Powered By Blogger

Thursday, February 23, 2023

ನರೇಶ್ ಮುಳ್ಳೇರಿಯ - ಇಪ್ಪತ್ತೊಂದನೆಯ ಶತಮಾನದ ಕಾಸರಗೋಡಿನ ಕನ್ನಡ ಸಾಹಿತ್ಯ /Kasaragod Kannada Literature

#ಇಪ್ಪತ್ತೊಂದನೆಯ_ಶತಮಾನದ_ಕಾಸರಗೋಡಿನ_ಕನ್ನಡ_ಸಾಹಿತ್ಯ ಆಧುನಿಕ ಕನ್ನಡಸಾಹಿತ್ಯ ಚಿಗುರೊಡೆಯುವಲ್ಲಿ‌ ಕಾಸರಗೋಡಿನ ಮಣ್ಣು ಕೂಡ ಪ್ರಧಾನ ಪಾತ್ರ ವಹಿಸಿದ್ದು ಚಾರಿತ್ರಕ ಸತ್ಯ. ಸಾಂಪ್ರದಾಯಿಕ ಛಂದಸ್ಸುಗಳಿಂದ ಭಿನ್ನವಾಗಿ ಪ್ರಾಸತ್ಯಾಗವೇ ಮೊದಲಾದ ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡವರಲ್ಲಿ ಮೊದಲಿಗರಾದ ಮಂಜೇಶ್ವರ ಗೋವಿಂದ ಪೈಗಳನ್ನು ಆಧುನಿಕ ಕನ್ನಡಸಾಹಿತ್ಯದ ಹರಿಕಾರರಲ್ಲೊಬ್ಬರು ಎನ್ನಬಹುದು. ನವೋದಯದ ಪ್ರಮುಖ ಲೇಖಕರಾದ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಬೇಕಲ ರಾಮ ನಾಯಕ, ಲಕ್ಷ್ಮೀ ನಾರಾಯಣ ಪುಣಿಂಚತ್ತಾಯ, ವೆಂಕಟ ರಾಜ ಪುಣಿಂಚತ್ತಾಯ ಸಿರಿಬಾಗಿಲು ವೆಂಕಪ್ಪಯ್ಯ, ಪೆರ್ಲ ಕೃಷ್ಣಭಟ್, ಲಲಿತಾ ಎಸ್ ಎನ್ ಭಟ್ ಮೊದಲಾದವರಿಂದ ತೊಡಗಿ ನವ್ಯ ಸಾಹಿತ್ಯದ ಪ್ರಮುಖರಾದ ಕೆ. ವಿ ತಿರುಮಲೇಶ್, ಎಂ ವ್ಯಾಸ, ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ ಕಾಸರಗೋಡು ಮೊದಲಾದವರು ಇಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಬೆಳೆಸಿದರು. ನವೋದಯ ನವ್ಯಯುಗಗಳಲ್ಲಂತೂ ಕಾಸರಗೋಡಿನಲ್ಲಿ ಮನೆಗೊಬ್ಬರಂತೆ, ಬೀದಿಗೊಬ್ಬರಂತೆ ಕವಿಗಳು ಕಲಾವಿದರು ಯಕ್ಷ ಕಲಾವಿದರು ಸಾಹಿತಿಗಳು ಜೀವಿಸಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ದೇಶಭಕ್ತಿ, ನಾಡು ನುಡಿಪ್ರೇಮಗಳ ಕಿಡಿ ಹಚ್ಚಿದ ನವೋದಯ ಕಾಲದಲ್ಲಿ ಕಾಸರಗೋಡಿನಲ್ಲಿ ಉತ್ತುಂಗದಲ್ಲಿದ್ದ ಕನ್ನಡಚಳುವಳಿ ಸಹಜವಾಗಿ ಸಾಹಿತಿಗಳ ಸಂಖ್ಯೆಯನ್ನೂ ಸಾಹಿತ್ಯಕೃತಿಗಳ ಸಂಖ್ಯೆಯನ್ನೂ ಪಂಡಿತರಿಂದ ತೊಡಗಿ ಶ್ರೀಸಾಮಾನ್ಯನವರೆಗೆ ಜನರ ಕಾವ್ಯೋತ್ಸಾಹವನ್ನು ಹೆಚ್ಚಿಸಿತ್ತು. ನವ್ಯಕಾಲದಲ್ಲೂ ಸಾಹಿತ್ಯಕೃಷಿ ಹುಲುಸಾಗಿ ಬೆಳೆಯಿತು. ಅಖಿಲ ಕರ್ನಾಟಕ ಮಟ್ಟದಲ್ಲಿ ಸುಪ್ರಸಿದ್ಧರಾದ ಹಲವು ಮಂದಿ ಕವಿಗಳು, ಸಂಶೋಧಕರು, ಕತೆಗಾರರು, ಕಾದಂಬರಿಕಾರರು, ವಿನೋದಲೇಖಕರು, ಪತ್ರಕರ್ತರು ಮೂಲತಃ ಕಾಸರಗೋಡಿನವರೆಂಬುದು ನಮಗೆ ಹೆಮ್ಮೆಯ ವಿಷಯ. ಕಾಸರಗೋಡಿನಲ್ಲಿದ್ದು ಸಾಹಿತ್ಯ ವ್ಯವಸಾಯ ಮಾಡಿದವರು, ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆ ಮಾಡಿದವರು ಹೀಗೆ ಎರಡು ಬಗೆಯ ಸಾಹಿತಿಗಳು ಇದ್ದರು. ಕೆ ವಿ ತಿರುಮಲೇಶ್ ,ಸಾರಾ ಅಬೂಬಕರ್, ನಾ ಮೊಗಸಾಲೆ, ಕೆ ಟಿ ಗಟ್ಟಿ, ವಸಂತಕುಮಾರ ಪೆರ್ಲ, ಡಿ ಎನ್ ಶಂಕರ ಭಟ್, ಈಶ್ವರಯ್ಯ, ಜನಾರ್ದನ ಎರ್ಪಕಟ್ಟೆ ಮೊದಲಾದವರು ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆಯನ್ನು ಮಾಡಿದ ಲೇಖಕರು. ನವೋದಯ ಮತ್ತು ನವ್ಯಕಾಲದಲ್ಲಿ ಕಾವ್ಯದಲ್ಲಿ ಸಂಖ್ಯೆಯಲ್ಲೂ ಸತ್ವದಲ್ಲೂ ಮಿಗಿಲಾದ ಕೃತಿಗಳು ಹುಟ್ಟಿಕೊಂಡವು. ಕಾವ್ಯ, ಸಂಶೋಧನೆ ಮತ್ತು ಕಾದಂಬರಿ ಪ್ರಕಾರಗಳಿಗೆ ನವೋದಯದ ಕೊಡುಗೆ ಅಪಾರ. ನವೋದಯದ ಹೆಚ್ಚಿನ ಕೃತಿಗಳಲ್ಲಿ ದೇಶ ನಾಡು ನುಡಿಗಳ ಬಗ್ಗೆ ಭಕ್ತಿ ಮತ್ತು ಪ್ರೇಮವಲ್ಲದೆ ಕಾಸರಗೋಡಿನ ಕನ್ನಡ ಚಳುವಳಿಗೆ ಬೆಂಬಲವೂ ವ್ಯಕ್ತವಾಗಿತ್ತು. ನವ್ಯಕಾಲದಲ್ಲಿ ಕಾವ್ಯವಲ್ಲದೆ ನಾಟಕ, ಸಣ್ಣಕತೆ, ಕಾದಂಬರಿ ಪ್ರಕಾರಗಳು ಬೆಳೆದವು. ನವ್ಯಯುಗದ ಪ್ರಧಾನ ಲಕ್ಷಣಗಳಾದ ವ್ಯಕ್ತಿಕೇಂದ್ರಿತ ಶೋಧನೆ, ಮನಸ್ಸು ಕೇಂದ್ರಿತ ಜಿಜ್ಞಾಸೆ, ವಾಸ್ತವನಿಷ್ಠೆ ಕಾಸರಗೋಡಿಗರ ಕೃತಿಗಳಲ್ಲೂ ವ್ಯಕ್ತವಾದವು. ಪ್ರಗತಿಶೀಲ, ಬಂಡಾಯ, ದಲಿತ, ಸ್ತ್ರೀವಾದಿ ಸಾಹಿತ್ಯಪ್ರಕಾರಗಳು ಕಾಸರಗೋಡಿನಲ್ಲಿ ಅಷ್ಟಾಗಿ ಬೆಳೆಯಲಿಲ್ಲ. ಇದಕ್ಕೆ ನವೋದಯ ನವ್ಯ ಚಳುವಳಿಗಳ ಪ್ರಭಾವವೂ ಮಲಯಾಳೀಕರಣದ ವಿರುದ್ಧ ಕನ್ನಡಿಗರು ಒಂದಾಗಿರಬೇಕಾದ ಅನಿವಾರ್ಯತೆಯೂ ಕಾರಣವಾಗಿದ್ದಿರಬಹುದು. ಪ್ರಮುಖ ದಲಿತ ಹಾಗೂ ಮಹಿಳಾ ಸಾಹಿತಿಗಳು ಇಲ್ಲಿದ್ದರೂ ಅವರು ಹೆಚ್ಚಾಗಿ ಸಾಹಿತ್ಯದ ಮುಖ್ಯವಾಹಿನಿಯಲ್ಲಿದ್ದುಕೊಂಡು ಬರೆದರು. ಹಾಗಿದ್ದರೂ ಜನಾರ್ದನ ಎರ್ಪಕಟ್ಟೆ, ರಾಧಾಕೃಷ್ಣ ಉಳಿಯತ್ತಡ್ಕ ಮೊದಲಾದವರ ಬರಹಗಳಲ್ಲಿ ದಲಿತಪ್ರಜ್ಞೆ ಲಲಿತಾ ಎಸ್ ಎನ್ ಭಟ್, ಲಕ್ಷ್ಮೀ ಕುಂಜತ್ತೂರು, ಮಹೇಶ್ವರಿ, ಅನುಪಮಾ ಪ್ರಸಾದ್ ಮೊದಲಾದವರ ಕೃತಿಗಳಲ್ಲಿ ಸ್ತ್ರೀಪ್ರಜ್ಞೆ ಸುಪ್ತವಾಗಿ ಹರಿಯುತ್ತಿದ್ದುದನ್ನು ಗುರುತಿಸಬಹುದು. ಕನ್ನಡ ಸಾಹಿತ್ಯಕ್ಕೆ ಕಾಸರಗೋಡಿನ ಪ್ರಧಾನ ಕೊಡುಗೆ ಕಾವ್ಯವೇ ಆಗಿದೆ. ಕನ್ನಡ ತುಳು ಭಾಷೆಗಳ ಪ್ರಾಚೀನತೆಗೆ ಸಾಕ್ಷ್ಯವನ್ನೊದಗಿಸಿದ ಮಹತ್ವದ ಸಂಶೋಧನೆಗಳು ಗೋವಿಂದ ಪೈ, ಪುಣಿಂಚತ್ತಾಯ ಮೊದಲಾದವರಿಂದ ನಡೆದಿದೆ. ಗಮನಾರ್ಹ ನಾಟಕಗಳು, ಕಾದಂಬರಿಗಳು ಪ್ರಕಟವಾಗಿವೆ. ಸಣ್ಣ ಕತೆಯಲ್ಲಿ ಎಂ ವ್ಯಾಸ, ಕೆ ಟಿ ಗಟ್ಟಿ, ಅನುಪಮಾ ಪ್ರಸಾದ್ ಕಾದಂಬರಿಯಲ್ಲಿ ಸಾರಾ ಅಬೂಬಕರ್, ಗೋಪಾಲಕೃಷ್ಣ ಪೈ, ಮೊಗಸಾಲೆ ಮೊದಲಾದವರು ಅಖಿಲ ಕರ್ನಾಟಕ ಖ್ಯಾತಿ ಪಡೆದಿದ್ದಾರೆ. ಹಾಗಿದ್ದರೂ ಸಂಖ್ಯೆಯಲ್ಲೂ ಸತ್ವದಲ್ಲೂ ಮೆರೆದದ್ದು ಕಾವ್ಯವೇ. ಯಕ್ಷಕವಿ ಪಾರ್ತಿಸುಬ್ಬನಿಂದ ತೊಡಗಿ ಆಧುನಿಕ ಕಾಲದ ರಾಷ್ಟ್ರಕವಿ ಗೋವಿಂದ ಪೈ, ಕನ್ನಡದ ಕಹಳೆಯೂದಿದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ತಿರುಮಲೇಶ್, ವೇಣುಗೋಪಾಲ ಹಾಗೂ ಅನೇಕ ಕವಿಗಳು ಕಾಸರಗೋಡಿನ ಖ್ಯಾತಿಯನ್ನು ಬೆಳಗಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕಾಸರಗೋಡು ಜಿಲ್ಲೆಯ ರಚನೆಯ ನಂತರದ ಅದರಲ್ಲೂ ಇಪ್ಪತ್ತೊಂದನೇ ಶತಮಾನದ ಈಚೆಗಿನ ಆಧುನಿಕ ಕನ್ನಡಸಾಹಿತ್ಯದ ಬೆಳವಣಿಗೆಗೆ ಮಹತ್ವ ನೀಡಿ ಒಟ್ಟು ಆಧುನಿಕ ಸಾಹಿತ್ಯದತ್ತ ಇಣುಕುನೋಟ ಬೀರಬೇಕಾಗಿದೆ. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಬದುಕನ್ನು ಪ್ರಭಾವಿಸುತ್ತಿರುವ ಕ್ಷಿಪ್ರ ಬದಲಾವಣೆಗಳು, ವ್ಯಕ್ತಿ- ಸಮಾಜ-ಮಾನವೀಯ ಸಂಬಂಧಗಳಲ್ಲಾಗುತ್ತಿರುವ ಪಲ್ಲಟಗಳು, ಬೌದ್ಧಿಕ ಭಾವುಕ ನೆಲೆಗಳಲ್ಲಿ ಜರಗುತ್ತಿರುವ ಪರಿವರ್ತನೆಗಳು ಹೀಗೆ ವರ್ತಮಾನದ ತಲ್ಲಣಗಳು ನವ್ಯೋತ್ತರ ಯುಗದಲ್ಲಿ ಕವಿಗಳನ್ನು ಕಾಡಿದೆ. ಹಾಗಿದ್ದರೂ ಸಶಕ್ತ ಕಾವ್ಯ ಚಳುವಳಿಯೊಂದನ್ನು ನಾವು ಕಾಣಲಿಲ್ಲ. ಕಾವ್ಯಪ್ರಜ್ಞೆಯನ್ನು ನಿರ್ದೇಶಿಸುವ ಪಂಥಗಳಿಲ್ಲದ ಮುಕ್ತಸ್ವಾತಂತ್ರ್ಯವನ್ನು ಹಾಗೂ ಆ ಅನುಕೂಲತೆಗಳನ್ನು ಕಾಸರಗೋಡಿನ ಸಾಹಿತಿಗಳು ಅನುಭವಿಸುತ್ತಿದ್ದಾರೆ. ಪ್ರತಿಭೆ ಮತ್ತು ಅಧ್ಯಯನದ ಬಲದಿಂದ ಕಾವ್ಯಪರಿಕರಗಳನ್ನು ಕೈವಶಮಾಡಿಕೊಂಡ ತಿರುಮಲೇಶ್, ಮೊಗಸಾಲೆ, ವಸಂತಕುಮಾರ ಪೆರ್ಲರಂತಹವರು ಹೊಸ ಕಾವ್ಯಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಬೆಚ್ಚಿ ಬೀಳಿಸುವ ವೈಚಾರಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸವಾಲುಗಳ ಪ್ರಪಂಚದಲ್ಲಿ ಈಗ ತಾನೇ ಕಣ್ಣುಬಿಡುತ್ತಿರುವ ಎಳೆಯ ಸಾಹಿತಿಗಳು ಹೆಜ್ಜೆಯೂರುತ್ತಿದ್ದಾರೆ. ಇವೆರಡು ವಿಭಾಗಗಳ ನಡುವಿನ ತಲೆಮಾರಿನ ಮುಖ್ಯಕವಿಗಳಲ್ಲಿ ಈಗಾಗಲೇ ಕಾವ್ಯಲೋಕದಲ್ಲಿ ನೆಲೆಕಂಡಿರುವ ಕೆಲವರು ತಾತ್ತ್ವಿಕ ಹುಡುಕಾಟವನ್ನೂ ಇತರರು ಕಾವ್ಯಕ್ಕೆ ಭಾವಾರ್ದ್ರತೆಯನ್ನು ತರುವ ಪ್ರಯತ್ನವನ್ನೂ ಒಟ್ಟಿನಲ್ಲಿ ಮಾನವೀಯ ಸಂಬಂಧಗಳ ಶೋಧನೆಯನ್ನು ಮುಖ್ಯ ಕಾಳಜಿಯಾಗಿರಿಸಿಕೊಂಡಂತಿದೆ. ಈ ನಡುವೆ ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ, ಎಂ ವ್ಯಾಸ, ಬಿ ಕೃಷ್ಣ ಪೈ, ವೆಂಕಟರಾಜ ಪುಣಿಂಚತ್ತಾಯ, ಎರ್ಪಕಟ್ಟೆ, ತುಳಸಿ ವೇಣುಗೋಪಾಲ್,ರವಿಶಂಕರ ಒಡ್ಡಂಬೆಟ್ಟು, ಕಯ್ಯಾರರಂತಹ ದೊಡ್ಡ ಹಾಗೂ ಭರವಸೆಯ ಸಾಹಿತಿಗಳನ್ನು ಕಳೆದುಕೊಂಡವರಾಗಿದ್ದೇವೆ. ಕಾಸರಗೋಡು ಮೂಲದ ಧನಂಜಯ ಕುಂಬಳೆ, ಟಿ ಎ ಎನ್ ಖಂಡಿಗೆ, ಮೋಹನ ಕುಂಟಾರು ಮೊದಲಾದವರು ಕರ್ನಾಟಕದಲ್ಲಿದ್ದುಕೊಂಡು ಕಾವ್ಯವ್ಯವಸಾಯ ಮುಂದುವರೆಸಿದ್ದಾರೆ. ಕಾಸರಗೋಡಿನಲ್ಲಿದ್ದುಕೊಂಡು ಕಳೆದ ದಶಕಗಳಲ್ಲಿ ಕಾವ್ಯರಂಗದಲ್ಲಿ ಸಕ್ರಿಯರಾಗಿ ಪುಸ್ತಕ ಪ್ರಕಟಿಸಿದ ಪ್ರಮುಖರಲ್ಲಿ ರಮಾನಂದ ಬನಾರಿ, ವಿಜಯಲಕ್ಷ್ಮಿ ಶಾನುಭಾಗ್, ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಬೆಳ್ಳೂರು ಮತ್ತು ಶ್ರೀಕೃಷ್ಣಯ್ಯ ಅನಂತಪುರ,, ನರಸಿಂಹ ಭಟ್, ಯು. ಮಹೇಶ್ವರಿ, ಹರಿಕೃಷ್ಣ ಭರಣ್ಯ ಮೊದಲಾದವರನ್ನು ಹೆಸರಿಸಬಹುದು. ನಾ ದಾ ಶೆಟ್ಟಿ, ಎಂ ದಿವಾಕರ ರೈ, ಹರೀಶಪೆರ್ಲ, ವಿರಾಜ್ ಅಡೂರು, ವಿ ಬಿ ಕುಳಮರ್ವ, ಹಮೀದ್ ಮಂಜೇಶ್ವರ, ಸುಂದರ ಬಾರಡ್ಕ, ಗಂಗಾರತ್ನ ಪಾತೂರು, ನರೇಶ್ ಮುಳ್ಳೇರಿಯ, ವೆಂಕಟ ಭಟ್, ಪಿ ಎನ್ ಮೂಡಿತ್ತಾಯ, ಶೈಲಜಾ ಪುದುಕೋಳಿ, ಕೇಶವ ಶೆಟ್ಟಿ ಆದೂರು, ರತ್ನಾಕರ ಮಲ್ಲಮೂಲೆ, ಲಕ್ಷ್ಮೀ ಕೆ, ಪದ್ಮಾವತಿ ಏದಾರು, ಶ್ರೀಶಕುಮಾರ, ಬಾಲ ಮಧುರಕಾನನ, ಸಿ ಎಚ್ ಗೋಪಾಲಭಟ್, ಜಯ ಮಣಿಯಂಪಾರೆ, ಬಾಲಕೃಷ್ಣ ರೈ ಕಳ್ವಾಜೆ, ಪಿ ಪುರುಷೋತ್ತಮ ಭಟ್, ಕಕ್ಕೆಪ್ಪಾಡಿ ಶಂಕರ ನಾರಾಯಣ ಭಟ್, ದಿವ್ಯಗಂಗಾ ಪಿ, ಸೌಮ್ಯಾ ಪ್ರಸಾದ್, ಉದಯರವಿ ಕೊಂಬ್ರಾಜೆ, ರಾಜ್ಯಶ್ರೀ ಕುಳಮರ್ವ, ಜ್ಯೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ಪ್ರಭಾವತಿ ಕೆದಿಲಾಯ, ಶ್ಯಾಮಲಾ ರವಿರಾಜ್, ನಾರಾಯಣ ಭಟ್, ನವೀನ್ ಎಲ್ಲಂಗಳ, ಗೀತಾಲಕ್ಷ್ಮಿ ಪುಂಡೂರು, ದಿವಾಕರ ಬಲ್ಲಾಳ್, ಎಸ್ ಎನ್ ಭಟ್ ಪೆರ್ಲ, ಲತಾ ಆಚಾರ್ಯ ಬನಾರಿ ಹೀಗೆ ಬಹಳ ಮಂದಿ ಬರೆಯುತ್ತಿದ್ದಾರೆ, ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯುತ್ತದೆ. ಹಿರಿಯ ಕಿರಿಯ ಸಾಹಿತಿಗಳಲ್ಲಿ ಇಲ್ಲಿ ಹೆಸರು ಬಿಟ್ಟು ಹೋದವರದೇ ಸಂಖ್ಯೆ ಹೆಚ್ಚಿರಬಹುದು. ಪುಟ್ಟಲೇಖನವೊಂದರ ಇತಿಮಿತಿಯಲ್ಲಿ ಸಾಹಿತ್ಯರಂಗದ ಸಮಗ್ರದರ್ಶನ ಅಸಾಧ್ಯ, ಕ್ಷಮೆಯಿರಲಿ. ಕಾಸರಗೋಡಿಗರ ಬರವಣಿಗೆ ಮುಖ್ಯವಾಗಿ ಭಾವಪ್ರಧಾನವಾದುದು. ಇಲ್ಲಿನ ವಿಶಿಷ್ಟ ಭಾಷಿಕ ಸಾಂಸ್ಕೃತಿಕ ರಾಜಕೀಯ ಪರಿಸ್ಥಿತಿಗಳ ಒತ್ತಡ ಕಾರಣವಿರಬಹುದು. ವಿಭಿನ್ನ ಮನೆಮಾತುಗಳಿದ್ದು ಶಾಲೆಗಳಲ್ಲಿ ಕಲಿತ ಗ್ರಾಂಥಿಕ ಕನ್ನಡವೇ ಹೆಚ್ಚಿನ ಕೃತಿಗಳಲ್ಲಿ ಅಭಿವ್ಯಕ್ತಿಮಾದ್ಯಮವಾಗಿದೆ. ಸಾಂಸ್ಕೃತಿಕವಾಗಿ ಕನ್ನಡಿಗನೆಂಬ ಅಸ್ತಿತ್ವ ಸಾಧಿಸಬೇಕಾದ ತುರ್ತು ಬರಹಗಳಲ್ಲಿ ಗೋಚರಿಸುತ್ತದೆ. ಭಾವ ಪ್ರಕಟಣೆಗೆ ಕಾವ್ಯವೇ ಪ್ರಧಾನ ಮಾರ್ಗವಾಗಿರುವುದನ್ನು ಗಮನಿಸುವಾಗ ಕಾಸರಗೋಡಿನ ವಿಶಿಷ್ಟ ಭಾಷಾ ರಾಜಕೀಯ ಹಾಗೂ ವಿವಿಧತೆಯಲ್ಲಿ ಏಕತೆಯಂತಿರುವ ಸಾಂಸ್ಕೃತಿಕ ಪರಿಸ್ಥಿತಿ ಇತರ ಪ್ರಕಾರಗಳಿಗಿಂತಲೂ ಕಾವ್ಯಸೃಷ್ಟಿಯನ್ನು ಹೆಚ್ಚಾಗಿ ಉತ್ತೇಜಿಸಿರುವುದು ಸಹಜವೆನಿಸುತ್ತದೆ. ಕೇರಳದಲ್ಲಿ ಕನ್ನಡಿಗನಾಗಿ ಬಾಳಬೇಕಾದ ಅನಿವಾರ್ಯತೆ, ಅನಾಥ ಪ್ರಜ್ಞೆ, ಮಲಯಾಳೀಕರಣಕ್ಕೆ ಪ್ರತಿರೋಧ, ಹೋರಾಟದ ಕೆಚ್ಚು ಭಾವನಾತ್ಮಕವಾಗಿ ಬರಹಗಾರರ ಕಾವ್ಯಕಸುಬಿಗೆ ಪೂರಕವಾಗಿವೆ. ಕಾಸರಗೋಡಿನ ಈಚೆಗಿನ ಕಾವ್ಯಕೃಷಿಯನ್ನು ಗಮನಿಸಿದರೆ ನವುರು ಭಾವಾಭಿವ್ಯಕ್ತಿ, ತಾತ್ವಿಕ ಹುಡುಕಾಟ, ಅನುಭಾವಿಕ ಶೋಧನೆಗಳನ್ನು ಮುಖ್ಯವಾಗಿ ಕಾಣಬಹುದು. ಜಾಗತೀಕರಣ, ಕೋಮುವಾದ,ಭಯೋತ್ಪಾದನೆ, ರಾಜಕೀಯ ಹಿಂಸೆ, ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಅಸ್ಥಿರತೆಗಳ ಪ್ರತಿಫಲನ ಸಾಹಿತ್ಯಕೃತಿಗಳಲ್ಲಿ ಗಾಢವಾಗಿಯಲ್ಲದಿದ್ದರೂ ಪರೋಕ್ಷವಾಗಿ ಹಣಕಿವೆ. ಆದರೆ ಸಾಮಾಜಿಕ ಕಳಕಳಿ ಆಕ್ರೋಶ ಅಥವಾ ಅಸಹನೆಯಾಗದೆ ಮಾನವೀಯ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಕಟಗೊಂಡಿವೆ. ಬೇರೆ ಬೇರೆ ಕಾರಣಗಳಿಂದ ದುರ್ಬಲಗೊಳ್ಳುತ್ತಿರುವ ಕನ್ನಡ ಚಳುವಳಿಯ ಪ್ರಭಾವ ಈಚೆಗಿನ ಕವಿಗಳಲ್ಲಿ ಪ್ರತ್ಯಕ್ಷವಾಗಿ ಕಾಣದಿದ್ದರೂ ಸುಪ್ತವಾಗಿದೆ. ಹೋರಾಟಗಾರ ಧೀಮಂತನಾಯಕ ಯು ಪಿ ಕುಣಿಕುಳ್ಳಾಯರ 'ಇವರೆಲ್ಲಿಯವರು' ಕೃತಿಯ ಹೆಸರೇ ಸೂಚಿಸುವಂತೆ ಕನ್ನಡಿಗರ ಆತಂಕ ತಳಮಳಗಳನ್ನು ಬಿಂಬಿಸುತ್ತದೆ. ಅಬ್ಬರದ ಭಾವಾವೇಶ, ನಾಟಕೀಯತೆ, ವಿಡಂಬನೆ, ಆಕ್ರೋಶ, ವ್ಯಕ್ತಿಪ್ರಜ್ಞೆಗಳ ಬದಲು ನವುರು ಭಾವಗಳಿಗೆ, ಮಾನವೀಯ ಸಂಬಂಧಗಳಿಗೆ, ದೇಸೀಯತೆಗೆ, ಸಮಾಜಮುಖಿ ಧೋರಣೆಗೆ ಈಗ ಒತ್ತು ನೀಡಲಾಗುತ್ತಿದೆ. ಭಾಷೆ, ಲಯ, ಛಂದಸ್ಸುಗಳಲ್ಲಿ ಪ್ರಯೋಗಶೀಲತೆ ಜತೆ ಗಜಲ್, ಚುಟುಕ, ಹಾಯಿಕು ಮೊದಲಾದ ಪ್ರಕಾರಗಳಲ್ಲೂ ಕೆಲವರು ಕೈಯ್ಯಾಡಿಸುತ್ತಿದ್ದಾರೆ. ನವೋದಯ ನವ್ಯಯುಗದಲ್ಲಿ ಧುಮ್ಮಿಕ್ಕಿದ ಕಾವ್ಯಧಾರೆ ಈಗ ಹಲವು ಕವಲೊಡೆದು ವಿಶಾಲ ಬಯಲಲ್ಲಿ ಸಾಗುತ್ತಿದೆ. ನವೋದಯದ ಭಾಷೆ, ಲಯ, ಪ್ರಾಸ ಛಂದೋಪ್ರಯೋಗ ಕೆಲವೆಡೆ ಕಾಣಿಸುತ್ತಿದೆ. ಲಯಾನ್ವಿತ ಕಾವ್ಯ, ಭಾವಗೀತೆ, ಭಕ್ತಿಗೀತೆ, ಭಾಮಿನಿ ಷಟ್ಪದಿ, ವೈದ್ಯಕಾವ್ಯ, ಯಕ್ಷಪ್ರಸಂಗ ಹೀಗೆ ಹಲವಾರು ಸ್ವರೂಪಗಳು, ಮಾಧ್ಯಮಗಳು ಕಾವ್ಯಕ್ಕೆ ಒಲಿದಿವೆ. ಕನ್ನಡದಲ್ಲಿ ಬರೆಯುತ್ತಿರುವ ಕವಿಗಳು ತುಳು, ಹವ್ಯಕ, ಕರಾಡ, ಕೊಂಕಣಿ ಮೊದಲಾದ‌ ಭಾಷೆಗಳಲ್ಲೂ ಬರೆಯುತ್ತಿದ್ದು ಬಹುಭಾಷಾ ಕವಿಗೋಷ್ಠಿಗಳು ಹೊಸನುಡಿಗಟ್ಟುಗಳ ತುಡಿತಕ್ಕೆ ಸಾಕ್ಷಿಗಳಾಗಿವೆ. ಕನ್ನಡ ಮಲಯಾಳ ಆಂಗ್ಲ ಕೃತಿಗಳ ಅನುವಾದ ಕೂಡ ಪ್ರಕಟಗೊಂಡಿವೆ. ತುಲನಾತ್ಮಕವಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ವಿವಿಧ ವರ್ಗ ಸಮುದಾಯಗಳಿಂದ ಬಂದ ಲೇಖಕರು ಬರೆಯುತ್ತಿರುವುದು ಶುಭಸೂಚನೆ. ನಿಮ್ನ ದಲಿತ ಅಲ್ಪಸಂಖ್ಯಾಕ ಜಾತಿವರ್ಗದವರೂ ಮಹಿಳೆಯರೂ ಬಾಲಪ್ರತಿಭೆಗಳೂ ತುಳು ಮಲಯಾಳ ಕೊಂಕಣಿ ಮರಾಠಿ ಮನೆಮಾತಿನವರೂ ಕನ್ನಡದಲ್ಲೇ ಬರೆಯುತ್ತಿರುವುದು ಕನ್ನಡವೇ ಈ ನೆಲದ ಕೊರಳೆಂಬುದನ್ನು ಸಾರಿಹೇಳುತ್ತದೆ. ಬೇಕಲ ರಾಮನಾಯಕ, ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾದವರು ಅಡಿಪಾಯ ಹಾಕಿದ ಕಾಸರಗೋಡಿನ ಆಧುನಿಕ‌ ಕಥನಸಾಹಿತ್ಯ ನವ್ಯಯುಗದಲ್ಲಿ ಬೆಳವಣಿಗೆ ಕಂಡಿತು. ಕಾಸರಗೋಡಿನ ಸಣ್ಣಕತೆಗಳು ಎಂಬ ಪ್ರಾತಿನಿಧಿಕ ಕೃತಿಯಲ್ಲಿ ಕಾಸರಗೋಡಿನ ಆಧುನಿಕ ಸಣ್ಣಕತೆಗಳ ದರ್ಶನವನ್ನು ಕಾಣಬಹುದು. ಬಾಲಕೃಷ್ಣ ಕೋಳಾರಿ, ಜನಾರ್ದನ ಎರ್ಪಕಟ್ಟೆ, ನಾರಾಯಣ ಕಂಗಿಲ, ನಾ ಮೊಗಸಾಲೆ, ಸಾರಾ ಅಬೂಬಕರ್, ಕೆ ವಿ ತಿರುಮಲೇಶ್, ವಸಂತಕುಮಾರ ಪೆರ್ಲ, ಕೆ ಟಿ ಗಟ್ಟಿ, ನಾ ದಾ ಶೆಟ್ಟಿ, ಹರೀಶ ಪೆರ್ಲ, ಕೆ ಟಿ ಶ್ರೀಧರ್, ಕೆ ಟಿ ವೇಣುಗೋಪಾಲ್, ಟಿಎಎನ್ ಖಂಡಿಗೆ, ಗೋಪಾಲಕೃಷ್ಣ ಪೈ, ಮೊದಲಾದ ಹಲವು ಮಂದಿ ಲೇಖಕರು ಉತ್ತಮ ಸಣ್ಣ ಕತೆಗಳನ್ನು ಬರೆದಿದ್ದಾರೆ. ಕಾಸರಗೋಡನ್ನು ಸಣ್ಣಕತೆಯ ಲೋಕದಲ್ಲಿ ಗುರುತಿಸುವಂತೆ ಮಾಡಿದವರು ಎಂ ವ್ಯಾಸರು. ತಮ್ಮ ವಿಶಿಷ್ಟ ಭಾಷೆ ಶೈಲಿ ತಾತ್ವಿಕ ದೃಷ್ಟಿಕೋನದ ಕತೆಗಳ ಮೂಲಕ ಸಣ್ಣಕತೆಗಳ ಲೋಕವನ್ನು ಆಳಿದವರು. ವ್ಯಾಸರ ನಿಧನದ ನಂತರ ಮತ್ತು‌ ಮೊದಲು ಬರೆಯುತ್ತಿರುವ ಕಾಸರಗೋಡಿನ ಮುಖ್ಯ ಕತೆಗಾರ ಶಶಿಭಾಟಿಯಾ ಅವರ ಭಾಷೆ, ವಸ್ತು, ಪ್ರಯೋಗಗಳಲ್ಲಿ ಅವರದೇ ವೈಶಿಷ್ಟ್ಯವಿದೆ. ಕೃಷ್ಣವೇಣಿ ಕಿದೂರು, ಶಂಕರ ಎಂ ಮಂಜೇಶ್ವರ ಮೊದಲಾದವರ ಹಲವು ಕತೆಗಳು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಗಂಭೀರ ಮಾನವೀಯ ಮೌಲಿಕ ಚಿಂತನೆಗಳಿಂದ ಕೂಡಿದ ಹಲವು ಕತೆಗಳನ್ನು ಬರೆದಿರುವ ಅನುಪಮಾ ಪ್ರಸಾದ್ ಕತೆ ಮತ್ತು‌ಕಾದಂಬರಿಗಳ ಮೂಲಕ ಕರ್ನಾಟಕದಾದ್ಯಂತ ಹೆಸರು ಪಡೆದಿದ್ದಾರೆ. ಸುಂದರ ಬಾರಡ್ಕ, ಸುಭಾಷ್ ಪಟ್ಟಾಜೆಯವರ ಮಾರ್ಗವೂ ಸಾಹಿತ್ಯಕವಾದುದು. ಹರೀಶ್ ಪೆರ್ಲ, ಸತ್ಯನಾರಾಯಣ ಮೊದಲಾದವರು ವಿನೋದದ ಧಾಟಿಯ ಕತೆಗಳ ಮೂಲಕ ಗಂಭೀರವಿಚಾರಗಳನ್ನು ಮನಸ್ಸಿಗೆ ತಲಪಿಸುತ್ತಾರೆ. ಕಳ್ಳಿಗೆ ಮಹಾಬಲ ಭಂಡಾರಿ, ಲಲಿತಾ ಎಸ್ ಎನ್ ಭಟ್, ಕೆ. ಟಿ ಗಟ್ಟಿ,ಸಾರಾ ಅಬೂಬಕರ್, ನಾ ಮೊಗಸಾಲೆ,ಕೆ ವಿ ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಲಕ್ಷ್ಮೀ ಕುಂಜತ್ತೂರು, ಗೋಪಾಲಕೃಷ್ಣ ಪೈ, ಸರಸ್ವತೀ ಶಂಕರ್, ಅನುಪಮಾ ಪ್ರಸಾದ್ ಮೊದಲಾದ ಲೇಖಕರು ಸತ್ವಯುತವಾದ ಕಾದಂಬರಿಗಳನ್ನು ನೀಡಿದ್ದಾರೆ. ಕಾದಂಬರಿ ಕ್ಷೇತ್ರದಲ್ಲಿ ೨೧ ನೇ ಶತಮಾನದ ಸಾಧನೆಗಳನ್ನು ಗುರುತಿಸುವುದಾದರೆ ಗೋಪಾಲಕೃಷ್ಣ ಪೈ ಅವರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ ಸ್ವಪ್ನಸಾರಸ್ವತ, ಅನುಪಮಾ ಪ್ರಸಾದ್ ಅವರ ಪಕ್ಕಿಹಳ್ಳದ ಹಾದಿಗುಂಟ ಬಹುಮುಖ್ಯ ಕಾದಂಬರಿಗಳೆಂದು ಹೆಸರಿಸಬಹುದು. ಅನುವಾದ ಕ್ಷೇತ್ರದಲ್ಲಿ ಪಾರ್ವತಿ ಐತಾಳ್, ಕಾಸರಗೋಡು ಅಶೋಕಕುಮಾರ್ ಮೊದಲಾದವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಪಳ್ಳತ್ತಡ್ಕ ಅರುಣ್ ಕುಮಾರ್ ಅವರ ಆಂಗ್ಲ ಕಾದಂಬರಿಯನ್ನು ರತ್ನಾಕರ ಮಲ್ಲಮೂಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವೇಣುಗೋಪಾಲ ಕಾಸರಗೋಡು, ಕೆ ಟಿ ಶ್ರೀಧರ್, ರತ್ನಾಕರ ಮಲ್ಲಮೂಲೆ, ವಿಜಯಲಕ್ಷ್ಮೀ ಶಾನುಭೋಗ್ ಮೊದಲಾದವರು ನಾಟಕ ಸಾಹಿತ್ಯದಲ್ಲಿ ದುಡಿದಿದ್ದಾರೆ. ಕಯ್ಯಾರರು, ಪುಣಿಂಚತ್ತಾಯರು, ಬೇಕಲ ರಾಮನಾಯಕರು, ರಾ ಮೊ ವಿಶ್ವಾಮಿತ್ರ, ಲಕ್ಷ್ಮೀ ಕುಂಜತ್ತೂರು, ಪಟ್ಟಾಜೆ ಕೃಷ್ಣಭಟ್, ಗಣಪತಿ ದಿವಾಣ, ಪೆರ್ಲ ಕೃಷ್ಣಭಟ್, ಎಂವಿ ಭಟ್ ಮಧುರಕಾನನ, ಬಾಲ ಮಧುರಕಾನನ, ಗೋಪಾಲಕೃಷ್ಣ ಭಟ್, ವಿ ಬಿ ಕುಳಮರ್ವ ಹೀಗೆ ಮಕ್ಕಳ ಸಾಹಿತ್ಯದಲ್ಲಿ ಸೇವೆಸಲ್ಲಿಸಿದವರ ಪಟ್ಟಿಯೂ ದೊಡ್ಡದಿದೆ. ಮೂಡಿತ್ತಾಯರಿಂದ ತೊಡಗಿ ಹರೀಶ್ ಪೆರ್ಲ ಸತ್ಯನಾರಾಯಣರವರೆಗೆ ವಿನೋದಸಾಹಿತ್ಯರಂಗಕ್ಕೂ ಕೊಡುಗೆ ನೀಡಿದ ಸಾಹಿತಿಗಳು ಕಾಸರಗೋಡಿನಲ್ಲಿದ್ದಾರೆ. ಒಟ್ಟಿನಲ್ಲಿ ಆಧುನಿಕ ಕನ್ನಡಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಸಂಖ್ಯೆಯಲ್ಲಾಗಲೀ ಸತ್ವದಲ್ಲಾಗಲೀ ಕಡೆಗಣಿಸುವಂತಹುದಲ್ಲ. -ನರೇಶ್ ಮುಳ್ಳೇರಿಯಾ See less

Tuesday, February 7, 2023

ರಹಮತ್ ತರೀಕೆರೆ - ಕಾಮರೂಪದ ಪ್ರಭಾಕರ { M S Prabhakar }

ಕಾಮರೂಪದ ಪ್ರಭಾಕರ ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ'ಕ್ಕೆ; ಇನ್ನೊಂದು-`ಕಾಮರೂಪಿ' ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. ೫೦ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು. `ಕಾಮರೂಪ' ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ. ಅವರ ಮನೆಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರ ಮುಖದ ಮೇಲೆ ಜ್ಞಾನೋದಯವಾದ ಸಿದ್ಧನಂತೆ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು. ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ. ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ. ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ. ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ. ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ. ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’ ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ ೭೫ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲ್ಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ. ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು. ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ -ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ. ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ. ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ ೫೦ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು. ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ. (ಹನ್ನೆರಡು ವರುಷಗಳ ಹಿಂದಿನ ಲೇಖನ)

M. S Prabhakara | ಎಂ. ಎಸ್. ಪ್ರಭಾಕರ

Thursday, February 2, 2023

ಸುಮಿತ್ರಾ ಎಲ್ ಸಿ - ಹೆಣ್ಣೆಂಬ ಶಬುದ { ಹೆಣ್ನನ್ನು ಕುರಿತ ಆಧುನಿಕ ಕವಿತೆಗಳ ಮಂಜರಿ }

ಹೆಣ್ಣನ್ನು ಕುರಿತ ಕವಿತೆಗಳು, ಹೆಣ್ಣೆಂಬ ಶಬುದ. ಲೇಖಕಿಯರೆ ಬರೆದ ಕವಿತಾ ಸಂಕಲನಗಳು ಈ ಮೊದಲು ಬಂದಿವೆ. ಎಂ ಉಷಾ ಸಂಪಾದಿಸಿರುವ ಹೆಣ್ಣೆಂಬ ಶಬುದ ಎಂಬ ಪ್ರಸ್ತುತ ಸಂಕಲನದ ವೈಶಿಷ್ಟ್ಯ ಎಂದರೆ ಕನ್ನಡ ಕಾವ್ಯದ ಆರಂಭ ದಿಂದಲೂ ಹೆಣ್ಣಿನ ಕುರಿತು ಬರೆದ ಕವಿತೆಗಳ ಸಂಗ್ರಹ ಇದು.ಬೇಂದ್ರೆ,ಕುವೆಂಪು,ಮಾಸ್ತಿ ಯಿಂದ ತೊಡಗಿ.ಇವತ್ತಿನ ವರೆಗಿನ ಕವಿಗಳ ವರೆಗೆ. ಗಂಡು ರಚನೆಗಳಲ್ಲಿ ಹೆಣ್ಣನ್ನು ಮೆಚ್ಚುವ, ಕೀರ್ತಿಸುವ, ಆರಾಧಿಸುವ, ಟೀಕಿಸುವ ( ಕೆ ಎಸ್ ನರಸಿಂಹಸ್ವಾಮಿ ಅವರ ನಲವತ್ತರ ಚೆಲುವೆ) ಕವಿತೆಗಳೆ ಇವೆ , ಇದು ಗಂಡಿನ ದೃಷ್ಟಿ..ಆದರೆ ಹೆಣ್ಣು ಕವಿಗಳು ಬರೆದ ಕವಿತೆ ಗಳಲ್ಲಿ ಇರುವ ಹೆಣ್ಣಿನ ಚಿತ್ರ ಅನನ್ಯವಾದುದು, ವೈವಿಧ್ಯದಿಂದ ಕೂಡಿರುವುದು. ಈ ಹಿನ್ನೆಲೆಯಲ್ಲಿ ಇದು ಬಹು ಮುಖ್ಯ ಆಕರ ಗ್ರಂಥ ವಾಗಿದೆ. ಆಧುನಿಕ ಕನ್ನಡ ಕವಿತೆಗಳು ಹೆಣ್ಣನ್ನು ಪ್ರತಿನಿಧಿಸಿರುವ ವಿಧಾನ ಎಂತದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಉದ್ದೇಶದೊಂದಿಗೆ ಈ ಕಾವ್ಯ ಮಂಜರಿ ( Anthology of poetry) ಯನ್ನು ಸಿದ್ಧಪಡಿಸಲಾಗಿದೆ. ಎಂದು ಸಂಪಾದಕಿ 22 ಪುಟಗಳ ದೀರ್ಘಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಈ ಪ್ರಸ್ತಾವನೆ ಬಹಳ ಉಪಯುಕ್ತವಾಗಿದೆ .ಅಧ್ಯಯನ ಪೂರ್ಣವಾಗಿದೆ. ಇದುವರೆಗೆ ಪ್ರಾತಿನಿಧಿಕವಾದ ಹಲವು ಮಹಿಳಾ ಕಾವ್ಯಮಂಜರಿಗಳು ಪ್ರಕಟವಾಗಿದ್ದರು ಹೆಣ್ಣನ್ನು ವಸ್ತುವಾಗಿಸಿಕೊಂಡು ಸ್ತ್ರೀ ಪುರುಷ ಇಬ್ಬರು ಬರೆದ ಕವನ ಸಂಕಲನಗಳು ಇರಲಿಲ್ಲ. ಲೇಖಕಿಯರೇ ಬರೆದ ಮಹಿಳಾ ಕಾವ್ಯ 2013, ಕಾವ್ಯ ಬೋಧಿ 2014, ಅವಳ ಕವಿತೆ, ೨೦೧೫, ಮಹಿಳಾ ಕಾವ್ಯ ಸಂಗ್ರಹ 2017, ಬೆಂಕಿ ಒಳಗನ ಬೆಳಕು 2018, ಕನ್ನಡ ಬರಹಗಾರ್ತಿಯರ ಪ್ರಾಥಮಿಕ ಸಂಕಲನ 2019, ಇತ್ಯಾದಿ ಕವಿತ್ರಿಯರೇ ಬರೆದ ಕವಿತೆಗಳ ಸಂಕಲನಗಳು. ಆದರೆ ಹೆಣ್ಣನ್ನು ಕುರಿತ ಕಾವ್ಯ ಮಂಜರಿ ಗಳಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಕಲನ ವಿಶೇಷವಾಗಿದೆ. ಉಪಯುಕ್ತ ವಾಗಿದೆ. ಈ ಸಂಕಲನದ ಮಹತ್ವವನ್ನು ಕುರಿತು ಒಂದು ವಿವರವಾದ ಲೇಖನವನ್ನು ಬರೆಯುತ್ತಿದ್ದೇನೆ..ಇದು ಪುಸ್ತಕ ಬಂದ ಸಂತೋಷ ದ ಟಿಪ್ಪಣಿ ಅಷ್ಟೇ..ನನ್ನ ಕವಿತೆಯನ್ನು ಸೇರಿಸಿದ್ದಕ್ಕೆ ಧನ್ಯ ವಾದ ಹೇಳುತ್ತಾ ಉಷಾ ಅವರನ್ನು ಈ ಮಹತ್ಕಾರ್ಯ ಕ್ಕಾಗಿ ಅಭಿನಂದಿಸುತ್ತಿದ್ದೇನೆ. Usha Mallaradhya Usha

Mohan se Mahatma – Puppet Show -ಗೊಂಬೆಯಾಟದಲ್ಲಿ ಗಾಂಧೀಜಿ