Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Monday, October 2, 2023
ಎಮ್ ಆರ್ ಕಮಲಾ - ಕಲಾ ಲೋಕಕ್ಕೆ ಕಂಟಕವಾಗಿರುವ ಕೃತಕ ಬುದ್ದಿಮತ್ತಿ--A I
ಕಲಾ ಲೋಕಕ್ಕೆ ಕಂಟಕವಾಗಿರುವ ಕೃತಕ ಬುದ್ಧಿಮತ್ತೆ!? (Artificial Intelligence -AI )
ಯುವ ಜನಾಂಗಕ್ಕೆ ತೀರಾ ಅಪ್ರಸ್ತುತವೆನ್ನಿಸುವ ವಿಚಾರಗಳ ಬಗ್ಗೆಯೇ ಕನ್ನಡ ಸಾಹಿತ್ಯ ಲೋಕ ಗಿರಕಿ ಹೊಡೆಯುತ್ತಿದೆ. ಕಾಲ ಮುಂದೆ ಹೋಗಿದ್ದರೂ ಕಳೆದ ಶತಮಾನದ, ಈಗ ಯಾವ ಪ್ರಯೋಜನಕ್ಕೂ ಬಾರದ ಚರ್ಚೆಗಳಿಗೆ ಅಂಟಿಕೊಂಡು ಕುಳಿತಿದೆ. ಯುವ ಜನಾಂಗಕ್ಕೆ ದಾರಿ ತೋರಬೇಕಾದವರೆಲ್ಲ ಅವರನ್ನು ಗೊಂದಲದಲ್ಲಿ ಸಿಲುಕಿಸಿರುವುದೇ ಹೆಚ್ಚು. ತೆರೆದ ಮನಸ್ಸಿನಿಂದ ಲೋಕವನ್ನು ನೋಡಿ ತಪ್ಪೋ ಸರಿಯೋ ಹೆಜ್ಜೆಯನ್ನಿಟ್ಟು, ಕಲಿಯಲು ಬೇಕಾದ ವಾತಾವರಣವನ್ನು ನಿರ್ಮಿಸದೆ, ಪಂಥ, ಗುಂಪುಗಳನ್ನು ಸೃಷ್ಟಿಸಿ, `ಇಲ್ಲಿ ಸಲ್ಲದಿದ್ದರೆ ನೀನೆಲ್ಲಿಯೂ ಸಲ್ಲುವುದಿಲ್ಲ' ಎಂಬ ಆತಂಕ, ಹೆದರಿಕೆಯ ವಾತಾವರಣವನ್ನು ಯುವ ಜನಾಂಗಕ್ಕೆ ಹುಟ್ಟು ಹಾಕಿದ್ದಾರೆ. ಅವರ ಸಹಜ ನೋಟಗಳ ಮೇಲೆ ಅಪ್ರಸ್ತುತ ವಿಚಾರಗಳನ್ನು ಹೇರಲಾಗುತ್ತಿದೆ. ಈಚೀಚೆಗೆ ಯುವ ಸಾಹಿತಿಗಳು ಸಣ್ಣ ಮಟ್ಟದಲ್ಲಿಯಾದರು ಇವೆಲ್ಲವನ್ನೂ ವಿರೋಧಿಸುತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವುದೇ ಸಂತಸದ ವಿಷಯ. ಮನುಷ್ಯನ ಮನಸ್ಸನ್ನು ಅರಳಿಸುವ ಕಲಾ ಪ್ರಕಾರಗಳೇ ಅಳಿದು ಹೋಗುವಂತಹ ಕಾಲಘಟ್ಟಕ್ಕೆ ಬಂದು ನಿಲ್ಲುತ್ತಿರುವಾಗ ಅವರ ಸಣ್ಣ ಸಂಭ್ರಮಗಳನ್ನು ಗೇಲಿ ಮಾಡುತ್ತಾ ಕೂರುವ ಕಾಲ ಇದಲ್ಲವೇ ಅಲ್ಲ.
ಐದು ವರ್ಷದ ಹಿಂದೆ ಮಗ ಆಕರ್ಷ ಹೀಗೊಂದು ಕವಿತೆಯನ್ನು ಬರೆದು ತೋರಿಸಿದಾಗ ನಕ್ಕುಬಿಟ್ಟಿದ್ದೆ. ಇದೆಂತಹ ಭ್ರಮೆ ಎನ್ನಿಸಿಬಿಟ್ಟಿತ್ತು. ಅದರ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.
ಭವಿಷ್ಯದ ಕವಿತೆ ಹಗುರಾಗಿರುತ್ತದೆ.
ಆಧುನಿಕ ವಸ್ತುಗಳಿಂದ
ವಿಶಿಷ್ಟ ಲೋಹಗಳಿಂದ ತಯಾರಿಸಲ್ಪಟ್ಟಿರುತ್ತದೆ
ಭವಿಷ್ಯದ ಕವಿತೆ ನೂರಾರು ಆಕಾರಗಳಲ್ಲಿ
ಬಣ್ಣಗಳಲ್ಲಿ ಲಭ್ಯವಿರುತ್ತದೆ
ನಮ್ಮ ಜೀವನದ ಸತ್ಯಗಳನ್ನು ತನ್ನದಾಗಿಸಿಕೊಳ್ಳುತ್ತ
ಈಗಿನ ಕವಿತೆಗಳು ತೆಗೆದುಕೊಳ್ಳುವ ಸಮಯದ
ಅರ್ಧದಷ್ಟನ್ನು ಮಾತ್ರ ಬಳಸಿ ಹೆಚ್ಚಿನದನ್ನು ತಿಳಿಸುತ್ತದೆ.
ಈ ಕವಿತೆ ಬರೆಯುವಾಗ ಕವಿಯ ಮನಸ್ಸಿನಲ್ಲಿ ಏನಿತ್ತೋ, ಆದರೀಗ `ಕೃತಕ ಬುದ್ಧಿಮತ್ತೆ' ರಾರಾಜಿಸುತ್ತಿರುವ ಸಮಯದಲ್ಲಿ ಈ ಸಾಲುಗಳೆಷ್ಟು ಪ್ರಸ್ತುತವಾಗಿವೆ ಎನ್ನಿಸಿತು. ಮೊನ್ನೆ ಜಾಯ್ಸ್ ಮೇನಾರ್ಡ್ ಎಂಬ ಅಮೇರಿಕನ್ ಕಾದಂಬರಿಕಾರ್ತಿ ಮತ್ತು ಪತ್ರಕರ್ತೆ ಬರೆದ ಒಂದು ಲೇಖನ ಓದುತ್ತಿದ್ದೆ. ಹತ್ತಾರು ಕಾದಂಬರಿಗಳನ್ನು ಬರೆದಿರುವ ಈಕೆ ನನಗಿಂತ ಆರು ವರ್ಷ ದೊಡ್ಡವಳು. ಅಚ್ಚರಿಯೆಂದರೆ ಈ ಎಲ್ಲ ಹಿರಿಯ ಸಾಹಿತಿಗಳು `ಫೇಸ್ ಬುಕ್ ' ನಲ್ಲಿಯೇ ಬರೆಯುತ್ತಾರೆ. `ಫೇಸ್ ಬುಕ್' ಸಾಹಿತಿಗಳು ಎನ್ನುವ ಬಾಲಿಶ ವಿಚಾರಗಳಿಲ್ಲ. ಅಲ್ಲಿಯ ಪತ್ರಿಕೆಗಳು ಇಲ್ಲಿಯವರಂತೆ ಫೇಸ್ಬುಕ್ಕಿನ ಬರಹಗಳನ್ನು ಪ್ರಕಟಿಸಲು ಹಿಂಜರಿಯುವುದಿಲ್ಲ. (ಕೆಲವು ಅಪವಾದಗಳಿವೆ) ಒಳ್ಳೆಯದು ಎಲ್ಲಿ ಕಂಡರೂ ಅದನ್ನು ಮತ್ತಷ್ಟು ಜನರಿಗೆ ತಲುಪಿಸುವ ಹೊಸ ಯೋಜನೆಗಳಲ್ಲಿ ಮುಳುಗುತ್ತಾರೆ.
ಆಕೆ ಗಮನಿಸಿದ ಅನೇಕ ಸಂಗತಿಗಳು ನಿಜಕ್ಕೂ ತಲ್ಲಣ ಹುಟ್ಟಿಸುವಂಥದ್ದು. ಈ `ಕೃತಕ ಬುದ್ಧಿಮತ್ತೆ' ತಮ್ಮ ಸಂಸ್ಕೃತಿಯಲ್ಲಿ ಅರಿವಿಗೆ ಬಾರದಂತೆ ನುಸುಳಿದೆ ಮತ್ತು ಎಲ್ಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎನ್ನುವುದೇ ಆಕೆಯ ಕಾಳಜಿ. ಆಕೆಯದೇ ಕೆಲವು ಸಾಲುಗಳನ್ನು ಅನುವಾದಿಸಿದ್ದೇನೆ.`ಐವತ್ತು ವರ್ಷಗಳ ಹಿಂದೆ ನಾನು ನನ್ನ ಮೊದಲ ಪುಸ್ತಕವನ್ನು ಪ್ರಕಟಿಸಿದಾಗ ನೆತ್ತರು ಬಸಿದು, ಶ್ರಮ ಪಡದೆ, ಎದೆ ಬಡಿತವನ್ನು ಹೆಚ್ಚಿಸಿಕೊಳ್ಳದೆ ಒಂದು ಪುಸ್ತಕವನ್ನು ಬರೆಯಬಹುದು ಎಂದರೆ ಹುಚ್ಚು ಮಾತು ಎಂದುಕೊಳ್ಳುತ್ತಿದ್ದೆ. ಆದರೆ ಅಂತಹ ದಿನವೂ ಬಂದಿದೆ. ಈ ಕೃತಕ ಬುದ್ಧಿಮತ್ತೆ ಮನುಷ್ಯನ ಧ್ವನಿ, ಶೈಲಿ, ವಾಕ್ಯ ರಚನೆ, ಅನೇಕ ಕೃತಿಗಳನ್ನು ರಚಿಸಿರುವವರ ಶಬ್ದಕೋಶ ಎಲ್ಲವನ್ನು ನಕಲು ಮಾಡಬಲ್ಲದು. ಈಗಾಗಲೇ ಸಾವಿರಾರು ಲೇಖಕರ ನೂರಾರು ಕೃತಿಗಳನ್ನು ಈ ಪ್ರಯೋಗಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಟ್ಲಾಂಟಿಕ್ ಮ್ಯಾಗಜಿನ್' ವರದಿ ಮಾಡಿದೆ. ಬರೆದ ಲೇಖಕರ ನೆರವಿಲ್ಲದೆ ಕಾದಂಬರಿಯೊಂದು ತಯಾರಾಗಿಬಿಡುತ್ತದೆ.'
ಹಾಗೆ ನೋಡಿದರೆ ಜಾಯ್ಸ್ ಮೇನಾರ್ಡ್ ಅವರ ಕೃತಿಯೊಂದನ್ನು ಅವರ ಅನುಮತಿ ಕೂಡ ಪಡೆಯದೇ ಸ್ಕ್ಯಾನ್ ಮಾಡಲಾಗಿದೆಯಂತೆ ಹಾಗೆ ಅವರ ದನಿಯನ್ನು ಕೂಡ. `AI assistance for writers ' ಎಂಬ ಅನೇಕ ವೇದಿಕೆಗಳನ್ನು ನಿರ್ಮಿಸಿ ಬರವಣಿಗೆಯ ಬಗ್ಗೆ ಆಸಕ್ತಿ ಇರುವ ಉತ್ಸಾಹಿ ಬರಹಗಾರರಿಗೆ ಪುಸ್ತಕಗಳನ್ನು ಬರೆಯಲು ನೆರವು ನೀಡುತ್ತಿವೆಯಂತೆ. ಯಾವುದೇ ವ್ಯಾಕರಣದ ತಿಳಿವಳಿಯಿಲ್ಲದೆ, ಸಂವೇದನೆಯಿಲ್ಲದೆ, ಶೈಲಿ, ಭಾಷೆಯ ಲಯ ಇತ್ಯಾದಿಗಳ ಪರಿಚಯವಿಲ್ಲದೆ ಪುಸ್ತಕಗಳನ್ನು ಸೃಷ್ಟಿಸಬಹುದು. ಇದು ನಿಜವಾಗಿಯೂ ಎಲ್ಲ ಕಲೆಗಳ ಸಾವು, ಸತ್ತವರನ್ನು ಮತ್ತೊಮ್ಮೆ ಸಾಯಿಸುವ ವಿಧಾನ ಎಂದು ಜಾಯ್ಸ್ ಅಭಿಪ್ರಾಯಪಡುತ್ತಾರೆ.
ಹಾಗಾದರೆ ನಾವಿಷ್ಟು ದಿನ ಪ್ರತಿಯೊಂದು ಪದ, ಅದರ ಅರ್ಥ, ಶ್ಲೇಷೆ, ಅದಕ್ಕೆ ಬಳಸುವ ಚಿಹ್ನೆ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದುದಕ್ಕೆ ಏನರ್ಥವಿದೆ ಎಂದು ಬರಹಗಾರರು ತಲ್ಲಣಿಸಿಹೋಗಿದ್ದಾರೆ. ಒಂದು ದಿನ ಮನುಷ್ಯನಿಗೆ ವಿಶೇಷವೆನಿಸಿದ್ದುದನ್ನೆಲ್ಲ ಈ ತಂತ್ರಜ್ಞಾನ ಕಿತ್ತುಕೊಂಡರೆ ಮನುಷ್ಯ ಮನುಷ್ಯನಾಗಿ ಉಳಿಯುವನೇ ಅಥವಾ ಯಂತ್ರವಾಗಿಬಿಡುತ್ತಾನೆಯೇ? ಈ ಹೊಸ ಹೊಸ ಸಂಶೋಧನೆಗಳಿಂದ ಮನುಷ್ಯ ಕಾಲ ಕಾಲಕ್ಕೆ ಏನನ್ನೋ ಕಳೆದುಕೊಳ್ಳುತ್ತಲೇ ಪಡೆದುಕೊಂಡು ಹೋಗಿದ್ದಾನೆ ಎನ್ನುವುದನ್ನು ನಾವೇ ಕಂಡಿದ್ದೇವೆ. ಪ್ರತಿ ಹೊಸ ವಿಚಾರ, ಬದಲಾವಣೆ ಅವನನ್ನು ತಲ್ಲಣಕ್ಕೆ ಈಡುಮಾಡುತ್ತಲೇ ಇದೆ. ದೇವನೂರು ಮಹಾದೇವ ಅವರ `ಡಾಂಬರು ಬಂದುದು', ತೇಜಸ್ವಿಯವರ `ಅಬಚೂರಿನ ಪೋಸ್ಟ್ ಆಫೀಸ್' ನಾ. ಡಿಸೋಜ ಅವರ `ಹಾಲ್ಟಿನ್ಗ್ ಬಸ್' ಕತೆಗಳು ಹೇಳುವುದು ಇಂತಹ ತಳಮಳ, ತಲ್ಲಣಗಳ ಬಗ್ಗೆಯೇ ಅಲ್ಲವೇ?
ಮೊಬೈಲ್ ಹುಚ್ಚರಾಗಿರುವ ಸಮಯದಲ್ಲಿ ನಾನೇ ಬರೆದ `ಮೌನೇಶನೊಂದಿಗೆ ವಾಕಿಂಗ್' ಕೂಡ ಯಂತ್ರಗಳ ದಾಸರಾಗುತ್ತಿರುವ ಮನುಷ್ಯನ ಬಗ್ಗೆಯೇ ಬರೆದಿದ್ದು. ಸಂವೇದನೆ, ಭಾವನೆಗಳನ್ನು ಜೀವಂತವಾಗಿಡುವ ಸಾಹಿತ್ಯ, ಕಲೆಗಳು ಯಂತ್ರಕ್ಕೆ ದಾಸರಾದಾಗ ಮನುಷ್ಯರು ಭಾವರಾಹಿತ್ಯ ಸ್ಥಿತಿಯನ್ನು ತಲುಪಿ ಯಂತ್ರಗಳಂತಾಗಿಬಿಡುತ್ತಾರೇನೋ ಎನ್ನುವ ಆತಂಕ ಹುಟ್ಟುವುದು ಸುಳ್ಳಲ್ಲ. ಆದರೆ ಮನುಷ್ಯ ತನ್ನೊಂದಿಗೆ ಹುಟ್ಟುವಾಗಲೇ ಕಟ್ಟಿಕೊಂಡು ಬಂದ ಚೈತನ್ಯವನ್ನು ನಕಲು ಮಾಡುವುದು ಸಾಧ್ಯವೇ? ಇದು ಪ್ರಶ್ನೆ ಮತ್ತು ಉತ್ತರ. ಯಂತ್ರವೇ ಕವಿ ಹೃದಯಕ್ಕೆ ಸೋಲುವುದರೊಂದಿಗೆ ಕೊನೆಯಾಗುವ ಆಕರ್ಷನ ಕವನ ಬದುಕಿನ ಭರವಸೆಯನ್ನು ಅಳಿಸುವುದಿಲ್ಲ.
ಭವಿಷ್ಯದ ಕವಿತೆ ಐಪಾಡ್ ಕಿಂಡಲ್ ಗಳಲ್ಲಿ
ಹಿತ್ತಲ ಗಿಡದ ನೆರಳನ್ನು ,
ರಸ್ತೆಯ ಧೂಳನ್ನು, ಹೂವಿನ ಕಂಪನ್ನು.
ಮಗುವಿನ ಮುಗ್ಧತೆಯನ್ನು
ಡೌನ್ಲೋಡ್ ಮಾಡಿಕೊಂಡರೂ
ಕೊನೆಗೆ ಕವಿ ಹೃದಯಕ್ಕೆ ಸೋಲುತ್ತದೆ.
ನಿಜಕ್ಕೂ ಕವಿ ಹೃದಯವನ್ನು, ಅದರ ನಿಗೂಢಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ಯಂತ್ರಗಳು ನಕಲು ಮಾಡಬಹುದೇ? ನಕಲು ಮಾಡಿದರೂ ಅವುಗಳಲ್ಲಿ ಜೀವಂತಿಕೆ ಉಳಿಯಲು ಸಾಧ್ಯವೇ? ಕಾಲವೇ ಪ್ರಶ್ನೆಗಳಿಗೆ ಉತ್ತರಿಸಬಹುದೇನೋ?
( ಜಾಯ್ಸ್ ಮೇನಾರ್ಡ್ ಮತ್ತು ಆಕರ್ಷನ ಕವಿತೆ ಹುಟ್ಟು ಹಾಕಿದ ವಿಚಾರಗಳು)
Labels:
kamala m r
Location:
Udupi, Karnataka, India
Subscribe to:
Post Comments (Atom)
No comments:
Post a Comment