Powered By Blogger

Saturday, April 30, 2022

ರಹಮತ್ ತರೀಕೆರೆ - ಕಸ್ತೂರಿ ಬಾಯರಿ [ ಸಂದರ್ಶನ }

ಮಾತುಕತೆ: `ಆರ್ದ್ರತೆಯಿಲ್ಲದೆ ದೊಡ್ಡ ಸಾಹಿತ್ಯ ಹುಟ್ಟಲ್ಲ' - ಕಸ್ತೂರಿ ಬಾಯರಿ(1956-2022) *ನಿಮ್ಮ ಕುಟುಂಬ ಕರಾವಳಿಯಿಂದ ಬದಾಮಿಗೆ ಯಾಕಾಗಿ ಬರಬೇಕಾಯಿತು? ತಾಯಿ ಟಿಬಿಯಾಗಿ 33ನೇ ವಯಸ್ಸಿಗೇ ಹೋಗಿಬಿಟ್ಟಳು. ಅಪ್ಪಯ್ಯ ಐದು ಮಕ್ಕಳನ್ನು ಕರಕೊಂಡು ಇಲ್ಲಿಗೆ ಬಂದರು. ಸಣ್ಣದೊಂದು ಚಾದಂಗಡಿ ಇಟ್ಟರು. ಅವರು ಊರಲ್ಲಿದ್ದಾಗ ಸಾಲಿಗೆ ಹೋಗೊ ಮುಂದ `ಎಸ್ಸಿ ಮಂದಿ ಬಂದಾರ. ಮುಟ್ತಾರ' ಅಂತ ಮನಿಗೆ ಓಡಿ ಬಂದಿದ್ದರಂತೆ. `ಆ ಕಾಲ ಹಂಗಿತ್ತವ್ವ' ಅನ್ನೋರು. ಈಗ ಎಲ್ಲಾ ಜಾತಿ ಮಂದಿ ಚಾ ಕುಡದ ಕಪ್ಪುಬಸಿ ತೊಳೀತಿದ್ದರು. ಮನೀಗೆ ಯಾರಾದರೂ ದಲಿತರು ಬಂದರ ಬ್ಯಾಡ ಅಂತಿದ್ದಿಲ್ಲ. ಧರ್ಮ ಅನ್ನೋದು ಅಡಿಗೆ ಮನೀಗಷ್ಟೇ ಇರಬೇಕು ಅಂತಿದ್ದರು. ಮುಕ್ತಿಸಾಧನೆಗೆ ಅಂತ ಸಾಧು ಸಂತರು ಜಟಾಧಾರಿಗಳ ಕೂಡ ಅಡ್ಡಾಡತಿದ್ರು. *ಬದಾಮಿಯ ಮೊದಲ ದಿನ ಹೇಗಿದ್ದವು? ಬಜಾರದಾಗ ಒಂದು ಖೋಲಿಯಾಗ ಇದ್ದಿವಿ. ಟಾಯ್ಲೆಟಿಲ್ಲ. ನೀರಿಲ್ಲ. ಆ ಹೊಲಸು ಈಗಲೂ ಕನಸ್ನಾಗ ಕಾಡ್ತದರಿ. ನಮ್ಮಜ್ಜಯ್ಯನ ಮನ್ಯಾಗ ಮೆತ್ತನ್ನ ಅನ್ನ ತಿಂದು ಬೆಳದೋರು. ಬರದಗುಡ್ಡಕ್ಕೆ ಬಂದು ಬಿದ್ದಿದ್ವಿ. ಹೊಲಗೆಲಸ ಮಾಡಾಕೆ ಬರ್ತಿದ್ದಿಲ್ಲ. ಅವರಿವರು ಕೊಟ್ಟ ಒಣಾರೊಟ್ಟಿ ತಿನ್ನಕಾಗ್ತಿದ್ದಿಲ್ಲ. ಸಜ್ಜಿಹಿಟ್ಟು ಕಲಸಿ ದೋಸೆ ಮಾಡ್ತಿದ್ದಿವಿ. ದಂದಕ್ಕಿಯೊಳಗ ದನ ಮೇದುಬಿಟ್ಟ ಜ್ವಾಳದಗಡ್ಡಿ ತಂದು ಒಲೆ ಹಚ್ಚತಿದ್ದಿವಿ. ಎಸೆಸೆಲ್ಸಿ ಪಿಯುಸಿ ತನಕ ರೋಡ್ ಲೈಟಿನೊಳಗ ಓದಿದಿವಿ. ರೋಹಿಣಿಗೆ ಸರ್ಕಾರಿ ನೌಕರಿ ಬರೋತಂಕ ನಾವು ಸರಿಯಾಗಿ ಊಟಾನೇ ಮಾಡಲಿಲ್ಲ. *ಇಲ್ಲಿನ ಜನ ನಿಮ್ಮನ್ನು ಹೇಗೆ ಸ್ವೀಕರಿಸಿದರು? ಏ, ಬಾಯರಿ ಮೇಡಂ ಅಂದರ ಅಷ್ಟು ಪ್ರೀತಿರಿ. ನಮ್ಮ ತಮ್ಮ ಒಂದು ಸಲ ಕೊರೊನಾ ಟೈಮನಾಗೆ ಬಂದಿದ್ದ. ಪೋಲೀಸರು ಚೆಕ್ ಪೋಸ್ಟಿನ್ಯಾಗ ತಡದರಂತ, ಮಾಸ್ಕ್ ಹಾಕಿಲ್ಲ ಅಂತ. `ಇಲ್ರೀ, ನಾವು ಬಾಯಿರಿ ಮೇಡಂ ಮನೀಗೆ ಹೊಂಟೀವಿ' ಅನ್ನಾಣ, `ಬಾಯಿರಿ ಮೇಡಂ ಮನೀಗ? ಹೋಗರಿ ಹೋಗರಿ' ಅಂದರಂತ. `ಲಾ ಇವನ! ಈಕಿಗಿ ಪೋಲೀಸ್ ಡಿಪಾರ್ಟಮೆಂಟಿನ್ಯಾಗೂ ಶಿಷ್ಯರದರಾಲ್ಲ' ಅಂತ ಆಶ್ಚರ್ಯಪಟ್ಟ ಅವನು. *ಬದಾಮಿ ಸೀಮೆಯ ವಿಶೇಷತೆಯೇನು? ಇಲ್ಲಿ ಮಣ್ಣು ಗಾಳಿ ಎಷ್ಟು ಛಲೋ ಅದೇರಿ. ಬಸವಣ್ಣ ಆಳಿದ ಈ ನಾಡದ್ಯಲ್ಲ, ಭಾಳ ಒಳ್ಳೇ ನಾಡು. ಅವನ ಜಂಗಮ ತತ್ವ ಏನದ್ಯಲ್ಲ ವಂಡರಫುಲ್. ಇಲ್ಲಿನ ಜನ ಹಡಸೀಮಗನ, ಬೋಸುಡಿಕೆ, ನಿನ್ನೌನ, ಹುಚ್ಚುಪ್ಯಾಲಿ ಅಂತ ಬೈದಾಡ್ತಾರ. `ಏ ಕಸಬರಗಿ, ಬಾಯಿಲ್ಲಿ' ಅಂತ ತಾಯಿ ಮಗನ್ನ ಕರೀತಾಳ. ಗೆಳೆಯರು `ಏ ಹುಚ್ಚಬರಗಿ ಅದೀಯಲೇ ಮಗನಾ' ಅಂತಾರ. ಬೇಕಾದ್ದು ಜಗಳಾಡಲಿ, ಮತ್ತ ತೆಕ್ಕೆಬಡದು ಒಂದಾಗಿ ಬಿಡ್ತಾರ. ನಮ್ಮನೀಗೆ ಒಬ್ಬಾಕಿ ಮುಸಲೋರ ಹೆಂಗಸು, ಬಾಗವಾನರಾಕಿ ಹೂ ಮಾರಕೊಂಡು ಬರತಾಳ. ಒಂದಿವಸ `ಎಷ್ಟು ಮಕ್ಕಳಬೇ?' ಅಂತ ಕೇಳಿದೆ. `ಮೂರು' ಅಂದಳು. `ಲಗ್ನ ಎಲ್ಲಿಗೆ ಮಾಡಿಕೊಟ್ಟಿ?' ಅಂದೆ. `ಇಲ್ರೀ, ಹಿರೇಮಗಳ ನರ್ಸಿಂಗ ಮುಗಿಸ್ಯಾಳರಿ, ಬಿಎಎಂಎಸ್ ಗೆ ಹಚ್ಚೀನ್ರಿ. ಎರಡನೇ ಮಗಳು ಪ್ಯಾರಾ ಮೆಡಿಕಲ್ ಓದಲಿಕ್ಕೆ ಹತ್ಯಾಳ. ಮೂರನೇ ಮಗಳು ಬಿಎಸ್ಸಿ ಅಗ್ರಿ' ಅಂದಳು. ಎದೆ ಝಲ್ ಅಂದುಬಿಡ್ತು. ಬರೇ ಹೊಲದಾಗ ಕೂಲಿ ಮಾಡಿ ಓದಿಸ್ಯಾಳ, ವರ್ಷಕ್ಕ ಒಂದೊಂದ ಲಕ್ಷ ಫೀಸು ತುಂಬಿ. ಮತ್ತ ಮೂರೂ ಮಂದಿ ಮೆರಿಟಿನ್ಯಾಗ ಸೀಟು ತಗೊಂಡಾರ. `ಭೂಮಿತಾಯೀಗೆ ನನ್ನ ಬಣ್ಣ ಕೊಟ್ಟೀನ್ರಿ. ಆಕಿ ಬಣ್ಣ ನಾನು ತಂಗೊಂಡೀನ್ರೀ' ಅಂದಳು. ಈ ಭಾಷೆ ಈ ಜೀವನತತ್ವದ ಮುಂದೆ ಯಾವ ಭಗವದ್ಗೀತೆ ರಾಮಾಯಣಾರಿ? ಮೂರು ಹೆಣ್ಮಕ್ಕಳನ್ನ ಓದಸೋದು ಕಮ್ಮಿಯೇನರಿ? ಇಲ್ಲಿನ ಮಂದಿ ಓಪನ್. ಪ್ರಾಮಾಣಿಕರು. ಹೆಣ್ಮಕ್ಕಳಲ್ಲಿ ನಾವು ಕಂಡಿದ್ದು ಪಾಸಿಟಿವಿನೆಸ್. ಗಂಡ ಕುಡುಕಿರಲಿ ಹಡಕಿರಲಿ ಬೇಕಾದ್ದಿರಲಿ. `ನಮ್ಮ ರಟ್ಯಾಗ ಶಕ್ತಿ ಐತಿ, ದುಡದ ತಿಂತೀವಿ ಬಿಡ್ರಿ' ಅಂತಾರ. `ದುಡಕೊಂಡು ಒಯ್ದಿರ್ತೀವಿ. ಅದ್ರಾಗೂ ಕುಡಿಯಾಕ ರೊಕ್ಕ ಕೇಳ್ತಾರ ಭ್ಯಾಡ್ಯಾಗಳು' ಅಂತಾರ. `ಬಾಯಾರೇ, ನಿಮ್ಮ ಜಲಮ ತಣ್ಣಗೈತ್ರಿ. ಗಂಡರ ಕಾಟಿಲ್ಲ, ಮುಂಜಾಲೆದ್ದು ನಿಮ್ಮ ಮಾರಿ ನೋಡಬೇಕ್ರಿ. ನಮಗ ಮೊದಲೇ ತಿಳೀಲಿಲ್ಲರಿ. ನಿಮ್ಮಂಗ ಇರತಿದ್ದಿವಿ' ಅಂತಾರ. ಮಾತು ಕೃತಿ ಆಚರಣೆ ವೈವಿಧ್ಯತೆ ಎಲ್ಲವೂ ಅವರ ಜೀವನದೊಳಗದ. ಸಾಮಾನ್ಯ ಜನಪದರು ಬಳಸೋ ಭಾಷೆ ಅದೆಯಲ್ಲ, ಅದು ನಿಜವಾದ ಜೀವಂತಿಕೆಯ ಭಾಷೆ. ಭಾಷೆ ಹೇಳಿಕೊಟ್ರೆ ಬೆಳೆಯೋಲ್ಲ. ತಾನಾ ಭೂಮಿಯಿಂದ ಅರಳಬೇಕು. ಲೇಖಕರಾದವರು ಜನಪದದೊಳಗೆ ಬೆರೀಬೇಕು. ಆಮೇಲೆ ಪ್ರಜ್ಞೆಯಿಟ್ಟುಕೊಂಡು ಬರೀಬೇಕು. *ನೀವು ರಂಜಾನ ಕೊರ್ತಿ ಅನ್ನೋ ಹುಡುಗನ್ನ ಸಾಕಿದಿರಿ. ಅವನ ಮೇಲೆ ಕತೇನೂ ಬರೆದಿರಿ. ಅವನು ಸಾಯೊ ಕಾಲಕ್ಕ ದವಾಖಾನೆಗೆ ಖರ್ಚು ಮಾಡಿದಿರಿ. ಅವನ ವಿಶೇಷತೆಯೇನು? ಅಂವಾ ಪೇಪರ್ ಏಜೆಂಟಿದ್ದ. ಟಿ.ಎಸ್. ವೆಂಕಣ್ಣಯ್ಯನವರಿಂದ ಹಿಡಿದು ಇಲ್ಲೀತನಕ ಯಾರ್ಯಾರು ಬರದಾರ ಅಷ್ಟರದ್ದೂ ಓದಿದ್ದ. ನನಗೆ ಬೇಕಾದ ಪುಸ್ತಕ-ಪೇಪರ್ ಎಲ್ಲೇ ಇದ್ದರೂ ತಂದುಕೊಡ್ತಿದ್ದ. ತೇಜಸ್ವಿ- ಬೆಳಗೆರೇದು ಲೈನ್ ಲೈನ್ ಬಾಯಿಪಾಠ ಹೇಳ್ತಿದ್ದ. ಬೇಂದ್ರೆ ಕಾವ್ಯವಂತೂ ಬಾಯಾಗೇ ಇತ್ತು. ಥೇಟ್ ರಾಜಕುಮಾರ್ ಮಾತಾಡ್ದಂಗೇ ಮಾತಾಡೋನು. ``ಲೇ ಸಾಲೀ ಮುಂದೆ ಹಾಯ್ದಲೆ ಎಷ್ಟರ ಓದಕೊಂಡಿದ್ದಲೇ ಸೂಳೆಮಗನೆ'' ಅಂತಿದ್ದೆ ನಾನು. *ಲೇಖಕಿಯಾಗಿದ್ದಿರಿ, ಶಿಕ್ಷಕಿಯಾಗಿದ್ದಿರಿ. ಯಾವುದು ಹೆಚ್ಚು ಖುಶಿ? ಟೀಚರಾಗಿರ್ರಿ. ನನಗ ಮಕ್ಕಳಂದರ ಇಷ್ಟು ಪ್ರೀತಿರಿ. ಅಪ್ಪಯ್ಯನಿಗೆ ಹುಶಾರಿರಲಿಲ್ಲ. ಎಲ್ಲ ಮಾಡಿ ಎಂಟಕ್ಕ ಸಾಲಿಗೆ ಹೋಗತಿದ್ದೆ. ಆ ಹೊತ್ತಿಗೆ ಅವು ತಿಂಡಿ ತಿಂತಿರ್ತಾವ. ನಾನಿನ್ನೂ ಗೇಟನಾಗಿ ಇರತಿದ್ದೆ. ಓಡಿಬಂದು ತೆಕ್ಕೆ ಬಡೀತಿದ್ದವು. ಮಕ್ಕಳ ಲೋಕ ದೇವರಲೋಕ. ಅವು ಉಚ್ಚೆ ಕಕ್ಕ ಮಾಡಿದರೆ ತೊಳೀತಿದ್ದೆ. ನಮ್ಮ ಸಾಲಿಗೆ ಮಂದಿ `ಬೈರಿ ಮೇಡಂ ಸಾಲಿ' ಅಂತ ಕರೀತಿದ್ದರು. ಈಗಾದರೂ ಅವು ಲಗ್ನಕ್ಕ ಹೇಳಾಕ ಬರ್ತಾವ; ಹಡದರ ತೋರಸಾಕ ಬರ್ತಾವ; ಫಾರಿನ್ನಿಂದ ಬಂದಾಗ ಮನಿಗೆ ಬರ್ತಾವ. ಪುಸ್ತಕ ತರ್ತಾವ. *ಮಕ್ಕಳಿಗೆ ಇಂಗ್ಲೀಶ್ ಕಲಿಸುವಾಗ ಯಾವ ಸವಾಲು ಎದುರಿಸಬೇಕಾಯಿತು? ಹಿಸ್ಟರಿಯಾಗಲಿ ಪೊಯಟ್ರಿಯಾಗಲಿ, ಫಸ್ಟು ಕನ್ನಡದೊಳಗ ಹೇಳಿಬಿಡತಿದ್ದೆ. ಆಮೇಲೆ ಇಂಗ್ಲೀಶ್ ಪದಗಳಿಗೆ ಕನ್ನಡದರ್ಥ ಬರಸತಿದ್ದೆ. ಮಕ್ಕಳನ್ನು ಸ್ಟಿಮ್ಯುಲೇಟ್ ಮಾಡೋಕೆ ಕವಿತೆ ಓದಿತಿದ್ದೆ. ಪೇಪರ್ ಕಟಿಂಗ್ ತೋರಿಸತಿದ್ದೆ. ಎಸೆಸೆಲ್ಸಿಯೊಳಗ ನೈಂಟಿ ಮ್ಯಾಲೆ ತಗೀತಿದ್ದವು. ಇದನ್ನ ಕಾರಂತಜ್ಜರ ಹತ್ತರ ಹೇಳಿದೆ. `ಬರೋಬ್ಬರಿ ಐತೆ, ಮುಂದುವರೆಸು' ಅಂದರು. *ನಿಮ್ಮ ಹಿರೀಕರ ಬಗ್ಗೆ ಹೇಳಿರಿ. ನಮ್ಮ ಅಜ್ಜಯ್ಯ ಉಡುಪಿ ತಾಲೂಕು ಸಾಸ್ತಾನದವರು. ಅವರು ಕೇರಳದ ವೈನಾಡಿಗೆ ಕಾತ್ಯಾಯಿನಿ ದೇವಸ್ಥಾನದ ಪೂಜೆಗಂತ ಹೋದವರು. ಕಾಫಿ ಎಸ್ಟೇಟ್ ಮಾಡಿದ್ದರು. ಆನೆ ಸಾಕಿದ್ದರು. ಒಂದು ಗೊನೆಬಾಳೆ ಒಬ್ಬರೇ ತಿಂತಿದ್ರು. ಬಹಳ ದುಡಕೊಂಡು ಬಂದಿದ್ದರು. ಬೆಳ್ಳಿತಾಟಿನೊಳಗೆ ನೀರುಹಾಕಿ ನಕ್ಷತ್ರಗಳನೆಲ್ಲ ತೋರಿಸಿ ಮಗಳಿಗೆ ಊಟ ಮಾಡಿಸ್ತಿದ್ದರಂತ. ಅವರು ವಾಪಸು ಬಂದಾಗ ಕರ್ನಾಟಕ ಏಕೀಕರಣವಾಗಿತ್ತು. ಆ ವರ್ಷ ನಾನು ಹುಟ್ಟಿದೆ. ಕನ್ನಡ ಕಸ್ತೂರಿ ಅಂತ ಹೆಸರಿಟ್ಟರು. ಮನೇಲಿ ಎಲ್ಲರೂ ಅಚ್ಚಕನ್ನಡ ಆಡೋರು. ತಂತಮ್ಮೊಳಗೆ ಮಾತಾಡೊ ಮುಂದ ಮಲೆಯಾಳ ಬಳಸ್ತಿದ್ದರು. ನಾನು ಇವರೇನು ಬ್ಯಾರಿಗಳೇನು ಅಂತಿಳ್ಕೊಂಡಿದ್ದೆ ಸಣ್ಣಾಕಿ ಇದ್ದಾಗ. *ಅಪ್ಪ? ಅಪ್ಪ ಬಾರ್ಕೂರಿನವರು. ಸೀತಾನದಿ ಈಚಿಕಡಿ ಸಾಸ್ತಾನ ಪಾಂಡೇಶ್ವರ. ಆಚೆಕಡಿ ಬಾರ್ಕೂರು. ಬಾರ್ಕೂರಲ್ಲಿ ಅಪ್ಪಯ್ಯನ ತಾಯಿ ಇದ್ದಳು. ಬಡವಿ. ಅಲ್ಲಿ ಚಂದು ಅಂತ ಒಬ್ಬಿದ್ದಳು. ಆಕಿ ಗದ್ದೆಬಯಲು ಕಾಲುಸೇತುವೆ ಹೊಳೆ ದಾಟಿಸಿ ದೋಣಿಯೊಳಗೆ ಬಾರ್ಕೂರು ಮನಿಗೆ ಕರಕೊಂಡು ಹೋಗ್ತಿದ್ದಳು. ಬಾರ್ಕೂರಜ್ಜಿ ಮೊಮ್ಮಕ್ಕಳು ಬಂದಾವಂತ ಅಕ್ಕಿ ತೆಂಗಿನಕಾಯಿ ರುಬ್ಬಿ ಅಪ್ಪಂ ಮಾಡೋಳು. ದೋಣಿಗಂತ ನಾಕಾಣೆ ಕೊಡೋಳು. *ಸಾಹಿತ್ಯದ ಸಂಪರ್ಕ ಎಲ್ಲಿಂದ ಶುರುವಾಯ್ತು? ನಮ್ಮೂರಿಗೆ ಪಾಂಡೇಶ್ವರ ಹತ್ತರ. ಅಲ್ಲಿ ಪಿ. ಕಾಳಿಂಗರಾಯರ ಚಂದದ ಬಂಗಲೆಯಿತ್ತು. ಅವರು ಹಾಡ್ತಾರಂತ ಗೊತ್ತಿರಲಿಲ್ಲ. ಅವರ ಬಂಗಲೆ ಪಕ್ಕಾನೇ ಲೈಬ್ರರಿ. ಅಲ್ಲಿಂದ ಪದ್ಮಾ ಚಿಕ್ಕಿಗೆ ಕಾದಂಬರಿ ತರತಿದ್ದಿವಿ. ಚಿಕ್ಕಿ ಮಾತ್ರ `ಕಾದಂಬರಿ ಹುಚ್ಚಿದ್ದರೆ ಉಪ್ಪರಗಿ ಮೇಲೆ ಹೋಗಿ ಓದಿರಿ' ಅಂತಿದ್ಲು. ನಮ್ಮಜ್ಜಿ ನಮಗ ಕಾದಂಬರಿ ಓದೋಕೆ ಬಿಡ್ತಿದ್ದಿಲ್ಲ, ಮಕ್ಕಳ ತೆಲಿಕೆಡ್ತದ ಅಂತ. ನಮ್ಮೂರ ಬಾಜೂಕೇ ಕಾರಂತರ ಸಾಲಿಗ್ರಾಮ. ನಮ್ಮನ್ನ ಅಜ್ಜಿ ಅವರ ಮನೀಗೆ ಹೋಗಗೊಡತಿದ್ದಿಲ್ಲ, ಶೆಟ್ಟರನ್ನು ಲಗ್ನ ಆಗಿದ್ದರಲ್ಲ ಅವರು. `ಕೋಟದ ಕಾಕಿಗಳು' ಅಂತ ಆಡಕೊಳ್ತಿದ್ದಳು. *ನಿಮ್ಮದೊಂದು ಕಥಾಸಂಕಲನ ಚಿಕ್ಕಿಗೆ ಅರ್ಪಿಸಿದ್ದೀರಿ. ನಮ್ಮನ್ನ ಎಲ್ಲ ತರಹದಿಂದ ಬೆಳೆಸಿದೋಳು ಅವಳು. ಆಕಿ ಪತ್ರ ಬರೆಯೋದ ನೋಡಬೇಕು ನೀವು. ಯಾರು ಊರಿಗೆ ಬಂದರು, ಯಾರು ಅಮೇರಿಕಕ್ಕೆ ಹೋದರು, ಯಾರು ಇಂಟರಕಾಸ್ಟ್ ಮದುವೆಯಾದರು, ಯಾವ ಅಡಿಗೆ ಮಾಡಿದರು, ಯಾರು ಏನೇನು ತಿಂದರು-ಪ್ರತಿಯೊಂದು ಇಂಚಿಂಚು. ಈ ಫೋನ್ ಬಂದಿಂದೇ ಬರಿಯೋದ್ ಬಿಟ್ಟಳು. ಫೋನಲ್ಲಿ `ಮಕ್ಕಳೇ ಸರಿಯಾಗಿ ಮದ್ದು ತಗಳ್ರಿ, ಮಕ್ಕಳೇ ಅಲ್ಲಿಇಲ್ಲಿ ಹೋಗಬೇಡಿ, ಮಕ್ಕಳೇ ಜಾಸ್ತಿ ಸೊಪ್ಪು ತರಕಾರಿ ತಿನ್ರಿ' ಒಂದಾ ಎರಡಾ ಉಪದೇಶ? *ಬಾಲ್ಯದಲ್ಲಿ ಊರಿನ ಪರಿಸರ ಹೇಗಿತ್ತು? ಅಗ್ರಹಾರದಲ್ಲಿ ನಾವು ಬೆಳೆದಿದ್ದು. ನಮ್ಮಜ್ಜಿ ಭಯಂಕರ ಮಡಿ. ಆಕಿ ಟವೆಲ್ ಯಾರೂ ಯೂಸ್ ಮಾಡಂಗಿಲ್ಲ. ಬೆಡ್ ಮ್ಯಾಲ್ ಯಾರೂ ಕೂರಂಗಿಲ್ಲ. ಮುಟ್ಟಾದಾಗ ನಾವು ಬ್ಯಾರೇ ಕೋಣೇನೇ. ಮೂರುಸಲ ಸ್ನಾನ ಮಾಡಬೇಕು-ಅದೆಲ್ಲ ಕರಾರಿತ್ತು. ನಮಗ ಹುಡುಗರ ಜೋಡಿ ಆಟ ಆಡೋಕೆ, ಹಾಡಿ ಅಲೆಯೋಕೆ ಆಸೆ. ಆದರೆ ಅಜ್ಜಿ `ಅಲ್ಲೆಲ್ಲ ಉಡಾಳ ಗಂಡುಮಕ್ಕಳು ಇರ್ತಾವ, ನೀವ್ ಹೋಗಬ್ಯಾಡ್ರಿ, ಗಂಡಮಕ್ಕಳ ಜತೆ ಕೂಡಬ್ಯಾಡ್ರಿ, ಮೈಕೈ ಮುಟ್ತಾರ' ಅಂತಿದ್ಲು. ನಾವು ಮುದ್ದಾಂ ಹುಡುಗರ ಜತಿ ಆಟ ಆಡತಿದ್ವಿ. ಮೈಕೈ ಮುಟ್ಟಿದರ ಏನಾತು ಅಂತಿದ್ವಿ. *ಬಾಲ್ಯದ ನೆನಪುಗಳು ಕಾಡತಾವಾ? ಬಾಲ್ಯ ಅನ್ನೋದು ಎಷ್ಟು ಸಿಹಿಯಾಗಿರ್ತದ! ಊರುಬಿಟ್ಟು ಅರವತ್ತು ವರ್ಷವಾದರೂ ಕಣಕಣಾನು ನೆನಪೈತ್ರಿ. ಕಾಡು, ಗದ್ದೆ, ಸೀತಾಹೊಳೆ, ಸೇತುವೆ ಮೇಲೆ ಹರಿದಾಡೊ ಬಸ್ಸುಗಳು, ಕ್ರೈಸ್ತರ ಮುಸಲರ ಮನೆಗಳು, ಅಗ್ರಹಾರ, ಅಲ್ಲಿನ ಮಡಿಮೈಲಿಗೆ, ದೇವಸ್ಥಾನ, ದೇವರಪೂಜೆ, ಪಂಚಕಜ್ಜಾಯ, ರಣಪೂಜೆ, ಅದರ ಪ್ರಸಾದತಂದು ಉಪ್ಪರಿಗೆ ಮೆಟ್ಲಲ್ಲಿ ಇಡೋದರಿ, ನಾಳೆ ತಿನ್ನಬೇಕು ಅಂತ. ಬೆಳಿಗ್ಗೆ ಆಗೋದರೊಳಗೆ ಇರುವೆ ತುಂಬ್ಕೊಂಡು ಬಿಡೋವು. ಹಾಡಿಗೆ ಹೋಗಿ ನೇರಳೆಹಣ್ಣು ತಿಂದು ನೀಲಿ ಕನ್ನಡಿಯೊಳಗೆ ನಾಲಗೆ ನೋಡಿಕೊಂಡು ನಗತಿದ್ದೆವು. ಗೇರುಹಣ್ಣು ತಿಂತಿದ್ದೆವು. ಕಿಸ್ಕಾರ ಹಣ್ಣ ತಿಂದು ಬಾಯಿ ಕೆಂಪು ಮಾಡಕೊಳ್ತಿದ್ದೆವು. `ಅಮ್ಮಾ, ಕಡೆಮದ್ದು ಕೊಡೇ' ಅಂತ ಅಜ್ಜಿಗೆ ಕಾಡ್ತಿದ್ದೆವು. ಲೇಖಕರಿಗೆ ನೊಸ್ಟಾಲ್ಜಿಯಾ ಭಾಳ ಇಂಪಾರ್ಟೆಂಟ್. *`ಕಡೆಮದ್ದು' ಅಂದರೇನು? ಬಾಣಂತಿಗೆ ತಿನಸೋದರಿ. ನೂರಾರು ತರಹದ ಬೇರುತಂದು ಒಣಗಿಸಿ ಪುಡಿ ಮಾಡಿ ಸೋಸಿ, ಬೆಲ್ಲದ ಪಾಕ ತುಪ್ಪಹಾಕಿ ಒಲೆಮೇಲೆ ಚೆನ್ನಾಗಿ ತಿರುವಿ, ಜಾಡಿತುಂಬಿ ಇಡ್ತಾರ. ಬಾಣಂತಿಗೆ ದಿನಾ ಇಷ್ಟಿಷ್ಟು ಕೊಡ್ತಾರ. ನಮ್ಮಜ್ಜಿ ಕಡೆಮದ್ದಿನ ಬೇರುಗಳ ಹೆಸರು ಹೇಳೋ ಕಾಲಕ್ಕ, `ಹಲವು ಮಕ್ಕಳ ತಾಯಿಬೇರು' ಅಂದಿದ್ಲು. ಅದರ ಮ್ಯಾಲೆ `ಹಲವು ಮಕ್ಕಳ ತಾಯಿಬೇರು' ಅಂತ ಕತೆ ಬರದೆ. ನಮ್ಮ ಚಿಕ್ಕಿ ಡೆಲಿವರಿ ಆದಾಗ ಅಜ್ಜಿ `ಬಾಣಂತಿಯ ಬೆನ್ನ ಗಟ್ಟಿ ಆಗಬೇಕು, ಹಡದಿಂದೆ ಗರ್ಭಕೋಶ ಲೂಸ್ ಆಗರ್ತತಿ, ಅದು ಗಟ್ಟಿ ಆಗಬೇಕು, ಹಾಲ್ ಬರಬೇಕು' ಅಂತ ಕಡೆಮದ್ದು ಮಾಡಿಕೊಡಾಕ ಹತ್ಯಾಳ. ಆಗ ನಾನೂ ಹೊಟ್ಟೆ ಹರಕೊಂಡು ಓವರಿ ತಕ್ಕೊಂಡಿದ್ದೆ. ಬೆನ್ನುನೋವು. ನನಗ್ಯಾಕ ಮಾಡಿಕೊಡವಲ್ಲಳು ಅಜ್ಜಿ. ಆಕಿಗೆ ಮಾಡೋಮುಂದ ನಿನಗೂ ದೊಡ್ಡಾಪರೇಶನ್ ಆಗೈತಿ, ಮಾಡ್ತೀನಿ ಅನಬೇಕಿತ್ತಲ್ಲ? ನಾಯೇನು ಹಡದ ಬಾಣಂತಿ ಅಲ್ಲಲ್ಲ ಅಂತ ಫೀಲ್ ಆಗಿತ್ತು. ಕೊನೇಗೆ ಅನಸ್ತು, ತಾಯಿ ಸತ್ತ ಮಕ್ಕಳು ಇರಬಾರದಪ್ಪಾ ಅಂತ. ಬೇಜಾರಾಗಿ ಆ ಕತೆ ಬರದೆ. *`ತಾಯಿ ಸತ್ತ ಮಕ್ಕಳು' ಅಷ್ಟೊಂದು ಶಾಪ್ರಗ್ರಸ್ತ ಅವಸ್ಥೆಯಾ? ಫುಟ್ಬಾಯಲ್ ಚೆಂಡರಿ. ಅಜ್ಜಿ ತಿರುಗಾಡಕ್ಕ ಕೊಡತಿದ್ದಿಲ್ಲ, ತಾಯಸತ್ತ ಮಕ್ಕಳು ಅಗ್ರಹಾರಕ್ಕ ಹೋಗಬಾರದು ಅಂತ. ಹುಟ್ಟಿದೂರು ಅಂತ ಹೋದರೆ ನೆಗ್ಲೆಕ್ಟ್ ಮಾಡೋರು. ಅಪ್ಪಿತಪ್ಪಿ ಯಾರೂ ಕರೀತಿದ್ದಿಲ್ಲ. ನಾನು ಲೇಖಕಿಯಾಗೀನಲ್ಲ? ನೋಬಡಿ ಈಸ್ ಕನ್ಸರ್ನ್ಡ್ ಅಬೌಟ್ ಮೈ ರೈಟಿಂಗ್. ಒಬ್ಬರಾರ ಪುಸ್ತಕ ಕೇಳ್ಯಾರೇನು? ಹಾದಿಬೀದೀಲಿ ಹೋಗೋರಿಗೆಲ್ಲ ಹಂಚತೀನಿ. ಅವರಿಗೆ ಕೊಟ್ಟಿಲ್ಲ. ಭಯಂಕರ ಮಟೀರಿಯಲ್ಲಿಸ್ಟ್ಸ್. ರಿಲೇಟೀವ್ಸ್ ಕಡಿಂದ ಅಪಮಾನ ಅನುಭವಿಸಿದೀವಿ. ಬಟ್ ಪಬ್ಲಿಕ್ ಗೇವ್ ಅಸ್ ಲಾಟ್ ಆಫ್ ಲವ್ ಅಂಡ್ ರೆಸ್ಪೆಕ್ಟ್. ನಮ್ಮ ಕೆಲಸದೋಳಿಗೆ ಹೇಳೀನಿ `ದವಾಖಾನಿಂದ ನನ್ನ ಡೆಡ್ ಬಾಡಿ ತಂದರ, ನಮ್ಮವರು ಬರೋಕೆ ಮುಂಚೆ ಹೆಣಚಂದ ಮಾಡಿ ಅತ್ತಬಿಡವ್ವಾ' ಅಂತ. *ನಿಮ್ಮ ಕತೆಗಳಲ್ಲಿ ಕ್ರೈಸ್ತ ಪರಿಸರ ದಟ್ಟವಾಗಿದೆ. ನಾನು ಮೂರು ವರ್ಷ ಚರ್ಚ್ ಸ್ಕೂಲಾಗೆ ಕಲ್ತೆ. ಚರ್ಚಿಗೆ ಹೋಗಿ ಕನಫೆಶನ್ ಕಿಂಡಿಗೆ ಹೋಗಿ ಕೈಯಿಟ್ಟು ಫಾದರ್ ಹತ್ತರ ಸುಳಸುಳ್ಳೇ ಹೋಗೋದು, ಮಂಡಿಯೂರಿ, `ನಾನು ಇವತ್ತು ಮಾವಿನಗಿಡದಾಗೆ ಕಾಯಿ ಕದ್ದೆ ಕ್ಷಮಿಸಿ ಫಾದರ್, ನಾನು ಇವತ್ತು ಶಾಲೇಲಿ ಪೆನ್ಸಿಲ್ ಕದ್ದೆ ನಮ್ಮನ್ನು ಕ್ಷಮಿಸಿ ಫಾದರ್' ಅಂತ ಕನಫೆಸ್ ಮಾಡತಿದ್ವಿ. ಅಜ್ಜಿ `ಚರ್ಚಿಗೆ ಹೋಗಿದ್ದಿರಾ' ಅಂತ ಕೋಲ್ ತಕ್ಕೊಂಡು ಗದ್ದೆ ತುಂಬ ಓಡಾಡಸ್ತಿದ್ದಳು. ನಮ್ಮನಿ ಹತ್ತರ ಹೆಲನಬಾಯಿ ಅಂತ ಇದ್ಲು. ಆಕಿ ಮನೀಗೆ ಮ್ಯಾಲಿಂದ ಮ್ಯಾಲೆ ಹೋಗೋದರಿ. ಮೈಮ್ಯಾಲ ಬಿದ್ದು ಉಳ್ಳಾಡೋದರಿ. ಆಕಿ ಪ್ರೀತೀಲೆ ಹೂವು ಕೊಡೋಳು. ಆ ಹೂವು ಮನೀಗೆ ತರೋಹಂಗಿಲ್ಲ. ನಮ್ಮಜ್ಜಿ `ಹೆಲನಬಾಯಿ ಮನೀಗ್ ಹೋಗೀರಾ? ಮಾಂಸಮಡ್ಡಿ ತಿನ್ನೋರ ಮನೀಗೆ ಹೋಗೀರಾ?' ಅನ್ನೋಳು. ಭಾಂವಿ ಕಟ್ಟೇಮ್ಯಾಲ ಬತ್ತಲೆ ನಿಲ್ಲಿಸಿ, ತಲಿಮ್ಯಾಲ ಬುದುಬುದು ನೀರು ಹಾಕಿ ಮಡಿ ಮಾಡೋಳು. *ಬಾಲ್ಯದ ಕರಾವಳಿ ಈಗ ಹೇಗಿದೆ? ಭಾಳ ಬದಲಾಗ್ಯದ. ಕಾರಣಿಲ್ಲ ಏನಿಲ್ಲ ಸುಮಸುಮ್ಮನೆ ಮುಸಲೋರನ್ನ ಕ್ರಿಶ್ಚನ್ನರ ಹೇಟ್ ಮಾಡೋದು. ನಾನು ನಿಮ್ಹಾನ್ಸದೊಳಗ ಟ್ರೀಟ್ಮೆಂಟ್ ತಗೊಂಡ ಮ್ಯಾಲ, ಒಬ್ಬ ಕ್ರಿಶ್ಚಿಯನ್ ಸಿಸ್ಟರ್ ಮನೆಯೊಳಗ ಇಟ್ಟಿದ್ದರು. ಎರಡು ವರ್ಷ ನನಗ ಹೀಂಗ ಪ್ರೀತಿ ಮಾಡಿದರ್ರೀ ಅವರು. *ನಿಮ್ಮ `ಹೆಲನಬಾಯಿ ಮತ್ತು ತುಂಬೆ ಹೂವು' ಒಳ್ಳೆಯ ಕತೆ. ಹೆಲನ ಬಾಯಿ ಎಂಥಾ ಶಾಂತ ಮುಖ? ದೇವಿಯಿದ್ದಂಗೆ. ಆಕೆ, ನಮ್ಮ ತಾಯಿ ಫ್ರೆಂಡ್ಸಾಗಿದ್ದರು. ನಮ್ಮ ತಾಯಿ ಅಂಥಾದ್ದೇ ಕಿವ್ಯಾಗ ಹಾಕ್ಕೊಂಡಿರ್ತಿದ್ದಳು, ನೀಲಿ ಹಳ್ಳಿಂದು. ಆಕಿ ಶಿಸ್ತು, ಜಡೆ ಬಾಚೋದು, ಆಕಿನೊಳಗೆ ನಾವು ಅಮ್ಮನ ರೂಪ ಕಾಣತಿದ್ದಿವಿ. ಆಕಿ ಹುಲ್ಲಿಗಂತ ಗದ್ದೆಬದಿ ಬಂದಾಗ `ಅಮ್ಮಾ ಹುಲ್ಲಿಗೆ ಹೋಗಿ ಬತ್ತೇ' ಅಂತಿದ್ದಳು. ಚರ್ಚಿಗೆ ಹೋಗೋ ಮುಂದ `ಅಮ್ಮಾ ಚರ್ಚಿಗೆ ಹೋಗಿ ಬತ್ತೇ' ಅನ್ನೋಳು. *ಅಜ್ಜಿ ಕೊನೇಗೆ ಬದಲಾದರಾ? ಬದಲಾದಳು. ಆಕಿಗೆ ಹೆಲನಬಾಯಿ ಬಗ್ಗೆ ಒಂದು ಪ್ರೀತಿ ಇರತಿತ್ತು. ಚಟ್ನಿರುಬ್ಬಿ ತೆಂಗಿನ ಗರಟದೊಳಗೆ ಕೊಡೋದು, ಚೊಂಬಿನೊಳಗೆ ನೀರು ಎತ್ತಿ ಹೊಯ್ಯೋದು, ಬೆಲ್ಲ ಕೊಡೋದು, ಮಾಡಿದ ಅಡಿಗೆ ಕೊಡೊದು, ಕಷ್ಟಸುಖ ಕೇಳೋದು, ಹೆಲನ್ಬಾಳಯಿ ಅತ್ತರೆ ತಾನೂ ಎರಡು ಕಣ್ಣೀರು ಹಾಕೋದು ಇವೆಲ್ಲ ಇದ್ದವು. ಕಡಕಡೀಕೆ ಎಲ್ಲ ಸಂಪ್ರದಾಯ ಬಿಟ್ಟುಬಿಟ್ಲು. `ಹೆಲನಬಾಯಿ ಮತ್ತು ತುಂಬೆಹೂವು' ಕತೆಯಲ್ಲಿ ಮಕ್ಕಳು ಆಕೀಗೆ ದೇವಸ್ಥಾನದ ಹಲಸಿನ ಕೊಟ್ಟೆಕಡುಬು ಕೊಟ್ಟಿಲ್ಲಂತ ಮಕ್ಕಳು ಹಳಹಳ ಮಾಡೋ ಪ್ರಸಂಗ ಬರ್ತದ. ಅದನ್ನ ಓದಿ ಹೆಲನಬಾಯಿಗೆ ಕಡುಬು ಮಾಡಿ ಕೊಟ್ಟು ಬಂದಳು. ಮತ್ತಾಕಿ ಹಾಸ್ಪಿಟಲಿಗಿದ್ದಾಗ ಹೋಗಿ ಆಕೀಗೆ ತಬ್ಬಕೊಂಡು ಬಂದಳು. ಮನೇಲೆ ಎರಡು ಕ್ರಿಶ್ಚಿಯನ್ ಸೊಸ್ತೇರನ್ನು ತಂದಳು. ತಂಗಿ ಮಗನಿಗೆ ವಿಧವೆ ತಂದುಕೊಂಡಳು. ಎರಡು ಜನ ಬಿಲ್ಲವ ಅಳಿಯಂದಿರು ಬಂದರು. ಕಠೋರ ಅಗ್ರಹಾರದ ನಡುವೆ ಕ್ರಾಂತಿ ಮಾಡಿದಳು. ಅವರೆಲ್ಲ ಮನೀಗೆ ಬರೋದು ಹೋಗೋದು ಪೂಜೆ ಪುನಸ್ಕಾರ ಎಲ್ಲ ಮಾಡ್ತಾರ. ನಮ್ಮಜ್ಜಿ ವಿಶೇಷ ಪರ್ಸನಾಲಿಟಿ. ವೈಲಿನ್ ನುಡಸ್ತಿದ್ದಳು. ಹಾಡತಿದ್ದಳು. ಸುಬ್ಬಲಕ್ಷ್ಮಿ ಹಾಡಂದರ ಪ್ರಾಣ. *ನೀವು-ರೋಹಿಣಿ ಅರ್ಧಶತಮಾನ ಒಟ್ಟಿಗೆ ಬದುಕಿದಿರಿ. ಅವರ ವ್ಯಕ್ತಿತ್ವ ಎಂಥದ್ದು? ನಮ್ಮ ರೋಹಿಣಿ ಮರದ ಮೌನದ ಹುಡುಗಿ. ಶಿ ನೆವರ್ ಕಂಪ್ಲೇಂಟ್ಸ್. ಎಂ.ಎ. ಫಿಲಾಸಫಿ ಗೋಲ್ಡ್ ಮೆಡಲ್ ತಗದಾಳ. ವೇದಾಂತ ಸ್ಪೆಶಲೈಜೇಶನ್. ಕಾನ್ವೊಕೇಶನ್ನಿಗೆ ಹಾಕ್ಕೊಳಕ್ಕ ಒಳ್ಳೇ ಅರಿವೆಯಿದ್ದಿಲ್ಲ. ಇಷ್ಟು ಉಪ್ಪಿಟ್ಟು ಕಟ್ಟಕೊಂಡು ಹೋಗಿ ಹಳ್ಳಳ್ಳಿ ಮನಿಮನಿ ಅಡ್ಡಾಡಿ ನೌಕರಿ ಮಾಡಿ ಹೈರಾಣಾಗ್ಯಾಳ. ನೀವ ವಿಚಾರ ಮಾಡ್ರಿ, ಸಣ್ಣ ಪಗಾರದೊಳಗ ನಾಲ್ಕು ಬಡಮಕ್ಕಳಿಗೆ ಇಂಜಿನಿಯರಿಂಗ್ ಓದಿಸ್ಯಾಳ, ಆಕೀಗಿ ಜೀವನದೊಳಗ ಆಸೆಗಳೇ ಇಲ್ಲ. ನಮ್ಮ ಪರಿಚಿತರೊಬ್ಬರು ಗಯಾದೊಳಗಿದ್ದಾರ. ಅವರಿಗೆ ಹೇಳಿದ್ದೆ ಒಂದು ಬುದ್ಧನಮೂರ್ತಿ ತಂದುಕೊಡರಿ ಅಂತ. (ಪಕ್ಕದಲ್ಲಿದ್ದ ಮೂರ್ತಿ ತೋರಿಸುತ್ತ), ಇಗಾ ನೋಡ್ರಿ ತಂದುಕೊಟ್ಟಾರ. ಆದರೆ ನಿಜವಾದ ಬುದ್ಧ ನನ್ನ ತಂಗಿ. *ನೀವೂ ಧಾರವಾಡದಲ್ಲಿ ಇಂಗ್ಲೀಶ್ ಎಂ.ಎ. ಮಾಡಿದಿರಿ. ಶಂಕರ ಮೊಕಾಶಿ ಪುಣೇಕರ್ ಎಲ್ಲಾ ಇದ್ರು. ಚಂಪಾ ಫೊನಿಟಿಕ್ಸ್ ಹೇಳ್ತಿದ್ದರು. ಹುಡಿಗ್ಯಾರಿಗೆ ಲವ್ ಪೊಯೆಮ್ಸ್ ಬರದಕೊಡ್ತಿದ್ರು. ಸಾಧನಾ ಅಂತ ಡಾಲ್ ಇದ್ದಂಗಿದ್ದಳು. ಆಕಿಗೆ ಒಂದಿವಸ ಲವ್ ಪೊಯೆಂ ಬರದಕೊಟ್ರು. ಅವಳು ನನಗ ತಂದ ತೋರಿಸಿದ್ಲು. `ಸರ್ ಇಷ್ಟು ಚಂದ ಲವ್ ಪೊಯೆಂ ಬರದ ಕೊಟ್ಟೀರಿ' ಅಂದೆ. `ಏ ಬಾಯರಿ, ನಿನಗ ಯಾರು ತೋರಿಸಿದ್ರು?' ಅಂದರು. ನಾನು ಭಾಳ ಇಂಗ್ಲಿಶ್ ಲಿಟರೇಚರ್ ಓದೀನ್ರಿ. ಬದಾಮಿಯೊಳಗ ನನಗ ಕಲಿಸಿದ ಯೋಗಪ್ಪನೋರು ನನ್ನ ಗ್ರಾಸ್ಪಿಂಗ್ ಪವರ್ ನೋಡಿ ಆಶ್ಚರ್ಯ ಪಡತಿದ್ದರು. ಓದೋದೇ ಅರ್ಧ ಕಣ್ಣು ಹೋಗ್ಯಾವರಿ. *ಪದವಿ ಯಾಕೆ ಮುಗಿಸಲಿಲ್ಲ? ಸುಟ್ಟ ಸುಡುಗಾಡ ಸ್ಕಿಜೊಫ್ರೇನಿಯಾ ಬಂದುಬಿಡ್ತು. ಇಪ್ಪತ್ತು ರೂಪಾಯಿ ಹಾಸ್ಟೆಲ್ ಬಿಲ್ ತುಂಬದೇ ಇದ್ದದ್ದಕ್ಕ ವಾರ್ಡನ್ ಹೊರಗ ಮಳಿಯೊಳಗ ನಿಲ್ಲಿಸಿಬಿಟ್ಟಳು. ಕೆಟ್ಟ ಬಡತನ. ಸ್ಪ್ಲಿಟ್ ಪರ್ಸನಾಲಿಟಿ ಆಗಿಬಿಡ್ತು. ಅದರಿಂದ ಹೊರಬರಬೇಕಾದರೆ ಹತ್ತು ವರ್ಷ ಹಿಡೀತೇ ಏನೊ. ಮನೀಗೆ ಬಂದರೆ ಕೂಳಿಲ್ಲ. ನಮ್ಮಪ್ಪಯ್ಯ ಸಾಧು ಸಂತರ ಹಿಂಬಾಲ. ಆಗ ನಮ್ಮಕ್ಕ ವಾಗ್ದೇವಿ, ಮನಿಮನಿ ಟೂಶನ್ ಹೇಳಿ ನಮ್ಮನ್ನ ಸಾಕಿದ್ಲು. ನಾವೂ ಟೂಶನ್ ಹೇಳ್ತಿದ್ದಿವಿ *ಜಗತ್ತಿನ ಸಾಹಿತ್ಯ ಓದಿಕೊಂಡಿದ್ದೀರಿ. ನಿಮ್ಮಂತಹವರು ಕಾಲೇಜು ಅಧ್ಯಾಪಕರಾಗಿದ್ದರೆ ವಿದ್ಯಾರ್ಥಿಗಳಿಗೆ ಉಪಯೋಗ ಆಗ್ತಿತ್ತು. ಹಳಹಳಿಕೆ ಅದೇರಿ. ಏನು ಮಾಡ್ಲಿ? ಥೈರಾಯ್ಡ್ ಆಗಿ ಧ್ವನಿಪೆಟ್ಟಿಗೆ ಹೋಗಿಬಿಡ್ತು. ಈಗಲೂ ಮನೀಗೆ ಬಂದೋರು ಒಂದು ಒಜ್ಜೆ ಮಾತಾಡಿದರೆ, ನಿದ್ದಿ ಬರೋದಿಲ್ರಿ. ಓಣ್ಯಾಗ ಒಂದು ನಾಯಿಸತ್ತರೆ ಎಂಟು ದಿನ ನಿದ್ದಿ ಮಾಡೋದಿಲ್ಲ. ಆದರೆ ನನ್ನ ಶಿಷ್ಯರು ಇಂಗ್ಲೆಂಡು ಅಮೆರಿಕಾ ಸೇರಿಕೊಂಡಾರ. ಇಂಗ್ಲೀಶನೊಳಗ ಬರೀತಾರ. ನನಗೆ ತೃಪ್ತಿ ಅದ. *ನಿಮ್ಮ ಅಕ್ಕನವರ ಸಂಗೀತದ ಅಭಿರುಚಿ ಬಗ್ಗೆ ಬಹಳ ಸಲ ಹೇಳಿದೀರಿ. ಆಕಿ ತೀರ್ಥಳ್ಳಿ ಹತ್ತರ ಒಂದು ಹಳ್ಳಿಯೊಳಗಿದ್ದಳು. ಗಟ್ಟಿಗಿತ್ತಿ. ಗಂಡ ತೀರಿಕೊಂಡ ಮ್ಯಾಲ ಬದುಕನ್ನ ಕಟ್ಟಿಕೊಂಡಳು. ಸಾವಯವ ಕೃಷಿ ಮಾಡತಿದ್ದಳು. ಸಾವಯವ ಗೊಬ್ಬರ ಮಾರತಿದ್ದಳು. ದನ ಸಾಕಿದ್ಲು. ಒಂದು ಕಾಳಮೆಣಸಾ, ಒಂದು ಕಾಫಿಯಾ ಎಷ್ಟು ಬೆಳೆಗೋಳು! ಹತ್ತೆಕೆರೆ ತೋಟಮಾಡಿಟ್ಟು ಹೋಗ್ಯಾಳ. ವರ್ಷಾ ಹಸಿಬತ್ತದ ತೆನೀತೋರಣ ಮಾಡಿ ಕಳಸತಿದ್ಲು. ನಟ್ಟಿಗೆ ಬಂದೋರ ಹತ್ತರ ಹಾಡು ಸಂಗ್ರಹ ಮಾಡತಿದ್ದಳು. ಒಳ್ಳೇ ಅಡಿಗೆ ಮಾಡತಿದ್ದಳು. ಹಾಡತಿದ್ದಳು. ಜೀನಿಯಸ್. ಸಾಯೋ ಮುಂದ, ಮಣಿಪಾಲ್ ಆಸ್ಪತ್ರೆಯೊಳಗ `ಈ ಸಂಜೆ ಯಾಕಾಗಿದೆ' ಹಾಡಿದಳು. ವಾರ್ಡ್ ತುಂಬ ಅಡ್ಯಾಡಿ, `ಕಿಮೊಥೆರಪಿಯಿಂದ ಏನಾಗದಿಲ್ಲ, ಟೆಕ್ನಾಲಜಿ ಮುಂದುವರೆದದ. ಯಾರೂ ಹೆದರಬ್ಯಾಡಿ, ಭಾಳಂದ್ರ ಕೂದಲು ಉದುರತಾವ' ಅಂತ ರೋಗಿಗಳಿಗೆ ಹೇಳತಿದ್ದಳು. ಒಳ್ಳೇ ಅನುಭಾವಿ. ನಾವು ಕೂಡಿ ಇಂಗಳೇಶ್ವರದಲ್ಲಿ ಬಸವಣ್ಣನವರ ಮನೀಗೆ, ಮತ್ತ ಕುಪ್ಪಳಿಯೊಳಗ ಕುವೆಂಪು ಮನೀಗೆ ಹೋಗಿದ್ವಿ. ಎರಡೂ ಕಡೆ ಲಿಟರಲಿ ಐ ಟ್ರಾನ್ಸಡ್. ಕುಪ್ಪಳ್ಳಿಯೊಳಗ ಅಕ್ಕ `ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ' ಹಾಡಿದಳು. ಅಕಸ್ಮಾತ್ ತೇಜಸ್ವಿಯವರು ಒಳಗ ಬಂದಬಿಟ್ಟರು. ಹಾಡ ಕೇಳಿ ಸಂತೋಷಪಟ್ಟರು. `ನೀವು ಪ್ರೊಫೆಶನಲ್ ಸಿಂಗರ್ರಾ?' ಅಂತ ಕೇಳಿದರು. `ಯಾವ ಮೋಹನ ಮುರುಳಿ ಕರೆಯಿತೊ' ಹಾಡಿದಾಗ ಓಪನ್ ಫಂಕ್ಷನದೊಳಗ ಅಡಿಗರು ತಬ್ಕೊಂಡು ಅತ್ತಬಿಟ್ಟಿದ್ದರು, ಜೀವಮಾನದೊಳಗ ಹೀಂಗ ಇದನ್ನ ಹಾಡದೋರನ್ನೇ ಕೇಳಿಲ್ಲ ಅಂತ. *ನಿಮಗೆ ಪ್ರಿಯ ಲೇಖಕರು ಯಾರು? ಮಂಟೋ ಕತೆಗಳು ಇಷ್ಟ. ಬದುಕಿನ ಕನ್ನಡಿಯನ್ನೇ ನಿಮ್ಮ ಮುಂದೆ ಹಿಡದಬಿಡ್ತಾನ. ಅಂವ ಇಂಡಿಯಾದ ಬೋದಿಲೇರ್. ಕಮೂ ಸಾತ್ರ್ರೆ ಬಹಳ ಇಷ್ಟ. ಸಾತ್ರ್ರೆನ `ಬೀಯಿಂಗ್ ಅಂಡ್ ನತಿಂಗನೆಸ್' ಪಿಯುಸಿ ಇರೋವಾಗಲೇ ಓದಿದ್ದೆ. `ಮಲೆಗಳಲ್ಲಿ ಮದುಮಗಳು' ಫಿಫ್ತ್ ಕ್ಲಾಸಿಗೆ ಓದಿದ್ದೆ. ಬೋದಿಲೇರ್ ಯಾಕಿಷ್ಟ ಅಂದರ, ಅವನು ತನ್ನ ಕಾಲಘಟ್ಟದಲ್ಲಿ ಕಂಡ ಎಲ್ಲ ನೋವುಗಳನ್ನು ಹೇಳೋಕೆ ಒಂದು ರಿದಂ ಹುಡ್ಕೊಂಡಿದ್ದಾನ. ನರಳಾಟದಲ್ಲೂ ಒಂದು ಸ್ಪಾರ್ಕ್ ಕಾಣ್ತಾನ. ಈ ಜೀವನದ ಈ ಮರಣದ ಆಚೆಯ ಬೆಳಕಿದೆಯಲ್ಲಾ, ಅದೇ ಕಾವ್ಯ ಅಂತಾನ. ನನಗ ಕಮೂನ `ಮೆಟಮಾರ್ಫಸಿಸ್' ಇಷ್ಟ. ಅದರ ನಾಯಕ ಒಂದಿನ ಹುಳಾ ಆಗಿಬಿಡ್ತಾನ. ಒಂದೊಂದು ಸಲ ಇವನೌನ ಹುಳಾ ಆಗಿ, ನಮಗ ಹ್ಯುಮಿಲೇಟ್ ಮಾಡಿದ ಎಲ್ಲಾರನೂ ಕಟಕಟ ಕಚ್ಚಬೇಕು ಅನಿಸ್ತಿತ್ತು. (ರೋಹಿಣಿ `ನೀನು ಹಂಗ ಕಚ್ಚಕೆ ಹೋದಾಗ ಯಾವನಾದರೂ ತುಳದು ಪಚಕ್ ಅನಿಸಿದ್ದರೆ ಏನು ಮಾಡ್ತಿ?' ಎಂದು ಛೇಡಿಸಿದರು.) ಶೇಕ್ಸಪಿಯರ್ ಓದಿದೆ. ಅವನಲ್ಲಿ ಇರಿಯೋದು ಕೊಲ್ಲೋದು ಇಷ್ಟ ಆಗಲಿಲ್ಲ. ಜಗತ್ತಿನೊಳಗೆ ಯುದ್ಧ ಆಗಬಾರದು. ಜನ ಸಾಯಬಾರದು. ನಾವು ಪ್ರಾಚೀನ ಯುದ್ಧಕಾವ್ಯಗಳ ನಾಯಕರನೆಲ್ಲ ದೇವರು ಮಾಡಿ ಇಟ್ಟಬಿಟ್ಟಿವಿ ಸುಡುಗಾಡು. ಆರತಿ ಎತ್ತೋದೇ ಎತ್ತೋದು. *ಗಿಬ್ರಾನ್ ಬಗ್ಗೆ ಯಾಕೆ ಸೆಳೆತ? ನೋಡ್ರಿ, ಅಮೆರಿಕಕ್ಕೆ ಹೋದಾಗ ಅವನಿಗೆ ಪಾಪಪ್ರಜ್ಞೆ ಕಾಡ್ತು. ನೇಟಿವಿಟಿಯಿಂದ ದೂರಿದ್ದ. ಆಗ ಫೋನಿಲ್ಲ ಟೆಲಿಗ್ರಾಮಿಲ್ಲ. ಆಗ ಕಾಣದೆಯಿದ್ದ ಒಬ್ಬ ಪೊಯೆಟೆಸ್ಗೆೆ ಬರೆದ ಪತ್ರಗಳು ಅವು-ನೂರು ವರ್ಷದ ಕೆಳಗ. ಅವನು ಮಕ್ಕಳ ಬಗ್ಗೆ ಆಡಿದ ಮಾತುಗಳು ಎಂಥವು! ಮಗು ತನ್ನ ತಲೆಯೊಳಗ ಏನು ಬರ್ತದ ಅದನ್ನೇ ಮಾಡ್ತದ. ನೀವು ಏನಾರ ಚಾಕಲೇಟ್ ಕೊಡೋಕೆ ಹೋಗರಿ, ಆಕಾಶದ ಕಡೆ ಮಾಡಿ ಅಂಗೈ ಹಿಡೀತದ. ಅನಂತತೆಯತ್ತ ಕೈಚಾಚತದ. ಇದನ್ನು ಪ್ರತಿ ಗ್ಯಾದರಿಂಗನೊಳಗ ಹೇಳತಿದ್ದೆ. ಯಾವ ಲೇಖಕ ಡೌನ್ ಟು ದ ಅರ್ತ್ ಇರ್ತಾನ, ಹೂ ಅಂಡರಸ್ಟ್ಯಾಂಡ್ಸ್ ದ ಪ್ರಾಬ್ಲಮ್ಸ್ ಆಫ್ ದಿ ಕಾಮನ್ ಪೀಪಲ್, ಅಂತಹ ರೈಟರ್ ನನಗಿಷ್ಟ. ಆಂಟಿಹ್ಯೂಮನ್ ರೈಟಿಂಗ್ ಯಾವತ್ತೂ ಇಷ್ಟಪಡೋದಿಲ್ಲ. ಮಣ್ಣು ತಂಪಿದ್ರೆ ಬೀಜ ಮೊಳಕೆ ಒಡೀತಾವ. ರೈಟಿಂಗಿನೊಳಗ ಡೆಲಿಕಸಿ ಆಫ್ ಮೈಂಡ್ ಅಂತಿರ್ತದ. ಅದನ್ನ ಬಿಟ್ಟು ಬರದರ ಜಸ್ಟ್ ಸ್ಟೇಟ್ಮೆಂಟ್ ಆಗತದ. ಪಂಪ ಕುಮಾರವ್ಯಾಸ ಬರದ ಎಷ್ಟು ವರ್ಷ ಆತು? ಯಾಕವರು ಇಷ್ಟ ಆಗ್ತಾರ? ಯಾಕಂದ್ರ ಅವರ ಭಾಷೆಯಲ್ಲಿ ಬದುಕಿನ ಒಂದು ಆರ್ದ್ರತೆ ತುಂಬ್ಯದ. *ಲೇಖಕರು ಪರಂಪರೆಯಿಂದ ಪ್ರೇರಣೆ ಪಡೆಯೋದು, ಜೀರ್ಣಿಸಿಕೊಂಡು ತಮ್ಮದನ್ನಾಗಿ ಮಾಡಿಕೊಳ್ಳೋದು ಇರುತ್ತೆ. ನಿಮ್ಮ ಅನುಭವ ಏನು? ಕುವೆಂಪು ಅವರ ಜೀವನದರ್ಶನ, ಕಾರಂತರ ಬದುಕಿನ ಜಟಿಲ ಸಮಸ್ಯೆಗಳನ್ನು ಕಾಣಿಸೋ ರೀತಿ, ಮಾಸ್ತಿಯವರ ಬದುಕಿನ ಸಹನೆ, ಇಂದಿರಾ ಅನುಪಮಾ ವಾಣಿ ತ್ರಿವೇಣಿ ಇವರಲ್ಲಿರೋ ಹೆಣ್ಮಕ್ಕಳ ಸೂಕ್ಷ್ಮದನಿ ಅರ್ಥಮಾಡಕೊಂಡೀನಿ. ಇಂದಿರಾರ `ತುಂಗಭದ್ರಾ' `ಸದಾನಂದ' ವಂಡರಫುಲ್ ನಾವಲ್ಸ್. ಆ `ಸದಾನಂದ'ನ್ನ ಎಷ್ಟು ಸತಿ ಓದಬೇಕ್ರಿ ನಾವು? ವಿಡಂಬನೆಯಿಂದ ರಫ್ಆಗಿ ಬರೆಯೋದನ್ನ ಇಷ್ಟಪಡಲ್ಲ. ಬಂಡಾಯ ಬೇಡಂತಲ್ಲ. ಅದು ಸಾಹಿತ್ಯದೊಳಗ ಸೂಕ್ಷ್ಮವಾಗಿ ಅಳವಡಿಕೆಯಾಗಬೇಕು. ಜಗತ್ತಿನ ಎಲ್ಲ ಸಾಹಿತ್ಯ ಓದಬೇಕು. ಆದರೆ ನಮ್ಮೊಳಗಿನ ಅನುಭವವನ್ನೇ ಬರೀಬೇಕು. ತಮ್ಮ ಅನುಭವವನ್ನ ಹೇಳೊ ಗಟ್ಟಿತನ ಕಮಲಾದಾಸ್ ಅಮೃತಾಪ್ರೀತಂ ಅವರಲ್ಲದ. ಅದು ನನ್ನ ಕಡೆ ಖಂಡಿತಾ ಸಾಧ್ಯವಿಲ್ಲ. *ಇವರ ಗಟ್ಟಿತನ ನೀವು ಉಲ್ಲೇಖಿಸಿದ ಕನ್ನಡ ಲೇಖಕಿಯರಲ್ಲಿ ಇಲ್ಲವಾ? ಏನೋ ಹೇಳಬೇಕು ಅಂತ ವಿಚಾರ ಮಾಡ್ಯಾರ. ಆದರ ಅವರೊಳಗ ಕಟ್ಟುಪಾಡದಾವ. ಹೆಣ್ಣಿನ ಅಸಹಾಯಕತೆ ದೌರ್ಬಲ್ಯ ತಳಮಳ ಶೋಷಣೆಯ ದನಿ ಅದಾವ. ಆದರ ಇವರಷ್ಟು ಡೇರಾಗಿ ಹೇಳೋಕೆ ಆಗಿಲ್ಲ. ಹಂಗ ಹೇಳೊ ತಾಕತ್ತು ಬರಬೇಕಾದರ ಪರಿಣಾಮ ಎದುರಿಸೊ ಧೈರ್ಯ ಬೇಕು. ನಾನು ಯಂಗಿದ್ದಾಗ ಬ್ಯೂಟಿಫುಲ್ ಇರಬಹುದು. ಯಾರೊ ಕಿರುಕುಳ ಕೊಟ್ಟಿರಬಹುದು. ನಾನು ಇಂಟಲೆಕ್ಚುವಲ್ ಪರ್ಸನ್ ಲವ್ ಮಾಡ್ತೀನಿ ಅಂತ ತಿಳ್ಕೋರಿ. ಬಟ್ ಐ ಕಾಂಟ್ ಎಕ್ಸಪ್ರೆಸ್ ಇಟ್. ನನಗ ಹತ್ತಿಕ್ಕೊ ಫ್ಯಾಮಿಲಿ ಬೈಂಡಿಂಗ್ಸ್ ಅವ. *ಹತ್ತಿಕ್ಕಿದ್ದನ್ನು ಹೇಳಲೇಬೇಕಾದಾಗ ಏನು ಮಾಡ್ತೀರಿ? ನಮ್ಮ ಬದುಕಿಗೆ ಗಂಡ-ಮಕ್ಕಳು-ಮನೆ ಅಂತ ಒಂದು ಚೌಕಟ್ಟಿಲ್ಲ. ಸಾದಾ ಪಿಚ್ಚರ್ ನಾವು. ಯಾರಾದರೂ ಮುಟ್ಟಿದರ ಹರದ ಹೋಗ್ತೀವಿ. ಅಷ್ಟು ಡೆಲಿಕೇಟ್ ಇರತೇವಿ. ನಮ್ಮ ಡಿಗ್ನಿಟಿ ಆಫ್ ಲೈಫ್ ಹೋಗತದ. ಆದರೆ ಯಾರೂ ಮುಟ್ಟಿದರೂ ಸೇಫ್ ಆಗಿರೋಕೆ ಸಬ್ ಕಾನ್ಶಿಯಸ್ ಕ್ಯಾರಕ್ಟರ್ಸ್ ಸೃಷ್ಟಿ ಮಾಡಕೋತೀವಿ. ನಮ್ಮ ಸಿಟ್ಟು ಸೆಡವು ಅದರ ತ್ರೂನೇ ಎಕ್ಸಪ್ರೆಸ್ ಮಾಡಿಬೀಡ್ತೀವಿ. *ಬರೆಹ ಕಲಾಭಿವ್ಯಕ್ತಿ ಮಾತ್ರವಲ್ಲ, ವೈಯಕ್ತಿಕ ತಲ್ಲಣಗಳ ಬಿಡುಗಡೆ ಕೂಡ. ಖಂಡಿತಾ. ಅಸಹಾಯಕತೆ, ದೇಹದ ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ವರ್ ಸ್ಟ್ರಾಂಗ್ ಇನ್ ಫ್ರಂಟ್ ಆಫ್ ಹಂಗರ್? ಯಾರು ನಮ್ಮನ್ನ ನೋಡಿದರೂ ಒಂದು ಕೆಟ್ಟಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ, ಅದು ಸಣ್ಣ ಮಾತಲ್ಲ. ಮತ್ತ ನಾವು ಹೆಲ್ತೀ ವಿಮೆನ್. ಎಲ್ಲಾ ಹಾರ್ಮೊನ್ಸ್ ಇಂಪ್ಯಾಕ್ಟ್ ಮಾಡ್ಯಾವ ನಮ್ಮ ಬ್ಯಾಡಿಮ್ಯಾಲ. ಗರ್ಭಕೋಶ ತಗಸೋಕೆ ಹೋದಾಗ, ಡಾಕ್ಟರು `ಯಾಕ್ರೀ ಮೇಡಂ? ಇಷ್ಟು ಹೆಲ್ತಿ ಅದೀರಿ, ಮದುವೆ ಯಾಕ ಆಗಲಿಲ್ಲ? ಎಷ್ಟು ಇಫೆಕ್ಟ್ ಆಗ್ಯದ ಬಾಡಿ ಮ್ಯಾಲ. ಮದುವೆಯಾಗಿ ಮಕ್ಕಳಾಗಿದ್ದರೆ ಹಾರ್ಮೋನ್ ಸೈಕ್ಲಿಂಗ್ ಸರಿಯಾಗತಿತ್ತು' ಅಂದರು. ಏನು ಹೇಳ್ತೀರಿ ಇದಕ್ಕ? ನಾವೆಷ್ಟೇ ಓದಿರಲಿ, ಒಬ್ಬ ಹೆಣ್ಣಿಗೆ ಎಮೋಶನಲ್ ಬೈಂಡಿಂಗ್ಸ್ ಬೇಕು. ಒಬ್ಬ ಸಂಗಾತಿ ಬೇಕು-ಅಂವ ಎಂಥಾವನೇ ಇರವಲ್ಯಾಕ. ನಮ್ಮ ಅನುಭವ ಅದ. ಉಧೋಉಧೋ ಎಲ್ಲಮ್ಮ ಅನ್ನೋ ಪರಿಸ್ಥಿತಿ ಬಂದುಬಿಡ್ತು ನಮಗ. *ಅಕ್ಕ ಕೂಡ ತನಗೆ ತನ್ನ ದೇಹದ ಭಾವಗಳು ಕಾಡುವುದನ್ನು ಹೇಳಿಕೊಳ್ತಾಳೆ. ಆಕಿಗೂ ಈ ಹಾರ್ಮೋನಿಯಸ್ ಚೇಂಜ್ಗಾಳು ಕಾಡ್ಯಾವ. ಒಂದು ಲೆಕ್ಕದಲ್ಲಿ ಆಕಿ ಸ್ಕಿಜೋಫ್ರೇನಿಕ್. ಗಂಡನ್ನ ತೃಪ್ತಿಪಡಿಸಲು ಆಗಲಿಲ್ಲ. ಅಂವ ಕೌಶಿಕ ಒಟ್ಟ ತಿರಸಟ್ಟಿ. ಆಕಿ ಬಾಡಿ ಕೋಮಲ ಇತ್ತು. ಶಿ ಕುಡ್ ನಾಟ್ ಟಾಲರೆಟ್ ಹಿಸ್ ವೈಲನ್ಸ್. ಗಂಡಸು ಬೇಕು. ಆದರ ಇಂಥಾ ಕ್ರೂರ ಗಂಡ ಬ್ಯಾಡ ಅಂತ್ಹೇಳಿ ಚೆನ್ನಮಲ್ಲಿಕಾರ್ಜುನನ್ನ ಹುಡ್ಕೊಂಡು ಹೋದಳು. ಶಿ ನೀಡ್ಸ್ ಎ ಕಂಪ್ಯಾನಿಯನ್. ಚೆನ್ನಮಲ್ಲಿಕಾರ್ಜುನ ತನ್ನ ಗಂಡ ಅಂತ ಸಿಂಬಲ್ ಇಟಕೊಂಡು ವಚನ ಬರದಳು. ಚೆನ್ನಮಲ್ಲಿಕಾರ್ಜುನನ ಬಿಟ್ಟು ಉಳದೋರನೆಲ್ಲ ಭಂಡರು ಅಂದಳು. *ನೀವು ಮದುವೆ ಯಾಕೆ ಆಗಲಿಲ್ಲ? ಬಡತನದಿಂದ. ಹೊಟ್ಟೆ ಹಸಿವಿನ ಮುಂದೆ ದೇಹದ ಹಸಿವು ಯಾವ ಲೆಕ್ಕ? ನಮ್ಮಪ್ಪ ಜಾತಕ ಅನ್ನಾಂವ. ನಾವು ಡಬಲ್ ಗ್ರಾಜುಯೇಟ್ಸು. ಸಾವಿರಕ್ಕ ಒಂದು ಜಾತಕ ಹೊಂದೋದು. ಅಪ್ಪಯ್ಯನ ಚಪ್ಪಲ್ ಹರದ ಹೋಗೋದು. ಹೊಸ ಚಪ್ಪಲ್ ಕೊಡಸಬೇಕಂದ್ರ ನಾವು ನಾಲಕ್ಮನಿ ಟೂಶನ್ ಜಾಸ್ತಿ ಹೇಳಬೇಕು. ಇಷ್ಟು ಬಡತನವಿದ್ದರೂ ಯಾರನ್ನೂ ಬೇಡಲಿಲ್ಲ. ಕಾಡಲಿಲ್ಲ. ಈ ಮಣ್ಣೊಳಗೆ ಸತ್ವ ಹೀರಿಕೊಂಡು ಬೆಳದಿವಿ. *ಆಧುನಿಕ ಸ್ತ್ರೀವಾದದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಬೇಕು. ಒಟ್ಟ ಈ ಸ್ತ್ರೀವಾದ ನನಗ ಇಷ್ಟವಿಲ್ಲ. ವಾಟೆವರ್ ಐ ಫೀಲ್, ಐ ರೈಟ್. ಈ ಬಾಡಿ ಹಾರ್ಮೋನ್ಸ್ ಚೇಂಜದೊಳಗ ನಾವೆಲ್ಲ ಒಂದೇ ಹ್ಯೂಮನ್ ಬೀಯಿಂಗ್ಸ್. ಅಟ್ ದಿ ಸೇಮ್ ಟೈಂ, ಹರ್ ಸೆಕ್ಸುವಲ್ ಸ್ಯಾಟಿಸಪ್ಯಾಕ್ಷನ್ ವಿಲ್ ಬಿ ಕಂಪ್ಲೀಟೆಡ್ ಬೈ ಎ ಮ್ಯಾನ್ ಓನ್ಲಿ. ದೆರೀಸ್ ಕಂಪಲ್ಸರಿ ಅಟೆಂಡನ್ಸ್ ಆಫ್ ಎ ಮ್ಯಾನ್ ಟು ವುಮನ್ ಲೈಫ್. ಜೀವನದ ತತ್ವ ಅದು. ಅರ್ಧನಾರೀಶ್ವರ ಕಾನ್ಸೆಪ್ಟ್ ಏನಂದರ, ಶಿವ-ಪಾರ್ವತಿ. ಪ್ರತಿ ಗಂಡೊಳಗೆ ಒಬ್ಬ ಹೆಣ್ಣಿರ್ತಾಳ. ಪ್ರತಿ ಹೆಣ್ಣೊಳಗ ಒಂದು ಗಂಡಿರ್ತಾನ. ಒಬ್ಬರು ಬಿಟ್ಟರೆ ಇನ್ನೊಬ್ಬರಿಲ್ಲ. ಈಗ ಯಾರಾದರೂ ಕಂಡರೆ ನನ್ನ ಫ್ರೆಂಡ್ ಅನ್ತೀನಿ. ಈಗ ಅದನ್ನೆಲ್ಲ ಮೀರಿ ಹೋಗಿಬಿಟ್ಟೀನಿ. *ಹಿಂತಿರುಗಿ ನೋಡುವಾಗ ಜೀವನ ಹೇಗನಿಸುತ್ತೆ? ನೋ ರಿಪೆಂಟೆನ್ಸ್. ವಿ ಮೇಂಟೆನ್ಡ್ ದಿ ಡಿಗ್ನಿಟಿ ಆಫ್ ಲೈಫ್. ಇಫ್ ಯು ಆರ್ ಮಾರಲಿ ಸ್ಟ್ರಾಂಗ್ ಇದು ಬರುತ್ತೆ. *ನೀವು ಜೀವನದಲ್ಲಿ ದೊಡ್ಡದು ಅಂತ ಭಾವಿಸೊ ಆದರ್ಶ ಯಾವುದು? ಪ್ರೀತಿ. ಅದಕ್ಕ ರೊಕ್ಕ ಬೇಡ ರೂಪಾಯಿ ಬೇಡ. ಸುಮ್ನೆ ಹಂಚಿಕೊಂಡು ಹೋಗಬೇಕು. ನಾನು ಜಾಬ್ ಕಳಕೊಂಡಾಗ ನಮ್ಮಕ್ಕ, `ಕಕ್ಕೂ, ಸಾಲಿ ಬಿಡಿಸಿದರೇನಾತು? ಒಂದು ಬೇವಿನಮರದ ಕೆಳಗ ಕುಂತು ನಾಲ್ಕು ಮಕ್ಕಳಿಗೆ ಪ್ರೀತಿ ಹಂಚು' ಅಂದಿದ್ಲು. ಪ್ರೀತಿ ಹಂಚಿದಷ್ಟೂ ತನು ತುಂಬತೈತಿ. ಬಾವಿಗೆ ಮ್ಯಾಲಿಂದ ನೀರುಬಿಟ್ಟರ ಕಳಕಾಗೈತಿ. ಕೆಳಗಿಂದ ಜಗ್ಗಿಜಗ್ಗಿ ತಗದ ಹಂಚಿದರ ಸೆಲಿ ಉಕ್ಕತೈತಿ. ಈಗ ನೀವು ನಮ್ಮನಿಗೆ ಬಂದಿರಿ. ಯಾವ ಕಾರಣಕ್ಕ ಬಂದಿರಿ? ಕಾರಣವಿಲ್ಲದ ಪ್ರೀತಿ. ನೀವೆಲ್ಲೇ ಹೋಗರಿ, ಪ್ರೀತಿ ಇದ್ದರೆ ಮಾತ್ರ ಒಳ್ಳೇ ಬರಹ ಹುಟ್ಟತದ. ಅಂತಃಕರಣ ಆದ್ರ್ರತೆ ಇಲ್ಲದೆ ದೊಡ್ಡ ಸಾಹಿತ್ಯ ಹುಟ್ಟೋಲ್ಲ. ಈಗ ಈ ಅಂತಃಕರಣ ಇರೋ ಎಷ್ಟೆಷ್ಟು ಒಳ್ಳೇ ಕತೆ ಕವಿತೆಗಳು ಬರ್ತಿದಾವ್ರೀ ಹೊಸ ತಲೆಮಾರಿನಿಂದ. ಸಂತೋಷ ಆಗ್ತದ. *ನೀವು ಸಾಮಾನ್ಯವಾಗಿ ಬರೆಯುವ ಕ್ರಮ ಯಾವುದು? ಒಂದು ಕತೆ ಬರಿಯೋಕೆ ಹತ್ತಿದರೆ, ಮೊದಲನೇ ಸಾಲಿನಿಂದ ಕೊನೇ ಸಾಲಿನವರೆಗೆ ಎಂದೂ ಭಾಷೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಭಾಷೆ ದುಡಿಸಿಕೊಳ್ಳೋದು ಅಂತಾರಲ್ಲ, ನನಗ ಅರ್ಥಾಗವೊಲ್ಲದು. ನಿತ್ಯ ಜೀವನದೊಳಗೆ ಮಂದಿ ಮಾತಾಡೋದು ಕೇಳ್ರಿ ನೀವು. ಎಂತೆಂಥ ರೂಪಕ ಬಳಸ್ತಾರ? ಬದುಕು ಕಂಡರೆ ಸಾಕು, ಭಾಷೆ ತಾನೇ ದುಡೀತದ. ಕತೆಯಾಗಲಿ ಕವಿತೆಯಾಗಲಿ, ಬಂಧಗಿಂಧ ಏನೂ ವಿಚಾರ ಮಾಡೋದಿಲ್ಲ. ಒಂದು ಸಿಟ್ಟಿಂಗನೊಳಗ ಸೀದಾ ಬರದಬೀಡೋದು. ಐವತ್ಮೂರನೇ ವಯಸ್ಸಿಗೆ ಬರವಣಿಗೆ ಆರಂಭ ಮಾಡಿದೆ. ಮೂವತ್ತು ಪುಸ್ತಕ ಬಂದಾವ. ಅದೆಷ್ಟು ಗಂಟಿತ್ತೊ ಅದನ್ನೆಲ್ಲ ಕರಗಿಸಿಬಿಟ್ಟೆ. ಸ್ಟಿಲ್ ಐ ಹ್ಯಾವ್ ಲಾಟ್ ಆಫ್ ಸ್ಟ್ರೆಂತ್. ಬರೀವಾಗ ನನಗೇ ತಿಳಿದಿದ್ದಂಗ ಒಂದು ಪಾಸಿಟಿವ್ನೆಸ್ ಬಂದುಬಿಟ್ಟಿರ್ತದ. *ನಿಮಗೆ ಬಹಳಷ್ಟು ಹಿರಿಕಿರಿ ಲೇಖಕರ ಸಂಪರ್ಕ ಇತ್ತು. ಹ್ಯಾಗೆ ಸಾಧಿಸಿದಿರಿ? ಹ್ಯಾಗಂದ್ರಿ? ಕನ್ನಡದಲ್ಲಿ ಯಾರಾದರೂ ಚೂರು ಒಳ್ಳೇದು ಬರದರ ಸಾಕು, ಹುಡುಕ್ಯಾಡಿ ಪುಸ್ತಕ ತರಸ್ಕೋತೀನಿ. ಓದಿದ ಕೂಡಲೇ ಅವರ ವಿಳಾಸ ಹುಡುಕಿ ಅಭಿಪ್ರಾಯ ಬರೀತೀನಿ. ಅನಂತಮೂರ್ತಿ, ಗಿಬ್ರಾನನ ಪ್ರೇಮಪತ್ರಗಳು ಓದಿ ರಾತ್ರಿ ಹನ್ನೊಂದಕ್ಕೆ ಫೋನು ಮಾಡಿದ್ದರು. ಕಾರಂತಜ್ಜರನ್ನ ನಮ್ಮ ಸಾಲಿಗೆ ಕರೆಸಿದ್ದೆವು. ಅವರಿಗೆ ಜ್ವರ ಬಂದಿತ್ತು. ನಮ್ಮನ್ಯಾಗಿದ್ದರು. ತಿಳೀಸಾರು ಅನ್ನ ಹಾಕಿ, ಎರಡು ದಿನ ಅವರ ಸೇವಾ ಮಾಡಿದೆ. ಎಲ್ಲೆಲ್ಲೊ ತಿರುಗಾಡಿ ಬಂದಿದ್ರಲ್ಲ, ಧೋತರಾ ಬನಿಯನ್ ಗಲೀಜಾಗಿದ್ದವು. ಪಾಪ ವಯಸ್ಸಾದೋರು ಎಲ್ಲಿ ಒಕ್ಕೋಬೇಕರಿ? ಒಗದು ಹಾಕಿದೆ. ಗಾಬರಿ ಆಗಿಬಿಟ್ಟಿದ್ದರು ಅವರು. ಊರಿಗೆ ಹೋದಾಗ ಮಾಲಿನಿ ಮುಂದ ಹೇಳಿದ್ದೇ ಹೇಳಿದ್ದು `ಈ ಮಕ್ಕಳು ನನ್ನ ಧೋತ್ರಾ ಒಗದು ಹಾಕಿದ್ದರು' ಅಂತ. *ಬೇರೆ ಹವ್ಯಾಸ ಯಾವುದು? ಓಲ್ಡ್ ಸಾಂಗ್ ಭಾಳ ಕೇಳ್ತೀನ್ರಿ. ಹಿಂದಿ ಸಿನಿಮಾ ಹೆಚ್ಚು ನೋಡ್ತೀನಿ. ಸಾಹಿರ್ ಲುಧಿಯಾನ್ವಿ, ಜಾವೇದ್ ಅಖ್ತರ್ ಹಾಡು ಇಷ್ಟ. ಹಿಂದಿ ಸಿನಿಮಾ ರಿಚ್ ಆಗಲಿಕ್ಕೆ ಉರ್ದು ಸಾಂಗುಗಳೇ ಕಾರಣ. ಪ್ರತಿಹಾಡಿನ ಮೀನಿಂಗನ್ನ ಧ್ಯಾನಿಸ್ತೀನಿ. `ತೇರಾ ಮೇರಾ ಪ್ಯಾರ್ ಅಮರ್, ಫಿರ್ ಕ್ಯೂ ಮುಝಕೊ ಲಗತಾ ಹೈ ಡರ್'. ಇಲ್ಲಿ ಇಂಟೆನ್ಸಿಟಿ ಆಫ್ ಲವ್ ಅದೆಯಲ್ಲ, ಅದನ್ನ ಕನ್ನಡದೊಳಗೆ ಹೇಳಾಕ ಬರೋದಿಲ್ಲ. ಸಾಹಿರ್ ಈಜ್ ಗ್ರೇಟ್! *ಓದುಗರ ಜತೆ ನಿಮ್ಮ ಅನುಭವ ಎಂಥದು? ಬಜಾರಿಗೆ ಹೋದರೆ, ಕಾಯಿಪಲ್ಲೆ ಮಾರೋಳು ಹಸೀನಾ ಅನ್ನೋವಾಕಿ, `ಬಾಯಾರೆ, ಹೊಸ ಪುಸ್ತಕ ಇದ್ದರೆ ಕೊಡ್ರೀ' ಅಂತಾಳ. ಆಕೀದು ಎಸೆಸೆಲ್ಸಿ ಆಗ್ಯಾದ. ನನ್ನೆಲ್ಲ ಪುಸ್ತಕ ಓದ್ಯಾಳ. `ಲೇ, ಹಿಡಕೊಂಡ ತಪ್ಪಡಿ ಇಳಸೋಕೆ ಟೈಮಿಲ್ಲ ನಿನಗ. ಯಾವಾಗ ಓದ್ತೀಯೇ?' ಅಂದರ, `ರಾತ್ರಿ ಓದ್ತೀನ್ರಿ' ಅಂತಾಳ. ಇದು ಒಬ್ಬ ರೈಟರಿಗೆ ಸಿಗೋ ನಿಜವಾದ ಬಹುಮಾನ. ಮತ್ತೊಬ್ಬ ರೈತ ಅಣ್ಣಿಗೇರಿಯಂವ, ನನ್ನ ದೊಡ್ಡ ಫ್ಯಾನ್. ಫೋನು ಮಾಡ್ತಾನ, ಯಾವುದಾದರೂ ಪುಸ್ತಕ ಬಂದರೆ ಹೇಳ್ರಿ, ತರಸ್ಕೋತೀನಿ ಅಂತ. ಹಡಗಲಿ ಎಕ್ಸ್ ಎಂಎಲ್ಎ. ಒಬ್ಬರು `ಖಲೀಲ್ ಗಿಬ್ರಾನ್' ಪುಸ್ತಕ ಓದಿ ಒಂತಾ¸ಸು ಮಾತಾಡಿದರು. ಮಂದಿಗೆ ಮುಟ್ಟೈತೊ ಇಲ್ರೀ ನನ್ನ ರೈಟಿಂಗು? ಹಂಗ ನೋಡಿದರೆ, ಯೂನಿವರ್ಸಿಟಿ ಹುಡುಗರೇ ಪುಸ್ತಕ ಓದಂಗಿಲ್ಲ. *ನಿಮ್ಮ ಬರೆಹದಲ್ಲಿ ಮೃತ್ಯುಪ್ರಜ್ಞೆ ಮತ್ತೆಮತ್ತೆ ಬರುತ್ತೆ. ಬಿಕಾಸ್, ಡೆತ್ ಈಜ್ ರಿಲಿಫ್, ಹ್ಯಾಪಿನೆಸ್. ಏನೈತರಿ ಈ ದರಿದ್ರ ಬಾಡಿಯೊಳಗ. ಆದರೆ ಸೌಲ್ ಈಸ್ ಲೈಫ್. ನಮ್ಮಪ್ಪಯ್ಯ ಸತ್ತಾಗ ಅವನ ಮಾರಿ ಇಷ್ಟು ಶಾಂತ ಇತ್ತರಿ. ಡೆತ್ತನ್ನು ನಾವು ಕಣ್ಣಾರೆ ನೋಡೀವಿ. ಅಪ್ಪಯ್ಯನಿಗೆ ಅನ್ನನಾಳದ ಕ್ಯಾನ್ಸರ್ ಆಗಿತ್ತು- ಕರದ ಎಣ್ಣಿಯೊಳಗ ಕೆಲಸ ಮಾಡಿಮಾಡಿ. `ಅರವತ್ತು ವರ್ಷ ಬದುಕೀನಿ. ಈಗ ಸಾಯ್ತೀನಿ ಅಂತ ವಿಚಾರ ಮಾಡಬ್ಯಾಡ್ರಿ' ಅನ್ನೋರು. ವೆನ್ ಐ ವಾಜ್ ಆನ್ ಡೆತ್ ಬೆಡ್, ಆತು ಇನ್ನು ದಾಟಿಹೋಗ್ತೀನಿ. ಎರಡಕ್ಷರ ಬರೆಯೋಣ ಅಂತ ಶುರುಮಾಡಿದೆ. ಸಾವು ಇವತ್ತೇ ಬರಲಿ. ಮಕ್ಕಳಿಲ್ಲ ಮರಿಲ್ಲ. ಅದಕ್ಯಾಕ ಚಿಂತೆ? ಅಕ್ಸೆಪ್ಟಿಂಗ್ ಡೆತ್ ಈಸ್ ಲವ್ ಆಫ್ ಲೈಫ್. ಟ್ರೂತ್ ಆಫ್ ಲೈಫ್. ಯಾರಾದರೂ ಸತ್ತರೆ ನಾನು ಭಾಳ ಅಳೋಕೆ ಹೋಗಲ್ಲ. ಯಪ್ಪಾ, ಪಾರು ಮಾಡಿದೆಯಲ್ಲಪ್ಪ ಇವರನ್ನ ಅಂತೀನಿ. ಇದು ನಮ್ಮ ನಿಮ್ಮ ಕೊನೀ ಭೆಟ್ಟಿ ಆಗಬಹುದು, ಯಾರಿಗ್ಗೊತ್ತು? ಆದರೆ ಲೈಫ್ ಈಜ್ ಬ್ಯೂಟಿಫುಲ್. ವೆದರ್ ಐ ಮೇಬಿ ಹಿಯರ್ ಆರ್ ನಾಟ್, ಲೈಫ್ ಈಜ್ ಗೋಯಿಂಗ್ ಆನ್. ******************** ಲೇಖಕಿ ಕಸ್ತೂರಿ ಬಾಯರಿಯವರು ಈಚೆಗೆ ನಿಧನರಾದರು. ಅವರು ಕರಾವಳಿಯಿಂದ ಬದಾಮಿಗೆ ವಲಸೆ ಮಾಡಿದ ತಮ್ಮ ಕುಟುಂಬ ಜತೆ ಬಾಲ್ಯದಲ್ಲೇ ಬಂದವರು. ವೃತ್ತಿಯಿಂದ ಆಂಗ್ಲ ಶಿಕ್ಷಕಿಯಾಗಿದ್ದ ಅವರು, ಬಾಳಿನ ಕೊನೆಯ ವರ್ಷಗಳಲ್ಲಿ ಬರೆಹ ಆರಂಭಿಸಿದರು. ಕವಿತೆ, ಕತೆ, ಪತ್ರ, ಪ್ರಬಂಧ ಮತ್ತು ಅನುವಾದ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದರು. ಅವರ ಸಾಹಿತ್ಯವು, ಬಾಲ್ಯದ ಬಡತನ, ವೃತ್ತಿಜೀವನದ ಅಭದ್ರತೆ ಹಾಗೂ ದೈಹಿಕ ಬೇನೆಗಳಿಂದ ಗಾಯಗೊಂಡ ವ್ಯಕಿತ್ವವೊಂದು, ಬದುಕಿಗೆ ಅರ್ಥ ಕಂಡುಕೊಳ್ಳಲು ಮಾಡಿದ ಪ್ರಯತ್ನದಂತಿದೆ. ಭಾವುಕ ತೀವ್ರತೆಯಿಂದ ಪ್ರವಹಿಸುವ ಭಾಷೆ ಮತ್ತು ಶೈಲಿ ಅದರ ಲಕ್ಷಣ. ಅಲ್ಲಿ ಭಗ್ನಹೃದಯದ ಸ್ತ್ರೀಪಾತ್ರಗಳು ಸಾಮಾನ್ಯವಾಗಿದ್ದು, ಅವು ಬಾಳ ಬಿಕ್ಕಟ್ಟುಗಳಲ್ಲಿ ಹಾಯುತ್ತ, ನೆಮ್ಮದಿ ಅರಸುತ್ತ, ತಮ್ಮತನ ಕಂಡುಕೊಳ್ಳಲು ಸೆಣಸಾಡುವ ಸನ್ನಿವೇಶಗಳಿವೆ. ಧರ್ಮ-ಜಾತಿ-ಭಾಷೆಯ ಸರಹದ್ದುಗಳಾಚೆ ಸಮಸ್ತ ಮನುಷ್ಯರಲ್ಲಿ ನೆಲೆಸಿರುವ ಪ್ರೀತಿ ಮತ್ತು ಮನುಷ್ಯತ್ವವನ್ನು ದರ್ಶನದಂತೆ ಅರಸುವುದು ಅವರ ಸಾಹಿತ್ಯದ ಆಶಯ. ಕಸ್ತೂರಿಯವರು ಕರಾವಳಿ ಹಾಗೂ ಬಿಜಾಪುರ ಸೀಮೆಯ ಜನಜೀವನದ ವಿವಿಧ ಮುಖಗಳನ್ನು ತಮ್ಮ ಬರೆಹದಲ್ಲಿ ಶೋಧಿಸಿದವರು. ಅವರ ಕತೆಗಳು ಎರಡು ವಿಭಿನ್ನ ಪ್ರಾದೇಶಿಕ ಸೀಮೆಗಳ ಅನುಭವವನ್ನು ಹಾಸುಹೊಕ್ಕಿನ ಎಳೆಗಳನ್ನಾಗಿ ಮಾಡಿ ನೇದ ಪತ್ತಲದಂತಿವೆ. ಅವರು ಸೋದರಿ ರೋಹಿಣಿಯವರ ಜತೆ ಬದಾಮಿಯಲ್ಲಿ ವಾಸವಾಗಿದ್ದರು. ಇಬ್ಬರೂ ಸಾಹಿತ್ಯದ ಗಾಢ ಓದುಗರು; ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ತರಿಸಿಕೊಂಡು ಬಂದವರಿಗೆಲ್ಲ ಹಂಚುತ್ತಿದ್ದವರು. ಅವರು ಡಯಾಬಿಟೀಸಿನ ದೆಸೆಯಿಂದ ದೃಷ್ಟಿ ಕಳಕೊಂಡು ತಮಗೆ ಓದು ಸಾಧ್ಯವಾಗುತ್ತಿಲ್ಲ ಎಂದು ಹಲುಬುತ್ತಿದ್ದರು. ನಾನೂ ಬಾನೂ ಕಳೆದ ವರ್ಷದ ನವೆಂಬರ್ 8ರಂದು ಬದಾಮಿಗೆ ಹೋದೆವು. ಅವರೊಟ್ಟಿಗೆ ಒಂದು ದಿನವಿದ್ದೆವು. ಆಗ ನಡೆದ ಮಾತುಕತೆಯಿದು. ಈ ಮಾತುಕತೆಯಲ್ಲಿರುವ ತಲ್ಲಣಗಳು ಬಾಯರಿಯವರವು ಮಾತ್ರವಲ್ಲ; ಬಡತನ, ಸಂಪ್ರದಾಯ, ಕಾಯಿಲೆ, ಅಭದ್ರತೆಯೊಳಗೆ ಪಾಡು ಪಡುವ ಎಲ್ಲರವು ಎಂಬಂತೆ ಸಾರ್ವತ್ರೀಕರಣ ಪಡೆದಿವೆ. ಇಲ್ಲಿರುವ ಅಂತರ್ಧ್ರ್ಮೀಯ ಮನುಷ್ಯ ಸಂಬಂಧಗಳು, ಕಠೋರ ಸಂಪ್ರದಾಯವು ತನ್ನ ಜಿಗುಟುತನ ಕಳೆದುಕೊಳ್ಳುವ ಮತ್ತು ದುಡಿವ ಜನ ಬದುಕು ಕಟ್ಟಿಕೊಳ್ಳುವ ಚಿತ್ರಗಳು ಅಪೂರ್ವವಾಗಿವೆ. ಇಲ್ಲಿ ಹೊಮ್ಮಿರುವ ಚಿಂತನೆ, ದರ್ಶನ ಬದುಕಿನ ಕುದಿಯೊಳಗಿಂದಲೇ ಮೂಡಿದ್ದು. ಸಾವು ಬದುಕಿರುವ ಎಲ್ಲರೂ ಒಮ್ಮೆ ಮುಖಾಮುಖಿ ಮಾಡಬೇಕಾದ ಸತ್ಯ. ಸಾವಿಗೆ ಮುನ್ನ ಬದುಕಿದ್ದವರು ಆಡುವ ಮಾತು, ಹಂಚಿಕೊಳ್ಳುವ ಅನುಭವ ಮತ್ತು ಚಿಂತನೆಗಳು, ಮುರಿದ ಬದುಕನ್ನು ಕಟ್ಟಿಕೊಳ್ಳುವ ಎಲ್ಲರಿಗೂ ಬೇಕಾದ ಜೀವನತತ್ವವಾಗಿರುತ್ತವೆ. (ಮಯೂರ ಏಪ್ರಿಲ್, 2022) ಫೋಟೊ: ಕಲೀಮ್ ಉಲ್ಲಾ Rahamath Tarikere dStonoep1 e l , m D 2 e 2 8 1 i8 7 0 0 l2 c b t 6 maa e 4 r ·

Thursday, April 21, 2022

ನಾಡಿನ ಖ್ಯಾತ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ನಮ್ಮನ್ನಗಲಿದ್ದಾರೆ. 95 ವರ್ಷಗಳ ಸಾರ್ಥಕ ಬದುಕಿನೊಂದಿಗೆ ಇಹಲೋಕದ ಇರುವು ಮುಗಿಸಿದ್ದಾರೆ.‌ ಅವರಿಂದ ತರಗತಿಯಲ್ಲಿ ಪಾಠ ಕೇಳುವ ಸೌಭಾಗ್ಯ ನನ್ನದಾಗದಿದ್ದರೂ ಬದುಕಿನಲ್ಲಿ ಗುರು ಸ್ಥಾನ ತುಂಬಿದವರು ಮುಡೂರು ಸರ್. ನನ್ನ ಅಕ್ಷರ ಬದುಕಿನ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿ ಬೆಳೆಸಿದವರು ಅವರು. ಮುಡೂರು ಬದುಕಿನ ಅಮೃತ ಮಹೋತ್ಸವದ ಹೊತ್ತು ಅವರ ಕುರಿತಾಗಿ ಬಂದ ಅಭಿನಂದನಾ ಹೊತ್ತಗೆಯ ಸಂಪಾದಕನಾಗುವ, ಅವರ ಕುರಿತಾಗಿ ಹೊರ ಬಂದ ಸಾಕ್ಯ್ಯಚಿತ್ರದ ನಿರ್ದೇಶಕನಾಗುವ ಅವಕಾಶ ನನಗೊದಗಿದೆ. ಮೂರು ವರ್ಷದ ಹಿಂದಷ್ಟೇ ನಾಡಿಗೆ ನಮಸ್ಕಾರ ಕೃತಿ ಮಾಲಿಕೆಯಲ್ಲಿ ಮುಡೂರರ ಕುರಿತಾಗಿ ಕೃತಿ ಬರೆಯುವ ಅವಕಾಶವೂ ಲಭಿಸಿದೆ.‌ ಇದಕ್ಕಿಂತ ಸೌಭಾಗ್ಯ ಬೇರೇನು ಬೇಕು? ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಪಂಜದೊಂದಿಗೆ ಬೆಳೆದು, ಪಂಜವನ್ನು ಬೆಳೆಸಿ, ಬೆಳಗಿಸಿ ತಾನೂ ಬೆಳಗುವಂತೆ ಬೆಳೆದ ತಮ್ಮಯ್ಯ ಗೌಡ ಮುಡೂರು ಬಂಟಮಲೆಯ ತಟದಿಂದಲೇ ಸ್ಪೂರ್ತಿ ಪಡೆದು ಕೀರ್ತಿ ಗಳಿಸಿಕೊಂಡವರು. ಸಾಂಸ್ಕೃತಿಕ ದೌತ್ಯಕ್ಕೆ ಹೆಗಲು ಕೊಟ್ಟವರು. ಇವರ ಸಂಘಟನೆ ಹಲವು. ಅಲ್ಲೆಲ್ಲಾ ಸಾರಥ್ಯವೇ ಇವರಿಗೆ ಒಲವು. ಇವರಿದ್ದರೆ ಅಲ್ಲಿ ಗೆಲುವಿನ ಹೊನಲು, ಎಲ್ಲೆಲ್ಲೂ ಸಂವೇದನಾ ಫಸಲು. ಹೀಗೆ ಕನ್ನಡದ ಮುನ್ನಡೆಗೆ ಮುನ್ನುಡಿ ಬರೆದವರು ಮುಡೂರು. ಶ್ವೇತ ಶುಭ್ರ ಧೋತಿ, ಅದಕ್ಕೊಪ್ಪುವ ಕದ್ದರ್ ಅಂಗಿ, ಕೈಯಲ್ಲೊಂದು ಪುಸ್ತಕ, ಕಿಸೆಯಲ್ಲೊಂದು ಪೆನ್ನು, ಮುಖದಲ್ಲಿ ಅಳಿಯದ ಮಂದಹಾಸ, ಮಧ್ಯಮ ವೇಗದ ನಡಿಗೆ.... ಹೌದು ಇವರೇ ಮುಡೂರು. ಅರಿಯದ ಪ್ರೀತಿ, ಅಳಿಸಲಾಗದ ಸ್ನೇಹ, ಮರೆಯಲಾಗದ ಮರೆಯಬಾರದ ನೆನಪುಗಳು, ಬಿಡಿಸಲಾಗದ ಬಂಧನ. ಇದಕ್ಕೆಲ್ಲಾ ಪ್ರತೀಕ ಮುಡೂರುರವರ ನಿಸ್ಪೃಹ ವ್ಯಕ್ತಿತ್ವ. ಸಾಹಿತಿಯಾಗಿ, ಸಂಘಟಕನಾಗಿ, ಶಿಕ್ಷಕನಾಗಿ, ಸಾಮಾಜಿಕ ಸೇವೆಯ ಹರಿಕಾರನಾಗಿ ಮೆರೆದ ಮುಡೂರು ಮುಡೂರಿನಿಂದ ಬಂದವರು. ಮುಡೂರರಾಗಿ ಬೆಳೆದವರು. ಮುಡೂರು ತಮ್ಮ ಜೀವನದ ಬಹುಕಾಲ ಅಧ್ಯಾಪಕರಾಗಿದ್ದವರು. ನಿವೃತ್ತಿಯ ನಂತರ ಕೃಷಿಕರಾದವರು. ಈ ಎಲ್ಲ ವರ್ಷಗಳಲ್ಲಿ ಅವರು ವಾಸಿಸಿದ್ದ ಹಳ್ಳಿಗಳಲ್ಲಿ ಮುಖ್ಯವಾದದ್ದೆಂದರೆ ಅವರು ತಮ್ಮ ಚಟುವಟಿಕೆಗಳನ್ನು ಅಧ್ಯಾಪನಕ್ಕೆ ಮಾತ್ರ ಮೀಸಲಿರಿಸದೆ ತಾವು ವಾಸಿಸಿದ ಊರುಗಳಲ್ಲಿ ಸಂಸ್ಥೆಗಳನ್ನು ಕಟ್ಟಿ ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಶ್ರಮಿಸಿದ್ದಾರೆ ಎನ್ನುವುದು. ಕೆಲವು ಸಲ ಒಂಟಿಯಾಗಿ, ಕೆಲವು ಸಲ ಸಮಾನ ಮನಸ್ಕರ ಜೊತೆಗೂಡಿ ಅವರು ಹೀಗೆ ಸಂಸ್ಥೆ ಕಟ್ಟಿದ್ದಾರೆ. ಅನೇಕರನ್ನು ಅವರ ವೃತ್ತಿ ಜೀವನ ಜೊತೆಗೆ ತಾವು ಬದುಕುವ ಪರಿಸರ, ಅಲ್ಲಿನ ಸಣ್ಣಪುಟ್ಟ ರಾಜಕೀಯ ಮುಗಿಸಿಬಿಡುತ್ತದೆ. ಅವುಗಳನ್ನು ಮೀರಿ ತನ್ನ ಸುತ್ತಲಿನ ಸಮಾಜವನ್ನು ಸ್ವಲ್ಪವಾದರೂ ತಿದ್ದಲು ಅಲ್ಲಿ ಬದಲಾವಣೆ ತರುವ ಕೆಲಸ ಮಾಡುವುದು ಮುಖ್ಯ ಅನ್ನಿಸುತ್ತದೆ. ಅದೂ ಸಣ್ಣ ಊರುಗಳಲ್ಲಿ ಹೀಗೆ ಮಾಡುವುದು ಸಂಸ್ಕೃತಿ ಪ್ರಸಾರ ದೃಷ್ಟಿಯಿಂದ ವಿಶೇಷ ಪ್ರಾಮುಖ್ಯತೆ ಪಡೆಯುತ್ತದೆ. ಮುಡೂರು ತಮ್ಮ ಜೀವಮಾನದುದ್ದಕ್ಕೂ ಇಂಥ ಕೆಲಸ ಮಾಡಿದ್ದಾರೆ. ಇದು ಸಾಹಿತ್ಯದ ಮೇಲಿನ ಪ್ರೀತಿಯಿಂದ, ಅದರ ಪ್ರಾಮುಖ್ಯತೆಯ ಅರಿವಿನಿಂದ ಮಾಡಿದ ಕೆಲಸ. ಅವರು ನಾಟಕ, ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ಜಾನಪದ ಲೇಖನ, ವ್ಯಕ್ತಿ ಪರಿಚಯ, ಕವಿತೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿಯೂ ಮುಕ್ತ ಛಂದಸ್ಸು, ಚೌಪದಿ, ಹಳೆಗನ್ನಡ, ಹೊಸಗನ್ನಡ, ಗೌಡ ಕನ್ನಡ, ಹವ್ಯಕ ಕನ್ನಡ, ತುಳು ಹೀಗೆ ಒಳ ವೈವಿಧ್ಯಗಳಿವೆ. ಕನ್ನಡದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಚಲಿತವಿದ್ದ ಪ್ರಯೋಗಗಳಿಗೆ ಸ್ಪಂದಿಸುತ್ತ ಅವುಗಳನ್ನು ತನ್ನದಾಗಿ ಪ್ರಯತ್ನಿಸುತ್ತಾ ಕ್ರಿಯಾಶೀಲ ಮನಸ್ಸೊಂದು ಇಲ್ಲಿ ಕಾಣಿಸುತ್ತದೆ. ಜಗತ್ತಿಗೆ ತೆರೆದುಕೊಂಡ ವ್ಯಕ್ತಿಗಳು ನಿಂತ ನೀರಲ್ಲ. ಕಾಲದೊಡನೆ ಸಾಗುತ್ತಾ ಹೋಗುತ್ತಾರೆ. ಅನುಭವಗಳು ಮತ್ತು ಸಂದರ್ಭಗಳು ಅವರನ್ನು ರೂಪಿಸುತ್ತಾ ಸಾಗುತ್ತವೆ. ಹಾಗೆಯೇ ಇದ್ದರು ಮುಡೂರು. ಹಾಗಾಗಿ ಅವರು ಪ್ರಜ್ಞೆಯ ಆಸ್ತಿ. ಯಥಾಸ್ಥಿತಿ ವಾದದಿಂದ ಸಂವೇದನಾಶೀಲತೆಯನ್ನು ದೂರೀಕರಿಸುವ ಪ್ರಯತ್ನಕ್ಕೆ ತಡೆಯೊಡ್ಡಿ ಗೊಡ್ಡು ವಾದಗಳಿಗೆ ನಾವೀನ್ಯತೆಯ ಕ್ರಿಯಾಶೀಲ ಸ್ಪರ್ಶ ಕೊಟ್ಟ ಮಾಯಾವಿ ಮುಡೂರು. ತನ್ಮೂಲಕ ಸಾಮಾಜಿಕ ಪ್ರತಿ ಬದ್ಧತೆಯ ಗಟ್ಟಿ ನಿಲುವನ್ನು ಕಾಪಿಟ್ಟವರು. ಮುಡೂರು ಸಾಹಿತ್ಯ ಮತ್ತು ಸಮಾಜವನ್ನು ಬೇರೆ ಬೇರೆಯಾಗಿ ನೋಡಿದವರಲ್ಲ. ತನ್ನ ಸುತ್ತಲಿನ ಆಗು ಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದವರು. ಹಾಗಾಗಿ ಅವರ ಸಾಹಿತ್ಯದಲ್ಲಿ ಎಲ್ಲವೂ ಇತ್ತು, ವೈವಿಧ್ಯತೆ ಇತ್ತು. ಆದರ್ಶ ತತ್ವಗಳನ್ನು ಪ್ರದರ್ಶಿಸಿದ ನೇರ ನಡೆ ನುಡಿಯ ಮುಡೂರು ಅವರ ಜೀವನ ಸರಳ. ಸರಳತೆ ಇದ್ದಲ್ಲಿ ಸತ್ಯ ಪ್ರಾಮಾಣಿಕತೆ ಇದ್ದೇ ಇರುತ್ತದೆ. ಹೀಗಾಗಿ ಸವಕಲು ಎನಿಸದೇ ಎಲ್ಲರೊಡನೆ ಸಮಾನವಾಗಿ ಕಾಣಿಸಬಲ್ಲ ಚೈತನ್ಯ ಉತ್ಸಾಹ ಹೊಂದಿದ್ದಾರೆ. ಕಾಡುಮಲ್ಲಿಗೆ, ಹೊಸತುಕಟ್ಟು, ಕುಡಿಮಿಂಚು, ಪ್ರಗತಿಯ ಕರೆ ಎಂಬ ಕವನಸಂಕಲನಗಳು, ಅಬ್ಬಿಯ ಮಡಿಲು, ಕಣ್‌ಕನಸು ತೆರೆದಾಗ ಎಂಬ ಕಾದಂಬರಿ ಕಥಾ ಸಂಕಲನ, ಜೀವದಯಾಷ್ಟಮಿ ಎಂಬ ಗದ್ಯಾನುವಾದ, ಧಾರಾ ಪಯಸ್ವಿನಿ ಎಂಬ ಪ್ರಬಂಧ ಲೇಖನ, ಹೊಸಕೆರೆಯ ಹೊನ್ನಮ್ಮ ಜಾನಪದ ಗೀತಾ ರೂಪಕ, ನಂದಾದೀಪ, ಶ್ರೀಮತಿ, ಶಿವಕುಮಾರಿ, ಕೇರಳ ಕುಮಾರಿ, ಸಖ, ಅಚ್ಚರಿಯ ಅರಳೆಲೆ, ಮಧ್ಯಮಾ ಎಂಬ ನಾಟಕಗಳು, ಇನ್ಸೂರಳಿಯ ಎಂಬ ಪ್ರಹಸನ, ಹುತ್ತದಲ್ಲಿ ಹೂ, ದಯೆಯ ದಾಂಗುಡಿ, ಅಮರ ಕಲ್ಯಾಣ ಕ್ರಾಂತಿ ಎಂಬಿತ್ಯಾದಿ ಬಾನುಲಿ ರೂಪಕಗಳು, ಮಕುಟೋರು ಭಂಗ, ಸಾವೊಲಿದ ಸಾವಿತ್ರಿ ಎಂಬ ಛಂದೋನಾಟಕಗಳು, ಗುರುವನ ಗುಡಿ, ಸೊನ್ನೆಯಿಂದ ಸೊನ್ನೆಗೆ, ಗೀತಾ ರೂಪಕಗಳು, ಹೃದಯ ರೂಪಕ ಎಂಬ ಆಂಗ್ಲ ನಾಟಕದ ರೂಪಾಂತರ, ಸಿಡಿಲಮರಿ ಅಶ್ವತ್ಥಾಮನ್, ಮೋಹನ ಮುರಲಿ ಎಂಬ ಖಂಡಕಾವ್ಯಗಳು. ಪ್ರಥಮ ಸ್ವಾತಂತ್ರ್ಯ ಸಮರ ಎಂಬ ಯಕ್ಷಗಾನ ಪ್ರಸಂಗ ಸಾರಸ್ವತ ಜಗತ್ತಿಗೆ ಮುಡೂರು ಕೊಡುಗೆ. ಮುಡೂರು ಕೃತಿಗಳ ಬಗ್ಗೆ ನಾಡಿನ ವಿಮರ್ಶಕರು, ಪ್ರಾಜ್ಞರು ಸೂಕ್ಷ್ಮವಾಗಿ ಗಮನಿಸಿದ್ದರಾದರೂ ಪ್ರಸಿದ್ಧಿಯ ಲಾಬಿಗೆ ಅವು ಒಳಪಟ್ಟಿಲ್ಲ. ಹಾಗಾಗಿ ಅವುಗಳ ಶ್ರೇಷ್ಠತೆಗೆ ತಕ್ಕ ಸ್ಥಾನಮಾನ ಲಭಿಸಿಲ್ಲ. ಅಸಹಾಯಕರ ಎದೆಗೂಡೊಳಗಿನ ಹಕ್ಕಿಯ ಹಾಡು ಕುವೆಂಪು ಕತೆಗಳಲ್ಲಿ ಮಾರ್ದನಿಗೊಂಡಿರುವುದನ್ನು ಮುಡೂರುರವರ ಕಾಡಮಲ್ಲಿಗೆ ಕೇಳಿಸಿಕೊಂಡಿದೆ. ಅವರ ಸಿಡಿಲಮರಿ ಅಶ್ವತ್ಥಾಮನ್ ವಿದ್ವಾನ್ ಪ್ರತಿಭೆಯ ಹೊಸ ಅರ್ಥಶೋಧ. ಅವರ ಹೊಸಕೆರೆಯ ಹೊನ್ನಮ್ಮ ನವೋದಯ ಮನೋಧರ್ಮದ ಅದಮ್ಯ ಸಂಸ್ಕೃತಿ ಪ್ರೀತಿಯ ಕೃತಿ. ಕಣ್ಣಿಗೆ ಕಟ್ಟುವಂತೆ ಬರೆಯಬಲ್ಲ, ವಿಸ್ತಾರವಾಗಿ ಹೇಳಬಲ್ಲ, ತೀಕ್ಷ್ಣ ಅರ್ಥ ಹೊಮ್ಮಿಸಬಲ್ಲ ಶಕ್ತಿ ಅವರ ಕಥಾಕೃತಿಗಳಿಗಿದೆ. ಕಥಾ ನಿರೂಪಣೆಯಲ್ಲಿ ವರ್ಣನೆಗಳ ಮೆರುಗು ಪಡೆದು ಸಹಜ ಸರಳ ಭಾಷೆಯ ಸ್ವಂತದ ಛಂದದಲ್ಲಿ ಕಥನಾತ್ಮಕ ಓದು ಕೊಡುವುದು ಅವರ ಮೋಹನ ಮುರಲಿ. ಬರವಣಿಗೆಯಷ್ಟೇ ಆದ್ಯತೆ ಓದಿಗೆ ನೀಡುವ ವಿಶಿಷ್ಟ ಗುಣ ಮುಡೂರುರವರದ್ದು. ಕಾರಂತರ ಚೋಮನದುಡಿ, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ರಕ್ತಾಕ್ಷಿ, ಚಿತ್ರಾಂಗದ, ಕೊಳಲು, ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಬೇಂದ್ರೆಯವರ ಸಖಿಗೀತ, ಅಡಿಗರ ನಡೆದುಬಂದ ದಾರಿ ಕೃತಿಗಳನ್ನು ಮುಡೂರು ಮೆಚ್ಚಿ ನೆಚ್ಚಿಕೊಂಡರು. ವೃತ್ತಿಯ ನೊಗ ಝಾಡಿಸಿಕೊಂಡಾಗ ವ್ಯಕ್ತಿಯೊಡನಿದ್ದ ಪ್ರವೃತ್ತಿಗೆ ಹೆಚ್ಚು ಅವಕಾಶ ಎಂಬ ಅಭಿಮತ ಅವರದು. ಹಾಗಾಗಿಯೇ ನಿವೃತ್ತಿ ಜೀವನ ಮುಡೂರುರವರ ಪಾಲಿಗೆ ಪ್ರವೃತ್ತಿಯಲ್ಲಿ ವೃತ್ತಿಯಾಯಿತು. ಅಕಾಡೆಮಿಕ್ ಸಂಸ್ಥೆಯೊಂದರ ಮೂಲಕ ಮುಡೂರು ಸಂಘಟನಾ ಚತುರತೆ ಬೆಳೆದದ್ದು ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ. ರಾಜಧಾನಿಯಲ್ಲಿ ಕೇಂದ್ರೀಕೃತವಾದ ಕನ್ನಡ ಸಾಹಿತ್ಯ ಪರಿಷತ್ ವಿಕೇಂದ್ರೀಕರಣಗೊಂಡು ಜಿಲ್ಲಾ ಘಟಕಗಳು ತೆರೆದುಕೊಂಡಾಗ ಆರಂಭದ ಒಂದೆರಡು ದಶಕಗಳ ಕಾಲ ಮುಡೂರು ಅವರು ಸುಳ್ಯ ತಾಲೂಕು ಪ್ರತಿನಿಧಿಯಾದರು. ಹಾಗೆ ಅವರು ಕಯ್ಯಾರ ಕಿಂಞಣ್ಣ ರೈ, ಅಮೃತ ಸೋಮೇಶ್ವರ, ಕೀಕಾನ ರಾಮಚಂದ್ರ, ರಾಮಚಂದ್ರ ಕಾರ್ಕಳ, ಬಿ.ಎಂ.ಇದಿನಬ್ಬ ಮೊದಲಾದವರ ಮೆಚ್ಚುಗೆ ಗಳಿಸಿಕೊಂಡರು. ಸಾಹಿತಿಗಳೆಲ್ಲಾ ಸಂಘಟಕರಲ್ಲ, ಸಂಘಟಕರೆಲ್ಲಾ ಸಾಹಿತಿಗಳೂ ಅಲ್ಲ. ಆದರೆ ಮುಡೂರು ಈ ಎರಡೂ ಹೌದು. 1985ರಿಂದ ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಮಾಡಿದ ಚಟುವಟಿಕೆಗಳೇ ಇದಕ್ಕೆ ಸಾಕ್ಷಿ. ಬದುಕಿನ ಅಂತ್ಯಕಾಲದವರೆಗೂ ಸಮಾಜಮುಖಿಯಾಗಿ ಮತ್ತು ಕ್ರಿಯಾಶೀಲವಾಗಿ ಬದುಕಿದ ಟಿ.ಜಿ. ಮುಡೂರು ಅವರು ತಾನು ಅಪ್ ಡೇಟ್ ಆಗುತ್ತಾ ಯುವ ಪೀಳಿಗೆಗೆ ಸ್ಪೂರ್ತಿ ತುಂಬಿದವರು. ಹೀಗೆ ಸಾರ್ಥಕ ಬದುಕಿನ ಸಾತ್ವಿಕ ಶಕ್ತಿ ಮುಡೂರು ಕಾಲನ ಕೆರೆಗೆ ಓಗೊಟ್ಟು ತೆರಳಿದ್ದಾರೆ. ಭಾವ ಪೂರ್ಣ ವಿದಾಯ ಸರ್...

ಡಾ / ಸುಂದರ ಕೇನಾಜೆ - ವಿದ್ವಾನ್ ಟಿ.ಜಿ.ಮುಡೂರು

ವಿದ್ವಾನ್ ಟಿ.ಜಿ.ಮುಡೂರು

Thursday, April 14, 2022

ರಹಮತ್ ತರೀಕೆರೆ - ರೂಪಕಗಳಲ್ಲಿ ಅಂಬೇಡ್ಕರ್ { Rahamath Tarikere }

ರೂಪಕಗಳಲ್ಲಿ ಅಂಬೇಡ್ಕರ್ ಕನ್ನಡ ಸಾಹಿತ್ಯವು ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಯ ಜತೆ ನಾಲ್ಕು ದಶಕಗಳಿಂದ ಅನುಸಂಧಾನಿಸಿಕೊಂಡು ಬಂದಿದೆ. ಈ ಅನುಸಂಧಾನದಲ್ಲಿ ಮೂರು ಪ್ರಮುಖ ಮಾದರಿಗಳಿವೆ. ಅ. ಚಿಂತನೆಯನ್ನು ಅಂತರ್ಗತ ಮಾಡಿಕೊಂಡು ಹುಟ್ಟಿರುವ ಬರೆಹ. ಇಲ್ಲಿ ಅಂಬೇಡ್ಕರರ ನೇರ ಪ್ರಸ್ತಾಪವಿಲ್ಲ. ಆದರೆ ಅವರ ಚಿಂತನೆ ಉಂಡೂಟ ಅರಗಿ ರಕ್ತಗತವಾದಂತೆ ಬರೆಹದ ನಾಳಗಳಲ್ಲಿ ಹರಿಯುತ್ತಿರುತ್ತದೆ. ಆ. ಅಂಬೇಡ್ಕರ್ ಚಿಂತನೆಯ ಜತೆಗೆ ಸಮ್ಮತಿ-ಭಿನ್ನಮತಗಳ ಮೂಲಕ ವಾಗ್ವಾದ ಮಾಡುವ ವಿಚಾರ ಸಾಹಿತ್ಯ. ಇ. ಅಂಬೇಡ್ಕರ್ ವ್ಯಕ್ತಿತ್ವ ಹಾಗೂ ಚಿಂತನೆಯನ್ನು ವಿವಿಧ ರೂಪಕ ಸಂಕೇತ ಉಪಮೆಗಳಲ್ಲಿ ಕಾಣಿಸುತ್ತ, ಅನುಭವ ಶೋಧಿಸುವ `ಸೃಜನಶೀಲ’ ಸಾಹಿತ್ಯ. ಈ ಮೂರನೇ ಮಾದರಿಯಲ್ಲಿ ಹೆಚ್ಚಾಗಿ ಕಾವ್ಯ ಕತೆ ಕಾದಂಬರಿಗಳಿವೆ. ಇದನ್ನು ರೂಪಕ ಮಾದರಿಯ ಸಾಹಿತ್ಯವೆನ್ನಬಹುದು. ಇಲ್ಲಿನ ರೂಪಕಗಳ ಅರ್ಥ ಮತ್ತು ಧ್ವನಿಗಳು ಆ ಸಾಹಿತ್ಯದ ರಾಜಕೀಯ ಪ್ರಜ್ಞೆಯ ಸ್ವರೂಪವನ್ನೂ ತಿಳಿಸುತ್ತವೆ. ಈ ರೂಪಕ ಮಾದರಿಯಲ್ಲಿರುವ ಅಂಬೇಡ್ಕರ್ ಚಿತ್ರಗಳು ಆರು ವಿನ್ಯಾಸಗಳಲ್ಲಿವೆ. 1. ಜೀವನ ಚರಿತ್ರೆ ಕಟ್ಟುವ ವಿನ್ಯಾಸ. ಇಲ್ಲಿ ಅಂಬೇಡ್ಕರ್ ಚಿಂತನೆಗಳ ಜತೆಗಿನ ವೈಚಾರಿಕ ಒಡನಾಟ ಅಷ್ಟು ಮುಖ್ಯವಲ್ಲ. ಬದಲಿಗೆ ಅವರ ಬದುಕನ್ನು ಚರಿತ್ರೆಯಾಗಿ ಕಟ್ಟಿಕೊಡುವುದು ಮುಖ್ಯ. ಇಲ್ಲಿ ವೈಭವೀಕರಣದ ಮನೋಭಾವ ಸಾಮಾನ್ಯವಾಗಿರುತ್ತದೆ. ಕೆಲವರು ಮಾತ್ರ ಚರಿತ್ರೆಯನ್ನು ವಿಶಿಷ್ಟವಾಗಿ ಕಟ್ಟಿಕೊಡಲು ಯತ್ನಿಸಿರುವರು. ನಿದರ್ಶನಕ್ಕೆ ಬೊಳುವಾರರ `ಮುಟ್ಟಿರಿ’ ದ್ವಿಪದಿಗಳು. ಇಲ್ಲೊಂದು ಕಡೆ ಅಂಬೇಡ್ಕರ್ಗೆ ಪ್ರೀತಿ ಮತ್ತು ಆತ್ಮವಿಶ್ವಾಸಕೊಟ್ಟ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಅಂಬೇವಾಡೇಕರ್ ಎಂಬ ಶಿಕ್ಷಕ, ತಂಬಾಕು ಮಂಡಿಯಲ್ಲಿ ಗುಮಾಸ್ತರಾಗಿದ್ದರು ಎಂಬ ಸಂಗತಿ ಬರುತ್ತದೆ. `ಅಮುಖ್ಯ' ಎನಿಸುವ ಇಂತಹ ವಿವರದ ಮೂಲಕ ಕಾವ್ಯ ಏನು ಸೂಚಿಸುತ್ತಿದೆ? ದಲಿತರಿಗೆ ಬೇಕಾಗಿರುವುದು ಕೇವಲ ಸವರ್ಣೀಯರ ತುಟಿಮರುಕವಲ್ಲ, ಸಹಮಾನವರಾಗಿ ತೋರುವ ಕ್ರಿಯಾಶೀಲ ಪ್ರೀತಿಯೆಂದೇ? ಬಡತನದ ನೋವುಂಡವರು ಜಾತಿಯಾಚೆ ಬಂದು ದಲಿತರ ಅವಮಾನಕ್ಕೆ ಸ್ಪಂದಿಸಬಲ್ಲರೆಂದೇ? ದಲಿತರ ಬಿಡುಗಡೆ ಕೇವಲ ಅವರ ಪ್ರತಿರೋಧ ದಲ್ಲಿಲ್ಲ. ಸವರ್ಣೀಯರ ಆತ್ಮಾವಲೋಕಿತ ಭಾಗವಹಿಸುವಿಕೆಯಲ್ಲಿದೆ ಎನ್ನುವುದನ್ನೇ? ಬೊಳುವಾರು `ಬಾಪು’ವಿನ ಮೇಲೆ ಕೃತಿರಚಿಸಿದವರು ಎಂಬ ಹಿನ್ನೆಲೆಯಲ್ಲಿ ಇಂತಹ `ಸಣ್ಣ' ವಿವರಗಳ ಕಾಣಿಸುವಿಕೆಯನ್ನು ನೋಡಬೇಕು. ಇಲ್ಲಿ ಸೈದ್ಧಾಂತಿಕ ವಿರೋಧಿಗಳು ಎಂದು ಗ್ರಹಿಸಲಾಗಿರುವ ಗಾಂಧಿ-ಅಂಬೇಡ್ಕರ್ ಅವರನ್ನು ಪರಸ್ಪರರ ದೃಷ್ಟಿಕೋನಗಳ ಮೂಲಕ ನೋಡುವ ಯತ್ನವೂ ಇದ್ದಂತಿದೆ. ಈ ಬಗೆಯ ಹೊಸನೋಟಗಳನ್ನು ಯಾಂತ್ರಿಕ ನಿರೂಪಣೆಯ ಬಹುತೇಕ ಜೀವನಚರಿತ್ರೆಗಳು ಕಾಣಿಸುವುದಿಲ್ಲ. 2. ಆದರ್ಶ ನಾಯಕನನ್ನು ಕಟ್ಟಿಕೊಳ್ಳುವ ವಿನ್ಯಾಸ. ಇಲ್ಲಿ ಚಿಂತಕ, ಹೋರಾಟಗಾರ, ಸುಧಾರಣವಾದಿ ಅಂಬೇಡ್ಕರರನ್ನು ವರ್ತಮಾನಕ್ಕೆ ಚೈತನ್ಯವಾಗಿ ಆವಾಹಿಸಲು ಯತ್ನವಿದೆ; ದಲಿತರಿಗೆ ಅರಿವು ಮತ್ತು ಎಚ್ಚರ ಕೊಟ್ಟಿದ್ದಕ್ಕೆ ಅಂಬೇಡ್ಕರರಿಗೆ ಕೃತಜ್ಞತೆ ಮತ್ತು ಅಭಿಮಾನ ಸಲ್ಲಿಸುವಿಕೆಯಿದೆ; ಜತೆಗೆ ದೈವೀಕರಿಸುವ ಆರಾಧನ ಭಾವವೂ ಇದೆ; ಅವರನ್ನು ಸನಾತನ ಧರ್ಮದ ಅಮಾನವೀಯ ಕಟ್ಟಡಕ್ಕೆ ಬಡಿದ ಸಿಡಿಲೆಂದೂ `ಕಪ್ಪುಕ್ಕಿನ ಕೋಳಗಳನು ಕಡಿದುಎಸೆದ ವಜ್ರ’ವೆಂದೂ ವರ್ಣಿಸಲಾಗಿದೆ. ವಜ್ರವು(ಸಿಡಿಲು) ಆಗಸದಿಂದ ಇಳಿದು ಬರುವ ಪ್ರಚಂಡಶಕ್ತಿಯ ಸಂಕೇತ; ಪುರಾಣದ ಒಂದು ಆಯುಧ ಕೂಡ. ಈ ಯುದ್ಧ ಪರಿಭಾಷೆಗೆ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಅಂಬೇಡ್ಕರರನ್ನು ಯೋಧನಂತೆ ಕಾಣಿಸುವ ಆಶಯವಿರುವುದು ಸ್ಪಷ್ಟ. ಆದರೆ ಅಂಬೇಡ್ಕರರಿಗೆ ಜಾತಿವ್ಯವಸ್ಥೆಗೆ ಪ್ರಹಾರ ಕೊಡುವ ಶಕ್ತಿಯ ಜತೆ, ತನ್ನವರನ್ನು ರಕ್ಷಿಸುವ ಕರುಣಾಳು ಬಾಹುವಿನ ಮುಖವೂ ಇತ್ತು. ಈ ತಬ್ಬಲಿರಕ್ಷಕ ಕಾರ್ಯವನ್ನು ಸೂರ್ಯನ, ಹಣತೆಯ, ದಾರಿದೀಪದ ರೂಪಕಗಳು ಹಿಡಿದುಕೊಡುತ್ತವೆ. ಹೆಚ್ಚಿನ ರೂಪಕಗಳು ಸೂರ್ಯ ಕೇಂದ್ರಿತವಾಗಿವೆ. ದಲಿತ ಸಂಘಟನೆಗಳು ಧ್ಯೇಯದಲ್ಲಿ ಅಕ್ಷರ ಮತ್ತು ಅರಿವಿಗೆ ಮಹತ್ವ ಕೊಡುವ ಘೋಷಣೆ ಹೊಂದಿವೆ. ಈ ಹಿನ್ನೆಲೆಯಲ್ಲಿ ಬೆಳಕಿನ ರೂಪಕಗಳ ಉದ್ದೇಶ ತಾನೇ ಸ್ಪಷ್ಟವಾಗಿದೆ. ಇದಕ್ಕಿಂತ ಕೊಂಚ ವಿಭಿನ್ನ ರೂಪಕಗಳೆಂದರೆ, ಅಂಬೇಡ್ಕರರನ್ನು ಗಾಯಗೊಂಡ ಅಥವಾ ರೋಗಗ್ರಸ್ತ ವೈದ್ಯ ಸಮಾಜಕ್ಕೆ ಮದ್ದರೆದ ವೈದ್ಯನೆಂದು ಪರಿಭಾವಿಸುವಂತಹವು. `ಕೇರಿಯಿಂದ ಊರಿಗೆ ಮದ್ದು ಬರೆದ ಡಾಕ್ಟರಾ, ಭಾರತಮಾತೆಗೆ ಹೊಸ ಬಟ್ಟೆ ಹೊಲಿದ ಟೈಲರಾ?’ ಎಂದು ಒಂದು ಕವಿತೆ ಬಣ್ಣಿಸುತ್ತದೆ. ಮೇಲ್ಜಾತಿಯಿಂದ ಬಂದ ಕವಿಗಳಲ್ಲಿ ಅಂಬೇಡ್ಕರ್ ಮೂಲಕ ಸಮಾಜವನ್ನು ರೋಗಗ್ರಸ್ತ ದೇಹಕ್ಕೆ ಹೋಲಿಸುವ ರೂಪಕಗಳಿವೆ. ರ್ಕೆಯವರ `ಅಂಬೇಡ್ಕರ್ ಮತ್ತು ನನ್ನೂರ ಕೊರಗನ ಆನೆಕಾಲು’ ಕೂಡ ಇದರಲ್ಲಿ ಒಂದು. ಈ ರೂಪಕಗಳು ಆತ್ಮವಿಮರ್ಶಾತ್ಮಕ ದನಿಯುಳ್ಳವು. ಆದರೆ ದಲಿತ ಹಿನ್ನೆಲೆಯ ಕವಿಗಳಲ್ಲಿ ಜಾತಿವ್ಯವಸ್ಥೆಯ ಬಲಿಪಶುಗಳಾದ ತಮ್ಮನ್ನು ಸಮಾಜದ ಕಾಯಿಲೆ ನಿವಾರಿಸುವ ವೈದ್ಯರಾಗಿ ಕಲ್ಪಿಸಿಕೊಳ್ಳುವ ವಿನ್ಯಾಸವಿದೆ. ಮಹತ್ವದ ಸಂಗತಿಯೆಂದರೆ, ಈ ರೂಪಕ ವಿಧಾನವು ಜಾತಿ ಮತ್ತು ಅಸ್ಪೃಶ್ಯತೆಯನ್ನು ಎದುರಾಳಿಯಾಗಿ ಇಟ್ಟುಕೊಂಡು, ಆಕ್ರೋಶ ಮತ್ತು ವಿರೋಧ ಮಾಡುವ ವಿಧಾನ ಬಿಟ್ಟು ಕೊಡುತ್ತಿರುವುದು; ಬದಲಿಗೆ ದಲಿತರ ಮೇಲೆ ಸವರ್ಣೀಯ ಸಮಾಜಕ್ಕೆ ಮನುಷ್ಯತ್ವ ಕಲಿಸುವ ಹೊಣೆ ಹೊರಿಸುತ್ತಿರುವುದು. ಈ ಬಗೆಯ ಪಾತ್ರಪಲ್ಲಟ ಮಾಡುವ ಚಿತ್ರಗಳು ಕಪ್ಪುಸಾಹಿತ್ಯದಲ್ಲಿ ಸಾಮಾನ್ಯವಾಗಿವೆ. `ಬ್ಲಾಕ್ ಈಸ್ ಬ್ಯೂಟಿಫುಲ್' ತತ್ವವು ಕೇವಲ ಕಪ್ಪನ್ನು ಘನತೀಕರಿಸಲಿಲ್ಲ. ಅಮಾನುಷ ಬಿಳಿವಾದವನ್ನು ಮಾನುಷೀಕರಿಸುವ ಹೊಣೆಯನ್ನೂ ತನ್ನ ಮೇಲೆ ಹೊತುಕೊಂಡಿತು. ಅಂಬೇಡ್ಕರರನ್ನು ಕೃಷಿರೂಪಕಗಳಲ್ಲಿ ಕಾಣಿಸುವ ಕವನಗಳು ದೊಡ್ಡ ಸಂಖ್ಯೆಯಲ್ಲಿವೆ. ಇವು ಬರಗೆಟ್ಟ ನೆಲಕ್ಕೆ ಹೊಯ್ದ ಅಥವಾ ಬೀಜಕ್ಕೆ ಮೊಳಕೆ ಬರಿಸಿದ ಮಳೆಯಾಗಿ ಅವರನ್ನು ಕಲ್ಪಿಸುತ್ತವೆ. ಮಳೆ ಮತ್ತು ಬೀಜದ ರೂಪಕವು, ವಿಮೋಚಕ ನಾಯಕ ಹಾಗೂ ದಮನಿತರ ನಡುವಿನ ವೈಚಾರಿಕ ಸಂಬಂಧವನ್ನೂ ಸೂಚಿಸುತ್ತದೆ. ಬೀಜಕ್ಕೆ ಗಿಡವಾಗುವ ಕಸುವಿರಬಹುದು. ಮೊಳಕೆಯೊಡೆಸಬಲ್ಲ ಜಲಸ್ಪರ್ಶವಿಲ್ಲದೆ ಹೊಸಬಾಳು ಅಸಾಧ್ಯ. ಕೆಲವು ಕವನಗಳಲ್ಲಿ ಆಗಸ ಮತ್ತು ಮಳೆಯ ರೂಪಕಗಳಿದ್ದರೂ, ಅಲ್ಲಿ ಅಂಬೇಡ್ಕರ್ ಮಳೆಯಿಲ್ಲದ ಕೇವಲ ಮಿಂಚು ಮಾತ್ರವೇನು? ಬಿತ್ತಿದ ಬೆಳೆಯನ್ನು ಕೊಯಿಲು ಮಾಡದೆ ಹೋದ ರೈತನೆ? ಎಂಬ ಶಂಕೆಗಳಿವೆ. ದಲಿತ ಸಮುದಾಯವು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ಈ ಕೃಷಿಕ ಪ್ರತಿಮೆಗಳು ಅವರ ಬಾಳಿನ ಜತೆ ಸಾವಯವ ನಂಟನ್ನು ಪಡೆದಿವೆ. ವೃಕ್ಷರೂಪಿಯಾಗಿ ಅಂಬೇಡ್ಕರನ್ನು ಕಲ್ಪಿಸಿಕೊಳ್ಳುವಲ್ಲಿಯೂ ಇದೇ ಪೋಷಕಾರ್ಥವಿದೆ. ಅದರಲ್ಲೂ ಕೊಂಬೆಗಳನ್ನೂ ಬಿಳಿಲುಗಳನ್ನೂ ಹರಡಿ ವಿಶಾಲವಾಗಿ ಬೆಳೆವ ಆಲದ ರೂಪಕವು, ಅಂಬೇಡ್ಕರ್ವಾದದ ಬಹುರೂಪಿ ವಿಸ್ತರಣೆಯನ್ನು ಸಂಕೇತಿಸುತ್ತದೆ. ಆಲವು ಸನಾತನ ವೈದಿಕ ಸಂಪ್ರದಾಯದ ಸಂಕೇತ ಕೂಡ. ಈ ಎಚ್ಚರದಲ್ಲಿ ಕೆಲವು ಕವಿಗಳು ಅಂಬೇಡ್ಕರ್ ಆಲದಮರದ ಮೂಲೋತ್ಪಾಟನೆ ಮಾಡಿ ಬೋಧಿಯನ್ನು ಚಿಗುರಿಸಿದವರು ಎಂದು ಬಣ್ಣಿಸುತ್ತಾರೆ. ಕವಿಗಳು ಅಂಬೇಡ್ಕರ್ ಕುರಿತು ವಿಭಿನ್ನ ರೂಪಕಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಒಂದೇ ರೂಪಕವನ್ನು ಹಲವು ತಾತ್ವಿಕ ಅರ್ಥ ಹೊಮ್ಮುವಂತೆ ಕುಶಲತೆಯನ್ನೂ ತೋರುವರು. ಅಂಬೇಡ್ಕರರ ಗುಣಗಳನ್ನು ಕೆಲವರು ಪುರಾಣ ಪತ್ರಿಮೆಗಳ ಮೂಲಕ ಚಿತ್ರಿಸಲು ಯತ್ನಿಸಿರುವುದುಂಟು. ಕಂಬಾರರ ಕವಿತೆಯಲ್ಲಿ ಅವರು ನಾಗಾರ್ಜುನನಿಗಿಂತ ಒಂದು ಕೈ ಮಿಗಿಲಾದ ರಸವಿದ್ಯೆಗಾರ. ನಾಗಾರ್ಜುನನು ಸಾಮಾನ್ಯ ಲೋಹವನ್ನು ಚಿನ್ನವನ್ನಾಗಿ ಮಾಡುವ ವಿದ್ಯೆ ಗಳಿಸಲು ಯತ್ನಿಸಿದವನೆಂಬ ಕತೆಯಿದೆಯಷ್ಟೆ. ಈ ಹಿನ್ನೆಲೆಯಲ್ಲಿ ಕವಿತೆ ಅಂಬೇಡ್ಕರ್ ಸಾಮಾನ್ಯ ಜನ ಘನತೆಯಲ್ಲಿ ಬದುಕುವಂತೆ ರೂಪಾಂತರ ಮಾಡುವ ಮಾಟಗಾರ ಎಂದು ಧ್ವನಿಸುತ್ತಿರುವಂತಿದೆ. ದಾನಪ್ಪನವರ ಒಂದು ಕವಿತೆ ಅವರನ್ನು `ಹತ್ತುತಲೆಯ ಜ್ಞಾನವಿದ್ದ ರಾವಣ'ನಿಗೂ `ತಾಯಿಹೃದಯದ ಒರಟ ಮಹಿಷಾಸೂರ’ನೆಂದೂ ಕರೆಯುತ್ತದೆ. ಈ ಪೌರಾಣಿಕ ರೂಪಕಗಳು ಬ್ರಾಹ್ಮಣವಾದಿ ಪುರಾಣಗಳು ಯಾರನ್ನು ರಕ್ಕಸರೆಂದು ಕರೆದವೊ, ಅವರನ್ನು ದಮನಕ್ಕೊಳಗಾದ ಆದಿಮ ದಲಿತರೆಂದು ಪರಿಭಾವಿಸುವಂತಿವೆ. ತನ್ಮೂಲಕ ಮೇಲ್ವರ್ಗದ ಹಿತಾಸಕ್ತಿಗಳು ದುಷ್ಟರಕ್ಷಣೆಯ ಹೆಸರಿನಲ್ಲಿ ದುಷ್ಟೀಕರಿಸಿ ಕೊಂದ ರಾಕ್ಷಸದಮನದ ಪುರಾಣವನ್ನೇ ಪ್ರಶ್ನಿಸುತ್ತಿವೆ; ಅವನ್ನು ಪಲ್ಲಟಗೊಳಿಸುತ್ತಿವೆ. ಇದು ತಿರಸ್ಕೃತಗೊಂಡ ಸಂಕೇತಗಳನ್ನು ಘನತೀಕರಿಸುವ ಪ್ರತಿಸಾಂಸ್ಕೃತಿಕ ಕಾರ್ಯ. ಕೆಲವು ಕವಿತೆಗಳು ನೆಹರೂ ರಚಿಸಿದ ವ್ಯೂಹದಲ್ಲಿ ಬಲಿಯಾದ ಅಭಿಮನ್ಯುವಿಗೂ ಪರ್ವತದ ಶಿಖರಕ್ಕೆ ಬಂಡೆ ದಬ್ಬಿಕೊಂಡು ಹೋಗಲು ಯತ್ನಿಸುವ ಗ್ರೀಕ್ಪುರಾಣದ ಸಿಸಿಫಸನಿಗೂ ಹೋಲಿಸುವವು. ಮೊದಲ ರೂಪಕವು ಅಂಬೇಡ್ಕರರನ್ನು ಬಲಿಪಶುವೆಂದು ಕಲ್ಪಿಸಿಕೊಂಡರೆ, ಎರಡನೆಯದು ಜಾತಿವ್ಯವಸ್ಥೆಯನ್ನು ನಾಶಮಾಡುವಲ್ಲಿ ಸೋತವರೆಂದು ಸೂಚಿಸುತ್ತಿದೆ. ಪುರಾಣಗಳನ್ನು ಭಗ್ನಗೊಳಿಸಿದ ಅಂಬೇಡ್ಕರರನ್ನು ಪುರಾಣ ಪ್ರತಿಮೆಗಳ ಮೂಲಕ ಹಿಡಿವ ಈ ಯತ್ನ ವೈರುಧ್ಯಕರವೂ ವಿಶಿಷ್ಟವೂ ಆಗಿದೆ. ಈ ವಿನ್ಯಾಸದ ರೂಪಕಗಳು (ಸೂರ್ಯ, ಮಳೆ, ಮೋಡ ಬೆಳಕು, ಮಿಂಚು ಗುಡುಗು ಸಿಡಿಲು ಉಲ್ಕೆ ಇತ್ಯಾದಿ) ಹೆಚ್ಚಾಗಿ ಆಗಸಕ್ಕೆ ಸಂಬಂಧಿಸಿದವು. ಇವು ಸೂಕ್ಷ್ಮವಾಗಿ ಅಂಬೇಡ್ಕರ್ ಅವರನ್ನು ಅವತಾರದ ಕಲ್ಪನೆಯ ಹತ್ತಿರಕ್ಕೂ ಒಯ್ಯಬಲ್ಲವು. ಒಂದು ಕವಿತೆ ಅಂಬೇಡ್ಕರರನ್ನು ಅಪ್ಪ ಎಂಬರ್ಥವುಳ್ಳ ಆಪ್ತ ಸಂಬಂಧ ವಾಚಕವಾದ `ಬಾಬಾ' ಶಬ್ದವನ್ನು ಮತ್ತೊಮ್ಮೆ ಮರ್ತ್ಯಕ್ಕೆ ಕರೆವ ಶ್ಲೇಷಾರ್ಥದಲ್ಲಿ ಬಳಸುತ್ತದೆ-ಬೇಂದ್ರೆ `ಇಳಿದುಬಾ ತಾಯಿ' ಎಂದಂತೆ. ಅಂಬೇಡ್ಕರ್ ಅವರನ್ನು ದಕ್ಷಿಣ ಕರ್ನಾಟಕದ ಕವಿಗಳು ಅಂಬೇಡ್ಕರ್ ಎಂದೂ ಉತ್ತರ ಕರ್ನಾಟಕದ ಕವಿಗಳು ಮಹಾರಾಷ್ಟ್ರದ ಸಂಪ್ರದಾಯದಂತೆ ಬಾಬಾಸಾಹೇಬ ಎಂದೂ ಸಂಬೋಧಿಸುವುದು ಗಮನಾರ್ಹ. ಬಾಬಾಸಾಹೇಬರನ್ನು ಚೆನ್ನಣ್ಣ ವಾಲಿಕಾರರ ಹಾಡೊಂದು, `ನೀಹೋದ ಮರುದಿನ ನಮ ಬದುಕು ಮೊದಲಿನಂಗೆ ಆಗ್ಯಾದ’ ಎಂಬ ವರದಿಮಾಡುವ ಕ್ರಮದಲ್ಲಿ ಹುಟ್ಟಿದೆ. ಅದರ ವಿಷಾದಭರಿತ ಸಾಲುಗಳು ಸಹ, ರಕ್ಷಕನೂ ನಾಯಕನೂ ಇಲ್ಲದ ರಿಕ್ತಸ್ಥಿತಿ ಸೂಚಿಸುತ್ತ, ಅವತರಣದ ಕಲ್ಪನೆಯನ್ನು ಮುಂದೊತ್ತುತ್ತವೆ. ಇಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಕವಿಗಳಲ್ಲಿ, ಜನಪದ ಹಾಡುಗಳ ಧಾಟಿಯ ಪ್ರಯೋಗವಿದೆ. ಗತಿಸಿದ ಅಂಬೇಡ್ಕರರನ್ನು ವರ್ತಮಾನದಲ್ಲಿರುವ ಸಂಗಾತಿಯಂತೆ ಪರಿಭಾವಿಸಿಕೊಂಡು ಸಂಭಾಷಿಸುವ ಗುಣವಿದೆ. ಇಲ್ಲಿ ಅಂಬೇಡ್ಕರ್ ವ್ಯಕ್ತಿತ್ವ ಸ್ಥಳೀಕರಣವೂ ಸಂಭವಿಸುತ್ತದೆ. ಈ ಜನಪದ ಧಾಟಿಗಳು ಅಂಬೇಡ್ಕರರನ್ನು ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸುವ ತಂತ್ರವಾಗಿವೆ; ಜತೆಗೆ ಜನಪದ ರೂಪಕಗಳನ್ನು ಸೃಷ್ಟಿಸಲು ಸಹ ಪ್ರೇರಕವಾಗಿವೆ. 3. ಸಾಮಾಜಿಕ ವಿಷಮತೆ ಕಾಣಿಸಲು ಮತ್ತು ವಿಮರ್ಶಿಸಲು ಉಪಕರಣವಾಗಿ ನೋಡುವ ವಿನ್ಯಾಸ. ಇಲ್ಲಿ ರೂಪಕಗಳು ಸಂಪ್ರದಾಯವಾದಿ ಸಮಾಜವನ್ನು ವಿಮರ್ಶಿಸಲು ಅಂಬೇಡ್ಕರರನ್ನು ಉಪಕರಣದಂತೆ ಬಳಸುತ್ತ, ಗಾಯಗೊಂಡ ಭಾರತದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಒಂದು ಕವಿತೆಯಲ್ಲಿ ಹಸಿದ ಬಡವನೊಬ್ಬ ಮಾಡಿದ ಸಣ್ಣಕಳ್ಳತನಕ್ಕೆ ಘೋರವಾಗಿ ಶಿಕ್ಷಿಸಿದ ಪೋಲಿಸನು, ಸುಧಾರಿಸಿಕೊಳ್ಳಲು ಕೂರುವ ಕುರ್ಚಿಯ ಹಿಂದೆ, ಗೋಡೆಯ ಮೇಲೆ ತೂಗಿರುವ ಅಂಬೇಡ್ಕರ್ ಚಿತ್ರಪಟವಿರುವ ಸನ್ನಿವೇಶವಿದೆ. ವೈರುಧ್ಯಗಳನ್ನು ಎದುರು ಬದುರು ಹಿಡಿಯುವ ಮೂಲಕವೇ ವಿಷಮ ಸಮಾಜದ ಚರಿತ್ರೆಯನ್ನು ಕಟ್ಟಿಕೊಡುವ ಯತ್ನವಿದು. ಅಂಬೇಡ್ಕರ್ ಸ್ಮರಣೆ ದಲಿತರ ಹೊಸ ಬದುಕಿಗೆ ಹಾದಿಯಾಗದೆ, ಪ್ರತಿಮೆ ನಿಲ್ಲಿಸುವ ಇಲ್ಲವೇ ದಲಿತರ ಮತಬ್ಯಾಂಕನ್ನು ಸೃಷ್ಟಿಸಿಕೊಳ್ಳವ ಶಕ್ತಿರಾಜಕಾರಣದ ಸಾಧನವೂ ಆಗಿದೆ. ಈ ಬೆಳವಣಿಗೆಯನ್ನು ಹೆಚ್ಚಿನ ಕವನಗಳು ವಿಡಂಬನೆ ಮೂಲಕ ವಿಮರ್ಶಿಸುತ್ತವೆ. ಇವಕ್ಕೆ ಅಂಬೇಡ್ಕರರ ಪ್ರತಿಮೀಕರಣ, ದೈವೀಕರಣ, ಆರಾಧನೆಗಳು ಅವರ ಚಿಂತನೆಯನ್ನು ಹಿಂತಳ್ಳಬಹುದು; ಅವರನ್ನು ಸ್ಥಾವರಗೊಳಿಸಬಹುದು ಎಂಬ ಆತಂಕ. ಇವುಗಳ ಜತೆ ಅಂಬೇಡ್ಕರ್ ನೆನಪು ಗಾಂಧಿಯ, ನೆಹರೂವಿನ, ಕಾಂಗ್ರೆಸ್ಸಿನ ಹಾಗೂ ಕಮ್ಯುನಿಸ್ಟರ ವಿರೋಧಕ್ಕೆ ಹತ್ಯಾರವಾಗಿಯೂ ಬಳಕೆಯಾಗುವ ರಾಜಕೀಯ ವರಸೆಯ ಕವನಗಳೂ ಇವೆ. ಚರಿತ್ರೆಯು ಸೈದ್ಧಾಂತಿಕ ಎದುರಾಳಿಗಳನ್ನು ಹೊಡೆಯಲು ಆಯುಧವಾಗಿ ಬಳಕೆಯಾಗುವ ಈ ರಾಜಕಾರಣದ ಪರಿ ವಿಶಿಷ್ಟವಾಗಿದೆ. ನೆಹರೂ, ಕಾಂಗ್ರೆಸ್ಸು ಹಾಗೂ ಕಮ್ಯುನಿಸ್ಟರ ವಿರೋಧಕ್ಕೆ ಅಂಬೇಡ್ಕರ್ ನೆನಪನ್ನು ಉಪಕರಣವಾಗಿ ರೂಪಿಸುವ ಅಡಿಗರ `ಅಂಬೇಡ್ಕರ್ ಭೀಮರಾಯರಿಗೆ' ಕವಿತೆ ಅವರನ್ನು `ಮಹಾರ್ಹ’ ಎನ್ನುತ್ತದೆ. ಇಲ್ಲಿ ಮಹಾರರಲ್ಲೆ ಅರ್ಹ ಮತ್ತು ಮಹಾ ಅರ್ಹ ಎಂಬ ಶ್ಲೇಷೆಯಿದೆ. ಆದರೆ ಈ ಶಬ್ದಚಾತುರ್ಯದಲ್ಲಿ ಆಪ್ತವಾದ ಸಂವೇದನೆ ಕಾಣುವುದಿಲ್ಲ. ಈ ವಿನ್ಯಾಸದ ರೂಪಕಗಳ ಇನ್ನೊಂದು ಮಜಲೆಂದರೆ, ದಲಿತ ಸಮುದಾಯ ಮತ್ತು ಚಳುವಳಿಗಳ ವಿಮರ್ಶೆಗೂ ಅಂಬೇಡ್ಕರ್ ಸ್ಮೃತಿ ಚಾಚಿಕೊಳ್ಳುವುದು. ಆಧುನಿಕ ಶಿಕ್ಷಣ, ಸಾಮಾಜಿಕ ಎಚ್ಚರ ಮತ್ತು ಹೋರಾಟ ಪ್ರಜ್ಞೆಗಳು ದಲಿತ ಸಮುದಾಯದ ಜತೆ ಸಹಜವಾಗಿ ಬೆಸುಗೆಗೊಳ್ಳದೆ ಬಿರುಕು ಹುಟ್ಟಿಸಿರುವ ಸನ್ನಿವೇಶವನ್ನು `ಕುಸುಮಬಾಲೆ’ ವ್ಯಂಗ್ಯವಾಗಿ ಕಾಣಿಸುತ್ತದೆ. ದಲಿತರ ಜಾಥಾ ಹೊರಡುವ ಮುನ್ನ, ಸ್ಥಳೀಯ ಪ್ರಜ್ಞೆಯ ಗಾರಸಿದ್ಮಾವನು ಅಂಬೇಡ್ಕರ್ ಫೋಟೊ ಮುಂದೆ `ಏಳುಮಲೆ ಎಪ್ಪತ್ತೇಳು ಮಲೆ ಮಲೆಮಾದಪ್ಪನಿಗೆ ಉಘೆ' ಎಂದು ಕಾಯಿ ಒಡೆಯುವನು. ಆಗ ಸಂಘದ `ಮೊಕಂಡರ' ಮುಖಗಳು ಬಿಗಿದುಕೊಳ್ಳುತ್ತವೆ. ಈ ಮುಖಭಾವದ ವರ್ಣನೆ ಸಾಂಕೇತಿಕವಾಗಿದೆ. ದಲಿತರ ಬಗ್ಗೆ ಕಾಳಜಿಯಿದ್ದರೂ ಅವರ ಒಳಸಂಸ್ಕೃತಿಯ ಭಾಗವಾಗದೆ ವೈಚಾರಿಕ ಪ್ರಧಾನ ಚಳುವಳಿ ಹೊರಗೇ ಉಳಿದಿರುವುದನ್ನು ಕಾದಂಬರಿ ವ್ಯಂಗ್ಯವಾಗಿ ತೋರಿಸುತ್ತದೆ. ಅಂಬೇಡ್ಕರ್ ನೆಪದಲ್ಲಿ ದಲಿತ ಸಮಾಜವನ್ನು ಸ್ವಪರಿಶೀಲನೆಗೆ ಒಡ್ಡಿಕೊಳ್ಳುವ ದೃಷ್ಟಿಯಿಂದ ನೆಡುವುದಾದರೆ, ಗದ್ಯಕಥನಗಳಲ್ಲಿ ಹೆಚ್ಚು ವಾಸ್ತವಿಕವಾದ ವಿಮರ್ಶಾತ್ಮಕ ಚಿತ್ರಗಳು ಕಾಣುತ್ತವೆ; ಕಾವ್ಯದಲ್ಲಿ ಕಲ್ಪನಾತ್ಮಕ, ಭಾವುಕ ಮತ್ತು ಆರಾಧನೆಯ ಗುಣಗಳು ಹೆಚ್ಚು ಗೋಚರಿಸುತ್ತವೆ. 4. ಅಂಬೇಡ್ಕರನ್ನು ಬೌದ್ಧಭಿಕ್ಷುವಾಗಿ ಬುದ್ಧನ ಆಧುನಿಕ ಅವತಾರ ವಾಗಿ ಕಾಣುವ ವಿನ್ಯಾಸದ ಚಿತ್ರಗಳು. ಇವು ಅವರನ್ನು ಬೋಧಿವೃಕ್ಷ, ಸಂತ ಎಂದು ಕರೆದಿವೆ. ಸಿದ್ಧಲಿಂಗಯ್ಯನವರ ಕವಿತೆಗೆ ಅವರು ಭಿಕ್ಷುವಾದ ಬಗ್ಗೆ ಒಪ್ಪಿಗೆಯಿಲ್ಲ. ಅದನ್ನು `ಬಂಗಾರದ ಕೋಳವೊಕ್ಕ ಮಹಾಬೌದ್ಧ ಭಿಕ್ಷುವೆಂಬ ರೂಪಕದಲ್ಲಿ ಅದು ಟೀಕಿಸುತ್ತದೆ; ಯಾವುದನ್ನು ಅಂಬೇಡ್ಕರ್ ಸನಾತನ ಹಿಂದೂಧರ್ಮದ ಸಂಕಲೆಯಿಂದ ದಲಿತರ ಬಿಡುಗಡೆಯ ಹಾದಿಯೆಂದು ಪರಿಭಾವಿಸಿದರೋ, ಅದು ನಿಜವಾಗಿಯೂ ದಲಿತರ ಪಾಲಿಗೆ ಬಿಡುಗಡೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಈ ಹಿನ್ನೆಲೆಯಲ್ಲಿ ದಲಿತ ಸಂಸ್ಕೃತಿ ನಿರ್ಮಿಸಿಕೊಂಡಿರುವ ಸ್ವಾಯತ್ತ ಸಾಂಸ್ಕೃತಿಕ ಲೋಕಗಳ ಮೂಲಕ ಹೊಸ ವಿಮೋಚನ ಹಾದಿ ನಿರ್ಮಿಸುವ ಸಾಧ್ಯತೆಯನ್ನು `ಕುಸುಮಬಾಲೆ' ಶೋಧಿಸಿತು. ವಿಶೇಷವೆಂದರೆ, ಅಂಬೇಡ್ಕರರ ಧಮ್ಮಸ್ವೀಕಾರವು ಹಿಂದುತ್ವ ಪರವಾಗಿಯೂ ವ್ಯಾಖ್ಯಾನಗೊಂಡಿರುವುದು. ಅಡಿಗರ ಕವನವು ಅವರ ಭಿಕ್ಕುತನವನ್ನು ಕಾಣಿಸುವ ಬಗೆಯಲ್ಲಿ ಇದಿದೆ. ಅದು ಅವರನ್ನು ಒಬ್ಬ ಕಲಾವಿದನಾಗಿ ಕಲ್ಪಿಸಿಕೊಳ್ಳುತ್ತದೆ; ``ಅಪಸ್ವರ ಕೊಡುವ ಕಸರು ತುಂಬಿದ ಕೊಳಲ ಶ್ರುತಿಶುದ್ಧ ಮಾಡಿ ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ ಸಮತ್ವಗಳ ರಾಗಮಾಲಿಕೆಯನೆಬ್ಬಿಸಲು ದುಡಿದು ದಣಿದು ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ ಬುದ್ಧಿಯೋಗಿಯೇ’’ ಎಂದು ವರ್ಣಿಸುತ್ತದೆ. ಅಂಬೇಡ್ಕರ್ ಧಮ್ಮಕ್ಕೆ ಹೋಗಿದ್ದು ಅದನ್ನು ಬಯಸಿ ಅಲ್ಲ, ಹಿಂದೂ ಸಮಾಜದ ಸುಧಾರಣೆಯಲ್ಲಿ ಸೋತು ಎಂಬ ದನಿ ಇಲ್ಲಿದೆ. ಮಧುರ ನಾದ ಹೊರಡಿಸುವ ಕೊಳಲನ್ನು ಕುಟ್ಟಿ ಪುಡಿಮಾಡಿ ಸಮತೆ ಸಾರುವವರನ್ನು ಟೀಕಿಸುತ್ತ, ಅಂಬೇಡ್ಕರ್ ಕೊಳಲಿನ ಕಸರನ್ನು ತೆಗೆದು ನಾದ ಹೊರಡಿಸಲು ಯತ್ನಿಸಿ ಸೋತವರೆಂದು ಕವನ ಪರಿಭಾವಿಸುತ್ತದೆ: ``ಅಪಸ್ವರ ಕೊಡುವ ಕಸರು ತುಂಬಿದ ಕೊಳಲ ಶ್ರುತಿಶುದ್ಧ ಮಾಡಿ, ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ ಸಮತ್ವಗಳ ರಾಗ, ಮಾಲಿಕೆಯನೆಬ್ಬಿಸಲು ದುಡಿದು ದಣಿದು ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ, ಬುದ್ಧಿಯೋಗಿಯೇ’’; ಅಂಬೇಡ್ಕರರ ಧಮ್ಮದೀಕ್ಷೆ ಕುರಿತಂತೆ ಇಬ್ಬರು ಕವಿಗಳ ಕವನಗಳು ಕಾಣಿಸುತ್ತಿರುವ ವಿಭಿನ್ನ ನೋಟ ಮತ್ತು ಅವುಗಳೊಳಗಿನ ತಾತ್ವಿಕ ವ್ಯತ್ಯಾಸಗಳು ಮಾರ್ಮಿಕವಾಗಿವೆ. ಒಂದು ಧರ್ಮಾಂತರವು ಪರ್ಯಾಯವಲ್ಲ ಎಂದು ಸೂಚಿಸಿದರೆ, ಮತ್ತೊಂದು ಮೂಲಧರ್ಮ ಪರಿಷ್ಕಾರದ ಕೆಲಸ ಪೂರ್ಣಗೊಳ್ಳಲಿಲ್ಲ ಎಂದು ವಿಷಾದಿಸುತ್ತದೆ. 5. ಅಂಬೇಡ್ಕರರನ್ನು ಸಂಗಾತಿಯೆಂದು ಭಾವಿಸಿ, ಅವರೊಡನೆ ಸೈದ್ಧಾಂತಿಕ ಭಿನ್ನಮತಗಳ ಮೂಲಕ ಮುಖಾಮುಖಿಯಾಗುವ ವಿನ್ಯಾಸಗಳಲ್ಲಿ, ಪ್ರಶ್ನೆಗಳ ಮೂಲಕ ಸಂವಾದ ಮಾಡುವ ನಾಟಕೀಯತೆಯಿದೆ. `ಮಲಗಿರುವವರನು ಕೂರಿಸಿದೆ ನಿಲ್ಲಿಸುವವರು ಯಾರೊ?’ ಎಂಬುದು ಇಂತಹ ಪ್ರಶ್ನೆಗಳಲ್ಲಿ ಒಂದು. ಅಂಬೇಡ್ಕರ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡೇ ಪ್ರಶ್ನೆಯೆತ್ತುವ, ಅವರ ಚಿಂತನೆ-ಕ್ರಿಯೆಯಲ್ಲಿದ್ದ ವೈರುಧ್ಯ ಅಥವಾ ಮಿತಿಯನ್ನು ಗುರುತಿಸುವಿಕೆ ಕ್ರಮ ಇಲ್ಲಿನದು. ಈ ಮಾದರಿಯ ಸಾಹಿತ್ಯವು, ಅಂಬೇಡ್ಕರ್ ಚಿಂತನೆಯನ್ನು ವಾಗ್ವಾದದ ಮೂಲಕ ಬೆಳೆಸಲು ಮತ್ತು ಜೀವಂತವಾಗಿಡಲು ಯತ್ನಿಸುತ್ತದೆ. ಇಲ್ಲಿ ಕ್ರಾಂತಿಕಾರಿ ನಾಯಕರು ದುಷ್ಟಶಿಕ್ಷಕ-ಶಿಷ್ಟರಕ್ಷಕನಾಗಿ ಅವತರಿಸುವ ಬಗ್ಗೆ ನಂಬಿಕೆಯಿಲ್ಲ; ಬದಲಿಗೆ ಹಿರೀಕರು ನಡೆದಿರುವ ಅರ್ಧಹಾದಿಯನ್ನು ಪ್ರಶ್ನೆ ಮತ್ತು ಚರ್ಚೆಯ ಮೂಲಕ ವಿಸ್ತರಿಸಿಕೊಂಡು ಉಳಿದರ್ಧ ವರ್ತಮಾನದ ನಾವು ನಡೆಯಬೇಕಿದೆ ಎಂಬ ಪ್ರಕ್ರಿಯಾತ್ಮಕ ಅರಿವಿದೆ. ವರ್ತಮಾನವು ತನಗೆ ಚೈತನ್ಯ ತಂದುಕೊಳ್ಳುವ ಹಾಗೂ ಇತಿಹಾಸದಿಂದ ಪ್ರೇರಣೆ ಪಡೆಯುವುದರ ಅತ್ಯುತ್ತಮ ವಿಧಾನವಿದು. ಈ ವಾಗ್ವಾದರೂಪಿ ಮಾದರಿಯಲ್ಲಿ ಅಂಬೇಡ್ಕರರನ್ನು ಕಾಣಿಸುವ ಕವಿಗಳು ಸಾಮಾನ್ಯವಾಗಿ ಮಾರ್ಕ್ಸಿಸ್ಟ್ ಹಿನ್ನೆಲೆಯವರು. ನಾಯಕನ ಮುಗ್ಧ ಆರಾಧನೆ ಬಿಟ್ಟುಕೊಡುವ ಈ ಮಾದರಿಯು ಪ್ರಮಾಣದಲ್ಲಿ ಕಡಿಮೆಯಿದೆ. ಇದು ಕನ್ನಡ ಕಾವ್ಯದೊಳಗೆ ಚರಿತ್ರೆಯನ್ನು ಕುರಿತು ವಿಮರ್ಶಾತ್ಮಕ ದನಿ ಕ್ಷೀಣವಾಗಿ ರುವುದನ್ನೂ ಸೂಚಿಸುತ್ತದೆ. 6. ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಗಳು ವರ್ತಮಾನದ ವಿಭಿನ್ನ ಜನಪರ ತಾತ್ವಿಕತೆ ಅಥವಾ ಸಂವೇದನೆಗಳ ಜತೆಗೂಡಿ, ಹೊಸಹಾದಿ ಹುಡುಕುವ ಮಾದರಿ. ಗಾಂಧಿ ನೆಹರೂ ಜತೆ ಬಾಬಾಸಾಹೇಬರಿಗಿದ್ದ ಸೈದ್ಧಾಂತಿಕ ಭಿನ್ನಮತಗಳ ಚಾರಿತ್ರಿಕ ಸ್ಮೃತಿಯಲ್ಲಿ ಹುಟ್ಟಿರುವ ಕವನಗಳು ಅವರನ್ನು ಎದುರಾಳಿಗಳಾಗಿಯೇ ಇಡುತ್ತವೆ. ನಿದರ್ಶನಕ್ಕೆ ಎಲ್. ಹನುಮಂತಯ್ಯನವರ `ಗಾಂಧಿಯೆಂಬ ಬಯಲಸೀಳಿ ಬೆಳಕಿನೆಡೆಗೆ ಸಾಗಿದವನೆ, ನೆಹರು ಹೆಣೆದ ವ್ಯೂಹದಲ್ಲಿ ಅಭಿಮನ್ಯುವಾದವನೆ' ಎಂಬ ಚಿತ್ರ. ಆದರೆ ಚಾರಿತ್ರಿಕ ಸ್ಮೃತಿಗಳನ್ನು ಮೀರಿ ಹೊಸಹಾದಿ ಶೋಧಿಸುವ ಆಶಯವುಳ್ಳ ಕಾವ್ಯದಲ್ಲಿ ಗಾಂಧಿ-ಅಂಬೇಡ್ಕರರನ್ನು ಸಾಂಪ್ರದಾಯಿಕ ವಿರೋಧಿಗಳಾಗಿ ನೋಡುವುದಕ್ಕಿಂತ, ಅವರಲ್ಲಿದ್ದ ಸಮಾನ ಗುಣಗಳನ್ನು ಕೂಡಿಸಿ ನೋಡುವ ಯತ್ನಗಳಿವೆ. ವಿಶೇಷವೆಂದರೆ, ಇವರಿಬ್ಬರ ಜತೆ ಮೂರನೆಯ ತತ್ವವಾಗಿ ಬಸವಣ್ಣನೂ ಸೇರಿಕೊಳ್ಳುವುದು. ಈ ತಾತ್ವಿಕ ಸಂಕರಕ್ಕೆ ಅಮರೇಶ ನುಗಡೋಣಿಯವರ `ನೀರುತಂದವರು’ ಕತೆ ಒಳ್ಳೆಯ ನಿದರ್ಶನ. ಇಲ್ಲಿ ಕೇರಿಗೆ ನೀರಿಲ್ಲದಾಗ ನೀರು ಕೊಡಲು ನಿರಾಕರಿಸಿದ ಸವರ್ಣೀಯರಿಗೆ, ಅವರ ಬಾವಿಕೆಟ್ಟಾಗ ದಲಿತರು ನೀರು ಹೊತ್ತೊಯ್ದು ಕೊಡುವ ಸನ್ನಿವೇಶವಿದೆ. ಇದು ಮಹಾಡ್ ಕೆರೆ ಹೋರಾಟವನ್ನು ಪರೋಕ್ಷವಾಗಿ ನೆನಪಿಸುತ್ತ ಕುಡಿನೀರಿಗೆ ಹಕ್ಕುಸ್ಥಾಪನೆ ಮಾಡುವ ಚಾರಿತ್ರಿಕ ಸ್ಮೃತಿಗೆ ಹೊಸ ಮಜಲನ್ನು ಸೇರಿಸುತ್ತದೆ. ತರತಮವಾದಿ ಜಾತಿವ್ಯವಸ್ಥೆಯನ್ನು ಭಗ್ನಗೊಳಿಸಲು ಶರಣರು ಕೂಡ ನೀರು ಸೂರ್ಯ ನೆಲಗಳು ರೂಪಕಗಳನ್ನು ಸೃಷ್ಟಿಸಿಕೊಂಡಿದ್ದರು. ಕತೆಯಲ್ಲಿನ ಜಲ ಚಳುವಳಿಗೆ ಪ್ರೇರಕನಾಗುವವನು ಒಬ್ಬ ಊರಿನ ಸವರ್ಣಿಯ ತರುಣ. ಈತ ಕೇರಿಯಲ್ಲೇ ಹೆಚ್ಚಿನ ಹೊತ್ತು ಕಳೆಯುತ್ತ, ಅಂಬೇಡ್ಕರ್ ಗಾಂಧಿ ಬಸವಣ್ಣನವರ ಚರ್ಚೆ ಮಾಡುತ್ತ ಬೆಳೆದವನು; ಹೋರಾಟವು ದಮನಿತರನ್ನು ಮಾತ್ರವಲ್ಲ ದಮನಕಾರಿಗಳನ್ನೂ ಬದಲಿಸ ಬೇಕು ಎಂಬ ನಿಲುವುಳ್ಳವನು; ನೀರುಕೊಡದ ಊರಿನ ಸಣ್ಣತನಕ್ಕೆ ಪ್ರತಿಯಾಗಿ ಕೇರಿಯು ನೀರುಕೊಡುವ ಔದಾರ್ಯದ ಮೂಲಕವೇ ಉತ್ತರಿಸಬೇಕೆಂದು ತನ್ನ ದಲಿತ ಗೆಳೆಯರನ್ನು ಒಪ್ಪಿಸುವವನು. ಈ ಕತೆ ಗಾಂಧಿ ಚಿಂತನೆ, ದಲಿತರನ್ನು ಒಳಗೊಂಡಂತೆ ಸಮಸ್ತ ದಮನಿತ ಸಮುದಾಯಗಳ ವಿಮೋಚನೆಗೂ ಅಗತ್ಯವಿದೆ ಎಂದು ಸೂಚಿಸುತ್ತಿದೆಯೇ? ಹೊಸಚಳುವಳಿಗಳ ಹುಟ್ಟಿಗೆ ಚರಿತ್ರೆ ಪಾಠವಾಗುವ ಬದಲು ತಡೆಯೊಡ್ಡುವ ಭಾರವಾಗಿರುವ ಸದ್ಯದ ರಾಜಕೀಯವೂ ಹಿನ್ನೆಲೆಯಲ್ಲಿ, ನೀಲಿ ಕೆಂಪು ಒಟ್ಟಿಗೆ ಹೋಗುವ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನೀರುಕೊಡುವ ಈ ರೂಪಕವನ್ನು ಅರಿಯಬೇಕಿದೆ. ವಿಶೇಷವೆಂದರೆ, ಕನ್ನಡ ಸ್ತ್ರೀಸಂವೇದನೆ ದಲಿತ ಚರಿತ್ರೆಯನ್ನು ಮರುಸೃಷ್ಟಿಸುತ್ತಿರುವ ವಿನ್ಯಾಸಗಳು. ಈ ಧಾರೆಯ ಕವನಗಳಲ್ಲಿ ಅಂಬೇಡ್ಕರ್ ಅನುಭವಿಸಿರಬಹುದಾದ ಅಸ್ಪೃಶ್ಯತೆಯ ವೇದನೆಯನ್ನು, ಮುಟ್ಟಾದ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಕಷ್ಟದ ಜತೆ ಸಮೀಕರಣ ಮಾಡಲಾಗುತ್ತದೆ. ಪೂರ್ಣಿಮಾರ `ನೀವು ನಮ್ಮೊಳಗಿದ್ದೀರಿ’ ಕವನದಲ್ಲಿ ಇಂತಹ ಸ್ತ್ರೀಕರಣ ಅಥವಾ ಸ್ತ್ರೀಸಂವೇದನೆಯ ದಲಿತೀಕರಣ ಸಂಭವಿಸಿದೆ. ಅವರನ್ನು ಸಮಾನತೆಗಾಗಿ ಯುದ್ಧಗೈದ ಯೋಧನೆಂದೂ ಅಂಧಕಾರದಲ್ಲಿ ಬಂದ ಸೂರ್ಯನೆಂದೂ ಕಾಣಿಸುವ ಗಂಡು ರೂಪಕಗಳಿಗೆ ಹೋಲಿಸಿದರೆ, ಈ ಸ್ತ್ರೀಕೃತ ರೂಪಕಗಳು ಅನನ್ಯವಾಗಿವೆ. ಇವು ಅಂಬೇಡ್ಕರ್, ಸ್ತ್ರೀಯರ ಪರವಾಗಿ ಕಾನೂನು ರಚಿಸಹೋಗಿ ಸೋತು ರಾಜಿನಾಮೆ ನೀಡಿದ ಚಾರಿತ್ರಿಕ ಘಟನೆಯನ್ನೂ ಸೂಚ್ಯವಾಗಿ ನೆನಪಿಸುವಂತಿವೆ. ಕನ್ನಡ ಸಾಹಿತ್ಯವು ಗಾಂಧೀಜಿಗೆ ಹೋಲಿಸಿದರೆ ಅಂಬೇಡ್ಕರರನ್ನು ಅನುಸಂಧಾನಗೈದ ಪ್ರಮಾಣ ಕಡಿಮೆ. ಅಂಬೇಡ್ಕರ್ ತೀರಿಕೊಂಡ ಮೂರು ದಶಕಗಳ ಬಳಿಕ ಅವರನ್ನು ವಸ್ತುವಾಗಿಸಿಕೊಂಡು ಸಾಹಿತ್ಯಸೃಷ್ಟಿ ಶುರುವಾಯಿತು; ೭೦-೮೦ರ ದಶಕದ ಸಾಹಿತ್ಯಕ್ಕೆ ಅಂಬೇಡ್ಕರ್ ಹೇಗಿದ್ದರು ಎಂದು ಕಾಣಿಸುವ ಚಾರಿತ್ರಿಕ ಉದ್ದೇಶಕ್ಕಿಂತ, ವರ್ತಮಾನವನ್ನು ಅರಿವ, ತುಡಿವ ಮತ್ತು ಅದನ್ನು ಬದಲಿಸುವ ಆಶಯ ಮುಖ್ಯವಾಗಿತ್ತು. ಮಹತ್ವದ ವಿಚಾರವೆಂದರೆ, ನಮ್ಮ ರಾಜಕೀಯ ಪಕ್ಷ ಹಾಗೂ ಚಳುವಳಿಗಳು ತೋರಲಾರದ ರಾಜಕೀಯ ಪ್ರಜ್ಞೆ ಮತ್ತು ಚಲನಶೀಲತೆಯನ್ನು, ಅಂಬೇಡ್ಕರ್ ಸಾಹಿತ್ಯದಲ್ಲಿರುವ ರೂಪಕಗಳು ತೋರಿಸುತ್ತಿರುವುದು. ಈ ಕಾರಣಕ್ಕೆ ಈ ಕೃತಿಗಳು ರಾಜಕೀಯ ಪ್ರಜ್ಞೆಯ ಪಠ್ಯಗಳು. ಬರೆಹವು ಚಳುವಳಿಗೆ ಪ್ರೇರಣೆ ಕೊಡುವ ಮತ್ತು ಚಳುವಳಿಗಳಿಂದ ಕಸುವನ್ನು ಪಡೆಯುವ ದ್ವಂದ್ವಾತ್ಮಕ ಪ್ರಕ್ರಿಯೆ ಕ್ಷೀಣಗೊಂಡಿರುವ ಈ ಕಾಲದಲ್ಲಿ, ತಕ್ಕ ರೂಪಕಗಳ ಧ್ಯಾನವೂ ಒಂದು ಮಹತ್ವದ ರಾಜಕೀಯ ಕ್ರಿಯೆಯಾಗಿದೆ. (`ನೆತ್ತರ ಸೂತಕ'ದಿಂದ)

Monday, April 11, 2022

ಚೈತನ್ಯ ಮಜಲುಕೋಡಿ --ಶತಾವಧಾನಿ ಗಣೇಶ್ ಅವರ " ಮಣ್ಣಿನ ಕನಸು " { ಕಾದಂಬರಿ 2022 }SHATAVADHANI GANESH

ಶತಾವಧಾನಿ ಗಣೇಶರ ಮಣ್ಣಿನ ಕನಸು. ಸಂಸ್ಕೃತ ನಾಟಕಗಳನ್ನು ಓದದಿರುವುದರ ಬಗೆಗಿನ ಖೇದದಿಂದಲೋ, ಹಿಂಜರಿಕೆಯಿಂದಲೋ ಸ್ವಲ್ಪ ತಡವರಿಸುತ್ತಲೇ ನಾನು ಶತಾವಧಾನಿಗಳ ಮಣ್ಣಿನ ಕನಸು ಕೃತಿಯನ್ನು ಕೈಗೆತ್ತಿಕೊಳ್ಳಬೇಕಾಯಿತು. ಎತ್ತಿಕೊಂಡ ಮೇಲೂ ಮೊದಲಿಗೆ ಬರುವ ವಸಂತೋತ್ಸವದ ಸಂಭ್ರಮಾಚರಣೆಯ ಹಿಗ್ಗಿನ ವಿವರಣೆಯನ್ನು ಓದುತ್ತಾ ಓದಿದಷ್ಟೂ ಮುಗಿಯದೇನೋ ಎಂಬ ಆತಂಕವೂ ಮೂಡಿತ್ತು. ಆದರೆ ಸ್ವಲ್ಪ ಹದ ಕೂತು ಮುಂದುವರೆಯುತ್ತಿದ್ದಂತೆ ಕೃತಿಯ ಅನ್ಯಾದೃಶವಾದ ತಿರುವು ತೀವ್ರತೆಗಳು ಮುಗಿತಾಯದವರೆಗೂ ಸೆಳೆದುನಿಲ್ಲಿಸಿದ್ದವು. ನಾನು ಮೃಚ್ಛಕಟಿಕವನ್ನು ಅನುವಾದವನ್ನು ತುಂಬ ಹಿಂದೆ ಓದಿದ್ದೆ. ಉದಯನನ ಕತೆಯನ್ನು ಅಲ್ಲಿ ಇಲ್ಲಿ ತಿಳಿದದ್ದಷ್ಟೇ. ಆದರೆ ಕೃತಿಯನ್ನು ಓದತೊಡಗಿದ ಮೇಲೆ ಅದರ ನೆರವು ಬೇಕೇ ಬೇಕೆಂದೆನಿಸದ ಒಂದು ಸ್ವತಂತ್ರ ಕೃತಿ ಇದೆಂದು ಮನದಟ್ಟಾಯಿತು. ಆದರೆ ಇದನ್ನು ಓದಿದ ನಂತರ ಪೂರ್ವಸೂರಿಗಳ ಕಾವ್ಯಸಂಪತ್ತಿನ ಕಡೆಗೆ ಗಮನಕೊಟ್ಟು ಓದಬೇಕೆಂಬ ಇಚ್ಛೆ ಬಲಿಯುವುದು ಸುಳ್ಳಲ್ಲ. ಆಚಾರ್ಯ ಶಂಕರರು ತಮ್ಮ ಭಾಷ್ಯದಲ್ಲಿ ಹೇಳಿದ ದರ್ಶನ ವ್ಯಾಖ್ಯಾನಕ್ಕಿಂತ ಕಾಳಿದಾಸ ಅದನ್ನು ತನ್ನ ಕಾವ್ಯದಲ್ಲಿ ಇನ್ನೂ ಮನಮುಟ್ಟುವಂತೆ ವಿವರಿಸಿದ್ದಾನೆಂದು ಅವಧಾನಿಗಳೇ ತಮ್ಮ ಉಪನ್ಯಾಸದಲ್ಲಿ ಒಂದೆಡೆ ಹೇಳಿದ್ದರು. ಹಾಗೆಯೇ ಶತಾವಧಾನಿಗಳು ಷಡ್ದರ್ಶನ ಸಂಗ್ರಹದಲ್ಲಿ ಕೊಡಲಾಗದ ಶಾಸ್ತ್ರ ನಿದರ್ಶನಗಳನ್ನು ಈ ಕಾವ್ಯಯುಕ್ತಯಾದ ಕೃತಿಯಿಂದ ಪೂರೈಸಿದ್ದಾರೆಂದರೆ ತಪ್ಪಾಗಲಾರದು. ಕರ್ಮಕಾಂಡವೇ ಇರಲಿ, ಜ್ಞಾನಕಾಂಡವೇ ಇರಲಿ, ಬೌದ್ಧದರ್ಶನವೇ ಇರಲಿ; ಅದರ ಅನುಷ್ಠಾನದ ಸಾಧಕ-ಬಾಧಕಗಳು ಜಗತ್ತಿನಲ್ಲಿ ಹೇಗೆ ನೆಲೆಗೊಂಡಿವೆ ಎಂಬುದರ ಬಗ್ಗೆ ಜಾಳುತನವಿಲ್ಲದ ಶುಷ್ಕವಲ್ಲದ ಅನೇಕ ವಿದ್ವತ್ಪೂರ್ಣ ಪಾತ್ರ ಸಂವಾದಗಳಲ್ಲಿ, ಸುದೀರ್ಘವಾದ ಸ್ವಗತಲಹರಿಗಳಲ್ಲಿ ತುಂಬಿ ತುಂಬಿ ಕೊಟ್ಟಿದ್ದಾರೆ. ಪಾತ್ರಗಳಿಗೆ ಘನತೆಯ ರೂಪವನ್ನು ಕೊಡುವಷ್ಟೇ ಮುಖ್ಯವಾದುದು ಅದನ್ನು ಅದೇ ಘನತೆಗೆ ತಕ್ಕನಾಗಿ ಕೊನೆತನಕವೂ ಸಂಭಾಳಿಸುವುದು. ಆ ವಿಚಾರದಲ್ಲಿ ಅವಧಾನಿಗಳು ಅದನ್ನು ಲೀಲೆಯೆಂಬಂತೆ ನಿರ್ವಹಣೆ ಮಾಡಿದ್ದಾರೆ. ಯಾವುದೇ ಸಂದರ್ಭವಾದರೂ ಅದರ ಕೂಲಂಕಷವಾದ, ಓದುಗನಿಗೆ ಆ ದೇಶಕಾಲದ ನೆಲದಲ್ಲಿ ನಿಂತು ಸೃಜಿಸಿಕೊಳ್ಳುವ ಸಂಪೂರ್ಣ ಚಿತ್ರಣವನ್ನು ದೊರೆತ ನಂತರವೇ ಪಾತ್ರಗಳು ಮಾತಿಗೆ ತೊಡಗುವ ಕಾರಣ, ಓದುಗನಿಗೆ ಕೃತಿಯ ಓದುವಿಕೆಯಲ್ಲಿ ಒಂದು ಲವಲವಿಕೆಯ ವಿಶ್ವಾಸ ದೊರೆಯುತ್ತದೆ. ಮೊದಲಿನ ಅರಿಕೆಯಲ್ಲಿ ಹೇಳಿರುವಂತೆ, ಇದು ನಿಜವಾಗಿ ದೇವುಡು ನರಸಿಂಹಶಾಸ್ತ್ರಿಗಳಂತಹ ಮಹಾವಿದ್ವಾಂಸರ ಕೃತಿಗಳನ್ನು ಮಾರ್ಗದರ್ಶಕವೆಂಬಂತೆ ಸ್ವೀಕರಿಸಿ ರಚಿಸಿದ ಫಲ ಎನ್ನಬಹುದು. ದೇವುಡುರವರ ಮಯೂರ ಕೃತಿಯಲ್ಲಿ ಕಾಣುವ ಸಹ್ಯಾದ್ರಿಯ ಹೃದ್ಯ ವಿವರಣೆಯಂತೆ, ಅದಕ್ಕಿಂತಲೂ ವಿಫುಲವಾಗಿ ಇಲ್ಲಿ ವಿಂಧ್ಯಾಟವಿಯ ವಿವರಣೆಯನ್ನು ಕಾಣುವುದೊಂದು ಸಣ್ಣ ಉದಾಹರಣೆ. ಸಂಸ್ಕೃತ ಕಾವ್ಯಗಳಲ್ಲಿ ಮನೆಯೊಳಗೆ ಪ್ರಾಕೃತ, ಹೊರಗೆ ಸಂಸ್ಕೃತಗಳು ಬಳಕೆಯ ಪ್ರಯೋಗವಿದ್ದಂತೆ ಕನ್ನಡವನ್ನೇ ಆಡುನುಡಿಯ ರೂಪದಲ್ಲಿ ಪ್ರಾಕೃತಕ್ಕಾಗಿ ಬಳಸುವ ಪ್ರಯೋಗ ನಿಜಕ್ಕೂ ಒಂದು ಸವಾಲು. ಮೊದಲ ಓದಿಗೆ ಕಸಿವಿಸಿಯಾದರೂ ಅದರ ನಮೂನೆಗೆ ಮನಸ್ಸು ಕ್ರಮೇಣ ಹೊಂದಿಕೊಳ್ಳುತ್ತದೆ. ಸಮಸ್ತ ಭಾರತೀಯ ಸಂಸ್ಕೃತಿಯ ಮೂಲಬೇರುಗಳನ್ನು ಅನೇಕ ಬಾರಿ ಶೋಧಿಸುತ್ತ ಅದರ ಅಂತಃಸ್ಸತ್ತ್ವವನ್ನು ತೆರೆದು ತೋರಿಸುವ ಸನ್ನಿವೇಶ, ತ್ರಾಸದಾಯಕವೆನಿಸದ ವಿವರಣೆಗಳು ನಿಜಕ್ಕೂ ಆಹ್ಲಾದಕರ. ಕಮ್ಯೂನಿಸ್ಟ್ ಧೋರಣೆಯ ಗಣತಂತ್ರದ ಆಳ್ವಿಕೆಯ ಅತಿರೇಕದಲ್ಲಿ ಗಣಿಕೆಯಾದ ಆಮ್ರಪಾಲಿಯಾಗಲಿ, ನಿರಂಕುಶ ಪ್ರಭುತ್ವದ ಅಡಿಯಲ್ಲಿ ನಲುಗಿ ಹೋದ ಚಾರುದತ್ತಾದಿಗಳಾಗಲಿ, ಯಾವ ಪಾತ್ರಕ್ಕೂ ಹೆಚ್ಚು ಕಡಿಮೆಯಾಗದ ಚಿತ್ರಣಗಳು ಅವರ ಪಾತ್ರಗಳ ಕುರಿತ ನಿರ್ಮಮಕಾರವನ್ನು ತೋರಿಸುತ್ತದೆ. ಉದಯನ-ವಾಸವದತ್ತೆಯರಷ್ಟೇ ಪ್ರಾಮುಖ್ಯತೆ ಶರ್ವಿಲಕ-ಮದನಿಕೆಯರಿಗೂ ಇದೆ, ಕೌಶಾಂಬಿಗಿರುವ ವಿವರಣಸೌಲಭ್ಯ ವೈಶಾಲಿಗೂ ಇದೆ. ದರ್ಶನಶಾಸ್ತ್ರಗಳಲ್ಲಿ ಅವರಿರುವ ಇದಮಿತ್ಥಂ ಎಂಬ ಅಧ್ಯಯನದ ವಿದ್ವತ್ತು, ಮತ್ತದರ ಔಚಿತ್ಯಪೂರ್ಣ ವಿನಿಯೋಗದ ವಿವೇಕಗಳಿಗೆ, ಮೂರನೆಯದಾದ ಅವರ ಪ್ರಾಥಮಿಕ ಪ್ರೀತಿಯಾದ ಕಾವ್ಯಸರಸ್ವತಿಯೂ ಸೇರಿ, ವಿವರಣೆ ಸಂವಾದಗಳೆಲ್ಲ ಘನವಾಗಿದ್ದರೂ ಭಾರವೆನಿಸದೆ ಕಾವ್ಯಪರಿಮಳವನ್ನು ಹೊತ್ತ ಔಷಧಗಳಾಗಿವೆ. ಮಂತ್ರಾಲೋಚನೆ, ಯುದ್ಧಸನ್ನಾಹ, ಪ್ರಣಯಸಲ್ಲಾಪ, ಲೋಕಾಭಿರಾಮದಂತಹ ಹರಟೆಗಳೆನಿಸುವ ಖಂಡಗಳೂ ಸಮಾನವಾಗಿ ಓದಿನ ಆನಂದವನ್ನೀಯುತ್ತವೆ. ಇಂದಿನ ಧಾವಂತದ ಬದುಕಿನಲ್ಲಿ ಎರಡು ವಾಕ್ಯಕ್ಕಿಂತ ಹೆಚ್ಚು ಓದುವ ಹೊತ್ತಿಗೆ ಇನ್ನೂ ಪೀಠಿಕೆ ಮುಗಿದಿಲ್ಲವೇ ಎಂಬ ಅಸಹನೆಯ ಮನಸ್ಸು ಓದುಗರನ್ನು ಆವರಿಸುತ್ತಿದೆ. ಆಸ್ವಾದದ ಗುಣವನ್ನೇ ಕಸಿದು ತನ್ನನ್ನು ಕೇವಲ ಲೌಕಿಕ ಬದುಕಿಗಾಗಿಯೂ, ವಸ್ತುಪ್ರಪಂಚದ ಭ್ರಮಾಧೀನ ಭೋಗಕ್ಕಾಗಿಯೂ ಉಜ್ಜುಗಿಸಿಕೊಂಡು ಬಾಳ್ವೆ ನಡೆಸಬೇಕೆಂಬ ಮಂಕು-ಗರ ನಮ್ಮನ್ನು ಬಡೆದಿರುವ ಈ ಕಾಲಕ್ಕೆ ಅವಧಾನಿಗಳ ಕೃತಿಯು ಕಣ್ತೆರೆಸುವ ಕೈದೀವಿಗೆಯಾಗಿ ಬಂದಿದೆ. ನಾಲ್ಕು ಬಾರಿ ಓದಿ, ನೂರಾರು ಮನನೀಯ ಸಂಗತಿಗಳನ್ನು ಬಾಳಿನಲ್ಲಿ ಅನುಷ್ಠಾನಿಸಿಕೊಳ್ಳಬೇಕಾದ ಉದಾರಚರಿತರ ಸಾಕ್ಷಿಗಳಿವೆ. ಅವರ ಅಲೋಚನೆಗಳಲ್ಲಿ ಕಾಣ್ಕೆಗಳಲ್ಲಿ ಭಾರತವರ್ಷದಲ್ಲಿ ಆಗಿಹೋದ ನಿರ್ಮಲವಾದ ಲೋಕಾದರವೂ, ಜನಹಿತಕಾರಿಯಾದ ಪ್ರೀತಿಯೂ ಇದೆ. ವರ್ಣ/ಆಶ್ರಮ ಧರ್ಮಗಳ ಗುಣಗ್ರಾಹಿ ಅನುಷ್ಠಾನ, ಕಲೆ/ದರ್ಶನಗಳ‌ ಸುದೀರ್ಘವಾದ ಮೀಮಾಂಸೆ, ಸಂಗೀತ/ಕಾವ್ಯಗಳನ್ನು ಸವಿಯುವ ರಸಿಕತೆ, ಶುಕ್ರ-ವಿದುರ-ಬೃಹಸ್ಪತಿಯೇ ಮುಂತಾದ ನೀತಿಶಾಸ್ತ್ರದ ಸಂಗತಿಗಳು, ಅರ್ಥಶಾಸ್ತ್ರ/ಧರ್ಮಶಾಸ್ತ್ರಗಳ ವಿವೇಕಯುತ ಅನ್ವಯಗಳ ಚರ್ಚೆ, ಇವೆಲ್ಲಾ ಲೇಖಕರ ಅಚ್ಚುಮೆಚ್ಚಿನ ಸಂಗತಿಗಳಾಗಿವೆ. ಅವು ಕಾದಂಬರಿಯಲ್ಲಿ ಅನೇಕ ಕಡೆ ಯುಕ್ತಿಯುಕ್ತವಾಗಿ ಪ್ರಸ್ತಾಪವಾಗಿ ಸಂಭಾಷಣೆಗಳು ಕೇವಲ ಯಾಂತ್ರಿಕವಾಗದೆ ಬೋಧಪ್ರದವಾಗಿದೆ. ಇವೆಲ್ಲದರ ಫಲವಾದ ಜೀವನದರ್ಶನವು ಪಾತ್ರಗಳ ಸರಳ ಮಾತುಗಳಿಂದ ನಮ್ಮ ಮನಸ್ಸಲ್ಲಿ ನೆಲೆನಿಲ್ಲುತ್ತದೆ. ಭಾಷಾವಿಚಾರದಲ್ಲಿ ಸ್ವಲ್ಪ ತೊಡಕೆನಿಸೀತು, ಕೊನೆಯಲ್ಲಿ ಪದಸೂಚಿಗಳನ್ನು ಕೊಟ್ಟಿರುವಾಗಲೂ ಇನ್ನೂ ಕೆಲವು ಪದಗಳು ವಿವರಣೆಯನ್ನು ಬಯಸಿಯಾವು, ಅದನ್ನುಳಿದೂ ಅವಧಾನಿಗಳ ಚಿಂತನಸ್ತರದ ಮಟ್ಟವನ್ನು ಅನುಭಾವಿಸಿಕೊಂಡು ಮುಂದುವರೆಯುವಲ್ಲಿ ಸ್ವಲ್ಪ ತೊಡಕೂ ಸಾಮಾನ್ಯ ಓದುಗರಿಗೆ ಆಗಬಹುದು. ಆದರೆ ಓದಿದ್ದರಲ್ಲಿ ದಕ್ಕಿದ್ದಷ್ಟೂ ಗಟ್ಟಿಕಾಳಾದ ಕಾರಣ, ತಿಳಿಯದ್ದನ್ನೂ ಸಂಗ್ರಹಿಸಿ ತಿಳಿದು ಸಂಭ್ರಮಿಸುವಲ್ಲಿ ಹೆಚ್ಚಿನ ಸಾರ್ಥಕತೆ ಇದೆ. ಆದ್ದರಿಂದ ಇದು ಖಂಡಿತವಾಗಿ ಮಾನೋನ್ನತಿಯನ್ನು ನೀಡುವ ಕಾವ್ಯಸೋಪಾನವಾಗಿದೆ. ಅವರ ಲೋಕವಿಶ್ರುತವಾದ ಶ್ರುತಿ ಕೃತಿ ವಾಙ್ಮಯವನ್ನು ನಮ್ಮ ನಾಡು ಬಲ್ಲುದಾದರೂ ಕಾದಂಬರಿಯ ಪ್ರಕಾರದಲ್ಲಿ ಕಾವ್ಯ, ಶಾಸ್ತ್ರ ಎರಡರ ಪ್ರಕಾಶಕ್ಕೂ ಯಥಾವಕಾಶವಿರುವುದರಿಂದ ಇದು ಅವರ ಅಧ್ಯಯನ, ಅನುಭವ ಮತ್ತು ಪ್ರತಿಭೆಗಳ ಸಮುಚಿತ ಪ್ರಕಟನೆಗೆ ಆಸ್ಪದವಿತ್ತಿದೆ. ಭಾವಸಮೃದ್ಧಿಯಿಲ್ಲದ ಯಾವ ಭಾಗವೂ ಇಲ್ಲಿಲ್ಲದ ಕಾರಣ, ಶಾಸ್ತ್ರದ ಕಲ್ಲುಸಕ್ಕರೆ ಕಾವ್ಯದ ಹಾಲಿನಲ್ಲಿ ಕರಗಿ ಪ್ರತಿಭೆಯ ಸುಖೋಷ್ಣತೆಯಲ್ಲಿ ಕೃತಿ ಸಿದ್ಧವಾಗಿದೆ. ನಿರ್ಮಲವಾದ ತೆರೆದ ಕಂಗಳ ಮನೋಬುದ್ಧಿಗಳಷ್ಟೇ ನಮಗೆ ಸ್ವೀಕಾರಕ್ಕೆ ಬೇಕಾದ ಸಾಧನ. ಪ್ರತಿಯೊಬ್ಬ ಭಾರತೀಯನೂ ಎರಡು ಸಹಸ್ರಮಾನದ ಹಿಂದೆ ತನ್ನ ಭೂಮಿಯು ಐತಿಹಾಸಿಕ, ತಾತ್ತ್ವಿಕ, ಸಾಮಾಜಿಕವಾಗಿ ಇದ್ದ ಬಗೆಯನ್ನು ಕಲ್ಪಿಸಿಕೊಳ್ಳಲು ಅನುವಾಗಿಸುವ ಅಪೂರ್ವ ಕೃತಿ ಈ ಕಾದಂಬರಿ. #ಮಣ್ಣಿನ_ಕನಸು

ಉಡುಪಿಯಲ್ಲಿ ಡಿಜಿಟಲ್‌ ಗ್ರಂಥಾಲಯ ಉದ್ಘಾಟಿಸಿದ ಸಿಎಂ | ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯ -

Friday, April 8, 2022

| Discussion with Shashi Deshpande | Interview | ಶಶಿ ದೇಶಪಾಂಡೆ [ ಸಂದರ್ಶನ }

ಆನಂದ್ ಗೋಪಾಲ್ ಮಾಲೂರು - ಕೆ. ಸತ್ಯನಾರಾಯಣ ಅವರ " ಕೋವಿಡ್ ದಿನಚರಿ "/ k Sathyanarayana

'ಕೋವಿಡ್' ಪ್ರಪಂಚವನ್ನು ಸಾಕಷ್ಟು ಬದಲಿಸಿದೆ. ಇದರ ಪ್ರಭಾವ ನೂರಾರು ಕವಿತೆ,ಕತೆ, ಕಾದಂಬರಿ, ನಾಟಕ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆಲ್ಲಾ ಒಂದು ತಯಾರಿ ಬೇಕು. ಆದರೆ 'ಕೋವಿಡ್ ದಿನಚರಿ' ಇದಕ್ಕೊಂದು ಅಪವಾದ. ಅಂದಂದಿನ ಸಗಟು ದಿನದ ವಸ್ತುಸ್ಥತಿಯನ್ನು ದಾಖಲಿಸಿರುವುದರಿಂದ ಈ ಕೃತಿಗೊಂದು ಮಹತ್ವದ ತಾವಿದೆ. ಕನ್ನಡದ ಸೃಜನಶೀಲ ಹಾಗೂ ಪ್ರಯೋಗಶೀಲ ಲೇಖಕ ಕೆ.ಸತ್ಯನಾರಾಯಣ ಅವರು ಈ 'ಕೋವಿಡ್ ದಿನಚರಿ'ಯನ್ನು ಬರೆದು, ಪ್ರಕಟಿಸಿದ್ದಾರೆ. ದಿನಚರಿ ಎಂದರೆ ದೈನಂದಿನ ವಿವರಗಳು ಎಂಬುದು ಸಾಮಾನ್ಯಾರ್ಥ. ತಿನ್ನುವುದು,ನಿದ್ರಿಸುವುದು, ಹರಟುವುದು ಇದಿಷ್ಟೇ ದಿನಚರಿ ಎಂದರೆ ಇಲ್ಲನ 'ಕೋವಿಡ್ ದಿನಚರಿ'ಗೆ ಅಂತ ಮಹತ್ವ ಸಿಗಲಾರದು. ಕೃತಿ ಮುಖ್ಯವಾಗಿ ೩ ಅಂಶಗಳ ಆಧಾರದ ಮೇಲೆ ಬೆಳೆದಿದೆ.೧. ನಿರೂಪಕರ ವ್ಯಕ್ತಿಗತ ಜೀವನ. ೨. ನಿರೂಪಕರ ಕುಟುಂಬ ಜೀವನ. ೩ . ಸಮಾಜ/ಲೋಕ ಜೀವನ. '..... ದಿನಚರಿ' ಈ ಮೂರು ನೆಲೆಗಳಲ್ಲೂ ಸಂಚರಿಸುತ್ತದೆ. ಕೋವಿಡ್ ಸಾವುಗಳು ನಿರೂಪಕರನ್ನು ಅಧೀರರನ್ನಾಗಿಸಿದರೆ; ಅವರ ೯೩ರ ಇಳಿವಯಸ್ಸಿನ ಸೋದರತ್ತೆಯ ಜೀವನೋತ್ಸಾಹ ಅವರಲ್ಲಿ ಲವವವಿಕೆಯ ಕಂಪನಗಳನ್ನು ಹುಟ್ಟಿಸುತ್ತದೆ. ಸಾವುಗಳು ಎಲ್ಲರಿಗೂ ದುಃಖವನ್ನೆ ಕೊಡಬೇಕೆಂದಿಲ್ಲ ; ಅದು ಆಸ್ಪತ್ರೆಗಳಿಗೆ, ಔಷಧಿ ಮಾಫಿಯಾಗೆ ಲಾಭದಾಯಕವೂ ಹೌದು! ಲೋಕಸ್ನೇಹಿಯಾದ ಮನುಷ್ಯನಿಗೆ ಏಕಾಂತ ಜೀವನದ ಕಾಲಾಪಾನಿ ಈ ಕೋವಿಡ್ ಕಾಲ. ಮನೆಯೇ ಒಂದು ಕರಿನೀರಿನ ಶಿಕ್ಷೆಯ ತಾವು. ಪೋನಿನ ಮೇಲೆ ಎಷ್ಟು ಮಾತು ಸಾಧ್ಯ? ನಮ್ಮ ಸಾಮಾಜಿಕ ಸಂಬಂಧಗಳು ಮುಕ್ಕಾಲು ವೀಸ ಪಾಲು ವ್ಯಾವಹಾರಿಕ ಸಂಬಂಧಗಳೆನ್ನುವುದನ್ನು ನಿರೂಪಕರು ಘಟನೆಗಳ ಸಾಕ್ಷ್ಯದಿಂದ ಸಾದರಪಡಿಸುತ್ತಾರೆ. ನಮ್ಮ ಮಾತಿನ ಕೃತ್ರಿಮತೆ, ಸಹ ಮಾನವನ ಸಂಕಟ ನಮಗೆ ಕೇವಲ ಸಮಾಚಾರವಷ್ಟೇ! ನಿರ್ಮಮತೆ,ಲೋಕಪ್ರೀತಿರಾಹಿತ್ಯತೆ ಈ 'ಕೋವಿಡ್ ಕಾಲ' ದ ಅತ್ತ್ಯುತ್ತಮ ಉತ್ಪನ್ನವಾಗಿದೆ. ನಿರೂಪಕರು ನಗರದಲ್ಲಿ(ಬೆಂಗಳೂರು) ವಾಸ ಇದ್ದದ್ದರಿಂದ ಸುತ್ತಲಿನ ವಾತಾವರಣವನ್ನು ಈ ಅವಧಿಯಲ್ಲಿ ಚೆನ್ನಾಗಿ ಕಂಡಿರಿಸಿದ್ದಾರೆ. ನಿರ್ಜನ ರಸ್ತೆಗಳು, ಉದ್ಯಾನಗಳು,ಶಾಲಾ ಕಾಲೇಜುಗಳ ಆವರಣ,ಪರಿಚಿತರಿದ್ದರೂ ಅಪರಿಚಿತರಂತೆ ಕಣ್ಣು ತಪ್ಪಿಸಿ ನಡೆಯುವವರು, ಬೀದಿಯ ನಾಯಿ, ಮನೆ ಮುಂದಿನ ಗಿಡಗಳು, ಹೊತ್ತು ಕಳೆಯಲು ಸಿನಿಮಾ, ಸಂಗೀತದ ಆಶ್ರಯ, ವಿದೇಶದಲ್ಲಿರುವ ಮಕ್ಕಳೊಂದಿಗೆ ಫೋನಿನ ಮೇಲೆ ಮಾತು ( ಅಲ್ಲೂ ಕೋವಿಡ್ ಬಗ್ಗೆಯೆ ಮಾತು ಎಂಬುದು ಬಿಡಿಸಿ ಹೇಳಬೇಕಿಲ್ಲ!). ಮನುಷ್ಯನ ಔದಾರ್ಯ, ಸಣ್ಣತನ, ತ್ಯಾಗ,ಅವಕಾಶವಾದಿತನ, ಪ್ರೀತಿ, ದ್ವೇಷ ಈ ಎಲ್ಲ ಮಾನುಷ ವ್ಯಾಪಾರಗಳು ಈ 'ಕೋವಿಡ್ ದಿನಚರಿ'ಯಲ್ಲಿ ಎಂಟ್ರಿಯಾಗಿವೆ. ವಿಷಯದ ಹರಹು ಲೋಕಲ್ ಇಂದ ಗ್ಲೋಬಲ್ ತನಕ ಚಾಚಿಕೊಂಡಿದೆ. ಆಟ,ಪಾಠ, ರಾಜಕೀಯ, ಸಿನಿಮಾ,ರೋಗ,ಸಾವು,ವಲಸೆ,ಸಾಹಿತ್ಯ, ಸಂಗೀತ, ಕುಟುಂಬ,ವ್ಯಾಪಾರ, ಭ್ರಷ್ಟಾಚಾರ,ಧಾರ್ಮಿಕ ಸಾಮರಸ್ಯ,ಹಸಿವು ಹೀಗೆ ಇದು ಬೆಳೆಯುತ್ತಾ ಹೋಗುತ್ತದೆ. ಕನ್ನಡದಲ್ಲಿ ಈ ಕೃತಿ ಒಂದು ಪ್ರಯೋಗಶೀಲ ಸೃಷ್ಟಿ.ಲೇಖಕರು ಇದನ್ನು ಕಾದಂಬರಿ ಜಾತಿಗೆ ಸೇರಿಸಿದ್ದಾರೆ.ವಸ್ತು ಹಾಗೂ ವೈವಿಧ್ಯ ಇದಕ್ಕೆ ಕಾರಣವಿರಬಹುದು. ಘಟನೆಯೊಂದು ಮಾಗಿ ಅದು ಕಾಲಾಂತರದಲ್ಲಿ ಕಲಾ ಅಭಿವ್ಯಕ್ತಿ ಪಡೆಯುವುದು ಒಂದು ಮಾದರಿಯಾದರೆ, ಅಂದಂದಿನ ಘಟನೆಗಳು ಘಟಿತ ಅವಧಿಯಲ್ಲಿಯೇ ಅಭಿವ್ಯಕ್ತಿ ಪಡೆದಿರುವ ಈ 'ಕೋವಿಡ್ ದಿನಚರಿ' ಕಲಾ ಅಭಿವ್ಯಕ್ತಿಗೊಂದು ಹೊಸ ಮಾದರಿಯನ್ನು ನೀಡಿದೆ ಎನಿಸುತ್ತದೆ. ಆನಂದ್ ಗೋಪಾಲ್. ಮಾಲೂರು 0 Comments

Thursday, April 7, 2022

ಕಡಮೆ ಪ್ರಕಾಶ್ - ಶಿಲ್ಪಾ ಮ್ಯಾಗೇರಿ ಅವರ - ಮಾತಿನ ನಡುವೆಯ ಮೌನದ ಪದಗಳು { ಕವನ ಸಂಕಲನ }

ಮಾತು ಮೌನದ ನಡುವೆ ' ಯ ಶಿಲ್ಪಾ ಮ್ಯಾಗೇರಿ ಗದಗಿನ ಲಕ್ಕಲಕಟ್ಟಿ ಊರಿನವರಾದರೂ ಈಗ ಕೊಪ್ಪಳದ ನೆಲದಲ್ಲಿ ನೆಲೆಯೂರಿ ಗೃಹಿಣಿ , ತಾಯಿ ಮತ್ತು ಶಿಕ್ಷಕಿಯಾಗಿ ಕನ್ನಡ ಸಾಹಿತ್ಯ - ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿ- ಕೊಂಡಿರುವರು. ಇವರ ಕವಿತೆಯೂ ಇವರಂತೆ ; ಮಾತಿನ ನಡುವೆಯ ಮೌನದ ಪದಗಳಂತೆ . ಮಾತಿಗೆ ಒಂದೇ ಒಂದು ಅರ್ಥವಿದ್ದರೆ ಮೌನಕ್ಕೆ ನಿಲುಕಲಾರದ ಅರ್ಥವಿದೆ. ಮನುಷ್ಯ ಪ್ರೀತಿ , ಮಾನವೀಯ ಮೌಲ್ಯಗಳು ಇವರ ಬರಹದ ಅಡಿಪಾಯವಾಗಿದ್ದು ಕೌಟುಂಬಿಕ ಚೌಕಟ್ಟಿನಲ್ಲಿ ಕವಿತೆ ಬರೆಯುವ ಇವರು ಬದುಕು ಬರಹದ ನಡುವೆ ಸಮನ್ವಯತೆ ಸಾಧಿಸಿರುವರು. ಸಂಕಲನದುದ್ದಕ್ಕೂ ಅಪ್ಪ , ಅಮ್ಮ , ಇನಿಯ , ವಸಂತ , ಮಾತು , ಮೌನಗಳಿಂದ ಆತ್ಮಾವ - ಲೋಕನಗೈಯ್ಯುತ್ತಾ ವಾಸ್ತವಕ್ಕೆ ಮುಖಾಮುಖಿಯಾಗಿ ಬದುಕಿಗೆ ತುಂಬಾ ಹತ್ತಿರವಾಗಿರುವದರಿಂದ ಈ ಎಲ್ಲಾ ಕವಿತೆಗಳೂ ಜನಸಾಮಾನ್ಯರ ನಾಡಿ ಮಿಡಿತದ ಸಾಲುಗಳಾಗಿವೆ. ಕೊಪ್ಪಳದ ತುಷಾರ್ ಪ್ರಕಾಶನ ಪ್ರಕಟಿಸಿದ ಇವರ ಈ ಮೂರನೇ ಕವನ ಸಂಕಲನವು 110 ಪುಟಗಳನ್ನು ಒಳಗೊಂಡಿದ್ದು 66 ಜೀವ ಮಿಡಿತದ ಕವಿತೆಗಳಿವೆ. ಪರರ ದುಡ್ಡು ಪಾಶಾಣ ಎಂದ ಅವರಪ್ಪನ ಮಾತನ್ನೇ ಗಟ್ಟಿಯಾಗಿ ಉಳಿಸಿಕೊಂಡು ಬಂದವ ಸತ್ಯ ಮಾತು ಶುದ್ಧ ನಡತೆ ನ್ಯಾಯ ನಿಷ್ಠೆಯ ಪ್ರತೀಕ ನನ್ನಪ್ಪ ಎನ್ನುತ್ತಾ " ಅಪ್ಪ " ಕವಿತೆಯಲ್ಲಿ ಅಪ್ಪನ ಬಹುಮುಖ ವ್ಯಕ್ತಿತ್ವಕ್ಕೆ ಕನ್ನಡಿಯಾಗಿರುವರು. ಅಪ್ಪನಿಗಿಂತ ಮಿಗಿಲಾದ ಪ್ರೀತಿ ಈ ಜಗದಲಿ ಇಲ್ಲವೇ ಇಲ್ಲ. ಅದಕ್ಕೆ ಹೇಳುವರು ಅಪ್ಪನೆಂದರೆ ಆಕಾಶ. ಕೊನೆ ಕೊನೆಗೆ ಅಪ್ಪನ ಮಾತೂ ಸಹ ಮಗುವಿನಂತೆ. ಸರಳತೆಯ ಸಾಕಾರ ಮೂರ್ತಿ ಅಪ್ಪ. ಎಲ್ಲವನ್ನೂ ಮೌನದಲ್ಲಿ ನುಂಗಿ ತನಗೇನೂ ಆಗೇ ಇಲ್ಲಾ ಎನ್ನುವ ಕಷ್ಟ ಸಹಿಷ್ಣು ಅಪ್ಪ. ಕವಿ ಇಲ್ಲಿ ಮನದಾಳದ ಮಾತನಾಡುತ್ತಾ , ನ್ಯಾಯ ನಿಷ್ಠೆಯ ಪ್ರತೀಕ ನನ್ನಪ್ಪ ಎಂದು ಸತ್ಯ ಮಾತು ಶುದ್ಧ ನಡತೆಯ ಪ್ರತಿರೂಪ ನನ್ನಪ್ಪ ಎಂದಿರು- ವರು. ಬಹುತೇಕ ಎಲ್ಲರ ಅಪ್ಪನೂ ಹಾಗೇ. ಅಪ್ಪನದು ಮಾಗಿದ ಮನಸ್ಸು. ನೋವು ನಲಿವಿನ ಭೇದ , ಬೇಕು ಬೇಡಿಕೆಗಳ ಕುರಿತಾಗಿ ಎಂದೂ ತಲೆಕೆಡಿಸಿ ಕೊಂಡವನಲ್ಲ ಅಪ್ಪ . ಹಾಸಿಗೆ ಇದ್ದಷ್ಟು ಕಾಲು ಚಾಚುವ ಅಪ್ಪ , ಪ್ರೀತಿ ಹಂಚುವಲ್ಲಿ ಮಾತ್ರ ಕುಬೇರ ಎಂದಿರುವರು. ಅಪ್ಪ ಎಂದರೆ ಮೂಕ ವೇದನೆಯ ಮೌನ ಕವಿತೆಯ ಸಾಲು. " ನನ್ನವ್ವ " ಕವಿತೆಯಲ್ಲಿ ಸಿಟ್ಟು ಸೆಡವು ಅರಿಯದಾಕೆ ಒಮ್ಮೊಮ್ಮೆ ಸ್ಫೋಟಗೊಂಡು ತಣ್ಣಗಾಗುವಾಕೆ ನನ್ನವ್ವ ದೇವರ ದೀಪಕೆ ತಾನೇ ಎಣ್ಣೆಯಾದವಳು. ಎಂದು ಈ ಕವಿತೆಯಲ್ಲಿ ಅವ್ವನ ತ್ಯಾಗದ ಪುಟ ಪುಟವನ್ನು ಬಿಚ್ಚುತ್ತಾ ಹೋಗಿರುವರು . ದೇವರ ದೀಪಕೆ ತಾನೇ ಎಣ್ಣೆಯಾದವಳು ಎಂದು ತಾಯಿಯ ಮನದಾಳದ ಉಸಿರನ್ನು ಅದ್ಭುತ ಸಾಲುಗಳ ಮೂಲಕ ಕವಿ ಬೆರಗು ಗೊಳಿಸಿರುವರು. ಕೌಟುಂಬಿಕ ಏಳ್ಗೆಗಾಗಿ ಬೆಂದು ನೊಂದು ಸಮರ್ಪಣಾ ಭಾವದಿಂದ ಅರ್ಪಿಸಿಕೊಳ್ಳುವ ಅವ್ವನ ಬದುಕೇ ಹೀಗೆ. ಸಿಟ್ಟು ಸೆಡವು ಬಳಿ ಸುಳಿಯದಿದ್ದರೂ ಒಮ್ಮೊಮ್ಮೆ ಸಿಡಿದೆದ್ದು ಮತ್ತೆ ಮುದುಡಿ ತಣ್ಣಗಾಗುವಳು. ಬಡತನದ ಬೇಗೆಯಲ್ಲಿ ಬೆಂದರೂ ಅವ್ವ ಎಂದಿಗೂ ಭರವಸೆಯ ಚೇತನವೇ ಆಗಿರುವಳು. ಅವ್ವ ಮನೆಯ ಹೊಸಿಲಿಗೆ ರಂಗೋಲಿ ಇದ್ದಂತೆ. ಸಿರಿಬಂದಾಗ ಎಂದೂ ಬೀಗಲಿಲ್ಲ, ಬರ ಬಂದಾಗ ಎಂದೂ ಕೊರಗಲಿಲ್ಲ.ಇಷ್ಟೆಲ್ಲಾ ತ್ಯಾಗಮಯಿ ಅವ್ವನಿಗೆ ಒಮ್ಮೊಮ್ಮೆ ಅಪವಾದದ ಪ್ರಶಸ್ತಿ ಬರುವುದೂ ಇರುತ್ತದೆ. ಇದಾವುದನ್ನೂ ಲೆಕ್ಕಿಸದೇ ತಾಯಿ ತನ್ನ ಕುಟುಂಬಕ್ಕಾಗಿ ತನ್ನಷ್ಟಕ್ಕೆ ತಾನೇ ನೋಯುವಳು ; ಬೇಯುವಳು ಮತ್ತು ಬೀಗುವಳು . ಈ ಸಂಕಲನಕ್ಕೆ ಅರ್ಥಪೂರ್ಣ ಮುನ್ನುಡಿ ಬರೆದು ಹರಿಸಿದ ಡಾ. ಎನ್.ಎಂ. ಅಂಬಲಿಯವರು " ಆಧುನಿಕ ಜಗತ್ತಿನ ಆಶೋತ್ತರಗಳಿಗೆ ಕವಿಯು ಸ್ಪಂದಿಸಿ ತನ್ನ ಭಾವನೆಗಳನ್ನು ಹೊರಸೂಸಿದಾಗ ಭಾವಲಹರಿ ಅನಾವರಣಗೊಳ್ಳುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಹಲವಾರು ಕವನಗಳು ಮೈದೋರಿವೆ. ತಂದೆ - ತಾಯಿ, ಬಂಧು- ಬಾಂಧವರನ್ನು ಕುರಿತು ಬರೆದ ಕವನಗಳಲ್ಲಿ ತಂದೆಯ ಉದಾರತೆ, ತಾಯಿಯ ಮಮತೆ, ನೋವು - ನಲಿವುಗಳ ಚಿತ್ರಣ ಬಹಳಷ್ಟು ರೋಚಕವಾಗಿದೆ. ಕೌಟುಂಬಿಕ ವಲಯದಲ್ಲಿ ಹುಟ್ಟಿಬಂದ ಅನೇಕ ಕವನಗಳು ಸಂಸಾರದ ಜಂಜಾಟಗಳು, ಮಾನಸಿಕ ವೇದನೆಗಳು , ಬಾಲ್ಯದ ನೆನಪುಗಳು ,ಸ್ನೇಹದ ಸೆಳಕು - ಬಳುಕುಗಳು ಚಿತ್ತ ವೃತ್ತಿಯಲ್ಲಿ ಮೂಡಿ ಬಂದು ಅಂತರಂಗವನ್ನು ಕೆದಕಿ ಸತ್ಯವನ್ನು ಕಂಡುಕೊಳ್ಳುವಲ್ಲಿ ನಿರಂತರ ಪ್ರಯತ್ನ ಮಾಡುವದನ್ನು ಕಾಣುತ್ತೇವೆ " ಎಂದಿರುವರು . ಸಂಬಂಧಗಳು ಸುತ್ತು ಹೋಗಿದೆ ಅದರ ಸಮಾಧಿಯ ಮೇಲೆ ನಮ್ಮ ಬದುಕು ಸಾಗಿದೆ ಎನ್ನುತ್ತಾ " ಧಾವಂತ ಬದುಕು " ಕವಿತೆಯಲ್ಲಿ ಮನುಷ್ಯ ಮನುಷ್ಯನ ನಡುವಿನ ಇಂದಿನ ಸ್ಥಿತಿ - ಗತಿಗಳ ಕುರಿತಾಗಿ ಬೆಳಕು ಚೆಲ್ಲಿರುವರು. ಬರಬರುತ್ತಾ ಈ ಮನುಷ್ಯ ಜೀವಿ ತಾನು ತನ್ನದೆಂಬ ದುರಹಂಕಾರದಲ್ಲಿ ಮುಳುಗಿ - ಹೋಗಿರುವನು. ಆದರೆ ಗಾಳಿ , ನೀರು , ಮಣ್ಣು ಯಾವುದರಲ್ಲೂ ಇನ್ನೂ ಬದಲಾಗಲೇ ಇಲ್ಲ. ಮನಸ್ಸಿನಲ್ಲಿ ಪ್ರೀತಿ ವಿಶ್ವಾಸ ಉಳಿದಿಲ್ಲ. ಆಚರಣೆಗಳು ಆಡಂಬರ ವಾಗಿದೆ. ಬಡತನ ಶ್ರೀಮಂತಿಕೆಯ ನಡುವಿನ ಕಂದಕ ಆಳವಾಗಿದೆ. ಅಂದಿನ ಆಟಗಳು, ಸ್ವಚ್ಛಂದ ಮನಸ್ಸು ಎಲ್ಲವೂ ಮಾಯ. ಬಯಲುಗಳು ಕಾಂಕ್ರೀಟ್ ಕಾಡಾಗಿವೆ. ಬಾವಿಗಳಂತೂ ಕಸದ ಗೂಡಾಗಿದೆ. ಹಣದ ಮಾತಿನಲಿ ಮಮತೆ ಮೌನವಾಗಿದೆ. ಮತ್ತೊಬ್ಬರ ಕುರಿತಾಗಿನ ಕಾಳಜಿಯಂತೂ ನಾಪತ್ತೆಗಾಗಿಬಿಟ್ಟಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಹಣದ ಲೋಭ ಮತ್ತು ಮೋಹ. ಅಂದಿನ ಸಂಬಂಧದ ಸಮಾಧಿಯಮೇಲೆ ನಮ್ಮ ಬದುಕು ಸಾಗಿದೆ ಎಂದು ಕವಿ ಈ ಧಾವಂತದ ಬದುಕಿಗೆ ಮರುಗಿರುವರು. " ಪುತ್ರ ವ್ಯಾಮೋಹ " ಕವಿತೆಯಲ್ಲಿ ಅಮ್ಮ ನಿನ್ನ ತೋಳೆಂದೂ ಆಗಲೇ ಇಲ್ಲ ನನಗೆ ದಿಂಬು ಎನ್ನುತ್ತಾ ಗಂಡು - ಹೆಣ್ಣಿನ ನಡುವಿನ ತಾರತಮ್ಯದ ಕುರಿತು ಶಾಂತವಾಗಿ ಅಬ್ಬರಿಸಿರುವರು. ಇಷ್ಟೆಲ್ಲಾ ಮುಂದುವರಿದ ಈ ಕಾಲಘಟ್ಟದಲ್ಲೂ ಹೆಣ್ಣೆಂದು ತಿಳಿದೊಡನೇ ಚಿವುಟಿ ಬಿಡುವರು. ಹಿಂದಿನ ಕಾಲ ಹೋಯಿತೀಗ , ಮಗನೇನು ಮೇಲಲ್ಲ ; ಮಗಳೂ ಸರಿಸಮಾನಳು ಎಂಬ ಮಾತನ್ನು ಕವಿ ತಮ್ಮ ಕವಿತೆಯ ಮೂಲಕ ಎಚ್ಚರಿಸಿರುವರು. ಸಂಕಲನಕ್ಕೆ ಬೆನ್ನುಡಿ ಬರೆದ ಹಿರಿಯ ಬರಹಗಾರ್ತಿ ಡಾ.ಸರೋಜಿನಿ ಭದ್ರಾಪೂರ " ಈ ಸಂಕಲನದ ಕವನಗಳನ್ನು ಓದುತ್ತಾ ಹೋದಂತೆ ಮಾಗಿದ ಮನಸ್ಸು , ಸರಳ ಸಜ್ಜನಿಕೆಯ ಕಾವ್ಯ, ಬದುಕು ಬವಣೆ, ಸಮರಸದ ಸಮಾಜಕ್ಕಾಗಿ ಕಳಕಳಿ, ಪರಿಸರ ಕಾಳಜಿ , ಬಾಂಧವ್ಯದ ಸರಪಳಿ, ಬಾಲ್ಯದ ನೆನಪುಗಳು, ಜೀವಪರ ಮಿಡಿಯುವ ದನಿ ಎಲ್ಲವೂ ಕವನಗಳಲ್ಲಿ ಕಲಸುಮೇಲೋಗರ ದಂತೆ ರಚನೆಗೊಂಡಿದೆ. ಶುಭ ಹಾರೈಸುವೆ " ಎಂದಿರುವರು. " ನನ್ನೂರು ನನ್ನ ಬೆಟ್ಟ " ಕವಿತೆಯಲ್ಲಿ ನನ್ನಜ್ಜ ಕೊಂಡನು ನಿನ್ನೊಡಲ ಫಲವ ನನ್ನಪ್ಪ ಕಂಡಿದ್ದ ನಿನ್ನ ಹಸಿರಿನಾ ಸುಖವ ನನಗಿಲ್ಲ ಸಮೃದ್ಧಿ ನೀನೇಕೆ ಹೀಗೆ ಬರಡಾಗುತಿದೆ ಇನ್ನು ಚೆಲುವು ನೀ ಮೌನವೇಕೆ ! ಎಂದು ದಿನದಿಂದ ದಿನಕ್ಕೆ ಕಾಲ ಬದಲಾದಂತೆ ಈ ಮನುಷ್ಯ ಜೀವಿಯು ಪ್ರಕೃತಿಯ ಮೇಲೆ ತನ್ನ ದಬ್ಬಾಳಿಕೆ ನಡೆಸಿ ಭೂಮಿ,ಬೆಟ್ಟ, ಊರಿನ ವಿನಾಶಕ್ಕೆ ಕಾರಣ ವಾಗಿರುವನು ; ಅದು ತನ್ನದೇ ವಿನಾಶಕ್ಕೆ ದಾರಿ ಎಂಬ ಅರಿವಿಲ್ಲದೇ. ಅಜ್ಜನ ಕಾಲದ ಪ್ರಕೃತಿಕ ಸೊಬಗು ಅಪ್ಪನ ಕಾಲದಲ್ಲಿಲ್ಲ .ಅಪ್ಪನ ಕಾಲದ್ದು ಈಗಂತೂ ಕ್ಷೀಣಿಸುತ್ತಾ ಹೋಗಿದೆ. ಇದೇ ರೀತಿ ಮುಂದುವರಿದರೆ ಮುಂದಿನವರಿಗೆ ನಾವೇನು ಬಿಟ್ಟು ಹೋಗಬೇಕು , ದಾರಿ ಕಾಣದಾಗಿದೆ. ನಾವು ಬೆಳೆಸಲಾಗದಿದ್ದರೂ ಹಿಂದಿನದಾದರೂ ಉಳಿಸಬೇಕು ಎಂಬ ಎಚ್ಚರಿಕೆ ಮಾತನ್ನೂ ನೀಡಿರುವರು. ನನ್ನೂರು ನನ್ನ ಬೆಟ್ಟ ಮಾತ್ರ ಶಾಶ್ವತ ಆದರೆ ಮಿಕ್ಕಿದ್ದೆಲ್ಲಾ ಮನುಷ್ಯನ ಮನಸ್ಸಿನ ಮೇಲೆ ಅವಲಂಬಿಸಿದೆ ಎಂದು ಕವಿ ಮನನೊಂದು ನುಡಿದಿರುವರು. ಕವಿ ತನ್ನ ಬದುಕು ಬರಹದ ಕುರಿತಾಗಿ ಆತ್ಮಾಲೋಕನೆ ಮಾಡುತ್ತಾ , ನನ್ನ ಬರಹವನ್ನು ಅದೆಷ್ಟೋ ಬಾರಿ ನನಗೆ ಒಪ್ಪಲಾಗುತ್ತಿಲ್ಲ ಬರೆದಂತೆ ಬದುಕಲಾಗುತ್ತಿಲ್ಲ ಬದುಕಿದಂತೆ ಬರೆಯಲೂ ಆಗುತ್ತಿಲ್ಲ ಎಂಬ ವಿಷಾದದಲ್ಲಿ " ಆತ್ಮಾವಲೋಕನ " ಕವಿತೆಯಲ್ಲಿ ಮನದ ಭಾವನೆಗಳನ್ನು ಹೊರಹಾಕಿರುವರು. ಬರೆಯು - ವದೇ ಬೇರೆ ; ಬದುಕುವುದೇ ಬೇರೆ . ಬದುಕು ಮತ್ತು ಬರಹ ಒಂದಾಗಲಿ ಎಂದು ಹಾರೈಸಿರುವರು. ' ನಾ ಬೆಟ್ಟದಡಿಯ ಹಸಿ ಗರಿಕೆಯಾಗಿ ನಗುತ ನಿಲ್ಲುವೆ ' ಎನ್ನುತ್ತಾ ' ಒಮ್ಮೆ ಅವಳು ತಿರುಗಿ ಬಿದ್ದರೆ ನಿನಗೆ ಬೆಲೆಯಿಲ್ಲ , ಬದುಕೂ ಇಲ್ಲಾ ' ಎಂಬ ಎಚ್ಚರಿಕೆಯನ್ನೂ ಶಾಂತವಾಗಿಯೇ ಉಸಿರಿರುವ ಶಿಲ್ಪಾ ಮ್ಯಾಗೇರಿ ಅವರ ಕವಿತೆಗಳಲ್ಲಿ ಕೌಟುಂಬಿಕ ಪ್ರೀತಿ ಇದೆ ; ಎಲ್ಲವನೂ ಮೌನವಾಗಿಯೇ ಅಭಿವ್ಯಕ್ತಿಸುವ ಕಲೆಗಾರಿಕೆ ಇದೆ. ಇನ್ನೂ ಹೆಚ್ಚಿನ ಅದ್ಯಯನ- ದಿಂದ ಕಾವ್ಯದ ಒಳ ಪ್ರವೇಶಿಸಿ ಉತ್ತಮ ಕವಿತೆಗಳನ್ನು ಕನ್ನಡ ಕಣಜಕ್ಕೆ ನೀಡಲಿ ಎಂದು ಹಾರೈಸಿ ಶಿಲ್ಪಾ ಮ್ಯಾಗೇರಿ ಅವರನ್ನು ಅಭಿನಂದಿಸುವೆ. ಪ್ರಕಾಶ ಕಡಮೆ ನಾಗಸುಧೆ , ಹುಬ್ಬಳ್ಳಿ 9448850316 .

ಕುಸುಮಾ ಆಯರನಹಳ್ಳಿ- ಕವಿತೆ ಅಂದರೆ ವಿಪರೀತ ಭಯ ಅವನಿಗೆ

ಅದ್ಯಾಕೋ ಏನೋ ಕವಿತೆ ಅಂದರೆ ವಿಪರೀತ ಭಯ ಅವನಿಗೆ ನಿನ್ನ ಮೇಲೊಂದು ಕವಿತೆ ಬರೆಯುತ್ತೇನೆ ಅಂದಾಗೆಲ್ಲ. ನಿನ್ನ ಮೇಲೆ ಹಾವು ಬಿಸಾಡುತ್ತೇನೆ ಅಂದಂತೆ ಬೆಚ್ಚುತ್ತಾನೆ. ಅವನು ಕವಿತೆಗಳನ್ನು ಓದಿಯೇ ಇಲ್ಲ ಪಾಪ ಅವನಿಗೊಬ್ಬ ಸರಿಯಾದ ಕನ್ನಡ ಮೇಷ್ಟ್ರಾದರೂ ಸಿಗಬೇಕಿತ್ತು! ಕವಿತೆ ಹೂವೆನ್ನುವುದು ಹೂವಿಗಲ್ಲ, ಕಲ್ಲಂದರೆ ಕಲ್ಲಲ್ಲ, ಮುಳ್ಳೆಂದರೆ ಮುಳ್ಳಲ್ಲ ಅಷ್ಟೇ ಅಲ್ಲ ಪೆದ್ದಾ ನೀನೆಂದರೆ ನೀನಲ್ಲ, ನಾನೆಂದರೆ ನಾನೂ ಅಲ್ಲ ಅಂದರೆ... ಅಯ್ಯಯ್ಯೋ..ಅದೆಲ್ಲ ಹೇಗೆ ಸಾಧ್ಯ? ಕೇಳುತ್ತಾನೆ. ಕಾವ್ಯವೆಂದರೆ ರೂಪಕಗಳಪ್ಪಾ ಅಂದರೆ ಅದ್ಯಾಕೆ ಬೇಕು? ಅನ್ನುತ್ತಾನೆ. ಪದ್ಯವೊಂದು ವಿಸ್ಮಯ ಕಣೋ ಅಂದರೆ ನಕ್ಷತ್ರದ ಕಡೆ ನೋಡುತ್ತಾ ಒಬ್ಬನೇ ನಗುತ್ತಾನೆ. ಕವಿತೆ ಅಂದರೆ ಹ್ಯೂಮನ್ ಬಾಂಬೇನೋ ಎಂಬಂತಾಡುವ ಅವನನ್ನು ಕಂಡಾಗೆಲ್ಲ ರಾಶಿ ಕವಿತೆ ಹುಟ್ಟುತ್ತದೆ. ವಿಚಿತ್ರ!! ಹ್ಞಾಂ ..ಮುಂದಿನ ಸಲ ಸಿಕ್ಕಾಗ ನಾನೂ ನೀನೂ ಸಾಯಬಹುದು ಪೆದ್ದಾ ನಮ್ಮಿಬ್ಬರ ನಡುವೆ ವಿನಿಮಯಗೊಂಡ ಭಾವಗಳನ್ನು ಹಿಡಿದಿಟ್ಟ ಪದ್ಯ ಬದುಕುತ್ತದೆ ಬಹುಕಾಲ ಅಂತ ಹೇಳಿ ನೋಡುತ್ತೇನೆ. ಹೌದಲ್ಲಾ..! ಅಂದರೂ ಅನ್ನಬಹುದು ಅಥವಾ...

| Discussion with Kannada Writer Srinivas Vaidya | Interview | ...ಶ್ರೀನಿವಾಸ ವೈದ್ಯ [ ಸಂದರ್ಶನ }

Sanchaya | Discussion with Prof Srinivas Havanoor | Interview | .ಡಾ/ ಶ್ರೀನಿವಾಸ ಹಾವನೂರ್ { ಸಂದರ್ಶನ }