Powered By Blogger

Tuesday, December 26, 2023

ಪುಸ್ತಕ ವಿಮರ್ಶೆ: ಜನಾರ್ದನ ಹಾವಂಜೆ ಅವರ " ಆಧುನಿಕ ಕಲೆಗೆ ಅಗಲಿದ ಕಲಾವಿದರ ಕೊಡುಗೆ "{ 2023}

ಪುಸ್ತಕ ವಿಮರ್ಶೆ: ಕರಾವಳಿ ಕಲಾವಿದರ ಸೃಜನಶೀಲತೆಯ ಕೈಗನ್ನಡಿ: ಕಲೆ ಎಂಬುವುದಕ್ಕೆ ನಿಶ್ಚಿತ ಅವಧಿಯಿಲ್ಲ. ಅದು ಅಮರ. ಅದನ್ನು ರಚಿಸಿದ ಕಲಾವಿದ ಕ್ಷಣಿಕನಾದರೂ ಆ ಕಲೆಯ ಮೂಲಕ ಅವನೂ ಅಮರ. ಇಂತಹ ಕರಾವಳಿಯ ಕಲಾವಿದರನ್ನು ನೆನಪಿಸುವ ಹೊತ್ತಿಗೆ ಈ ಕೃತಿ. ಅವರ ಇತಿಹಾಸವನ್ನು ಅಕ್ಷರ ರೂಪದಲ್ಲಿ ಜಲವರ್ಣಕ್ಕಿಳಿಸಿದ ಕೃತಿ ಇದು.

Sunday, December 17, 2023

ಕನ್ನಡ ಜಾನಪದ ಸಂಶೋಧನೆ । ಡಾ. ಚಿಕ್ಕಣ್ಣ ಯಣ್ಣೆಕಟ್ಟೆ । ಉದ್ಯೋಗಮುಖಿ ಕನ್ನಡ - ಕನ್ನಡ...

ನರೇಂದ್ರ ಪೈ - ಟಿ ಎನ್ ಸೀತಾರಾಮ್ ಅವರ " ನೆನಪಿನ ಪುಟಗಳು : { 2023 }

ವರ್ತಮಾನದ ತೊಗಲು ಕಳಚುತ್ತ ನೆನಪುಗಳ ರೇಷ್ಮೆ =============================== ಆತ್ಮಕಥೆ ಅಥವಾ ವೈಯಕ್ತಿಕ ಬದುಕಿನ ನೆನಪುಗಳ ಕುರಿತ ಪುಸ್ತಕವನ್ನು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವುದೇ ಒಂದು ಕ್ಲೀಷೆ. ನಾವು ಅದನ್ನು ಒಂದು ಫಿಕ್ಷನ್ ತರ ಓದಲು ಸಾಧ್ಯವಿಲ್ಲ. ಅದರಲ್ಲಿ ಬರುವ ನೋವು, ವೇದನೆ, ಅವಮಾನ, ಸಾವು, ಸಣ್ಣತನ ಎಲ್ಲವೂ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಪ್ರತಿಕ್ಷಣ, ಪ್ರತಿದಿನ ಎಂಬಂತೆ ಅನುಭವಿಸಿದ್ದು. ಅದನ್ನು ಓದುತ್ತ, ಅವೆಲ್ಲ ನಮ್ಮನ್ನು ಎಷ್ಟೇ ಕಲಕಿದರೂ ಅದರ ಬಗ್ಗೆ ಒಂದು ಸಾಹಿತ್ಯ ಕೃತಿಯ ಕುರಿತು ಬರೆಯುವಂತೆ ಬರೆಯುವುದು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಆತ್ಮಕಥೆ, ಆತ್ಮಚರಿತ್ರೆ ಎಂಬ ಪ್ರಕಾರದ ಬಗ್ಗೆ ನನಗೆ ಸ್ವಲ್ಪ ಅಸಡ್ಡೆಯೇ ಇದೆ. ಈ ಪ್ರಕಾರದಲ್ಲಿ ಬಹುಶಃ ನಾನು ಈಚೆಗೆ ಓದಿದ ಒಂದೇ ಒಂದು ಪುಸ್ತಕ ಲಂಕೇಶರ ‘ಹುಳಿ ಮಾವಿನ ಮರ’. ತುಂಬ ಹಿಂದೆ ಎ ಎನ್ ಮೂರ್ತಿರಾಯರ ‘ಸಂಜೆಗಣ್ಣಿನ ಹಿನ್ನೋಟ’ ಬಿಟ್ಟರೆ ಬೇರೆ ಯಾವುದೂ ನೆನಪಾಗುವುದಿಲ್ಲ. ಟಿ ಎನ್ ಸೀತಾರಾಮ್ ಅವರ ‘ಮಾಯಾಮೃಗ’ ಧಾರಾವಾಹಿ ಸಂಜೆ 4.30ಕ್ಕೆ ಪ್ರಸಾರವಾಗುತ್ತಿದ್ದ ಕಾಲಕ್ಕೆ ನಾನು ಪರೀಕ್ಷೆ ಬರೆಯುವುದಕ್ಕಾಗಿ ಎರಡೋ ಮೂರೋ ತಿಂಗಳ ರಜೆ ಪಡೆದು ಮನೆಯಲ್ಲೇ ಇದ್ದೆ. ಹಾಗಾಗಿ ಅವರು ಒಂದು ಪಾತ್ರವನ್ನು ಅದರ ಪರಿಸರ ಮತ್ತು ದೈನಂದಿನಗಳ ಜೊತೆಗೇ, ಅದು ಜೀವಂತವಾಗಿ ಇನ್ನೆಲ್ಲೋ ಅದೇ ಬದುಕನ್ನು ಬದುಕುತ್ತಿದೆ ಎಂದು ನಂಬುವಷ್ಟು ನೈಜವಾಗಿ ಕಟ್ಟುವ ಬಗೆ ನನ್ನನ್ನು ವಿಪರೀತವಾಗಿ ಆಕರ್ಷಿಸಿತ್ತು. ಹಾಗೆಯೇ ಅವರ ಧಾರಾವಾಹಿಗಳ ಅಳೆದೂ ತೂಗಿ ಆಡುವ ಡಯಲಾಗುಗಳು. ಅವರ ಧಾರಾವಾಹಿಯ ಪ್ರತಿಯೊಂದು ಸಂಭಾಷಣೆಗೂ ಯಾವುದೋ ಒಂದು ಆಳ, ಅಳೆಯಲಾಗದ ಭಾರ, ಮೌನ ಕೂಡ ಅರೆಗಳಿಗೆ ನಿಂತು ಗಮನಿಸಿದೆಯಾ ಎಂದು ಕೇಳುವಷ್ಟು ಸಶಬ್ದ. ಇವೆಲ್ಲವನ್ನೂ ಮೀರಿ ನಿಲ್ಲುವ ಕಕ್ಕುಲಾತಿ. ಎಂಥ ಕಲ್ಲೆದೆಯವರ ಕಣ್ಣೂ ಹನಿಗೂಡಬೇಕು, ಅಂಥ ಸನ್ನಿವೇಶ. ಆಗಿನಿಂದ ಟಿ ಎನ್ ಸೀತಾರಾಮ್ ಎಂದರೆ ಏನೋ ಒಂದು ಆಕರ್ಷಣೆ, ನನ್ನವರು ಎಂಬ ಭಾವ. ಹಾಗಾಗಿ ಅವರ "ನೆನಪಿನ ಪುಟಗಳು" ಬರುತ್ತದೆ ಎಂಬ ಸುದ್ದಿ ಕೇಳಿಯೇ ರೋಮಾಂಚನಗೊಂಡ, ಪ್ರತಿ ಕಾಯ್ದಿರಿಸುವಷ್ಟು ತುದಿಗಾಲಲ್ಲಿ ನಿಂತ ಅಸಂಖ್ಯ ಮಂದಿಯಲ್ಲಿ ನಾನೂ ಒಬ್ಬ. ಪುಸ್ತಕದಂಗಡಿಯವರು ತಡ ಮಾಡಿದಂತೆಲ್ಲ ರೇಗಿದ, ಬೇರೆ ಕಡೆಯಿಂದ ತರಿಸಿಬಿಡುವಷ್ಟು ಕೆರಳಿದ ಮನುಷ್ಯ. ಮೊನ್ನೆ ಶನಿವಾರ ಕೈಸೇರಿದ್ದೇ ಓದಲು ಕುಳಿತೆ. ಮನುಷ್ಯ ಹಿಂಸೆಗೆ ಇಳಿಯಲು ಮುಖ್ಯವಾದ ಕಾರಣ ತಾನು ವಿಕ್ಟಿಮ್ ಎಂಬ ಭಾವ ಎನ್ನುತ್ತಾರೆ. ಟಿ ಎನ್ ಸೀತಾರಾಮ್ ಅವರ ಕತೆ ಕೇಳುತ್ತ ಹೋದರೆ ನನಗನಿಸಿದ್ದು ಕೂಡ ಅದೇ. ಇವರಿಗೆ ಈ ಬದುಕಿನಲ್ಲಿ ಮತ್ತೆ ಮತ್ತೆ ತಾನು ವಿಕ್ಟಿಮೈಸ್ಡ್ ಅನಿಸಲಿಲ್ಲವೇ, ಅದನ್ನಿವರು ಹೇಗೆ ಸಂಭಾಳಿಸಿಕೊಂಡಿರಬಹುದು ಅಂತಲೇ. "ಅಲ್ಲಿಯವರೆಗಿನ ನನ್ನ ಬದುಕಿನಲ್ಲಿ ಎಲ್ಲವೂ ಮಾಯಾಮೃಗವೇ ಆಗಿತ್ತು. ಯಾವುದೂ ಕೈಗೆ ಸಿಗುತ್ತಿರಲಿಲ್ಲ. ನಟನಾಗುವ ಆಸೆ ಇಟ್ಟುಕೊಂಡಿದ್ದೆ. ಆಗಿರಲಿಲ್ಲ. ರಂಗಭೂಮಿ ಇಷ್ಟಪಟ್ಟಿದ್ದೆ. ಕೈಗೂಡಿರಲಿಲ್ಲ. ರೈತನಾಗುವ ಆಸೆ ನೆರವೇರಿರಲಿಲ್ಲ. ದುಡ್ಡಿರಲಿಲ್ಲ. ಲಾಯರ್ ಆಗಬೇಕೆಂಬ ಆಸೆ ಇತ್ತು. ಆದರೆ ಪ್ರಾಕ್ಟೀಸ್ ಶುರು ಮಾಡಿದಾಗಲೆಲ್ಲಾ ಯಾವುದೋ ಒಂದು ಅಡ್ಡಿ ಬರುತ್ತಿತ್ತು. ನೆಮ್ಮದಿ ಇರಲಿಲ್ಲ. ಯಾವುದೂ ಸಿಕ್ಕಿರಲಿಲ್ಲ. ಎಲ್ಲವೂ ಮಾಯಾಮೃಗದಂತೆ ಕೈಯಿಂದ ದೂರ ಹೋಗಿತ್ತು." (ಪುಟ 337) ಟಿ ಎನ್ ಸೀತಾರಾಮ್ ಅವರ "ನೆನಪಿನ ಪುಟಗಳ"ನ್ನು ಓದಿದ ಮೇಲೆ ಮನಸ್ಸಿನಲ್ಲಿ ತೀವ್ರವಾಗಿ ನಿಂತು ಬಿಡುವವರು ಇಬ್ಬರು. ಸೀತಾರಾಮ್ ಅವರ ಅಮ್ಮ ಮತ್ತು ಅವರ ಮಡದಿ ಗೀತಾ. ಈ ಅಮ್ಮನ ಚಿತ್ರವನ್ನು ಅವರು ಎಷ್ಟೊಂದು ಆಪ್ತವಾಗಿ ಕಟ್ಟಿಕೊಡುತ್ತಾರೆಂದರೆ, ಆ ಪುಟಗಳನ್ನು ಓದುತ್ತ ಪ್ರತಿಯೊಬ್ಬ ಮಗನೂ ಅವರವರ ಅಮ್ಮನನ್ನು ನೆನೆದು ಅಳುತ್ತಾರೆ. ಎಲ್ಲ ಅಮ್ಮಂದಿರೂ ಅವರ ಮಗನ ಬಗ್ಗೆ ಒಂದೇ ತರ ಇರುತ್ತಾರೆ. ಆದರೆ ಎಲ್ಲ ಗಂಡಸರೂ ಅವರ ಅಮ್ಮನ ಬಗ್ಗೆ ಮಾತ್ರ ಬೇರೆ ಬೇರೆ ತರ ಇರುತ್ತಾರೆ. ಆದರೆ ಅಮ್ಮನನ್ನು ಕಳೆದುಕೊಂಡ ಮಗನಿಗೆ ಜೊತೆಯಾಗಿ ನಿಲ್ಲುವುದು ನೋವು ಮಾತ್ರ. ಗೀತಾ ಬಗ್ಗೆ ಸೀತಾರಾಮ್ ಎಲ್ಲಿಯೂ ವಿಶೇಷವಾಗಿ ಹೇಳಿಯೇ ಇಲ್ಲ. ತಮ್ಮೆಲ್ಲಾ ಸ್ನೇಹಿತರನ್ನು ಮತ್ತೆ ಮತ್ತೆ ನೆನೆಯುವ, ಅವರ ಉಪಕಾರ ಸ್ಮರಿಸುವ, ಕೃತಜ್ಞತೆ ತೋರುವ ಸೀತಾರಾಮ್, ಗೀತಾ ಬಗ್ಗೆ ಹೇಳದೇನೆ ಬಹಳಷ್ಟನ್ನು ಹೇಳುತ್ತಾರೆ. "ಎಲ್ಲಾ ಮಿನಿಸ್ಟರ್‌ಗಳು ಗೊತ್ತಿದ್ದರೂ ಒಂದು ಆರ್ಡರ್ ಪಾಸ್ ಮಾಡಿಸಿಕೊಳ್ಳಲು ನನ್ನಿಂದ ಆಗಲಿಲ್ಲ. "ಆ ದಿನಗಳಲ್ಲಿ 25ರಿಂದ 30 ದಿನ ಟೆನ್ಷನ್‌ನಲ್ಲಿರುತ್ತಿದ್ದೆ. ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದೆ. ಧಗಧಗ ಉರಿಯುತ್ತಿದ್ದೆ. ನನ್ನ ಬಳಿ ಮಾತನಾಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಮೂರು ಹೊತ್ತೂ ಎದ್ದು ಕುಳಿತಿರುತ್ತಿದ್ದೆ. ಅಮ್ಮ ಮಾತನಾಡಲು ಬಂದರೆ ರೇಗುತ್ತಿದ್ದೆ. ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದೆ ಎಂದರೆ ಅಷ್ಟು ಕೆಟ್ಟದಾಗಿ ಬೇರೆ ಯಾರೂ ವರ್ತಿಸಲು ಸಾಧ್ಯವಿಲ್ಲ. "ಇಂಥದ್ದೇ ಒಂದು ಸಮಯದಲ್ಲಿ ಮನೆಗೆ ಬಂದರೆ ಗೀತಾ ಇರಲಿಲ್ಲ. ಎಲ್ಲಿಗೋ ಹೋಗಿದ್ದಳು. ಅವಳು ಸಾಮಾನ್ಯವಾಗಿ ಎಲ್ಲಿಗೂ ಹೋಗುತ್ತಿರಲಿಲ್ಲ. ಆದ್ದರಿಂದ ಕೊಂಚ ಆತಂಕ ಆಯಿತು. ನಾನು ಹೊರಗಡೆ ಕಾಯುತ್ತಾ ಕುಳಿತೆ. ಗೀತಾ ಬಂದಳು. ಎಲ್ಲಿಗೆ ಹೋಗಿದ್ದೆ ಎಂದು ಕೇಳಿದೆ. ಲಿಜ್ಜತ್ ಆಫೀಸಿಗೆ ಹೋಗಿದ್ದೆ ಎಂದಳು. "ಆಗ ಲಿಜ್ಜತ್ ಪಾಪಡ್ ಎಂದು ಬರುತ್ತಿತ್ತು. ಬಸವೇಶ್ವರ ನಗರದಲ್ಲಿ ಅವರ ಆಫೀಸು. ಅವರು ನೂರು ಹಪ್ಪಳ ಲಟ್ಟಿಸಿದರೆ ಅಷ್ಟೋ ಇಷ್ಟೋ ದುಡ್ಡು ಕೊಡುತ್ತಿದ್ದರು. ಗೀತಾ ನಾನು ಹಪ್ಪಳ ಲಟ್ಟಿಸಿಕೊಡುತ್ತೇನೆ ಎಂದು ಬರೆದುಕೊಟ್ಟು ಬ೦ದಿದ್ದಳು. "ನಮ್ಮ ಊರಲ್ಲಿ ಜಮೀನಿತ್ತು. ಈ ಗ್ಯಾರಂಟಿಯ ಕೇಸು ನನಗೆ ಸುತ್ತಿಕೊಳ್ಳುವ ಸಮಯದಲ್ಲಿ, ಮನೆಯವರಿಗೆ ತೊಂದರೆ ಆಗದಿರಲಿ ಎಂದು, ನನಗೆ ಬೇಡ ಎಂದು ಬರೆದು ಕೊಟ್ಟುಬಿಟ್ಟಿದ್ದೆ. ನಾನು ಸಂಜೆ ಹೊತ್ತು ನಾಟಕ ನೋಡುವುದರಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದೆ. ಆದರೆ ಗೀತಾಗೆ ಆ ಸಂತೋಷವೂ ಇರಲಿಲ್ಲ. ಅವಳು ಸ್ವಲ್ಪವಾದರೂ ದುಡಿಯೋಣ ಎಂದು ಅಜ್ಜತ್ ಪಾಪಡ್ ಆಫೀಸಿಗೆ ಹೋಗಿದ್ದಳು. ನನ್ನ ಬಳಿ ಏನಾದರೂ ಹೇಳಿದರೆ ನಾನೋ ಉರಿಸಿಂಗ, ಉರಿದುರಿದು ಬೀಳುತ್ತಿದ್ದೆ. ಅವಳು ಮತ್ತು ನನ್ನ ಅಮ್ಮನ ಜೊತೆ ಆಗ ನಡೆದುಕೊಂಡಿದ್ದು ನೆನೆದುಕೊಂಡರೆ ಕಸಿವಿಸಿ ಆಗತ್ತೆ. ಅಮ್ಮ ಗೌರಿಬಿದನೂರಿನಿಂದ ಬಂದರೆ ನಾನು ಸರಿಯಾಗಿ ಮಾತನಾಡುತ್ತಿರಲಿಲ್ಲ. ಅಂಥಾ ಕ್ರೌರ್ಯ ತೋರಿಸುತ್ತಿದ್ದೆ. "ಮನುಷ್ಯರಿಗೆ ಸಣ್ಣತನಗಳಿರುತ್ತವೆ. ಅದಕ್ಕಿಂತ ಮನುಷ್ಯ ದೊಡ್ಡದಾಗಿದ್ದರೆ ಆ ಸಣ್ಣತನವನ್ನು ಗೆಲ್ಲುತ್ತಾನೆ. ಅದನ್ನು ಗೆಲ್ಲುವ ಶಕ್ತಿ ಇಲ್ಲದಿದ್ದರೆ ಸಣ್ಣತನಗಳು ಪ್ರಕಟವಾಗುತ್ತವೆ. ಆ ಸಂದರ್ಭದಲ್ಲಿ ನಾನು ಸಣ್ಣತನದ ಮುಂದೆ ಸೋತಿದ್ದೆ. ತೀರಾ ಸಣ್ಣ ಮನುಷ್ಯನ ತರ ವರ್ತಿಸಿದ್ದೆ. "ಒಂದು ಕಡೆ ಅವಮಾನ, ಇನ್ನೊಂದು ಕಡೆ ಮನೆಯವರಿಗೆ ನೋವು, ಮತ್ತೊಂದೆಡೆ ಅಸಹಾಯಕತೆ ಎಲ್ಲವೂ ಸೇರಿಕೊಂಡಿತ್ತು. ಅದನ್ನು ಈಗ ನೆನೆದರೂ ನೋವಾಗುತ್ತದೆ, ಹಳೇ ಗಾಯವನ್ನು ಸವರಿದಂತೆ."(ಪುಟ 305) ಬಹುಶಃ ಗೀತಾ ಬಗ್ಗೆ ಇಡೀ ಪುಸ್ತಕದಲ್ಲಿ ಇಷ್ಟೇ ಇರುವುದು. ಆದರೆ ಟಿ ಎನ್ ಸೀತಾರಾಮ್ ಅವರ ಅಂತಃಕರಣ, ಸದಾ ತನ್ನಿಂದ ಬೇರೆಯವರಿಗೆ ತೊಂದರೆಯಾಯಿತು, ನೋವಾಯಿತು, ನಷ್ಟವಾಯಿತು ಎಂಬ ಸ್ಥಿತಿ ಎಂದೂ ಬರಬಾರದೆಂಬ ಎಚ್ಚರ ಮತ್ತು ಅಂಥ ಅನುಮಾನ ಬಂದಾಗಲೆಲ್ಲ ನೋಯುತ್ತ ಉಳಿಯುವ ಗುಣ ಇಡೀ ಪುಸ್ತಕದಲ್ಲಿ ಅವರ ವ್ಯಕ್ತಿತ್ವದ ಮೇಲೆ ಫೋಕಸ್ ಮಾಡಿದಾಗಲೆಲ್ಲ ನಮ್ಮ ಮನಸ್ಸಿಗೆ ಬರುವುದು, ಅವರ ಬೆನ್ನಲ್ಲೇ ಮಸುಕು ಮಸುಕಾಗಿ ನಿಂತಂತೆ ಕಾಣಿಸುವ ಅವರ ಅಮ್ಮ ಮತ್ತು ಗೀತಾರ ಚಿತ್ರವೇ. ಟಿ ಎನ್ ಸೀತಾರಾಮ್ ಅವರ ಪ್ರಜ್ಞೆಯಲ್ಲೂ ಇದು ನಿಶ್ಚಲವಾಗಿ ನಿಂತಿರುವುದರಿಂದಲೇ ಅವರು ಹೇಳದೇನೆ ಅದು ನಮ್ಮ ಅರಿವಿಗೆ ಬರುತ್ತಲೇ ಇರುತ್ತದೆ. ಪುಸ್ತಕದ ಆರಂಭದಲ್ಲಿಯೇ ನಮ್ಮನ್ನು ಅವರ ಅಕ್ಕ ಪದ್ಮ ಮನಸ್ಸನ್ನಾವರಿಸುತ್ತಾರೆ. ಅದೇ ರೀತಿ ಮುಂದೆ ಅವರ ತಂದೆ, ಗೆಳೆಯರು, ಅಜ್ಜಿ ಮುಂತಾದವರು, ಬದುಕಿನಲ್ಲಿ ಸೀತಾರಾಮ್ ಎದುರಿಸಿದ ತಲ್ಲಣಗಳನ್ನೂ, ನೋವು-ಸಂಕಟಗಳನ್ನೂ ಮನಸ್ಸಿನಿಂದ ಸುಲಭವಾಗಿ ಮರೆಯಾಗದಂತೆ ಮೂಡಿಸುತ್ತ ಹೋಗುತ್ತಾರೆ. ತಮ್ಮ ಬದುಕಿನಲ್ಲಿ ಬಂದು ಹೋದವರ ದೊಡ್ಡತನವನ್ನು, ಔದಾರ್ಯವನ್ನು, ಆದರ್ಶಗಳನ್ನು ಹೇಳುತ್ತ ಹೋಗುವ ಸೀತಾರಾಮ್ ತಮ್ಮ ಬಗ್ಗೆ ಹೇಳುವಾಗ ತಮ್ಮ ಸಣ್ಣತನ, ತಮ್ಮ ಆರ್ಥಿಕ ಅಶಿಸ್ತು, ಸೋಲುಗಳ ಬಗ್ಗೆ ಮಾತ್ರ ಹೇಳುತ್ತಾರೆ. ಇಂಥ ಪರೋಕ್ಷ ಚಿತ್ರವೊಂದು ಕಡೆ, ನೇರ ಚಿತ್ರವೊಂದು ಕಡೆ ಸೇರಿ ಮನಸ್ಸಿನಲ್ಲಿ ಟಿ ಎನ್ ಸೀತಾರಾಮರ ಪೂರ್ಣಚಿತ್ರ ನಮಗೆ ಸಿಗುವುದಾದರೂ ಅವರು ಈ ಪುಸ್ತಕದಲ್ಲಿ ಹೇಳಿರುವುದಕ್ಕಿಂತ ಹೇಳದೇ ಬಿಟ್ಟಿರುವುದೇ ಹೆಚ್ಚು ಅನಿಸದೇ ಇರದು. ಅದರಲ್ಲೂ ಫ್ಯಾಕ್ಟರಿಯ ವಿಚಾರಕ್ಕೆ ಬರುವಾಗ ಅದೆಲ್ಲ ಹೇಗಾಯಿತು ಎನ್ನುವ ವಿವರವೇ ಇಲ್ಲ. ಮುಂದೆ ಅದರಿಂದ ಅನುಭವಿಸಿದ್ದರ ಮೆಲುಕು ನೋಟವಷ್ಟೇ ಇದೆ. ಮುಖ್ಯವಾಗಿ ಅವರು ಪುಟ್ಟಣ್ಣ ಕಣಗಾಲ್ ಮತ್ತು ಜಾಲಪ್ಪನವರಿಂದ ಕಲಿತಿದ್ದು ಇಲ್ಲಿ ಅತ್ಯಂತ ಮಹತ್ವದ್ದು ಅನಿಸುತ್ತದೆ. ಹಾಗೆ ನೋಡಿದರೆ ಪುಸ್ತಕದ ಉದ್ದಕ್ಕೂ ಅವರು ತಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕರಿಂದ ತೊಡಗಿ, ಬಾಲ್ಯದ ಸ್ನೇಹಿತರು, ನಂತರ ಜೊತೆಯಾದವರು, ಮೋಸ ಮಾಡಿದವರು, ಮರೆಯಲಾರದ ಪಾಠ ಕಲಿಸಿದವರು - ಎಲ್ಲರಿಂದಲೂ ತಾನು ಏನು ಕಲಿತೆ ಎನ್ನುವುದನ್ನೇ ಹೇಳುತ್ತ ಹೋಗಿದ್ದಾರೆ ಅನಿಸಿದರೂ ಆಶ್ಚರ್ಯವೇನಿಲ್ಲ. ಆದರೂ ಪುಟ್ಟಣ್ಣ ಕಣಗಾಲ್ ಅವರಿಂದ ಕಲಿತಿದ್ದು ಮತ್ತು ಜಾಲಪ್ಪನವರು ಕಲಿಸಿದ್ದು ಎರಡೂ ಬಹಳ ಮುಖ್ಯ. ಯಾರನ್ನೂ ಕೆಟ್ಟ ವ್ಯಕ್ತಿ ಎಂಬಂತೆ ಕಾಣದ, ಚಿತ್ರಿಸದ ಟಿ ಎನ್ ಸೀತಾರಾಮ್, ವಸ್ತು-ವಿಷಯದ ಎರಡೂ ಮಗ್ಗುಲನ್ನು ಗಮನಿಸಿಯೇ ಪ್ರತಿಕ್ರಿಯಿಸುವ ವ್ಯಕ್ತಿ. ತಮ್ಮ ನಾಟಕವೊಂದರ ಟೀಕೆಯಲ್ಲಿ ಲಂಕೇಶರಿಂದಲೂ ಅವರು ಕಲಿತಿದ್ದು ಅದನ್ನೇ. ಆವತ್ತಿನಿಂದಲೂ ಒಂದು ಪಾತ್ರದ ನಡೆಯ ಹಿಂದಿರಬಹುದಾದ ಕಾರ್ಯಕಾರಣ ಸಂಬಂಧವನ್ನು ತಾವು ಎರಡೂ ನಿಟ್ಟಿನಿಂದ ನೋಡಲು, ನೋಡಿ ಚಿತ್ರಿಸಲು ಕಲಿತೆ ಎಂದು ಅವರು ಹೇಳುತ್ತಾರಾದರೂ, ಅದು ಅವರಲ್ಲಿ ಆಗಲೇ ಇತ್ತು. ಒಬ್ಬ ಲಾಯರಿಗೆ ಪಾಟೀಸವಾಲು ಹೇಗೆ ನಡೆಸಬೇಕು ಎನ್ನುವುದು ಗೊತ್ತಿರಲಿಲ್ಲವೆ? ಅದರ ತಂತ್ರಗಳು ಅವರಿಗೆ ಹೇಳಿಕೊಡುವುದು ಇದನ್ನೇ ಅಲ್ಲವೆ? ಅಲ್ಲದೆ ಎಂಪಥಿ ಎನ್ನುವುದು ಅವರಿಗೆ ಹುಟ್ಟಿನಿಂದಲೇ ಇತ್ತು ಎಂದು ಯಾರೇ ಬೇಕಾದರೂ ಹೇಳಬಲ್ಲರು. ಅದೇ ರೀತಿ ಟಿ ಎನ್ ಸೀತಾರಾಮ್ ಅವರಿಗೆ ಬದುಕಿನಲ್ಲಿ ಕಹಿಯಾದ, ಕಠಿಣವಾದ ಪಾಠ ಕಲಿಸಿದವರೂ ಅವರ ವಿರೋಧಿಗಳಾಗಿರಲಿಲ್ಲ, ಬದಲಿಗೆ ಅವರ ಜೊತೆಯವರೇ ಆಗಿದ್ದರು. ಅವರ ಇಷ್ಟಕ್ಕೆ ವಿರುದ್ಧವಾಗಿ ಅವರು ಏನೇನು ಮಾಡಬೇಕಾಯಿತೋ, ಉದಾಹರಣೆಗೆ, ನಾಟಕ ರಂಗವನ್ನು ದೂರ ಮಾಡಬೇಕಾಗಿ ಬಂದಿದ್ದರೆ, ರಾಜಕೀಯದಲ್ಲಿ ಟಿಕೇಟ್ ಪಡೆಯದೇ ಇರುವುದಕ್ಕೆ, ಲಾಯರ್ ಆಗಿ ಸೆಟ್ಲ್ ಆಗದಿರಲು, ನಟನಾಗದೇ ಇರಲು ಯಾರು ಕಾರಣರಾಗಿದ್ದರು? ಅವರ ಡಿಯರ್ ಎಂಡ್ ನಿಯರ್‌ಗಳೇ ಅವರಿಗೆ ಸುಲಭವಾಗಿ ಲಭ್ಯವಿದ್ದ ಅವಕಾಶವನ್ನು ನಿರಾಕರಿಸಿದವರು, ಪ್ರೀತಿಯಿಂದ ದೂರ ಸೆಳೆದವರು, ಅವಕಾಶ ತಪ್ಪಿಸಿದವರು. ಅವರಂಥ ವ್ಯಕ್ತಿ ರಾಜಕಾರಣಕ್ಕೆ ಹೇಳಿಸಿದವರಲ್ಲ, ಅವರ ಧಾರಾವಾಹಿ ಅತ್ಯುತ್ತಮವಾಗಿದ್ದರಿಂದಲೇ ಅದನ್ನು ಬೇರೆ ಕಡೆ ಕೊಡುವಂತಿರಲಿಲ್ಲ, ಅವರು ಒಳ್ಳೆಯ ನಟ ಆಗಿದ್ದರಿಂದಲೇ ಕಮರ್ಶಿಯಲ್ ಸಿನಿಮಾಕ್ಕೆ ಬೇಡವಾದರು(!), ಕಮರ್ಶಿಯಲ್ ಸಿನಿಮಾದಲ್ಲೆಲ್ಲ ಅವರು ನಟಿಸುವುದಿಲ್ಲ ಎಂದು ಹೇಳಿ ಬೇರೆಯವರು ಇವರಿಗೆ ಬಂದ ಅವಕಾಶ ನಿರಾಕರಿಸಿದರು! - ಹೀಗೆ! ಈ ಪುಸ್ತಕದಲ್ಲಿ ತುಂಬ ಇಷ್ಟವಾದ ಇನ್ನೊಂದು ಮುಖ್ಯ ಸಂಗತಿ ಎಂದರೆ ಎಲ್ಲೂ ಟಿ ಎನ್ ಸೀತಾರಾಮ್ ವಿಧಿ, ನಸೀಬು, ಹಣೆಬರಹ, ಕರ್ಮ ಎಂದೆಲ್ಲ ಬಳಸದೇ ಇರುವುದು. ಇಷ್ಟೊಂದು ನೋವು, ಸೋಲು, ಇಷ್ಟಪಟ್ಟಿದ್ದನ್ನು ಮಾಡಲಾಗದ ಅಸಹಾಯಕತೆ ಎದುರಾದರೂ ಅಂಥ ಮಾತು ಬರದಿರುವುದು ಅಚ್ಚರಿ, ಮೆಚ್ಚುಗೆ, ಅಭಿಮಾನ ಮೂಡಿಸುತ್ತದೆ. ಅತೀವ ಪಾಪಪ್ರಜ್ಞೆ, ತನಗೆ ಏನಾದರೂ ಪರವಾಗಿಲ್ಲ, ತನ್ನಿಂದ ಇನ್ನೊಬ್ಬರಿಗೆ ಕೆಡುಕಾಗಬಾರದೆಂಬ ಅತಿಯಾದ ಎಚ್ಚರ ಬಹುಶಃ ಮನುಷ್ಯನನ್ನು ಯಶಸ್ವಿಯಾಗುವುದಕ್ಕೆ ಅನರ್ಹಗೊಳಿಸುವಂಥ ಗುಣಗಳಿರಬೇಕು. ಒಂದು ಕಡೆ ಟಿ ಎನ್ ಸೀತಾರಾಮ್ ಹೀಗೆ ಬರೆಯುತ್ತಾರೆ: "ಆ ದಿನಗಳಲ್ಲಿ ನಾನು ಒಬ್ಬ ಸಂತನ ಪಾತ್ರ, ಇನ್ನೊಂದು ಪಾಪಿಯ ಪಾತ್ರ ಎರಡನ್ನೂ ನಿಭಾಯಿಸುತ್ತಿದ್ದೆ. ನಾವು ಒಳಗೊಳಗೆ ನೋಯಿಸುತ್ತಾ ಇರುತ್ತೇವೆ. ನೋಯಿಸಬಾರದು ಅನ್ನುವ ಸಂತನ ಗುಣ ಒಮ್ಮೊಮ್ಮೆ ಮೇಲೆ ಬರುತ್ತದೆ. ಸ್ವಲ್ಪ ಹೊತ್ತು ನೋಯಿಸುವುದಿಲ್ಲ ನಾವು. ಮತ್ತೆ ಸ್ವಲ್ಪ ಸಮಯದ ನಂತರ ಪಾಪಿಯಾಗುತ್ತೇವೆ. "ಆ ಥರದ ಸಂತ ಮತ್ತು ಪಾಪಿಯ ಪಾತ್ರ ನಿಭಾಯಿಸುವುದು ತುಂಬಾ ನೋವನ್ನುಂಟು ಮಾಡುತ್ತಿತ್ತು." (ಪುಟ 172) ಪಾಪಪ್ರಜ್ಞೆಗೆ ನೂರು ಸೂಜಿಗಳು ಎಂಬ ಮಾತನ್ನು ಟಿ ಎನ್ ಸೀತಾರಾಮ್ ಮತ್ತೆ ಮತ್ತೆ ನೆನೆಯುತ್ತಾರೆ. ನನಗನಿಸುವಂತೆ, ಕೊನೆಗೂ ಈ ಪಾಪಿಯನ್ನೂ, ಸಂತನನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಣದೇನೆ, ನೇರ ಹೃದಯವನ್ನೇ ಹೊಕ್ಕು ಅರ್ಥ ಮಾಡಿಕೊಂಡವರು ಹೆಚ್ಚು. ಅವರಲ್ಲಿ ಅಮ್ಮ ಮತ್ತು ಗೀತಾ ಎದ್ದು ಕಂಡರೆ, ಮಸುಕಾಗಿ ಕಾಣುವ ಸಾವಿರಾರು ಮಂದಿ ಇದ್ದರು, ಇದ್ದಾರೆ ಅನಿಸದೇ ಇರದು. ಎಷ್ಟೆಲ್ಲ ಮಂದಿ ಸೀತಾರಾಮ್ ಅವರಿಗೆ ಒದಗಿದ್ದರು, ಸಹಾಯ ಹಸ್ತ ಚಾಚಿದ್ದರು, ಜೊತೆಗೆ ನಿಂತಿದ್ದರು, ನಿಂತಿದ್ದಾರೆ ಎನ್ನುವುದನ್ನೆಲ್ಲ ಗಮನಿಸಿದರೆ ಈ ಮಾತು ಸುಳ್ಳಲ್ಲ ಎನ್ನುವುದು ಅರ್ಥವಾಗುತ್ತದೆ. ಅಷ್ಟಿದ್ದೂ ತೀರ ಅಂತರಂಗದಲ್ಲಿ ಅವರು ನೋಯುತ್ತ ಉಳಿದವರು ಎನ್ನದೆ ವಿಧಿಯಿಲ್ಲ. ತಂದೆಯವರ ಕೊನೆಯನ್ನು ನೆನೆದು ಹನಿಗಣ್ಣಾಗುವ, ಪದ್ಮಕ್ಕನ ಕಣ್ಮರೆಯ ನಿಗೂಢಕ್ಕೆ ಈಗಲೂ ಒಳಗೊಳಗೇ ಒದ್ದಾಡುವ, ಕಳೆದುಕೊಂಡವರನ್ನು ನೆನೆಯುವಾಗಲೆಲ್ಲ ಮುದುಡಿಕೊಳ್ಳುವ, ತಂಗಿ ಮದುವೆಗೆ ಮಾರಿದ ಆಸ್ತಿಯ ಬಗ್ಗೆ ನೆನೆಯುವ, ರಾತ್ರಿ ಎಲ್ಲರೂ ಮಲಗಿದ ಮೇಲೆ ಆ ಔಷಧಿ ತೆಗೆದುಕೊಂಡು ಈಚೆ ಬಂದು, ಸಿಮೆಂಟ್ ಕಟ್ಟೆಯ ಮೇಲೆ ಒಂದು ಗಳಿಗೆ ಕೂತ ಟಿ ಎನ್ ಸೀತಾರಾಮ್ ಜೊತೆ ಯಾರಿದ್ದರು? ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು ಓಶೋ ಒಂದೆಡೆ ಒಂದು ಮಾತನ್ನು ಹೇಳುತ್ತಾನೆ. Our bodies are separate, minds overlap; but soul is one ಅಂತ. ನಾವೆಲ್ಲರೂ ಟಿ ಎನ್ ಸೀತಾರಾಮ್ ಜೊತೆ ಸಿಮೆಂಟ್ ಕಟ್ಟೆಯ ಮೇಲೆ ಇದ್ದೆವು, ಅವರಮ್ಮ ಮಾತ್ರವಲ್ಲ ಅನಿಸುತ್ತದೆ. ಇದನ್ನು ವಿವರಿಸಲಾರೆ.

Wednesday, November 8, 2023

ಟಾಟಾ ಸಾಹಿತ್ಯೋತ್ಸವದಲ್ಲಿ ಸಂವಾದ ಕಾರ್ಯಕ್ರಮ - 'ಕನ್ನಡ ಅಭಿಜಾತ ಸಾಹಿತ್ಯ - ಒಂದು ಪ...

ಜ್ಯೊತಿ ಗುರುಪ್ರಸಾದ್ - ಲೇಖಕಿ ಶಾರದಾ ಭಟ್ ಅವರೊಂದಿಗೆ ಒಂದು ಸಂಜೆ-Kannada Writer Sharada Bhat

ಇಂದು ಕೋಟೇಶ್ವರದ ಆಚಾರ್ಯ ಆಸ್ಪತ್ರೆಯಲ್ಲಿ ಸಂಧಿಸಿದ ದಿವಂಗತ ಲೇಖಕಿ‌ ತಾರಾಭಟ್ ಅವರ ತಂಗಿ ಶಾರದಾ ಭಟ್ ಅವರನ್ನು ಸಂಧಿಸಿ ಅವರಿಗಾದ ಸಂತಸದ ಒಂದು ಫೋಸನ್ನು ಸೆರೆಹಿಡಿಯಲು ಸಾಧ್ಯವಾದದ್ದು ಹೀಗೆ. ಚಿತ್ರದಲ್ಲಿ ಅವರನ್ನು ಗಮನಿಸುತ್ತ ಕಾಳಜಿ ವಹಿಸಿರುವ ಅವರ ಕುಟುಂಬ ಸ್ನೇಹಿತರೂ ವೈದ್ಯರೂ ಆದ ಡಾ.ಭಾಸ್ಕರ್ ಆಚಾರ್ಯ ಅವರೂ ಸಹ ಇದ್ದಾರೆ. ಮೊನ್ನೆ ತಾನೇ ತಾರಾಭಟ್ ಅವರ ಕಣ್ಮರೆಯ ಸುದ್ದಿ ತಿಳಿದು ಮನಸ್ಸು ಶಾರದಾ ಭಟ್ ಅವರನ್ನು ಕಾಣಲು ಹಂಬಲಿಸುತ್ತಿತ್ತು. ನಿನ್ನೆಯೆಲ್ಲ ಅವರು ಎಲ್ಲಿದ್ದಾರೆಂದು ತಿಳಿದುಕೊಳ್ಳುವ ಶೋಧನೆ ನಡೆಸಿ ಕೊನೆಗೆ ಪ್ರೊ.ಮುರಳೀಧರ ಉಪಾಧ್ಯ ಅವರು ಒದಗಿಸಿದ ಆಸ್ಪತ್ರೆಯ ಲಿಂಕಿನಲ್ಲಿ ಸಿಕ್ಕ ಡಾ.ಭಾಸ್ಕರ್ ಆಚಾರ್ಯರ ಫೋನ್ ನಂಬರಿಂದ ಶಾರದಾ ಭಟ್ ಅವರನ್ನು ಇಂದೇ ಸಂಧಿಸಲು ಸಾಧ್ಯವಾಯಿತು. ಶಾರದಾ ಭಟ್ ಮತ್ತು ತಾರಾಭಟ್ ಸಹೋದರಿಯರು ತಂಗಿದ ಆಚಾರ್ಯ ಆಸ್ಪತ್ರೆಯ 105 ನಂಬರ್ ಕೋಣೆಯಲ್ಲಿ ಈಗ ಅಚೆಬದಿಯ ಹಾಸಿಗೆ ಬರಿದಾಗಿದೆ. ಶಾರದಾ ಭಟ್ ಅವರು ಅಕ್ಕನ ಅಗಲಿಕೆಯ ನೋವು, ವೈಯಕ್ತಿಕ ಅನಾರೋಗ್ಯದ ನೋವು ಎಲ್ಲವನ್ನೂ ಭರಿಸಿ ಉಳಿದ ದಿನಗಳನ್ನು ಎದುರಿಸುವ ಧೈರ್ಯದಲ್ಲಿ ಮುಖದ ಮೇಲಿನ ಒಂದು ನಗೆಯನ್ನು ಉಳಿಸಿಕೊಂಡಿದ್ದಾರೆ. ನನ್ನನ್ನು ಗಟ್ಟಿಯಾಗಿ ಹೆಸರು ಕರೆದು ಗುರುತು ಹಿಡಿದು ಸಂತಸ ವ್ಯಕ್ತಪಡಿಸಿದರು, ನನ್ನ ಭೇಟಿ ಅವರ ಮುಖವನ್ನು ಸ್ವಲ್ಪವಾದರೂ ಅರಳಿಸುವಲ್ಲಿ ಸಫಲವಾಯಿತು ಎನ್ನುವುದೇ ನನ್ನ ಇಂದಿನ ತೃಪ್ತಿ. ನಾನು ಕೈಯ್ಯಾರೆ ಬಿಡಿಸಿಕೊಟ್ಟ ಕಿತ್ತಲೆ ಹಣ್ಣು, ಬಾಳೆ ಹಣ್ಣುಗಳನ್ನು ಮಗುವಿನಂತೆ ಬಾಯಿತುತ್ತು ತೆಗೆದುಕೊಂಡು ಮನಸಾರೆ ತಿಂದರು. ಸಾಧ್ಯವಾದಷ್ಟು, ಅಗಲಿರುವ ಅಕ್ಕನನ್ನು ನೆನೆದು ಮಾತಾಡಿದರು. ನೆನಪಿರುವಷ್ಟು ಸ್ವಲ್ಪ ಮಾತಾಡಿದರು. ನನ್ನನ್ನು ವಾಪಸ್ ಕಳಿಸಲು ಮನಸ್ಸೇ ಇಲ್ಲ. " ನೀರು ಕುಡಿಸಿ" , " ಕೈ ಮೇಲೆ ತುರಿಸುತ್ತದೆ, ನೀವಿಕೊಡಿ" ಎಂದು ಕೇಳುತ್ತ " ಇನ್ನೂ ಸ್ವಲ್ಪ ಹೊತ್ತು ಇರಿ" ಎಂದು ಅವರು ಆತ್ಮೀಯವಾಗಿ ಒತ್ತಾಯಿಸುವಾಗ ಇಲ್ಲವೆನ್ನಲಾಗದೆ ಊಟಕ್ಕೆ ಹೋಗುವುದನ್ನೂ ಮುಂದೂಡಿ ಸಾಕಷ್ಟು ಹೊತ್ತು ಅವರ ಜೊತೆಗಿದ್ದು ಅವರ ಅನುಮತಿ ತೆಗೆದುಕೊಂಡು ಅವರು " ಹೂಂ" ಎಂದಮೇಲೆಯೇ ಅವರು ನಗುಮುಖದಿಂದ " ಬೈ" ಹೇಳಿದ ಮೇಲೆಯೇ ಹೊರಟೆನು. ಒಂದು ಕಾಲದಲ್ಲಿ ನನ್ನನ್ನು , ನನ್ನ ಬರವಣಿಗೆಯನ್ನು ಅತ್ಯಂತ ಆದರಾಭಿಮಾನಗಳಿಂದ ಕಂಡಿದ್ದ ಉಡುಪಿಯ ಸೋದರಿಯರು, ತಾರಾ ಭಟ್ ಮತ್ತು ಶಾರದಾ ಭಟ್. ಈಗ ಅವರ ಇರುವಿಕೆ ತಿಳಿದಮೇಲೆ ಇಷ್ಟು ತುರ್ತಾಗಿ ಅವರ ಒಂದು ಭೇಟಿಯನ್ನಾದರೂ ಮಾಡದಿರಲು ಸಾಧ್ಯವೇ?! ಮಾತಿನ ಮಧ್ಯೆ ಅವರ ಅಕ್ಕ ತಾರಾಭಟ್ ರನ್ನು " ತುಂಬಾ ಒಳ್ಳೇವ್ಳು, ದಿಟ್ಟ ಲೇಖಕಿ, ಹೋರಾಟಗಾರ್ತಿ, ಮಹಿಳಾ ಪರ ಚಿಂತಕಿ ಎಂದೆಲ್ಲ ನೆನೆದರು. ಇನ್ನೇನು ದುಃಖ ಹೆಚ್ಚಿಸಿಕೊಳ್ಳಬೇಕು ಎನ್ನುವಾಗ ನಾನು ಸಕಾರಾತ್ಮಕವಾಗಿ ಅವರ ಮನಸ್ಸನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತ " ಆಗಿಹೋಗಿದ್ದಕ್ಕೆ ಈಗ ಚಿಂತಿಸಬಾರದಲ್ಲವೇ? ವಿಚಾರವಂತರು ನೀವು. ಈಗ ನಿಮಗೆ ಯಾವುದು ಸಾಧ್ಯವೋ ಆ ಒಳಿತಿನ ಧ್ಯಾನವೇ ನಿಮ್ಮನ್ನು ಕಾಪಿಡುವುದಲ್ಲವೇ" ಎಂದಾಗ " ಹೌದು, ಹೌದು" ಎಂದು ಮಗುವಿನಂತೆ ಒಪ್ಪಿಕೊಳ್ಳುವ ಅವರ ಕೊರಳನ್ನು ಕೇಳುವುದು ನೋವಿನ ಸಂದರ್ಭದಲ್ಲಿಯೂ ಹಿತವೆನಿಸಿತ್ತು. ಕೆಲವೆಲ್ಲ ನೆನಪುಗಳು ಅವರಿಗೆ ಮರೆತು ಹೋಗಿದೆ. ಆದರೆ ಪತ್ರಕರ್ತೆಯಾಗಿ ದುಡಿದು ಸಂಪಾದನೆ ಮಾಡಿದ್ದು ಸ್ವಾಭಿಮಾನದಿಂದ ಬದುಕಿದ್ದು ನೆನಪಿದೆ. ಉದಯವಾಣಿಯಲ್ಲಿ ' ವಾರೆನೋಟ' ಎಂಬ ವಿಡಂಬನಾತ್ಮಕ ಅಂಕಣ ಬರೆದದ್ದು, ' ಲಘು ಬಿಗು' ಎಂಬ ಸಣ್ಣ ಕಥಾ ಸಂಗ್ರಹ, ' ಅವ್ಯವಸ್ಥೆ' ಎಂಬ ಕಾದಂಬರಿಯನ್ನು ' ಕನ್ನಡ ಪ್ರಭ' ಕ್ಕೆ ಧಾರಾವಾಹಿಯಾಗಿ ಬರೆದದ್ದು, ' ಪದರುಗಳು' ಧಾರಾವಾಹಿಯನ್ನು ' ತರಂಗ' ಕ್ಕೆ ಬರೆದದ್ದು, ವಾರ್ತಾಭಾರತಿಗೆ ಅಂಕಣ ಬರೆದದ್ದು ಎಲ್ಲವನ್ನೂ ನೆನೆದರು. ವಾರ್ತಾಭಾರತಿ ಸಂಪಾದಕರಾದ ಬಷೀರರ ನೆನಪಿದೆ ಎಂದರು. ಅವರ ಬಳಿ ಮಾತಾಡುವಿರಾ ಎಂದು ಫೋನ್ ಮಾಡಿಕೊಟ್ಟು ಮಾತಾಡಿಸಿದಾಗ ಆದಷ್ಟು ಮಾತಾಡಿ ಖುಷಿಪಟ್ಟರು. ಅಚ್ಚರಿಯ ಮತ್ತು ವಿಷಾದದ ಸುದ್ದಿಯೆಂದರೆ ಅವರ ಒಂದು ಪುಸ್ತಕವೂ ಈಗ ಅವರ ಬಳಿ ಇಲ್ಲ! ಡಾ. ಭಾಸ್ಕರ ಆಚಾರ್ಯರು ತಮ್ಮ ಪುಸ್ತಕ ಭಂಡಾರದಲ್ಲಿದ್ದರೆ ಹುಡುಕಿ ಒದಗಿಸುವೆ ಎಂದಿದ್ದಾರೆ. ಶಾರದಾ ಭಟ್ ಅವರ ಅಣ್ಣನ ಮಗ ಶಿವಮೊಗ್ಗದಲ್ಲಿರುವ ಅಜಯ್ ಅವರೂ ಸಹ ಈ ಸಹೋದರಿಯರ ಪುಸ್ತಕಗಳು ಬೆಳಕು ಕಾಣಲು ಯಾರಾದರೂ ಹವಣಿಸುವುದಾದರೆ ತನ್ನ ಬೆಂಬಲವಿರುವುದೆಂದಿದ್ದಾರೆ.‌ ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ್ ಅವರು ಅವರ ಬಳಿ ಇರುವ ತಾರಾಭಟ್ ಪುಸ್ತಕಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಓದಲು ದೊರೆಯುವಂತೆ ಮಾಡುವ ಸನ್ನಾಹಕ್ಕೆ ಸನ್ನದ್ಧರಾಗಿದ್ದಾರೆ. ಹೀಗೆ ಒಂದು ಕಾಲದಲ್ಲಿ ದಿಟ್ಟವಾಗಿ ಬಾಳಿ ಬದುಕಿದ ಈ ಸೋದರಿಯರ ಬಾಳ್ವೆಯ ಬರಹಕ್ಕೆ ನ್ಯಾಯ ಸಿಗುವಂತಾದರೆ ಅದೊಂದು ದೊಡ್ಡ ಸಂಗತಿ. ಆಸ್ಪತ್ರೆಯಲ್ಲಿ ತಾರಾಭಟ್ ಅವರ ಇಂಗ್ಲಿಷ್ ಆವೃತ್ತಿಯ ' ಲೋಟಸ್ ಪಾಂಡ್' ಮತ್ತು ' ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ' , ಪರಿಧಿಯಿಂದಾಚೆಗೆ' ಕಥಾ ಸಂಕಲನಗಳು, ' ಸರ್ವಾಧಿಕಾರಿ' ನಾಟಕ ದೊರೆತು ಕಣ್ಣು ತೇವವಾಗಿ ಅವರನ್ನೇ ಕಂಡಂತಾಯಿತು‌...

Monday, October 2, 2023

ಎಮ್ ಆರ್ ಕಮಲಾ - ಕಲಾ ಲೋಕಕ್ಕೆ ಕಂಟಕವಾಗಿರುವ ಕೃತಕ ಬುದ್ದಿಮತ್ತಿ--A I

ಕಲಾ ಲೋಕಕ್ಕೆ ಕಂಟಕವಾಗಿರುವ ಕೃತಕ ಬುದ್ಧಿಮತ್ತೆ!? (Artificial Intelligence -AI ) ಯುವ ಜನಾಂಗಕ್ಕೆ ತೀರಾ ಅಪ್ರಸ್ತುತವೆನ್ನಿಸುವ ವಿಚಾರಗಳ ಬಗ್ಗೆಯೇ ಕನ್ನಡ ಸಾಹಿತ್ಯ ಲೋಕ ಗಿರಕಿ ಹೊಡೆಯುತ್ತಿದೆ. ಕಾಲ ಮುಂದೆ ಹೋಗಿದ್ದರೂ ಕಳೆದ ಶತಮಾನದ, ಈಗ ಯಾವ ಪ್ರಯೋಜನಕ್ಕೂ ಬಾರದ ಚರ್ಚೆಗಳಿಗೆ ಅಂಟಿಕೊಂಡು ಕುಳಿತಿದೆ. ಯುವ ಜನಾಂಗಕ್ಕೆ ದಾರಿ ತೋರಬೇಕಾದವರೆಲ್ಲ ಅವರನ್ನು ಗೊಂದಲದಲ್ಲಿ ಸಿಲುಕಿಸಿರುವುದೇ ಹೆಚ್ಚು. ತೆರೆದ ಮನಸ್ಸಿನಿಂದ ಲೋಕವನ್ನು ನೋಡಿ ತಪ್ಪೋ ಸರಿಯೋ ಹೆಜ್ಜೆಯನ್ನಿಟ್ಟು, ಕಲಿಯಲು ಬೇಕಾದ ವಾತಾವರಣವನ್ನು ನಿರ್ಮಿಸದೆ, ಪಂಥ, ಗುಂಪುಗಳನ್ನು ಸೃಷ್ಟಿಸಿ, `ಇಲ್ಲಿ ಸಲ್ಲದಿದ್ದರೆ ನೀನೆಲ್ಲಿಯೂ ಸಲ್ಲುವುದಿಲ್ಲ' ಎಂಬ ಆತಂಕ, ಹೆದರಿಕೆಯ ವಾತಾವರಣವನ್ನು ಯುವ ಜನಾಂಗಕ್ಕೆ ಹುಟ್ಟು ಹಾಕಿದ್ದಾರೆ. ಅವರ ಸಹಜ ನೋಟಗಳ ಮೇಲೆ ಅಪ್ರಸ್ತುತ ವಿಚಾರಗಳನ್ನು ಹೇರಲಾಗುತ್ತಿದೆ. ಈಚೀಚೆಗೆ ಯುವ ಸಾಹಿತಿಗಳು ಸಣ್ಣ ಮಟ್ಟದಲ್ಲಿಯಾದರು ಇವೆಲ್ಲವನ್ನೂ ವಿರೋಧಿಸುತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದೇ ಸಂತಸದ ವಿಷಯ. ಮನುಷ್ಯನ ಮನಸ್ಸನ್ನು ಅರಳಿಸುವ ಕಲಾ ಪ್ರಕಾರಗಳೇ ಅಳಿದು ಹೋಗುವಂತಹ ಕಾಲಘಟ್ಟಕ್ಕೆ ಬಂದು ನಿಲ್ಲುತ್ತಿರುವಾಗ ಅವರ ಸಣ್ಣ ಸಂಭ್ರಮಗಳನ್ನು ಗೇಲಿ ಮಾಡುತ್ತಾ ಕೂರುವ ಕಾಲ ಇದಲ್ಲವೇ ಅಲ್ಲ. ಐದು ವರ್ಷದ ಹಿಂದೆ ಮಗ ಆಕರ್ಷ ಹೀಗೊಂದು ಕವಿತೆಯನ್ನು ಬರೆದು ತೋರಿಸಿದಾಗ ನಕ್ಕುಬಿಟ್ಟಿದ್ದೆ. ಇದೆಂತಹ ಭ್ರಮೆ ಎನ್ನಿಸಿಬಿಟ್ಟಿತ್ತು. ಅದರ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಭವಿಷ್ಯದ ಕವಿತೆ ಹಗುರಾಗಿರುತ್ತದೆ. ಆಧುನಿಕ ವಸ್ತುಗಳಿಂದ ವಿಶಿಷ್ಟ ಲೋಹಗಳಿಂದ ತಯಾರಿಸಲ್ಪಟ್ಟಿರುತ್ತದೆ ಭವಿಷ್ಯದ ಕವಿತೆ ನೂರಾರು ಆಕಾರಗಳಲ್ಲಿ ಬಣ್ಣಗಳಲ್ಲಿ ಲಭ್ಯವಿರುತ್ತದೆ ನಮ್ಮ ಜೀವನದ ಸತ್ಯಗಳನ್ನು ತನ್ನದಾಗಿಸಿಕೊಳ್ಳುತ್ತ ಈಗಿನ ಕವಿತೆಗಳು ತೆಗೆದುಕೊಳ್ಳುವ ಸಮಯದ ಅರ್ಧದಷ್ಟನ್ನು ಮಾತ್ರ ಬಳಸಿ ಹೆಚ್ಚಿನದನ್ನು ತಿಳಿಸುತ್ತದೆ. ಈ ಕವಿತೆ ಬರೆಯುವಾಗ ಕವಿಯ ಮನಸ್ಸಿನಲ್ಲಿ ಏನಿತ್ತೋ, ಆದರೀಗ `ಕೃತಕ ಬುದ್ಧಿಮತ್ತೆ' ರಾರಾಜಿಸುತ್ತಿರುವ ಸಮಯದಲ್ಲಿ ಈ ಸಾಲುಗಳೆಷ್ಟು ಪ್ರಸ್ತುತವಾಗಿವೆ ಎನ್ನಿಸಿತು. ಮೊನ್ನೆ ಜಾಯ್ಸ್ ಮೇನಾರ್ಡ್ ಎಂಬ ಅಮೇರಿಕನ್ ಕಾದಂಬರಿಕಾರ್ತಿ ಮತ್ತು ಪತ್ರಕರ್ತೆ ಬರೆದ ಒಂದು ಲೇಖನ ಓದುತ್ತಿದ್ದೆ. ಹತ್ತಾರು ಕಾದಂಬರಿಗಳನ್ನು ಬರೆದಿರುವ ಈಕೆ ನನಗಿಂತ ಆರು ವರ್ಷ ದೊಡ್ಡವಳು. ಅಚ್ಚರಿಯೆಂದರೆ ಈ ಎಲ್ಲ ಹಿರಿಯ ಸಾಹಿತಿಗಳು `ಫೇಸ್ ಬುಕ್ ' ನಲ್ಲಿಯೇ ಬರೆಯುತ್ತಾರೆ. `ಫೇಸ್ ಬುಕ್' ಸಾಹಿತಿಗಳು ಎನ್ನುವ ಬಾಲಿಶ ವಿಚಾರಗಳಿಲ್ಲ. ಅಲ್ಲಿಯ ಪತ್ರಿಕೆಗಳು ಇಲ್ಲಿಯವರಂತೆ ಫೇಸ್ಬುಕ್ಕಿನ ಬರಹಗಳನ್ನು ಪ್ರಕಟಿಸಲು ಹಿಂಜರಿಯುವುದಿಲ್ಲ. (ಕೆಲವು ಅಪವಾದಗಳಿವೆ) ಒಳ್ಳೆಯದು ಎಲ್ಲಿ ಕಂಡರೂ ಅದನ್ನು ಮತ್ತಷ್ಟು ಜನರಿಗೆ ತಲುಪಿಸುವ ಹೊಸ ಯೋಜನೆಗಳಲ್ಲಿ ಮುಳುಗುತ್ತಾರೆ. ಆಕೆ ಗಮನಿಸಿದ ಅನೇಕ ಸಂಗತಿಗಳು ನಿಜಕ್ಕೂ ತಲ್ಲಣ ಹುಟ್ಟಿಸುವಂಥದ್ದು. ಈ `ಕೃತಕ ಬುದ್ಧಿಮತ್ತೆ' ತಮ್ಮ ಸಂಸ್ಕೃತಿಯಲ್ಲಿ ಅರಿವಿಗೆ ಬಾರದಂತೆ ನುಸುಳಿದೆ ಮತ್ತು ಎಲ್ಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎನ್ನುವುದೇ ಆಕೆಯ ಕಾಳಜಿ. ಆಕೆಯದೇ ಕೆಲವು ಸಾಲುಗಳನ್ನು ಅನುವಾದಿಸಿದ್ದೇನೆ.`ಐವತ್ತು ವರ್ಷಗಳ ಹಿಂದೆ ನಾನು ನನ್ನ ಮೊದಲ ಪುಸ್ತಕವನ್ನು ಪ್ರಕಟಿಸಿದಾಗ ನೆತ್ತರು ಬಸಿದು, ಶ್ರಮ ಪಡದೆ, ಎದೆ ಬಡಿತವನ್ನು ಹೆಚ್ಚಿಸಿಕೊಳ್ಳದೆ ಒಂದು ಪುಸ್ತಕವನ್ನು ಬರೆಯಬಹುದು ಎಂದರೆ ಹುಚ್ಚು ಮಾತು ಎಂದುಕೊಳ್ಳುತ್ತಿದ್ದೆ. ಆದರೆ ಅಂತಹ ದಿನವೂ ಬಂದಿದೆ. ಈ ಕೃತಕ ಬುದ್ಧಿಮತ್ತೆ ಮನುಷ್ಯನ ಧ್ವನಿ, ಶೈಲಿ, ವಾಕ್ಯ ರಚನೆ, ಅನೇಕ ಕೃತಿಗಳನ್ನು ರಚಿಸಿರುವವರ ಶಬ್ದಕೋಶ ಎಲ್ಲವನ್ನು ನಕಲು ಮಾಡಬಲ್ಲದು. ಈಗಾಗಲೇ ಸಾವಿರಾರು ಲೇಖಕರ ನೂರಾರು ಕೃತಿಗಳನ್ನು ಈ ಪ್ರಯೋಗಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಟ್ಲಾಂಟಿಕ್ ಮ್ಯಾಗಜಿನ್' ವರದಿ ಮಾಡಿದೆ. ಬರೆದ ಲೇಖಕರ ನೆರವಿಲ್ಲದೆ ಕಾದಂಬರಿಯೊಂದು ತಯಾರಾಗಿಬಿಡುತ್ತದೆ.' ಹಾಗೆ ನೋಡಿದರೆ ಜಾಯ್ಸ್ ಮೇನಾರ್ಡ್ ಅವರ ಕೃತಿಯೊಂದನ್ನು ಅವರ ಅನುಮತಿ ಕೂಡ ಪಡೆಯದೇ ಸ್ಕ್ಯಾನ್ ಮಾಡಲಾಗಿದೆಯಂತೆ ಹಾಗೆ ಅವರ ದನಿಯನ್ನು ಕೂಡ. `AI assistance for writers ' ಎಂಬ ಅನೇಕ ವೇದಿಕೆಗಳನ್ನು ನಿರ್ಮಿಸಿ ಬರವಣಿಗೆಯ ಬಗ್ಗೆ ಆಸಕ್ತಿ ಇರುವ ಉತ್ಸಾಹಿ ಬರಹಗಾರರಿಗೆ ಪುಸ್ತಕಗಳನ್ನು ಬರೆಯಲು ನೆರವು ನೀಡುತ್ತಿವೆಯಂತೆ. ಯಾವುದೇ ವ್ಯಾಕರಣದ ತಿಳಿವಳಿಯಿಲ್ಲದೆ, ಸಂವೇದನೆಯಿಲ್ಲದೆ, ಶೈಲಿ, ಭಾಷೆಯ ಲಯ ಇತ್ಯಾದಿಗಳ ಪರಿಚಯವಿಲ್ಲದೆ ಪುಸ್ತಕಗಳನ್ನು ಸೃಷ್ಟಿಸಬಹುದು. ಇದು ನಿಜವಾಗಿಯೂ ಎಲ್ಲ ಕಲೆಗಳ ಸಾವು, ಸತ್ತವರನ್ನು ಮತ್ತೊಮ್ಮೆ ಸಾಯಿಸುವ ವಿಧಾನ ಎಂದು ಜಾಯ್ಸ್ ಅಭಿಪ್ರಾಯಪಡುತ್ತಾರೆ. ಹಾಗಾದರೆ ನಾವಿಷ್ಟು ದಿನ ಪ್ರತಿಯೊಂದು ಪದ, ಅದರ ಅರ್ಥ, ಶ್ಲೇಷೆ, ಅದಕ್ಕೆ ಬಳಸುವ ಚಿಹ್ನೆ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದುದಕ್ಕೆ ಏನರ್ಥವಿದೆ ಎಂದು ಬರಹಗಾರರು ತಲ್ಲಣಿಸಿಹೋಗಿದ್ದಾರೆ. ಒಂದು ದಿನ ಮನುಷ್ಯನಿಗೆ ವಿಶೇಷವೆನಿಸಿದ್ದುದನ್ನೆಲ್ಲ ಈ ತಂತ್ರಜ್ಞಾನ ಕಿತ್ತುಕೊಂಡರೆ ಮನುಷ್ಯ ಮನುಷ್ಯನಾಗಿ ಉಳಿಯುವನೇ ಅಥವಾ ಯಂತ್ರವಾಗಿಬಿಡುತ್ತಾನೆಯೇ? ಈ ಹೊಸ ಹೊಸ ಸಂಶೋಧನೆಗಳಿಂದ ಮನುಷ್ಯ ಕಾಲ ಕಾಲಕ್ಕೆ ಏನನ್ನೋ ಕಳೆದುಕೊಳ್ಳುತ್ತಲೇ ಪಡೆದುಕೊಂಡು ಹೋಗಿದ್ದಾನೆ ಎನ್ನುವುದನ್ನು ನಾವೇ ಕಂಡಿದ್ದೇವೆ. ಪ್ರತಿ ಹೊಸ ವಿಚಾರ, ಬದಲಾವಣೆ ಅವನನ್ನು ತಲ್ಲಣಕ್ಕೆ ಈಡುಮಾಡುತ್ತಲೇ ಇದೆ. ದೇವನೂರು ಮಹಾದೇವ ಅವರ `ಡಾಂಬರು ಬಂದುದು', ತೇಜಸ್ವಿಯವರ `ಅಬಚೂರಿನ ಪೋಸ್ಟ್ ಆಫೀಸ್' ನಾ. ಡಿಸೋಜ ಅವರ `ಹಾಲ್ಟಿನ್ಗ್ ಬಸ್' ಕತೆಗಳು ಹೇಳುವುದು ಇಂತಹ ತಳಮಳ, ತಲ್ಲಣಗಳ ಬಗ್ಗೆಯೇ ಅಲ್ಲವೇ? ಮೊಬೈಲ್ ಹುಚ್ಚರಾಗಿರುವ ಸಮಯದಲ್ಲಿ ನಾನೇ ಬರೆದ `ಮೌನೇಶನೊಂದಿಗೆ ವಾಕಿಂಗ್' ಕೂಡ ಯಂತ್ರಗಳ ದಾಸರಾಗುತ್ತಿರುವ ಮನುಷ್ಯನ ಬಗ್ಗೆಯೇ ಬರೆದಿದ್ದು. ಸಂವೇದನೆ, ಭಾವನೆಗಳನ್ನು ಜೀವಂತವಾಗಿಡುವ ಸಾಹಿತ್ಯ, ಕಲೆಗಳು ಯಂತ್ರಕ್ಕೆ ದಾಸರಾದಾಗ ಮನುಷ್ಯರು ಭಾವರಾಹಿತ್ಯ ಸ್ಥಿತಿಯನ್ನು ತಲುಪಿ ಯಂತ್ರಗಳಂತಾಗಿಬಿಡುತ್ತಾರೇನೋ ಎನ್ನುವ ಆತಂಕ ಹುಟ್ಟುವುದು ಸುಳ್ಳಲ್ಲ. ಆದರೆ ಮನುಷ್ಯ ತನ್ನೊಂದಿಗೆ ಹುಟ್ಟುವಾಗಲೇ ಕಟ್ಟಿಕೊಂಡು ಬಂದ ಚೈತನ್ಯವನ್ನು ನಕಲು ಮಾಡುವುದು ಸಾಧ್ಯವೇ? ಇದು ಪ್ರಶ್ನೆ ಮತ್ತು ಉತ್ತರ. ಯಂತ್ರವೇ ಕವಿ ಹೃದಯಕ್ಕೆ ಸೋಲುವುದರೊಂದಿಗೆ ಕೊನೆಯಾಗುವ ಆಕರ್ಷನ ಕವನ ಬದುಕಿನ ಭರವಸೆಯನ್ನು ಅಳಿಸುವುದಿಲ್ಲ. ಭವಿಷ್ಯದ ಕವಿತೆ ಐಪಾಡ್ ಕಿಂಡಲ್ ಗಳಲ್ಲಿ ಹಿತ್ತಲ ಗಿಡದ ನೆರಳನ್ನು , ರಸ್ತೆಯ ಧೂಳನ್ನು, ಹೂವಿನ ಕಂಪನ್ನು. ಮಗುವಿನ ಮುಗ್ಧತೆಯನ್ನು ಡೌನ್ಲೋಡ್ ಮಾಡಿಕೊಂಡರೂ ಕೊನೆಗೆ ಕವಿ ಹೃದಯಕ್ಕೆ ಸೋಲುತ್ತದೆ. ನಿಜಕ್ಕೂ ಕವಿ ಹೃದಯವನ್ನು, ಅದರ ನಿಗೂಢಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ಯಂತ್ರಗಳು ನಕಲು ಮಾಡಬಹುದೇ? ನಕಲು ಮಾಡಿದರೂ ಅವುಗಳಲ್ಲಿ ಜೀವಂತಿಕೆ ಉಳಿಯಲು ಸಾಧ್ಯವೇ? ಕಾಲವೇ ಪ್ರಶ್ನೆಗಳಿಗೆ ಉತ್ತರಿಸಬಹುದೇನೋ? ( ಜಾಯ್ಸ್ ಮೇನಾರ್ಡ್ ಮತ್ತು ಆಕರ್ಷನ ಕವಿತೆ ಹುಟ್ಟು ಹಾಕಿದ ವಿಚಾರಗಳು)

Thursday, September 28, 2023

ಕಮಲ ಹೆಮ್ಮಿಗೆ- ತಿರು ಶ್ರೀಧರ

ಡಾ. ಕಮಲಾ ಹೆಮ್ಮಿಗೆ ಅವರು ಬಹುಮುಖಿ ಬರಹಗಳಿಂದ ಪ್ರಸಿದ್ಧರಾಗಿದ್ದವರು. ಎಫ್‍ಬಿ ವಲಯದಲ್ಲಿ ಅತ್ಯಂತ ಆಪ್ತರಾಗಿದ್ದ ಕಮಲಾ ಅವರು ಯಾಕೋ ಕಾಣುತ್ತಿಲ್ಲವಲ್ಲ ಎಂದು ಅನಿಸುತ್ತಿತ್ತು. ದುರದೃಷ್ಟವಶಾತ್ ಇಂದು ಅವರ ಅಗಲಿಕೆಯ ಸುದ್ದಿ ನೋಡುವಂತಾಗಿದೆ.‍ ಕಮಲಾ ಹೆಮ್ಮಿಗೆ ಅವರು ಜನಿಸಿದ ದಿನ ನವೆಂಬರ್ 20. ಜನಿಸಿದ ಊರು ಮೈಸೂರು ಜಿಲ್ಲೆಯ ಹೆಮ್ಮಿಗೆ. ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಎಂ.ಎ.ಪದವಿ ಪಡೆದರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. ಇದಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಕೂಡಾ ಪಡೆದರು. ಕಮಲ ಹೆಮ್ಮಿಗೆ ಅವರು ಆಕಾಶವಾಣಿಯ ಧಾರವಾಡ ಮತ್ತು ಮಂಗಳೂರು ಕೇಂದ್ರಗಳಲ್ಲಿ ಹಾಗೂ ದೂರದರ್ಶನದ ಬೆಂಗಳೂರು ಮತ್ತು ತಿರುವನಂತಪುರದ ಕೇಂದ್ರಗಳಲ್ಲಿ ವೃತ್ತಿಯಲ್ಲಿದ್ದರು. ಕಮಲ ಹೆಮ್ಮಿಗೆ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ರೂಪಗಳಲ್ಲಿನ ಬರಹಗಳನ್ನು ನೀಡುತ್ತಾ ಬಂದಿದ್ದರು. ಅವರ ಕೃತಿಗಳಲ್ಲಿ ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಮುಂತಾದ ಕಾವ್ಯಗಳಿವೆ. ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ ಮುಂತಾದ ಕಾದಂಬರಿಗಳಿವೆ. ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, 'ನಾನು , ಅವನು ಮತ್ತು ಅವಳು', ಹನ್ನೊಂದು ಕಥೆಗಳು, ತ್ರಿಭಂಗಿ ಮುಂತಾದ ಕಥಾ ಸಂಕಲನಗಳಿವೆ. ಲಾವಣಿ-ಒಂದು ಹಕ್ಕಿ ನೋಟ, ಸವದತ್ತಿ ಎಲ್ಲಮ್ಮನ ಜಾತ್ರೆ, ಪಂಚಮುಖ, ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ಧತಿ: ಒಂದು ಅಧ್ಯಯನ ಮುಂತಾದ ಸಂಶೋಧನಾ ಕೃತಿಗಳಿವೆ. ಜ್ಞಾನಪೀಠ ಪುರಸ್ಕೃತ ಸೀತಾಕಾಂತ ಮಹಾಪಾತ್ರರ ಕಾವ್ಯಾನುವಾದ 'ಶಬ್ದಗರ್ಭಿತ ಆಕಾಶ' , ಶಶಿ ದೇಶಪಾಂಡೆಯವರ Dark holds no terror ಕಾದಂಬರಿಯ ಅನುವಾದ 'ಕತ್ತಲಲ್ಲಿ ಭಯವಿಲ್ಲ', ಮಲಯಾಳೀ ಲೇಖಕಿಯರ ಸಣ್ಣ ಕಥೆಗಳ ಅನುವಾದ ಸಂಕಲನ 'ಮಾಯಾ ಕನ್ನಡಿ', ಮಲಯಾಳದ ಲೇಖಕಿಯರ ಕಥೆಗಳ ಸಂಕಲನ 'ಪೆಣ್' , ಗ್ರೇಸಿ ಅವರ ಮಲಯಾಳದ ಕಥೆಗಳ ಅನುವಾದ 'ಮೆಟ್ಟಿಲಿಳಿದು ಹೋದ‍ ಪಾರ್ವತಿ' , ಮಲಯಾಳಂ ಕತೆಗಳ ಸಂಕಲನ 'ಕೇರಳದ ಕಾಂತಾಸಮ್ಮಿತ', ಮಲಯಾಳದ ರಾಜಲಕ್ಷ್ಮಿಯವರ ಕಥೆಗಳು ಮುಂತಾದವು ಇವೆ. ಹನಿ ಹನಿ, ಹಾಡಿನ ಹಗೇವ, ಬಣ್ಣದ ಭರಣಿ, ದೇವರಿಗೆ ಶರಣೆನ್ನುವೆನೇ, ಮಂಗಳದ ಮಾಪೂರ, ಹೂವು ಬಿದ್ದಾವ ನೆಲಕ, ಪೊಳ್ಳಿನೊಳಗೆ ಪಕ್ಷಿ, ವೀರಭದ್ರ ದೇವರ ಒಡಬುಗಳು, ಕನಸ ಕೇಳವ್ವ, ಒಳಗಣ್ಣಿನ ಹೊರನೋಟ ಮುಂತಾದ ಸಂಪಾದನೆಗಳಿವೆ. ಸಂಕ್ರಮಣ, ಅಗ್ನಿ, ಸಕಾಲಿಕ, ಭಾನುವಾರ, ಕರುಣಾ ಸಂಚಿಕೆ ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನೂ ಮೂಡಿಸಿದ್ದರು. ಡಾ. ಕಮಲಾ ಹೆಮ್ಮಿಗೆ ಅನೇಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿನ ಸಮಾವೇಶಗಳಲ್ಲಿ, ನ್ಯಾಶನಲ್ ಬುಕ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಹಾಗೂ ಅನೇಕ ವೇದಿಕೆಗಳಲ್ಲಿ ಸಾಹಿತ್ಯ ವಿಚಾರ ಮಂಡಿಸಿದ್ದರು. ಕಮಲಾ ಹೆಮ್ಮಿಗೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ಎಸ್.ಎನ್. ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ, ಮಾಸ್ತಿ ಕಾದಂಬರಿ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. ನಾಡಿನ ಸಾಧಕರೂ ಮತ್ತು ನಮ್ಮೆಲ್ಲರ ಆತ್ಮೀಯರೂ ಆದ ಡಾ. ಕಮಲಾ ಹೆಮ್ಮಿಗೆ ಅವರು ಇನ್ನಿಲ್ಲ (24.9.2023)ಎಂದರೆ ನಂಬಲಾಗುತ್ತಿಲ್ಲ. ಪ್ರತಿದಿನ ನನ್ನ ಬರಹಗಳನ್ನು ಅಕ್ಕರೆಯಿಂದ ಹರಸುತ್ತಿದ್ದ ಈ ಜೀವ ಇನ್ನು ಇಲ್ಲ ಎಂಬುದು ಅರಗಿಸಿಕೊಳ್ಳಲಾಗುತ್ತಿಲ್ಲ. (ನಮ್ಮ ಕನ್ನಡ ಸಂಪದ Kannada Sampada ದಲ್ಲಿ ಮೂಡಿಬರುತ್ತಿರುವ ಬರಹಗಳು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿಯೂ ಲಭ್ಯವಿದೆ)

M G M College Udupi @ 75 -Pro Shreesha Acharya- ಎಮ್ ಜಿ ಎಮ್ ಕಾಲೇಜು ಸವಿನ...

Thursday, August 17, 2023

Mahalinga Bhat -K P RAO -ಮಹಾಲಿಂಗ ಭಟ್ - ಕೆ ಪಿ ರಾವ್ ಅವರೊಡನೆ ಸಂವಾದ

U B PAVANAJA --ಯು ಬಿ ಪವನಜ - ಕಂಪ್ಯೂಟರ್ ಮತ್ತು ಕೆ ಪಿ ರಾವ್

Muraleedhara Upadhya Hiriadka -K P Rao - ಕೆ ಪಿ ರಾವ್ ಅವರಿಗೆ ಅಭಿನಂದನೆ

N R Nayak -Taltaje Keshava Bhat Award 2023 -ಎನ್ ಆರ್ ನಾಯಕ್ ರಿಗೆ ತಾಳ್ತಜೆ ಕ...

Shankar Sihimogge -Kademgodlu Award -ಶಂಕರ್ ಸಿಹಿಮೊಗ್ಗೆ ಅವರಿಗೆ ಕಡೆಂಗೋಡ್ಲು ...

Dr Madhavi Bhandari - " ಡಾ / ಜಿ ಭಾಸ್ಕರ ಮಯ್ಯ , ವ್ಯಕ್ತಿ , ಕೃತಿ , ಸನಿನೆನಪು "

Thursday, June 29, 2023

ಡಾ / ಎಚ್ . ವಿ . ನಾಗರಾಜ ರಾವ್ ಮೈಸೂರು- -ಆನಂದರ ಬದುಕು ಬರಹ-ANANDA

ಸಂಸ್ಕೃತಿ ಚಿಂತನಾ : ಡಾ. ಹೆಚ್.ವಿ. ನಾಗರಾಜರಾವ್ ಮೈಸೂರು ಆನಂದರ ಬದುಕು-ಬರಹ ಆನಂದ ಎಂಬ ಕಾವ್ಯನಾಮದಿಂದ ಬರೆ ಯುತ್ತಿದ್ದವರು ಎ. ಸೀತಾರಾಮ್. ಇವರದು ಅರವತ್ತು ವರ್ಷಗಳ ಬದುಕು (೧೮.೮.೧೯೦೨ ರಿಂದ ೧೭.೧೧.೧೯೬೩), ಇವರು ಕೆಲವು ಕಥೆಗಳನ್ನು ಕನ್ನಡದಲ್ಲಿ ಬರೆದಿದ್ದರು ಎಂದು ಮಾತ್ರ ನನಗೆ ತಿಳಿದಿತ್ತು. ಅವರ 'ನಾನು ಕೊಂದ ಹುಡುಗಿ' ಎಂಬ ಒಂದು ಕಥೆಯನ್ನು ಮಾತ್ರ ನಾನು ಓದಿದ್ದೆ. ಈ ಆನಂದರನ್ನು ಕುರಿತು ಡಾ. ವಿಜಯಾಹರನ್ ಗಂಭೀರ ಅಧ್ಯಯನವನ್ನು ಮಾಡಿ ಮಹಾಪ್ರಬಂಧವನ್ನು ರಚಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದರು. ೧೯೯೮ರಲ್ಲಿ ಆ ಮಹಾ ಪ್ರಬಂಧ ಪ್ರಕಟಗೊಂಡಿತ್ತಂತೆ. ಅದರ ಮರು ಮುದ್ರಣ ಈಚೆಗೆ (೨೦೨೨) ಆಗಿದೆ. ಅಲ್ಲದೆ ಆನಂದ ಅವರ ಸಮಗ್ರ ಕತೆಗಳು' ಎಂಬ ಪುಸ್ತಕವನ್ನು ವಿಜಯಾಹರನ್ ಅವರೇ ೨೦೧೭ರಲ್ಲಿ ಬೆಳಕಿಗೆ ತಂದಿದ್ದಾರೆ. ಈ ಎರಡನ್ನೂ ಓದಿದವರಿಗೆ ಆನಂದ (ಅಜ್ಜಂಪುರ ಸೀತಾ ರಾಮ್) ಅವರ ವ್ಯಕ್ತಿತ್ವದ ಸಂಪೂರ್ಣ ಚಿತ್ರಣ ಲಭ್ಯವಾಗುತ್ತದೆ. ಕನ್ನಡ ಸಾಹಿತ್ಯದ ಅತಿರಥ -ಮಹಾರಥರಾದ ಕುವೆಂಪು, ಕಾರಂತ ಮುಂತಾದವರನ್ನು ಅರಿತುಕೊಳ್ಳಲು ಅವರ ಆತ್ಮಚರಿತ್ರೆಗಳಿವೆ. ಆದರೆ ಅಷ್ಟು ಪ್ರಸಿದ್ದರಲ್ಲದ, ಆದರೆ ಕನ್ನಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿರುವ ಆನಂದರಂತಹವರ ಬಗೆಗೆ ಓದುಗರ ಕುತೂಹಲವನ್ನು ತಣಿಸುವ ಗ್ರಂಥಗಳ ಕೊರತೆ ಇದೆ. ಅದನ್ನು ತುಂಬುವ ದಿಶೆಯಲ್ಲಿ ಇದು ಸ್ವಾಗತಾರ್ಹ ಪ್ರಯತ್ನ. ಆನಂದ ಅವರ ಸಮಗ್ರ ಕಥೆಗಳು ಎಂಬ ಪುಸ್ತಕದಲ್ಲಿ ಅವರೇ ರಚಿಸಿದ ಇಪ್ಪತ್ತು ಕತೆಗಳೂ ಅವರು ಅನು ವಾದಿಸಿದ ಅಥವಾ ರೂಪಾಂತರಿಸಿದ ಹನ್ನೆರಡು ಕತೆಗಳೂ ಇವೆ. ಗುಣ, ಗಾತ್ರ ಎರಡು ದೃಷ್ಟಿಯಿಂದಲೂ ಅನಂದರ ಕೊಡುಗೆ ದೊಡ್ಡದೇ. ಆನಂದರ ಬದುಕು-ಬರಹ: ಡಾ. ವಿಜಯಾ ಹರನ್ ಅವರ ಕಾರ್ಯಶ್ರದ್ಧೆಯನ್ನು ಬಿಂಬಿಸುವ ಕೃತಿ. ಅವರು ಯಾವ ಕೆಲಸವನ್ನು ಮಾಡಿದರೂ ಅದರಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಈ ಪುಸ್ತಕದಲ್ಲಿ ಯಾವ ಪರಿಚ್ಛೇದವನ್ನೂ, ಅಷ್ಟೇಕೆ, ಯಾವ ವಾಕ್ಯವನ್ನೂ ಅವರು ವ್ಯರ್ಥವಾಗಿ ಅಥವಾ ಕಾಟಾಚಾರಕ್ಕಾಗಿ ಬರೆದಿಲ್ಲ. ಅರವತ್ತೆರಡು ಪುಟಗಳಲ್ಲಿ ಅವರು ಆನಂದರ ಬದುಕನ್ನು ಚಿತ್ರಿಸಿದ್ದಾರೆ. ಇದು ವಾಸ್ತವ ಜೀವನದ ಚಿತ್ರವಾದರೂ ಕಥೆಯಂತೆ, ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಒಬ್ಬ ಸಾಹಿತಿಯ ಜೀವನ ಹೇಗೆ ಸಾಗುತ್ತದೆ, ದೊಡ್ಡ ಸಾಹಿತ್ಯಕಾರರು ಒಬ್ಬರನ್ನೊಬ್ಬರು ಹೇಗೆ ಗೌರವಿಸುತ್ತಿದ್ದರು, ಅವರ ಆತ್ಮೀಯ ವರ್ತನೆಗಳು ಯಾವ ರೀತಿಯಲ್ಲಿ ಇರುತ್ತಿದ್ದವು ಎಂಬುದನ್ನು ನೋಡಲು ಈ ಭಾಗ ಅತ್ಯಂತ ಸ್ವಾರಸ್ಯಮಯವಾಗಿದೆ. ಕುವೆಂಪು ಮತ್ತು ಆನಂದರ ರಸಮಯ ಸಂಭಾಷಣೆಗಳನ್ನೂ ನೆನಪಿನ ದೋಣಿಯಲ್ಲಿ ಎಂಬ ಆತ್ಮ ಚರಿತ್ರೆಯಲ್ಲಿ ಕುವೆಂಪು ಆನಂದರ ಸಖ್ಯದ ರಸನಿಮಿಷಗಳ ಬಗೆಗೆ ಬರೆದಿರುವ ಮಾತುಗಳನ್ನೂ ಡಾ.ವಿಜಯಾ ಹರನ್ ಉದಾ ಹರಿಸಿ ಈ ಭಾಗಕ್ಕೆ ಮೆರುಗನ್ನು ತಂದಿದ್ದಾರೆ. ಕುವೆಂಪು ಅವರಿಗೆ ಆನಂದರು ತಮ್ಮ ಕೃತಿ ಲಿಯೋಟಾಲ್‌ಸ್ಟಾಯ್ ಅರ್ಪಿಸಿದಾಗ ಅದರಲ್ಲಿದ್ದ ಒಕ್ಕಣೆಯನ್ನು ಡಾ. ವಿಜಯಾಹರನ್ ಉದಾಹರಿಸಿದ್ದಾರೆ : “ಸಿರಿಗನ್ನಡ ನುಡಿವೆಣ್ಣ ಹೊಂಗನಸು ಮೈತಳೆದ ರೂಪರೂ ವಿವಿಧ ಸಾಹಿತ್ಯ ಶಿಲ್ಪಕಲಾ ಕೋವಿದರೂ, ಕನ್ನಡ ಕುಲ ಹೃತ್ಕುಮುದಚಂದ್ರರೂ ನನ್ನ ಪರಮಸಖರೂ ಆದ ಪದ್ಮಭೂಷಣ, ಡಾಕ್ಟರ್ ಕೆ.ವಿ. ಪುಟ್ಟಪ್ಪ, ಎಂ.ಎ. ಡಿ.ಲಿಟ್. ಅವರಿಗೆ ಈ ಕೃತಿಯನ್ನು ಅನನ್ಯ ಸ್ನೇಹ ಭಾವದಿಂದ ಅರ್ಪಿಸಿದ್ದೇನೆ -ಆನಂದ” ಅನೇಕ ಸಾಹಿತಿಗಳೊಡನೆ ಆನಂದರ ಸಂಬಂಧ ಚೆನ್ನಾಗಿತ್ತು. ಆದರೆ 'ಸಂಸ'ರೊಡನೆ ಮೊದಲು ಚೆನ್ನಾಗಿದ್ದ ಮೈತ್ರಿ ಆಮೇಲೆ ಸಂಸರ ಸಂಶಯ ಪ್ರವೃತ್ತಿಯ ಕಾರಣದಿಂದ ಕಡಿದು ಬೀಳುವಂತಾಯಿತು. ಸಂಸರಂತಹ ಪ್ರತಿಭಾಶಾಲಿ ಆತ್ಮಹತ್ಯೆಯಿಂದ ದಾರುಣ ಅಂತ್ಯವನ್ನು ಕಂಡಾಗ ಅಪಾರ ದುಃಖವನ್ನು ಅನುಭವಿಸಿದರು ಎಂಬುದನ್ನು ವಿಜಯಾಹರನ್ ನಿರೂಪಿಸಿದ್ದಾರೆ. ಆನಂದರ ವ್ಯಕ್ತಿ ಸ್ವಭಾವ ವನ್ನು ಹೇಳುತ್ತಾ ಹೀಗೆಂದಿದ್ದಾರೆ: “ಜಾತೀಯತೆ ಅಸ್ಪೃಶ್ಯತೆಗಳು ಮಾನವರೇ ನಿರ್ಮಿಸಿಕೊಂಡ ಕಂಟಕಗಳು. ಅವುಗಳನ್ನು ತೊಲಗಿಸಲು ಪ್ರಯತ್ನಿಸಿ ಪರಸ್ಪರರನ್ನು ಅರಿತು ಕೊಳ್ಳುವ ಹೊಂದಾಣಿಕೆ, ಮಾನವೀಯತೆ ಬೆಳೆಸಿಕೊಂಡಾಗಲೇ ವ್ಯಕ್ತಿಯ ಉದ್ಧಾರ ಎಂಬುದನ್ನು ಅಚಲವಾಗಿ ನಂಬಿದ್ದರು. ಮೂಢ ನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು.” (ಪು. ೭೭) ತಮ್ಮ ಅನುಭವಕ್ಕೆ ಗೋಚರವಾಗುವ ವಸ್ತುವನ್ನಿಟ್ಟುಕೊಂಡು ಕತೆಗಾರ ಕತೆಯನ್ನು ರಚಿಸಿದಾಗ ಅದರಲ್ಲಿ ವಿಶ್ವಸನೀಯತೆ (Credibility) ಇರುತ್ತದೆ. ಅಂದಿನ ಪ್ರಪಂಚದಲ್ಲಿ ಆನಂದರು ಇದ್ದುದು ಮಧ್ಯಮ ವರ್ಗದಲ್ಲಿ, ಅದೂ ಕೆಳ ಮಧ್ಯಮ ವರ್ಗದಲ್ಲಿ ಅದಕ್ಕೆ ಅನುಗುಣವಾಗಿ ವಸ್ತುಗಳನ್ನೇ ಅವರು ಆಯ್ದುಕೊಂಡದ್ದು ಸಹಜ. ಒಂದು ಕಥೆಯಲ್ಲಿ ಆನಂದರು ಮುರಳಿ ಎಂಬ ಚಿತ್ರ ಕಲಾವಿದನನ್ನು ಚಿತ್ರಿಸಿದ್ದಾರೆ. ಇದು ಯುಕ್ತ. ಏಕೆಂದರೆ ಅವರೂ ಚಿತ್ರಕಾರರಾಗಿದ್ದರು. ಇದನ್ನು ಡಾ. ವಿಜಯಾಹರನ್ ನಿಷ್ಪಕ್ಷಪಾತವಾಗಿ ಹೇಳಿದ್ದಾರೆ: “ಇವರ ಕಥಾ ಜಗತ್ತು ಬಹುಸೀಮಿತ ಎನ್ನಬಹುದು. ಇವರ ಸತ್ತ್ವಶಾಲಿ ಕಥೆಗಳೆಲ್ಲ ಸರಸ ಶೃಂಗಾರದ ಸುಂದರ ಚಿತ್ರಗಳೇ ಆಗಿರುತ್ತವೆ. ರೇಷಿಮೆಯ ನಯ, ನುಣುಪು, ಹೊಳಪು ಮತ್ತು ಹೂವಿನ ಕೋಮಲತೆ, ಮಾಧುರ್ಯ ಇವರ ಕತೆಗಳ ಆಕರ್ಷಕ ಗುಣಗಳಾಗಿವೆ” ಎಂಬ ಎಚ್.ಜಿ. ಲಕ್ಕಪ್ಪಗೌಡರ ಅಭಿಪ್ರಾಯವನ್ನು ಉದಾಹರಿಸಿ ಅನುಮೋದಿಸಿದ್ದಾರೆ. ಯಾವಾಗಲೂ ಆನಂದರನ್ನು ಹೊಗಳಿದ್ದಾರೆ ಎಂದೇನಿಲ್ಲ. ಅವರ ಇತಿಮಿತಿಗಳನ್ನು ಗುರುತಿಸಿ ಗುಣ ದೋಷಗಳನ್ನು ತೋರಿಸಿದ್ದಾರೆ. ಸಾಹಿತ್ಯ ವಿಮರ್ಶೆ ಸಾಗಬೇಕಾದ ದಾರಿ ಇದೇ. ಚಿನ್ನವನ್ನು ಹಿತ್ತಾಳೆ ಎಂದು ಜರಿಯಬಾರದು. ಹಿತ್ತಾಳೆಯನ್ನು ಚಿನ್ನವೆಂದು ಶ್ಲಾಘಿಸಬಾರದು. ಡಾ. ವಿಜಯಾಹರನ್ ನಿಷ್ಪಕ್ಷಪಾತ ದೃಷ್ಟಿಯಿಂದ ವಿಮರ್ಶೆಮಾಡಿ ನ್ಯಾಯವನ್ನು ಒದಗಿಸಿದ್ದಾರೆಂದು ಹೇಳಲು ಎರಡು ಉದಾಹರಣೆಗಳನ್ನು ನೋಡೋಣ: ೧) “ನಲವತ್ತೆಂಟು ಪುಟವಿರುವ ಪದ್ಮಪಾಕ ಕಥೆಯಲ್ಲಿ ಪದ್ಮಳಿಗೆ 'ಮಡ್ಲು' ತುಂಬುವ ಪತಿಯ ಆಶಯವೇ ಕತೆಯ ಗುರಿ. ಅದಕ್ಕಾಗಿ ನಡೆಯುವ ಬೇಸರ ತರಿಸುವ ಸಂಭಾಷಣೆಗಳಲ್ಲಿ ಪ್ರಬಂಧಗಳಿಗಾಗುವಷ್ಟು ವಿಷಯಗಳು ಸೇರಿರುವುದು, ಕಥೆಯು ಸೋಲುವುದಕ್ಕೆ ದಾರಿ ಮಾಡಿಕೊಟ್ಟಂತಿದೆ” (ಪುಟ. ೯೮). ೨) “ದೌಪದಿ 'ವಸ್ತ್ರಾಪಹರಣ'ಕ್ಕೆ ಒಳಗಾದ ಅನಂತರ ಅಂತಃಪುರಕ್ಕೆ ಹಿಂದಿರುಗಿದಾಗ ಇದ್ದಿರಬಹುದಾದ ಆಕೆಯ ಸ್ಥಿತಿಗತಿಯನ್ನು ಚಿತ್ರಿಸಬೇಕೆಂದು ಚಿತ್ರಗಾರಪತಿ ಕಥಾನಾಯಕ ಕಟ್ಟಿಸಿಕೊಂಡು, ಆ ಚಿತ್ರ ರಚನೆಗೆ ತನ್ನ ಮುದ್ದಿನ ಮಡದಿ ಪದ್ಮಳನ್ನು ರೂಪದರ್ಶಿಯಾಗಿ ಕೂರಲು ಮನ ಒಲಿಸುವುದು, ದ್ರೌಪದಿಯ ವ್ಯಕ್ತಿತ್ವವನ್ನು ನಿರೂಪಿಸುವುದು ಕರೀಹುಡುಗಿ ಕತೆಯ ವಸ್ತು, ಮಹಾಭಾರತದಲ್ಲಿನ ಈ ಗಂಭೀರ ಘಟನೆಯ ಬಗ್ಗೆ ಪ್ರಸ್ತಾಪಿಸುವಾಗಲೂ ಪದ್ಮಾನಂದರ ಸರಸ ಸಂಭಾಷಣೆಗಳ ಜಾಡು ಬದಲಾಗುವುದಿಲ್ಲ. ಹಾಸ್ಯದ ಹೆಸರಿನಲ್ಲಿ ಮಹಾಭಾರತದಲ್ಲಿನ ಪೌರಾಣಿಕ ಪಾತ್ರವನ್ನೇ ಲೇವಡಿ ಮಾಡುವುದು ಎಷ್ಟು ಉಚಿತ ಎಂಬ ಪ್ರಶ್ನೆ ಬರದೇ ಇರುವುದಿಲ್ಲ. ಇಲ್ಲಿನ ಪದ್ಮಳ ಪಾತ್ರದ ಅತಿ ಮಾತುಗಾರಿಕೆಯ ಅನುಚಿತ ವರ್ತನೆಯಿಂದಾಗಿ ಕಥೆಯ ಬಂಧವೇ ಸಡಿಲವಾಗಿದೆ ಎನಿಸುವುದರೊಂದಿಗೆ ಅನುಚಿತ, ಅಸಹಜ ಸಂಭಾಷಣೆಗಳು, ಸಮರ್ಥವಾಗಿ ಮೂಡಿಬರಬಹುದಾಗಿದ್ದ ಕಥಾವಸ್ತುವಿನ ಜಾಡನ್ನು ತಪ್ಪಿಸಿ ಹೇಗೆ ಬಾಳು ಜಾಳಾಗಿಸಬಹುದು ಎಂಬುದಕ್ಕೂ ನಿದರ್ಶನದಂತಿದೆ”(ಪು. ೯೯). ಈ ಮಾತುಗಳಲ್ಲಿ ಆನಂದರನ್ನು ಟೀಕಿಸುವ ವಿಜಯಾಹರನ್ ಯೋಗ್ಯ ಸ್ಥಳಗಳಲ್ಲಿ ಪ್ರಶಂಸೆಯನ್ನೂ ಹರಿಸಿದ್ದಾರೆ. “ಜೀವಂತಿಕೆಯಿಂದ ನಳನಳಿಸುವ ಈ ಪಾತ್ರಗಳ ಮೂಲಕ ಸ್ನೇಹ, ಪ್ರೇಮ, ನಿರ್ಮಲ ಪ್ರಾಮಾಣಿಕತೆಗಳೆಂಬ ಬದುಕಿನ ಸಾರಸ್ವತದ ಕಡೆಗೆ ಓದುಗನ ಮನಸ್ಸು ಚಲಿಸುವಂತೆ ಮಾಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ (೧೪೩). “ಆನಂದರ ಕೆಲವು ಕತೆಗಳಲ್ಲಿನ ಸೊಗಸಾದ ಮುಕ್ತಾಯ. ಅವರ ಚಿತ್ರಕ್ಕೆ ಶಕ್ತಿಗೆ ದ್ಯೋತಕವಾಗಿದ್ದು ಓದುಗರ ಮೇಲೆ ತೀವ್ರ ಪರಿಣಾಮವನ್ನು ಬೀರುವುದರಲ್ಲಿ ಯಶಸ್ವಿಯಾಗುತ್ತದೆ; ಕತೆಗೆ ಪೂರಕವಾಗುವಂತಹ ರೂಪಕ ಚಿತ್ರಗಳಂತೆ ಪರಿಣಮಿಸಿ ವಾಚಕರ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ” (ಪು.೧೬೪). ಆನಂದ ಕಾವ್ಯನಾಮದ ಅಜ್ಜಂಪುರ ಸೀತಾರಾಮ್ ಆಂಗ್ಲ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ ಅಲ್ಲಿರುವ ಶ್ರೇಷ್ಠ ಕಥೆಗಳ ಮತ್ತು ಕೆಲವು ಕಾದಂಬರಿಗಳ ಅನುವಾದನವನ್ನು ರೂಪಾಂತರವನ್ನೂ ಮಾಡಿರುವ ವಿಷಯವನ್ನು ವಿಜಯಾಹರನ್ ಓದುಗರ ಗಮನಕ್ಕೆ ತಂದಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಸಂದ ವಿಶಿಷ್ಟ ಸೇವೆ ಎಂದು ನಾವು ಪರಿಗಣಿಸಬೇಕು. ಯಾವುದೇ ಭಾಷೆಯದಾದರೂ ಸರಿ, ಅದು ಉತ್ತಮ ಕಥೆಯಾಗಿದ್ದರೆ ಕನ್ನಡದಲ್ಲಿ ಬರಬೇಕು. ನಮಗೆ ವಿಶಾಲ ಜಗತ್ತಿನ ಅನುಭವವಿಲ್ಲ. ಮಹಾನ್ ಲೇಖಕನು ತನ್ನ ಅನುಭವದ ಮೂಸೆಯಲ್ಲಿ ಜೀವನ ಸುವರ್ಣವನ್ನು ಕರಗಿಸಿ ಕಥೆ, ಕಾದಂಬರಿ, ಕವಿತೆ ಎಂಬ ಆಭರಣಗಳನ್ನು ರಚಿಸಿರುತ್ತಾನೆ. ಅವು ನೇರವಾಗಿ ಅನುವಾದದಿಂದ ಅಥವಾ ಬಳಸು ದಾರಿಯಾದ ರೂಪಾಂತರದಿಂದ ಕನ್ನಡಕ್ಕೆ ಬರಬೇಕು. ಅದೇ ರೀತಿಯಲ್ಲಿ ಕನ್ನಡದ ಶ್ರೇಷ್ಠ ಕೃತಿಗಳು ಭಾರತ ದೇಶದ ಬೇರೆ ಭಾಷೆಗಳಿಗೂ ವಿಶ್ವದ ಪ್ರಮುಖ ಭಾಷೆಗಳಿಗೂ ತರ್ಜುಮೆ ಮೂಲಕ ತಲುಪಬೇಕು. ಆನಂದರ ಕಥೆಗಳು ಹೀಗೆ ಎಷ್ಟು ಭಾಷಾಂತರಗೊಂಡಿವೆ ಎಂಬುದನ್ನೂ ವಿಜಯಾಹರನ್ ತಿಳಿಸಿದ್ದಾರೆ. ಆನಂದರಿಗೆ ಇಂಗ್ಲೀಷ್ ಭಾಷೆಯಲ್ಲಿ ನೈಪು,ಣ್ಯ ವಿದ್ದುದರಿಂದ ತಮ್ಮ ಕೆಲವು ಕತೆಗಳನ್ನು ಅವರೇ ಇಂಗ್ಲೀಷ್‌ಗೆ ಅನುವಾದಿಸಿದ್ದರು ಎಂಬ ಮಾಹಿತಿಯೂ ಇಲ್ಲಿ ಸಿಕ್ಕುತ್ತೆ. ಆನಂದರು ಏಕಾಂಕ ನಾಟಕಗಳನ್ನೂ ಬರೆ ಅವುಗಳ ಗುಣಗಳನ್ನೂ ದೋಷಗಳನ್ನೂ ವಿಜಯಾಹರನ್ ಸೂಚಿಸಿದ್ದಾರೆ. ಅಲ್ಲದೆ ಆನಂದರು ಪದ್ಯಗಂಧಿ ಗದ್ಯದಲ್ಲಿ ರಚಿಸಿದ್ದ 'ಪಕ್ಷಿಗಾನ' ಎಂಬ ಕೃತಿಯ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ. ಇಲ್ಲಿ ಆನಂದರ ಕಾವ್ಯ ಸುಧಾಗಂಗೆ ಹರಿದಿದೆ. ಕತ್ತಲ್ಗಡಲ ತಳದಲ್ಲಿತ್ತು ಲೋಕ ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ ನಿಶಾಸುಂದರಿಯ ವಜ್ರಖಚಿತ ನೀಲಾಂಬರದ ಹರಡಿದ ಸೆರಗಿನಂತೆ ಶೋಭಿಸುತ್ತಿತ್ತು ನೀರವ! ನಿಶ್ಚಲ! ಇತ್ಯಾದಿ ವಚನಗಳು. ಇವುಗಳನ್ನೆಲ್ಲ ಅದ್ಭುತವಾಗಿ ವಿಮರ್ಶಿಸಿದ್ದಾರೆ ವಿಜಯಾ ಹರನ್. ಇಷ್ಟಲ್ಲದೆ ಆನಂದರ ಅಪ್ರಕಟಿತ ಸಾಹಿತ್ಯದ ಮೇಲೂ ಬೆಳಕನ್ನು ಚೆಲ್ಲಿದ್ದಾರೆ. ಹೀಗಾಗಿ ಆನಂದರ ಸಮಗ್ರ ಜೀವನದ ಮತ್ತು ಸಂಪೂರ್ಣ ಸಾಹಿತ್ಯದ ಗಂಭೀರ ನಿರೂಪಣೆ ಈ ಗ್ರಂಥದಲ್ಲಿದೆ. ಇದೊಂದು ಸಾರ್ಥಕ ಅಧ್ಯಯನ. ಡಾ.ವಿಜಯಾಹನ್ ಅವರಿಗೆ ಹಾರ್ದಾಭಿನಂದನೆ. ಆಕರ : ಮೈಸೂರು ಮಿತ್ರ ೨೮.೬.೨೦೨೩

Saturday, June 24, 2023

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಮಂಜುನಾಯಕ ಚಳ್ಳೂರು ಭಾಜನ-2023

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಮಂಜುನಾಯಕ ಚಳ್ಳೂರು ಭಾಜನ: ಯುವ ಕತೆಗಾರ ಮಂಜುನಾಯಕ ಚಳ್ಳೂರು ಅವರ 'ಫೂ ಮತ್ತು ಇತರ ಕಥೆಗಳು' ಕಥಾ ಸಂಕಲನಕ್ಕೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ.

Sunday, June 18, 2023

ರಾಮು ಕವಿತೆಗಳು- -ಮಳೆ , ನೀನಾದರೂ

ಮಳೆ ಬಂತು ಮಳೆ ಆಹ ಮುಳ್ಳುಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ. ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು – ನನ್ನ ಹುಡುಗಿಯ ಕೆನ್ನೆಗುಳಿ ಮೇಲು, ಈ ಹಾಡ ಮೇಲು. ಆ ದಿಕ್ಕು ಈ ಗಾಳಿ ಆ ಬಾನು ಎಲ್ಲ ದರೊಳಗೆ ತಲ್ಲೀನ. ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ ಲೋಕ. ನಾದ ಅಲ್ಲ ಇದು ಗುಡುಗು ಆದರೂ ಹಾಡೆ. ಆ ಮರಳ ತೊಡೆಯೇರಿ ಇಳಿದಾಡೊ ತೊರೆ. ಆ ತೊರೆಯ ಕಂಡು ಜಾರುವ ಮರಳು ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ - ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ – ನನ್ನ ಹಸುವಿಗೆ ಮೇವು ಇಕ್ಕಿ ನಾನಿಗೆ ಮುತ್ತು ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ. ಮುಳ್ಳು ಮುಳ್ಳಿಗೆ ಹೂವು ಎಲ್ಲೆಲ್ಲು ಅವತಾರ’ ಈ ಕಾಫಿ ಬಟ್ಟಲೊಳಗೆ, ಈ ರೊಟ್ಟಿ ತುಂಡೊಳಗೆ ಅವನ ಅಂಬಲಿಯೊಳಗೆ, ಈ ಚಿಟುಕೆ ನಶ್ಯದೊಳಗು ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು ತೊಯ್ದು ಪಟ ಪಟ ನಿಂತ ಈ ಮರದ ವಾಸನೆಯಂಥ ವಾಸನೆಯ ಜೀವಂತ ದೇವರು ಬಂತು, ಇದೊ ಹಿಡಕೊ ಮುಟ್ಟು. ಯಾವುದೋ ನಿಸ್ಸೀಮ ದೀಪದ ಕುಡಿಯ ನೆಟ್ಟ ಹಾಗೆ ನೆನ್ನೆ ಬೋಳುಬೋಳಾಗಿದ್ದ ಮರದಿಂದ ಇವತ್ತು ಥರಾವರಿ ಚಿಗುರು ಕಣ್ಣು ಈ ಮಳೆದನಿಯಲ್ಲಿ ಹೊಳೆದನಿ ಮಲಗಿ, ಹೊಳೆದಡದ ಬಳೆದನಿ ಮಲಗಿ ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ ಮಳೆಬೆರಳಲ್ಲಿ ರೋಮಾಂಚತಂತಿಯ ಮೀಟಿ ದೇವಜಾತಿ ಎಂಥ ಲಯವಿನ್ಯಾಸ ಅಮೃತ ಗಾನ ನಾಳೆ ತರಗಾಗೊ ನಿನ್ನೆಯ ಚಿಗುರೆ, ತರಗಾಗಿ ಮತ್ತೆ ಚಿಗುರಾಗಿ ಬಿದ್ದೆದ್ದು ಜನ್ಮಗಳ ಹರಿಸುತಿಹ ಮಳೆಯೆಂಬ ಹೊಳೆಯೇ ಈ ಚಿಗುರ ಮುಟ್ಟುತಲೆ, ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ! ಹಾಗಾಗದಿರಲಿ ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು ನನ್ನ ಅಂಗೈಯೊಳಗೆ ಕುಣಿದಾಡಲಿ ಕುಣಿಕುಣಿದು ಉದಿರಾಡಲಿ. ಇದೊ ಇನ್ನೊಂದು ಹನಿ ಬಿತ್ತು ಈ ಬೀಜ ಕಣ್ತೆರೆದು ಚಿಗುರಾಡಲಿ ********* ನೀನಾದರೂ ಚಿಟ್ಟೆಯಾಗಬೇಕಿರೊ ಹುಳ ಚಿಗುರೆಲೆಯ ಮುಕ್ಕುತ್ತ ಗಿಡದ ಮೇಲೆ ಅದ ಹಿಡಿದು ಹಸಿದ ಮರಿಗಳಿಗೆ ಗುಟುಕಿಡಲಿರೊ ಹಕ್ಕಿ ಕೊಕ್ಕು ಗಿಡದ ಚಿಗುರ ಸಂಕಟವನ್ನೂ ಹಕ್ಕಿಯ ಹಸಿವನ್ನೂ ಹುಳದ ನೋವನ್ನೂ ಒಟ್ಟಿಗೆ ನೋಡುತ್ತ ನಾನು ಯಾರ ಪರ ನಿಲ್ಲಲಿ ಹಸಿವೆಂಬ ಸುಡುಗಾಡ ಹೆಜ್ಜೆಹೆಜ್ಜೆಗು ಸೃಷ್ಟಿಸಿದ ದೈವವೇ ನೀನಾದರೂ ಒಂದು ನಿಲುವ ತಾಳು. ರೈತನ ಸಾವು ಇಂದಿನನುವರಕ್ಕೆ ತನ್ನ ಬಾಳೆ ಬಲಿ ಎಂದು ತನ್ನನ್ನೆ ನೈವೇದ್ಯ ತಣಿಗೆಯಲ್ಲಿಟ್ಟುಕೊಂಡ. ಇಂದೆ ತೀರಲಿದೆ ಕರುಳ ತೊಡಕು. ಬಗೆಯ ತಂಬಿಗೆಯಲ್ಲಿ ನೂರೊಂದು ದೇವನದಿಗಳ ನೀರ ನೆನೆದು ಕರೆಸಿ ಅಂಗುಲಂಗುಲ ತೊಳೆದು ಆ ಮೈಗೆ ನಿಟ್ಟುಸಿರ ಘನವಸನ ತೊಡಿಸಿ ಅಂಗೈಗೆ ಮನದ ಮನೆದೈವ ಬರಿಸಿಕೊಂಡು ಕರುಳತುದಿ ಚಿವುಟಿ ಎಡೆಯಿಟ್ಟು ತಾ ಹಿಡಿದ ನೀರಾಜನದಲ್ಲಿ ಬೆಳಗಿದ್ದು ತನ್ನದೇ ಪ್ರೇತ-ಮುಖ – ಬಿದ್ದ ತೋಳು. ತಾನು ಬಿತ್ತದ ಬೀಜ ಮೊಳಕೆಯಲೆ ಸತ್ತಿತ್ತು ಹೊಲದ ತುಂಬಾ ಬೆಳೆದಿದ್ದು ವಿಷತೀಟೆ ಹಾವು ಮೆಕ್ಕೆ’ ತನ್ನ ಕರುಳಕುಡಿಯೊಂದದನ್ನೂ ದಿನದಿನದ ಸೇನಾನಿ ಪಟ್ಟಕ್ಕೆ ನಿಗದಿ ಮಾಡಿ. ಪೈರಹುಳಕ್ಕೆಸೆದ ಪಾಷಾಣಬಾಣವನ್ನೇ ತನ್ನೆದೆಗೆ ಗುರಿಯಿಟ್ಟು ಹೆದೆಯೆಳೆದು ಭೋರ್ಗರೆಸಿ ಜೀವ ತೆಗೆದ. ನಾಳೆ ನಾಳಿದರೊಳಗೆ ತೀರುತ್ತದೆ ಇಡೀ ಸಂಸಾರದ ಋಣದ ತೊಡಕು. ಮೋಡದೊಳಗಿದ್ದಾಗ ಸಿಡಿಲ ಮಗ್ಗುಲಲ್ಲೇ ಇದ್ದ ಪುಟ್ಟ ಹನಿ ಹೇಗೋ ಬಚಾವಾಗಿ ಇಳಿದು ಬಂದು ಈಗ ಈ ಕೆಸವಿನೆಲೆ ಮೇಲೆ ಕೂತಿದೆ ಇನ್ನೂ ನಡುಗುತ್ತಿದೆ. ************* Chittanna Navar ಅವರಿಗೆ Reply3h H.S.raghavendra Rao 6h ·

ಎಚ್ ಎಸ್ ರಾಘವೇಂದ್ರ ರಾವ್ - ರಾಮು ಕವಿತೆಗಳ ಕವಿ ರಾಮು

ನೊಂದ ಜೀವಂ ತಣ್ಣಗಾಯ್ತು…” ಈ ರಾಮು ಬಗ್ಗೆ ಏನು ಬರೆಯುವುದು? ಹೀಗೆ ಬರೆಯುತ್ತಿರುವೆನೆಂದು ಗೊತ್ತಾದರೆ, “ದಮ್ಮಯ್ಯ ಅಂತೀನಿ. ಬೇಡ ಸಾರ್” ಎಂದು ಕಾಲು ಹಿಡಿಯುವವರು ಅವರು. ಈಗ ಅವರು ಇಲ್ಲ, ನನ್ನಂತಹವರು ಬರೆಯಬಹುದು. ಅವರ ಕ್ಷಮೆ ಕೇಳಿ ಈ ಬರೆಹ. ಸಕಲ ಜೀವಾತ್ಮರನ್ನೂ ಎದೆಯೊಳಗಿಟ್ಟುಕೊಂಡು ಪೊರೆಯುತ್ತಿದ್ದ ಈ ಗೆಳೆಯನ ಕವಿತೆ ಮತ್ತು ಜೀವನ ಎರಡರ ಮೂಲಸೆಲೆಯೂ ಒಂದೇ. ಆದು ಎಂದಿಗೂ ಬತ್ತದ ಪ್ರೀತಿಯ ಒರತೆ. ಅವರ ಜೀವನದ ಹಲವು ಹಂತಗಳನ್ನು ಒಟ್ಟಂದದಲ್ಲಿ ನೋಡುವ, ಇಂಥ ಬರೆಹದ ಪುಟ್ಟ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ನನ್ನದು. ಇವರು ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರನಾಗಿ, ಜನಪರವಾದ, ಜನರನ್ನು ತಲುಪಿದ ಪತ್ರಕರ್ತನಾಗಿ, (ಮೈಸೂರಿನ ‘ಆಂದೋಲನ’ ಪತ್ರಿಕೆಯ ‘ಹಾಡು-ಪಾಡು’ ಪುರವಣಿಯಲ್ಲಿ) ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ, ಎಳೆಯ ಕವಿಗಳ ಕಿವಿಯಾಗಿ, ನೋವು ತುಂಬಿದ ಬಾಣ-ಹಾಸಿಗೆಯಲ್ಲಿ ಮಲಗಿದ್ದರೂ “ಶುಭ ನುಡಿವ” ಶಕುನದ ಹಕ್ಕಿಯಾಗಿ ‘ತುಂತುಂಬಿ’ ಬದುಕಿದರು. ‘ಅಗ್ನಿಸೂಕ್ತ’, ‘ರಾಮು ಕವಿತೆಗಳು’ ಮತ್ತು ‘ವಿಷ್ಣುಕ್ರಾಂತಿ’ ಇವು ಇವರ ಅನುಮತಿಯಿಲ್ಲದೆ ಅಥವಾ ಇವರಿಂದ ಬೈಸಿಕೊಂಡು ಗೆಳೆಯರು ಹೊರತಂದ ಸಂಕಲನಗಳು. ‘ಅವು ಅಗ್ನಿಗೇ ಸೂಕ್ತ ಸಾರ್’ ಎಂದು ಅವರೇ ಜೋಕ್ ಮಾಡುತ್ತಿದ್ದರು. ಅವರು ಇಷ್ಟು ಕಡಿಮೆ ಬರೆದರೂ ಕನ್ನಡದ ಬಹಳ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ನಾನು ಪ್ರಾಣವನ್ನೇ ಪಣವಾಗಿಟ್ಟು ಹೇಳಬಲ್ಲೆ. ಕವಿತೆಗೆ ಬೇಕಾದ ಸಾಮಗ್ರಿಗಳು ಅವರಲ್ಲಿ ಇಡಿಕಿರಿದಿದ್ದ ಬಗೆ ಒಂದು ವಿಸ್ಮಯ. ವಿಷ್ಣುಕ್ರಾಂತಿ, ಬೀಬಿ ನಾಚ್ಚಿಯಾರ್, ಅಮ್ಮು-ವಂಕಿಳಂತಹ ನೀಳ್ಗವನಗಳು, ‘ಮಳೆ’, ‘ಅವನು-ಅವಳು’, ‘ಸುಗ್ಗಿ’, ‘ಅವಳು’ ಮುಂತಾದ ನೀಳ್ಗವನಗಳು ಮತ್ತು ಹತ್ತು ಹಲವು ಭಾವನಿಬಿಡವಾದ ಸಂಕೀರ್ಣ ಕವಿತೆಗಳು ಈ ಮಾತಿಗೆ ಸಾಕ್ಷಿ. ಇವುಗಳಿಂದ ಬಿಡಿ ಸಾಲುಗಳನ್ನು ತೆಗೆದು ಕೊಡುವುದು ಅಂತಹ ಕವಿತೆಗೆ ಮಾಢುವ ಅವಮಾನ. ನಾನು ಒಂದೋ ಎರಡೋ ಕವಿತೆಗಳನ್ನು ಇಡಿಯಾಗಿ ಕೊಡುತ್ತೇನೆ. ದಯವಿಟ್ಟು ಅವರ ಕವಿತೆಗಳನ್ನು ಓದಿ. ಸೃಜನಶೀಲತೆಯಂತೆಯೇ ಇವರ ವಿಮರ್ಶನ ಶಕ್ತಿಯೂ ಹರಿತವಾದುದು. ಬರವಣಿಗೆಯ ಹೃದಯವನ್ನು ಗುರುತಿಸುವ, ಅದರ ಕೊರತೆಗಳನ್ನೂ ಗ್ರಹಿಸುವ ಶಕ್ತಿ ಅವರಿಗ ಇತ್ತು. ಅವರು ‘ಐಕಾನು’ಗಳಿಗೆ ಮರುಳಾಗದೆ ದಿಟವನ್ನು ಅರಸುತ್ತಿದ್ದರು. ‘ಕುಮಾರವ್ಯಾಸ ಭಾರತ’ ಮತ್ತು ‘ಆದಿಪುರಾಣ’ಗಳನ್ನು ಕುರಿತು ಬರೆದ ಲೇಖನಗಳು ಮತ್ತು ತೋಂಡಿಯಲ್ಲಿ ಹಂಚಿಕೊಂಡ ಅನಿಸಿಕೆಗಳು ಈ ಮಾತಿಗೆ ಸಾಕ್ಷಿ. ಹಾಗೆ ನೋಡಿದರೆ ಅವರು ಕಿ.ರಂ. ನಾಗರಾಜ ಅವರ ಫಿರ್ಕಾಗೆ ಸೇರಿದವರು. ಆದರೆ ಅವರಂತೆ ನಾಡು ತಿರುಗಿ ಭಾಷಣಗಳನ್ನೂ ಮಾಡಲಿಲ್ಲ. ತಮ್ಮ ಆಸುಪಾಸಿನಲ್ಲಿ ಬಂದವರನ್ನು ಅವರು ಬೆಳೆಸಿದ ಬಗೆ ಅನುಪಮವಾದುದು. ಕೇವಲ ಸಾಹಿತ್ಯವಲ್ಲ, ಅದು ಲೋಕಶಿಕ್ಷಣ. ಈ ಮಾತಿಗೆ ಮೈಸೂರಿನ ಕುಕ್ಕರಹಳ್ಳಿಯ, ಅಷ್ಟೇ ಏಕೆ, ಇಡೀ ಕರ್ನಾಟಕದ ಹತ್ತು ಹಲವು ಗಂಡು ಹೆಣ್ಣು ಜೀವಗಳು ಸಾಕ್ಷಿ. ದೇಹದೇಗುಲದ ಬಗ್ಗೆ ಒಂದಿನಿತು ಲಕ್ಷ್ಯ ಕೊಟ್ಟಿದ್ದರೆ, ಸ್ವಾವಲಂಬನೆ-ಪರಾವಲಂಬನೆಗಳ ದ್ವಂದ್ವದ ಒಳಗುದಿ ನರಳಿಸದಿದ್ದರೆ ಈ ಬಾಳು ಇನ್ನಷ್ಟು ಮುಂದುವರೆಯುತ್ತಿತ್ತೇನೋ. ನಮ್ಮೆಲ್ಲರಿಗಾಗಿ, ಇವರನ್ನು ಇಷ್ಟು ಕಾಲ ಕಾಪಾಡಿಕೊಂಡ ರಾಮು ಅವರ ತಾಯಿ ಸುಶೀಲಮ್ಮನವರು, ರಾಜಿ, ಕುಮುದ, ವೇಣು, ಶೈಲಜ, ತುಕಾರಾಮ್, ರಾಘವೇಂದ್ರ, ಸಚ್ಚಿ, ಸ್ನೇಹ, ಓಂಕಾರ್, ಓ.ಎಲ್ ಎನ್, ದೂರವಿದ್ದರೂ ಅವರಿಗೆ ತುಂಬ ಹತ್ತಿರವಿದ್ದ ಆತ್ಮೀಯ ಜೀವಗಳು ಎಲ್ಲರಿಗೂ ಕೈಯೆತ್ತಿ ಮುಗಿಯುತ್ತೇನೆ. ‘ರಾಮು ಯೂನಿವರ್ಸಿಟಿ’ ಮುಗಿಯದಿರಲಿ. ಅದು ನಮ್ಮಲ್ಲಿ ನಿಮ್ಮಲ್ಲಿ ಉಳಿಯಲಿ, ಬೆಳೆಯಲಿ.

Sunday, April 23, 2023

Online talk on Kannada language by Prof. H. N. Shivaprakash

Recitation of A Flowering Tree (prose) by A.K.RAMANUJAN and Background ...ಎ’ ಕೆ. ರಾಮಾನುಜನ್

ಎಸ್ ಆರ್ ವಿಜಯಶಂಕರ - ಅನಿಲ್ ಗೋಕಾಕ್ ಅವರ " ಕನ್ನಡದ ವಿಸ್ಮಯ ವಿ. ಕೃ . ಗೋಕಾಕ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ವಿನಾಯಕ ಕೃಷ್ಣ ಗೋಕಾಕರು (1909-1992) ಕಳೆದ ಶತಮಾನದ ಕನ್ನಡ ಸಾಹಿತ್ಯದ ದೊಡ್ಡ ಹೆಸರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ಮುಂದೆ ಆಕ್ಸ್ ಫರ್ಡ್ ನಲ್ಲಿ ಓದಿ ಭಾರತಕ್ಕೆ ಹಿಂತಿರುಗಿದರು. ಸಾಂಗ್ಲಿ, ಹೈದರಾಬಾದ್, ವೀಸನಗರ, ಕೊಲ್ಲಾಪುರ, ಧಾರವಾಡ, ಬೆಂಗಳೂರು ಸಿಮ್ಲಾ ಹೀಗೆ ಹಲವು ಕಡೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದರು. ಅವರು ಉಪಕುಲಪತಿ ಹುದ್ದೆಯಲ್ಲಿದ್ದವರಾದರೂ ಗೋಕಾಕರ ವಿದ್ಯಾರ್ಥಿಗಳು ಅವರನ್ನು ಶೆಲ್ಲಿ, ಕೀಟ್ಸ್‌, ಶೇಕ್ಸ್‌ಪಿಯರ್ ಮೊದಲಾದವರನ್ನು ಭಾವನಾತ್ಮಕವಾಗಿ ಪಾಠ ಹೇಳಿ ತಮ್ಮ ಸಾಹಿತ್ಯಾನುಭವವಾಗಿಸಿದ ಗುರುಗಳೆಂದು ನೆನಪಿಸಿಕೊಳ್ಳುತ್ತಾರೆ. ಹಲವು ದೇಶಗಳ ಪ್ರವಾಸ ಮಾಡಿರುವ ಅವರು ಭಾರತದಲ್ಲಿ ಇಂಗ್ಲಿಷ್ ಭಾಷಾ ಬೋಧನೆ, ಸಾಹಿತ್ಯ, ಭಾಷಾ ಕಲಿಕೆಗಳಿಗೆ ಮೌಲಿಕ ಕೊಡುಗೆಯನ್ನಿತ್ತವರು. ಇಂಗ್ಲೀಷಿನಲ್ಲಿ ಬರೆಯುತ್ತಿದ್ದ ಅವರು ಬೇಂದ್ರೆಯವರ ಪ್ರಭಾವದಿಂದ ಕನ್ನಡದಲ್ಲಿ ಬರೆಯ ತೊಡಗಿದರು. ಅರವಿಂದ ತತ್ವಕ್ಕೆ ಹತ್ತಿರವಾದರು. ಗದ್ಯ, ವಿಮರ್ಶೆ, ಕಾದಂಬರಿ, ನಾಟಕ, ಮಹಾಕಾವ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡರು. ಅವರ ನವ್ಯಕಾವ್ಯ ಪ್ರಯೋಗಗಳೂ ಸೇರಿದಂತೆ- ವಿಮರ್ಶಕರು ಗೋಕಾಕರ ಸಾಹಿತ್ಯದಲ್ಲಿ ಕನಿಷ್ಟ ಆರು ಹಂತಗಳ ಬೆಳವಣಿಗೆಗಳನ್ನು ಗುರುತಿಸುತ್ತಾರೆ. ಅವರ ಜೀವನ ಯಾತ್ರೆ ಮತ್ತು ಸಾಹಿತ್ಯ ಪಯಣಗಳಿಗೆ ಹತ್ತಿರದ ಸಂಬಂಧವಿದೆ. ಇವೆರಡರೊಡನೆ ಇನ್ನಿತರ ವಿಚಾರಗಳೂ ಸೇರಿದ "ಕನ್ನಡದ ವಿಸ್ಮಯ ವಿ.ಕೃ. ಗೋಕಾಕ್" ಎಂಬ ಗ್ರಂಥವೊಂದನ್ನು ಈಚೆಗೆ ಅವರ ಸುಪುತ್ರ, ನಿವೃತ್ತ ಐ.ಎ.ಎಸ್. ಅಧಿಕಾರಿ ಅನಿಲ ಗೋಕಾಕರು ಪ್ರಕಟಿಸಿದ್ದಾರೆ. (ರಾಯಲ್ 1/4 ಆಕಾರದ 780ಕ್ಕೂ ಹೆಚ್ಚಿನ ಪುಟಗಳ ಈ ಗ್ರಂಥದ ಪ್ರಕಾಶಕರು- ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ). ತಮ್ಮ ತಂದೆಯವರ ಹುಟ್ಟಿನಿಂದ ಕೊನೆವರೆಗಿನ ಜೀವನಯಾತ್ರೆಯನ್ನು ಹಲವು ಮೂಲಗಳನ್ನು ಬಳಸಿಕೊಂಡು ಬರೆದಿದ್ದಾರೆ. ಪ್ರತಿ ಅಧ್ಯಾಯಗಳ ಕೊನೆಗಿನ ಆ ಮೂಲಗಳ ವಿವರಗಳಲ್ಲದೆ, ಈ ಸಮಗ್ರ ಕೃತಿಯೇ ಮುಂದಿನ ಗೋಕಾಕ ಸಾಹಿತ್ಯಾಧ್ಯಯನಕ್ಕೆ ಸಮರ್ಥವಾದೊಂದು ಆಕರ ಗ್ರಂಥವಾಗಿದೆ. ಗೋಕಾಕ್‌ ಅಧ್ಯಯನಕ್ಕೆ ಈ ಗ್ರಂಥ ಒದಗಿಸಬಹುದಾದ ಆಕರಗಳ ಒಂದೆರಡು ಉದಾಹರಣೆಗಳನ್ನಾದರೂ ನಾವಿಲ್ಲಿ ಗಮನಿಸಬಹುದು. ಮಹರ್ಷಿ ಅರವಿಂದರ ಜೀವನದೃಷ್ಟಿ ಹಾಗೂ ವಿಕಸನ ತತ್ವಗಳು ಜಗತ್ತಿನ ಪುನರುಜ್ಜೀವನಕ್ಕೆ ನೀಡಿದ ಕೊಡುಗೆಯನ್ನು ಚಿತ್ರಿಸುವ ಉದ್ದೇಶದಿಂದ ಗೋಕಾಕರು ರಚಿಸಿದ ʼತ್ರಿಶಂಕುವಿನ ಪ್ರಜ್ಞಾ ಪ್ರಭಾತʼ ಎಂಬ ದೀರ್ಘಕವನ 1965 ರಲ್ಲಿ ಪ್ರಕಟವಾಯಿತು. ಮುಂದೆ ಜ್ಞಾನಪೀಠ ಪ್ರಶಸ್ತಿ ಪಡೆದ ʼಭಾರತ ಸಿಂಧು ರಶ್ಮಿʼ ಕೃತಿಗೆ ಇದುವೇ ಹೇಗೆ ಮೊದಲ ಮೆಟ್ಟಿಲಾಯಿತು ಎಂಬುದನ್ನು ಈ ಗ್ರಂಥ ಗೋಕಾಕರ ಚಿಂತನೆಗಳ ಹಿನ್ನೆಲೆಯಲ್ಲಿ ತೋರಿಸಿಕೊಡುತ್ತದೆ. ಹಾಗೆಯೇ ಅವರು ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಎಡ್ವಾನ್ಸ್ಡ್ ಸ್ಟಡಿ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಅಲ್ಲಿ ಭಾರತೀಯ ಸಾಹಿತ್ಯ- ಸಂಸ್ಕೃತಿಗಳ ಬಗ್ಗೆ ನಡೆದ ವಿದ್ವತ್ ಗೋಷ್ಠಿಗಳು ಗೋಕಾಕರ ಮಹಾಕಾವ್ಯ ರಚನೆಗೆ ನೀಡಿದ ಪ್ರೇರಣೆಗಳೇನು ಎಂಬ ವಿವರವೂ ತಿಳಿಯುತ್ತದೆ. ಇಂತಹ ಗ್ರಂಥಗಳಲ್ಲಿರುವ ಮಾಹಿತಿ, ಘಟನೆಗಳು, ಉಪಕತೆಗಳು- ಎಲ್ಲವೂ ದೊಡ್ಡ ಲೇಖಕನೊಬ್ಬನ ಅಧ್ಯಯನಕ್ಕೆ ಪೂರಕ ಆಕರಗಳಾಗುತ್ತವೆ. ಈ ಕೃತಿಯ ಒಳಗೆ ಅಂತರ್ಗತವಾಗಿ ಇರುವ ಅರವಿಂದ ತತ್ವಗಳಿಂದ ಮಾಗಿದ ಗೋಕಾಕರು ಸಾಯಿಬಾಬಾ ರಿಂದ ಯಾಕೆ ಆಕರ್ಷಿತರಾದರು ಎಂಬ ಅವರ ಅಂತರಂಗ ನೋಟವನ್ನೂ ಗ್ರಂಥ ಕರ್ತರು ಕಾಣಿಸುತ್ತಾರೆ. ʼಭಾರತ ಸಿಂಧು ರಶ್ಮಿʼ ಯ ನಾಯಕ ವಿಶ್ವಾಮಿತ್ರ. ಸಪ್ತಸಿಂಧು ಎಂದರೆ ಏಳು ಸಮುದ್ರ ಅಥವಾ ನದಿಗಳು. ಈ ಮಹಾಕಾವ್ಯ ಸಂದರ್ಭದಲ್ಲಿ ಸರಸ್ವತಿ, ಸಿಂಧು ಮತ್ತು ಅದರ ಉಪನದಿಗಳಾದ ವಿತಸ್ತ (ಇಂದಿನ ಝೇಲಮ್)‌ ಸುತುದ್ರಿ (ಸತಲಜ್)‌ ಅಸಿಕಿಸಿ (ಚೆನಾಬ) ಪುರುಶ್ನಿ (ರಾವಿ) ವಿಪಾಸ (ಬಿಯಾಸ) ಹರಿಯುವ ಜಾಗ. ಅದರೊಡನೆ ಋಗ್ವೇದ ತತ್ವಗಳು, ಪೌರಾಣಿಕ ಪ್ರತಿಮಾ ಶಕ್ತಿ, ಆರ್ಯ-ದ್ರಾವಿಡ ಮಿಶ್ರ ರಕ್ತದ ರಾಜನ ಮೂಲಕ ಚಾರಿತ್ರಿಕ ಸೂಚನೆ- ಹೀಗೆ ಇದೊಂದು ಆಧುನಿಕ ಮಹಾಕಾವ್ಯ. ಸಪ್ತ ಕಿರಣ ಹಾಗೂ ಸಪ್ತಲೋಕಗಳ (ಭೂಹ, ಭುವಹ, ಸ್ವಾಹ, ಮಹರ, ಸತ್‌, ಚಿತ್‌, ಆನಂದ) ಸಾಂಕೇತಿಕತೆ ಮೂಲಕ ಕಾವ್ಯ ಚೇತನ- ಸಾಮರಸ್ಯಗಳನ್ನು ಅನ್ವಯಿಸಿ ತೋರಿಸುತ್ತದೆ. ಮಹಾಕಾವ್ಯ ರಚನೆಗೆ ಗೋಕಾಕರು ಮಾಡಿಕೊಂಡ ಹಲವು ತಯಾರಿಗಳ ವಿವರಗಳೂ ಕೃತಿಯೊಳಗೆ ಲಭ್ಯವಾಗುತ್ತವೆ. ಗೋಕಾಕರ ಸರಣಿ ಕಾದಂಬರಿ ʼಸಮರಸವೇ ಜೀವನʼ (1935, 1956, 1969) ನವೋದಯ ಚಿಂತನೆಗೆ ಗೋಕಾಕರು ನೀಡಿದ ಪ್ರಮುಖ ಕೊಡುಗೆಗಳಲ್ಲೊಂದು. 1920 ರ ದಶಕದ ಬ್ರಿಟಿಷ್‌ ಆಡಳಿತದ ಭಾರತದಿಂದ ಪ್ರಾರಂಭವಾಗುವ ಈ ಕಾದಂಬರಿ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಗಿ ಸಮುದ್ರ ದಾಟಿ ಇಂಗ್ಲೆಂಡಿನ ಆಕ್ಸ್ ಫರ್ಡ್ ತಲುಪುತ್ತದೆ. ಇದರ ಕೊನೆಯ ಭಾಗ ಗೋಕಾಕರು ಇಂಗ್ಲೀಷಿನಲ್ಲಿ ಬರೆದ ಕಾದಂಬರಿಯ ಕನ್ನಡ ಅನುವಾದ. ಲೇಖಕರ ಆತ್ಮಚರಿತ್ರೆಯನ್ನು ನೆನಪಿಸಬಲ್ಲ ಈ ಕಾದಂಬರಿ ಭಾಗಗಳ ರಚನೆಯ ಹಿನ್ನೆಲೆ ಹಾಗೂ ಜೀವನ ಚರಿತ್ರೆಯ ಸಾಂದರ್ಭಿಕ ವಿವರಗಳು ಗ್ರಂಥದ ಆಕರ ಮೌಲ್ಯವನ್ನು ಹೆಚ್ಚಿಸುತ್ತದೆ. ತಮ್ಮ ಆತ್ಮಾಭಿಮಾನ ಹಾಗೂ ತಾವು ನಂಬಿದ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ; ಮುಂದೆ ಜೀವನಕ್ಕೊಂದು ಉದ್ಯೋಗ ಇಲ್ಲದಿದ್ದರೂ ತಮ್ಮ ಹುದ್ದೆಗಳಿಗೆ ಹಲವು ಸಲ ರಾಜೀನಾಮೆ ನೀಡಿ ಹೊರಬಂದ ಗೋಕಾಕರ ತತ್ವನಿಷ್ಠೆ ಹಾಗೂ ಮನೋಸ್ಥೈರ್ಯದ ಬಗ್ಗೆ ಗೌರವ ಮೂಡುತ್ತದೆ. ಹತ್ತೊಂಬತ್ತು ಅಧ್ಯಾಯಗಳುಳ್ಳ ಈ ಗ್ರಂಥ ಗೋಕಾಕರ ಹಿರಿಯರು ಹಾಗೂ ಅವರ ಬಾಲ್ಯದ ಸವಣೂರಿನ ದಿನಗಳಿಂದ ಪ್ರಾರಂಭವಾಗಿ ಮುಂಬಯಿಯಲ್ಲಿ ಮಗನ ಮನೆಯಲ್ಲಿ ಕಳೆದ ಕೊನೆಯ ದಿನಗಳನ್ನೂ ದಾಖಲಿಸುತ್ತದೆ. ಇವುಗಳ ನಡುವೆ ಅವರು ಹಲವು ಜಾಗಗಳಲ್ಲಿ ಕೆಲಸ ಮಾಡಿದರು, ಹತ್ತಾರು ರಾಷ್ಟ್ರಗಳನ್ನು ನೋಡಿ ಬಂದರು. ಆದರೂ ಅವರ ಅಂತರಂಗದ ಆಡೊಂಬಲ ಧಾರವಾಡವೇ ಆಗಿತ್ತು. ಅದಕ್ಕೊಂದು ಪುಟ್ಟ ಸೂಚನೆ ಹೀಗಿದೆ: ಅನಾರೋಗ್ಯದಿಂದಾಗಿ ದೆಹಲಿಗೆ ಪ್ರಯಾಣ ಮಾಡಲು ಗೋಕಾಕರಿಗೆ ಸಾಧ್ಯವಾಗದು ಎಂದು ಅಂದಿನ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ. ನರಸಿಂಹರಾವ್ ತಾವೇ ಮುಂಬಯಿಗೆ ಬಂದು ಜ್ಞಾನಪೀಠ ಪ್ರಶಸ್ತಿ ನೀಡಿದರು. ಅದಾದ ಬಳಿಕ ತಮ್ಮ ಕೊನೆಯ ದಿನಗಳಲ್ಲೇ ಅದಮ್ಯ ಆಸೆಯಿಂದ ಗೋಕಾಕರು ಕಷ್ಟಪಟ್ಟು ಧಾರವಾಡಕ್ಕೆ ಹೋದ ವಿವರ ಇಲ್ಲಿದೆ. ಎಲ್ಲೂ ಅತಿ ಭಾವುಕತೆ ಇಲ್ಲದ ನಿರೂಪಣೆ, ಗ್ರಂಥದ ಆಕರ ಮೌಲ್ಯವನ್ನು ಹೆಚ್ಚು ಮಾಡಿದೆ. ಗೋಕಾಕರು ತೀರಿಹೋಗಿ 28 ವರುಷಗಳ ಬಳಿಕ ಈ ಗ್ರಂಥ ಹೊರಬಂದಿದೆ. ಇಂದಿನ ಸಾಹಿತ್ಯದ ವಿದ್ಯಾರ್ಥಿಗಳು ಅಥವಾ ಅವರ ಹಲವು ಅಧ್ಯಾಪಕರೂ ಗೋಕಾಕರನ್ನು ನೋಡಿರುವುದು ಸಾಧ್ಯವಿಲ್ಲ. ಅನೇಕ ವಿದ್ಯಾರ್ಥಿಗಳು ಡಾ. ಸುರೇಂದ್ರನಾಥ ಮಿಣಜಗಿಯವರು ಗೋಕಾಕರ ಬಗ್ಗೆ ಬರೆದಿರುವ ಮೊನೋಗ್ರಾಫ್ ಪುಸ್ತಕದ ಕೊನೆಯಲ್ಲಿರುವ ಗೋಕಾಕರ ಕೃತಿಗಳ ಪಟ್ಟಿಯನ್ನು ಗುರುತು ಹಾಕಿಕೊಳ್ಳುವುದನ್ನು ಲೈಬ್ರೆರಿಗಳಲ್ಲಿ ಗಮನಿಸಿದ್ದೇನೆ. ಬಹುಶಃ ಈ ಗ್ರಂಥದ ಮುಂದಿನ ಮುದ್ರಣದಲ್ಲಿ ಗೋಕಾಕರ ಎಲ್ಲಾ ಕೃತಿಗಳ ಮೊದಲ ಮುದ್ರಣ ವಿವರ ಸಹಿತ ಅವರಿಗೆ ಸಂದ ಪ್ರಶಸ್ತಿಗಳು, ಅವರ ಬಗ್ಗೆ ಬಂದ ಮುಖ್ಯ ಕೃತಿಗಳ ವಿವರ ಇತ್ಯಾದಿಗಳನ್ನು ಗ್ರಂಥದ ಕೊನೆಗೆ ನಮೂದಿಸುವುದರಿಂದ ಗೋಕಾಕರ ಮುಂದಿನ ಅಧ್ಯಯನಕ್ಕೂ ಸಹಕಾರಿ. ಕನ್ನಡ, ಇಂಗ್ಲಿಷ್ ಭಾಷೆಗಳು ಸೇರಿ ಗೋಕಾಕರು 75 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸುವುದರಿಂದ ಅಂತಹ ಅನುಬಂಧಗಳ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ. ಸಾಹಿತ್ಯಾಸಕ್ತರಲ್ಲ ದ ಕನ್ನಡಿಗರಿಗೂ ಗೋಕಾಕ್ ವರದಿ ಬಗ್ಗೆ ತಿಳಿದಿರುತ್ತದೆ. ಕರ್ನಾಟಕದ ಶಿಕ್ಷಣ ಪದ್ಧತಿಯಲ್ಲಿ ಕನ್ನಡಕ್ಕೆ ಕೊಡಬೇಕಾದ ಸ್ಥಾನಮಾನದ ಕುರಿತಾಗಿ ಗೋಕಾಕ ಸಮಿತಿ ನೀಡಿದ ಈ ವರದಿ ರಾಜ್ಯದಾದ್ಯಂತ ದೊಡ್ಡ ಆಂದೋಲನವನ್ನು ಸೃಷ್ಟಿಸಿತ್ತು. ಈ ವರದಿಯ ಹಿಂದೆ ಗೋಕಾಕರಿಗಿದ್ದ ಚಿಂತನಾಕ್ರಮ, ಇಂಗ್ಲಿಷ್ ಬೋಧನಾ ಕ್ರಮಗಳ ಬಗ್ಗೆ ಹೈದರಾಬಾದಿನಲ್ಲಿದ್ದಾಗ ನಿರೂಪಿಸಿದ ನೀತಿ ನಿಯಮಗಳಿಂದ ಪಡೆದ ಅನುಭವ ಇತ್ಯಾದಿ ಬಹಳ ಚರ್ಚಿತವಾಗದ ಹಲವು ವಿವರಗಳು ಇಲ್ಲಿವೆ. ಅದರೊಡನೆ ನ್ಯಾಯಾಲಯಗಳಲ್ಲಿ ಗೋಕಾಕ್ ವರದಿ ಪರ-ವಿರೋಧ ನಡೆದ ವಾದಗಳು, ನ್ಯಾಯಾಲಯದ ತೀರ್ಪು; ಹೀಗೆ ಹಲವು ಆಕರ ಸಂಗ್ರಹಗಳೂ ಸಾಹಿತ್ಯೇತರ ಆಸಕ್ತರಿಗೂ ಇದನ್ನೊಂದು ಪರಾಮರ್ಶನ ಗ್ರಂಥವನ್ನಾಗಿಸಿದೆ. ನಿತ್ಯದ ದೈನಿಕದಲ್ಲೂ ಸೃಜನಶೀಲ ಲೇಖಕರಿಗೆ ಕ್ರಿಯಾಶೀಲ ವಿವರಗಳಿರುತ್ತವೆ. ಗೋಕಾಕರಿಗೆ ಪ್ರಿಯವಾಗಿದ್ದ ಸವಣೂರಿನ ನಸ್ಯ ಹಾಕುವ ಅಭ್ಯಾಸ, ಹೊರರಾಜ್ಯಗಳಲ್ಲಿ ಕನ್ನಡಿಗರನ್ನು ಕಂಡಾಗ ಉಕ್ಕುತ್ತಿದ್ದ ಪ್ರೀತಿ, ತಮ್ಮ ಆದರ್ಶಕ್ಕಾಗಿ ಉದ್ಯೋಗಗಳಿಗೆ ರಾಜೀನಾಮೆ ನೀಡಿದಾಗಲೆಲ್ಲಾ ಸಣ್ಣಪುಟ್ಟ ಹಣಕಾಸಿನ ಬಗೆಗೂ ಮಾಡಬೇಕಾಗುತ್ತಿದ್ದ ಜಾಗೃತೆ- ಹೀಗೆ ಬದುಕಿನ ಹಲವು ವಿವರಗಳು ಹೊರಗೆ ಗಂಭೀರವಾಗಿ ಕಾಣುತ್ತಿದ್ದ ಗೋಕಾಕರ ನಿತ್ಯಜೀವನದ ಸರಳ ವ್ಯಕ್ತಿತ್ವವನ್ನು ತೋರಿಸಿಕೊಡುತ್ತದೆ. ಅವರು ಪತ್ರ ಇತ್ಯಾದಿ ದಾಖಲೆಗಳನ್ನು ಜೋಪಾನ ಮಾಡುತ್ತಿದ್ದ ಕ್ರಮದಿಂದಾಗಿ ಅವರ ಸಮಕಾಲೀನರಾಗಿದ್ದ ಕವಿ ಪೇಜಾವರ ಸದಾಶಿವರಾಯರ ಆಧುನಿಕ ಚಿಂತನೆಗೂ, ಗೋಕಾಕರ ನವೀನ ಚಿಂತನೆಗಳಿಗೂ ಇದ್ದ ವ್ಯತ್ಯಾಸಗಳನ್ನು ತೋರಿಸಿಕೊಡುತ್ತದೆ. ತೇಜಸ್ವಿಯವರ ಅಣ್ಣನ ನೆನಪುಗಳು ಪ್ರಸಿದ್ಧವಾದ ಕೃತಿ. ಅಲ್ಲಿ ಲೇಖಕರೂ ಆದ ಮಗ ತಮ್ಮ ತಂದೆ ಕುವೆಂಪು ಅವರ ಬಗ್ಗೆ ಬರೆಯುತ್ತಾ ಕೌಟುಂಬಿಕ ಕಣ್ಣಲ್ಲಿ ಬರಹಗಾರ ಕುವೆಂಪು ಬಗ್ಗೆ ಒಳನೋಟ ನೀಡುತ್ತಾರೆ. ತಾಯಿ, ಅಕ್ಕ, ಬಂಧುಗಳು ಹಾಗೂ ಗೋಕಾಕರೇ ಬರೆದಿರುವ ಸಾಹಿತ್ಯ, ಪತ್ರ, ದಿನಚರಿ- ಹೀಗೆ ಹಲವು ಆಕರಗಳಿಂದ ಅನಿಲ ಗೋಕಾಕರು ತಮ್ಮ ತಂದೆಯವರ ಬಾಳ ಪಯಣವನ್ನೂ, ಸಾಹಿತ್ಯ ಸಾಧನೆಯನ್ನೂ ಜೊತೆಯಾಗಿ ಕಾಣಿಸುತ್ತಾರೆ. ಗ್ರಂಥವನ್ನು ಓದಿದ ಯಾರಿಗೂ ಅನಿಲ ಗೋಕಾಕರ ಶ್ರಮ ಗೋಚರಿಸುತ್ತದೆ. ಇವೆರಡೂ ವಿಭಿನ್ನ ರೀತಿಯ ಕೃತಿಗಳು. ಕನ್ನಡದ ಮಹತ್ವಪೂರ್ಣ ಲೇಖಕರ ಬಗೆಗೆ ಅವರ ಮಕ್ಕಳಿಂದ ಇಂತಹ ಕೃತಿಗಳು ರಚನೆಯಾಗುವುದು ಮುಖ್ಯ ಲೇಖಕರ ಅಧ್ಯಯನಕ್ಕೊಂದು ಹೊಸ ಅಧ್ಯಾಯವನ್ನು ಸೇರಿಸುತ್ತದೆ. 30-11-2020 - ಎಸ್. ಆರ್. ವಿಜಯಶಂಕರ

Wednesday, March 29, 2023

Madhava KulakarNi - 1st story session- - ವಜ್ರ { ಸಣ್ಣ ಕತೆ }

ರಮೇಶ್ ಭಟ್ ಬೆಳಗೋಡು --ಮಾಧವ ಕುಲಕರ್ಣಿ ಎಂಬ ಸವ್ಯ ಸಾಚಿ

ಮಾಧವ ಕುಲಕರ್ಣಿ ಎಂಬ ಸವ್ಯಸಾಚಿ* ಮಾಧವ ಅನಂತರಾವ್ ಕುಲಕರ್ಣಿಯವರು ಗದುಗಿನಲ್ಲಿ ಜನಿಸಿದ್ದು ಜೂನ್ 1, 1945ರಂದು. ಕಾಲೇಜು ಶಿಕ್ಷಣದ ತನಕ ಅವರು ಕಲಿತದ್ದು ಗದುಗಿನಲ್ಲಿಯೇ. ೧೯೬೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯ ಮತ್ತು ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು . ಬದುಕಿನ ವಿವಿಧ ಘಟ್ಟಗಳಲ್ಲಿ ಇವರಿಗೆ ಅಧ್ಯಾಪಕರಾಗಿದ್ದ ಪಾ. ಲ. ಸುಬ್ರಹ್ಮಣ್ಯ, ಡಾ. ಜಿ ಎಸ್ ಅಮೂರ, ಡಾ. ಶಾಂತಿನಾಥ ದೇಸಾಯಿ ಮತ್ತು ಉಡುಪಿಯಲ್ಲಿ ಪ್ರಾಂಶುಪಾಲರಾಗಿದ್ದ ಗೋಪಾಲಕೃಷ್ಣ ಅಡಿಗರು ಇವರಿಗೆ ಕಾಲಕಾಲಕ್ಕೆ ಅಗತ್ಯವಿದ್ದ ಸಾಹಿತ್ಯಿಕ ಮಾರ್ಗದರ್ಶನವನ್ನು ನೀಡಿದರು. ಗದುಗು, ಅಂಕೋಲ, ಉಡುಪಿ ಮತ್ತು ಮೈಸೂರುಗಳಲ್ಲಿ ಅಲೆಯುತ್ತ ಬದುಕು ಮತ್ತು ಬರಹವನ್ನು ಕಟ್ಟಿಕೊಂಡ ಕುಲಕರ್ಣಿಯವರು ೨೦೦೩ರಲ್ಲಿ ಇಂಗ್ಲೀಷ್ ಅಧ್ಯಾಪನದಿಂದ ನಿವೃತ್ತರಾಗಿ ಮೊನ್ನೆಮೊನ್ನೆಯ ತನಕ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇದು ಕುಲಕರ್ಣಿಯವರ ಬಗ್ಗೆ ಅವರ ಪರಿಚಿತರೆಲ್ಲ ಬಲ್ಲ ಸಂಗತಿಗಳು. ಆದರೆ ಮಾಧವಕುಲಕರ್ಣಿಯವರನ್ನು ಅಕ್ಷರಶಃ ಪುಟಕ್ಕಿಟ್ಟು ಬಂಗಾರವಾಗಿಸಿದ, ಮತ್ತು ಅವರು ಎಲ್ಲೂ ಹೇಳಿಕೊಳ್ಳದ ನಲವತ್ತು ವರ್ಷಗಳ ಹೋರಾಟದ ಇನ್ನೊಂದು ಕತೆಯಿದೆ. ಅವರ ತಂದೆ ಅನಂತರಾವ್ ಕುಲಕರ್ಣಿಯವರು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ನಂಬಿದವರ ವಿಶ್ವಾಸಘಾತ ಕೃತ್ಯದಿಂದ ನೊಂದ ಅನಂತರಾವ್ ಕುಲಕರ್ಣಿಯವರು ಅಕಾಲಮೃತ್ಯುವಶರಾದಾಗ ಮಾಧವ ಕುಲಕರ್ಣಿಯವರು ತಮ್ಮ ತಂಗಿ ತಾಯಿಯೊಂದಿಗೆ ಅಕ್ಷರಶಃ ರಸ್ತೆಯಲ್ಲಿದ್ದರು. ಆದಾಯವೇ ಇಲ್ಲದ ಸ್ಥಿತಿಯಲ್ಲಿ ತಂಗಿಯ ಮದುವೆಯಾಯಿತು. ಓದು ಮುಂದುವರಿಸಿ, ಗದುಗಿನಲ್ಲಿಯೇ ಉಪನ್ಯಾಸಕನಾಗಿ ತಮ್ಮನ ವಿದ್ಯಾಭ್ಯಾಸಕ್ಕೆ ಆಧಾರವಾದರು. ಪುಟ್ಟಕುಟುಂಬಕ್ಕೆ ತಂದೆತಾಯಿ ಎಲ್ಲವೂ ಆಗಿ, ಮಾಧವ ಕುಲಕರ್ಣಿಯವರು ಹೆಚ್ಚಿನ ಅವಕಾಶವನ್ನು ಅರಸುತ್ತ ಅಂಕೋಲಕ್ಕೆ ಬಂದರು. ಮತ್ತೆ ಅಡಿಗರು ಕರೆದರೆಂದು ಉಡುಪಿಗೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಗ ಪ್ರಾಂಶುಪಾಲರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರಿಗೆ ಆತಂಕದ ದಿನಗಳಲ್ಲಿ ಆಪ್ತರಾದರು. ಅಡಿಗರು ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ಸಾಕಷ್ಟು ಶತ್ರುಗಳನ್ನು ಸೃಷ್ಟಿಸಿಕೊಂಡು ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಾಗ, ಕುಲಕರ್ಣಿಯವರೂ ಉಡುಪಿಗೆ ವಿದಾಯ ಹೇಳಬೇಕಾಗಿ ಬಂತು. ಕೈಯಲ್ಲಿ ಕೆಲಸವಿಲ್ಲದೆ, ಬಿಟ್ಟುಬಂದಿದ್ದ ಗದುಗಿಗೆ ಹಿಂದಿರುಗಿ ಒಂಭತ್ತು ತಿಂಗಳ ಅಜ್ಞಾತವಾಸ ಅನುಭವಿಸಿದರು. ಜೊತೆಯಲ್ಲಿ ಕೈಹಿಡಿದ ಹೆಂಡತಿ ಮತ್ತು ಒಂಭತ್ತು ತಿಂಗಳ ಕೈಗೂಸು. ಜೀವನೋಪಾಯಕ್ಕಾಗಿ ಗೈಡುಗಳನ್ನು ಬರೆಯುತ್ತಿದ್ದ ಆ ದಿವಸಗಳಲ್ಲಿ ಅವರು ಮತ್ತಷ್ಟು ಮಾಗಿದರು. ಮತ್ತೆ ಮೈಸೂರಿಗೆ. ಸಾಹಿತಿ ಚದುರಂಗರು ಇವರ ಕೈ ಹಿಡಿದರು. ೧೯೭೨ರಲ್ಲಿ ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕನಾಗಿ ಹೊಸ ಅಧ್ಯಾಯ ಆರಂಭಿಸಿದರು. ಆಗವರ ಪ್ರಾಯ ೨೭, ಅಷ್ಟೇ. ಆದರೆ, ತಮ್ಮ ಹೆಗಲಿಗೇರಿದ ಯಾವ ಸಾಂಸಾರಿಕ ಜವಾಬ್ದಾರಿಯನ್ನೂ ಅವರು ನಿರಾಕರಿಸಲಿಲ್ಲ. ಮುಂದಿನ ಮೂವತ್ತೊಂದು ವರ್ಷಗಳಲ್ಲಿ ಅವರು ಆದರಣೀಯ ಇಂಗ್ಲೀಷ್ ಪ್ರೊಫೆಸರ್ ಆಗಿ ಉಳಿದರು, ಬೆಳೆದರು; ನಿವೃತ್ತರೂ ಆದರು. ಆದರೆ ಬದುಕು ಕೈಗೂಡುತ್ತಿದ್ದ ಹೊತ್ತಿನಲ್ಲಿ ಭರವಸೆಯ ಕತೆಗಾರನಾಗಿ ರೂಪುಗೊಂಡಿದ್ದ ತಮ್ಮ ಅಶೋಕ ಕುಲಕರ್ಣಿ ಅಪಮೃತ್ಯುವಿಗೀಡಾದರು. ಹರೆಯದ ಮಗಳು ವಿಧಿವಶಳಾದಳು. ಪತ್ನಿ ತೀರಿಕೊಂಡರು. ವೈಯಕ್ತಿಕ ಬದುಕಲ್ಲಿ ಸಾವು ನೋವುಗಳು ಸಾಲಾಗಿ ಬಂದು ಅವರನ್ನು ಪರೀಕ್ಷಿಸುತ್ತಲೇ ಇದ್ದವು. ತಮ್ಮ ಅಳಲನ್ನು ಅವರು ಯಾರಲ್ಲೂ ಹಂಚಿಕೊಳ್ಳಲೂ ಇಲ್ಲ, ಯಾರೊಬ್ಬರ ಕನಿಕರಕ್ಕಾಗಿ ಹಾತೊರೆಯಲೂ ಇಲ್ಲ. ಮೊನ್ನೆಮೊನ್ನೆ ಮೈಸೂರುಬಿಟ್ಟು ಮಗನೊಂದಿಗೆ ಬೆಂಗಳೂರಿಗೆ ಹೋಗುವ ತನಕವೂ ಅವರು ವಾಸವಿದ್ದದ್ದು ಇ.ಡಬ್ಲ್ಯೂ.ಎಸ್ ಮನೆಯಲ್ಲಿಯೇ. ಇವೆಲ್ಲ ವ್ಯವಹಾರದಲ್ಲಿ ಅವರ ಸೋಲನ್ನು ತೋರಿಸಿದಂತೆಯೇ ಗೃಹಸ್ಥ ಧರ್ಮ ಪರಿಪಾಲನೆಯಲ್ಲಿ ಅವರ ಯಶಸ್ಸನ್ನು ಹೇಳುತ್ತವೆ. ಡಿವಿಜಿಯವರು ಹೇಳಿದಂತೆ, ಕೊನೆಗೆ ಉಳಿಯುವುದು ಈ ಯಶಸ್ಸು ಮಾತ್ರ. *** ಮಾಧವ ಕುಲಕರ್ಣಿಯವರ ಸಾಹಿತ್ಯ ಯಾತ್ರೆಯ ಎರಡನೆಯ ಪರ್ವ ಶುರುವಾದದ್ದು ಅವರು ಮೈಸೂರಿಗೆ ಬಂದು ಔದ್ಯೋಗಿಕವಾಗಿ ನೆಲೆನಿಂತ ನಂತರವೇ. ಎರಡನೆಯ ಪರ್ವ ಎಂದದ್ದು ಯಾಕೆಂದರೆ, ಮೊದಲ ಪರ್ವದ ಸಾಹಿತ್ಯಿಕ ಯಾತ್ರೆಯ ಅವಧಿಯಲ್ಲಿ, ಕಾಲೇಜು ದಿನಗಳ ಕೊನೆಯ ವರ್ಷದಲ್ಲಿ ಸ್ನೇಹಿತರೊಡನೆ ಕೈಜೋಡಿಸಿ "ಹೊಸಗೊಂದಲ"ವೆಂಬ ವಿದ್ಯಾರ್ಥಿ ಕತೆಗಾರರ ಕಥಾಸಂಕಲನವೊಂದನ್ನು ಪ್ರಕಟಿಸಿದ್ದರು ಎಂದೆನಷ್ಟೆ? ಅದರಲ್ಲಿ ಅವರ ಮೊದಲ ಕತೆ "ಸುಧಾಮ" ಕಾಣಸಿಗುತ್ತದೆ. ವಿದ್ಯಾರ್ಥಿಯಾಗಿದ್ದಾಗಲೇ ಇವರದೊಂದು ಸಣ್ಣಕತೆ ‘ಸಂಕ್ರಮಣ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಂದಿನ ಕತೆ ಅಡಿಗರ ‘ಸಾಕ್ಷಿ’ಯಲ್ಲಿ ಪ್ರಕಟವಾಯಿತು. ಅವರ ಬಿಡಿ ಕತೆಗಳೂ ವಿಮರ್ಶಾ ಲೇಖನಗಳೂ ಈ ಅವಧಿಯಲ್ಲಿ ಪ್ರಕಟವಾಗತೊಡಗಿದ್ದವು. ಸಾಕ್ಷಿಯಲ್ಲಿ ರಾಮಾನುಜನ್ ಮತ್ತು ಬೇಂದ್ರೆ ಕಾವ್ಯವನ್ನು ಕುರಿತು ಕೀರ್ತಿನಾಥ ಕುರ್ತುಕೋಟಿಯವರ ಲೇಖನಗಳಿಗೆ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಬರೆದು ಗುರುತಿಸಲ್ಪಟ್ಟರು. ಒಂದಿಷ್ಟು ಸಮಯ ಇವರು "ಪ್ರಜ್ಞೆ" ಎಂಬ ಸಾಹಿತ್ಯಿಕ ದ್ವೈಮಾಸಿಕವನ್ನೂ ನಡೆಸಿದ್ದರು. ನವೋದಯಕಾಲದ ಬರವಣಿಗೆಯನ್ನು ಹೋಲುವ ಸಣ್ಣಕತೆಗಳೂ, ನವ್ಯಮಾರ್ಗದ ವಿಮರ್ಶಾಲೇಖನಗಳೂ ಅವರನ್ನು ಗದುಗು, ಉಡುಪಿಗಳಲ್ಲಿ ಮಾತ್ರವಲ್ಲ, ಹಳೆಯ ಮೈಸೂರು ಭಾಗದಲ್ಲಿಯೂ ಪ್ರತ್ಯೇಕವಾದ ಗುರುತಿಸುವಿಕೆಗೆ ಪಾತ್ರರನ್ನಾಗಿಸಿದವು. ಅವರು ಮೈಸೂರಿಗೆ ಬಂದು ನೆಲೆನಿಂತಮೇಲೆ ಅವರ ಮೊದಲ ಕತಾಸಂಕಲನ "ವಜ್ರ" ೧೯೮೦ರಲ್ಲಿ ಪ್ರಕಟವಾಯಿತು. ವಜ್ರ ಕತೆಯು ಪದವೀಪೂರ್ವ ತರಗತಿಗಳಿಗೆ ಕನ್ನಡ ಪಠ್ಯವಾಗಿಯೂ ಆಯ್ಕೆಯಾಯಿತು. ಮಾಧವ ಕುಲಕರ್ಣಿಯವರು "ಪ್ರಶಾಂತ ಪ್ರಕಾಶನ" ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ, ತಮ್ಮ ಆರ್ಥಿಕ ಜವಾಬ್ದಾರಿಯನ್ನು ಹಗುರಮಾಡಿಕೊಳ್ಳಲು ಪ್ರಯತ್ನಿಸಿದ ದುರಂತ ಕತೆಯನ್ನೂ ಇಲ್ಲಿ ನೆನಪಿಸಿಕೊಳ್ಳ ಬಹುದು. ಈ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಹಲವು ಪತ್ತೆದಾರಿ ಕಾದಂಬರಿಗಳನ್ನು ಬರೆದ "ಚೈತನ್ಯ" ಎಂಬ ಜನಪ್ರಿಯ ಪತ್ತೆದಾರಿ ಕಾದಂಬರಿಕರ್ತೃ ಸ್ವತಹ ಕುಲಕರ್ಣಿಯವರೇ. ಈ ಸಂಸ್ಥೆಯಿಂದ ಪ್ರಕಟವಾದ ಹತ್ತಾರು ಸಾಮಾಜಿಕ ಕಾದಂಬರಿಗಳ ಲೇಖಕಿ ಕೆ. ಶ್ರೀದೇವಿ ಎಂದರೆ ಕುಲಕರ್ಣಿಯವರ ಪತ್ನಿ ಮತ್ತು ಈ ಕಾದಂಬರಿಗಳನ್ನು ಬರೆಯುತ್ತಿದ್ದುದು ಕುಲಕರ್ಣಿಯವರೇ ಎಂದು ಕೆಲವರಷ್ಟೇ ಬಲ್ಲರು. ಕುಲಕರ್ಣಿಯವರಿಗೆ ಸಗಟುಖರೀದಿಯ ವ್ಯಾವಹಾರಿಕ ಜಾಣ್ಮೆ ಇದ್ದಂತಿರಲಿಲ್ಲ. ಪ್ರಕಾಶನ ವ್ಯವಹಾರದಲ್ಲಿ ಅವರೇನೂ ಗಳಿಸಿದಂತಿಲ್ಲ. ಈ ಸೋಲಿನಿಂದ ಹತಾಶರಾಗಿ ಒಂದಿಷ್ಟು ದಿನ ಅವರು ಅಧ್ಯಾತ್ಮದ ಬೆನ್ನು ಹತ್ತಿದ್ದರಂತೆ. ಅವರ ಸಾಹಿತ್ಯಯಾತ್ರೆಯ ಮೂರನೆಯ ಪರ್ವಕ್ಕೆಂದು ಮತ್ತೆರಡು ದಶಕ ಕಾಯಬೇಕಾಗಿ ಬಂತು. "ವಜ್ರ" ಸಣ್ಣ ಕತಾಸಂಕಲನ ಪ್ರಕಟವಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಮಾಧವ ಕುಲಕರ್ಣಿಯವರ ಎರಡನೆಯ ಕತಾ ಸಂಕಲನ "ಉದ್ಯಾನವನ ಮತ್ತು ಇತರ ಕತೆಗಳು" ಪ್ರಕಟವಾಯಿತು. ಈ ನಡುವೆ, ೨೦೦೨-೦೩ ರ ಸುಮಾರಿಗೆ ನನ್ನ ಕತಾಸಂಕಲನ "ಮನುಷ್ಯರನ್ನು ನಂಬಬಹುದು" ಪ್ರಕಟಣೆಗೆ ಸಿದ್ಧವಾಗುತ್ತಿತ್ತು. ಅದರಲ್ಲಿದ್ದ ಒಂದು ಕತೆಯನ್ನು, ಹಿಂದೆ ಪತ್ರಿಕೆಯಲ್ಲಿ ಪ್ರಕಟವಾದಾಗ ಮೆಚ್ಚಿಕೊಂಡು ನಾಲ್ಕು ಒಳ್ಳೆಯ ಮಾತುಗಳನ್ನು ಕೀರ್ತಿನಾಥ ಕುರ್ತುಕೋಟಿಯವರು ಬರೆದಿದ್ದ ಹಿನ್ನೆಲೆಯಲ್ಲಿ ನನ್ನ ಕತಾಸಂಕಲನದ ಮುನ್ನುಡಿಗಾಗಿ ಅವರನ್ನು ಸಂಪರ್ಕಿಸಿದ್ದೆ. ಆಗವರು ತಾವು ಮುನ್ನುಡಿ ಬರೆದಿದ್ದ, "ಉದ್ಯಾನವನ" ಕತಾಸಂಕಲನದ ಕುರಿತು ಮತ್ತು ಕತೆಗಾರ ಮಾಧವ ಕುಲಕರ್ಣಿಯವರ ಕುರಿತು ಬಹಳ ಪ್ರೀತಿಯ ಮಾತುಗಳನ್ನಾಡಿದ್ದರು. ವಿಷಾದ ದರ್ಶನವೊಂದನ್ನು ಮಾಧವ ಕುಲಕರ್ಣಿಯವರು ಕಟ್ಟಿಕೊಟ್ಟ ಸೊಗಸನ್ನು ಕುರ್ತುಕೋಟಿಯವರು ಸೊಗಸಾಗಿ ಬಣ್ಣಿಸಿದ್ದರು. ೨೦೦೬ರಲ್ಲಿ "ವರ್ಧಮಾನ" ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬನಾಗಿದ್ದ ನನ್ನ ಮಂದೆ "ಉದ್ಯಾನವನ" ಕತಾಸಂಕಲನ ಬಂದಾಗ, ಅದಾಗಲೇ ಕೀರ್ತಿಶೇಷರಾಗಿದ್ದ ಕುರ್ತುಕೋಟಿಯವರ ಸೂಕ್ಷ್ಮವಾದ ವಿಶ್ಲೇಷಣೆಯನ್ನು ಮತ್ತೆ ನೆನಪಿಸಿಕೊಂಡೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಪತ್ರಿಕೆ "ಗಾಂಧಿಬಜಾರ್"ನಲ್ಲಿ ನಾನು ಮಾಧವ ಕುಲಕರ್ಣಿಯವರ ಸಣ್ಣಕತೆಗಳ ಬಗ್ಗೆ ವಿವರವಾಗಿ ಬರೆಯುವಾಗ, "ಉದ್ಯಾನವನ"ವನ್ನು ಮಾಧವ ಕುಲಕರ್ಣಿಯವರ ಮ್ಯಾನಿಫೆಸ್ಟೋ ಎಂದು ಹೇಳಲೂ ಮುಖ್ಯಕಾರಣ ಈ ಕತೆಯಲ್ಲಿ ಕುರ್ತುಕೋಟಿಯವರು ಗುರುತಿಸಿದ ಅನನ್ಯ ವಿಷಾದದರ್ಶನ. ಕುರ್ತುಕೋಟಿಯವರು ಬರೆದದ್ದು: "ಉದ್ಯಾನವನ ಕತೆ ಒಂದು ಸುಸೂತ್ರವಾದ ಕತೆಯನ್ನೇನೋ ಹೇಳುತ್ತದೆ. ನಿವೃತ್ತರಾಗಿ ಮೈಸೂರಿಗೆ ಬಂದು ನೆಲೆಸುವ ಪದ್ಮನಾಭರಾಯರು ಕೊಂಡಮನೆಯನ್ನು ಮಾರಿ ಮಗನ ಜೊತೆಗೆ ಅಮೇರಿಕಕ್ಕೆ ಹೋಗಬೇಕೆನ್ನುವ ಪರಿಸ್ಥಿತಿಗೆ ಕಾರಣಗಳೇನೆಂದು ಕತೆ ಹುಡುಕತೊಡಗಿದೆ. ಬೇರುಗಳನ್ನು ಕಳೆದುಕೊಂಡವರ ಗತಿ ಇದೇ ಎಂದು ಸೂಚಿಸಬೇಕಾಗಿದೆಯೆ? ಹಣದ ಶಕ್ತಿಯಿಂದ ಏನನ್ನೂ ಕೊಂಡುಕೊಳ್ಳಬಲ್ಲೆ ಎಂಬ ವೆಂಕೋಬ ಶೆಟ್ಟಿಯಂಥವರ ಕಾರಸ್ಥಾನವೇ ಇದಕ್ಕೆ ಕಾರಣವೇ? ಬೋಗನ್ ವಿಲ್ಲಾದ ಬಳ್ಳಿ ಹಬ್ಬಿರುವ ಉದ್ಯಾನವನದಲ್ಲಿ ಲಾರಿಗಳು ಬಂದು ನಿಲ್ಲುವ ವ್ಯಾಪಾರೀ ಸಂಸ್ಕೃತಿಯ ಅಬ್ಬರವೇ? ವಾಹನಗಳು ಕಿಕ್ಕಿರಿದು ಮನೆಯ ಒಳಗೇ ಬಂದು ಮನೆಗಳನ್ನು ಕೆಡವುತ್ತಿರುವ ಹೊಸ ಸಂಸ್ಕೃತಿಯ ಮೂಲಸೆಲೆ ಎಲ್ಲಿದೆ? ಅಥವಾ ಕ್ರಾಂತಿ ಎಂದರೆ ಇದೇ ಇರಬಹುದೇ? ಮೊಹೆಂಜದಾರೋ ಹರಪ್ಪಾದಲ್ಲಿಯ ಲಿಪಿಯನ್ನು ಓದುತ್ತ ಕಷ್ಟಪಟ್ಟು ತಯಾರಿಸಿದ ಪ್ರಬಂಧವನ್ನು ಅವರ ವಿದ್ಯಾರ್ಥಿಯೇ ತನ್ನ ಹೆಸರಿನಲ್ಲಿ ಪ್ರಕಟಿಸುವಾಗ ನಾಗರಿಕ ಗೂಂಡಾಗಿರಿ ಎಷ್ಟು ಅತಿರೇಕಕ್ಕೆ ಹೋಗಬಹುದು ಎಂದು ಸೂಚಿಸುವ ಉದ್ದೇಶವಿದೆಯೆ? ಮುಖ್ಯವಾಗಿ ಇಲ್ಲಿರುವುದು ಒಡೆತನದ ಪ್ರಶ್ನೆ. ಕೊಂಡುಕೊಂಡ ಮನೆ ತನ್ನದಾಗುವ ಸಾಧ್ಯತೆಯನ್ನು ಸಮಾಜ ಮತ್ತು ಕಾಯಿದೆ ಒಪ್ಪಿಕೊಂಡಿವೆ. ಇದಿಲ್ಲದಿದ್ದರೆ ಗೆದ್ದುಕೊಂಡು ಒಡೆತನವನ್ನು ಸ್ಥಾಪಿಸಬಹುದು. ಇದನ್ನು ಬಿಟ್ಟರೆ ಬೇರೊಂದು ಬಗೆಯ ಒಡೆತನವೂ ಸಾಧ್ಯವೆ? ಪ್ರಪಂಚದ ರಾಜಕೀಯವು ಮನೆಗಳನ್ನು ಕೆಡವಿ ಗೋಡೆಗಳನ್ನು ನಿಲ್ಲಿಸುತ್ತದೆ; ಹರಿಯುವ ನದಿಗಳನ್ನು ತಡೆಗಟ್ಟಿ, ಕಾಡುಗಳನ್ನು ಸವರಿ ನೆಲವನ್ನು ಬಂಜೆಯಾಗಿಸುತ್ತದೆ. ಫ್ಯಾಕ್ಟರಿಗಳನ್ನು ನಿರ್ಮಿಸಿ ನಿಸರ್ಗವನ್ನು ಮೈಲಿಗೆ ಮಾಡಿ, ಫ್ಯಾಕ್ಟರಿಗಳನ್ನು ಮುಚ್ಚಿ ಜನರು ಹಸಿವಿನಿಂದ ಸಾಯುವಂತೆ ಮಾಡುತ್ತದೆ. ಎಲ್ಲ ರಾಜಕೀಯದ ಗುರಿಯೂ ಜಗತ್ತಿನ ವಿನಾಶವೇ." ತಮ್ಮ ಐವತ್ತನೆಯ ವಯಸ್ಸಿನ ಆಸುಪಾಸಿನಲ್ಲಿ ಮಾಧವ ಕುಲಕರ್ಣಿಯವರು ಬರೆದಿದ್ದ "ಉದ್ಯಾನವನ " ಸಣ್ಣ ಕತೆ ಅವರ ಸಾಹಿತ್ಯಿಕ ಬದುಕಿನ ಒಂದು ಮಹತ್ವದ ಹೊರಳುಹಾದಿಯ ಮೈಲಿಗಲ್ಲು. ಮೂರನೆಯ ಜಗತ್ತಿನ ಅರ್ಥವ್ಯವಸ್ಥೆ ಆಮೂಲಾಗ್ರವಾಗಿ ಪರಿವರ್ತಿತವಾಗುತ್ತಿದ್ದ ಒಂದು ಹೊತ್ತಿನಲ್ಲಿ ಮಧ್ಯಮ ವರ್ಗದ ನಂಬಿಕೆಗಳು ‘ರಿ-ಡಿಫೈನ್’ ಆದ ಕೆಲವು ಸಂಗತಿಗಳನ್ನು ತಮ್ಮ ಹಲವು ಕತೆಗಳಲ್ಲಿ ಮಾಧವ ಕುಲಕರ್ಣಿಯವರು ಮತ್ತೆ ಮತ್ತೆ ತಂದಿರುವರಾದರೂ ‘ಉದ್ಯಾನವನ’ದಲ್ಲಿ ಅವರ ನಿರೂಪಣಾಶಕ್ತಿಯ ಸಮಗ್ರ ಎನ್ನಬಹುದಾದ ದುಡಿಮೆ ಕಾಣಸಿಗುತ್ತದೆ. ನಿಸ್ಪೃಹ ಬದುಕನ್ನು, ಬದುಕಿನ ಬೇರುಗಳನ್ನು ಅಲುಗಿಸಬಹುದಾದ ವಿಚಾರಗಳನ್ನು, ನವ್ಯ ಮತ್ತು ನವ್ಯೋತ್ತರ ದಿನಗಳ ಪ್ರಾತಿನಿಧಿಕ ಎನ್ನಬಹುದಾದ ಕತೆಗಾರರು ಕಂಡ ಕ್ರಮಕ್ಕೂ ಮಾಧವ ಕುಲಕರ್ಣಿಯವರು ಕಂಡಕ್ರಮಕ್ಕೂ ಇರುವ ಮಹದಂತರವನ್ನು ಗುರುತಿಸಲು ನೆರವಾಗುವ ಮತ್ತು ಆ ಅಂತರದ ಮೌಲ್ಯೀಕರಣ ಮಾಡುವ ಕತೆಯಿದು. ಮಾಧವ ಕುಲಕರ್ಣಿಗಳ ಪ್ರಾತಿನಿಧಿಕ ಕತೆಗಳ, ಅದರಲ್ಲೂ ಮುಖ್ಯವಾಗಿ ಉದ್ಯಾನವನ ಕತೆಯ ಮುಖ್ಯಸ್ರೋತ - ಬದಲಾಗುವ ಅರ್ಥ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹಳೆಯ ತಲೆಮಾರಿನ ಜೀವನಕ್ರಮದ ಸ್ಥಿತ್ಯಂತರ. ಬದುಕಿಗೆ ಗಮ್ಯವೇ ಇಲ್ಲದಿರುವುದು ಹೊಸತಲೆಮಾರನ್ನು ಕಾಡಿದ ಸಂಗತಿಯಾದರೆ, ಬದುಕಿಗೆ ಇಲ್ಲಿಯತನಕ ಸೌಂದರ್ಯವನ್ನು ಕೊಟ್ಟಿದ್ದ ಗಮ್ಯವನ್ನು ಕೈಬಿಡುವುದು ಹಳೆಯ ತಲೆಮಾರನ್ನು ತಳ್ಳಂಕಕ್ಕೆ ತಳ್ಳಿದ ಸಂಗತಿ. ಈ ತಳ್ಳಂಕವನ್ನೇ ಕತೆಯಾಗಿಸಿದವರಲ್ಲಿ ಮಾಧವ ಕುಲಕರ್ಣಿಯವರು ಪ್ರಾತಿನಿಧಿಕರು ಎನ್ನುವುದನ್ನು ಸ್ಪಷ್ಟಪಡಿಸಿದ ಕತೆ "ಉದ್ಯಾನವನ". ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಎತ್ತಿಕೊಂಡು ಮಾಧವ ಕುಲಕರ್ಣಿಯವರು ಹಲವು ಕತೆಗಳನ್ನು ಬರೆದಿರುವರಾದರೂ ‘ಮನೆಪಾಠ’ ಮತ್ತು ‘ಒಂದು ಪ್ರೇಮಪತ್ರ’ ಕೊಂಚ ವಿಶಿಷ್ಟವಾದ ಕಾರಣಗಳಿಂದ ಇಲ್ಲಿ ಉಲ್ಲೇಖಾರ್ಹ. ‘ಮನೆಪಾಠ’ದಲ್ಲಿ ಐತಾಳರ ಪಾತ್ರ ನಿರ್ವಹಣೆಯಲ್ಲಿ ಮಾಧವ ಕುಲಕರ್ಣಿಯವರು ಎಷ್ಟು ಸೂಕ್ಷ್ಮವಾಗಿ ತೊಡಗಿಕೊಳ್ಳುತ್ತಾರೆಂದರೆ, ಅವರು ತಮ್ಮ ಆತ್ಮಚರಿತ್ರೆಯನ್ನೇ ಬರೆದುಕೊಳ್ಳುತ್ತಿದ್ದಾರೆಂದು ಒಮ್ಮೊಮ್ಮೆ ಅನ್ನಿಸದಿರದು. ಶಿಕ್ಷಣಕ್ಷೇತ್ರದಲ್ಲಿ ಅವರಿಗುಂಟಾದ ಭ್ರಮನಿರಸನದ ದಾಖಲೆಯಂತೆ ಕಾಣಿಸುವ ಇನ್ನೊಂದು ಕತೆ ‘ಒಂದು ಪ್ರೇಮ ಪತ್ರ’. ಈ ಎರಡೂ ಕತೆಗಳು ಆರ್ಥಿಕ ಉದಾರೀಕರಣವು ಶಿಕ್ಷಣರಂಗದ ಮನುಷ್ಯರನ್ನು ಎತ್ತ ಒಯ್ಯುತ್ತಿದೆ ಎಂಬುದನ್ನು ವಿಶ್ಲೇಷಿಸುವ ಮತ್ತು ಈ ನಿಟ್ಟಿನಲ್ಲಿ ಮಾಧವ ಕುಲಕರ್ಣಿಯವರ ವಿಷಾದವನ್ನೂ ದುಗುಡವನ್ನೂ ಚಿತ್ರಿಸಿದ ಪ್ರಯತ್ನಗಳಂತಿವೆ. ಮಾಧವ ಕುಲಕರ್ಣಿಯವರ ಸಾಹಿತ್ಯಯಾತ್ರೆಯ ಮೂರನೆಯ ಪರ್ವದಲ್ಲಿ ಇಂತಹ ವಿಷಾದ ದರ್ಶನ ನಿಬಿಡವಾಗಿ ಕಾಣುತ್ತದೆ. ಕುತೂಹಲದಿಂದ ಗಮನಿಸಬೇಕಾದ ಸಂಗತಿಯೆಂದರೆ ಮೊದಲ ಅರವತ್ತೆರಡು ವರ್ಷಗಳಲ್ಲಿ ಮಾಧವ ಕುಲಕರ್ಣಿಯವರು ಬರೆದದ್ದು ನಲವತ್ಮೂರು ಕತೆಗಳನ್ನು. ೧೯೬೭ರಲ್ಲಿ ಮೊದಲ ಕತೆ ಬರೆದರು ಎನ್ನುವುದನ್ನು ನೆನಪಿಸಿಕೊಂಡರೆ, ವರ್ಷಕ್ಕೊಂದು ಕತೆ ಎನ್ನುವುದು ಸರಾಸರಿ ಲೆಕ್ಕ. ಈ ಕತೆಗಳು ವಜ್ರ, ಉದ್ಯಾನವನ ಮತ್ತು ಅದೇ ಮುಖ ಸಂಕಲನಗಳಲ್ಲಿ ಪ್ರಕಟವಾದವು. ೨೦೦೭ರಲ್ಲಿ ಅವರ ‘ಅಲ್ಲಿಯತನಕದ’ ಕತೆಗಳ ಸಂಕಲನವು ಪ್ರಕಟವಾಯಿತು. ಇನ್ನೊಂದು ಮಾತನ್ನು ಕುಲಕರ್ಣಿಯವರು ಪುನರಪಿ ಹೇಳುತ್ತಾ ಬಂದದ್ದುಂಟು. " ಈ ಕತೆಗಳ ಕರಡಚ್ಚು ತಿದ್ದುವಾಗ ಇಲ್ಲಿಯ ಯಾವ ಕತೆಯನ್ನೂ ಬರೆಯಬಾರದಿತ್ತೆಂದು ನನಗೆ ಅನ್ನಿಸಲಿಲ್ಲ." ಈ ಸಂಕಲನಕ್ಕೆ ಮುನ್ನುಡಿ ಬರೆದ ಕೃಷ್ಣಮೂರ್ತಿ ಹನೂರು ಕುಲಕರ್ಣಿಯವರ ಬರಹವನ್ನು ಗ್ರಹಿಸಲು ನೆರವಾಗುವ ಕೆಲವು ಮೌಲಿಕ ಅಭಿಪ್ರಾಯಗಳನ್ನು ಹೀಗೆ ನೀಡಿದ್ದರು : ೦೧. ಮಾಧವ ಕುಲಕರ್ಣಿಯವರ ಕಥೆಗಳ ವಸ್ತು, ವ್ಯಾಪ್ತಿ ನವೋದಯ ಕಾಲದ ಬರವಣಿಗೆಯನ್ನು ಹೋಲುತ್ತದಾದರೂ, ಒಮ್ಮೊಮ್ಮೆ ಅವುಗಳ ಹರಹು ಇನ್ನೂ ಹಿರಿದು. ೦೨. ಕಥೆ ಹೇಳುವ ಕ್ರಮದಲ್ಲಿ ಮಾತ್ರ ಕುಲಕರ್ಣಿಯವರ ಮನಸ್ಸು ಮಾಸ್ತಿಯವರನ್ನು ಹೋಲುತ್ತದೆ. ೦೩. ಮಾಧವ ಕುಲಕರ್ಣಿಯವರನ್ನು ಗದುಗಿನ ಪರಿಸರದ ಬಾಲ್ಯದ ನೆನಪು ತೀವ್ರವಾಗಿಯೇ ಕಾಡಿರುವುದರಿಂದ ಆ ಪರಿಸರದ ಎಲ್ಲಾ ಕತೆಗಳ ಮಣ್ಣಿನ ಗುಣ, ಪಾತ್ರ ಮತ್ತು ಜೀವಂತ ಭಾಷೆಯಿಂದಾಗಿ ಓದುಗರಿಗೆ ಸಂತೋಷವನ್ನು ನೀಡುತ್ತವೆ. ೦೪. ಕತೆ ತನ್ನ ಪಾಡಿಗೆ ತಾನು ಆಕರ್ಷಣೀಯ ಎನ್ನಿಸುವುದಾದರೆ ಭಾಷೆಯೆಂಬುದು ತೊಡಕಾಗುವುದಿಲ್ಲ ಎನ್ನುವುದಕ್ಕೆ ಕುಲಕರ್ಣಿಯವರ ಕತೆಗಳೇ ಸಾಕ್ಷಿಯಾಗುತ್ತವೆ. ಅಲ್ಲಿಂದ ಮುಂದೆ, ಪಾತಾಳ ಗರಡಿ, ರಾಗದ್ವೇಷ, ಮರಳಿದ ನೆನಪು, ಪ್ರತ್ಯಕ್ಷ ಎನ್ನುವ ನಾಲ್ಕು ಕಥಾ ಸಂಕಲನಗಳು ಪ್ರಕಟವಾದವು. "ಕುಲಕರ್ಣಿಯವರ (೨೩) ಆಯ್ದ ಕತೆಗಳು" ೨೦೧೪ರಲ್ಲಿ ಪ್ರಕಟವಾಯಿತು. ೨೦೧೫ರಲ್ಲಿ "ಕಥಾಸಾಗರ" ಎನ್ನುವ ಅವರ ಸಮಗ್ರ ಕಥೆಗಳ ಸಂಕಲನವು ಎರಡು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಸಂಪುಟಗಳಲ್ಲಿ ೮೩ ಕತೆಗಳಿದ್ದವು. ಎಂದರೆ, ೨೦೦೭ರಿಂದ ೨೦೧೫ರ ಅವಧಿಯ ಎಂಟು ವರ್ಷಗಳಲ್ಲಿ ಅವರು ನಲವತ್ತು ಕತೆಗಳನ್ನು ಬರೆದಿದ್ದರು. ಐವತ್ತು ವರ್ಷಗಳ ಬರವಣಿಗೆಯ ಬದುಕಿನಲ್ಲಿ, ಹೀಗೆ ಮಾಧವ ಕುಲಕರ್ಣಿಯವರು ಮೂರು ಪರ್ವಗಳಲ್ಲಿ ಎಂಬತ್ತಮೂರು ಕತೆಗಳುಳ್ಳ ಏಳು ಕಥಾಸಂಕಲನಗಳನ್ನು (ವಜ್ರ, ಉದ್ಯಾನವನ, ಅದೇ ಮುಖ, ಪಾತಾಳಗರಡಿ, ರಾಗದ್ವೇಷ, ಮರಳಿದ ನೆನಪು ಮತ್ತು ಪ್ರತ್ಯಕ್ಷ) ರಚಿಸಿದ್ದರು. ಅವರ ಆಯ್ದಕತೆಗಳ ಎರಡು ಸಂಕಲನಗಳೂ ಸಮಗ್ರ ಕತೆಗಳ ಎರಡು ಸಂಪುಟಗಳೂ ಈ ಅವಧಿಯಲ್ಲಿ ಪ್ರಕಟವಾಗಿದ್ದವು. ಆದರೆ, ಅವರು ಕತೆಗಳೊಂದಿಗೆ ವಿಮರ್ಶೆಯನ್ನೂ ಬರೆಯುತ್ತಿದ್ದುದರಿಂದ ಮತ್ತು ವಿಮರ್ಶೆಯು ಗಾತ್ರದಲ್ಲಿ ಅಗಾಧವಾದುದರಿಂದ ಸಾರಸ್ವತ ಲೋಕ ಅವರನ್ನು ವಿಮರ್ಶಕರೆಂದೇ ಗುರುತಿಸುತ್ತದೆ. ಸ್ವತಃ ವಿಮರ್ಶಕರಾಗಿದ್ದ ಕುಲಕರ್ಣಿಯವರಿಗೆ ತಮ್ಮ ಕತೆಗಳ ಸಾಧ್ಯತೆಯ ಅರಿವಿತ್ತು. "ವಿಮರ್ಶೆಯು ದೂಢಿಸಿಕೊಂಡ ಅಭ್ಯಾಸದಿಂದ ಬಂದ ಮಾರ್ಗ. ಕಥಾಬರವಣಿಗೆ ನನ್ನ ಜನ್ಮಜಾತ ಸ್ವಭಾವ" ಎಂದು ಅವರೇ ಒಮ್ಮೆ ಹೇಳಿದ್ದುಂಟು. ಅದಕ್ಕೆ ಅವರೇ ಗುರುತಿಸಿಕೊಂಡ ಕಾರಣವೂ ಇತ್ತು, "ಕಥೆಗಳನ್ನು ಬರೆಯುವಾಗ ದಕ್ಕುವ ಸೃಜನಶೀಲತೆಯ ಆನಂದವೇ ಬೇರೆ. ವಿಮರ್ಶೆಯನ್ನು ಬರೆಯುವಾಗ ಬೇರೆಯವರ ಕೃತಿಗಳಿಂದಸಿಗುವ ಅನುಭವವೇ ಬೇರೆ." ಒಂದಂತೂ ನಿಜ. ಎರಡೂ ಮಾರ್ಗಗಳಲ್ಲಿ ಅವರ ದುಡಿತದ ಶ್ರದ್ಧೆ, ಆಸಕ್ತಿ ಮತ್ತು ಆತ್ಮವಿಶ್ವಾಸ ಅನುಪಮವಾದದ್ದು. ಇದೇ ಐವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಕುಲಕರ್ಣಿಯವರು ತಲಸ್ಪರ್ಷಿ ಎನ್ನಿಸುವ ಹಲವು ವಿಮರ್ಶಾ ಲೇಖನಗಳನ್ನು ರಚಿಸಿದ್ದು ಮಾತ್ರವಲ್ಲ, ಅವರ ಹದಿನಾಲ್ಕು ವಿಮರ್ಶಾ ಲೇಖನಗಳ ಸಂಕಲನಗಳೂ ಪ್ರಕಟವಾದವು. ಜೀವಂತ ಧೋರಣೆಗಳು, ತುಡಿತ, ಯೋಚನೆಗಳು ಮತ್ತು ಲೇಖನಗಳು, ವಿಧ ವಿಧ ನಾನಾ ವಿಧ, ಪ್ರಮಾಣ, ಕಾರಂತರ ಕಾದಂಬರಿಗಳು, ಗಿರೀಶ ಕಾರ್ನಾಡರ ನಾಟಕ ಪ್ರಪಂಚ, ಅನಂತ ಮೂರ್ತಿಯವರ ಸಾಹಿತ್ಯದ ಒಲವು ನಿಲುವುಗಳು, ಬಂಧ ಬಂಧುರ, ಪರಿಭಾವ, ಜ್ಞಾನಪೀಠ ಕೃತಿನೋಟ, ಭೈರಪ್ಪನವರ ಕಾದಂಬರಿ ಪ್ರಪಂಚ, ಕಂಬಾರರ ಅಭಿವ್ಯಕ್ತಿ ಮಾರ್ಗ ಮತ್ತು ನಾನು ಬರೆದ ಮುನ್ನುಡಿಗಳು ಎಂಬ ಈ ಹದಿನಾಲ್ಕು ಸಂಕಲನಗಳು ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯ ಅದ್ಭುತ ದಾಖಲೆಯಾಗಿರುವುದು ಮಾತ್ರವಲ್ಲ, ಯಾರ ಮುಲಾಜೂ ಇಲ್ಲದೇ ಬರೆವ ವಿಮರ್ಶೆ ಹೇಗಿರುತ್ತದೆ ಎಂಬ ಅಧ್ಯಯನಾರ್ಹ ಮಾದರಿಯಾಗಿಯೂ ಕಾಣಿಸುತ್ತವೆ. ಕನ್ನಡದ ಇಪ್ಪತ್ತೈದು ಶ್ರೇಷ್ಠ ಕಾದಂಬರಿಗಳನ್ನು ಗುರುತಿಸಿ, ಅವುಗಳನ್ನು ವಿಮರ್ಶಿಸಿ ಬರೆದ "ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ" ಎಂಬ ಕೃತಿಯ ಮುನ್ನುಡಿಯಲ್ಲಿ ಅವರು ಹೇಳಿದ ವಿಮರ್ಶಕನ ಸಂದಿಗ್ಧತೆ ಅರ್ಥಪೂರ್ಣವಾದುದು. "ನನಗಿಂತ ಹಿರಿಯರು ಮತ್ತು ಈಗ ನಮ್ಮೊಡನೆ ಇಲ್ಲದವರ ಕಾದಂಬರಿಗಳ ಮೇಲೆ ಬಹಳ ನಿಷ್ಠುರವಾಗಿ ಬರೆಯುವಾಗ ಆ ಅಂಥ ಕಾದಂಬರಿಕಾರರ ನೆನಪು ನನ್ನನ್ನು ಕಾಡಿದೆ. ಆದರೆ ವಿಮರ್ಶೆಯಲ್ಲಿ, ಇಂಥ ವೈಯಕ್ತಿಕ ಸಂಬಂಧಗಳಿಗೆ ಸ್ಥಾನವಿಲ್ಲ. ಇಂಥ ಬರಹಗಳು ವರ್ತಮಾನದಲ್ಲಿ ಪ್ರಚಲಿತವಿರುವ ಕಾದಂಬರಿಕಾರರು ಭವಿಷ್ಯದಲ್ಲಿ ಎಷ್ಟು ಕಾಲ ನಿಲ್ಲಬಲ್ಲರೆಂಬುದನ್ನು ನಿರ್ಧರಿಸಲು ಸಹಾಯ ಮಾಡಬಹುದು." ವಿಮರ್ಶಕರು ಸೃಜನಶೀಲ ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೈಯಾಡಿಸಿದ ಅಪರೂಪದ ಸವ್ಯಸಾಚಿತ್ವಕ್ಕೆ ಕುಲಕರ್ಣಿಯವರು ಅಧ್ಯಯನಾರ್ಹ ಮಾದರಿಯೂ ಹೌದು. ಹಾಗೆ ನೋಡಿದರೆ, ಅವರು ಅನಂತಮೂರ್ತಿಯವರ ಮಾರ್ಗಕ್ಕೆ ಸಲ್ಲುವವರು. ಹಿಂದೆ ತಿಳಿಸಿದ ಹದಿನಾಲ್ಕು ವಿಮರ್ಶಾ ಸಂಕಲನಗಳು, ಮತ್ತು ಏಳು ಕತಾ ಸಂಕಲನಗಳೊಂದಿಗೆ ಅವರು ಎರಡು ಕಾದಂಬರಿಗಳು (ಉನ್ನತ ಸರಸ್ವತಿ ಮತ್ತು ಕ್ರಾಂತಿ; ಮೂರನೆಯ ಕಾದಂಬರಿ ಈಗ ಮುದ್ರಣದಲ್ಲಿದೆ.), ಒಂದು ಕವನ ಸಂಕಲನ (ಮುಸುಕಿದೀ ಮಬ್ಬಿನಲಿ), ಎರಡು ಸಂಪಾದಿತ ಗ್ರಂಥಗಳು (ಸಹಸ್ಪಂದನ ಮತ್ತು ಕಾವ್ಯ ಸಂಕ್ರಾಂತಿ), ಹೋಮಿಯೋಪತಿ ಕುರಿತು ಒಂದು ಪುಸ್ತಕ, ಮಾತ್ರವಲ್ಲ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ವಿ.ಕೃ. ಗೋಕಾಕರ ವ್ಯಕ್ತಿ ಚಿತ್ರಣದ ಅನುವಾದ ಮತ್ತು ಭಾರತ - ಭಾರತೀ ಪುಸ್ತಕ ಸಂಪದಡಿ ಒಂದು ಮಕ್ಕಳ ಸಾಹಿತ್ಯ ಕೃತಿಯನ್ನೂ ರಚಿಸಿದ್ದಿದೆ. ಅವರು ಚೈತನ್ಯ ಎಂಬ ಕಾವ್ಯನಾಮದಲ್ಲಿ ಬರೆದ ಪತ್ತೆದಾರಿ ಕಾದಂಬರಿಗಳ ಮತ್ತು ಪತ್ನಿ ಶ್ರೀದೇವಿಯವರ ಹೆಸರಲ್ಲಿ ಬರೆದ ಸಾಮಾಜಿಕ ಕಾದಂಬರಿಗಳ ಲೆಕ್ಕ ನನಗಂತೂ ಸಿಕ್ಕಿಲ್ಲ. *** ಮಾಧವ ಕುಲಕರ್ಣಿಯವರು ನನ್ನ ಹೃದಯಕ್ಕೆ ಹೆಚ್ಚು ಹತ್ತಿರವಾದದ್ದು ಅವರ ಮುನ್ನುಡಿಗಳಿಂದ. ಅವರು ಕಂಬಾರ, ಭೈರಪ್ಪ, ದಬಾಕು, ಅಕಬರ ಅಲಿ, ಸಿಪಿಕೆ, ಡಾ. ಮೊಗಸಾಲೆ, ದೇಶಪಾಂಡೆ ಸುಬ್ಬರಾಯ ಮೊದಲಾದ ಹಿಂದಿನ ತಲೆಮಾರಿನವರ ಬರಹಗಳನ್ನು ಪ್ರೀತಿಸಿ, ಗೌರವಿಸಿ ಮುನ್ನುಡಿಗಳನ್ನು ಬರೆದಷ್ಟೇ ಆರ್ದ್ರ ಹೃದಯಿಗಳಾಗಿ ಹೊಸತಲೆಮಾರಿನ ಹೇಮಾ ಪಟ್ಟಣ ಶೆಟ್ಟಿ, ಉಭಯ ಭಾರತಿ, ತಿಲಕನಾಥ ಮಂಜೇಶ್ವರ, ಅನಸೂಯಾ ಸಿದ್ದರಾಮ ಮೊದಲಾದವರ ಕೃತಿಗಳಿಗೆ ಮುನ್ನುಡಿ ಭಾಗ್ಯ ಒದಗಿಸಿದ್ದುಂಟು. ವಿಮರ್ಶಕನಿಗೆ ಇಂಥ ವೈವಿದ್ಯಮಯ ಸಂಪರ್ಕ ಸೇತುವೆಗಳು ಇರಲೇಬೇಕೆಂಬ ಅವರ ಅಭಿಪ್ರಾಯ ಸಮರ್ಥನೀಯವಾದುದು. ಈ ನಿಟ್ಟಿನಲ್ಲಿ ಅವರು "ವಿಮರ್ಶೆಯ ಅಭಾವದಲ್ಲಿ ಮುನ್ನುಡಿಯೇ ಕೊನೆಯ ವಿಮರ್ಶೆಯಾಗಬಹುದೆಂಬ ಅಪಾಯ ಬಂದೊದಗಿರುವುದರಿಂದ ವಿಮರ್ಶಕರು ಮುನ್ನುಡಿ ಬರೆಯುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ" ಎಂದೂ ಅಭಿಪ್ರಾಯಪಟ್ಟದ್ದಿದೆ. ಮಾಧವ ಕುಲಕರ್ಣಿಯವರು ತಮ್ಮ ತಂದೆ ತೀರಿಹೋದನಂತರ ಜವಾಬ್ದಾರಿ ಹೊತ್ತು ಪ್ರೀತಿಯಿಂದ ಸಲಹಿ ಮಾರ್ಗದರ್ಶನವಿತ್ತು ತಮ್ಮ ಅಶೋಕ ಕುಲಕರ್ಣಿಗೆ ಬದುಕುಕಟ್ಟಿಕೊಟ್ಟ ವಿವರಗಳನ್ನು ಹಿಂದೆ ನೀಡಿದೆನಷ್ಟೆ? ಅಶೋಕ ತನ್ನ ಐವತ್ತಾರನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಂಡ. ಆರುವರ್ಷಗಳ ನಂತರ ಅಶೋಕ ಕುಲಕರ್ಣಿಯವರ ಕತೆಗಳ ಸಂಕಲನ "ಮಾರಿಕೊಂಡವರು" ಪ್ರಕಟವಾಯಿತು. ಅದಕ್ಕೆ ಮಾಧವ ಕುಲಕರ್ಣಿಯವರು ಬರೆದ ಮುನ್ನುಡಿಯನ್ನು “ಅಶೋಕ ಕುಲಕರ್ಣಿ ಸಮಗ್ರ" ಕೃತಿಗೆ ಮಾಧವ ಕುಲಕರ್ಣಿಯವರೇ ಬರೆದ ಮುನ್ನುಡಿಯೊಂದಿಗೆ ಹೋಲಿಸಿ ನೋಡಬೇಕು. ಮೊದಲನೆಯದು ತೀರಾ ವಸ್ತುನಿಷ್ಠ ಕೃತಿ. ಎರಡನೆಯದು ಮುನ್ನುಡಿಯ ಮಿತಿಗಳನ್ನು ದಾಟಿ, ಸೃಜನಶೀಲ ಸೃಷ್ಟಿಯ ಗಡಿಹೊಕ್ಕು ಎಂಥವರ ಹೃದಯವನ್ನೂ ಕಲುಕಿಬಿಡಬಲ್ಲ ಬರಹ. ಓದುಗನನ್ನು ದೀರ್ಘಕಾಲ ಕಾಡುತ್ತಾ ಉಳಿಯುವ ಬರಹವದು. *** ಮಾಧವ ಕುಲಕರ್ಣಿಯವರನ್ನ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅವರು ಆಯ್ಕೆಯ ಪರಿಗಣನೆಗೆ ತಮ್ಮ ಸಾಹಿತ್ಯಿಕ ಕೃತಿಗಳನ್ನು ಕಳುಹಿಸದೇ ಹೋದಾಗಲೂ, ತೀರ್ಪುಗಾರರೋ ಸಂಚಾಲಕರೋ ಪರಿಗಣನೆಯ ಅವಧಿಯಲ್ಲಿ ಪ್ರಕಟವಾದ ಕುಲಕರ್ಣಿಯವರ ಕೃತಿಗಳನ್ನು ಪ್ರಕಾಶಕರಿಂದ ತರಿಸಿಕೊಂಡ ಪ್ರಕರಣಗಳನ್ನು ನಾನು ಬಲ್ಲೆ. ಇಂತಹ ಘಟನೆಗಳು ಪ್ರಶಸ್ತಿ ಪುರಸ್ಕಾರಗಳನ್ನು ಹೆಚ್ಚು ಪಾರದರ್ಶಕವಾಗಿಸುತ್ತವೆ. ಕುಲಕರ್ಣಿಯವರಿಗೆ ಪ್ರಾಪ್ತವಾದ ಒಂದು ಪ್ರತಿಷ್ಠಿತ ಪುರಸ್ಕಾರವೆಂದರೆ ಅವರ "ಕಾರಂತರ ಕಾದಂಬರಿಗಳು" ಗ್ರಂಥಕ್ಕೆ ಪ್ರಾಪ್ತವಾದ ಸಿಂಧಗಿಯ "ಬೇಂದ್ರೆ ಪ್ರಶಸ್ತಿ". ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲು ಕೀರ್ತಿನಾಥ ಕುರ್ತುಕೋಟಿಯವರು ಗುಜರಾತಿನ ಆನಂದದಿಂದ ಬಂದಿದ್ದರು. ತಮ್ಮ ಭಾಷಣದಲ್ಲಿ ಅವರು "ಅದೇಮುಖದಂತಹ ಕತೆಯನ್ನು ಮಾಧವ ಕುಲಕರ್ಣಿಯನ್ನು ಬಿಟ್ಟರೆ ಇನ್ನಾರೂ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ" ಎಂದೂ ಹೇಳಿದ್ದರು. ಕುಲಕರ್ಣಿಯವರ "ಉದ್ಯಾನವನ" ಕತಾಸಂಕಲನಕ್ಕೆ ವರ್ಧಮಾನ ಪ್ರಶಸ್ತಿ ಪ್ರಾಪ್ತವಾಗಿದೆ. ಅವರ ಜೀವಮಾನ ಸಾಧನೆಗಾಗಿ ಕಾಂತಾವರ ಪ್ರಶಸ್ತಿ ಮತ್ತು ಗಳಗನಾಥ ಪ್ರಶಸ್ತಿಗಳೂ ಲಭ್ಯವಾಗಿವೆ. ಅವರ ಒಟ್ಟು ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿದ್ದು ಬಿಟ್ಟರೆ ನಮ್ಮ ಸಾಹಿತ್ಯ ಪರಿಷತ್ತಾಗಲೀ, ಸಾಹಿತ್ಯ ಅಕಾಡೆಮಿಗಳಾಗಲೀ ಅವರನ್ನು ಗೌರವಿಸಿ ತಮ್ಮನ್ನೇ ಗೌರವಿಸಿಕೊಳ್ಳುವ ಪುಣ್ಯಕಾರ್ಯವನ್ನು ಮಾಡಲಿಲ್ಲ. ಸ್ವಾಭಿಮಾನಿಗಳಾದ ಕುಲಕರ್ಣಿಯವರು ಇಂತಹ ಗೌರವಕ್ಕಾಗಿ ಯಾರಲ್ಲೂ ಅಂಗಲಾಚಲೂ ಇಲ್ಲ ಎನ್ನುವುದನ್ನು ಅವರ ಸನಿಹದಲ್ಲಿದ್ದು ನಾನು ಬಲ್ಲೆ. *** ಮಾಧವ ಕುಲಕರ್ಣಿಯವರು ಬರೆಯಲು ತೊಡಗಿದ್ದು ೧೯೬೭ರಲ್ಲಿ. ಸದ್ದುಗದ್ದಲವಿಲ್ಲದೆ 66 ವರ್ಷಗಳು ಕಳೆದು ಹೋಗಿವೆ. ಈಗ ಅವರಿಲ್ಲ. ಆದರೆ ಅವರ ಹೆಜ್ಜೆಗುರುತುಗಳು ನಮ್ಮ ತಲೆಮಾರಿನ ವಿಮರ್ಶಕರಿಗೆ ಅನುಕರಣೀಯ ಮತ್ತು ಅನುಸರಣೀಯವಾಗಿ ಉಳಿದುಕೊಳ್ಳುತ್ತವೆ. Shivarama Herle P ಓಂ ಶಾಂತಿ

ಉದಯ ಕುಮಾರ ಹಬ್ಬು - ಕೆ ಸತ್ಯನಾರಾಯಣ ಅವರ " ಬೀದಿ ಜಗಳ ಮತ್ತು ಇತರ ಪ್ರಬಂಧಗಳು

ಖ್ಯಾತ ಕಥೆಗಾರ ಕಾದಂಬರಿಕಾರ ವಿಮರ್ಶಕರಾದ ಮಾನ್ಯ ಕೆ ಸತ್ಯನಾರಾಯಣ ಇವರು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆದು ತಮ್ಮದೆ ಆದ ಛಾಪು ಮೂಡಿಸಿದ್ದಾರೆ‌ ಇದೀಗ ಈ ನೂತನ ಅನನ್ಯ ಪ್ರಬಂಧ ಸಂಕಲನ "ಬೀದಿ ಜಗಳ ಮತ್ತು ಇತರ ಪ್ರಬಂಧಗಳು" ಎಂಬ ಪುಸ್ತಕ ಪ್ರೀತಿಯಿಂದ ಕಳಿಸಿದ್ದಾರೆ. ಇವು ಲಘು ಪ್ರಬಂಧಗಳಲ್ಲ. ಮನುಷ್ಯ ಲೋಕದ ಮನುಷ್ಯ ಸ್ವಭಾವದ ಓರೆ‌ ಕೋರೆಗಳ ಬಗ್ಗೆ ಮನುಷ್ಯ ಸ್ವಭಾವದ ಮಾನಸಿಕ ವೈಚಿತ್ರಗಳ ಕುರಿತು ಬರೆದ Critical Essays ಅಂತ ಕರೆಯಲಿಕ್ಕೆ ಇಷ್ಟಪಡುತ್ತೇನೆ‌ ಪ್ರಬಂಧ ಪ್ರಕಾರಗಳಲ್ಲಿ ಇದು analytical essays ಎಂದೂ ಕರೆಯಬಹುದು‌ ಓದುಗರ ಎದುರಿಗೆ ಕೆಲವು premises ಗಳನ್ನು ಪ್ರಸ್ತುಪಡಿಸಿ ಓದುಗರನ್ನು ತಮ್ಮ ಅಭಿಪ್ರಾಯಗಳನ್ನು ಮನವರಿಕೆ ಮಾಡಿಸಿ ಅವರು ಒಪ್ಪುವಂತೆ ಮಾಡುವ ಕಸಬುದಾರಿಕೆ ಈ ಪ್ರಬಂಧಗಳಲ್ಲಿದೆ‌. ಬೀದಿ‌ಜಗಳದ ಬಗ್ಗೆ ವಿಶಿಷ್ಟ ಒಳನೋಟಗಳಿವೆ. ಜಗಳ ಬೀದಿಗೆ ಬಂದರೆ ಮಾತ್ರ ಸ್ವಾರಸ್ಯಕರ ಎಂಬುದು ಚೇಷ್ಟೆಯ ಮಾತೆಂದೆನಿಸಿದರೂ ಅದರಲ್ಲಿ ಸತ್ಯವಿದೆ‌‌‌ ಮೊದ ಮೊದಲ ಓದುಗನನನ್ನು ಲೇಖಕನಿಗೆ ಪತ್ತೆ ಮಾಡುವುದು ಹೇಗೆ? ಮುನ್ನುಡಿಕಾರ ಮೊದ ಮೊದಲ ಓದುಗ. ಉಳಿದ ಓದುಗರನ್ನು ಬರಹಗಾರ ಭೇಟಿಯಾದರೆ ಅದು ಲೇಖಕನು ಭೇಟಿಯಾದ ಮೊದ ಮೊದಲ ಓದುಗ. ಓದುಗ ನಮ್ಮೆದುರಿಗೆ ನಮ್ಮ ಕೃತಿಗಳ ಬಗ್ಗೆ ಮೆಚ್ಚುಗೆ ಮಾತುಗಳನ್ಬೇ ಆಡಬೇಕೆಂದು ಬರಹಗಾರ ಬಯಸುವುವುದು ಸಹಜ ತಾನೆ? ಅಲವತ್ತುಕೊಳ್ಳುವುದು ಸರ್ಜನಶೀಲತೆಗೆ ಪೂರಕ ಎನ್ನುವ ಮಾತು ಸತ್ಯದಿಂದ ದೂರವಿಲ್ಲ‌ "ಸಾಹಿತ್ಯ‌‌ಕೃತಿಗಳು ತಮ್ಮ ಜೀವಂತಿಕೆ ಉಳಿಸಿಕೊಂಡಿರುವುದು ಹೀಗೆ ಪುಸ್ತಕಗಳು ಹುಡುಕುವ, ಕಂಡುಕೊಳ್ಳುವ ಮೊದಮೊದಲ ಓದುಗರಿಂದಲೇ ಹೊರತು ಲೇಖಕರು ಬಯಸುವ ಹುಡುಕುವ, ಬಯಸುವ ಕಂಡುಬಿಟ್ಟೆವು ಎಂದು ಭ್ರಮಿಸುವ ನೊದಮೊದಲ ಓದುಗರಲ್ಲ. ನಮಗೇ ಯಾಕೆ ಹೀಗಾಗುತ್ತೆ? ಈ ಪ್ರಶ್ನೆಯನ್ನು ಬದುಕಿನಲ್ಲಿ ಸೋತ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಲ್ಲಿ ಅಲವತ್ತುಕೊಳ್ಳುವುದು ಸಹಜ. ನಮಗೇ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲ ಎನ್ನುತ್ತಾರೆ ಪ್ರಬಂಧಕಾರರು‌ ಒಳಾಂಗಣದ ಬದುಕು ನಮ್ಮ ಕೌಟುಂಬಿಕ ಬದುಕಿನ ಮನೆಯ ನೆಮ್ಮದಿ ಸಂತೋಷದ ತೃಪ್ತಿಯ ಸಥಯವಾ ಕಹಿ ಸಂಬಂಧಗಳ ನೋವಿನ ಕೃತಕತೆಯ ಪ್ರತಿಬಿಂಬ ಎನ್ನುತ್ತ ಈ ತೃಪ್ತಿ ನಾವು ಹೊಂದಿರುವ ಬಂಗಲೆ ಆಸ್ತಿ ಹಣದ ಮೇಲೆ ಅವಲಂಬಿಸಿಲ್ಲ ಎನ್ನುತ್ತಾರೆ ‌ಪ್ರಬಂಧಕಾರರು‌. ಹೆಚ್ಚಿನ ಪ್ರಬಂಧಗಳು ಆಧುನಿಕ ಮನುಷ್ಯನ ಟೊಳ್ಳು ಗಟ್ಟಿಯನ್ನು ವಿಮರ್ಶಿಸಿ ಆ ಟೊಳ್ಳು ಗಟ್ಟಿಯಿಂದ ಹೊರ ಹೋಗುವ ದಾರಿಯನ್ನು ತೋರಿಸುತ್ತವೆ‌ ಉದಾಹರಣೆಗೆ ", ತೀರಿಕೊಂಡವರ ಕುರಿತು ಮಾತು ಬೇಕೆ?" "ಸದಾ ಸ್ವಾಭಿನಂದನೆಯ ಯುಗ", " ಸರ್ಟಿಫಿಕೆಟ್ ದಾತರು", "ಹ್ಯಾಂಗರ್ಸ್ ಆನ್", ", " "ಇತರೆಯವರು" "ಪ್ರಬಂಧಕಾರರಿಗೆ ಉಪದೇಶಾಮೃತ" ಈ ಪ್ರಬಂಧಗಳು ಸೊಶಿಯಲ್ ಇಶ್ಶ್ಯೂಸ್ ಕುರಿತಾದ ವಿಡಂಬನೆ ಬರಹಗಳು. ಸ್ವವಿಡಂಬನೆಯೂ ಇದೆ‌ "ಸಂಬಂಧಗಳನ್ನು ಏಕೆ ತೊರೆಯಬೇಕು?" ಹಳಸಿದ ಮಾನವ ಸಂಬಂಧಗಳು ದಾಂಪತ್ಯ ಸಂಬಂಧಗಳನ್ನೂ ಒಳಗೊಂಡಂತೆ ಈ ಪ್ರಶ್ನೆಯನ್ನೆತ್ತಿದ್ದಾರೆ. ತೊರೆಯುವುದೆ ಕ್ಷೇಮ ಎಂಬ ಧ್ವನಿಯೂ ಇದೆ. ಇಳಿ "ಇಳಿಯಸ್ಸಿನ ಕಾಠಿಣ್ಯ ಇತ್ಯಾದಿ" ವೃದ್ಧರ ಅಸಹಿಷ್ಣುತೆ ತಾಳ್ಮೆಗೆಡುವುದರ ಕಾರಣವಾಗಿ ಅವರ ಮನೋಶಾಸ್ತ್ರದ ವಿವರಣೆ ಇದೆ‌ ಮಸಲ್‌ಮೆಮೊರಿ ಈ ಪ್ರಬಂಧವು ಸರ್ಜನಶೀಲ ಚಟುವಟಿಕೆಗಳೂ ಯಾಂತ್ರಿಕವೆ ಎಂಬ ಪ್ರಶ್ನೆಗೆ ಉತ್ತರವಿದೆ‌. ಇಂದು ಕಂಪ್ಯೂಟರ್ ಕವಿತೆ ಕಥೆ ಕಾದಂಬರಿ ಬರೆಯುವ ಕಾಲ. ಅಂತೆಯೆ ಬರಹಗಾರನೂ ಮಸಲ್ ಮೆಎಮೊರಿಯಿಂದ ಯಾಂತ್ರಿಕವಾಗಿ ಬರೆಯುತ್ತಾನೆ ಎಂಬುದು ಒಂದು ಪ್ರಮೇಯ‌. ಈ ಪ್ರಬಂಧಗಳಲ್ಲಿ ಪ್ರಬಂಧಕಾರರ ಗಾಢವಾದ ಆಳವಾದ ಲೌಕಿಕಾನುಭವ ನಡುಗಟ್ಟಿದೆ‌ argumentative ಪ್ರಬಂಧಗಳಂತೆಯೂ analytical ಪ್ರಬಂಧಗಳಂತೆಯೂ ಎಲ್ಲಕ್ಕಿಂತ ಹೆಚ್ಚಾಗಿ social critical essays ಎಂದೂ ಕರೆಯಬಹುದಾಗಿದೆ‌ ಓದುಗರಿಡನೆ rapport ಸಾಧಿಸುವ ಅವರನ್ನು address ಮಾಡಿ ಅವರನ್ನು ತನ್ನ ವಾದಗಳಿಗೆ ಹೌದೆನ್ನಿಸುವ ಜಾಣ ತರ್ಕ ಈ ಪ್ರಬಂಧಗಳಲ್ಲಿದ್ದು ಓದುವುದರಿಂದ ನಮ್ಮ ಲೋಕಾನುಭವವೂ ಹೆಚ್ಚುತ್ತದೆ‌ ತಲೆಗೆ ಒಂದಿಷ್ಟು ಕೆಲಸ ಕೊಡುತ್ತವೆ ಈ ಪ್ರಬಂಧಗಳು‌ ಓದಿರಿ ಉದಯಕುಮಾರ ಹಬ್ಬು Uday Kumar Habbu is with Satyanarayana Krishnam

Malini Malya - ಶಿವರಾಮ ಕಾರಂತ ವಾಚಿಕೆ ಬಿಡುಗಡೆ

ಸುಧಾ ಆಡುಕಳ - ಮರೆಯಾದ ಲೇಖಕಿ ಮಾಲಿನಿ ಮಲ್ಯರು

ಮರೆಯಾದ ಮಾಲಿನಿ ಮೇಡಂ ಪ್ರತಿಸಲ ಉತ್ತರಕನ್ನಡದಿಂದ ನಮ್ಮ ಕೆಲಸದ ಸ್ಥಳವಾದ ಸುಳ್ಯಕ್ಕೆ ಹೋಗುವಾಗಲೂ ಸಾಲಿಗ್ರಾಮ ಬಂದಾಗ ಬಸ್ ನಿಂದ ಹೊರಗೊಮ್ಮೆ ಇಣುಕುತ್ತಿದ್ದೆ. ಕಾರಣಗಳು ಎರಡು, ಒಂದು ವಿವೇಕಾನಂದರ ಹೆಸರಿನಲ್ಲಿ ಚಂದ್ರಶೇಖರ ಉಡುಪ ಅವರು ನಡೆಸುತ್ತಿದ್ದ ಡಿವೈನ್ ಪಾರ್ಕ್ ಮತ್ತು ಇನ್ನೊಂದು ಮಾಲಿನಿ ಮಲ್ಯ ಅವರ ಶಿವರಾಮ ಕಾರಂತ ಅಧ್ಯಯನ ಕೇಂದ್ರ. ಹತ್ತು ವರ್ಷಗಳಲ್ಲಿ ಒಮ್ಮೆಯೂ ಇಳಿದು ನೋಡಲಾಗದ ಈ ಊರಿಗೆ ಮುಂದೊಂದು ದಿನ ವರ್ಗಾವಣೆಗೊಂಡು ಬಂದೆವು. ಮೊದಲ ವಾರದಲ್ಲಿಯೇ ಮನೆಯಲ್ಲಿರುವ ನಾಲ್ಕೈದು ಮಕ್ಕಳನ್ನು ಜತೆಗೆ ಕಟ್ಟಿಕೊಂಡು ಎರಡೂ ಕೇಂದ್ರಗಳಿಗೆ ಭೇಟಿನೀಡಿದೆವು. ಡಿವೈನ್ ಪಾರ್ಕಿನ ಮೊದಲ ಭೇಟಿಯೇ ಕೊನೆಯ ಭೇಟಿಯೂ ಆಯಿತು. ಆದರೆ ಮಾಲಿನಿ ಮಲ್ಯ ಅವರೊಂದಿಗಿನ ಆತ್ಮೀಯತೆ ಬೆಳೆಯುತ್ತಲೇ ಹೋಯಿತು. ಹಾಗೆಲ್ಲ ಸುಲಭಕ್ಕೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳುವವರಲ್ಲ ಅವರು. ಬದುಕಿನ ಬವಣೆಗಳು ಮತ್ತು ಹತ್ತಿರದವರಿಂದಲೇ ಆದ ಅವಮಾನ ಮತ್ತು ಅವಹೇಳನಗಳು ಎಲ್ಲರನ್ನು ಸಂಶಯಿಸುವಂತೆ ಅವರ ವ್ಯಕ್ತಿತ್ವವನ್ನು ರೂಪಿಸಿದ್ದವು ಅನಿಸುತ್ತದೆ. ಅವರನ್ನು ಭೇಟಿಯಾದಾಗಲೆಲ್ಲ ನಾನು ಬರಿಯ ಕೇಳುಗಳಾಗಿರುತ್ತಿದ್ದೆ. ಕನ್ನಡ ಸಾಹಿತ್ಯ ಲೋಕದ ಅದೆಷ್ಟು ದಿಗ್ಗಜರನ್ನು ಸರಕ್ಕನೆ ಅವರು ಸುಲಿದು ಎದುರಿಗಿಡುತ್ತಿದ್ದರು. ಸಭ್ಯ ಮುಖವಾಡದ ಹಿಂದಿನ ಅಸಲಿಯತ್ತನ್ನು ಮುಲಾಜಿಲ್ಲದೇ ಹೇಳುತ್ತ ಹೋಗುತ್ತಿದ್ದರು. ಜತೆಜತೆಯಲ್ಲಿ ತಮ್ಮನ್ನು ಸುತ್ತಲ ಜಗತ್ತು ವ್ಯಾಖ್ಯಾನಿಸಿದ ಬಗೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಿದ್ದರು. ಸ್ಥಳೀಯಳಲ್ಲದ ಕಿರಿಯ ಸ್ನೇಹಿತೆಯಂತೆ ನಾನು ಕಾಣುತ್ತಿದ್ದುದರಿಂದಲೋ ಏನೋ ಭೇಟಿಯಾದಾಗಲೆಲ್ಲ ತಾಸುಗಟ್ಟಲೆ ಜೀವನದ ಪ್ರವರಗಳನ್ನು ಒಪ್ಪಿಸುತ್ತಿದ್ದರು. ಒಂದೆರಡು ವರ್ಷಗಳ ನಂತರ ಅವರ ಟ್ರಸ್ಟ್ ನ ಭಾಗವಾಗಿ ನನ್ನನ್ನೂ ಸೇರಿಸಿದರು. ಅವರ ಜಿಗುಟುತನದ ಪರಿಚಯವಿದ್ದ ನಾನು ಹಿಂಜರಿಕೆಯಿಂದಲೇ ಒಪ್ಪಿದ್ದೆ. ಮೊದಲ ವರ್ಷಗಳಲ್ಲಿ ಅಲ್ಲಿ ನಡೆಯುತ್ತಿದ್ದ ವಾರಾಂತ್ಯದ ಯಕ್ಷಗಾನ ತರಗತಿಗೆ ನನ್ನ ಮಗನೂ ಹೋಗುತ್ತಿದ್ದುರಿಂದ ಪ್ರತಿ ಭಾನುವಾರ ಒಂದೆರಡು ಗಂಟೆಗಳ ಹರಟೆ ಖಾಯಂ ಆಗಿತ್ತು. ವರ್ಷದಲ್ಲಿ ಎರಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ನನ್ನ ರಚನೆಯ ರಾಧಾ, ನೃತ್ಯಗಾಥಾ, ಚಿತ್ರಾ ಎಲ್ಲವೂ ಅಲ್ಲಿ ಪ್ರದರ್ಶನಗೊಂಡವು. ಪ್ರದರ್ಶನ ನಡೆದಾಗ ಬೇಡವೆಂದರೂ ವೇದಿಕೆಗೆ ಕರೆದು ಸನ್ಮಾನ ಮಾಡುತ್ತಿದ್ದರು. ಶಿವರಾಮ ಕಾರಂತರ ಬ್ಯಾಲೆಯ ಭಾಗವಾಗಿದ್ದ ಸುಧೀರ ಕೊಡವೂರು ಅವರ ಸಖ್ಯವೂ ಇದಕ್ಕೆ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ ಟ್ರಸ್ಟನ್ನು ಅವರ ನಂತರ ನಡೆಸುವ ಬಗೆಗಿನ ಚಿಂತನೆಯಲ್ಲಿ ವ್ಯಸ್ತರಾಗಿದ್ದರು. ಅದರ ನಡುವೆಯೂ ಬಾಳಿಗೊಂದು ಉತ್ತರ ಎಂಬ ಕೃತಿಯನ್ನು ಪ್ರಕಟಿಸಿ ನನಗೂ ಪ್ರತಿ ನೀಡಿದ್ದರು. ಕುವೆಂಪು ಭಾಷಾಭಾರತಿಯ ಸಹಯೋಗದೊಂದಿಗೆ ಒಂದಿಷ್ಟು ಪ್ರಕಟಣೆಗಳನ್ನು ಮಾಡಿ ಕಾರ್ಯಕ್ರಮ ಆಯೋಜಿಸಿದ್ದರು. ನನ್ನ ಸಾಹಿತ್ಯಾಸಕ್ತ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ ಆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯವೂ ನನಗೆ ದಕ್ಕಿತ್ತು. ಟ್ರಸ್ಟ ಬೇರೊಂದು ಸಂಸ್ಥೆಗೆ ವರ್ಗಾವಣೆಯಾದಾಗ ನಾನು ಹೊರಬಂದಿದ್ದೆ. ಅದರ ನಂತರವೂ ಅವರ ಭೇಟಿಗೆಂದು ಮನೆಗೆ ಒಂದೆರಡು ಸಲ ಹೋಗಿದ್ದೆ. ಆದರೆ ಅನಾರೋಗ್ಯದಿಂದ ಅವರು ಬೆಂಗಳೂರು ಸೇರಿದ್ದರು. ಅವರನ್ನು ಸಂಪರ್ಕಿಸಲು ಇದ್ದುದು ಮನೆಯ ಲ್ಯಾಂಡ್ ನಂಬರ್ ಮಾತ್ರ. ಅವರು ಮೊಬೈಲ್ ಬಳಸುತ್ತಿರಲಿಲ್ಲ. ಪೆನ್ ಕೂಡ ಹಿಡಿಯಲು ಅವರಿಗೆ ಸಾಧ್ಯವಿಲ್ಲದ್ದರಿಂದ ಬರೆಯಲು ಟೈಪ್ ರೈಟರ್ ಬಳಸುತ್ತಿದ್ದರು. ಹಾಗಾಗಿ ಕೊನೆಯ ಹಂತದಲ್ಲಿ ಮಾತಾಡಿಸಬೇಕೆಂಬ ಬಯಕೆ ಹಾಗೆಯೇ ಉಳಿದುಹೋಯ್ತು. ಇಲ್ಲಿ ಬರೆಯಲಾಗದ ಅವರ ಅದೆಷ್ಟೋ ಒಡಲಾಳದ ಮಾತುಗಳು ಈ ಗಳಿಗೆಯಲ್ಲಿ ಮತ್ತೆ ನೆನಪಾಗಿ ಮನಸ್ಸು ತಳಮಳಿಸುತ್ತಿದೆ. ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಹೀಗೆ ಸಾಹಿತಿಗಳೊಬ್ಬರ ಎಲ್ಲ ಸ್ಮೃತಿಗಳನ್ನು, ಬರಹಗಳನ್ನು, ಬಳಸಿದ ವಸ್ತುಗಳನ್ನು, ಅವರ ಎಲ್ಲ ಸೃಜನಶೀಲ ಅಭಿವ್ಯಕ್ತಿಗಳನ್ನು ಜತನದಿಂದ ಬೇರೊಬ್ಬರು ಸಂಗ್ರಹಿಸಿಟ್ಟ ದಾಖಲೆ ಇಲ್ಲವೇನೊ? ಶಿವರಾಮ ಕಾರಂತರ ಎಲ್ಲವನ್ನೂ ಅಷ್ಟು ಜೋಪಾನವಾಗಿ, ಕಿಂಚಿತ್ ಧೂಳುಗಟ್ಟದಂತೆ ಕೊನೆಯ ಉಸಿರಿನವರೆಗೆ ಕಾಪಾಡಿದ ಬದ್ಧತೆ ಅವರದ್ದು. ಅದಕ್ಕೆಂದೇ ಉದ್ದಾಮರನೇಕರ, ಸ್ಥಳೀಯರ ದ್ವೇಷವನ್ನೂ ಅವರು ಕಟ್ಟಿಕೊಂಡಿದ್ದರು. ಎಷ್ಟು ಹೊತ್ತಿಗೆ ಯಾರೇ ಬಂದರೂ ಮಗುವಿನ ಸಡಗರದಿಂದ ಎಲ್ಲವನ್ನೂ ಕರೆದು ತೋರಿಸುತ್ತಿದ್ದರು. ಆದರೆ ಫೋಟೋ ತೆಗೆಯುವುದನ್ನೂ ನಿಷೇಧಿಸುವಷ್ಟು ಕಠಿಣರಾಗಿದ್ದರು. ಯಾರಾದರೂ ಕೃತಿಹಕ್ಕನ್ನು ಕದ್ದಾರೆಂಬ ಭಯ ಅವರನ್ನು ಅಷ್ಟು ಕಾಡುತ್ತಿತ್ತು ಅನಿಸುತ್ತದೆ. ಅವರ ಜೀವನದ ಕಡೆಯ ವರ್ಷಗಳಲ್ಲಿ ಜತೆಗಾತಿಯಾಗಿದ್ದ ಅಕ್ಕನನ್ನು ಕಳಕೊಂಡ ನಂತರ ಒಂದಿಷ್ಟು ಇಳಿದುಹೋಗಿದ್ದರು. ಎಷ್ಟೆಲ್ಲವನ್ನು ಹೇಳಿಕೊಂಡರೂ ಇನ್ನೆಷ್ಟನ್ನೋ ಹೇಳಿಕೊಳ್ಳಲಾಗದ ಜ್ವಾಲಾಮುಖಿಯೊಡಲ ಬೆಟ್ಟದಂತೆ ಅವರು ಕಾಣುತ್ತಿದರು. ಒಮ್ಮೆ ಕೋಪಗೊಳ್ಳುತ್ತಾ, ಇನ್ನೊಮ್ಮೆ ನಗುತ್ತಾ ತಮ್ಮದೇ ಹಾವಭಾವದೊಂದಿಗೆ ತಮನ್ನು ಯಾಮಾರಿಸಲು ಬಂದವರ ಕಥೆ ಹೇಳುವ ಅವರ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ಶಿವರಾಮ ಕಾರಂತರು ಬಳಸುತ್ತಿದ್ದ ಕಾರನ್ನು ಲಕ್ಷಗಟ್ಟಲೆ ಖರ್ಚುಮಾಡಿ ಸುಸ್ಥಿತಿಗೆ ತಂದು ಪ್ರದರ್ಶನ ಮಾಡಿದ ದಿನದಂದು ಅವರು ಕಾರು ಮತ್ತು ಕಾರಂತರು ಕುರಿತು ಮಾತಾಡಿದ ಭಾಷಣ ಅವರ ಅತ್ಯುತ್ತಮ ಭಾಷಣಗಳಲ್ಲೊಂದು. ಎಷ್ಟೆಲ್ಲ ನೆನಪುಗಳು! ಅವರು ಕಾಪಿಟ್ಟ ಕಾರಂತರ ಸ್ಮೃತಿಗಳು ನಾಳಿನ ಜನರಿಗಾಗಿ ಹಾಗೆಯೇ ಉಳಿಯಲಿ, ಅವರ ಹೆಸರಿನೊಂದಿಗೆ ಎಂಬುದಷ್ಟೇ ಈ ಕ್ಷಣದ ಹಾರೈಕೆ. ಹೋಗಿಬನ್ನಿ ಮಾಲಿನಿ ಮೇಡಂ. ನಿಮ್ಮ ಋಣ ಜಗದ ಮೇಲಿದೆ... https://m.facebook.com/story.php?story_fbid=837262576704298&id=100012616905097&mib

Thursday, February 23, 2023

ನರೇಶ್ ಮುಳ್ಳೇರಿಯ - ಇಪ್ಪತ್ತೊಂದನೆಯ ಶತಮಾನದ ಕಾಸರಗೋಡಿನ ಕನ್ನಡ ಸಾಹಿತ್ಯ /Kasaragod Kannada Literature

#ಇಪ್ಪತ್ತೊಂದನೆಯ_ಶತಮಾನದ_ಕಾಸರಗೋಡಿನ_ಕನ್ನಡ_ಸಾಹಿತ್ಯ ಆಧುನಿಕ ಕನ್ನಡಸಾಹಿತ್ಯ ಚಿಗುರೊಡೆಯುವಲ್ಲಿ‌ ಕಾಸರಗೋಡಿನ ಮಣ್ಣು ಕೂಡ ಪ್ರಧಾನ ಪಾತ್ರ ವಹಿಸಿದ್ದು ಚಾರಿತ್ರಕ ಸತ್ಯ. ಸಾಂಪ್ರದಾಯಿಕ ಛಂದಸ್ಸುಗಳಿಂದ ಭಿನ್ನವಾಗಿ ಪ್ರಾಸತ್ಯಾಗವೇ ಮೊದಲಾದ ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡವರಲ್ಲಿ ಮೊದಲಿಗರಾದ ಮಂಜೇಶ್ವರ ಗೋವಿಂದ ಪೈಗಳನ್ನು ಆಧುನಿಕ ಕನ್ನಡಸಾಹಿತ್ಯದ ಹರಿಕಾರರಲ್ಲೊಬ್ಬರು ಎನ್ನಬಹುದು. ನವೋದಯದ ಪ್ರಮುಖ ಲೇಖಕರಾದ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಬೇಕಲ ರಾಮ ನಾಯಕ, ಲಕ್ಷ್ಮೀ ನಾರಾಯಣ ಪುಣಿಂಚತ್ತಾಯ, ವೆಂಕಟ ರಾಜ ಪುಣಿಂಚತ್ತಾಯ ಸಿರಿಬಾಗಿಲು ವೆಂಕಪ್ಪಯ್ಯ, ಪೆರ್ಲ ಕೃಷ್ಣಭಟ್, ಲಲಿತಾ ಎಸ್ ಎನ್ ಭಟ್ ಮೊದಲಾದವರಿಂದ ತೊಡಗಿ ನವ್ಯ ಸಾಹಿತ್ಯದ ಪ್ರಮುಖರಾದ ಕೆ. ವಿ ತಿರುಮಲೇಶ್, ಎಂ ವ್ಯಾಸ, ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ ಕಾಸರಗೋಡು ಮೊದಲಾದವರು ಇಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಬೆಳೆಸಿದರು. ನವೋದಯ ನವ್ಯಯುಗಗಳಲ್ಲಂತೂ ಕಾಸರಗೋಡಿನಲ್ಲಿ ಮನೆಗೊಬ್ಬರಂತೆ, ಬೀದಿಗೊಬ್ಬರಂತೆ ಕವಿಗಳು ಕಲಾವಿದರು ಯಕ್ಷ ಕಲಾವಿದರು ಸಾಹಿತಿಗಳು ಜೀವಿಸಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ದೇಶಭಕ್ತಿ, ನಾಡು ನುಡಿಪ್ರೇಮಗಳ ಕಿಡಿ ಹಚ್ಚಿದ ನವೋದಯ ಕಾಲದಲ್ಲಿ ಕಾಸರಗೋಡಿನಲ್ಲಿ ಉತ್ತುಂಗದಲ್ಲಿದ್ದ ಕನ್ನಡಚಳುವಳಿ ಸಹಜವಾಗಿ ಸಾಹಿತಿಗಳ ಸಂಖ್ಯೆಯನ್ನೂ ಸಾಹಿತ್ಯಕೃತಿಗಳ ಸಂಖ್ಯೆಯನ್ನೂ ಪಂಡಿತರಿಂದ ತೊಡಗಿ ಶ್ರೀಸಾಮಾನ್ಯನವರೆಗೆ ಜನರ ಕಾವ್ಯೋತ್ಸಾಹವನ್ನು ಹೆಚ್ಚಿಸಿತ್ತು. ನವ್ಯಕಾಲದಲ್ಲೂ ಸಾಹಿತ್ಯಕೃಷಿ ಹುಲುಸಾಗಿ ಬೆಳೆಯಿತು. ಅಖಿಲ ಕರ್ನಾಟಕ ಮಟ್ಟದಲ್ಲಿ ಸುಪ್ರಸಿದ್ಧರಾದ ಹಲವು ಮಂದಿ ಕವಿಗಳು, ಸಂಶೋಧಕರು, ಕತೆಗಾರರು, ಕಾದಂಬರಿಕಾರರು, ವಿನೋದಲೇಖಕರು, ಪತ್ರಕರ್ತರು ಮೂಲತಃ ಕಾಸರಗೋಡಿನವರೆಂಬುದು ನಮಗೆ ಹೆಮ್ಮೆಯ ವಿಷಯ. ಕಾಸರಗೋಡಿನಲ್ಲಿದ್ದು ಸಾಹಿತ್ಯ ವ್ಯವಸಾಯ ಮಾಡಿದವರು, ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆ ಮಾಡಿದವರು ಹೀಗೆ ಎರಡು ಬಗೆಯ ಸಾಹಿತಿಗಳು ಇದ್ದರು. ಕೆ ವಿ ತಿರುಮಲೇಶ್ ,ಸಾರಾ ಅಬೂಬಕರ್, ನಾ ಮೊಗಸಾಲೆ, ಕೆ ಟಿ ಗಟ್ಟಿ, ವಸಂತಕುಮಾರ ಪೆರ್ಲ, ಡಿ ಎನ್ ಶಂಕರ ಭಟ್, ಈಶ್ವರಯ್ಯ, ಜನಾರ್ದನ ಎರ್ಪಕಟ್ಟೆ ಮೊದಲಾದವರು ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆಯನ್ನು ಮಾಡಿದ ಲೇಖಕರು. ನವೋದಯ ಮತ್ತು ನವ್ಯಕಾಲದಲ್ಲಿ ಕಾವ್ಯದಲ್ಲಿ ಸಂಖ್ಯೆಯಲ್ಲೂ ಸತ್ವದಲ್ಲೂ ಮಿಗಿಲಾದ ಕೃತಿಗಳು ಹುಟ್ಟಿಕೊಂಡವು. ಕಾವ್ಯ, ಸಂಶೋಧನೆ ಮತ್ತು ಕಾದಂಬರಿ ಪ್ರಕಾರಗಳಿಗೆ ನವೋದಯದ ಕೊಡುಗೆ ಅಪಾರ. ನವೋದಯದ ಹೆಚ್ಚಿನ ಕೃತಿಗಳಲ್ಲಿ ದೇಶ ನಾಡು ನುಡಿಗಳ ಬಗ್ಗೆ ಭಕ್ತಿ ಮತ್ತು ಪ್ರೇಮವಲ್ಲದೆ ಕಾಸರಗೋಡಿನ ಕನ್ನಡ ಚಳುವಳಿಗೆ ಬೆಂಬಲವೂ ವ್ಯಕ್ತವಾಗಿತ್ತು. ನವ್ಯಕಾಲದಲ್ಲಿ ಕಾವ್ಯವಲ್ಲದೆ ನಾಟಕ, ಸಣ್ಣಕತೆ, ಕಾದಂಬರಿ ಪ್ರಕಾರಗಳು ಬೆಳೆದವು. ನವ್ಯಯುಗದ ಪ್ರಧಾನ ಲಕ್ಷಣಗಳಾದ ವ್ಯಕ್ತಿಕೇಂದ್ರಿತ ಶೋಧನೆ, ಮನಸ್ಸು ಕೇಂದ್ರಿತ ಜಿಜ್ಞಾಸೆ, ವಾಸ್ತವನಿಷ್ಠೆ ಕಾಸರಗೋಡಿಗರ ಕೃತಿಗಳಲ್ಲೂ ವ್ಯಕ್ತವಾದವು. ಪ್ರಗತಿಶೀಲ, ಬಂಡಾಯ, ದಲಿತ, ಸ್ತ್ರೀವಾದಿ ಸಾಹಿತ್ಯಪ್ರಕಾರಗಳು ಕಾಸರಗೋಡಿನಲ್ಲಿ ಅಷ್ಟಾಗಿ ಬೆಳೆಯಲಿಲ್ಲ. ಇದಕ್ಕೆ ನವೋದಯ ನವ್ಯ ಚಳುವಳಿಗಳ ಪ್ರಭಾವವೂ ಮಲಯಾಳೀಕರಣದ ವಿರುದ್ಧ ಕನ್ನಡಿಗರು ಒಂದಾಗಿರಬೇಕಾದ ಅನಿವಾರ್ಯತೆಯೂ ಕಾರಣವಾಗಿದ್ದಿರಬಹುದು. ಪ್ರಮುಖ ದಲಿತ ಹಾಗೂ ಮಹಿಳಾ ಸಾಹಿತಿಗಳು ಇಲ್ಲಿದ್ದರೂ ಅವರು ಹೆಚ್ಚಾಗಿ ಸಾಹಿತ್ಯದ ಮುಖ್ಯವಾಹಿನಿಯಲ್ಲಿದ್ದುಕೊಂಡು ಬರೆದರು. ಹಾಗಿದ್ದರೂ ಜನಾರ್ದನ ಎರ್ಪಕಟ್ಟೆ, ರಾಧಾಕೃಷ್ಣ ಉಳಿಯತ್ತಡ್ಕ ಮೊದಲಾದವರ ಬರಹಗಳಲ್ಲಿ ದಲಿತಪ್ರಜ್ಞೆ ಲಲಿತಾ ಎಸ್ ಎನ್ ಭಟ್, ಲಕ್ಷ್ಮೀ ಕುಂಜತ್ತೂರು, ಮಹೇಶ್ವರಿ, ಅನುಪಮಾ ಪ್ರಸಾದ್ ಮೊದಲಾದವರ ಕೃತಿಗಳಲ್ಲಿ ಸ್ತ್ರೀಪ್ರಜ್ಞೆ ಸುಪ್ತವಾಗಿ ಹರಿಯುತ್ತಿದ್ದುದನ್ನು ಗುರುತಿಸಬಹುದು. ಕನ್ನಡ ಸಾಹಿತ್ಯಕ್ಕೆ ಕಾಸರಗೋಡಿನ ಪ್ರಧಾನ ಕೊಡುಗೆ ಕಾವ್ಯವೇ ಆಗಿದೆ. ಕನ್ನಡ ತುಳು ಭಾಷೆಗಳ ಪ್ರಾಚೀನತೆಗೆ ಸಾಕ್ಷ್ಯವನ್ನೊದಗಿಸಿದ ಮಹತ್ವದ ಸಂಶೋಧನೆಗಳು ಗೋವಿಂದ ಪೈ, ಪುಣಿಂಚತ್ತಾಯ ಮೊದಲಾದವರಿಂದ ನಡೆದಿದೆ. ಗಮನಾರ್ಹ ನಾಟಕಗಳು, ಕಾದಂಬರಿಗಳು ಪ್ರಕಟವಾಗಿವೆ. ಸಣ್ಣ ಕತೆಯಲ್ಲಿ ಎಂ ವ್ಯಾಸ, ಕೆ ಟಿ ಗಟ್ಟಿ, ಅನುಪಮಾ ಪ್ರಸಾದ್ ಕಾದಂಬರಿಯಲ್ಲಿ ಸಾರಾ ಅಬೂಬಕರ್, ಗೋಪಾಲಕೃಷ್ಣ ಪೈ, ಮೊಗಸಾಲೆ ಮೊದಲಾದವರು ಅಖಿಲ ಕರ್ನಾಟಕ ಖ್ಯಾತಿ ಪಡೆದಿದ್ದಾರೆ. ಹಾಗಿದ್ದರೂ ಸಂಖ್ಯೆಯಲ್ಲೂ ಸತ್ವದಲ್ಲೂ ಮೆರೆದದ್ದು ಕಾವ್ಯವೇ. ಯಕ್ಷಕವಿ ಪಾರ್ತಿಸುಬ್ಬನಿಂದ ತೊಡಗಿ ಆಧುನಿಕ ಕಾಲದ ರಾಷ್ಟ್ರಕವಿ ಗೋವಿಂದ ಪೈ, ಕನ್ನಡದ ಕಹಳೆಯೂದಿದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ತಿರುಮಲೇಶ್, ವೇಣುಗೋಪಾಲ ಹಾಗೂ ಅನೇಕ ಕವಿಗಳು ಕಾಸರಗೋಡಿನ ಖ್ಯಾತಿಯನ್ನು ಬೆಳಗಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕಾಸರಗೋಡು ಜಿಲ್ಲೆಯ ರಚನೆಯ ನಂತರದ ಅದರಲ್ಲೂ ಇಪ್ಪತ್ತೊಂದನೇ ಶತಮಾನದ ಈಚೆಗಿನ ಆಧುನಿಕ ಕನ್ನಡಸಾಹಿತ್ಯದ ಬೆಳವಣಿಗೆಗೆ ಮಹತ್ವ ನೀಡಿ ಒಟ್ಟು ಆಧುನಿಕ ಸಾಹಿತ್ಯದತ್ತ ಇಣುಕುನೋಟ ಬೀರಬೇಕಾಗಿದೆ. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಬದುಕನ್ನು ಪ್ರಭಾವಿಸುತ್ತಿರುವ ಕ್ಷಿಪ್ರ ಬದಲಾವಣೆಗಳು, ವ್ಯಕ್ತಿ- ಸಮಾಜ-ಮಾನವೀಯ ಸಂಬಂಧಗಳಲ್ಲಾಗುತ್ತಿರುವ ಪಲ್ಲಟಗಳು, ಬೌದ್ಧಿಕ ಭಾವುಕ ನೆಲೆಗಳಲ್ಲಿ ಜರಗುತ್ತಿರುವ ಪರಿವರ್ತನೆಗಳು ಹೀಗೆ ವರ್ತಮಾನದ ತಲ್ಲಣಗಳು ನವ್ಯೋತ್ತರ ಯುಗದಲ್ಲಿ ಕವಿಗಳನ್ನು ಕಾಡಿದೆ. ಹಾಗಿದ್ದರೂ ಸಶಕ್ತ ಕಾವ್ಯ ಚಳುವಳಿಯೊಂದನ್ನು ನಾವು ಕಾಣಲಿಲ್ಲ. ಕಾವ್ಯಪ್ರಜ್ಞೆಯನ್ನು ನಿರ್ದೇಶಿಸುವ ಪಂಥಗಳಿಲ್ಲದ ಮುಕ್ತಸ್ವಾತಂತ್ರ್ಯವನ್ನು ಹಾಗೂ ಆ ಅನುಕೂಲತೆಗಳನ್ನು ಕಾಸರಗೋಡಿನ ಸಾಹಿತಿಗಳು ಅನುಭವಿಸುತ್ತಿದ್ದಾರೆ. ಪ್ರತಿಭೆ ಮತ್ತು ಅಧ್ಯಯನದ ಬಲದಿಂದ ಕಾವ್ಯಪರಿಕರಗಳನ್ನು ಕೈವಶಮಾಡಿಕೊಂಡ ತಿರುಮಲೇಶ್, ಮೊಗಸಾಲೆ, ವಸಂತಕುಮಾರ ಪೆರ್ಲರಂತಹವರು ಹೊಸ ಕಾವ್ಯಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಬೆಚ್ಚಿ ಬೀಳಿಸುವ ವೈಚಾರಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸವಾಲುಗಳ ಪ್ರಪಂಚದಲ್ಲಿ ಈಗ ತಾನೇ ಕಣ್ಣುಬಿಡುತ್ತಿರುವ ಎಳೆಯ ಸಾಹಿತಿಗಳು ಹೆಜ್ಜೆಯೂರುತ್ತಿದ್ದಾರೆ. ಇವೆರಡು ವಿಭಾಗಗಳ ನಡುವಿನ ತಲೆಮಾರಿನ ಮುಖ್ಯಕವಿಗಳಲ್ಲಿ ಈಗಾಗಲೇ ಕಾವ್ಯಲೋಕದಲ್ಲಿ ನೆಲೆಕಂಡಿರುವ ಕೆಲವರು ತಾತ್ತ್ವಿಕ ಹುಡುಕಾಟವನ್ನೂ ಇತರರು ಕಾವ್ಯಕ್ಕೆ ಭಾವಾರ್ದ್ರತೆಯನ್ನು ತರುವ ಪ್ರಯತ್ನವನ್ನೂ ಒಟ್ಟಿನಲ್ಲಿ ಮಾನವೀಯ ಸಂಬಂಧಗಳ ಶೋಧನೆಯನ್ನು ಮುಖ್ಯ ಕಾಳಜಿಯಾಗಿರಿಸಿಕೊಂಡಂತಿದೆ. ಈ ನಡುವೆ ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ, ಎಂ ವ್ಯಾಸ, ಬಿ ಕೃಷ್ಣ ಪೈ, ವೆಂಕಟರಾಜ ಪುಣಿಂಚತ್ತಾಯ, ಎರ್ಪಕಟ್ಟೆ, ತುಳಸಿ ವೇಣುಗೋಪಾಲ್,ರವಿಶಂಕರ ಒಡ್ಡಂಬೆಟ್ಟು, ಕಯ್ಯಾರರಂತಹ ದೊಡ್ಡ ಹಾಗೂ ಭರವಸೆಯ ಸಾಹಿತಿಗಳನ್ನು ಕಳೆದುಕೊಂಡವರಾಗಿದ್ದೇವೆ. ಕಾಸರಗೋಡು ಮೂಲದ ಧನಂಜಯ ಕುಂಬಳೆ, ಟಿ ಎ ಎನ್ ಖಂಡಿಗೆ, ಮೋಹನ ಕುಂಟಾರು ಮೊದಲಾದವರು ಕರ್ನಾಟಕದಲ್ಲಿದ್ದುಕೊಂಡು ಕಾವ್ಯವ್ಯವಸಾಯ ಮುಂದುವರೆಸಿದ್ದಾರೆ. ಕಾಸರಗೋಡಿನಲ್ಲಿದ್ದುಕೊಂಡು ಕಳೆದ ದಶಕಗಳಲ್ಲಿ ಕಾವ್ಯರಂಗದಲ್ಲಿ ಸಕ್ರಿಯರಾಗಿ ಪುಸ್ತಕ ಪ್ರಕಟಿಸಿದ ಪ್ರಮುಖರಲ್ಲಿ ರಮಾನಂದ ಬನಾರಿ, ವಿಜಯಲಕ್ಷ್ಮಿ ಶಾನುಭಾಗ್, ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಬೆಳ್ಳೂರು ಮತ್ತು ಶ್ರೀಕೃಷ್ಣಯ್ಯ ಅನಂತಪುರ,, ನರಸಿಂಹ ಭಟ್, ಯು. ಮಹೇಶ್ವರಿ, ಹರಿಕೃಷ್ಣ ಭರಣ್ಯ ಮೊದಲಾದವರನ್ನು ಹೆಸರಿಸಬಹುದು. ನಾ ದಾ ಶೆಟ್ಟಿ, ಎಂ ದಿವಾಕರ ರೈ, ಹರೀಶಪೆರ್ಲ, ವಿರಾಜ್ ಅಡೂರು, ವಿ ಬಿ ಕುಳಮರ್ವ, ಹಮೀದ್ ಮಂಜೇಶ್ವರ, ಸುಂದರ ಬಾರಡ್ಕ, ಗಂಗಾರತ್ನ ಪಾತೂರು, ನರೇಶ್ ಮುಳ್ಳೇರಿಯ, ವೆಂಕಟ ಭಟ್, ಪಿ ಎನ್ ಮೂಡಿತ್ತಾಯ, ಶೈಲಜಾ ಪುದುಕೋಳಿ, ಕೇಶವ ಶೆಟ್ಟಿ ಆದೂರು, ರತ್ನಾಕರ ಮಲ್ಲಮೂಲೆ, ಲಕ್ಷ್ಮೀ ಕೆ, ಪದ್ಮಾವತಿ ಏದಾರು, ಶ್ರೀಶಕುಮಾರ, ಬಾಲ ಮಧುರಕಾನನ, ಸಿ ಎಚ್ ಗೋಪಾಲಭಟ್, ಜಯ ಮಣಿಯಂಪಾರೆ, ಬಾಲಕೃಷ್ಣ ರೈ ಕಳ್ವಾಜೆ, ಪಿ ಪುರುಷೋತ್ತಮ ಭಟ್, ಕಕ್ಕೆಪ್ಪಾಡಿ ಶಂಕರ ನಾರಾಯಣ ಭಟ್, ದಿವ್ಯಗಂಗಾ ಪಿ, ಸೌಮ್ಯಾ ಪ್ರಸಾದ್, ಉದಯರವಿ ಕೊಂಬ್ರಾಜೆ, ರಾಜ್ಯಶ್ರೀ ಕುಳಮರ್ವ, ಜ್ಯೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ಪ್ರಭಾವತಿ ಕೆದಿಲಾಯ, ಶ್ಯಾಮಲಾ ರವಿರಾಜ್, ನಾರಾಯಣ ಭಟ್, ನವೀನ್ ಎಲ್ಲಂಗಳ, ಗೀತಾಲಕ್ಷ್ಮಿ ಪುಂಡೂರು, ದಿವಾಕರ ಬಲ್ಲಾಳ್, ಎಸ್ ಎನ್ ಭಟ್ ಪೆರ್ಲ, ಲತಾ ಆಚಾರ್ಯ ಬನಾರಿ ಹೀಗೆ ಬಹಳ ಮಂದಿ ಬರೆಯುತ್ತಿದ್ದಾರೆ, ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯುತ್ತದೆ. ಹಿರಿಯ ಕಿರಿಯ ಸಾಹಿತಿಗಳಲ್ಲಿ ಇಲ್ಲಿ ಹೆಸರು ಬಿಟ್ಟು ಹೋದವರದೇ ಸಂಖ್ಯೆ ಹೆಚ್ಚಿರಬಹುದು. ಪುಟ್ಟಲೇಖನವೊಂದರ ಇತಿಮಿತಿಯಲ್ಲಿ ಸಾಹಿತ್ಯರಂಗದ ಸಮಗ್ರದರ್ಶನ ಅಸಾಧ್ಯ, ಕ್ಷಮೆಯಿರಲಿ. ಕಾಸರಗೋಡಿಗರ ಬರವಣಿಗೆ ಮುಖ್ಯವಾಗಿ ಭಾವಪ್ರಧಾನವಾದುದು. ಇಲ್ಲಿನ ವಿಶಿಷ್ಟ ಭಾಷಿಕ ಸಾಂಸ್ಕೃತಿಕ ರಾಜಕೀಯ ಪರಿಸ್ಥಿತಿಗಳ ಒತ್ತಡ ಕಾರಣವಿರಬಹುದು. ವಿಭಿನ್ನ ಮನೆಮಾತುಗಳಿದ್ದು ಶಾಲೆಗಳಲ್ಲಿ ಕಲಿತ ಗ್ರಾಂಥಿಕ ಕನ್ನಡವೇ ಹೆಚ್ಚಿನ ಕೃತಿಗಳಲ್ಲಿ ಅಭಿವ್ಯಕ್ತಿಮಾದ್ಯಮವಾಗಿದೆ. ಸಾಂಸ್ಕೃತಿಕವಾಗಿ ಕನ್ನಡಿಗನೆಂಬ ಅಸ್ತಿತ್ವ ಸಾಧಿಸಬೇಕಾದ ತುರ್ತು ಬರಹಗಳಲ್ಲಿ ಗೋಚರಿಸುತ್ತದೆ. ಭಾವ ಪ್ರಕಟಣೆಗೆ ಕಾವ್ಯವೇ ಪ್ರಧಾನ ಮಾರ್ಗವಾಗಿರುವುದನ್ನು ಗಮನಿಸುವಾಗ ಕಾಸರಗೋಡಿನ ವಿಶಿಷ್ಟ ಭಾಷಾ ರಾಜಕೀಯ ಹಾಗೂ ವಿವಿಧತೆಯಲ್ಲಿ ಏಕತೆಯಂತಿರುವ ಸಾಂಸ್ಕೃತಿಕ ಪರಿಸ್ಥಿತಿ ಇತರ ಪ್ರಕಾರಗಳಿಗಿಂತಲೂ ಕಾವ್ಯಸೃಷ್ಟಿಯನ್ನು ಹೆಚ್ಚಾಗಿ ಉತ್ತೇಜಿಸಿರುವುದು ಸಹಜವೆನಿಸುತ್ತದೆ. ಕೇರಳದಲ್ಲಿ ಕನ್ನಡಿಗನಾಗಿ ಬಾಳಬೇಕಾದ ಅನಿವಾರ್ಯತೆ, ಅನಾಥ ಪ್ರಜ್ಞೆ, ಮಲಯಾಳೀಕರಣಕ್ಕೆ ಪ್ರತಿರೋಧ, ಹೋರಾಟದ ಕೆಚ್ಚು ಭಾವನಾತ್ಮಕವಾಗಿ ಬರಹಗಾರರ ಕಾವ್ಯಕಸುಬಿಗೆ ಪೂರಕವಾಗಿವೆ. ಕಾಸರಗೋಡಿನ ಈಚೆಗಿನ ಕಾವ್ಯಕೃಷಿಯನ್ನು ಗಮನಿಸಿದರೆ ನವುರು ಭಾವಾಭಿವ್ಯಕ್ತಿ, ತಾತ್ವಿಕ ಹುಡುಕಾಟ, ಅನುಭಾವಿಕ ಶೋಧನೆಗಳನ್ನು ಮುಖ್ಯವಾಗಿ ಕಾಣಬಹುದು. ಜಾಗತೀಕರಣ, ಕೋಮುವಾದ,ಭಯೋತ್ಪಾದನೆ, ರಾಜಕೀಯ ಹಿಂಸೆ, ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಅಸ್ಥಿರತೆಗಳ ಪ್ರತಿಫಲನ ಸಾಹಿತ್ಯಕೃತಿಗಳಲ್ಲಿ ಗಾಢವಾಗಿಯಲ್ಲದಿದ್ದರೂ ಪರೋಕ್ಷವಾಗಿ ಹಣಕಿವೆ. ಆದರೆ ಸಾಮಾಜಿಕ ಕಳಕಳಿ ಆಕ್ರೋಶ ಅಥವಾ ಅಸಹನೆಯಾಗದೆ ಮಾನವೀಯ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಕಟಗೊಂಡಿವೆ. ಬೇರೆ ಬೇರೆ ಕಾರಣಗಳಿಂದ ದುರ್ಬಲಗೊಳ್ಳುತ್ತಿರುವ ಕನ್ನಡ ಚಳುವಳಿಯ ಪ್ರಭಾವ ಈಚೆಗಿನ ಕವಿಗಳಲ್ಲಿ ಪ್ರತ್ಯಕ್ಷವಾಗಿ ಕಾಣದಿದ್ದರೂ ಸುಪ್ತವಾಗಿದೆ. ಹೋರಾಟಗಾರ ಧೀಮಂತನಾಯಕ ಯು ಪಿ ಕುಣಿಕುಳ್ಳಾಯರ 'ಇವರೆಲ್ಲಿಯವರು' ಕೃತಿಯ ಹೆಸರೇ ಸೂಚಿಸುವಂತೆ ಕನ್ನಡಿಗರ ಆತಂಕ ತಳಮಳಗಳನ್ನು ಬಿಂಬಿಸುತ್ತದೆ. ಅಬ್ಬರದ ಭಾವಾವೇಶ, ನಾಟಕೀಯತೆ, ವಿಡಂಬನೆ, ಆಕ್ರೋಶ, ವ್ಯಕ್ತಿಪ್ರಜ್ಞೆಗಳ ಬದಲು ನವುರು ಭಾವಗಳಿಗೆ, ಮಾನವೀಯ ಸಂಬಂಧಗಳಿಗೆ, ದೇಸೀಯತೆಗೆ, ಸಮಾಜಮುಖಿ ಧೋರಣೆಗೆ ಈಗ ಒತ್ತು ನೀಡಲಾಗುತ್ತಿದೆ. ಭಾಷೆ, ಲಯ, ಛಂದಸ್ಸುಗಳಲ್ಲಿ ಪ್ರಯೋಗಶೀಲತೆ ಜತೆ ಗಜಲ್, ಚುಟುಕ, ಹಾಯಿಕು ಮೊದಲಾದ ಪ್ರಕಾರಗಳಲ್ಲೂ ಕೆಲವರು ಕೈಯ್ಯಾಡಿಸುತ್ತಿದ್ದಾರೆ. ನವೋದಯ ನವ್ಯಯುಗದಲ್ಲಿ ಧುಮ್ಮಿಕ್ಕಿದ ಕಾವ್ಯಧಾರೆ ಈಗ ಹಲವು ಕವಲೊಡೆದು ವಿಶಾಲ ಬಯಲಲ್ಲಿ ಸಾಗುತ್ತಿದೆ. ನವೋದಯದ ಭಾಷೆ, ಲಯ, ಪ್ರಾಸ ಛಂದೋಪ್ರಯೋಗ ಕೆಲವೆಡೆ ಕಾಣಿಸುತ್ತಿದೆ. ಲಯಾನ್ವಿತ ಕಾವ್ಯ, ಭಾವಗೀತೆ, ಭಕ್ತಿಗೀತೆ, ಭಾಮಿನಿ ಷಟ್ಪದಿ, ವೈದ್ಯಕಾವ್ಯ, ಯಕ್ಷಪ್ರಸಂಗ ಹೀಗೆ ಹಲವಾರು ಸ್ವರೂಪಗಳು, ಮಾಧ್ಯಮಗಳು ಕಾವ್ಯಕ್ಕೆ ಒಲಿದಿವೆ. ಕನ್ನಡದಲ್ಲಿ ಬರೆಯುತ್ತಿರುವ ಕವಿಗಳು ತುಳು, ಹವ್ಯಕ, ಕರಾಡ, ಕೊಂಕಣಿ ಮೊದಲಾದ‌ ಭಾಷೆಗಳಲ್ಲೂ ಬರೆಯುತ್ತಿದ್ದು ಬಹುಭಾಷಾ ಕವಿಗೋಷ್ಠಿಗಳು ಹೊಸನುಡಿಗಟ್ಟುಗಳ ತುಡಿತಕ್ಕೆ ಸಾಕ್ಷಿಗಳಾಗಿವೆ. ಕನ್ನಡ ಮಲಯಾಳ ಆಂಗ್ಲ ಕೃತಿಗಳ ಅನುವಾದ ಕೂಡ ಪ್ರಕಟಗೊಂಡಿವೆ. ತುಲನಾತ್ಮಕವಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ವಿವಿಧ ವರ್ಗ ಸಮುದಾಯಗಳಿಂದ ಬಂದ ಲೇಖಕರು ಬರೆಯುತ್ತಿರುವುದು ಶುಭಸೂಚನೆ. ನಿಮ್ನ ದಲಿತ ಅಲ್ಪಸಂಖ್ಯಾಕ ಜಾತಿವರ್ಗದವರೂ ಮಹಿಳೆಯರೂ ಬಾಲಪ್ರತಿಭೆಗಳೂ ತುಳು ಮಲಯಾಳ ಕೊಂಕಣಿ ಮರಾಠಿ ಮನೆಮಾತಿನವರೂ ಕನ್ನಡದಲ್ಲೇ ಬರೆಯುತ್ತಿರುವುದು ಕನ್ನಡವೇ ಈ ನೆಲದ ಕೊರಳೆಂಬುದನ್ನು ಸಾರಿಹೇಳುತ್ತದೆ. ಬೇಕಲ ರಾಮನಾಯಕ, ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾದವರು ಅಡಿಪಾಯ ಹಾಕಿದ ಕಾಸರಗೋಡಿನ ಆಧುನಿಕ‌ ಕಥನಸಾಹಿತ್ಯ ನವ್ಯಯುಗದಲ್ಲಿ ಬೆಳವಣಿಗೆ ಕಂಡಿತು. ಕಾಸರಗೋಡಿನ ಸಣ್ಣಕತೆಗಳು ಎಂಬ ಪ್ರಾತಿನಿಧಿಕ ಕೃತಿಯಲ್ಲಿ ಕಾಸರಗೋಡಿನ ಆಧುನಿಕ ಸಣ್ಣಕತೆಗಳ ದರ್ಶನವನ್ನು ಕಾಣಬಹುದು. ಬಾಲಕೃಷ್ಣ ಕೋಳಾರಿ, ಜನಾರ್ದನ ಎರ್ಪಕಟ್ಟೆ, ನಾರಾಯಣ ಕಂಗಿಲ, ನಾ ಮೊಗಸಾಲೆ, ಸಾರಾ ಅಬೂಬಕರ್, ಕೆ ವಿ ತಿರುಮಲೇಶ್, ವಸಂತಕುಮಾರ ಪೆರ್ಲ, ಕೆ ಟಿ ಗಟ್ಟಿ, ನಾ ದಾ ಶೆಟ್ಟಿ, ಹರೀಶ ಪೆರ್ಲ, ಕೆ ಟಿ ಶ್ರೀಧರ್, ಕೆ ಟಿ ವೇಣುಗೋಪಾಲ್, ಟಿಎಎನ್ ಖಂಡಿಗೆ, ಗೋಪಾಲಕೃಷ್ಣ ಪೈ, ಮೊದಲಾದ ಹಲವು ಮಂದಿ ಲೇಖಕರು ಉತ್ತಮ ಸಣ್ಣ ಕತೆಗಳನ್ನು ಬರೆದಿದ್ದಾರೆ. ಕಾಸರಗೋಡನ್ನು ಸಣ್ಣಕತೆಯ ಲೋಕದಲ್ಲಿ ಗುರುತಿಸುವಂತೆ ಮಾಡಿದವರು ಎಂ ವ್ಯಾಸರು. ತಮ್ಮ ವಿಶಿಷ್ಟ ಭಾಷೆ ಶೈಲಿ ತಾತ್ವಿಕ ದೃಷ್ಟಿಕೋನದ ಕತೆಗಳ ಮೂಲಕ ಸಣ್ಣಕತೆಗಳ ಲೋಕವನ್ನು ಆಳಿದವರು. ವ್ಯಾಸರ ನಿಧನದ ನಂತರ ಮತ್ತು‌ ಮೊದಲು ಬರೆಯುತ್ತಿರುವ ಕಾಸರಗೋಡಿನ ಮುಖ್ಯ ಕತೆಗಾರ ಶಶಿಭಾಟಿಯಾ ಅವರ ಭಾಷೆ, ವಸ್ತು, ಪ್ರಯೋಗಗಳಲ್ಲಿ ಅವರದೇ ವೈಶಿಷ್ಟ್ಯವಿದೆ. ಕೃಷ್ಣವೇಣಿ ಕಿದೂರು, ಶಂಕರ ಎಂ ಮಂಜೇಶ್ವರ ಮೊದಲಾದವರ ಹಲವು ಕತೆಗಳು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಗಂಭೀರ ಮಾನವೀಯ ಮೌಲಿಕ ಚಿಂತನೆಗಳಿಂದ ಕೂಡಿದ ಹಲವು ಕತೆಗಳನ್ನು ಬರೆದಿರುವ ಅನುಪಮಾ ಪ್ರಸಾದ್ ಕತೆ ಮತ್ತು‌ಕಾದಂಬರಿಗಳ ಮೂಲಕ ಕರ್ನಾಟಕದಾದ್ಯಂತ ಹೆಸರು ಪಡೆದಿದ್ದಾರೆ. ಸುಂದರ ಬಾರಡ್ಕ, ಸುಭಾಷ್ ಪಟ್ಟಾಜೆಯವರ ಮಾರ್ಗವೂ ಸಾಹಿತ್ಯಕವಾದುದು. ಹರೀಶ್ ಪೆರ್ಲ, ಸತ್ಯನಾರಾಯಣ ಮೊದಲಾದವರು ವಿನೋದದ ಧಾಟಿಯ ಕತೆಗಳ ಮೂಲಕ ಗಂಭೀರವಿಚಾರಗಳನ್ನು ಮನಸ್ಸಿಗೆ ತಲಪಿಸುತ್ತಾರೆ. ಕಳ್ಳಿಗೆ ಮಹಾಬಲ ಭಂಡಾರಿ, ಲಲಿತಾ ಎಸ್ ಎನ್ ಭಟ್, ಕೆ. ಟಿ ಗಟ್ಟಿ,ಸಾರಾ ಅಬೂಬಕರ್, ನಾ ಮೊಗಸಾಲೆ,ಕೆ ವಿ ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಲಕ್ಷ್ಮೀ ಕುಂಜತ್ತೂರು, ಗೋಪಾಲಕೃಷ್ಣ ಪೈ, ಸರಸ್ವತೀ ಶಂಕರ್, ಅನುಪಮಾ ಪ್ರಸಾದ್ ಮೊದಲಾದ ಲೇಖಕರು ಸತ್ವಯುತವಾದ ಕಾದಂಬರಿಗಳನ್ನು ನೀಡಿದ್ದಾರೆ. ಕಾದಂಬರಿ ಕ್ಷೇತ್ರದಲ್ಲಿ ೨೧ ನೇ ಶತಮಾನದ ಸಾಧನೆಗಳನ್ನು ಗುರುತಿಸುವುದಾದರೆ ಗೋಪಾಲಕೃಷ್ಣ ಪೈ ಅವರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ ಸ್ವಪ್ನಸಾರಸ್ವತ, ಅನುಪಮಾ ಪ್ರಸಾದ್ ಅವರ ಪಕ್ಕಿಹಳ್ಳದ ಹಾದಿಗುಂಟ ಬಹುಮುಖ್ಯ ಕಾದಂಬರಿಗಳೆಂದು ಹೆಸರಿಸಬಹುದು. ಅನುವಾದ ಕ್ಷೇತ್ರದಲ್ಲಿ ಪಾರ್ವತಿ ಐತಾಳ್, ಕಾಸರಗೋಡು ಅಶೋಕಕುಮಾರ್ ಮೊದಲಾದವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಪಳ್ಳತ್ತಡ್ಕ ಅರುಣ್ ಕುಮಾರ್ ಅವರ ಆಂಗ್ಲ ಕಾದಂಬರಿಯನ್ನು ರತ್ನಾಕರ ಮಲ್ಲಮೂಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವೇಣುಗೋಪಾಲ ಕಾಸರಗೋಡು, ಕೆ ಟಿ ಶ್ರೀಧರ್, ರತ್ನಾಕರ ಮಲ್ಲಮೂಲೆ, ವಿಜಯಲಕ್ಷ್ಮೀ ಶಾನುಭೋಗ್ ಮೊದಲಾದವರು ನಾಟಕ ಸಾಹಿತ್ಯದಲ್ಲಿ ದುಡಿದಿದ್ದಾರೆ. ಕಯ್ಯಾರರು, ಪುಣಿಂಚತ್ತಾಯರು, ಬೇಕಲ ರಾಮನಾಯಕರು, ರಾ ಮೊ ವಿಶ್ವಾಮಿತ್ರ, ಲಕ್ಷ್ಮೀ ಕುಂಜತ್ತೂರು, ಪಟ್ಟಾಜೆ ಕೃಷ್ಣಭಟ್, ಗಣಪತಿ ದಿವಾಣ, ಪೆರ್ಲ ಕೃಷ್ಣಭಟ್, ಎಂವಿ ಭಟ್ ಮಧುರಕಾನನ, ಬಾಲ ಮಧುರಕಾನನ, ಗೋಪಾಲಕೃಷ್ಣ ಭಟ್, ವಿ ಬಿ ಕುಳಮರ್ವ ಹೀಗೆ ಮಕ್ಕಳ ಸಾಹಿತ್ಯದಲ್ಲಿ ಸೇವೆಸಲ್ಲಿಸಿದವರ ಪಟ್ಟಿಯೂ ದೊಡ್ಡದಿದೆ. ಮೂಡಿತ್ತಾಯರಿಂದ ತೊಡಗಿ ಹರೀಶ್ ಪೆರ್ಲ ಸತ್ಯನಾರಾಯಣರವರೆಗೆ ವಿನೋದಸಾಹಿತ್ಯರಂಗಕ್ಕೂ ಕೊಡುಗೆ ನೀಡಿದ ಸಾಹಿತಿಗಳು ಕಾಸರಗೋಡಿನಲ್ಲಿದ್ದಾರೆ. ಒಟ್ಟಿನಲ್ಲಿ ಆಧುನಿಕ ಕನ್ನಡಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಸಂಖ್ಯೆಯಲ್ಲಾಗಲೀ ಸತ್ವದಲ್ಲಾಗಲೀ ಕಡೆಗಣಿಸುವಂತಹುದಲ್ಲ. -ನರೇಶ್ ಮುಳ್ಳೇರಿಯಾ See less

Tuesday, February 7, 2023

ರಹಮತ್ ತರೀಕೆರೆ - ಕಾಮರೂಪದ ಪ್ರಭಾಕರ { M S Prabhakar }

ಕಾಮರೂಪದ ಪ್ರಭಾಕರ ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ'ಕ್ಕೆ; ಇನ್ನೊಂದು-`ಕಾಮರೂಪಿ' ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. ೫೦ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು. `ಕಾಮರೂಪ' ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ. ಅವರ ಮನೆಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರ ಮುಖದ ಮೇಲೆ ಜ್ಞಾನೋದಯವಾದ ಸಿದ್ಧನಂತೆ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು. ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ. ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ. ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ. ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ. ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ. ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’ ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ ೭೫ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲ್ಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ. ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು. ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ -ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ. ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ. ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ ೫೦ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು. ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ. (ಹನ್ನೆರಡು ವರುಷಗಳ ಹಿಂದಿನ ಲೇಖನ)

M. S Prabhakara | ಎಂ. ಎಸ್. ಪ್ರಭಾಕರ

Thursday, February 2, 2023

ಸುಮಿತ್ರಾ ಎಲ್ ಸಿ - ಹೆಣ್ಣೆಂಬ ಶಬುದ { ಹೆಣ್ನನ್ನು ಕುರಿತ ಆಧುನಿಕ ಕವಿತೆಗಳ ಮಂಜರಿ }

ಹೆಣ್ಣನ್ನು ಕುರಿತ ಕವಿತೆಗಳು, ಹೆಣ್ಣೆಂಬ ಶಬುದ. ಲೇಖಕಿಯರೆ ಬರೆದ ಕವಿತಾ ಸಂಕಲನಗಳು ಈ ಮೊದಲು ಬಂದಿವೆ. ಎಂ ಉಷಾ ಸಂಪಾದಿಸಿರುವ ಹೆಣ್ಣೆಂಬ ಶಬುದ ಎಂಬ ಪ್ರಸ್ತುತ ಸಂಕಲನದ ವೈಶಿಷ್ಟ್ಯ ಎಂದರೆ ಕನ್ನಡ ಕಾವ್ಯದ ಆರಂಭ ದಿಂದಲೂ ಹೆಣ್ಣಿನ ಕುರಿತು ಬರೆದ ಕವಿತೆಗಳ ಸಂಗ್ರಹ ಇದು.ಬೇಂದ್ರೆ,ಕುವೆಂಪು,ಮಾಸ್ತಿ ಯಿಂದ ತೊಡಗಿ.ಇವತ್ತಿನ ವರೆಗಿನ ಕವಿಗಳ ವರೆಗೆ. ಗಂಡು ರಚನೆಗಳಲ್ಲಿ ಹೆಣ್ಣನ್ನು ಮೆಚ್ಚುವ, ಕೀರ್ತಿಸುವ, ಆರಾಧಿಸುವ, ಟೀಕಿಸುವ ( ಕೆ ಎಸ್ ನರಸಿಂಹಸ್ವಾಮಿ ಅವರ ನಲವತ್ತರ ಚೆಲುವೆ) ಕವಿತೆಗಳೆ ಇವೆ , ಇದು ಗಂಡಿನ ದೃಷ್ಟಿ..ಆದರೆ ಹೆಣ್ಣು ಕವಿಗಳು ಬರೆದ ಕವಿತೆ ಗಳಲ್ಲಿ ಇರುವ ಹೆಣ್ಣಿನ ಚಿತ್ರ ಅನನ್ಯವಾದುದು, ವೈವಿಧ್ಯದಿಂದ ಕೂಡಿರುವುದು. ಈ ಹಿನ್ನೆಲೆಯಲ್ಲಿ ಇದು ಬಹು ಮುಖ್ಯ ಆಕರ ಗ್ರಂಥ ವಾಗಿದೆ. ಆಧುನಿಕ ಕನ್ನಡ ಕವಿತೆಗಳು ಹೆಣ್ಣನ್ನು ಪ್ರತಿನಿಧಿಸಿರುವ ವಿಧಾನ ಎಂತದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಉದ್ದೇಶದೊಂದಿಗೆ ಈ ಕಾವ್ಯ ಮಂಜರಿ ( Anthology of poetry) ಯನ್ನು ಸಿದ್ಧಪಡಿಸಲಾಗಿದೆ. ಎಂದು ಸಂಪಾದಕಿ 22 ಪುಟಗಳ ದೀರ್ಘಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಈ ಪ್ರಸ್ತಾವನೆ ಬಹಳ ಉಪಯುಕ್ತವಾಗಿದೆ .ಅಧ್ಯಯನ ಪೂರ್ಣವಾಗಿದೆ. ಇದುವರೆಗೆ ಪ್ರಾತಿನಿಧಿಕವಾದ ಹಲವು ಮಹಿಳಾ ಕಾವ್ಯಮಂಜರಿಗಳು ಪ್ರಕಟವಾಗಿದ್ದರು ಹೆಣ್ಣನ್ನು ವಸ್ತುವಾಗಿಸಿಕೊಂಡು ಸ್ತ್ರೀ ಪುರುಷ ಇಬ್ಬರು ಬರೆದ ಕವನ ಸಂಕಲನಗಳು ಇರಲಿಲ್ಲ. ಲೇಖಕಿಯರೇ ಬರೆದ ಮಹಿಳಾ ಕಾವ್ಯ 2013, ಕಾವ್ಯ ಬೋಧಿ 2014, ಅವಳ ಕವಿತೆ, ೨೦೧೫, ಮಹಿಳಾ ಕಾವ್ಯ ಸಂಗ್ರಹ 2017, ಬೆಂಕಿ ಒಳಗನ ಬೆಳಕು 2018, ಕನ್ನಡ ಬರಹಗಾರ್ತಿಯರ ಪ್ರಾಥಮಿಕ ಸಂಕಲನ 2019, ಇತ್ಯಾದಿ ಕವಿತ್ರಿಯರೇ ಬರೆದ ಕವಿತೆಗಳ ಸಂಕಲನಗಳು. ಆದರೆ ಹೆಣ್ಣನ್ನು ಕುರಿತ ಕಾವ್ಯ ಮಂಜರಿ ಗಳಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಕಲನ ವಿಶೇಷವಾಗಿದೆ. ಉಪಯುಕ್ತ ವಾಗಿದೆ. ಈ ಸಂಕಲನದ ಮಹತ್ವವನ್ನು ಕುರಿತು ಒಂದು ವಿವರವಾದ ಲೇಖನವನ್ನು ಬರೆಯುತ್ತಿದ್ದೇನೆ..ಇದು ಪುಸ್ತಕ ಬಂದ ಸಂತೋಷ ದ ಟಿಪ್ಪಣಿ ಅಷ್ಟೇ..ನನ್ನ ಕವಿತೆಯನ್ನು ಸೇರಿಸಿದ್ದಕ್ಕೆ ಧನ್ಯ ವಾದ ಹೇಳುತ್ತಾ ಉಷಾ ಅವರನ್ನು ಈ ಮಹತ್ಕಾರ್ಯ ಕ್ಕಾಗಿ ಅಭಿನಂದಿಸುತ್ತಿದ್ದೇನೆ. Usha Mallaradhya Usha

Mohan se Mahatma – Puppet Show -ಗೊಂಬೆಯಾಟದಲ್ಲಿ ಗಾಂಧೀಜಿ