Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Thursday, November 17, 2022
ಬೆಳಗೋಡು ರಮೇಶ್ ಭಟ್ -- ಎಚ್ ಜಿ ಶ್ರೀಧರ್ ಅವರ ಕಾದಂಬರಿ " ಪ್ರಸ್ಥಾನ "
ಮುಳುಗಡೆಯ ನೋವಿನ ಮತ್ತೊಂದು ಹೃದಯಸ್ಪರ್ಶಿ ಕಥೆ
ಪ್ರಸ್ಥಾನ (ಕಾದಂಬರಿ)
ಲೇ: ಡಾ ಶ್ರೀಧರ ಎಚ್ ಜಿ ಮುಂಡಿಗೆಹಳ್ಳಿ
ಪ್ರಕಾಶಕರು: ಶ್ರೀರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಮೈಸೂರು -೧
ಪುಟಗಳು: 592 ಬೆಲೆ: ರೂ. 500
ಕಳೆದ ಶತಮಾನದಲ್ಲಿ ಶರಾವತಿಗೆ ಕಟ್ಟಿದ ಅಣೆಕಟ್ಟುಗಳು ತಂದುಕೊಟ್ಟ ಮುಳುಗಡೆ, ಮುಳುಗಡೆಯ ನಿಮಿತ್ತವಾಗಿ ಅನಿವಾರ್ಯವಾದ ವಲಸೆ ಮತ್ತು ಹಿನ್ನೀರಿನ ಹಳ್ಳಿಗಳಲ್ಲಿ ಉಂಟಾದ ಸ್ಥಿತ್ಯಂತರ, ನಂಬಿಕೆಗಳ ಪಲ್ಲಟ, ಕೌಟುಂಬಿಕ ವ್ಯವಸ್ಥೆಯ ಪತನ - ಇವೆಲ್ಲವುಗಳ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಸಾಕಷ್ಟು ಕಥೆ ಕಾದಂಬರಿಗಳು ಬಂದಿವೆ. ಪ್ರಸ್ತುತ ಕಾದಂಬರಿಯ ಮುನ್ನುಡಿಯಲ್ಲಿ ನಾ ಡಿಸೋಜ ಮತ್ತು ಗಜಾನನ ಶರ್ಮರ ಕಾದಂಬರಿಗಳ ಪ್ರಸ್ತಾಪವಿದೆ. ಕೃಷ್ಣ ಮೇಲ್ದಂಡೆಯ ಯೋಜನೆಯಲ್ಲಿ ಮುಳುಗಡೆಯಾದ, ತನ್ನ ಕುಟುಂಬದ ಹಿರಿಯರು ಹದಿನೆಂಟು ತಲೆಮಾರು ವಾಸವಾಗಿದ್ದ ಹಳ್ಳಿಯೊಂದರ ದುರಂತದ ಕಥೆ ಬೋಸ್ಟನ್ ನಿವಾಸಿ ಸೇನಾ ದೇಸಾಯ್ ಗೋಪಾಲ ಬರೆದ ’The 86th Village' .ಇತ್ತೀಚೆಗಷ್ಟೇ ಪ್ರಕಟವಾಗಿ, ಮುಳುಗಡೆ ತಂದುಕೊಡುವ ಸಾಮಾಜಿಕ, ಆರ್ಥಿಕ, ಕೌಟುಂಬಿಕ ಮತ್ತು ಪ್ರಾಕೃತಿಕ ಆಘಾತಗಳ ಕುರಿತು ಸಾಕಷ್ಟು ಸಂವಾದಗಳಿಗೆ ಹಾದಿಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ, ಶ್ರೀಧರ್ ಎಚ್ ಜಿಯವರ ’ಪ್ರಸ್ಥಾನ’ವು ಕಳೆದ ಶತಮಾನದ ನಲವತ್ತನೆಯ ದಶಕದಲ್ಲಿ ಮಲೆನಾಡು ಅನುಭವಿಸಿದ ಯಾತನೆಯ, ಪ್ರಾಯಶಃ ಹೆಚ್ಚು ಹೃದಯಸ್ಪರ್ಶಿ ಎಂದು ಗುರುತಿಸಬಹುದಾದ ಕಾದಂಬರಿ.
ಮುಳುಗಡೆಯ ಹಿನ್ನೆಲೆಯ ಈ ಕಥೆಗಳಲ್ಲೆಲ್ಲ, ಸಾವಿರಾರು ವರ್ಷಗಳಿಂದ ಕೃಷಿಯನ್ನೇ ನಂಬಿ ಬದುಕಿದ ನೂರಾರು ಕುಟುಂಬಗಳು, ತಮ್ಮ ಭಾವಕೋಶದ ನಿಕಟ ಸಂಪರ್ಕದಲ್ಲಿದ್ದ ತಾಣಗಳನ್ನು ತೊರೆದು ಮತ್ತೆಲ್ಲಿಗೋ ಹೋಗಲೇಬೇಕಾದ ಪರಿಸ್ಥಿತಿಯ, ಪರಿಣಾಮದ ಕಥೆಯಿರುವುದು ಸಹಜ. ಆದರೆ ಶ್ರೀಧರರ ಈ ಕಾದಂಬರಿಯಲ್ಲಿ ಮನುಷ್ಯರ ಬದುಕಲ್ಲಿ ಈ ವಲಸೆಯೆನ್ನುವುದು ಅನಿವಾರ್ಯ, ಲಾಗಾಯ್ತಿನಿಂದ ಆಗುತ್ತಲೇ ಬಂದಿರುವುದು, ನಿರಂತರ ಪ್ರಕ್ರಿಯೆ, ಚಲನಶೀಲತೆಯ ಪರಿಣಾಮ ಎಂಬ ಉದಾರ ದರ್ಶನದ ಆರೋಗ್ಯಕಾರಿ ದಿಕ್ಕೊಂದು ಗುರುತಿಸಲ್ಪಡುತ್ತದೆ. ಕಾದಂಬರಿಯ ಆರಂಭದ ಲೇಖಕರ ಮಾತಿನಲ್ಲಿ ಮತ್ತು ಕಾದಂಬರಿಯ ಯಾವತ್ತೂ ಸಾಕ್ಷಿಪ್ರಜ್ಞೆಯಂತಿರುವ ಸೂರಯ್ಯನ ಮುಖಾಂತರ ಕಾದಂಬರಿಯ ೫೫೨ನೆಯ ಪುಟದಲ್ಲಿ ಅವರು ಇದನ್ನೇ ಹೇಳುತ್ತಾರೆ. "ಇದು ನಿಲ್ಲದ ಪಯಣ. ಮಾನವ ಜನಾಂಗ ನಿರಂತರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆಪ್ರಯಾಣ ಮಾಡುತ್ತಲೇ ಇದೆ. ಮೆಡಿಟರೇನಿಯನ್ ಸಮುದ್ರ ತೀರದ ಕಡೆಯಿಂದ ಭಾರತದ ಕಡೆಗೆ ಮನುಷ್ಯ ಸುಮಾರು ೨೫೦೦೦ ವರ್ಷಗಳ ಹಿಂದೆ ವಲಸೆ ಬಂದನಂತೆ. ಮೊದಲು ದ್ರಾವಿಡರು, ಬಳಿಕ ಆರ್ಯರು. ನಾವು ಎಲ್ಲಿಂದಲೋ ಬರುವೆಗೆ ಬಂದೆವು. ಅಲ್ಲಿಂದ ಬೆಳ್ಳೆಣ್ಣೆಗೆ ಬಂದಿದ್ದೇವೆ. ಇತ್ತೀಚೆಗೆ ಕೆಲವರು ಓದು ಉದ್ಯೋಗ ಎಂದು ಅಮೇರಿಕದ ಕಡೆಗೆ ಹೊರಟಿದ್ದಾರೆ. ಯಾರಿಗೆ ಗೊತ್ತು, ನಮ್ಮ ಮೊಮ್ಮಕ್ಕಳು ಅಮೇರಿಕ ದೇಶಕ್ಕೆ ಹೋದರೆ ನಮಗೂ ಒಂದು ಅವಕಾಶ ಸಿಗಬಹುದು."
ಪ್ರಸ್ಥಾನ ಎಂಬ ಪದಕ್ಕೆ ’ಪ್ರಯಾಣ’ ಎಂಬ ಅರ್ಥ ಮಾತ್ರವಲ್ಲ, ’ಯುದ್ಧದ ಪ್ರಯಾಣ’ ಎಂಬ ಅರ್ಥವೂ ಇದೆ. ಈ ಕೆಳಗಿನ ಬರುವೆ ಸೂರಯ್ಯ ಮಹಾಪ್ರಸ್ಥಾನವೊಂದರ ಸಾಕ್ಷಿಪ್ರಜ್ಞೆಯಂತಿದ್ದು, ಕಾದಂಬರಿ ಆರಂಭವಾಗುವುದೇ ಮಗಳ ಮದುವೆಯ ಪ್ರಸ್ತಾಪದೊಂದಿಗೆ. ಕಾದಂಬರಿ ಕೊನೆಯಾಗುವುದು ಅವರು ಬಿಟ್ಟುಬಂದ ಬರುವೆಯ ಮನೆಯಲ್ಲಿ ರಾಮಣ್ಣ ’ಒಂದು ಚೂರೂ ಮುಕ್ಕಾಗದಂತೆ ನೋಡಿಕೊಂಡು’ ನೆಲೆಸಿದ್ದಾನೆ ಎಂಬಲ್ಲಿ. ಮನೆಯೆದುರು ಸಗಣಿಯಿಂದ ನೆಲ ಬಳಿದು ರಂಗೋಲಿ ಹಾಕಲಾಗಿದೆ. ಹೊಸ್ತಿಲಿಗೆ ರಂಗೋಲಿಯೆಳೆದು ಹೂವಿಡಲಾಗಿದೆ. ಕೊಟ್ಟಿಗೆಯಲ್ಲಿ ಅಂಬೇ ಎಂದು ಕೂಗುವ ಕರು, ಅವರೇ ಊರುಬಿಟ್ಟುಹೋಗುವಾಗ ರಾಮಣ್ಣನಿಗೆ ಕೊಟ್ಟುಹೋದ ಶರಾವತಿ ಹಸುವಿನ ಮಗಳ ಕರು. ಅವರು ನೆಟ್ಟಿದ್ದ ಸಕ್ಕರೆ ಕಂಚಿ ಗಿಡ ಈಗ ಫಲ ಕೊಡುತ್ತಿದೆ. ಮನೆಯ ಅಂಗಳದ ಮೂಲೆಯಲ್ಲಿದ್ದ ಗಿಡದಲ್ಲಿ ಈಗಲೂ ಪಕ್ಷಿಯ ಗೂಡೊಂದಿದೆ.
ಈ ಹಸ್ತಾಂತರವನ್ನು ಸೂರಯ್ಯ ಒಪ್ಪಿಕೊಳ್ಳುವಂತಹ ಮಾತೊಂದು ಕಾದಂಬರಿಯ ಕೊನೆಯ ಭಾಗದಲ್ಲಿ ಬರುತ್ತದೆ. ’ರಾಮಣ್ಣ ಈ ಮನೆಯಲ್ಲಿ ಇರುವುದರಿಂದಲೇ ತಮಗೆ ಮತ್ತೊಮ್ಮೆ ಈ ಮನೆಯನ್ನು ನೋದುವ ಯೋಗ ದೊರಕಿದೆ. ಇಲ್ಲವಾಗಿದ್ದರೆ ಇಷ್ಟು ಹೊತ್ತಿಗೆ ಮನೆಯಿರುವ ಜಾಗದಲ್ಲಿ ಮಣ್ಣಿನ ರಾಶಿಯಿರುತ್ತಿತ್ತು.’ ಇದು ಸೂರಯ್ಯನ ಆಶಯ ಮಾತ್ರವಲ್ಲ, ಈ ಕಾದಂಬರಿಯ ಒಟ್ಟು ಆಶಯದಂತೆಯೇ ಇದೆ.
*ಬೆಳಗೋಡು ರಮೇಶ ಭಟ್
Subscribe to:
Post Comments (Atom)
No comments:
Post a Comment