Powered By Blogger

Tuesday, December 27, 2022

ಲಿಂಗ ವ್ಯವಸ್ಥೆಯ ಅಧ್ಯಯನ ದಲ್ಲಿ ಸಮಾನಾರ್ಥಕ ಪದಗಳು - ಇಂಗ್ಲಿಷ್ - ಕನ್ನಡ { 2022 } ಪ್ರಮುಲ ರಾಮನ್ / ಶಾಂತಿ ಜಿ

ಮೊದಲ ಓದು | ಸಂಶೋಧನಾ ಕ್ಷೇತ್ರಕ್ಕೆ ಕನ್ನಡ ಪದಕೋಶ | Prajavani

ದೇವು ಪತ್ತಾರ - - ಎನ್ ಜಗದೀಶ ಕೊಪ್ಪ ಅವರ " ಪದಗಳಿವೆ ಎದೆಯೊಳಗೆ " { 2022 } - {ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ }

Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ | Prajavani

ಚಿದಾನಂದ ಸಾಲಿ - ಲಕ್ಷ್ಮೀದೇವಿ ಶಾಸ್ತ್ರಿ ಅವರ " ಕರ್ನಾಟಕದ ಯುಗಪುರುಷ ಪಂ ತಾರಾನಾಥರು " ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ

Book Review| ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ | Prajavani

Defending the Freedom of Expression | Meena Kandasamy @Manthan Samvaad 2022

ಡಿ ಎ ಶಂಕರ್ ಅವರ " ವಾಗರ್ಥ } { ಸಾಹಿತ್ಯ ವಿಮರ್ಶೆ -2022 }

Book Review| ವಾಗರ್ಥದಲ್ಲಿ ಅಡಗಿರುವ ಸತ್ಯಗಳು | Prajavani

ವಿವೇಕ ಶ್ಯಾನುಭಾಗ್ - | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ | YASHAVANTH CHITTAL

ಪುಸ್ತಕ ವಿಮರ್ಶೆ | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ | Prajavani

ಕುವೆಂಪು ಸಾಹಿತ್ಯದಲ್ಲಿ ಆಧುನಿಕ ಪ್ರಜ್ಞೆ ಹೇರಳ -ಡಾ. ರಹಮತ್‌

ಕುವೆಂಪು ಸಾಹಿತ್ಯದಲ್ಲಿ ಆಧುನಿಕ ಪ್ರಜ್ಞೆ ಹೇರಳ -ಡಾ. ರಹಮತ್‌ | Prajavani

ಕುವೆಂಪು ನಿರಂತರ | ವಿಚಾರಗೋಷ್ಠಿ | ಕೆ. ಸಿ. ಶಿವಾರೆಡ್ಡಿ | ಕುವೆಂಪು ದರ್ಶನ ಮತ್ತು ...

Author Padachinha's speech about his book " ನಾವು ಏಕೆ ಬದುಕಬೇಕು "

Author Bharathi B V's speech -" ಈ ಪ್ರೀತಿ ಒಂಥರಾ " { 2022 }

Author Meghana Sudhindra's speech about her book " ಪಾಥೇರಸ್ { ನೀಳ್ಗತೆ 2022 }

Author Poornima Malagimani's speech about her book " ಡೂಡ್ಲ್ ಕತೆಗಳು " {2022 }

Author N. Sandhya Rani's speech about her book " ಇಷ್ಟು ಕಾಲ ಒಟ್ಟಿಗಿದ್ದು ’ -{ ಕಾದಂಬರಿ 2022 }

Monday, December 26, 2022

ಮೈಂ ಅವ್ರ ಮೇರೆ ಲಮ್ಹೆ – ಎಚ್ ಎಸ್ ಮುಕ್ತಾಯಕ್ಕ/ H S Muktayakka ,

ಮೈಂ ಅವ್ರ ಮೇರೆ ಲಮ್ಹೆ – ಋತುಮಾನ ಅಂಗಡಿ

ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’ ಬಿಡುಗಡೆ | Chandrshekhara Kambara

ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’ ಬಿಡುಗಡೆ | Prajavani

ಅನಂದಿನಿ | ಹಾವಳಿ: ವಿಮೋಚನಾ ಹೋರಾಟದ ಕಥನ |Mallikarjuna Hirematha ,

ಅವಲೋಕನ | ಹಾವಳಿ: ವಿಮೋಚನಾ ಹೋರಾಟದ ಕಥನ | Prajavani

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’ -ಟಿ ಪಿ ಅಶೋಕ , Mallikarjuna Hirematha ,

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ‘ಹಾವಳಿ’ | ಅವಧಿ । AVADHI

ಮಹಾಬಿಂದು { 2022 } ಎಚ್ ಟಿ ಪೋತೆ ಅವರ ಕಾದಂಬರಿ

ಮಹಾಬಿಂದು | Bookbrahma

ವಿನಯ್ ಮಾಧವ್ ಮಾಕೋನಹಳ್ಳಿ - - ರಾಜೇಶ್ ಶೆಟ್ಟಿ ಅವರ ಕಾದಂಬರಿ " ಹಾವು ಹಚ್ಚೆಯ ನೀಲಿ ಹುಡುಗಿ " { 2022 }RAJESH SHETTY

ಆ ಹುಡುಗಿ ನೀಲಿಯಾಗಿದ್ದು ಏಕೆ? ನನಗಾಗ ಹತ್ತು ವರ್ಷ ವಯಸ್ಸು ಅಂತ ಕಾಣುತ್ತೆ. ನನ್ನ ಜೀವನದ ಮೊದಲ ಐದು ವರ್ಷ ಕಳೆದ, ಕೊಡಗಿನ ಪಾಲಿಬೆಟ್ಟಕ್ಕೆ ಹೋಗಿದ್ದೆ. ಪಾಲಿಬೆಟ್ಟದಲ್ಲಿ ಸಂಬಂಧಿಕರ್ಯಾರೂ ಇಲ್ಲದಿದ್ದರೂ, ಪಾಲಿಬೆಟ್ಟದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಮೇಕೂರಿನ ಪುಲಿಯಂಡ ಪೊನ್ನಪ್ಪ ಮತ್ತು ಲಲಿತಾಂಟಿಯ ಮನೆ ನಮಗೆ ನಮ್ಮ ಮನೆಯಂತೆಯೇ ಇತ್ತು ಮತ್ತು ಈಗಲೂ ಇದೆ. ಏಕೆಂದರೆ, ಅವರ ಮಗಳು ದಿವ್ಯ ನನ್ನನ್ನು ಎತ್ತಿ ಆಡಿಸಿದವಳು ಮಾತ್ರವಲ್ಲ, ನನ್ನ ದೊಡ್ಡಪ್ಪನ ಮಗಳು ವಾತ್ಸಲ್ಯಕ್ಕನ ಸಹಪಾಠಿಯೂ ಆಗಿದ್ದಳು. ದಿವ್ಯಳ ತಮ್ಮ ಬೋಪಣ್ಣ ಮತ್ತೆ ನಾನು ಒಂದೇ ವಯಸ್ಸಿನವರಾದ್ದರಿಂದ, ಇಂದಿಗೂ ನಾವು ಸಂಪರ್ಕದಲ್ಲಿ ಇದ್ದೇವೆ. ಹಾಗಾಗಿ ಮೇಕೂರಿನ ಪುಲಿಯಂಡ ಮನೆ ನಮಗೆ ಹೊರಗಿನದೇನಲ್ಲ. ಏನೋ ಮಾತನಾಡುತ್ತ ಲಲಿತಾಂಟಿ, ʻರೀ ವಿಜಯಮ್ಮ…. ನೆನಪಿದೆಯಾ ನೀವು ಟ್ರಾನ್ಸ್ಫರ್‌ ಆದಾಗ ಸುಧಾಕರ್‌ ಡಾಕ್ಟರ್ ಅಂತ ಇಲ್ಲಿಗೆ ಬಂದಿದ್ದರಲ್ಲ…. ಅವರು ಈಗಲೂ ವಿನಯ್‌ ನ ಕೇಳ್ತಾ ಇರ್ತಾರೆ. ಆ ಹುಡುಗ ಈಗ ಏನು ಮಾಡ್ತಾ ಇದ್ದಾನೆ? ಅಂತ,ʼ ಎಂದು ಹೇಳಿ ಇಬ್ಬರೂ ನಗತೊಡಗಿದರು. ಈ ಸುಧಾಕರ್‌ ಡಾಕ್ಟರ್‌ ಯಾರು? ಎನ್ನುವುದು ನನಗೆ ಗೊತ್ತಿರಲಿಲ್ಲ. ಅವರಿಗೆ ನಾನು ಹೇಗೆ ಗೊತ್ತು ಎನ್ನುವುದು ಅರ್ಥವಾಗದೆ, ʻಯಾರಮ್ಮ ಅದು?ʼ ಅಂತ ಕೇಳಿದೆ. ʻನೀನು ಚಿಕ್ಕವನಿದ್ದಾಗ ಅವರಿಗೆ ಏನೋ ಹೇಳಿದ್ದೆ, ಹಾಗಾಗಿ ಅವರು ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಪಾಲಿಬೆಟ್ಟ ದೊಡ್ಡದಾಯ್ತೋ ಇಲ್ಲವೋ ಗೊತ್ತಿಲ್ಲ, ನನಗಂತೂ ಇಲ್ಲಿಗೆ ಬಂದು ಒಳ್ಳೆಯದಾಯ್ತು, ಅಂತ ಹೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ಆಗಿದ್ದಿಷ್ಟೆ. ಅಣ್ಣ (ಅಪ್ಪ) ಪಾಲಿಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ, ಸಕಲೇಶಪುರಕ್ಕೆ ವರ್ಗವಾಗಿತ್ತು. ನಾವು ಹೊರಡುವ ಸಮಯದಲ್ಲಿ, ಆಗಷ್ಟೆ ಡಾಕ್ಟರ್‌ ಆಗಿದ್ದ ಸುಧಾಕರ್‌ ಎನ್ನುವವರು ಪಾಲಿಬೆಟ್ಟದಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿ ಮಾಡಲು ಬಂದಿದ್ದರಂತೆ. ವಿಪರೀತ ಮಾತನಾಡುತ್ತಿದ್ದ ನನ್ನನ್ನು ಕರೆದು, ʻಅಲ್ಲ ಮರಿ… ನೀನೇನೋ ಪಟ್ಟಣಕ್ಕೆ ಹೋಗುತ್ತೀಯ. ನಾನು ಈ ಸಣ್ಣ ಹಳ್ಳಿಯಲ್ಲಿ ಇರಬೇಕಲ್ಲ,ʼ ಎಂದರಂತೆ. ತಕ್ಷಣವೇ ನಾನು, ʻಅಂಕಲ್‌, ತಲೆ ಕೆಡಿಸಿಕೊಳ್ಳಬೇಡಿ. ಆಂಡವ ಕವಿ ಹೇಳುತ್ತಾನೆ, ಹಳ್ಳಿಗಳೇ ಬೆಳೆದು ದೊಡ್ಡ ನಗರವಾಗುತ್ತದೆ ಅಂತ. ಪಾಲಿಬೆಟ್ಟ ಕೂಡ ಬೆಳೆಯುತ್ತಿದೆ,ʼ ಎಂದು ಹೇಳಿದನಂತೆ. ಎಲ್ಲರೂ ಗೊಳ್ಳನೆ ನಕ್ಕರೆ, ಸುಧಾಕರ್‌ ಡಾಕ್ಟರ್‌ ನನ್ನ ಕೆನ್ನೆ ಹಿಂಡಿ, ʻನೀನು ಹೇಳಿದೆ ಅಂತ ಇಲ್ಲಿ ಇರುತ್ತೇನೆ. ಈ ಹಳ್ಳಿ ಬೆಳೆಯದೇ ಹೋದರೆ, ನಿನ್ನನ್ನು ಹುಡುಕಿಕೊಂಡು ಬಂದು ಮತ್ತೆ ಕೇಳ್ತೀನಿ,ʼ ಎಂದಿದ್ದರಂತೆ. ʻಸುಧಾಕರ್‌ ಡಾಕ್ಟರಿಗೆ ಒಳ್ಳೆ ಪ್ರಾಕ್ಟೀಸ್‌ ಇದೆ. ಕಾರು ತಗೊಂಡಿದ್ದಾರೆ ಮತ್ತೆ ಊರಿನಲ್ಲಿ ಸ್ವಲ್ಪ ಜಾಗ ಕೂಡ ತಗೊಂಡಿದ್ದಾರಂತೆ. ಈಗಲೂ ಅಷ್ಟೆ, ವಿನಯ್‌ ನನ್ನು ನೆನಸಿಕೊಂಡು, ಆ ಹುಡುಗ ಏನು ಮಾಡ್ತಾ ಇದ್ದಾನೆ? ಎಷ್ಟು ಚೂಟಿ ಅಲ್ವಾ? ಹಾಗೇ ಇದ್ದಾನಾ?ʼ ಅಂತ ಕೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ʻಈ ಆಂಡವ ಕವಿ ಯಾರಮ್ಮಾ?ʼ ಅಂತ ನಾನು ಕೇಳಿದೆ. ʻಯಾರಿಗೆ ಗೊತ್ತು? ನೀನೆ ಹೇಳಿದ್ದು. ನಿನಗೇ ಗೊತ್ತಿಲ್ಲದ ಮೇಲೆ, ಇನ್ಯಾರಿಗೆ ಗೊತ್ತಿರುತ್ತೆ. ಬಾಯಿಗೆ ಬಂದ ಹಾಗೆ ಮಾತಾಡ್ತಾ ಇದ್ದೆ ನೀನು,ʼ ಅಂತ ಅಮ್ಮ ನಕ್ಕರು. ಈ ಘಟನೆ ನನ್ನ ಮನಸ್ಸಿನಲ್ಲಿ ಬಹಳಷ್ಟು ಕಾಲ ಕಾಡಿತ್ತು. ಸುಧಾಕರ್‌ ಡಾಕ್ಟರನ್ನು ನನ್ನ ಜೀವನದಲ್ಲಿ ಎಂದೂ ನೋಡಲಿಲ್ಲ ಮತ್ತು ಅವರು ಹೇಗಿದ್ದರು ಎನ್ನುವುದೂ ನೆನಪಿನಲ್ಲಿರಲಿಲ್ಲ. ಆದರೆ ಈ ಆಂಡವ ಕವಿ ಯಾರು? ಅವನು ಹೇಳಿದ ಎಂದು, ನಾನು ಐದನೇ ವರ್ಷದ ವಯಸ್ಸಿನಲ್ಲಿ ಆ ಮಾತನ್ನು ಹೇಗೆ ಹೇಳಿದ್ದೆ? ಎನ್ನುವುದು ಜಿಜ್ಞಾಸೆಯಾಗಿಯೇ ಉಳಿದಿತ್ತು. ಮುಂದೆ ಬೆಳೆಯುತ್ತಾ ಹೋದಾಗ, ಆಂಡವ ಕವಿ ಹಿನ್ನೆಲೆಗೆ ಹೋಗಿ, ಅವನು ಹೇಳಿದ ಮಾತಾದ ʻಹಳ್ಳಿಗಳೇ ಬೆಳೆದು ದೊಡ್ಡ ನಗರಗಳಾಗುತ್ತವೆ,ʼ ಎನ್ನುವ ಮಾತು ಕಾಡಲು ಆರಂಭಿಸಿತು. ಸಾಧಾರಣವಾಗಿ ನಮ್ಮನ್ನು ಮೇಕೂರಿಗೆ ಕರೆದುಕೊಂಡು ಹೋಗಲು ಲಲಿತಾಂಟಿ ಕಾರು ಕಳುಹಿಸುತ್ತಿದ್ದರು. ಎಷ್ಟೋ ದಿನ ಅಲ್ಲಿಯೇ ಉಳಿಯುತ್ತಿದ್ದೆವು ಕೂಡ. ಕೆಲವೊಂದು ಸಲ ನಡೆದುಕೊಂಡು ಹೋದದ್ದೂ ನೆನಪಿದೆ. ಆಗೆಲ್ಲ ತೋಟದ ಪಕ್ಕದಲ್ಲಿ ಆನೆಗಳು ಬಂದಿವೆ ಎನ್ನುವುದನ್ನು ಜನ ಸಹಜವಾಗಿ ಮಾತನಾಡುತ್ತಿದ್ದರು ಮತ್ತು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಚ್ಚೆಂದರೆ, ನಮ್ಮ ಓಡಾಟವನ್ನು ಅವುಗಳಿಗೆ ತಿಳಿಸಲು ಸ್ವಲ್ಪ ಜೋರಾಗಿ ಮಾತನಾಡುತ್ತಿದ್ದರು. ಅವೂ ಸಹ ಮನುಷ್ಯರು ಬಂದರೆ ಅಲ್ಲಿಂದ ಹೊರಟು ಹೋಗುತ್ತಿದ್ದವು. ಪಾಲಿಬೆಟ್ಟದಲ್ಲಿ ಆಸ್ಪತ್ರೆಯೇ ಕೊನೆಯ ಕಟ್ಟಡ. ಅಲ್ಲಿಂದ ಮೇಕೂರಿಗೆ ಬರುವಾಗ ದಾರಿಯಲ್ಲಿ ಯಾವುದೇ ಮನೆಗಳಿರಲಿಲ್ಲ. ಬಹಳಷ್ಟು ಕಾಡುಗಳಿದ್ದವು. ಈಗ ಆಸ್ಪತ್ರೆ ದಾಟಿದ ಮೇಲೆ ಸಹ ಬಹಳಷ್ಟು ಮನೆಗಳಾಗಿವೆ. ಬಹಳಷ್ಟು ಕಾಡು ಇದ್ದ ಜಾಗಗಳು ಕಾಫಿ ತೋಟಗಳಾಗಿವೆ. ಆನೆಗಳು ಈಗಲೂ ಬರುತ್ತವೆ. ಆದರೆ, ಮೊದಲಿನಷ್ಟು ಸಹಜವಾಗಿ ಯಾರೂ ಮಾತನಾಡುತ್ತಿಲ್ಲ. ಆಗ ಆನೆ ತುಳಿದು ಸಾಯುವುದು ಎನ್ನುವುದನ್ನು ಕೇಳಿದ್ದೇ ಕಡಿಮೆ. ಆದರೆ, ಈಗ ಆನೆಗಳ ಹಾವಳಿಯ ಬಗ್ಗೆ ಎಲ್ಲೆಲ್ಲೂ ಕಥೆಗಳು ಕೇಳುತ್ತಿರುತ್ತೇವೆ. ಇದು ಪಾಲಿಬೆಟ್ಟ ಅಥವಾ ಮೇಕೂರಿನ ಕಥೆಯಲ್ಲ. ಇಡೀ ಮಲೆನಾಡಿನ ಕಥೆ. ಆದರೆ, ಆಗ ಆನೆ, ಹುಲಿ, ಚಿರತೆಗಳ ಕಾಟವಿರಲಿಲ್ಲವೇ? ಅವು ಇದ್ದವು, ಆದರೆ ಕಾಟ ಇರಲಿಲ್ಲ. ಈಗೇಕೆ ಹೀಗೆ? ಅದಕ್ಕೆ ದಶಕಗಳ ಇತಿಹಾಸವಿದೆ. ನಾವು ಚಿಕ್ಕಂದಿನಲ್ಲಿ ಇದ್ದಾಗ, ಊರುಗಳಿಗೆ ಒಂದು ಗಡಿ ಇರುತ್ತಿತ್ತು. ಇರಡು ಊರಿನ ಗಡಿಗಳ ಮಧ್ಯೆ ಕಾಡು, ಹರ ಮುಂತಾದವು ಇರುತ್ತಿದ್ದವು. ಈ ಕಾಡುಗಳಲ್ಲಿ ಹಣ್ಣಿನ ಮರಗಳು ಮತ್ತು ಬಿದಿರು ಯಥೇಚ್ಚವಾಗಿ ಇರುತ್ತಿದ್ದವು ಮತ್ತು ಜಿಂಕೆ, ಕಾಡುಹಂದಿಯಂತಹ ಪ್ರಾಣಿಗಳು ಸಹ. ಈಗ ಈ ಜಾಗಗಳೆಲ್ಲ ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿವೆ. ತೋಟದಲ್ಲಿ ಕೆಲಸ ಮಾಡಲು ಕಷ್ಟ ಎಂದು ಬಿದಿರು ಮತ್ತು ಹಣ್ಣಿನ ಗಿಡಗಳನ್ನು ನೆಲಸಮ ಮಾಡಲಾಗಿದೆ. ಆಹಾರ ಹುಡುಕಿಕೊಂಡು ಬರುವ ಪ್ರಾಣಿಗಳು ಈಗ ʻಕಾಟʼವಾಗಿ ಪರಿವರ್ತನೆಗೊಂಡಿವೆ, ಅಷ್ಟೆ. ಹಳ್ಳಿಗಳು ನಗರವಾಗುವುದು ಎಂದರೆ ಹೀಗೆ ಎನ್ನುವುದು ಐದು ವರ್ಷದ ನನಗೆ ಅರ್ಥವಾಗಿರಲಿಲ್ಲ ಅಂತ ಕಾಣುತ್ತೆ. ಈ ಕಾಡುಗಳು ಹೇಗೆ ಸಾವಿರಾರು ವರ್ಷಗಳು ಉಳಿದಿದ್ದವು ಎಂದು ಯೋಚಿಸಿದಾಗ, ಅದನ್ನು ಮನುಷ್ಯರೇ ಉಳಿಸಿಕೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ. ಪ್ರತೀ ಊರಿನ ಗಡಿಗಳಲ್ಲಿ ದೇವರ ಕಾಡು ಎನ್ನುವುದು ಸಹಜವಾಗಿ ಇರುತ್ತಿದ್ದವು. ಹಾಗೆಯೇ, ನಾಗ ಬನಗಳಿರುತ್ತಿದ್ದವು. ಯಾವುದೇ ಕಾರಣದಿಂದ ಮನುಷ್ಯರು ಈ ಕಾಡುಗಳಿಂದ ಮರ ಕಡಿಯುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ, ಪೂಜೆಗೆಂದು ಕಾಡಿಗೆ ಹೋಗಿ, ಮತ್ತೆ ವಾಪಾಸು ಬರುತ್ತಿದ್ದರು. ಈ ದೇವಸ್ಥಾನಗಳ ಮತ್ತು ನಾಗರ ಕಲ್ಲಿನ ಸುತ್ತ ಮುತ್ತ ನೂರಾರು ಎಕರೆ ಸಹಜ ಕಾಡು ಇರುತ್ತಿತ್ತು. ಊರಿನ ಗಡಿಗೆ ಬಂದ ಪ್ರಾಣಿಗಳು ಆ ಕಾಡುಗಳ ಮೂಲಕ ದಾಟಿ ಹೋಗುತ್ತಿದ್ದವು. ಈಗ ಆ ಕಾಡುಗಳೆಲ್ಲ ತೋಟಗಳಾಗಿ, ಬರೀ ದೇವಸ್ಥಾನ, ನಾಗರ ಕಲ್ಲುಗಳು ಉಳಿದಿವೆ. ದೇವರು ಕಾಡಿನ ಹೆಚ್ಚಿನ ದೇವಸ್ಥಾನಗಳಲ್ಲಿ ಇರುವುದು ಹೆಣ್ಣು ದೇವರುಗಳೇ. ಭಾರತದಲ್ಲಿ ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಮೊದಲನೆಯದಾಗಿ, ಹೆಣ್ಣು ಜನ್ಮದಾತೆ, ಅನ್ನದಾತೆ ಮತ್ತು ಶಕ್ತಿ. ಎರಡನೆಯದಾಗಿ, ಪ್ರಕೃತಿಯ ಸೌಂದರ್ಯವನ್ನು ಹೋಲಿಸಲು ಮನುಷ್ಯನಿಗೆ ಬೇರೆ ಹೋಲಿಕೆ ಸಿಗಲಾರದು. ಬೆಟ್ಟಗಳಲ್ಲಿ ಬಂಡೆಯಿಂದ ಬಂಡೆಗೆ ಹಾರುತ್ತಾ, ವಯ್ಯಾರದಿಂದ ಬಳುಕುತ್ತಾ ಹರಿಯುವ ನದಿಯೇ ಇರಬಹುದು, ಮೈತುಂಬಿ ನಿಂತ ಮರ, ಲತೆ, ಹೂಗಳಿರಬಹುದು. ಆ ಸೌಂದರ್ಯವನ್ನು ಹೊಗಳಲು ಹೆಣ್ಣಿಗಿಂತ ಉತ್ತಮ ಉಪಮೇಯ ದೊರಕುವುದು ಕಷ್ಟ. ಪ್ರಕೃತಿ ಎನ್ನುವುದು ಶಕ್ತಿ-ಸೌಂದರ್ಯಗಳ ಸಮ್ಮಿಳನ. ಇನ್ನುಳಿದಂತೆ ಜನಪ್ರಿಯವಾದದ್ದು ನಾಗ ಬನಗಳು. ಈ ನಾಗ ಬನಗಳ ಬಗ್ಗೆ ಯೋಚಿಸುವಾಗ ಆಶ್ಚರ್ಯವಾಗುತ್ತದೆ. ವಿಷಪೂರಿತ ಎಂದು ಭಯಪಡುವ ಈ ಸರೀಸೃಪಗಳನ್ನು ಮನುಷ್ಯ ಏಕಾಗಿ ಮತ್ತು ಹೇಗೆ ದೇವರು ಮಾಡಿದ ಎಂದು. ಈ ಹಾವುಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಎಷ್ಟೊಂದು ಕಥೆಗಳಿವೆ ಮತ್ತು ನಮ್ಮ ಜನಪದಗಳಲ್ಲೂ ಅಷ್ಟೇ ದಂತ ಕಥೆಗಳಿವೆ. ಹಾವಿನ ದ್ವೇಶ, ಶಾಪ ಮುಂತಾದ ಕಥೆಗಳನ್ನು ಚಿಕ್ಕಂದಿನಲ್ಲಿ ಓದುವಾಗ ಮೈ ಜುಂ ಎನ್ನುತ್ತಿತ್ತು. ಹಾವು ಕಚ್ಚಿಸಿಕೊಂಡವರ ಮೈ ನೀಲಿ ಬಣ್ಣಕ್ಕೆ ತಿರುಗಿ ಸಾಯುತ್ತಾರೆ ಎಂದು ಹೇಳುತ್ತಿದ್ದರು. ದೊಡ್ಡವರಾಗುತ್ತಾ ಬಂದಾಗ, ಹಾವಿನ ಬಗ್ಗೆ ತಿಳಿದುಕೊಳ್ಳುತ್ತಾ ಹೋದಾಗ, ಇವೆಲ್ಲ ಸಾಧ್ಯವೇ ಇಲ್ಲದ ಕಥೆಗಳು ಎನ್ನುವುದು ಮನದಟ್ಟಾಯಿತು. ಸರಿಯಾಗಿ ಕಣ್ಣೂ ಕಾಣದ, ಕಿವಿಯೂ ಇಲ್ಲದ, ತೆವಳುತ್ತಾ ಬದುಕುವ ಇದೊಂದ ಅಸಹಾಯಕ ಪ್ರಾಣಿ. ಆದರೆ, ಮನುಷ್ಯನ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇಲಿಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದರಲ್ಲಿ ಹಾವು ಮುಂಚೂಣಿಯಲ್ಲಿರುತ್ತದೆ. ಇಲ್ಲದೇ ಹೋದರೆ, ಪ್ರಕೃತಿಯ ಆಹಾರ ಸರಪಳಿಯು ವ್ಯತ್ಯಾಸವಾಗುವ ಅಪಾಯವಿದೆ. ಬಹಳಷ್ಟು ಯೋಚಿಸಿದ ಮೇಲೆ ಅನ್ನಿಸಿತು, ಮನುಷ್ಯರು ಹಾವಿನ ವಿಷಕ್ಕೆ ಹೆದರುವಷ್ಟು ಬೇರಾವುದಕ್ಕೂ ಹೆದರುವುದಿಲ್ಲ. ಹಾಗಾಗಿ, ಪ್ರಾಣಿಗಳ ಸಂಘರ್ಷಕ್ಕೆ ಕಡಿವಾಣ ಹಾಕುತ್ತಿದ್ದ ಈ ಕಾಡುಗಳ ರಕ್ಷಣೆಗೆ ಹಾವುಗಳ ಕವಚ ತೊಡಿಸಿದ್ದರು ಎಂದು ಅನಿಸಲಾರಂಭಿಸಿದರು. ಈಗ ಏಳೆಂಟು ದಶಕಗಳಿಂದೀಚೆ ಈ ಕವಚಗಳೆಲ್ಲ ಒಡೆದು ಚೂರಾಗಿ ಹೋಗಿವೆ. ಪ್ರತೀ ಕಾಡುಗಳಲ್ಲಿ ಈ ದೇವರುಗಳ ಪೂಜೆಗೆ ಕಲ್ಲಿನಷ್ಟು ಜಾಗ ಬಿಟ್ಟು, ಉಳಿದದ್ದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಗಣಿಗಾರಿಕೆಗಾಗಿ ದೊಡ್ಡ ದೇವಸ್ಥಾನಗಳನ್ನೂ ಡೈನಮೈಟ್‌ ಹಾಕಿ ಉಡಾಯಿಸಲಾಗಿದೆ. ಕಾಡು ಸಾಂಕೇತಿಕವಾಗಿದೆ ಮತ್ತು ಪ್ರಾಣಿಗಳ ಓಡಾಟ ಕಾಟವಾಗಿದೆ. ಇದರ ಮಧ್ಯೆ ರಾಜೇಶ್‌ ಶೆಟ್ಟಿ ತನ್ನ ಹೊಸ ಕಾದಂಬರಿಯೊಂದನ್ನು ನನ್ನ ಕೈಗಿಟ್ಟ. ನಾನು ಓದುವ ಸಮಯದಲ್ಲಿ ಅದಕ್ಕೆ ಹೆಸರಿಟ್ಟಿರಲಿಲ್ಲ. ʻಏನು ಬರೆದಿದ್ದೀಯಾ?ʼ ಎಂದು ಕೇಳಿದಾಗ, ʻಅಡಲ್ಟ್‌ ಲವ್‌ ಸ್ಟೋರಿʼ ಎಂದು ಹೇಳಿದ. ನಾನು ನಕ್ಕಿದ್ದೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಸಹಸ್ರಾರು ಯುವಕರ ಕಥೆಯಂತೆ ಸಾಗಿದ ಕಥೆಯಲ್ಲಿ ಒಂದು ಹುಡುಕಾಟ ಬರುತ್ತದೆ. ಬಾಲ್ಯ ಸ್ನೇಹಿತ ಕೃಷ್ಣನನ್ನು ಹುಡುಕುತ್ತಾ ಹೊರಟ ಅಮರ್‌, ಕೃಷ್ಣನ ಸ್ನೇಹಿತೆಯನ್ನು ನೋಡುತ್ತಾನೆ. ಇಲ್ಲಿಂದಾಚೆಗೆ ಇದೊಂದು ಅರ್ಬನ್‌ ಜನಪದವಾಗಿ, ಮ್ಯಾಜಿಕಲ್‌ ರಿಯಲಿಸಮ್‌ ಗೆ ತಿರುಗುತ್ತದೆ. ಅಲ್ಲೊಂದು ಸುಂದರ ಯುವತಿ ಇದ್ದಾಳೆ. ಅವಳ ಹಿಂದೆ ಶತ ಶತಮಾನಗಳ ಜಾನಪದ ಚರಿತ್ರೆ ಇದೆ. ಆಕೆಯನ್ನು ಹಾವುಗಳು ಕಾಯುತ್ತಿವೆ ಮತ್ತು ಆಕೆಯ ತೋಳಿನಲ್ಲೂ ಹಾವಿನ ಹಚ್ಚೆ ಇದೆ. ಆದರೂ ಆಕೆಯ ಮೈ ನೀಲಿಗಟ್ಟಿದ್ದು ಏಕೆ ಮತ್ತು ಆಕೆಯ ಮೈ ನೀಲಿಗಟ್ಟಿಸಿದ ವಿಷ ಯಾವುದು? ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಒಂದು ನಿಟ್ಟುಸಿರು ಬಿಟ್ಟೆ. ರಾಜೇಶ್‌ ಹೇಳಿದ ʻಅಡಲ್ಟ್‌ ಲವ್‌ ಸ್ಟೋರಿʼಮತ್ತು ಅದರ ಸುತ್ತ ಬರುವ ಪಾತ್ರಗಳು ಬರೀ ನಿಮಿತ್ತ ಎನಿಸಿತು. ಆ ನೀಲಿ ಹುಡುಗಿ ಸಿಗುವ ಜಾಗಗಳೆಲ್ಲ ಒಮ್ಮೆ ಕಣ್ಣ ಮುಂದೆ ಹಾಯ್ದು ಹೋಯಿತು…. ಮಾಕೋನಹಳ್ಳಿ ವಿನಯ್‌ ಮಾಧವ

ಅನಸೂಯಾ ರಾಮಯ್ಯ ಮಾಲಗೊಂಡಹಳ್ಳಿ- - ಎನ್ ಸಂಧ್ಯಾರಾಣಿ ಅವರ ಕಾದಂಬರಿ -" ಇಷ್ಟು ಕಾಲ ಒಟ್ಟಿಗಿದ್ದು "{ 2022 }

ಕೃತಿ : ಇಷ್ಟು ಕಾಲ ಒಟ್ಟಿಗಿದ್ದು . . . ಲೇಖಕರು : ಎನ್. ಸಂಧ್ಯಾ ರಾಣಿ ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್, ಬೆಂಗಳೂರು ಕೃತಿಯ ಅರ್ಪಣೆಯ ಮಾತುಗಳಲ್ಲಿನ ಕೊನೆಯ ಸಾಲು " ನಾನು ಕಂಡ , ಮೆಚ್ಚಿದ ,ಮರುಗಿದ ,ಬೆರಗಾದ ಎಲ್ಲಾ ಹೆಣ್ಣು ಜೀವಗಳಿಗೆ " ತುಂಬಾ ಆಪ್ತವಾಗುವ ಈ ಮಾತುಗಳು ಮನ ಮುಟ್ಟುತ್ತವೆ. ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಪ್ರಖ್ಯಾತ ಸಂಗೀತಕಾರ ನೀಲ ಲೋಹಿತರ ಪತ್ನಿ ಕಾತ್ಯಾಯಿನಿ ಅವರ ಸಂದರ್ಶನದ ವೇಳೆ ಲೇಖಕಿಯು ಒಂದು ಪ್ರಶ್ನೆ ಕೇಳಿದಾಗ ಅವರ ಮುಖಭಾವದ ಬದಲಾವಣೆಯೊಂದಿಗೆ ಕಣ್ಣೀರಧಾರೆಯ ಬಗ್ಗೆ ಹೇಳುವಾಗ ಓದುಗರಿಗೂ ಪ್ರತ್ಯಕ್ಷ ಅನುಭವದಂತೆ ಆರ್ದ್ರತೆಯ ಅನುಭವ ಆಗುತ್ತದೆ. ಈ ಪ್ರಸಂಗವು ಕೃತಿಯ ಸಂವೇದನಾ ಶೀಲತೆಗೆ ಸಾಕ್ಷಿಯಾಗಿದೆ. ಈ ಕಾದಂಬರಿ ಮುಖ್ಯವಾಗಿ ನಾಲ್ಕು ಸ್ತ್ರೀ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಸ್ತ್ರೀ ಪಾತ್ರಗಳಲ್ಲಿ ಕೆಲವು ಪಾತ್ರಗಳ ಧೋರಣೆ ನಮ್ಮಂತಹ ಪೀಳಿಗೆಯವರಿಗೆ ಅತಿರೇಕವೇನೋ ಎನಿಸಿದರೂ ಅದೆಷ್ಟು ಗಟ್ಟಿಯಾಗಿವೆ ಎಂದರೆ ಓದುತ್ತಾ ಹೋದಂತೆ ಸಹಜವೇನೋ ಅನಿಸುವಷ್ಟರ ಮಟ್ಟಿಗೆ. ಇಲ್ಲಿನ ಸಹಜವಾದ ಕಥನ ಶೈಲಿಯಿಂದ ಪಾತ್ರಗಳು ನಮ್ಮಕಣ್ಮುಂದೆ ನಿಲ್ಲುತ್ತವೆ. ಇಲ್ಲಿನ ಪಾತ್ರಗಳ ಸಂಭಾಷಣೆ ನಮ್ಮನ್ನು ಅದೆಷ್ಟು ಕಾಡುತ್ತವೆ ಎಂದರೆ ನಾನಂತು ಸಂಭಾಷಣೆಗಳಿಗಾಗಿಯೇ ಈ ಕೃತಿಯನ್ನು ಎರಡು ಬಾರಿ ಓದಿದೆ. ಅದೇ ಈ ಕಾದಂಬರಿಯ ಜೀವಾಳವೆಂದರೆ ತಪ್ಪಾಗಲಾರದು. ಇಲ್ಲಿನ ಪ್ರತಿಯೊಂದು ಪಾತ್ರಗಳಲ್ಲೂ ಸಹಜ ಜೀವಂತಿಕೆಯಿದೆ. ಕಥಾನಕ ಪರಿಸರದ ಚಿತ್ರಣದಲ್ಲಿ ನೈಜತೆಯು ಹಾಸುಹೊಕ್ಕಾಗಿದೆ. ಆ ಕಾಲಕ್ಕೆ ಪುಟ್ಟ ತಾಯಿ ಚಿಚ್ಚಿ, ಚೆನ್ನಮ್ಮ ಹಾಗೂ ಬಸಮ್ಮಕ್ಕ ತಮ್ಮದೇ ರೀತಿಯಲ್ಲಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡೇ ಬಂಡಾಯವೆದ್ದು ಗೆದ್ದವರು.ಇಂದಿನ ಅರುಂಧತಿ, ಗೌರಿಯರಿಗೆ ಹೋಲಿಸಿದರೆ ಅವರೇನು ಕಡಿಮೆಯಲ್ಲ. ಕೃತಿಯ ಬೆನ್ನುಡಿಯ ಮಾತುಗಳನ್ನು ಓದಿದಲ್ಲಿ ಸ್ವತಃ ಲೇಖಕಿಗೂ ಇಪ್ಷವಾದಂಥ ಪರಿಣಾಮಕಾರಿ ಸಂಭಾಷಣೆಗಳನ್ನು ಗಮನಿಸಬಹುದು. ಬೆನ್ನುಡಿಯಲ್ಲಿ ಇಲ್ಲದ ನನಗೆ ತುಂಬಾ ಇಷ್ಟವಾದಂಥ ಕೆಲವು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು 1.ಸರೋಜಿನಿಯ ಸ್ವಗತ : ಕೋರ್ಟಿನ ಆ ಹಸಿರು ಹಾಳೆಗಳ ಮೇಲಿನ ಎರಡು ಸಹಿ ನನ್ನನ್ನು ಮತ್ತೆ ನಿರಂಜನ ಪೂರ್ವದ ಸರೋಜಿನಿಯನ್ನಾಗಿಸಬಲ್ಲದೆ. ತಾವಿಬ್ಬರೂ ಜೊತೆಯಾಗಿ ಕಳೆದ ಆ 25 ವರ್ಷಗಳ ಸಾಂಗತ್ಯವನ್ನು ಶೂನ್ಯವಾಗಿಸ ಬಹುದೆ ಎಂದು ಸುಮ್ಮನಾಗುತ್ತಾಳೆ . 2.ಹೇಡಿತನ ಒಂದೊಂದ್ಸಲ ಒಳ್ಳೆತನದ ವೇಷ ಹಾಕಿಕೊಳ್ಳುತ್ತೆ 3. ಪರಿಚಯ ಜಾಸ್ತಿ ಆದ ಹಾಗೆ ಬೆರಗು ಸಾಯುತ್ತ ಹೋಗುತ್ತೆ ಆದರೆ ಅಷ್ಟರಲ್ಲಿ ಸಂಬಂಧ ಅಭ್ಯಾಸ ಆಗಿಹೋಗಿರುತ್ತದೆ . ಅದನ್ನು ನಿಭಾಯಿಸೋದು ವಾಡಿಕೆ ಆಗಿಹೋಗಿರುತ್ತದೆ ಅಥವಾ ಅದಕ್ಕೆ ಪರ್ಯಾಯ ಸಿಕ್ಕಿರೋಲ್ಲ. ನಿಮ್ಮಪ್ಪ ನಿಗೆ ಯಾವತ್ತೂ ಪರ್ಯಾಯಗಳ ಕೊರತೆ ಆಗಲೆ ಇಲ್ಲ ನೋಡು 4. ಬದುಕಲು ಬೇಕಾಗುವ ಬಹುಮುಖ್ಯ ಕಾರಣ ಇನ್ನೊಂದು ಜೀವಕ್ಕೆ ನನ್ನ ಅಗತ್ಯವಿದೆ. ಅದರ ಇರುವಿಕೆ ನನ್ನ ಇರುವಿಕೆ ಅನ್ನು ಅವಲಂಬಿಸಿದೆ ಎನ್ನುವ ಅರಿವು ಮತ್ತೊಬ್ಬರಿಗೆ ನಾವು ಬೇಕು ಎನ್ನುವುದೇ ಇಳಿವಯಸ್ಸಿಗೆ ದೊಡ್ಡ ಟಾನಿಕ್. ಬಹುಶಃ ಅದಕ್ಕೆ ಮೊಮ್ಮಕ್ಕಳೆಂದರೆ ಆ ಪರಿ ಪ್ರೀತಿ. 5. ನಿಜವಾದ ಕೆಡುಕು ಶಾಪ ಇರೋದಲ್ಲ ಮಗಳೆ. ಶಾಪ ಇದೆ ಎಂದು ಕೈಚೆಲ್ಲಿ ಕೂರುವುದು ಕೆಡುಕು. ಕೃತಿಯಲ್ಲಿನ ಪ್ರಮುಖ ಪಾತ್ರಗಳ ನಡುವೆ ನಮ್ಮ ಮನದಾಳಕ್ಕೆ ಇಳಿದು ನೆಲೆಸುವ ಪಾತ್ರವೆಂದರೆ ಸರೋಜಿನಿ. ' ಒಮ್ಮೆ ಕದಡಿದ ಕೊಳವು ಮತ್ತೆ ತಿಳಿಯಾಗಿರಲು ತಳದಿ ಮಲಗಿಹ ಕಲ್ಲು ನಿನ್ನ ನೆನಪು ನೂರು ಜನಗಳ ನಡುವೆ ನಕ್ಕು ನಲಿದಾಡಿದರೂ ಧುತ್ತನೆರಗುವ ದುಗುಡ ನಿನ್ನ ನೆನಪು ಎಲ್ಲ ವಾದದ ಕಡೆಗೆ ಆವರಿಸೊ ಮೌನದ ತರ್ಕ ಮೀರಿದ ಭಾವ ನಿನ್ನ ನೆನಪು ' ಮುರಿದ ದಾಂಪತ್ಯದ ನಡುವೆಯೂ ಅವಳನ್ನು ಕಾಡುತ್ತಿದ್ದ ಗಂಡನ ನೆನಪುಗಳ ತೀವ್ರತೆಯನ್ನು ತಿಳಿಸಲು ಮೇಲಿನ ಸಶಕ್ತ ಅನನ್ಯ ರೂಪಕಗಳೇ ಸಾಕು. ವಿವಾಹ ವಿಚ್ಛೇದನವನ್ನು ಕುರಿತ ಅವಳ ಮಾತುಗಳು, ಮೊಮ್ಮಕ್ಕಳನ್ನು ಪ್ರೀತಿಸುವುದರ ಬಗ್ಗೆ, ಒಂದು ರೀತಿಯಲ್ಲಿ ಎಲ್ಲಾ ಮದುವೆಗಳು ಅಫೋಷಿತ open marriage ಎನ್ನುವ ಅವಳ ಅಭಿಪ್ರಾಯ, ಮದುವೆಯನ್ನು ಕುರಿತು ಮಗಳು ತೆಗೆದುಕೊಂಡ ತೀರ್ಮಾನದ ಬಗ್ಗೆ ಅವಳ ತಲ್ಲಣಗಳು, ಇನಾಯಳ ಸಂಸಾರದ ಬಗ್ಗೆ ಅವಳ ಸಲಹೆಗಳು ಎಲ್ಲವೂ ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಸಫಲವಾಗಿವೆ ಒಲ್ಲದ ದಾಂಪತ್ಯದಿಂದ ತಣ್ಣಗೆ ದೂರ ಸರಿದ ರೀತಿ, ಅವಳ ನಿರ್ಭಾವುಕತೆಯಿಂದ ನಿರಂಜನನು ಜೀವಂತ ಶವದಂತಾದ ರೀತಿಯನ್ನು ನೋಡಿದಾಗ ರಾಮಾಯಣದ ಸೀತೆಯಿಂದ ತಿರಸ್ಕರಿಸಲ್ಪಟ್ಟ ರಾಮನ ನೆನಪಾಯಿತು. ಆ ಬಗ್ಗೆ ಗಂಡನು ಬರೆದುಕೊಂಡಾಗ ಅವಳಿಗೆ ನೋವಾಗಿದ್ದು ಅವಳಿಗಾಗಿ ಅಲ್ಲ ಅವನಿಗಾಗಿ ಅಂದರೆ ಪ್ರೀತಿಯ ಜಾಗದಲ್ಲೀಗ ಕರುಣೆ ಅಥವಾ ಮರುಕದ ಭಾವ ಮನೆ ಮಾಡಿತ್ತು. ಶಾಪದ ಪರಿಹಾರವಾಗಿ ಉಶ್ವಾಪದ ಪ್ರಸ್ತಾಪ ಎಲ್ಲವೂ ಅವಳ ಮಾಗಿದ ವ್ಯಕ್ತಿತ್ವದ ಘನತೆಯನ್ನು ತೋರುವುದರೊಂದಿಗೆ ಅವಳ ಮನೆತನದ ಶಾಪಕ್ಕೆ expiry date ಆಯ್ತು ಎನ್ನುವ ನಿರಾಳ ಭಾವನೆ ಓದುಗರ ಮನದಲ್ಲೂ ಮೂಡುತ್ತದೆ. ಬಸಮ್ಮಜ್ಜಿ ಮತ್ತು ಸರೋಜಿನಿಯ ಬಾಳಲ್ಲಿರುವ ಏಕೈಕ ಸಾಮ್ಯತೆ ಎಂದರೆ ಇಬ್ಬರೂ ತಮಗೆ ಒಲಿದ ಗಂಡಸರು ತಮ್ಮಿಂದ ವಿಮುಖರಾಗಿ ದೂರ ಸರಿದಾಗ ತಣ್ಣಗೆ ಪ್ರತಿಕ್ಷಿಯಿಸುವುದು. ಬಸಮ್ಮಜ್ಜಿಗೆ ಇಲ್ಲದ ಹಕ್ಕು ಸರೋಜಿನಿಗಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಅವಳ ಗಟ್ಟಿ ವ್ಯಕ್ತಿತ್ವಕ್ಕೆ ಒಪ್ಪುತ್ತದೆ. ಆರ್ಥಿಕ ಸ್ವಾತಂತ್ರ್ಯ, ಅಧಿಕಾರ ಎಲ್ಲವೂ ಇದ್ದು ಆರುಂಧತಿಯ ತನ್ನ ಪ್ರೀತಿಗೆ ಅಪಾತ್ರನಾದ ವಿವಾಹಿತನಿಗೆ ಒಲಿಯುವುದು, ಗೋಗರೆಯುವುದು, ಮಗುವಿಗಾಗಿ ಹಂಬಲ ಇದೆಲ್ಲವನ್ನೂ ನೋಡಿದಾಗ ಪ್ರೀತಿಯ ಸುಳಿಗೆ ಸಿಲುಕಿದ ಹೆಣ್ಣಿನ ಮನಸ್ಥಿತಿ ಮಾತ್ರ ಯಾವ ಕಾಲಕ್ಕೂ ಒಂದೇ ಎಂದು ಅನ್ನಿಸುವುದು. ಇನಾಯ ಗಂಡನಿಂದ ಹೊಡೆತ ತಿಂದು ಸಿಟ್ಟಿಗೆದ್ದರೂ, ತನ್ನನ್ನು ತನ್ನತನವನ್ನು ಬಿಡದೆ ಗಂಡನನ್ನು ಕ್ಷಮಿಸುವುದು ಒಳ್ಳೆಯ ತೀರ್ಮಾನವೇ ಆದರೂ ಅದರ ಹಿಂದಿರುವುದು ಪ್ರೀತಿ ಮಾತ್ರ ಎಂಬುದನ್ನು ನಿರಾಕರಿಸುವಂತಿಲ್ಲ. ಇನ್ನು ಸರೋಜಿನಿಯ ಮಗಳು ಗೌರಿಯ ಪ್ರಕಾರ ' ಹೆಣ್ಣನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ವಿಷಯವೇ ಪ್ರೀತಿ ' ಆತ್ಮವಿಶ್ವಾಸವನ್ನಾದರೂ ಕುಗ್ಗಿಸುವ ಪ್ರೀತಿ ಬೇಕೇ ? ಎನ್ನುವ ಅವಳೂ ಪ್ರೀತಿಸಿ ಹೊಂದಾಣಿಕೆಯಾದಲ್ಲಿ ಮಾತ್ರ ಮದುವೆ ಅನ್ನುವ ಹಂತಕ್ಕೆ ಬರುತ್ತಾಳೆ. ಅಭಿಜ್ಞಾಳು ಸಹಾ ಷರತ್ತಿಲ್ಲದ ಲೀವ್ ಇನ್ ರಿಲೇಶನ್ ಶಿಪ್ ಗೆ ಒಪ್ಪಿ ಮದುವೆಯಾದರೂ ಭಾವನಾತ್ಮಕವಾಗಿ ಪೊಸೆಸಿವ್ನೆಸ್ ಇರಬೇಕು ಎನ್ನುವ ಹಂತಕ್ಕೆ ಬರುತ್ತಾಳೆ. ಈ ಎಲ್ಲ ಹೆಣ್ಣುಗಳು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಿದ್ದರೂ ಗಂಡಿನ ಪ್ರೀತಿಗಾಗಿ ಹಂಬಲಿಸುತ್ತಾರೆಂದರೆ ಸರ್ವಕಾಲಕ್ಕೂ ಹೆಣ್ಣಿಗೆ ಬೇಕಾದ್ದು ಪ್ರೀತಿ ಅದು ಅವರನ್ನು ದುರ್ಬಲಗೊಳಿಸಿದರೂ ಅಚ್ಚರಿಯಿಲ್ಲ ಎಂಬುದಕ್ಕೆ ಅವರ ಜೀವನದ ಗತಿಗಳೇ ಸಾಕ್ಷಿ. ಪುರುಷ ಪಾತ್ರಗಳಾದ ನಿರಂಜನ ಮತ್ತು ಶ್ರೀನಿವಾಸ ರೆಡ್ಡಿ ಪ್ರೀತಿಗೆ ಅಪಾತ್ರರಾಗಿದ್ದು ಹೆಣ್ಣಿನ ದೌರ್ಬಲ್ಯದೊಡನೆ ಆಟ ಆಡುವ ಪುರುಷ ಪ್ರಧಾನ ಸಮಾಜದ ಪ್ರತಿನಿಧಿಗಳಂತೆ ಕಾಣುತ್ತಾರೆ.ರಾಮಚಂದ್ರನ ವರ್ತನೆಯೂ ಸ್ಟಲ್ಪ ಅತಿರೇಕವೇ ಎನಿಸುತ್ತದೆ. ಮ್ಯಾಥ್ಯೂ ಪ್ರೀತಿಯ ಹಂಬಲವಿರುವ ಓಬ್ಬ ಪ್ರಾಮಾಣಿಕನಾಗಿ ಕಾಣುತ್ತಾನೆ. ಕೃತಿಯ ಶೀರ್ಷಿಕೆಯು ಅದೆಷ್ಟು ಸೂಕ್ತವಾಗಿದೆಯೆಂಬುದು ಕೃತಿಯ ಹೂರಣವನ್ನು ಸವಿದಾಗಲೆ ಅರಿವಾಗುವುದು. ಇನ್ನು ಕೃತಿಯನ್ನು ಓದಿ ಮುಗಿಸಿದ ನಂತರ ಮುಖಪುಟದತ್ತ ಗಮನ ಹರಿದಾಗ ತೆರೆದ ಬಾಗಿಲ ಚಿತ್ರವನ್ನು ನೋಡಿದಾಗ ಇಲ್ಲಿನ ಎಲ್ಲಾ ಪಾತ್ರಗಳೂ ಸಹಾ ತೆರೆದ ಬಾಗಿಲಂತೆಯೆ ಮನ ಬಿಚ್ಚಿ ಮುಕ್ತವಾಗಿ ಮಾತನಾಡುತ್ತವೆ. ತಾತ್ಕಾಲಿಕ ತಂಗುದಾಣದಲ್ಲಿ ಇರುವಂತೆ ಮುಖಪುಟದಲ್ಲಿ ಕಾಣುವ ಪುರುಷರ ಉಡುಗೆ ಗಳು ಸರೋಜಿನಿ, ಅರುಂಧತಿ ಹಾಗೂ ಅಭಿಜ್ಞಾ ಇವರುಗಳ ಬಾಳಲ್ಲಿ ಬಂದು ಹೋದ ಪುರುಷ ಪಾತ್ರಗಳ ಸಂಕೇತವಾಗಿರ ಬಹುದೆ ಎನಿಸಿತು. ಲೇಖಕಿಯು ಇದು ಉಪಸಂಹಾರವಲ್ಲ ಎಂದು ಹೇಳಿದರೂ ಸಹ ಗಟ್ಟಿಗಿತ್ತಿಯರಾದ ಇಲ್ಲಿನ ಸ್ತ್ರೀ ಪಾತ್ರಗಳು ನೆಮ್ಮದಿಗಾಗಿ ತಮ್ಮದೇ ಮಾರ್ಗದಲ್ಲಿ ಭರಪೂರ ಆತ್ಮವಿಶ್ವಾಸದ ಜೊತೆಗೆ ಮುನ್ನಡೆ ಸಾಧಿಸುವ ಮೂಲಕ ಪೂರ್ಣವಿರಾಮ ಹಾಕಿದ್ದಾರೆ ಸಮಸ್ಯೆಗಳು ಬಂದಾಗ ಕೈಚೆಲ್ಲಿ ಕೂರದೇ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬುದನ್ನು ಸರೋಜಿನಿಯ ಜೀವನ ಸಾದರ ಪಡಿಸಿದೆ. ಕೈಗೆತ್ತಿಕೊಂಡ ಮೇಲೆ ಓದಿ ಮುಗಿಸದೆ ಬಿಡಲಾಗದ ಕೃತಿ ಎನ್ನಬಹುದು. ಅನಗತ್ಯವಾದ ಯಾವುದೂ ಎಲ್ಲಿಯೂ ಕಾಣದೆ ಓದುಗರನ್ನು ತನ್ನದೇ ಗುಂಗಿನಲ್ಲಿಡುವಷ್ಟು ಸಶಕ್ತವಾದ ಸಂವೇದನಾಶೀಲ ಕಾದಂಬರಿ . ಎಂ. ಆರ್. ಅನಸೂಯ .

Thursday, November 17, 2022

ಬೆಳಗೋಡು ರಮೇಶ್ ಭಟ್ -- ಎಚ್ ಜಿ ಶ್ರೀಧರ್ ಅವರ ಕಾದಂಬರಿ " ಪ್ರಸ್ಥಾನ "

ಮುಳುಗಡೆಯ ನೋವಿನ ಮತ್ತೊಂದು ಹೃದಯಸ್ಪರ್ಶಿ ಕಥೆ ಪ್ರಸ್ಥಾನ (ಕಾದಂಬರಿ) ಲೇ: ಡಾ ಶ್ರೀಧರ ಎಚ್ ಜಿ ಮುಂಡಿಗೆಹಳ್ಳಿ ಪ್ರಕಾಶಕರು: ಶ್ರೀರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಮೈಸೂರು -೧ ಪುಟಗಳು: 592 ಬೆಲೆ: ರೂ. 500 ಕಳೆದ ಶತಮಾನದಲ್ಲಿ ಶರಾವತಿಗೆ ಕಟ್ಟಿದ ಅಣೆಕಟ್ಟುಗಳು ತಂದುಕೊಟ್ಟ ಮುಳುಗಡೆ, ಮುಳುಗಡೆಯ ನಿಮಿತ್ತವಾಗಿ ಅನಿವಾರ್ಯವಾದ ವಲಸೆ ಮತ್ತು ಹಿನ್ನೀರಿನ ಹಳ್ಳಿಗಳಲ್ಲಿ ಉಂಟಾದ ಸ್ಥಿತ್ಯಂತರ, ನಂಬಿಕೆಗಳ ಪಲ್ಲಟ, ಕೌಟುಂಬಿಕ ವ್ಯವಸ್ಥೆಯ ಪತನ - ಇವೆಲ್ಲವುಗಳ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಸಾಕಷ್ಟು ಕಥೆ ಕಾದಂಬರಿಗಳು ಬಂದಿವೆ. ಪ್ರಸ್ತುತ ಕಾದಂಬರಿಯ ಮುನ್ನುಡಿಯಲ್ಲಿ ನಾ ಡಿಸೋಜ ಮತ್ತು ಗಜಾನನ ಶರ್ಮರ ಕಾದಂಬರಿಗಳ ಪ್ರಸ್ತಾಪವಿದೆ. ಕೃಷ್ಣ ಮೇಲ್ದಂಡೆಯ ಯೋಜನೆಯಲ್ಲಿ ಮುಳುಗಡೆಯಾದ, ತನ್ನ ಕುಟುಂಬದ ಹಿರಿಯರು ಹದಿನೆಂಟು ತಲೆಮಾರು ವಾಸವಾಗಿದ್ದ ಹಳ್ಳಿಯೊಂದರ ದುರಂತದ ಕಥೆ ಬೋಸ್ಟನ್ ನಿವಾಸಿ ಸೇನಾ ದೇಸಾಯ್ ಗೋಪಾಲ ಬರೆದ ’The 86th Village' .ಇತ್ತೀಚೆಗಷ್ಟೇ ಪ್ರಕಟವಾಗಿ, ಮುಳುಗಡೆ ತಂದುಕೊಡುವ ಸಾಮಾಜಿಕ, ಆರ್ಥಿಕ, ಕೌಟುಂಬಿಕ ಮತ್ತು ಪ್ರಾಕೃತಿಕ ಆಘಾತಗಳ ಕುರಿತು ಸಾಕಷ್ಟು ಸಂವಾದಗಳಿಗೆ ಹಾದಿಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ, ಶ್ರೀಧರ್ ಎಚ್ ಜಿಯವರ ’ಪ್ರಸ್ಥಾನ’ವು ಕಳೆದ ಶತಮಾನದ ನಲವತ್ತನೆಯ ದಶಕದಲ್ಲಿ ಮಲೆನಾಡು ಅನುಭವಿಸಿದ ಯಾತನೆಯ, ಪ್ರಾಯಶಃ ಹೆಚ್ಚು ಹೃದಯಸ್ಪರ್ಶಿ ಎಂದು ಗುರುತಿಸಬಹುದಾದ ಕಾದಂಬರಿ. ಮುಳುಗಡೆಯ ಹಿನ್ನೆಲೆಯ ಈ ಕಥೆಗಳಲ್ಲೆಲ್ಲ, ಸಾವಿರಾರು ವರ್ಷಗಳಿಂದ ಕೃಷಿಯನ್ನೇ ನಂಬಿ ಬದುಕಿದ ನೂರಾರು ಕುಟುಂಬಗಳು, ತಮ್ಮ ಭಾವಕೋಶದ ನಿಕಟ ಸಂಪರ್ಕದಲ್ಲಿದ್ದ ತಾಣಗಳನ್ನು ತೊರೆದು ಮತ್ತೆಲ್ಲಿಗೋ ಹೋಗಲೇಬೇಕಾದ ಪರಿಸ್ಥಿತಿಯ, ಪರಿಣಾಮದ ಕಥೆಯಿರುವುದು ಸಹಜ. ಆದರೆ ಶ್ರೀಧರರ ಈ ಕಾದಂಬರಿಯಲ್ಲಿ ಮನುಷ್ಯರ ಬದುಕಲ್ಲಿ ಈ ವಲಸೆಯೆನ್ನುವುದು ಅನಿವಾರ್ಯ, ಲಾಗಾಯ್ತಿನಿಂದ ಆಗುತ್ತಲೇ ಬಂದಿರುವುದು, ನಿರಂತರ ಪ್ರಕ್ರಿಯೆ, ಚಲನಶೀಲತೆಯ ಪರಿಣಾಮ ಎಂಬ ಉದಾರ ದರ್ಶನದ ಆರೋಗ್ಯಕಾರಿ ದಿಕ್ಕೊಂದು ಗುರುತಿಸಲ್ಪಡುತ್ತದೆ. ಕಾದಂಬರಿಯ ಆರಂಭದ ಲೇಖಕರ ಮಾತಿನಲ್ಲಿ ಮತ್ತು ಕಾದಂಬರಿಯ ಯಾವತ್ತೂ ಸಾಕ್ಷಿಪ್ರಜ್ಞೆಯಂತಿರುವ ಸೂರಯ್ಯನ ಮುಖಾಂತರ ಕಾದಂಬರಿಯ ೫೫೨ನೆಯ ಪುಟದಲ್ಲಿ ಅವರು ಇದನ್ನೇ ಹೇಳುತ್ತಾರೆ. "ಇದು ನಿಲ್ಲದ ಪಯಣ. ಮಾನವ ಜನಾಂಗ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆಪ್ರಯಾಣ ಮಾಡುತ್ತಲೇ ಇದೆ. ಮೆಡಿಟರೇನಿಯನ್ ಸಮುದ್ರ ತೀರದ ಕಡೆಯಿಂದ ಭಾರತದ ಕಡೆಗೆ ಮನುಷ್ಯ ಸುಮಾರು ೨೫೦೦೦ ವರ್ಷಗಳ ಹಿಂದೆ ವಲಸೆ ಬಂದನಂತೆ. ಮೊದಲು ದ್ರಾವಿಡರು, ಬಳಿಕ ಆರ್ಯರು. ನಾವು ಎಲ್ಲಿಂದಲೋ ಬರುವೆಗೆ ಬಂದೆವು. ಅಲ್ಲಿಂದ ಬೆಳ್ಳೆಣ್ಣೆಗೆ ಬಂದಿದ್ದೇವೆ. ಇತ್ತೀಚೆಗೆ ಕೆಲವರು ಓದು ಉದ್ಯೋಗ ಎಂದು ಅಮೇರಿಕದ ಕಡೆಗೆ ಹೊರಟಿದ್ದಾರೆ. ಯಾರಿಗೆ ಗೊತ್ತು, ನಮ್ಮ ಮೊಮ್ಮಕ್ಕಳು ಅಮೇರಿಕ ದೇಶಕ್ಕೆ ಹೋದರೆ ನಮಗೂ ಒಂದು ಅವಕಾಶ ಸಿಗಬಹುದು." ಪ್ರಸ್ಥಾನ ಎಂಬ ಪದಕ್ಕೆ ’ಪ್ರಯಾಣ’ ಎಂಬ ಅರ್ಥ ಮಾತ್ರವಲ್ಲ, ’ಯುದ್ಧದ ಪ್ರಯಾಣ’ ಎಂಬ ಅರ್ಥವೂ ಇದೆ. ಈ ಕೆಳಗಿನ ಬರುವೆ ಸೂರಯ್ಯ ಮಹಾಪ್ರಸ್ಥಾನವೊಂದರ ಸಾಕ್ಷಿಪ್ರಜ್ಞೆಯಂತಿದ್ದು, ಕಾದಂಬರಿ ಆರಂಭವಾಗುವುದೇ ಮಗಳ ಮದುವೆಯ ಪ್ರಸ್ತಾಪದೊಂದಿಗೆ. ಕಾದಂಬರಿ ಕೊನೆಯಾಗುವುದು ಅವರು ಬಿಟ್ಟುಬಂದ ಬರುವೆಯ ಮನೆಯಲ್ಲಿ ರಾಮಣ್ಣ ’ಒಂದು ಚೂರೂ ಮುಕ್ಕಾಗದಂತೆ ನೋಡಿಕೊಂಡು’ ನೆಲೆಸಿದ್ದಾನೆ ಎಂಬಲ್ಲಿ. ಮನೆಯೆದುರು ಸಗಣಿಯಿಂದ ನೆಲ ಬಳಿದು ರಂಗೋಲಿ ಹಾಕಲಾಗಿದೆ. ಹೊಸ್ತಿಲಿಗೆ ರಂಗೋಲಿಯೆಳೆದು ಹೂವಿಡಲಾಗಿದೆ. ಕೊಟ್ಟಿಗೆಯಲ್ಲಿ ಅಂಬೇ ಎಂದು ಕೂಗುವ ಕರು, ಅವರೇ ಊರುಬಿಟ್ಟುಹೋಗುವಾಗ ರಾಮಣ್ಣನಿಗೆ ಕೊಟ್ಟುಹೋದ ಶರಾವತಿ ಹಸುವಿನ ಮಗಳ ಕರು. ಅವರು ನೆಟ್ಟಿದ್ದ ಸಕ್ಕರೆ ಕಂಚಿ ಗಿಡ ಈಗ ಫಲ ಕೊಡುತ್ತಿದೆ. ಮನೆಯ ಅಂಗಳದ ಮೂಲೆಯಲ್ಲಿದ್ದ ಗಿಡದಲ್ಲಿ ಈಗಲೂ ಪಕ್ಷಿಯ ಗೂಡೊಂದಿದೆ. ಈ ಹಸ್ತಾಂತರವನ್ನು ಸೂರಯ್ಯ ಒಪ್ಪಿಕೊಳ್ಳುವಂತಹ ಮಾತೊಂದು ಕಾದಂಬರಿಯ ಕೊನೆಯ ಭಾಗದಲ್ಲಿ ಬರುತ್ತದೆ. ’ರಾಮಣ್ಣ ಈ ಮನೆಯಲ್ಲಿ ಇರುವುದರಿಂದಲೇ ತಮಗೆ ಮತ್ತೊಮ್ಮೆ ಈ ಮನೆಯನ್ನು ನೋದುವ ಯೋಗ ದೊರಕಿದೆ. ಇಲ್ಲವಾಗಿದ್ದರೆ ಇಷ್ಟು ಹೊತ್ತಿಗೆ ಮನೆಯಿರುವ ಜಾಗದಲ್ಲಿ ಮಣ್ಣಿನ ರಾಶಿಯಿರುತ್ತಿತ್ತು.’ ಇದು ಸೂರಯ್ಯನ ಆಶಯ ಮಾತ್ರವಲ್ಲ, ಈ ಕಾದಂಬರಿಯ ಒಟ್ಟು ಆಶಯದಂತೆಯೇ ಇದೆ. *ಬೆಳಗೋಡು ರಮೇಶ ಭಟ್

Thursday, September 15, 2022

B M Rohini- ಕರಾವಳಿ ಲೇಖಕಿಯರ ಸಮ್ಮೇಳನ ಅಧ್ಯಕ್ಷ ಭಾಷಣ -2017

ಆರಿಫ್ ರಾಜಾ ಅವರ ‘ಎದೆ ಹಾಲಿನ ಪಾಳಿ’ ಪುಸ್ತಕ ವಿಮರ್ಶೆ ರಘುನಾಥ್ ಚ.ಹ ಅವರಿಂದ

ಆರಿಫ್ ರಾಜಾ ಅವರ ‘ಎದೆ ಹಾಲಿನ ಪಾಳಿ’ ಪುಸ್ತಕ ವಿಮರ್ಶೆ ರಘುನಾಥ್ ಚ.ಹ ಅವರಿಂದ | Prajavani

ವಿಲ್ಸನ್ ಕಟೀಲ್ ಅವರ " ನಿಷೇಧಕ್ಕೊಳಪಟ್ಟ ಒಂದು ನೋಟು- ವಿಮರ್ಶೆ: ಸಚಿನ್ ಅಂಕೋಲಾ.. -

ನಿಷೇಧಕ್ಕೊಳಪಟ್ಟ ಆ ಒಂದು ನೋಟು- ವಿಮರ್ಶೆ: ಸಚಿನ್ ಅಂಕೋಲಾ.. - ಪಂಜು

ರಾಜಶೇಖರ ಅಕ್ಕಿ - ಎಮ್ ಎಸ್ ಶ್ರೀರಾಮ್ ಅವರ "ಬೇಟೆಯಲ್ಲ ಆಟವೆಲ್ಲ: ಗೊಂದಲಗೋಜಲುಗಳನ್ನು ಕಾಣಿಸುವ ಕಾದಂಬರಿ

ಬೇಟೆಯಲ್ಲ ಆಟವೆಲ್ಲ: ಗೊಂದಲಗೋಜಲುಗಳನ್ನು ಕಾಣಿಸುವ ಕಾದಂಬರಿ

Monday, July 25, 2022

B N Sumitrabayi Interview | | Face To Face Interview | Devu Pattar / ಬಿ ಎನ್ ಸುಮಿತ್ರಾಬಾಯಿ

H S Raghavendra Rao Interview | | Face To Face | Devu Pattar../ಎಚ್ ಎಸ್ . ರಾಘವೇಂದ್ರ ರಾವ್ [ ಸಂದರ್ಶನ } ದೇವು ಪತ್ತಾರ್.

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ 23/07/2022 | ನೇರಪ್ರಸಾರ 2 | ದಾವಣಗೆರೆ | .Bandaya Sahitya

ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ 23/07/2022 | ನೇರಪ್ರಸಾರ | ದಾವಣಗೆರೆ | BANDAYA SAHITYA

ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ.ರತ್ನಾಕರ ಕುನುಗೋಡು ಕವನ ಸಂಕಲನ ಆಯ್ಕೆ | KADEMGODLU AWARD 2022

ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ.ರತ್ನಾಕರ ಕುನುಗೋಡು ಕವನ ಸಂಕಲನ ಆಯ್ಕೆ | Prajavani

Friday, July 22, 2022

ಜಿ ರಾಜಶೇಖರ ಬರಹ | ಗಂಗಾಧರ ಚಿತ್ತಾಲರ ಕೊನೆಯ ಪದ್ಯಗಳು | Eedina | ಈದಿನ

ಜಿ ರಾಜಶೇಖರ ಬರಹ | ಗಂಗಾಧರ ಚಿತ್ತಾಲರ ಕೊನೆಯ ಪದ್ಯಗಳು | Eedina | ಈದಿನ

ಐ ಕೆ - ಬೊಳುವಾರು - ಎಚ್ಚರಿಸುತ್ತಿದ್ದ ಗುರು - / G Rajashekhar / I K Boluvar

ಕಳೆದ 42 ವರ್ಷಗಳಿಂದ ನನ್ನನ್ನು ಯಾವತ್ತೂ ಎಚ್ಚರದಿಂದ ಇರುವ ಹಾಗೆ ಎಚ್ಚರಿಸುತ್ತಿದ್ದ ಜಿ .ರಾಜಶೇಖರ್ ಅವರಿಗೆ ಗೌರವದ ನಮನಗಳು. 1985 ಇರಬೇಕು ನಾನು ರಂಗಭೂಮಿಗೆ ಸಂಬಂಧಿಸಿದ ಹಾಗೆ ಐದು ಚುಟುಕು ಕವಿತೆಗಳನ್ನು ಬರೆದು ಉದಯವಾಣಿಗೆ ಕಳುಹಿಸಿದ್ದೆ.ಭಾನುವಾರದ ಪುರವಣಿಯಲ್ಲಿ ಅದು ಪ್ರಕಟವೂ ಆಗಿತ್ತು. ಅದನ್ನು ನೋಡಿದ ಜಿ. ರಾಜಶೇಖರ್ ನನಗೆ ಪತ್ರ ಬರೆದಿದ್ದರು. ಚೆನ್ನಾಗಿದೆ. ನೀನು ಚಂದ ಕವಿತೆ ಬರೆಯಬಲ್ಲೆ. ಅದನ್ನು ಮುಂದುವರಿಸು ಅಂತ. ಆದರೆ ನಾನು ಅವರ ಮಾತಿಗೆ ಗೌರವ ನೀಡಲಿಲ್ಲವೇನೋ….ಮುಂದೆಂದೂ ಕವಿತೆ ಬರೆಯುವುದಾಗಲಿ ಪ್ರಕಟಿಸುವುದಾಗಲಿ ಮಾಡಲೇ ಇಲ್ಲ.ಕ್ಷಮಿಸಿ ಸರ್ ನಿಮ್ಮೆಲ್ಲ ಮಾತುಗಳನ್ನು ಪುಸ್ತಕಗಳನ್ನು ಭಾಷಣಗಳನ್ನು ಅಪಾರವಾಗಿ ಗೌರವಿಸುವವನು ನಾನು.ನಿಮ್ಮಿಂದಲೇ ಪ್ರಭಾವಿತನೂ ಆದವನು. ಹಾಗೆ ಮಾಡದೆ ಇದ್ದುದ್ದಕ್ಕಾಗಿ ನನ್ನನ್ನು ಕ್ಷಮಿಸುತ್ತೀರಿ ಎಂದು ನಂಬುವೆ . ಮಗಳು 'ಸಹಮತ' ಜಿ.ರಾಜಶೇಖರ್ ಪರಿಚಯದಿಂದ ತುಂಬಾ ಪ್ರಭಾವಿತಳಾದವಳು. ಅವಳ ಬರಹವನ್ನೂ ಇಲ್ಲಿ ಸೇರಿಸಿದ್ದೇನೆ ನಾನಾವಾಗ ಎಂಟನೆಯ ತರಗತಿಯಲ್ಲಿದ್ದೆ. ಸಾಗರ ತಾಲೂಕಿನ‌ ತುಮರಿಯಲ್ಲಿ ಸಂಸ್ಕೃತಿ ಶಿಕ್ಷಣ ಶಿಬಿರ ನಡೆಯುತ್ತಿತ್ತು. ಎಪ್ರಿಲ್ ತಿಂಗಳ‌ ಬಿರು ಬೇಸಿಗೆಯಲ್ಲಿ ಸಮಾಜ, ಶಿಕ್ಷಣ, ರಂಗಭೂಮಿ, ಸಂಗೀತ, ಸಿನೆಮಾ ಎಂದೆಲ್ಲಾ ಮಾತುಕತೆ, ಕಾರ್ಯಗಾರ ನಡೆಯುತ್ತಿತ್ತು. ಒಂದು ದಿನ ರಾತ್ರಿ ಎಲ್ಲರೂ "ರಾಜಶೇಖರ್ ಬರುತ್ತಾರೆ, ರಾಜಶೇಖರ್ ಬರುತ್ತಾರೆ" ಎಂದು ಗಾಬರಿಯಿಂದ ಪಿಸುಗುಡುತ್ತಿದ್ದರು. ಇನ್ನೂ ಪ್ರಪಂಚ ನೋಡಿರದ ನನಗೆ, ಇನ್ನೊಬ್ಬ ಖಾದಿ ಜುಬ್ಬ, ಗಡ್ಡದಾರಿ, ಆಜಾನುಬಾಹು, ಎಲೆ ಅಡಿಕೆ ಮೆಲ್ಲುತ್ತಾ ಲೆಕ್ಚರ್ ಕೊಡಬಹುದು, ಇನ್ನೂ ಮಿಡಲ್ ಸ್ಕೂಲಿನಲ್ಲಿರುವ ನನ್ನಂತವರಿಗೆ ಏನೂ ಅರ್ಥವಾಗಲಾರದು ಎಂದು ಕೊಂಡೆ. ಮರುದಿನ‌ ಹತ್ತು ಗಂಟೆಯ ಹೊತ್ತಿಗೆ ಚೆಕ್ಸು ಷರ್ಟು, ಕರಿ ಬಣ್ಣದ ಪಾಂಟು ತೊಟ್ಟ, ಅಷ್ಟೇನೂ ತೂಕವಿಲ್ಲದ ವ್ಯಕ್ತಿ ರೂಮಿನ ಬಳಿ ಬರುತ್ತಿರುವುದು ನೋಡಿ ಇವೆರೇ ರಾಜಶೇಖರ ಇರಬೇಕೆಂದು ಅಂದುಕೊಂಡು ಎರಡೂ ಕೈ ಮೇಲೆತ್ತಿದೆ. ಎಂದೂ ಮಾತು ಶುರು ಹಚ್ಚದವಳು ಸುಮ್ಮನೆ, "ಉಡುಪಿಯಿಂದ ಎಷ್ಟು ಹೊತ್ತಿಗೆ ಹೊರಟಿರಿ" ಎಂದು ಕೇಳಿದಾಗ, ಆ ವ್ಯಕ್ತಿ "ಉಡುಪಿಯಿಂದ ಬಂದವರು ಈಗಾಗಲೇ ರೂಮಿನಲ್ಲಿ ಕುಳಿತಿದ್ದಾರೆ" ಎಂದಾಗ ಪೇಚುಗೊಂಡಿದ್ದೆ. ತಲೆತಗ್ಗಿಸಿ ರೂಮಿನ‌ ಬಳಿ‌ ನಡೆದು ಇಣುಕಿ ನೋಡಿದಾಗ, ಅಲ್ಲೂ ಒಬ್ಬ ಚೆಕ್ಸು ಷರ್ಟಿನ, ದಪ್ಪ ಕನ್ನಡಕ ಧರಿಸಿದ ವ್ಯಕ್ತಿ ತಲೆತಗ್ಗಿಸಿ ಪುಸ್ತಕ‌ ಓದುತ್ತಿದ್ದರು. ರಾಜಶೇಖರ ರಾಜರಂತೇನೂ ಕಾಣಲಿಲ್ಲ ಬದಲಾಗಿ ನಮ್ಮ ನಿಮ್ಮಂತಹ ಸರಳ, ಗಂಭೀರ ವ್ಯಕ್ತಿಯಾಗಿ ತೋರಿದರು. ಇದು ರಾಜಶೇಖರ ಅವರ ಜೊತೆ ನನ್ನ ಮೊದಲ‌ ಭೇಟಿ. ಯಾರೊಂದಿಗೂ ಮಾತನಾಡದ, ಮಾತು ನುಂಗಿಕೊಂಡು ಇದ್ದ ನನಗೆ ಇವರ ಸರಳತೆ ನೋಡಿ ಸಂತೋಷ, ಆಶ್ಚರ್ಯ, ದಿಗಿಲು ಎಲ್ಲ ಒಟ್ಟಿಗೇ ಆಗುತ್ತದೆ. ಇಂದು ನನ್ನಲ್ಲಿ ಅಲ್ಪ ಮಟ್ಟಿಗಾದರೂ ಸಮಾಜದ ಬಗ್ಗೆ ಅರಿವು, ಕಾಳಜಿ ಇದ್ದರೆ ಅದಕ್ಕೆ ಕಾರಣ ಜಿ.‌ರಾಜಶೇಖರ್ ರಂತಹ ಕೆಲವೇ ಕೆಲವು ವ್ಯಕ್ತಿ ಗಳು ಎಂದು ಅಳುಕಿಲ್ಲದೆ ಹೇಳಬಲ್ಲೆ. * * * ಅಂದು ಮೊದಲ‌ ತರಗತಿ ಅವರದ್ದೇ ಆಗಿತ್ತು.‌ "ಆವರಣ" ಕಾದಂಬರಿ ಕುರಿತಾಗಿ ಮಾತನಾಡುವವರಿದ್ದರು. ನಾವೆಲ್ಲ ಕುತೂಹಲದಿಂದ ಕಣ್ಣು , ಕಿವಿ ಅಗಲಿಸಿ ಕೇಳಲು ಸಿದ್ಧವಾಗಿತ್ತಿದ್ದಂತೆಯೇ, "ಆ-ವ-ರ-ಣ.‌ ಇದು ಕಥೆಯೂ ಅಲ್ಲದ,‌ ಕಾದಂಬರಿಯೂ ಅಲ್ಲದ ಹೇಸರಗತ್ತೆ" ಎಂದು ಶುರುಮಾಡಿದರು. ಯಾರ ಮಾತುಗಳು ನನಗೆ ಅರ್ಥವಾಗುವುದಿಲ್ಲ ಎಂದುಕೊಂಡಿದ್ದೆನೋ, ಯಾವ ವಿಚಾರಗಳು ನನ್ನ ತಲೆಗೆ ಹೋಗುವ ವಯಸ್ಸಲ್ಲವಿದು ಎಂದು ಕೊಂಡಿದ್ದೆನೋ ಅವೆಲ್ಲವನ್ನೂ ಮೀರಿ ನನ್ನಂತಹ ಒಬ್ಬಳು ಮಿಡಲ್ ಸ್ಕೂಲಿನ ಹುಡುಗಿಗೂ ಅರ್ಥ ವಾಗುವಂತೆ, ಮನ ತಟ್ಟುವಂತೆ, ನೇರವಾಗಿ ಮಾತನಾಡಿದ್ದರು. ತರಗತಿ ಮುಗಿಯುವ ಹೊತ್ತಿಗೆ ಅವರ ಮಾತುಗಳಿಗೆ ಮಾರು ಹೋಗಿಯಾಗಿತ್ತು. ಅಪ್ಪ ನನ್ನನ್ನು ಕರೆದು ಅವರ ಬಳಿ ಪರಿಚಯಿಸಿದಾಗ ನನ್ನ ಹೆಸರು ತರಗತಿ ಕೇಳದೆ, "ಪುಸ್ತಕ ಓದುವ ಅಭ್ಯಾಸ ಇದೆಯಾ?" "ಹೌದು" "ಹಾಗಾದರೆ, ದಯವಿಟ್ಟು ಆವರಣ ಓದಬೇಡ" ಎಂದಿದ್ದರು.‌ ಅವರ ಮಾತನ್ನು ಇನ್ನೂ ಪಾಲಿಸುತ್ತಲೇ ಬಂದಿದ್ದೇನೆ. * * * * ಮುಂದೆ ಮೈಸೂರಿನಲ್ಲಿ ಓದುವಾಗ ಅದು ಹೇಗೋ ರೇಮಂಡ್‌ ವಿಲಿಯಂಸ್ ರ ಪುಸ್ತಕ ಕೈಗೆ ಸಿಕ್ಕಿ, ಓದು ಮುಗಿಸಿ ಮುದಗೊಂಡು ಅಪ್ಪನ ಬಳಿ "ಇದನ್ನು ಯಾರಾದರು ಕನ್ನಡಕ್ಕೆ ಭಾಷಾಂತರ ಮಾಡಿದ್ಡರೆ ಅವರಿಗೆ ಪುಣ್ಯ ಬರುವುದು" ಎಂದಿದ್ದೆ.‌ ಅವಾಗ ತಂದೆ, "ಆ ಪುಣ್ಯ ಕಟ್ಟಿಕೊಂಡವರು ಉಡುಪಿಯಲ್ಲೇ ಇದ್ದಾರೆ. ನಿನಗವರು ಗೊತ್ತು" ಎಂದು ಹಳದಿ ಬಣ್ಣದ ಬೈಂಡಿನ ಸಣ್ಣ ಪುಸ್ತಕ‌ ತಂದು ನನ್ನ ಕೈಯಲ್ಲಿರಿಸಿದರು. ಅದರಲ್ಲಿ "ಅನುವಾದ : ಜಿ‌.‌ ರಾಜಶೇಖರ್" ಎಂದು ಬರೆದಿತ್ತು. ಇದು ಅನುವಾದಕ್ಕೆ ದಕ್ಕಿದ ಪುಣ್ಯ ಎಂದುಕೊಂಡೆ. ***** ಮುಂದೆ ಯಾವುದಾದರು ವಿಚಾರ ಕಲಿಯಬೇಕೆಂದಿದ್ದರೆ ರಾಜಶೇಖರ್ ಅಂತವರಿಂದಲೇ ಕಲಿಯಬೇಕು, ಎಂತಹ ಸ್ಥಿತಿಯಲ್ಲೂ ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಮನಸ್ಸು-ದೇಹವನ್ನು ಅಣಿಗೊಳಿಸಬೇಕು.. ಇಂದು ವಿಜ್ಞಾನ ಶಿಕ್ಷಣದಲ್ಲಿ ಕೆಲಸ ಮಾಡುತ್ತಿರುವ ನನಗೆ ಕಾಲೇಜು-ಯುನಿವರ್ಸಿಟಿಯಲ್ಲಿ ದಕ್ಕಿದ ಶಿಕ್ಷಣಕ್ಕಿಂತ, ರಾಜಶೇಖರ ಅವರಂತಹ ವ್ಯಕ್ತಿಗಳ ಜೊತೆಗಿನ ಒಡನಾಟದಿಂದಲೇ ವೈಜ್ಞಾನಿಕ ಮನೋಭಾವ ವನ್ನು ಗಟ್ಟಿಯಾಗಿ ಬೆಳೆಸಿಕೊಳ್ಳಲು ಸಾಧ್ಯ ವಾಯಿತು. ಪ್ರತಿಯೊಂದು ವಿಚಾರ ವನ್ನು ವಿವರವಾಗಿ ನೋಡಿ, ಪ್ರಶ್ನೆ ಮಾಡಿ, ಗುದ್ದಾಡಿ, ತಮ್ಮ ನಿಲುವನ್ನು ಓದುಗರಿಗೆ, ಕೇಳುಗರಿಗೆ ಅರ್ಥ ವಾಗುವಂತೆ ವಿವರಿಸುವ ಇವರ ರೀತಿಗೆ, ಕಾಳಜಿಗೆ, ವಿದ್ವತ್ತಿಗೆ ಇಂದಿಗೂ ಮಾರು ಹೋಗುತ್ತೇನೆ. **** ರಾಜಶೇಖರ ಅವರ ಆರೋಗ್ಯ ದ ಬಗ್ಗೆ ಗೆಳೆಯ ಸಂವರ್ತನಿಂದ ಆಗ್ಗಾಗ್ಗೆ ನ್ಯೂಸ್ ಸಿಗುತ್ತಿತ್ತು. ಎಷ್ಟೋ ಬಾರಿ ಎದ್ದು ಹೋಗಿ ನೋಡಿ ಬರೋಣ ಎಂದು ಅನ್ನಿಸಿಯೂ ಹೋಗಲಾರದೆ ಕುಳಿತೆ. ಇಂದು ಇದನ್ನು ಬರೆಯುತ್ತಾ ಕೈಗಳು ನಡುಗುತ್ತಿವೆ, ಕಣ್ಣೀರು ಕೆನ್ನೆಯನ್ನು ದಾಟಿ ಕೆಳಗುರುಳುತ್ತಿವೆ. ಅಗಾಧ ನೋವು ಹೃದಯದಲ್ಲಿದೆ. ಇನ್ನೆಂದೂ ಸಿಗಲಾರದ ಒಬ್ಬ ಶ್ರೇಷ್ಠ ಗುರುವಿನ ಮರುಭೇಟಿಗೆ ಜೀವನದುದ್ದಕ್ಕೂ ಕಾಯಬೇಕಿದೆ...

"ಜಿ. ರಾಜಶೇಖರ್ ಅಗಲಿಕೆ ನಮಗೆ ಆಘಾತಕಾರಿ" | G Rajashekhar

ಅಗಲಿದ ಸತ್ಯಶೋಧಕ ಜಿ.ರಾಜಶೇಖರ್ | G Rajashekhar |

Thursday, July 14, 2022

ನಾಗೇಶ್ ಹೆಗಡೆ - ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ / Nagesh Hegade

ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ [ಇಂದಿನ ಪ್ರಜಾವಾಣಿಯ ‘ವಿಜ್ಞಾನ ವಿಶೇಷʼ ಅಂಕಣದಲ್ಲಿ ಪ್ರಕಟವಾದ ನನ್ನ ಬರಹ ಇದು: ವೇದಗಳು ಹುಟ್ಟಿದ್ದೇ ಭಾರತದಲ್ಲಿ ಎಂದು ಸನಾತನವಾದಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಈ ಕುರಿತು ವಿಜ್ಞಾನಿಗಳಿಗೆ ಲಭಿಸಿದ ಸಾಕ್ಷ್ಯಗಳ ಪ್ರಕಾರ ಆರ್ಯರು ತಮ್ಮೊಂದಿಗೆ ಸಂಸ್ಕೃತಜನ್ಯ ಭಾಷೆಗಳನ್ನೂ ರಥಾಶ್ವಗಳನ್ನೂ ಹೋಮಹವನಾದಿ ವೇದಕಾಲೀನ ವಿಧಿವಿಧಾನಗಳನ್ನೂ ತಂದರು. ಕ್ರಮೇಣ ಇವೆಲ್ಲ ನಮ್ಮ ದ್ರಾವಿಡ ಸಂಸ್ಕೃತಿಯೊಂದಿಗೆ ಮಿಳಿತವಾದವು, ರೂಪಾಂತರಗೊಂಡವು, ವಿಕಾಸವಾದವು. ಆದರೆ ಸನಾತನವಾದಿಗಳು ಇದನ್ನು ಒಪ್ಪುತ್ತಿಲ್ಲ. ವೇದಕಾಲೀನ ಜ್ಞಾನವೆಲ್ಲವೂ ಇಲ್ಲಿಯೇ ಉಗಮವಾಗಿ ಆಚೀಚಿನ ಭೂಭಾಗಗಳಿಗೆ ವಿಸ್ತರಿಸಿದವು ಎಂಬುದು ಅವರ ವಾದ. ಈ ವಾದವನ್ನು ಪುಷ್ಟೀಕರಿಸಲೆಂದೇ ಹೊಸ ಡಿಎನ್‌ಎ ಪ್ರೊಫೈಲಿಂಗ್‌ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ತರಿಸಿತೆ? ಗತಕಾಲವನ್ನು ಮತ್ತೆ ಮತ್ತೆ ಕೆದಕುವ ಉದ್ದೇಶ ಏನಿದ್ದೀತು? ಇದು ಈ ಲೇಖನದ ಸಾರಾಂಶ. ] * ಅತ್ತ ಏಕನಾಥ ಶಿಂದೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದ್ದ ಅವಧಿಯಲ್ಲೇ ಬೆಂಗಳೂರಿನಲ್ಲಿ ಇನ್ನೊಬ್ಬ ಶಿಂದೆ ಇಡೀ ದೇಶದ ಚಿಂತಕರ ವಲಯದಲ್ಲಿ ಆತಂಕ ಸೃಷ್ಟಿಸಿದ್ದರು. ಇವರು ಪ್ರೊ. ವಸಂತ ಶಿಂದೆ; ಇಲ್ಲಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ‘ನಿಯಾಸ್‌‘ National Institute of Advanced Studiesನಲ್ಲಿ ಪುರಾತತ್ವತಜ್ಞ. ಆಗಿದ್ದೇನೆಂದರೆ, ಮನುಷ್ಯರ ತಳಿಗುಣ ಶೋಧನೆಗೆಂದು ಒಂದಿಷ್ಟು ಹೊಸ ಯಂತ್ರಗಳನ್ನು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ತರಿಸಿಕೊಳ್ಳುತ್ತಿದೆ ಎಂದು ದಿಲ್ಲಿಯ ಪತ್ರಿಕೆಯೊಂದು ಜೂನ್‌ 1ರಂದು ವರದಿ ಮಾಡಿತು. ವಿಜ್ಞಾನ ತಂತ್ರಜ್ಞಾನ ಇಲಾಖೆಯ ಬದಲು ಸಂಸ್ಕೃತಿ ಸಚಿವಾಲಯಕ್ಕೆ ತಳಿಶೋಧದ ಯಂತ್ರಗಳೇಕೆ ಎಂದು ಮಾಧ್ಯಮಗಳು ತನಿಖೆಗೆ ಇಳಿದವು. ಭಾರತೀಯರ ಜನಾಂಗೀಯ ಲಕ್ಷಣಗಳನ್ನು ಪತ್ತೆಹಚ್ಚಲೆಂದು ಪ್ರೊ. ವಸಂತ ಶಿಂದೆಯವರ ಶಿಫಾರಸಿನ ಮೇರೆಗೆ ಡಿಎನ್‌ಎ ಪ್ರೊಫೈಲಿಂಗ್‌ ಯಂತ್ರಗಳನ್ನು ತರಿಸಲು ಸಚಿವಾಲಯ ಹೊರಟಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿತು. ಅಷ್ಟಾಗಿದ್ದೇ ತಡ, ಸರಕಾರದ ಈ ಸನ್ನಾಹವನ್ನು ವಿರೋಧಿಸಿ ದೇಶದ ಹೆಸರಾಂತ 120 ವಿಜ್ಞಾನಿಗಳು, ಇತಿಹಾಸಕಾರರು ಮತ್ತು ಸಮಾಜವಿಜ್ಞಾನಿಗಳು ಒಂದು ಜಂಟಿ ಹೇಳಿಕೆ ನೀಡಿದರು: “ಯಾರು ಮೇಲು, ಯಾರು ಕೀಳು ಎಂಬುದನ್ನು ಪತ್ತೆ ಹಚ್ಚಬೇಕೆನ್ನುವ ಇಂಥ ಅಸಂಬದ್ಧ ಮತ್ತು ಅಪಾಯಕಾರಿ ಸಂಶೋಧನೆಯನ್ನು ಕೈಗೊಂಡರೆ ಸಮಾಜದ ಶಾಂತಿಯನ್ನು ಕದಡಿದಂತಾಗುತ್ತದೆ; ಜನಾಂಗೀಯ ಸಂಶೋಧನೆಗೆ ಕೈ ಹಾಕಬೇಡಿ” ಎಂಬ ಅರ್ಥದ ಹೇಳಿಕೆ ಇವರದ್ದಾಗಿತ್ತು. ಮುಂಬೈ, ಕೋಲ್ಕತಾ, ದಿಲ್ಲಿ, ಬೆಂಗಳೂರು, ಸೋನೆಪತ್‌- ಹೀಗೆ ದೇಶದ ಪ್ರತಿಷ್ಠಿತ ವಿಜ್ಞಾನ ಕೇಂದ್ರಗಳ ತಜ್ಞರು ಒಟ್ಟಾಗಿ ದನಿ ಎತ್ತಿದ್ದೇ ತಡ, ಪ್ರೊ. ಶಿಂದೆ ತಾನು ಜನಾಂಗೀಯ ಗುಣಪತ್ತೆಗೆಂದು ಈ ಯಂತ್ರಗಳ ಶಿಫಾರಸು ಮಾಡಿಲ್ಲ ಎಂದರು. ಸಂಸ್ಕೃತಿ ಇಲಾಖೆಯೂ ಧಿಗ್ಗನೆದ್ದು ಮಾಧ್ಯಮಗಳ ‘ತಪ್ಪುʼ ವರದಿಯನ್ನು ಖಂಡಿಸಿತು. ಡಿಎನ್‌ಎ ಯಂತ್ರಗಳನ್ನು ತರಿಸುವಲ್ಲಿ ಜನಾಂಗೀಯ ಶ್ರೇಷ್ಠತೆಯನ್ನು ಹುಡುಕುವ ಉದ್ದೇಶ ಇಲ್ಲವೆಂದು ಹೇಳಿತು. ಹಾಗಿದ್ದರೆ ಯಾವ ಉದ್ದೇಶಕ್ಕೆ ಇವನ್ನು ತರಿಸಲಾಗುತ್ತಿದೆ ಎಂಬ ವಿವರಣೆಯನ್ನು ಮಾತ್ರ ಆಗ ನೀಡಲಿಲ್ಲ. ಜನಾಂಗೀಯ ಶ್ರೇಷ್ಠತೆಯ ಪ್ರಶ್ನೆ ಬಂದಾಗಲೆಲ್ಲ ವಿಜ್ಞಾನಿಗಳು ಮತ್ತು ಪ್ರಾಜ್ಞರು ಹಾವು ತುಳಿದಂತೆ ಬೆಚ್ಚುತ್ತಾರೆ. ಏಕೆಂದರೆ ತಳಿ ಶ್ರೇಷ್ಠತೆಯ ಭ್ರಮೆಯಿಂದಾಗಿಯೇ ನಾತ್ಸಿ ಜರ್ಮನಿಯಲ್ಲಿ60 ಲಕ್ಷಕ್ಕೂ ಹೆಚ್ಚು ಯಹೂದ್ಯರ ನರಮೇಧ ನಡೆದಿತ್ತು. ಅದಕ್ಕೂ ಮೊದಲು, 1920ರ ಆಜೂಬಾಜಿನಲ್ಲಿ ‘ಯೂಜೆನಿಕ್ಸ್‌‘ ಹೆಸರಿನಲ್ಲಿ ಶುದ್ಧತಳಿಯ ಮಕ್ಕಳನ್ನು ಪಡೆಯಬೇಕೆಂಬ ಹುಚ್ಚು ಅಮೆರಿಕದಲ್ಲೂ ಆವರಿಸಿತ್ತು. ಈ ಹಪಾಹಪಿಗೆ ಕೆಲಕಾಲ ವಿಜ್ಞಾನಿಗಳೂ ತಪ್ಪು ಹೆಜ್ಜೆ ಇಡುವಂತಾಗಿತ್ತು . ಆದರೆ ವಿಜ್ಞಾನದ ವಿಶೇಷ ಏನೆಂದರೆ, ಅದು ತನ್ನ ತಪ್ಪನ್ನು ತಾನು ತಿದ್ದಿಕೊಳ್ಳುತ್ತ ಸಾಗುತ್ತದೆ. 1950ರ ದಶಕದ ನಂತರ ತಳಿವಿಜ್ಞಾನ ವಿಕಾಸವಾಗುತ್ತ ಬಂದಂತೆ, ಇಡೀ ಮಾನವ ಜನಾಂಗ ಒಂದೇ ಎಂಬುದು ಗೊತ್ತಾಯಿತು. ಮನುಷ್ಯರ ಸಂಪೂರ್ಣ ತಳಿನಕ್ಷೆಯನ್ನು ರೂಪಿಸಿದ ಮೇಲೆ, ನಾಗರಿಕತೆಯ ಕೆಲವು ಭಿನ್ನತೆಗಳನ್ನು ಗುರುತಿಸಬಹುದೇ ವಿನಾ ‘ಜನಾಂಗೀಯ’ (race) ವೈವಿಧ್ಯ ಎಂಬುದು ಇಲ್ಲವೇ ಇಲ್ಲವೆಂದೂ ಜಗತ್ತಿನ ಎಲ್ಲರ ರಕ್ತದಲ್ಲೂ ಆಫ್ರಿಕನ್‌ ತಳಿಗುಣವೇ ಇದೆಯೆಂದೂ ವಿಜ್ಞಾನ ಜಗತ್ತು ಒಪ್ಪಿಕೊಂಡಿದೆ. ಹಾಗಿದ್ದರೆ ಏಕೆ ಡಿಎನ್‌ಎ ಪ್ರೊಫೈಲ್‌ ಸಲಕರಣೆಗಳ ಖರೀದಿ? ಅದಕ್ಕೆ ಹಿನ್ನೆಲೆ ಹೀಗಿದೆ: ಭಾರತದ ವಿದ್ವಜ್ಜನರಲ್ಲಿ ಎರಡು ಗುಂಪುಗಳಿವೆ: ವೇದಗಳು, ಯಜ್ಞ-ಯಾಗ, ರಥ-ಕುದುರೆ ಮತ್ತು ಅಸ್ತ್ರಶಸ್ತ್ರಗಳ ಜ್ಞಾನಪರಂಪರೆ ಹುಟ್ಟಿದ್ದೇ ನಮ್ಮಲ್ಲಿ ಎಂದು ವಾದಿಸುವ ಸನಾತನಿಗಳ ಒಂದು ಗುಂಪು; ಇವರದ್ದು, ಜಗತ್ತಿನ ಅತ್ಯಂತ ಪುರಾತನ ಸಂಸ್ಕೃತಿ ಪರಂಪರೆ ನಮ್ಮದೆಂದು ಬಿಂಬಿಸುವ ವರ್ಗ. ಇನ್ನೊಂದು ಗುಂಪಿನ ವೈಜ್ಞಾನಿಕ ಅಧ್ಯಯನದ ಪ್ರಕಾರ ಅದು ಹಾಗಲ್ಲ; ಆಫ್ರಿಕದ ಮೂಲದಿಂದ ಹೊರಟ ಒಂದು ಕವಲಿನ ಆದಿಜನರು 65 ಸಾವಿರ ವರ್ಷಗಳೀಚೆ ಮೂರು ಅಥವಾ ನಾಲ್ಕು ಅಲೆಗಳಲ್ಲಿ ಮತ್ತೆ ಮತ್ತೆ ಭಾರತ, ಬರ್ಮಾ, ಇಂಡೊನೇಶ್ಯ, ಆಸ್ಟ್ರೇಲಿಯಾ ಕಡೆ ಸಾಗಿ ನೆಲೆಸಿದ್ದಾರೆ. ಸುಮಾರು 4000 ವರ್ಷಗಳ ಈಚಿನ ಕೊನೆಯ ಅಲೆಯಲ್ಲಿ ಬಂದವರು (ಆರ್ಯರು) ತಮ್ಮ ಜತೆ ಸಂಸ್ಕೃತಜನ್ಯ ಭಾಷೆಯನ್ನೂ ರಥಾಶ್ವಗಳನ್ನೂ ತಂದಿದ್ದಾರೆ. ಹೆಚ್ಚಿನ ಪಾಲು ಉತ್ತರ ಭಾರತದಲ್ಲಿ ನೆಲೆಸಿ, ಕ್ರಮೇಣ ಅವರು ದೇಶದಲ್ಲೆಲ್ಲೆಡೆ ಬೆರತು ಹೋಗಿದ್ದಾರೆ. ಹರ್ಯಾಣಾದ ರಾಖೀಗಢಿ ಎಂಬಲ್ಲಿ ಸಿಕ್ಕ 5000 ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳಲ್ಲಿ ಮತ್ತು ಮಹಿಳೆಯ ಮೂಳೆಯಲ್ಲಿ ಸಿಕ್ಕ ಡಿಎನ್‌ಎಯಲ್ಲಿ ಈ ಯಾವ ಆರ್ಯನ್‌ ಲಕ್ಷಣಗಳೂ ಇಲ್ಲ ಎಂಬುದನ್ನು111 ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವೊಂದು ಪತ್ತೆ ಹಚ್ಚಿತ್ತು. ಮಧ್ಯ ಏಷ್ಯದಲ್ಲಿ ಸಿಕ್ಕ 523 ಅಸ್ಥಿಪಂಜರಗಳ ಡಿಎನ್‌ಎ ಜೊತೆ ರಾಖೀಗಢಿಯ ಮಹಿಳೆಯ ಶರೀರದಲ್ಲಿ ಸಿಕ್ಕ ಡಿಎನ್‌ಎಯ ತಾಳೆ ನೋಡಿ ಈ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ತಾನು ಕಂಡ ಸತ್ಯವನ್ನು 2019ರಲ್ಲಿ ಘೋಷಿಸಿದೆ. ವೇದ-ರಾಮಾಯಣಗಳೆಲ್ಲ ಐದಾರು ಸಾವಿರ ವರ್ಷಗಳ ಹಿಂದಿನದಾಗಿದ್ದರೆ, ಅವು ಆಚೆ ಎಲ್ಲೋ ಸೃಷ್ಟಿಯಾಗಿದ್ದು ಎಂಬ ಧ್ವನಿ ಅವರದ್ದಾಗಿತ್ತು. ಇದರಿಂದ ಸನಾತನವಾದಿ ಗುಂಪಿಗೆ ಹಿನ್ನಡೆ ಉಂಟಾಗಿದೆ. ಹೇಗಾದರೂ ಮಾಡಿ ಇವರು ವೇದಕಾಲೀನ ಭಾರತದ ಉಜ್ವಲ ಚರಿತ್ರೆ ಕುರಿತ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ. ಮೂಲತಃ ಭಾರತದಿಂದಲೇ ಹೊರ ಜಗತ್ತಿಗೆ ಜ್ಞಾನಧಾರೆ ಹರಿದು ಸಾಗಿದೆ ಎಂಬುದನ್ನು ಇವರು ತೋರಿಸಬೇಕಾಗಿದೆ. ಈ ಗುಂಪಿಗೆ ಸೇರಿದ ಪುರಾತತ್ವ ತಜ್ಞ ಪ್ರೊ. ವಸಂತ ಶಿಂದೆ (ಇವರು ಡಿಎನ್‌ಎ ತಜ್ಞ ಅಲ್ಲ) ಮತ್ತು ಲಖ್ನೋದ ಸೂಕ್ಷ್ಮಜೀವವಿಜ್ಞಾನಿ ಡಾ. ನೀರಜ್‌ ರಾಯ್‌ ಇಬ್ಬರೂ 111 ವಿಜ್ಞಾನಿಗಳ ನಿಲುವಿಗೆ ವಿರುದ್ಧವಾಗಿ, 2019ರ ಮಾಧ್ಯಮ ಗೋಷ್ಠಿಯಲ್ಲಿ ಭಾರತವೇ ಆರ್ಯರ ಮೂಲವೆಂಬ ಹೇಳಿಕೆ ನೀಡಿದ್ದರು (ತಮಾಷೆ ಏನೆಂದರೆ, ಆರ್ಯರು ಇಲ್ಲಿನವರಲ್ಲ ಎಂದು ಪ್ರತಿಪಾದಿಸುವ ವೈಜ್ಞಾನಿಕ ಪ್ರಬಂಧದ ಸಹಲೇಖಕರ ಪಟ್ಟಿಯಲ್ಲಿ ಪ್ರೊ. ಶಿಂದೆಯ ಹೆಸರೂ ಇದೆ! ಆದರೆ ಬೆಳಗಾಗುವುದರೊಳಗೆ ಇವರು ಪಕ್ಷಾಂತರಿ ಆಗಿದ್ದರು). ನಂತರದ ಅನೇಕ ಸಂದರ್ಶನಗಳಲ್ಲೂ ಈ ಇಬ್ಬರು ತಜ್ಞರು ತಮ್ಮ ವಾದವೇ (ಅಂದರೆ ಆರ್ಯರು ಬರುವುದಕ್ಕೆ ಮೊದಲೇ ಇಲ್ಲಿ ವೇದಗಳ ರಚನೆ ಆಗಿತ್ತು; ರಾಮಾಯಣ ಮಹಾಭಾರತ ನಡೆದಿತ್ತು ಎಂಬ ವಾದ) ಶೀಘ್ರದಲ್ಲಿ ಗೆಲ್ಲಲಿದೆ ಎಂದು ಹೇಳುತ್ತಿರುವುದನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ಹೇಗೂ ದಕ್ಷಿಣ ಭಾರತದ ಅನೇಕ ಕಡೆ (ಕರ್ನಾಟಕದ ಪಿಕ್ಲಿಹಾಳ, ತೆಲಂಗಾಣಾದ ನಾಲ್ಗೊಂಡಂ, ಖಮ್ಮಮ್‌ ಮತ್ತು ಆಂಧ್ರದ ಯಲ್ಲೇಶ್ವರಂನಲ್ಲಿ) ಉತ್ಖನನ ನಡೆಯುತ್ತಿದೆ. ಅಲ್ಲೇನಾದರೂ ಶುದ್ಧ ಭಾರತೀಯ (ಅಂದರೆ ಅಪ್ಪಟ ವೇದಕಾಲೀನ) ಡಿಎನ್‌ಎ ಸಿಗುತ್ತದೋ ನೋಡುವ ಆಸೆ ಇವರದು. ಅದಕ್ಕೇ ಹೊಸ ಡಿಎನ್‌ಎ ಯಂತ್ರಗಳು ಬೇಕಾಗಿರಬಹುದು. ವೇದಕಾಲೀನ ಜ್ಞಾನ ಪರಂಪರೆ ಇಡೀ ಮನುಕುಲಕ್ಕೆ ಹೆಮ್ಮೆಯದು ಹೌದು. ಆದರೆ ಅದು ಭಾರತದಲ್ಲೇ ಅರಳಿತೋ ಅಥವಾ ವಾಯವ್ಯದಿಂದ ಬಂತೋ - ಅದು ಹೇಗೂ ಇರಲಿ, ಅದಕ್ಕೆ ನಮ್ಮದೆಂಬ ಅತಿರಂಜಿತ ಬಣ್ಣ ಬ್ಯಾಗಡೆ ಬೇಡವೆಂದು ಅನೇಕ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿ, ಟೆಸ್ಟ್‌ಟ್ಯೂಬ್‌ ಬೇಬಿ, ವಿಮಾನದಂಥ ಅತಿಶಯಗಳ ಪಟ್ಟಿಯಲ್ಲಿ ವೇದಗಣಿತ ಕೂಡ ಸೇರಿದೆ. ವೇದದಲ್ಲಿ ಇರದಿದ್ದ ಈಚಿನ ಜ್ಞಾನಪಾಂಡಿತ್ಯವನ್ನೂ ವೇದಕಾಲದ್ದೇ ಎಂದು ಪ್ರತಿಪಾದಿಸಲಾಗುತ್ತಿದೆ. 1950ರ ದಶಕದಲ್ಲಿ ಪುರಿಯ ಶಂಕರಾಚಾರ್ಯ ಭಾರತೀ ಕೃಷ್ಣತೀರ್ಥರು (ಗಣಿತ ಮತ್ತು ಸಂಸ್ಕೃತ ಎರಡರಲ್ಲೂ ಪಾಂಡಿತ್ಯ ಇದ್ದವರು) ಶ್ಲೋಕಗಳ ಮೂಲಕ ವೇದಗಣಿತವನ್ನು ಸೇರಿಸಿದ್ದಾರೆಂದು ಹೆಸರಾಂತ ಗಣಿತ ತಜ್ಞ ಎಸ್‌ ಜಿ ದಾನಿಯವರು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. “ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ, ಮಾಧವರ ಕೊಡುಗೆಗಳೆಲ್ಲ ಶ್ಲಾಘನೀಯವೇ ಹೌದಾದರೂ, ಗತಕಾಲದ ಪರಂಪರೆಯ ಉತ್ಪ್ರೇಕ್ಷೆ ಬೇಡವೆಂದು ಪ್ರೊ. ದಾನಿ ಹೇಳುತ್ತಾರೆ. ಈಗ ಪ್ರೊ. ಶಿಂದೆಯ ವಿಚಾರಕ್ಕೆ ಮತ್ತೆ ಬರೋಣ. ಅವರ ಎಡಬಿಡಂಗಿ ನಿಲುವು ಮತ್ತು ಶ್ರೇಷ್ಠತೆಯ ಪೂರ್ವಗ್ರಹ ಇಡೀ ವಿಜ್ಞಾನಕ್ಕೇ ಅಪಚಾರವೆಂದು ಇನ್ನೊಬ್ಬ ಹೆಸರಾಂತ ವಿಜ್ಞಾನಿ ಡಾ. ಸಿ.ಪಿ. ರಾಜೇಂದ್ರನ್‌ (ಇವರೂ ಬೆಂಗಳೂರಿನ ನಿಯಾಸ್‌ನಲ್ಲಿ ಪ್ರೊಫೆಸರ್‌) ಹೇಳುತ್ತಾರೆ. ಜನಾಂಗೀಯ ಶ್ರೇಷ್ಠತೆಯ ಗೀಳಿನ ಹೊಗೆ ಈಗ ಅನೇಕ ರಾಷ್ಟ್ರಗಳಲ್ಲಿ ಮತ್ತೆ ಹೆಡೆಯಾಡುತ್ತಿರುವಾಗ ವಿಜ್ಞಾನಿಗಳು ಅದಕ್ಕೆ ಗಾಳಿ ಹಾಕಬಾರದು ತಾನೆ?

Thursday, June 30, 2022

ಪಾ ವೆಂ ಆಚಾರ್ಯ - ಬತ್ತಲೆ- ಮಂತ್ರದಲ್ಲಿ , ಮಾಟದಲ್ಲಿ , ಭಕ್ತಿಯಲ್ಲಿ -

<ಪಾ ವೆಂ ಅಚಾರ್ಯರ ಈ ಲೇಖನ - ಬತ್ತಲೆ , ಮಂತ್ರದಲ್ಲಿ , ಮಾಟದಲ್ಲಿ , ಭಕ್ತಿಯಲ್ಲಿ " -- ಕಸ್ತೂರಿ ಮಾಸಪತ್ರಿಕೆ ಯ ಮೇ 1986 ರ ಸಂಚಿಕೆಯಲ್ಲಿ ಪ್ರಕಟವಾಗಿದೆ . ಪುನರ್ಮುದ್ರಣ - ಕಸ್ತೂರಿ - ಜುಲೈ 2022

Wednesday, June 29, 2022

ಸಂಶೋಧನೆ ಅಂದ್ರೆ ಏನು?| ಕಾಣದ ಕಲಬುರ್ಗಿ Part 11 Kaanada Kalburgi | DR. MM Kal...

Day - A - 1/3 Kumaravyasa Bharata- ಕುಮಾರವ್ಯಾಸ ಭಾರತ - ಡಾ / ಜ್ಯೋತಿ ಶಂಕರ್/ Kumaravyasa

ಪ್ರಭಾಕರ ಕಾರಂತ - ಬಾಲವನದಲ್ಲಿ ಕಾರಂತರು / Shivarama karanth

ಆಪ್ತ ಬರಹಗಳ ಬಾಲವನದಲ್ಲಿ ಭಾರ್ಗವ ಡಾ.ಶಿವರಾಮ ಕಾರಂತರ ಕುರಿತು ಅನೇಕ ಆಪ್ತ ಬರಹಗಳನ್ನೊಳಗೊಂಡ "ಬಾಲವನದಲ್ಲಿ ಭಾರ್ಗವ" ಒಂದು ಅಪರೂಪದ ಪುಸ್ತಕ. ಕಾರಂತರ ಬದುಕು ಬರಹದ ಕುರಿತು ಆಗಲೇ ಅನೇಕಾನೇಕ ಪುಸ್ತಕಗಳು ಬಂದಿದ್ದು ಹೊಸತಾಗಿ ಪ್ರಕಟಿಸುವವರಿಗೆ ಸವಾಲುಗಳು ಇದ್ದೇ ಇರುತ್ತದೆ. ಏನು ಬರೆದರೂ ಆಗಲೇ ಎಲ್ಲೋ ಪ್ರಕಟವಾಗಿರುವ ಸಂಗತಿ ಆಗಿರಬಹುದು. ಆದರೆ ಈ ಸವಾಲನ್ನು ಈ ನವ ಕೃತಿ ಮೀರಿ ನಿಂತಿದೆ. ಕಾರಂತರ ಜೀವನ ಸಮೃದ್ಧಿ ಒಂದು ಕಡಲಿದ್ದಂತೆ. ಅಲ್ಲಿ ಮೊಗೆದಷ್ಟೂ ಮುತ್ತು ರತ್ನಗಳಿವೆ. ಅದು ಈ ಕೃತಿಯ ಮೂಲಕ ಮಗದೊಮ್ಮೆ ಸ್ಪಷ್ಟವಾಗಿದೆ. ಶಿಕ್ಷಕ ಅನಂತಕೃಷ್ಣ ಹೆಬ್ಬಾರ್ ಜ್ಞಾನಪೀಠ ಬಂದ ಕಾರಂತರನ್ನು ತಮ್ಮ ಶಾಲೆಗೆ ಕರೆಸಿ ಗೌರವಿಸಲೆಂದು ಅವರ ಸಾಲಿಗ್ರಾಮ ಮನೆಗೆ ಹೋಗುತ್ತಾರೆ. ಬಾಗಿಲು ತೆರೆದ ಕಾರಂತರು 'ಏನು ಬಂದಿರಿ ಎಂದು ಹೊರಗೆ ನಿಲ್ಲಿಸಿಯೇ ಪ್ರಶ್ನಿಸುತ್ತಾರೆ. ವಿವರ ಹೇಳುತ್ತಿದ್ದಂತೆ "ನಾನು ಬರುವುದಿಲ್ಲ" ಎಂದು ಹೇಳಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೆಬ್ಬಾರರಿಗೆ ಪೆಚ್ಚೆನಿಸಿ ಅವರು ಹಿರಿಯಡ್ಕ ಗೋಪಾಲರಾಯರ ಮನೆಗೆ ಹೋಗಿ ತಮಗಾದ ಅನುಭವ ಹಂಚಿಕೊಳ್ಳುತ್ತಾರೆ. ಕಡೆಗೆ ಗೋಪಾಲರಾಯರೂ ಹೆಬ್ಬಾರರನ್ನು ಕರೆದುಕೊಂಡು ಕಾರಂತರ ಮನೆಗೆ ಬರುತ್ತಾರೆ. ಮತ್ತೆ ಬಾಗಿಲು ತೆರೆದ ಕಾರಂತರು ಇಬ್ಬರನ್ನು ನೋಡಿ ಆಗಲೇ ಆಗೋಲ್ಲ ಅಂದಾಗಿದೆ. ಪುನಃ ಜೊತೆಗೂಡಿ ಬಂದಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ರಾಯರಾಗ ಏಕಾಗಿ ಬರಲ್ಲ ಎಂಬ ಉತ್ತರಕ್ಕಾಗಿ ಬಂದೆವು ಎನ್ನುತ್ತಾರೆ. "ನಾನು ಜ್ಞಾನಪೀಠದಲ್ಲಿ ಕೊಟ್ಟದ್ದನ್ನು ಪೆಟ್ರೋಲ್ ಸುಟ್ಟು ಖಾಲಿ ಮಾಡುವೆ ಎಂದು ಹರಕೆ ಹೊತ್ತಿಲ್ಲ" ಎಂದು ಗರಂ ಆಗಿಯೇ ಉತ್ತರಿಸುತ್ತಾರೆ. ಹಿಂದಿನ ದಿನ ಇದೇ ಉದ್ದೇಶದಿಂದ ಕರೆದಿದ್ದ ಯಾವುದೋ ಶಾಲೆಯವರು ಕಾರಿನ ಪೆಟ್ರೋಲ್ ಹಣವನ್ನೂ ಕೊಡದೇ ಕಳಿಸಿರುತ್ತಾರೆ. ಅಂತೂ ಹೆಬ್ಬಾರರು ಕಾರಂತರನ್ನು ಒಪ್ಪಿಸಿಯೇ ಹೊರಡುತ್ತಾರೆ. ಅದು 1970. ಕಾರಂತರಿನ್ನೂ ಪುತ್ತೂರಲ್ಲಿ ಇದ್ದ ಕಾಲ. ಗಿರಿಜ ಎಂಬ ಶಿಕ್ಷಕಿ ಆಗ ಕಾರಂತರ ಲಿಪಿಕಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಆಕೆ ಕೊಂಚ ತಡವಾಗಿ ಕಾರಂತರ ಬಳಿ ಬಂದಿರುತ್ತಾರೆ. ಕಾರಣ ಕೇಳಿದಾಗ ಹೊಸ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಅಂದು ಗಿರಿಜಾ ಸಹೋದ್ಯೋಗಿ ಭವಾನಿಯ ಮದುವೆ ಕಟೀಲಿನಲ್ಲಿ . ಅವಳನ್ನು ಕಳಿಸಿ ಬರುವುದು ತಡವಾಯಿತು ಎಂದು ಗಿರಿಜಳ ವಿವರಣೆ. "ಅರೇ ನೀನು ಮದುವೆಗೆ ಹೋಗಿಲ್ಲ. ಇನ್ನು ಕಳಿಸುವುದೇನು. ದಿಬ್ಬಣ ಅದೇ ಹೋಗುತ್ತಿತ್ತು" ಅನ್ನುತ್ತಾರೆ ಕಾರಂತರು. "ದಿಬ್ಬಣ ಗಿಬ್ಬಣ ಇಲ್ಲ. ಅವಳೊಬ್ಬಳೇ ನಮ್ಮ ಮನೆಯಲ್ಲಿ ಉಳಿದು ಬಸ್ ಹತ್ತಿದ್ದು. ಅವರ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲ. ಆಕೆ ಹವ್ಯಕರ ಹುಡುಗಿ. ಬ್ರಾಹ್ಮಣರಲ್ಲೇ ಹವ್ಯಕೇತರನನ್ನು ಪ್ರೀತಿಸಿದಳು. ಮನೆಯವರು ವಿರೋಧಿಸಿ ಕಡೆಗೆ ಆಕೆಯನ್ನು ನಿನ್ನೆ ರಾತ್ರಿ ಮನೆಯಿಂದ ಹೊರಹಾಕಿದರು. ನಮ್ಮ ಮನೆಯಲ್ಲಿದ್ದು ಬೆಳಿಗ್ಗೆ ಬಸ್ ಹತ್ತಿದ್ದಾಳೆ. ಇಲ್ಲಿಗೆ ಬರೋದಿಲ್ಲದಿದ್ದರೆ ನಾನಾದರೂ ಜೊತೆಗಿರುತ್ತಿದ್ದೆ" ಎಂಬ ಗಿರಿಜಳ ಮಾತು ಕಾರಂತರನ್ನು ಕುಳಿತಲ್ಲಿಂದ ಎದ್ದು ನಿಲ್ಲಿಸುತ್ತದೆ. ಏಳು ಎಂದು ಅವಳನ್ನೂ ಎಬ್ಬಿಸಿ ಹೊರಬಂದು ಡ್ರೈವರ್ ಕರೆದು ಕಾರು ಹೊರಡಿಸುತ್ತಾರೆ. ಸೀದಾ ಸಂಜೀವ ಶೆಟ್ಟರ ಜವಳಿ ಅಂಗಡಿ ತಲುಪಿ ಒಂದು ರೇಷ್ಮೆ ಸೀರೆ ಕಟ್ಟಿಸಿ ಕಾರು ಕಟೀಲಿಗೆ ಹೋಗಲಿ ಎನ್ನುತ್ತಾರೆ. ಗಿರಿಜೆ ಜೊತೆ ಕಟೀಲು ದೇವಸ್ಥಾನ ತಲುಪಿ ಮಂಟಪದಲ್ಲಿ ಭವಾನಿ ದಂಪತಿಗಳಿಗೆ ಉಡುಗರೆ ಕೊಟ್ಟು ಅಮ್ಮ ಅಪ್ಪ ಬರಲಿಲ್ಲ ಎಂದು ಯೋಚಿಸಬೇಡ. ಎಲ್ಲಾ ಸರಿಯಾಗುತ್ತೆ ಎಂದು ಹಾರೈಸಿ ಧೈರ್ಯ ತುಂಬುತ್ತಾರೆ. ಕಡೆಗೆ ಮದುವೆ ಊಟ ಉಂಟು ವಾಪಸ್ಸು ಬರುತ್ತಾರೆ. ಅನಿಸಿದ್ದನ್ನ ಆ ಕ್ಷಣ ಜಾರಿ ತರುವ ಕರುಣಾಮಯಿ ಕಾರಂತರವರು. ಕೊಡಗು ಜಿಲ್ಲೆಯ ಚಟ್ಟಳ್ಳಿ ಶಾಲೆಯಲ್ಲಿ ಪಿ.ಜಿ.ಅಂಬೇಕಲ್ ಕಾರ್ಯ ನಿರ್ವಹಿಸುತ್ತಿದ್ದಾಗ ತಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಕಾರಂತರನ್ನು ಕರೆಸಲು ಶಾಲೆಯವರ ಮನ ಒಲಿಸಿ ಕೇಳಲು ಕಾರಂತರ ಮನೆಗೆ ಬರುತ್ತಾರೆ. " ಶಾಲಾ ವಾರ್ಷಿಕೋತ್ಸವಕ್ಕೆ ಬಾಷಣ ಕೇಳಲು ಯಾರು ಬರುತ್ತಾರೆ. ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಿಸಲು ಬಂದವರಿಗೆ ಮಾತು ಬೇಡದ ಹಿಂಸೆ ನಾನು ಬರುವುದಿಲ್ಲ" ಎಂದು ಖಂಡಿತವಾಗಿ ಹೇಳಿದ ಕಾರಂತರಿಗೆ ಏನು ಉತ್ತರಿಸುವುದು ಎಂದು ತಿಳಿಯದ ಅಂಬೇಕಲ್ ಪೆಚ್ಚು ಮುಖ ಮಾಡಿಕೊಳ್ಳುತ್ತಾರೆ. "ಆಗಲಿ ನಿಮ್ಮ ಶಾಲೆಗೆ ಯಾವಾಗಲಾದರೂ ಬಂದರಾಯಿತಲ್ಲ. ನಾನೇ ತಿಳಿಸಿ ಬರುವೆ" ಎಂಬ ಕಾರಂತರ ಮಾತು ತಮ್ಮನ್ನು ಸಮಾಧಾನಿಸಲು ಹೇಳಿದ್ದು ಅಂದುಕೊಂಡ ಅಂಬೇಕಲ್ ಅಲ್ಲಿಂದ ನಿರ್ಗಮಿಸುತ್ತಾರೆ. "ನಾನು ಮಾರ್ಚ್ 1ರಂದು ಕುಶಾಲನಗರಕ್ಕೆ ಬರುತ್ತಿರುವೆ. ನಿಮ್ಮ ಶಾಲೆಗೆ ಬೆಳಿಗ್ಗೆ 9.30ಕ್ಕೆ ಬರುವೆ. ನನಗಾಗಿ ನೀವು ಯಾವ ಏರ್ಪಾಟನ್ನೂ ಮಾಡಬೇಕಿಲ್ಲ "ಎಂಬ ಕಾರಂತರ ಕಾರ್ಡು ವಾರದ ಮೊದಲೇ ಅಂಬೇಕಲ್ ಗೆ ಬಂದೇ ಬರುತ್ತದೆ. ಹೇಳಿದ ದಿನ ಐದು ನಿಮಿಷ ಮೊದಲೇ ಕಾರಂತರ ಕಾರು ಶಾಲೆಗೆ ಬಂದಿರುತ್ತದೆ. ತಮ್ಮ ಅಮೆರಿಕ ಪ್ರವಾಸ ಅನುಭವವನ್ನ ಮಕ್ಕಳಿಗೆ ಸ್ವಾರಸ್ಯಕರವಾಗಿ ಹೇಳಿ ಸಂಭ್ರಮದಿಂದ ಮಕ್ಕಳೊಂದಿಗೆ ನಲಿದು ಕಾರಂತರು ನಿರ್ಗಮಿಸುವಾಗ "ನಿಮ್ಮ ಹರಕೆ ತೀರಿಸಿ ಆಯಿತಲ್ಲ" ಎಂದು ಚಟಾಕಿ ಹಾರಿಸುತ್ತಾರೆ. ಕಾರಂತರು ನೂರಾರು ನಾಟಕಗಳನ್ನು ಮಕ್ಕಳಿಗಾಗಿ ರಚಿಸಿ ಅದನ್ನು ನಿರ್ದೇಶನ ಮಾಡಿ ಮಕ್ಕಳಿಂದ ಮತ್ತು ಶಿಕ್ಷಕರಿಂದ ಶಾಲಾ ರಂಗಮಂದಿರದಲ್ಲಿ ಪ್ರದರ್ಶಿಸಿದವರು. ಕಡಬ ಶಾಲೆಯಲ್ಲಿ ಅವರ ಚೋಮನದುಡಿಯ ಪೂರ್ವ ನಾಟಕ ರೂಪ ಡೋಮಿಂಗೋ ಹೀಗೇ ಪ್ರದರ್ಶಿತವಾಗುತ್ತದೆ. ಮುಖ್ಯೋಪಾಧ್ಯಾಯ ಮುಂಕಡೆಯವರದ್ದು ಮತಾಂತರ ಮಾಡುವ ಪಾದ್ರಿಯೊಬ್ಬರ ಪಾತ್ರ. ದಲಿತ ಮಕ್ಕಳ ಮತಾಂತರದ ಹುನ್ನಾರ ಈ ನಾಟಕದಲ್ಲಿ ಅನಾವರಣ ಆಗಿರುತ್ತದೆ. ಚರ್ಚ್ ಗೆ ಅದು ಮುಜುಗರ ತರುತ್ತದೆ. ಅವರು ಪ್ರಭಾವ ಬೀರಿ ಮುಂಕಡೆಯವರನ್ನು ಬೆಳ್ತಂಗಡಿಗೆ ವರ್ಗಾಯಿಸುತ್ತಾರೆ. ಕಾರಂತರ ಗಮನಕ್ಕೆ ಅದು ಬಂದಕೂಡಲೇ ಅವರು ಹಠ ಹಿಡಿದು ವರ್ಗಾವಣೆ ರದ್ದು ಮಾಡಿಸುತ್ತಾರೆ. ಚರ್ಚ್ ಈ ಮನುಷ್ಯನ ಸಹವಾಸ ಬೇಡ ಎಂದು ತಣ್ಣಗಾಗುತ್ತದೆ. ಮುಂಕಾಡೆಯವರಿಗೆ ಮಾಸಿಕ ಹದಿನೈದು ರೂ ಸಂಬಳ ಇದ್ದಾಗಲೇ ಕಾರಂತರ ಬಾಲವನಕ್ಕವರು ಇಪ್ಪತ್ತೈದು ರೂ ದೇಣಿಗೆ ನೀಡಿರುತ್ತಾರೆ. ಇಷ್ಟು ದೊಡ್ಡ ಮೊತ್ತ ಬಡ ಶಾಲಾ ಶಿಕ್ಷಕರಿಂದ ಬಂದಿದ್ದು ಕಾರಂತರ ಉತ್ಸಾಹ ಹೆಚ್ಚಿಸಿದ್ದು ಆಗಿನಿಂದಲೂ ಕಾರಂತರಿಗೆ ಮುಂಕಾಡೆ ಮೇಲೆ ಅಭಿಮಾನ ಮೂಡಿರುತ್ತದೆ. ಮುಂದೆ ಮುಂಕಾಡೆಯವರ ಮಗ ರಘುನಾಥ ರಾವ್ ಪುತ್ತೂರಿನಲ್ಲಿ ಮುದ್ರಣ ಯಂತ್ರ ಸ್ಥಾಪಿಸಿದಾಗ ಆಗಲೂ ಅದರ ಅನುಭವವಿದ್ದ ಕಾರಂತರು "ಇದು ಕಬ್ಬಿಣ ಒಟ್ಟು ಮಾಡುವ ಕೆಲಸ" ಎಂದಿರುತ್ತಾರೆ. ಪುತ್ತೂರು ಕರ್ನಾಟಕ ಸಂಘ ಕಾರಂತರ ಪುಸ್ತಕ ಒಂದನ್ನು ರಘುನಾಥ ರಾಯರ ಮುದ್ರಣಾಲಯದಲ್ಲೇ ಅಚ್ಚು ಮಾಡಿಸಿದಾಗ ಕಾರಂತರು ಮುದ್ರಣ ಮೆಚ್ಚಿ ಕಾರ್ಡು ಬರೆದೆರುತ್ತಾರೆ. ಅದು ತಮ್ಮ ಪಾಲಿನ ಅತಿ ದೊಡ್ಡ ಪ್ರಶಸ್ತಿ ಎಂದು ರಘುನಾಥ ರಾಯರು ನಂಬಿದ್ದಾರೆ. ಅದು 1984. ಚೋಮನದುಡಿಯನ್ನು ನಾಟಕ ಮಾಡಲು ಮೋಹನ್ ಸೋನ ನಿರ್ಧರಿಸಿ ಸಾಕಷ್ಟು ಪೂರ್ವ ತಯಾರಿ ಮಾಡಿ ರಿಹರ್ಸಲ್ ಸಹ ಆರಂಭಿಸಿ ಅನುಮತಿಗಾಗಿ ಕಾರಂತರಿಗೆ ಪತ್ರ ಹಾಕುತ್ತಾರೆ. "ಇಲ್ಲ, ನನ್ನ ಅನುಮತಿ" ಎಂಬ ಕಾರ್ಡ್ ಮರು ಟಪಾಲಿನಲ್ಲೇ ಬರುತ್ತದೆ. ಕಂಗಾಲಾದ ತಂಡ ಕಾರಂತರನ್ನು ಕಾಣಲು ಸಾಲಿಗ್ರಾಮಕ್ಕೆ ಬರುತ್ತದೆ. "ನೋಡಿ ಬಿ.ವಿ.ಕಾರಂತರು ಮಾಡಿದರು, ಕೆ.ವಿ.ಸುಬ್ಬಣ್ಣ ಮಾಡಿದರು. ಮತ್ತೂ ಯಾರು ಯಾರೋ ಮಾಡಿದರು. ಒಂದೂ ತೃಪ್ತಿಕರವಾಗಲಿಲ್ಲ. ನೀವು ಬೇರೆ ಯಾರದ್ದಾದರೂ ನಾಟಕ ಮಾಡಿಕೊಳ್ಳಿ" ಎನ್ನುತ್ತಾರೆ. ಸಾಕಷ್ಟು ಸಿದ್ಧತೆ ಮಾಡಿದ್ದ ತಂಡ ನಿರಾಶರಾಗಿ ಪೆಚ್ಚು ಮೋರೆ ಮಾಡಿಕೊಂಡಾಗ "ಆಗಲಿ ನೀವೂ ಹುಗಿದು ಬಿಡಿ ಚೋಮನನ್ನ" ಎಂದು ಅಂತೂ ಸಮ್ಮತಿ ನೀಡುತ್ತಾರೆ. ಆಮೇಲೆ ರಿಹರ್ಸಲ್ ನೋಡಿ ಬರಲು ಕೃತಿಯ ತುಳು ಭಾಷಾಂತರಕಾರ ಜತ್ತಪ್ಪ ರೈರವರಿಗೆ ಪತ್ರ ಬರೆಯುತ್ತಾರೆ. ರೈಯವರು ರಿಹರ್ಸಲ್ ನೋಡಿ ಮುಂದೆ ನಾಟಕವನ್ನೂ ನೋಡಿ ತುಂಬಾ ಸಂಭ್ರಮ ಪಡುತ್ತಾರೆ. ದೊಡ್ಡ ಬಯಲಿನಲ್ಲಿ ಗುಡಿಸಲು ಸೇರಿದಂತೆ ವಿವಿಧ ರಂಗ ಚಮತ್ಕಾರ ತುಂಬಿದ್ದ ನಾಟಕ ದಿವ್ಯವಾಗಿ ನಿಮಗೆ ತೃಪ್ತಿ ತರುವಂತೆ ನಡೆಯಿತು ಎಂಬ ಪತ್ರ ಕಾರಂತರಿಗೆ ರೈಯವರು ಬರೆಯುತ್ತಾರೆ. ಮೂರ್ತಿ ದೇರಾಜೆ ಇದನ್ನು ದಾಖಲಿಸುತ್ತಲೇ ಕಾರಂತರ ತಾಳಮದ್ದಲೆಯ ಸ್ವಾರಸ್ಯಕರ ಪ್ರಸಂಗ ಹೇಳಿದ್ದಾರೆ. "ತಾಳಮದ್ದಲೆ ಕೇಳುವುದಕ್ಕಿಂತ ಕೋರ್ಟಿನಲ್ಲಿ ವಕೀಲರ ವಾದ ಕೇಳುವುದು ಒಳ್ಳೆಯದು " ಎಂದವರು ಕಾರಂತರು. ಒಮ್ಮೆ ಅವರೇ ಮದ್ರಾಸಿನ ಆಕಾಶವಾಣಿಗೆ ತಾಳಮದ್ದಲೆಯ ಕಾರ್ಯಕ್ರಮ ನೀಡಲು ತಮ್ಮ ತಂಡ ಕರೆದೊಯ್ಯುತ್ತಾರೆ. ಆದರೆ ಇವರ ಬಳಿ ಇದ್ದ ದೊಡ್ಡ ಹಾರ್ಮೋನಿಯಂ ಪೆಟ್ಟಿಗೆ ಒಳಗೊಯ್ಯಲು ಸೆಕ್ಯುರಿಟಿ ಒಪ್ಪುವುದಿಲ್ಲ. "ನಿಮ್ಮ ಅಧಿಕಾರಿಯನ್ನು ಕರೆ" ಎಂದ ಕಾರಂತರು ಅಧಿಕಾರಿ ಕರೆಸಿದಾಗಲೂ ಅವರೂ ದೊಡ್ಡ ಪೆಟ್ಟಿಗೆ ಒಳಗೆ ತರಲಾಗದು ಎಂದೇ ಹೇಳುತ್ತಾರೆ. "ನಮ್ಮ ಪ್ರಯಾಣ ವೆಚ್ಚ ಮತ್ತು ಭತ್ಯೆ ಕೊಡಿ, ನಾವೆಲ್ಲಾ ಇಲ್ಲಿಂದಲೇ ನಿರ್ಗಮಿಸುತ್ತೇವೆ " ಎಂದು ಪಟ್ಟು ಹಿಡಿದ ಕಾರಂತರು ಪ್ರವೇಶ ಗಿಟ್ಟಿಸುತ್ತಾರೆ!. ಒಳಗೆ ನಿಂತೇ ರಿಕಾರ್ಡಿಂಗ್ ಮಾಡಲು ಹೇಳಿದಾಗಲೂ ಕಾರಂತರು ಪ್ರತಿಭಟಿಸುತ್ತಾರೆ. ಅನುಮತಿ ಗಿಟ್ಟಿಸುತ್ತಾರೆ. ಇಂತಹವರೊಬ್ಬರು ಜೊತೆಗಿದ್ದರೆ ಕಲಾವಿದರಿಗೆ ಗೌರವ ದೊರಕುತ್ತದೆ ಎಂಬ ದೇರಾಜೆ ಮಾತು ಸತ್ಯ. ಚಿತ್ರಕಲಾ ಶಿಕ್ಷಕರ ರಾಜ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಗೋಪಾಡ್ಕರ್ ನೇತೃತ್ವದ ತಂಡ ಕಾರಂತರ ಭೇಟಿಗೆ ಸಾಲಿಗ್ರಾಮ ಮನೆಗೆ ಬರುತ್ತದೆ. ಕರೆಯುತ್ತಾ 600 ಶಿಕ್ಷಕರು ಸೇರುತ್ತಾರೆ ಎಂಬ ಮಾತು ಕಾರಂತರ ಕೋಪಕ್ಕೆ ಕಾರಣವಾಗುತ್ತದೆ. "ಅಲ್ಲಿ ಬಂದು ಸೃಜನಶೀಲತೆ ಕುರಿತು ಹೇಳಬೇಕಾ. ಧರ್ಮಸ್ಥಳದ ಊಟಕ್ಕೆ 25ಸಾವಿರ ಜನ ಸೇರುತ್ತಾರೆ. ಅಲ್ಲಿ ಭಾಷಣ ಮಾಡಿದರಾಗದೇ. ಶಿಕ್ಷಕರನ್ನು ಉದ್ದೇಶಿಸಿ ನಾನು ಏಕೆ ಮಾತನಾಡಬೇಕು. ಯಾರು ಬದಲಾದರೂ ಶಿಕ್ಷಕರು ಬದಲಾಗುವುದಿಲ್ಲ. ನಾನೂ 40ವರ್ಷದಿಂದ ಭಾಷಣ ಮಾಡಿ ನೋಡಿದ್ದೇನೆ. ಒಬ್ಬರನ್ನು ಬಿಟ್ಟು ಯಾರೂ ಬದಲಾಗಿಲ್ಲ" ಎನ್ನುತ್ತಾರೆ ಕಾರಂತರು. ಬಂದವರಿಗೆ ಕಾರಂತರಲ್ಲಿ ಸಾಲಿಗೆ ಇತ್ತಾಗಿ ಅದ್ಯಾರು ಬದಲಾದವರು ಎಂದು ಕೇಳುತ್ತಾರೆ. "ನಾನೇ ಬದಲಾದವ, ಶಿಕ್ಷಕರಿಗೆ ಭಾಷಣ ಮಾಡಿ ಪ್ರಯೋಜನವಿಲ್ಲ ಎಂದು ಕಂಡುಕೊಂಡು ಬದಲಾದವ ನಾನು, ಶಿಕ್ಷಕರು ಕಲಿಸುವವರು, ಕಲಿಯುವವರಲ್ಲ. ದುರಹಂಕಾರ ಅವರಿಗೆ ತಾವು ತಿದ್ದುವವರೆಂದು" ಎಂದು ಸೇರಿಸುತ್ತಾರೆ. ಬಾಯಿ ಬಿಡದೇ ತಣ್ಣಗಾಗಿದ್ದ ತಂಡ ನೋಡಿ ಆಯ್ತು ಬರಬೇಕಲ್ವಾ -ಅದೂ ಆಗಲಿ ಎಂಬ ಸಮ್ಮತಿ ನೀಡುತ್ತಾರೆ ಕಾರಂತರು. ಕಾರಂತರ ಆತ್ಮೀಯ ಬಳಗದಲ್ಲಿದ್ದವರು ಡಾ.ವಿವೇಕ ರೈಯವರ ತಂದೆ. ಅವರಿಗೆ ಗಂಡುಮಗು ಹುಟ್ಟಿದಾಗ ಕಾರಂತರ ಬಳಿ ಅವನಿಗೊಂದು ಹೆಸರು ಸೂಚಿಸಲು ಕೋರುತ್ತಾರೆ. ಎತ್ತಿದ ಬಾಯಿಗೆ ಕಾರಂತರು ವಿವೇಕ ಅನ್ನುತ್ತಾರೆ. ಆಗ ವಿವೇಕಾನಂದ ತುಂಬಾ ಚಾಲ್ತಿಯ ಹೆಸರು. ವಿವೇಕಾನಂದ ಎಂದಾ ಎಂದು ರೈ ಪ್ರಶ್ನಿಸುತ್ತಾರೆ. "ಆನಂದ ಗೀನಂದ ಏನೂ ಬೇಡ, ವಿವೇಕ ಇದ್ದರೆ ಬರುತ್ತದೆ. ವಿವೇಕ ಅಷ್ಟೆ ಸಾಕು" ಎಂಬ ಕಾರಂತರ ಮಾತಿನಂತೆ ರೈಗಳು ಮಗನ ನಾಮಕರಣ ಮಾಡುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದ ಕಾರಂತರ ಪೀಠ ರಚನೆಯಾದಾಗ ವಿವೇಕ ರೈ ಅದನ್ನು ಮಾದರಿಯಾಗಿ ರೂಪಿಸುತ್ತಾರೆ. ಅವರಲ್ಲಿ ಅತೀವ ಪ್ರೀತಿ ಇಟ್ಟಿದ್ದ ಕಾರಂತರು ಕರೆದಾಗಲೆಲ್ಲಾ ವಿಶ್ವವಿದ್ಯಾಲಯದಲ್ಲಿ ಹೋಗಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ. ಹೀಗೇ ಅನೇಕ ಅಪೂರ್ವ ಸಂಗತಿಗಳನ್ನು ನಾಡಿನ ಪ್ರಮುಖ ಸಾಹಿತಿಗಳು ಒಡನಾಡಿಗಳು ಬಿಚ್ಚಿಟ್ಟ ಕೃತಿ ಈ ಬಾಲವನದಲ್ಲಿ ಭಾರ್ಗವ. ಸುಬ್ರಾಯ ಚೊಕ್ಕಾಡಿ, ಜಯಂತ್ ಕಾಯ್ಕಿಣಿ, ಮಾವಿನಕುಳಿ, ತೋಳ್ಪಾಡಿ, ವೈದೇಹಿ, ಬಿಳಿಮಲೆ, ಬೊಳುವಾರು ಮೊಹಮ್ಮದ್ ಕುಂಞಿ, ಚಿನ್ನಪ್ಪ ಗೌಡ, ಕಾರಂತರ ಮಕ್ಕಳು, ಅವರ ಜೊತೆ ಕೆಲಸ ನಿರ್ವಹಿಸಿದವರು, ಕಲಾವಿದರು, ಜನಪ್ರತಿನಿದಿಗಳು, ಅಧಿಕಾರಿಗಳು ಮುಂತಾದ ಮಹನೀಯರ ಬರಹಗಳಿಂದ 'ಬಾಲವನದಲ್ಲಿ ಭಾರ್ಗವ 'ಮಿಂಚಿನ ಪ್ರಕಾಶ ಮೂಡಿಸುತ್ತಿದೆ. ಸಂಪಾದಿಸಿದ ಡಾ.ಸುಂದರ ಕೇನಾಜೆಯವರ ಶ್ರಮ ಸಾರ್ಥಕ ಎನ್ನುವುದರಲ್ಲಿ ಎರಡು ಮಾತಿಲ್ಲ. *ಪ್ರಭಾಕರ ಕಾರಂತ್* ಹೊಸಕೊಪ್ಪ 577126.ಕೊಪ್ಪ ತಾಲ್ಲೂಕು.

Monday, June 6, 2022

Shanthi Nayak Honnavara -ಉತ್ತರ ಕನ್ನಡದ ಎರಡು ಜನಪದ ಗೀತೆಗಳು { ವಿಮರ್ಶೆ }

ಎಸ್. ಜಿ. ಕುರ್ಯ ಉಡುಪಿ - ಪುಸ್ತಕ ಸಂಸ್ಕೃತಿಯ ಸಂತ ಕು. ಗೋ / H. GOPALA BHAT

vk udupi 20:00 (2 hours ago) to me ಪುಸ್ತಕ ಸಂಸ್ಕøತಿಯ ಸಂತ: ಕು. ಗೋ. 85ನೇ ನವ ವಸಂತ ........... ತಾನು ಪುಸ್ತಕ ಅಚ್ಚು ಹಾಕಿ ಮಾರಿದ್ದಕ್ಕಿಂತಲೂ ಅನ್ಯ ಲೇಖಕರ, ಸಾಹಿತಿಗಳ ಸಾವಿರಾರು ಪುಸ್ತಕಗಳನ್ನು ಮಕ್ಕಳು, ಮಹಿಳೆಯರು ಸಹಿತ ಸಾಹಿತ್ಯ ಪ್ರೇಮಿಗಳಿಗೆ ಉಚಿತವಾಗಿ ಹಂಚಿದ, ಓದುವ ಹುಚ್ಚು/ಅಭಿರುಚಿ ಹಚ್ಚಿಸಿದ, ಹೆಚ್ಚಿಸಿದ ಕು. ಗೋ.(ಹೆರ್ಗ ಗೋಪಾಲ ಭಟ್ಟ)1938ರಲ್ಲಿ ಜನಿಸಿ, ಜೂ. 6ಕ್ಕೆ 84ಸಾರ್ಥಕ ವಸಂತ ಕಂಡು 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ. ............................................... ಹೆರ್ಗದ ಮಾಣಿ, ಮೌನ ದಾನಿ, ಲಕ್ಷ್ಮಿಗಿಂತ ಸರಸ್ವತಿ ಪ್ರೇಮಿ! *ಎಸ್. ಜಿ. ಕುರ್ಯ, ಉಡುಪಿ ಆರಡಿಯ ದೇಹ ಒಂದಿಷ್ಟು ಬಾಗಿದೆ, ಮಾಗಿದೆ. ಸಾಹಿತ್ಯ ಪ್ರಪಂಚ ನೋಡಲು ಮೂಗಿನ ಮೇಲೆ ದಪ್ಪ ಕನ್ನಡಕವಿದೆ, ಅಷ್ಟಿಷ್ಟು ಉಳಿದ ಹಲ್ಲುಗಳಿರುವ ಬಾಯಲ್ಲಿ ನಿಷ್ಕಲ್ಮಶ ನಗುವಿದೆ, ಮಾತಿಗೆ ಕೂತರೆ/ ನಿಂತರೆ ದ್ವೇಷ ಮರೆತು ಪ್ರೀತಿ ಹಂಚುವ ಇವರ ಹೃದಯ ಸಾಮ್ರಾಜ್ಯದಲ್ಲಿ ವ್ಯಕ್ತ, ಅವ್ಯಕ್ತವಾಗಿ ಜಾಗ ಪಡೆದಿರುವವರ ಸಂಖ್ಯೆ ಅನಂತ.... ಇದು ನಮ್ಮ ಕು. ಗೋ.ಅರ್ಥಾತ್ ಹೆರ್ಗದ ಮಾಣಿ ಗೋಪಾಲ ಭಟ್ಟರ ಪ್ರವರ. ಬದುಕಿನ ಏಳುಬೀಳಿನ ನಡುವೆ ಸಾರ್ಥಕ 84ವಸಂತಗಳನ್ನು ಪೂರೈಸಿ 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ. ವಿಜಯ ಕರ್ನಾಟಕದೊಂದಿಗೆ ಬಾಲ್ಯದಿಂದ ಈವರೆಗಿನ ಆಗುಹೋಗುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಮುಕ್ತವಾಗಿ ಹಂಚಿಕೊಂಡಿದ್ದು ಹೀಗೆ. ಕನಸಿಗೆ ಬಡತನ ಅಡ್ಡಿ: ಹೆರ್ಗದ ಸರಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ, ಮಣಿಪಾಲದ ಬಳಿಕ ಪಿರಿಯಾಪಟ್ಟಣದಲ್ಲಿ 7ರಿಂದ ಎಸ್ಸೆಸ್ಸೆಲ್ಸಿ ಓದಿನ ನಡುವೆ ಕನಸು ಕಾಣಲು ಬಡತನ ಅಡ್ಡಿಯಾಗಿತ್ತು. ಹುಣಸೂರಲ್ಲಿದ್ದ ಮಾವನ ಹೋಟೆಲಲ್ಲಿ ಕೆಲಸ ಮಾಡುತ್ತಾ ಶಾಲಾ ಓದಿನ ವೇಳೆ ಹೈಸ್ಕೂಲಲ್ಲಿದ್ದಾಗ ಅದು ಹೇಗೋ ಸಾಹಿತ್ಯ ಬೆಲ್ಲದ ರುಚಿ ಹತ್ತಿತು. ಹೋಟೆಲ್ ಸಹವಾಸ: ಹೋಟೆಲಿಗೆ ಬಂದು ಹೋಗುವ ಗಿರಾಕಿಗಳ ಮಾತು, ಹಾವಭಾವವೆಲ್ಲವೂ ಹಾಸ್ಯ ಲೇಖನಕ್ಕೆ ವಸ್ತುವಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 37ನೇ ರ್ಯಾಂಕ್ ಪಡೆದಿದ್ದರೂ ಹೋಟೆಲ್ ಕೆಲಸವನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಬಯಕೆಗೆ ಮೇಸ್ಟ್ರು, ಡಾಕ್ಟ್ರೆಲ್ಲಾ ಬಂದು ಕಾಲೇಜಿಗೆ ನಡಿ ಕಂದಾ...ಎನ್ನುವ ಒತ್ತಾಯ ಮಾಡಿದರು. ವಾರಕ್ಕೆ 4ಸಿನಿಮಾ: ಮೈಸೂರಿನ ಅಣ್ಣನ ಹೋಟೆಲಲ್ಲಿದ್ದು ಕಾಲೇಜಿಗೆ ಹೋಗತೊಡಗಿದೆ. ಇದ್ದಕ್ಕಿದ್ದಂತೆ ಒಂದು ದಿನ ಹೇಳದೆ ಕೇಳದೆ ಬೆಂಗಳೂರಿಗೆ ಕಾಲ್ಕಿತ್ತು 20ರೂ. ಸಂಬಳಕ್ಕೆ ಹೋಟೆಲೊಂದನ್ನು ಸೇರಿ ಎರಡು ತಿಂಗಳು ಕೆಲಸ ಮಾಡಿದೆ. ನನ್ನನ್ನು ಪತ್ತೆ ಹಚ್ಚಿದ ಅಣ್ಣ ಮೈಸೂರಿಗೆ ವಾಪಸ್ ಕರೆತಂದ, ವಾರಕ್ಕೆ ಮೂರ್ನಾಲ್ಕು ಸಿನಿಮಾ ನೋಡುವ ಹವ್ಯಾಸ ಚಟವಾಯಿತು. ಕೈಹಿಡಿದ ಎಲ್ಲೈಸಿ: ಮೈಸೂರು ಯುವರಾಜ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಯಾಗಿದ್ದರೂ ಇಂಟರ್‍ಮೀಡಿಯೇಟ್‍ನಲ್ಲಿ ಎಡವಿ ಮೇಲೆದ್ದೆ. ಬಿಎಸ್ಸಿಯಲ್ಲಿ ಡುಮ್ಕಿ ಹೊಡೆದು ಊರಿಗೆ ಬಂದ ಬಳಿಕ ಎಸ್ಸೆಸ್ಸೆಲ್ಸಿ ಅಂಕದ ಆಧಾರದಲ್ಲಿ ಭಾರತೀಯ ಜೀವ ವಿಮಾ ನಿಗಮ(ಎಲ್ಲೈಸಿ)ವನ್ನು 130ರೂ. ಸಂಬಳಕ್ಕೆ ಸೇರಿದೆ. ಮೊದಲ ಕೃತಿ ಹೆರಿಗೆ: ಚಿಕ್ಕಮಗಳೂರಿನಲ್ಲಿ ನಾಲ್ಕು ವರ್ಷವಿದ್ದೆ, ಸಾಹಿತ್ಯ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಂದೆ ನೀಡಿದ ಪೆÇ್ರೀತ್ಸಾಹದಿಂದ ನನ್ನ ಚೊಚ್ಚಲ ಕೃತಿ ಸವ್ಯಸಾಚಿಯ ಹೆರಿಗೆಯಾಯಿತು. ಎಲ್ಲಾ ಪತ್ರಿಕೆ, ವಾರಪತ್ರಿಕೆ, ಸಾಪ್ತಾಹಿಕ, ಪಾಕ್ಷಿಗಳಲ್ಲೂ ಕಥೆ, ಲೇಖನ, ಹಾಸ್ಯ ಬರಹ ಪ್ರಕಟವಾಗತೊಡಗಿತು, ಆಕಾಶವಾಣಿಯಲ್ಲೂ ಬಿತ್ತರವಾಯಿತು. ಸ್ವಯಂ ನಿವೃತ್ತಿ: ಗುಮಾಸ್ತನಾಗಿ ಮಡಿಕೇರಿ, ಕುಂದಾಪುರ, ಉಡುಪಿಯಲ್ಲಿ ಸೇವೆ ಸಲ್ಲಿಸಿ ಆಡಳಿತಾಧಿಕಾರಿಯಾಗಿದ್ದ ವೇಳೆ ದಿನಕ್ಕೆ ಕೇವಲ 6.15ಗಂಟೆ ಕರ್ತವ್ಯ ಮಾಡಬೇಕಿದ್ದರೂ 10ರಿಂದ 12ಗಂಟೆ ಗ್ರಾಹಕರ ಸೇವೆಯಲ್ಲಿ ನಿರತನಾಗಿದ್ದೆ. ಪತ್ನಿಯ ವಿಯೋಗದಿಂದಾಗಿ ನಿವೃತ್ತಿಗೆ ಒಂದು ವರ್ಷ ಮೊದಲೇ ಆರ್ಥಿಕ ತೊಂದರೆಗೆ ಸಿಲುಕಿ ಸ್ವಯಂನಿವೃತ್ತಿ ಪಡೆದು ಮನೆ ಸೇರಿದೆ. ಓದುಗರಿಗಾಗಿ ಪ್ರಕಟಣೆ: ಸಾಹಿತ್ಯ ಕೃತಿಗಳ ಓದು, ಪ್ರಕಟಣೆ, ವಿತರಣೆಯಲ್ಲಿ ತೊಡಗಿದೆ. ನಾನು ಬರೆದದ್ದು ಆರು ಕೃತಿ ಮುದ್ರಣ, ಮರುಮುದ್ರಣವಾಗಿದೆ. ನನ್ನ ಕೈಯಿಂದ ದುಡ್ಡು ಹಾಕಿ ನನ್ನ ಕೃತಿಗಳನ್ನು ಹಂಚಿದೆ, ಆದರೆ ತೃಪ್ತಿ ಸಿಗಲಿಲ್ಲ. 500 ಪುಸ್ತಕ ಉಳಿದಾಗ ಓದುಗರು ಬೇಕೆಂದು 2,000 ರೂ. ಖರ್ಚು ಮಾಡಿ ಪ್ರಕಟಣೆ ಕೊಟ್ಟಿದ್ದು ಆ ಕಾಲಕ್ಕೆ ಗಮನ ಸೆಳೆಯಿತು. ಕಾಯಂ ಓದುಗರು: ಪುಸ್ತಕ ಸಂಸ್ಕøತಿ ಪಸರಿಸುವ ನೆಲೆಯಲ್ಲಿ ಅಜ್ಞಾತರೊಬ್ಬರು 11ಲಕ್ಷ ರೂ. ನೆರವು ನೀಡಿ ಕಂತಿನಲ್ಲಿ ಹಿಂತಿರುಗಿಸಿದರೂ ಬಾಕಿಗಾಗಿ ಮನೆಗೆ ಪೆÇೀಸ್ಟ್ ಕಾರ್ಡ್ ಬರೆವ ಚಳವಳಿಯನ್ನೇ ಆರಂಭಿಸಿದ್ದರು. 200ಮಂದಿ ಕಾಯಂ ಪುಸ್ತಕ ಪ್ರೇಮಿಗಳ ಮನೆಗೆ ತನ್ನ ಹಾಗೂ ಅನ್ಯರ ಹೊಸ ಪುಸ್ತಕ ಬಿಡುಗಡೆಯಾದ ಕೂಡಲೇ ಕಳುಹಿಸುತ್ತಾರೆ. ತಪ್ಪಿದ ಪೆಟ್ಟು: ಕೃತಿ ದುಡ್ಡು ಕೊಡೋರು ಎಲ್ಲೋ ಕೆಲ ಮಂದಿ, ಉಳಿದವರು ಓದಿ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾರೆ. ನನ್ನ ಜೀವನಾನುಭವ, ಸಮಾಜದ ಜನರಿಂದ ಕೇಳಿದ್ದು, ನೋಡಿದ್ದೆಲ್ಲಾ ಕಥೆ, ಹಾಸ್ಯ ಲೇಖನವಾಗಿದೆ, ಪೆಟ್ಟು ಕೊಡಲು ಬಂದವರಿದ್ದಾರೆ. ನನ್ನನ್ನು ನೋಡಲೆಂದೇ ಬೆಂಗಳೂರಿನಿಂದ ಬಂದು ಪುಸ್ತಕದ ದುಡ್ಡು ಕೊಟ್ಟು ಹೋದ ಅಭಿಮಾನಿಗಳಿದ್ದಾರೆ. ಬೆಲೆ ಕಟ್ಟಲಾಗದು: ಶಾಲಾ, ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ಹೋಗಿ ಪುಸ್ತಕ ಮಾರಿದ್ದು 10ಪರ್ಸೆಂಟಾದರೆ ಉಚಿತವಾಗಿ ನೀಡಿದ್ದು 90ಪರ್ಸೆಂಟಾದರೂ ಅದರಲ್ಲಿರುವ ಆತ್ಮ ತೃಪ್ತಿ, ಖುಷಿ, ಸಂತೋಷ, ನೆಮ್ಮದಿಗೆ ಬೆಲೆ ಕಟ್ಟಲಾಗದು. ಗಂಡು ಮಕ್ಕಳಿಗಿಂತಲೂ ವಿದ್ಯಾರ್ಥಿನಿಯರು, ಹೆಣ್ಮಕ್ಕಳು ಹೆಚ್ಚಿನ ಪುಸ್ತಕ ಪ್ರೇಮಿಗಳಾಗಿದ್ದಾರೆ, ನನ್ನ ಮೇಲೂ ಅಭಿಮಾನ ಹೊಂದಿದ್ದಾರೆ. ಪುಸ್ತಕ ಹಂಚಿಕೆ: ಓದಿ ನನಗೆ ಇಷ್ಟವಾದ ಪುಸ್ತಕವನ್ನು ಹಂಚುತ್ತೇನೆಯೇ ಹೊರತು ಅನ್ಯರ ಓದಿನ ಸ್ವಾತಂತ್ರ್ಯದ ಹರಣ ಮಾಡೋದಿಲ್ಲ. ಹಾಸ್ಯ ಭಾಷಣವನ್ನೂ ಹತ್ತಾರು ಕಡೆ ಮಾಡಿದ್ದೇನೆ, ರೇಡಿಯೋ ಭಾಷಣ ಕೇಳಿದ ನೂರಾರು ಮಂದಿ ಅಭಿಮಾನಿಗಳಿದ್ದಾರೆ. ಪರಿಚಿತರ 83ಕೃತಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದೇನೆ. ಪುಸ್ತಕಕ್ಕಾಗಿ ಪತ್ರ: ಕೆಲ ಮಕ್ಕಳಂತೂ ಇಂತಹ ಪುಸ್ತಕ ಬೇಕೆಂದು ಪತ್ರ ಬರೆದು ನನ್ನಿಂದ ಧರ್ಮಕ್ಕೆ ತರಿಸಿಕೊಳ್ಳುತ್ತಾರೆ(ಹಣಕ್ಕಿಂತ ಅವರು ಓದುತ್ತಾರೆನ್ನೋದೇ ಮುಖ್ಯ) ಉಗ್ರಾಣ, ಅಸಾಮಾನ್ಯ ಕನ್ನಡಿಗ, ಗೊರೂರು, ಶಿವರಾಮ ಕಾರಂತ ಸಹಿತ 50ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಶ್ರೀರಾಮ ವಿಠಲ ಸಹಿತ ಅನ್ಯ ಗೌರವಗಳಿಗೂ ಪಾತ್ರನಾಗಿದ್ದೇನೆ. ಸದ್ದಿಲ್ಲದ ದಾನಿ: ನನ್ನ ಸಾಲವನ್ನೆಲ್ಲಾ ಮಕ್ಕಳೇ ತೀರಿಸಿದ್ದಾರೆ. ಪಿಂಚಣಿ ಮನೆ ಖರ್ಚಿಗೆ, ಪುಸ್ತಕ ಹಂಚಿಕೆಗೆ ಬಳಕೆಯಾಗುತ್ತಿದೆ. ಬಜಗೋಳಿಯ ಬಡಕುಟುಂಬವೊಂದರ ಕಷ್ಟಕ್ಕೆ ಸದ್ದಿಲ್ಲದೆ ಒಂದು ಲಕ್ಷ ರೂ. ಸಾಲ ಮಾಡಿ ನೆರವು ಒದಗಿಸಿದ್ದು ಕಂತಿನಲ್ಲಿ ತೀರಿಸುತ್ತಿದ್ದೇನೆ. ಬಾಗಲೋಡಿ ದೇವರಾಯರು, ಶಾಂತಾರಾಮ ಸೋಮಯಾಜಿ, ಗೊರೂರು ನನ್ನಿಷ್ಟದ ಸಾಹಿತಿಗಳಾಗಿದ್ದಾರೆ. ಸುಹಾಸಂ 25: ಸಮಾನ ಮನಸ್ಕರ ಜತೆ ಸೇರಿ ಸ್ಥಾಪಿಸಿದ ಸುಹಾಸಂ(ಸುಹಾಸ ಹಾಸ್ಯ ಪ್ರಿಯರ ಸಂಘ) ಬೆಳ್ಳಿ ಹಬ್ಬ ಕಂಡಿದೆ. 10ರಿಂದ 15ಕ್ಕೆ ಸೀಮಿತವಾಗಿದ್ದ ಸುಹಾಸಂ ಕಾರ್ಯಕ್ರಮಕ್ಕೆ ಕಿದಿಯೂರು ಹೋಟೆಲ್ ನೆಲೆಯಾಗಿದೆ. 25ವರ್ಷದಿಂದ ತಿಂಡಿ ಖರ್ಚು ಹೊರತು ಬಾಡಿಗೆಯಿಲ್ಲದೆ ಸಾಹಿತ್ಯ ಸೇವೆಗೆ ನೀಡುತ್ತಿರುವ ಸಹಕಾರವಂತೂ ಸ್ಮರಣೀಯ. ಸುಹಾಸಂ ಮೂಲಕ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತಿಗಳನ್ನು ಕರೆಸಿ ಉಪನ್ಯಾಸ, ಪುಸ್ತಕ ಬಿಡುಗಡೆ ಮಾಡಲಾಗಿದೆ. ದ್ವೇಷ ಬಿಟ್ಟು ಪ್ರೀತಿಸಿ: ದೇವರು ಪ್ರತ್ಯಕ್ಷರಾದರೆ ಬದುಕಿನ ನೋವೆಲ್ಲಾ ಮಾಯ ಮಾಡು ಎನ್ನುವುದೇ ಮೊದಲ ಬೇಡಿಕೆ. ನನಗೆ ಕೋಪ ಬರೋದು ಕಡಿಮೆ, ಬಂದರೂ ನಾನಾ ಸಮಾಧಾನ ಮಾಡಿಕೊಳ್ತೇನೆ(ಕೋಪ ಮಾಡಿ ಪ್ರಯೋಜನವಿಲ್ಲ!), ಯಾರನ್ನೂ ದ್ವೇಷಿಸಬಾರದು, ಎಲ್ಲರನ್ನೂ ಪ್ರೀತಿಸಬೇಕೆನ್ನುವುದು ನನ್ನ ಬದುಕಿನ ತತ್ವ, ಸಿದ್ಧಾಂತವಾಗಿದೆ. ನೂರಾರು ಜನರ ಸ್ನೇಹ, ಅನ್ಯರಿಗೆ ಸಹಾಯ ಮಾಡುವುದರಿಂದ ನಮ್ಮ ಬದುಕಿನ ಉದ್ಧಾರ ಸಾಧ್ಯ. ಸೃಷ್ಟಿ ಆಸ್ವಾದಿಸಿ: ಮಕ್ಕಳು, ವಿದ್ಯಾರ್ಥಿಗಳು, ಯುವಜನತೆ ಉತ್ತಮ ಯೋಚನೆ, ಯೋಜನೆಗಳಲ್ಲಿ ನಿರತರಾಗಬೇಕೇ ಹೊರತು ಕೆಟ್ಟ ಚಿಂತನೆ ಸಲ್ಲದು. ತೃಪ್ತಿ ಸಿಗುವ ಕೆಲಸ ಮಾಡಿ, ನಿಮ್ಮದೇ ಇಸಂ ಇರಲಿ, ಸೋಮಾರಿಗಳಾಗಬೇಡಿ, ಪ್ರಗತಿಪ್ರಿಯರಾಗಿ. ಗಿಡ, ಮರ, ಪ್ರಕೃತಿ ಸಹಿತ ಸೃಷ್ಟಿಯ ಸೌಂದರ್ಯ ಆಸ್ವಾದಿಸಿ, ಬೇಸರವಾದರೆ ಆಕಾ, ಪಶು, ಪಕ್ಷಿಯನ್ನಾದರೂ ನೋಡಿ. ಕಷ್ಟಗಳಿಗೆ ಸ್ಪಂದಿಸಿ: ಜನರು ಸ್ವಾರ್ಥ ತೊರೆದು ಅನ್ಯರ ಕಷ್ಟಗಳಿಗೆ ಸ್ಪಂದಿಸುವುದೇ ಮಾನವೀಯ ಬದುಕಿನ ಗುಟ್ಟು. ಸಾಹಿತ್ಯ ಓದಬೇಕು, ಬದುಕಿನಲ್ಲಿ ಕೈ ಬಾಯಿ ಸ್ವಚ್ಛವಾಗಿಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಸರ್ವತೋಮುಖ ಸಂತೋಷ, ಶಾಂತಿ, ನೆಮ್ಮದಿ ಕೊಡುವ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು. ................................... ಸಾಹಿತ್ಯ ಸರಸ್ವತಿಯ ವಿಶಿಷ್ಟ ಪರಿಚಾರಕ ಕು. ಗೋ. ಚಲಿಸುವ ಪುಸ್ತಕ ಸಂಸ್ಕøತಿಯ ಪರಿವ್ರಾಜಕ ನಾನೊಬ್ಬ ಸಾಹಿತಿಯೆನ್ನುವ ಯಾವುದೇ ಹಮ್ಮಿಲ್ಲ, ಬಿಮ್ಮಿಲ್ಲ, ಕೊಂಬಿಲ್ಲ, ಕೋಳಿ ಜಂಬವೂ ಇಲ್ಲದ ಕು. ಗೋ. ಪುಸ್ತಕಗಳನ್ನು ಕೊಂಡು ಓದಬಲ್ಲವರಿಗೆ ಒಳ್ಳೆಯ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಮನೆಬಾಗಿಲಿಗೆ ಮಾರಿದ್ದಾರೆ. ಪುಸ್ತಕಗಳನ್ನು ಕೊಳ್ಳಲಾಗದವರಿಗೆ, ಓದುವ ಅಭಿರುಚಿ ಉಳ್ಳವರಿಗೆ ಉಚಿತವಾಗಿ ಪುಸ್ತಕಗಳನ್ನು ಕೊಟ್ಟು ಓದಿ ನೋಡಿ ಎಂದಿದ್ದಾರೆ, ಬೇಕೆಂದರೆ ಮತ್ತಷ್ಟು ಪುಸ್ತಕಗಳ ದಾನ ಮಾಡಿದ್ದಾರೆ. ಹೀಗೆ ಪುಸ್ತಕ ಹಂಚಿ, ಮಾರಿ, ಕು. ಗೋ. ಎಷ್ಟೊಂದು ಸಂಪಾದಿಸಿರಬಹುದಪ್ಪಾ ಎಂದು ಲೆಕ್ಕ ಹಾಕಿದರೆ ಅದು ಜನರ ಪ್ರೀತಿ, ವಿಶ್ವಾಸದ ಅಪಾರ ಸಂಪತ್ತಿನ ಹೊರತು ಬೇರೇನೂ ಇಲ್ಲ. ಸಾಹಿತಿಗಳು ಅನ್ಯರ ಪುಸ್ತಕಗಳ ಕುರಿತು ನಾಲ್ಕು ಒಳ್ಳೆಯ ಮಾತನ್ನಾಡೋದು ಬಲು ಕಡಿಮೆ, ಆದರೆ ಕು. ಗೋ. ಮಾತ್ರ ಇದಕ್ಕೆ ಅಪವಾದ. ತಾನು ಬರೆದದ್ದೇ ಮನೆಯಲ್ಲಿ ಓದುವವರಿಲ್ಲದೆ, ಮಾರಾಟವಾಗದೆ ರಾಶಿ ಬಿದ್ದಿರುವಾಗ ಅನ್ಯರ ಪುಸ್ತಕಗಳ ಪ್ರಕಟಣೆಗೆ ಮುಂದಾಗುವ ಮಾತೆಲ್ಲಿದೆ? ಪುಸ್ತಕ ಮಾರುವವರು ಒಳ್ಳೆಯ ಪುಸ್ತಕಗಳನ್ನು ಒಳ್ಳೆಯ ಓದುಗರಿಗೆ ಪುಕ್ಕಟೆಯಾಗಗಿ ಹಂಚುವುದಂತೂ ಈ ಕಲಿಯುಗದಲ್ಲಿ ವಿರಳಾತಿವಿರಳ. ಆದರೆ ಕು. ಗೋ. ಒಳ್ಳೆಯ ಪುಸ್ತಕಗಳ ಬಗ್ಗೆ ಒಳ್ಳೆಯ ಮಾತು ಮಾತ್ರವಲ್ಲ ನಾಲ್ಕು ಜನರಿಂದ ಲೇಖಕರಿಗೆ ಶಹಭಾಸ್‍ಗಿರಿ ದೊರೆವಂತೆ ಮಾಡುವ ರಾಯಭಾರಿಯೂ ಆಗಿದ್ದಾರೆ. ತನ್ನ ಮನದಲ್ಲುಳಿದವರ ಬರಹ ಪತ್ರಿಕೆಗಳಲ್ಲಿ ಬಂದರೆ ತಪ್ಪದೇ ದೂರವಾಣಿ ಕರೆ ಮಾಡಿ ಇಂದಿಗೂ ಲಲ್ಲೆಗರೆವ ಕು.ಗೋ. ಇಂದ್ರಾಳಿ ಹಯಗ್ರೀವ ನಗರದ ವಾಗ್ದೇವಿ ನಿವಾಸಿ. ಮನೆ ಮನೆಯಲ್ಲಿ ಸಾಹಿತ್ಯ ಚಟುವಟಿಕೆಯ ನಡುಮನೆಗೂ ಪ್ರೇರಕ ಶಕ್ತಿಯಾಗಿದ್ದ ಕು. ಗೋ. ಸಹೃದಯೀ ಓದುಗರ ಪರಂಪರೆ ಸೃಷ್ಟಿಯಲ್ಲಿ ನೀಡಿದ ಕೊಡುಗೆ ಅನನ್ಯ.ಜೂ. 5ರಂದು ಕಿದಿಯೂರು ಹೋಟೆಲಿನ ಶೇಷಶಯನ ಸಭಾಂಗಣದಲ್ಲಿ ನಡೆಯುವ 84ನೇ ವಸಂತ ಸಂಭ್ರಮದಲ್ಲಿ ಹಾಸ್ಯ ಬರಹಗಾರ ಶ್ರೀನಿವಾಸ ವೈದ್ಯರ ಕೃತಿ ಹಂಚಲಿದ್ದಾರೆ. ....................... ಪುಸ್ತಕಕ್ಕೆ ಸಂಬಂಧಿಸಿ ಮಸ್ತಕದಲ್ಲಿಡಬೇಕಾದ ವಿಚಾರ... *ಪಡೆದ ಪುಸ್ತಕವನ್ನು ಗೌರವ ಪ್ರತಿಯೆಂದು ಭ್ರಮಿಸಿ ಲೇಖಕರಿಗೆ, ಪ್ರಕಾಶಕರಿಗೆ ದುಡ್ಡು ಕೊಡದಿರುವುದು. *ಧರ್ಮಕ್ಕೆ ಪುಸ್ತಕ ಕೊಟ್ಟರೂ ಅದನ್ನು ಓದದಿರುವುದು. *ಪುಸ್ತಕ ಕೊಟ್ಟವರಿಗೆ ನಾಲ್ಕು ಸಾಲು ಹೊಗಳಿಯೋ ಬೈದೋ ಪತ್ರ/ಕಾರ್ಡು ಬರೆಯದಿರುವುದು *ಪುಸ್ತಕ ಬರೆಯುವವರ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುವುದು ದೋಷ ಪರಿಹಾರಕ್ಕಾಗಿ ನೀವೇನು ಮಾಡಬೇಕು? *ಯಾರದರೂ ಪುಸ್ತಕ ಒಟ್ಟರೆ ಸುಮ್ಮನೆ ತೆಗೆದುಕೊಂಡು ಚೀಲಕ್ಕೆ ಸೇರಿಸದೆ(ಸೇರಿಸಿದರೂ!) ಎಷ್ಟು ಹಣ ಕೊಡಬೇಕೆಂದು ಕೇಳಿ ಪುಸ್ತಕದ ಮೌಲ್ಯ ಸಂದಾಯ ಮಾಡಬೇಕು. *ಬೀಡಿ, ಸಿಗರೇಟು, ಚಾ, ಕಾಫಿ, ನಾಟಕ, ಸಿನಿಮಾ ಅಂತ ಖರ್ಚು ಮಾಡುವಂತೆ ಈ ಜನ್ಮದಲ್ಲಿ ಒಂದೆರಡಾದರೂ ಪುಸ್ತಕ ಹಣ ಕೊಟ್ಟು ಖರೀದಿಸುವುದು *ಸಾಹಿತ್ಯ ಸಮ್ಮೇಳನ, ಸಭೆ, ಸಮಾರಂಭ, ಕವಿಗೋಷ್ಠಿ, ಹಾಸ್ಯ ಗೋಷ್ಠಿಗಳಿದ್ದರೆ ತಪ್ಪದೇ ಹೋಗಬೇಕು, ಮಕ್ಕಳನ್ನೂ ಕರೆದೊಯ್ದು ಸರಸ್ವತಿ ಸೇವೆಗೆ ಪೆÇ್ರೀತ್ಸಾಹಿಸಬೇಕು. *ಪುಸ್ತಕ ಪ್ರೀತಿ ಬೆಳೆಸಿಕೊಂಡರೆ, ಸಂತೋಷ, ನೆಮ್ಮದಿ, ಆತ್ಮತೃಪ್ತಿ ನಮ್ಮದಾಗುತ್ತದೆ. ............................ *50,000 ಪುಸ್ತಕ ವಿತರಣೆ ಲೇಖಕರು, ಓದುಗರು, ಪ್ರಕಾಶಕರ ಮಧ್ಯೆ ಕೊಂಡಿಯಾದ ಕು. ಗೋ.(ಹೆರ್ಗ ಗೋಪಾಲ ಭಟ್ಟ) ಯಾವುದೇ ಅಸೂಯೆಯಿಲ್ಲದೆ 50,000 ಪುಸ್ತಕ ವಿತರಿಸಿದ್ದಾರೆ! *ಲೇಖಕರಿಗಿಂತ ಹೆಚ್ಚು ಸಂತೃಪ್ತಿ 15ಲಕ್ಷ ರೂ. ಮೌಲ್ಯದ 300ರಿಂದ 400 ಲೇಖಕರ(5-6 ಮಂದಿಯದ್ದು ಹೆಚ್ಚು ವಿತರಣೆ) ಪುಸ್ತಕಗಳನ್ನು ಆಸಕ್ತ ಓದುಗರ ಕೈಗೆ ನೀಡಿದ್ದಾರೆ. *ಕನ್ನಡ ಪಂಡಿತರ ಪ್ರೇರಣೆ ಮಾಧ್ಯಮಿಕ-ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರ ಕನ್ನಡ ಪಾಠದ ಕಂಪು, ಇಂಪು ಕು. ಗೋ. ಸಾಹಿತ್ಯಾಸಕ್ತಿಗೆ ಕಾರಣ. ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರ ಮುಗುಳು ಕೃಷಿಯಿಂದ ನವಚೇತನ ಪಡೆದಿದ್ದಾರೆ. *ಅಂತರ್ಜಾಲ ಸಾಹಿತಿಗಳ ಸೃಷ್ಟಿ ಸಾಹಿತ್ಯ ಓದಿನಿಂದ ಮಾಹಿತಿ ಗಳಿಕೆ, ಮನರಂಜನೆ, ಟೈಂಪಾಸ್ ಸಾಧ್ಯ. ಈಗ ಅಂತರ್ಜಾಲ, ವಾಟ್ಸ್ಯಾಪ್ ಸಾಹಿತಿಗಳ ಸೃಷ್ಟಿಯಾಗಿದೆ. ಗುಂಪುಗಾರಿಕೆಯಿಂದಾಗಿ ಕೆಲವರು ವಿಜೃಂಭಿಸುತ್ತಿದ್ದಾರೆ. *ಸಾಹಿತ್ಯ ಓದು ಮುಖ್ಯ ಹಳೆ ತಲೆಮಾರಿನ ಪುಸ್ತಕಗಳನ್ನು ಈಗಿನ ಲೇಖಕರು, ಓದುಗರು ಓದಲೇಬೇಕು. ಕನ್ನಡ ಸಾಹಿತ್ಯದ ಬಗ್ಗೆ ಯಾವುದೇ ನಿರಾಸೆ ಬೇಡ. *ಜವಾಬ್ದಾರಿ ಮರೆಯದಿರಿ ಕನ್ನಡಿಗರು ಹಾಗೂ ಸರಕಾರ ಕನ್ನಡತನದಿಂದ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಬೇಕು, ಇದು ನಮ್ಮೆಲ್ಲರ ಜವಾಬ್ದಾರಿ. *ಕು. ಗೋ. ಹೆಸರ ಹಿಂದೆ... ಕಾಲೇಜು ದಿನಗಳಲ್ಲಿ ಕುಸುಮಾ ಎಂಬ ಬೆಳದಿಂಗಳ ಬಾಲೆಯನ್ನು ಆಕೆಗೆ ಗೊತ್ತಿಲ್ಲದಂತೆ (ಒನ್ ವೇ ಲವ್) ಮನಸಾ ಪ್ರೀತಿಸುತ್ತಿದ್ದೆ. ಆಕೆಯ ಹೆತ್ತವರು ನನ್ನನ್ನು ಇಷ್ಟಪಟ್ಟು ಮದುವೆ ಪ್ರಸ್ತಾಪದೊಂದಿಗೆ ಬಂದರೂ ಸಗೋತ್ರದಿಂದಾಗಿ ಮದುವೆಯಾಗಲಿಲ್ಲ. ಅದೃಶ್ಯವಾಗಿ, ಅವ್ಯಕ್ತವಾಗಿ ಸಾಹಿತ್ಯ-ಬದುಕಿಗೆ ಕುಸುಮಾ ಇಂದೂ ಪ್ರೇರಣೆಯಾಗಿದ್ದಾಳೆ. ಮೈಸೂರಿನಲ್ಲಿದ್ದ ಅಣ್ಣನ ಹೋಟೆಲಿಗೆ ಬರುತ್ತಿದ್ದ ಕುಸುಮನಿಗೆ ಎರಡು ಇಡ್ಲಿ ಕೇಳಿದರೆ ನಾಲ್ಕಿಡ್ಲಿ ಕಟ್ಟಿಕೊಡುತ್ತಿದ್ದರು. ಕುಸುಮಾ ಹೆಸರಲ್ಲಿ ಸಾಹಿತ್ಯ ರಚಿಸುತ್ತಿದ್ದೆ. ದಾಂಪತ್ಯದ ಗಂಟು ಬೀಳದಿದ್ದರೂ ಆಕೆಯ ಹೆಸರಿನ ಒಂದಕ್ಷರವನ್ನು(ಕು) ನನ್ನ ಹೆಸರಿಗೆ ಗಂಟು ಹಾಕಿಕೊಂಡು ಕುಖ್ಯಾತನಾಗಿದ್ದೇನೆ(ಕು. ಗೋ.) .......................... *ಮಗ, ಮಗಳು: ದೊಡ್ಡ ಮಗ ಆತ್ಮಭೂತಿ ವಿಪೆÇ್ರೀ ಸಂಸ್ಥೆಯ ಉದ್ಯೋಗಿ, ವಿಷ್ಣುಮೂರ್ತಿ ಗೋ ಸಾಕಣೆಯಲ್ಲಿ ನಿರತ, ಮಗಳು ಆಶಾ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲಿನಲ್ಲಿ ಶಿಕ್ಷಕಿ. *ಅಸಹ್ಯ ನೋವು: ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಕು. ಗೋ. ಇಳಿ ವಯಸ್ಸಿನಲ್ಲಿ ಸರ್ಪ ಸುತ್ತಿನ ನೋವು ಅನುಭವಿಸಿದರೂ ಜನರ ಪ್ರೀತಿ ವಿಶ್ವಾಸದಿಂದ ವಾಕಿಂಗ್ ಸ್ಟಿಕ್ ಹಿಡಿದು ನಡೆವಷ್ಟು ಸುಧಾರಿಸಿದ್ದಾರೆ. ........................ --

Monday, May 2, 2022

ಸಮುದ್ಯತಾ ವೆಂಕಟರಾಮು - ಎಮ್. ಆರ್. ದತ್ತಾತ್ರಿ ಅವರ " ಒಂದೊಂದು ತಲೆಗೂ ಒಂದೊಂದು ಬೆಲೆ { ಕಾದಂಬರಿ }

ಒಂದೊಂದು ತಲೆಗೂ ಒಂದೊಂದು ಬೆಲೆ ಇತ್ತೀಚೆಗೆ ಬಿಡುಗಡೆಯಾದ ಎಂ ಆರ್ ದತ್ತಾತ್ರಿಯವರ ಕಾದಂಬರಿ. ಶೀರ್ಷಿಕೆಯೂ ವಿಶೇಷವಾಗಿದೆ. ಅವರ ಮೂರು ಕಾದಂಬರಿಗಳನ್ನು ಓದಿದ ನನಗೆ ಇದರ ಬಗ್ಗೆ ಬಹಳ ಕುತೂಹಲವಿತ್ತು. ಹಾಗಾಗಿ ತಕ್ಷಣವೇ ತರಿಸಿ ಓದಿದೆ. ನಿರಾಶೆಯಾಗಲಿಲ್ಲ. ತುಂಬಾ ಇಷ್ಟವಾಯಿತು. ಮೊದಲಿಗೆ ಸುದೀರ್ಘವೆನಿಸದ ಕಥನ. ಸರಳವಾದ ಬರವಣಿಗೆ. ಯಾವುದೂ ಅತಿ ಎನಿಸದಂತಿದೆ. " ಎಲ್ಲಿ ಹುಟ್ಟು ಸಂಭವಿಸುತ್ತದೋ ಅದು ಮನೆ ,ಎಲ್ಲಿ ಸಾವು ಸಂಭವಿಸುತ್ತದೆಯೋ ಅದೂ ಮನೆಯೇ ಮನೆ ತನ್ನಷ್ಟಕ್ಕೆತಾನೇ ಮನೆಯಾಗುವುದಿಲ್ಲ‌.ಕಟ್ಟಿದ್ದಕಷ್ಟೇ ಮನೆಯಾಗುವುದಿಲ್ಲ ಬದುಕಿದ್ದಾಗ ಮನೆಯಾಗುತ್ತದೆ.ಮನೆ ತನ್ನದಾಗುವುದಕ್ಕೆ ಒಡೆತನವೇ ಬೇಕಿಲ್ಲ . ಸೇಲ್ಸ್ ಡೀಡ್ ರಿಜಿಸ್ಟ್ರೇಶನ್ ಖಾತಾ ಟ್ಯಾಕ್ಸ್ ರಶೀದಿ ಎಂಥದ್ದೂ ಬೇಕಿಲ್ಲ. ಕಿಟಕಿಯಾಚೆಗೆ ಬಿದ್ದರೆ ಒಂದು ಸಣ್ಣ ಮಳೆಗೆ ಅವೆಲ್ಲ ರದ್ದಿ ಕಾಗದಗಳಾಗುತ್ತವೆ. ಪೂರ್ತಿಯಾಗಿ ಲೌಕಿಕ ಬದುಕಿನ ದೋಣಿಯೊಳಗೆ ಕಾಲಿಟ್ಟ ಶಿವಸ್ವಾಮಿ ಎಂಬ ,ಒಂದು ಕಂಪನಿಯಿಂದ ನಿವೃತ್ತಿ ಹೊಂದಿ ಮತ್ತೆ ಮನೆ ಎಂಬ ಲೌಕಿಕದ ಗೂಡೊಂದನ್ನು ಸ್ವಂತವಾಗಿ ಹೊಂದಲು ಬಯಸುವ ಸಾಮಾನ್ಯ ಕುಟುಂಬಸ್ಥನೊಬ್ಬನ ಚಿಂತನೆಗಳು ಹೀಗೆ ಸಾಗುತ್ತಾ ಹೋಗುತ್ತವೆ. ಮನೆ ಇರಲಿಲ್ಲ, ಮನದ ತುಂಬ ಅಲ್ಲಮನಿದ್ದ. ಮೂವತ್ತೈದು ವರ್ಷಗಳ ಕಾಲ ಫಾಝಿಯಾಬಾದ್ ನಲ್ಲಿ ಪಬ್ಲಿಕ್ ಸೆಕ್ಟರ್ ಕಂಪನಿ ಬಿ ಇ ಎಲ್ ನಲ್ಲಿ ಕೆಲಸಮಾಡಿ ನಿವೃತ್ತಿ ಯ ನಂತರ ಬೆಂಗಳೂರು ಸೇರಿದ ಶಿವಸ್ವಾಮಿ ಮತ್ತೆ ಉದ್ಯೋಗಕ್ಕೆಂದು ಸಾಫ್ಟ್‌ವೇರ್ ಕಂಪನಿಯೊಂದಕ್ಕೆ ಸಂದರ್ಶನಕ್ಕೆಂದು ಬರುವುದರಿಂದ ಕಥೆ ಆರಂಭವಾಗುತ್ತದೆ. ವಿದೇಶದಲ್ಲಿ ನೆಲೆಸಿರುವ ಮಗಳ ಹೆರಿಗೆ ಸಮಯಕ್ಕೆಂದು ಹೋದ ಪತ್ನಿ ರೇವತಿ, ಅಮೇರಿಕಾದಲ್ಲಿಯೇ ಎಂ ಎಸ್ ಮಾಡುತ್ತಿರುವ ಮಗ, ಹೀಗೊಂದು ಪುಟ್ಟ ಸಂಸಾರದ ಸದಸ್ಯರೆಲ್ಲ ದೂರದಲ್ಲಿ. ಅಪಾರ್ಟ್ಮೆಂಟ್ ನ ಹಲವಾರು ಹಳವಂಡಗಳ ನಡುವೆ ಶಿವಸ್ವಾಮಿ. ಸಣ್ಣ ಕಂಪನಿಯಿಂದ ಶುರುಮಾಡಿ ದೊಡ್ಡದಾಗಿ ಬೆಳಸಿ ಡಿ ಟಿ ಗ್ರೂಪ್ ಎಂಬ ಸಾಮ್ರಾಜ್ಯ ಕಟ್ಟಿದ ಗುಜರಾತಿ ಧಾವಲ್ ಥಕ್ಕರ್, ಸಂದರ್ಶನದಲ್ಲಿ ನಪಾಸಾಗಿದ್ದ ಶಿವಸ್ವಾಮಿಯನ್ನು ತಮ್ಮ ಹಿತಾಸಕ್ತಿಯೆಂಬಂತೆ ಸೇರಿಸಿಕೊಳ್ಳುವುದು, ಅವರ ಮಗ ರವಿರಾಜ ಥಕ್ಕರ್ ಸೊಸೆ ಧೃತಿ , ಇವರನ್ನೇ ಬೆಂಬಲಿಸುವ ಶ್ಯಾಮಲಾ, ಪ್ರಭು, ಕಂಡೂ ಕಾಣದಂತಹಾ ಸಂಘರ್ಷ ಗಳ ದಾರಿಯಲ್ಲಿ ಸಾಗುವ ಕಥೆ. ಅಪಾರ್ಟ್‌ಮೆಂಟ್ ನಲ್ಲಿ ಮನೆಯೊಂದನ್ನು ಕೊಂಡರೂ ಅದನ್ನು ತನ್ನದಾಗಿಸಿಕೊಂಡು ಅಲ್ಲಿ ನೆಲೆಯಾಗಲು ಪಡುವ ಕಷ್ಟಗಳು .ಬಿಲ್ಡರ್ ಗಳ ಚಾಲಾಕಿ ತನವೋ ದಗಲ್ಬಾಜಿ ತನವೋ ಒಟ್ಟಿನಲ್ಲಿ ಸರಳವಾಗಿ ಸಾತ್ವಿಕವಾಗಿ ಬದುಕಿದ ಶಿವಸ್ವಾಮಿಯಂತವರಿಗೆ ಬದುಕು ನಿರಾಳವಾಗಿರಲು ಬಿಡಲಾರದು. ದುಡಿತ ಅನಿವಾರ್ಯ ವೆಂಬಂತೆ. ಎಲ್ಲವೂ ಹೆಚ್ಚಾಗಿಯೇ ಇದ್ದ ಧಾವಲ್ ರಿಗೆ ತಮ್ಮ ಹಿಡಿತದಿಂದ ಯಾವುದೂ ಜಾರಬಾರದೆಂಬಂತೆ. ಅದಕ್ಕಾಗಿ ಹೋರಾಟ. ಅವರೇ ಕಟ್ಟಿ ಬೆಳೆಸಿದ ಕಂಪನಿಗಳು ಕೊಂಡ ಮನೆಗಳು . ದೊಡ್ಡದೊಂದು ಸಾಮ್ರಾಜ್ಯದ ಒಡೆಯ, ಶಿವ ಸ್ವಾಮಿಯಲ್ಲಿ ಆಪ್ತತೆ ಕಂಡುಕೊಳ್ಳುತ್ತಾ ತೆರೆದುಕೊಳ್ಳುತ್ತಾ ಹೋಗುತ್ತಾನೆ. ಡಿಟಿಗ್ರೂಪ್, ಸಾಫ್ಟ್‌ವೇರ್ ಜಗತ್ತು, ಅನೂಪ್ ಗಾರ್ಡೇನಿಯಾದೊಂದಿಗೆ ಅಲ್ಲಮನನ್ನೂ ಹೊತ್ತು ಶಿವಸ್ವಾಮಿ ಯವರು ಸಾಗುವುದೇ ವಿಶೇಷವಾಗಿದೆ ಆಧುನಿಕ ಜಗತ್ತಿನೊಂದಿಗೆ ಇಲ್ಲೊಂದು ಆಧ್ಯಾತ್ಮದ ಜಗತ್ತೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ಕಾಣಿಸುವುದರ ಹಿಂದೆ ಅಡಗಿರುವ ಬೇರೆ ಮುಖಗಳು ಸತ್ಯಗಳು ಶಿವಸ್ವಾಮಿಯಂತಹ ಸರಳ ಸಾದಾರಣ ಬದುಕನ್ನು ಬಾಳಿದವರಿಗೆ ಅರಿವಾಗುವುದು ಎಷ್ಟು ಕಷ್ಟವೋ ಹಾಗೇ ಧಾವಲ್ ನ ಸೊಸೆ ಧೃತಿ ಯಂತವರಿಗೆ ಶಿವಸ್ವಾಮಿಯ ಪುಟ್ಟ ಮಗಳ ಸೊಳ್ಳೆಪರದೆ ಸಂಸಾರವೆಂಬ ಕಲ್ಪನೆಯೇ ಬೆರಗುಮೂಡಿಸುವಂತದ್ದು. ಪರಸ್ಪರ ಬದುಕಿನ ಕ್ರಮಗಳೇ ಬೇರೆಯಾದಾಗ ಚಿಂತನೆಗಳೂ ವಿಭಿನ್ನವಾಗುತ್ತ ಹೋಗುತ್ತವೆ " ಅಸ್ತಿತ್ವಕ್ಕೆ ಮನೆ ಬೇಕು ಆದರೆ ವಿಚಿತ್ರವಾಗಿ, ಅಸ್ತಿತ್ವಕ್ಕೂ ಮನೆಗೂ ವಿಲೋಮ ಸಂಬಂಧವಿದೆ. ಮನೆ ದೊಡ್ಡದಾದಷ್ಟು ಅಸ್ತಿತ್ವ ಕುಗ್ಗುತ್ತದೆ" ಶಿವಸ್ವಾಮಿಯವರದ್ದು ಸರಳವಾದ ಸಂಬಂಧಗಳ ಕುಟುಂಬವಾದರೆ ಧಾವಲ್ ರದ್ದು ಬಹಳ ಸಂಕೀರ್ಣವಾದ , ವ್ಯವಹಾರಕ್ಕೆ ಅಂಟಿಕೊಂಡಿದ್ದು ಬಹು ದೊಡ್ಡ ಅಂತರವೇ ಅಲ್ಲಿದೆ. ತಾನೇ ಕಟ್ಟಿ ಬೆಳೆಸಿದ ಮೋಹವೋ ಅಸುರಕ್ಷಿತ ಭಾವವೋ ಅಭದ್ರತೆಯ ಭಯವೋ ಬಿಟ್ಟು ಕೊಡಲೊಲ್ಲದ ತಂದೆ,ತಮ್ಮದಾಗಿಸಿಕೊಳ್ಳಲೇಬೇಕೆಂಬ ಬಯಕೆಯ ಮಗ ಸೊಸೆ ಇವರ ನಡುವೆ ಸಿಕ್ಕಿದ ಶಿವಸ್ವಾಮಿ " ಅವರವರ ಆಂತರ್ಯ ಅವರವರಿಗಷ್ಟೇ ತಿಳಿದಿರುತ್ತದೆ. ಅವರವರ ಕತ್ತಲೆಗೆ ಅವರವರು ಬೆಳಕು ಕಂಡುಕೊಳ್ಳಬೇಕು. ಅವರವರ ಮನದೊಳಗಿನ ಕ್ಲೇಶದ ಮಂಜನ್ನು ಅವರವರು ನಿರಭ್ರಗೊಳಿಸುಕೊಳ್ಳಬೇಕು" "ಒಂದೇ ತೊರೆಯಲ್ಲಿ ಎರಡು ದೋಣಿಗಳಿದ್ದರೂ ಒಂದರಿಂದ ಮತ್ತೊಂದಕ್ಕೆ ಹಾರಿಕೊಳ್ಳಲು ಮಹಾ ಎದೆಗಾರಿಕೆ ಬೇಕು .ಒತ್ತದೇ ಹಣ್ಣಾಗಿರಬೇಕು" ಬೆಳಕಿನ ಕೊರತೆಗೆ ಹೇಗೆ ಕೆಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತವೋ ಹಾಗೆಯೇ ಬೆಳಕಿನ ಯಥೇಚ್ಚಕ್ಕೂ ರೋಗಗಳಿರಬೇಕು . ಕೆಲವು ಹುಣ್ಣುಗಳು ಕತ್ತಲೆಯಲ್ಲಿ ವಾಸಿಯಾಗುತ್ತವೆ ಮತ್ತು ಬೆಳಕಿಗೆ ವ್ರಣವಾಗುತ್ತವೆ. " ಈ ರೀತಿಯ ಸಾಲುಗಳು ತುಂಬಾ ಇಷ್ಟವಾಗುತ್ತವೆ. ಶಿವಸ್ವಾಮಿ ಬದುಕಿನೊಳಗಿನ ಅದೊಂದು ಕಹಿಸತ್ಯವನ್ನು ಎಲ್ಲೂ ತೆರೆದುಕೊಳ್ಳಲು ಇಚ್ಚಿಸಲಾರ. ಗಾಯ ಮಾದರೂ ಉಳಿದ ಕಲೆಯಂತೆ ಅವನ ಉಸಿರಲ್ಲಿ ನಿಟ್ಟುಸಿರಾಗಿ ಹಾವೊಂದು ಮತ್ತೆ ಬಿಲ ಸೇರಲಾರದಂತೆ ಹುಡುಗರು ಅದನ್ನು ಕೊಂದುಬಿಡುವ ದೃಶ್ಯ ಅದೆಷ್ಟು ಕಲಕಿಬಿಡುತ್ತದೆ ಶಿವಸ್ವಾಮಿಯನ್ನು. ಹಾವಿಗೂ ಭಯ ಮನುಷ್ಯರಿಗೂ ಭಯ. ನಗರಪ್ರದೇಶದಲ್ಲಿ ಕಂಡೂ ಕಾಣದಂತಹಾ ಕೆಲವು ಕ್ರೌರ್ಯಗಳು ಹಾಸು ಹೊಕ್ಕಾಗಿರುವ ಒತ್ತಡಗಳು ಲಾಲಸೆಗಳು ಆದುನಿಕ ಬದುಕಿನ ಪರಿಕ್ರಮದಲ್ಲಿ ಬದುಕಲೇಬೇಕಾದ ಅನಿವಾರ್ಯತೆಗಳು ಕಾದಂಬರಿಯ ಎಲ್ಲ ಪಾತ್ರಗಳನ್ನು ಒಂದಿಲ್ಲೊಂದು ತರದಲ್ಲಿ ಬಳಸಿಕೊಂಡಿವೆ. ಮನುಷ್ಯ ವಿದ್ಯಾವಂತನಾದಷ್ಡು ಬುದ್ದಿವಂತನಾದಷ್ಡು ಸಂಬಂಧಗಳು ಸಂಕೀರ್ಣ ವಾಗುತ್ತವೆಯೇ ಎಂದು ಧಾವಲ್ ರ ಪರಿವಾರ ನೋಡಿದಾಗ ಅನಿಸುವುದು. ಸಂಬಂಧಗಳೂ ವ್ಯಾವಹಾರಿಕವಾಗಿ ವರ್ತಿಸತೊಡಗಿಬಿಡುತ್ತವಲ್ಲ! ಧಾವಲ್ ತಮ್ಮ ಸಾಮ್ರಾಜ್ಯದ ಒಡೆತನವನ್ನು ಪೂರ್ತಿಯಾಗಿ ಮಗನಿಗೆ ಬಿಟ್ಟುಕೊಟ್ಟು ಮತ್ತೆ ತಮ್ಮ ಹಳೆಯ ಮನೆಗೇ ಹೋಗುತ್ತೇನೆಂದು ಹೇಳಿ ನಿರಾಳವಾಗಿಬಿಡುತ್ತಾರೆ. ಅಲ್ಲಮನನ್ನು ಹೊತ್ತು ಸಾಗಿದ‌ ಶಿವಸ್ವಾಮಿ ಕೊನೆಯಲ್ಲಿ ಕಳೆದುಕೊಂಡನಾ? ಇಲ್ಲ ಪಡೆದುಕೊಂಡನಾ?. ಕೊನೆಗೆ ಅಲ್ಲಮನನ್ನೂ!! ??!! ನನ್ನ ಗ್ರಹಿಕೆಗೆ ದಕ್ಕಿದಂತೆ ಕೆಲವು ಸಾಲುಗಳ ಮೂಲಕ ಹಂಚಿಕೊಂಡಿದ್ದೇನೆ. ಒಳ್ಳೆಯದೊಂದು ಓದಿಗೆ ಕಾರಣವಾದ ಪುಸ್ತಕ. ಅಭಿನಂದನೆಗಳು ದತ್ತಾತ್ರಿಯವರೆ 0

Saturday, April 30, 2022

ರಹಮತ್ ತರೀಕೆರೆ - ಕಸ್ತೂರಿ ಬಾಯರಿ [ ಸಂದರ್ಶನ }

ಮಾತುಕತೆ: `ಆರ್ದ್ರತೆಯಿಲ್ಲದೆ ದೊಡ್ಡ ಸಾಹಿತ್ಯ ಹುಟ್ಟಲ್ಲ' - ಕಸ್ತೂರಿ ಬಾಯರಿ(1956-2022) *ನಿಮ್ಮ ಕುಟುಂಬ ಕರಾವಳಿಯಿಂದ ಬದಾಮಿಗೆ ಯಾಕಾಗಿ ಬರಬೇಕಾಯಿತು? ತಾಯಿ ಟಿಬಿಯಾಗಿ 33ನೇ ವಯಸ್ಸಿಗೇ ಹೋಗಿಬಿಟ್ಟಳು. ಅಪ್ಪಯ್ಯ ಐದು ಮಕ್ಕಳನ್ನು ಕರಕೊಂಡು ಇಲ್ಲಿಗೆ ಬಂದರು. ಸಣ್ಣದೊಂದು ಚಾದಂಗಡಿ ಇಟ್ಟರು. ಅವರು ಊರಲ್ಲಿದ್ದಾಗ ಸಾಲಿಗೆ ಹೋಗೊ ಮುಂದ `ಎಸ್ಸಿ ಮಂದಿ ಬಂದಾರ. ಮುಟ್ತಾರ' ಅಂತ ಮನಿಗೆ ಓಡಿ ಬಂದಿದ್ದರಂತೆ. `ಆ ಕಾಲ ಹಂಗಿತ್ತವ್ವ' ಅನ್ನೋರು. ಈಗ ಎಲ್ಲಾ ಜಾತಿ ಮಂದಿ ಚಾ ಕುಡದ ಕಪ್ಪುಬಸಿ ತೊಳೀತಿದ್ದರು. ಮನೀಗೆ ಯಾರಾದರೂ ದಲಿತರು ಬಂದರ ಬ್ಯಾಡ ಅಂತಿದ್ದಿಲ್ಲ. ಧರ್ಮ ಅನ್ನೋದು ಅಡಿಗೆ ಮನೀಗಷ್ಟೇ ಇರಬೇಕು ಅಂತಿದ್ದರು. ಮುಕ್ತಿಸಾಧನೆಗೆ ಅಂತ ಸಾಧು ಸಂತರು ಜಟಾಧಾರಿಗಳ ಕೂಡ ಅಡ್ಡಾಡತಿದ್ರು. *ಬದಾಮಿಯ ಮೊದಲ ದಿನ ಹೇಗಿದ್ದವು? ಬಜಾರದಾಗ ಒಂದು ಖೋಲಿಯಾಗ ಇದ್ದಿವಿ. ಟಾಯ್ಲೆಟಿಲ್ಲ. ನೀರಿಲ್ಲ. ಆ ಹೊಲಸು ಈಗಲೂ ಕನಸ್ನಾಗ ಕಾಡ್ತದರಿ. ನಮ್ಮಜ್ಜಯ್ಯನ ಮನ್ಯಾಗ ಮೆತ್ತನ್ನ ಅನ್ನ ತಿಂದು ಬೆಳದೋರು. ಬರದಗುಡ್ಡಕ್ಕೆ ಬಂದು ಬಿದ್ದಿದ್ವಿ. ಹೊಲಗೆಲಸ ಮಾಡಾಕೆ ಬರ್ತಿದ್ದಿಲ್ಲ. ಅವರಿವರು ಕೊಟ್ಟ ಒಣಾರೊಟ್ಟಿ ತಿನ್ನಕಾಗ್ತಿದ್ದಿಲ್ಲ. ಸಜ್ಜಿಹಿಟ್ಟು ಕಲಸಿ ದೋಸೆ ಮಾಡ್ತಿದ್ದಿವಿ. ದಂದಕ್ಕಿಯೊಳಗ ದನ ಮೇದುಬಿಟ್ಟ ಜ್ವಾಳದಗಡ್ಡಿ ತಂದು ಒಲೆ ಹಚ್ಚತಿದ್ದಿವಿ. ಎಸೆಸೆಲ್ಸಿ ಪಿಯುಸಿ ತನಕ ರೋಡ್ ಲೈಟಿನೊಳಗ ಓದಿದಿವಿ. ರೋಹಿಣಿಗೆ ಸರ್ಕಾರಿ ನೌಕರಿ ಬರೋತಂಕ ನಾವು ಸರಿಯಾಗಿ ಊಟಾನೇ ಮಾಡಲಿಲ್ಲ. *ಇಲ್ಲಿನ ಜನ ನಿಮ್ಮನ್ನು ಹೇಗೆ ಸ್ವೀಕರಿಸಿದರು? ಏ, ಬಾಯರಿ ಮೇಡಂ ಅಂದರ ಅಷ್ಟು ಪ್ರೀತಿರಿ. ನಮ್ಮ ತಮ್ಮ ಒಂದು ಸಲ ಕೊರೊನಾ ಟೈಮನಾಗೆ ಬಂದಿದ್ದ. ಪೋಲೀಸರು ಚೆಕ್ ಪೋಸ್ಟಿನ್ಯಾಗ ತಡದರಂತ, ಮಾಸ್ಕ್ ಹಾಕಿಲ್ಲ ಅಂತ. `ಇಲ್ರೀ, ನಾವು ಬಾಯಿರಿ ಮೇಡಂ ಮನೀಗೆ ಹೊಂಟೀವಿ' ಅನ್ನಾಣ, `ಬಾಯಿರಿ ಮೇಡಂ ಮನೀಗ? ಹೋಗರಿ ಹೋಗರಿ' ಅಂದರಂತ. `ಲಾ ಇವನ! ಈಕಿಗಿ ಪೋಲೀಸ್ ಡಿಪಾರ್ಟಮೆಂಟಿನ್ಯಾಗೂ ಶಿಷ್ಯರದರಾಲ್ಲ' ಅಂತ ಆಶ್ಚರ್ಯಪಟ್ಟ ಅವನು. *ಬದಾಮಿ ಸೀಮೆಯ ವಿಶೇಷತೆಯೇನು? ಇಲ್ಲಿ ಮಣ್ಣು ಗಾಳಿ ಎಷ್ಟು ಛಲೋ ಅದೇರಿ. ಬಸವಣ್ಣ ಆಳಿದ ಈ ನಾಡದ್ಯಲ್ಲ, ಭಾಳ ಒಳ್ಳೇ ನಾಡು. ಅವನ ಜಂಗಮ ತತ್ವ ಏನದ್ಯಲ್ಲ ವಂಡರಫುಲ್. ಇಲ್ಲಿನ ಜನ ಹಡಸೀಮಗನ, ಬೋಸುಡಿಕೆ, ನಿನ್ನೌನ, ಹುಚ್ಚುಪ್ಯಾಲಿ ಅಂತ ಬೈದಾಡ್ತಾರ. `ಏ ಕಸಬರಗಿ, ಬಾಯಿಲ್ಲಿ' ಅಂತ ತಾಯಿ ಮಗನ್ನ ಕರೀತಾಳ. ಗೆಳೆಯರು `ಏ ಹುಚ್ಚಬರಗಿ ಅದೀಯಲೇ ಮಗನಾ' ಅಂತಾರ. ಬೇಕಾದ್ದು ಜಗಳಾಡಲಿ, ಮತ್ತ ತೆಕ್ಕೆಬಡದು ಒಂದಾಗಿ ಬಿಡ್ತಾರ. ನಮ್ಮನೀಗೆ ಒಬ್ಬಾಕಿ ಮುಸಲೋರ ಹೆಂಗಸು, ಬಾಗವಾನರಾಕಿ ಹೂ ಮಾರಕೊಂಡು ಬರತಾಳ. ಒಂದಿವಸ `ಎಷ್ಟು ಮಕ್ಕಳಬೇ?' ಅಂತ ಕೇಳಿದೆ. `ಮೂರು' ಅಂದಳು. `ಲಗ್ನ ಎಲ್ಲಿಗೆ ಮಾಡಿಕೊಟ್ಟಿ?' ಅಂದೆ. `ಇಲ್ರೀ, ಹಿರೇಮಗಳ ನರ್ಸಿಂಗ ಮುಗಿಸ್ಯಾಳರಿ, ಬಿಎಎಂಎಸ್ ಗೆ ಹಚ್ಚೀನ್ರಿ. ಎರಡನೇ ಮಗಳು ಪ್ಯಾರಾ ಮೆಡಿಕಲ್ ಓದಲಿಕ್ಕೆ ಹತ್ಯಾಳ. ಮೂರನೇ ಮಗಳು ಬಿಎಸ್ಸಿ ಅಗ್ರಿ' ಅಂದಳು. ಎದೆ ಝಲ್ ಅಂದುಬಿಡ್ತು. ಬರೇ ಹೊಲದಾಗ ಕೂಲಿ ಮಾಡಿ ಓದಿಸ್ಯಾಳ, ವರ್ಷಕ್ಕ ಒಂದೊಂದ ಲಕ್ಷ ಫೀಸು ತುಂಬಿ. ಮತ್ತ ಮೂರೂ ಮಂದಿ ಮೆರಿಟಿನ್ಯಾಗ ಸೀಟು ತಗೊಂಡಾರ. `ಭೂಮಿತಾಯೀಗೆ ನನ್ನ ಬಣ್ಣ ಕೊಟ್ಟೀನ್ರಿ. ಆಕಿ ಬಣ್ಣ ನಾನು ತಂಗೊಂಡೀನ್ರೀ' ಅಂದಳು. ಈ ಭಾಷೆ ಈ ಜೀವನತತ್ವದ ಮುಂದೆ ಯಾವ ಭಗವದ್ಗೀತೆ ರಾಮಾಯಣಾರಿ? ಮೂರು ಹೆಣ್ಮಕ್ಕಳನ್ನ ಓದಸೋದು ಕಮ್ಮಿಯೇನರಿ? ಇಲ್ಲಿನ ಮಂದಿ ಓಪನ್. ಪ್ರಾಮಾಣಿಕರು. ಹೆಣ್ಮಕ್ಕಳಲ್ಲಿ ನಾವು ಕಂಡಿದ್ದು ಪಾಸಿಟಿವಿನೆಸ್. ಗಂಡ ಕುಡುಕಿರಲಿ ಹಡಕಿರಲಿ ಬೇಕಾದ್ದಿರಲಿ. `ನಮ್ಮ ರಟ್ಯಾಗ ಶಕ್ತಿ ಐತಿ, ದುಡದ ತಿಂತೀವಿ ಬಿಡ್ರಿ' ಅಂತಾರ. `ದುಡಕೊಂಡು ಒಯ್ದಿರ್ತೀವಿ. ಅದ್ರಾಗೂ ಕುಡಿಯಾಕ ರೊಕ್ಕ ಕೇಳ್ತಾರ ಭ್ಯಾಡ್ಯಾಗಳು' ಅಂತಾರ. `ಬಾಯಾರೇ, ನಿಮ್ಮ ಜಲಮ ತಣ್ಣಗೈತ್ರಿ. ಗಂಡರ ಕಾಟಿಲ್ಲ, ಮುಂಜಾಲೆದ್ದು ನಿಮ್ಮ ಮಾರಿ ನೋಡಬೇಕ್ರಿ. ನಮಗ ಮೊದಲೇ ತಿಳೀಲಿಲ್ಲರಿ. ನಿಮ್ಮಂಗ ಇರತಿದ್ದಿವಿ' ಅಂತಾರ. ಮಾತು ಕೃತಿ ಆಚರಣೆ ವೈವಿಧ್ಯತೆ ಎಲ್ಲವೂ ಅವರ ಜೀವನದೊಳಗದ. ಸಾಮಾನ್ಯ ಜನಪದರು ಬಳಸೋ ಭಾಷೆ ಅದೆಯಲ್ಲ, ಅದು ನಿಜವಾದ ಜೀವಂತಿಕೆಯ ಭಾಷೆ. ಭಾಷೆ ಹೇಳಿಕೊಟ್ರೆ ಬೆಳೆಯೋಲ್ಲ. ತಾನಾ ಭೂಮಿಯಿಂದ ಅರಳಬೇಕು. ಲೇಖಕರಾದವರು ಜನಪದದೊಳಗೆ ಬೆರೀಬೇಕು. ಆಮೇಲೆ ಪ್ರಜ್ಞೆಯಿಟ್ಟುಕೊಂಡು ಬರೀಬೇಕು. *ನೀವು ರಂಜಾನ ಕೊರ್ತಿ ಅನ್ನೋ ಹುಡುಗನ್ನ ಸಾಕಿದಿರಿ. ಅವನ ಮೇಲೆ ಕತೇನೂ ಬರೆದಿರಿ. ಅವನು ಸಾಯೊ ಕಾಲಕ್ಕ ದವಾಖಾನೆಗೆ ಖರ್ಚು ಮಾಡಿದಿರಿ. ಅವನ ವಿಶೇಷತೆಯೇನು? ಅಂವಾ ಪೇಪರ್ ಏಜೆಂಟಿದ್ದ. ಟಿ.ಎಸ್. ವೆಂಕಣ್ಣಯ್ಯನವರಿಂದ ಹಿಡಿದು ಇಲ್ಲೀತನಕ ಯಾರ್ಯಾರು ಬರದಾರ ಅಷ್ಟರದ್ದೂ ಓದಿದ್ದ. ನನಗೆ ಬೇಕಾದ ಪುಸ್ತಕ-ಪೇಪರ್ ಎಲ್ಲೇ ಇದ್ದರೂ ತಂದುಕೊಡ್ತಿದ್ದ. ತೇಜಸ್ವಿ- ಬೆಳಗೆರೇದು ಲೈನ್ ಲೈನ್ ಬಾಯಿಪಾಠ ಹೇಳ್ತಿದ್ದ. ಬೇಂದ್ರೆ ಕಾವ್ಯವಂತೂ ಬಾಯಾಗೇ ಇತ್ತು. ಥೇಟ್ ರಾಜಕುಮಾರ್ ಮಾತಾಡ್ದಂಗೇ ಮಾತಾಡೋನು. ``ಲೇ ಸಾಲೀ ಮುಂದೆ ಹಾಯ್ದಲೆ ಎಷ್ಟರ ಓದಕೊಂಡಿದ್ದಲೇ ಸೂಳೆಮಗನೆ'' ಅಂತಿದ್ದೆ ನಾನು. *ಲೇಖಕಿಯಾಗಿದ್ದಿರಿ, ಶಿಕ್ಷಕಿಯಾಗಿದ್ದಿರಿ. ಯಾವುದು ಹೆಚ್ಚು ಖುಶಿ? ಟೀಚರಾಗಿರ್ರಿ. ನನಗ ಮಕ್ಕಳಂದರ ಇಷ್ಟು ಪ್ರೀತಿರಿ. ಅಪ್ಪಯ್ಯನಿಗೆ ಹುಶಾರಿರಲಿಲ್ಲ. ಎಲ್ಲ ಮಾಡಿ ಎಂಟಕ್ಕ ಸಾಲಿಗೆ ಹೋಗತಿದ್ದೆ. ಆ ಹೊತ್ತಿಗೆ ಅವು ತಿಂಡಿ ತಿಂತಿರ್ತಾವ. ನಾನಿನ್ನೂ ಗೇಟನಾಗಿ ಇರತಿದ್ದೆ. ಓಡಿಬಂದು ತೆಕ್ಕೆ ಬಡೀತಿದ್ದವು. ಮಕ್ಕಳ ಲೋಕ ದೇವರಲೋಕ. ಅವು ಉಚ್ಚೆ ಕಕ್ಕ ಮಾಡಿದರೆ ತೊಳೀತಿದ್ದೆ. ನಮ್ಮ ಸಾಲಿಗೆ ಮಂದಿ `ಬೈರಿ ಮೇಡಂ ಸಾಲಿ' ಅಂತ ಕರೀತಿದ್ದರು. ಈಗಾದರೂ ಅವು ಲಗ್ನಕ್ಕ ಹೇಳಾಕ ಬರ್ತಾವ; ಹಡದರ ತೋರಸಾಕ ಬರ್ತಾವ; ಫಾರಿನ್ನಿಂದ ಬಂದಾಗ ಮನಿಗೆ ಬರ್ತಾವ. ಪುಸ್ತಕ ತರ್ತಾವ. *ಮಕ್ಕಳಿಗೆ ಇಂಗ್ಲೀಶ್ ಕಲಿಸುವಾಗ ಯಾವ ಸವಾಲು ಎದುರಿಸಬೇಕಾಯಿತು? ಹಿಸ್ಟರಿಯಾಗಲಿ ಪೊಯಟ್ರಿಯಾಗಲಿ, ಫಸ್ಟು ಕನ್ನಡದೊಳಗ ಹೇಳಿಬಿಡತಿದ್ದೆ. ಆಮೇಲೆ ಇಂಗ್ಲೀಶ್ ಪದಗಳಿಗೆ ಕನ್ನಡದರ್ಥ ಬರಸತಿದ್ದೆ. ಮಕ್ಕಳನ್ನು ಸ್ಟಿಮ್ಯುಲೇಟ್ ಮಾಡೋಕೆ ಕವಿತೆ ಓದಿತಿದ್ದೆ. ಪೇಪರ್ ಕಟಿಂಗ್ ತೋರಿಸತಿದ್ದೆ. ಎಸೆಸೆಲ್ಸಿಯೊಳಗ ನೈಂಟಿ ಮ್ಯಾಲೆ ತಗೀತಿದ್ದವು. ಇದನ್ನ ಕಾರಂತಜ್ಜರ ಹತ್ತರ ಹೇಳಿದೆ. `ಬರೋಬ್ಬರಿ ಐತೆ, ಮುಂದುವರೆಸು' ಅಂದರು. *ನಿಮ್ಮ ಹಿರೀಕರ ಬಗ್ಗೆ ಹೇಳಿರಿ. ನಮ್ಮ ಅಜ್ಜಯ್ಯ ಉಡುಪಿ ತಾಲೂಕು ಸಾಸ್ತಾನದವರು. ಅವರು ಕೇರಳದ ವೈನಾಡಿಗೆ ಕಾತ್ಯಾಯಿನಿ ದೇವಸ್ಥಾನದ ಪೂಜೆಗಂತ ಹೋದವರು. ಕಾಫಿ ಎಸ್ಟೇಟ್ ಮಾಡಿದ್ದರು. ಆನೆ ಸಾಕಿದ್ದರು. ಒಂದು ಗೊನೆಬಾಳೆ ಒಬ್ಬರೇ ತಿಂತಿದ್ರು. ಬಹಳ ದುಡಕೊಂಡು ಬಂದಿದ್ದರು. ಬೆಳ್ಳಿತಾಟಿನೊಳಗೆ ನೀರುಹಾಕಿ ನಕ್ಷತ್ರಗಳನೆಲ್ಲ ತೋರಿಸಿ ಮಗಳಿಗೆ ಊಟ ಮಾಡಿಸ್ತಿದ್ದರಂತ. ಅವರು ವಾಪಸು ಬಂದಾಗ ಕರ್ನಾಟಕ ಏಕೀಕರಣವಾಗಿತ್ತು. ಆ ವರ್ಷ ನಾನು ಹುಟ್ಟಿದೆ. ಕನ್ನಡ ಕಸ್ತೂರಿ ಅಂತ ಹೆಸರಿಟ್ಟರು. ಮನೇಲಿ ಎಲ್ಲರೂ ಅಚ್ಚಕನ್ನಡ ಆಡೋರು. ತಂತಮ್ಮೊಳಗೆ ಮಾತಾಡೊ ಮುಂದ ಮಲೆಯಾಳ ಬಳಸ್ತಿದ್ದರು. ನಾನು ಇವರೇನು ಬ್ಯಾರಿಗಳೇನು ಅಂತಿಳ್ಕೊಂಡಿದ್ದೆ ಸಣ್ಣಾಕಿ ಇದ್ದಾಗ. *ಅಪ್ಪ? ಅಪ್ಪ ಬಾರ್ಕೂರಿನವರು. ಸೀತಾನದಿ ಈಚಿಕಡಿ ಸಾಸ್ತಾನ ಪಾಂಡೇಶ್ವರ. ಆಚೆಕಡಿ ಬಾರ್ಕೂರು. ಬಾರ್ಕೂರಲ್ಲಿ ಅಪ್ಪಯ್ಯನ ತಾಯಿ ಇದ್ದಳು. ಬಡವಿ. ಅಲ್ಲಿ ಚಂದು ಅಂತ ಒಬ್ಬಿದ್ದಳು. ಆಕಿ ಗದ್ದೆಬಯಲು ಕಾಲುಸೇತುವೆ ಹೊಳೆ ದಾಟಿಸಿ ದೋಣಿಯೊಳಗೆ ಬಾರ್ಕೂರು ಮನಿಗೆ ಕರಕೊಂಡು ಹೋಗ್ತಿದ್ದಳು. ಬಾರ್ಕೂರಜ್ಜಿ ಮೊಮ್ಮಕ್ಕಳು ಬಂದಾವಂತ ಅಕ್ಕಿ ತೆಂಗಿನಕಾಯಿ ರುಬ್ಬಿ ಅಪ್ಪಂ ಮಾಡೋಳು. ದೋಣಿಗಂತ ನಾಕಾಣೆ ಕೊಡೋಳು. *ಸಾಹಿತ್ಯದ ಸಂಪರ್ಕ ಎಲ್ಲಿಂದ ಶುರುವಾಯ್ತು? ನಮ್ಮೂರಿಗೆ ಪಾಂಡೇಶ್ವರ ಹತ್ತರ. ಅಲ್ಲಿ ಪಿ. ಕಾಳಿಂಗರಾಯರ ಚಂದದ ಬಂಗಲೆಯಿತ್ತು. ಅವರು ಹಾಡ್ತಾರಂತ ಗೊತ್ತಿರಲಿಲ್ಲ. ಅವರ ಬಂಗಲೆ ಪಕ್ಕಾನೇ ಲೈಬ್ರರಿ. ಅಲ್ಲಿಂದ ಪದ್ಮಾ ಚಿಕ್ಕಿಗೆ ಕಾದಂಬರಿ ತರತಿದ್ದಿವಿ. ಚಿಕ್ಕಿ ಮಾತ್ರ `ಕಾದಂಬರಿ ಹುಚ್ಚಿದ್ದರೆ ಉಪ್ಪರಗಿ ಮೇಲೆ ಹೋಗಿ ಓದಿರಿ' ಅಂತಿದ್ಲು. ನಮ್ಮಜ್ಜಿ ನಮಗ ಕಾದಂಬರಿ ಓದೋಕೆ ಬಿಡ್ತಿದ್ದಿಲ್ಲ, ಮಕ್ಕಳ ತೆಲಿಕೆಡ್ತದ ಅಂತ. ನಮ್ಮೂರ ಬಾಜೂಕೇ ಕಾರಂತರ ಸಾಲಿಗ್ರಾಮ. ನಮ್ಮನ್ನ ಅಜ್ಜಿ ಅವರ ಮನೀಗೆ ಹೋಗಗೊಡತಿದ್ದಿಲ್ಲ, ಶೆಟ್ಟರನ್ನು ಲಗ್ನ ಆಗಿದ್ದರಲ್ಲ ಅವರು. `ಕೋಟದ ಕಾಕಿಗಳು' ಅಂತ ಆಡಕೊಳ್ತಿದ್ದಳು. *ನಿಮ್ಮದೊಂದು ಕಥಾಸಂಕಲನ ಚಿಕ್ಕಿಗೆ ಅರ್ಪಿಸಿದ್ದೀರಿ. ನಮ್ಮನ್ನ ಎಲ್ಲ ತರಹದಿಂದ ಬೆಳೆಸಿದೋಳು ಅವಳು. ಆಕಿ ಪತ್ರ ಬರೆಯೋದ ನೋಡಬೇಕು ನೀವು. ಯಾರು ಊರಿಗೆ ಬಂದರು, ಯಾರು ಅಮೇರಿಕಕ್ಕೆ ಹೋದರು, ಯಾರು ಇಂಟರಕಾಸ್ಟ್ ಮದುವೆಯಾದರು, ಯಾವ ಅಡಿಗೆ ಮಾಡಿದರು, ಯಾರು ಏನೇನು ತಿಂದರು-ಪ್ರತಿಯೊಂದು ಇಂಚಿಂಚು. ಈ ಫೋನ್ ಬಂದಿಂದೇ ಬರಿಯೋದ್ ಬಿಟ್ಟಳು. ಫೋನಲ್ಲಿ `ಮಕ್ಕಳೇ ಸರಿಯಾಗಿ ಮದ್ದು ತಗಳ್ರಿ, ಮಕ್ಕಳೇ ಅಲ್ಲಿಇಲ್ಲಿ ಹೋಗಬೇಡಿ, ಮಕ್ಕಳೇ ಜಾಸ್ತಿ ಸೊಪ್ಪು ತರಕಾರಿ ತಿನ್ರಿ' ಒಂದಾ ಎರಡಾ ಉಪದೇಶ? *ಬಾಲ್ಯದಲ್ಲಿ ಊರಿನ ಪರಿಸರ ಹೇಗಿತ್ತು? ಅಗ್ರಹಾರದಲ್ಲಿ ನಾವು ಬೆಳೆದಿದ್ದು. ನಮ್ಮಜ್ಜಿ ಭಯಂಕರ ಮಡಿ. ಆಕಿ ಟವೆಲ್ ಯಾರೂ ಯೂಸ್ ಮಾಡಂಗಿಲ್ಲ. ಬೆಡ್ ಮ್ಯಾಲ್ ಯಾರೂ ಕೂರಂಗಿಲ್ಲ. ಮುಟ್ಟಾದಾಗ ನಾವು ಬ್ಯಾರೇ ಕೋಣೇನೇ. ಮೂರುಸಲ ಸ್ನಾನ ಮಾಡಬೇಕು-ಅದೆಲ್ಲ ಕರಾರಿತ್ತು. ನಮಗ ಹುಡುಗರ ಜೋಡಿ ಆಟ ಆಡೋಕೆ, ಹಾಡಿ ಅಲೆಯೋಕೆ ಆಸೆ. ಆದರೆ ಅಜ್ಜಿ `ಅಲ್ಲೆಲ್ಲ ಉಡಾಳ ಗಂಡುಮಕ್ಕಳು ಇರ್ತಾವ, ನೀವ್ ಹೋಗಬ್ಯಾಡ್ರಿ, ಗಂಡಮಕ್ಕಳ ಜತೆ ಕೂಡಬ್ಯಾಡ್ರಿ, ಮೈಕೈ ಮುಟ್ತಾರ' ಅಂತಿದ್ಲು. ನಾವು ಮುದ್ದಾಂ ಹುಡುಗರ ಜತಿ ಆಟ ಆಡತಿದ್ವಿ. ಮೈಕೈ ಮುಟ್ಟಿದರ ಏನಾತು ಅಂತಿದ್ವಿ. *ಬಾಲ್ಯದ ನೆನಪುಗಳು ಕಾಡತಾವಾ? ಬಾಲ್ಯ ಅನ್ನೋದು ಎಷ್ಟು ಸಿಹಿಯಾಗಿರ್ತದ! ಊರುಬಿಟ್ಟು ಅರವತ್ತು ವರ್ಷವಾದರೂ ಕಣಕಣಾನು ನೆನಪೈತ್ರಿ. ಕಾಡು, ಗದ್ದೆ, ಸೀತಾಹೊಳೆ, ಸೇತುವೆ ಮೇಲೆ ಹರಿದಾಡೊ ಬಸ್ಸುಗಳು, ಕ್ರೈಸ್ತರ ಮುಸಲರ ಮನೆಗಳು, ಅಗ್ರಹಾರ, ಅಲ್ಲಿನ ಮಡಿಮೈಲಿಗೆ, ದೇವಸ್ಥಾನ, ದೇವರಪೂಜೆ, ಪಂಚಕಜ್ಜಾಯ, ರಣಪೂಜೆ, ಅದರ ಪ್ರಸಾದತಂದು ಉಪ್ಪರಿಗೆ ಮೆಟ್ಲಲ್ಲಿ ಇಡೋದರಿ, ನಾಳೆ ತಿನ್ನಬೇಕು ಅಂತ. ಬೆಳಿಗ್ಗೆ ಆಗೋದರೊಳಗೆ ಇರುವೆ ತುಂಬ್ಕೊಂಡು ಬಿಡೋವು. ಹಾಡಿಗೆ ಹೋಗಿ ನೇರಳೆಹಣ್ಣು ತಿಂದು ನೀಲಿ ಕನ್ನಡಿಯೊಳಗೆ ನಾಲಗೆ ನೋಡಿಕೊಂಡು ನಗತಿದ್ದೆವು. ಗೇರುಹಣ್ಣು ತಿಂತಿದ್ದೆವು. ಕಿಸ್ಕಾರ ಹಣ್ಣ ತಿಂದು ಬಾಯಿ ಕೆಂಪು ಮಾಡಕೊಳ್ತಿದ್ದೆವು. `ಅಮ್ಮಾ, ಕಡೆಮದ್ದು ಕೊಡೇ' ಅಂತ ಅಜ್ಜಿಗೆ ಕಾಡ್ತಿದ್ದೆವು. ಲೇಖಕರಿಗೆ ನೊಸ್ಟಾಲ್ಜಿಯಾ ಭಾಳ ಇಂಪಾರ್ಟೆಂಟ್. *`ಕಡೆಮದ್ದು' ಅಂದರೇನು? ಬಾಣಂತಿಗೆ ತಿನಸೋದರಿ. ನೂರಾರು ತರಹದ ಬೇರುತಂದು ಒಣಗಿಸಿ ಪುಡಿ ಮಾಡಿ ಸೋಸಿ, ಬೆಲ್ಲದ ಪಾಕ ತುಪ್ಪಹಾಕಿ ಒಲೆಮೇಲೆ ಚೆನ್ನಾಗಿ ತಿರುವಿ, ಜಾಡಿತುಂಬಿ ಇಡ್ತಾರ. ಬಾಣಂತಿಗೆ ದಿನಾ ಇಷ್ಟಿಷ್ಟು ಕೊಡ್ತಾರ. ನಮ್ಮಜ್ಜಿ ಕಡೆಮದ್ದಿನ ಬೇರುಗಳ ಹೆಸರು ಹೇಳೋ ಕಾಲಕ್ಕ, `ಹಲವು ಮಕ್ಕಳ ತಾಯಿಬೇರು' ಅಂದಿದ್ಲು. ಅದರ ಮ್ಯಾಲೆ `ಹಲವು ಮಕ್ಕಳ ತಾಯಿಬೇರು' ಅಂತ ಕತೆ ಬರದೆ. ನಮ್ಮ ಚಿಕ್ಕಿ ಡೆಲಿವರಿ ಆದಾಗ ಅಜ್ಜಿ `ಬಾಣಂತಿಯ ಬೆನ್ನ ಗಟ್ಟಿ ಆಗಬೇಕು, ಹಡದಿಂದೆ ಗರ್ಭಕೋಶ ಲೂಸ್ ಆಗರ್ತತಿ, ಅದು ಗಟ್ಟಿ ಆಗಬೇಕು, ಹಾಲ್ ಬರಬೇಕು' ಅಂತ ಕಡೆಮದ್ದು ಮಾಡಿಕೊಡಾಕ ಹತ್ಯಾಳ. ಆಗ ನಾನೂ ಹೊಟ್ಟೆ ಹರಕೊಂಡು ಓವರಿ ತಕ್ಕೊಂಡಿದ್ದೆ. ಬೆನ್ನುನೋವು. ನನಗ್ಯಾಕ ಮಾಡಿಕೊಡವಲ್ಲಳು ಅಜ್ಜಿ. ಆಕಿಗೆ ಮಾಡೋಮುಂದ ನಿನಗೂ ದೊಡ್ಡಾಪರೇಶನ್ ಆಗೈತಿ, ಮಾಡ್ತೀನಿ ಅನಬೇಕಿತ್ತಲ್ಲ? ನಾಯೇನು ಹಡದ ಬಾಣಂತಿ ಅಲ್ಲಲ್ಲ ಅಂತ ಫೀಲ್ ಆಗಿತ್ತು. ಕೊನೇಗೆ ಅನಸ್ತು, ತಾಯಿ ಸತ್ತ ಮಕ್ಕಳು ಇರಬಾರದಪ್ಪಾ ಅಂತ. ಬೇಜಾರಾಗಿ ಆ ಕತೆ ಬರದೆ. *`ತಾಯಿ ಸತ್ತ ಮಕ್ಕಳು' ಅಷ್ಟೊಂದು ಶಾಪ್ರಗ್ರಸ್ತ ಅವಸ್ಥೆಯಾ? ಫುಟ್ಬಾಯಲ್ ಚೆಂಡರಿ. ಅಜ್ಜಿ ತಿರುಗಾಡಕ್ಕ ಕೊಡತಿದ್ದಿಲ್ಲ, ತಾಯಸತ್ತ ಮಕ್ಕಳು ಅಗ್ರಹಾರಕ್ಕ ಹೋಗಬಾರದು ಅಂತ. ಹುಟ್ಟಿದೂರು ಅಂತ ಹೋದರೆ ನೆಗ್ಲೆಕ್ಟ್ ಮಾಡೋರು. ಅಪ್ಪಿತಪ್ಪಿ ಯಾರೂ ಕರೀತಿದ್ದಿಲ್ಲ. ನಾನು ಲೇಖಕಿಯಾಗೀನಲ್ಲ? ನೋಬಡಿ ಈಸ್ ಕನ್ಸರ್ನ್ಡ್ ಅಬೌಟ್ ಮೈ ರೈಟಿಂಗ್. ಒಬ್ಬರಾರ ಪುಸ್ತಕ ಕೇಳ್ಯಾರೇನು? ಹಾದಿಬೀದೀಲಿ ಹೋಗೋರಿಗೆಲ್ಲ ಹಂಚತೀನಿ. ಅವರಿಗೆ ಕೊಟ್ಟಿಲ್ಲ. ಭಯಂಕರ ಮಟೀರಿಯಲ್ಲಿಸ್ಟ್ಸ್. ರಿಲೇಟೀವ್ಸ್ ಕಡಿಂದ ಅಪಮಾನ ಅನುಭವಿಸಿದೀವಿ. ಬಟ್ ಪಬ್ಲಿಕ್ ಗೇವ್ ಅಸ್ ಲಾಟ್ ಆಫ್ ಲವ್ ಅಂಡ್ ರೆಸ್ಪೆಕ್ಟ್. ನಮ್ಮ ಕೆಲಸದೋಳಿಗೆ ಹೇಳೀನಿ `ದವಾಖಾನಿಂದ ನನ್ನ ಡೆಡ್ ಬಾಡಿ ತಂದರ, ನಮ್ಮವರು ಬರೋಕೆ ಮುಂಚೆ ಹೆಣಚಂದ ಮಾಡಿ ಅತ್ತಬಿಡವ್ವಾ' ಅಂತ. *ನಿಮ್ಮ ಕತೆಗಳಲ್ಲಿ ಕ್ರೈಸ್ತ ಪರಿಸರ ದಟ್ಟವಾಗಿದೆ. ನಾನು ಮೂರು ವರ್ಷ ಚರ್ಚ್ ಸ್ಕೂಲಾಗೆ ಕಲ್ತೆ. ಚರ್ಚಿಗೆ ಹೋಗಿ ಕನಫೆಶನ್ ಕಿಂಡಿಗೆ ಹೋಗಿ ಕೈಯಿಟ್ಟು ಫಾದರ್ ಹತ್ತರ ಸುಳಸುಳ್ಳೇ ಹೋಗೋದು, ಮಂಡಿಯೂರಿ, `ನಾನು ಇವತ್ತು ಮಾವಿನಗಿಡದಾಗೆ ಕಾಯಿ ಕದ್ದೆ ಕ್ಷಮಿಸಿ ಫಾದರ್, ನಾನು ಇವತ್ತು ಶಾಲೇಲಿ ಪೆನ್ಸಿಲ್ ಕದ್ದೆ ನಮ್ಮನ್ನು ಕ್ಷಮಿಸಿ ಫಾದರ್' ಅಂತ ಕನಫೆಸ್ ಮಾಡತಿದ್ವಿ. ಅಜ್ಜಿ `ಚರ್ಚಿಗೆ ಹೋಗಿದ್ದಿರಾ' ಅಂತ ಕೋಲ್ ತಕ್ಕೊಂಡು ಗದ್ದೆ ತುಂಬ ಓಡಾಡಸ್ತಿದ್ದಳು. ನಮ್ಮನಿ ಹತ್ತರ ಹೆಲನಬಾಯಿ ಅಂತ ಇದ್ಲು. ಆಕಿ ಮನೀಗೆ ಮ್ಯಾಲಿಂದ ಮ್ಯಾಲೆ ಹೋಗೋದರಿ. ಮೈಮ್ಯಾಲ ಬಿದ್ದು ಉಳ್ಳಾಡೋದರಿ. ಆಕಿ ಪ್ರೀತೀಲೆ ಹೂವು ಕೊಡೋಳು. ಆ ಹೂವು ಮನೀಗೆ ತರೋಹಂಗಿಲ್ಲ. ನಮ್ಮಜ್ಜಿ `ಹೆಲನಬಾಯಿ ಮನೀಗ್ ಹೋಗೀರಾ? ಮಾಂಸಮಡ್ಡಿ ತಿನ್ನೋರ ಮನೀಗೆ ಹೋಗೀರಾ?' ಅನ್ನೋಳು. ಭಾಂವಿ ಕಟ್ಟೇಮ್ಯಾಲ ಬತ್ತಲೆ ನಿಲ್ಲಿಸಿ, ತಲಿಮ್ಯಾಲ ಬುದುಬುದು ನೀರು ಹಾಕಿ ಮಡಿ ಮಾಡೋಳು. *ಬಾಲ್ಯದ ಕರಾವಳಿ ಈಗ ಹೇಗಿದೆ? ಭಾಳ ಬದಲಾಗ್ಯದ. ಕಾರಣಿಲ್ಲ ಏನಿಲ್ಲ ಸುಮಸುಮ್ಮನೆ ಮುಸಲೋರನ್ನ ಕ್ರಿಶ್ಚನ್ನರ ಹೇಟ್ ಮಾಡೋದು. ನಾನು ನಿಮ್ಹಾನ್ಸದೊಳಗ ಟ್ರೀಟ್ಮೆಂಟ್ ತಗೊಂಡ ಮ್ಯಾಲ, ಒಬ್ಬ ಕ್ರಿಶ್ಚಿಯನ್ ಸಿಸ್ಟರ್ ಮನೆಯೊಳಗ ಇಟ್ಟಿದ್ದರು. ಎರಡು ವರ್ಷ ನನಗ ಹೀಂಗ ಪ್ರೀತಿ ಮಾಡಿದರ್ರೀ ಅವರು. *ನಿಮ್ಮ `ಹೆಲನಬಾಯಿ ಮತ್ತು ತುಂಬೆ ಹೂವು' ಒಳ್ಳೆಯ ಕತೆ. ಹೆಲನ ಬಾಯಿ ಎಂಥಾ ಶಾಂತ ಮುಖ? ದೇವಿಯಿದ್ದಂಗೆ. ಆಕೆ, ನಮ್ಮ ತಾಯಿ ಫ್ರೆಂಡ್ಸಾಗಿದ್ದರು. ನಮ್ಮ ತಾಯಿ ಅಂಥಾದ್ದೇ ಕಿವ್ಯಾಗ ಹಾಕ್ಕೊಂಡಿರ್ತಿದ್ದಳು, ನೀಲಿ ಹಳ್ಳಿಂದು. ಆಕಿ ಶಿಸ್ತು, ಜಡೆ ಬಾಚೋದು, ಆಕಿನೊಳಗೆ ನಾವು ಅಮ್ಮನ ರೂಪ ಕಾಣತಿದ್ದಿವಿ. ಆಕಿ ಹುಲ್ಲಿಗಂತ ಗದ್ದೆಬದಿ ಬಂದಾಗ `ಅಮ್ಮಾ ಹುಲ್ಲಿಗೆ ಹೋಗಿ ಬತ್ತೇ' ಅಂತಿದ್ದಳು. ಚರ್ಚಿಗೆ ಹೋಗೋ ಮುಂದ `ಅಮ್ಮಾ ಚರ್ಚಿಗೆ ಹೋಗಿ ಬತ್ತೇ' ಅನ್ನೋಳು. *ಅಜ್ಜಿ ಕೊನೇಗೆ ಬದಲಾದರಾ? ಬದಲಾದಳು. ಆಕಿಗೆ ಹೆಲನಬಾಯಿ ಬಗ್ಗೆ ಒಂದು ಪ್ರೀತಿ ಇರತಿತ್ತು. ಚಟ್ನಿರುಬ್ಬಿ ತೆಂಗಿನ ಗರಟದೊಳಗೆ ಕೊಡೋದು, ಚೊಂಬಿನೊಳಗೆ ನೀರು ಎತ್ತಿ ಹೊಯ್ಯೋದು, ಬೆಲ್ಲ ಕೊಡೋದು, ಮಾಡಿದ ಅಡಿಗೆ ಕೊಡೊದು, ಕಷ್ಟಸುಖ ಕೇಳೋದು, ಹೆಲನ್ಬಾಳಯಿ ಅತ್ತರೆ ತಾನೂ ಎರಡು ಕಣ್ಣೀರು ಹಾಕೋದು ಇವೆಲ್ಲ ಇದ್ದವು. ಕಡಕಡೀಕೆ ಎಲ್ಲ ಸಂಪ್ರದಾಯ ಬಿಟ್ಟುಬಿಟ್ಲು. `ಹೆಲನಬಾಯಿ ಮತ್ತು ತುಂಬೆಹೂವು' ಕತೆಯಲ್ಲಿ ಮಕ್ಕಳು ಆಕೀಗೆ ದೇವಸ್ಥಾನದ ಹಲಸಿನ ಕೊಟ್ಟೆಕಡುಬು ಕೊಟ್ಟಿಲ್ಲಂತ ಮಕ್ಕಳು ಹಳಹಳ ಮಾಡೋ ಪ್ರಸಂಗ ಬರ್ತದ. ಅದನ್ನ ಓದಿ ಹೆಲನಬಾಯಿಗೆ ಕಡುಬು ಮಾಡಿ ಕೊಟ್ಟು ಬಂದಳು. ಮತ್ತಾಕಿ ಹಾಸ್ಪಿಟಲಿಗಿದ್ದಾಗ ಹೋಗಿ ಆಕೀಗೆ ತಬ್ಬಕೊಂಡು ಬಂದಳು. ಮನೇಲೆ ಎರಡು ಕ್ರಿಶ್ಚಿಯನ್ ಸೊಸ್ತೇರನ್ನು ತಂದಳು. ತಂಗಿ ಮಗನಿಗೆ ವಿಧವೆ ತಂದುಕೊಂಡಳು. ಎರಡು ಜನ ಬಿಲ್ಲವ ಅಳಿಯಂದಿರು ಬಂದರು. ಕಠೋರ ಅಗ್ರಹಾರದ ನಡುವೆ ಕ್ರಾಂತಿ ಮಾಡಿದಳು. ಅವರೆಲ್ಲ ಮನೀಗೆ ಬರೋದು ಹೋಗೋದು ಪೂಜೆ ಪುನಸ್ಕಾರ ಎಲ್ಲ ಮಾಡ್ತಾರ. ನಮ್ಮಜ್ಜಿ ವಿಶೇಷ ಪರ್ಸನಾಲಿಟಿ. ವೈಲಿನ್ ನುಡಸ್ತಿದ್ದಳು. ಹಾಡತಿದ್ದಳು. ಸುಬ್ಬಲಕ್ಷ್ಮಿ ಹಾಡಂದರ ಪ್ರಾಣ. *ನೀವು-ರೋಹಿಣಿ ಅರ್ಧಶತಮಾನ ಒಟ್ಟಿಗೆ ಬದುಕಿದಿರಿ. ಅವರ ವ್ಯಕ್ತಿತ್ವ ಎಂಥದ್ದು? ನಮ್ಮ ರೋಹಿಣಿ ಮರದ ಮೌನದ ಹುಡುಗಿ. ಶಿ ನೆವರ್ ಕಂಪ್ಲೇಂಟ್ಸ್. ಎಂ.ಎ. ಫಿಲಾಸಫಿ ಗೋಲ್ಡ್ ಮೆಡಲ್ ತಗದಾಳ. ವೇದಾಂತ ಸ್ಪೆಶಲೈಜೇಶನ್. ಕಾನ್ವೊಕೇಶನ್ನಿಗೆ ಹಾಕ್ಕೊಳಕ್ಕ ಒಳ್ಳೇ ಅರಿವೆಯಿದ್ದಿಲ್ಲ. ಇಷ್ಟು ಉಪ್ಪಿಟ್ಟು ಕಟ್ಟಕೊಂಡು ಹೋಗಿ ಹಳ್ಳಳ್ಳಿ ಮನಿಮನಿ ಅಡ್ಡಾಡಿ ನೌಕರಿ ಮಾಡಿ ಹೈರಾಣಾಗ್ಯಾಳ. ನೀವ ವಿಚಾರ ಮಾಡ್ರಿ, ಸಣ್ಣ ಪಗಾರದೊಳಗ ನಾಲ್ಕು ಬಡಮಕ್ಕಳಿಗೆ ಇಂಜಿನಿಯರಿಂಗ್ ಓದಿಸ್ಯಾಳ, ಆಕೀಗಿ ಜೀವನದೊಳಗ ಆಸೆಗಳೇ ಇಲ್ಲ. ನಮ್ಮ ಪರಿಚಿತರೊಬ್ಬರು ಗಯಾದೊಳಗಿದ್ದಾರ. ಅವರಿಗೆ ಹೇಳಿದ್ದೆ ಒಂದು ಬುದ್ಧನಮೂರ್ತಿ ತಂದುಕೊಡರಿ ಅಂತ. (ಪಕ್ಕದಲ್ಲಿದ್ದ ಮೂರ್ತಿ ತೋರಿಸುತ್ತ), ಇಗಾ ನೋಡ್ರಿ ತಂದುಕೊಟ್ಟಾರ. ಆದರೆ ನಿಜವಾದ ಬುದ್ಧ ನನ್ನ ತಂಗಿ. *ನೀವೂ ಧಾರವಾಡದಲ್ಲಿ ಇಂಗ್ಲೀಶ್ ಎಂ.ಎ. ಮಾಡಿದಿರಿ. ಶಂಕರ ಮೊಕಾಶಿ ಪುಣೇಕರ್ ಎಲ್ಲಾ ಇದ್ರು. ಚಂಪಾ ಫೊನಿಟಿಕ್ಸ್ ಹೇಳ್ತಿದ್ದರು. ಹುಡಿಗ್ಯಾರಿಗೆ ಲವ್ ಪೊಯೆಮ್ಸ್ ಬರದಕೊಡ್ತಿದ್ರು. ಸಾಧನಾ ಅಂತ ಡಾಲ್ ಇದ್ದಂಗಿದ್ದಳು. ಆಕಿಗೆ ಒಂದಿವಸ ಲವ್ ಪೊಯೆಂ ಬರದಕೊಟ್ರು. ಅವಳು ನನಗ ತಂದ ತೋರಿಸಿದ್ಲು. `ಸರ್ ಇಷ್ಟು ಚಂದ ಲವ್ ಪೊಯೆಂ ಬರದ ಕೊಟ್ಟೀರಿ' ಅಂದೆ. `ಏ ಬಾಯರಿ, ನಿನಗ ಯಾರು ತೋರಿಸಿದ್ರು?' ಅಂದರು. ನಾನು ಭಾಳ ಇಂಗ್ಲಿಶ್ ಲಿಟರೇಚರ್ ಓದೀನ್ರಿ. ಬದಾಮಿಯೊಳಗ ನನಗ ಕಲಿಸಿದ ಯೋಗಪ್ಪನೋರು ನನ್ನ ಗ್ರಾಸ್ಪಿಂಗ್ ಪವರ್ ನೋಡಿ ಆಶ್ಚರ್ಯ ಪಡತಿದ್ದರು. ಓದೋದೇ ಅರ್ಧ ಕಣ್ಣು ಹೋಗ್ಯಾವರಿ. *ಪದವಿ ಯಾಕೆ ಮುಗಿಸಲಿಲ್ಲ? ಸುಟ್ಟ ಸುಡುಗಾಡ ಸ್ಕಿಜೊಫ್ರೇನಿಯಾ ಬಂದುಬಿಡ್ತು. ಇಪ್ಪತ್ತು ರೂಪಾಯಿ ಹಾಸ್ಟೆಲ್ ಬಿಲ್ ತುಂಬದೇ ಇದ್ದದ್ದಕ್ಕ ವಾರ್ಡನ್ ಹೊರಗ ಮಳಿಯೊಳಗ ನಿಲ್ಲಿಸಿಬಿಟ್ಟಳು. ಕೆಟ್ಟ ಬಡತನ. ಸ್ಪ್ಲಿಟ್ ಪರ್ಸನಾಲಿಟಿ ಆಗಿಬಿಡ್ತು. ಅದರಿಂದ ಹೊರಬರಬೇಕಾದರೆ ಹತ್ತು ವರ್ಷ ಹಿಡೀತೇ ಏನೊ. ಮನೀಗೆ ಬಂದರೆ ಕೂಳಿಲ್ಲ. ನಮ್ಮಪ್ಪಯ್ಯ ಸಾಧು ಸಂತರ ಹಿಂಬಾಲ. ಆಗ ನಮ್ಮಕ್ಕ ವಾಗ್ದೇವಿ, ಮನಿಮನಿ ಟೂಶನ್ ಹೇಳಿ ನಮ್ಮನ್ನ ಸಾಕಿದ್ಲು. ನಾವೂ ಟೂಶನ್ ಹೇಳ್ತಿದ್ದಿವಿ *ಜಗತ್ತಿನ ಸಾಹಿತ್ಯ ಓದಿಕೊಂಡಿದ್ದೀರಿ. ನಿಮ್ಮಂತಹವರು ಕಾಲೇಜು ಅಧ್ಯಾಪಕರಾಗಿದ್ದರೆ ವಿದ್ಯಾರ್ಥಿಗಳಿಗೆ ಉಪಯೋಗ ಆಗ್ತಿತ್ತು. ಹಳಹಳಿಕೆ ಅದೇರಿ. ಏನು ಮಾಡ್ಲಿ? ಥೈರಾಯ್ಡ್ ಆಗಿ ಧ್ವನಿಪೆಟ್ಟಿಗೆ ಹೋಗಿಬಿಡ್ತು. ಈಗಲೂ ಮನೀಗೆ ಬಂದೋರು ಒಂದು ಒಜ್ಜೆ ಮಾತಾಡಿದರೆ, ನಿದ್ದಿ ಬರೋದಿಲ್ರಿ. ಓಣ್ಯಾಗ ಒಂದು ನಾಯಿಸತ್ತರೆ ಎಂಟು ದಿನ ನಿದ್ದಿ ಮಾಡೋದಿಲ್ಲ. ಆದರೆ ನನ್ನ ಶಿಷ್ಯರು ಇಂಗ್ಲೆಂಡು ಅಮೆರಿಕಾ ಸೇರಿಕೊಂಡಾರ. ಇಂಗ್ಲೀಶನೊಳಗ ಬರೀತಾರ. ನನಗೆ ತೃಪ್ತಿ ಅದ. *ನಿಮ್ಮ ಅಕ್ಕನವರ ಸಂಗೀತದ ಅಭಿರುಚಿ ಬಗ್ಗೆ ಬಹಳ ಸಲ ಹೇಳಿದೀರಿ. ಆಕಿ ತೀರ್ಥಳ್ಳಿ ಹತ್ತರ ಒಂದು ಹಳ್ಳಿಯೊಳಗಿದ್ದಳು. ಗಟ್ಟಿಗಿತ್ತಿ. ಗಂಡ ತೀರಿಕೊಂಡ ಮ್ಯಾಲ ಬದುಕನ್ನ ಕಟ್ಟಿಕೊಂಡಳು. ಸಾವಯವ ಕೃಷಿ ಮಾಡತಿದ್ದಳು. ಸಾವಯವ ಗೊಬ್ಬರ ಮಾರತಿದ್ದಳು. ದನ ಸಾಕಿದ್ಲು. ಒಂದು ಕಾಳಮೆಣಸಾ, ಒಂದು ಕಾಫಿಯಾ ಎಷ್ಟು ಬೆಳೆಗೋಳು! ಹತ್ತೆಕೆರೆ ತೋಟಮಾಡಿಟ್ಟು ಹೋಗ್ಯಾಳ. ವರ್ಷಾ ಹಸಿಬತ್ತದ ತೆನೀತೋರಣ ಮಾಡಿ ಕಳಸತಿದ್ಲು. ನಟ್ಟಿಗೆ ಬಂದೋರ ಹತ್ತರ ಹಾಡು ಸಂಗ್ರಹ ಮಾಡತಿದ್ದಳು. ಒಳ್ಳೇ ಅಡಿಗೆ ಮಾಡತಿದ್ದಳು. ಹಾಡತಿದ್ದಳು. ಜೀನಿಯಸ್. ಸಾಯೋ ಮುಂದ, ಮಣಿಪಾಲ್ ಆಸ್ಪತ್ರೆಯೊಳಗ `ಈ ಸಂಜೆ ಯಾಕಾಗಿದೆ' ಹಾಡಿದಳು. ವಾರ್ಡ್ ತುಂಬ ಅಡ್ಯಾಡಿ, `ಕಿಮೊಥೆರಪಿಯಿಂದ ಏನಾಗದಿಲ್ಲ, ಟೆಕ್ನಾಲಜಿ ಮುಂದುವರೆದದ. ಯಾರೂ ಹೆದರಬ್ಯಾಡಿ, ಭಾಳಂದ್ರ ಕೂದಲು ಉದುರತಾವ' ಅಂತ ರೋಗಿಗಳಿಗೆ ಹೇಳತಿದ್ದಳು. ಒಳ್ಳೇ ಅನುಭಾವಿ. ನಾವು ಕೂಡಿ ಇಂಗಳೇಶ್ವರದಲ್ಲಿ ಬಸವಣ್ಣನವರ ಮನೀಗೆ, ಮತ್ತ ಕುಪ್ಪಳಿಯೊಳಗ ಕುವೆಂಪು ಮನೀಗೆ ಹೋಗಿದ್ವಿ. ಎರಡೂ ಕಡೆ ಲಿಟರಲಿ ಐ ಟ್ರಾನ್ಸಡ್. ಕುಪ್ಪಳ್ಳಿಯೊಳಗ ಅಕ್ಕ `ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ' ಹಾಡಿದಳು. ಅಕಸ್ಮಾತ್ ತೇಜಸ್ವಿಯವರು ಒಳಗ ಬಂದಬಿಟ್ಟರು. ಹಾಡ ಕೇಳಿ ಸಂತೋಷಪಟ್ಟರು. `ನೀವು ಪ್ರೊಫೆಶನಲ್ ಸಿಂಗರ್ರಾ?' ಅಂತ ಕೇಳಿದರು. `ಯಾವ ಮೋಹನ ಮುರುಳಿ ಕರೆಯಿತೊ' ಹಾಡಿದಾಗ ಓಪನ್ ಫಂಕ್ಷನದೊಳಗ ಅಡಿಗರು ತಬ್ಕೊಂಡು ಅತ್ತಬಿಟ್ಟಿದ್ದರು, ಜೀವಮಾನದೊಳಗ ಹೀಂಗ ಇದನ್ನ ಹಾಡದೋರನ್ನೇ ಕೇಳಿಲ್ಲ ಅಂತ. *ನಿಮಗೆ ಪ್ರಿಯ ಲೇಖಕರು ಯಾರು? ಮಂಟೋ ಕತೆಗಳು ಇಷ್ಟ. ಬದುಕಿನ ಕನ್ನಡಿಯನ್ನೇ ನಿಮ್ಮ ಮುಂದೆ ಹಿಡದಬಿಡ್ತಾನ. ಅಂವ ಇಂಡಿಯಾದ ಬೋದಿಲೇರ್. ಕಮೂ ಸಾತ್ರ್ರೆ ಬಹಳ ಇಷ್ಟ. ಸಾತ್ರ್ರೆನ `ಬೀಯಿಂಗ್ ಅಂಡ್ ನತಿಂಗನೆಸ್' ಪಿಯುಸಿ ಇರೋವಾಗಲೇ ಓದಿದ್ದೆ. `ಮಲೆಗಳಲ್ಲಿ ಮದುಮಗಳು' ಫಿಫ್ತ್ ಕ್ಲಾಸಿಗೆ ಓದಿದ್ದೆ. ಬೋದಿಲೇರ್ ಯಾಕಿಷ್ಟ ಅಂದರ, ಅವನು ತನ್ನ ಕಾಲಘಟ್ಟದಲ್ಲಿ ಕಂಡ ಎಲ್ಲ ನೋವುಗಳನ್ನು ಹೇಳೋಕೆ ಒಂದು ರಿದಂ ಹುಡ್ಕೊಂಡಿದ್ದಾನ. ನರಳಾಟದಲ್ಲೂ ಒಂದು ಸ್ಪಾರ್ಕ್ ಕಾಣ್ತಾನ. ಈ ಜೀವನದ ಈ ಮರಣದ ಆಚೆಯ ಬೆಳಕಿದೆಯಲ್ಲಾ, ಅದೇ ಕಾವ್ಯ ಅಂತಾನ. ನನಗ ಕಮೂನ `ಮೆಟಮಾರ್ಫಸಿಸ್' ಇಷ್ಟ. ಅದರ ನಾಯಕ ಒಂದಿನ ಹುಳಾ ಆಗಿಬಿಡ್ತಾನ. ಒಂದೊಂದು ಸಲ ಇವನೌನ ಹುಳಾ ಆಗಿ, ನಮಗ ಹ್ಯುಮಿಲೇಟ್ ಮಾಡಿದ ಎಲ್ಲಾರನೂ ಕಟಕಟ ಕಚ್ಚಬೇಕು ಅನಿಸ್ತಿತ್ತು. (ರೋಹಿಣಿ `ನೀನು ಹಂಗ ಕಚ್ಚಕೆ ಹೋದಾಗ ಯಾವನಾದರೂ ತುಳದು ಪಚಕ್ ಅನಿಸಿದ್ದರೆ ಏನು ಮಾಡ್ತಿ?' ಎಂದು ಛೇಡಿಸಿದರು.) ಶೇಕ್ಸಪಿಯರ್ ಓದಿದೆ. ಅವನಲ್ಲಿ ಇರಿಯೋದು ಕೊಲ್ಲೋದು ಇಷ್ಟ ಆಗಲಿಲ್ಲ. ಜಗತ್ತಿನೊಳಗೆ ಯುದ್ಧ ಆಗಬಾರದು. ಜನ ಸಾಯಬಾರದು. ನಾವು ಪ್ರಾಚೀನ ಯುದ್ಧಕಾವ್ಯಗಳ ನಾಯಕರನೆಲ್ಲ ದೇವರು ಮಾಡಿ ಇಟ್ಟಬಿಟ್ಟಿವಿ ಸುಡುಗಾಡು. ಆರತಿ ಎತ್ತೋದೇ ಎತ್ತೋದು. *ಗಿಬ್ರಾನ್ ಬಗ್ಗೆ ಯಾಕೆ ಸೆಳೆತ? ನೋಡ್ರಿ, ಅಮೆರಿಕಕ್ಕೆ ಹೋದಾಗ ಅವನಿಗೆ ಪಾಪಪ್ರಜ್ಞೆ ಕಾಡ್ತು. ನೇಟಿವಿಟಿಯಿಂದ ದೂರಿದ್ದ. ಆಗ ಫೋನಿಲ್ಲ ಟೆಲಿಗ್ರಾಮಿಲ್ಲ. ಆಗ ಕಾಣದೆಯಿದ್ದ ಒಬ್ಬ ಪೊಯೆಟೆಸ್ಗೆೆ ಬರೆದ ಪತ್ರಗಳು ಅವು-ನೂರು ವರ್ಷದ ಕೆಳಗ. ಅವನು ಮಕ್ಕಳ ಬಗ್ಗೆ ಆಡಿದ ಮಾತುಗಳು ಎಂಥವು! ಮಗು ತನ್ನ ತಲೆಯೊಳಗ ಏನು ಬರ್ತದ ಅದನ್ನೇ ಮಾಡ್ತದ. ನೀವು ಏನಾರ ಚಾಕಲೇಟ್ ಕೊಡೋಕೆ ಹೋಗರಿ, ಆಕಾಶದ ಕಡೆ ಮಾಡಿ ಅಂಗೈ ಹಿಡೀತದ. ಅನಂತತೆಯತ್ತ ಕೈಚಾಚತದ. ಇದನ್ನು ಪ್ರತಿ ಗ್ಯಾದರಿಂಗನೊಳಗ ಹೇಳತಿದ್ದೆ. ಯಾವ ಲೇಖಕ ಡೌನ್ ಟು ದ ಅರ್ತ್ ಇರ್ತಾನ, ಹೂ ಅಂಡರಸ್ಟ್ಯಾಂಡ್ಸ್ ದ ಪ್ರಾಬ್ಲಮ್ಸ್ ಆಫ್ ದಿ ಕಾಮನ್ ಪೀಪಲ್, ಅಂತಹ ರೈಟರ್ ನನಗಿಷ್ಟ. ಆಂಟಿಹ್ಯೂಮನ್ ರೈಟಿಂಗ್ ಯಾವತ್ತೂ ಇಷ್ಟಪಡೋದಿಲ್ಲ. ಮಣ್ಣು ತಂಪಿದ್ರೆ ಬೀಜ ಮೊಳಕೆ ಒಡೀತಾವ. ರೈಟಿಂಗಿನೊಳಗ ಡೆಲಿಕಸಿ ಆಫ್ ಮೈಂಡ್ ಅಂತಿರ್ತದ. ಅದನ್ನ ಬಿಟ್ಟು ಬರದರ ಜಸ್ಟ್ ಸ್ಟೇಟ್ಮೆಂಟ್ ಆಗತದ. ಪಂಪ ಕುಮಾರವ್ಯಾಸ ಬರದ ಎಷ್ಟು ವರ್ಷ ಆತು? ಯಾಕವರು ಇಷ್ಟ ಆಗ್ತಾರ? ಯಾಕಂದ್ರ ಅವರ ಭಾಷೆಯಲ್ಲಿ ಬದುಕಿನ ಒಂದು ಆರ್ದ್ರತೆ ತುಂಬ್ಯದ. *ಲೇಖಕರು ಪರಂಪರೆಯಿಂದ ಪ್ರೇರಣೆ ಪಡೆಯೋದು, ಜೀರ್ಣಿಸಿಕೊಂಡು ತಮ್ಮದನ್ನಾಗಿ ಮಾಡಿಕೊಳ್ಳೋದು ಇರುತ್ತೆ. ನಿಮ್ಮ ಅನುಭವ ಏನು? ಕುವೆಂಪು ಅವರ ಜೀವನದರ್ಶನ, ಕಾರಂತರ ಬದುಕಿನ ಜಟಿಲ ಸಮಸ್ಯೆಗಳನ್ನು ಕಾಣಿಸೋ ರೀತಿ, ಮಾಸ್ತಿಯವರ ಬದುಕಿನ ಸಹನೆ, ಇಂದಿರಾ ಅನುಪಮಾ ವಾಣಿ ತ್ರಿವೇಣಿ ಇವರಲ್ಲಿರೋ ಹೆಣ್ಮಕ್ಕಳ ಸೂಕ್ಷ್ಮದನಿ ಅರ್ಥಮಾಡಕೊಂಡೀನಿ. ಇಂದಿರಾರ `ತುಂಗಭದ್ರಾ' `ಸದಾನಂದ' ವಂಡರಫುಲ್ ನಾವಲ್ಸ್. ಆ `ಸದಾನಂದ'ನ್ನ ಎಷ್ಟು ಸತಿ ಓದಬೇಕ್ರಿ ನಾವು? ವಿಡಂಬನೆಯಿಂದ ರಫ್ಆಗಿ ಬರೆಯೋದನ್ನ ಇಷ್ಟಪಡಲ್ಲ. ಬಂಡಾಯ ಬೇಡಂತಲ್ಲ. ಅದು ಸಾಹಿತ್ಯದೊಳಗ ಸೂಕ್ಷ್ಮವಾಗಿ ಅಳವಡಿಕೆಯಾಗಬೇಕು. ಜಗತ್ತಿನ ಎಲ್ಲ ಸಾಹಿತ್ಯ ಓದಬೇಕು. ಆದರೆ ನಮ್ಮೊಳಗಿನ ಅನುಭವವನ್ನೇ ಬರೀಬೇಕು. ತಮ್ಮ ಅನುಭವವನ್ನ ಹೇಳೊ ಗಟ್ಟಿತನ ಕಮಲಾದಾಸ್ ಅಮೃತಾಪ್ರೀತಂ ಅವರಲ್ಲದ. ಅದು ನನ್ನ ಕಡೆ ಖಂಡಿತಾ ಸಾಧ್ಯವಿಲ್ಲ. *ಇವರ ಗಟ್ಟಿತನ ನೀವು ಉಲ್ಲೇಖಿಸಿದ ಕನ್ನಡ ಲೇಖಕಿಯರಲ್ಲಿ ಇಲ್ಲವಾ? ಏನೋ ಹೇಳಬೇಕು ಅಂತ ವಿಚಾರ ಮಾಡ್ಯಾರ. ಆದರ ಅವರೊಳಗ ಕಟ್ಟುಪಾಡದಾವ. ಹೆಣ್ಣಿನ ಅಸಹಾಯಕತೆ ದೌರ್ಬಲ್ಯ ತಳಮಳ ಶೋಷಣೆಯ ದನಿ ಅದಾವ. ಆದರ ಇವರಷ್ಟು ಡೇರಾಗಿ ಹೇಳೋಕೆ ಆಗಿಲ್ಲ. ಹಂಗ ಹೇಳೊ ತಾಕತ್ತು ಬರಬೇಕಾದರ ಪರಿಣಾಮ ಎದುರಿಸೊ ಧೈರ್ಯ ಬೇಕು. ನಾನು ಯಂಗಿದ್ದಾಗ ಬ್ಯೂಟಿಫುಲ್ ಇರಬಹುದು. ಯಾರೊ ಕಿರುಕುಳ ಕೊಟ್ಟಿರಬಹುದು. ನಾನು ಇಂಟಲೆಕ್ಚುವಲ್ ಪರ್ಸನ್ ಲವ್ ಮಾಡ್ತೀನಿ ಅಂತ ತಿಳ್ಕೋರಿ. ಬಟ್ ಐ ಕಾಂಟ್ ಎಕ್ಸಪ್ರೆಸ್ ಇಟ್. ನನಗ ಹತ್ತಿಕ್ಕೊ ಫ್ಯಾಮಿಲಿ ಬೈಂಡಿಂಗ್ಸ್ ಅವ. *ಹತ್ತಿಕ್ಕಿದ್ದನ್ನು ಹೇಳಲೇಬೇಕಾದಾಗ ಏನು ಮಾಡ್ತೀರಿ? ನಮ್ಮ ಬದುಕಿಗೆ ಗಂಡ-ಮಕ್ಕಳು-ಮನೆ ಅಂತ ಒಂದು ಚೌಕಟ್ಟಿಲ್ಲ. ಸಾದಾ ಪಿಚ್ಚರ್ ನಾವು. ಯಾರಾದರೂ ಮುಟ್ಟಿದರ ಹರದ ಹೋಗ್ತೀವಿ. ಅಷ್ಟು ಡೆಲಿಕೇಟ್ ಇರತೇವಿ. ನಮ್ಮ ಡಿಗ್ನಿಟಿ ಆಫ್ ಲೈಫ್ ಹೋಗತದ. ಆದರೆ ಯಾರೂ ಮುಟ್ಟಿದರೂ ಸೇಫ್ ಆಗಿರೋಕೆ ಸಬ್ ಕಾನ್ಶಿಯಸ್ ಕ್ಯಾರಕ್ಟರ್ಸ್ ಸೃಷ್ಟಿ ಮಾಡಕೋತೀವಿ. ನಮ್ಮ ಸಿಟ್ಟು ಸೆಡವು ಅದರ ತ್ರೂನೇ ಎಕ್ಸಪ್ರೆಸ್ ಮಾಡಿಬೀಡ್ತೀವಿ. *ಬರೆಹ ಕಲಾಭಿವ್ಯಕ್ತಿ ಮಾತ್ರವಲ್ಲ, ವೈಯಕ್ತಿಕ ತಲ್ಲಣಗಳ ಬಿಡುಗಡೆ ಕೂಡ. ಖಂಡಿತಾ. ಅಸಹಾಯಕತೆ, ದೇಹದ ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ವರ್ ಸ್ಟ್ರಾಂಗ್ ಇನ್ ಫ್ರಂಟ್ ಆಫ್ ಹಂಗರ್? ಯಾರು ನಮ್ಮನ್ನ ನೋಡಿದರೂ ಒಂದು ಕೆಟ್ಟಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ, ಅದು ಸಣ್ಣ ಮಾತಲ್ಲ. ಮತ್ತ ನಾವು ಹೆಲ್ತೀ ವಿಮೆನ್. ಎಲ್ಲಾ ಹಾರ್ಮೊನ್ಸ್ ಇಂಪ್ಯಾಕ್ಟ್ ಮಾಡ್ಯಾವ ನಮ್ಮ ಬ್ಯಾಡಿಮ್ಯಾಲ. ಗರ್ಭಕೋಶ ತಗಸೋಕೆ ಹೋದಾಗ, ಡಾಕ್ಟರು `ಯಾಕ್ರೀ ಮೇಡಂ? ಇಷ್ಟು ಹೆಲ್ತಿ ಅದೀರಿ, ಮದುವೆ ಯಾಕ ಆಗಲಿಲ್ಲ? ಎಷ್ಟು ಇಫೆಕ್ಟ್ ಆಗ್ಯದ ಬಾಡಿ ಮ್ಯಾಲ. ಮದುವೆಯಾಗಿ ಮಕ್ಕಳಾಗಿದ್ದರೆ ಹಾರ್ಮೋನ್ ಸೈಕ್ಲಿಂಗ್ ಸರಿಯಾಗತಿತ್ತು' ಅಂದರು. ಏನು ಹೇಳ್ತೀರಿ ಇದಕ್ಕ? ನಾವೆಷ್ಟೇ ಓದಿರಲಿ, ಒಬ್ಬ ಹೆಣ್ಣಿಗೆ ಎಮೋಶನಲ್ ಬೈಂಡಿಂಗ್ಸ್ ಬೇಕು. ಒಬ್ಬ ಸಂಗಾತಿ ಬೇಕು-ಅಂವ ಎಂಥಾವನೇ ಇರವಲ್ಯಾಕ. ನಮ್ಮ ಅನುಭವ ಅದ. ಉಧೋಉಧೋ ಎಲ್ಲಮ್ಮ ಅನ್ನೋ ಪರಿಸ್ಥಿತಿ ಬಂದುಬಿಡ್ತು ನಮಗ. *ಅಕ್ಕ ಕೂಡ ತನಗೆ ತನ್ನ ದೇಹದ ಭಾವಗಳು ಕಾಡುವುದನ್ನು ಹೇಳಿಕೊಳ್ತಾಳೆ. ಆಕಿಗೂ ಈ ಹಾರ್ಮೋನಿಯಸ್ ಚೇಂಜ್ಗಾಳು ಕಾಡ್ಯಾವ. ಒಂದು ಲೆಕ್ಕದಲ್ಲಿ ಆಕಿ ಸ್ಕಿಜೋಫ್ರೇನಿಕ್. ಗಂಡನ್ನ ತೃಪ್ತಿಪಡಿಸಲು ಆಗಲಿಲ್ಲ. ಅಂವ ಕೌಶಿಕ ಒಟ್ಟ ತಿರಸಟ್ಟಿ. ಆಕಿ ಬಾಡಿ ಕೋಮಲ ಇತ್ತು. ಶಿ ಕುಡ್ ನಾಟ್ ಟಾಲರೆಟ್ ಹಿಸ್ ವೈಲನ್ಸ್. ಗಂಡಸು ಬೇಕು. ಆದರ ಇಂಥಾ ಕ್ರೂರ ಗಂಡ ಬ್ಯಾಡ ಅಂತ್ಹೇಳಿ ಚೆನ್ನಮಲ್ಲಿಕಾರ್ಜುನನ್ನ ಹುಡ್ಕೊಂಡು ಹೋದಳು. ಶಿ ನೀಡ್ಸ್ ಎ ಕಂಪ್ಯಾನಿಯನ್. ಚೆನ್ನಮಲ್ಲಿಕಾರ್ಜುನ ತನ್ನ ಗಂಡ ಅಂತ ಸಿಂಬಲ್ ಇಟಕೊಂಡು ವಚನ ಬರದಳು. ಚೆನ್ನಮಲ್ಲಿಕಾರ್ಜುನನ ಬಿಟ್ಟು ಉಳದೋರನೆಲ್ಲ ಭಂಡರು ಅಂದಳು. *ನೀವು ಮದುವೆ ಯಾಕೆ ಆಗಲಿಲ್ಲ? ಬಡತನದಿಂದ. ಹೊಟ್ಟೆ ಹಸಿವಿನ ಮುಂದೆ ದೇಹದ ಹಸಿವು ಯಾವ ಲೆಕ್ಕ? ನಮ್ಮಪ್ಪ ಜಾತಕ ಅನ್ನಾಂವ. ನಾವು ಡಬಲ್ ಗ್ರಾಜುಯೇಟ್ಸು. ಸಾವಿರಕ್ಕ ಒಂದು ಜಾತಕ ಹೊಂದೋದು. ಅಪ್ಪಯ್ಯನ ಚಪ್ಪಲ್ ಹರದ ಹೋಗೋದು. ಹೊಸ ಚಪ್ಪಲ್ ಕೊಡಸಬೇಕಂದ್ರ ನಾವು ನಾಲಕ್ಮನಿ ಟೂಶನ್ ಜಾಸ್ತಿ ಹೇಳಬೇಕು. ಇಷ್ಟು ಬಡತನವಿದ್ದರೂ ಯಾರನ್ನೂ ಬೇಡಲಿಲ್ಲ. ಕಾಡಲಿಲ್ಲ. ಈ ಮಣ್ಣೊಳಗೆ ಸತ್ವ ಹೀರಿಕೊಂಡು ಬೆಳದಿವಿ. *ಆಧುನಿಕ ಸ್ತ್ರೀವಾದದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಬೇಕು. ಒಟ್ಟ ಈ ಸ್ತ್ರೀವಾದ ನನಗ ಇಷ್ಟವಿಲ್ಲ. ವಾಟೆವರ್ ಐ ಫೀಲ್, ಐ ರೈಟ್. ಈ ಬಾಡಿ ಹಾರ್ಮೋನ್ಸ್ ಚೇಂಜದೊಳಗ ನಾವೆಲ್ಲ ಒಂದೇ ಹ್ಯೂಮನ್ ಬೀಯಿಂಗ್ಸ್. ಅಟ್ ದಿ ಸೇಮ್ ಟೈಂ, ಹರ್ ಸೆಕ್ಸುವಲ್ ಸ್ಯಾಟಿಸಪ್ಯಾಕ್ಷನ್ ವಿಲ್ ಬಿ ಕಂಪ್ಲೀಟೆಡ್ ಬೈ ಎ ಮ್ಯಾನ್ ಓನ್ಲಿ. ದೆರೀಸ್ ಕಂಪಲ್ಸರಿ ಅಟೆಂಡನ್ಸ್ ಆಫ್ ಎ ಮ್ಯಾನ್ ಟು ವುಮನ್ ಲೈಫ್. ಜೀವನದ ತತ್ವ ಅದು. ಅರ್ಧನಾರೀಶ್ವರ ಕಾನ್ಸೆಪ್ಟ್ ಏನಂದರ, ಶಿವ-ಪಾರ್ವತಿ. ಪ್ರತಿ ಗಂಡೊಳಗೆ ಒಬ್ಬ ಹೆಣ್ಣಿರ್ತಾಳ. ಪ್ರತಿ ಹೆಣ್ಣೊಳಗ ಒಂದು ಗಂಡಿರ್ತಾನ. ಒಬ್ಬರು ಬಿಟ್ಟರೆ ಇನ್ನೊಬ್ಬರಿಲ್ಲ. ಈಗ ಯಾರಾದರೂ ಕಂಡರೆ ನನ್ನ ಫ್ರೆಂಡ್ ಅನ್ತೀನಿ. ಈಗ ಅದನ್ನೆಲ್ಲ ಮೀರಿ ಹೋಗಿಬಿಟ್ಟೀನಿ. *ಹಿಂತಿರುಗಿ ನೋಡುವಾಗ ಜೀವನ ಹೇಗನಿಸುತ್ತೆ? ನೋ ರಿಪೆಂಟೆನ್ಸ್. ವಿ ಮೇಂಟೆನ್ಡ್ ದಿ ಡಿಗ್ನಿಟಿ ಆಫ್ ಲೈಫ್. ಇಫ್ ಯು ಆರ್ ಮಾರಲಿ ಸ್ಟ್ರಾಂಗ್ ಇದು ಬರುತ್ತೆ. *ನೀವು ಜೀವನದಲ್ಲಿ ದೊಡ್ಡದು ಅಂತ ಭಾವಿಸೊ ಆದರ್ಶ ಯಾವುದು? ಪ್ರೀತಿ. ಅದಕ್ಕ ರೊಕ್ಕ ಬೇಡ ರೂಪಾಯಿ ಬೇಡ. ಸುಮ್ನೆ ಹಂಚಿಕೊಂಡು ಹೋಗಬೇಕು. ನಾನು ಜಾಬ್ ಕಳಕೊಂಡಾಗ ನಮ್ಮಕ್ಕ, `ಕಕ್ಕೂ, ಸಾಲಿ ಬಿಡಿಸಿದರೇನಾತು? ಒಂದು ಬೇವಿನಮರದ ಕೆಳಗ ಕುಂತು ನಾಲ್ಕು ಮಕ್ಕಳಿಗೆ ಪ್ರೀತಿ ಹಂಚು' ಅಂದಿದ್ಲು. ಪ್ರೀತಿ ಹಂಚಿದಷ್ಟೂ ತನು ತುಂಬತೈತಿ. ಬಾವಿಗೆ ಮ್ಯಾಲಿಂದ ನೀರುಬಿಟ್ಟರ ಕಳಕಾಗೈತಿ. ಕೆಳಗಿಂದ ಜಗ್ಗಿಜಗ್ಗಿ ತಗದ ಹಂಚಿದರ ಸೆಲಿ ಉಕ್ಕತೈತಿ. ಈಗ ನೀವು ನಮ್ಮನಿಗೆ ಬಂದಿರಿ. ಯಾವ ಕಾರಣಕ್ಕ ಬಂದಿರಿ? ಕಾರಣವಿಲ್ಲದ ಪ್ರೀತಿ. ನೀವೆಲ್ಲೇ ಹೋಗರಿ, ಪ್ರೀತಿ ಇದ್ದರೆ ಮಾತ್ರ ಒಳ್ಳೇ ಬರಹ ಹುಟ್ಟತದ. ಅಂತಃಕರಣ ಆದ್ರ್ರತೆ ಇಲ್ಲದೆ ದೊಡ್ಡ ಸಾಹಿತ್ಯ ಹುಟ್ಟೋಲ್ಲ. ಈಗ ಈ ಅಂತಃಕರಣ ಇರೋ ಎಷ್ಟೆಷ್ಟು ಒಳ್ಳೇ ಕತೆ ಕವಿತೆಗಳು ಬರ್ತಿದಾವ್ರೀ ಹೊಸ ತಲೆಮಾರಿನಿಂದ. ಸಂತೋಷ ಆಗ್ತದ. *ನೀವು ಸಾಮಾನ್ಯವಾಗಿ ಬರೆಯುವ ಕ್ರಮ ಯಾವುದು? ಒಂದು ಕತೆ ಬರಿಯೋಕೆ ಹತ್ತಿದರೆ, ಮೊದಲನೇ ಸಾಲಿನಿಂದ ಕೊನೇ ಸಾಲಿನವರೆಗೆ ಎಂದೂ ಭಾಷೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಭಾಷೆ ದುಡಿಸಿಕೊಳ್ಳೋದು ಅಂತಾರಲ್ಲ, ನನಗ ಅರ್ಥಾಗವೊಲ್ಲದು. ನಿತ್ಯ ಜೀವನದೊಳಗೆ ಮಂದಿ ಮಾತಾಡೋದು ಕೇಳ್ರಿ ನೀವು. ಎಂತೆಂಥ ರೂಪಕ ಬಳಸ್ತಾರ? ಬದುಕು ಕಂಡರೆ ಸಾಕು, ಭಾಷೆ ತಾನೇ ದುಡೀತದ. ಕತೆಯಾಗಲಿ ಕವಿತೆಯಾಗಲಿ, ಬಂಧಗಿಂಧ ಏನೂ ವಿಚಾರ ಮಾಡೋದಿಲ್ಲ. ಒಂದು ಸಿಟ್ಟಿಂಗನೊಳಗ ಸೀದಾ ಬರದಬೀಡೋದು. ಐವತ್ಮೂರನೇ ವಯಸ್ಸಿಗೆ ಬರವಣಿಗೆ ಆರಂಭ ಮಾಡಿದೆ. ಮೂವತ್ತು ಪುಸ್ತಕ ಬಂದಾವ. ಅದೆಷ್ಟು ಗಂಟಿತ್ತೊ ಅದನ್ನೆಲ್ಲ ಕರಗಿಸಿಬಿಟ್ಟೆ. ಸ್ಟಿಲ್ ಐ ಹ್ಯಾವ್ ಲಾಟ್ ಆಫ್ ಸ್ಟ್ರೆಂತ್. ಬರೀವಾಗ ನನಗೇ ತಿಳಿದಿದ್ದಂಗ ಒಂದು ಪಾಸಿಟಿವ್ನೆಸ್ ಬಂದುಬಿಟ್ಟಿರ್ತದ. *ನಿಮಗೆ ಬಹಳಷ್ಟು ಹಿರಿಕಿರಿ ಲೇಖಕರ ಸಂಪರ್ಕ ಇತ್ತು. ಹ್ಯಾಗೆ ಸಾಧಿಸಿದಿರಿ? ಹ್ಯಾಗಂದ್ರಿ? ಕನ್ನಡದಲ್ಲಿ ಯಾರಾದರೂ ಚೂರು ಒಳ್ಳೇದು ಬರದರ ಸಾಕು, ಹುಡುಕ್ಯಾಡಿ ಪುಸ್ತಕ ತರಸ್ಕೋತೀನಿ. ಓದಿದ ಕೂಡಲೇ ಅವರ ವಿಳಾಸ ಹುಡುಕಿ ಅಭಿಪ್ರಾಯ ಬರೀತೀನಿ. ಅನಂತಮೂರ್ತಿ, ಗಿಬ್ರಾನನ ಪ್ರೇಮಪತ್ರಗಳು ಓದಿ ರಾತ್ರಿ ಹನ್ನೊಂದಕ್ಕೆ ಫೋನು ಮಾಡಿದ್ದರು. ಕಾರಂತಜ್ಜರನ್ನ ನಮ್ಮ ಸಾಲಿಗೆ ಕರೆಸಿದ್ದೆವು. ಅವರಿಗೆ ಜ್ವರ ಬಂದಿತ್ತು. ನಮ್ಮನ್ಯಾಗಿದ್ದರು. ತಿಳೀಸಾರು ಅನ್ನ ಹಾಕಿ, ಎರಡು ದಿನ ಅವರ ಸೇವಾ ಮಾಡಿದೆ. ಎಲ್ಲೆಲ್ಲೊ ತಿರುಗಾಡಿ ಬಂದಿದ್ರಲ್ಲ, ಧೋತರಾ ಬನಿಯನ್ ಗಲೀಜಾಗಿದ್ದವು. ಪಾಪ ವಯಸ್ಸಾದೋರು ಎಲ್ಲಿ ಒಕ್ಕೋಬೇಕರಿ? ಒಗದು ಹಾಕಿದೆ. ಗಾಬರಿ ಆಗಿಬಿಟ್ಟಿದ್ದರು ಅವರು. ಊರಿಗೆ ಹೋದಾಗ ಮಾಲಿನಿ ಮುಂದ ಹೇಳಿದ್ದೇ ಹೇಳಿದ್ದು `ಈ ಮಕ್ಕಳು ನನ್ನ ಧೋತ್ರಾ ಒಗದು ಹಾಕಿದ್ದರು' ಅಂತ. *ಬೇರೆ ಹವ್ಯಾಸ ಯಾವುದು? ಓಲ್ಡ್ ಸಾಂಗ್ ಭಾಳ ಕೇಳ್ತೀನ್ರಿ. ಹಿಂದಿ ಸಿನಿಮಾ ಹೆಚ್ಚು ನೋಡ್ತೀನಿ. ಸಾಹಿರ್ ಲುಧಿಯಾನ್ವಿ, ಜಾವೇದ್ ಅಖ್ತರ್ ಹಾಡು ಇಷ್ಟ. ಹಿಂದಿ ಸಿನಿಮಾ ರಿಚ್ ಆಗಲಿಕ್ಕೆ ಉರ್ದು ಸಾಂಗುಗಳೇ ಕಾರಣ. ಪ್ರತಿಹಾಡಿನ ಮೀನಿಂಗನ್ನ ಧ್ಯಾನಿಸ್ತೀನಿ. `ತೇರಾ ಮೇರಾ ಪ್ಯಾರ್ ಅಮರ್, ಫಿರ್ ಕ್ಯೂ ಮುಝಕೊ ಲಗತಾ ಹೈ ಡರ್'. ಇಲ್ಲಿ ಇಂಟೆನ್ಸಿಟಿ ಆಫ್ ಲವ್ ಅದೆಯಲ್ಲ, ಅದನ್ನ ಕನ್ನಡದೊಳಗೆ ಹೇಳಾಕ ಬರೋದಿಲ್ಲ. ಸಾಹಿರ್ ಈಜ್ ಗ್ರೇಟ್! *ಓದುಗರ ಜತೆ ನಿಮ್ಮ ಅನುಭವ ಎಂಥದು? ಬಜಾರಿಗೆ ಹೋದರೆ, ಕಾಯಿಪಲ್ಲೆ ಮಾರೋಳು ಹಸೀನಾ ಅನ್ನೋವಾಕಿ, `ಬಾಯಾರೆ, ಹೊಸ ಪುಸ್ತಕ ಇದ್ದರೆ ಕೊಡ್ರೀ' ಅಂತಾಳ. ಆಕೀದು ಎಸೆಸೆಲ್ಸಿ ಆಗ್ಯಾದ. ನನ್ನೆಲ್ಲ ಪುಸ್ತಕ ಓದ್ಯಾಳ. `ಲೇ, ಹಿಡಕೊಂಡ ತಪ್ಪಡಿ ಇಳಸೋಕೆ ಟೈಮಿಲ್ಲ ನಿನಗ. ಯಾವಾಗ ಓದ್ತೀಯೇ?' ಅಂದರ, `ರಾತ್ರಿ ಓದ್ತೀನ್ರಿ' ಅಂತಾಳ. ಇದು ಒಬ್ಬ ರೈಟರಿಗೆ ಸಿಗೋ ನಿಜವಾದ ಬಹುಮಾನ. ಮತ್ತೊಬ್ಬ ರೈತ ಅಣ್ಣಿಗೇರಿಯಂವ, ನನ್ನ ದೊಡ್ಡ ಫ್ಯಾನ್. ಫೋನು ಮಾಡ್ತಾನ, ಯಾವುದಾದರೂ ಪುಸ್ತಕ ಬಂದರೆ ಹೇಳ್ರಿ, ತರಸ್ಕೋತೀನಿ ಅಂತ. ಹಡಗಲಿ ಎಕ್ಸ್ ಎಂಎಲ್ಎ. ಒಬ್ಬರು `ಖಲೀಲ್ ಗಿಬ್ರಾನ್' ಪುಸ್ತಕ ಓದಿ ಒಂತಾ¸ಸು ಮಾತಾಡಿದರು. ಮಂದಿಗೆ ಮುಟ್ಟೈತೊ ಇಲ್ರೀ ನನ್ನ ರೈಟಿಂಗು? ಹಂಗ ನೋಡಿದರೆ, ಯೂನಿವರ್ಸಿಟಿ ಹುಡುಗರೇ ಪುಸ್ತಕ ಓದಂಗಿಲ್ಲ. *ನಿಮ್ಮ ಬರೆಹದಲ್ಲಿ ಮೃತ್ಯುಪ್ರಜ್ಞೆ ಮತ್ತೆಮತ್ತೆ ಬರುತ್ತೆ. ಬಿಕಾಸ್, ಡೆತ್ ಈಜ್ ರಿಲಿಫ್, ಹ್ಯಾಪಿನೆಸ್. ಏನೈತರಿ ಈ ದರಿದ್ರ ಬಾಡಿಯೊಳಗ. ಆದರೆ ಸೌಲ್ ಈಸ್ ಲೈಫ್. ನಮ್ಮಪ್ಪಯ್ಯ ಸತ್ತಾಗ ಅವನ ಮಾರಿ ಇಷ್ಟು ಶಾಂತ ಇತ್ತರಿ. ಡೆತ್ತನ್ನು ನಾವು ಕಣ್ಣಾರೆ ನೋಡೀವಿ. ಅಪ್ಪಯ್ಯನಿಗೆ ಅನ್ನನಾಳದ ಕ್ಯಾನ್ಸರ್ ಆಗಿತ್ತು- ಕರದ ಎಣ್ಣಿಯೊಳಗ ಕೆಲಸ ಮಾಡಿಮಾಡಿ. `ಅರವತ್ತು ವರ್ಷ ಬದುಕೀನಿ. ಈಗ ಸಾಯ್ತೀನಿ ಅಂತ ವಿಚಾರ ಮಾಡಬ್ಯಾಡ್ರಿ' ಅನ್ನೋರು. ವೆನ್ ಐ ವಾಜ್ ಆನ್ ಡೆತ್ ಬೆಡ್, ಆತು ಇನ್ನು ದಾಟಿಹೋಗ್ತೀನಿ. ಎರಡಕ್ಷರ ಬರೆಯೋಣ ಅಂತ ಶುರುಮಾಡಿದೆ. ಸಾವು ಇವತ್ತೇ ಬರಲಿ. ಮಕ್ಕಳಿಲ್ಲ ಮರಿಲ್ಲ. ಅದಕ್ಯಾಕ ಚಿಂತೆ? ಅಕ್ಸೆಪ್ಟಿಂಗ್ ಡೆತ್ ಈಸ್ ಲವ್ ಆಫ್ ಲೈಫ್. ಟ್ರೂತ್ ಆಫ್ ಲೈಫ್. ಯಾರಾದರೂ ಸತ್ತರೆ ನಾನು ಭಾಳ ಅಳೋಕೆ ಹೋಗಲ್ಲ. ಯಪ್ಪಾ, ಪಾರು ಮಾಡಿದೆಯಲ್ಲಪ್ಪ ಇವರನ್ನ ಅಂತೀನಿ. ಇದು ನಮ್ಮ ನಿಮ್ಮ ಕೊನೀ ಭೆಟ್ಟಿ ಆಗಬಹುದು, ಯಾರಿಗ್ಗೊತ್ತು? ಆದರೆ ಲೈಫ್ ಈಜ್ ಬ್ಯೂಟಿಫುಲ್. ವೆದರ್ ಐ ಮೇಬಿ ಹಿಯರ್ ಆರ್ ನಾಟ್, ಲೈಫ್ ಈಜ್ ಗೋಯಿಂಗ್ ಆನ್. ******************** ಲೇಖಕಿ ಕಸ್ತೂರಿ ಬಾಯರಿಯವರು ಈಚೆಗೆ ನಿಧನರಾದರು. ಅವರು ಕರಾವಳಿಯಿಂದ ಬದಾಮಿಗೆ ವಲಸೆ ಮಾಡಿದ ತಮ್ಮ ಕುಟುಂಬ ಜತೆ ಬಾಲ್ಯದಲ್ಲೇ ಬಂದವರು. ವೃತ್ತಿಯಿಂದ ಆಂಗ್ಲ ಶಿಕ್ಷಕಿಯಾಗಿದ್ದ ಅವರು, ಬಾಳಿನ ಕೊನೆಯ ವರ್ಷಗಳಲ್ಲಿ ಬರೆಹ ಆರಂಭಿಸಿದರು. ಕವಿತೆ, ಕತೆ, ಪತ್ರ, ಪ್ರಬಂಧ ಮತ್ತು ಅನುವಾದ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದರು. ಅವರ ಸಾಹಿತ್ಯವು, ಬಾಲ್ಯದ ಬಡತನ, ವೃತ್ತಿಜೀವನದ ಅಭದ್ರತೆ ಹಾಗೂ ದೈಹಿಕ ಬೇನೆಗಳಿಂದ ಗಾಯಗೊಂಡ ವ್ಯಕಿತ್ವವೊಂದು, ಬದುಕಿಗೆ ಅರ್ಥ ಕಂಡುಕೊಳ್ಳಲು ಮಾಡಿದ ಪ್ರಯತ್ನದಂತಿದೆ. ಭಾವುಕ ತೀವ್ರತೆಯಿಂದ ಪ್ರವಹಿಸುವ ಭಾಷೆ ಮತ್ತು ಶೈಲಿ ಅದರ ಲಕ್ಷಣ. ಅಲ್ಲಿ ಭಗ್ನಹೃದಯದ ಸ್ತ್ರೀಪಾತ್ರಗಳು ಸಾಮಾನ್ಯವಾಗಿದ್ದು, ಅವು ಬಾಳ ಬಿಕ್ಕಟ್ಟುಗಳಲ್ಲಿ ಹಾಯುತ್ತ, ನೆಮ್ಮದಿ ಅರಸುತ್ತ, ತಮ್ಮತನ ಕಂಡುಕೊಳ್ಳಲು ಸೆಣಸಾಡುವ ಸನ್ನಿವೇಶಗಳಿವೆ. ಧರ್ಮ-ಜಾತಿ-ಭಾಷೆಯ ಸರಹದ್ದುಗಳಾಚೆ ಸಮಸ್ತ ಮನುಷ್ಯರಲ್ಲಿ ನೆಲೆಸಿರುವ ಪ್ರೀತಿ ಮತ್ತು ಮನುಷ್ಯತ್ವವನ್ನು ದರ್ಶನದಂತೆ ಅರಸುವುದು ಅವರ ಸಾಹಿತ್ಯದ ಆಶಯ. ಕಸ್ತೂರಿಯವರು ಕರಾವಳಿ ಹಾಗೂ ಬಿಜಾಪುರ ಸೀಮೆಯ ಜನಜೀವನದ ವಿವಿಧ ಮುಖಗಳನ್ನು ತಮ್ಮ ಬರೆಹದಲ್ಲಿ ಶೋಧಿಸಿದವರು. ಅವರ ಕತೆಗಳು ಎರಡು ವಿಭಿನ್ನ ಪ್ರಾದೇಶಿಕ ಸೀಮೆಗಳ ಅನುಭವವನ್ನು ಹಾಸುಹೊಕ್ಕಿನ ಎಳೆಗಳನ್ನಾಗಿ ಮಾಡಿ ನೇದ ಪತ್ತಲದಂತಿವೆ. ಅವರು ಸೋದರಿ ರೋಹಿಣಿಯವರ ಜತೆ ಬದಾಮಿಯಲ್ಲಿ ವಾಸವಾಗಿದ್ದರು. ಇಬ್ಬರೂ ಸಾಹಿತ್ಯದ ಗಾಢ ಓದುಗರು; ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ತರಿಸಿಕೊಂಡು ಬಂದವರಿಗೆಲ್ಲ ಹಂಚುತ್ತಿದ್ದವರು. ಅವರು ಡಯಾಬಿಟೀಸಿನ ದೆಸೆಯಿಂದ ದೃಷ್ಟಿ ಕಳಕೊಂಡು ತಮಗೆ ಓದು ಸಾಧ್ಯವಾಗುತ್ತಿಲ್ಲ ಎಂದು ಹಲುಬುತ್ತಿದ್ದರು. ನಾನೂ ಬಾನೂ ಕಳೆದ ವರ್ಷದ ನವೆಂಬರ್ 8ರಂದು ಬದಾಮಿಗೆ ಹೋದೆವು. ಅವರೊಟ್ಟಿಗೆ ಒಂದು ದಿನವಿದ್ದೆವು. ಆಗ ನಡೆದ ಮಾತುಕತೆಯಿದು. ಈ ಮಾತುಕತೆಯಲ್ಲಿರುವ ತಲ್ಲಣಗಳು ಬಾಯರಿಯವರವು ಮಾತ್ರವಲ್ಲ; ಬಡತನ, ಸಂಪ್ರದಾಯ, ಕಾಯಿಲೆ, ಅಭದ್ರತೆಯೊಳಗೆ ಪಾಡು ಪಡುವ ಎಲ್ಲರವು ಎಂಬಂತೆ ಸಾರ್ವತ್ರೀಕರಣ ಪಡೆದಿವೆ. ಇಲ್ಲಿರುವ ಅಂತರ್ಧ್ರ್ಮೀಯ ಮನುಷ್ಯ ಸಂಬಂಧಗಳು, ಕಠೋರ ಸಂಪ್ರದಾಯವು ತನ್ನ ಜಿಗುಟುತನ ಕಳೆದುಕೊಳ್ಳುವ ಮತ್ತು ದುಡಿವ ಜನ ಬದುಕು ಕಟ್ಟಿಕೊಳ್ಳುವ ಚಿತ್ರಗಳು ಅಪೂರ್ವವಾಗಿವೆ. ಇಲ್ಲಿ ಹೊಮ್ಮಿರುವ ಚಿಂತನೆ, ದರ್ಶನ ಬದುಕಿನ ಕುದಿಯೊಳಗಿಂದಲೇ ಮೂಡಿದ್ದು. ಸಾವು ಬದುಕಿರುವ ಎಲ್ಲರೂ ಒಮ್ಮೆ ಮುಖಾಮುಖಿ ಮಾಡಬೇಕಾದ ಸತ್ಯ. ಸಾವಿಗೆ ಮುನ್ನ ಬದುಕಿದ್ದವರು ಆಡುವ ಮಾತು, ಹಂಚಿಕೊಳ್ಳುವ ಅನುಭವ ಮತ್ತು ಚಿಂತನೆಗಳು, ಮುರಿದ ಬದುಕನ್ನು ಕಟ್ಟಿಕೊಳ್ಳುವ ಎಲ್ಲರಿಗೂ ಬೇಕಾದ ಜೀವನತತ್ವವಾಗಿರುತ್ತವೆ. (ಮಯೂರ ಏಪ್ರಿಲ್, 2022) ಫೋಟೊ: ಕಲೀಮ್ ಉಲ್ಲಾ Rahamath Tarikere dStonoep1 e l , m D 2 e 2 8 1 i8 7 0 0 l2 c b t 6 maa e 4 r ·

Thursday, April 21, 2022

ನಾಡಿನ ಖ್ಯಾತ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ನಮ್ಮನ್ನಗಲಿದ್ದಾರೆ. 95 ವರ್ಷಗಳ ಸಾರ್ಥಕ ಬದುಕಿನೊಂದಿಗೆ ಇಹಲೋಕದ ಇರುವು ಮುಗಿಸಿದ್ದಾರೆ.‌ ಅವರಿಂದ ತರಗತಿಯಲ್ಲಿ ಪಾಠ ಕೇಳುವ ಸೌಭಾಗ್ಯ ನನ್ನದಾಗದಿದ್ದರೂ ಬದುಕಿನಲ್ಲಿ ಗುರು ಸ್ಥಾನ ತುಂಬಿದವರು ಮುಡೂರು ಸರ್. ನನ್ನ ಅಕ್ಷರ ಬದುಕಿನ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿ ಬೆಳೆಸಿದವರು ಅವರು. ಮುಡೂರು ಬದುಕಿನ ಅಮೃತ ಮಹೋತ್ಸವದ ಹೊತ್ತು ಅವರ ಕುರಿತಾಗಿ ಬಂದ ಅಭಿನಂದನಾ ಹೊತ್ತಗೆಯ ಸಂಪಾದಕನಾಗುವ, ಅವರ ಕುರಿತಾಗಿ ಹೊರ ಬಂದ ಸಾಕ್ಯ್ಯಚಿತ್ರದ ನಿರ್ದೇಶಕನಾಗುವ ಅವಕಾಶ ನನಗೊದಗಿದೆ. ಮೂರು ವರ್ಷದ ಹಿಂದಷ್ಟೇ ನಾಡಿಗೆ ನಮಸ್ಕಾರ ಕೃತಿ ಮಾಲಿಕೆಯಲ್ಲಿ ಮುಡೂರರ ಕುರಿತಾಗಿ ಕೃತಿ ಬರೆಯುವ ಅವಕಾಶವೂ ಲಭಿಸಿದೆ.‌ ಇದಕ್ಕಿಂತ ಸೌಭಾಗ್ಯ ಬೇರೇನು ಬೇಕು? ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಪಂಜದೊಂದಿಗೆ ಬೆಳೆದು, ಪಂಜವನ್ನು ಬೆಳೆಸಿ, ಬೆಳಗಿಸಿ ತಾನೂ ಬೆಳಗುವಂತೆ ಬೆಳೆದ ತಮ್ಮಯ್ಯ ಗೌಡ ಮುಡೂರು ಬಂಟಮಲೆಯ ತಟದಿಂದಲೇ ಸ್ಪೂರ್ತಿ ಪಡೆದು ಕೀರ್ತಿ ಗಳಿಸಿಕೊಂಡವರು. ಸಾಂಸ್ಕೃತಿಕ ದೌತ್ಯಕ್ಕೆ ಹೆಗಲು ಕೊಟ್ಟವರು. ಇವರ ಸಂಘಟನೆ ಹಲವು. ಅಲ್ಲೆಲ್ಲಾ ಸಾರಥ್ಯವೇ ಇವರಿಗೆ ಒಲವು. ಇವರಿದ್ದರೆ ಅಲ್ಲಿ ಗೆಲುವಿನ ಹೊನಲು, ಎಲ್ಲೆಲ್ಲೂ ಸಂವೇದನಾ ಫಸಲು. ಹೀಗೆ ಕನ್ನಡದ ಮುನ್ನಡೆಗೆ ಮುನ್ನುಡಿ ಬರೆದವರು ಮುಡೂರು. ಶ್ವೇತ ಶುಭ್ರ ಧೋತಿ, ಅದಕ್ಕೊಪ್ಪುವ ಕದ್ದರ್ ಅಂಗಿ, ಕೈಯಲ್ಲೊಂದು ಪುಸ್ತಕ, ಕಿಸೆಯಲ್ಲೊಂದು ಪೆನ್ನು, ಮುಖದಲ್ಲಿ ಅಳಿಯದ ಮಂದಹಾಸ, ಮಧ್ಯಮ ವೇಗದ ನಡಿಗೆ.... ಹೌದು ಇವರೇ ಮುಡೂರು. ಅರಿಯದ ಪ್ರೀತಿ, ಅಳಿಸಲಾಗದ ಸ್ನೇಹ, ಮರೆಯಲಾಗದ ಮರೆಯಬಾರದ ನೆನಪುಗಳು, ಬಿಡಿಸಲಾಗದ ಬಂಧನ. ಇದಕ್ಕೆಲ್ಲಾ ಪ್ರತೀಕ ಮುಡೂರುರವರ ನಿಸ್ಪೃಹ ವ್ಯಕ್ತಿತ್ವ. ಸಾಹಿತಿಯಾಗಿ, ಸಂಘಟಕನಾಗಿ, ಶಿಕ್ಷಕನಾಗಿ, ಸಾಮಾಜಿಕ ಸೇವೆಯ ಹರಿಕಾರನಾಗಿ ಮೆರೆದ ಮುಡೂರು ಮುಡೂರಿನಿಂದ ಬಂದವರು. ಮುಡೂರರಾಗಿ ಬೆಳೆದವರು. ಮುಡೂರು ತಮ್ಮ ಜೀವನದ ಬಹುಕಾಲ ಅಧ್ಯಾಪಕರಾಗಿದ್ದವರು. ನಿವೃತ್ತಿಯ ನಂತರ ಕೃಷಿಕರಾದವರು. ಈ ಎಲ್ಲ ವರ್ಷಗಳಲ್ಲಿ ಅವರು ವಾಸಿಸಿದ್ದ ಹಳ್ಳಿಗಳಲ್ಲಿ ಮುಖ್ಯವಾದದ್ದೆಂದರೆ ಅವರು ತಮ್ಮ ಚಟುವಟಿಕೆಗಳನ್ನು ಅಧ್ಯಾಪನಕ್ಕೆ ಮಾತ್ರ ಮೀಸಲಿರಿಸದೆ ತಾವು ವಾಸಿಸಿದ ಊರುಗಳಲ್ಲಿ ಸಂಸ್ಥೆಗಳನ್ನು ಕಟ್ಟಿ ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಶ್ರಮಿಸಿದ್ದಾರೆ ಎನ್ನುವುದು. ಕೆಲವು ಸಲ ಒಂಟಿಯಾಗಿ, ಕೆಲವು ಸಲ ಸಮಾನ ಮನಸ್ಕರ ಜೊತೆಗೂಡಿ ಅವರು ಹೀಗೆ ಸಂಸ್ಥೆ ಕಟ್ಟಿದ್ದಾರೆ. ಅನೇಕರನ್ನು ಅವರ ವೃತ್ತಿ ಜೀವನ ಜೊತೆಗೆ ತಾವು ಬದುಕುವ ಪರಿಸರ, ಅಲ್ಲಿನ ಸಣ್ಣಪುಟ್ಟ ರಾಜಕೀಯ ಮುಗಿಸಿಬಿಡುತ್ತದೆ. ಅವುಗಳನ್ನು ಮೀರಿ ತನ್ನ ಸುತ್ತಲಿನ ಸಮಾಜವನ್ನು ಸ್ವಲ್ಪವಾದರೂ ತಿದ್ದಲು ಅಲ್ಲಿ ಬದಲಾವಣೆ ತರುವ ಕೆಲಸ ಮಾಡುವುದು ಮುಖ್ಯ ಅನ್ನಿಸುತ್ತದೆ. ಅದೂ ಸಣ್ಣ ಊರುಗಳಲ್ಲಿ ಹೀಗೆ ಮಾಡುವುದು ಸಂಸ್ಕೃತಿ ಪ್ರಸಾರ ದೃಷ್ಟಿಯಿಂದ ವಿಶೇಷ ಪ್ರಾಮುಖ್ಯತೆ ಪಡೆಯುತ್ತದೆ. ಮುಡೂರು ತಮ್ಮ ಜೀವಮಾನದುದ್ದಕ್ಕೂ ಇಂಥ ಕೆಲಸ ಮಾಡಿದ್ದಾರೆ. ಇದು ಸಾಹಿತ್ಯದ ಮೇಲಿನ ಪ್ರೀತಿಯಿಂದ, ಅದರ ಪ್ರಾಮುಖ್ಯತೆಯ ಅರಿವಿನಿಂದ ಮಾಡಿದ ಕೆಲಸ. ಅವರು ನಾಟಕ, ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ಜಾನಪದ ಲೇಖನ, ವ್ಯಕ್ತಿ ಪರಿಚಯ, ಕವಿತೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿಯೂ ಮುಕ್ತ ಛಂದಸ್ಸು, ಚೌಪದಿ, ಹಳೆಗನ್ನಡ, ಹೊಸಗನ್ನಡ, ಗೌಡ ಕನ್ನಡ, ಹವ್ಯಕ ಕನ್ನಡ, ತುಳು ಹೀಗೆ ಒಳ ವೈವಿಧ್ಯಗಳಿವೆ. ಕನ್ನಡದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಚಲಿತವಿದ್ದ ಪ್ರಯೋಗಗಳಿಗೆ ಸ್ಪಂದಿಸುತ್ತ ಅವುಗಳನ್ನು ತನ್ನದಾಗಿ ಪ್ರಯತ್ನಿಸುತ್ತಾ ಕ್ರಿಯಾಶೀಲ ಮನಸ್ಸೊಂದು ಇಲ್ಲಿ ಕಾಣಿಸುತ್ತದೆ. ಜಗತ್ತಿಗೆ ತೆರೆದುಕೊಂಡ ವ್ಯಕ್ತಿಗಳು ನಿಂತ ನೀರಲ್ಲ. ಕಾಲದೊಡನೆ ಸಾಗುತ್ತಾ ಹೋಗುತ್ತಾರೆ. ಅನುಭವಗಳು ಮತ್ತು ಸಂದರ್ಭಗಳು ಅವರನ್ನು ರೂಪಿಸುತ್ತಾ ಸಾಗುತ್ತವೆ. ಹಾಗೆಯೇ ಇದ್ದರು ಮುಡೂರು. ಹಾಗಾಗಿ ಅವರು ಪ್ರಜ್ಞೆಯ ಆಸ್ತಿ. ಯಥಾಸ್ಥಿತಿ ವಾದದಿಂದ ಸಂವೇದನಾಶೀಲತೆಯನ್ನು ದೂರೀಕರಿಸುವ ಪ್ರಯತ್ನಕ್ಕೆ ತಡೆಯೊಡ್ಡಿ ಗೊಡ್ಡು ವಾದಗಳಿಗೆ ನಾವೀನ್ಯತೆಯ ಕ್ರಿಯಾಶೀಲ ಸ್ಪರ್ಶ ಕೊಟ್ಟ ಮಾಯಾವಿ ಮುಡೂರು. ತನ್ಮೂಲಕ ಸಾಮಾಜಿಕ ಪ್ರತಿ ಬದ್ಧತೆಯ ಗಟ್ಟಿ ನಿಲುವನ್ನು ಕಾಪಿಟ್ಟವರು. ಮುಡೂರು ಸಾಹಿತ್ಯ ಮತ್ತು ಸಮಾಜವನ್ನು ಬೇರೆ ಬೇರೆಯಾಗಿ ನೋಡಿದವರಲ್ಲ. ತನ್ನ ಸುತ್ತಲಿನ ಆಗು ಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದವರು. ಹಾಗಾಗಿ ಅವರ ಸಾಹಿತ್ಯದಲ್ಲಿ ಎಲ್ಲವೂ ಇತ್ತು, ವೈವಿಧ್ಯತೆ ಇತ್ತು. ಆದರ್ಶ ತತ್ವಗಳನ್ನು ಪ್ರದರ್ಶಿಸಿದ ನೇರ ನಡೆ ನುಡಿಯ ಮುಡೂರು ಅವರ ಜೀವನ ಸರಳ. ಸರಳತೆ ಇದ್ದಲ್ಲಿ ಸತ್ಯ ಪ್ರಾಮಾಣಿಕತೆ ಇದ್ದೇ ಇರುತ್ತದೆ. ಹೀಗಾಗಿ ಸವಕಲು ಎನಿಸದೇ ಎಲ್ಲರೊಡನೆ ಸಮಾನವಾಗಿ ಕಾಣಿಸಬಲ್ಲ ಚೈತನ್ಯ ಉತ್ಸಾಹ ಹೊಂದಿದ್ದಾರೆ. ಕಾಡುಮಲ್ಲಿಗೆ, ಹೊಸತುಕಟ್ಟು, ಕುಡಿಮಿಂಚು, ಪ್ರಗತಿಯ ಕರೆ ಎಂಬ ಕವನಸಂಕಲನಗಳು, ಅಬ್ಬಿಯ ಮಡಿಲು, ಕಣ್‌ಕನಸು ತೆರೆದಾಗ ಎಂಬ ಕಾದಂಬರಿ ಕಥಾ ಸಂಕಲನ, ಜೀವದಯಾಷ್ಟಮಿ ಎಂಬ ಗದ್ಯಾನುವಾದ, ಧಾರಾ ಪಯಸ್ವಿನಿ ಎಂಬ ಪ್ರಬಂಧ ಲೇಖನ, ಹೊಸಕೆರೆಯ ಹೊನ್ನಮ್ಮ ಜಾನಪದ ಗೀತಾ ರೂಪಕ, ನಂದಾದೀಪ, ಶ್ರೀಮತಿ, ಶಿವಕುಮಾರಿ, ಕೇರಳ ಕುಮಾರಿ, ಸಖ, ಅಚ್ಚರಿಯ ಅರಳೆಲೆ, ಮಧ್ಯಮಾ ಎಂಬ ನಾಟಕಗಳು, ಇನ್ಸೂರಳಿಯ ಎಂಬ ಪ್ರಹಸನ, ಹುತ್ತದಲ್ಲಿ ಹೂ, ದಯೆಯ ದಾಂಗುಡಿ, ಅಮರ ಕಲ್ಯಾಣ ಕ್ರಾಂತಿ ಎಂಬಿತ್ಯಾದಿ ಬಾನುಲಿ ರೂಪಕಗಳು, ಮಕುಟೋರು ಭಂಗ, ಸಾವೊಲಿದ ಸಾವಿತ್ರಿ ಎಂಬ ಛಂದೋನಾಟಕಗಳು, ಗುರುವನ ಗುಡಿ, ಸೊನ್ನೆಯಿಂದ ಸೊನ್ನೆಗೆ, ಗೀತಾ ರೂಪಕಗಳು, ಹೃದಯ ರೂಪಕ ಎಂಬ ಆಂಗ್ಲ ನಾಟಕದ ರೂಪಾಂತರ, ಸಿಡಿಲಮರಿ ಅಶ್ವತ್ಥಾಮನ್, ಮೋಹನ ಮುರಲಿ ಎಂಬ ಖಂಡಕಾವ್ಯಗಳು. ಪ್ರಥಮ ಸ್ವಾತಂತ್ರ್ಯ ಸಮರ ಎಂಬ ಯಕ್ಷಗಾನ ಪ್ರಸಂಗ ಸಾರಸ್ವತ ಜಗತ್ತಿಗೆ ಮುಡೂರು ಕೊಡುಗೆ. ಮುಡೂರು ಕೃತಿಗಳ ಬಗ್ಗೆ ನಾಡಿನ ವಿಮರ್ಶಕರು, ಪ್ರಾಜ್ಞರು ಸೂಕ್ಷ್ಮವಾಗಿ ಗಮನಿಸಿದ್ದರಾದರೂ ಪ್ರಸಿದ್ಧಿಯ ಲಾಬಿಗೆ ಅವು ಒಳಪಟ್ಟಿಲ್ಲ. ಹಾಗಾಗಿ ಅವುಗಳ ಶ್ರೇಷ್ಠತೆಗೆ ತಕ್ಕ ಸ್ಥಾನಮಾನ ಲಭಿಸಿಲ್ಲ. ಅಸಹಾಯಕರ ಎದೆಗೂಡೊಳಗಿನ ಹಕ್ಕಿಯ ಹಾಡು ಕುವೆಂಪು ಕತೆಗಳಲ್ಲಿ ಮಾರ್ದನಿಗೊಂಡಿರುವುದನ್ನು ಮುಡೂರುರವರ ಕಾಡಮಲ್ಲಿಗೆ ಕೇಳಿಸಿಕೊಂಡಿದೆ. ಅವರ ಸಿಡಿಲಮರಿ ಅಶ್ವತ್ಥಾಮನ್ ವಿದ್ವಾನ್ ಪ್ರತಿಭೆಯ ಹೊಸ ಅರ್ಥಶೋಧ. ಅವರ ಹೊಸಕೆರೆಯ ಹೊನ್ನಮ್ಮ ನವೋದಯ ಮನೋಧರ್ಮದ ಅದಮ್ಯ ಸಂಸ್ಕೃತಿ ಪ್ರೀತಿಯ ಕೃತಿ. ಕಣ್ಣಿಗೆ ಕಟ್ಟುವಂತೆ ಬರೆಯಬಲ್ಲ, ವಿಸ್ತಾರವಾಗಿ ಹೇಳಬಲ್ಲ, ತೀಕ್ಷ್ಣ ಅರ್ಥ ಹೊಮ್ಮಿಸಬಲ್ಲ ಶಕ್ತಿ ಅವರ ಕಥಾಕೃತಿಗಳಿಗಿದೆ. ಕಥಾ ನಿರೂಪಣೆಯಲ್ಲಿ ವರ್ಣನೆಗಳ ಮೆರುಗು ಪಡೆದು ಸಹಜ ಸರಳ ಭಾಷೆಯ ಸ್ವಂತದ ಛಂದದಲ್ಲಿ ಕಥನಾತ್ಮಕ ಓದು ಕೊಡುವುದು ಅವರ ಮೋಹನ ಮುರಲಿ. ಬರವಣಿಗೆಯಷ್ಟೇ ಆದ್ಯತೆ ಓದಿಗೆ ನೀಡುವ ವಿಶಿಷ್ಟ ಗುಣ ಮುಡೂರುರವರದ್ದು. ಕಾರಂತರ ಚೋಮನದುಡಿ, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ರಕ್ತಾಕ್ಷಿ, ಚಿತ್ರಾಂಗದ, ಕೊಳಲು, ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಬೇಂದ್ರೆಯವರ ಸಖಿಗೀತ, ಅಡಿಗರ ನಡೆದುಬಂದ ದಾರಿ ಕೃತಿಗಳನ್ನು ಮುಡೂರು ಮೆಚ್ಚಿ ನೆಚ್ಚಿಕೊಂಡರು. ವೃತ್ತಿಯ ನೊಗ ಝಾಡಿಸಿಕೊಂಡಾಗ ವ್ಯಕ್ತಿಯೊಡನಿದ್ದ ಪ್ರವೃತ್ತಿಗೆ ಹೆಚ್ಚು ಅವಕಾಶ ಎಂಬ ಅಭಿಮತ ಅವರದು. ಹಾಗಾಗಿಯೇ ನಿವೃತ್ತಿ ಜೀವನ ಮುಡೂರುರವರ ಪಾಲಿಗೆ ಪ್ರವೃತ್ತಿಯಲ್ಲಿ ವೃತ್ತಿಯಾಯಿತು. ಅಕಾಡೆಮಿಕ್ ಸಂಸ್ಥೆಯೊಂದರ ಮೂಲಕ ಮುಡೂರು ಸಂಘಟನಾ ಚತುರತೆ ಬೆಳೆದದ್ದು ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ. ರಾಜಧಾನಿಯಲ್ಲಿ ಕೇಂದ್ರೀಕೃತವಾದ ಕನ್ನಡ ಸಾಹಿತ್ಯ ಪರಿಷತ್ ವಿಕೇಂದ್ರೀಕರಣಗೊಂಡು ಜಿಲ್ಲಾ ಘಟಕಗಳು ತೆರೆದುಕೊಂಡಾಗ ಆರಂಭದ ಒಂದೆರಡು ದಶಕಗಳ ಕಾಲ ಮುಡೂರು ಅವರು ಸುಳ್ಯ ತಾಲೂಕು ಪ್ರತಿನಿಧಿಯಾದರು. ಹಾಗೆ ಅವರು ಕಯ್ಯಾರ ಕಿಂಞಣ್ಣ ರೈ, ಅಮೃತ ಸೋಮೇಶ್ವರ, ಕೀಕಾನ ರಾಮಚಂದ್ರ, ರಾಮಚಂದ್ರ ಕಾರ್ಕಳ, ಬಿ.ಎಂ.ಇದಿನಬ್ಬ ಮೊದಲಾದವರ ಮೆಚ್ಚುಗೆ ಗಳಿಸಿಕೊಂಡರು. ಸಾಹಿತಿಗಳೆಲ್ಲಾ ಸಂಘಟಕರಲ್ಲ, ಸಂಘಟಕರೆಲ್ಲಾ ಸಾಹಿತಿಗಳೂ ಅಲ್ಲ. ಆದರೆ ಮುಡೂರು ಈ ಎರಡೂ ಹೌದು. 1985ರಿಂದ ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಮಾಡಿದ ಚಟುವಟಿಕೆಗಳೇ ಇದಕ್ಕೆ ಸಾಕ್ಷಿ. ಬದುಕಿನ ಅಂತ್ಯಕಾಲದವರೆಗೂ ಸಮಾಜಮುಖಿಯಾಗಿ ಮತ್ತು ಕ್ರಿಯಾಶೀಲವಾಗಿ ಬದುಕಿದ ಟಿ.ಜಿ. ಮುಡೂರು ಅವರು ತಾನು ಅಪ್ ಡೇಟ್ ಆಗುತ್ತಾ ಯುವ ಪೀಳಿಗೆಗೆ ಸ್ಪೂರ್ತಿ ತುಂಬಿದವರು. ಹೀಗೆ ಸಾರ್ಥಕ ಬದುಕಿನ ಸಾತ್ವಿಕ ಶಕ್ತಿ ಮುಡೂರು ಕಾಲನ ಕೆರೆಗೆ ಓಗೊಟ್ಟು ತೆರಳಿದ್ದಾರೆ. ಭಾವ ಪೂರ್ಣ ವಿದಾಯ ಸರ್...