯಾಯದಲ್ಲಿ ಭಾಷಾಂತರ ಅಭ್ಯಾಸಗಳಿವೆ. ಭಾಷಾಪ್ರಭುತ್ವಕ್ಕೆ ಬುದ್ಧಿವಂತಿಕೆಯ ಜತೆಗೆ ಸತತ ಅಧ್ಯಯನ ಮತ್ತು ಪರಿಶ್ರಮಗಳೂ ಬೇಕಾಗುತ್ತವೆ. ಇಂಥ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿದಾಗ ಭಾಷೆ ತಾನಾಗಿಯೇ ಮನಸ್ಸಿನೊಳಗೆ ಬೆಳೆಯುತ್ತ ಹೋಗುತ್ತದೆ. ನಮಗರಿವಿಲ್ಲದೆಯೇ ನಮ್ಮೊಳಗೆ ಒಬ್ಬ ಒಳ್ಳೆಯ ಭಾಷಾಂತರಕಾರ ಹುಟ್ಟಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಮಾರ್ಗದರ್ಶಿಯಾಗಿ ಬಂದಿರುವ 'ಭಾಷಾಂತರ-ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ' ಎಂಬ ಈ ಅಪರೂಪದ ಕೃತಿ ಭಾರತೀಯ ಪ್ರಾದೇಶಿಕ ಭಾಷೆಗಳ ನಡುವಣ ಭಾಷಾಂತರಗಳ ಬಗೆಗೂ ವಿವರಗಳನ್ನು ನೀಡುವ ಇಂಥದೇ ಕೃತಿಗಳು ಇನ್ನಷ್ಟು ಬರಲಿ ಎಂದು ಹಾರೈಸುವಂತೆ ಮಾಡುತ್ತದೆ. ಡಾ.ಪಾರ್ವತಿ ಜಿ.ಐತಾಳ್

Saturday, January 8, 2022

ಶೂದ್ರ ಶ್ರೀನಿವಾಸ್ - ಡಿ ಆರ್ ಕಾಲದ ಮಹಿಮೆಯಲ್ಲಿ ಕೆಲವು ನೆನಪುಗಳ ನಡುವೆ/ SHUDRA SRINIVASA

ಡಿ.ಆರ್. ಕಾಲದ ಮಹಿಮೆಯಲ್ಲಿ ..... ಕೆಲವು ನೆನಪುಗಳ ನಡುವೆ - ಶೂದ್ರ ಶ್ರೀನಿವಾಸ್ ಡಿ.ಆರ್ .ಎಂದಾಕ್ಷಣ ದುತ್ತನೆ ಹತ್ತಾರು ಚಿತ್ರಣಗಳು ಎದುರಾಗುತ್ತವೆ.ಅದರ ಮೂಲಕ ಸುಮಾರು ಕಾಲು ಶತಮಾನಕ್ಕೂ ಮೇಲ್ಪಟ್ಟು ಸಾಹಿತ್ಯಕ ,ಸಾಂಸ್ಕೃತಿಕವಾಗಿ ಮುಖಾಮುಖಿಯಾದ ಸಂಗತಿಗಳು ಅಪೂರ್ವವಾದಂಥವು.ನಾಗರಾಜನ ವ್ಯಕ್ತಿತ್ವವನ್ನು ಅರಿಯುವುದಕ್ಕೆ ನಾನಾ ಸ್ಥಳ ಮಹಿಮೆಗಳು ಸಾಕ್ಷಿಭೂತವಾಗಿವೆ. ಅವುಗಳಲ್ಲಿ ಒಂದೊಂದನ್ನ ಕುರಿತು ವ್ಯಾಖ್ಯಾನಿಸುತ್ತಾ ಹೋದರೆ , ಅದೇ ಸಾಕಷ್ಟು ದೀರ್ಘತೆಯ ಸ್ಥಳವನ್ನು ಬೇಡುವ ಸಾಧ್ಯತೆ ಇರುತ್ತದೆ.ಯಾಕೆಂದರೆ ಅಲ್ಲೆಲ್ಲ ತನ್ನ ಕ್ರಿಯಾಶೀಲ ಮತ್ತು ಬೌದ್ಧಿಕ ವ್ಯಕ್ತಿತ್ವದಿಂದ ಆವರಿಸಿಕೊಂಡಿದ್ದವನು.ಇದನ್ನು ವಿವಿಧ ದೃಷ್ಟಿಕೋನಗಳಿಂದ ನೋಡಬಹುದಾದ ಬದುಕಿನ ಚೌಕಟ್ಟು ಅವನಿಗಿತ್ತು.ಅವನು ಎಲ್ಲಿದ್ದರೂ ಅಲ್ಲೆಲ್ಲ ತಾನು ಇಲ್ಲಿದ್ದೀನಿ ಎಂಬುದನ್ನು ರಿಜಿಸ್ಟರ್ ಮಾಡಿಬಿಡುತ್ತಿದ್ದ. ಈ ನೆಲೆಯಲ್ಲಿ ನಾವಿಬ್ಬರೂ ಒಬ್ಬರನ್ನೊಬ್ಬರು ಅರಿಯಲು ಮೆಜೆಸ್ಟಿಕ್ ನ ರಾಮಕೃಷ್ಣ ಲಾಡ್ಜ್ ಆವರಣದಲ್ಲಿ ಒಂದು ಬೋಧಿ ವೃಕ್ಷವಿತ್ತು.ಅದು ಎಂತೆಂಥ ಮನಸ್ಸುಗಳಿಗೆ ಆಶ್ರಯ ಸ್ಥಾನವಾಗಿತ್ತು.ಇಂಥ ಆಶ್ರಯಕ್ಕೆ ಆಕರ್ಷಕ ಸ್ವರೂಪರಾಗಿ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಇದ್ದರು.ಸುಮಾರು ಹತ್ತು ವರ್ಷಗಳಿಗೂ ಮೇಲ್ಪಟ್ಟು ಅಲ್ಲಿಯ ಬೋಧಿ ವೃಕ್ಷ ನೆಲೆಯನ್ನ ಕೊಟ್ಟಿತ್ತು.ಪ್ರತಿದಿನ ಸಂಜೆಯಾದರೆ ಸಾಕು ; ಎಂತೆಂಥ ಮನಸ್ಸುಗಳು ಅಲ್ಲಿ ಬಂದು ಸೇರುತ್ತಿದ್ದರು. ಆ ಕಾಲಘಟ್ಟದಲ್ಲಿ ಎರಡು ಸಮಾಜವಾದಿ ಸಂಘಟನೆಗಳು ಅತ್ಯಂತ ಕ್ರಿಯಾಶೀಲವಾಗಿ ದ್ದವು.ಅಲ್ಲಿಂದ ಕೇವಲ ನೂರೈವತ್ತು ಗಜಗಳ ದೂರದಲ್ಲಿದ್ದ ಸಮಾಜವಾದಿ ಪಕ್ಷ ಮತ್ತು ಪ್ರೊ.ಎಂ.ಡಿ.ಎನ್ ಅವರ ಯುವಜನಾಸಭಾ ಕೆಲವು ವೈಯಕ್ತಿಕ ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ಪ್ರೊ.ಎಂ.ಡಿ.ಎನ್.ಅವರು ಯುವಜನಾಸಭಾ ಸಂಘಟನೆಯನ್ನು ರೂಪಿಸಿ ಕೊಂಡಿದ್ದರು.ಅದರಲ್ಲಿ ಡಿ.ಆರ್.ನೇರವಾಗಿ ಗುರ್ತಿಸಿಕೊಂಡಿದ್ದ.ಅವರ ರೀತಿಯಲ್ಲಿಯೇ ಮಾತಿನ ಚಾಕಚಕ್ಯತೆಯನ್ನು ರೂಢಿಸಿಕೊಂಡಿದ್ದ.ಅದಕ್ಕೆ ಪೂರಕವಾದ ಓದು ಆಗಲೇ ಗಾಢವಾಗಿತ್ತು.ಎಷ್ಟೋ ಭಾರಿ ಯೋಚಿಸಿರುವೆ : ಸಾಮಾನ್ಯ ನೇಯ್ಗೆ ಕುಟುಂಬದಿಂದ ಬಂದು ಇಂಥ ಅದ್ಭುತ ಎನ್ನ ಬಹುದಾದ ಬೌದ್ಧಿಕ ಸೂಕ್ಷ್ಮಗ್ರಾಹಿ ಹೇಗೆ ಆದ ಎಂಬುದು.ಇದು ಮುಖ್ಯವಾಗಿ ಓದು ಹಾಗೂ ಸಂಪರ್ಕ .ಅತ್ಯಂತ ಚಿಕ್ಕವಯಸ್ಸಿಗೆ ಎಲ್ಲಾ ಚಿಂತನಶೀಲ ವಿಚಾರಗಳಿಗೆ ತೆರೆದ ಮನಸ್ಸಿನವನಾಗಿದ್ದ.ಆದ್ದರಿಂದಲೇ ಆ ಬೋಧಿ ವೃಕ್ಷದ ವಾತಾವರಣ ಒಂದು ವಿಧದ ವಾಗ್ವಾದದ ಕೇಂದ್ರವಾಗಿತ್ತು. ಸಂಜೆಯಾದರೆ ಸಾಕು ನಾನಾ ರೀತಿಯ ಮನಸ್ಸುಗಳು ಅಲ್ಲಿ ಮುಕ್ತವಾಗಿ ಮಾತುಕತೆ ನಡೆಸಲು ಸೇರಿಕೊಳ್ಳುವ ವಾತಾವರಣ ಅಲ್ಲಿತ್ತು.ಬಹುದೊಡ್ಡ ಸಮಾಜವಾದಿ ಚಿಂತಕ ಕಿಷನ್ ಪಾಟ್ನಾಯಕ್ ಬೆಂಗಳೂರಿಗೆ ಬಂದಾಗಲೆಲ್ಲ ಅಪೂರ್ವ ಸಂವಾದಕ್ಕೆಡೆ ಯಾಗುತ್ತಿತ್ತು.ಅದರಲ್ಲಿ ಡಿ.ಆರ್ ನ ಪಾತ್ರ ಮಹತ್ವ ಪೂರ್ಣವಾದದ್ದು.ಅಲ್ಲಿಗೆ ತೇಜಸ್ವಿ ,ಕೆ.ರಾಮದಾಸ್ ಮುಂತಾದವರೆಲ್ಲ ಕೂಡಿಕೊಳ್ಳುತ್ತಿದ್ದರು.ಈ ವೇದಿಕೆ ಪುರೋಹಿತಶಾಯಿ ವಿರುದ್ಧವಿತ್ತು.ಸ್ವಲ್ಪಮಟ್ಟಿಗೆ ಬ್ರಾಹ್ಮಣ‌ ವಿರೋಧಿಯೂ ಆಗಿತ್ತು. ಆದರೆ ಅಲ್ಲಿಗೆ ಸೂ.ರಮಾಕಾಂತ್ ರೀತಿಯ ಕಥೆಗಾರ ಸಮಾಜವಾದಿ ಚಿಂತಕ ಎಂ.ಡಿ.ಎನ್ ಅವರ ಮೇಲಿನ ಗೌರವದಿಂದ ‌ಭಾಗಿಯಾಗುತ್ತಿದ್ದರು. ಆ ಕಾಲಘಟ್ಟದಲ್ಲಿ ನಾನು ಸಮಾಜವಾದಿ ಪಕ್ಷದ ಯುವಜನಾಸಭಾದಲ್ಲಿದ್ದೆ. ನಾಗರಾಜ್ ಎಂ.ಡಿ.ಎನ್ ಅವರ ಯುವಜನಾಸಭಾದಲ್ಲಿದ್ದ. ಅವರೆಡನ್ನೂ ಒಂದು ಮಾಡಲು ತುಂಬಾ ಪ್ರಯತ್ನಿಸಿದೆ.ಆದರೆ ಆಗಲಿಲ್ಲ. ಎಂ.ಡಿ.ಎನ್ ಮತ್ತು ಡಿ.ಆರ್.ತುಂಬಾ ರಿಜಿಡ್ಡಾಗಿದ್ದರು.ಅಷ್ಟೇ ಅಲ್ಲ : ಎಂ.ಡಿ.ಎನ್ ಅವರ ಪುಸಲಾವಣೆಯಿಂದ ಡಿ.ಆರ್ ಸಮಾಜವಾದಿ ಕಚೇರಿಗೆ ಹೋಗಿ ಅಲ್ಲಿ ಜೆ.ಹೆಚ್ ಪಟೇಲ್ ,ಎಸ್.ವೆಂಕಟರಾಮ್,ಕಾಗೋಡು ಆತಿಮ್ಮಪ್ಪ ಅಂಥ ನಾಯಕರ ಬಳಿ " ನೀವು ಸಮಾಜವಾದಿ ಪಕ್ಷದ ಕಚೇರಿಯನ್ನು ಬಿಟ್ಟು ಹೊರಗೆ ಹೋಗಬೇಕು " ಎಂದು ಕೇಳಿದ್ದ.ಇದನ್ನು ಯಾರು ಹೇಳಿ ಕಳಿಸಿದ್ದಾರೆ ಎಂಬುದನ್ನು ತಿಳಿದು " ನಾಗರಾಜ್ ನೀವು ಅವರನ್ನು ಇಲ್ಲಿಗೆ ಕರೆತನ್ನಿ ,ಕುರ್ಚಿಯ ಮೇಲೆ ಕೂರಿಸಿ ಗೌರವಿಸಿ ಹೊರಗೆ ಹೋಗ್ತೀವಿ " ಎಂದು ಹೇಳಿದ್ದರು.ಆದರೆ ಮುಂದೆ ಡಿ.ಆರ್ ಇದನ್ನು ಜೀವಮಾನದ ಅವಮಾನದ ಸಂಗತಿಯಾಗಿ ಎದುರಿಸಬೇಕಾಯಿತು. ಮುಂದೆ ಅವನು ಎಸ್.ವೆಂಕಟರಾಮ್ ಹಾಗೂ ಜೆ.ಎಚ್.ಅವರಿಗೆ ತುಂಬಾ ಆತ್ಮೀಯನಾಗ ತೊಡಗಿದ್ದ. ಆದರೆ ಎಂ.ಡಿ.ಎನ್ ಅವರ ಬಗ್ಗೆ ಗೌರವ ಉಳಿಸಿಕೊಂಡಿದ್ದ.ಸಂಪರ್ಕ ಕಡಿಮೆ ಮಾಡಿದ.ಅದೇ ವಿದ್ಯಾರ್ಥಿ ದಿನಗಳ ಸಮಯದಲ್ಲಿ ಡಿ.ಆರ್ ಮತ್ತು ಸಿದ್ಧಲಿಂಗಯ್ಯ ಎಂಥ ಅದ್ಭುತ ಚರ್ಚಾ ಪಟುಗಳಾಗಿದ್ದರು. ಇಂಥ ವಿದ್ಯಾರ್ಥಿ ದಿನಗಳ ಸಂದರ್ಭದಲ್ಲಿಯೇ ಬೂಸಾ ಚಳವಳಿ ಎದುರಾಯಿತು. ಅದೊಂದು ನಮಗೆ ಚಾರಿತ್ರಿಕ ಅನುಭವ .ನಾವು ಬಸವಲಿಂಗಪ್ಪ ಅವರಿಗೆ ಬೆಂಬಲಿಸಿ ಹೋರಾಡಿದರೂ ; ಅವರ ಮಿತಿಗಳ ಕುರಿತು ಒಂದು ಸಂಜೆ ಅವರೊಂದಿಗೆ ನಡೆಸಿದ ಸಂವಾದವನ್ನು ಮರೆಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಬಸವಲಿಂಗಪ್ಪ ಅವರ ಮಿತಿಗಳನ್ನು ಎತ್ತಿ ತೋರಿಸಿದ್ದರು.ಅದನ್ನು ಅವರು ಗೌರವ ದಿಂದಲೇ ಸ್ವೀಕರಿಸಿದ್ದರು.ಕೆಲವು ವಿಷಯಗಳಲ್ಲಿ ಡಿ,ಆರ್ ತುಂಬಾ ತೀವ್ರವಾದಿಯಾಗಿದ್ದ. ಅವನು ಇದ್ದದ್ದು ಬೆರಳಿನ ಗಾತ್ರ.ಆದರೆ ಅವನ ಸಿಟ್ಟು ಎಷ್ಟು ವಿಚಿತ್ರವಾಗಿತ್ತು.ಇಂಥ ಕಾಲಘಟ್ಟದಲ್ಲಿಯೇ ನಾವು ಬಂಡಾಯ ಸಾಹಿತ್ಯ ಸಂಘಟಣೆ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು.ಇದೇ ಸಮಯದಲ್ಲಿ ಶೂದ್ರದಲ್ಲಿ ಪ್ರತಿ ತಿಂಗಳು ಸಿದ್ಧಲಿಂಗಯ್ಯ ನವರ ಕವಿತೆ ಪ್ರಕಟವಾಗ ತೊಡಗಿತ್ತು. ನಾವೆಲ್ಲ ರಾತ್ರೋರಾತ್ರಿ ಈ ಸಮಾಜ ಸರಿಹೋಗಬೇಕೆಂಬ ಧೋರಣೆಯನ್ನು ಹೊಂದಿದ್ದವರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಲೈಬ್ರರಿ ಮುಂದೆ ಒಂದು ಕಲ್ಲು ಬೇಂಚು ಇತ್ತು. ಅದಕ್ಕೆ ಪಿ.ಪಿ.ಕಟ್ಟೆ ಎಂದು ನಾಮಕರಣ ಮಾಡಿದ್ದೆವು.ಈ ವೇದಿಕೆಯಲ್ಲಿ ಇಂದು ಕರ್ನಾಟಕದ ಉದ್ದಗಲಕ್ಕೂ ಹರಡಿ ಕೊಂಡಿರುವ ಲೇಖಕರು , ಚಿಂತಕರು ಸೇರುವುದಕ್ಕೆ ವೇದಿಕೆಯಾಗಿತ್ತು.ಅಲ್ಲಿ ಎಂತೆಂಥ ಚರ್ಚೆ ,ಸಂವಾದ ನಡೆದಿದೆ.ಜೊತೆಗೆ ನಾನಾ ವೇದಿಕೆಗಳು ರೂಪ ಪಡೆಯುವುದಕ್ಕೆ ಅದು ಸಾಕ್ಷಿಯಾಗಿದೆ. ' ಬಂಡಾಯ ಸಾಹಿತ್ಯ ಸಂಘಟನೆ ' ಯ ಹುಟ್ಟು ಇಲ್ಲಿಯೇ ನಡೆದದ್ದು. ಡಿ.ಆರ್ , ಸಿದ್ಧಲಿಂಗಯ್ಯ ಹಾಗೂ ನಾನು ಕೂಡಿ ಅದಕ್ಕೆ ಒಂದು ಆಕಾರ ತಂದೆವು.ನಂತರ ಇಂದೂದರ ಮತ್ತು ಸಿ.ಜಿ.ಕೃಷ್ಣಸ್ವಾಮಿ ಸೇರಿ ಕೊಂಡರು. ಈ ಕಾಲಘಟ್ಟದಲ್ಲಿಯೇ ' ಹೊಲೆ ಮಾದಿಗರ ಹಾಡು ' ಪ್ರಕಟಗೊಂಡಿದ್ದು ಪಿ.ಪಿ ಕಟ್ಟೆಯಲ್ಲಿ ಪ್ರಸ್ತಾಪ ಆಗಿ ಕಿ.ರಂ .ನಾಗರಾಜ ಅವರ ಮನೆಯಲ್ಲಿ ಅದು ಪ್ರಕಟಣೆಗೆ ಸಿದ್ಧ ವಾಯಿತು.ಇಲ್ಲೆಲ್ಲ ಡಿ.ಆರ್ ನ ಪಾತ್ರ ಮಹತ್ವಪೂರ್ಣ ವಾದದ್ದು.ಆದರೆ ಈ ಬಂಡಾಯದ ಪ್ರಾರಂಭದಲ್ಲಿ ಅದರ ಲಿಖಿತ ಮ್ಯಾನಿಫೆಸ್ಟೋದ ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಬಂದು ನಾನು ಹೊರಗೆ ಬಂದೆ. ಅದು' ಜೀವ ವಿರೋಧಿ ಸಾಹಿತಿಗಳು' ಎಂಬ ಘೋಷಣಾ ವಾಕ್ಯದ ಬಗ್ಗೆ ಆಕ್ಷೇಪಣೆ ಎತ್ತಿದ್ದೆ.ನಾನು ಹೊರಗೆ ಬಂದಿದ್ದು ಅವನಿಗೆ ಇಷ್ಟವಾಗಲಿಲ್ಲ. ಅದು ಅದ್ದೂರಿ ರೂಪದಲ್ಲಿ ಉದ್ಘಾಟನೆಯಾಯಿತು.ಆದರೆ ಮುಂದೆ ಡಿ.ಆರ್ ಹಾಗೂ ಸಿದ್ಧಲಿಂಗಯ್ಯ ಅದರಿಂದ ಹೊರಗೆ ಬಂದರು.ಕೆಲವು ದಿನಗಳ ನಂತರ ನಾವು ಹೊರ ಬಂದು ತಪ್ಪು ಮಾಡಿದೆವು ಅನ್ನಿಸಿತು. ಬಹಳಷ್ಟು ಮಂದಿ ಗಂಭೀರ ಲೇಖಕರು ಮತ್ತು ಕಲಾವಿದರು ನಿಮ್ಮ ನಿಯಂತ್ರಣದಲ್ಲಿಯೇ ಇರಬೇಕಾಗಿತ್ತು ಎಂದು ಹೇಳಿದರು. ಲಂಕೇಶ್ ಅವರಂತೂ ಬಹುದೊಡ್ಡ ತಪ್ಪು ಮಾಡಿದಿರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ‌ ಕಾಲಮಾನದಲ್ಲಿಯೇ ಒಂದು ವಿಚಿತ್ರ ಘಟನೆ ನಡೆಯಿತು. ಬೆಂಗಳೂರಿನ ಗಾಂಧಿ ಭವನದಲ್ಲಿ ವಿಚಾರವಾದಿಗಳ ಒಂದು ಸಮಾವೇಶವಿತ್ತು. ಮುಖ್ಯ ಅತಿಥಿಗಳಾಗಿ ಲಂಕೇಶ್ , ಬಿchi ಮತ್ತು ಪ್ರೊ. ಹಮೀದ್ ಅವರು. ಬಿchiಯವರು ತಮ್ಮ ಮಾಮೂಲಿ ವಿಚಾರತೆ ಮೂಲಕ ಪುರೋಹಿತಶಾಯಿ ವಿರುದ್ಧ ತೀವ್ರವಾಗಿ ಮಾತಾಡಿದರು.ಆಗ ಪ್ರೊ.ಎಂ.ಡಿ.ಎನ್ ಅವರು ಡಿ.ಆರ್ ನನ್ನು ಪುಸಲಾಯಿಸಿ ಅತ್ಯಂತ ಕ್ರೂಡಾಗಿ ಬಿchi ಯವರ ಎದೆಯ ಮೇಲೆ ಜನಿವಾರ ಹುಡುಕಲು ಕಳಿಸಿದರು. ಬಿchiಯವರು ಜನಿವಾರ ಹುಡುಕಲು ಆಹ್ವಾನಿಸಿದರು. ಡಿ.ಆರ್ ಹೋಗಿ ಹುಡುಕಿದ. ಜನಿವಾರ ಸಿಗಲಿಲ್ಲ. ಆದರೆ ಲಂಕೇಶ್ ಅವರು ಮಾತಾಡುವಾಗ ಅತ್ಯಂತ ಮಾರ್ಮಿಕ ನುಡಿಗಳ ಮೂಲಕ ಮಾತಾಡಿದರು.ಜಾತೀಯತೆ ಮತ್ತು ಪುರೋಹಿತಶಾಹಿ ಹೋಗಬೇಕಾಗಿರುವುದು ಮನಸ್ಸಿನಲ್ಲಿ ಮತ್ತು ತಮ್ಮ ದಿನನಿತ್ಯದ ನಡಾವಳಿಯ ಮೂಲಕ. ಆದರೆ ಇಂಥ ಸಭೆಯಲ್ಲಿ ಡಿ.ಆರ್ ಅತ್ಯಂತ ಕ್ರೂಡಾಗಿ ನಡಕೊಳ್ಳಬಾರದಾಗಿತ್ತು ಎಂದು ಹೇಳಿದರು. ಲಂಕೇಶ್ ಅವರಿಗೂ ಗೊತ್ತಿತ್ತು : ಅದು ಎಂ.ಡಿ.ನಂಜುಂಡಸ್ವಾಮಿಯವರ ಕಿತಾಪತಿ ಎಂದು. ಮುಂದೆ ಡಿ.ಆರ್.ಬದಲಾದಂತೆ ಆ ಘಟನೆಯ ನೆನಪು ಅವನನ್ನು ಸಾಕಷ್ಟು ಕಾಡತೊಡಗಿತ್ತು.ಇಂಥದ್ದು ಒಂದಷ್ಟು ಪಟ್ಟಿ ಮಾಡಬಹುದು.ಆದರೆ ಅವನು ಮುಂದೆ ಬೌದ್ಧಿಕ ಚಿಂತನೆಗೆ ಬಳಸಿಕೊಂಡ. ಅವನ ಮದುವೆ ನಡೆದದ್ದು : ಆರ್ಯಸಮಾಜದಲ್ಲಿ. ಅವನ ಎಂ.ಎ.ವಿದ್ಯಾರ್ಥಿನಿ ಗಿರಿಜಾ ಅವರ ಜೊತೆ.ಮದುವೆ ಮುಗಿಸಿ ಬೆಂಗಳೂರಿನ ದರ್ಮರಾಯ ದೇವಸ್ಥಾನದ ಬಳಿ ಇದ್ದ ಅವನ ಅಕ್ಕನ ಮನೆಯಲ್ಲಿ ಗಿರಿಜಾ ಅವರನ್ನು ಬಿಟ್ಟು ನಾವು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪ್ರಸಿದ್ಧ ವಿಕ್ಟೋರಿಯಾ ಹೋಟೆಲ್ಲಿಗೆ ಊಟಕ್ಕೆ ಹೋದೆವು. ಪ್ರಜಾವಾಣಿಯ ಸಂಪಾದಕರಾದ ಕೆ.ಎನ್.ಹರಿಕುಮಾರ್ ಅವರು ವ್ಯವಸ್ಥೆ ಮಾಡಿದ್ದರು.ನಮ್ಮ ಜೊತೆಯಲ್ಲಿ ‌ಕೆ.ಎಂ.ಶಂಕರಪ್ಪ ಮತ್ತು ಸ್ವಲ್ಪ ಸಮಯ ಡಿ.ವಿ.ರಾಜಶೇಖರ್ ಇದ್ದರು.ಅಂದು ಎಷ್ಟು ಮಾತಾಡಿದೆವೋ ,ಏನೇನೂ ಮಾತಾಡಿದೆವೋ ಎಂಬುದನ್ನು ನೆನಪು ಮಾಡಿಕೊಂಡರೆ ; ಎಂತೆಂಥ ಅನುಭವದ ನುಡಿಗಳು ಮುಖಾಮುಖಿಯಾದುವು.ಅಲ್ಲಿಂದ ಇನ್ನೊಂದು ಹೋಟೆಲ್ಲಿಗೆ ಹೋಗಿ ಅಲ್ಲಿ ರಾತ್ರಿ ಹನ್ನೊಂದೂವರೆ ತನಕ ಇದ್ದು ಮನೆಗೆ ಹೊರಟಿದ್ದೆವು.ಮಾರನೆಯ ದಿನ ಬೆಳಿಗ್ಗೆ ಗಾಂಧಿ ಭವನದಲ್ಲಿದ್ದ ಮಧ್ಯ ಪ್ರದೇಶದ ಗುಡ್ಡಗಾಡು ನಾಯಕನ ಭಾಷಣ ಕೇಳಲು ಹೋಗಿದ್ದೆವು.ಅದರ ಅಧ್ಯಕ್ಷತೆಯನ್ನು ಜಾರ್ಜ್ ಫರ್ನಾಂಡೀಸ್ ವಹಿಸಿದ್ದರು. ಇದೇ ಕಾಲಘಟ್ಟದಲ್ಲಿ ಒಂದೆರಡು ವರ್ಷಗಳ ಅಂತರದಲ್ಲಿ ಯು.ಆರ್ ಅನಂತಮೂರ್ತಿಯವರ 50 ನೇ ವರ್ಷದ ನೆನಪಿಗೆ ಎರಡು ದಿನಗಳ ಸಾಹಿತ್ಯ ಸಂಭ್ರಮ. ಲಂಕೇಶ್ ಅವರ ಒತ್ತಾಯದ ಮೇರೆಗೆ ಶೂದ್ರ ಸಾಹಿತ್ಯ ಪತ್ರಿಕೆಯ ಮೂಲಕ.ಇದಾದ ಎರಡು ವರ್ಷಗಳ ನಂತರ ಲಂಕೇಶ್ ಅವರನ್ನು ಕುರಿತು. ಇಲ್ಲೆಲ್ಲ ಡಿ.ಆರ್.ನಿರ್ವಹಿಸಿದ ಪಾತ್ರ ಮಹತ್ವಪೂರ್ಣ ವಾದದ್ದು. ಬಿ.ಸಿ.ದೇಸಾಯಿ ,ಜಿ.ರಾಜಶೇಖರ ಅಂತಹ ಪ್ರತಿಭಾವಂತರೆಲ್ಲ ಮಾತಾಡಿದರು ಹಾಗೆಯೇ ಅಬ್ದುಲ್ ನಜೀರ್ ಸಾಬ್, ಎಂ.ಪಿ ಪ್ರಕಾಶ್ ಅಂಥವರೂ ಮಾತಾಡಿದರು. ಮುಂದೆ ' ದಲಿತ ಸಂಘರ್ಷ ಸಮಿತಿ ' ಯ ಹುಟ್ಟಿಗೆ ನಾಗರಾಜನ ಕೊಡುಗೆ ಅಪಾರವಾದದ್ದು.ಪ್ರಾರಂಭದಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಪಕ್ಕದ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಆಗ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಚಿಕ್ಕ ಸಾವಕ ಅವರ ಕೊಠಡಿಯಲ್ಲಿ ದೀರ್ಘ ಚರ್ಚೆಯ ನಂತರ ರೂಪುಗೊಂಡಿತು. ಆಗ ಓ.ಶ್ರೀಧರನ್ ಎಂಬ ವಕೀಲರು ,ಸಿದ್ಧಲಿಂಗಯ್ಯ ,ದೇವನೂರು ಮಹಾದೇವ ಅವರು ತಳಹದಿ ಹಾಕಿದರು.ಸ್ವಲ್ಪ ತಡವಾಗಿ ಬಿ.ಕೃಷ್ಣಪ್ಪ ಸೇರಿಕೊಂಡು ಜೀವ ತುಂಬಿದರು.ಇವೆಲ್ಲವೂ ಒಂದು ವಿಧದಲ್ಲಿ ಚಾರಿತ್ರಿಕ ಎನ್ನುವ ರೀತಿಯಲ್ಲಿ ಜೀವ ಪಡೆದವು.ಸಾಮಾಜಿಕವಾಗಿ , ಸಾಂಸ್ಕೃತಿಕವಾಗಿ ಅವಗಳು ನಡೆದು ಬಂದ ದಾರಿಯನ್ನು ಹಿಂದಿರುಗಿ ಅರ್ಥೈಸಿಕೊಂಡಾಗ ಹೀಗೆಲ್ಲ ನಡೆಯಿತಾ ಎಂಬ ತನ್ಮಯ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ.ಒಂದು ಬಹು ದೊಡ್ಡ ಸಮಾಜದಲ್ಲಿ ಸಾಮಾಜಿಕ ಸ್ಥಿತ್ಯಂತರ ಗಳ ನೆಲೆಯಲ್ಲಿ ಎಷ್ಟು ಮಹತ್ವಪೂರ್ಣವಾದ ಆಯಾಮಗಳನ್ನು ಮುಂದಿಡುತ್ತದೆ. ಇದೇ ಕಾಲಘಟ್ಟದಲ್ಲಿ ನಾವು ಒಂದು ವಾರ ಪಾಂಡಿಚೆರಿಗೆ ಅರವತ್ತು ಕಿ.ಮೀಟರ್ ದೂರದಲ್ಲಿ ಭರತ್ ಜುಂಜನ್ ವಾಲಾ ಎಂಬ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಾಧ್ಯಾಪಕರಾಗಿದ್ದವರು ವ್ಯವಸ್ಥೆ ಮಾಡಿದ್ದ ಶಿಬಿರದಲ್ಲಿ ಭಾಗವಹಿಸಿದ್ದೆವು.ಭಾರತದ ಉದ್ದಗಲದಿಂದ ಯಾರ್ಯಾರೋ ಭಾಗಿಯಾಗಿದ್ದರು. ಅವರೆಲ್ಲರೂ ಸಾಮಾಜಿಕ ಹೋರಾಟದ ಕಾರ್ಯಕರ್ತರು.ಅದೊಂದು ಹೊಸ ಅನುಭವ. ಬೆಳಿಗ್ಗೆಯಿಂದ ಸಂಜೆಯ ವರೆಗೆ ಚರ್ಚೆ. ರಾತ್ರಿಯೆಲ್ಲಾ ನಾವು ಮಲಗ ಬೇಕಾಗಿದ್ದುದು ಆಕಾಶವೆಂಬ ಚಪ್ಪರದ ಕೆಳಗೆ. ತುಂಬು ಬೆಳದಿಂಗಳ ರಾತ್ರಿ. ಪ್ರೊ.ಜುಂಜುನ್ ವಾಲಾ ಅವರು ನಾನಾ ಕನಸುಗಳನ್ನು ತುಂಬಿಕೊಂಡಿದ್ದವರು.ನಾವು ಡಿ.ಆರ್, ಸಿದ್ಧಲಿಂಗಯ್ಯ ,ನಾನು ,ಪ್ರೊ.ಜಯಪ್ಪ , ಧಾರೇಶ್ವರ್ ಮುಂತಾದವರು ಇದ್ದೆವು.ಅಲ್ಲಿ ಡಿ.ಆರ್ ಮತ್ತು ಸಿದ್ಧಲಿಂಗಯ್ಯ ತಮ್ಮ ಮಾತಿನ ವೈಖರಿ ಮೂಲಕ ಎಷ್ಟು ಎದ್ದುಕಾಣುವಂತಾದರು.ನಾವು ಅಲ್ಲಿ ಪ್ರತಿ ದಿವಸ ಒಂದು ಗುಡಿಸಲು ರೀತಿಯ ಮನೆಗೆ ಊಟಕ್ಕೆ ಹೋಗಬೇಕಾಗಿತ್ತು.ಅವರು ತಮ್ಮ ಬಡತನದ ನಡುವೆ ನಮ್ಮನ್ನು ಕಾಣುತ್ತಿದ್ದ ರೀತಿಯಲ್ಲಿ ಎಂಥ ಅನನ್ಯತೆ ಇತ್ತು.ಸಗಣಿ ನೀರಿನಿಂದ ನೆಲವನ್ನು ಸಾರಿಸಿ ರಂಗೋಲಿ ಬಿಡಿಸುತ್ತಿದ್ದರು.ಇಂಥ ಪರಿಸರದಲ್ಲಿ ರಾತ್ರಿಯ ಬೆಳದಿಂಗಳನ್ನು ಸಾಕ್ಷಿಯಾಗಿಟ್ಟುಕೊಂಡು ಮಾತಾಡಿದ ಸಾಹಿತ್ಯಕ ತುಂಟತನದ ಮಾತು ಗಳಿಗೆ ಬೆಳದಿಂಗಳು ಮತ್ತು ನಕ್ಷತ್ರಗಳು ಮತ್ತಷ್ಟು ಪ್ರಜ್ವಲವಾಗಿ ಬೆಳಗುತ್ತಿದ್ದವು. ಇಂಥದೇ ಮತ್ತೊಂದು ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣಯೆನ್ನುವ ರೀತಿಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇರಳದ ಕೊಚ್ಚಿನ್ ನಲ್ಲಿ ದೇಶಾಭಿಮಾನಿ ಪತ್ರಿಕೆಯ ಮೂಲಕ ಬಹುದೊಡ್ಡ ಸಮಾವೇಶವಿತ್ತು.ಅದು ತುರ್ತುಪರಿಸ್ಥಿತಿ ವಿರೋಧಿ ಲೇಖಕರ ರಾಷ್ಟ್ರೀಯ ಸಮಾವೇಶ. ಅದಕ್ಕೆ ಕರ್ನಾಟಕ ದಿಂದ ಸಿದ್ದಲಿಂಗಯ್ಯ ,ಡಿ.ಆರ್ ಮತ್ತು ನಾನು ಭಾಗಿಯಾಗಿದ್ದೆವು.ಅದರ ಅಧ್ಯಕ್ಷತೆ ಭಾರತದ ಬಹುಮುಖ್ಯ ರಾಜಕಾರಣಿ ಹಾಗೂ ಚಿಂತಕ ಇ ಎಂ ಎಸ್ ನಂಬೂದಿರಿಪಾದ್ .ಉದ್ಘಾಟನೆ ನಮ್ಮ ಶಿವರಾಮ ಕಾರಂತರಿಂದ.ಕಾರಂತರು ಒಂದು ಘಂಟೆ ಎಷ್ಟು ಅಮೋಘವಾಗಿ ಮತಾಡಿದರು.ಅದಕ್ಕೆ ಪೂರಕವೆಂಬಂತೆ ಇ ಎಂ ಎಸ್ ಅವರ ಮಾತು. ಆಗ ಅವರು ಕಾರಂತರನ್ನು ಕುರಿತು " ನಮ್ಮ ಕಾಲದಲ್ಲಿ ಭಾರತದ ರಾಜಕೀಯ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಇಷ್ಟು ದಟ್ಟವಾಗಿ ರಾಜಕೀಯ ಕುರಿತು ಮಾತಾಡುತ್ತಾರೆ ಎಂಬುದು ಅತ್ಯಂತ ಮಹತ್ವಪೂರ್ಣವಾದದ್ದು " ಎಂದು ನುಡಿದಿದ್ದರು.ಇದರ ನಂತರ ಸುಮಾರು ನಾಲ್ಕು ದಿವಸ ಇ ಎಂಎಸ್ ಅವರ ಜೊತೆ ಮಾತುಕತೆ.ಅದು ನಮಗೆ ಒಂದು ಅಪೂರ್ವ ಅನುಭವ. ಆಗ ನಾಗರಾಜ್ ಮುಕ್ತವಾಗಿ ಆ ಮಹಾನ್ ರಾಜಕೀಯ ಮುತ್ಸದ್ಧಿ ಜೊತೆಗೆ ಸಂವಾದಕ್ಕೆ ತೊಡಗುತ್ತಿದ್ದ.ಆಗ ನಾವು ಎಂತೆಂಥ ರಾಜಕೀಯ ಒಳನೋಟಗಳನ್ನು ಗ್ರಹಿಸಲು ಸಾಧ್ಯವಾಯಿತು. ಇದರ ಜೊತೆಗೆ ಕೇರಳದ ಅಲಪ್ಪಿ ಪ್ರದೇಶದಲ್ಲಿ ಪುಟ್ಟ ಹಡಗಿ ನಲ್ಲಿ ಸುತ್ತಾಡುತ್ತ ಯಾರ್ಯಾರೋ ಮನೆಯಲ್ಲಿ ಮೀನಿನ ಊಟ ಮಾಡುತ್ತ , ಭಾಷಣ ಮಾಡುತ್ತಾ ಸುತ್ತಾಡಿದ್ದೆವು.ಇದನ್ನೆಲ್ಲ ಕಾಮ್ರೇಡ್ ವಿ.ಜಿ.ಕೆ ನಾಯರ್ ಅವರು ನಮಗೆ ವ್ಯವಸ್ಥೆ ಮಾಡಿದ್ದರು. ಇದರ ನೆನಪಿನ ಸವಿಯನ್ನು _1994 ರಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ಕೇರಳದ ಆಳ್ವೆಯಲ್ಲಿ ಯು.ಆರ್ .ಅನಂತಮೂರ್ತಿ ಯವರು ಐದಾರು ದಿನಗಳ ಅಪೂರ್ವ ಸಮಾವೇಶವನ್ನು ನಡೆಸಿದಾಗ ಒಂದು ದಿನ ಅಲೆಪ್ಪಿಗೆ ಹೋಗಿ ಗೋವಿಂದ ಮೆನನ್ ಅವರನ್ನು ನೋಡಿ ಬರುವ ಅನ್ನಿಸಿತ್ತು. ಆದರೆ ಆಳ್ವೆಯ ಈ ಸಮಾವೇಶವನ್ನು ಬಿಟ್ಟು ಹೊರಗೆ ಹೋಗಲು ಆಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅದು ಅದ್ಭುತವಾಗಿತ್ತು.ಯಾಕೆಂದರೆ ಆ ಕಾಲಘಟ್ಟದ ಎಲ್ಲಾ ಜ್ಞಾನ ಪೀಠ ಪ್ರಶಸ್ತಿ ಪಡೆದವರಲ್ಲಿ ಬಹುಪಾಲು ಲೇಖಕರು ಭಾಗ ವಹಿಸಿದ್ದರು.ಪೆರಿಯಾರ್ ನದಿಯ ದಡದಲ್ಲಿ ಬಂಗಾರದಂಥ ಮರಳಿನ ಸೊಬಗು.ಅದರ ತುಂಬಾ ಪುರಾತನ ಎನ್ನಬಹುದಾದ ಮರದಿಂದ ನಿರ್ಮಿಸಿದ ಕಲಾತ್ಮಕ ಅರಮನೆ. ಎಂತೆಂಥ ಅಪೂರ್ವ ಲೇಖಕರು. ಮುಂದೆ ಜ್ಞಾನ ಪೀಠ ಪಡೆಯಬಹುದಾದ ಲೇಖಕರು. ನಾವು ಕರ್ನಾಟಕದಿಂದ ಪ್ರೊ.ಜಿ.ಎಸ್.ಶಿವರುದ್ರಪ್ಪ , ಶಾಂತಿನಾಥ ದೇಸಾಯಿ ,ರಾಮಚಂದ್ರ ಶರ್ಮಾ , ಕೆ.ಮರುಳಸಿದ್ದಪ್ಪ, ಡಿ.ಆರ್, ಸಿದ್ಧಲಿಂಗಯ್ಯ ಪ್ರತಿಭಾ ನಂದಕುಮಾರ್ ಮತ್ತು ನಾನು. ಹೊರಗಡೆಯಿಂದ ನಿರ್ಮಲಾ ವರ್ಮ , ಸುನಿಲ್ ಗಂಗೋಪಧ್ಯಾಯ ,ಪ್ರತಿಭಾರಾಯ್, ನವನೀತ ಸೇನ್, ಇಂದಿರಾ ಗೋಸ್ವಾಮಿ , ಕಮಲಾ ದಾಸ್ ಸಿ.ನಾರಾಯಣ ರೆಡ್ಡಿ ,ವಾಸುದೇವನ್ ನಾಯರ್ ಹೀಗೆ ಇನ್ನೂ ದೊಡ್ಡ ಬಳಗ. ಈ ಸಮಾವೇಶವನ್ನು ಮಲೆಯಾಳಂನ ಪ್ರಸಿದ್ಧ ಲೇಖಕ ತಕಳಿ ಶಿವ ಶಂಕರ್ ಪಿಳ್ಳೈ ಯವರು ಉದ್ಘಾಟಿಸಿದರು. ಸಮಾರೋಪಕ್ಕೆ ನಮ್ಮ ಶಿವರಾಮ ಕಾರಂತ ಅವರು.ಆ ಸಮಯದಲ್ಲಿ ಅಗ್ರಹಾರ ಕೃಷ್ಣ ಮೂರ್ತಿ ಯವರು ಪ್ರಾದೇಶಿಕ ಕಾರ್ಯದರ್ಶಿ ಯಾಗಿದ್ದರು. ಅಲಿ ನೆರೆದಿದ್ದ ಎಲ್ಲಾ ಹಿರಿಯ ಲೇಖಕರ ಗಾಢವಾದ ಸಂಪರ್ಕ ಡಿ.ಆರ್.ನಾಗರಾಜ್ ಗೆ ಇತ್ತು.‌ಆ ಸಂದರ್ಭದಲ್ಲಿ ನಡೆದ ಚರ್ಚೆ,ಸಂವಾದ , ಮಾತುಕತೆಗೆ ಬಹುದೊಡ್ಡ ಆಯಾಮವಿತ್ತು. ಅದನ್ನೆಲ್ಲ ಪ್ರತ್ಯೇಕವಾಗಿ ದಾಖಲಿಸುವಂತ್ತಿದ್ದ ಸಂದರ್ಭದಲ್ಲಿ ಮಹತ್ವಪೂರ್ಣ ಕೊಡುಗೆ ಯಾಗುತ್ತಿತ್ತು. ಇಂಥ ಸಾಹಿತ್ಯಕ ,ಸಾಂಸ್ಕೃತಿಕ ಸಮಾವೇಶ ಗಳಲ್ಲಿ ಡಿ.ಆರ್. ನಾಗರಾಜನ ರಚನಾತ್ಮಕ ಪ್ರಕ್ರಿಯೆ ಎಷ್ಟೊಂದು ಸಾಧ್ಯತೆಗಳಿಗೆ ಪ್ರೇರಣಾ ಶಕ್ತಿಯಾಗುತ್ತಿತ್ತು. ಈ ಚೌಕಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ನಡೆಸುತ್ತಿದ್ದ ಸಂಸ್ಕೃತಿ ಶಿಬಿರಗಳಲ್ಲಿ ಬಹು ವ್ಯಾಪಕವಾದ ಪಾತ್ರವನ್ನು ನಿರ್ವಹಿಸಿದ. ಆ ಸಂದರ್ಭದ ಬಹುಪಾಲು ಶಿಬಿರಗಳಲ್ಲಿ ನಾನೂ ಭಾಗವಹಿಸಿರುವೆ.ಈಗಲೂ ನೆನಪು ಬಂದಾಗ ಲೆಲ್ಲಾ ಮೆಲುಕು ಹಾಕುವೆ. ಅವನ ಸಂಪಾದಕತ್ವದಲ್ಲಿ ಬಂದ ಅಕ್ಷರ ಚಿಂತನ ಮಾಲೆಯ ಪ್ರಕಟಣೆಗಳಿಗೆ ಸಾರ್ವಕಾಲಿಕ ಅರ್ಥವಂತಿಕೆ ಇದೆ.ಈ ಸಂದರ್ಭದಲ್ಲಿ ಅಲ್ಲಿ ಮುಖಾಮುಖಿಯಾದ ದಿಗ್ಗಜರ ಜೊತೆಯ ಸಂವಾದದಿಂದ ಅದ್ಭುತ ವ್ಯಾಪಕತೆಯನ್ನ ತಂದುಕೊಡುತ್ತಿದ್ದ .ನನ್ನ ಅರಿವಿನ ಮಟ್ಟಿಗೆ ಅವನು ಇದ್ದ ಕಡೆ ವಾದ ವಿವಾದಗಳು ಎಂಥ ಅರಿವಿನ ಬಾಗಿಲುಗಳನ್ನು ತೆರೆಯುತ್ತಿತ್ತು. ಅದೇ ಹೆಗ್ಗೋಡಿನಲ್ಲಿ ಚಾರಿತ್ರಿಕ ಎನ್ನಬಹುದಾದ ಒಂದು ಸಂವಾದ ನಡೆಯಿತು. ಪ್ರಸನ್ನ ಅವರು ಕವಿ ಕಾವ್ಯ ಟ್ರಸ್ಟನ್ನ ಪ್ರಾರಂಭಿಸಿದರು.ಅದರ ಉದ್ಘಾಟನೆಗೆ ರಾಜೀವ್ ತಾರಾನಾಥ್, ಬಿ.ಸಿ.ರಾಮಚಂದ್ರ ಶರ್ಮಾ , ಕಂಬಾರರು, ಕೆ.ಎಚ್ .ಶ್ರೀನಿವಾಸ್, ಕೆ.ಮರುಳ ಸಿದ್ದಪ್ಪ ,ಸಿದ್ಧಲಿಂಗಯ್ಯ ,ಡಿ.ಆರ್ ಮತ್ತು ನಾನು ಹೋಗಿದ್ದೆವು.ಒಂದು ದೃಷ್ಟಿಯಿಂದ ಅಲ್ಲಿ ಆ ರೀತಿಯ ಟ್ರಸ್ಟ್ ಪ್ರಾರಂಭಿಸುವುದರ ಬಗ್ಗೆ ನಾನು ಮತ್ತು ಡಿ.ಆರ್ ಮೊದಲೇ ಆಕ್ಷೇಪಿಸಿದ್ದೆವು.ಸುಬ್ಬಣ್ಣ ಅವರಿಗೆ ಪ್ರತಿಸ್ಪರ್ಧಿಯಾಗಿ ಬೇಡ ಎಂದು .ಆದರೆ ಪ್ರಸನ್ನ ಅವರು ಅದಕ್ಕೆ ಒಪ್ಪಲಿಲ್ಲ. ಉದ್ಘಾಟನೆಯ ಸಮಯ ದಲ್ಲಿ ಕೆ.ವಿ.ಸುಬ್ಬಣ್ಣನವರೂ ಭಾಗಿಯಾಗಿದ್ದರು.ಎರಡು ದಿವಸ ಎಂಥ ಅಮೂಲ್ಯ ಕ್ಷಣಗಳನ್ನು ಕಳೆದೆವು. ಆದರೆ ಎರಡನೇ ದಿವಸ ಸಂಜೆ ಅಗ್ನಿಕುಂಡದ ಸುತ್ತ ಎಲ್ಲರೂ ಕೂತು ಅತ್ಯಂತ ಮಾರ್ಮಿಕವಾದ ಮಾತುಕತೆಗೆ ತೊಡಗಿದ್ದೆವು . ಆಗ ಎಲ್ಲರ ಒತ್ತಾಯದ ಮೇರೆಗೆ ಡಿ.ಆರ್ .ಭಾರತದ ಸಂಸ್ಕೃತಿಯ ಚಾರಿತ್ರಿಕ ಪಲ್ಲಟಗಳನ್ನು ಕುರಿತು ಸುಮಾರು ಒಂದು ಘಂಟೆಗೂ ಮೇಲ್ಪಟ್ಟು ಮಾತಾಡಿದ.ನಿಜವಾಗಿಯೂ ಇದು ಕ್ಲೀಷೆಯ ಮಾತಲ್ಲ : ಯಾರೋ ಪ್ರವಾದಿ ನಮ್ಮ ಮುಂದೆ ಕೂತು ಬೃಹತ್ ಅಗ್ನಿಕುಂಡದ ಮುಂದೆ ಕೂತು ಮಾತಾಡುತ್ತಿದ್ದಾನೆ ಅನ್ನಿಸಿತು. ಅದಕ್ಕೆ ಎಲ್ಲರೂ ಮೂಕ ವಿಸ್ಮಯತೆ ವ್ಯಕ್ತ ಪಡಿಸಿದ್ದರು.ಕಾರ್ನಾಡ್ ಅವರಂತೂ ಎದ್ದು ಕೈ ಕುಲುಕಿ ಅವನನ್ನು ಅಪ್ಪಿಕೊಂಡು ಗೌರವಿ ಸಿದ್ದರು.ಇಂಥದೇ ಸಾಂಸ್ಕೃತಿಕ ವಿಸ್ತೃತೆಯನ್ನ ಪಡೆದ ಕಾರ್ಯಕ್ರಮಗಳು ಉಡುಪಿಯಲ್ಲಿ ರಥಬೀದಿ ಗೆಳೆಯರ ನೇತ್ರತ್ವದಲ್ಲಿ ನಡೆಯಿತು.ಇದಕ್ಕೆ ಪ್ರೊ.ಹರಿದಾಸ ಭಟ್ಟರು ಮಾರ್ಗದರ್ಶಕರಾಗಿದ್ದರು.ಇದನ್ನು ಡಾ.ಮುರಾರಿ ಬಲ್ಲಾಳ , ಜಿ.ರಾಜಶೇಖರ್, ಮುರಳೀಧರ ಉಪಾಧ್ಯ ,ವೈದೇಹಿ , ಬೋಳವಾರು ಮೊಹಮದ್ ಕುಂಞ ಅವರು ಸಂಚಾಲಕರಾಗಿದ್ದರು. ಅಲ್ಲಿ ಅವನು ಎಷ್ಟು ಕ್ರಿಯಾಶೀಲನಾಗಿದ್ದ.ಲಂಕೇಶ್ ,ಅನಂತಮೂರ್ತಿ ,ಕಿ.ರಂ ,ನಾನು ಮತ್ತೆ ಮತ್ತೆ ಭಾಗಿಯಾಗಲು ಸಾಧ್ಯವಾಯಿತು. ಒಮ್ಮೆ ಪ್ರಸಿದ್ಧ ಚಿಂತಕಿ, ಲೇಖಕಿ ಪಪುಲ್ ಜಯಕರ್ ಮತ್ತು ಪ್ರಸಿದ್ಧ ಪತ್ರಕತ್ರ ಎಂ ಜೆ.ಅಕ್ಬರ್ ಅವರ ಸಮ್ಮುಖದಲ್ಲಿ ನಾಗರಾಜನ ಮಾತು ಅಮೋಘವಾಗಿತ್ತು.ಆಕೆ ನಾಗರಾಜನ ಮಾತನ್ನು ಎಷ್ಟು ಕೊಂಡಾಡಿದ್ದರು.ನಂತರ ನಾವೆಲ್ಲರೂ ವಿಜಯನಾಥ ಶೆಣೈ ಅವರು ನಿರ್ಮಿಸಿದ ಚಾರಿತ್ರಿಕ ಹಸ್ತ ಶಿಲ್ಪ ನೋಡಲು ಹೋಗಿದ್ದೆವು. ಇದೇ ಕಾಲಮಾನದಲ್ಲಿ ಕೂಡಲಸಂಗಮ ದಲ್ಲಿ ವ್ಯವಸ್ಥೆ ಮಾಡಿದ್ದ ಒಂದು ವಾರದ ವಚನ ಸಾಹಿತ್ಯ ಕುರಿತ ಶಿಬಿರದಲ್ಲಿ ಭಾಗವಹಿಸಿದ್ದೆವು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯವಸ್ಥೆ ಮಾಡಿತ್ತು. ಅದರ ಸಂಚಾಲಕರು ಪ್ರೊ.ಕಲಬುರ್ಗಿಯವರು. ನಾವು ಹದಿನೈದು ಮಂದಿ ಲೇಖಕರು ಬೆಂಗಳೂರಿನಿಂದ ಹೊರಟಿದ್ದೆವು.ಪ್ರತಿ ದಿನ ವಚನಸಾಹಿತ್ಯದ ಬಗ್ಗೆ ಮಾತು.ಸಂಜೆ ಮಲ್ಲಿಕಾರ್ಜುನ ಮನ್ಸೂರ್ , ಬಸವರಾಜ ಗುರು , ಸಿದ್ಧರಾಮ ಜಂಬಲದಿನ್ನಿ ,ಗಂಗೂಬಾಯಿ ಹಾನಗಲ್ ಮುಂತಾದವರ ಸಂಗೀತ. ಕೂಡಲ ಸಂಗಮ ಮುಳುಗಡೆಯಾಗುವ ಸಂದರ್ಭವದು.ಬಸವಣ್ಣನನ್ನು ಪಾತಾಳದಂಥ ಅತ್ಯಂತ ಆಳದಲ್ಲಿ ಬಚ್ಚಿಡುವ ವೇದನಾ ಪೂರ್ಣ ಪ್ರಕ್ರಿಯೆ.ಸಮಾರೋಪದಲ್ಲಿ ಗದುಗಿನ ತೋಂಟದಾರ್ಯರು ತೆರೆದಿಟ್ಟ ವಚನ ಧರ್ಮದ ಲೋಕ ಎಂಥದೋ ಅವ್ಯಕ್ತ ಅನುಭೂತಿಯನ್ನು ಕೊಟ್ಟಿತು.ಅಲ್ಲಿ ಪಡೆದ ಅನುಭವದ ಕಥೆಯು ಒಂದು ಉತ್ತಮ ಕೃತಿಯಾಗಲು ಸಾಧ್ಯ.ಇದೇ ರೀತಿಯಲ್ಲಿ ಮತ್ತೊಂದು ಹಂತದ ಸುತ್ತಾಟ ಎಂದರೆ ಸಾವಳಗಿ ಮಠಕ್ಕೆ ಹೊರಟಿದ್ದು.ಎಷ್ಟೋ ದಿವಸಗಳಿಂದ ಆ ಸಾಮರಸ್ಯ ನೆಲೆಯ ಮಠವನ್ನು ನೋಡುವ ಆಸೆಯಿತ್ತು.ಚಂದ್ರಶೇಖರ ಕಂ‌ಬಾರರ ಆರಾಧ್ಯ ಸ್ಥಳ.ಕಂಬಾರರು ಆಡಿ ಬೆಳೆದ ಪ್ರದೇಶ .ಇಲ್ಲಿಂದ ನಾವು ಕಂಬಾರರ ಜೊತೆ ಡಿ.ಆರ್. ,ಭರತಾದ್ರಿ ಮತ್ತು ಅವನ ದೂರ ದರ್ಶನದ ಛಾಯಾಗ್ರಾಹಕರು.ನಾವು ಹೋದ ಸಮಯದಲ್ಲಿ ಅಲ್ಲಿ ಜಾತ್ರೆಯೂ ಇತ್ತು. ಮಠದಲ್ಲಿ ಕಂಬಾರರಿಗೆ ಗೌರವ ಸಮರ್ಪಣೆ .ಬಹುಪಾಲು ಹಿರಿಯರಿಗೆ ,ಕಿರಿಯರಿಗೆ ನಮ್ಮ ನೆಲದಿಂದ ಹೋಗಿ ಎತ್ತರಕ್ಕೆ ಬೆಳೆದ ಕವಿ ಎಂಬ ಆರಾಧ್ಯ ಭಾವನೆ.ಎಲ್ಲಾ ಕಡೆ ಆವರಿಸಿದ ಭಾವನಾತ್ಮಕ ನೋಟ.ನಮ್ಮನ್ನೆಲ್ಲ ಎಷ್ಟು ಚೆನ್ನಾಗಿ ನೋಡಿ ಕೊಂಡರು.ಹಿಂದೂ ಇಸ್ಲಾಂ ಸಂಸ್ಕೃತಿಯನ್ನ ಪ್ರತಿನಿಧಿಸುವ ಪವಿತ್ರ ಸ್ಥಳ. ಭರತಾದ್ರಿ ಮೂರು ದಿನಗಳ ಕಾರ್ಯಕ್ರಮವನ್ನು ಚಿತ್ರಿಸಿ ಕೊಂಡ.ಜಾತ್ರೆಯ ಸೊಬಗನ್ನೂ ಸೇರಿಸಿ.ಅದು ಎತ್ತುಗಳ ಮಾರಾಟದ ಜಾತ್ರೆ. ನನ್ನ ನೆನಪಿಸಿದ ಜಾತ್ರೆ.ಈ ಎಲ್ಲದರ ಡಿ.ಆರ್. ನ ತರಾವರಿ ತುಂಟಾಟದ ಮಾತುಗಳ ಮಧ್ಯೆ ಕಂಬಾರರು ಒಂದು ದಿನ ತಾವು ಆಡಿ ಬೆಳೆದ ಪ್ರದೇಶವನ್ನು ಪರಿಚಯಿಸಿದರು.ನಾವು ಇಳಕಲ್ ಡ್ಯಾಮ್ ನ ಅತಿಥಿ ಗೃಹದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಇಂಥ ಅನುಭವದ ಕಥೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಆ ಮಠದ ಸಂಸ್ಕೃತಿ ಹೀಗೆಯೇ ಮುಂದುವರಿಯಲಿ ಎಂದು ಕೈ ಮುಗಿದು ಬೆಂಗಳೂರು ತಲುಪಿದ್ದೆವು. ಇದೇ ಸಮಯದಲ್ಲಿ ಸಾಮರಸ್ಯದ ನೆಲೆ ಗಳನ್ನು ವಿಸ್ತರಿಸುವ ಕಾರಣಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಭವನದಲ್ಲಿ' ಧರ್ಮ ಸಂವಾದ ' ಎಂಬ ವಿಷಯದ ಮೇಲೆ ಮೂರು ದಿನಗಳ ವಿಚಾರ ಸಂಕಿರಣವನ್ನು ನಡೆಸಲು ಡಿ .ಆರ್.ಯೋಜನೆ ರೂಪಿಸಿದ.ಲಂಕೇಶ್, ಅನಂತಮೂರ್ತಿ ,ಗಿರೀಶ್ ಕಾರ್ನಾಡ್, ಸಿದ್ದಯ್ಯಪುರಾಣಿಕ್ ,ಮುಂಬಯಿಯಿಂದ ಪ್ರಸಿದ್ಧ ಇಸ್ಲಾಂ ಸಂಸ್ಕೃತಿಯ ಚಿಂತಕ ಆಸ್ಘರ್ ಅಲಿ ಇಂಜಿನಿಯರ್ ಬರುವಂತೆ ವ್ಯವಸ್ಥೆ ಮಾಡಿದ.ಜೊತೆಗೆ ಸಿರಿಗೆರೆ ಮಠದ ಇಬ್ಬರು ಹಿರಿಯ ಸ್ವಾಮಿಗಳು ಬರುವಂಥ ವಾತಾವರಣ ಸೃಷ್ಟಿಸಿದ.ಜೊತೆಗೆ ನ್ಯಾಯಮೂರ್ತಿ ಎನ್.ಡಿ.ವೆಂಕಟೇಶ್. ಶೂದ್ರ ಪತ್ರಿಕೆಯ ಮೂಲಕ ಇಂತಹ ಕಾರ್ಯಕ್ರಮಗಳನ್ನು ನಡೆಸುವಾಗ ಡಿ.ಆರ್ ಎಲ್ಲಿಲ್ಲದ ಉತ್ಸಾಹವನ್ನು ತುಂಬಿಕೊಳ್ಳುತ್ತಿದ್ದ. ಇದೇ ಕಾಲಮಾನದಲ್ಲಿ ಯು.ಆರ್.ಅನಂತಮೂರ್ತಿಯವರು ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನ ಸಮೀಪ ಒಂದು 'ಸಮಾಜ ವಿಜ್ಞಾನದ ಸಂಸ್ಥೆ'ಯನ್ನು ಕಟ್ಟುವ ಆಶಯವನ್ನು ಹೊಂದಿದ್ದರು. ಇದಕ್ಕಾಗಿ ಅವರು ಬೆಂಗಳೂರಿಗೆ ಬಂದಾಗ ಡಿ.ಆರ್ ,ಭರತಾದ್ರಿ ಮತ್ತು ನನ್ನನ್ನು ಸೆಂಟ್ರಲ್ ಕಾಲೇಜಿನ ಅತಿಥಿ ಗೃಹಕ್ಕೆ ಬರಮಾಡಿಕೊಂಡಿದ್ದರು. ಆ ಸಮಯದಲ್ಲಿ ನಾವು ಅಲ್ಲಿಗೆ ಯು.ಆರ್ ಅವರ ಜೊತೆ ತಿಂಡಿ ತಿನ್ನುವ ಸಮಯದಲ್ಲಿ ಅಲ್ಲಿಗೆ ಧಾರವಾಡ ಕಡೆಯ ಇಬ್ಬರು ಹಿರಿಯ ವಿಮರ್ಶಕರು ಬಂದರು.ಬಂದ ಕೆಲವೇ ನಿಮಿಷಗಳಲ್ಲಿ ಮಾತುಕತೆಯ ನಡುವೆ ಇದ್ದಕ್ಕಿದ್ದಂತೆ "ಡಿ.ಆರ್.ನಾಗರಾಜ್ ನೀವು ಕನ್ನಡ ತಿದ್ದಿಕೊಳ್ಳಬೇಕು.ಕೆಟ್ಟದಾಗಿ ಬರೀತೀರಿ." ಎಂದರು.ಅದಕ್ಕೆ ಇನ್ನೊಬ್ಬರು ದನಿಗೂಡಿಸಿದರು. ನಾವೆಲ್ಲರೂ ಗಾಬರಿಗೊಂಡೆವು.ಅನಂತಮೂರ್ತಿಯವರು ಪೆಚ್ಚಾಗಿ ನೋಡುತ್ತ ನಿಂತರು.ಇವರು ಎಂಥ ಅನಾಗರಿಕರಿರಬಹುದೆಂದು.ಕೆಲವೇ ಕ್ಷಣಗಳಲ್ಲಿ ಡಿ.ಆರ್. ಏಕವಚನದ ಮಾತಿಗಿಳಿದ. " ನೀವೂ ಹತ್ತು ವಾಕ್ಯ ಬರೆದುಕೊಡಿ.ನಾನೂ ಬರೆದುಕೊಡುವೆ.ಯಾರಾದರೂ ತೀರ್ಮಾನಿಸಲಿ " ಎಂದ. ಅನಂತಮೂರ್ತಿ ಯವರೂ ಅವರನ್ನು ತರಾಟೆಗೆ ತಗೊಂಡರು. ಇದರಿಂದ ನಾವೆಲ್ಲರೂ ನರಳುವಂತಾಯಿತು. ಜೊತೆಗೆ ಒಂದು ಅಪೂರ್ವ ಕನಸಿನ ಸಂಸ್ಥೆ ಹುಟ್ಟಿಕೊಳ್ಳುವ ಸಾಧ್ಯತೆಗಳೆಲ್ಲ ಮುರಿದು ಬಿದ್ದವು.ಆದರೆ ಡಿ.ಆರ್ ಇಂಥ ಅವಮಾನದ ಮಾತುಗಳನ್ನು ಎದುರಿಸಿದ್ದಾನೆ. ಅವನ ಓದಿನ ಮತ್ತು ಬೌದ್ಧಿಕ ದಟ್ಟಣೆಯನ್ನು ಗುಮಾನಿಯಿಂದ ನೋಡಿದವರು ' ಬ್ಲರ್ಬ್ ಮಾಸ್ಟರ್ 'ಎಂದು ವ್ಯಂಗ್ಯವಾಗಿ ಆಡಿಕೊಂಡಿ ದ್ದನ್ನು ಕಂಡಿದ್ದೇನೆ.ಇಂಥದ್ದರಿಂದ ಅವನು ಮತ್ತಷ್ಟು ಛಲವನ್ನು ಬೆಳೆಸಿಕೊಳ್ಳಲು ಚೈತನ್ಯ ನೀಡಿದೆ.ಈ ರೀತಿಯ ವ್ಯಕ್ತಿತ್ವದಿಂದ ಅವನ ಒಡನಾಡಿಗಳೂ ಕ್ರಿಯಾಶೀಲರಾಗಿರಲು ಪ್ರೇರೇಪಣೆ ದೊರಕುತ್ತಿತ್ತು. ಡಿ.ಆರ್ ನ ಕಾರಣಕ್ಕಾಗಿ ಶೂದ್ರದ 15 ನೇ ವರ್ಷದ ಕಾರ್ಯಕ್ರಮ ನಾನಾ ರೀತಿಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಯಿತು .ಮೂರು ದಿವಸ ಎಲ್ಲಾ ವಯೋಮಾನದ ಬಹು ದೊಡ್ಡ ಲೇಖಕರನ್ನ ಒಳಗೆ ಬಿಟ್ಟು ಕೊಳ್ಳಲು ಸಾಧ್ಯವಾಯಿತು. ಸ್ವಕಾವ್ಯ ಮತ್ತು ಪರಕಾವ್ಯಗೋಷ್ಠಿಗಳು ಸಾಹಿತ್ಯವಲಯದಲ್ಲಿ ಚಲಾವಣೆಗೆ ಬರಲು ಪ್ರೇರೇಪಿಸಿತು. ಹಾಗೆಯೇ ತಮ್ಮ ಪತ್ರಿಕೆಯ ಕಾರಣಕ್ಕಾಗಿ ಸಾಹಿತ್ಯದಿಂದ ಸ್ವಲ್ಪ ದೂರ ಉಳಿದಿದ್ದ ಲಂಕೇಶ್ ಅವರು ' ಅವ್ವ 2 ' ಕವಿತೆಯನ್ನು ರಚಿಸಿ ಯವನಿಕಾದಲ್ಲಿ ಜಿ.ಎಸ್.ಶಿವರುದ್ರಪ್ಪ ,ಕೆ.ಎಸ್.ನ ,ವೈ.ಎನ್.ಕೆ, ರಾಮಚಂದ್ರ ಶರ್ಮಾ ,ಮೊಕಾಶಿ, ಬಿಳಗಿರಿ ಮುಂತಾದವರ ಮುಂದೆ ಓದಿದರು. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಇಲ್ಲದಿದ್ದರೂ. 'ಜಾಗೃತ ಸಾಹಿತ್ಯ ಸಮಾವೇಶ ' ವಂತೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಚಲನಕ್ಕೆ ಕಾರಣವಾಯಿತು.ಎಂತೆಂಥವರನ್ನು ತೊಡಗಿಸಿ ಕೊಳ್ಳುವ ಕ್ರಿಯಾಶೀಲತೆ ಅವನಲ್ಲಿತ್ತು.ಇಲ್ಲಿ ಮಾತ್ರ ಅಲ್ಲ ; ಅವನು ಎಲ್ಲಿಗೆ ಹೋದರೂ ಎದ್ದು ಕಾಣುವ ವ್ಯಕ್ತಿತ್ವವನ್ನು ಹೊಂದಿದ್ದ. ಒಮ್ಮೆ ಲಂಕೇಶ್ ಅವರಿಗೆ ಮಂಗಳೂರಿನ ಚರ್ಚ್ ನವರು ' ಸೌಹಾರ್ದ ' ಪ್ರಶಸ್ತಿಯನ್ನು ನೀಡಿದ್ದರು. ಅದನ್ನು ಸ್ವೀಕರಿಸಲು ನಮ್ಮ ಒತ್ತಾಯದ ಮೇರೆಗೆ ಹೊರಟರು. ಅವರ ಜೊತೆಯಲ್ಲಿ ಡಿ.ಆರ್, ಅಗ್ರಹಾರ, ಭರತಾದ್ರಿ , ತೇಜಸ್ವಿನಿ ಗೌಡ ಮತ್ತು ನಾನು ಹೊರಟೆವು. ಚರ್ಚ್ ನವರು ಪ್ರಶಸ್ತಿಯ ಕಾರ್ಯಕ್ರಮವನ್ನು ಅತ್ಯಂತ ಮಾರ್ಮಿಕವಾಗಿ ವ್ಯವಸ್ಥೆ ಮಾಡಿದ್ದರು.ಅಲ್ಲಿ ಲಂಕೇಶ್ ಅವರು ಚಾರಿತ್ರಿಕ ಎನ್ನಬಹುದಾದ ಉಪನ್ಯಾಸ ನೀಡಿದರು.ಅಲ್ಲಿಗೆ ಬಂದಿದ್ದಕ್ಕೆ ಲಂಕೇಶ್ ಅವರಿಗೆ ಖುಷಿಯಾಗಿತ್ತು.ಆ ದಿನ ಸಂಜೆ ಮಂಗಳೂರಿನ ಸಮುದ್ರ ದಂಡೆಯಲ್ಲಿ ಬ್ರಿಟಿಷರ ಕಾಲದ ವಿಶಾಲವಾದ ಕ್ಲಬ್ ನಲ್ಲಿ ವ್ಯವಸ್ಥೆ ಮಾಡಿದ್ದರು. ಲಂಕೇಶ್ ಅವರ ಅಭಿಮಾನಿ ಮೋಹನ್ ಅವರು.ಅದೊಂದು ಅಪೂರ್ವ ಸಮಾವೇಶ. ಆ ಭಾಗದ ಎಲ್ಲಾ ಮತಧರ್ಮದ ಲೇಖಕರೆಲ್ಲ ಭಾಗಿಯಾಗಿದ್ದರು. ಅಲ್ಲಿ ಮತ್ತೆ ಲಂಕೇಶ್ ಅವರು ಡಿ.ಆರ್ ನಿಂದ ಮಾತಾಡಿಸಿದರು. ಆ ಮಾತನ್ನೆಲ್ಲ ಧ್ವನಿ ಮುದ್ರಿಸಿಕೊಳ್ಳುವಂತಿದ್ದರೆ; ಎಂಬ ಧ್ವನಿ ಮನಸ್ಸಿನಲ್ಲಿ ಈಗಲೂ ಬಾಧಿಸುತ್ತದೆ. ಅಲ್ಲಿಂದ ನಾವು ಉಡುಪಿಗೆ ಹೋದೆವು. ಅಲ್ಲಿ ಒಂದು ರಾತ್ರಿ ಇದ್ದು ಬೆಳಿಗ್ಗೆ ಮಣಿಪಾಲ್ ನಲ್ಲಿ ವಿಜಯನಾಥ ಶೆಣೈ ಅವರ ಸಾಂಸ್ಕೃತಿಕ ಮಹತ್ವದ ಹಸ್ತಶಿಲ್ಪ ವನ್ನು ನೋಡುತ್ತ ಸಾಕಷ್ಟು ಕಾಲ ಕಳೆದೆವು.ಅಲ್ಲಿಯ ಮಾತುಕತೆಯನ್ನು ಬೇರೆ ಬೇರೆ ಸಂದರ್ಭದಲ್ಲಿ ದಾಖಲಿಸಿರುವೆ.ಯಾಕೆಂದರೆ ಅದು ಅಷ್ಟು ಮಹತ್ವದ ಮಾತುಕತೆಯಾಗಿತ್ತು.ಅವನಿದ್ದ ಕಡೆಯ ಮಾತುಕತೆಗೆ ಅರ್ಥಪೂರ್ಣತೆ ವ್ಯಾಪಿಸಿಕೊಳ್ಳುತ್ತಿತ್ತು.ಶೆಣೈ ಮತ್ತು ಡಿ.ಆರ್ ನ ಮಾತುಕತೆ ಆ ರೀತಿಯ ಆಯಾಮವನ್ನು ಪಡೆದಿತ್ತು.ಒಂದು ವಿಧದಲ್ಲಿ ಅದು ಮೂರು ದಿನದ ಅಪೂರ್ವ ಪ್ರಯಾಣವಾಗಿತ್ತು.ಇದೇ ಕಾಲಘಟ್ಟದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಭವನದಲ್ಲಿ ರಾಮ ಮನೋಹರ ಲೋಹಿಯಾ ಅವರ ಜನ್ಮದಿನಾಚರಣೆಯನ್ನು ರಮೇಶ್ ಬಂದಗದ್ದೆ ವ್ಯವಸ್ಥೆ ಮಾಡಿದ್ದರು. ಅದನ್ನು ಲೋಕಸಭೆಯ ಸಭಾಪತಿ ರಬಿರಾಯ್ ಅವರು ಉದ್ಘಾಟಿಸಿದರು.ಅದರ ಅಧ್ಯಕ್ಷತೆ ಯನ್ನು ಸಮಾಜವಾದಿ ನಾಯಕ ಸಿ.ಜಿ.ಕೆ ರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು. ಅಂದು ಡಿ.ಆರ್ .ವಿಶೇಷ ಉಪನ್ಯಾಸಕನಾಗಿ ನೀಡಿದ ಭಾಷಣ ನಿಜವಾಗಿಯೂ ಅಮೋಘ ವಾಗಿತ್ತು. ಭಾರತದ ರಾಜಕೀಯಕ್ಕೆ ಸಾಂಸ್ಕ್ರತಿಕ ಧ್ವನಿಪೂರ್ಣತೆಯನ್ನು ತಂದುಕೊಟ್ಟವರು ಲೋಹಿಯಾ ಎಂದು ವಿಶ್ಲೇಸಿದ್ದ .ಅದೆಲ್ಲವನ್ನೂ ದತ್ತವಾಗಿ ಪಡೆದದ್ದು ಅವನ ಅರಿವಿನ ದಾಹ ಅಷ್ಟು ವ್ಯಾಪಕವಾಗಿತ್ತು. ಆಗ ರಬಿರಾಯ್ ಅವರು ಎದ್ದು ನಿಂತು ಎಷ್ಟೊಂದು ಶ್ಲಾಘಿಸಿದ್ದರು.ಹಾಗೆಯೇ ಸಿ.ಜಿ.ಕೆ ರೆಡ್ಡಿಯವರು.ಅದರ ಧ್ವನಿ ಮುದ್ರಣ ವನ್ನು ನಾನಾ ರೀತಿಯ ಮಂದಿ ಕೇಳಿಸಿಕೊಂಡು ಸಂಭ್ರಮಿಸಿದ್ದಾರೆ.ಒಮ್ಮೆ ಶೂದ್ರ ವೇದಿಕೆಯ ಮೂಲಕ ಆಹ್ವಾನಿತ ಸಾಹಿತ್ಯ ಪ್ರೇಮಿಗಳ ಸಮ್ಮುಖದಲ್ಲಿ ದೆಹಲಿಯಿಂದ ಬಂದಿದ್ದ ಶಾ.ಬಾಲೂರಾವ್, ಬಿ.ಸಿ.ರಾಮಚಂದ್ರ ಶರ್ಮ ಮತ್ತು ಡಿ.ಆರ್ ಅವರ ಸಂವಾದವನ್ನು ಏರ್ಪಡಿಸಿದ್ದೆ.ಆಗ ಸಾಹಿತ್ಯದ ಕೊಡುಗೆ ಕುರಿತು ಎಷ್ಟು ಗಾಢವಾಗಿ ವ್ಯಾಖ್ಯಾನಿಸುತ್ತ ಹೋಗಿದ್ದರು. ಅಂದು ಭಾಗವಹಿಸಿದ್ದ ಕೆಲವು ಗೆಳೆಯರು ಈಗಲೂ ಒಮ್ಮೊಮ್ಮೆ ನೆನಪುಮಾಡಿಕೊಂಡು ದೂರವಾಣಿಯಲ್ಲಿ ಸಂಪರ್ಕಿಸುವರು. ಅವನ ಒಟ್ಟು ಬರವಣಿಗೆ ಈಗಲೂ ಸಾಹಿತ್ಯಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಚೇತೋಹಾರಿಯಾದದ್ದು.ವಾಗ್ವಾದ ಮತ್ತು ಸಂವಾದವನ್ನು ಆಹ್ವಾನಿಸುವಂಥದ್ದು.ಡಿ.ಆರ್ ಎಷ್ಟು ಜಗಳ ಗಂಟಿಯೋ ಅಷ್ಟೇ ಸ್ನೇಹಮಯಿಯಾಗಿದ್ದ. ಅವನ ಬೌದ್ಧಿಕ ಸೂಕ್ಷ್ಮತೆಗಳು ಎಷ್ಟು ಗಾಢವಾಗಿದ್ದವು. ಈ ಕಾರಣದಿಂದಾಗಿಯೇ ಶಿವು ವಿಶ್ವನಾಥ್ , ಅಶೀಷ್ ನಂದಿ ,ರಾಮ ಚಂದ್ರ ಗುಹಾ ಇಂಥವರ ನಡುವೆ ಎದ್ದು ಕಾಣುವ ರೀತಿಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದ.ಅಶೀಷ್ ನಂದಿಯವರಂತೂ ದೆಹಲಿಯ ಮಹತ್ವದ ಸಭೆಗಳಿಗೆ ಡಿ.ಆರ್ ನನ್ನು ಸೂಚಿಸುತ್ತಿದ್ದರು. ಮೂರು ನಾಲ್ಕು ವರ್ಷಗಳ ಹಿಂದೆ ಜಯ ಪ್ರಕಾಶ್ ನಾರಾಯಣ್ ಅವರ ನೆನಪಿನ ಕಾರ್ಯಕ್ರಮಕ್ಕೆ ಗೋಪಾಲಕೃಷ್ಣ ಗಾಂಧಿ ಯವರಂಥ ಬಹುದೊಡ್ಡ ಚಿಂತಕ ಮತ್ತು ಲೇಖಕರು ಬಂದಿದ್ದರು. ಆಗ ನಾನು ಸ್ವಲ್ಪ ದೂರದಲ್ಲಿ ನಿಂತಿದ್ದರೆ ಗುಹಾ ಅವರು ನನ್ನನ್ನು ಹತ್ತಿರ ಕರೆದು ಶೂದ್ರದ ಬಗ್ಗೆ ಹಾಗೂ ಡಿ.ಆರ್ ಜೊತೆಯ ಒಡನಾಟ ಕುರಿತು ಗೋಪಾಲಕೃಷ್ಣ ಗಾಂಧಿಯವರಿಗೆ ವಿವರಿಸಿ ಪರಿಚಯ ಮಾಡಿಕೊಟ್ಟಿದ್ದರು.ಆಗ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಮಾತಾಡಿಸಿದಾಗ ಆತ್ಮೀಯ ಅನುಭೂತಿಯನ್ನು ಅನುಭವಿಸಿದ್ದೆ.ಜೊತೆಗೆ ಡಿ.ಆರ್.ಎಂತೆಂಥ ಕಡೆ ವ್ಯಾಪಿಸಿಕೊಂಡಿದ್ದ ಎಂದು ಯೊಚಿಸುತ್ತಾ ಹೋಗಿದ್ದೆ. ಸಾಹಿತ್ಯಕವಾಗಿ ,ಸಾಂಸ್ಕೃತಿಕವಾಗಿ ಎಷ್ಟು ಬೆಳಕಿಗೆ ಬಂದಿದ್ದ. ಈ ಕಾರಣಕ್ಕಾಗಿ ನಮ್ಮ ಜೊತೆ ಪಾಕಿಸ್ತಾನದಲ್ಲಿ ನಡೆದ ಮೊದಲ ಶಾಂತಿ ಸಮಾವೇಶಕ್ಕೆ ಕೊನೆಯ ಕ್ಷಣದಲ್ಲಿ ಬರಲು ತೊಂದರೆಯಾಗಿದ್ದಕ್ಕೆ ಮಿಕ್ಕ ಬಹು ದೊಡ್ಡ ಚಿಂತಕರೆಲ್ಲ ಎಷ್ಟು ಪರದಾಡಿದ್ದರು.ಹಾಗೆಯೇ ಲಾಹೋರ್ ನ ಶಾಂತಿ ಸಮಾವೇಶದಲ್ಲಿ ಎಂತೆಂಥ ವಿಷಯ ಗಳನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಎಷ್ಟು ಗಂಭೀರವಾಗಿ ಸೂಚಿಸಿದ್ದ. ಆಗ ಬೀಷಮ್ ಸಹಾನಿಯವರು ಮತ್ತು ರಜನಿಕೊಠಾರಿಯವರ ಮಗ ವಿವೇಕ್ ಕೊಠಾರಿಯವರು ತಮ್ಮ ಮಾತಿನಲ್ಲಿ ಡಿ.ಅರ್ ನ ಗೈರುಹಾಜರಿಗೆ ಬೇಸರ ವ್ಯಕ್ತಪಡಿಸಿದ್ದರು.ಅಂಥ ಸಮಯದಲ್ಲೂ ನನ್ನ ಪರವಾಗಿ ನೀನಿದ್ದೀಯ ಹೋಗು ಎಂದು ಬೆನ್ನು ಸವರಿ ಕಳಿಸಿದ್ದ.ಅಲ್ಲಿಂದ ವಾಪಸ್ಸು ಬಂದಮೇಲೆ ಹಿರಿಯ ಸಮಾಜವಾದಿ ನಾಯಕರಾದ ಸುರೇಂದ್ರ ಮೋಹನ್ ಅವರ ಮನೆಯಲ್ಲಿ ಊಟದ ವ್ಯವಸ್ಥೆ ಇತ್ತು. ಅವರೂ ನಮ್ಮೊಡನೆ ಬಂದಿದ್ದರು.ಅಂದು ಊಟ ಮಾಡುವುದಕ್ಕೆ ಹೋರಾಟಗಾರ ,ಚಿಂತಕ ಯೋಗೇಂದ್ರಯಾದವ್ ಇದ್ದರು.ರಾತ್ರಿ ಒಂದು ಘಂಟೆಯವರೆಗೆ ಭಾರತ ಮತ್ತು ಪಾಕಿಸ್ತಾನದ ಶಾಂತಿ ಸಂಬಂಧಗಳನ್ನು ಕುರಿತಂತೆ ಎಷ್ಟು ದೀರ್ಘ ಮಾತುಕತೆ ನಡೆಯಿತು.ಕೊನೆಗೆ ಅವನು ಉಳಕೊಂಡಿದ್ದ ಮನೆಯಲ್ಲಿ ಮಲಗಲು ಹೋದೆವು. ಒಂದು ವಿಧದ ದೈಹಿಕ ನೋವಿನಿಂದ ಒದ್ದಾಡುತ್ತಿದ್ದ. ಡಿ.ಆರ್ ನಾಗರಾಜ್ ತನ್ನ ಕೊನೆಯ ದಿನಗಳಲ್ಲಿ ದೈಹಿಕ ಆರೋಗ್ಯದ ಬಗ್ಗೆ ಯೋಚಿಸದೆ , ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ವಿಶ್ವವಿದ್ಯಾಲಯದ ಉಪಕುಲಪತಿಯಾಗಲು ಪ್ರಯತ್ನಿಸಿದ.ಆಗುವ ಬಹುದೊಡ್ಡ ವ್ಯಕ್ತಿತ್ವವನ್ನು ಹೊಂದಿದ್ದವನು. ಆದರೆ ಕಾಯುವ ಮನಸ್ಥಿತಿ ಬೆಳೆಸಿಕೊಳ್ಳಲಿಲ್ಲ.ಅವನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಾಧನೆ ಇನ್ನೂ ಎತ್ತರಕ್ಕೆ ತಲುಪುವುದನ್ನು ಅವನೇ ಮೊಟಕು ಮಾಡಿ ಕೊಂಡ. ತನ್ನ ನಲವತ್ತೈದನೆಯ ವಯಸ್ಸಿಗೆ ಸಾವನ್ನು ಬರಮಾಡಿಕೊಂಡ . 'ವಿಲ್ ಪವರ್' ಮೂಲಕ ಸಾವನ್ನು ಎದುರಿಸಬಹುದು ಎಂಬ ಛಲ ಅವನಲ್ಲಿ ಸ್ವಲ್ಪ ಜಾಸ್ತಿಯಾಯಿತು ಅನ್ನಿಸುತ್ತದೆ. ಸಾವಿನ ಮೊರೆ ಹೋದ.ಇಷ್ಟಾದರೂ ಓದಿ ಅರಿಯುವುದಕ್ಕೆ ಮತ್ತು ಅವನ ಒಡನಾಡಿ ಗಳೆಲ್ಲಾ ಮತ್ತೆ ಮತ್ತೆ ಮೆಲುಕು ಹಾಕುವುದಕ್ಕೆ ಮಹತ್ತರವಾದದ್ದನ್ನು ಬಿಟ್ಟು ಹೋಗಿದ್ದಾನೆ. ಈಗ ಅವನ ಕೆಲವು ಅತ್ಯುತ್ತಮ ಲೇಖನಗಳನ್ನು ಮತ್ತೆ ಓದಿದಾಗ ಖುಷಿಯಾಗುತ್ತದೆ.ಕಾಲದ ಮಹಿಮೆಯಲ್ಲಿ ಎಂತೆಂಥ ಆಗುಹೋಗುಗಳು ನಡೆದುಹೋಗಿರುತ್ತವೆ ಎಂದು ಹಳೆಯ ನೆನಪುಗಳಲ್ಲಿ ಸುತ್ತಾಡಲು ಪ್ರಯತ್ನಿಸುವೆ. -----------------------+-----+---------------------- ಮೇಲಿನ ಕೆಲವು ನೆನಪುಗಳ ಜೊತೆಗೆ ಬಿಟ್ಟು ಹೋಗಿರುವ ಎಷ್ಟೋ ನೆನಪುಗಳನ್ನ ಮುಂದಿಟ್ಟುಕೊಂಡು ಅವನ ಬಗ್ಗೆ ಒಂದು ಕೃತಿಯನ್ನು ರಚಿಸುವ ಆಶಯವಿದೆ.ಒಂದು ಉತ್ತಮ ಜೀವನ ಚರಿತ್ರೆಗೆ ಹೇಳಿ ಮಾಡಿಸಿದ ವ್ಯಕ್ತಿತ್ವ ಅವನದ್ದು. --------------------------- - ಶೂದ್ರ

ಬಿ ಜನಾರ್ದನ ಭಟ್ -‘ವರ್ಣಕ’ದ ಪಾಂಡಿತ್ಯಸಾರ | Odinangala Critic Dr Janardhana Bhat reviewed Kannada Novel Varnaka By KP Rao | TV9 Kannada

Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ವರ್ಣಕ’ದ ಪಾಂಡಿತ್ಯಸಾರ ಬಸಿದಿಟ್ಟಿದ್ದಾರೆ ಜನಾರ್ಧನ ಭಟ್ | Odinangala Critic Dr Janardhana Bhat reviewed Kannada Novel Varnaka By KP Rao | TV9 Kannada

ರಮೇಶ್ ಭಟ್ ಬೆಳಗೋಡು -ಕೆ. ಪಿ ರಾವ್ ಅವರ " ವರ್ಣಕ " { ಕಾದಂಬರಿ -2021 }K. P. RAO

ಗಹನವಾದ ಸಂಪ್ರಬಂಧಕ್ಕೆ ಕಥನದ ಅನುಭೂತಿ ವರ್ಣಕ (ಕಾದಂಬರಿ) ಲೇ: ಪ್ರೊ ಕೆ. ಪಿ. ರಾವ್ ಪ್ರಕಾಶಕರು; ಅಂಕಿತ ಪುಸ್ತಕ ಪುಟಗಳು: ೪೮೦ ಬೆಲೆ: ರೂ ೪೫೦ ಒಂದು ಕಾದಂಬರಿಯಲ್ಲಿ ಕತೆ ಎಷ್ಟು ಮುಖ್ಯ, ವೈಚಾರಿಕ ಜಿಜ್ಞಾಸೆ ಎಷ್ಟು ಮುಖ್ಯ ಎಂಬ ಕುತೂಹಲಕಾರಿ ಪ್ರಶ್ನೆಗೆ ನವ್ಯ ಮತ್ತು ನವ್ಯೋತ್ತರ ಸಂದರ್ಭಗಳ ಕನ್ನಡ ಕಾದಂಬರೀ ಸಾಹಿತ್ಯ ನಮಗೆ ಕೊಟ್ಟ ಉತ್ತರವನ್ನು ಮತ್ತೊಮ್ಮೆ ವಿಶ್ಲೇಷಣೆಗೆ ಒಡ್ಡುವಂತೆ ಮಾಡಬಲ್ಲ ಕಾದಂಬರಿ, ನಾಡೋಜ ಕೆ ಪಿ ರಾಯರ ‘ವರ್ಣಕ’. ನಾವು ಬಳಸುವ ಗಣಕ ಯಂತ್ರ (ಕಂಪ್ಯೂಟರ್) ಕ್ಕೆ ಕನ್ನಡ ಕಲಿಸಿದ ತಂತ್ರಜ್ಞ ಕಿನ್ನಿಕಂಬಳ ಪದ್ಮನಾಭ ರಾವ್ ಹೊಸತರಲ್ಲಿ ಅಡಗಿದ ಹಳತೆಂಬ ನಿಗೂಢವನ್ನು ಅರಸುವ ಅಪರೂಪದ ಋಷಿರೂಪದ ವಿಜ್ಞಾನಿ. ಅವರಿಗೆ ವಿಜ್ಞಾನ ಮತ್ತು ವೈದಿಕ ಅಧ್ಯಯನಗಳೆರಡೂ ಕರತಲಾಮಲಕ ಸಂಗತಿಗಳು. ಭಾಷಾ ಶಾಸ್ತ್ರದ ಬೆಳವಣಿಗೆಯನ್ನು ಇತಿಹಾಸ ಮತ್ತು ವಿಜ್ಞಾನದ ತಳಹದಿಯಲ್ಲಿ ಗುರುತಿಸಲು ಅವರು ಬಳಸುವ ‘ತಕ್ಷಶಿಲೆಯಲ್ಲಿ ನೀಡುವ ಉಪನ್ಯಾಸ’ವೆನ್ನುವುದು ಹಲವು ಅರ್ಥಗಳಲ್ಲಿ ಕೆ ಪಿ ರಾಯರು ಸಂವಾದವನ್ನು ಅರ್ಥೈಸುವ ರೀತಿಗೊಂದು ರೂಪಕ. ಇಲ್ಲಿ ಅವರಿಗೆ ಹೇಳುತ್ತಿರುವ ಕಥೆಗಿಂತಲೂ ಕಥೆಗೆ ಕಾರಣವಾದ ಭಾಷಾಪರಂಪರೆಯ ಕುರಿತು ಮತ್ತು ಪರಂಪರೆಯನ್ನು ಪ್ರಶ್ನಿಸುವ ‘ಅಪಾಣಿನೀಯ’ ನಿರಾಕರಣೆಯ ಕುರಿತು ಕುತೂಹಲವಿದ್ದಂತಿದೆ. ಕೆ ಪಿ ರಾಯರು ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡ೦ತೆ ‘ಈ ನೀಳ್ಗತೆಯು ಒಂದು ಕಥೆ ಅಲ್ಲ. ಭಾಷೆಯ ಮೇಲೆ ಬರೆದ ಪ್ರಬಂಧದ ಅಕ್ಷರರೂಪ.’ ‘ಪ್ರದರ್ಶನಕ್ಕಾಗಿ ಪ್ರಬಂಧಕ್ಕೆ ಬೇರೆಬೇರೆ ರೀತಿಯ ಅಲಂಕಾರಗಳನ್ನು ಮಾಡಬೇಕಾಯಿತು. ಉಡುಗೆ ತೊಡುಗೆಗಳನ್ನು ಸೇರಿಸಬೇಕಾಯಿತು’ ಎನ್ನುವ ಲೇಖಕರು ಈ ಕೃತಿಯಲ್ಲಿ ‘ನಿರುಪಾಧಿಕ (absolute) ಸತ್ಯವೆನ್ನುವುದು ಒಂದು ತಾತ್ಕಾಲಿಕ ಭ್ರಮೆ’ ಎಂಬ ಸತ್ಯ(!)ವನ್ನು ಹೇಳಲು ಪ್ರಯತ್ನಿಸಿದ್ದಾರೆ. ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ವಿಶಿಷ್ಟವಾದ ಪ್ರಯತ್ನವೇ. ಆಕ್ಸ್‌ಫರ್ಡ್ ವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದ ಭಾರತೀಯ ಮೂಲದ ಪ್ರೊಫೆಸರ್ ಶಂಭು ಮಹಾಜನರು ನಿವೃತ್ತರಾಗಿ ಯಾವಜನಸಂಪರ್ಕವನ್ನೂ ಬಯಸದೆ ಒಂಟಿಯಾಗಿ ನೆಲೆಸಿದ್ದರು ಎಂಬಲ್ಲಿಂದ ಈ ಕತೆ ಆರಂಭವಾಗುತ್ತದೆ. ಪ್ರೊ. ಶಂಭು ಮಹಾಜನರನ್ನು ತಕ್ಷಶಿಲಾ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿರುವ ಭಾಷಾಶಾಸ್ತ್ರದ ವಿಶ್ವಸಮ್ಮೇಳನದ ಸರ್ವಾಧ್ಯಕ್ಷ ಪದಕ್ಕೆ ಆಹ್ವಾನಿಸುತ್ತಿರುವ ಅಲ್ಲಿನ ಕಂಪ್ಯೂಟರ್ ಭಾಷಾಶಾಸ್ತ್ರದ ಪ್ರೊಫೆಸರ್ ಡಾ. ಮಹಮದಾಲಿಯು ಒಂದುಕಾಲದಲ್ಲಿ ಶಂಭುಮಹಾಜನರ ಶಿಷ್ಯನಾಗಿದ್ದವನು. ‘ಭಾರತದ ಭಾಷೆಗಳ ಮೇಲೆ ವೇದಗಳ ಭಾಷಾರಚನೆಯ ಪ್ರಭಾವ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿ, ಆಕ್ಸ್‌ಫರ್ಡ್ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ನಿವೃತ್ತರಾಗಿರುವ ಶಂಭುಮಹಾಜನರಿಗೆ ಈಗ ವಯಸ್ಸು ೭೨. ಮರಾಠಿ/ಹಿಂದಿಯಲ್ಲಿ ಬಾಹತ್ತರ ಎಂದರೆ ೭೨. ಬೇಂದ್ರೆಯವರ ‘ಬಾ ಹತ್ತರ’ವನ್ನು ನೆನಪಿಸುವ ೭೨. ಈ ವಯಸ್ಸಿನಲ್ಲಿ ಭಾರತದ ಭೂಖಂಡ ತನ್ನನ್ನು ಮಹಮದಾಲಿಯ ಮೂಲಕ ಬಾ ಹತ್ತಿರ ಎಂದು ಕರೆಯುತ್ತಿದೆಯೆ? ಆ ನೆವದಲ್ಲಿ ಅವರಿಗೆ ಮಂಗಳೂರು ಗುರುಪುರದ ಸಮೀಪದ ತಮ್ಮ ಹುಟ್ಟೂರು ಕರೆಯುತ್ತಿದೆ ಎನ್ನಿಸಿ, ಹುಟ್ಟೂರಲ್ಲಿ ಒಂದುವಾರವಿದ್ದು ಇಸ್ಲಾಮಾಬಾದಿಗೆ ಪಯಣಿಸುವ ಯೋಜನೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಸುಮಾರು ನಲವತ್ತು ವರ್ಷಗಳ ಹಿಂದೆ ಸೌರಯುಗಾದಿಯ ಮುನ್ನಾ ದಿನ ಹುಟ್ಟೂರಿಗೆ ಬಂದಿದ್ದವರು, ಸಂಪ್ರದಾಯನಿಷ್ಠ ತಂದೆ ತಾಯಿಯರಲ್ಲಿ ತನ್ನ ಸಹೋದ್ಯೋಗಿ ಕಾರ್ನೇಲಿಯಾ ಎಂಬ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗುವ ನಿರ್ಣಯವನ್ನು ಹೇಳಿಕೊಂಡು, ತಂದೆಯ ಕೋಪಕ್ಕೆ ಕಾರಣರಾಗಿ, ಲಂಡನ್ನಿಗೆ ಹಿಂದಿರುಗಿದವರು. ಊರಿನ ಮನೆಯಲ್ಲಿ ಕಳಚಿಟ್ಟ ಕೋಟಿನ ನೆನಪಿಲ್ಲದವನಂತೆ’ ಹುಟ್ಟೂರಿನ ಋಣ ಕಡಿದುಕೊಂಡು ಪರದೇಶವನ್ನು ಸ್ವದೇಶವೆಂದು ಎಣಿಸಿಕೊಂಡಿದ್ದವರು ಸುದೀರ್ಘಕಾಲದ ಬಳಿಕ ಹುಟ್ಟೂರನ್ನು ನೆನಪಿಸಿಕೊಂಡಿದ್ದರು. ಶಂಭುಮಹಾಜನರು ವಿಮಾನಮಾರ್ಗವಾಗಿ ಲಂಡನ್‌ನಿಂದ ಮುಂಬೈ ಮೂಲಕ ಹುಟ್ಟೂರು ತಲುಪಿ, ಅಲ್ಲಿಂದ ವಿಮಾನಮೂಲಕ ಲಾಹೋರ್ ತಲುಪಲು ಯೋಜಿಸಿದ್ದರಾದರೂ ಕೊನೆಯ ಕ್ಷಣದಲ್ಲಿ ವಿಮಾನದ ಬದಲು ಟ್ರೈನಿನಲ್ಲಿ ಪಯಣಿಸುತ್ತಾರೆ. ನೂರು ವರ್ಷಗಳ ಹಿಂದೆ ಬ್ರಿಟಿಷ್ ಇಂಡಿಯಾದ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯದ ಮಂಗಳೂರಿನಿಂದ ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯದ ಪೇಶಾವರಗಳ ನಡುವೆ ಓಡುತ್ತಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ಎಂಬ ಟ್ರೈನಿನ ಶತಮಾನದ ನೆನಪಿಗೆ ಎರಡೂ ದೇಶಗಳು ಪ್ರಾಯೋಗಿಕವಾಗಿ ಓಡಿಸಹೊರಟ ವಿಶೇಷ ರೈಲಿನಲ್ಲಿ ತಕ್ಷಶಿಲೆ ತಲುಪುವ ಅವಕಾಶವನ್ನು ಅವರು ಬಳಸಿಕೊಳ್ಳುತ್ತಾರೆ. ಚಾರಿತ್ರಿಕ ಸಂಗತಿಯನ್ನು ಬದಿಗಿಟ್ಟುನೋಡಿದರೆ ಈ ಜಿ. ಟಿ. ಎಕ್ಸ್‌ಪ್ರೆಸ್ ಕೆ ಪಿ ರಾಯರು ಹೇಳುವ ಕಥೆಯ ಮೂಲಸ್ರೋತಕ್ಕೊಂದು ವಿನಮ್ರ ರೂಪಕದಂತಿದೆ. ಕಿರು ಅವಧಿಯಲ್ಲಿ ಘಟಿಸುವ ಕತೆಗೆ ಸಮಾನಾಂತರವಾಗಿ ಶಂಭುಮಹಾಜನರು ನೆನಪಿಸಿಕೊಳ್ಳುವ ಅವರ ಪೂರ್ವಜರ ಕಥೆ ಹಾಗೂ ಅದಕ್ಕೆ ಪೂರಕವಾದ ಮೇಲ್ಪತ್ತೂರು ನಾರಾಯಣ ಭಟ್ಟತಿರಿಪಾದರ ಕಥೆ ಮತ್ತು ತಕ್ಷಶಿಲೆಯಲ್ಲಿ ಶಂಭುಮಹಾಜನರು ಕನಸುವ ೨೪೨೨ ವರ್ಷಗಳ ಹಿಂದಿನ ಕೌಟಿಲ್ಯರು ಸಂಪಾದಿಸಿದ ಮೂರುದಿನಗಳ ವಿಚಾರ ಸಂಕಿರಣದ ವರದಿಗಳು ಕಾದಂಬರಿಯ ಮೂರು ಭಾಗಗಳಲ್ಲಿ ಮಂಡಿಸಲ್ಪಟ್ಟಿವೆ. ಮೂರು ಪ್ರತ್ಯೇಕ ಕಾದಂಬರಿಗಳಾಗಬಲ್ಲ ಕಥನವನ್ನು ಜೊತೆಗೂಡಿಸುವ ಭಾಷೆಯ ಬಹುತ್ವದ ಕುರಿತ ಜಿಜ್ಞಾಸೆ ಮತ್ತು ಭಾಷಾ ವೈವಿದ್ಯದ ಅನನ್ಯತೆಯ ಕುರಿತ ಸಂವಾದದಂತಹ. ಡ್ರೈ ವಿಷಯವನ್ನು ಕೆ ಪಿ ರಾಯರು ಜಾಣ್ಮೆಯಿಂದಲೇ ಪ್ರಸ್ತುತಪಡಿಸುತ್ತಾರೆ. ಕಾದಂಬರಿಯ ಮೊದಲ ಭಾಗದಲ್ಲಿ ಕೆ ಪಿ ರಾಯರು ತಮ್ಮ ಹುಟ್ಟೂರಿಗೆ ಸನಿಹದ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿದ್ದ ಉದಾರಮನೋಭಾವದ ವಿದ್ಯಾದಾನ, ಅಕ್ಷರಪ್ರಜ್ಞೆ ತಮ್ಮವರೆಗೆ ಹರಿದುಬಂದು ತಮ್ಮಂತಹ ಹಲವರನ್ನು ಉದ್ಧರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಶಿಕ್ಷಣ ಕ್ರಮದ ವಿಶ್ಲೇಷಣೆಯನ್ನು ನಡೆಸುತ್ತಾರೆ. ‘ಕಂಬಳದ ಕಪ್ಪೆಗೆ ಆಕ್ಸ್’ಫರ್ಡಿನ ಜ್ಞಾನಸಮುದ್ರದಲ್ಲಿ ಮುಕ್ತವಾಗಿ ವಿಹರಿಸುವ ಅವಕಾಶ ಪ್ರಾಪ್ತವಾಗಲು ಕಾರಣವಾದ ಶಿಕ್ಷಣಕ್ರಮದಲ್ಲಿನ ಬದಲಾವಣೆಯ ಪ್ರಸ್ತಾಪಮಾಡುತ್ತಾ ಅವರಿಲ್ಲಿ ಪಂಜೆ ಮಂಗೇಶರಾಯರು ಆಗುಮಾಡಿಕೊಟ್ಟ ‘ಹಳೆಯ ಕನ್ನಡದ ಬೇರಿನ ಮೇಲೆ ಹೊಸ ಇಂಗ್ಲೀಷಿನ ಚಿಗುರಿನ ಕಸಿ’ಯನ್ನು ನೆನಪಿಸುತ್ತಾರೆ. ಕಾದಂಬರಿಯ ಎರಡನೆಯ ಭಾಗದಲ್ಲಿ ಜಿ.ಟಿ ಎಕ್ಸ್‌ಪ್ರೆಸ್ ಟ್ರೈನ್ ಪ್ರಯಾಣದ ಅನುಭವ ಒಂದು ಅನುಭೂತಿಗೆ ಕಾರಣವಾಗುವ ಕಥೆ ಬರುತ್ತದೆ. ಟ್ರೈನು ದಕ್ಷಿಣದಿಕ್ಕಿಗೆ ಹೋಗತೊಡಗಿದಾಗ ಪ್ರೊ. ಮಹಾಜನರಿಗೆ ತಮ್ಮ ಅಜ್ಜನ ಕಥೆಗಳ ನೆನಪಾಗುತ್ತದೆ. ಅವರ ಕಾಲದಲ್ಲಿ ಅಧ್ಯಯನವೇ ಜೀವನ ಎಂದುಕೊಂಡವರಿಗೆ ದಕ್ಷಿಣದ (ಕೇರಳದ) ಕಡೆಗೆ ಹೋಗುವುದು ಅನಿವಾರ್ಯವಾಗಿತ್ತು. ಅವರ ಮೊಮ್ಮಗನಾದ ತಾವು ಕಲಿಯಲು ಹೋಗಿದ್ದು ಉಳಿದ ದಿಕ್ಕುಗಳಿಗೇ ಆದರೂ ಈಗ ಉತ್ತರಕ್ಕೆ ದಕ್ಷಿಣದ ಮೂಲಕ ಹೋಗುವಂತಾಗಿದೆ. ಕಾದಂಬರಿಯ ಮೂರನೆಯ ಭಾಗ ವೈಚಾರಿಕ ದೃಷ್ಟಿಯಿಂದ ಮಹತ್ವವಾದುದು. ಅಲ್ಲಿ ಪಂಡಿತರ ವಾಕ್ಸಮರಗಳ ಮೌಖಿಕ ಪರಂಪರೆಯ ಅನಾಹುತಗಳ ಪ್ರಸ್ತಾಪ ಬರುತ್ತದೆ. ‘ಸೋತವನ ವಿದ್ವತ್ತಿಗೆ ಬೆಲೆಕೊಡದೇ ಪರಾಜಿತನನ್ನು ಅವಮಾನಿಸಿ ದಂಡಿಸುವುದು ಕೊನೆಯಾಗಬೇಕು. ಸಮರದ ಬದಲಿಗೆ ಸಹಮತ, ವಾಗ್ವಾದದ ಬದಲು ಸಂವಾದ ಸಾಧ್ಯವಾಗಬೇಕು. ಗುಣಗಳು ಉಳಿಯಬೇಕು. ದೋಷಗಳನ್ನು ಸುಧಾರಿಸುವ ಅವಕಾಶವಿರಬೇಕು’ ಎನ್ನುವ ತರ್ಕ ಇಲ್ಲಿ ಕಾಣಿಸುತ್ತದೆ. ಅಗ್ನಿಪೂಜಕ ವೈದಿಕರ ಭಾಷೆ ಮತ್ತು ಅಲೆಮಾರಿ ಕಿರಾತಕರ ಭಾಷಾ ವೈವಿದ್ಯಗಳ ಹೋಲಿಕೆಯ ಮೂಲಕ ‘ಜೀವನಶೈಲಿಯು ಭಾಷೆಯ ಬಂಧವನ್ನು ನಿಶ್ಚಯಿಸುತ್ತದೆ’ ಎಂಬ ತರ್ಕವೂ ಇಲ್ಲಿ ಬರುತ್ತದೆ. ಭಾಷಾವೈವಿಧ್ಯದ ಅನನ್ಯತೆಯ ವಿಚಾರವೂ ಪ್ರಸ್ತಾಪಿತವಾಗುತ್ತದೆ. ಮನನೀಯವಾದ ಮಾತೊಂದು ಈ ಭಾಗಕ್ಕೆ ಶೋಭೆ ಕೊಡುತ್ತದೆ, "ನಮ್ಮ ಸಂಪ್ರದಾಯದಲ್ಲಿ ನಾವು ಯಾವುದನ್ನೂ ಅಂತಿಮ ಉತ್ತರ ಎಂದು ಭಾವಿಸುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಮಾತುಗಳು ಬದಲಾಗುವಂತೆ ಉತ್ತರಗಳೂ ಬದಲಾಗುತ್ತವೆ. ನಾಳೆ ಇದೇ ವಿಷಯ ಮಾತನಾಡಿ ಎಂದರೆ ನಮ್ಮ ಕತೆ ಬೇರೆಯೇ ಇರಬಹುದು. ಭವಿಷ್ಯದಲ್ಲಿ ಏನಿರಬಹುದು ಎಂಬುದು ನಮಗೂ ತಿಳಿದಿಲ್ಲ. ಇದೇ ಮಾನವ ಸೃಷ್ಟಿಯ ವೈಚಿತ್ರ್ಯ ಮತ್ತು ಸೌಂದರ್ಯ." ಆದರೆ ಇಲ್ಲಿ ಕಾದಂಬರಿಯು ಕಥನ ಸ್ವರೂಪದಿಂದ ಪ್ರಬಂಧ ಸ್ವರೂಪದತ್ತ ವಾಲಿಕೊಳ್ಳುವ ಅಪಾಯವನ್ನು ಅಲ್ಲಗೆಳೆಯುವಂತಿಲ್ಲ. ಒಂದು ಗಹನವಾದ ಸಂಪ್ರಬಂಧದಂತಿರುವ ಇಲ್ಲಿನ ವೈಚಾರಿಕ ವಿಶ್ಲೇಷಣೆಗಳ ನಡುವೆ ಕೆ ಪಿ ರಾಯರು ನೆನಪಿಸಿಕೊಳ್ಳುವ ಹಲವು ತಮಾಶೆಯ ಸಂಗತಿಗಳು ಗಂಭೀರಸ್ವಭಾವದ ಲೇಖಕರೊಳಗಿನ ತುಂಟತನವನ್ನು ಪರಿಚಯಿಸುತ್ತವೆ. ಉದಾಹರಣೆಗೆ: (೧) ಪ್ರತಿದಿನ ಸಂಜೆ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿದ ಮೇಲೆ ಮನೆಯವರೆಲ್ಲರೂ ಮನೆಮಾತಿನಲ್ಲಿ ತಮ್ಮತಮ್ಮ ಅಹವಾಲುಗಳನ್ನು ದೇವರಿಗೆ ಸಾದರಪಡಿಸುವುದು ನಿತ್ಯಕರ್ಮವಾಗಿತ್ತು. ಅವರ ನೆರಮನೆಯ ಪ್ರಭುಗಳ ಪುಟ್ಟಮಗಳು, ಶಂಭುವಿನ ಮನೆದೇವರ ಭಾಷೆ ಬೇರೆಯಾದದ್ದರಿಂದ, ತನ್ನಮನೆಮಾತು ಕೊಂಕಣಿಯಲ್ಲಿದ್ದರೆ ಈ ದೇವರಿಗೆ ತಿಳಿಯುವುದೋ ಇಲ್ಲವೋ ಎಂಬ ಸಂಶಯದಿಂದ ತುಳುವಿನಲ್ಲೇ ಅಹವಾಲು ಸಲ್ಲಿಸುತ್ತಿದ್ದಳು. ದೇವರಿಗೆ ಎಲ್ಲಾ ಭಾಷೆಗಳು ತಿಳಿಯುವುದೇ ಇಲ್ಲವೇ ಎಂಬ ಶಂಭುವಿನ ಸಂಶಯಕ್ಕೆ ಇನ್ನೂ ಸಮಾಧಾನ ದೊರಕಿಲ್ಲ. (೨) ಶಂಭುಮಹಾರಾಜರ ಹೆಂಡತಿ ತನ್ನ ಮಾತೃಭಾಷೆ ರೊಮಾನಿಯನ್ ನಲ್ಲಿ ನಾಯಿ ವಿಕ್ಟರ್ ನ ತಾಯಿಯ ಜೊತೆ ಮಾತನಾಡುತ್ತಿದ್ದಳು. ಈಗ ನಾಯಿಮರಿ ವಿಕ್ಟರ್, ರೊಮಾನಿಯನ್ ಭಾಷೆಯಲ್ಲಿ ‘ತಿನ್ನು ಮುದ್ದು ಹುಡುಗಾ ತಿನ್ನು’ ಎಂದರೆ ಮಾತ್ರ ಊಟಮಾಡುತ್ತದೆ. ವಿಕ್ಟರನ ಮಾತೃಭಾಷೆ ರೊಮಾನಿಯನ್! (೩) ಪ್ರೊಫೆಸರರನ್ನು ಶಾಲೆಗೆ ಸೇರಿಸುವಾಗ ಅವರ ಅಪ್ಪ ಶಾಲೆಯ ರಿಜಿಸ್ಟರಿನಲ್ಲಿ ಮಾತೃಭಾಷೆ ಕನ್ನಡ ಎಂದು ಬರೆಸಿದ್ದರು. ಆದರೆ ತಾಯಿ ಕಾತ್ಯಾಯಿನಿಗೆ ತಿಳಿಯುತ್ತಿದ್ದ ಭಾಷೆ ಮರಾಠಿ ಒಂದೇ. ಭಾಷೆಯ ಕುರಿತು ಕೆ ಪಿ ರಾಯರು ಒಂದು ಮನೋಜ್ಞವಾದ ಸಂದೇಶವನ್ನು ನೀಡುತ್ತಾರೆ. "ವಿದ್ಯೆ ಮತ್ತು ಜ್ಞಾನಾರ್ಜನೆ ಎಲ್ಲರಿಗೂ ಎಟುಕಬಲ್ಲ ಸೊತ್ತಾಗುತ್ತಿರುವ ಈ ಕಾಲದಲ್ಲಿ... ವಸ್ತುವಿನ ವಿಷಯದ ಅರಿವಾಗಬೇಕಾದರೆ ಹಿಂದಿನವರಂತೆ ವಿವರವಾದ ಭಾಷ್ಯಗಳನ್ನೋ ಟೀಕೆಗಳನ್ನೋ ಟಿಪ್ಪಣಿಗಳನ್ನೋ ಅನುಸರಿಸುವ ಮುನ್ನ ವಸ್ತುವಿನ ಮೇಲೆ ಪ್ರೀತಿ ಹುಟ್ಟಿಸುವ ಮತ್ತು ಕುತೂಹಲಮೂಡಿಸುವ ಪ್ರವೇಶಿಕೆಗಳನ್ನು ರಚಿಸಬೇಕಾಗುತ್ತದೆ... ಅಗತ್ಯಕ್ಕಿಂತ ಹೆಚ್ಚು ಶುಷ್ಕ ಪಾಂಡಿತ್ಯದಲ್ಲಿ ತಲೆಕೆಡಿಸಿಕೊಳ್ಳದೆ ಆಹ್ಲಾದಕರವಾದ ಭಾಷೆಯಲ್ಲಿ ಕಾವ್ಯಾತ್ಮಕವಾಗಿ ಅದು ರಚನೆಯಾಗಬೇಕೆಂದು ನನ್ನ ಬಯಕೆ." ಅದು ಈ ಕಾದಂಬರಿಯಲ್ಲಿ ಬಹುತೇಕ ಸಾಧ್ಯವೂ ಆಗಿದೆ. ***

ಕನಕ -, ಕೃಷ್ಣ..ಸವಿತಾ ನಾಗಭೂಷಣ -/ನಾದ ಮಣಿನಾಲ್ಕೂರು