Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Thursday, April 7, 2022
ಕಡಮೆ ಪ್ರಕಾಶ್ - ಶಿಲ್ಪಾ ಮ್ಯಾಗೇರಿ ಅವರ - ಮಾತಿನ ನಡುವೆಯ ಮೌನದ ಪದಗಳು { ಕವನ ಸಂಕಲನ }
ಮಾತು ಮೌನದ ನಡುವೆ ' ಯ ಶಿಲ್ಪಾ ಮ್ಯಾಗೇರಿ ಗದಗಿನ
ಲಕ್ಕಲಕಟ್ಟಿ ಊರಿನವರಾದರೂ ಈಗ ಕೊಪ್ಪಳದ ನೆಲದಲ್ಲಿ
ನೆಲೆಯೂರಿ ಗೃಹಿಣಿ , ತಾಯಿ ಮತ್ತು ಶಿಕ್ಷಕಿಯಾಗಿ ಕನ್ನಡ
ಸಾಹಿತ್ಯ - ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿ-
ಕೊಂಡಿರುವರು. ಇವರ ಕವಿತೆಯೂ ಇವರಂತೆ ; ಮಾತಿನ
ನಡುವೆಯ ಮೌನದ ಪದಗಳಂತೆ . ಮಾತಿಗೆ ಒಂದೇ ಒಂದು
ಅರ್ಥವಿದ್ದರೆ ಮೌನಕ್ಕೆ ನಿಲುಕಲಾರದ ಅರ್ಥವಿದೆ. ಮನುಷ್ಯ
ಪ್ರೀತಿ , ಮಾನವೀಯ ಮೌಲ್ಯಗಳು ಇವರ ಬರಹದ ಅಡಿಪಾಯವಾಗಿದ್ದು ಕೌಟುಂಬಿಕ ಚೌಕಟ್ಟಿನಲ್ಲಿ ಕವಿತೆ
ಬರೆಯುವ ಇವರು ಬದುಕು ಬರಹದ ನಡುವೆ ಸಮನ್ವಯತೆ
ಸಾಧಿಸಿರುವರು. ಸಂಕಲನದುದ್ದಕ್ಕೂ ಅಪ್ಪ , ಅಮ್ಮ , ಇನಿಯ , ವಸಂತ , ಮಾತು , ಮೌನಗಳಿಂದ ಆತ್ಮಾವ -
ಲೋಕನಗೈಯ್ಯುತ್ತಾ ವಾಸ್ತವಕ್ಕೆ ಮುಖಾಮುಖಿಯಾಗಿ
ಬದುಕಿಗೆ ತುಂಬಾ ಹತ್ತಿರವಾಗಿರುವದರಿಂದ ಈ ಎಲ್ಲಾ
ಕವಿತೆಗಳೂ ಜನಸಾಮಾನ್ಯರ ನಾಡಿ ಮಿಡಿತದ
ಸಾಲುಗಳಾಗಿವೆ.
ಕೊಪ್ಪಳದ ತುಷಾರ್ ಪ್ರಕಾಶನ ಪ್ರಕಟಿಸಿದ ಇವರ ಈ
ಮೂರನೇ ಕವನ ಸಂಕಲನವು 110 ಪುಟಗಳನ್ನು
ಒಳಗೊಂಡಿದ್ದು 66 ಜೀವ ಮಿಡಿತದ ಕವಿತೆಗಳಿವೆ.
ಪರರ ದುಡ್ಡು ಪಾಶಾಣ ಎಂದ
ಅವರಪ್ಪನ ಮಾತನ್ನೇ ಗಟ್ಟಿಯಾಗಿ
ಉಳಿಸಿಕೊಂಡು ಬಂದವ
ಸತ್ಯ ಮಾತು ಶುದ್ಧ ನಡತೆ
ನ್ಯಾಯ ನಿಷ್ಠೆಯ ಪ್ರತೀಕ ನನ್ನಪ್ಪ
ಎನ್ನುತ್ತಾ " ಅಪ್ಪ " ಕವಿತೆಯಲ್ಲಿ ಅಪ್ಪನ ಬಹುಮುಖ
ವ್ಯಕ್ತಿತ್ವಕ್ಕೆ ಕನ್ನಡಿಯಾಗಿರುವರು. ಅಪ್ಪನಿಗಿಂತ ಮಿಗಿಲಾದ
ಪ್ರೀತಿ ಈ ಜಗದಲಿ ಇಲ್ಲವೇ ಇಲ್ಲ. ಅದಕ್ಕೆ
ಹೇಳುವರು ಅಪ್ಪನೆಂದರೆ ಆಕಾಶ. ಕೊನೆ ಕೊನೆಗೆ ಅಪ್ಪನ
ಮಾತೂ ಸಹ ಮಗುವಿನಂತೆ. ಸರಳತೆಯ ಸಾಕಾರ ಮೂರ್ತಿ
ಅಪ್ಪ. ಎಲ್ಲವನ್ನೂ ಮೌನದಲ್ಲಿ ನುಂಗಿ ತನಗೇನೂ ಆಗೇ
ಇಲ್ಲಾ ಎನ್ನುವ ಕಷ್ಟ ಸಹಿಷ್ಣು ಅಪ್ಪ. ಕವಿ ಇಲ್ಲಿ ಮನದಾಳದ
ಮಾತನಾಡುತ್ತಾ , ನ್ಯಾಯ ನಿಷ್ಠೆಯ ಪ್ರತೀಕ ನನ್ನಪ್ಪ ಎಂದು
ಸತ್ಯ ಮಾತು ಶುದ್ಧ ನಡತೆಯ ಪ್ರತಿರೂಪ ನನ್ನಪ್ಪ ಎಂದಿರು-
ವರು. ಬಹುತೇಕ ಎಲ್ಲರ ಅಪ್ಪನೂ ಹಾಗೇ. ಅಪ್ಪನದು
ಮಾಗಿದ ಮನಸ್ಸು. ನೋವು ನಲಿವಿನ ಭೇದ , ಬೇಕು
ಬೇಡಿಕೆಗಳ ಕುರಿತಾಗಿ ಎಂದೂ ತಲೆಕೆಡಿಸಿ ಕೊಂಡವನಲ್ಲ
ಅಪ್ಪ . ಹಾಸಿಗೆ ಇದ್ದಷ್ಟು ಕಾಲು ಚಾಚುವ ಅಪ್ಪ , ಪ್ರೀತಿ
ಹಂಚುವಲ್ಲಿ ಮಾತ್ರ ಕುಬೇರ ಎಂದಿರುವರು. ಅಪ್ಪ ಎಂದರೆ
ಮೂಕ ವೇದನೆಯ ಮೌನ ಕವಿತೆಯ ಸಾಲು.
" ನನ್ನವ್ವ " ಕವಿತೆಯಲ್ಲಿ
ಸಿಟ್ಟು ಸೆಡವು ಅರಿಯದಾಕೆ
ಒಮ್ಮೊಮ್ಮೆ ಸ್ಫೋಟಗೊಂಡು
ತಣ್ಣಗಾಗುವಾಕೆ
ನನ್ನವ್ವ ದೇವರ ದೀಪಕೆ
ತಾನೇ ಎಣ್ಣೆಯಾದವಳು.
ಎಂದು ಈ ಕವಿತೆಯಲ್ಲಿ ಅವ್ವನ ತ್ಯಾಗದ ಪುಟ ಪುಟವನ್ನು
ಬಿಚ್ಚುತ್ತಾ ಹೋಗಿರುವರು . ದೇವರ ದೀಪಕೆ ತಾನೇ
ಎಣ್ಣೆಯಾದವಳು ಎಂದು ತಾಯಿಯ ಮನದಾಳದ
ಉಸಿರನ್ನು ಅದ್ಭುತ ಸಾಲುಗಳ ಮೂಲಕ ಕವಿ ಬೆರಗು
ಗೊಳಿಸಿರುವರು. ಕೌಟುಂಬಿಕ ಏಳ್ಗೆಗಾಗಿ ಬೆಂದು ನೊಂದು
ಸಮರ್ಪಣಾ ಭಾವದಿಂದ ಅರ್ಪಿಸಿಕೊಳ್ಳುವ ಅವ್ವನ
ಬದುಕೇ ಹೀಗೆ. ಸಿಟ್ಟು ಸೆಡವು ಬಳಿ ಸುಳಿಯದಿದ್ದರೂ
ಒಮ್ಮೊಮ್ಮೆ ಸಿಡಿದೆದ್ದು ಮತ್ತೆ ಮುದುಡಿ ತಣ್ಣಗಾಗುವಳು.
ಬಡತನದ ಬೇಗೆಯಲ್ಲಿ ಬೆಂದರೂ ಅವ್ವ ಎಂದಿಗೂ
ಭರವಸೆಯ ಚೇತನವೇ ಆಗಿರುವಳು. ಅವ್ವ ಮನೆಯ
ಹೊಸಿಲಿಗೆ ರಂಗೋಲಿ ಇದ್ದಂತೆ. ಸಿರಿಬಂದಾಗ ಎಂದೂ
ಬೀಗಲಿಲ್ಲ, ಬರ ಬಂದಾಗ ಎಂದೂ ಕೊರಗಲಿಲ್ಲ.ಇಷ್ಟೆಲ್ಲಾ
ತ್ಯಾಗಮಯಿ ಅವ್ವನಿಗೆ ಒಮ್ಮೊಮ್ಮೆ ಅಪವಾದದ ಪ್ರಶಸ್ತಿ
ಬರುವುದೂ ಇರುತ್ತದೆ. ಇದಾವುದನ್ನೂ ಲೆಕ್ಕಿಸದೇ ತಾಯಿ
ತನ್ನ ಕುಟುಂಬಕ್ಕಾಗಿ ತನ್ನಷ್ಟಕ್ಕೆ ತಾನೇ ನೋಯುವಳು ;
ಬೇಯುವಳು ಮತ್ತು ಬೀಗುವಳು .
ಈ ಸಂಕಲನಕ್ಕೆ ಅರ್ಥಪೂರ್ಣ ಮುನ್ನುಡಿ ಬರೆದು ಹರಿಸಿದ
ಡಾ. ಎನ್.ಎಂ. ಅಂಬಲಿಯವರು " ಆಧುನಿಕ ಜಗತ್ತಿನ
ಆಶೋತ್ತರಗಳಿಗೆ ಕವಿಯು ಸ್ಪಂದಿಸಿ ತನ್ನ ಭಾವನೆಗಳನ್ನು
ಹೊರಸೂಸಿದಾಗ ಭಾವಲಹರಿ ಅನಾವರಣಗೊಳ್ಳುತ್ತದೆ
ಎನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಹಲವಾರು ಕವನಗಳು
ಮೈದೋರಿವೆ. ತಂದೆ - ತಾಯಿ, ಬಂಧು- ಬಾಂಧವರನ್ನು ಕುರಿತು ಬರೆದ ಕವನಗಳಲ್ಲಿ ತಂದೆಯ ಉದಾರತೆ, ತಾಯಿಯ ಮಮತೆ, ನೋವು - ನಲಿವುಗಳ ಚಿತ್ರಣ
ಬಹಳಷ್ಟು ರೋಚಕವಾಗಿದೆ. ಕೌಟುಂಬಿಕ ವಲಯದಲ್ಲಿ
ಹುಟ್ಟಿಬಂದ ಅನೇಕ ಕವನಗಳು ಸಂಸಾರದ ಜಂಜಾಟಗಳು,
ಮಾನಸಿಕ ವೇದನೆಗಳು , ಬಾಲ್ಯದ ನೆನಪುಗಳು ,ಸ್ನೇಹದ
ಸೆಳಕು - ಬಳುಕುಗಳು ಚಿತ್ತ ವೃತ್ತಿಯಲ್ಲಿ ಮೂಡಿ ಬಂದು
ಅಂತರಂಗವನ್ನು ಕೆದಕಿ ಸತ್ಯವನ್ನು ಕಂಡುಕೊಳ್ಳುವಲ್ಲಿ
ನಿರಂತರ ಪ್ರಯತ್ನ ಮಾಡುವದನ್ನು ಕಾಣುತ್ತೇವೆ "
ಎಂದಿರುವರು .
ಸಂಬಂಧಗಳು ಸುತ್ತು ಹೋಗಿದೆ
ಅದರ ಸಮಾಧಿಯ ಮೇಲೆ
ನಮ್ಮ ಬದುಕು ಸಾಗಿದೆ
ಎನ್ನುತ್ತಾ " ಧಾವಂತ ಬದುಕು " ಕವಿತೆಯಲ್ಲಿ ಮನುಷ್ಯ
ಮನುಷ್ಯನ ನಡುವಿನ ಇಂದಿನ ಸ್ಥಿತಿ - ಗತಿಗಳ ಕುರಿತಾಗಿ
ಬೆಳಕು ಚೆಲ್ಲಿರುವರು. ಬರಬರುತ್ತಾ ಈ ಮನುಷ್ಯ ಜೀವಿ
ತಾನು ತನ್ನದೆಂಬ ದುರಹಂಕಾರದಲ್ಲಿ ಮುಳುಗಿ -
ಹೋಗಿರುವನು. ಆದರೆ ಗಾಳಿ , ನೀರು , ಮಣ್ಣು ಯಾವುದರಲ್ಲೂ ಇನ್ನೂ ಬದಲಾಗಲೇ ಇಲ್ಲ. ಮನಸ್ಸಿನಲ್ಲಿ
ಪ್ರೀತಿ ವಿಶ್ವಾಸ ಉಳಿದಿಲ್ಲ. ಆಚರಣೆಗಳು ಆಡಂಬರ ವಾಗಿದೆ. ಬಡತನ ಶ್ರೀಮಂತಿಕೆಯ ನಡುವಿನ ಕಂದಕ
ಆಳವಾಗಿದೆ. ಅಂದಿನ ಆಟಗಳು, ಸ್ವಚ್ಛಂದ ಮನಸ್ಸು
ಎಲ್ಲವೂ ಮಾಯ. ಬಯಲುಗಳು ಕಾಂಕ್ರೀಟ್ ಕಾಡಾಗಿವೆ.
ಬಾವಿಗಳಂತೂ ಕಸದ ಗೂಡಾಗಿದೆ. ಹಣದ ಮಾತಿನಲಿ
ಮಮತೆ ಮೌನವಾಗಿದೆ. ಮತ್ತೊಬ್ಬರ ಕುರಿತಾಗಿನ ಕಾಳಜಿಯಂತೂ ನಾಪತ್ತೆಗಾಗಿಬಿಟ್ಟಿದೆ. ಇದಕ್ಕೆಲ್ಲಾ ಮುಖ್ಯ
ಕಾರಣ ಹಣದ ಲೋಭ ಮತ್ತು ಮೋಹ. ಅಂದಿನ ಸಂಬಂಧದ ಸಮಾಧಿಯಮೇಲೆ ನಮ್ಮ ಬದುಕು ಸಾಗಿದೆ
ಎಂದು ಕವಿ ಈ ಧಾವಂತದ ಬದುಕಿಗೆ ಮರುಗಿರುವರು.
" ಪುತ್ರ ವ್ಯಾಮೋಹ " ಕವಿತೆಯಲ್ಲಿ
ಅಮ್ಮ ನಿನ್ನ ತೋಳೆಂದೂ
ಆಗಲೇ ಇಲ್ಲ
ನನಗೆ ದಿಂಬು
ಎನ್ನುತ್ತಾ ಗಂಡು - ಹೆಣ್ಣಿನ ನಡುವಿನ ತಾರತಮ್ಯದ ಕುರಿತು
ಶಾಂತವಾಗಿ ಅಬ್ಬರಿಸಿರುವರು. ಇಷ್ಟೆಲ್ಲಾ ಮುಂದುವರಿದ
ಈ ಕಾಲಘಟ್ಟದಲ್ಲೂ ಹೆಣ್ಣೆಂದು ತಿಳಿದೊಡನೇ ಚಿವುಟಿ
ಬಿಡುವರು. ಹಿಂದಿನ ಕಾಲ ಹೋಯಿತೀಗ , ಮಗನೇನು
ಮೇಲಲ್ಲ ; ಮಗಳೂ ಸರಿಸಮಾನಳು ಎಂಬ
ಮಾತನ್ನು ಕವಿ ತಮ್ಮ ಕವಿತೆಯ ಮೂಲಕ ಎಚ್ಚರಿಸಿರುವರು.
ಸಂಕಲನಕ್ಕೆ ಬೆನ್ನುಡಿ ಬರೆದ ಹಿರಿಯ ಬರಹಗಾರ್ತಿ
ಡಾ.ಸರೋಜಿನಿ ಭದ್ರಾಪೂರ " ಈ ಸಂಕಲನದ ಕವನಗಳನ್ನು ಓದುತ್ತಾ ಹೋದಂತೆ ಮಾಗಿದ ಮನಸ್ಸು ,
ಸರಳ ಸಜ್ಜನಿಕೆಯ ಕಾವ್ಯ, ಬದುಕು ಬವಣೆ, ಸಮರಸದ
ಸಮಾಜಕ್ಕಾಗಿ ಕಳಕಳಿ, ಪರಿಸರ ಕಾಳಜಿ , ಬಾಂಧವ್ಯದ
ಸರಪಳಿ, ಬಾಲ್ಯದ ನೆನಪುಗಳು, ಜೀವಪರ ಮಿಡಿಯುವ
ದನಿ ಎಲ್ಲವೂ ಕವನಗಳಲ್ಲಿ ಕಲಸುಮೇಲೋಗರ ದಂತೆ
ರಚನೆಗೊಂಡಿದೆ. ಶುಭ ಹಾರೈಸುವೆ " ಎಂದಿರುವರು.
" ನನ್ನೂರು ನನ್ನ ಬೆಟ್ಟ " ಕವಿತೆಯಲ್ಲಿ
ನನ್ನಜ್ಜ ಕೊಂಡನು ನಿನ್ನೊಡಲ ಫಲವ
ನನ್ನಪ್ಪ ಕಂಡಿದ್ದ ನಿನ್ನ ಹಸಿರಿನಾ ಸುಖವ
ನನಗಿಲ್ಲ ಸಮೃದ್ಧಿ ನೀನೇಕೆ ಹೀಗೆ
ಬರಡಾಗುತಿದೆ ಇನ್ನು ಚೆಲುವು ನೀ ಮೌನವೇಕೆ !
ಎಂದು ದಿನದಿಂದ ದಿನಕ್ಕೆ ಕಾಲ ಬದಲಾದಂತೆ ಈ
ಮನುಷ್ಯ ಜೀವಿಯು ಪ್ರಕೃತಿಯ ಮೇಲೆ ತನ್ನ ದಬ್ಬಾಳಿಕೆ
ನಡೆಸಿ ಭೂಮಿ,ಬೆಟ್ಟ, ಊರಿನ ವಿನಾಶಕ್ಕೆ ಕಾರಣ
ವಾಗಿರುವನು ; ಅದು ತನ್ನದೇ ವಿನಾಶಕ್ಕೆ ದಾರಿ ಎಂಬ
ಅರಿವಿಲ್ಲದೇ. ಅಜ್ಜನ ಕಾಲದ ಪ್ರಕೃತಿಕ ಸೊಬಗು ಅಪ್ಪನ
ಕಾಲದಲ್ಲಿಲ್ಲ .ಅಪ್ಪನ ಕಾಲದ್ದು ಈಗಂತೂ ಕ್ಷೀಣಿಸುತ್ತಾ
ಹೋಗಿದೆ. ಇದೇ ರೀತಿ ಮುಂದುವರಿದರೆ ಮುಂದಿನವರಿಗೆ
ನಾವೇನು ಬಿಟ್ಟು ಹೋಗಬೇಕು , ದಾರಿ ಕಾಣದಾಗಿದೆ.
ನಾವು ಬೆಳೆಸಲಾಗದಿದ್ದರೂ ಹಿಂದಿನದಾದರೂ ಉಳಿಸಬೇಕು ಎಂಬ ಎಚ್ಚರಿಕೆ ಮಾತನ್ನೂ ನೀಡಿರುವರು.
ನನ್ನೂರು ನನ್ನ ಬೆಟ್ಟ ಮಾತ್ರ ಶಾಶ್ವತ ಆದರೆ ಮಿಕ್ಕಿದ್ದೆಲ್ಲಾ
ಮನುಷ್ಯನ ಮನಸ್ಸಿನ ಮೇಲೆ ಅವಲಂಬಿಸಿದೆ ಎಂದು
ಕವಿ ಮನನೊಂದು ನುಡಿದಿರುವರು.
ಕವಿ ತನ್ನ ಬದುಕು ಬರಹದ ಕುರಿತಾಗಿ ಆತ್ಮಾಲೋಕನೆ
ಮಾಡುತ್ತಾ ,
ನನ್ನ ಬರಹವನ್ನು
ಅದೆಷ್ಟೋ ಬಾರಿ ನನಗೆ ಒಪ್ಪಲಾಗುತ್ತಿಲ್ಲ
ಬರೆದಂತೆ ಬದುಕಲಾಗುತ್ತಿಲ್ಲ
ಬದುಕಿದಂತೆ ಬರೆಯಲೂ ಆಗುತ್ತಿಲ್ಲ
ಎಂಬ ವಿಷಾದದಲ್ಲಿ " ಆತ್ಮಾವಲೋಕನ " ಕವಿತೆಯಲ್ಲಿ
ಮನದ ಭಾವನೆಗಳನ್ನು ಹೊರಹಾಕಿರುವರು. ಬರೆಯು -
ವದೇ ಬೇರೆ ; ಬದುಕುವುದೇ ಬೇರೆ . ಬದುಕು ಮತ್ತು ಬರಹ
ಒಂದಾಗಲಿ ಎಂದು ಹಾರೈಸಿರುವರು.
' ನಾ ಬೆಟ್ಟದಡಿಯ ಹಸಿ ಗರಿಕೆಯಾಗಿ ನಗುತ ನಿಲ್ಲುವೆ ' ಎನ್ನುತ್ತಾ
' ಒಮ್ಮೆ ಅವಳು ತಿರುಗಿ ಬಿದ್ದರೆ ನಿನಗೆ ಬೆಲೆಯಿಲ್ಲ , ಬದುಕೂ
ಇಲ್ಲಾ ' ಎಂಬ ಎಚ್ಚರಿಕೆಯನ್ನೂ ಶಾಂತವಾಗಿಯೇ ಉಸಿರಿರುವ ಶಿಲ್ಪಾ ಮ್ಯಾಗೇರಿ ಅವರ ಕವಿತೆಗಳಲ್ಲಿ
ಕೌಟುಂಬಿಕ ಪ್ರೀತಿ ಇದೆ ; ಎಲ್ಲವನೂ ಮೌನವಾಗಿಯೇ
ಅಭಿವ್ಯಕ್ತಿಸುವ ಕಲೆಗಾರಿಕೆ ಇದೆ. ಇನ್ನೂ ಹೆಚ್ಚಿನ ಅದ್ಯಯನ-
ದಿಂದ ಕಾವ್ಯದ ಒಳ ಪ್ರವೇಶಿಸಿ ಉತ್ತಮ ಕವಿತೆಗಳನ್ನು
ಕನ್ನಡ ಕಣಜಕ್ಕೆ ನೀಡಲಿ ಎಂದು ಹಾರೈಸಿ ಶಿಲ್ಪಾ ಮ್ಯಾಗೇರಿ
ಅವರನ್ನು ಅಭಿನಂದಿಸುವೆ.
ಪ್ರಕಾಶ ಕಡಮೆ
ನಾಗಸುಧೆ , ಹುಬ್ಬಳ್ಳಿ
9448850316 .
Labels:
shipa myageri
Location:
Udupi, Karnataka, India
Subscribe to:
Post Comments (Atom)
No comments:
Post a Comment