Powered By Blogger

Saturday, September 18, 2021

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ ಜಿ. ರಾಜಶೇಖರ್ -- ಎಸ್.ಆರ್. ವಿಜಯಶಂಕರ

75ರ ಮೆಲುಕು: ವ್ಯಕ್ತಿ ಸ್ನೇಹಿ, ವಿಚಾರ ನಿಷ್ಠುರಿ | Prajavani

ಸಾಹಿತಿ ಕೆ.ಸತ್ಯನಾರಾಯಣ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ

ಸಾಹಿತಿ ಕೆ.ಸತ್ಯನಾರಾಯಣ ಕೃತಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ | Vartha Bharati- ವಾರ್ತಾ ಭಾರತಿ

ಕೆ. ಪಿ. ರಾವ್ -ವರ್ಣಕ [ ತಕ್ಷಶಿಲೆಯಲ್ಲಿ ಅರಳಿದ ಭಾಷಾ ವಿಲಾಸ } { ಕಾದಂಬರಿ -2021 } Kannada Prabha Bengaluru, Sun, 19 Sep 21

Kannada Prabha Bengaluru, Sun, 19 Sep 21

ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ /G Rajashekhar

ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ – ಋತುಮಾನ

Friday, September 17, 2021

ವಿಸ್ಲಾವಾ ಸಿಂಬೋರ್ಸ್ಕಾ- ನಮ್ಮ ಕಾಲದ ಮಕ್ಕಳು { ಎಚ್. ಎಸ್. ರಾಘವೇಂದ್ರ ರಾವ್ } H. S Raghavendra Rao /Wislava Szymborska/

ವಿಸ್ಲಾವಾ ಸಿಂಬೋರ್ಸ್ಕಾ- ಇವರು ಪೋಲೆಂಡ್ ದೇಶದ ನೊಬೆಲ್ ಪ್ರಶಸ್ತಿ ಪಡೆದ ಕವಿ. ನಮ್ಮ ಕಾಲದ ಮಕ್ಕಳು ನಮ್ಮ ಕಾಲದ ಮಕ್ಕಳು ನಾವು. ನಮ್ಮದು, ರಾಜಕೀಯದ ಕಾಲ. ಹಗಲು ಇರುಳು, ನಾವು, ನೀವು, ಅವರು ಎಲ್ಲರು ಮಾಡುವ ಎಲ್ಲ ಕೆಲಸಗಳು, ರಾಜಕೀಯ ವಿದ್ಯಮಾನ! ನೀವು ಇಷ್ಟಪಟ್ಟರೂ ಅಷ್ಟೆ, ಪಡದಿದ್ದರೂ ಅಷ್ಟೆ. ನಿಮ್ಮ ವಂಶವಾಹಿಗಳಲ್ಲಿ ಇತಿಹಾಸದ ರಾಜಕೀಯವಿದೆ ಚರ್ಮದ ಬಣ್ಣಕ್ಕೆ ರಾಜಕೀಯದ ಅಂಟಿದೆ ಕಣ್ಣಿನ ನೋಟದಲ್ಲಿ ರಾಜಕೀಯದ ನಂಟಿದೆ. ನೀವಾಡುವ ಮಾತುಗಳಿಗೆ ರಾಜಕೀಯದ ಗಂಧವಿದೆ, ನಿಮ್ಮ ಮೌನದ ಒಳಗೆ ಮಾತಿನ ಮಸಲತ್ತಿದೆ. ಬಡಬಡಿಸಿದರು ಸರಿಯೆ, ಸುಮ್ಮನಿದ್ದರು ಸರಿಯೆ ಅದು ಕೂಡ ಇದು ಕೂಡ ರಾಜಕೀಯ. ಊರೆಲ್ಲ ಬಿಟ್ಟು, ಬೆಟ್ಟಗಳ ಕಡೆಗೆ ಹೊರಟಿರಾ? ಸರಿ ಮತ್ತೆ, ಹಾಗಾದರೆ ನೀವು ರಾಜಕೀಯದ ನೆಲದ ಮೇಲೆ ರಾಜಕಾರಣಿಯಂತೆ ನಡೆಯುತ್ತಿದ್ದೀರಿ. ರಾಜಕೀಯದ ಸುಳಿವಿಲ್ಲದ ಕವಿತೆಗಳೂ ರಾಜಕೀಯವೆ. ಮೇಲೆ ಹೊಳೆಯುತ್ತಿದೆ ಚಂದ್ರಬಿಂಬ ಅವನು ಕೂಡ ಈಗ ಚಂದ್ರನಲ್ಲ. ‘To be or not to be. That is the question’ ಪ್ರಶ್ನೆಯೇ? ಅದು ಎಂಥ ಪ್ರಶ್ನೆ! ಮುದ್ದು ಗೆಳೆಯನೆ ಕೇಳು, ಇಲ್ಲೊಂದು ಸಲಹೆಯಿದೆ, ಅದು ರಾಜಕೀಯದ ಭಾರಹೊತ್ತ ಪ್ರಶ್ನೆ. ರಾಜಕೀಯ ಮಹತ್ವ ಪಡೆಯುವುದಕ್ಕೆ ಮನುಷ್ಯನಾಗಿರುವುದು ಕೂಡ ಅನಿವಾರ್ಯವಲ್ಲ. ಕಚ್ಚಾ ಪೆಟ್ರೋಲ್ ಅದರೂ ಸಾಕು ಅಥವಾ ರಸಗೊಬ್ಬರ ಅಥವಾ ಮಾರುವ ಕೊಳ್ಳುವ ಯಾವುದೇ ಸರಕು. ಅಥವಾ ಶೃಂಗಸಭೆಯಲ್ಲಿ ಬಳಸುವ ಮೇಜು ಹೇಗಿರಬೇಕು? ಇದನು ಕುರಿತೂ ಚರ್ಚೆ ಹಲವು ಕಾಲ. ಸಾವುಬದುಕಿನ ಚರ್ಚೆ ಮಾಡಬೇಕಿದೆ ನಾವು, ಮೇಜು ಗುಂಡಗೆ ಇರಲೊ ಚಚ್ಚೌಕವೋ! ಇದೆಲ್ಲದರ ನಡುವೆ, ಜನ ಸಾಯುತ್ತಿದ್ದರು, ಪಶುಪಕ್ಷಿ ನಶಿಸುತ್ತಿದ್ದವು, ಮನೆಗಳು ಉರಿಯುತ್ತಿದ್ದವು, ಹೊಲಗಳು ಒಣಗುತ್ತಿದ್ದವು, ಇಷ್ಟೆಲ್ಲ ರಾಜಕೀಯ ಇಲ್ಲದಿದ್ದ, ಈಗ ಮರವೆಗೆ ಸಂದ ಆ ಕಾಲದಂತೆಯೇ.... ಹೀಗೆ ಬಂದು ಹಾಗೆ ಹೋಗುವ ಈ ದಿನವನ್ನು ನಾವೇಕೆ ಇಷ್ಟೊಂದು ಭಯದಿಂದ, ವಿಷಾದದಿಂದ ಎದುರಿಸುತ್ತೇವೆ? ಉಳಿಯದಿರುವುದೆ ಅದರ ಸಹಜಗುಣವಲ್ಲವೇ? ನಿಜ, ನಾವು ಬೇರೆ ಬೇರೆ, ಎರಡು ಹನಿ ನೀರಿನಂತೆ. ಆದರೂ, ಉಳಿವ ತಾರೆಯ ಕೆಳಗೆ ಬಿಡದೆ ಹುಡುಕುತ್ತೇವೆ ಪ್ರೀತಿ ಒಗ್ಗಟ್ಟುಗಳ ರೀತಿಯನ್ನು ಮುಗುಳುನಗೆ ಹರಿಸುತ್ತ, ಮುದ್ದಿಸುತ್ತ. ವಿಸ್ಲಾವಾ ಸಿಂಬೋರ್ಸ್ಕಾ 16 Comments Mukunda AN ತುಂಬಾ ಚೆನ್ನಾಗಿದೆ. ಧಿಗಿಲಾಗುತ್ತದೆ. 😔

ರಹಮತ್ ತರೀಕೆರೆ - ರಾಜಶೇಖರ್ ಜತೆ ಒಂದು ದಿನ/ G. Rajashekhar / Rahamath Tarikere/

ರಾಜಶೇಖರ್ ಜತೆ ಒಂದು ದಿನ (ಅವರಿಗೆ 75 ತುಂಬಿದ ನೆಪದಲ್ಲಿ ಈ ಹಳೆಯ ಲೇಖನ) ಖುಶವಂತ ಸಿಂಗರ `ಟ್ರೈನ್ ಟು ಪಾಕಿಸ್ತಾನ್’ ಕೃತಿ ಕುರಿತ ಸಂವಾದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋದವನು, ಮಾರನೇ ದಿನ ಜಿ. ರಾಜಶೇಖರ್ ಅವರ ಮನೆಗೆ ಹೋದೆ. ಭೇಟಿಯ ನೆಪದಲ್ಲಿ ಅವರ ಸಂದರ್ಶನವನ್ನೂ ಮಾಡಬೇಕಿತ್ತು. ನಮ್ಮಿಬ್ಬರ ಭೇಟಿಗೆ ಗೆಳೆಯರಾದ ಫಣಿರಾಜ್ ಹಾಗೂ ಸಂವರ್ತ ಸಾಹಿಲ್, ಪೂರ್ವಭಾವಿ ಭೂಮಿಕೆ ಕಲ್ಪಿಸಿದ್ದರು. ನಾನು ಹೋದ ದಿನ ಉಡುಪಿಯಲ್ಲಿ ಆಗಸಕ್ಕೆ ಹುಚ್ಚು ಹಿಡಿದಂತೆ ಪ್ರಳಯಕಾಲದ ಮಳೆ. ಬಳ್ಳಾರಿಯ ಬಿಸಿಲಿನಿಂದ ಹೋಗಿದ್ದ ನಾನು ಥಂಡಿಗೆ ಥರಥರಿಸುತ್ತಿದ್ದೆ. ಆಟೊದಲ್ಲಿ ಇರುವಾಗಲೇ ಇರಿಸಲು ಬಡಿದು ಅರ್ಧ ಒದ್ದೆಯಾಗಿದ್ದೆ; ಆಟೊ ಇಳಿದು, ಗೇಟುತೆಗೆದು ಮನೆಬಾಗಿಲಿಗೆ ಹೋಗುವಷ್ಟರಲ್ಲಿ ಇನ್ನರ್ಧ ತೊಯ್ದುಹೋದೆ. ರಾಜಶೇಖರ್ ಅವರ ಮನೆ, ಉಡುಪಿಯ ದಕ್ಷಿಣದಿಕ್ಕಿನ ಅಂಚಿನಲ್ಲಿರುವ ಕೊಳಂಬೆ ಪ್ರದೇಶದಲ್ಲಿದೆ; ನೀರು ಜುಳುಜುಳಿಸುವ ತೋಡುಗಳೂ ಹಸಿರುಹೊಮ್ಮಿಸುವ ಭತ್ತದ ಗದ್ದೆಗಳೂ ಕಂಗು-ತೆಂಗಿನ ತೋಟಗಳೂ ಅದನ್ನು ಸುತ್ತುವರೆದಿವೆ. ಹಾಡುಹಗಲೇ ಜೀರುಂಡೆಯ ಜೀಕಾರವೂ ನವಿಲಿನ ಪರಾಕೂ ಅಲ್ಲಿ ಕೇಳಿಸುತ್ತದೆ. ಕಾಂಪೌಂಡಿನ ಗೋಡೆಯ ಮೇಲೆ ಹಸಿರುಪಾಚಿ ಹಬ್ಬಿಕೊಂಡು ನಡುನಡುವೆ ಫರ್ನ್ ಸಸ್ಯಗಳು ಬೆಳೆದಿವೆ; ಇನ್ನು ಕಾಂಪೌಂಡಿನೊಳಗೆ ಬೆಳೆದಿದ್ದ ಹೂಗಿಡಗಳ ಹಳುವಿನಲ್ಲಂತೂ, ಒಂದು ಹುಲಿ ಆರಾಮಾಗಿ ಅಜ್ಞಾತವಾಸ ಮಾಡಬಹುದಿತ್ತು. ನಾನು ಸೋಜಿಗದಿಂದ ಅವನ್ನೆಲ್ಲ ನೋಡುವಾಗ, ರಾಜಶೇಖರ್ ಸಂಕೋಚ ಬೆರೆತ ಅಭಿಮಾನದಿಂದ "ಇದು ಆರ್ಡರ್ ಇನ್ ಡಿಸ್ಆ ರ್ಡರ್" ಎಂದು ವರ್ಣಿಸಿದರು. ಅದೊಂದು ಚಿಕ್ಕಮನೆ; ಹಾಲಿನ ಮೂಲೆಯಲ್ಲಿ ಮೇಜು; ಬಗಲಿಗೇ ಒಟ್ಟಿದ ಪುಸ್ತಕರಾಶಿ. ಇನ್ನೊಂದು ಮೂಲೆಯ ಗೂಡಿನಲ್ಲಿ ಆಂಜನೇಯನ ಚಿತ್ರಪಟ. ಅದರ ಮುಂದೆ ಅವರ ಹೆಂಡತಿ ಸುಮತಿ, ಪೂಜೆ ಮಾಡಿದ ಕುರುಹು. ಅದನ್ನು ನೋಡುತ್ತ ನನಗೆ ಕಾರಂತರ`ಅಳಿದಮೇಲೆ’ ನೆನಪಾಯಿತು. ಅದು ರಾಜಶೇಖರ್ ಬಹಳ ಆಸ್ಥೆಯಿಂದ ಮತ್ತೆಮತ್ತೆ ವಿಶ್ಲೇಷಣೆ ಮಾಡಿರುವ ಕಾದಂಬರಿ. 'ನಾವು ವೈಯಕ್ತಿಕವಾಗಿ ನಾಸ್ತಿಕರಾಗಿರಬಹುದು. ಆದರೆ ಇಂಟಿಗ್ರಿಟಿಯುಳ್ಳ ಆಸ್ತಿಕರ ಶ್ರದ್ಧೆಯನ್ನು ಗೌರವಿಸುವುದು ಒಂದು ದೊಡ್ಡಮೌಲ್ಯ' ಎಂದು ಪ್ರತಿಪಾದಿಸುವ ಕೃತಿ. ನಮ್ಮ ಮಾತುಕತೆಯದ್ದಕ್ಕೂ ಸೋನೆ ಶೃತಿ ಹಿಡಿದಿತ್ತು. ಸುಮತಿಯವರು ನನಗೆ ಬಿಸಿಬಿಸಿ ಅನ್ನ ಸಾರು, ಹುರಿದ ಹಪ್ಪಳ, ಕುಂದಾಪುರ ಕಡೆಯ ಉಪ್ಪಿನಕಾಯಿಯ ಊಟ ಬಡಿಸಿದರು; ನಡುನಡುವೆ ರಾಜಶೇಖರ್ `ನಮ್ಮನೇಲಿ ಯಾರಿಗೂ ಒಳ್ಳೇ ಟೀ ಮಾಡೋಕೆ ಬರೋಲ್ಲಾರಿ; ನಾನೇ ಮಾಡಬೇಕು. ಅಣ್ಣನಿಗೆ (ಮಗ ವಿಷ್ಣುವಿಗೆ ಅವರು ಕರೆಯುವುದು ಹಾಗೆ.) ಈಗ ಟೀಬೇಕು’ ಎಂದು ಎದ್ದುಹೋಗಿ, ಕೈಯಾರೆ ಟೀಮಾಡಿ ತರುತ್ತಿದ್ದರು; ಅವರ ಕೈಚಹ ಕುಡಿಯಲು `ಅಪ್ಪ ಟೀ ಚೆಂದ ಮಾಡ್ತಾರೆ’ ಎಂದು ವಿಷ್ಣು ಕಣ್ಣುಮಿಟುಕಿಸಿ ಪುಸಲಾಯಿಸುತ್ತಿದ್ದರು. ನಾನು ರಾಜಶೇಖರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಲ ಕಂಡಿದ್ದೇನೆ. ಯಾವಾಗಲೂ ಅವರ ಚಹರೆ ಸರಿಸುಮಾರು ಒಂದೇ ತರಹ; ಹೇಗೆಂದರೆ-ತುಸು ಬಿಗಿದುಕೊಂಡ ಮುಖ; ಹಳೇಮಾದರಿಯ ದಪ್ಪ ಫ್ರೇಮಿನ ಕನ್ನಡಕದೊಳಗೆ ತೀಕ್ಷ್ಣನೋಟ ಹರಿಸುವ ಗಾಬರಿಗೊಂಡಂತೆ ತೋರುವ ಕಣ್ಣು; ಸರಿಯಾಗಿ ಬಾಚದ ತಲೆಗೂದಲು; ಕಪ್ಪು ಚೌಕಳಿಯ ಶರ್ಟು. ಆರ್ಡರ್ ಇನ್ ಡಿಸಾರ್ಡರ್. ಹಾಲಿನ ಇನ್ನೊಂದು ಭಾಗದಲ್ಲಿ ಅವರು ಹೆಂಡತಿ ಜತೆ ತೆಗೆಸಿಕೊಂಡ ಎರಡು ಚಿತ್ರಪಟಗಳಿದ್ದವು.‌ ಒಂದು-ಮದುವೆಯಾದ ಹೊಸತರಲ್ಲಿ ತೆಗೆಸುಕೊಂಡಿದ್ದು. ನಗುಮುಖದ ಯುವಕನ ಸೌಮ್ಯತೆ ಲಾಸ್ಯವಾಡುತ್ತಿದೆ. ಇನ್ನೊಂದು-ನಿವೃತ್ತಿಯ ದಿನ ತಾಂತ್ರಿಕ ಕಾರಣಕ್ಕೆ ತೆಗೆಸಿಕೊಂಡಿದ್ದಿರಬೇಕು- ನೆರಿಗೆ ಸಡಿಲಗೊಂಡಿರದ ಬಿಗುಮುಖ ಗುರುಗುಟ್ಟುತಿದೆ. ರಾಜಶೇಖರರ ಮುಖದ ಚಿಂತನಶೀಲ ಗಾಂಭೀರ್ಯಕ್ಕೆ ಅವರ ಸ್ವಭಾವದಲ್ಲಿ ಅರ್ಧ ಕಾರಣವಿದ್ದರೆ, ಅವರ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿರುವುದು ಇನ್ನರ್ಧ ಕಾರಣ. ಅವರ ನನ್ನ ಮೊದಲ ಭೇಟಿ ನೆನಪಾಗುತ್ತಿದೆ. ಮಡಿಕೇರಿಯಲ್ಲಿ ಪಟ್ಟಾಭಿರಾಮ ಸೋಮಯಾಜಿಯವರು ಸಂಘಟಿಸಿದ್ದ ಕಾರ್ಯಕ್ರಮವದು. ರಾಜಶೇಖರ ಅವರನ್ನು ಮೊದಲ ಸಲ‌ ಕಾಣುವ ಪುಳಕದಲ್ಲಿ ನಾನು ಭೇಟಿಯಾದೆ. ಅವರು ಕೈಕುಲುಕಿ ನಿರ್ಭಾವುಕವಾಗಿ `ಹ್ಞಾ! ಯಾವಾಗ ಬಂದ್ರಿ?’ ಎಂಬ ವಾಕ್ಯಬಿಟ್ಟರೆ ಹೆಚ್ಚೇನೂ ಆಡಲಿಲ್ಲ. ನನಗೆ ತುಸು ನಿರಾಶೆಯಾಗಿತ್ತು. ಬಹುಶಃ ಅವರು ಅಂದಿನ ಕಾರ್ಯಕ್ರಮದ ಬಗ್ಗೆ ತವಕಿತರಾಗಿದ್ದರು. ಕಾರಣ, ಕಾರ್ಯಕ್ರಮ ತಡೆಯಲು ಎದುರಾಳಿಗಳು ಭಯಂಕರ ತಯಾರಿ ಮಾಡಿಕೊಂಡಿದ್ದರಿಂದ, ವಾತಾವರಣ ಬಿಗುವಾಗಿತ್ತು. ಪೋಲಿಸರ ಸಂಖ್ಯೆ ನಮ್ಮನ್ನು ಮೀರಿಸುವಷ್ಟಿತ್ತು. ರಾಜಶೇಖರರ ಆತಂಕ ನಿಜವಾಗುವಂತೆ ಅಂದಿನ ಕಾರ್ಯಕ್ರಮ ನಡೆಯಲಿಲ್ಲ. ಸುರು ಆಗುತ್ತಿದ್ದಂತೆಯೇ ಪಡ್ಚ. ನಾವೆಲ್ಲ ಪೆಟ್ಟುತಿನ್ನದೇ ಮರಳಿದ್ದೇ ದೊಡ್ಡ ಸಂಗತಿ. ನಾನು ಮಾತುಕತೆಗೆ ಮನೆಗೆ ಹೋದ ದಿನ ಅವರು, ಕರಿಬಿಳಿಯ ಉದ್ದಗೆರೆಯಿರುವ ಅಂಗಿ ಹಾಗೂ ಆಗಸನೀಲಿಯ ಚೌಕುಳಿಲುಂಗಿ ಧರಿಸಿದ್ದರು. ವಯಸ್ಸಿನ ಕಾರಣದಿಂದ ದೇಹ ನಸುಬಾಗಿತ್ತು. ಆದರೆ ಲವಲವಿಕೆಯಿತ್ತು. ನಾಲ್ಕೈದು ತಾಸು ಕಾಲ, ಸಾಹಿತ್ಯದ ಬಗ್ಗೆ, ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ, ಒಳನೋಟಗಳಿಂದ ಕೂಡಿದ ಮಾತುಕತೆಯನ್ನು ನಡೆಸಿಕೊಟ್ಟರು. ನಾನು ಕಳೆದ ೨೫ ವರುಷಗಳಲ್ಲಿ ಮಾಡಿದ ಅತ್ಯತ್ತಮ ಸಂದರ್ಶನವದು. ಇದು 'ನ್ಯಾಯ ನಿಷ್ಠುರಿಗಳ ಜತೆಯಲ್ಲಿ' ಸಂಪುಟದಲ್ಲಿ ಅಚ್ಚಾಯಿತು. ಎದುರು ನಾನೊಬ್ಬನೇ ಇದ್ದರೂ, ರಾಜಶೇಖರ್ ದೊಡ್ಡಸಭೆಯನ್ನು ಸಂಬೋಧಿಸುವಂತೆ ಏರುದನಿಯಲ್ಲಿ ಮಾತಾಡುತ್ತಿದ್ದರು; ಮತೀಯ ರಾಜಕಾರಣದ ಚರ್ಚೆ ಬಂದಾಗಲೆಲ್ಲ ಉದ್ವಿಗ್ನತೆಯಿಂದ ಅವರ ದನಿ ವ್ಯಗ್ರಗೊಳ್ಳುತ್ತಿತ್ತು. ಆದರೆ ಹುಟ್ಟೂರಾದ ಗುಂಡ್ಮಿ, ತಮ್ಮ ಬಾಲ್ಯ, ತಾಯಿ, ತಂದೆ, ಅಲ್ಲಿನ ಪರಿಸರ, ಅಡುಗೆ ಇತ್ಯಾದಿ ವಿಷಯ ಬಂದಾಗ, ದನಿ ಮೃದುಗೊಂಡು ಆಪ್ತತೆ ತನ್ಮಯತೆ ಪಡೆಯುತ್ತಿತ್ತು-ಕುವೆಂಪು ಮಲೆನಾಡಿನ ವಿಷಯ ಬಂದರೆ ಭಾವುಕರಾಗುವ ಹಾಗೆ. ಬದುಕಿನ ಸಣ್ಣಸಂಗತಿಗಳಿಗೆ ಮಿಡಿಯುವ ಅವರ ಆಸ್ಥೆ ಮತ್ತು ಜೀವನ ಪ್ರೀತಿಗಳು, ಅವರಲ್ಲಿರುವ ಪ್ರತಿರೋಧ ಪ್ರಜ್ಞೆಯಷ್ಟೇ ತೀವ್ರವಾಗಿದ್ದವು. ರಾಜಶೇಖರ್ ಆದಿನ ಒಳ್ಳೇ ಮೂಡಲ್ಲಿದ್ದರು. ಅವರಲ್ಲಿರುವ ಹಾಸ್ಯಪ್ರಜ್ಞೆ ಸುಳಿಸುಳಿಯಾಗಿ ಹೊರಹೊಮ್ಮುತಿತ್ತು. ಅವರು ಸಾಮಾನ್ಯವಾಗಿ ಉಡುಪಿ ಬಿಟ್ಟು ಹೆಚ್ಚು ಹೊರ ಹೋದವರಲ್ಲ. ಉಡುಪಿಯ ಜತೆ ಅವರಿಗೆ ಆಪ್ತವಾದ ಗಾಢವಾದ ನಂಟಿತ್ತು. ಹಿಂದೊಮ್ಮೆ ನನ್ನ ಗುರುಗಳಾದ ಪುಣೇಕರ್ ಅವರು ಉಡುಪಿಯಲ್ಲಿ ವಾಸವಿದ್ದ ವಿಷಯ ಪ್ರಸ್ತಾಪಕ್ಕೆ ಬಂತು. ಆಗ ರಾಜಶೇಖರ್ ಹೇಳಿದರು: "ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದು ಗೊತ್ತಲ್ಲ? ಅವರಿದ್ದ ಮನೆಯಲ್ಲಿಯೇ ಅಡಿಗರು ಇದ್ರು. ಅದೊಂದು ಹಳೇ ಕಾಲದ ಮನೆ. ಅದರ ಎದುರು ಒಂದಿಷ್ಟು ಖಾಲಿ ಜಾಗ ಇತ್ತು. ಅದನ್ನು ಹಾಗೇ ಹಾಳು ಬಿಟ್ಟಿದ್ರು. ಪುಣೇಕರ್ ಆಗಲಿ, ಅವರ ನಂತರ ಬಂದ ಅಡಿಗರಾಗಲಿ, ಇವರಿಬ್ಬರಿಗಿಂತ ಮೊದಲಿದ್ದ ವಿ.ಎಂ.ಇನಾಂದಾರ್ ಆಗಲಿ, ಮೂರೂ ಪುಣ್ಯಾತ್ಮರು ಒಂದು ಗಿಡಾನೂ ಅಲ್ಲಿ ನೆಡಲಿಲ್ಲ. ಆ ಮನೆಗೊಂದು ಮೊಗಸಾಲೆ ಇತ್ತು. ಅಲ್ಲಿ ಈ ಮೂವರು ಸಂಜೆ ವಿರಾಜಮಾನರಾಗಿರುತ್ತಿದ್ದರು. ಅಡಿಗರಂತೂ ಒಂದಾದ ಮೇಲೊಂದು ಸಿಗರೇಟ್ ಸುಡ್ತಾ ಇದ್ದರು." ಮಾತಿನ ಮಧ್ಯೆ ಕೆಲವು ಪತ್ರಿಕೆಗಳ ವಿಷಯ ನುಸುಳಿತು. "ನಾನು ಅವನ್ನು ಓದುವುದಿಲ್ಲ" ಎಂದೆ. ಅವರು ತುಸು ಅಸೂಯೆಯಿಂದ ``ನೀವು ಅದೃಷ್ಟವಂತರು ಕಂಡ್ರಿ. ದಾರೀಲಿ ನಡೀವಾಗ ಸೈಡಲ್ಲಿ ಬಿದ್ದಿರೋ ಮಲಕ್ಕೆ ಬೇಡವೆಂದೂ ನಮ್ಮ ದೃಷ್ಟಿಹೋಗುತ್ತೆ'' ಎಂದು ಸ್ವಗೇಲಿ ಮಾಡಿಕೊಂಡರು. ರಾಜಶೇಖರ್ ಗೆ, ಸಾಹಿತ್ಯ ಕ್ಷೇತ್ರದಾಚೆ ಇರುವ ಸಾರ್ವಜನಿಕ ವ್ಯಕ್ತಿಗಳ ಬರೆಹ-ಮಾತುಗಾರಿಕೆ ಬಗ್ಗೆ ಬಹಳ ಆಸಕ್ತಿಯಿತ್ತು "ನೀವು ಗದುಗಿನ ತೋಂಟದಾರ್ಯ ಸ್ವಾಮಿಗಳ ಭಾಷಣದಿಂದ, ಅದರಲ್ಲೂ ಅವರ ಕನ್ನಡದಿಂದ ಬಹಳ ಪ್ರಭಾವಿತರಾಗಿದ್ದಿರಿ ಅಂತ ಕೇಳೀದೀನಿ. ಯಾವ ಸನ್ನಿವೇಶ ಅದು?" ಎಂದು ಕೇಳಿದೆ. `` ತೋಂಟದಾರ್ಯ ಸ್ವಾಮಿಗಳೂ, ನಿಡುಮಾಮಿಡಿ ಸ್ವಾಮಿಯವರೂ ಮತ್ತು ನಾನೂ, ಮಂಗಳೂರಿನ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದೆವು. ಇಬ್ಬರದೂ ಒಂದು ಜುಗಲಬಂದಿ ನಡೀತು ಸ್ವಲ್ಪಹೊತ್ತು-'ಎಷ್ಟು ಸೊಗಸಾಗಿ ಮಾತಾಡಿದಿರಿ ತಾವು' ಅಂತ ಒಬ್ಬರು. 'ಇಲ್ಲಿಲ್ಲ. ತಾವು ತುಂಬ ಚೆನ್ನಾಗಿ ಮಾತಾಡಿದಿರಿ' ಅಂತ ಇನ್ನೊಬ್ಬರು. ಅದರೆ ಇಬ್ಬರೂ ಸೊಗಸಾಗಿ ಮಾತಾಡಿದ್ದರು. ಗದುಗಿನ ಸ್ವಾಮಿಗಳಂತೂ ಬಹಳ ಸಹಜವಾಗಿ ಮಾತಾಡಿದ್ದರು'' ಎಂದು ಸಂತೋಷದಲ್ಲಿ ನೆನೆದರು. ಹಳೇ ಉಡುಪಿ ಶಹರಿನ ಚಹರೆ ಚರ್ಚೆಗೆ ಬಂತು. ಆಗ ರಾಜಶೇಖರ್ ಬನ್ನಂಜೆಯಲ್ಲಿದ್ದ ಒಂದು ಗುಡಿಯನ್ನು ನೆನೆಸಿಕೊಂಡು ನುಡಿದರು: ``ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್ನ ವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ'' ಎಂದರು. ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕøತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು. ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನಗಿರಿ ಕುರಿತ ಕಾರ್ಯಕ್ರಮದಲ್ಲಿ, ಶಬನಂ ವೀರಮಾನ್ವಿ ಹಾಡಿದ ಕಬೀರ್ ಭಜನನ್ನು ಕೇಳಿ ಅವರು `ಹಾ! ಎಂಥಾ ಎನರ್ಜಿ ಮತ್ತು ತನ್ಮಯಗೊಳಿಸುವ ಶಕ್ತಿಯಿದೆ ಈ ಕಂಠಕ್ಕೆ’ ಎಂದು ಆನಂದಪಟ್ಟಿದ್ದನ್ನು ನೆನೆಸಿಕೊಂಡೆ. ನಾಸ್ತಿಕರು ಅಥವಾ ಕೋಮುವಾದ ಮೂಲಭೂತವಾದ ವಿರೋಧ ಮಾಡುವವರು, ಜನತೆಯ ಧಾರ್ಮಿಕ ಲೋಕಗಳ ಬಗ್ಗೆ ಗೌರವವುಳ್ಳವರು; ಅಲ್ಲಿರುವ ಕಲೆ ಸೌಂದರ್ಯಗಳ ಬಗ್ಗೆ ಪ್ರೀತಿಯುಳ್ಳವರು- ಎಂದರೆ ಕೆಲವರು ನಂಬುವುದಿಲ್ಲ. ಶಕ್ತಿ ರಾಜಕಾರಣವು ಧರ್ಮವನ್ನು ತನ್ನ ಹತ್ಯಾರದಂತೆ ಬಳಸುವುದನ್ನು ವಿರೋಧಿಸುವುದು ಬೇರೆ: ನಿತ್ಯ ಜೀವನದಲ್ಲಿ ಸಾಮಾನ್ಯ ಜನ ಬದುಕುವ ಧರ್ಮವನ್ನು ಮನ್ನಿಸುವುದು ಬೇರೆ ಎಂದರೆ, ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಕೆಲವರು ಇವುಗಳ ನಡುವಿನ ಫರಕನ್ನು ಉದ್ದೇಶಪೂರ್ವಕವಾಗಿ ಮರೆಯಿಸಿ, 'ವಿಚಾರವಾದಿ' 'ಬುದ್ಧಿಜೀವಿ' ಲೇಖಕರು' ಎಂಬುವರನ್ನು 'ಸಮಾಜದ ಕ್ಷೇಮಕ್ಕಾಗಿ ನಿವಾರಿಸಬೇಕಾದ ಪೀಡೆಗಳು' ಎಂಬ ಗೊಂದಲದ ಸನ್ನಿವೇಶವನ್ನು ನಿರ್ಮಾಣ ಮಾಡಿರುವರು. ಈ ಸನ್ನಿವೇಶವೇ ಲೇಖಕರ ಹತ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ನಿಜವಾದ ವಿಚಾರವಾದವು, ಧರ್ಮದ ಹೆಸರಲ್ಲಿರುವ ಮತೀಯ ರಾಜಕಾರಣವನ್ನು ನಿರಾಕರಿಸುತ್ತಲೇ, ಪರಂಪರೆಯಿಂದ ಬಂದ ಜೀವನ ಕ್ರಮಗಳ ಬಗ್ಗೆ, ಅದು ಸೃಷ್ಟಿಮಾಡಿರುವ ಅಡುಗೆ, ವಾಸ್ತು, ಇತ್ಯಾದಿ ಕ್ಷೇತ್ರಗಳಲ್ಲಿರುವ ಕುಶಲತೆ ಬಗ್ಗೆ ಅಪಾರ ಶ್ರದ್ಧೆ ತೋರುತ್ತದೆ. ಇದು ಕಾರಂತ ಕುವೆಂಪು ಅವರಿಂದ ಕನ್ನಡದಲ್ಲಿ ಹರಿದು ಬಂದಿರುವ ಪರಂಪರೆ. ಲೋಹಿಯಾ ಅವರು ಮಹಾನ್ ವಿಚಾರವಾದಿ. ಆದರೆ ಅವರ `ರಾಮಕೃಷ್ಣಶಿವ' ಲೇಖನ ಸಾಂಸ್ಕøತಿಕ ಆಸ್ಥೆಯಿರುವ ಮನಸ್ಸು ಮಾತ್ರ ಬರೆಯುವಂಥದ್ದು. ರಾಜಶೇಖರ್ ಇಂಥಾ ಪರಂಪರೆಗೆ ಸೇರಿದ ಚಿಂತಕರು. ರಾಜಶೇಖರ್ ಜೀವವಿಮಾ ಕಛೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದವರು. ಕಳೆದ ದಶಕದಿಂದ ಕೋಮಸೌಹಾರ್ದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೀವಮಾನ ಉದ್ದಕ್ಕೂ ಬೇರೆಬೇರೆ ಜನಪರ ಚಳುವಳಿಗಳ ಭಾಗವಾದವರು; ಸಾವಿರಾರು ಬೀದಿಭಾಷಣಗಳನ್ನು ಮಾಡಿದವರು. ಅವರ ವಿಮರ್ಶೆ ಓದುವುದು ಮತ್ತು ಭಾಷಣ ಕೇಳುವುದು ಎಂದರೆ, ಸಾಹಿತ್ಯವನ್ನೂ ಅದರ ಘನತೆಯಲ್ಲಿ, ಸಮಾಜವನ್ನು ಅದರ ಸಂಕೀರ್ಣತೆಯಲ್ಲಿ, ಅರಿಯುವ ಕ್ರಮವೇ ಆಗಿದೆ. ಅವರ ಚಿಂತನೆ ಮತ್ತು ಭಾಷೆಗಳಲ್ಲಿರುವ ತೀಕ್ಷ್ಣತೆಗೂ ವ್ಯಕ್ತಿತ್ವದಲ್ಲಿರುವ ತಳಮಳಿಕೆಗೂ ಕಾರಣ, ಅವರ ಸೂಕ್ಷ್ಮಸಂವೇದನೆ ಮಾತ್ರವಲ್ಲ, ಹಾಲಿ ಕರಾವಳಿ ಕರ್ನಾಟಕದ ಪ್ರಕ್ಷುಬ್ಧ ಸನ್ನಿವೇಶ ಕೂಡ. ಮಾತುಕತೆಯಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಬಹಳ ಸಲ `ನನಗೆ ಗೊತ್ತಿಲ್ಲ' ಎಂದು ವಿವರಣೆ ಶುರುಮಾಡುತ್ತಿದ್ದರು. ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರಷ್ಟು ಓದಿದವರು ಕನ್ನಡದಲ್ಲಿ ಕಡಿಮೆ. ಅವರಷ್ಟು ಆಳವಾದ ವ್ಯಾಪಕವಾದ ಓದನ್ನು ವಿಶ್ವವಿದ್ಯಾಲಯಗಳಲ್ಲಿರುವ ನಾವು ಮಾಡಿದ್ದರೆ, ನಮ್ಮ ವಿದ್ಯಾರ್ಥಿಗಳು ಏನೇನಾಗಿರುತ್ತಿದ್ದರೊ? ಆ ದಿನದ ಮಾತುಕತೆಯಲ್ಲಿ ನನಗೆ ಅವರು ಆಂಗ್ಲ ಶಿಕ್ಷಕರಾಗಿದ್ದ ಸಂಗತಿ ಆಕಸ್ಮಿಕವಾಗಿ ತಿಳಿಯಿತು. ಅವರ ಇಂಗ್ಲೀಶ್ ಓದು ಕೂಡ ವ್ಯಾಪಕ. ಅವರೊಬ್ಬ ಅದ್ಭುತ ಕನ್ನಡ ಗದ್ಯಕಾರ. ಕನ್ನಡದಲ್ಲಿ ಅವರಂತೆ ಮುಕ್ಕಾಗದ ನೈತಿಕ ಪ್ರಜ್ಞೆ ಮತ್ತು ಧೀಮಂತಿಕೆಯುಳ್ಳ ಚಿಂತಕರು ವಿರಳ. ಕನ್ನಡ ಬರೆಹದಲ್ಲಿರುವ ಜಡತೆ ಮತ್ತು ಲಯಗೇಡಿತನ ಕಂಡಾಗಲೆಲ್ಲ ಹರಿಹಾಯುತ್ತಿದ್ದ ಲಂಕೇಶ್, ತಮ್ಮ ಸಾಯುವ ಕೊನೆಯ ಕ್ಷಣಗಳಲ್ಲಿ ಬರೆದ ಟಿಪ್ಪಣಿ, ರಾಜಶೇಖರ ಅವರ ಪ್ರಾಂಜಲವಾದ ಕನ್ನಡವನ್ನು ಕುರಿತಾಗಿತ್ತು. ಬಾಳಿಡೀ ಪ್ರತಿರೋಧ‌ ಮತ್ತು ಆಕ್ಟಿವಿಸಂನಿಂದ ಜಗಜಗಿಸಿದ ರಾಜಶೇಖರ್ ಅವರಲ್ಲಿ, ಮತೀಯವಾದವು ದೇಶವನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ನಿರಾಶೆಯಿತ್ತು; ಅವರು ಮತ್ತಷ್ಟು ಹತಾಶೆಯ ಗಳಿಗೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂದೂ ಅನಿಸಿತು. ಒಳ್ಳೆಯ ಮಾತುಗಾರರಾದ ಅವರು, ಮಾತು ಮತ್ತು ಬರೆಹದ ನಿಷ್ಫಲತೆಯನ್ನೂ ಅರಿತವರು. ಸದ್ಯದ ಚಾರಿತ್ರಿಕ ಸನ್ನಿವೇಶವೇ ಅವರ ಬರೆಹ ಮತ್ತು ಮಾತಿಗೆ ತೀವ್ರತೆಯನ್ನೂ ವಿಷಾದದ ಗುಣವನ್ನೂ ತಂದುಕೊಟ್ಟಂತೆ ತೋರಿತು. ``ನೀವು ಅಷ್ಟೊಂದು ಬೀದಿಭಾಷಣ ಮಾಡಿದವರು. ಆದರೆ ಸೆಮಿನಾರುಗಳಲ್ಲಿ ಬರಕೊಂಡು ಬಂದು ಮಾತಾಡ್ತೀರಲ್ಲ, ಯಾಕೆ?" ಎಂದೆ. "ಎಕ್ಸಟೆಂಪರ್ ಮಾತಾಡೋ ಧೈರ್ಯವೇ ಇಲ್ಲ ನನಗೆ. ಮೈಕ್ ಮುಂದೆ ನಿಂತು ಮಾತಾಡುವಾಗ ಯೋಚನೆ ಮಾಡಿಕೊಂಡು ಬಂದಿದ್ದ ಮಾತೆಲ್ಲ ಮರೆತೇ ಹೋಗುತ್ತೆ. ನನಗೆ ಅಲ್ಲಲ್ಲೇ ನಿಂತುಗೊಂಡು ಸೃಷ್ಟಿ ಮಾತಾಡೋವಷ್ಟು ಸೃಜನಶೀಲತೆ ಇಲ್ಲ. ಕಿ.ರಂ. ಮಾಡ್ತಿದ್ದರಂತೆ ಅದನ್ನ. ಕಿ.ರಂ. ಭಾಷಣ ಮಾಡೋಕೆ ಪುಟಗಟ್ಟಲೆ ನೋಟ್ಸ್ ಮಾಡ್ಕೊಂಡು ಹೋಗ್ತಾರೆ. ಮೈಕ್ ಮುಂದೆ ನಿಂತುಕೊಳ್ತಾರೆ. ಆಮೇಲೆ ಅದನ್ನು ನೋಡೋದೇ ಇಲ್ಲವಂತೆ. ಮಾಡ್ಕೊಂಡಿರೋ ನೋಟ್ಸೇ ಬೇರೆ; ಎದುರುಗಡೆ ಬಂದು ಹೇಳೋದೇ ಬೇರೆ. ಆ ತರಹದ ಕುಶಲತೆ ನನ್ನ ಹತ್ತರ ಇಲ್ಲ. ಮಾತಿಗೆ ತಡವರಿಸೋದೇ ಜಾಸ್ತಿ. ಸುಮಾರಷ್ಟು ಡಿಸಾಸ್ಟರಸ್ ಎಕ್ಸ್ ಪೀರಿಯನ್ಸ್ ಆಗಿವೆ ನನಗೆ'' ಎಂದರು. "ನೀವು ಮೇನ್ ಸ್ಟ್ರೀಂ ಪತ್ರಿಕೆಗಳಲ್ಲಿ ಯಾಕೆ ಬರೆಯೋಲ್ಲ?" ಎಂದೆ. "ನಾನು ಬರೆದಿದ್ದನ್ನು ಅವರು ಹಾಕುವುದಿಲ್ಲ. ನಾನು ಹಿಂದೆ ಬರೆಯುತ್ತಿದ್ದುದು `ಲಂಕೇಶ್ ಪತ್ರಿಕೆ'ಗೆ; ನಂತರ 'ಗೌರಿಲಂಕೇಶ್'ಗೆ. ಈಗ ಎರಡೂ ಇಲ್ಲ. ನನಗೆ ಬರೆಸುವವರ ಪ್ರಚೋದನೆಯೇ ಇಲ್ಲವಾಗಿದೆ'' ಎಂದು ಜವಾಬಿಸಿದರು. ಹೊರಡುವಾಗ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡೆ. ಅವರನ್ನು ನಗಿಸಬೇಕೆಂದು ನಾನೂ ವಿಷ್ಣುವೂ ಯತ್ನಿಸಿದೆವು. ತುಸುವೇ ತುಟಿ ಅರಳಿಸಿದರು. ಆಹೊತ್ತಿಗೆ ಮಳೆನಿಂತಿತ್ತು. ಆಗಸ ಹೊರಪಾಗಿತ್ತು. ಬರುತ್ತ ಅವರ ಕಾನನ ಸದೃಶ ಹಿತ್ತಲಿನಿಂದ ಒಂದು ಹೂಗಿಡದ ಸಸಿಯನ್ನು ಹಿಡಿದುಕೊಂಡು ಬಂದೆ. 53 Comments Chandrashekhar Nangali ನನ್ನನ್ನು ತುಂಬಾ ಪ್ರಭಾವಿಸಿದವರು ಜಿ.ಆರ್.ದ್ವಯರು (ಜಿ.ರಾಮಕೃಷ್ಣ & ಜಿ.ರಾಜಶೇಖರ್ )😍😍

ಜಿ. ರಾಜಶೇಖರ - ಅನುಪಮಾ ಪ್ರಸಾದ್ ಅವರ " ದೂರ ತೀರ " { ಕಥಾ ಸಂಕಲನ }Anupama Prasad ,/ G. Rajashekhar

2012ರಲ್ಲಿ ಪಲ್ಲವ ಪ್ರಕಾಶನದಿಂದ ಬಂದ ಕಥಾಸಂಕಲನಕ್ಕೆ ಜಿ.ರಾಜಶೇಖರರ ಮುನ್ನುಡಿ. `ದೂರ ತೀರ’ಅನುಪಮಾ ಪ್ರಸಾದ್ ಅವರ ಮೂರನೆಯ ಕಥಾ ಸಂಕಲನ. ಇದಕ್ಕೂ ಮೊದಲು ಅವರ `ಚೇತನಾ’ಮತ್ತು `ಕರವೀರದ ಗಿಡ’ಸಂಕಲನಗಳು ಪ್ರಕಟವಾಗಿದ್ದು ಸಹೃದಯಿ ಓದುಗರಿಗೆ ಅವರು ಅಪರಿಚಿತರೇನಲ್ಲ. ಅನುಪಮಾ ಅವರ ಕತೆಗಳು ಕನ್ನಡದ ಹಲವು ಜನಪ್ರಿಯ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಸಣ್ಣಕತೆಯ ಕ್ಷೇತ್ರದಲ್ಲಿ ಅವರಿಗೆ ಈಗಾಗಲೇ ಸಾಕಷ್ಟು ಹೊಕ್ಕು ಬಳಕೆ ಸಾಧಿಸಿದ್ದು ಪ್ರಸ್ತುತ ಸಂಕಲನಕ್ಕೆ ನನ್ನ ಮುನ್ನುಡಿ ರೂಪದ ಹಿತವಚನಗಳ ಅಗತ್ಯವೇನೂ ಇಲ. ಸರಳವೂ ನೇರವೂ ಆಗಿರುವ ಅವರ ಕತೆಗಳು ನಿರಾಭರಣ ಸುಂದರಿಯಂತಿದ್ದು ಅವಕ್ಕೆ ನನ್ನ ಈ ಬರಹದ ಅಲಂಕಾರವೂ ಬೇಕಿಲ್ಲ. ಆದರೆ ಸರಳ ಮಾತುಗಳಲ್ಲಿ ಕತೆಕಟ್ಟಿ ಹೇಳುವÀ ಕಸುಬು ಸರಳವಲ್ಲ. ಹಕ್ಕಿ ತನ್ನ ಗೂಡು ಕಟ್ಟಿಕೊಳ್ಳುವಂತೆ ಅದು. ಪರಿಕರ ಸರಳ; ಆದರೆ ಸಂರಚನೆ ಸಂಕೀರ್ಣ. ಸರಳ ನೇರ ಮಾತುಗಳ ಮುಖಾಂತರವೇ ವಾಚ್ಯಾರ್ಥವನ್ನು ಮೀರಿದ ಧ್ವನ್ಯಾರ್ಥಗಳನ್ನು ಹೊಳೆಯಿಸುವ ಸೂಕ್ಷ್ಮಜ್ಞತೆ ಕೂಡ ಸುಲಭ ಸಾಧ್ಯವಲ್ಲ. ಈ ದೃಷ್ಠಿಯಿಂದ ಅನುಪಮಾ ಮೈ ಗೂಡಿಸಿಕೊಂಡಿರುವ ಕತೆಗಾರಿಕೆಯ ಕೌಶಲವನ್ನು, ಪ್ರಸ್ತುತ ಕತೆಗಳ ನನ್ನ ಓದಿನಿಂದ ವಿವರಿಸಲು ಇಲ್ಲಿ ಯತ್ನಿಸುತ್ತೇನೆ. ಅನುಪಮಾ ಅವರ ಈ ಸಂಕಲನದ ಎಲ್ಲಾ ಕತೆಗಳೂ-ಪ್ರಾಯಶಃ `ಜಾಜಿ ಗಂಧದ ಜಾಡು..’ಒಂದು ಕತೆÉಯನ್ನು ಹೊರತು ಪಡಿಸಿ- ವಾಸ್ತವ ಶೈಲಿಯ ಸೀದಾ ಸಾದಾ ಕಥನಗಳು. ಇಲ್ಲಿ ನಮಗೆ ಎದುರಾಗುವ ಎಲಾ ಪಾತ್ರಗಳು ದಿನ ನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿ ಬರುವ ಆಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು; ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕತೆÉಗಳೂ ಊರು ಮನೆಗಳ ಆವರಣವನ್ನೂ ಕಾಲದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು. ಉದಾಹರಣೆಗೆ ಸಂಕಲನದ ಶೀರ್ಷಿಕೆ “ದೂರ ತೀರ” ಕತೆಯ ಶ್ರೀನಿವಾಸ ಪ್ರಕೃತ ದುಡಿಯುತ್ತಿರುವುದು ಗೋವಾದ ಅಪರಿಚಿತ ಊರೊಂದರ ಹೋಟೆಲಿನಲ್ಲಾದರೂ, ಅವನ ಮನಸ್ಸು ನೆಲೆಸಿರುವುದು ತನ್ನ ಹುಟ್ಟೂರಿನ ಬಾಲ್ಯ ಕಾಲದ ನೆನಪುಗಳಲ್ಲೇ. ಅವನು ಚಿಕ್ಕ ಹುಡುಗನಾಗಿದ್ದಾಗ ಅಂದರೆ ಇಪ್ಪತ್ಮೂರು ವರ್ಷಗಳ ಹಿಂದೆ, ಅವನು ಮಾಡಿದ ಒಂದು ಚಿಲ್ಲರೆ ಕಳ್ಳ್ಳತನಕ್ಕೆ ಅವನ ಅಪ್ಪ ತೋರಿದ ರೌದ್ರಾವತಾರದಿಂದಾಗಿ ಮನೆ ಬಿಟ್ಟು ಓಡಿ ಹೋದ ಬಡ ಬ್ರಾಹ್ಮಣ ತರುಣ ಅವನು. ಈಗ ಹೊಸ ಊರು, ಹೊಸ ವೃತ್ತಿ, ಜೊತೆಗೆ ಅಪ್ರಯತ್ನಪೂರ್ವಕವಾಗಿ ಒಲಿದಿರುವ ಹಾಡುಗಾರಿಕೆಗಳಿಂದಾಗಿ ಅವನಲ್ಲಿ ಕೊಂಚ ಆತ್ಮ ವಿಶ್ವಾಸ ಮೂಡಿದೆ. ಆದರೆ ತನ್ನ ಹುಟ್ಟೂರು ಸಮೀಪಿಸುತ್ತಿದ್ದಂತೆ ಅವನು ಅಧೀರನಾಗುತ್ತಾನೆ. ಏನು ಮಾಡಿದರೂ, ತನ್ನ ಮೇಲಿರುವ ಕಳ್ಳತನದ ಆರೋಪದಿಂದ ತಾನು ಕಳಚಿಕೊಳ್ಳಲಾರೆ; ತನ್ನ ಬೆನ್ನು ಹತ್ತಿದ ದೈವ ತನ್ನನ್ನು ಬಿಟ್ಟು ತೊಲಗುವುದಿಲ್ಲ ಎಂದು ಶ್ರೀನಿವಾಸನಿಗೆ ಅರಿವಾಗುತ್ತದೆ. `ಸ್ವ’ ದ ಕುರಿತ ಈ ವಿಷಾದವೇ ಅವನಲ್ಲಿ ನೆನಪುಗಳ ಭಾರದಿಂದ ಬಿಡುಗಡೆಗೊಂಡ ಭಾವವನ್ನು ಸ್ಪುರಿಸುತ್ತದೆ. ಕರಾವಳಿ ಮತ್ತು ಅದರ ಒಳನಾಡಿನ ಭೌಗೋಳಿಕ ಮೇಲ್ ಮೈ ವಿವರಗಳು ಬಡ ಬ್ರಾಹ್ಮಣರ ಕಾರ್ಪಣ್ಯದ ಬದುಕು, ಸೆಖೆ, ಮೊದಲ ಮಳೆಯ ನಂತರದ ಧಗೆ - ಹೀಗೆ ಕತೆ ತನ್ನ ಆವರಣವನ್ನು ಸರಳ ಮಾತುಗಳಲ್ಲಿ ಕಟ್ಟಿಕೊಳ್ಳುತ್ತದೆ. ವರ್ತಮಾನದ ವಾಸ್ತವದಿಂದ ಗತಕಾಲದ ನೆನಪುಗಳಿಗೆ ಮರಳಿ ವರ್ತಮಾನಕ್ಕೆ ಹೊರಳಿಕೊಳ್ಳುವ ನಿರೂಪಣೆ ಸಂಕಲನದ ಹೆಚ್ಚಿನ ಕಥೆಗಳಲ್ಲಿ ಕಂಡು ಬರುವ ವಿನ್ಯಾಸ. `ಖಾದಿ ಅಂಗಿ’ಯ ಸೀತಕ್ಕನಿಗೆ ತನ್ನ ಇಳಿವಯಸ್ಸಿನಲ್ಲೂ ತಾರುಣ್ಯದ ತನ್ನ ಪ್ರೇಮಿಯದ್ದೇ ನೆನಪು. ಅವಳ ಯೌವನ ನಾಡಿನ ಸ್ವಾತಂತ್ರ್ಯ ಹೋರಾಟದ ಏರು ದಿನಗಳ ಕಾಲಘಟ್ಟವೂ ಹೌದು. ಅವಳ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ. ಸೀತಕ್ಕನ ನೆನಪಿನಲ್ಲಿ ತನ್ನ ಹದಿ ಹರೆಯದ ಪುಳಕ, ಪ್ರೇಮದ ರೋಮಾಂಚನ, ಸ್ವಾತಂತ್ರ್ಯ ಹೋರಾಟದ ಆದರ್ಶ ಮತ್ತು ತನ್ನ ಪ್ರಿಯಕರನೊಡನೆ ಯಾವತ್ತೂ ಒಂದಾಗಲಾರದ ವಿಷಾದಗಳೆಲ್ಲ ಬೆರೆತುಕೊಂಡಿವೆ. ಅವಳು ಮನಸಾರೆ ಪ್ರಿತಿಸಿದ ಕೃಷ್ಣಾನಂದ, ಭೂಗತ ಹೋರಾಟಗಾರನಾಗಿ ಅವಳ ಮನೆ ಸೇರಿಕೊಂಡವ. ಅವನಿಗೂ ಅವಳ ಮೇಲೆ ಪ್ರೀತಿ. ಸೀತಕ್ಕ ಬ್ರಾಹ್ಮಣ ಹೆಂಗಸರು ಮುಟ್ಟಾದರೆ ಮೂರುದಿನ ಪ್ರತ್ಯೇಕ ಬಿಡಾರದಲ್ಲಿದ್ದು ಅಕ್ಷರಶಃ ಹೊರಗಾಗುವ ಕಾಲದವಳು. ಅಂತದ್ದರಲ್ಲೂ ಅವಳು ತನ್ನ ಪ್ರೇಮದ ಉತ್ಕಟತೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕೈ ಜೋಡಿಸುತ್ತಾಳೆ. ಆದರೆ ಅವಳ ಕೃಷ್ಣಾನಂದ ಮಾತ್ರ ಪೋಲಿಸರ ಗುಂಡೇಟಿಗೆ ಬಲಿಯಾಗಿ ಹುತಾತ್ಮನಾಗುತ್ತಾನೆ. ಸೀತಕ್ಕ ಯಾವ ಜ್ಜೀವ ವಿರಹಿಯಾಗುತ್ತಾಳೆ. ನಾಡಿನ ಸ್ವಾತಂತ್ರ್ಯಕ್ಕೆ ಅವಳ ತ್ಯಾಗದ ಕೊಡುಗೆಯೂ ಇದೆ; ಆದರೆ ಅವಳು ಮಾತ್ರ ಮದುವೆಯಾಗದೆಯೂ ಶಾಶ್ವತ ವೈಧವ್ಯ ಅನುಭವಿಸುತ್ತಾಳೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ಕಾಯಿದೆ ಭಂಗ ಚಳುವಳಿ ಬಿರುಸಾಗಿ ನಡೆದ ಪ್ರದೇಶಗಳಲ್ಲಿ ಈಗಿನ ಉತ್ತರ ಕನ್ನಡ ಜಿಲ್ಲೆಯೂ ಒಂದು. ಹಾಗಾಗಿ ಕತೆಗೆ ಲೇಖಕಿ ಕಲ್ಪಿಸಿರುವ ಭೌಗೋಳಿಕ ಆವರಣ ಮತ್ತು ಸ್ಥಳೀಯ ಹವ್ಯಕ ಆಡುನುಡಿಯ ಬಳಕೆ ಸೂಕ್ತವಾಗಿದೆ. ಆದಾಗ್ಯೂ ಈ ಕುರಿತು ನನ್ನದೊಂದು ತಕರಾರಿದೆ. ಕತೆಯಲ್ಲಿ ಹವ್ಯಕ ಕನ್ನಡದ ಬಳಕೆ, ಕೇವಲ ಕೆಲವು ಶಬ್ದ ಮತ್ತು ಪ್ರತ್ಯಯಗಳಿಗೆ ಮಾತ್ರ ಸೀಮಿತಗೊಂಡಿದೆ- ಅಡುಗೆಗೆ ಹಾಕುವ ಒಗ್ಗರಣೆಯಂತೆ. ಉದಾಹರಣೆಗೆ ಸೀತಕ್ಕ ತಾನು ಹುಟ್ಟಿ ಬೆಳೆದ, ಕಾನ್ತೋಟದ ಮನೆಯನ್ನು ನೆನಪಿಸಿಕೊಂಡು ಹೇಳುವ ಮಾತುಗಳನ್ನು ನೋಡಿ, “....ನಾಲ್ಕು ಜನ ಅಕ್ಕಂದಿರು. ಅವರೆಲ್ಲ ಲಗ್ನವಾಗಿ ಗಂಡನ ಮನೆ ಸೇರಿದ ಮೇಲೆ ಕಾನ್ತೋಟದ ಮನೆ ಬಣಗುಡ್ತಿತ್ತಡ. ಸುತ್ತ ನಾಲ್ಕು ಹಳ್ಳಿಯೊಳ್ಗ ಅಂತ ಇನ್ನೊಂದು ಮನೆ ಇತ್ತಿಲ್ಯಡ. ಮದುವೆ-ಮುಂಜಿ ಇದ್ದು ಅಂದ್ರೆ ಒಂದೇ ಸರ್ತಿ ನೂರೈವತ್ತು ಮಂದಿಗೆ ಆಸ್ರಿಗೆ-ಊಟಕ್ಕೆ ಎಲೆ ಹಾಕೊ ಹಂಗೆ ಉದ್ದಾನುದ್ದ ಜಗಲಿ, ಜಗಲಿ ದಾಟಿ ಒಳಗ್ಹೋದ್ರೆ ಎಡ ಬದಿಗೆ ಬೈಠಕ್ ಖಾನೆ. ಬಲಬದಿಗೆ ಚೌಕಾಕಾರದ ಜಗಲಿ, ಜಗಲಿ ಮೂಲೆಗೆ ಮೆತ್ತು ಹತ್ತಲು ಏಣಿ. ಅಲ್ಲಿಂದಾಚೆ ಉದ್ದಕ್ಕೆ ಪಣ್ತದ ಮನೆ. ಪ್ರಧಾನ ಬಾಗಿಲು ದಾಟಿ ಒಳಹೊಕ್ದೆ ಅಂದ್ರೆ ಒಳಗೆಲ್ಲ ನಡು ಮಧ್ಯಾಹ್ನವೂ ಆವರಿಸಿಕೊಂಡಿರುವ ಕತ್ತಲು..” ಈ ಉದ್ಗøತದಲ್ಲಿ ಹಲವೆಡೆ ಸೀತಕ್ಕ ಆಡುವ ಮಾತು ಮತ್ತು ಅದರ ಲಯ ಕೃತಕವಾಗಿ ಕೇಳಿಸುತ್ತದೆ. `ನಡು ಮಧ್ಯಾಹ್ನವೂ ಆವರಿಸಿಕೊಂಡಿರುವ ಕತ್ತಲು’ ಎಂಬ ಮಾತು ಸುಂದರವಾಗಿದೆ; ಆ ಕಾಲದ ಸಂಪ್ರದಾಯಸ್ಥ ಬ್ರಾಹ್ಮಣರ ಮನೆUಳಿಗೆ ಒಪ್ಪುವಂತಹದ್ದು ಆಗಿದೆ. ಆದರೆ ಜನ- ಅದರಲ್ಲೂ ಸೀತಕ್ಕನಂತವರು-ನಿತ್ಯದ ಸಂಭಾಷಣೆಯಲ್ಲಿ ಹಾಗೆ ಮಾತಾಡುವುದಿಲ್ಲ. ಭಾಷೆಯ ಈ ತೊಡಕು, ಸಂಕಲನದ ಇತರ ಕೆಲವು ಕಥೆಗಳಲ್ಲೂ ನನಗೆ ತಲೆದೋರಿದೆ. ಕತೆಗಳಲ್ಲಿ ನಡೆಯುವ ಘಟನೆಗಳು ಸಹಜವೆನ್ನನಿಸಿದರೂ, ಪಾತ್ರಗಳ ಮಾತು ಮಾತ್ರ ಅಸಹಜವೆನ್ನಿಸುತ್ತದೆ. ಜನ ನಿತ್ಯ ಆಡುವ ಮಾತು, ಹೇಳದೆ ಬಿಟ್ಟ ಮಾತು, ಮಾತಿನ ನಡುವಿನ ಮೌನ-ಇವನ್ನೆಲ್ಲ ಆಲಿಸುವ ಸೂಕ್ಷ್ಮಜ್ಞತೆ ಲೇಖಕಿಗೆ ಇರುವುದರಿಂದ ಅವರು ತಮ್ಮ ಪಾತ್ರಗಳ ಮಾತುಗಳನ್ನು ಬರೆಯುವ ಮುನ್ನ ಆಲಿಸಬೇಕು ಎಂದು ನನ್ನ ಸಲಹೆ. ಅನುಪಮಾ ಮಾತ್ರವಲ್ಲ ಕನ್ನಡದ ಹೊಸ ಪೀಳಿಗೆಯ ಹಲವು ಕತೆಗಾರರ ಭಾಷೆಯ ಬಗ್ಗೆ ನನ್ನದು ಇದೇ ತಕರಾರು. ನನ್ನ ಮನೆ ಮಾತಾಗಿರುವ ಕುಂದಾಪುರದ ಆಡುನುಡಿಯನ್ನೂ ಹೀಗೆ ನೆಪ ಮಾತ್ರಕ್ಕೆ ಕತೆಗಳಲ್ಲಿ ತಂದಿರುವ ಉದಾಹರಣೆಗಳು ಹೇರಳವಾಗಿವೆ. ಆದರೆ ಅದೇ ವೇಳೆ, ಕನ್ನಡದ ಪ್ರಾದೇಶಿಕ ಆಡುಮಾತುಗಳ ಶಬ್ದ ಮಾತ್ರವಲ್ಲ, ಧ್ವನಿ, ಲಯ, ವಾಗ್ರೂಢಿಗಳನ್ನೆಲ್ಲ ಅರ್ಥಪೂರ್ಣವಾಗಿ ಒಳಗೊಂಡಿರುವ ಗದ್ಯಕ್ಕೆ ಸಹ ಕನ್ನಡದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಅಂತಹವುಗಳಲ್ಲಿ ಒಂದೆರಡನ್ನ ಮಾತ್ರ ಇಲ್ಲಿ ಉದಾಹರಿಸುವುದಾದರೆ ಜಡಭರತರ ನಾಟಕಗಳು, ರಾವ್ ಬಹಾದ್ದೂರರ ಕಾದಂಬರಿ `ಗ್ರಾಮಾಯಣ’,ದೇವನೂರ ಮಹಾದೇವರ ಕಥೆ-ಕಾದಂಬರಿಗಳು. ಹವ್ಯಕ ಕನ್ನಡದಲ್ಲಿ ನನಗೆ ತಕ್ಷಣ ನೆನಪಿಗೆ ಬರುವ ಎರಡು ಉದಾಹರಣೆಗಳೆಂದರೆ ವಿ.ತಿ.ಶೀಗೆಹಳ್ಳಿಯವರ ಕಾದಂಬರಿ `ತಲೆಗಳಿ’ ಮತ್ತು ಗ.ಸು.ಭಟ್ಟ ಬೆತ್ತಗೇರಿ ಅವರ ಕಾವ್ಯ. ಆಡುನುಡಿಯ ಬಳಕೆಯ ಇಂತಹ ಸಾಹಿತ್ಯಿಕ ಮಾದರಿಗಳ ಬಗ್ಗೆ ಅನುಪಮಾ ಯೋಚಿಸಬೇಕು ಎಂದು ಮುನ್ನುಡಿಕಾರನಾಗಿ ಸೂಚಿಸಬಯಸುತ್ತೇನೆ. `ಖಾದಿಅಂಗಿ’ಯ ಸೀತಕ್ಕನಂತೆ `ಜಾಜಿ ಗಂಧದ ಜಾಡು..’ ಕತೆಯ ನಾಯಕಿಯೂ ಚಿರವಿರಹಿ; ಗಂಡನಿದ್ದೂ ಇಲ್ಲದಂತೆ ಬಾಳಿದವಳು. ಭಾವಗೀತಾತ್ಮಕ ಉತ್ಕಟತೆಯ ಈ ಕತೆಯಲ್ಲಿ ಅವಳಿಗೆ ಹೆಸರಿಲ್ಲ. ಅವಳು ಹೆಣ್ಣಿನ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸ್ಥಿತಿಯ ರೂಪಕ-ಅವಳ ಗಂಡ ಜಯಂತ ಕ್ಯಾನ್ವಾಸಿನ ಮೇಲೆ ಮೂಡಿಸುತ್ತಿರುವ ಅಹಲ್ಯೆಯಂತೆ ಅಥವಾ ಸ್ವತಃ ಅವಳೇ ನರ್ತಿಸಿ ಪ್ರದರ್ಶಿಸಿದ ಪಾತ್ರ ಶಕುಂತಲೆಯಂತೆ. ಅವಳನ್ನು ಶಾಸ್ತ್ರೋಕ್ತ ಕೈ ಹಿಡಿದ ಜಯಂತ ಕಲಾವಿದ. ಆದರೆ ಅವನಿಗೆ ಅವಳು ಬೇಕಾಗಿರುವುದು ತನ್ನ ವರ್ಣಚಿತ್ರಕ್ಕೆ ಮಾಡೆಲ್ ಆಗಿ ಮಾತ್ರ. ಅವಳ ಮೈ-ಮನಗಳ ಬಯಕೆಗೆ ಅವನು ಜಡ. ಅವಳ ನೃತ್ಯ ಗುರು ಮಾರ್ತಾಂಡವರ್ಮನ ಬಳಿ ಆಕೆ ಪ್ರೇಮಕ್ಕಾಗಿ ಅಂಗಲಾಚಿದರೂ ಅವರು ನಿರಾಸಕ್ತರು. ಅಹಲ್ಯೆಯನ್ನಾದರೂ ಇಂದ್ರ ಗೌತಮನ ರೂಪದಲ್ಲಿ ಬಂದು ಪ್ರೇಮಿಸಿದ್ದ. ಅಹಲ್ಯೆಗೆ ತನ್ನ ದಾಂಪತ್ಯಕ್ಕೆ ಹೊರಗಾದ ಸಂಬಂಧವಿದು ಎಂದು ಪರಿವೆಗೇ ಬರಲಿಲ್ಲ. ಹೀಗೆ ತಾನು ಮಾಡದ ತಪ್ಪಿಗಾಗಿ ಅವಳು ಗೌತಮನ ಶಾಪಕ್ಕೆ ಒಳಗಾಗಿ ಕಲ್ಲಾದಳು. “ಜಾಜಿ ಗಂಧದ ಜಾಡು..”ಕತೆಯ ನಾಯಕಿಯೂ ಅಹಲ್ಯೆಯಂತೆ ಶಾಪಗ್ರಸ್ಥಳೇ. `ಯುಗ ಯುಗಗಳಲ್ಲೂ ಪ್ರೇಮ ವಂಚಿತಳಾಗಿರು; ಗಂಡು ಸದಾ ನಿನ್ನನ್ನು ಬಳಸಲಿ ಮತ್ತು ಸದಾ ನಿನ್ನನ್ನು ಮರೆಯಲಿ’ ಎಂಬ ಶಾಪಕ್ಕೆ ಒಳಗಾದ ಹೆಣ್ಣಿನ ಸ್ಥಿತಿಗೆ ಅಹಲ್ಯೆ ಪ್ರತಿಮೆಯಾದರೆ ಪ್ರಸ್ತುತ ಕತೆಯ ಅವಳು ಸಮಕಾಲೀನ ಹೆಣ್ಣಿನ ರೂಪಕ. ಸಂಕಲನದ ಇನ್ನೊಂದು ಕಥೆ `ಕಾಳಿಂದಿ ಮಡು’ ಕೂಡ ಹೆಣ್ಣಿನ ಅಸಹಾಯಕತೆಯನ್ನು ಶೋಧಿಸುವ ಕಥೆ; ಕತೆಯಲ್ಲಿ ಬರುವ ಗಂಡು ಪಾತ್ರಗಳು ಕೂಡ ಸುಖಿಗಳಲ್ಲ. ಈ ಕತೆಯ ಹರಿಣಾಕ್ಷಿ ಒಂದು ಅರ್ಥದಲ್ಲಿ `ಜಾಜಿ ಗಂಧದ ಜಾಡು’ ಕಥೆಯ ನಾಯಕಿಯಂತೆಯೇ ಗಂಡನಿದ್ದೂ ಇಲ್ಲದಂತಾಗಿರುವವಳು; ಆದರೆ ಗೃಹಿಣಿ. ತನ್ನ ಸ್ಥಿತಿಯನ್ನು ಧಿಕ್ಕರಿಸಿ, ಉನ್ಮತ್ತಳಾಗಿ ಗುರಿ ಇಲ್ಲದೆ, ಅಲೆಯುತ್ತಿರುವ `ಜಾಜಿ ಗಂಧದ ಜಾಡು..’ಕತೆಯ ನಾಯಕಿ ಬಂಡಾಯದ ರೂಪಕ. ಹರಿಣಾಕ್ಷಿ ತನ್ನ ತನ್ನ ಗಂಡನ ಅಪಾಂಗತ್ವದ ಜೊತೆ ಏಗಿಕೊಂಡು ಹೇಗೋ ದಾಂಪತ್ಯವನ್ನೂ ಸಂಸಾರವನ್ನೂ ಕಾಪಾಡಿಕೊಳ್ಳುವ ನಿಜ ಜೀವನದ ಹೆಣ್ಣು. ತನ್ನ ಗಂಡನ ಶುಶ್ರೂಷೆಯಲ್ಲೇ ಅವಳು ತನ್ನ `ಸ್ವ’ ವನ್ನು ಕಂಡುಕೊಂಡವಳು. ಅದಕ್ಕೆ ಪ್ರತಿಯಾಗಿ ಹರಿಣಾಕ್ಷಿಯ ಗಂಡ ಜಯಂತ ಅವಳ ಆರೈಕೆಯನ್ನೇ ಕಾಮಾಪೇಕ್ಷೆ ಎಂದು ಭಾವಿಸಿ ಈಷ್ರ್ಯೆಯಲ್ಲಿ ಕೂಗಾಡುತ್ತಾನೆ. ಅವನ ಅಸಹಾಯಕತೆ ಮತ್ತು ಅತೃಪ್ತ ಕಾಮ ಅವನನ್ನು ಹಾಗೆ ಸಂದೇಹಿಸುವಂತೆ ಮಾಡುತ್ತದೆ. ಅವನ ವರ್ತನೆಗೆ ಅವನಿಗೇ ವಿಶಿಷ್ಟವಾದ ಅಪಾಂಗತ್ವ ಮಾತ್ರ ಕಾರಣವಲ್ಲ. ಲೈಂಗಿಕ ಅಸಾಮಥ್ರ್ಯದಿಂದ ಹುಟ್ಟುವ ಈರ್ಷೆ ಗಂಡಿನ ಸ್ವಭಾವದಲ್ಲೇ ಅಂತರ್ಗತವಾಗಿರುವಂತದ್ದು. ಹಾಸಿಗೆ ಹಿಡಿದ ಸ್ಥಿತಿಯಲ್ಲೂ ಜಯಂತನ ಗಂಡಸುತನ, ತನ್ನ ವೈಕಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ಕಥೆಯ ಘಟನಾವಳಿ ಕರಾವಳಿಯ ಒಂದು ಎಂಡೋಸಲ್ಫಾನ್ ಪೀಡಿತ ಹಳ್ಳಿ ಮತ್ತು ವಾರಣಾಸಿ ಕ್ಷೇತ್ರಗಳಲ್ಲಿ ಸಂಭವಿಸುತ್ತದೆ. ಆ ತೀರ್ಥಕ್ಷೇತ್ರ ಮತ್ತು ಅಲ್ಲಿ ಹರಿಯುವ ಗಂಗಾನದಿ ಕಥೆಗೆ ತಕ್ಕ ಹಿನ್ನೆಲೆ ಒದಗಿಸುತ್ತದೆ. ವಾರಣಾಸಿಯಲ್ಲಿ ಶವಯಾತ್ರೆ ದಿನದ ಇಪ್ಪತ್ನಾಲ್ಕು ಘಂಟೆಯೂ ನಡೆದೇ ಇರುತ್ತದೆ. ಶವ ಆ ಪುಣ್ಯ ನಗರಿಯಲ್ಲಿ ಅಶುಭವೂ ಅಲ್ಲವಂತೆ. ಜಯಂತನ ಜರ್ಜರಿತ ಸ್ಥಿತಿಯಿಂದ ಹರಿಣಾಕ್ಷ್ಷಿ ಮತ್ತು ಸ್ವತಃ ಜಯಂತ ಬಿಡುಗಡೆಯ ಭಾವ ಅನುಭವಿಸುವುದು, ಸದಾ ಶವಗಳ ಚಿತಾಗ್ನಿಗೆ ಸಾಕ್ಷಿಯಾಗಿ ಹರಿಯುತ್ತಿರುವ ಗಂಗಾನದಿಯ ಘಾಟ್ಗಳಲ್ಲಿ ಎಂಬ ವಿವರ ಅರ್ಥಪೂರ್ಣವಾಗಿದೆ. ಗಂಗಾನದಿ ಸಂಕೇತಿಸುವ ಪಾವಿತ್ರ್ಯ ಮತ್ತು ಹೊಲಸು ಚರಂಡಿಯಾಗಿರುವ ಅದರ ವಾಸ್ತವಗಳ ವೈದೃಶ್ಯ ಕತೆಯಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ. ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾ ಶೂನ್ಯತೆ ಅನುಪಮಾ ತಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಪ್ರಸ್ತುತ ಸಂಕಲನದ `ಬಣ್ಣ’ ಕತೆಯೂ ಇದೇ ವಸ್ತುವನ್ನು ಒಳಗೊಂಡಿದೆ. ಕತೆಯ ಮುಖ್ಯ ಪಾತ್ರ ಶಾರ್ವರಿಗೆ, ತನ್ನ ಹಳ್ಳಿ ಮನೆಯ ಸುತ್ತಲಿನ ಅಡಿಕೆ ತೋಟ ಮತ್ತು ವರ್ಣಚಿತ್ರ ಇವೆರಡು ಗಾಢ ಅನುರಕ್ತಿಗಳು. ಶಾರ್ವರಿಯ ತಂದೆಯೂ ವರ್ಣಚಿತ್ರ ಕಲಾವಿದ. ಆದರೆ ಶಾರ್ವರಿ ಕಲಾವಿದೆ ಎಂದು ಗುರುತಿಸುವವನು ಸೂಕ್ಷ್ಮಜ್ಞನಾದ ಸ್ಟೀಫೆನ್. ಅವಳ ತಂದೆ ಅವಳನ್ನು ಮಗಳಾಗಿ ಮಾತ್ರ ಪ್ರೀತಿಸಿದ. ಆದರೆ ಅವಳನ್ನು ಹೆಣ್ಣಾಗಿಯೇ ಕಂಡ. ಎಲ್ಲ ತಂದೆಯರೂ ತಮ್ಮ ಹೆಣ್ಣು ಮಕ್ಕಳನ್ನು ಪ್ರೀತಿಸುವುದು ಗಂಡಿನ ಯಜಮಾನಿಕೆಯಲ್ಲೇ; ಗಂಡಂದಿರು ತಮ್ಮ ಪತ್ನಿಯರನ್ನು ಪ್ರೀತಿಸುವುದೂ ಅದೇ ಬಗೆಯ ಯಜಮಾನಿಕೆಯಲ್ಲಿ. ಕೌಟುಂಬಿಕ ಸಂಬಂಧಗಳಲ್ಲ್ಲಿ ಪ್ರೀತಿ ಪುರುಷ ಪ್ರಧಾನ ಮೌಲ್ಯಗಳಿಗೆ ಸದಾ ಅಡಿಯಾಳಾಗಿ ನಿಲ್ಲುತ್ತದೆ. ಇಂತಹ ಸನ್ನಿವೇಶದಲ್ಲಿ ಹೆಣ್ಣು ತನ್ನ ವ್ಯಕ್ತಿತ್ವದ ಸ್ವಾಯತ್ತತೆಗೆ ಎರವಾಗುತ್ತಾಳೆ. ಶಾರ್ವರಿಗೆ ಅದರ ಅರಿವಿದೆ; ಆದರೆ ಅದನ್ನು ಎದುರಿಸಿ ಹಠದಲ್ಲಾದರೂ ತನ್ನ ವ್ಯಕ್ತಿತ್ವವನ್ನು ಸ್ಥಾಪಿಸುವ ಛಾತಿ ಇಲ್ಲ. ಶಾರ್ವರಿ ಮೊದಲ ಸಲ ಮೈ ನರೆದಾಗ ಮತ್ತು ಅವಳ ಮದುವೆಯ ಸಂದರ್ಭದಲ್ಲಿ ಅವಳು ತನ್ನ ಅಪ್ಪನ ಅಣತಿಯನ್ನು ಒಲ್ಲದ ಮನಸಿನಲ್ಲೇ ಪಾಲಿಸುತ್ತಾಳೆ. ಶಾರ್ವರಿಯ ಕಲೆಗೆ ಸ್ವತಃ ಕಲಾವಿದನಾದ ಅವಳ ಅಪ್ಪ ಜಡ. ಅವಳ ಗಂಡ ತನ್ನ ಕೆರಿಯರ್, ಸಂಬಳ ಮತ್ತು ಪ್ರಮೋಷನ್ ಬಿಟ್ಟು ಬೇರೆ ಯಾವುದಕ್ಕೂ ಸ್ಪಂದಿಸಲಾರದ ದ್ರಾಬೆ. ಅವನ ಮಟ್ಟಿಗೆ ಕಲೆ ಎಂದರೆ ಶಾರ್ವರಿಗೆ ಪುಕ್ಕಟೆ ದೊರೆಯುವ ಅಮೇರಿಕಾ ಪ್ರವಾಸದ ಅವಕಾಶ. ಶಾರ್ವರಿ ಅವನ ಅರಸಿಕತೆಯ ಜೊತೆಗೂ ಹೊಂದಿಕೊಂಡು ಬಾಳುವವಳು. ಅವಳು ಹುಟ್ಟಿ ಬೆಳೆದ ಮನೆಯ ಸುತ್ತಲಿನ ಕಾಡು ನಾಶವಾಗಿರುವುದು, ಅವಳ ಪರಿಸರದ ಸಂವೇದನ ಶೂನ್ಯತೆಗೆ ಸಮಾನಾಂತರವಾದ ವಿದ್ಯಮಾನವಾಗಿದೆ. ಅವಳ ಅಪ್ಪ ಅಡಿಕೆ ತೋಟದ ಸುತ್ತಲಿನ ಅನವಶ್ಯಕ (ಅಂದರೆ ಲಾಭವಿಲ್ಲದ) ಕಾಡು ಕಡಿದು ರಬ್ಬರು ತೋಟ ಎಬ್ಬಿಸಿದ್ದಾನೆ. ತೋಟದ ಹಸಿರಿನ ಸಿರಿ ಮಾಯವಾಗಿದೆ. ಕತೆಯಲ್ಲಿ ನೆಲದ ಬರಡುತನ ಮನಸಿನ ಬರಡುತನವನ್ನೇ ಪ್ರತಿಬಿಂಬಿಸುತ್ತದೆ. ಕತೆಯ ಈ ಭಾಗದ ವಿವರಗಳು, ನಿಸರ್ಗ ಮತ್ತು ಮನುಷ್ಯನ ಸಹಬಾಳ್ವೆಯ ಸಂಸ್ಕøತಿಯೊಂದರ ಅವಸಾನವನ್ನು ಸೂಚಿಸುತ್ತವೆ. ಕರಾವಳಿಯ ಕಾಸರಗೋಡು, ದಕಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಲ್ಲೇ ಹೋದರೂ ನಮ್ಮ ಕಣ್ಣಿಗೆ ರಾಚುವುದು ಅಡಿಕೆ, ತೆಂಗು,ರಬ್ಬರು, ಕೊಕೋ ಬೆಳೆಗಳ ಏಕತಾನ. ಕಾಡುಗಳಂತು ಯಾವತ್ತೋ ನಾಶವಾಗಿದೆ. ಈಗೀಗ ನಮ್ಮ ಮನೆ ಅಂಗಳ, ಹಿತ್ತಿಲುಗಳಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಗೋರಟೆ, ವಿಧವಿಧವಾದ ದಾಸವಾಳ, ಕರವೀರ, ರಥಪುಷ್ಪ, ಶಂಖಪುಷ್ಪ, ಸದಾಪುಷ್ಪ, ಅಬ್ಬಲಿಗೆ, ಸಂಜೆ ಮಲ್ಲಿಗೆ, ನಂದಿಬಟ್ಟಲು,ಸುರಿಗೆ, ಬಕುಲಗಳು ಕೂಡ ಕಣ್ಮರೆಯಗುತ್ತಿವೆ. ಕತೆಯಲ್ಲಿ ತನ್ನ ಕಲೆಯನ್ನು ಗುರುತಿಸುವವರಿಲ್ಲ ಎಂಬ ಕೊರಗಿನ ಜೊತೆ ಈ ಪರಿಸರ ನಾಶ ಕೂಡ ಶಾರ್ವರಿಯನ್ನು ಬಾಧಿಸುತ್ತದೆ. ಸಂವೇದನ ಶೂನ್ಯತೆ ಶಾರ್ವರಿ ತನ್ನ ವೈಯಕ್ತಿಕ ಬದುಕಿನಲ್ಲಿ ಮಾತ್ರ ಎದುರಿಸುತ್ತಿರುವ ಸಮಸ್ಯೆ ಮಾತ್ರವಲ್ಲ; ಅದು ಸಮಕಾಲೀನ ನಾಗರೀಕತೆಯ ದುರಂತ ಕೂಡ ಎಂಬ ಸತ್ಯವನ್ನು ಕತೆ ಹೇಳುವುದಿಲ್ಲ; ಕಾಣಿಸುತ್ತದೆ. `ಅಗೋಚರ ವಿಪ್ಲವಗಳು’ ಪ್ರಸ್ತುತ ಸಂಕಲನದ ಏಕೈಕ ರಾಜಕೀಯ ಕತೆ- ಈ ಕತೆಯನ್ನು ಹಾಗೆ ಹೆಸರಿಸಬಹುದಾದರೆ. ಕತೆಯಲ್ಲಿ ಪ್ರಾಧ್ಯಾಪಕ ಜಯರಾಜನ್ರದ್ದು ಮುಖ್ಯ ಪಾತ್ರವಾದರೂ ಕತೆಯನ್ನು ಆವರಿಸಿಕೊಂಡಿರುವುದು, ರಾಜಕೀಯ ಕಾರಣಗಳಿಗಾಗಿ ಕೊಲೆಯಾದ ತರುಣ ರಾಜೀವಲೋಚನ. ಅವನ ಕೊಲೆಗೆ ಮುನ್ನ ತನ್ನ ಊರಿನ ತಲೆ ಹೊರೆ ಕೂಲಿಗಳ ಜೊತೆ ಅವನಿಗೆ ಜಗಳವಾಗಿದೆ. ಆ ಕೂಲಿಗಳು ಮಿಲಿಟೆಂಟ್ ಎಡ ಕಾರ್ಮಿಕ ಸಂಘಟನೆಯೊಂದಕ್ಕೆ ಸೇರಿದವರು. ರಾಜೀವಲೋಚನನ ಚಿಕ್ಕಪ್ಪನಿಗೆ ಬಂದಿರುವ ಪಾರ್ಸೆಲ್ ಒಂದನ್ನು ಸಾಗಿಸುವ ಬಗ್ಗೆ ಆ ಕೂಲಿ ಆಳುಗಳು ಅವನ ಜೊತೆ ಕ್ಯಾತೆ ತೆಗೆದಿದ್ದಾರೆ. ಪಾರ್ಸೆಲ್ ಅವರ ಕೈಗೆ ಒಪ್ಪಿಸದೆ ತಾನೇ ಒಯ್ಯುತ್ತೇನೆ ಎಂದು ರಾಜೀವಲೋಚನ ಹಠ ಸಾಧಿಸಿದಾಗ ಕೂಲಿ ಆಳುಗಳು ರೊಚ್ಚಿನಲ್ಲಿ ಅವನನ್ನು ಕೊಂದೇ ಹಾಕಿದ್ದಾರೆ. ಲೇಖಕಿ ಕತೆಯಲ್ಲಿ ಕೇರಳದ ಪ್ರಚಲಿತ ರಾಜಕೀಯ ವಿದ್ಯಮಾನವೊಂದನ್ನು ಬಣ್ಣಿಸುತ್ತಿದ್ದಾರೆ. ಆ ರಾಜ್ಯದಲ್ಲಿ ಒಂದು ಕಾಲದಲ್ಲಿ ತಲೆ ಹೊರೆ ಕೂಲಿ ಕಾರ್ಮಿಕರ ಸಂಘಟನೆ ವಿಪರೀತ ಪ್ರಬಲವಾಗಿತ್ತು; ಅದರ ದುಂಡಾವರ್ತಿಯೂ ಅಷ್ಟೇ ಕುಖ್ಯಾತವಾಗಿತ್ತು. ಆರ್ಥಿಕವಾಗಿ ಆ ಕಾರ್ಮಿಕರು ಕೆಳವರ್ಗದಿಂದ ಬಂದವರಾದರೂ, ತಮ್ಮ ಸಂಖ್ಯಾ ಬಲದಿಂದಲೇ ಅವರು ಸಾಮಾನ್ಯ ಪ್ರಯಾಣಿಕರ ಮೇಲೆ ಸವಾರಿ ಮಾಡುತ್ತಿದ್ದರು. ತಮ್ಮ ತೋಳ್ಬಲದ ದಬ್ಬಾಳಿಕೆಗೆ ರಾಜೀವಲೋಚನ ಮಣಿಯಲಿಲ್ಲ ಎಂಬ ಕಾರಣಕ್ಕೆ ಕೂಲಿಯಾಳುಗಳು ಒಟ್ಟಾಗಿ ರಾಜೀವಲೋಚನನನ್ನ ಕೊಂದಿದ್ದಾರೆ. ರಾಜೀವಲೋಚನನ ಚಿಕ್ಕಪ್ಪ ಬಲಪಂಥೀಯ ಸಂಘಟನೆಯೊಂದಕ್ಕೆ ಸೇರಿದವನು ಎಂಬುದು ಅವರ ಈ ಕೃತ್ಯಕ್ಕೆ ಸೈದ್ಧಾಂತಿಕ ಸಮರ್ಥನೆಯನ್ನು ಸಹ ಒದಗಿಸಿದೆ. ಪ್ರೊ. ಜಯರಾಜನ್ ಎಡಪಂಥಿಯ ರಾಜಕೀಯ ಒಲವಿನವರು; ಕೇರಳದಲ್ಲಿ ಇಂದು ಎಡಪಂಥ ಎದುರಿಸುತ್ತಿರುವ ನೈತಿಕ ಬಿಕ್ಕಟ್ಟುಗಳ ಅರಿವು ಅವರಿಗಿದೆ. ರಾಜೀವಲೋಚನನ ಕೊಲೆ ಏನನ್ನು ಸುಚಿಸುತ್ತದೆ ಎಂಬುದನ್ನು ವಿವರಿಸುತ್ತ ಪ್ರೊ.ಜಯರಾಜನ್ ಒಂದೆಡೆ ಹೇಳುತ್ತಾರೆ,-“ದಬ್ಬಾಳಿಕೆ ತಡೆದುಕೊಳ್ಳಲಾಗದೆ ಹುಟ್ಟಿಕೊಳ್ಳುವ ವರ್ತನೆಗಳು ಕೊನೆಗೆ ತಾವೇ ದಬ್ಬಾಳಿಕೆಗಿಳಿದುಬಿಡುವುದಿದೆಯಲ್ಲ, ಅದು ನಮ್ಮ ಇವತ್ತಿನ ವ್ಯಂಗ್ಯ”. ಈ ಮಾತು, ಎಡ ರಾಜಕೀಯ ಪ್ರಬಲವಾಗಿರುವ ಕೇರಳ, ಪ.ಬಂಗಾಳಗಳಿಗೆ ಮಾತ್ರವಲ್ಲ ಸ್ಟಾಲಿನ್ನ ರಷ್ಯ ಹಾಗು ಮಾವೋನ ಚೀನಾಗಳಿಗೆ ಕೂಡ ಅನ್ವಯಿಸುತ್ತದೆ. ಪ್ರೊ.ಜಯರಾಜನ್ ಸಮಾಜವಾದ ಮತ್ತು ಮಾನವೀಯ ಅಂತಃಕರಣಗಳು ಒಂದನ್ನು ಬಿಟ್ಟು ಇನ್ನೊಂದು ಇರಲಾರದು ಎಂದು ಪ್ರಾಮಾಣಿಕವಾಗಿ ನಂಬಿದವರು ಮತ್ತು ಹಾಗೆಯೇ ಬಾಳಿದವರು. ಕತೆಯ ಕೊನೆಯಲ್ಲಿ ಅವರಿಗೆ ಆಪ್ತನಾಗಿದ್ದ ನಂಬೀಶನ ಕೊಲೆಯಾಗುತ್ತದೆ. ಹೀಗೆÉ ಒಂದು ರಾಜಕೀಯ ಕೊಲೆಯಿಂದ ಪ್ರಾರಂಭವಾಗುವ ಕತೆ ಕೇರಳಕ್ಕೆ ಇನ್ನಷ್ಟು ಕೊಲೆ ಮತ್ತು ಉಗ್ರವಾದಿತ್ವ ಕಾದಿರುವುದರ ಸೂಚನೆಯೊಂದಿಗೆ ಮುಗಿಯುತ್ತದೆ. ಕತೆ ಕೇರಳದ ಸಮಕಾಲೀನ ವಿದ್ಯಮಾನಗಳಿಂದ ತನ್ನ ವಿವರಗಳನ್ನು ಹೆಕ್ಕಿಕೊಂಡಿದ್ದರೂ ಅದರಲ್ಲಿ ರಾಜಕೀಯ ದೃಷ್ಠಿಕೋನವಿಲ್ಲ. ಪ್ರೊ.ಜಯರಾಜನ್ ಅವರ ಸ್ವವಿಮರ್ಶೆ ಮತ್ತು ಆತ್ಮ ಶೋಧನೆ ಕೇರಳಕ್ಕೆ ಈಗ ಅಗತ್ಯವಾಗಿದೆ. ಆದರೆ ಅವರು ನಿರ್ಗತಿಕ ಮಕ್ಕಳಿಗಾಗಿ ತೆರೆಯುವ ಶಾಲೆ ಅಸಮಾನತೆಗೆ ಒಂದು ಪರಿಹಾರವಾಗಲಾರದು. ಶೋಷಣೆ ಈ ಸಮಾಜದ ಒಂದು ಸ್ಥಾಯೀ ವಾಸ್ತವ; ದಾನ ಧರ್ಮ ಅದಕ್ಕೆ ಪರಿಹಾರವಲ್ಲ. ಸಂಘಟಿತ ಕಾರ್ಮಿಕರ ದುಂಡಾವರ್ತಿ ಹಾಗು ಎಡ ಸರಕಾರಗಳ ದಬ್ಬಾಳಿಕೆಗಳನ್ನು ಎದುರಿಸುತ್ತಲೇ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ. ಅನುಪಮಾ ಅವರ ಕಥೆ ಶಕ್ತಿಯುತವಾಗಿದೆ. ಸಮಕಾಲೀನ ರಾಜಕೀಯದ ದುರಂತವನ್ನು ಅದು ಯಥಾವತ್ತಾಗಿ ನಿರೂಪಿಸುತ್ತದೆ. ಆದರೆ ಸಮಕಾಲೀನ ರಾಜಕೀಯದ ಸವಾಲುಗಳನ್ನು ಅದು ಎದುರಿಸುವುದಿಲ್ಲ. ಇಷ್ಟು ಹೇಳಿದ ಮೇಲೂ, ನಾನು ಒಂದು ಸಂಗತಿಯನ್ನು ಅಗತ್ಯ ಕಾಣಿಸಬೇಕು. ರಾಜಕೀಯ ಕೊಲೆ ಒಂದು ಮಾಮೂಲು ವಿದ್ಯಮಾನ ಎಂಬ ಪರಿಸ್ಥಿತಿ ಸದ್ಯಕ್ಕೆ ಕೇರಳದಲ್ಲಿ ನೆಲೆಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭೀಭತ್ಸವೇ ನಿತ್ಯದ ದಿನಚರಿಯಾಗಿ ಅದಕ್ಕೆ ಜನ ಒಗ್ಗಿಕೊಂಡು ಬಿಡುವ ಈ ಬರ್ಬರ ಸ್ಥಿತಿಗೆ ಕೇರಳದ ಎಡ ಹಾಗು ಬಲ ಪಕ್ಷಗಳೆಲ್ಲವೂ ಸಮಾನವಾಗಿ ಜವಾಬ್ದಾರವಾಗಿವೆ ಎಂಬುದು ಪ್ರಸ್ತುತ ಕತೆಯ ಹಿಂದಿರುವ ರಾಜಕೀಯ ಗ್ರಹಿಕೆಯಾಗಿದ್ದು ಅದರ ಜೊತೆಗೆ ನನಗೆ ಪೂರ್ಣ ಸಹಮತವಿದೆ. ತಮ್ಮ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯುವ ಅವಕಾಶ ಕಲ್ಪಿಸಿಕೊಟ್ಟು ಅನುಪಮಾ ನನ್ನನ್ನು ಗೌರವಿಸಿದ್ದಾರೆ. ಅವರಿಗೆ ನಾನು ಕೃತಜ್ಞ. 22-5-2012 ಉಡುಪಿ. ಜಿ.ರಾಜಶೇಖರ.

Saturday, September 4, 2021

ಈ ತಿಂಗಳ ಆಕಾಶ - ಸೆಪ್ಟೆಂಬರ್ | Sky This Month - September (Kannada) with D...

Manasi Sudhir story time - Panje Mangesha Rayaru - ಗುಡುಗುಡು ಗುಮ್ಮಟ ದೇವರು

ಪ್ರೊ/ ಎಮ್ . ಜಿ. ರಂಗಸ್ವಾಮಿ - ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್

ರಾಷ್ಟ್ರೀಯ ಶಿಕ್ಷಣ ನೀತಿ 2020 { Read / Download Link here }

ರಾಷ್ಟ್ರೀಯ ಶಿಕ್ಷಣ ನೀತಿ 2020

Rajeshvari Tejasvi -ಪೂರ್ಣಚಂದ್ರ ತೇಜಸ್ವಿ ನೆನಪುಗಳು