Powered By Blogger

Thursday, April 14, 2022

ರಹಮತ್ ತರೀಕೆರೆ - ರೂಪಕಗಳಲ್ಲಿ ಅಂಬೇಡ್ಕರ್ { Rahamath Tarikere }

ರೂಪಕಗಳಲ್ಲಿ ಅಂಬೇಡ್ಕರ್ ಕನ್ನಡ ಸಾಹಿತ್ಯವು ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಯ ಜತೆ ನಾಲ್ಕು ದಶಕಗಳಿಂದ ಅನುಸಂಧಾನಿಸಿಕೊಂಡು ಬಂದಿದೆ. ಈ ಅನುಸಂಧಾನದಲ್ಲಿ ಮೂರು ಪ್ರಮುಖ ಮಾದರಿಗಳಿವೆ. ಅ. ಚಿಂತನೆಯನ್ನು ಅಂತರ್ಗತ ಮಾಡಿಕೊಂಡು ಹುಟ್ಟಿರುವ ಬರೆಹ. ಇಲ್ಲಿ ಅಂಬೇಡ್ಕರರ ನೇರ ಪ್ರಸ್ತಾಪವಿಲ್ಲ. ಆದರೆ ಅವರ ಚಿಂತನೆ ಉಂಡೂಟ ಅರಗಿ ರಕ್ತಗತವಾದಂತೆ ಬರೆಹದ ನಾಳಗಳಲ್ಲಿ ಹರಿಯುತ್ತಿರುತ್ತದೆ. ಆ. ಅಂಬೇಡ್ಕರ್ ಚಿಂತನೆಯ ಜತೆಗೆ ಸಮ್ಮತಿ-ಭಿನ್ನಮತಗಳ ಮೂಲಕ ವಾಗ್ವಾದ ಮಾಡುವ ವಿಚಾರ ಸಾಹಿತ್ಯ. ಇ. ಅಂಬೇಡ್ಕರ್ ವ್ಯಕ್ತಿತ್ವ ಹಾಗೂ ಚಿಂತನೆಯನ್ನು ವಿವಿಧ ರೂಪಕ ಸಂಕೇತ ಉಪಮೆಗಳಲ್ಲಿ ಕಾಣಿಸುತ್ತ, ಅನುಭವ ಶೋಧಿಸುವ `ಸೃಜನಶೀಲ’ ಸಾಹಿತ್ಯ. ಈ ಮೂರನೇ ಮಾದರಿಯಲ್ಲಿ ಹೆಚ್ಚಾಗಿ ಕಾವ್ಯ ಕತೆ ಕಾದಂಬರಿಗಳಿವೆ. ಇದನ್ನು ರೂಪಕ ಮಾದರಿಯ ಸಾಹಿತ್ಯವೆನ್ನಬಹುದು. ಇಲ್ಲಿನ ರೂಪಕಗಳ ಅರ್ಥ ಮತ್ತು ಧ್ವನಿಗಳು ಆ ಸಾಹಿತ್ಯದ ರಾಜಕೀಯ ಪ್ರಜ್ಞೆಯ ಸ್ವರೂಪವನ್ನೂ ತಿಳಿಸುತ್ತವೆ. ಈ ರೂಪಕ ಮಾದರಿಯಲ್ಲಿರುವ ಅಂಬೇಡ್ಕರ್ ಚಿತ್ರಗಳು ಆರು ವಿನ್ಯಾಸಗಳಲ್ಲಿವೆ. 1. ಜೀವನ ಚರಿತ್ರೆ ಕಟ್ಟುವ ವಿನ್ಯಾಸ. ಇಲ್ಲಿ ಅಂಬೇಡ್ಕರ್ ಚಿಂತನೆಗಳ ಜತೆಗಿನ ವೈಚಾರಿಕ ಒಡನಾಟ ಅಷ್ಟು ಮುಖ್ಯವಲ್ಲ. ಬದಲಿಗೆ ಅವರ ಬದುಕನ್ನು ಚರಿತ್ರೆಯಾಗಿ ಕಟ್ಟಿಕೊಡುವುದು ಮುಖ್ಯ. ಇಲ್ಲಿ ವೈಭವೀಕರಣದ ಮನೋಭಾವ ಸಾಮಾನ್ಯವಾಗಿರುತ್ತದೆ. ಕೆಲವರು ಮಾತ್ರ ಚರಿತ್ರೆಯನ್ನು ವಿಶಿಷ್ಟವಾಗಿ ಕಟ್ಟಿಕೊಡಲು ಯತ್ನಿಸಿರುವರು. ನಿದರ್ಶನಕ್ಕೆ ಬೊಳುವಾರರ `ಮುಟ್ಟಿರಿ’ ದ್ವಿಪದಿಗಳು. ಇಲ್ಲೊಂದು ಕಡೆ ಅಂಬೇಡ್ಕರ್ಗೆ ಪ್ರೀತಿ ಮತ್ತು ಆತ್ಮವಿಶ್ವಾಸಕೊಟ್ಟ ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಅಂಬೇವಾಡೇಕರ್ ಎಂಬ ಶಿಕ್ಷಕ, ತಂಬಾಕು ಮಂಡಿಯಲ್ಲಿ ಗುಮಾಸ್ತರಾಗಿದ್ದರು ಎಂಬ ಸಂಗತಿ ಬರುತ್ತದೆ. `ಅಮುಖ್ಯ' ಎನಿಸುವ ಇಂತಹ ವಿವರದ ಮೂಲಕ ಕಾವ್ಯ ಏನು ಸೂಚಿಸುತ್ತಿದೆ? ದಲಿತರಿಗೆ ಬೇಕಾಗಿರುವುದು ಕೇವಲ ಸವರ್ಣೀಯರ ತುಟಿಮರುಕವಲ್ಲ, ಸಹಮಾನವರಾಗಿ ತೋರುವ ಕ್ರಿಯಾಶೀಲ ಪ್ರೀತಿಯೆಂದೇ? ಬಡತನದ ನೋವುಂಡವರು ಜಾತಿಯಾಚೆ ಬಂದು ದಲಿತರ ಅವಮಾನಕ್ಕೆ ಸ್ಪಂದಿಸಬಲ್ಲರೆಂದೇ? ದಲಿತರ ಬಿಡುಗಡೆ ಕೇವಲ ಅವರ ಪ್ರತಿರೋಧ ದಲ್ಲಿಲ್ಲ. ಸವರ್ಣೀಯರ ಆತ್ಮಾವಲೋಕಿತ ಭಾಗವಹಿಸುವಿಕೆಯಲ್ಲಿದೆ ಎನ್ನುವುದನ್ನೇ? ಬೊಳುವಾರು `ಬಾಪು’ವಿನ ಮೇಲೆ ಕೃತಿರಚಿಸಿದವರು ಎಂಬ ಹಿನ್ನೆಲೆಯಲ್ಲಿ ಇಂತಹ `ಸಣ್ಣ' ವಿವರಗಳ ಕಾಣಿಸುವಿಕೆಯನ್ನು ನೋಡಬೇಕು. ಇಲ್ಲಿ ಸೈದ್ಧಾಂತಿಕ ವಿರೋಧಿಗಳು ಎಂದು ಗ್ರಹಿಸಲಾಗಿರುವ ಗಾಂಧಿ-ಅಂಬೇಡ್ಕರ್ ಅವರನ್ನು ಪರಸ್ಪರರ ದೃಷ್ಟಿಕೋನಗಳ ಮೂಲಕ ನೋಡುವ ಯತ್ನವೂ ಇದ್ದಂತಿದೆ. ಈ ಬಗೆಯ ಹೊಸನೋಟಗಳನ್ನು ಯಾಂತ್ರಿಕ ನಿರೂಪಣೆಯ ಬಹುತೇಕ ಜೀವನಚರಿತ್ರೆಗಳು ಕಾಣಿಸುವುದಿಲ್ಲ. 2. ಆದರ್ಶ ನಾಯಕನನ್ನು ಕಟ್ಟಿಕೊಳ್ಳುವ ವಿನ್ಯಾಸ. ಇಲ್ಲಿ ಚಿಂತಕ, ಹೋರಾಟಗಾರ, ಸುಧಾರಣವಾದಿ ಅಂಬೇಡ್ಕರರನ್ನು ವರ್ತಮಾನಕ್ಕೆ ಚೈತನ್ಯವಾಗಿ ಆವಾಹಿಸಲು ಯತ್ನವಿದೆ; ದಲಿತರಿಗೆ ಅರಿವು ಮತ್ತು ಎಚ್ಚರ ಕೊಟ್ಟಿದ್ದಕ್ಕೆ ಅಂಬೇಡ್ಕರರಿಗೆ ಕೃತಜ್ಞತೆ ಮತ್ತು ಅಭಿಮಾನ ಸಲ್ಲಿಸುವಿಕೆಯಿದೆ; ಜತೆಗೆ ದೈವೀಕರಿಸುವ ಆರಾಧನ ಭಾವವೂ ಇದೆ; ಅವರನ್ನು ಸನಾತನ ಧರ್ಮದ ಅಮಾನವೀಯ ಕಟ್ಟಡಕ್ಕೆ ಬಡಿದ ಸಿಡಿಲೆಂದೂ `ಕಪ್ಪುಕ್ಕಿನ ಕೋಳಗಳನು ಕಡಿದುಎಸೆದ ವಜ್ರ’ವೆಂದೂ ವರ್ಣಿಸಲಾಗಿದೆ. ವಜ್ರವು(ಸಿಡಿಲು) ಆಗಸದಿಂದ ಇಳಿದು ಬರುವ ಪ್ರಚಂಡಶಕ್ತಿಯ ಸಂಕೇತ; ಪುರಾಣದ ಒಂದು ಆಯುಧ ಕೂಡ. ಈ ಯುದ್ಧ ಪರಿಭಾಷೆಗೆ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಅಂಬೇಡ್ಕರರನ್ನು ಯೋಧನಂತೆ ಕಾಣಿಸುವ ಆಶಯವಿರುವುದು ಸ್ಪಷ್ಟ. ಆದರೆ ಅಂಬೇಡ್ಕರರಿಗೆ ಜಾತಿವ್ಯವಸ್ಥೆಗೆ ಪ್ರಹಾರ ಕೊಡುವ ಶಕ್ತಿಯ ಜತೆ, ತನ್ನವರನ್ನು ರಕ್ಷಿಸುವ ಕರುಣಾಳು ಬಾಹುವಿನ ಮುಖವೂ ಇತ್ತು. ಈ ತಬ್ಬಲಿರಕ್ಷಕ ಕಾರ್ಯವನ್ನು ಸೂರ್ಯನ, ಹಣತೆಯ, ದಾರಿದೀಪದ ರೂಪಕಗಳು ಹಿಡಿದುಕೊಡುತ್ತವೆ. ಹೆಚ್ಚಿನ ರೂಪಕಗಳು ಸೂರ್ಯ ಕೇಂದ್ರಿತವಾಗಿವೆ. ದಲಿತ ಸಂಘಟನೆಗಳು ಧ್ಯೇಯದಲ್ಲಿ ಅಕ್ಷರ ಮತ್ತು ಅರಿವಿಗೆ ಮಹತ್ವ ಕೊಡುವ ಘೋಷಣೆ ಹೊಂದಿವೆ. ಈ ಹಿನ್ನೆಲೆಯಲ್ಲಿ ಬೆಳಕಿನ ರೂಪಕಗಳ ಉದ್ದೇಶ ತಾನೇ ಸ್ಪಷ್ಟವಾಗಿದೆ. ಇದಕ್ಕಿಂತ ಕೊಂಚ ವಿಭಿನ್ನ ರೂಪಕಗಳೆಂದರೆ, ಅಂಬೇಡ್ಕರರನ್ನು ಗಾಯಗೊಂಡ ಅಥವಾ ರೋಗಗ್ರಸ್ತ ವೈದ್ಯ ಸಮಾಜಕ್ಕೆ ಮದ್ದರೆದ ವೈದ್ಯನೆಂದು ಪರಿಭಾವಿಸುವಂತಹವು. `ಕೇರಿಯಿಂದ ಊರಿಗೆ ಮದ್ದು ಬರೆದ ಡಾಕ್ಟರಾ, ಭಾರತಮಾತೆಗೆ ಹೊಸ ಬಟ್ಟೆ ಹೊಲಿದ ಟೈಲರಾ?’ ಎಂದು ಒಂದು ಕವಿತೆ ಬಣ್ಣಿಸುತ್ತದೆ. ಮೇಲ್ಜಾತಿಯಿಂದ ಬಂದ ಕವಿಗಳಲ್ಲಿ ಅಂಬೇಡ್ಕರ್ ಮೂಲಕ ಸಮಾಜವನ್ನು ರೋಗಗ್ರಸ್ತ ದೇಹಕ್ಕೆ ಹೋಲಿಸುವ ರೂಪಕಗಳಿವೆ. ರ್ಕೆಯವರ `ಅಂಬೇಡ್ಕರ್ ಮತ್ತು ನನ್ನೂರ ಕೊರಗನ ಆನೆಕಾಲು’ ಕೂಡ ಇದರಲ್ಲಿ ಒಂದು. ಈ ರೂಪಕಗಳು ಆತ್ಮವಿಮರ್ಶಾತ್ಮಕ ದನಿಯುಳ್ಳವು. ಆದರೆ ದಲಿತ ಹಿನ್ನೆಲೆಯ ಕವಿಗಳಲ್ಲಿ ಜಾತಿವ್ಯವಸ್ಥೆಯ ಬಲಿಪಶುಗಳಾದ ತಮ್ಮನ್ನು ಸಮಾಜದ ಕಾಯಿಲೆ ನಿವಾರಿಸುವ ವೈದ್ಯರಾಗಿ ಕಲ್ಪಿಸಿಕೊಳ್ಳುವ ವಿನ್ಯಾಸವಿದೆ. ಮಹತ್ವದ ಸಂಗತಿಯೆಂದರೆ, ಈ ರೂಪಕ ವಿಧಾನವು ಜಾತಿ ಮತ್ತು ಅಸ್ಪೃಶ್ಯತೆಯನ್ನು ಎದುರಾಳಿಯಾಗಿ ಇಟ್ಟುಕೊಂಡು, ಆಕ್ರೋಶ ಮತ್ತು ವಿರೋಧ ಮಾಡುವ ವಿಧಾನ ಬಿಟ್ಟು ಕೊಡುತ್ತಿರುವುದು; ಬದಲಿಗೆ ದಲಿತರ ಮೇಲೆ ಸವರ್ಣೀಯ ಸಮಾಜಕ್ಕೆ ಮನುಷ್ಯತ್ವ ಕಲಿಸುವ ಹೊಣೆ ಹೊರಿಸುತ್ತಿರುವುದು. ಈ ಬಗೆಯ ಪಾತ್ರಪಲ್ಲಟ ಮಾಡುವ ಚಿತ್ರಗಳು ಕಪ್ಪುಸಾಹಿತ್ಯದಲ್ಲಿ ಸಾಮಾನ್ಯವಾಗಿವೆ. `ಬ್ಲಾಕ್ ಈಸ್ ಬ್ಯೂಟಿಫುಲ್' ತತ್ವವು ಕೇವಲ ಕಪ್ಪನ್ನು ಘನತೀಕರಿಸಲಿಲ್ಲ. ಅಮಾನುಷ ಬಿಳಿವಾದವನ್ನು ಮಾನುಷೀಕರಿಸುವ ಹೊಣೆಯನ್ನೂ ತನ್ನ ಮೇಲೆ ಹೊತುಕೊಂಡಿತು. ಅಂಬೇಡ್ಕರರನ್ನು ಕೃಷಿರೂಪಕಗಳಲ್ಲಿ ಕಾಣಿಸುವ ಕವನಗಳು ದೊಡ್ಡ ಸಂಖ್ಯೆಯಲ್ಲಿವೆ. ಇವು ಬರಗೆಟ್ಟ ನೆಲಕ್ಕೆ ಹೊಯ್ದ ಅಥವಾ ಬೀಜಕ್ಕೆ ಮೊಳಕೆ ಬರಿಸಿದ ಮಳೆಯಾಗಿ ಅವರನ್ನು ಕಲ್ಪಿಸುತ್ತವೆ. ಮಳೆ ಮತ್ತು ಬೀಜದ ರೂಪಕವು, ವಿಮೋಚಕ ನಾಯಕ ಹಾಗೂ ದಮನಿತರ ನಡುವಿನ ವೈಚಾರಿಕ ಸಂಬಂಧವನ್ನೂ ಸೂಚಿಸುತ್ತದೆ. ಬೀಜಕ್ಕೆ ಗಿಡವಾಗುವ ಕಸುವಿರಬಹುದು. ಮೊಳಕೆಯೊಡೆಸಬಲ್ಲ ಜಲಸ್ಪರ್ಶವಿಲ್ಲದೆ ಹೊಸಬಾಳು ಅಸಾಧ್ಯ. ಕೆಲವು ಕವನಗಳಲ್ಲಿ ಆಗಸ ಮತ್ತು ಮಳೆಯ ರೂಪಕಗಳಿದ್ದರೂ, ಅಲ್ಲಿ ಅಂಬೇಡ್ಕರ್ ಮಳೆಯಿಲ್ಲದ ಕೇವಲ ಮಿಂಚು ಮಾತ್ರವೇನು? ಬಿತ್ತಿದ ಬೆಳೆಯನ್ನು ಕೊಯಿಲು ಮಾಡದೆ ಹೋದ ರೈತನೆ? ಎಂಬ ಶಂಕೆಗಳಿವೆ. ದಲಿತ ಸಮುದಾಯವು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ಈ ಕೃಷಿಕ ಪ್ರತಿಮೆಗಳು ಅವರ ಬಾಳಿನ ಜತೆ ಸಾವಯವ ನಂಟನ್ನು ಪಡೆದಿವೆ. ವೃಕ್ಷರೂಪಿಯಾಗಿ ಅಂಬೇಡ್ಕರನ್ನು ಕಲ್ಪಿಸಿಕೊಳ್ಳುವಲ್ಲಿಯೂ ಇದೇ ಪೋಷಕಾರ್ಥವಿದೆ. ಅದರಲ್ಲೂ ಕೊಂಬೆಗಳನ್ನೂ ಬಿಳಿಲುಗಳನ್ನೂ ಹರಡಿ ವಿಶಾಲವಾಗಿ ಬೆಳೆವ ಆಲದ ರೂಪಕವು, ಅಂಬೇಡ್ಕರ್ವಾದದ ಬಹುರೂಪಿ ವಿಸ್ತರಣೆಯನ್ನು ಸಂಕೇತಿಸುತ್ತದೆ. ಆಲವು ಸನಾತನ ವೈದಿಕ ಸಂಪ್ರದಾಯದ ಸಂಕೇತ ಕೂಡ. ಈ ಎಚ್ಚರದಲ್ಲಿ ಕೆಲವು ಕವಿಗಳು ಅಂಬೇಡ್ಕರ್ ಆಲದಮರದ ಮೂಲೋತ್ಪಾಟನೆ ಮಾಡಿ ಬೋಧಿಯನ್ನು ಚಿಗುರಿಸಿದವರು ಎಂದು ಬಣ್ಣಿಸುತ್ತಾರೆ. ಕವಿಗಳು ಅಂಬೇಡ್ಕರ್ ಕುರಿತು ವಿಭಿನ್ನ ರೂಪಕಗಳನ್ನು ಸೃಷ್ಟಿಸುವುದು ಮಾತ್ರವಲ್ಲ, ಒಂದೇ ರೂಪಕವನ್ನು ಹಲವು ತಾತ್ವಿಕ ಅರ್ಥ ಹೊಮ್ಮುವಂತೆ ಕುಶಲತೆಯನ್ನೂ ತೋರುವರು. ಅಂಬೇಡ್ಕರರ ಗುಣಗಳನ್ನು ಕೆಲವರು ಪುರಾಣ ಪತ್ರಿಮೆಗಳ ಮೂಲಕ ಚಿತ್ರಿಸಲು ಯತ್ನಿಸಿರುವುದುಂಟು. ಕಂಬಾರರ ಕವಿತೆಯಲ್ಲಿ ಅವರು ನಾಗಾರ್ಜುನನಿಗಿಂತ ಒಂದು ಕೈ ಮಿಗಿಲಾದ ರಸವಿದ್ಯೆಗಾರ. ನಾಗಾರ್ಜುನನು ಸಾಮಾನ್ಯ ಲೋಹವನ್ನು ಚಿನ್ನವನ್ನಾಗಿ ಮಾಡುವ ವಿದ್ಯೆ ಗಳಿಸಲು ಯತ್ನಿಸಿದವನೆಂಬ ಕತೆಯಿದೆಯಷ್ಟೆ. ಈ ಹಿನ್ನೆಲೆಯಲ್ಲಿ ಕವಿತೆ ಅಂಬೇಡ್ಕರ್ ಸಾಮಾನ್ಯ ಜನ ಘನತೆಯಲ್ಲಿ ಬದುಕುವಂತೆ ರೂಪಾಂತರ ಮಾಡುವ ಮಾಟಗಾರ ಎಂದು ಧ್ವನಿಸುತ್ತಿರುವಂತಿದೆ. ದಾನಪ್ಪನವರ ಒಂದು ಕವಿತೆ ಅವರನ್ನು `ಹತ್ತುತಲೆಯ ಜ್ಞಾನವಿದ್ದ ರಾವಣ'ನಿಗೂ `ತಾಯಿಹೃದಯದ ಒರಟ ಮಹಿಷಾಸೂರ’ನೆಂದೂ ಕರೆಯುತ್ತದೆ. ಈ ಪೌರಾಣಿಕ ರೂಪಕಗಳು ಬ್ರಾಹ್ಮಣವಾದಿ ಪುರಾಣಗಳು ಯಾರನ್ನು ರಕ್ಕಸರೆಂದು ಕರೆದವೊ, ಅವರನ್ನು ದಮನಕ್ಕೊಳಗಾದ ಆದಿಮ ದಲಿತರೆಂದು ಪರಿಭಾವಿಸುವಂತಿವೆ. ತನ್ಮೂಲಕ ಮೇಲ್ವರ್ಗದ ಹಿತಾಸಕ್ತಿಗಳು ದುಷ್ಟರಕ್ಷಣೆಯ ಹೆಸರಿನಲ್ಲಿ ದುಷ್ಟೀಕರಿಸಿ ಕೊಂದ ರಾಕ್ಷಸದಮನದ ಪುರಾಣವನ್ನೇ ಪ್ರಶ್ನಿಸುತ್ತಿವೆ; ಅವನ್ನು ಪಲ್ಲಟಗೊಳಿಸುತ್ತಿವೆ. ಇದು ತಿರಸ್ಕೃತಗೊಂಡ ಸಂಕೇತಗಳನ್ನು ಘನತೀಕರಿಸುವ ಪ್ರತಿಸಾಂಸ್ಕೃತಿಕ ಕಾರ್ಯ. ಕೆಲವು ಕವಿತೆಗಳು ನೆಹರೂ ರಚಿಸಿದ ವ್ಯೂಹದಲ್ಲಿ ಬಲಿಯಾದ ಅಭಿಮನ್ಯುವಿಗೂ ಪರ್ವತದ ಶಿಖರಕ್ಕೆ ಬಂಡೆ ದಬ್ಬಿಕೊಂಡು ಹೋಗಲು ಯತ್ನಿಸುವ ಗ್ರೀಕ್ಪುರಾಣದ ಸಿಸಿಫಸನಿಗೂ ಹೋಲಿಸುವವು. ಮೊದಲ ರೂಪಕವು ಅಂಬೇಡ್ಕರರನ್ನು ಬಲಿಪಶುವೆಂದು ಕಲ್ಪಿಸಿಕೊಂಡರೆ, ಎರಡನೆಯದು ಜಾತಿವ್ಯವಸ್ಥೆಯನ್ನು ನಾಶಮಾಡುವಲ್ಲಿ ಸೋತವರೆಂದು ಸೂಚಿಸುತ್ತಿದೆ. ಪುರಾಣಗಳನ್ನು ಭಗ್ನಗೊಳಿಸಿದ ಅಂಬೇಡ್ಕರರನ್ನು ಪುರಾಣ ಪ್ರತಿಮೆಗಳ ಮೂಲಕ ಹಿಡಿವ ಈ ಯತ್ನ ವೈರುಧ್ಯಕರವೂ ವಿಶಿಷ್ಟವೂ ಆಗಿದೆ. ಈ ವಿನ್ಯಾಸದ ರೂಪಕಗಳು (ಸೂರ್ಯ, ಮಳೆ, ಮೋಡ ಬೆಳಕು, ಮಿಂಚು ಗುಡುಗು ಸಿಡಿಲು ಉಲ್ಕೆ ಇತ್ಯಾದಿ) ಹೆಚ್ಚಾಗಿ ಆಗಸಕ್ಕೆ ಸಂಬಂಧಿಸಿದವು. ಇವು ಸೂಕ್ಷ್ಮವಾಗಿ ಅಂಬೇಡ್ಕರ್ ಅವರನ್ನು ಅವತಾರದ ಕಲ್ಪನೆಯ ಹತ್ತಿರಕ್ಕೂ ಒಯ್ಯಬಲ್ಲವು. ಒಂದು ಕವಿತೆ ಅಂಬೇಡ್ಕರರನ್ನು ಅಪ್ಪ ಎಂಬರ್ಥವುಳ್ಳ ಆಪ್ತ ಸಂಬಂಧ ವಾಚಕವಾದ `ಬಾಬಾ' ಶಬ್ದವನ್ನು ಮತ್ತೊಮ್ಮೆ ಮರ್ತ್ಯಕ್ಕೆ ಕರೆವ ಶ್ಲೇಷಾರ್ಥದಲ್ಲಿ ಬಳಸುತ್ತದೆ-ಬೇಂದ್ರೆ `ಇಳಿದುಬಾ ತಾಯಿ' ಎಂದಂತೆ. ಅಂಬೇಡ್ಕರ್ ಅವರನ್ನು ದಕ್ಷಿಣ ಕರ್ನಾಟಕದ ಕವಿಗಳು ಅಂಬೇಡ್ಕರ್ ಎಂದೂ ಉತ್ತರ ಕರ್ನಾಟಕದ ಕವಿಗಳು ಮಹಾರಾಷ್ಟ್ರದ ಸಂಪ್ರದಾಯದಂತೆ ಬಾಬಾಸಾಹೇಬ ಎಂದೂ ಸಂಬೋಧಿಸುವುದು ಗಮನಾರ್ಹ. ಬಾಬಾಸಾಹೇಬರನ್ನು ಚೆನ್ನಣ್ಣ ವಾಲಿಕಾರರ ಹಾಡೊಂದು, `ನೀಹೋದ ಮರುದಿನ ನಮ ಬದುಕು ಮೊದಲಿನಂಗೆ ಆಗ್ಯಾದ’ ಎಂಬ ವರದಿಮಾಡುವ ಕ್ರಮದಲ್ಲಿ ಹುಟ್ಟಿದೆ. ಅದರ ವಿಷಾದಭರಿತ ಸಾಲುಗಳು ಸಹ, ರಕ್ಷಕನೂ ನಾಯಕನೂ ಇಲ್ಲದ ರಿಕ್ತಸ್ಥಿತಿ ಸೂಚಿಸುತ್ತ, ಅವತರಣದ ಕಲ್ಪನೆಯನ್ನು ಮುಂದೊತ್ತುತ್ತವೆ. ಇಲ್ಲಿ, ಅದರಲ್ಲೂ ಉತ್ತರ ಕರ್ನಾಟಕದ ಕವಿಗಳಲ್ಲಿ, ಜನಪದ ಹಾಡುಗಳ ಧಾಟಿಯ ಪ್ರಯೋಗವಿದೆ. ಗತಿಸಿದ ಅಂಬೇಡ್ಕರರನ್ನು ವರ್ತಮಾನದಲ್ಲಿರುವ ಸಂಗಾತಿಯಂತೆ ಪರಿಭಾವಿಸಿಕೊಂಡು ಸಂಭಾಷಿಸುವ ಗುಣವಿದೆ. ಇಲ್ಲಿ ಅಂಬೇಡ್ಕರ್ ವ್ಯಕ್ತಿತ್ವ ಸ್ಥಳೀಕರಣವೂ ಸಂಭವಿಸುತ್ತದೆ. ಈ ಜನಪದ ಧಾಟಿಗಳು ಅಂಬೇಡ್ಕರರನ್ನು ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿಸುವ ತಂತ್ರವಾಗಿವೆ; ಜತೆಗೆ ಜನಪದ ರೂಪಕಗಳನ್ನು ಸೃಷ್ಟಿಸಲು ಸಹ ಪ್ರೇರಕವಾಗಿವೆ. 3. ಸಾಮಾಜಿಕ ವಿಷಮತೆ ಕಾಣಿಸಲು ಮತ್ತು ವಿಮರ್ಶಿಸಲು ಉಪಕರಣವಾಗಿ ನೋಡುವ ವಿನ್ಯಾಸ. ಇಲ್ಲಿ ರೂಪಕಗಳು ಸಂಪ್ರದಾಯವಾದಿ ಸಮಾಜವನ್ನು ವಿಮರ್ಶಿಸಲು ಅಂಬೇಡ್ಕರರನ್ನು ಉಪಕರಣದಂತೆ ಬಳಸುತ್ತ, ಗಾಯಗೊಂಡ ಭಾರತದ ಸಾಮಾಜಿಕ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಒಂದು ಕವಿತೆಯಲ್ಲಿ ಹಸಿದ ಬಡವನೊಬ್ಬ ಮಾಡಿದ ಸಣ್ಣಕಳ್ಳತನಕ್ಕೆ ಘೋರವಾಗಿ ಶಿಕ್ಷಿಸಿದ ಪೋಲಿಸನು, ಸುಧಾರಿಸಿಕೊಳ್ಳಲು ಕೂರುವ ಕುರ್ಚಿಯ ಹಿಂದೆ, ಗೋಡೆಯ ಮೇಲೆ ತೂಗಿರುವ ಅಂಬೇಡ್ಕರ್ ಚಿತ್ರಪಟವಿರುವ ಸನ್ನಿವೇಶವಿದೆ. ವೈರುಧ್ಯಗಳನ್ನು ಎದುರು ಬದುರು ಹಿಡಿಯುವ ಮೂಲಕವೇ ವಿಷಮ ಸಮಾಜದ ಚರಿತ್ರೆಯನ್ನು ಕಟ್ಟಿಕೊಡುವ ಯತ್ನವಿದು. ಅಂಬೇಡ್ಕರ್ ಸ್ಮರಣೆ ದಲಿತರ ಹೊಸ ಬದುಕಿಗೆ ಹಾದಿಯಾಗದೆ, ಪ್ರತಿಮೆ ನಿಲ್ಲಿಸುವ ಇಲ್ಲವೇ ದಲಿತರ ಮತಬ್ಯಾಂಕನ್ನು ಸೃಷ್ಟಿಸಿಕೊಳ್ಳವ ಶಕ್ತಿರಾಜಕಾರಣದ ಸಾಧನವೂ ಆಗಿದೆ. ಈ ಬೆಳವಣಿಗೆಯನ್ನು ಹೆಚ್ಚಿನ ಕವನಗಳು ವಿಡಂಬನೆ ಮೂಲಕ ವಿಮರ್ಶಿಸುತ್ತವೆ. ಇವಕ್ಕೆ ಅಂಬೇಡ್ಕರರ ಪ್ರತಿಮೀಕರಣ, ದೈವೀಕರಣ, ಆರಾಧನೆಗಳು ಅವರ ಚಿಂತನೆಯನ್ನು ಹಿಂತಳ್ಳಬಹುದು; ಅವರನ್ನು ಸ್ಥಾವರಗೊಳಿಸಬಹುದು ಎಂಬ ಆತಂಕ. ಇವುಗಳ ಜತೆ ಅಂಬೇಡ್ಕರ್ ನೆನಪು ಗಾಂಧಿಯ, ನೆಹರೂವಿನ, ಕಾಂಗ್ರೆಸ್ಸಿನ ಹಾಗೂ ಕಮ್ಯುನಿಸ್ಟರ ವಿರೋಧಕ್ಕೆ ಹತ್ಯಾರವಾಗಿಯೂ ಬಳಕೆಯಾಗುವ ರಾಜಕೀಯ ವರಸೆಯ ಕವನಗಳೂ ಇವೆ. ಚರಿತ್ರೆಯು ಸೈದ್ಧಾಂತಿಕ ಎದುರಾಳಿಗಳನ್ನು ಹೊಡೆಯಲು ಆಯುಧವಾಗಿ ಬಳಕೆಯಾಗುವ ಈ ರಾಜಕಾರಣದ ಪರಿ ವಿಶಿಷ್ಟವಾಗಿದೆ. ನೆಹರೂ, ಕಾಂಗ್ರೆಸ್ಸು ಹಾಗೂ ಕಮ್ಯುನಿಸ್ಟರ ವಿರೋಧಕ್ಕೆ ಅಂಬೇಡ್ಕರ್ ನೆನಪನ್ನು ಉಪಕರಣವಾಗಿ ರೂಪಿಸುವ ಅಡಿಗರ `ಅಂಬೇಡ್ಕರ್ ಭೀಮರಾಯರಿಗೆ' ಕವಿತೆ ಅವರನ್ನು `ಮಹಾರ್ಹ’ ಎನ್ನುತ್ತದೆ. ಇಲ್ಲಿ ಮಹಾರರಲ್ಲೆ ಅರ್ಹ ಮತ್ತು ಮಹಾ ಅರ್ಹ ಎಂಬ ಶ್ಲೇಷೆಯಿದೆ. ಆದರೆ ಈ ಶಬ್ದಚಾತುರ್ಯದಲ್ಲಿ ಆಪ್ತವಾದ ಸಂವೇದನೆ ಕಾಣುವುದಿಲ್ಲ. ಈ ವಿನ್ಯಾಸದ ರೂಪಕಗಳ ಇನ್ನೊಂದು ಮಜಲೆಂದರೆ, ದಲಿತ ಸಮುದಾಯ ಮತ್ತು ಚಳುವಳಿಗಳ ವಿಮರ್ಶೆಗೂ ಅಂಬೇಡ್ಕರ್ ಸ್ಮೃತಿ ಚಾಚಿಕೊಳ್ಳುವುದು. ಆಧುನಿಕ ಶಿಕ್ಷಣ, ಸಾಮಾಜಿಕ ಎಚ್ಚರ ಮತ್ತು ಹೋರಾಟ ಪ್ರಜ್ಞೆಗಳು ದಲಿತ ಸಮುದಾಯದ ಜತೆ ಸಹಜವಾಗಿ ಬೆಸುಗೆಗೊಳ್ಳದೆ ಬಿರುಕು ಹುಟ್ಟಿಸಿರುವ ಸನ್ನಿವೇಶವನ್ನು `ಕುಸುಮಬಾಲೆ’ ವ್ಯಂಗ್ಯವಾಗಿ ಕಾಣಿಸುತ್ತದೆ. ದಲಿತರ ಜಾಥಾ ಹೊರಡುವ ಮುನ್ನ, ಸ್ಥಳೀಯ ಪ್ರಜ್ಞೆಯ ಗಾರಸಿದ್ಮಾವನು ಅಂಬೇಡ್ಕರ್ ಫೋಟೊ ಮುಂದೆ `ಏಳುಮಲೆ ಎಪ್ಪತ್ತೇಳು ಮಲೆ ಮಲೆಮಾದಪ್ಪನಿಗೆ ಉಘೆ' ಎಂದು ಕಾಯಿ ಒಡೆಯುವನು. ಆಗ ಸಂಘದ `ಮೊಕಂಡರ' ಮುಖಗಳು ಬಿಗಿದುಕೊಳ್ಳುತ್ತವೆ. ಈ ಮುಖಭಾವದ ವರ್ಣನೆ ಸಾಂಕೇತಿಕವಾಗಿದೆ. ದಲಿತರ ಬಗ್ಗೆ ಕಾಳಜಿಯಿದ್ದರೂ ಅವರ ಒಳಸಂಸ್ಕೃತಿಯ ಭಾಗವಾಗದೆ ವೈಚಾರಿಕ ಪ್ರಧಾನ ಚಳುವಳಿ ಹೊರಗೇ ಉಳಿದಿರುವುದನ್ನು ಕಾದಂಬರಿ ವ್ಯಂಗ್ಯವಾಗಿ ತೋರಿಸುತ್ತದೆ. ಅಂಬೇಡ್ಕರ್ ನೆಪದಲ್ಲಿ ದಲಿತ ಸಮಾಜವನ್ನು ಸ್ವಪರಿಶೀಲನೆಗೆ ಒಡ್ಡಿಕೊಳ್ಳುವ ದೃಷ್ಟಿಯಿಂದ ನೆಡುವುದಾದರೆ, ಗದ್ಯಕಥನಗಳಲ್ಲಿ ಹೆಚ್ಚು ವಾಸ್ತವಿಕವಾದ ವಿಮರ್ಶಾತ್ಮಕ ಚಿತ್ರಗಳು ಕಾಣುತ್ತವೆ; ಕಾವ್ಯದಲ್ಲಿ ಕಲ್ಪನಾತ್ಮಕ, ಭಾವುಕ ಮತ್ತು ಆರಾಧನೆಯ ಗುಣಗಳು ಹೆಚ್ಚು ಗೋಚರಿಸುತ್ತವೆ. 4. ಅಂಬೇಡ್ಕರನ್ನು ಬೌದ್ಧಭಿಕ್ಷುವಾಗಿ ಬುದ್ಧನ ಆಧುನಿಕ ಅವತಾರ ವಾಗಿ ಕಾಣುವ ವಿನ್ಯಾಸದ ಚಿತ್ರಗಳು. ಇವು ಅವರನ್ನು ಬೋಧಿವೃಕ್ಷ, ಸಂತ ಎಂದು ಕರೆದಿವೆ. ಸಿದ್ಧಲಿಂಗಯ್ಯನವರ ಕವಿತೆಗೆ ಅವರು ಭಿಕ್ಷುವಾದ ಬಗ್ಗೆ ಒಪ್ಪಿಗೆಯಿಲ್ಲ. ಅದನ್ನು `ಬಂಗಾರದ ಕೋಳವೊಕ್ಕ ಮಹಾಬೌದ್ಧ ಭಿಕ್ಷುವೆಂಬ ರೂಪಕದಲ್ಲಿ ಅದು ಟೀಕಿಸುತ್ತದೆ; ಯಾವುದನ್ನು ಅಂಬೇಡ್ಕರ್ ಸನಾತನ ಹಿಂದೂಧರ್ಮದ ಸಂಕಲೆಯಿಂದ ದಲಿತರ ಬಿಡುಗಡೆಯ ಹಾದಿಯೆಂದು ಪರಿಭಾವಿಸಿದರೋ, ಅದು ನಿಜವಾಗಿಯೂ ದಲಿತರ ಪಾಲಿಗೆ ಬಿಡುಗಡೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಈ ಹಿನ್ನೆಲೆಯಲ್ಲಿ ದಲಿತ ಸಂಸ್ಕೃತಿ ನಿರ್ಮಿಸಿಕೊಂಡಿರುವ ಸ್ವಾಯತ್ತ ಸಾಂಸ್ಕೃತಿಕ ಲೋಕಗಳ ಮೂಲಕ ಹೊಸ ವಿಮೋಚನ ಹಾದಿ ನಿರ್ಮಿಸುವ ಸಾಧ್ಯತೆಯನ್ನು `ಕುಸುಮಬಾಲೆ' ಶೋಧಿಸಿತು. ವಿಶೇಷವೆಂದರೆ, ಅಂಬೇಡ್ಕರರ ಧಮ್ಮಸ್ವೀಕಾರವು ಹಿಂದುತ್ವ ಪರವಾಗಿಯೂ ವ್ಯಾಖ್ಯಾನಗೊಂಡಿರುವುದು. ಅಡಿಗರ ಕವನವು ಅವರ ಭಿಕ್ಕುತನವನ್ನು ಕಾಣಿಸುವ ಬಗೆಯಲ್ಲಿ ಇದಿದೆ. ಅದು ಅವರನ್ನು ಒಬ್ಬ ಕಲಾವಿದನಾಗಿ ಕಲ್ಪಿಸಿಕೊಳ್ಳುತ್ತದೆ; ``ಅಪಸ್ವರ ಕೊಡುವ ಕಸರು ತುಂಬಿದ ಕೊಳಲ ಶ್ರುತಿಶುದ್ಧ ಮಾಡಿ ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ ಸಮತ್ವಗಳ ರಾಗಮಾಲಿಕೆಯನೆಬ್ಬಿಸಲು ದುಡಿದು ದಣಿದು ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ ಬುದ್ಧಿಯೋಗಿಯೇ’’ ಎಂದು ವರ್ಣಿಸುತ್ತದೆ. ಅಂಬೇಡ್ಕರ್ ಧಮ್ಮಕ್ಕೆ ಹೋಗಿದ್ದು ಅದನ್ನು ಬಯಸಿ ಅಲ್ಲ, ಹಿಂದೂ ಸಮಾಜದ ಸುಧಾರಣೆಯಲ್ಲಿ ಸೋತು ಎಂಬ ದನಿ ಇಲ್ಲಿದೆ. ಮಧುರ ನಾದ ಹೊರಡಿಸುವ ಕೊಳಲನ್ನು ಕುಟ್ಟಿ ಪುಡಿಮಾಡಿ ಸಮತೆ ಸಾರುವವರನ್ನು ಟೀಕಿಸುತ್ತ, ಅಂಬೇಡ್ಕರ್ ಕೊಳಲಿನ ಕಸರನ್ನು ತೆಗೆದು ನಾದ ಹೊರಡಿಸಲು ಯತ್ನಿಸಿ ಸೋತವರೆಂದು ಕವನ ಪರಿಭಾವಿಸುತ್ತದೆ: ``ಅಪಸ್ವರ ಕೊಡುವ ಕಸರು ತುಂಬಿದ ಕೊಳಲ ಶ್ರುತಿಶುದ್ಧ ಮಾಡಿ, ಹಿಂದುತ್ವದೊಳಗಿರುವ ಸಿಂಧುತ್ವ ಬಂಧುತ್ವ ಸಮತ್ವಗಳ ರಾಗ, ಮಾಲಿಕೆಯನೆಬ್ಬಿಸಲು ದುಡಿದು ದಣಿದು ಬೌದ್ಧಕ್ಕೆ ಸೋತದ್ದು ಸೋಜಿಗವಲ್ಲ, ಬುದ್ಧಿಯೋಗಿಯೇ’’; ಅಂಬೇಡ್ಕರರ ಧಮ್ಮದೀಕ್ಷೆ ಕುರಿತಂತೆ ಇಬ್ಬರು ಕವಿಗಳ ಕವನಗಳು ಕಾಣಿಸುತ್ತಿರುವ ವಿಭಿನ್ನ ನೋಟ ಮತ್ತು ಅವುಗಳೊಳಗಿನ ತಾತ್ವಿಕ ವ್ಯತ್ಯಾಸಗಳು ಮಾರ್ಮಿಕವಾಗಿವೆ. ಒಂದು ಧರ್ಮಾಂತರವು ಪರ್ಯಾಯವಲ್ಲ ಎಂದು ಸೂಚಿಸಿದರೆ, ಮತ್ತೊಂದು ಮೂಲಧರ್ಮ ಪರಿಷ್ಕಾರದ ಕೆಲಸ ಪೂರ್ಣಗೊಳ್ಳಲಿಲ್ಲ ಎಂದು ವಿಷಾದಿಸುತ್ತದೆ. 5. ಅಂಬೇಡ್ಕರರನ್ನು ಸಂಗಾತಿಯೆಂದು ಭಾವಿಸಿ, ಅವರೊಡನೆ ಸೈದ್ಧಾಂತಿಕ ಭಿನ್ನಮತಗಳ ಮೂಲಕ ಮುಖಾಮುಖಿಯಾಗುವ ವಿನ್ಯಾಸಗಳಲ್ಲಿ, ಪ್ರಶ್ನೆಗಳ ಮೂಲಕ ಸಂವಾದ ಮಾಡುವ ನಾಟಕೀಯತೆಯಿದೆ. `ಮಲಗಿರುವವರನು ಕೂರಿಸಿದೆ ನಿಲ್ಲಿಸುವವರು ಯಾರೊ?’ ಎಂಬುದು ಇಂತಹ ಪ್ರಶ್ನೆಗಳಲ್ಲಿ ಒಂದು. ಅಂಬೇಡ್ಕರ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡೇ ಪ್ರಶ್ನೆಯೆತ್ತುವ, ಅವರ ಚಿಂತನೆ-ಕ್ರಿಯೆಯಲ್ಲಿದ್ದ ವೈರುಧ್ಯ ಅಥವಾ ಮಿತಿಯನ್ನು ಗುರುತಿಸುವಿಕೆ ಕ್ರಮ ಇಲ್ಲಿನದು. ಈ ಮಾದರಿಯ ಸಾಹಿತ್ಯವು, ಅಂಬೇಡ್ಕರ್ ಚಿಂತನೆಯನ್ನು ವಾಗ್ವಾದದ ಮೂಲಕ ಬೆಳೆಸಲು ಮತ್ತು ಜೀವಂತವಾಗಿಡಲು ಯತ್ನಿಸುತ್ತದೆ. ಇಲ್ಲಿ ಕ್ರಾಂತಿಕಾರಿ ನಾಯಕರು ದುಷ್ಟಶಿಕ್ಷಕ-ಶಿಷ್ಟರಕ್ಷಕನಾಗಿ ಅವತರಿಸುವ ಬಗ್ಗೆ ನಂಬಿಕೆಯಿಲ್ಲ; ಬದಲಿಗೆ ಹಿರೀಕರು ನಡೆದಿರುವ ಅರ್ಧಹಾದಿಯನ್ನು ಪ್ರಶ್ನೆ ಮತ್ತು ಚರ್ಚೆಯ ಮೂಲಕ ವಿಸ್ತರಿಸಿಕೊಂಡು ಉಳಿದರ್ಧ ವರ್ತಮಾನದ ನಾವು ನಡೆಯಬೇಕಿದೆ ಎಂಬ ಪ್ರಕ್ರಿಯಾತ್ಮಕ ಅರಿವಿದೆ. ವರ್ತಮಾನವು ತನಗೆ ಚೈತನ್ಯ ತಂದುಕೊಳ್ಳುವ ಹಾಗೂ ಇತಿಹಾಸದಿಂದ ಪ್ರೇರಣೆ ಪಡೆಯುವುದರ ಅತ್ಯುತ್ತಮ ವಿಧಾನವಿದು. ಈ ವಾಗ್ವಾದರೂಪಿ ಮಾದರಿಯಲ್ಲಿ ಅಂಬೇಡ್ಕರರನ್ನು ಕಾಣಿಸುವ ಕವಿಗಳು ಸಾಮಾನ್ಯವಾಗಿ ಮಾರ್ಕ್ಸಿಸ್ಟ್ ಹಿನ್ನೆಲೆಯವರು. ನಾಯಕನ ಮುಗ್ಧ ಆರಾಧನೆ ಬಿಟ್ಟುಕೊಡುವ ಈ ಮಾದರಿಯು ಪ್ರಮಾಣದಲ್ಲಿ ಕಡಿಮೆಯಿದೆ. ಇದು ಕನ್ನಡ ಕಾವ್ಯದೊಳಗೆ ಚರಿತ್ರೆಯನ್ನು ಕುರಿತು ವಿಮರ್ಶಾತ್ಮಕ ದನಿ ಕ್ಷೀಣವಾಗಿ ರುವುದನ್ನೂ ಸೂಚಿಸುತ್ತದೆ. 6. ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಚಿಂತನೆಗಳು ವರ್ತಮಾನದ ವಿಭಿನ್ನ ಜನಪರ ತಾತ್ವಿಕತೆ ಅಥವಾ ಸಂವೇದನೆಗಳ ಜತೆಗೂಡಿ, ಹೊಸಹಾದಿ ಹುಡುಕುವ ಮಾದರಿ. ಗಾಂಧಿ ನೆಹರೂ ಜತೆ ಬಾಬಾಸಾಹೇಬರಿಗಿದ್ದ ಸೈದ್ಧಾಂತಿಕ ಭಿನ್ನಮತಗಳ ಚಾರಿತ್ರಿಕ ಸ್ಮೃತಿಯಲ್ಲಿ ಹುಟ್ಟಿರುವ ಕವನಗಳು ಅವರನ್ನು ಎದುರಾಳಿಗಳಾಗಿಯೇ ಇಡುತ್ತವೆ. ನಿದರ್ಶನಕ್ಕೆ ಎಲ್. ಹನುಮಂತಯ್ಯನವರ `ಗಾಂಧಿಯೆಂಬ ಬಯಲಸೀಳಿ ಬೆಳಕಿನೆಡೆಗೆ ಸಾಗಿದವನೆ, ನೆಹರು ಹೆಣೆದ ವ್ಯೂಹದಲ್ಲಿ ಅಭಿಮನ್ಯುವಾದವನೆ' ಎಂಬ ಚಿತ್ರ. ಆದರೆ ಚಾರಿತ್ರಿಕ ಸ್ಮೃತಿಗಳನ್ನು ಮೀರಿ ಹೊಸಹಾದಿ ಶೋಧಿಸುವ ಆಶಯವುಳ್ಳ ಕಾವ್ಯದಲ್ಲಿ ಗಾಂಧಿ-ಅಂಬೇಡ್ಕರರನ್ನು ಸಾಂಪ್ರದಾಯಿಕ ವಿರೋಧಿಗಳಾಗಿ ನೋಡುವುದಕ್ಕಿಂತ, ಅವರಲ್ಲಿದ್ದ ಸಮಾನ ಗುಣಗಳನ್ನು ಕೂಡಿಸಿ ನೋಡುವ ಯತ್ನಗಳಿವೆ. ವಿಶೇಷವೆಂದರೆ, ಇವರಿಬ್ಬರ ಜತೆ ಮೂರನೆಯ ತತ್ವವಾಗಿ ಬಸವಣ್ಣನೂ ಸೇರಿಕೊಳ್ಳುವುದು. ಈ ತಾತ್ವಿಕ ಸಂಕರಕ್ಕೆ ಅಮರೇಶ ನುಗಡೋಣಿಯವರ `ನೀರುತಂದವರು’ ಕತೆ ಒಳ್ಳೆಯ ನಿದರ್ಶನ. ಇಲ್ಲಿ ಕೇರಿಗೆ ನೀರಿಲ್ಲದಾಗ ನೀರು ಕೊಡಲು ನಿರಾಕರಿಸಿದ ಸವರ್ಣೀಯರಿಗೆ, ಅವರ ಬಾವಿಕೆಟ್ಟಾಗ ದಲಿತರು ನೀರು ಹೊತ್ತೊಯ್ದು ಕೊಡುವ ಸನ್ನಿವೇಶವಿದೆ. ಇದು ಮಹಾಡ್ ಕೆರೆ ಹೋರಾಟವನ್ನು ಪರೋಕ್ಷವಾಗಿ ನೆನಪಿಸುತ್ತ ಕುಡಿನೀರಿಗೆ ಹಕ್ಕುಸ್ಥಾಪನೆ ಮಾಡುವ ಚಾರಿತ್ರಿಕ ಸ್ಮೃತಿಗೆ ಹೊಸ ಮಜಲನ್ನು ಸೇರಿಸುತ್ತದೆ. ತರತಮವಾದಿ ಜಾತಿವ್ಯವಸ್ಥೆಯನ್ನು ಭಗ್ನಗೊಳಿಸಲು ಶರಣರು ಕೂಡ ನೀರು ಸೂರ್ಯ ನೆಲಗಳು ರೂಪಕಗಳನ್ನು ಸೃಷ್ಟಿಸಿಕೊಂಡಿದ್ದರು. ಕತೆಯಲ್ಲಿನ ಜಲ ಚಳುವಳಿಗೆ ಪ್ರೇರಕನಾಗುವವನು ಒಬ್ಬ ಊರಿನ ಸವರ್ಣಿಯ ತರುಣ. ಈತ ಕೇರಿಯಲ್ಲೇ ಹೆಚ್ಚಿನ ಹೊತ್ತು ಕಳೆಯುತ್ತ, ಅಂಬೇಡ್ಕರ್ ಗಾಂಧಿ ಬಸವಣ್ಣನವರ ಚರ್ಚೆ ಮಾಡುತ್ತ ಬೆಳೆದವನು; ಹೋರಾಟವು ದಮನಿತರನ್ನು ಮಾತ್ರವಲ್ಲ ದಮನಕಾರಿಗಳನ್ನೂ ಬದಲಿಸ ಬೇಕು ಎಂಬ ನಿಲುವುಳ್ಳವನು; ನೀರುಕೊಡದ ಊರಿನ ಸಣ್ಣತನಕ್ಕೆ ಪ್ರತಿಯಾಗಿ ಕೇರಿಯು ನೀರುಕೊಡುವ ಔದಾರ್ಯದ ಮೂಲಕವೇ ಉತ್ತರಿಸಬೇಕೆಂದು ತನ್ನ ದಲಿತ ಗೆಳೆಯರನ್ನು ಒಪ್ಪಿಸುವವನು. ಈ ಕತೆ ಗಾಂಧಿ ಚಿಂತನೆ, ದಲಿತರನ್ನು ಒಳಗೊಂಡಂತೆ ಸಮಸ್ತ ದಮನಿತ ಸಮುದಾಯಗಳ ವಿಮೋಚನೆಗೂ ಅಗತ್ಯವಿದೆ ಎಂದು ಸೂಚಿಸುತ್ತಿದೆಯೇ? ಹೊಸಚಳುವಳಿಗಳ ಹುಟ್ಟಿಗೆ ಚರಿತ್ರೆ ಪಾಠವಾಗುವ ಬದಲು ತಡೆಯೊಡ್ಡುವ ಭಾರವಾಗಿರುವ ಸದ್ಯದ ರಾಜಕೀಯವೂ ಹಿನ್ನೆಲೆಯಲ್ಲಿ, ನೀಲಿ ಕೆಂಪು ಒಟ್ಟಿಗೆ ಹೋಗುವ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನೀರುಕೊಡುವ ಈ ರೂಪಕವನ್ನು ಅರಿಯಬೇಕಿದೆ. ವಿಶೇಷವೆಂದರೆ, ಕನ್ನಡ ಸ್ತ್ರೀಸಂವೇದನೆ ದಲಿತ ಚರಿತ್ರೆಯನ್ನು ಮರುಸೃಷ್ಟಿಸುತ್ತಿರುವ ವಿನ್ಯಾಸಗಳು. ಈ ಧಾರೆಯ ಕವನಗಳಲ್ಲಿ ಅಂಬೇಡ್ಕರ್ ಅನುಭವಿಸಿರಬಹುದಾದ ಅಸ್ಪೃಶ್ಯತೆಯ ವೇದನೆಯನ್ನು, ಮುಟ್ಟಾದ ದಿನಗಳಲ್ಲಿ ಮಹಿಳೆಯರು ಅನುಭವಿಸುವ ಕಷ್ಟದ ಜತೆ ಸಮೀಕರಣ ಮಾಡಲಾಗುತ್ತದೆ. ಪೂರ್ಣಿಮಾರ `ನೀವು ನಮ್ಮೊಳಗಿದ್ದೀರಿ’ ಕವನದಲ್ಲಿ ಇಂತಹ ಸ್ತ್ರೀಕರಣ ಅಥವಾ ಸ್ತ್ರೀಸಂವೇದನೆಯ ದಲಿತೀಕರಣ ಸಂಭವಿಸಿದೆ. ಅವರನ್ನು ಸಮಾನತೆಗಾಗಿ ಯುದ್ಧಗೈದ ಯೋಧನೆಂದೂ ಅಂಧಕಾರದಲ್ಲಿ ಬಂದ ಸೂರ್ಯನೆಂದೂ ಕಾಣಿಸುವ ಗಂಡು ರೂಪಕಗಳಿಗೆ ಹೋಲಿಸಿದರೆ, ಈ ಸ್ತ್ರೀಕೃತ ರೂಪಕಗಳು ಅನನ್ಯವಾಗಿವೆ. ಇವು ಅಂಬೇಡ್ಕರ್, ಸ್ತ್ರೀಯರ ಪರವಾಗಿ ಕಾನೂನು ರಚಿಸಹೋಗಿ ಸೋತು ರಾಜಿನಾಮೆ ನೀಡಿದ ಚಾರಿತ್ರಿಕ ಘಟನೆಯನ್ನೂ ಸೂಚ್ಯವಾಗಿ ನೆನಪಿಸುವಂತಿವೆ. ಕನ್ನಡ ಸಾಹಿತ್ಯವು ಗಾಂಧೀಜಿಗೆ ಹೋಲಿಸಿದರೆ ಅಂಬೇಡ್ಕರರನ್ನು ಅನುಸಂಧಾನಗೈದ ಪ್ರಮಾಣ ಕಡಿಮೆ. ಅಂಬೇಡ್ಕರ್ ತೀರಿಕೊಂಡ ಮೂರು ದಶಕಗಳ ಬಳಿಕ ಅವರನ್ನು ವಸ್ತುವಾಗಿಸಿಕೊಂಡು ಸಾಹಿತ್ಯಸೃಷ್ಟಿ ಶುರುವಾಯಿತು; ೭೦-೮೦ರ ದಶಕದ ಸಾಹಿತ್ಯಕ್ಕೆ ಅಂಬೇಡ್ಕರ್ ಹೇಗಿದ್ದರು ಎಂದು ಕಾಣಿಸುವ ಚಾರಿತ್ರಿಕ ಉದ್ದೇಶಕ್ಕಿಂತ, ವರ್ತಮಾನವನ್ನು ಅರಿವ, ತುಡಿವ ಮತ್ತು ಅದನ್ನು ಬದಲಿಸುವ ಆಶಯ ಮುಖ್ಯವಾಗಿತ್ತು. ಮಹತ್ವದ ವಿಚಾರವೆಂದರೆ, ನಮ್ಮ ರಾಜಕೀಯ ಪಕ್ಷ ಹಾಗೂ ಚಳುವಳಿಗಳು ತೋರಲಾರದ ರಾಜಕೀಯ ಪ್ರಜ್ಞೆ ಮತ್ತು ಚಲನಶೀಲತೆಯನ್ನು, ಅಂಬೇಡ್ಕರ್ ಸಾಹಿತ್ಯದಲ್ಲಿರುವ ರೂಪಕಗಳು ತೋರಿಸುತ್ತಿರುವುದು. ಈ ಕಾರಣಕ್ಕೆ ಈ ಕೃತಿಗಳು ರಾಜಕೀಯ ಪ್ರಜ್ಞೆಯ ಪಠ್ಯಗಳು. ಬರೆಹವು ಚಳುವಳಿಗೆ ಪ್ರೇರಣೆ ಕೊಡುವ ಮತ್ತು ಚಳುವಳಿಗಳಿಂದ ಕಸುವನ್ನು ಪಡೆಯುವ ದ್ವಂದ್ವಾತ್ಮಕ ಪ್ರಕ್ರಿಯೆ ಕ್ಷೀಣಗೊಂಡಿರುವ ಈ ಕಾಲದಲ್ಲಿ, ತಕ್ಕ ರೂಪಕಗಳ ಧ್ಯಾನವೂ ಒಂದು ಮಹತ್ವದ ರಾಜಕೀಯ ಕ್ರಿಯೆಯಾಗಿದೆ. (`ನೆತ್ತರ ಸೂತಕ'ದಿಂದ)

No comments:

Post a Comment