Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Saturday, April 30, 2022
ರಹಮತ್ ತರೀಕೆರೆ - ಕಸ್ತೂರಿ ಬಾಯರಿ [ ಸಂದರ್ಶನ }
ಮಾತುಕತೆ:
`ಆರ್ದ್ರತೆಯಿಲ್ಲದೆ ದೊಡ್ಡ ಸಾಹಿತ್ಯ ಹುಟ್ಟಲ್ಲ'
- ಕಸ್ತೂರಿ ಬಾಯರಿ(1956-2022)
*ನಿಮ್ಮ ಕುಟುಂಬ ಕರಾವಳಿಯಿಂದ ಬದಾಮಿಗೆ ಯಾಕಾಗಿ ಬರಬೇಕಾಯಿತು?
ತಾಯಿ ಟಿಬಿಯಾಗಿ 33ನೇ ವಯಸ್ಸಿಗೇ ಹೋಗಿಬಿಟ್ಟಳು. ಅಪ್ಪಯ್ಯ ಐದು ಮಕ್ಕಳನ್ನು ಕರಕೊಂಡು ಇಲ್ಲಿಗೆ ಬಂದರು. ಸಣ್ಣದೊಂದು ಚಾದಂಗಡಿ ಇಟ್ಟರು. ಅವರು ಊರಲ್ಲಿದ್ದಾಗ ಸಾಲಿಗೆ ಹೋಗೊ ಮುಂದ `ಎಸ್ಸಿ ಮಂದಿ ಬಂದಾರ. ಮುಟ್ತಾರ' ಅಂತ ಮನಿಗೆ ಓಡಿ ಬಂದಿದ್ದರಂತೆ. `ಆ ಕಾಲ ಹಂಗಿತ್ತವ್ವ' ಅನ್ನೋರು. ಈಗ ಎಲ್ಲಾ ಜಾತಿ ಮಂದಿ ಚಾ ಕುಡದ ಕಪ್ಪುಬಸಿ ತೊಳೀತಿದ್ದರು. ಮನೀಗೆ ಯಾರಾದರೂ ದಲಿತರು ಬಂದರ ಬ್ಯಾಡ ಅಂತಿದ್ದಿಲ್ಲ. ಧರ್ಮ ಅನ್ನೋದು ಅಡಿಗೆ ಮನೀಗಷ್ಟೇ ಇರಬೇಕು ಅಂತಿದ್ದರು. ಮುಕ್ತಿಸಾಧನೆಗೆ ಅಂತ ಸಾಧು ಸಂತರು ಜಟಾಧಾರಿಗಳ ಕೂಡ ಅಡ್ಡಾಡತಿದ್ರು.
*ಬದಾಮಿಯ ಮೊದಲ ದಿನ ಹೇಗಿದ್ದವು?
ಬಜಾರದಾಗ ಒಂದು ಖೋಲಿಯಾಗ ಇದ್ದಿವಿ. ಟಾಯ್ಲೆಟಿಲ್ಲ. ನೀರಿಲ್ಲ. ಆ ಹೊಲಸು ಈಗಲೂ ಕನಸ್ನಾಗ ಕಾಡ್ತದರಿ. ನಮ್ಮಜ್ಜಯ್ಯನ ಮನ್ಯಾಗ ಮೆತ್ತನ್ನ ಅನ್ನ ತಿಂದು ಬೆಳದೋರು. ಬರದಗುಡ್ಡಕ್ಕೆ ಬಂದು ಬಿದ್ದಿದ್ವಿ. ಹೊಲಗೆಲಸ ಮಾಡಾಕೆ ಬರ್ತಿದ್ದಿಲ್ಲ. ಅವರಿವರು ಕೊಟ್ಟ ಒಣಾರೊಟ್ಟಿ ತಿನ್ನಕಾಗ್ತಿದ್ದಿಲ್ಲ. ಸಜ್ಜಿಹಿಟ್ಟು ಕಲಸಿ ದೋಸೆ ಮಾಡ್ತಿದ್ದಿವಿ. ದಂದಕ್ಕಿಯೊಳಗ ದನ ಮೇದುಬಿಟ್ಟ ಜ್ವಾಳದಗಡ್ಡಿ ತಂದು ಒಲೆ ಹಚ್ಚತಿದ್ದಿವಿ. ಎಸೆಸೆಲ್ಸಿ ಪಿಯುಸಿ ತನಕ ರೋಡ್ ಲೈಟಿನೊಳಗ ಓದಿದಿವಿ. ರೋಹಿಣಿಗೆ ಸರ್ಕಾರಿ ನೌಕರಿ ಬರೋತಂಕ ನಾವು ಸರಿಯಾಗಿ ಊಟಾನೇ ಮಾಡಲಿಲ್ಲ.
*ಇಲ್ಲಿನ ಜನ ನಿಮ್ಮನ್ನು ಹೇಗೆ ಸ್ವೀಕರಿಸಿದರು?
ಏ, ಬಾಯರಿ ಮೇಡಂ ಅಂದರ ಅಷ್ಟು ಪ್ರೀತಿರಿ. ನಮ್ಮ ತಮ್ಮ ಒಂದು ಸಲ ಕೊರೊನಾ ಟೈಮನಾಗೆ ಬಂದಿದ್ದ. ಪೋಲೀಸರು ಚೆಕ್ ಪೋಸ್ಟಿನ್ಯಾಗ ತಡದರಂತ, ಮಾಸ್ಕ್ ಹಾಕಿಲ್ಲ ಅಂತ. `ಇಲ್ರೀ, ನಾವು ಬಾಯಿರಿ ಮೇಡಂ ಮನೀಗೆ ಹೊಂಟೀವಿ' ಅನ್ನಾಣ, `ಬಾಯಿರಿ ಮೇಡಂ ಮನೀಗ? ಹೋಗರಿ ಹೋಗರಿ' ಅಂದರಂತ. `ಲಾ ಇವನ! ಈಕಿಗಿ ಪೋಲೀಸ್ ಡಿಪಾರ್ಟಮೆಂಟಿನ್ಯಾಗೂ ಶಿಷ್ಯರದರಾಲ್ಲ' ಅಂತ ಆಶ್ಚರ್ಯಪಟ್ಟ ಅವನು.
*ಬದಾಮಿ ಸೀಮೆಯ ವಿಶೇಷತೆಯೇನು?
ಇಲ್ಲಿ ಮಣ್ಣು ಗಾಳಿ ಎಷ್ಟು ಛಲೋ ಅದೇರಿ. ಬಸವಣ್ಣ ಆಳಿದ ಈ ನಾಡದ್ಯಲ್ಲ, ಭಾಳ ಒಳ್ಳೇ ನಾಡು. ಅವನ ಜಂಗಮ ತತ್ವ ಏನದ್ಯಲ್ಲ ವಂಡರಫುಲ್. ಇಲ್ಲಿನ ಜನ ಹಡಸೀಮಗನ, ಬೋಸುಡಿಕೆ, ನಿನ್ನೌನ, ಹುಚ್ಚುಪ್ಯಾಲಿ ಅಂತ ಬೈದಾಡ್ತಾರ. `ಏ ಕಸಬರಗಿ, ಬಾಯಿಲ್ಲಿ' ಅಂತ ತಾಯಿ ಮಗನ್ನ ಕರೀತಾಳ. ಗೆಳೆಯರು `ಏ ಹುಚ್ಚಬರಗಿ ಅದೀಯಲೇ ಮಗನಾ' ಅಂತಾರ. ಬೇಕಾದ್ದು ಜಗಳಾಡಲಿ, ಮತ್ತ ತೆಕ್ಕೆಬಡದು ಒಂದಾಗಿ ಬಿಡ್ತಾರ. ನಮ್ಮನೀಗೆ ಒಬ್ಬಾಕಿ ಮುಸಲೋರ ಹೆಂಗಸು, ಬಾಗವಾನರಾಕಿ ಹೂ ಮಾರಕೊಂಡು ಬರತಾಳ. ಒಂದಿವಸ `ಎಷ್ಟು ಮಕ್ಕಳಬೇ?' ಅಂತ ಕೇಳಿದೆ. `ಮೂರು' ಅಂದಳು. `ಲಗ್ನ ಎಲ್ಲಿಗೆ ಮಾಡಿಕೊಟ್ಟಿ?' ಅಂದೆ. `ಇಲ್ರೀ, ಹಿರೇಮಗಳ ನರ್ಸಿಂಗ ಮುಗಿಸ್ಯಾಳರಿ, ಬಿಎಎಂಎಸ್ ಗೆ ಹಚ್ಚೀನ್ರಿ. ಎರಡನೇ ಮಗಳು ಪ್ಯಾರಾ ಮೆಡಿಕಲ್ ಓದಲಿಕ್ಕೆ ಹತ್ಯಾಳ. ಮೂರನೇ ಮಗಳು ಬಿಎಸ್ಸಿ ಅಗ್ರಿ' ಅಂದಳು. ಎದೆ ಝಲ್ ಅಂದುಬಿಡ್ತು. ಬರೇ ಹೊಲದಾಗ ಕೂಲಿ ಮಾಡಿ ಓದಿಸ್ಯಾಳ, ವರ್ಷಕ್ಕ ಒಂದೊಂದ ಲಕ್ಷ ಫೀಸು ತುಂಬಿ. ಮತ್ತ ಮೂರೂ ಮಂದಿ ಮೆರಿಟಿನ್ಯಾಗ ಸೀಟು ತಗೊಂಡಾರ. `ಭೂಮಿತಾಯೀಗೆ ನನ್ನ ಬಣ್ಣ ಕೊಟ್ಟೀನ್ರಿ. ಆಕಿ ಬಣ್ಣ ನಾನು ತಂಗೊಂಡೀನ್ರೀ' ಅಂದಳು. ಈ ಭಾಷೆ ಈ ಜೀವನತತ್ವದ ಮುಂದೆ ಯಾವ ಭಗವದ್ಗೀತೆ ರಾಮಾಯಣಾರಿ? ಮೂರು ಹೆಣ್ಮಕ್ಕಳನ್ನ ಓದಸೋದು ಕಮ್ಮಿಯೇನರಿ? ಇಲ್ಲಿನ ಮಂದಿ ಓಪನ್. ಪ್ರಾಮಾಣಿಕರು. ಹೆಣ್ಮಕ್ಕಳಲ್ಲಿ ನಾವು ಕಂಡಿದ್ದು ಪಾಸಿಟಿವಿನೆಸ್. ಗಂಡ ಕುಡುಕಿರಲಿ ಹಡಕಿರಲಿ ಬೇಕಾದ್ದಿರಲಿ. `ನಮ್ಮ ರಟ್ಯಾಗ ಶಕ್ತಿ ಐತಿ, ದುಡದ ತಿಂತೀವಿ ಬಿಡ್ರಿ' ಅಂತಾರ. `ದುಡಕೊಂಡು ಒಯ್ದಿರ್ತೀವಿ. ಅದ್ರಾಗೂ ಕುಡಿಯಾಕ ರೊಕ್ಕ ಕೇಳ್ತಾರ ಭ್ಯಾಡ್ಯಾಗಳು' ಅಂತಾರ. `ಬಾಯಾರೇ, ನಿಮ್ಮ ಜಲಮ ತಣ್ಣಗೈತ್ರಿ. ಗಂಡರ ಕಾಟಿಲ್ಲ, ಮುಂಜಾಲೆದ್ದು ನಿಮ್ಮ ಮಾರಿ ನೋಡಬೇಕ್ರಿ. ನಮಗ ಮೊದಲೇ ತಿಳೀಲಿಲ್ಲರಿ. ನಿಮ್ಮಂಗ ಇರತಿದ್ದಿವಿ' ಅಂತಾರ. ಮಾತು ಕೃತಿ ಆಚರಣೆ ವೈವಿಧ್ಯತೆ ಎಲ್ಲವೂ ಅವರ ಜೀವನದೊಳಗದ. ಸಾಮಾನ್ಯ ಜನಪದರು ಬಳಸೋ ಭಾಷೆ ಅದೆಯಲ್ಲ, ಅದು ನಿಜವಾದ ಜೀವಂತಿಕೆಯ ಭಾಷೆ. ಭಾಷೆ ಹೇಳಿಕೊಟ್ರೆ ಬೆಳೆಯೋಲ್ಲ. ತಾನಾ ಭೂಮಿಯಿಂದ ಅರಳಬೇಕು. ಲೇಖಕರಾದವರು ಜನಪದದೊಳಗೆ ಬೆರೀಬೇಕು. ಆಮೇಲೆ ಪ್ರಜ್ಞೆಯಿಟ್ಟುಕೊಂಡು ಬರೀಬೇಕು.
*ನೀವು ರಂಜಾನ ಕೊರ್ತಿ ಅನ್ನೋ ಹುಡುಗನ್ನ ಸಾಕಿದಿರಿ. ಅವನ ಮೇಲೆ ಕತೇನೂ ಬರೆದಿರಿ. ಅವನು ಸಾಯೊ ಕಾಲಕ್ಕ ದವಾಖಾನೆಗೆ ಖರ್ಚು ಮಾಡಿದಿರಿ. ಅವನ ವಿಶೇಷತೆಯೇನು?
ಅಂವಾ ಪೇಪರ್ ಏಜೆಂಟಿದ್ದ. ಟಿ.ಎಸ್. ವೆಂಕಣ್ಣಯ್ಯನವರಿಂದ ಹಿಡಿದು ಇಲ್ಲೀತನಕ ಯಾರ್ಯಾರು ಬರದಾರ ಅಷ್ಟರದ್ದೂ ಓದಿದ್ದ. ನನಗೆ ಬೇಕಾದ ಪುಸ್ತಕ-ಪೇಪರ್ ಎಲ್ಲೇ ಇದ್ದರೂ ತಂದುಕೊಡ್ತಿದ್ದ. ತೇಜಸ್ವಿ- ಬೆಳಗೆರೇದು ಲೈನ್ ಲೈನ್ ಬಾಯಿಪಾಠ ಹೇಳ್ತಿದ್ದ. ಬೇಂದ್ರೆ ಕಾವ್ಯವಂತೂ ಬಾಯಾಗೇ ಇತ್ತು. ಥೇಟ್ ರಾಜಕುಮಾರ್ ಮಾತಾಡ್ದಂಗೇ ಮಾತಾಡೋನು. ``ಲೇ ಸಾಲೀ ಮುಂದೆ ಹಾಯ್ದಲೆ ಎಷ್ಟರ ಓದಕೊಂಡಿದ್ದಲೇ ಸೂಳೆಮಗನೆ'' ಅಂತಿದ್ದೆ ನಾನು.
*ಲೇಖಕಿಯಾಗಿದ್ದಿರಿ, ಶಿಕ್ಷಕಿಯಾಗಿದ್ದಿರಿ. ಯಾವುದು ಹೆಚ್ಚು ಖುಶಿ?
ಟೀಚರಾಗಿರ್ರಿ. ನನಗ ಮಕ್ಕಳಂದರ ಇಷ್ಟು ಪ್ರೀತಿರಿ. ಅಪ್ಪಯ್ಯನಿಗೆ ಹುಶಾರಿರಲಿಲ್ಲ. ಎಲ್ಲ ಮಾಡಿ ಎಂಟಕ್ಕ ಸಾಲಿಗೆ ಹೋಗತಿದ್ದೆ. ಆ ಹೊತ್ತಿಗೆ ಅವು ತಿಂಡಿ ತಿಂತಿರ್ತಾವ. ನಾನಿನ್ನೂ ಗೇಟನಾಗಿ ಇರತಿದ್ದೆ. ಓಡಿಬಂದು ತೆಕ್ಕೆ ಬಡೀತಿದ್ದವು. ಮಕ್ಕಳ ಲೋಕ ದೇವರಲೋಕ. ಅವು ಉಚ್ಚೆ ಕಕ್ಕ ಮಾಡಿದರೆ ತೊಳೀತಿದ್ದೆ. ನಮ್ಮ ಸಾಲಿಗೆ ಮಂದಿ `ಬೈರಿ ಮೇಡಂ ಸಾಲಿ' ಅಂತ ಕರೀತಿದ್ದರು. ಈಗಾದರೂ ಅವು ಲಗ್ನಕ್ಕ ಹೇಳಾಕ ಬರ್ತಾವ; ಹಡದರ ತೋರಸಾಕ ಬರ್ತಾವ; ಫಾರಿನ್ನಿಂದ ಬಂದಾಗ ಮನಿಗೆ ಬರ್ತಾವ. ಪುಸ್ತಕ ತರ್ತಾವ.
*ಮಕ್ಕಳಿಗೆ ಇಂಗ್ಲೀಶ್ ಕಲಿಸುವಾಗ ಯಾವ ಸವಾಲು ಎದುರಿಸಬೇಕಾಯಿತು?
ಹಿಸ್ಟರಿಯಾಗಲಿ ಪೊಯಟ್ರಿಯಾಗಲಿ, ಫಸ್ಟು ಕನ್ನಡದೊಳಗ ಹೇಳಿಬಿಡತಿದ್ದೆ. ಆಮೇಲೆ ಇಂಗ್ಲೀಶ್ ಪದಗಳಿಗೆ ಕನ್ನಡದರ್ಥ ಬರಸತಿದ್ದೆ. ಮಕ್ಕಳನ್ನು ಸ್ಟಿಮ್ಯುಲೇಟ್ ಮಾಡೋಕೆ ಕವಿತೆ ಓದಿತಿದ್ದೆ. ಪೇಪರ್ ಕಟಿಂಗ್ ತೋರಿಸತಿದ್ದೆ. ಎಸೆಸೆಲ್ಸಿಯೊಳಗ ನೈಂಟಿ ಮ್ಯಾಲೆ ತಗೀತಿದ್ದವು. ಇದನ್ನ ಕಾರಂತಜ್ಜರ ಹತ್ತರ ಹೇಳಿದೆ. `ಬರೋಬ್ಬರಿ ಐತೆ, ಮುಂದುವರೆಸು' ಅಂದರು.
*ನಿಮ್ಮ ಹಿರೀಕರ ಬಗ್ಗೆ ಹೇಳಿರಿ.
ನಮ್ಮ ಅಜ್ಜಯ್ಯ ಉಡುಪಿ ತಾಲೂಕು ಸಾಸ್ತಾನದವರು. ಅವರು ಕೇರಳದ ವೈನಾಡಿಗೆ ಕಾತ್ಯಾಯಿನಿ ದೇವಸ್ಥಾನದ ಪೂಜೆಗಂತ ಹೋದವರು. ಕಾಫಿ ಎಸ್ಟೇಟ್ ಮಾಡಿದ್ದರು. ಆನೆ ಸಾಕಿದ್ದರು. ಒಂದು ಗೊನೆಬಾಳೆ ಒಬ್ಬರೇ ತಿಂತಿದ್ರು. ಬಹಳ ದುಡಕೊಂಡು ಬಂದಿದ್ದರು. ಬೆಳ್ಳಿತಾಟಿನೊಳಗೆ ನೀರುಹಾಕಿ ನಕ್ಷತ್ರಗಳನೆಲ್ಲ ತೋರಿಸಿ ಮಗಳಿಗೆ ಊಟ ಮಾಡಿಸ್ತಿದ್ದರಂತ. ಅವರು ವಾಪಸು ಬಂದಾಗ ಕರ್ನಾಟಕ ಏಕೀಕರಣವಾಗಿತ್ತು. ಆ ವರ್ಷ ನಾನು ಹುಟ್ಟಿದೆ. ಕನ್ನಡ ಕಸ್ತೂರಿ ಅಂತ ಹೆಸರಿಟ್ಟರು. ಮನೇಲಿ ಎಲ್ಲರೂ ಅಚ್ಚಕನ್ನಡ ಆಡೋರು. ತಂತಮ್ಮೊಳಗೆ ಮಾತಾಡೊ ಮುಂದ ಮಲೆಯಾಳ ಬಳಸ್ತಿದ್ದರು. ನಾನು ಇವರೇನು ಬ್ಯಾರಿಗಳೇನು ಅಂತಿಳ್ಕೊಂಡಿದ್ದೆ ಸಣ್ಣಾಕಿ ಇದ್ದಾಗ.
*ಅಪ್ಪ?
ಅಪ್ಪ ಬಾರ್ಕೂರಿನವರು. ಸೀತಾನದಿ ಈಚಿಕಡಿ ಸಾಸ್ತಾನ ಪಾಂಡೇಶ್ವರ. ಆಚೆಕಡಿ ಬಾರ್ಕೂರು. ಬಾರ್ಕೂರಲ್ಲಿ ಅಪ್ಪಯ್ಯನ ತಾಯಿ ಇದ್ದಳು. ಬಡವಿ. ಅಲ್ಲಿ ಚಂದು ಅಂತ ಒಬ್ಬಿದ್ದಳು. ಆಕಿ ಗದ್ದೆಬಯಲು ಕಾಲುಸೇತುವೆ ಹೊಳೆ ದಾಟಿಸಿ ದೋಣಿಯೊಳಗೆ ಬಾರ್ಕೂರು ಮನಿಗೆ ಕರಕೊಂಡು ಹೋಗ್ತಿದ್ದಳು. ಬಾರ್ಕೂರಜ್ಜಿ ಮೊಮ್ಮಕ್ಕಳು ಬಂದಾವಂತ ಅಕ್ಕಿ ತೆಂಗಿನಕಾಯಿ ರುಬ್ಬಿ ಅಪ್ಪಂ ಮಾಡೋಳು. ದೋಣಿಗಂತ ನಾಕಾಣೆ ಕೊಡೋಳು.
*ಸಾಹಿತ್ಯದ ಸಂಪರ್ಕ ಎಲ್ಲಿಂದ ಶುರುವಾಯ್ತು?
ನಮ್ಮೂರಿಗೆ ಪಾಂಡೇಶ್ವರ ಹತ್ತರ. ಅಲ್ಲಿ ಪಿ. ಕಾಳಿಂಗರಾಯರ ಚಂದದ ಬಂಗಲೆಯಿತ್ತು. ಅವರು ಹಾಡ್ತಾರಂತ ಗೊತ್ತಿರಲಿಲ್ಲ. ಅವರ ಬಂಗಲೆ ಪಕ್ಕಾನೇ ಲೈಬ್ರರಿ. ಅಲ್ಲಿಂದ ಪದ್ಮಾ ಚಿಕ್ಕಿಗೆ ಕಾದಂಬರಿ ತರತಿದ್ದಿವಿ. ಚಿಕ್ಕಿ ಮಾತ್ರ `ಕಾದಂಬರಿ ಹುಚ್ಚಿದ್ದರೆ ಉಪ್ಪರಗಿ ಮೇಲೆ ಹೋಗಿ ಓದಿರಿ' ಅಂತಿದ್ಲು. ನಮ್ಮಜ್ಜಿ ನಮಗ ಕಾದಂಬರಿ ಓದೋಕೆ ಬಿಡ್ತಿದ್ದಿಲ್ಲ, ಮಕ್ಕಳ ತೆಲಿಕೆಡ್ತದ ಅಂತ. ನಮ್ಮೂರ ಬಾಜೂಕೇ ಕಾರಂತರ ಸಾಲಿಗ್ರಾಮ. ನಮ್ಮನ್ನ ಅಜ್ಜಿ ಅವರ ಮನೀಗೆ ಹೋಗಗೊಡತಿದ್ದಿಲ್ಲ, ಶೆಟ್ಟರನ್ನು ಲಗ್ನ ಆಗಿದ್ದರಲ್ಲ ಅವರು. `ಕೋಟದ ಕಾಕಿಗಳು' ಅಂತ ಆಡಕೊಳ್ತಿದ್ದಳು.
*ನಿಮ್ಮದೊಂದು ಕಥಾಸಂಕಲನ ಚಿಕ್ಕಿಗೆ ಅರ್ಪಿಸಿದ್ದೀರಿ.
ನಮ್ಮನ್ನ ಎಲ್ಲ ತರಹದಿಂದ ಬೆಳೆಸಿದೋಳು ಅವಳು. ಆಕಿ ಪತ್ರ ಬರೆಯೋದ ನೋಡಬೇಕು ನೀವು. ಯಾರು ಊರಿಗೆ ಬಂದರು, ಯಾರು ಅಮೇರಿಕಕ್ಕೆ ಹೋದರು, ಯಾರು ಇಂಟರಕಾಸ್ಟ್ ಮದುವೆಯಾದರು, ಯಾವ ಅಡಿಗೆ ಮಾಡಿದರು, ಯಾರು ಏನೇನು ತಿಂದರು-ಪ್ರತಿಯೊಂದು ಇಂಚಿಂಚು. ಈ ಫೋನ್ ಬಂದಿಂದೇ ಬರಿಯೋದ್ ಬಿಟ್ಟಳು. ಫೋನಲ್ಲಿ `ಮಕ್ಕಳೇ ಸರಿಯಾಗಿ ಮದ್ದು ತಗಳ್ರಿ, ಮಕ್ಕಳೇ ಅಲ್ಲಿಇಲ್ಲಿ ಹೋಗಬೇಡಿ, ಮಕ್ಕಳೇ ಜಾಸ್ತಿ ಸೊಪ್ಪು ತರಕಾರಿ ತಿನ್ರಿ' ಒಂದಾ ಎರಡಾ ಉಪದೇಶ?
*ಬಾಲ್ಯದಲ್ಲಿ ಊರಿನ ಪರಿಸರ ಹೇಗಿತ್ತು?
ಅಗ್ರಹಾರದಲ್ಲಿ ನಾವು ಬೆಳೆದಿದ್ದು. ನಮ್ಮಜ್ಜಿ ಭಯಂಕರ ಮಡಿ. ಆಕಿ ಟವೆಲ್ ಯಾರೂ ಯೂಸ್ ಮಾಡಂಗಿಲ್ಲ. ಬೆಡ್ ಮ್ಯಾಲ್ ಯಾರೂ ಕೂರಂಗಿಲ್ಲ. ಮುಟ್ಟಾದಾಗ ನಾವು ಬ್ಯಾರೇ ಕೋಣೇನೇ. ಮೂರುಸಲ ಸ್ನಾನ ಮಾಡಬೇಕು-ಅದೆಲ್ಲ ಕರಾರಿತ್ತು. ನಮಗ ಹುಡುಗರ ಜೋಡಿ ಆಟ ಆಡೋಕೆ, ಹಾಡಿ ಅಲೆಯೋಕೆ ಆಸೆ. ಆದರೆ ಅಜ್ಜಿ `ಅಲ್ಲೆಲ್ಲ ಉಡಾಳ ಗಂಡುಮಕ್ಕಳು ಇರ್ತಾವ, ನೀವ್ ಹೋಗಬ್ಯಾಡ್ರಿ, ಗಂಡಮಕ್ಕಳ ಜತೆ ಕೂಡಬ್ಯಾಡ್ರಿ, ಮೈಕೈ ಮುಟ್ತಾರ' ಅಂತಿದ್ಲು. ನಾವು ಮುದ್ದಾಂ ಹುಡುಗರ ಜತಿ ಆಟ ಆಡತಿದ್ವಿ. ಮೈಕೈ ಮುಟ್ಟಿದರ ಏನಾತು ಅಂತಿದ್ವಿ.
*ಬಾಲ್ಯದ ನೆನಪುಗಳು ಕಾಡತಾವಾ?
ಬಾಲ್ಯ ಅನ್ನೋದು ಎಷ್ಟು ಸಿಹಿಯಾಗಿರ್ತದ! ಊರುಬಿಟ್ಟು ಅರವತ್ತು ವರ್ಷವಾದರೂ ಕಣಕಣಾನು ನೆನಪೈತ್ರಿ. ಕಾಡು, ಗದ್ದೆ, ಸೀತಾಹೊಳೆ, ಸೇತುವೆ ಮೇಲೆ ಹರಿದಾಡೊ ಬಸ್ಸುಗಳು, ಕ್ರೈಸ್ತರ ಮುಸಲರ ಮನೆಗಳು, ಅಗ್ರಹಾರ, ಅಲ್ಲಿನ ಮಡಿಮೈಲಿಗೆ, ದೇವಸ್ಥಾನ, ದೇವರಪೂಜೆ, ಪಂಚಕಜ್ಜಾಯ, ರಣಪೂಜೆ, ಅದರ ಪ್ರಸಾದತಂದು ಉಪ್ಪರಿಗೆ ಮೆಟ್ಲಲ್ಲಿ ಇಡೋದರಿ, ನಾಳೆ ತಿನ್ನಬೇಕು ಅಂತ. ಬೆಳಿಗ್ಗೆ ಆಗೋದರೊಳಗೆ ಇರುವೆ ತುಂಬ್ಕೊಂಡು ಬಿಡೋವು. ಹಾಡಿಗೆ ಹೋಗಿ ನೇರಳೆಹಣ್ಣು ತಿಂದು ನೀಲಿ ಕನ್ನಡಿಯೊಳಗೆ ನಾಲಗೆ ನೋಡಿಕೊಂಡು ನಗತಿದ್ದೆವು. ಗೇರುಹಣ್ಣು ತಿಂತಿದ್ದೆವು. ಕಿಸ್ಕಾರ ಹಣ್ಣ ತಿಂದು ಬಾಯಿ ಕೆಂಪು ಮಾಡಕೊಳ್ತಿದ್ದೆವು. `ಅಮ್ಮಾ, ಕಡೆಮದ್ದು ಕೊಡೇ' ಅಂತ ಅಜ್ಜಿಗೆ ಕಾಡ್ತಿದ್ದೆವು. ಲೇಖಕರಿಗೆ ನೊಸ್ಟಾಲ್ಜಿಯಾ ಭಾಳ ಇಂಪಾರ್ಟೆಂಟ್.
*`ಕಡೆಮದ್ದು' ಅಂದರೇನು?
ಬಾಣಂತಿಗೆ ತಿನಸೋದರಿ. ನೂರಾರು ತರಹದ ಬೇರುತಂದು ಒಣಗಿಸಿ ಪುಡಿ ಮಾಡಿ ಸೋಸಿ, ಬೆಲ್ಲದ ಪಾಕ ತುಪ್ಪಹಾಕಿ ಒಲೆಮೇಲೆ ಚೆನ್ನಾಗಿ ತಿರುವಿ, ಜಾಡಿತುಂಬಿ ಇಡ್ತಾರ. ಬಾಣಂತಿಗೆ ದಿನಾ ಇಷ್ಟಿಷ್ಟು ಕೊಡ್ತಾರ. ನಮ್ಮಜ್ಜಿ ಕಡೆಮದ್ದಿನ ಬೇರುಗಳ ಹೆಸರು ಹೇಳೋ ಕಾಲಕ್ಕ, `ಹಲವು ಮಕ್ಕಳ ತಾಯಿಬೇರು' ಅಂದಿದ್ಲು. ಅದರ ಮ್ಯಾಲೆ `ಹಲವು ಮಕ್ಕಳ ತಾಯಿಬೇರು' ಅಂತ ಕತೆ ಬರದೆ. ನಮ್ಮ ಚಿಕ್ಕಿ ಡೆಲಿವರಿ ಆದಾಗ ಅಜ್ಜಿ `ಬಾಣಂತಿಯ ಬೆನ್ನ ಗಟ್ಟಿ ಆಗಬೇಕು, ಹಡದಿಂದೆ ಗರ್ಭಕೋಶ ಲೂಸ್ ಆಗರ್ತತಿ, ಅದು ಗಟ್ಟಿ ಆಗಬೇಕು, ಹಾಲ್ ಬರಬೇಕು' ಅಂತ ಕಡೆಮದ್ದು ಮಾಡಿಕೊಡಾಕ ಹತ್ಯಾಳ. ಆಗ ನಾನೂ ಹೊಟ್ಟೆ ಹರಕೊಂಡು ಓವರಿ ತಕ್ಕೊಂಡಿದ್ದೆ. ಬೆನ್ನುನೋವು. ನನಗ್ಯಾಕ ಮಾಡಿಕೊಡವಲ್ಲಳು ಅಜ್ಜಿ. ಆಕಿಗೆ ಮಾಡೋಮುಂದ ನಿನಗೂ ದೊಡ್ಡಾಪರೇಶನ್ ಆಗೈತಿ, ಮಾಡ್ತೀನಿ ಅನಬೇಕಿತ್ತಲ್ಲ? ನಾಯೇನು ಹಡದ ಬಾಣಂತಿ ಅಲ್ಲಲ್ಲ ಅಂತ ಫೀಲ್ ಆಗಿತ್ತು. ಕೊನೇಗೆ ಅನಸ್ತು, ತಾಯಿ ಸತ್ತ ಮಕ್ಕಳು ಇರಬಾರದಪ್ಪಾ ಅಂತ. ಬೇಜಾರಾಗಿ ಆ ಕತೆ ಬರದೆ.
*`ತಾಯಿ ಸತ್ತ ಮಕ್ಕಳು' ಅಷ್ಟೊಂದು ಶಾಪ್ರಗ್ರಸ್ತ ಅವಸ್ಥೆಯಾ?
ಫುಟ್ಬಾಯಲ್ ಚೆಂಡರಿ. ಅಜ್ಜಿ ತಿರುಗಾಡಕ್ಕ ಕೊಡತಿದ್ದಿಲ್ಲ, ತಾಯಸತ್ತ ಮಕ್ಕಳು ಅಗ್ರಹಾರಕ್ಕ ಹೋಗಬಾರದು ಅಂತ. ಹುಟ್ಟಿದೂರು ಅಂತ ಹೋದರೆ ನೆಗ್ಲೆಕ್ಟ್ ಮಾಡೋರು. ಅಪ್ಪಿತಪ್ಪಿ ಯಾರೂ ಕರೀತಿದ್ದಿಲ್ಲ. ನಾನು ಲೇಖಕಿಯಾಗೀನಲ್ಲ? ನೋಬಡಿ ಈಸ್ ಕನ್ಸರ್ನ್ಡ್ ಅಬೌಟ್ ಮೈ ರೈಟಿಂಗ್. ಒಬ್ಬರಾರ ಪುಸ್ತಕ ಕೇಳ್ಯಾರೇನು? ಹಾದಿಬೀದೀಲಿ ಹೋಗೋರಿಗೆಲ್ಲ ಹಂಚತೀನಿ. ಅವರಿಗೆ ಕೊಟ್ಟಿಲ್ಲ. ಭಯಂಕರ ಮಟೀರಿಯಲ್ಲಿಸ್ಟ್ಸ್. ರಿಲೇಟೀವ್ಸ್ ಕಡಿಂದ ಅಪಮಾನ ಅನುಭವಿಸಿದೀವಿ. ಬಟ್ ಪಬ್ಲಿಕ್ ಗೇವ್ ಅಸ್ ಲಾಟ್ ಆಫ್ ಲವ್ ಅಂಡ್ ರೆಸ್ಪೆಕ್ಟ್. ನಮ್ಮ ಕೆಲಸದೋಳಿಗೆ ಹೇಳೀನಿ `ದವಾಖಾನಿಂದ ನನ್ನ ಡೆಡ್ ಬಾಡಿ ತಂದರ, ನಮ್ಮವರು ಬರೋಕೆ ಮುಂಚೆ ಹೆಣಚಂದ ಮಾಡಿ ಅತ್ತಬಿಡವ್ವಾ' ಅಂತ.
*ನಿಮ್ಮ ಕತೆಗಳಲ್ಲಿ ಕ್ರೈಸ್ತ ಪರಿಸರ ದಟ್ಟವಾಗಿದೆ.
ನಾನು ಮೂರು ವರ್ಷ ಚರ್ಚ್ ಸ್ಕೂಲಾಗೆ ಕಲ್ತೆ. ಚರ್ಚಿಗೆ ಹೋಗಿ ಕನಫೆಶನ್ ಕಿಂಡಿಗೆ ಹೋಗಿ ಕೈಯಿಟ್ಟು ಫಾದರ್ ಹತ್ತರ ಸುಳಸುಳ್ಳೇ ಹೋಗೋದು, ಮಂಡಿಯೂರಿ, `ನಾನು ಇವತ್ತು ಮಾವಿನಗಿಡದಾಗೆ ಕಾಯಿ ಕದ್ದೆ ಕ್ಷಮಿಸಿ ಫಾದರ್, ನಾನು ಇವತ್ತು ಶಾಲೇಲಿ ಪೆನ್ಸಿಲ್ ಕದ್ದೆ ನಮ್ಮನ್ನು ಕ್ಷಮಿಸಿ ಫಾದರ್' ಅಂತ ಕನಫೆಸ್ ಮಾಡತಿದ್ವಿ. ಅಜ್ಜಿ `ಚರ್ಚಿಗೆ ಹೋಗಿದ್ದಿರಾ' ಅಂತ ಕೋಲ್ ತಕ್ಕೊಂಡು ಗದ್ದೆ ತುಂಬ ಓಡಾಡಸ್ತಿದ್ದಳು. ನಮ್ಮನಿ ಹತ್ತರ ಹೆಲನಬಾಯಿ ಅಂತ ಇದ್ಲು. ಆಕಿ ಮನೀಗೆ ಮ್ಯಾಲಿಂದ ಮ್ಯಾಲೆ ಹೋಗೋದರಿ. ಮೈಮ್ಯಾಲ ಬಿದ್ದು ಉಳ್ಳಾಡೋದರಿ. ಆಕಿ ಪ್ರೀತೀಲೆ ಹೂವು ಕೊಡೋಳು. ಆ ಹೂವು ಮನೀಗೆ ತರೋಹಂಗಿಲ್ಲ. ನಮ್ಮಜ್ಜಿ `ಹೆಲನಬಾಯಿ ಮನೀಗ್ ಹೋಗೀರಾ? ಮಾಂಸಮಡ್ಡಿ ತಿನ್ನೋರ ಮನೀಗೆ ಹೋಗೀರಾ?' ಅನ್ನೋಳು. ಭಾಂವಿ ಕಟ್ಟೇಮ್ಯಾಲ ಬತ್ತಲೆ ನಿಲ್ಲಿಸಿ, ತಲಿಮ್ಯಾಲ ಬುದುಬುದು ನೀರು ಹಾಕಿ ಮಡಿ ಮಾಡೋಳು.
*ಬಾಲ್ಯದ ಕರಾವಳಿ ಈಗ ಹೇಗಿದೆ?
ಭಾಳ ಬದಲಾಗ್ಯದ. ಕಾರಣಿಲ್ಲ ಏನಿಲ್ಲ ಸುಮಸುಮ್ಮನೆ ಮುಸಲೋರನ್ನ ಕ್ರಿಶ್ಚನ್ನರ ಹೇಟ್ ಮಾಡೋದು. ನಾನು ನಿಮ್ಹಾನ್ಸದೊಳಗ ಟ್ರೀಟ್ಮೆಂಟ್ ತಗೊಂಡ ಮ್ಯಾಲ, ಒಬ್ಬ ಕ್ರಿಶ್ಚಿಯನ್ ಸಿಸ್ಟರ್ ಮನೆಯೊಳಗ ಇಟ್ಟಿದ್ದರು. ಎರಡು ವರ್ಷ ನನಗ ಹೀಂಗ ಪ್ರೀತಿ ಮಾಡಿದರ್ರೀ ಅವರು.
*ನಿಮ್ಮ `ಹೆಲನಬಾಯಿ ಮತ್ತು ತುಂಬೆ ಹೂವು' ಒಳ್ಳೆಯ ಕತೆ.
ಹೆಲನ ಬಾಯಿ ಎಂಥಾ ಶಾಂತ ಮುಖ? ದೇವಿಯಿದ್ದಂಗೆ. ಆಕೆ, ನಮ್ಮ ತಾಯಿ ಫ್ರೆಂಡ್ಸಾಗಿದ್ದರು. ನಮ್ಮ ತಾಯಿ ಅಂಥಾದ್ದೇ ಕಿವ್ಯಾಗ ಹಾಕ್ಕೊಂಡಿರ್ತಿದ್ದಳು, ನೀಲಿ ಹಳ್ಳಿಂದು. ಆಕಿ ಶಿಸ್ತು, ಜಡೆ ಬಾಚೋದು, ಆಕಿನೊಳಗೆ ನಾವು ಅಮ್ಮನ ರೂಪ ಕಾಣತಿದ್ದಿವಿ. ಆಕಿ ಹುಲ್ಲಿಗಂತ ಗದ್ದೆಬದಿ ಬಂದಾಗ `ಅಮ್ಮಾ ಹುಲ್ಲಿಗೆ ಹೋಗಿ ಬತ್ತೇ' ಅಂತಿದ್ದಳು. ಚರ್ಚಿಗೆ ಹೋಗೋ ಮುಂದ `ಅಮ್ಮಾ ಚರ್ಚಿಗೆ ಹೋಗಿ ಬತ್ತೇ' ಅನ್ನೋಳು.
*ಅಜ್ಜಿ ಕೊನೇಗೆ ಬದಲಾದರಾ?
ಬದಲಾದಳು. ಆಕಿಗೆ ಹೆಲನಬಾಯಿ ಬಗ್ಗೆ ಒಂದು ಪ್ರೀತಿ ಇರತಿತ್ತು. ಚಟ್ನಿರುಬ್ಬಿ ತೆಂಗಿನ ಗರಟದೊಳಗೆ ಕೊಡೋದು, ಚೊಂಬಿನೊಳಗೆ ನೀರು ಎತ್ತಿ ಹೊಯ್ಯೋದು, ಬೆಲ್ಲ ಕೊಡೋದು, ಮಾಡಿದ ಅಡಿಗೆ ಕೊಡೊದು, ಕಷ್ಟಸುಖ ಕೇಳೋದು, ಹೆಲನ್ಬಾಳಯಿ ಅತ್ತರೆ ತಾನೂ ಎರಡು ಕಣ್ಣೀರು ಹಾಕೋದು ಇವೆಲ್ಲ ಇದ್ದವು. ಕಡಕಡೀಕೆ ಎಲ್ಲ ಸಂಪ್ರದಾಯ ಬಿಟ್ಟುಬಿಟ್ಲು. `ಹೆಲನಬಾಯಿ ಮತ್ತು ತುಂಬೆಹೂವು' ಕತೆಯಲ್ಲಿ ಮಕ್ಕಳು ಆಕೀಗೆ ದೇವಸ್ಥಾನದ ಹಲಸಿನ ಕೊಟ್ಟೆಕಡುಬು ಕೊಟ್ಟಿಲ್ಲಂತ ಮಕ್ಕಳು ಹಳಹಳ ಮಾಡೋ ಪ್ರಸಂಗ ಬರ್ತದ. ಅದನ್ನ ಓದಿ ಹೆಲನಬಾಯಿಗೆ ಕಡುಬು ಮಾಡಿ ಕೊಟ್ಟು ಬಂದಳು. ಮತ್ತಾಕಿ ಹಾಸ್ಪಿಟಲಿಗಿದ್ದಾಗ ಹೋಗಿ ಆಕೀಗೆ ತಬ್ಬಕೊಂಡು ಬಂದಳು. ಮನೇಲೆ ಎರಡು ಕ್ರಿಶ್ಚಿಯನ್ ಸೊಸ್ತೇರನ್ನು ತಂದಳು. ತಂಗಿ ಮಗನಿಗೆ ವಿಧವೆ ತಂದುಕೊಂಡಳು. ಎರಡು ಜನ ಬಿಲ್ಲವ ಅಳಿಯಂದಿರು ಬಂದರು. ಕಠೋರ ಅಗ್ರಹಾರದ ನಡುವೆ ಕ್ರಾಂತಿ ಮಾಡಿದಳು. ಅವರೆಲ್ಲ ಮನೀಗೆ ಬರೋದು ಹೋಗೋದು ಪೂಜೆ ಪುನಸ್ಕಾರ ಎಲ್ಲ ಮಾಡ್ತಾರ. ನಮ್ಮಜ್ಜಿ ವಿಶೇಷ ಪರ್ಸನಾಲಿಟಿ. ವೈಲಿನ್ ನುಡಸ್ತಿದ್ದಳು. ಹಾಡತಿದ್ದಳು. ಸುಬ್ಬಲಕ್ಷ್ಮಿ ಹಾಡಂದರ ಪ್ರಾಣ.
*ನೀವು-ರೋಹಿಣಿ ಅರ್ಧಶತಮಾನ ಒಟ್ಟಿಗೆ ಬದುಕಿದಿರಿ. ಅವರ ವ್ಯಕ್ತಿತ್ವ ಎಂಥದ್ದು?
ನಮ್ಮ ರೋಹಿಣಿ ಮರದ ಮೌನದ ಹುಡುಗಿ. ಶಿ ನೆವರ್ ಕಂಪ್ಲೇಂಟ್ಸ್. ಎಂ.ಎ. ಫಿಲಾಸಫಿ ಗೋಲ್ಡ್ ಮೆಡಲ್ ತಗದಾಳ. ವೇದಾಂತ ಸ್ಪೆಶಲೈಜೇಶನ್. ಕಾನ್ವೊಕೇಶನ್ನಿಗೆ ಹಾಕ್ಕೊಳಕ್ಕ ಒಳ್ಳೇ ಅರಿವೆಯಿದ್ದಿಲ್ಲ. ಇಷ್ಟು ಉಪ್ಪಿಟ್ಟು ಕಟ್ಟಕೊಂಡು ಹೋಗಿ ಹಳ್ಳಳ್ಳಿ ಮನಿಮನಿ ಅಡ್ಡಾಡಿ ನೌಕರಿ ಮಾಡಿ ಹೈರಾಣಾಗ್ಯಾಳ. ನೀವ ವಿಚಾರ ಮಾಡ್ರಿ, ಸಣ್ಣ ಪಗಾರದೊಳಗ ನಾಲ್ಕು ಬಡಮಕ್ಕಳಿಗೆ ಇಂಜಿನಿಯರಿಂಗ್ ಓದಿಸ್ಯಾಳ, ಆಕೀಗಿ ಜೀವನದೊಳಗ ಆಸೆಗಳೇ ಇಲ್ಲ. ನಮ್ಮ ಪರಿಚಿತರೊಬ್ಬರು ಗಯಾದೊಳಗಿದ್ದಾರ. ಅವರಿಗೆ ಹೇಳಿದ್ದೆ ಒಂದು ಬುದ್ಧನಮೂರ್ತಿ ತಂದುಕೊಡರಿ ಅಂತ. (ಪಕ್ಕದಲ್ಲಿದ್ದ ಮೂರ್ತಿ ತೋರಿಸುತ್ತ), ಇಗಾ ನೋಡ್ರಿ ತಂದುಕೊಟ್ಟಾರ. ಆದರೆ ನಿಜವಾದ ಬುದ್ಧ ನನ್ನ ತಂಗಿ.
*ನೀವೂ ಧಾರವಾಡದಲ್ಲಿ ಇಂಗ್ಲೀಶ್ ಎಂ.ಎ. ಮಾಡಿದಿರಿ.
ಶಂಕರ ಮೊಕಾಶಿ ಪುಣೇಕರ್ ಎಲ್ಲಾ ಇದ್ರು. ಚಂಪಾ ಫೊನಿಟಿಕ್ಸ್ ಹೇಳ್ತಿದ್ದರು. ಹುಡಿಗ್ಯಾರಿಗೆ ಲವ್ ಪೊಯೆಮ್ಸ್ ಬರದಕೊಡ್ತಿದ್ರು. ಸಾಧನಾ ಅಂತ ಡಾಲ್ ಇದ್ದಂಗಿದ್ದಳು. ಆಕಿಗೆ ಒಂದಿವಸ ಲವ್ ಪೊಯೆಂ ಬರದಕೊಟ್ರು. ಅವಳು ನನಗ ತಂದ ತೋರಿಸಿದ್ಲು. `ಸರ್ ಇಷ್ಟು ಚಂದ ಲವ್ ಪೊಯೆಂ ಬರದ ಕೊಟ್ಟೀರಿ' ಅಂದೆ. `ಏ ಬಾಯರಿ, ನಿನಗ ಯಾರು ತೋರಿಸಿದ್ರು?' ಅಂದರು. ನಾನು ಭಾಳ ಇಂಗ್ಲಿಶ್ ಲಿಟರೇಚರ್ ಓದೀನ್ರಿ. ಬದಾಮಿಯೊಳಗ ನನಗ ಕಲಿಸಿದ ಯೋಗಪ್ಪನೋರು ನನ್ನ ಗ್ರಾಸ್ಪಿಂಗ್ ಪವರ್ ನೋಡಿ ಆಶ್ಚರ್ಯ ಪಡತಿದ್ದರು. ಓದೋದೇ ಅರ್ಧ ಕಣ್ಣು ಹೋಗ್ಯಾವರಿ.
*ಪದವಿ ಯಾಕೆ ಮುಗಿಸಲಿಲ್ಲ?
ಸುಟ್ಟ ಸುಡುಗಾಡ ಸ್ಕಿಜೊಫ್ರೇನಿಯಾ ಬಂದುಬಿಡ್ತು. ಇಪ್ಪತ್ತು ರೂಪಾಯಿ ಹಾಸ್ಟೆಲ್ ಬಿಲ್ ತುಂಬದೇ ಇದ್ದದ್ದಕ್ಕ ವಾರ್ಡನ್ ಹೊರಗ ಮಳಿಯೊಳಗ ನಿಲ್ಲಿಸಿಬಿಟ್ಟಳು. ಕೆಟ್ಟ ಬಡತನ. ಸ್ಪ್ಲಿಟ್ ಪರ್ಸನಾಲಿಟಿ ಆಗಿಬಿಡ್ತು. ಅದರಿಂದ ಹೊರಬರಬೇಕಾದರೆ ಹತ್ತು ವರ್ಷ ಹಿಡೀತೇ ಏನೊ. ಮನೀಗೆ ಬಂದರೆ ಕೂಳಿಲ್ಲ. ನಮ್ಮಪ್ಪಯ್ಯ ಸಾಧು ಸಂತರ ಹಿಂಬಾಲ. ಆಗ ನಮ್ಮಕ್ಕ ವಾಗ್ದೇವಿ, ಮನಿಮನಿ ಟೂಶನ್ ಹೇಳಿ ನಮ್ಮನ್ನ ಸಾಕಿದ್ಲು. ನಾವೂ ಟೂಶನ್ ಹೇಳ್ತಿದ್ದಿವಿ
*ಜಗತ್ತಿನ ಸಾಹಿತ್ಯ ಓದಿಕೊಂಡಿದ್ದೀರಿ. ನಿಮ್ಮಂತಹವರು ಕಾಲೇಜು ಅಧ್ಯಾಪಕರಾಗಿದ್ದರೆ ವಿದ್ಯಾರ್ಥಿಗಳಿಗೆ ಉಪಯೋಗ ಆಗ್ತಿತ್ತು.
ಹಳಹಳಿಕೆ ಅದೇರಿ. ಏನು ಮಾಡ್ಲಿ? ಥೈರಾಯ್ಡ್ ಆಗಿ ಧ್ವನಿಪೆಟ್ಟಿಗೆ ಹೋಗಿಬಿಡ್ತು. ಈಗಲೂ ಮನೀಗೆ ಬಂದೋರು ಒಂದು ಒಜ್ಜೆ ಮಾತಾಡಿದರೆ, ನಿದ್ದಿ ಬರೋದಿಲ್ರಿ. ಓಣ್ಯಾಗ ಒಂದು ನಾಯಿಸತ್ತರೆ ಎಂಟು ದಿನ ನಿದ್ದಿ ಮಾಡೋದಿಲ್ಲ. ಆದರೆ ನನ್ನ ಶಿಷ್ಯರು ಇಂಗ್ಲೆಂಡು ಅಮೆರಿಕಾ ಸೇರಿಕೊಂಡಾರ. ಇಂಗ್ಲೀಶನೊಳಗ ಬರೀತಾರ. ನನಗೆ ತೃಪ್ತಿ ಅದ.
*ನಿಮ್ಮ ಅಕ್ಕನವರ ಸಂಗೀತದ ಅಭಿರುಚಿ ಬಗ್ಗೆ ಬಹಳ ಸಲ ಹೇಳಿದೀರಿ.
ಆಕಿ ತೀರ್ಥಳ್ಳಿ ಹತ್ತರ ಒಂದು ಹಳ್ಳಿಯೊಳಗಿದ್ದಳು. ಗಟ್ಟಿಗಿತ್ತಿ. ಗಂಡ ತೀರಿಕೊಂಡ ಮ್ಯಾಲ ಬದುಕನ್ನ ಕಟ್ಟಿಕೊಂಡಳು. ಸಾವಯವ ಕೃಷಿ ಮಾಡತಿದ್ದಳು. ಸಾವಯವ ಗೊಬ್ಬರ ಮಾರತಿದ್ದಳು. ದನ ಸಾಕಿದ್ಲು. ಒಂದು ಕಾಳಮೆಣಸಾ, ಒಂದು ಕಾಫಿಯಾ ಎಷ್ಟು ಬೆಳೆಗೋಳು! ಹತ್ತೆಕೆರೆ ತೋಟಮಾಡಿಟ್ಟು ಹೋಗ್ಯಾಳ. ವರ್ಷಾ ಹಸಿಬತ್ತದ ತೆನೀತೋರಣ ಮಾಡಿ ಕಳಸತಿದ್ಲು. ನಟ್ಟಿಗೆ ಬಂದೋರ ಹತ್ತರ ಹಾಡು ಸಂಗ್ರಹ ಮಾಡತಿದ್ದಳು. ಒಳ್ಳೇ ಅಡಿಗೆ ಮಾಡತಿದ್ದಳು. ಹಾಡತಿದ್ದಳು. ಜೀನಿಯಸ್. ಸಾಯೋ ಮುಂದ, ಮಣಿಪಾಲ್ ಆಸ್ಪತ್ರೆಯೊಳಗ `ಈ ಸಂಜೆ ಯಾಕಾಗಿದೆ' ಹಾಡಿದಳು. ವಾರ್ಡ್ ತುಂಬ ಅಡ್ಯಾಡಿ, `ಕಿಮೊಥೆರಪಿಯಿಂದ ಏನಾಗದಿಲ್ಲ, ಟೆಕ್ನಾಲಜಿ ಮುಂದುವರೆದದ. ಯಾರೂ ಹೆದರಬ್ಯಾಡಿ, ಭಾಳಂದ್ರ ಕೂದಲು ಉದುರತಾವ' ಅಂತ ರೋಗಿಗಳಿಗೆ ಹೇಳತಿದ್ದಳು. ಒಳ್ಳೇ ಅನುಭಾವಿ. ನಾವು ಕೂಡಿ ಇಂಗಳೇಶ್ವರದಲ್ಲಿ ಬಸವಣ್ಣನವರ ಮನೀಗೆ, ಮತ್ತ ಕುಪ್ಪಳಿಯೊಳಗ ಕುವೆಂಪು ಮನೀಗೆ ಹೋಗಿದ್ವಿ. ಎರಡೂ ಕಡೆ ಲಿಟರಲಿ ಐ ಟ್ರಾನ್ಸಡ್. ಕುಪ್ಪಳ್ಳಿಯೊಳಗ ಅಕ್ಕ `ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ' ಹಾಡಿದಳು. ಅಕಸ್ಮಾತ್ ತೇಜಸ್ವಿಯವರು ಒಳಗ ಬಂದಬಿಟ್ಟರು. ಹಾಡ ಕೇಳಿ ಸಂತೋಷಪಟ್ಟರು. `ನೀವು ಪ್ರೊಫೆಶನಲ್ ಸಿಂಗರ್ರಾ?' ಅಂತ ಕೇಳಿದರು. `ಯಾವ ಮೋಹನ ಮುರುಳಿ ಕರೆಯಿತೊ' ಹಾಡಿದಾಗ ಓಪನ್ ಫಂಕ್ಷನದೊಳಗ ಅಡಿಗರು ತಬ್ಕೊಂಡು ಅತ್ತಬಿಟ್ಟಿದ್ದರು, ಜೀವಮಾನದೊಳಗ ಹೀಂಗ ಇದನ್ನ ಹಾಡದೋರನ್ನೇ ಕೇಳಿಲ್ಲ ಅಂತ.
*ನಿಮಗೆ ಪ್ರಿಯ ಲೇಖಕರು ಯಾರು?
ಮಂಟೋ ಕತೆಗಳು ಇಷ್ಟ. ಬದುಕಿನ ಕನ್ನಡಿಯನ್ನೇ ನಿಮ್ಮ ಮುಂದೆ ಹಿಡದಬಿಡ್ತಾನ. ಅಂವ ಇಂಡಿಯಾದ ಬೋದಿಲೇರ್. ಕಮೂ ಸಾತ್ರ್ರೆ ಬಹಳ ಇಷ್ಟ. ಸಾತ್ರ್ರೆನ `ಬೀಯಿಂಗ್ ಅಂಡ್ ನತಿಂಗನೆಸ್' ಪಿಯುಸಿ ಇರೋವಾಗಲೇ ಓದಿದ್ದೆ. `ಮಲೆಗಳಲ್ಲಿ ಮದುಮಗಳು' ಫಿಫ್ತ್ ಕ್ಲಾಸಿಗೆ ಓದಿದ್ದೆ. ಬೋದಿಲೇರ್ ಯಾಕಿಷ್ಟ ಅಂದರ, ಅವನು ತನ್ನ ಕಾಲಘಟ್ಟದಲ್ಲಿ ಕಂಡ ಎಲ್ಲ ನೋವುಗಳನ್ನು ಹೇಳೋಕೆ ಒಂದು ರಿದಂ ಹುಡ್ಕೊಂಡಿದ್ದಾನ. ನರಳಾಟದಲ್ಲೂ ಒಂದು ಸ್ಪಾರ್ಕ್ ಕಾಣ್ತಾನ. ಈ ಜೀವನದ ಈ ಮರಣದ ಆಚೆಯ ಬೆಳಕಿದೆಯಲ್ಲಾ, ಅದೇ ಕಾವ್ಯ ಅಂತಾನ. ನನಗ ಕಮೂನ `ಮೆಟಮಾರ್ಫಸಿಸ್' ಇಷ್ಟ. ಅದರ ನಾಯಕ ಒಂದಿನ ಹುಳಾ ಆಗಿಬಿಡ್ತಾನ. ಒಂದೊಂದು ಸಲ ಇವನೌನ ಹುಳಾ ಆಗಿ, ನಮಗ ಹ್ಯುಮಿಲೇಟ್ ಮಾಡಿದ ಎಲ್ಲಾರನೂ ಕಟಕಟ ಕಚ್ಚಬೇಕು ಅನಿಸ್ತಿತ್ತು. (ರೋಹಿಣಿ `ನೀನು ಹಂಗ ಕಚ್ಚಕೆ ಹೋದಾಗ ಯಾವನಾದರೂ ತುಳದು ಪಚಕ್ ಅನಿಸಿದ್ದರೆ ಏನು ಮಾಡ್ತಿ?' ಎಂದು ಛೇಡಿಸಿದರು.) ಶೇಕ್ಸಪಿಯರ್ ಓದಿದೆ. ಅವನಲ್ಲಿ ಇರಿಯೋದು ಕೊಲ್ಲೋದು ಇಷ್ಟ ಆಗಲಿಲ್ಲ. ಜಗತ್ತಿನೊಳಗೆ ಯುದ್ಧ ಆಗಬಾರದು. ಜನ ಸಾಯಬಾರದು. ನಾವು ಪ್ರಾಚೀನ ಯುದ್ಧಕಾವ್ಯಗಳ ನಾಯಕರನೆಲ್ಲ ದೇವರು ಮಾಡಿ ಇಟ್ಟಬಿಟ್ಟಿವಿ ಸುಡುಗಾಡು. ಆರತಿ ಎತ್ತೋದೇ ಎತ್ತೋದು.
*ಗಿಬ್ರಾನ್ ಬಗ್ಗೆ ಯಾಕೆ ಸೆಳೆತ?
ನೋಡ್ರಿ, ಅಮೆರಿಕಕ್ಕೆ ಹೋದಾಗ ಅವನಿಗೆ ಪಾಪಪ್ರಜ್ಞೆ ಕಾಡ್ತು. ನೇಟಿವಿಟಿಯಿಂದ ದೂರಿದ್ದ. ಆಗ ಫೋನಿಲ್ಲ ಟೆಲಿಗ್ರಾಮಿಲ್ಲ. ಆಗ ಕಾಣದೆಯಿದ್ದ ಒಬ್ಬ ಪೊಯೆಟೆಸ್ಗೆೆ ಬರೆದ ಪತ್ರಗಳು ಅವು-ನೂರು ವರ್ಷದ ಕೆಳಗ. ಅವನು ಮಕ್ಕಳ ಬಗ್ಗೆ ಆಡಿದ ಮಾತುಗಳು ಎಂಥವು! ಮಗು ತನ್ನ ತಲೆಯೊಳಗ ಏನು ಬರ್ತದ ಅದನ್ನೇ ಮಾಡ್ತದ. ನೀವು ಏನಾರ ಚಾಕಲೇಟ್ ಕೊಡೋಕೆ ಹೋಗರಿ, ಆಕಾಶದ ಕಡೆ ಮಾಡಿ ಅಂಗೈ ಹಿಡೀತದ. ಅನಂತತೆಯತ್ತ ಕೈಚಾಚತದ. ಇದನ್ನು ಪ್ರತಿ ಗ್ಯಾದರಿಂಗನೊಳಗ ಹೇಳತಿದ್ದೆ. ಯಾವ ಲೇಖಕ ಡೌನ್ ಟು ದ ಅರ್ತ್ ಇರ್ತಾನ, ಹೂ ಅಂಡರಸ್ಟ್ಯಾಂಡ್ಸ್ ದ ಪ್ರಾಬ್ಲಮ್ಸ್ ಆಫ್ ದಿ ಕಾಮನ್ ಪೀಪಲ್, ಅಂತಹ ರೈಟರ್ ನನಗಿಷ್ಟ. ಆಂಟಿಹ್ಯೂಮನ್ ರೈಟಿಂಗ್ ಯಾವತ್ತೂ ಇಷ್ಟಪಡೋದಿಲ್ಲ. ಮಣ್ಣು ತಂಪಿದ್ರೆ ಬೀಜ ಮೊಳಕೆ ಒಡೀತಾವ. ರೈಟಿಂಗಿನೊಳಗ ಡೆಲಿಕಸಿ ಆಫ್ ಮೈಂಡ್ ಅಂತಿರ್ತದ. ಅದನ್ನ ಬಿಟ್ಟು ಬರದರ ಜಸ್ಟ್ ಸ್ಟೇಟ್ಮೆಂಟ್ ಆಗತದ. ಪಂಪ ಕುಮಾರವ್ಯಾಸ ಬರದ ಎಷ್ಟು ವರ್ಷ ಆತು? ಯಾಕವರು ಇಷ್ಟ ಆಗ್ತಾರ? ಯಾಕಂದ್ರ ಅವರ ಭಾಷೆಯಲ್ಲಿ ಬದುಕಿನ ಒಂದು ಆರ್ದ್ರತೆ ತುಂಬ್ಯದ.
*ಲೇಖಕರು ಪರಂಪರೆಯಿಂದ ಪ್ರೇರಣೆ ಪಡೆಯೋದು, ಜೀರ್ಣಿಸಿಕೊಂಡು ತಮ್ಮದನ್ನಾಗಿ ಮಾಡಿಕೊಳ್ಳೋದು ಇರುತ್ತೆ. ನಿಮ್ಮ ಅನುಭವ ಏನು?
ಕುವೆಂಪು ಅವರ ಜೀವನದರ್ಶನ, ಕಾರಂತರ ಬದುಕಿನ ಜಟಿಲ ಸಮಸ್ಯೆಗಳನ್ನು ಕಾಣಿಸೋ ರೀತಿ, ಮಾಸ್ತಿಯವರ ಬದುಕಿನ ಸಹನೆ, ಇಂದಿರಾ ಅನುಪಮಾ ವಾಣಿ ತ್ರಿವೇಣಿ ಇವರಲ್ಲಿರೋ ಹೆಣ್ಮಕ್ಕಳ ಸೂಕ್ಷ್ಮದನಿ ಅರ್ಥಮಾಡಕೊಂಡೀನಿ. ಇಂದಿರಾರ `ತುಂಗಭದ್ರಾ' `ಸದಾನಂದ' ವಂಡರಫುಲ್ ನಾವಲ್ಸ್. ಆ `ಸದಾನಂದ'ನ್ನ ಎಷ್ಟು ಸತಿ ಓದಬೇಕ್ರಿ ನಾವು? ವಿಡಂಬನೆಯಿಂದ ರಫ್ಆಗಿ ಬರೆಯೋದನ್ನ ಇಷ್ಟಪಡಲ್ಲ. ಬಂಡಾಯ ಬೇಡಂತಲ್ಲ. ಅದು ಸಾಹಿತ್ಯದೊಳಗ ಸೂಕ್ಷ್ಮವಾಗಿ ಅಳವಡಿಕೆಯಾಗಬೇಕು. ಜಗತ್ತಿನ ಎಲ್ಲ ಸಾಹಿತ್ಯ ಓದಬೇಕು. ಆದರೆ ನಮ್ಮೊಳಗಿನ ಅನುಭವವನ್ನೇ ಬರೀಬೇಕು. ತಮ್ಮ ಅನುಭವವನ್ನ ಹೇಳೊ ಗಟ್ಟಿತನ ಕಮಲಾದಾಸ್ ಅಮೃತಾಪ್ರೀತಂ ಅವರಲ್ಲದ. ಅದು ನನ್ನ ಕಡೆ ಖಂಡಿತಾ ಸಾಧ್ಯವಿಲ್ಲ.
*ಇವರ ಗಟ್ಟಿತನ ನೀವು ಉಲ್ಲೇಖಿಸಿದ ಕನ್ನಡ ಲೇಖಕಿಯರಲ್ಲಿ ಇಲ್ಲವಾ?
ಏನೋ ಹೇಳಬೇಕು ಅಂತ ವಿಚಾರ ಮಾಡ್ಯಾರ. ಆದರ ಅವರೊಳಗ ಕಟ್ಟುಪಾಡದಾವ. ಹೆಣ್ಣಿನ ಅಸಹಾಯಕತೆ ದೌರ್ಬಲ್ಯ ತಳಮಳ ಶೋಷಣೆಯ ದನಿ ಅದಾವ. ಆದರ ಇವರಷ್ಟು ಡೇರಾಗಿ ಹೇಳೋಕೆ ಆಗಿಲ್ಲ. ಹಂಗ ಹೇಳೊ ತಾಕತ್ತು ಬರಬೇಕಾದರ ಪರಿಣಾಮ ಎದುರಿಸೊ ಧೈರ್ಯ ಬೇಕು. ನಾನು ಯಂಗಿದ್ದಾಗ ಬ್ಯೂಟಿಫುಲ್ ಇರಬಹುದು. ಯಾರೊ ಕಿರುಕುಳ ಕೊಟ್ಟಿರಬಹುದು. ನಾನು ಇಂಟಲೆಕ್ಚುವಲ್ ಪರ್ಸನ್ ಲವ್ ಮಾಡ್ತೀನಿ ಅಂತ ತಿಳ್ಕೋರಿ. ಬಟ್ ಐ ಕಾಂಟ್ ಎಕ್ಸಪ್ರೆಸ್ ಇಟ್. ನನಗ ಹತ್ತಿಕ್ಕೊ ಫ್ಯಾಮಿಲಿ ಬೈಂಡಿಂಗ್ಸ್ ಅವ.
*ಹತ್ತಿಕ್ಕಿದ್ದನ್ನು ಹೇಳಲೇಬೇಕಾದಾಗ ಏನು ಮಾಡ್ತೀರಿ?
ನಮ್ಮ ಬದುಕಿಗೆ ಗಂಡ-ಮಕ್ಕಳು-ಮನೆ ಅಂತ ಒಂದು ಚೌಕಟ್ಟಿಲ್ಲ. ಸಾದಾ ಪಿಚ್ಚರ್ ನಾವು. ಯಾರಾದರೂ ಮುಟ್ಟಿದರ ಹರದ ಹೋಗ್ತೀವಿ. ಅಷ್ಟು ಡೆಲಿಕೇಟ್ ಇರತೇವಿ. ನಮ್ಮ ಡಿಗ್ನಿಟಿ ಆಫ್ ಲೈಫ್ ಹೋಗತದ. ಆದರೆ ಯಾರೂ ಮುಟ್ಟಿದರೂ ಸೇಫ್ ಆಗಿರೋಕೆ ಸಬ್ ಕಾನ್ಶಿಯಸ್ ಕ್ಯಾರಕ್ಟರ್ಸ್ ಸೃಷ್ಟಿ ಮಾಡಕೋತೀವಿ. ನಮ್ಮ ಸಿಟ್ಟು ಸೆಡವು ಅದರ ತ್ರೂನೇ ಎಕ್ಸಪ್ರೆಸ್ ಮಾಡಿಬೀಡ್ತೀವಿ.
*ಬರೆಹ ಕಲಾಭಿವ್ಯಕ್ತಿ ಮಾತ್ರವಲ್ಲ, ವೈಯಕ್ತಿಕ ತಲ್ಲಣಗಳ ಬಿಡುಗಡೆ ಕೂಡ.
ಖಂಡಿತಾ. ಅಸಹಾಯಕತೆ, ದೇಹದ ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ವರ್ ಸ್ಟ್ರಾಂಗ್ ಇನ್ ಫ್ರಂಟ್ ಆಫ್ ಹಂಗರ್? ಯಾರು ನಮ್ಮನ್ನ ನೋಡಿದರೂ ಒಂದು ಕೆಟ್ಟಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ, ಅದು ಸಣ್ಣ ಮಾತಲ್ಲ. ಮತ್ತ ನಾವು ಹೆಲ್ತೀ ವಿಮೆನ್. ಎಲ್ಲಾ ಹಾರ್ಮೊನ್ಸ್ ಇಂಪ್ಯಾಕ್ಟ್ ಮಾಡ್ಯಾವ ನಮ್ಮ ಬ್ಯಾಡಿಮ್ಯಾಲ. ಗರ್ಭಕೋಶ ತಗಸೋಕೆ ಹೋದಾಗ, ಡಾಕ್ಟರು `ಯಾಕ್ರೀ ಮೇಡಂ? ಇಷ್ಟು ಹೆಲ್ತಿ ಅದೀರಿ, ಮದುವೆ ಯಾಕ ಆಗಲಿಲ್ಲ? ಎಷ್ಟು ಇಫೆಕ್ಟ್ ಆಗ್ಯದ ಬಾಡಿ ಮ್ಯಾಲ. ಮದುವೆಯಾಗಿ ಮಕ್ಕಳಾಗಿದ್ದರೆ ಹಾರ್ಮೋನ್ ಸೈಕ್ಲಿಂಗ್ ಸರಿಯಾಗತಿತ್ತು' ಅಂದರು. ಏನು ಹೇಳ್ತೀರಿ ಇದಕ್ಕ? ನಾವೆಷ್ಟೇ ಓದಿರಲಿ, ಒಬ್ಬ ಹೆಣ್ಣಿಗೆ ಎಮೋಶನಲ್ ಬೈಂಡಿಂಗ್ಸ್ ಬೇಕು. ಒಬ್ಬ ಸಂಗಾತಿ ಬೇಕು-ಅಂವ ಎಂಥಾವನೇ ಇರವಲ್ಯಾಕ. ನಮ್ಮ ಅನುಭವ ಅದ. ಉಧೋಉಧೋ ಎಲ್ಲಮ್ಮ ಅನ್ನೋ ಪರಿಸ್ಥಿತಿ ಬಂದುಬಿಡ್ತು ನಮಗ.
*ಅಕ್ಕ ಕೂಡ ತನಗೆ ತನ್ನ ದೇಹದ ಭಾವಗಳು ಕಾಡುವುದನ್ನು ಹೇಳಿಕೊಳ್ತಾಳೆ.
ಆಕಿಗೂ ಈ ಹಾರ್ಮೋನಿಯಸ್ ಚೇಂಜ್ಗಾಳು ಕಾಡ್ಯಾವ. ಒಂದು ಲೆಕ್ಕದಲ್ಲಿ ಆಕಿ ಸ್ಕಿಜೋಫ್ರೇನಿಕ್. ಗಂಡನ್ನ ತೃಪ್ತಿಪಡಿಸಲು ಆಗಲಿಲ್ಲ. ಅಂವ ಕೌಶಿಕ ಒಟ್ಟ ತಿರಸಟ್ಟಿ. ಆಕಿ ಬಾಡಿ ಕೋಮಲ ಇತ್ತು. ಶಿ ಕುಡ್ ನಾಟ್ ಟಾಲರೆಟ್ ಹಿಸ್ ವೈಲನ್ಸ್. ಗಂಡಸು ಬೇಕು. ಆದರ ಇಂಥಾ ಕ್ರೂರ ಗಂಡ ಬ್ಯಾಡ ಅಂತ್ಹೇಳಿ ಚೆನ್ನಮಲ್ಲಿಕಾರ್ಜುನನ್ನ ಹುಡ್ಕೊಂಡು ಹೋದಳು. ಶಿ ನೀಡ್ಸ್ ಎ ಕಂಪ್ಯಾನಿಯನ್. ಚೆನ್ನಮಲ್ಲಿಕಾರ್ಜುನ ತನ್ನ ಗಂಡ ಅಂತ ಸಿಂಬಲ್ ಇಟಕೊಂಡು ವಚನ ಬರದಳು. ಚೆನ್ನಮಲ್ಲಿಕಾರ್ಜುನನ ಬಿಟ್ಟು ಉಳದೋರನೆಲ್ಲ ಭಂಡರು ಅಂದಳು.
*ನೀವು ಮದುವೆ ಯಾಕೆ ಆಗಲಿಲ್ಲ?
ಬಡತನದಿಂದ. ಹೊಟ್ಟೆ ಹಸಿವಿನ ಮುಂದೆ ದೇಹದ ಹಸಿವು ಯಾವ ಲೆಕ್ಕ? ನಮ್ಮಪ್ಪ ಜಾತಕ ಅನ್ನಾಂವ. ನಾವು ಡಬಲ್ ಗ್ರಾಜುಯೇಟ್ಸು. ಸಾವಿರಕ್ಕ ಒಂದು ಜಾತಕ ಹೊಂದೋದು. ಅಪ್ಪಯ್ಯನ ಚಪ್ಪಲ್ ಹರದ ಹೋಗೋದು. ಹೊಸ ಚಪ್ಪಲ್ ಕೊಡಸಬೇಕಂದ್ರ ನಾವು ನಾಲಕ್ಮನಿ ಟೂಶನ್ ಜಾಸ್ತಿ ಹೇಳಬೇಕು. ಇಷ್ಟು ಬಡತನವಿದ್ದರೂ ಯಾರನ್ನೂ ಬೇಡಲಿಲ್ಲ. ಕಾಡಲಿಲ್ಲ. ಈ ಮಣ್ಣೊಳಗೆ ಸತ್ವ ಹೀರಿಕೊಂಡು ಬೆಳದಿವಿ.
*ಆಧುನಿಕ ಸ್ತ್ರೀವಾದದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಬೇಕು.
ಒಟ್ಟ ಈ ಸ್ತ್ರೀವಾದ ನನಗ ಇಷ್ಟವಿಲ್ಲ. ವಾಟೆವರ್ ಐ ಫೀಲ್, ಐ ರೈಟ್. ಈ ಬಾಡಿ ಹಾರ್ಮೋನ್ಸ್ ಚೇಂಜದೊಳಗ ನಾವೆಲ್ಲ ಒಂದೇ ಹ್ಯೂಮನ್ ಬೀಯಿಂಗ್ಸ್. ಅಟ್ ದಿ ಸೇಮ್ ಟೈಂ, ಹರ್ ಸೆಕ್ಸುವಲ್ ಸ್ಯಾಟಿಸಪ್ಯಾಕ್ಷನ್ ವಿಲ್ ಬಿ ಕಂಪ್ಲೀಟೆಡ್ ಬೈ ಎ ಮ್ಯಾನ್ ಓನ್ಲಿ. ದೆರೀಸ್ ಕಂಪಲ್ಸರಿ ಅಟೆಂಡನ್ಸ್ ಆಫ್ ಎ ಮ್ಯಾನ್ ಟು ವುಮನ್ ಲೈಫ್. ಜೀವನದ ತತ್ವ ಅದು. ಅರ್ಧನಾರೀಶ್ವರ ಕಾನ್ಸೆಪ್ಟ್ ಏನಂದರ, ಶಿವ-ಪಾರ್ವತಿ. ಪ್ರತಿ ಗಂಡೊಳಗೆ ಒಬ್ಬ ಹೆಣ್ಣಿರ್ತಾಳ. ಪ್ರತಿ ಹೆಣ್ಣೊಳಗ ಒಂದು ಗಂಡಿರ್ತಾನ. ಒಬ್ಬರು ಬಿಟ್ಟರೆ ಇನ್ನೊಬ್ಬರಿಲ್ಲ. ಈಗ ಯಾರಾದರೂ ಕಂಡರೆ ನನ್ನ ಫ್ರೆಂಡ್ ಅನ್ತೀನಿ. ಈಗ ಅದನ್ನೆಲ್ಲ ಮೀರಿ ಹೋಗಿಬಿಟ್ಟೀನಿ.
*ಹಿಂತಿರುಗಿ ನೋಡುವಾಗ ಜೀವನ ಹೇಗನಿಸುತ್ತೆ?
ನೋ ರಿಪೆಂಟೆನ್ಸ್. ವಿ ಮೇಂಟೆನ್ಡ್ ದಿ ಡಿಗ್ನಿಟಿ ಆಫ್ ಲೈಫ್. ಇಫ್ ಯು ಆರ್ ಮಾರಲಿ ಸ್ಟ್ರಾಂಗ್ ಇದು ಬರುತ್ತೆ.
*ನೀವು ಜೀವನದಲ್ಲಿ ದೊಡ್ಡದು ಅಂತ ಭಾವಿಸೊ ಆದರ್ಶ ಯಾವುದು?
ಪ್ರೀತಿ. ಅದಕ್ಕ ರೊಕ್ಕ ಬೇಡ ರೂಪಾಯಿ ಬೇಡ. ಸುಮ್ನೆ ಹಂಚಿಕೊಂಡು ಹೋಗಬೇಕು. ನಾನು ಜಾಬ್ ಕಳಕೊಂಡಾಗ ನಮ್ಮಕ್ಕ, `ಕಕ್ಕೂ, ಸಾಲಿ ಬಿಡಿಸಿದರೇನಾತು? ಒಂದು ಬೇವಿನಮರದ ಕೆಳಗ ಕುಂತು ನಾಲ್ಕು ಮಕ್ಕಳಿಗೆ ಪ್ರೀತಿ ಹಂಚು' ಅಂದಿದ್ಲು. ಪ್ರೀತಿ ಹಂಚಿದಷ್ಟೂ ತನು ತುಂಬತೈತಿ. ಬಾವಿಗೆ ಮ್ಯಾಲಿಂದ ನೀರುಬಿಟ್ಟರ ಕಳಕಾಗೈತಿ. ಕೆಳಗಿಂದ ಜಗ್ಗಿಜಗ್ಗಿ ತಗದ ಹಂಚಿದರ ಸೆಲಿ ಉಕ್ಕತೈತಿ. ಈಗ ನೀವು ನಮ್ಮನಿಗೆ ಬಂದಿರಿ. ಯಾವ ಕಾರಣಕ್ಕ ಬಂದಿರಿ? ಕಾರಣವಿಲ್ಲದ ಪ್ರೀತಿ. ನೀವೆಲ್ಲೇ ಹೋಗರಿ, ಪ್ರೀತಿ ಇದ್ದರೆ ಮಾತ್ರ ಒಳ್ಳೇ ಬರಹ ಹುಟ್ಟತದ. ಅಂತಃಕರಣ ಆದ್ರ್ರತೆ ಇಲ್ಲದೆ ದೊಡ್ಡ ಸಾಹಿತ್ಯ ಹುಟ್ಟೋಲ್ಲ. ಈಗ ಈ ಅಂತಃಕರಣ ಇರೋ ಎಷ್ಟೆಷ್ಟು ಒಳ್ಳೇ ಕತೆ ಕವಿತೆಗಳು ಬರ್ತಿದಾವ್ರೀ ಹೊಸ ತಲೆಮಾರಿನಿಂದ. ಸಂತೋಷ ಆಗ್ತದ.
*ನೀವು ಸಾಮಾನ್ಯವಾಗಿ ಬರೆಯುವ ಕ್ರಮ ಯಾವುದು?
ಒಂದು ಕತೆ ಬರಿಯೋಕೆ ಹತ್ತಿದರೆ, ಮೊದಲನೇ ಸಾಲಿನಿಂದ ಕೊನೇ ಸಾಲಿನವರೆಗೆ ಎಂದೂ ಭಾಷೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಭಾಷೆ ದುಡಿಸಿಕೊಳ್ಳೋದು ಅಂತಾರಲ್ಲ, ನನಗ ಅರ್ಥಾಗವೊಲ್ಲದು. ನಿತ್ಯ ಜೀವನದೊಳಗೆ ಮಂದಿ ಮಾತಾಡೋದು ಕೇಳ್ರಿ ನೀವು. ಎಂತೆಂಥ ರೂಪಕ ಬಳಸ್ತಾರ? ಬದುಕು ಕಂಡರೆ ಸಾಕು, ಭಾಷೆ ತಾನೇ ದುಡೀತದ. ಕತೆಯಾಗಲಿ ಕವಿತೆಯಾಗಲಿ, ಬಂಧಗಿಂಧ ಏನೂ ವಿಚಾರ ಮಾಡೋದಿಲ್ಲ. ಒಂದು ಸಿಟ್ಟಿಂಗನೊಳಗ ಸೀದಾ ಬರದಬೀಡೋದು. ಐವತ್ಮೂರನೇ ವಯಸ್ಸಿಗೆ ಬರವಣಿಗೆ ಆರಂಭ ಮಾಡಿದೆ. ಮೂವತ್ತು ಪುಸ್ತಕ ಬಂದಾವ. ಅದೆಷ್ಟು ಗಂಟಿತ್ತೊ ಅದನ್ನೆಲ್ಲ ಕರಗಿಸಿಬಿಟ್ಟೆ. ಸ್ಟಿಲ್ ಐ ಹ್ಯಾವ್ ಲಾಟ್ ಆಫ್ ಸ್ಟ್ರೆಂತ್. ಬರೀವಾಗ ನನಗೇ ತಿಳಿದಿದ್ದಂಗ ಒಂದು ಪಾಸಿಟಿವ್ನೆಸ್ ಬಂದುಬಿಟ್ಟಿರ್ತದ.
*ನಿಮಗೆ ಬಹಳಷ್ಟು ಹಿರಿಕಿರಿ ಲೇಖಕರ ಸಂಪರ್ಕ ಇತ್ತು. ಹ್ಯಾಗೆ ಸಾಧಿಸಿದಿರಿ?
ಹ್ಯಾಗಂದ್ರಿ? ಕನ್ನಡದಲ್ಲಿ ಯಾರಾದರೂ ಚೂರು ಒಳ್ಳೇದು ಬರದರ ಸಾಕು, ಹುಡುಕ್ಯಾಡಿ ಪುಸ್ತಕ ತರಸ್ಕೋತೀನಿ. ಓದಿದ ಕೂಡಲೇ ಅವರ ವಿಳಾಸ ಹುಡುಕಿ ಅಭಿಪ್ರಾಯ ಬರೀತೀನಿ. ಅನಂತಮೂರ್ತಿ, ಗಿಬ್ರಾನನ ಪ್ರೇಮಪತ್ರಗಳು ಓದಿ ರಾತ್ರಿ ಹನ್ನೊಂದಕ್ಕೆ ಫೋನು ಮಾಡಿದ್ದರು. ಕಾರಂತಜ್ಜರನ್ನ ನಮ್ಮ ಸಾಲಿಗೆ ಕರೆಸಿದ್ದೆವು. ಅವರಿಗೆ ಜ್ವರ ಬಂದಿತ್ತು. ನಮ್ಮನ್ಯಾಗಿದ್ದರು. ತಿಳೀಸಾರು ಅನ್ನ ಹಾಕಿ, ಎರಡು ದಿನ ಅವರ ಸೇವಾ ಮಾಡಿದೆ. ಎಲ್ಲೆಲ್ಲೊ ತಿರುಗಾಡಿ ಬಂದಿದ್ರಲ್ಲ, ಧೋತರಾ ಬನಿಯನ್ ಗಲೀಜಾಗಿದ್ದವು. ಪಾಪ ವಯಸ್ಸಾದೋರು ಎಲ್ಲಿ ಒಕ್ಕೋಬೇಕರಿ? ಒಗದು ಹಾಕಿದೆ. ಗಾಬರಿ ಆಗಿಬಿಟ್ಟಿದ್ದರು ಅವರು. ಊರಿಗೆ ಹೋದಾಗ ಮಾಲಿನಿ ಮುಂದ ಹೇಳಿದ್ದೇ ಹೇಳಿದ್ದು `ಈ ಮಕ್ಕಳು ನನ್ನ ಧೋತ್ರಾ ಒಗದು ಹಾಕಿದ್ದರು' ಅಂತ.
*ಬೇರೆ ಹವ್ಯಾಸ ಯಾವುದು?
ಓಲ್ಡ್ ಸಾಂಗ್ ಭಾಳ ಕೇಳ್ತೀನ್ರಿ. ಹಿಂದಿ ಸಿನಿಮಾ ಹೆಚ್ಚು ನೋಡ್ತೀನಿ. ಸಾಹಿರ್ ಲುಧಿಯಾನ್ವಿ, ಜಾವೇದ್ ಅಖ್ತರ್ ಹಾಡು ಇಷ್ಟ. ಹಿಂದಿ ಸಿನಿಮಾ ರಿಚ್ ಆಗಲಿಕ್ಕೆ ಉರ್ದು ಸಾಂಗುಗಳೇ ಕಾರಣ. ಪ್ರತಿಹಾಡಿನ ಮೀನಿಂಗನ್ನ ಧ್ಯಾನಿಸ್ತೀನಿ. `ತೇರಾ ಮೇರಾ ಪ್ಯಾರ್ ಅಮರ್, ಫಿರ್ ಕ್ಯೂ ಮುಝಕೊ ಲಗತಾ ಹೈ ಡರ್'. ಇಲ್ಲಿ ಇಂಟೆನ್ಸಿಟಿ ಆಫ್ ಲವ್ ಅದೆಯಲ್ಲ, ಅದನ್ನ ಕನ್ನಡದೊಳಗೆ ಹೇಳಾಕ ಬರೋದಿಲ್ಲ. ಸಾಹಿರ್ ಈಜ್ ಗ್ರೇಟ್!
*ಓದುಗರ ಜತೆ ನಿಮ್ಮ ಅನುಭವ ಎಂಥದು?
ಬಜಾರಿಗೆ ಹೋದರೆ, ಕಾಯಿಪಲ್ಲೆ ಮಾರೋಳು ಹಸೀನಾ ಅನ್ನೋವಾಕಿ, `ಬಾಯಾರೆ, ಹೊಸ ಪುಸ್ತಕ ಇದ್ದರೆ ಕೊಡ್ರೀ' ಅಂತಾಳ. ಆಕೀದು ಎಸೆಸೆಲ್ಸಿ ಆಗ್ಯಾದ. ನನ್ನೆಲ್ಲ ಪುಸ್ತಕ ಓದ್ಯಾಳ. `ಲೇ, ಹಿಡಕೊಂಡ ತಪ್ಪಡಿ ಇಳಸೋಕೆ ಟೈಮಿಲ್ಲ ನಿನಗ. ಯಾವಾಗ ಓದ್ತೀಯೇ?' ಅಂದರ, `ರಾತ್ರಿ ಓದ್ತೀನ್ರಿ' ಅಂತಾಳ. ಇದು ಒಬ್ಬ ರೈಟರಿಗೆ ಸಿಗೋ ನಿಜವಾದ ಬಹುಮಾನ. ಮತ್ತೊಬ್ಬ ರೈತ ಅಣ್ಣಿಗೇರಿಯಂವ, ನನ್ನ ದೊಡ್ಡ ಫ್ಯಾನ್. ಫೋನು ಮಾಡ್ತಾನ, ಯಾವುದಾದರೂ ಪುಸ್ತಕ ಬಂದರೆ ಹೇಳ್ರಿ, ತರಸ್ಕೋತೀನಿ ಅಂತ. ಹಡಗಲಿ ಎಕ್ಸ್ ಎಂಎಲ್ಎ. ಒಬ್ಬರು `ಖಲೀಲ್ ಗಿಬ್ರಾನ್' ಪುಸ್ತಕ ಓದಿ ಒಂತಾ¸ಸು ಮಾತಾಡಿದರು. ಮಂದಿಗೆ ಮುಟ್ಟೈತೊ ಇಲ್ರೀ ನನ್ನ ರೈಟಿಂಗು? ಹಂಗ ನೋಡಿದರೆ, ಯೂನಿವರ್ಸಿಟಿ ಹುಡುಗರೇ ಪುಸ್ತಕ ಓದಂಗಿಲ್ಲ.
*ನಿಮ್ಮ ಬರೆಹದಲ್ಲಿ ಮೃತ್ಯುಪ್ರಜ್ಞೆ ಮತ್ತೆಮತ್ತೆ ಬರುತ್ತೆ.
ಬಿಕಾಸ್, ಡೆತ್ ಈಜ್ ರಿಲಿಫ್, ಹ್ಯಾಪಿನೆಸ್. ಏನೈತರಿ ಈ ದರಿದ್ರ ಬಾಡಿಯೊಳಗ. ಆದರೆ ಸೌಲ್ ಈಸ್ ಲೈಫ್. ನಮ್ಮಪ್ಪಯ್ಯ ಸತ್ತಾಗ ಅವನ ಮಾರಿ ಇಷ್ಟು ಶಾಂತ ಇತ್ತರಿ. ಡೆತ್ತನ್ನು ನಾವು ಕಣ್ಣಾರೆ ನೋಡೀವಿ. ಅಪ್ಪಯ್ಯನಿಗೆ ಅನ್ನನಾಳದ ಕ್ಯಾನ್ಸರ್ ಆಗಿತ್ತು- ಕರದ ಎಣ್ಣಿಯೊಳಗ ಕೆಲಸ ಮಾಡಿಮಾಡಿ. `ಅರವತ್ತು ವರ್ಷ ಬದುಕೀನಿ. ಈಗ ಸಾಯ್ತೀನಿ ಅಂತ ವಿಚಾರ ಮಾಡಬ್ಯಾಡ್ರಿ' ಅನ್ನೋರು. ವೆನ್ ಐ ವಾಜ್ ಆನ್ ಡೆತ್ ಬೆಡ್, ಆತು ಇನ್ನು ದಾಟಿಹೋಗ್ತೀನಿ. ಎರಡಕ್ಷರ ಬರೆಯೋಣ ಅಂತ ಶುರುಮಾಡಿದೆ. ಸಾವು ಇವತ್ತೇ ಬರಲಿ. ಮಕ್ಕಳಿಲ್ಲ ಮರಿಲ್ಲ. ಅದಕ್ಯಾಕ ಚಿಂತೆ? ಅಕ್ಸೆಪ್ಟಿಂಗ್ ಡೆತ್ ಈಸ್ ಲವ್ ಆಫ್ ಲೈಫ್. ಟ್ರೂತ್ ಆಫ್ ಲೈಫ್. ಯಾರಾದರೂ ಸತ್ತರೆ ನಾನು ಭಾಳ ಅಳೋಕೆ ಹೋಗಲ್ಲ. ಯಪ್ಪಾ, ಪಾರು ಮಾಡಿದೆಯಲ್ಲಪ್ಪ ಇವರನ್ನ ಅಂತೀನಿ. ಇದು ನಮ್ಮ ನಿಮ್ಮ ಕೊನೀ ಭೆಟ್ಟಿ ಆಗಬಹುದು, ಯಾರಿಗ್ಗೊತ್ತು? ಆದರೆ ಲೈಫ್ ಈಜ್ ಬ್ಯೂಟಿಫುಲ್. ವೆದರ್ ಐ ಮೇಬಿ ಹಿಯರ್ ಆರ್ ನಾಟ್, ಲೈಫ್ ಈಜ್ ಗೋಯಿಂಗ್ ಆನ್.
********************
ಲೇಖಕಿ ಕಸ್ತೂರಿ ಬಾಯರಿಯವರು ಈಚೆಗೆ ನಿಧನರಾದರು. ಅವರು ಕರಾವಳಿಯಿಂದ ಬದಾಮಿಗೆ ವಲಸೆ ಮಾಡಿದ ತಮ್ಮ ಕುಟುಂಬ ಜತೆ ಬಾಲ್ಯದಲ್ಲೇ ಬಂದವರು. ವೃತ್ತಿಯಿಂದ ಆಂಗ್ಲ ಶಿಕ್ಷಕಿಯಾಗಿದ್ದ ಅವರು, ಬಾಳಿನ ಕೊನೆಯ ವರ್ಷಗಳಲ್ಲಿ ಬರೆಹ ಆರಂಭಿಸಿದರು. ಕವಿತೆ, ಕತೆ, ಪತ್ರ, ಪ್ರಬಂಧ ಮತ್ತು ಅನುವಾದ ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದರು. ಅವರ ಸಾಹಿತ್ಯವು, ಬಾಲ್ಯದ ಬಡತನ, ವೃತ್ತಿಜೀವನದ ಅಭದ್ರತೆ ಹಾಗೂ ದೈಹಿಕ ಬೇನೆಗಳಿಂದ ಗಾಯಗೊಂಡ ವ್ಯಕಿತ್ವವೊಂದು, ಬದುಕಿಗೆ ಅರ್ಥ ಕಂಡುಕೊಳ್ಳಲು ಮಾಡಿದ ಪ್ರಯತ್ನದಂತಿದೆ. ಭಾವುಕ ತೀವ್ರತೆಯಿಂದ ಪ್ರವಹಿಸುವ ಭಾಷೆ ಮತ್ತು ಶೈಲಿ ಅದರ ಲಕ್ಷಣ. ಅಲ್ಲಿ ಭಗ್ನಹೃದಯದ ಸ್ತ್ರೀಪಾತ್ರಗಳು ಸಾಮಾನ್ಯವಾಗಿದ್ದು, ಅವು ಬಾಳ ಬಿಕ್ಕಟ್ಟುಗಳಲ್ಲಿ ಹಾಯುತ್ತ, ನೆಮ್ಮದಿ ಅರಸುತ್ತ, ತಮ್ಮತನ ಕಂಡುಕೊಳ್ಳಲು ಸೆಣಸಾಡುವ ಸನ್ನಿವೇಶಗಳಿವೆ. ಧರ್ಮ-ಜಾತಿ-ಭಾಷೆಯ ಸರಹದ್ದುಗಳಾಚೆ ಸಮಸ್ತ ಮನುಷ್ಯರಲ್ಲಿ ನೆಲೆಸಿರುವ ಪ್ರೀತಿ ಮತ್ತು ಮನುಷ್ಯತ್ವವನ್ನು ದರ್ಶನದಂತೆ ಅರಸುವುದು ಅವರ ಸಾಹಿತ್ಯದ ಆಶಯ.
ಕಸ್ತೂರಿಯವರು ಕರಾವಳಿ ಹಾಗೂ ಬಿಜಾಪುರ ಸೀಮೆಯ ಜನಜೀವನದ ವಿವಿಧ ಮುಖಗಳನ್ನು ತಮ್ಮ ಬರೆಹದಲ್ಲಿ ಶೋಧಿಸಿದವರು. ಅವರ ಕತೆಗಳು ಎರಡು ವಿಭಿನ್ನ ಪ್ರಾದೇಶಿಕ ಸೀಮೆಗಳ ಅನುಭವವನ್ನು ಹಾಸುಹೊಕ್ಕಿನ ಎಳೆಗಳನ್ನಾಗಿ ಮಾಡಿ ನೇದ ಪತ್ತಲದಂತಿವೆ. ಅವರು ಸೋದರಿ ರೋಹಿಣಿಯವರ ಜತೆ ಬದಾಮಿಯಲ್ಲಿ ವಾಸವಾಗಿದ್ದರು. ಇಬ್ಬರೂ ಸಾಹಿತ್ಯದ ಗಾಢ ಓದುಗರು; ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ತರಿಸಿಕೊಂಡು ಬಂದವರಿಗೆಲ್ಲ ಹಂಚುತ್ತಿದ್ದವರು. ಅವರು ಡಯಾಬಿಟೀಸಿನ ದೆಸೆಯಿಂದ ದೃಷ್ಟಿ ಕಳಕೊಂಡು ತಮಗೆ ಓದು ಸಾಧ್ಯವಾಗುತ್ತಿಲ್ಲ ಎಂದು ಹಲುಬುತ್ತಿದ್ದರು. ನಾನೂ ಬಾನೂ ಕಳೆದ ವರ್ಷದ ನವೆಂಬರ್ 8ರಂದು ಬದಾಮಿಗೆ ಹೋದೆವು. ಅವರೊಟ್ಟಿಗೆ ಒಂದು ದಿನವಿದ್ದೆವು. ಆಗ ನಡೆದ ಮಾತುಕತೆಯಿದು. ಈ ಮಾತುಕತೆಯಲ್ಲಿರುವ ತಲ್ಲಣಗಳು ಬಾಯರಿಯವರವು ಮಾತ್ರವಲ್ಲ; ಬಡತನ, ಸಂಪ್ರದಾಯ, ಕಾಯಿಲೆ, ಅಭದ್ರತೆಯೊಳಗೆ ಪಾಡು ಪಡುವ ಎಲ್ಲರವು ಎಂಬಂತೆ ಸಾರ್ವತ್ರೀಕರಣ ಪಡೆದಿವೆ. ಇಲ್ಲಿರುವ ಅಂತರ್ಧ್ರ್ಮೀಯ ಮನುಷ್ಯ ಸಂಬಂಧಗಳು, ಕಠೋರ ಸಂಪ್ರದಾಯವು ತನ್ನ ಜಿಗುಟುತನ ಕಳೆದುಕೊಳ್ಳುವ ಮತ್ತು ದುಡಿವ ಜನ ಬದುಕು ಕಟ್ಟಿಕೊಳ್ಳುವ ಚಿತ್ರಗಳು ಅಪೂರ್ವವಾಗಿವೆ. ಇಲ್ಲಿ ಹೊಮ್ಮಿರುವ ಚಿಂತನೆ, ದರ್ಶನ ಬದುಕಿನ ಕುದಿಯೊಳಗಿಂದಲೇ ಮೂಡಿದ್ದು. ಸಾವು ಬದುಕಿರುವ ಎಲ್ಲರೂ ಒಮ್ಮೆ ಮುಖಾಮುಖಿ ಮಾಡಬೇಕಾದ ಸತ್ಯ. ಸಾವಿಗೆ ಮುನ್ನ ಬದುಕಿದ್ದವರು ಆಡುವ ಮಾತು, ಹಂಚಿಕೊಳ್ಳುವ ಅನುಭವ ಮತ್ತು ಚಿಂತನೆಗಳು, ಮುರಿದ ಬದುಕನ್ನು ಕಟ್ಟಿಕೊಳ್ಳುವ ಎಲ್ಲರಿಗೂ ಬೇಕಾದ ಜೀವನತತ್ವವಾಗಿರುತ್ತವೆ.
(ಮಯೂರ ಏಪ್ರಿಲ್, 2022)
ಫೋಟೊ: ಕಲೀಮ್ ಉಲ್ಲಾ
Rahamath Tarikere
dStonoep1
e
l
,
m
D
2
e
2
8
1
i8
7
0
0
l2
c
b
t
6
maa
e
4
r
·
Subscribe to:
Post Comments (Atom)
No comments:
Post a Comment