Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Thursday, February 23, 2023
ನರೇಶ್ ಮುಳ್ಳೇರಿಯ - ಇಪ್ಪತ್ತೊಂದನೆಯ ಶತಮಾನದ ಕಾಸರಗೋಡಿನ ಕನ್ನಡ ಸಾಹಿತ್ಯ /Kasaragod Kannada Literature
#ಇಪ್ಪತ್ತೊಂದನೆಯ_ಶತಮಾನದ_ಕಾಸರಗೋಡಿನ_ಕನ್ನಡ_ಸಾಹಿತ್ಯ
ಆಧುನಿಕ ಕನ್ನಡಸಾಹಿತ್ಯ ಚಿಗುರೊಡೆಯುವಲ್ಲಿ ಕಾಸರಗೋಡಿನ ಮಣ್ಣು ಕೂಡ ಪ್ರಧಾನ ಪಾತ್ರ ವಹಿಸಿದ್ದು ಚಾರಿತ್ರಕ ಸತ್ಯ. ಸಾಂಪ್ರದಾಯಿಕ ಛಂದಸ್ಸುಗಳಿಂದ ಭಿನ್ನವಾಗಿ ಪ್ರಾಸತ್ಯಾಗವೇ ಮೊದಲಾದ ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡವರಲ್ಲಿ ಮೊದಲಿಗರಾದ ಮಂಜೇಶ್ವರ ಗೋವಿಂದ ಪೈಗಳನ್ನು ಆಧುನಿಕ ಕನ್ನಡಸಾಹಿತ್ಯದ ಹರಿಕಾರರಲ್ಲೊಬ್ಬರು ಎನ್ನಬಹುದು. ನವೋದಯದ ಪ್ರಮುಖ ಲೇಖಕರಾದ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಬೇಕಲ ರಾಮ ನಾಯಕ, ಲಕ್ಷ್ಮೀ ನಾರಾಯಣ ಪುಣಿಂಚತ್ತಾಯ, ವೆಂಕಟ ರಾಜ ಪುಣಿಂಚತ್ತಾಯ ಸಿರಿಬಾಗಿಲು ವೆಂಕಪ್ಪಯ್ಯ, ಪೆರ್ಲ ಕೃಷ್ಣಭಟ್, ಲಲಿತಾ ಎಸ್ ಎನ್ ಭಟ್ ಮೊದಲಾದವರಿಂದ ತೊಡಗಿ ನವ್ಯ ಸಾಹಿತ್ಯದ ಪ್ರಮುಖರಾದ ಕೆ. ವಿ ತಿರುಮಲೇಶ್, ಎಂ ವ್ಯಾಸ, ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ ಕಾಸರಗೋಡು ಮೊದಲಾದವರು ಇಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಬೆಳೆಸಿದರು. ನವೋದಯ ನವ್ಯಯುಗಗಳಲ್ಲಂತೂ ಕಾಸರಗೋಡಿನಲ್ಲಿ ಮನೆಗೊಬ್ಬರಂತೆ, ಬೀದಿಗೊಬ್ಬರಂತೆ ಕವಿಗಳು ಕಲಾವಿದರು ಯಕ್ಷ ಕಲಾವಿದರು ಸಾಹಿತಿಗಳು ಜೀವಿಸಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು.
ದೇಶಭಕ್ತಿ, ನಾಡು ನುಡಿಪ್ರೇಮಗಳ ಕಿಡಿ ಹಚ್ಚಿದ ನವೋದಯ ಕಾಲದಲ್ಲಿ ಕಾಸರಗೋಡಿನಲ್ಲಿ ಉತ್ತುಂಗದಲ್ಲಿದ್ದ ಕನ್ನಡಚಳುವಳಿ ಸಹಜವಾಗಿ ಸಾಹಿತಿಗಳ ಸಂಖ್ಯೆಯನ್ನೂ ಸಾಹಿತ್ಯಕೃತಿಗಳ ಸಂಖ್ಯೆಯನ್ನೂ ಪಂಡಿತರಿಂದ ತೊಡಗಿ ಶ್ರೀಸಾಮಾನ್ಯನವರೆಗೆ ಜನರ ಕಾವ್ಯೋತ್ಸಾಹವನ್ನು ಹೆಚ್ಚಿಸಿತ್ತು. ನವ್ಯಕಾಲದಲ್ಲೂ ಸಾಹಿತ್ಯಕೃಷಿ ಹುಲುಸಾಗಿ ಬೆಳೆಯಿತು. ಅಖಿಲ ಕರ್ನಾಟಕ ಮಟ್ಟದಲ್ಲಿ ಸುಪ್ರಸಿದ್ಧರಾದ ಹಲವು ಮಂದಿ ಕವಿಗಳು, ಸಂಶೋಧಕರು, ಕತೆಗಾರರು, ಕಾದಂಬರಿಕಾರರು, ವಿನೋದಲೇಖಕರು, ಪತ್ರಕರ್ತರು ಮೂಲತಃ ಕಾಸರಗೋಡಿನವರೆಂಬುದು ನಮಗೆ ಹೆಮ್ಮೆಯ ವಿಷಯ. ಕಾಸರಗೋಡಿನಲ್ಲಿದ್ದು ಸಾಹಿತ್ಯ ವ್ಯವಸಾಯ ಮಾಡಿದವರು, ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆ ಮಾಡಿದವರು ಹೀಗೆ ಎರಡು ಬಗೆಯ ಸಾಹಿತಿಗಳು ಇದ್ದರು.
ಕೆ ವಿ ತಿರುಮಲೇಶ್ ,ಸಾರಾ ಅಬೂಬಕರ್, ನಾ ಮೊಗಸಾಲೆ, ಕೆ ಟಿ ಗಟ್ಟಿ, ವಸಂತಕುಮಾರ ಪೆರ್ಲ, ಡಿ ಎನ್ ಶಂಕರ ಭಟ್, ಈಶ್ವರಯ್ಯ, ಜನಾರ್ದನ ಎರ್ಪಕಟ್ಟೆ ಮೊದಲಾದವರು ಕಾಸರಗೋಡಿನಿಂದ ಹೊರಗೆ ಹೋಗಿ ಸಾಧನೆಯನ್ನು ಮಾಡಿದ ಲೇಖಕರು.
ನವೋದಯ ಮತ್ತು ನವ್ಯಕಾಲದಲ್ಲಿ ಕಾವ್ಯದಲ್ಲಿ ಸಂಖ್ಯೆಯಲ್ಲೂ ಸತ್ವದಲ್ಲೂ ಮಿಗಿಲಾದ ಕೃತಿಗಳು ಹುಟ್ಟಿಕೊಂಡವು. ಕಾವ್ಯ, ಸಂಶೋಧನೆ ಮತ್ತು ಕಾದಂಬರಿ ಪ್ರಕಾರಗಳಿಗೆ ನವೋದಯದ ಕೊಡುಗೆ ಅಪಾರ. ನವೋದಯದ ಹೆಚ್ಚಿನ ಕೃತಿಗಳಲ್ಲಿ ದೇಶ ನಾಡು ನುಡಿಗಳ ಬಗ್ಗೆ ಭಕ್ತಿ ಮತ್ತು ಪ್ರೇಮವಲ್ಲದೆ ಕಾಸರಗೋಡಿನ ಕನ್ನಡ ಚಳುವಳಿಗೆ ಬೆಂಬಲವೂ ವ್ಯಕ್ತವಾಗಿತ್ತು. ನವ್ಯಕಾಲದಲ್ಲಿ ಕಾವ್ಯವಲ್ಲದೆ ನಾಟಕ, ಸಣ್ಣಕತೆ, ಕಾದಂಬರಿ ಪ್ರಕಾರಗಳು ಬೆಳೆದವು. ನವ್ಯಯುಗದ ಪ್ರಧಾನ ಲಕ್ಷಣಗಳಾದ ವ್ಯಕ್ತಿಕೇಂದ್ರಿತ ಶೋಧನೆ, ಮನಸ್ಸು ಕೇಂದ್ರಿತ ಜಿಜ್ಞಾಸೆ, ವಾಸ್ತವನಿಷ್ಠೆ ಕಾಸರಗೋಡಿಗರ ಕೃತಿಗಳಲ್ಲೂ ವ್ಯಕ್ತವಾದವು. ಪ್ರಗತಿಶೀಲ, ಬಂಡಾಯ, ದಲಿತ, ಸ್ತ್ರೀವಾದಿ ಸಾಹಿತ್ಯಪ್ರಕಾರಗಳು ಕಾಸರಗೋಡಿನಲ್ಲಿ ಅಷ್ಟಾಗಿ ಬೆಳೆಯಲಿಲ್ಲ. ಇದಕ್ಕೆ ನವೋದಯ ನವ್ಯ ಚಳುವಳಿಗಳ ಪ್ರಭಾವವೂ ಮಲಯಾಳೀಕರಣದ ವಿರುದ್ಧ ಕನ್ನಡಿಗರು ಒಂದಾಗಿರಬೇಕಾದ ಅನಿವಾರ್ಯತೆಯೂ ಕಾರಣವಾಗಿದ್ದಿರಬಹುದು. ಪ್ರಮುಖ ದಲಿತ ಹಾಗೂ ಮಹಿಳಾ ಸಾಹಿತಿಗಳು ಇಲ್ಲಿದ್ದರೂ ಅವರು ಹೆಚ್ಚಾಗಿ ಸಾಹಿತ್ಯದ ಮುಖ್ಯವಾಹಿನಿಯಲ್ಲಿದ್ದುಕೊಂಡು ಬರೆದರು. ಹಾಗಿದ್ದರೂ ಜನಾರ್ದನ ಎರ್ಪಕಟ್ಟೆ, ರಾಧಾಕೃಷ್ಣ ಉಳಿಯತ್ತಡ್ಕ ಮೊದಲಾದವರ ಬರಹಗಳಲ್ಲಿ ದಲಿತಪ್ರಜ್ಞೆ ಲಲಿತಾ ಎಸ್ ಎನ್ ಭಟ್, ಲಕ್ಷ್ಮೀ ಕುಂಜತ್ತೂರು, ಮಹೇಶ್ವರಿ, ಅನುಪಮಾ ಪ್ರಸಾದ್ ಮೊದಲಾದವರ ಕೃತಿಗಳಲ್ಲಿ ಸ್ತ್ರೀಪ್ರಜ್ಞೆ ಸುಪ್ತವಾಗಿ ಹರಿಯುತ್ತಿದ್ದುದನ್ನು ಗುರುತಿಸಬಹುದು.
ಕನ್ನಡ ಸಾಹಿತ್ಯಕ್ಕೆ ಕಾಸರಗೋಡಿನ ಪ್ರಧಾನ ಕೊಡುಗೆ ಕಾವ್ಯವೇ ಆಗಿದೆ. ಕನ್ನಡ ತುಳು ಭಾಷೆಗಳ ಪ್ರಾಚೀನತೆಗೆ ಸಾಕ್ಷ್ಯವನ್ನೊದಗಿಸಿದ ಮಹತ್ವದ ಸಂಶೋಧನೆಗಳು ಗೋವಿಂದ ಪೈ, ಪುಣಿಂಚತ್ತಾಯ ಮೊದಲಾದವರಿಂದ ನಡೆದಿದೆ. ಗಮನಾರ್ಹ ನಾಟಕಗಳು, ಕಾದಂಬರಿಗಳು ಪ್ರಕಟವಾಗಿವೆ. ಸಣ್ಣ ಕತೆಯಲ್ಲಿ ಎಂ ವ್ಯಾಸ, ಕೆ ಟಿ ಗಟ್ಟಿ, ಅನುಪಮಾ ಪ್ರಸಾದ್ ಕಾದಂಬರಿಯಲ್ಲಿ ಸಾರಾ ಅಬೂಬಕರ್, ಗೋಪಾಲಕೃಷ್ಣ ಪೈ, ಮೊಗಸಾಲೆ ಮೊದಲಾದವರು ಅಖಿಲ ಕರ್ನಾಟಕ ಖ್ಯಾತಿ ಪಡೆದಿದ್ದಾರೆ. ಹಾಗಿದ್ದರೂ ಸಂಖ್ಯೆಯಲ್ಲೂ ಸತ್ವದಲ್ಲೂ ಮೆರೆದದ್ದು ಕಾವ್ಯವೇ. ಯಕ್ಷಕವಿ ಪಾರ್ತಿಸುಬ್ಬನಿಂದ ತೊಡಗಿ ಆಧುನಿಕ ಕಾಲದ ರಾಷ್ಟ್ರಕವಿ ಗೋವಿಂದ ಪೈ, ಕನ್ನಡದ ಕಹಳೆಯೂದಿದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ತಿರುಮಲೇಶ್, ವೇಣುಗೋಪಾಲ ಹಾಗೂ ಅನೇಕ ಕವಿಗಳು ಕಾಸರಗೋಡಿನ ಖ್ಯಾತಿಯನ್ನು ಬೆಳಗಿದ್ದಾರೆ.
ಪ್ರಸ್ತುತ ಲೇಖನದಲ್ಲಿ ಕಾಸರಗೋಡು ಜಿಲ್ಲೆಯ ರಚನೆಯ ನಂತರದ ಅದರಲ್ಲೂ ಇಪ್ಪತ್ತೊಂದನೇ ಶತಮಾನದ ಈಚೆಗಿನ ಆಧುನಿಕ ಕನ್ನಡಸಾಹಿತ್ಯದ ಬೆಳವಣಿಗೆಗೆ ಮಹತ್ವ ನೀಡಿ ಒಟ್ಟು ಆಧುನಿಕ ಸಾಹಿತ್ಯದತ್ತ ಇಣುಕುನೋಟ ಬೀರಬೇಕಾಗಿದೆ.
ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಬದುಕನ್ನು ಪ್ರಭಾವಿಸುತ್ತಿರುವ ಕ್ಷಿಪ್ರ ಬದಲಾವಣೆಗಳು, ವ್ಯಕ್ತಿ- ಸಮಾಜ-ಮಾನವೀಯ ಸಂಬಂಧಗಳಲ್ಲಾಗುತ್ತಿರುವ ಪಲ್ಲಟಗಳು, ಬೌದ್ಧಿಕ ಭಾವುಕ ನೆಲೆಗಳಲ್ಲಿ ಜರಗುತ್ತಿರುವ ಪರಿವರ್ತನೆಗಳು ಹೀಗೆ ವರ್ತಮಾನದ ತಲ್ಲಣಗಳು ನವ್ಯೋತ್ತರ ಯುಗದಲ್ಲಿ ಕವಿಗಳನ್ನು ಕಾಡಿದೆ. ಹಾಗಿದ್ದರೂ ಸಶಕ್ತ ಕಾವ್ಯ ಚಳುವಳಿಯೊಂದನ್ನು ನಾವು ಕಾಣಲಿಲ್ಲ.
ಕಾವ್ಯಪ್ರಜ್ಞೆಯನ್ನು ನಿರ್ದೇಶಿಸುವ ಪಂಥಗಳಿಲ್ಲದ ಮುಕ್ತಸ್ವಾತಂತ್ರ್ಯವನ್ನು ಹಾಗೂ ಆ ಅನುಕೂಲತೆಗಳನ್ನು ಕಾಸರಗೋಡಿನ ಸಾಹಿತಿಗಳು ಅನುಭವಿಸುತ್ತಿದ್ದಾರೆ. ಪ್ರತಿಭೆ ಮತ್ತು ಅಧ್ಯಯನದ ಬಲದಿಂದ ಕಾವ್ಯಪರಿಕರಗಳನ್ನು ಕೈವಶಮಾಡಿಕೊಂಡ ತಿರುಮಲೇಶ್, ಮೊಗಸಾಲೆ, ವಸಂತಕುಮಾರ ಪೆರ್ಲರಂತಹವರು ಹೊಸ ಕಾವ್ಯಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಬೆಚ್ಚಿ ಬೀಳಿಸುವ ವೈಚಾರಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸವಾಲುಗಳ ಪ್ರಪಂಚದಲ್ಲಿ ಈಗ ತಾನೇ ಕಣ್ಣುಬಿಡುತ್ತಿರುವ ಎಳೆಯ ಸಾಹಿತಿಗಳು ಹೆಜ್ಜೆಯೂರುತ್ತಿದ್ದಾರೆ. ಇವೆರಡು ವಿಭಾಗಗಳ ನಡುವಿನ ತಲೆಮಾರಿನ ಮುಖ್ಯಕವಿಗಳಲ್ಲಿ ಈಗಾಗಲೇ ಕಾವ್ಯಲೋಕದಲ್ಲಿ ನೆಲೆಕಂಡಿರುವ ಕೆಲವರು ತಾತ್ತ್ವಿಕ ಹುಡುಕಾಟವನ್ನೂ ಇತರರು ಕಾವ್ಯಕ್ಕೆ ಭಾವಾರ್ದ್ರತೆಯನ್ನು ತರುವ ಪ್ರಯತ್ನವನ್ನೂ ಒಟ್ಟಿನಲ್ಲಿ ಮಾನವೀಯ ಸಂಬಂಧಗಳ ಶೋಧನೆಯನ್ನು ಮುಖ್ಯ ಕಾಳಜಿಯಾಗಿರಿಸಿಕೊಂಡಂತಿದೆ. ಈ ನಡುವೆ ಗಂಗಾಧರ ಭಟ್, ಶ್ರೀಕೃಷ್ಣ ಚೆನ್ನಂಗೋಡು, ವೇಣುಗೋಪಾಲ, ಎಂ ವ್ಯಾಸ, ಬಿ ಕೃಷ್ಣ ಪೈ, ವೆಂಕಟರಾಜ ಪುಣಿಂಚತ್ತಾಯ, ಎರ್ಪಕಟ್ಟೆ, ತುಳಸಿ ವೇಣುಗೋಪಾಲ್,ರವಿಶಂಕರ ಒಡ್ಡಂಬೆಟ್ಟು, ಕಯ್ಯಾರರಂತಹ ದೊಡ್ಡ ಹಾಗೂ ಭರವಸೆಯ ಸಾಹಿತಿಗಳನ್ನು ಕಳೆದುಕೊಂಡವರಾಗಿದ್ದೇವೆ. ಕಾಸರಗೋಡು ಮೂಲದ
ಧನಂಜಯ ಕುಂಬಳೆ, ಟಿ ಎ ಎನ್ ಖಂಡಿಗೆ, ಮೋಹನ ಕುಂಟಾರು ಮೊದಲಾದವರು ಕರ್ನಾಟಕದಲ್ಲಿದ್ದುಕೊಂಡು ಕಾವ್ಯವ್ಯವಸಾಯ ಮುಂದುವರೆಸಿದ್ದಾರೆ.
ಕಾಸರಗೋಡಿನಲ್ಲಿದ್ದುಕೊಂಡು ಕಳೆದ ದಶಕಗಳಲ್ಲಿ ಕಾವ್ಯರಂಗದಲ್ಲಿ ಸಕ್ರಿಯರಾಗಿ ಪುಸ್ತಕ ಪ್ರಕಟಿಸಿದ ಪ್ರಮುಖರಲ್ಲಿ ರಮಾನಂದ ಬನಾರಿ, ವಿಜಯಲಕ್ಷ್ಮಿ ಶಾನುಭಾಗ್, ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಬೆಳ್ಳೂರು ಮತ್ತು ಶ್ರೀಕೃಷ್ಣಯ್ಯ ಅನಂತಪುರ,, ನರಸಿಂಹ ಭಟ್, ಯು. ಮಹೇಶ್ವರಿ, ಹರಿಕೃಷ್ಣ ಭರಣ್ಯ ಮೊದಲಾದವರನ್ನು ಹೆಸರಿಸಬಹುದು. ನಾ ದಾ ಶೆಟ್ಟಿ, ಎಂ ದಿವಾಕರ ರೈ, ಹರೀಶಪೆರ್ಲ, ವಿರಾಜ್ ಅಡೂರು, ವಿ ಬಿ ಕುಳಮರ್ವ, ಹಮೀದ್ ಮಂಜೇಶ್ವರ, ಸುಂದರ ಬಾರಡ್ಕ, ಗಂಗಾರತ್ನ ಪಾತೂರು, ನರೇಶ್ ಮುಳ್ಳೇರಿಯ, ವೆಂಕಟ ಭಟ್, ಪಿ ಎನ್ ಮೂಡಿತ್ತಾಯ, ಶೈಲಜಾ ಪುದುಕೋಳಿ, ಕೇಶವ ಶೆಟ್ಟಿ ಆದೂರು, ರತ್ನಾಕರ ಮಲ್ಲಮೂಲೆ, ಲಕ್ಷ್ಮೀ ಕೆ, ಪದ್ಮಾವತಿ ಏದಾರು, ಶ್ರೀಶಕುಮಾರ, ಬಾಲ ಮಧುರಕಾನನ, ಸಿ ಎಚ್ ಗೋಪಾಲಭಟ್, ಜಯ ಮಣಿಯಂಪಾರೆ, ಬಾಲಕೃಷ್ಣ ರೈ ಕಳ್ವಾಜೆ, ಪಿ ಪುರುಷೋತ್ತಮ ಭಟ್, ಕಕ್ಕೆಪ್ಪಾಡಿ ಶಂಕರ ನಾರಾಯಣ ಭಟ್, ದಿವ್ಯಗಂಗಾ ಪಿ, ಸೌಮ್ಯಾ ಪ್ರಸಾದ್, ಉದಯರವಿ ಕೊಂಬ್ರಾಜೆ, ರಾಜ್ಯಶ್ರೀ ಕುಳಮರ್ವ, ಜ್ಯೋತ್ಸ್ನಾ ಕಡಂದೇಲು, ಕವಿತಾ ಕೂಡ್ಲು, ಪ್ರಭಾವತಿ ಕೆದಿಲಾಯ, ಶ್ಯಾಮಲಾ ರವಿರಾಜ್, ನಾರಾಯಣ ಭಟ್, ನವೀನ್ ಎಲ್ಲಂಗಳ, ಗೀತಾಲಕ್ಷ್ಮಿ ಪುಂಡೂರು, ದಿವಾಕರ ಬಲ್ಲಾಳ್, ಎಸ್ ಎನ್ ಭಟ್ ಪೆರ್ಲ, ಲತಾ ಆಚಾರ್ಯ ಬನಾರಿ ಹೀಗೆ ಬಹಳ ಮಂದಿ ಬರೆಯುತ್ತಿದ್ದಾರೆ, ಕವನ ಸಂಕಲನ ಪ್ರಕಟಿಸಿದ್ದಾರೆ. ಈ ಪಟ್ಟಿ ಇನ್ನೂ ಬೆಳೆಯುತ್ತದೆ. ಹಿರಿಯ ಕಿರಿಯ ಸಾಹಿತಿಗಳಲ್ಲಿ ಇಲ್ಲಿ ಹೆಸರು ಬಿಟ್ಟು ಹೋದವರದೇ ಸಂಖ್ಯೆ ಹೆಚ್ಚಿರಬಹುದು. ಪುಟ್ಟಲೇಖನವೊಂದರ ಇತಿಮಿತಿಯಲ್ಲಿ ಸಾಹಿತ್ಯರಂಗದ ಸಮಗ್ರದರ್ಶನ ಅಸಾಧ್ಯ, ಕ್ಷಮೆಯಿರಲಿ.
ಕಾಸರಗೋಡಿಗರ ಬರವಣಿಗೆ ಮುಖ್ಯವಾಗಿ ಭಾವಪ್ರಧಾನವಾದುದು. ಇಲ್ಲಿನ ವಿಶಿಷ್ಟ ಭಾಷಿಕ ಸಾಂಸ್ಕೃತಿಕ ರಾಜಕೀಯ ಪರಿಸ್ಥಿತಿಗಳ ಒತ್ತಡ ಕಾರಣವಿರಬಹುದು. ವಿಭಿನ್ನ ಮನೆಮಾತುಗಳಿದ್ದು ಶಾಲೆಗಳಲ್ಲಿ ಕಲಿತ ಗ್ರಾಂಥಿಕ ಕನ್ನಡವೇ ಹೆಚ್ಚಿನ ಕೃತಿಗಳಲ್ಲಿ ಅಭಿವ್ಯಕ್ತಿಮಾದ್ಯಮವಾಗಿದೆ. ಸಾಂಸ್ಕೃತಿಕವಾಗಿ ಕನ್ನಡಿಗನೆಂಬ ಅಸ್ತಿತ್ವ ಸಾಧಿಸಬೇಕಾದ ತುರ್ತು ಬರಹಗಳಲ್ಲಿ ಗೋಚರಿಸುತ್ತದೆ. ಭಾವ ಪ್ರಕಟಣೆಗೆ ಕಾವ್ಯವೇ ಪ್ರಧಾನ ಮಾರ್ಗವಾಗಿರುವುದನ್ನು ಗಮನಿಸುವಾಗ ಕಾಸರಗೋಡಿನ ವಿಶಿಷ್ಟ ಭಾಷಾ ರಾಜಕೀಯ ಹಾಗೂ ವಿವಿಧತೆಯಲ್ಲಿ ಏಕತೆಯಂತಿರುವ ಸಾಂಸ್ಕೃತಿಕ ಪರಿಸ್ಥಿತಿ ಇತರ ಪ್ರಕಾರಗಳಿಗಿಂತಲೂ ಕಾವ್ಯಸೃಷ್ಟಿಯನ್ನು ಹೆಚ್ಚಾಗಿ ಉತ್ತೇಜಿಸಿರುವುದು ಸಹಜವೆನಿಸುತ್ತದೆ. ಕೇರಳದಲ್ಲಿ ಕನ್ನಡಿಗನಾಗಿ ಬಾಳಬೇಕಾದ ಅನಿವಾರ್ಯತೆ, ಅನಾಥ ಪ್ರಜ್ಞೆ, ಮಲಯಾಳೀಕರಣಕ್ಕೆ ಪ್ರತಿರೋಧ, ಹೋರಾಟದ ಕೆಚ್ಚು ಭಾವನಾತ್ಮಕವಾಗಿ ಬರಹಗಾರರ ಕಾವ್ಯಕಸುಬಿಗೆ ಪೂರಕವಾಗಿವೆ.
ಕಾಸರಗೋಡಿನ ಈಚೆಗಿನ ಕಾವ್ಯಕೃಷಿಯನ್ನು ಗಮನಿಸಿದರೆ ನವುರು ಭಾವಾಭಿವ್ಯಕ್ತಿ, ತಾತ್ವಿಕ ಹುಡುಕಾಟ, ಅನುಭಾವಿಕ ಶೋಧನೆಗಳನ್ನು ಮುಖ್ಯವಾಗಿ ಕಾಣಬಹುದು. ಜಾಗತೀಕರಣ, ಕೋಮುವಾದ,ಭಯೋತ್ಪಾದನೆ, ರಾಜಕೀಯ ಹಿಂಸೆ, ಸಾಮಾಜಿಕ ಅಸಮಾನತೆ, ಸಾಂಸ್ಕೃತಿಕ ಅಸ್ಥಿರತೆಗಳ ಪ್ರತಿಫಲನ ಸಾಹಿತ್ಯಕೃತಿಗಳಲ್ಲಿ ಗಾಢವಾಗಿಯಲ್ಲದಿದ್ದರೂ ಪರೋಕ್ಷವಾಗಿ ಹಣಕಿವೆ. ಆದರೆ ಸಾಮಾಜಿಕ ಕಳಕಳಿ ಆಕ್ರೋಶ ಅಥವಾ ಅಸಹನೆಯಾಗದೆ ಮಾನವೀಯ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಕಟಗೊಂಡಿವೆ. ಬೇರೆ ಬೇರೆ ಕಾರಣಗಳಿಂದ ದುರ್ಬಲಗೊಳ್ಳುತ್ತಿರುವ ಕನ್ನಡ ಚಳುವಳಿಯ ಪ್ರಭಾವ ಈಚೆಗಿನ ಕವಿಗಳಲ್ಲಿ ಪ್ರತ್ಯಕ್ಷವಾಗಿ ಕಾಣದಿದ್ದರೂ ಸುಪ್ತವಾಗಿದೆ. ಹೋರಾಟಗಾರ ಧೀಮಂತನಾಯಕ ಯು ಪಿ ಕುಣಿಕುಳ್ಳಾಯರ 'ಇವರೆಲ್ಲಿಯವರು' ಕೃತಿಯ ಹೆಸರೇ ಸೂಚಿಸುವಂತೆ ಕನ್ನಡಿಗರ ಆತಂಕ ತಳಮಳಗಳನ್ನು ಬಿಂಬಿಸುತ್ತದೆ. ಅಬ್ಬರದ ಭಾವಾವೇಶ, ನಾಟಕೀಯತೆ, ವಿಡಂಬನೆ, ಆಕ್ರೋಶ, ವ್ಯಕ್ತಿಪ್ರಜ್ಞೆಗಳ ಬದಲು ನವುರು ಭಾವಗಳಿಗೆ, ಮಾನವೀಯ ಸಂಬಂಧಗಳಿಗೆ, ದೇಸೀಯತೆಗೆ, ಸಮಾಜಮುಖಿ ಧೋರಣೆಗೆ ಈಗ ಒತ್ತು ನೀಡಲಾಗುತ್ತಿದೆ. ಭಾಷೆ, ಲಯ, ಛಂದಸ್ಸುಗಳಲ್ಲಿ ಪ್ರಯೋಗಶೀಲತೆ ಜತೆ ಗಜಲ್, ಚುಟುಕ, ಹಾಯಿಕು ಮೊದಲಾದ ಪ್ರಕಾರಗಳಲ್ಲೂ ಕೆಲವರು ಕೈಯ್ಯಾಡಿಸುತ್ತಿದ್ದಾರೆ.
ನವೋದಯ ನವ್ಯಯುಗದಲ್ಲಿ ಧುಮ್ಮಿಕ್ಕಿದ ಕಾವ್ಯಧಾರೆ ಈಗ ಹಲವು ಕವಲೊಡೆದು ವಿಶಾಲ ಬಯಲಲ್ಲಿ ಸಾಗುತ್ತಿದೆ. ನವೋದಯದ ಭಾಷೆ, ಲಯ, ಪ್ರಾಸ ಛಂದೋಪ್ರಯೋಗ ಕೆಲವೆಡೆ ಕಾಣಿಸುತ್ತಿದೆ. ಲಯಾನ್ವಿತ ಕಾವ್ಯ, ಭಾವಗೀತೆ, ಭಕ್ತಿಗೀತೆ, ಭಾಮಿನಿ ಷಟ್ಪದಿ, ವೈದ್ಯಕಾವ್ಯ, ಯಕ್ಷಪ್ರಸಂಗ ಹೀಗೆ ಹಲವಾರು ಸ್ವರೂಪಗಳು, ಮಾಧ್ಯಮಗಳು ಕಾವ್ಯಕ್ಕೆ ಒಲಿದಿವೆ. ಕನ್ನಡದಲ್ಲಿ ಬರೆಯುತ್ತಿರುವ ಕವಿಗಳು ತುಳು, ಹವ್ಯಕ, ಕರಾಡ, ಕೊಂಕಣಿ ಮೊದಲಾದ ಭಾಷೆಗಳಲ್ಲೂ ಬರೆಯುತ್ತಿದ್ದು ಬಹುಭಾಷಾ ಕವಿಗೋಷ್ಠಿಗಳು ಹೊಸನುಡಿಗಟ್ಟುಗಳ ತುಡಿತಕ್ಕೆ ಸಾಕ್ಷಿಗಳಾಗಿವೆ. ಕನ್ನಡ ಮಲಯಾಳ ಆಂಗ್ಲ ಕೃತಿಗಳ ಅನುವಾದ ಕೂಡ ಪ್ರಕಟಗೊಂಡಿವೆ.
ತುಲನಾತ್ಮಕವಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ವಿವಿಧ ವರ್ಗ ಸಮುದಾಯಗಳಿಂದ ಬಂದ ಲೇಖಕರು ಬರೆಯುತ್ತಿರುವುದು ಶುಭಸೂಚನೆ. ನಿಮ್ನ ದಲಿತ ಅಲ್ಪಸಂಖ್ಯಾಕ ಜಾತಿವರ್ಗದವರೂ ಮಹಿಳೆಯರೂ ಬಾಲಪ್ರತಿಭೆಗಳೂ ತುಳು ಮಲಯಾಳ ಕೊಂಕಣಿ ಮರಾಠಿ ಮನೆಮಾತಿನವರೂ ಕನ್ನಡದಲ್ಲೇ ಬರೆಯುತ್ತಿರುವುದು ಕನ್ನಡವೇ ಈ ನೆಲದ ಕೊರಳೆಂಬುದನ್ನು ಸಾರಿಹೇಳುತ್ತದೆ.
ಬೇಕಲ ರಾಮನಾಯಕ, ಸಿರಿಬಾಗಿಲು ವೆಂಕಪ್ಪಯ್ಯ ಮೊದಲಾದವರು ಅಡಿಪಾಯ ಹಾಕಿದ ಕಾಸರಗೋಡಿನ ಆಧುನಿಕ ಕಥನಸಾಹಿತ್ಯ ನವ್ಯಯುಗದಲ್ಲಿ ಬೆಳವಣಿಗೆ ಕಂಡಿತು. ಕಾಸರಗೋಡಿನ ಸಣ್ಣಕತೆಗಳು ಎಂಬ ಪ್ರಾತಿನಿಧಿಕ ಕೃತಿಯಲ್ಲಿ ಕಾಸರಗೋಡಿನ ಆಧುನಿಕ ಸಣ್ಣಕತೆಗಳ ದರ್ಶನವನ್ನು ಕಾಣಬಹುದು. ಬಾಲಕೃಷ್ಣ ಕೋಳಾರಿ, ಜನಾರ್ದನ ಎರ್ಪಕಟ್ಟೆ, ನಾರಾಯಣ ಕಂಗಿಲ, ನಾ ಮೊಗಸಾಲೆ, ಸಾರಾ ಅಬೂಬಕರ್, ಕೆ ವಿ ತಿರುಮಲೇಶ್, ವಸಂತಕುಮಾರ ಪೆರ್ಲ, ಕೆ ಟಿ ಗಟ್ಟಿ, ನಾ ದಾ ಶೆಟ್ಟಿ, ಹರೀಶ ಪೆರ್ಲ, ಕೆ ಟಿ ಶ್ರೀಧರ್, ಕೆ ಟಿ ವೇಣುಗೋಪಾಲ್, ಟಿಎಎನ್ ಖಂಡಿಗೆ, ಗೋಪಾಲಕೃಷ್ಣ ಪೈ, ಮೊದಲಾದ ಹಲವು ಮಂದಿ ಲೇಖಕರು ಉತ್ತಮ ಸಣ್ಣ ಕತೆಗಳನ್ನು ಬರೆದಿದ್ದಾರೆ. ಕಾಸರಗೋಡನ್ನು ಸಣ್ಣಕತೆಯ ಲೋಕದಲ್ಲಿ ಗುರುತಿಸುವಂತೆ ಮಾಡಿದವರು ಎಂ ವ್ಯಾಸರು. ತಮ್ಮ ವಿಶಿಷ್ಟ ಭಾಷೆ ಶೈಲಿ ತಾತ್ವಿಕ ದೃಷ್ಟಿಕೋನದ ಕತೆಗಳ ಮೂಲಕ ಸಣ್ಣಕತೆಗಳ ಲೋಕವನ್ನು ಆಳಿದವರು. ವ್ಯಾಸರ ನಿಧನದ ನಂತರ ಮತ್ತು ಮೊದಲು ಬರೆಯುತ್ತಿರುವ ಕಾಸರಗೋಡಿನ ಮುಖ್ಯ ಕತೆಗಾರ ಶಶಿಭಾಟಿಯಾ ಅವರ ಭಾಷೆ, ವಸ್ತು, ಪ್ರಯೋಗಗಳಲ್ಲಿ ಅವರದೇ ವೈಶಿಷ್ಟ್ಯವಿದೆ. ಕೃಷ್ಣವೇಣಿ ಕಿದೂರು, ಶಂಕರ ಎಂ ಮಂಜೇಶ್ವರ ಮೊದಲಾದವರ ಹಲವು ಕತೆಗಳು ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಗಂಭೀರ ಮಾನವೀಯ ಮೌಲಿಕ ಚಿಂತನೆಗಳಿಂದ ಕೂಡಿದ ಹಲವು ಕತೆಗಳನ್ನು ಬರೆದಿರುವ ಅನುಪಮಾ ಪ್ರಸಾದ್ ಕತೆ ಮತ್ತುಕಾದಂಬರಿಗಳ ಮೂಲಕ ಕರ್ನಾಟಕದಾದ್ಯಂತ ಹೆಸರು ಪಡೆದಿದ್ದಾರೆ. ಸುಂದರ ಬಾರಡ್ಕ, ಸುಭಾಷ್ ಪಟ್ಟಾಜೆಯವರ ಮಾರ್ಗವೂ ಸಾಹಿತ್ಯಕವಾದುದು. ಹರೀಶ್ ಪೆರ್ಲ, ಸತ್ಯನಾರಾಯಣ ಮೊದಲಾದವರು ವಿನೋದದ ಧಾಟಿಯ ಕತೆಗಳ ಮೂಲಕ ಗಂಭೀರವಿಚಾರಗಳನ್ನು ಮನಸ್ಸಿಗೆ ತಲಪಿಸುತ್ತಾರೆ.
ಕಳ್ಳಿಗೆ ಮಹಾಬಲ ಭಂಡಾರಿ, ಲಲಿತಾ ಎಸ್ ಎನ್ ಭಟ್, ಕೆ. ಟಿ ಗಟ್ಟಿ,ಸಾರಾ ಅಬೂಬಕರ್, ನಾ ಮೊಗಸಾಲೆ,ಕೆ ವಿ ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಲಕ್ಷ್ಮೀ ಕುಂಜತ್ತೂರು, ಗೋಪಾಲಕೃಷ್ಣ ಪೈ, ಸರಸ್ವತೀ ಶಂಕರ್, ಅನುಪಮಾ ಪ್ರಸಾದ್ ಮೊದಲಾದ ಲೇಖಕರು ಸತ್ವಯುತವಾದ ಕಾದಂಬರಿಗಳನ್ನು ನೀಡಿದ್ದಾರೆ. ಕಾದಂಬರಿ ಕ್ಷೇತ್ರದಲ್ಲಿ ೨೧ ನೇ ಶತಮಾನದ ಸಾಧನೆಗಳನ್ನು ಗುರುತಿಸುವುದಾದರೆ ಗೋಪಾಲಕೃಷ್ಣ ಪೈ ಅವರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿ ಸ್ವಪ್ನಸಾರಸ್ವತ, ಅನುಪಮಾ ಪ್ರಸಾದ್ ಅವರ ಪಕ್ಕಿಹಳ್ಳದ ಹಾದಿಗುಂಟ ಬಹುಮುಖ್ಯ ಕಾದಂಬರಿಗಳೆಂದು ಹೆಸರಿಸಬಹುದು. ಅನುವಾದ ಕ್ಷೇತ್ರದಲ್ಲಿ ಪಾರ್ವತಿ ಐತಾಳ್, ಕಾಸರಗೋಡು ಅಶೋಕಕುಮಾರ್ ಮೊದಲಾದವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಪಳ್ಳತ್ತಡ್ಕ ಅರುಣ್ ಕುಮಾರ್ ಅವರ ಆಂಗ್ಲ ಕಾದಂಬರಿಯನ್ನು ರತ್ನಾಕರ ಮಲ್ಲಮೂಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವೇಣುಗೋಪಾಲ ಕಾಸರಗೋಡು, ಕೆ ಟಿ ಶ್ರೀಧರ್, ರತ್ನಾಕರ ಮಲ್ಲಮೂಲೆ, ವಿಜಯಲಕ್ಷ್ಮೀ ಶಾನುಭೋಗ್ ಮೊದಲಾದವರು ನಾಟಕ ಸಾಹಿತ್ಯದಲ್ಲಿ ದುಡಿದಿದ್ದಾರೆ.
ಕಯ್ಯಾರರು, ಪುಣಿಂಚತ್ತಾಯರು, ಬೇಕಲ ರಾಮನಾಯಕರು, ರಾ ಮೊ ವಿಶ್ವಾಮಿತ್ರ, ಲಕ್ಷ್ಮೀ ಕುಂಜತ್ತೂರು, ಪಟ್ಟಾಜೆ ಕೃಷ್ಣಭಟ್, ಗಣಪತಿ ದಿವಾಣ, ಪೆರ್ಲ ಕೃಷ್ಣಭಟ್, ಎಂವಿ ಭಟ್ ಮಧುರಕಾನನ, ಬಾಲ ಮಧುರಕಾನನ, ಗೋಪಾಲಕೃಷ್ಣ ಭಟ್, ವಿ ಬಿ ಕುಳಮರ್ವ ಹೀಗೆ ಮಕ್ಕಳ ಸಾಹಿತ್ಯದಲ್ಲಿ ಸೇವೆಸಲ್ಲಿಸಿದವರ ಪಟ್ಟಿಯೂ ದೊಡ್ಡದಿದೆ. ಮೂಡಿತ್ತಾಯರಿಂದ ತೊಡಗಿ ಹರೀಶ್ ಪೆರ್ಲ ಸತ್ಯನಾರಾಯಣರವರೆಗೆ ವಿನೋದಸಾಹಿತ್ಯರಂಗಕ್ಕೂ ಕೊಡುಗೆ ನೀಡಿದ ಸಾಹಿತಿಗಳು ಕಾಸರಗೋಡಿನಲ್ಲಿದ್ದಾರೆ.
ಒಟ್ಟಿನಲ್ಲಿ ಆಧುನಿಕ ಕನ್ನಡಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಸಂಖ್ಯೆಯಲ್ಲಾಗಲೀ ಸತ್ವದಲ್ಲಾಗಲೀ ಕಡೆಗಣಿಸುವಂತಹುದಲ್ಲ.
-ನರೇಶ್ ಮುಳ್ಳೇರಿಯಾ See less
Labels:
ಕಾಸರಗೋಡು ಸಾಹಿತ್ಯ
Location:
Udupi, Karnataka, India
Subscribe to:
Post Comments (Atom)
No comments:
Post a Comment