Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Monday, April 11, 2022
ಚೈತನ್ಯ ಮಜಲುಕೋಡಿ --ಶತಾವಧಾನಿ ಗಣೇಶ್ ಅವರ " ಮಣ್ಣಿನ ಕನಸು " { ಕಾದಂಬರಿ 2022 }SHATAVADHANI GANESH
ಶತಾವಧಾನಿ ಗಣೇಶರ ಮಣ್ಣಿನ ಕನಸು.
ಸಂಸ್ಕೃತ ನಾಟಕಗಳನ್ನು ಓದದಿರುವುದರ ಬಗೆಗಿನ ಖೇದದಿಂದಲೋ, ಹಿಂಜರಿಕೆಯಿಂದಲೋ ಸ್ವಲ್ಪ ತಡವರಿಸುತ್ತಲೇ ನಾನು ಶತಾವಧಾನಿಗಳ ಮಣ್ಣಿನ ಕನಸು ಕೃತಿಯನ್ನು ಕೈಗೆತ್ತಿಕೊಳ್ಳಬೇಕಾಯಿತು. ಎತ್ತಿಕೊಂಡ ಮೇಲೂ ಮೊದಲಿಗೆ ಬರುವ ವಸಂತೋತ್ಸವದ ಸಂಭ್ರಮಾಚರಣೆಯ ಹಿಗ್ಗಿನ ವಿವರಣೆಯನ್ನು ಓದುತ್ತಾ ಓದಿದಷ್ಟೂ ಮುಗಿಯದೇನೋ ಎಂಬ ಆತಂಕವೂ ಮೂಡಿತ್ತು. ಆದರೆ ಸ್ವಲ್ಪ ಹದ ಕೂತು ಮುಂದುವರೆಯುತ್ತಿದ್ದಂತೆ ಕೃತಿಯ ಅನ್ಯಾದೃಶವಾದ ತಿರುವು ತೀವ್ರತೆಗಳು ಮುಗಿತಾಯದವರೆಗೂ ಸೆಳೆದುನಿಲ್ಲಿಸಿದ್ದವು.
ನಾನು ಮೃಚ್ಛಕಟಿಕವನ್ನು ಅನುವಾದವನ್ನು ತುಂಬ ಹಿಂದೆ ಓದಿದ್ದೆ. ಉದಯನನ ಕತೆಯನ್ನು ಅಲ್ಲಿ ಇಲ್ಲಿ ತಿಳಿದದ್ದಷ್ಟೇ. ಆದರೆ ಕೃತಿಯನ್ನು ಓದತೊಡಗಿದ ಮೇಲೆ ಅದರ ನೆರವು ಬೇಕೇ ಬೇಕೆಂದೆನಿಸದ ಒಂದು ಸ್ವತಂತ್ರ ಕೃತಿ ಇದೆಂದು ಮನದಟ್ಟಾಯಿತು. ಆದರೆ ಇದನ್ನು ಓದಿದ ನಂತರ ಪೂರ್ವಸೂರಿಗಳ ಕಾವ್ಯಸಂಪತ್ತಿನ ಕಡೆಗೆ ಗಮನಕೊಟ್ಟು ಓದಬೇಕೆಂಬ ಇಚ್ಛೆ ಬಲಿಯುವುದು ಸುಳ್ಳಲ್ಲ.
ಆಚಾರ್ಯ ಶಂಕರರು ತಮ್ಮ ಭಾಷ್ಯದಲ್ಲಿ ಹೇಳಿದ ದರ್ಶನ ವ್ಯಾಖ್ಯಾನಕ್ಕಿಂತ ಕಾಳಿದಾಸ ಅದನ್ನು ತನ್ನ ಕಾವ್ಯದಲ್ಲಿ ಇನ್ನೂ ಮನಮುಟ್ಟುವಂತೆ ವಿವರಿಸಿದ್ದಾನೆಂದು ಅವಧಾನಿಗಳೇ ತಮ್ಮ ಉಪನ್ಯಾಸದಲ್ಲಿ ಒಂದೆಡೆ ಹೇಳಿದ್ದರು. ಹಾಗೆಯೇ ಶತಾವಧಾನಿಗಳು ಷಡ್ದರ್ಶನ ಸಂಗ್ರಹದಲ್ಲಿ ಕೊಡಲಾಗದ ಶಾಸ್ತ್ರ ನಿದರ್ಶನಗಳನ್ನು ಈ ಕಾವ್ಯಯುಕ್ತಯಾದ ಕೃತಿಯಿಂದ ಪೂರೈಸಿದ್ದಾರೆಂದರೆ ತಪ್ಪಾಗಲಾರದು. ಕರ್ಮಕಾಂಡವೇ ಇರಲಿ, ಜ್ಞಾನಕಾಂಡವೇ ಇರಲಿ, ಬೌದ್ಧದರ್ಶನವೇ ಇರಲಿ; ಅದರ ಅನುಷ್ಠಾನದ ಸಾಧಕ-ಬಾಧಕಗಳು ಜಗತ್ತಿನಲ್ಲಿ ಹೇಗೆ ನೆಲೆಗೊಂಡಿವೆ ಎಂಬುದರ ಬಗ್ಗೆ ಜಾಳುತನವಿಲ್ಲದ ಶುಷ್ಕವಲ್ಲದ ಅನೇಕ ವಿದ್ವತ್ಪೂರ್ಣ ಪಾತ್ರ ಸಂವಾದಗಳಲ್ಲಿ, ಸುದೀರ್ಘವಾದ ಸ್ವಗತಲಹರಿಗಳಲ್ಲಿ ತುಂಬಿ ತುಂಬಿ ಕೊಟ್ಟಿದ್ದಾರೆ. ಪಾತ್ರಗಳಿಗೆ ಘನತೆಯ ರೂಪವನ್ನು ಕೊಡುವಷ್ಟೇ ಮುಖ್ಯವಾದುದು ಅದನ್ನು ಅದೇ ಘನತೆಗೆ ತಕ್ಕನಾಗಿ ಕೊನೆತನಕವೂ ಸಂಭಾಳಿಸುವುದು. ಆ ವಿಚಾರದಲ್ಲಿ ಅವಧಾನಿಗಳು ಅದನ್ನು ಲೀಲೆಯೆಂಬಂತೆ ನಿರ್ವಹಣೆ ಮಾಡಿದ್ದಾರೆ. ಯಾವುದೇ ಸಂದರ್ಭವಾದರೂ ಅದರ ಕೂಲಂಕಷವಾದ, ಓದುಗನಿಗೆ ಆ ದೇಶಕಾಲದ ನೆಲದಲ್ಲಿ ನಿಂತು ಸೃಜಿಸಿಕೊಳ್ಳುವ ಸಂಪೂರ್ಣ ಚಿತ್ರಣವನ್ನು ದೊರೆತ ನಂತರವೇ ಪಾತ್ರಗಳು ಮಾತಿಗೆ ತೊಡಗುವ ಕಾರಣ, ಓದುಗನಿಗೆ ಕೃತಿಯ ಓದುವಿಕೆಯಲ್ಲಿ ಒಂದು ಲವಲವಿಕೆಯ ವಿಶ್ವಾಸ ದೊರೆಯುತ್ತದೆ. ಮೊದಲಿನ ಅರಿಕೆಯಲ್ಲಿ ಹೇಳಿರುವಂತೆ, ಇದು ನಿಜವಾಗಿ ದೇವುಡು ನರಸಿಂಹಶಾಸ್ತ್ರಿಗಳಂತಹ ಮಹಾವಿದ್ವಾಂಸರ ಕೃತಿಗಳನ್ನು ಮಾರ್ಗದರ್ಶಕವೆಂಬಂತೆ ಸ್ವೀಕರಿಸಿ ರಚಿಸಿದ ಫಲ ಎನ್ನಬಹುದು. ದೇವುಡುರವರ ಮಯೂರ ಕೃತಿಯಲ್ಲಿ ಕಾಣುವ ಸಹ್ಯಾದ್ರಿಯ ಹೃದ್ಯ ವಿವರಣೆಯಂತೆ, ಅದಕ್ಕಿಂತಲೂ ವಿಫುಲವಾಗಿ ಇಲ್ಲಿ ವಿಂಧ್ಯಾಟವಿಯ ವಿವರಣೆಯನ್ನು ಕಾಣುವುದೊಂದು ಸಣ್ಣ ಉದಾಹರಣೆ. ಸಂಸ್ಕೃತ ಕಾವ್ಯಗಳಲ್ಲಿ ಮನೆಯೊಳಗೆ ಪ್ರಾಕೃತ, ಹೊರಗೆ ಸಂಸ್ಕೃತಗಳು ಬಳಕೆಯ ಪ್ರಯೋಗವಿದ್ದಂತೆ ಕನ್ನಡವನ್ನೇ ಆಡುನುಡಿಯ ರೂಪದಲ್ಲಿ ಪ್ರಾಕೃತಕ್ಕಾಗಿ ಬಳಸುವ ಪ್ರಯೋಗ ನಿಜಕ್ಕೂ ಒಂದು ಸವಾಲು. ಮೊದಲ ಓದಿಗೆ ಕಸಿವಿಸಿಯಾದರೂ ಅದರ ನಮೂನೆಗೆ ಮನಸ್ಸು ಕ್ರಮೇಣ ಹೊಂದಿಕೊಳ್ಳುತ್ತದೆ.
ಸಮಸ್ತ ಭಾರತೀಯ ಸಂಸ್ಕೃತಿಯ ಮೂಲಬೇರುಗಳನ್ನು ಅನೇಕ ಬಾರಿ ಶೋಧಿಸುತ್ತ ಅದರ ಅಂತಃಸ್ಸತ್ತ್ವವನ್ನು ತೆರೆದು ತೋರಿಸುವ ಸನ್ನಿವೇಶ, ತ್ರಾಸದಾಯಕವೆನಿಸದ ವಿವರಣೆಗಳು ನಿಜಕ್ಕೂ ಆಹ್ಲಾದಕರ.
ಕಮ್ಯೂನಿಸ್ಟ್ ಧೋರಣೆಯ ಗಣತಂತ್ರದ ಆಳ್ವಿಕೆಯ ಅತಿರೇಕದಲ್ಲಿ ಗಣಿಕೆಯಾದ ಆಮ್ರಪಾಲಿಯಾಗಲಿ, ನಿರಂಕುಶ ಪ್ರಭುತ್ವದ ಅಡಿಯಲ್ಲಿ ನಲುಗಿ ಹೋದ ಚಾರುದತ್ತಾದಿಗಳಾಗಲಿ, ಯಾವ ಪಾತ್ರಕ್ಕೂ ಹೆಚ್ಚು ಕಡಿಮೆಯಾಗದ ಚಿತ್ರಣಗಳು ಅವರ ಪಾತ್ರಗಳ ಕುರಿತ ನಿರ್ಮಮಕಾರವನ್ನು ತೋರಿಸುತ್ತದೆ. ಉದಯನ-ವಾಸವದತ್ತೆಯರಷ್ಟೇ ಪ್ರಾಮುಖ್ಯತೆ ಶರ್ವಿಲಕ-ಮದನಿಕೆಯರಿಗೂ ಇದೆ, ಕೌಶಾಂಬಿಗಿರುವ ವಿವರಣಸೌಲಭ್ಯ ವೈಶಾಲಿಗೂ ಇದೆ. ದರ್ಶನಶಾಸ್ತ್ರಗಳಲ್ಲಿ ಅವರಿರುವ ಇದಮಿತ್ಥಂ ಎಂಬ ಅಧ್ಯಯನದ ವಿದ್ವತ್ತು, ಮತ್ತದರ ಔಚಿತ್ಯಪೂರ್ಣ ವಿನಿಯೋಗದ ವಿವೇಕಗಳಿಗೆ, ಮೂರನೆಯದಾದ ಅವರ ಪ್ರಾಥಮಿಕ ಪ್ರೀತಿಯಾದ ಕಾವ್ಯಸರಸ್ವತಿಯೂ ಸೇರಿ, ವಿವರಣೆ ಸಂವಾದಗಳೆಲ್ಲ ಘನವಾಗಿದ್ದರೂ ಭಾರವೆನಿಸದೆ ಕಾವ್ಯಪರಿಮಳವನ್ನು ಹೊತ್ತ ಔಷಧಗಳಾಗಿವೆ.
ಮಂತ್ರಾಲೋಚನೆ, ಯುದ್ಧಸನ್ನಾಹ, ಪ್ರಣಯಸಲ್ಲಾಪ, ಲೋಕಾಭಿರಾಮದಂತಹ ಹರಟೆಗಳೆನಿಸುವ ಖಂಡಗಳೂ ಸಮಾನವಾಗಿ ಓದಿನ ಆನಂದವನ್ನೀಯುತ್ತವೆ. ಇಂದಿನ ಧಾವಂತದ ಬದುಕಿನಲ್ಲಿ ಎರಡು ವಾಕ್ಯಕ್ಕಿಂತ ಹೆಚ್ಚು ಓದುವ ಹೊತ್ತಿಗೆ ಇನ್ನೂ ಪೀಠಿಕೆ ಮುಗಿದಿಲ್ಲವೇ ಎಂಬ ಅಸಹನೆಯ ಮನಸ್ಸು ಓದುಗರನ್ನು ಆವರಿಸುತ್ತಿದೆ. ಆಸ್ವಾದದ ಗುಣವನ್ನೇ ಕಸಿದು ತನ್ನನ್ನು ಕೇವಲ ಲೌಕಿಕ ಬದುಕಿಗಾಗಿಯೂ, ವಸ್ತುಪ್ರಪಂಚದ ಭ್ರಮಾಧೀನ ಭೋಗಕ್ಕಾಗಿಯೂ ಉಜ್ಜುಗಿಸಿಕೊಂಡು ಬಾಳ್ವೆ ನಡೆಸಬೇಕೆಂಬ ಮಂಕು-ಗರ ನಮ್ಮನ್ನು ಬಡೆದಿರುವ ಈ ಕಾಲಕ್ಕೆ ಅವಧಾನಿಗಳ ಕೃತಿಯು ಕಣ್ತೆರೆಸುವ ಕೈದೀವಿಗೆಯಾಗಿ ಬಂದಿದೆ. ನಾಲ್ಕು ಬಾರಿ ಓದಿ, ನೂರಾರು ಮನನೀಯ ಸಂಗತಿಗಳನ್ನು ಬಾಳಿನಲ್ಲಿ ಅನುಷ್ಠಾನಿಸಿಕೊಳ್ಳಬೇಕಾದ ಉದಾರಚರಿತರ ಸಾಕ್ಷಿಗಳಿವೆ. ಅವರ ಅಲೋಚನೆಗಳಲ್ಲಿ ಕಾಣ್ಕೆಗಳಲ್ಲಿ ಭಾರತವರ್ಷದಲ್ಲಿ ಆಗಿಹೋದ ನಿರ್ಮಲವಾದ ಲೋಕಾದರವೂ, ಜನಹಿತಕಾರಿಯಾದ ಪ್ರೀತಿಯೂ ಇದೆ.
ವರ್ಣ/ಆಶ್ರಮ ಧರ್ಮಗಳ ಗುಣಗ್ರಾಹಿ ಅನುಷ್ಠಾನ, ಕಲೆ/ದರ್ಶನಗಳ ಸುದೀರ್ಘವಾದ ಮೀಮಾಂಸೆ, ಸಂಗೀತ/ಕಾವ್ಯಗಳನ್ನು ಸವಿಯುವ ರಸಿಕತೆ, ಶುಕ್ರ-ವಿದುರ-ಬೃಹಸ್ಪತಿಯೇ ಮುಂತಾದ ನೀತಿಶಾಸ್ತ್ರದ ಸಂಗತಿಗಳು, ಅರ್ಥಶಾಸ್ತ್ರ/ಧರ್ಮಶಾಸ್ತ್ರಗಳ ವಿವೇಕಯುತ ಅನ್ವಯಗಳ ಚರ್ಚೆ, ಇವೆಲ್ಲಾ ಲೇಖಕರ ಅಚ್ಚುಮೆಚ್ಚಿನ ಸಂಗತಿಗಳಾಗಿವೆ. ಅವು ಕಾದಂಬರಿಯಲ್ಲಿ ಅನೇಕ ಕಡೆ ಯುಕ್ತಿಯುಕ್ತವಾಗಿ ಪ್ರಸ್ತಾಪವಾಗಿ ಸಂಭಾಷಣೆಗಳು ಕೇವಲ ಯಾಂತ್ರಿಕವಾಗದೆ ಬೋಧಪ್ರದವಾಗಿದೆ. ಇವೆಲ್ಲದರ ಫಲವಾದ ಜೀವನದರ್ಶನವು ಪಾತ್ರಗಳ ಸರಳ ಮಾತುಗಳಿಂದ ನಮ್ಮ ಮನಸ್ಸಲ್ಲಿ ನೆಲೆನಿಲ್ಲುತ್ತದೆ.
ಭಾಷಾವಿಚಾರದಲ್ಲಿ ಸ್ವಲ್ಪ ತೊಡಕೆನಿಸೀತು, ಕೊನೆಯಲ್ಲಿ ಪದಸೂಚಿಗಳನ್ನು ಕೊಟ್ಟಿರುವಾಗಲೂ ಇನ್ನೂ ಕೆಲವು ಪದಗಳು ವಿವರಣೆಯನ್ನು ಬಯಸಿಯಾವು, ಅದನ್ನುಳಿದೂ ಅವಧಾನಿಗಳ ಚಿಂತನಸ್ತರದ ಮಟ್ಟವನ್ನು ಅನುಭಾವಿಸಿಕೊಂಡು ಮುಂದುವರೆಯುವಲ್ಲಿ ಸ್ವಲ್ಪ ತೊಡಕೂ ಸಾಮಾನ್ಯ ಓದುಗರಿಗೆ ಆಗಬಹುದು. ಆದರೆ ಓದಿದ್ದರಲ್ಲಿ ದಕ್ಕಿದ್ದಷ್ಟೂ ಗಟ್ಟಿಕಾಳಾದ ಕಾರಣ, ತಿಳಿಯದ್ದನ್ನೂ ಸಂಗ್ರಹಿಸಿ ತಿಳಿದು ಸಂಭ್ರಮಿಸುವಲ್ಲಿ ಹೆಚ್ಚಿನ ಸಾರ್ಥಕತೆ ಇದೆ. ಆದ್ದರಿಂದ ಇದು ಖಂಡಿತವಾಗಿ ಮಾನೋನ್ನತಿಯನ್ನು ನೀಡುವ ಕಾವ್ಯಸೋಪಾನವಾಗಿದೆ. ಅವರ ಲೋಕವಿಶ್ರುತವಾದ ಶ್ರುತಿ ಕೃತಿ ವಾಙ್ಮಯವನ್ನು ನಮ್ಮ ನಾಡು ಬಲ್ಲುದಾದರೂ ಕಾದಂಬರಿಯ ಪ್ರಕಾರದಲ್ಲಿ ಕಾವ್ಯ, ಶಾಸ್ತ್ರ ಎರಡರ ಪ್ರಕಾಶಕ್ಕೂ ಯಥಾವಕಾಶವಿರುವುದರಿಂದ ಇದು ಅವರ ಅಧ್ಯಯನ, ಅನುಭವ ಮತ್ತು ಪ್ರತಿಭೆಗಳ ಸಮುಚಿತ ಪ್ರಕಟನೆಗೆ ಆಸ್ಪದವಿತ್ತಿದೆ. ಭಾವಸಮೃದ್ಧಿಯಿಲ್ಲದ ಯಾವ ಭಾಗವೂ ಇಲ್ಲಿಲ್ಲದ ಕಾರಣ, ಶಾಸ್ತ್ರದ ಕಲ್ಲುಸಕ್ಕರೆ ಕಾವ್ಯದ ಹಾಲಿನಲ್ಲಿ ಕರಗಿ ಪ್ರತಿಭೆಯ ಸುಖೋಷ್ಣತೆಯಲ್ಲಿ ಕೃತಿ ಸಿದ್ಧವಾಗಿದೆ. ನಿರ್ಮಲವಾದ ತೆರೆದ ಕಂಗಳ ಮನೋಬುದ್ಧಿಗಳಷ್ಟೇ ನಮಗೆ ಸ್ವೀಕಾರಕ್ಕೆ ಬೇಕಾದ ಸಾಧನ. ಪ್ರತಿಯೊಬ್ಬ ಭಾರತೀಯನೂ ಎರಡು ಸಹಸ್ರಮಾನದ ಹಿಂದೆ ತನ್ನ ಭೂಮಿಯು ಐತಿಹಾಸಿಕ, ತಾತ್ತ್ವಿಕ, ಸಾಮಾಜಿಕವಾಗಿ ಇದ್ದ ಬಗೆಯನ್ನು ಕಲ್ಪಿಸಿಕೊಳ್ಳಲು ಅನುವಾಗಿಸುವ ಅಪೂರ್ವ ಕೃತಿ ಈ ಕಾದಂಬರಿ.
#ಮಣ್ಣಿನ_ಕನಸು
Subscribe to:
Post Comments (Atom)
No comments:
Post a Comment