Powered By Blogger

Thursday, April 21, 2022

ನಾಡಿನ ಖ್ಯಾತ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ನಮ್ಮನ್ನಗಲಿದ್ದಾರೆ. 95 ವರ್ಷಗಳ ಸಾರ್ಥಕ ಬದುಕಿನೊಂದಿಗೆ ಇಹಲೋಕದ ಇರುವು ಮುಗಿಸಿದ್ದಾರೆ.‌ ಅವರಿಂದ ತರಗತಿಯಲ್ಲಿ ಪಾಠ ಕೇಳುವ ಸೌಭಾಗ್ಯ ನನ್ನದಾಗದಿದ್ದರೂ ಬದುಕಿನಲ್ಲಿ ಗುರು ಸ್ಥಾನ ತುಂಬಿದವರು ಮುಡೂರು ಸರ್. ನನ್ನ ಅಕ್ಷರ ಬದುಕಿನ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿ ಬೆಳೆಸಿದವರು ಅವರು. ಮುಡೂರು ಬದುಕಿನ ಅಮೃತ ಮಹೋತ್ಸವದ ಹೊತ್ತು ಅವರ ಕುರಿತಾಗಿ ಬಂದ ಅಭಿನಂದನಾ ಹೊತ್ತಗೆಯ ಸಂಪಾದಕನಾಗುವ, ಅವರ ಕುರಿತಾಗಿ ಹೊರ ಬಂದ ಸಾಕ್ಯ್ಯಚಿತ್ರದ ನಿರ್ದೇಶಕನಾಗುವ ಅವಕಾಶ ನನಗೊದಗಿದೆ. ಮೂರು ವರ್ಷದ ಹಿಂದಷ್ಟೇ ನಾಡಿಗೆ ನಮಸ್ಕಾರ ಕೃತಿ ಮಾಲಿಕೆಯಲ್ಲಿ ಮುಡೂರರ ಕುರಿತಾಗಿ ಕೃತಿ ಬರೆಯುವ ಅವಕಾಶವೂ ಲಭಿಸಿದೆ.‌ ಇದಕ್ಕಿಂತ ಸೌಭಾಗ್ಯ ಬೇರೇನು ಬೇಕು? ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಪಂಜದೊಂದಿಗೆ ಬೆಳೆದು, ಪಂಜವನ್ನು ಬೆಳೆಸಿ, ಬೆಳಗಿಸಿ ತಾನೂ ಬೆಳಗುವಂತೆ ಬೆಳೆದ ತಮ್ಮಯ್ಯ ಗೌಡ ಮುಡೂರು ಬಂಟಮಲೆಯ ತಟದಿಂದಲೇ ಸ್ಪೂರ್ತಿ ಪಡೆದು ಕೀರ್ತಿ ಗಳಿಸಿಕೊಂಡವರು. ಸಾಂಸ್ಕೃತಿಕ ದೌತ್ಯಕ್ಕೆ ಹೆಗಲು ಕೊಟ್ಟವರು. ಇವರ ಸಂಘಟನೆ ಹಲವು. ಅಲ್ಲೆಲ್ಲಾ ಸಾರಥ್ಯವೇ ಇವರಿಗೆ ಒಲವು. ಇವರಿದ್ದರೆ ಅಲ್ಲಿ ಗೆಲುವಿನ ಹೊನಲು, ಎಲ್ಲೆಲ್ಲೂ ಸಂವೇದನಾ ಫಸಲು. ಹೀಗೆ ಕನ್ನಡದ ಮುನ್ನಡೆಗೆ ಮುನ್ನುಡಿ ಬರೆದವರು ಮುಡೂರು. ಶ್ವೇತ ಶುಭ್ರ ಧೋತಿ, ಅದಕ್ಕೊಪ್ಪುವ ಕದ್ದರ್ ಅಂಗಿ, ಕೈಯಲ್ಲೊಂದು ಪುಸ್ತಕ, ಕಿಸೆಯಲ್ಲೊಂದು ಪೆನ್ನು, ಮುಖದಲ್ಲಿ ಅಳಿಯದ ಮಂದಹಾಸ, ಮಧ್ಯಮ ವೇಗದ ನಡಿಗೆ.... ಹೌದು ಇವರೇ ಮುಡೂರು. ಅರಿಯದ ಪ್ರೀತಿ, ಅಳಿಸಲಾಗದ ಸ್ನೇಹ, ಮರೆಯಲಾಗದ ಮರೆಯಬಾರದ ನೆನಪುಗಳು, ಬಿಡಿಸಲಾಗದ ಬಂಧನ. ಇದಕ್ಕೆಲ್ಲಾ ಪ್ರತೀಕ ಮುಡೂರುರವರ ನಿಸ್ಪೃಹ ವ್ಯಕ್ತಿತ್ವ. ಸಾಹಿತಿಯಾಗಿ, ಸಂಘಟಕನಾಗಿ, ಶಿಕ್ಷಕನಾಗಿ, ಸಾಮಾಜಿಕ ಸೇವೆಯ ಹರಿಕಾರನಾಗಿ ಮೆರೆದ ಮುಡೂರು ಮುಡೂರಿನಿಂದ ಬಂದವರು. ಮುಡೂರರಾಗಿ ಬೆಳೆದವರು. ಮುಡೂರು ತಮ್ಮ ಜೀವನದ ಬಹುಕಾಲ ಅಧ್ಯಾಪಕರಾಗಿದ್ದವರು. ನಿವೃತ್ತಿಯ ನಂತರ ಕೃಷಿಕರಾದವರು. ಈ ಎಲ್ಲ ವರ್ಷಗಳಲ್ಲಿ ಅವರು ವಾಸಿಸಿದ್ದ ಹಳ್ಳಿಗಳಲ್ಲಿ ಮುಖ್ಯವಾದದ್ದೆಂದರೆ ಅವರು ತಮ್ಮ ಚಟುವಟಿಕೆಗಳನ್ನು ಅಧ್ಯಾಪನಕ್ಕೆ ಮಾತ್ರ ಮೀಸಲಿರಿಸದೆ ತಾವು ವಾಸಿಸಿದ ಊರುಗಳಲ್ಲಿ ಸಂಸ್ಥೆಗಳನ್ನು ಕಟ್ಟಿ ಸಾಹಿತ್ಯಿಕ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಶ್ರಮಿಸಿದ್ದಾರೆ ಎನ್ನುವುದು. ಕೆಲವು ಸಲ ಒಂಟಿಯಾಗಿ, ಕೆಲವು ಸಲ ಸಮಾನ ಮನಸ್ಕರ ಜೊತೆಗೂಡಿ ಅವರು ಹೀಗೆ ಸಂಸ್ಥೆ ಕಟ್ಟಿದ್ದಾರೆ. ಅನೇಕರನ್ನು ಅವರ ವೃತ್ತಿ ಜೀವನ ಜೊತೆಗೆ ತಾವು ಬದುಕುವ ಪರಿಸರ, ಅಲ್ಲಿನ ಸಣ್ಣಪುಟ್ಟ ರಾಜಕೀಯ ಮುಗಿಸಿಬಿಡುತ್ತದೆ. ಅವುಗಳನ್ನು ಮೀರಿ ತನ್ನ ಸುತ್ತಲಿನ ಸಮಾಜವನ್ನು ಸ್ವಲ್ಪವಾದರೂ ತಿದ್ದಲು ಅಲ್ಲಿ ಬದಲಾವಣೆ ತರುವ ಕೆಲಸ ಮಾಡುವುದು ಮುಖ್ಯ ಅನ್ನಿಸುತ್ತದೆ. ಅದೂ ಸಣ್ಣ ಊರುಗಳಲ್ಲಿ ಹೀಗೆ ಮಾಡುವುದು ಸಂಸ್ಕೃತಿ ಪ್ರಸಾರ ದೃಷ್ಟಿಯಿಂದ ವಿಶೇಷ ಪ್ರಾಮುಖ್ಯತೆ ಪಡೆಯುತ್ತದೆ. ಮುಡೂರು ತಮ್ಮ ಜೀವಮಾನದುದ್ದಕ್ಕೂ ಇಂಥ ಕೆಲಸ ಮಾಡಿದ್ದಾರೆ. ಇದು ಸಾಹಿತ್ಯದ ಮೇಲಿನ ಪ್ರೀತಿಯಿಂದ, ಅದರ ಪ್ರಾಮುಖ್ಯತೆಯ ಅರಿವಿನಿಂದ ಮಾಡಿದ ಕೆಲಸ. ಅವರು ನಾಟಕ, ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ಜಾನಪದ ಲೇಖನ, ವ್ಯಕ್ತಿ ಪರಿಚಯ, ಕವಿತೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿಯೂ ಮುಕ್ತ ಛಂದಸ್ಸು, ಚೌಪದಿ, ಹಳೆಗನ್ನಡ, ಹೊಸಗನ್ನಡ, ಗೌಡ ಕನ್ನಡ, ಹವ್ಯಕ ಕನ್ನಡ, ತುಳು ಹೀಗೆ ಒಳ ವೈವಿಧ್ಯಗಳಿವೆ. ಕನ್ನಡದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಚಲಿತವಿದ್ದ ಪ್ರಯೋಗಗಳಿಗೆ ಸ್ಪಂದಿಸುತ್ತ ಅವುಗಳನ್ನು ತನ್ನದಾಗಿ ಪ್ರಯತ್ನಿಸುತ್ತಾ ಕ್ರಿಯಾಶೀಲ ಮನಸ್ಸೊಂದು ಇಲ್ಲಿ ಕಾಣಿಸುತ್ತದೆ. ಜಗತ್ತಿಗೆ ತೆರೆದುಕೊಂಡ ವ್ಯಕ್ತಿಗಳು ನಿಂತ ನೀರಲ್ಲ. ಕಾಲದೊಡನೆ ಸಾಗುತ್ತಾ ಹೋಗುತ್ತಾರೆ. ಅನುಭವಗಳು ಮತ್ತು ಸಂದರ್ಭಗಳು ಅವರನ್ನು ರೂಪಿಸುತ್ತಾ ಸಾಗುತ್ತವೆ. ಹಾಗೆಯೇ ಇದ್ದರು ಮುಡೂರು. ಹಾಗಾಗಿ ಅವರು ಪ್ರಜ್ಞೆಯ ಆಸ್ತಿ. ಯಥಾಸ್ಥಿತಿ ವಾದದಿಂದ ಸಂವೇದನಾಶೀಲತೆಯನ್ನು ದೂರೀಕರಿಸುವ ಪ್ರಯತ್ನಕ್ಕೆ ತಡೆಯೊಡ್ಡಿ ಗೊಡ್ಡು ವಾದಗಳಿಗೆ ನಾವೀನ್ಯತೆಯ ಕ್ರಿಯಾಶೀಲ ಸ್ಪರ್ಶ ಕೊಟ್ಟ ಮಾಯಾವಿ ಮುಡೂರು. ತನ್ಮೂಲಕ ಸಾಮಾಜಿಕ ಪ್ರತಿ ಬದ್ಧತೆಯ ಗಟ್ಟಿ ನಿಲುವನ್ನು ಕಾಪಿಟ್ಟವರು. ಮುಡೂರು ಸಾಹಿತ್ಯ ಮತ್ತು ಸಮಾಜವನ್ನು ಬೇರೆ ಬೇರೆಯಾಗಿ ನೋಡಿದವರಲ್ಲ. ತನ್ನ ಸುತ್ತಲಿನ ಆಗು ಹೋಗುಗಳಿಗೆ ತಕ್ಷಣ ಸ್ಪಂದಿಸುತ್ತಾ, ಪ್ರತಿಕ್ರಿಯಿಸುತ್ತಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಿದವರು. ಹಾಗಾಗಿ ಅವರ ಸಾಹಿತ್ಯದಲ್ಲಿ ಎಲ್ಲವೂ ಇತ್ತು, ವೈವಿಧ್ಯತೆ ಇತ್ತು. ಆದರ್ಶ ತತ್ವಗಳನ್ನು ಪ್ರದರ್ಶಿಸಿದ ನೇರ ನಡೆ ನುಡಿಯ ಮುಡೂರು ಅವರ ಜೀವನ ಸರಳ. ಸರಳತೆ ಇದ್ದಲ್ಲಿ ಸತ್ಯ ಪ್ರಾಮಾಣಿಕತೆ ಇದ್ದೇ ಇರುತ್ತದೆ. ಹೀಗಾಗಿ ಸವಕಲು ಎನಿಸದೇ ಎಲ್ಲರೊಡನೆ ಸಮಾನವಾಗಿ ಕಾಣಿಸಬಲ್ಲ ಚೈತನ್ಯ ಉತ್ಸಾಹ ಹೊಂದಿದ್ದಾರೆ. ಕಾಡುಮಲ್ಲಿಗೆ, ಹೊಸತುಕಟ್ಟು, ಕುಡಿಮಿಂಚು, ಪ್ರಗತಿಯ ಕರೆ ಎಂಬ ಕವನಸಂಕಲನಗಳು, ಅಬ್ಬಿಯ ಮಡಿಲು, ಕಣ್‌ಕನಸು ತೆರೆದಾಗ ಎಂಬ ಕಾದಂಬರಿ ಕಥಾ ಸಂಕಲನ, ಜೀವದಯಾಷ್ಟಮಿ ಎಂಬ ಗದ್ಯಾನುವಾದ, ಧಾರಾ ಪಯಸ್ವಿನಿ ಎಂಬ ಪ್ರಬಂಧ ಲೇಖನ, ಹೊಸಕೆರೆಯ ಹೊನ್ನಮ್ಮ ಜಾನಪದ ಗೀತಾ ರೂಪಕ, ನಂದಾದೀಪ, ಶ್ರೀಮತಿ, ಶಿವಕುಮಾರಿ, ಕೇರಳ ಕುಮಾರಿ, ಸಖ, ಅಚ್ಚರಿಯ ಅರಳೆಲೆ, ಮಧ್ಯಮಾ ಎಂಬ ನಾಟಕಗಳು, ಇನ್ಸೂರಳಿಯ ಎಂಬ ಪ್ರಹಸನ, ಹುತ್ತದಲ್ಲಿ ಹೂ, ದಯೆಯ ದಾಂಗುಡಿ, ಅಮರ ಕಲ್ಯಾಣ ಕ್ರಾಂತಿ ಎಂಬಿತ್ಯಾದಿ ಬಾನುಲಿ ರೂಪಕಗಳು, ಮಕುಟೋರು ಭಂಗ, ಸಾವೊಲಿದ ಸಾವಿತ್ರಿ ಎಂಬ ಛಂದೋನಾಟಕಗಳು, ಗುರುವನ ಗುಡಿ, ಸೊನ್ನೆಯಿಂದ ಸೊನ್ನೆಗೆ, ಗೀತಾ ರೂಪಕಗಳು, ಹೃದಯ ರೂಪಕ ಎಂಬ ಆಂಗ್ಲ ನಾಟಕದ ರೂಪಾಂತರ, ಸಿಡಿಲಮರಿ ಅಶ್ವತ್ಥಾಮನ್, ಮೋಹನ ಮುರಲಿ ಎಂಬ ಖಂಡಕಾವ್ಯಗಳು. ಪ್ರಥಮ ಸ್ವಾತಂತ್ರ್ಯ ಸಮರ ಎಂಬ ಯಕ್ಷಗಾನ ಪ್ರಸಂಗ ಸಾರಸ್ವತ ಜಗತ್ತಿಗೆ ಮುಡೂರು ಕೊಡುಗೆ. ಮುಡೂರು ಕೃತಿಗಳ ಬಗ್ಗೆ ನಾಡಿನ ವಿಮರ್ಶಕರು, ಪ್ರಾಜ್ಞರು ಸೂಕ್ಷ್ಮವಾಗಿ ಗಮನಿಸಿದ್ದರಾದರೂ ಪ್ರಸಿದ್ಧಿಯ ಲಾಬಿಗೆ ಅವು ಒಳಪಟ್ಟಿಲ್ಲ. ಹಾಗಾಗಿ ಅವುಗಳ ಶ್ರೇಷ್ಠತೆಗೆ ತಕ್ಕ ಸ್ಥಾನಮಾನ ಲಭಿಸಿಲ್ಲ. ಅಸಹಾಯಕರ ಎದೆಗೂಡೊಳಗಿನ ಹಕ್ಕಿಯ ಹಾಡು ಕುವೆಂಪು ಕತೆಗಳಲ್ಲಿ ಮಾರ್ದನಿಗೊಂಡಿರುವುದನ್ನು ಮುಡೂರುರವರ ಕಾಡಮಲ್ಲಿಗೆ ಕೇಳಿಸಿಕೊಂಡಿದೆ. ಅವರ ಸಿಡಿಲಮರಿ ಅಶ್ವತ್ಥಾಮನ್ ವಿದ್ವಾನ್ ಪ್ರತಿಭೆಯ ಹೊಸ ಅರ್ಥಶೋಧ. ಅವರ ಹೊಸಕೆರೆಯ ಹೊನ್ನಮ್ಮ ನವೋದಯ ಮನೋಧರ್ಮದ ಅದಮ್ಯ ಸಂಸ್ಕೃತಿ ಪ್ರೀತಿಯ ಕೃತಿ. ಕಣ್ಣಿಗೆ ಕಟ್ಟುವಂತೆ ಬರೆಯಬಲ್ಲ, ವಿಸ್ತಾರವಾಗಿ ಹೇಳಬಲ್ಲ, ತೀಕ್ಷ್ಣ ಅರ್ಥ ಹೊಮ್ಮಿಸಬಲ್ಲ ಶಕ್ತಿ ಅವರ ಕಥಾಕೃತಿಗಳಿಗಿದೆ. ಕಥಾ ನಿರೂಪಣೆಯಲ್ಲಿ ವರ್ಣನೆಗಳ ಮೆರುಗು ಪಡೆದು ಸಹಜ ಸರಳ ಭಾಷೆಯ ಸ್ವಂತದ ಛಂದದಲ್ಲಿ ಕಥನಾತ್ಮಕ ಓದು ಕೊಡುವುದು ಅವರ ಮೋಹನ ಮುರಲಿ. ಬರವಣಿಗೆಯಷ್ಟೇ ಆದ್ಯತೆ ಓದಿಗೆ ನೀಡುವ ವಿಶಿಷ್ಟ ಗುಣ ಮುಡೂರುರವರದ್ದು. ಕಾರಂತರ ಚೋಮನದುಡಿ, ಕುವೆಂಪುರವರ ಮಲೆಗಳಲ್ಲಿ ಮದುಮಗಳು, ರಕ್ತಾಕ್ಷಿ, ಚಿತ್ರಾಂಗದ, ಕೊಳಲು, ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಬೇಂದ್ರೆಯವರ ಸಖಿಗೀತ, ಅಡಿಗರ ನಡೆದುಬಂದ ದಾರಿ ಕೃತಿಗಳನ್ನು ಮುಡೂರು ಮೆಚ್ಚಿ ನೆಚ್ಚಿಕೊಂಡರು. ವೃತ್ತಿಯ ನೊಗ ಝಾಡಿಸಿಕೊಂಡಾಗ ವ್ಯಕ್ತಿಯೊಡನಿದ್ದ ಪ್ರವೃತ್ತಿಗೆ ಹೆಚ್ಚು ಅವಕಾಶ ಎಂಬ ಅಭಿಮತ ಅವರದು. ಹಾಗಾಗಿಯೇ ನಿವೃತ್ತಿ ಜೀವನ ಮುಡೂರುರವರ ಪಾಲಿಗೆ ಪ್ರವೃತ್ತಿಯಲ್ಲಿ ವೃತ್ತಿಯಾಯಿತು. ಅಕಾಡೆಮಿಕ್ ಸಂಸ್ಥೆಯೊಂದರ ಮೂಲಕ ಮುಡೂರು ಸಂಘಟನಾ ಚತುರತೆ ಬೆಳೆದದ್ದು ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ. ರಾಜಧಾನಿಯಲ್ಲಿ ಕೇಂದ್ರೀಕೃತವಾದ ಕನ್ನಡ ಸಾಹಿತ್ಯ ಪರಿಷತ್ ವಿಕೇಂದ್ರೀಕರಣಗೊಂಡು ಜಿಲ್ಲಾ ಘಟಕಗಳು ತೆರೆದುಕೊಂಡಾಗ ಆರಂಭದ ಒಂದೆರಡು ದಶಕಗಳ ಕಾಲ ಮುಡೂರು ಅವರು ಸುಳ್ಯ ತಾಲೂಕು ಪ್ರತಿನಿಧಿಯಾದರು. ಹಾಗೆ ಅವರು ಕಯ್ಯಾರ ಕಿಂಞಣ್ಣ ರೈ, ಅಮೃತ ಸೋಮೇಶ್ವರ, ಕೀಕಾನ ರಾಮಚಂದ್ರ, ರಾಮಚಂದ್ರ ಕಾರ್ಕಳ, ಬಿ.ಎಂ.ಇದಿನಬ್ಬ ಮೊದಲಾದವರ ಮೆಚ್ಚುಗೆ ಗಳಿಸಿಕೊಂಡರು. ಸಾಹಿತಿಗಳೆಲ್ಲಾ ಸಂಘಟಕರಲ್ಲ, ಸಂಘಟಕರೆಲ್ಲಾ ಸಾಹಿತಿಗಳೂ ಅಲ್ಲ. ಆದರೆ ಮುಡೂರು ಈ ಎರಡೂ ಹೌದು. 1985ರಿಂದ ಅವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ ಮಾಡಿದ ಚಟುವಟಿಕೆಗಳೇ ಇದಕ್ಕೆ ಸಾಕ್ಷಿ. ಬದುಕಿನ ಅಂತ್ಯಕಾಲದವರೆಗೂ ಸಮಾಜಮುಖಿಯಾಗಿ ಮತ್ತು ಕ್ರಿಯಾಶೀಲವಾಗಿ ಬದುಕಿದ ಟಿ.ಜಿ. ಮುಡೂರು ಅವರು ತಾನು ಅಪ್ ಡೇಟ್ ಆಗುತ್ತಾ ಯುವ ಪೀಳಿಗೆಗೆ ಸ್ಪೂರ್ತಿ ತುಂಬಿದವರು. ಹೀಗೆ ಸಾರ್ಥಕ ಬದುಕಿನ ಸಾತ್ವಿಕ ಶಕ್ತಿ ಮುಡೂರು ಕಾಲನ ಕೆರೆಗೆ ಓಗೊಟ್ಟು ತೆರಳಿದ್ದಾರೆ. ಭಾವ ಪೂರ್ಣ ವಿದಾಯ ಸರ್...

No comments:

Post a Comment