Powered By Blogger

Monday, June 6, 2022

ಎಸ್. ಜಿ. ಕುರ್ಯ ಉಡುಪಿ - ಪುಸ್ತಕ ಸಂಸ್ಕೃತಿಯ ಸಂತ ಕು. ಗೋ / H. GOPALA BHAT

vk udupi 20:00 (2 hours ago) to me ಪುಸ್ತಕ ಸಂಸ್ಕøತಿಯ ಸಂತ: ಕು. ಗೋ. 85ನೇ ನವ ವಸಂತ ........... ತಾನು ಪುಸ್ತಕ ಅಚ್ಚು ಹಾಕಿ ಮಾರಿದ್ದಕ್ಕಿಂತಲೂ ಅನ್ಯ ಲೇಖಕರ, ಸಾಹಿತಿಗಳ ಸಾವಿರಾರು ಪುಸ್ತಕಗಳನ್ನು ಮಕ್ಕಳು, ಮಹಿಳೆಯರು ಸಹಿತ ಸಾಹಿತ್ಯ ಪ್ರೇಮಿಗಳಿಗೆ ಉಚಿತವಾಗಿ ಹಂಚಿದ, ಓದುವ ಹುಚ್ಚು/ಅಭಿರುಚಿ ಹಚ್ಚಿಸಿದ, ಹೆಚ್ಚಿಸಿದ ಕು. ಗೋ.(ಹೆರ್ಗ ಗೋಪಾಲ ಭಟ್ಟ)1938ರಲ್ಲಿ ಜನಿಸಿ, ಜೂ. 6ಕ್ಕೆ 84ಸಾರ್ಥಕ ವಸಂತ ಕಂಡು 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ. ............................................... ಹೆರ್ಗದ ಮಾಣಿ, ಮೌನ ದಾನಿ, ಲಕ್ಷ್ಮಿಗಿಂತ ಸರಸ್ವತಿ ಪ್ರೇಮಿ! *ಎಸ್. ಜಿ. ಕುರ್ಯ, ಉಡುಪಿ ಆರಡಿಯ ದೇಹ ಒಂದಿಷ್ಟು ಬಾಗಿದೆ, ಮಾಗಿದೆ. ಸಾಹಿತ್ಯ ಪ್ರಪಂಚ ನೋಡಲು ಮೂಗಿನ ಮೇಲೆ ದಪ್ಪ ಕನ್ನಡಕವಿದೆ, ಅಷ್ಟಿಷ್ಟು ಉಳಿದ ಹಲ್ಲುಗಳಿರುವ ಬಾಯಲ್ಲಿ ನಿಷ್ಕಲ್ಮಶ ನಗುವಿದೆ, ಮಾತಿಗೆ ಕೂತರೆ/ ನಿಂತರೆ ದ್ವೇಷ ಮರೆತು ಪ್ರೀತಿ ಹಂಚುವ ಇವರ ಹೃದಯ ಸಾಮ್ರಾಜ್ಯದಲ್ಲಿ ವ್ಯಕ್ತ, ಅವ್ಯಕ್ತವಾಗಿ ಜಾಗ ಪಡೆದಿರುವವರ ಸಂಖ್ಯೆ ಅನಂತ.... ಇದು ನಮ್ಮ ಕು. ಗೋ.ಅರ್ಥಾತ್ ಹೆರ್ಗದ ಮಾಣಿ ಗೋಪಾಲ ಭಟ್ಟರ ಪ್ರವರ. ಬದುಕಿನ ಏಳುಬೀಳಿನ ನಡುವೆ ಸಾರ್ಥಕ 84ವಸಂತಗಳನ್ನು ಪೂರೈಸಿ 85ನೇ ಸಂವತ್ಸರದ ಹೊಸ್ತಿಲಲ್ಲಿದ್ದಾರೆ. ವಿಜಯ ಕರ್ನಾಟಕದೊಂದಿಗೆ ಬಾಲ್ಯದಿಂದ ಈವರೆಗಿನ ಆಗುಹೋಗುಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಮುಕ್ತವಾಗಿ ಹಂಚಿಕೊಂಡಿದ್ದು ಹೀಗೆ. ಕನಸಿಗೆ ಬಡತನ ಅಡ್ಡಿ: ಹೆರ್ಗದ ಸರಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ, ಮಣಿಪಾಲದ ಬಳಿಕ ಪಿರಿಯಾಪಟ್ಟಣದಲ್ಲಿ 7ರಿಂದ ಎಸ್ಸೆಸ್ಸೆಲ್ಸಿ ಓದಿನ ನಡುವೆ ಕನಸು ಕಾಣಲು ಬಡತನ ಅಡ್ಡಿಯಾಗಿತ್ತು. ಹುಣಸೂರಲ್ಲಿದ್ದ ಮಾವನ ಹೋಟೆಲಲ್ಲಿ ಕೆಲಸ ಮಾಡುತ್ತಾ ಶಾಲಾ ಓದಿನ ವೇಳೆ ಹೈಸ್ಕೂಲಲ್ಲಿದ್ದಾಗ ಅದು ಹೇಗೋ ಸಾಹಿತ್ಯ ಬೆಲ್ಲದ ರುಚಿ ಹತ್ತಿತು. ಹೋಟೆಲ್ ಸಹವಾಸ: ಹೋಟೆಲಿಗೆ ಬಂದು ಹೋಗುವ ಗಿರಾಕಿಗಳ ಮಾತು, ಹಾವಭಾವವೆಲ್ಲವೂ ಹಾಸ್ಯ ಲೇಖನಕ್ಕೆ ವಸ್ತುವಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 37ನೇ ರ್ಯಾಂಕ್ ಪಡೆದಿದ್ದರೂ ಹೋಟೆಲ್ ಕೆಲಸವನ್ನೇ ವೃತ್ತಿಯಾಗಿ ಮಾಡಿಕೊಳ್ಳುವ ಬಯಕೆಗೆ ಮೇಸ್ಟ್ರು, ಡಾಕ್ಟ್ರೆಲ್ಲಾ ಬಂದು ಕಾಲೇಜಿಗೆ ನಡಿ ಕಂದಾ...ಎನ್ನುವ ಒತ್ತಾಯ ಮಾಡಿದರು. ವಾರಕ್ಕೆ 4ಸಿನಿಮಾ: ಮೈಸೂರಿನ ಅಣ್ಣನ ಹೋಟೆಲಲ್ಲಿದ್ದು ಕಾಲೇಜಿಗೆ ಹೋಗತೊಡಗಿದೆ. ಇದ್ದಕ್ಕಿದ್ದಂತೆ ಒಂದು ದಿನ ಹೇಳದೆ ಕೇಳದೆ ಬೆಂಗಳೂರಿಗೆ ಕಾಲ್ಕಿತ್ತು 20ರೂ. ಸಂಬಳಕ್ಕೆ ಹೋಟೆಲೊಂದನ್ನು ಸೇರಿ ಎರಡು ತಿಂಗಳು ಕೆಲಸ ಮಾಡಿದೆ. ನನ್ನನ್ನು ಪತ್ತೆ ಹಚ್ಚಿದ ಅಣ್ಣ ಮೈಸೂರಿಗೆ ವಾಪಸ್ ಕರೆತಂದ, ವಾರಕ್ಕೆ ಮೂರ್ನಾಲ್ಕು ಸಿನಿಮಾ ನೋಡುವ ಹವ್ಯಾಸ ಚಟವಾಯಿತು. ಕೈಹಿಡಿದ ಎಲ್ಲೈಸಿ: ಮೈಸೂರು ಯುವರಾಜ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿಯಾಗಿದ್ದರೂ ಇಂಟರ್‍ಮೀಡಿಯೇಟ್‍ನಲ್ಲಿ ಎಡವಿ ಮೇಲೆದ್ದೆ. ಬಿಎಸ್ಸಿಯಲ್ಲಿ ಡುಮ್ಕಿ ಹೊಡೆದು ಊರಿಗೆ ಬಂದ ಬಳಿಕ ಎಸ್ಸೆಸ್ಸೆಲ್ಸಿ ಅಂಕದ ಆಧಾರದಲ್ಲಿ ಭಾರತೀಯ ಜೀವ ವಿಮಾ ನಿಗಮ(ಎಲ್ಲೈಸಿ)ವನ್ನು 130ರೂ. ಸಂಬಳಕ್ಕೆ ಸೇರಿದೆ. ಮೊದಲ ಕೃತಿ ಹೆರಿಗೆ: ಚಿಕ್ಕಮಗಳೂರಿನಲ್ಲಿ ನಾಲ್ಕು ವರ್ಷವಿದ್ದೆ, ಸಾಹಿತ್ಯ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ತಂದೆ ನೀಡಿದ ಪೆÇ್ರೀತ್ಸಾಹದಿಂದ ನನ್ನ ಚೊಚ್ಚಲ ಕೃತಿ ಸವ್ಯಸಾಚಿಯ ಹೆರಿಗೆಯಾಯಿತು. ಎಲ್ಲಾ ಪತ್ರಿಕೆ, ವಾರಪತ್ರಿಕೆ, ಸಾಪ್ತಾಹಿಕ, ಪಾಕ್ಷಿಗಳಲ್ಲೂ ಕಥೆ, ಲೇಖನ, ಹಾಸ್ಯ ಬರಹ ಪ್ರಕಟವಾಗತೊಡಗಿತು, ಆಕಾಶವಾಣಿಯಲ್ಲೂ ಬಿತ್ತರವಾಯಿತು. ಸ್ವಯಂ ನಿವೃತ್ತಿ: ಗುಮಾಸ್ತನಾಗಿ ಮಡಿಕೇರಿ, ಕುಂದಾಪುರ, ಉಡುಪಿಯಲ್ಲಿ ಸೇವೆ ಸಲ್ಲಿಸಿ ಆಡಳಿತಾಧಿಕಾರಿಯಾಗಿದ್ದ ವೇಳೆ ದಿನಕ್ಕೆ ಕೇವಲ 6.15ಗಂಟೆ ಕರ್ತವ್ಯ ಮಾಡಬೇಕಿದ್ದರೂ 10ರಿಂದ 12ಗಂಟೆ ಗ್ರಾಹಕರ ಸೇವೆಯಲ್ಲಿ ನಿರತನಾಗಿದ್ದೆ. ಪತ್ನಿಯ ವಿಯೋಗದಿಂದಾಗಿ ನಿವೃತ್ತಿಗೆ ಒಂದು ವರ್ಷ ಮೊದಲೇ ಆರ್ಥಿಕ ತೊಂದರೆಗೆ ಸಿಲುಕಿ ಸ್ವಯಂನಿವೃತ್ತಿ ಪಡೆದು ಮನೆ ಸೇರಿದೆ. ಓದುಗರಿಗಾಗಿ ಪ್ರಕಟಣೆ: ಸಾಹಿತ್ಯ ಕೃತಿಗಳ ಓದು, ಪ್ರಕಟಣೆ, ವಿತರಣೆಯಲ್ಲಿ ತೊಡಗಿದೆ. ನಾನು ಬರೆದದ್ದು ಆರು ಕೃತಿ ಮುದ್ರಣ, ಮರುಮುದ್ರಣವಾಗಿದೆ. ನನ್ನ ಕೈಯಿಂದ ದುಡ್ಡು ಹಾಕಿ ನನ್ನ ಕೃತಿಗಳನ್ನು ಹಂಚಿದೆ, ಆದರೆ ತೃಪ್ತಿ ಸಿಗಲಿಲ್ಲ. 500 ಪುಸ್ತಕ ಉಳಿದಾಗ ಓದುಗರು ಬೇಕೆಂದು 2,000 ರೂ. ಖರ್ಚು ಮಾಡಿ ಪ್ರಕಟಣೆ ಕೊಟ್ಟಿದ್ದು ಆ ಕಾಲಕ್ಕೆ ಗಮನ ಸೆಳೆಯಿತು. ಕಾಯಂ ಓದುಗರು: ಪುಸ್ತಕ ಸಂಸ್ಕøತಿ ಪಸರಿಸುವ ನೆಲೆಯಲ್ಲಿ ಅಜ್ಞಾತರೊಬ್ಬರು 11ಲಕ್ಷ ರೂ. ನೆರವು ನೀಡಿ ಕಂತಿನಲ್ಲಿ ಹಿಂತಿರುಗಿಸಿದರೂ ಬಾಕಿಗಾಗಿ ಮನೆಗೆ ಪೆÇೀಸ್ಟ್ ಕಾರ್ಡ್ ಬರೆವ ಚಳವಳಿಯನ್ನೇ ಆರಂಭಿಸಿದ್ದರು. 200ಮಂದಿ ಕಾಯಂ ಪುಸ್ತಕ ಪ್ರೇಮಿಗಳ ಮನೆಗೆ ತನ್ನ ಹಾಗೂ ಅನ್ಯರ ಹೊಸ ಪುಸ್ತಕ ಬಿಡುಗಡೆಯಾದ ಕೂಡಲೇ ಕಳುಹಿಸುತ್ತಾರೆ. ತಪ್ಪಿದ ಪೆಟ್ಟು: ಕೃತಿ ದುಡ್ಡು ಕೊಡೋರು ಎಲ್ಲೋ ಕೆಲ ಮಂದಿ, ಉಳಿದವರು ಓದಿ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾರೆ. ನನ್ನ ಜೀವನಾನುಭವ, ಸಮಾಜದ ಜನರಿಂದ ಕೇಳಿದ್ದು, ನೋಡಿದ್ದೆಲ್ಲಾ ಕಥೆ, ಹಾಸ್ಯ ಲೇಖನವಾಗಿದೆ, ಪೆಟ್ಟು ಕೊಡಲು ಬಂದವರಿದ್ದಾರೆ. ನನ್ನನ್ನು ನೋಡಲೆಂದೇ ಬೆಂಗಳೂರಿನಿಂದ ಬಂದು ಪುಸ್ತಕದ ದುಡ್ಡು ಕೊಟ್ಟು ಹೋದ ಅಭಿಮಾನಿಗಳಿದ್ದಾರೆ. ಬೆಲೆ ಕಟ್ಟಲಾಗದು: ಶಾಲಾ, ಕಾಲೇಜುಗಳಿಗೆ, ಸಂಘ ಸಂಸ್ಥೆಗಳಿಗೆ ಹೋಗಿ ಪುಸ್ತಕ ಮಾರಿದ್ದು 10ಪರ್ಸೆಂಟಾದರೆ ಉಚಿತವಾಗಿ ನೀಡಿದ್ದು 90ಪರ್ಸೆಂಟಾದರೂ ಅದರಲ್ಲಿರುವ ಆತ್ಮ ತೃಪ್ತಿ, ಖುಷಿ, ಸಂತೋಷ, ನೆಮ್ಮದಿಗೆ ಬೆಲೆ ಕಟ್ಟಲಾಗದು. ಗಂಡು ಮಕ್ಕಳಿಗಿಂತಲೂ ವಿದ್ಯಾರ್ಥಿನಿಯರು, ಹೆಣ್ಮಕ್ಕಳು ಹೆಚ್ಚಿನ ಪುಸ್ತಕ ಪ್ರೇಮಿಗಳಾಗಿದ್ದಾರೆ, ನನ್ನ ಮೇಲೂ ಅಭಿಮಾನ ಹೊಂದಿದ್ದಾರೆ. ಪುಸ್ತಕ ಹಂಚಿಕೆ: ಓದಿ ನನಗೆ ಇಷ್ಟವಾದ ಪುಸ್ತಕವನ್ನು ಹಂಚುತ್ತೇನೆಯೇ ಹೊರತು ಅನ್ಯರ ಓದಿನ ಸ್ವಾತಂತ್ರ್ಯದ ಹರಣ ಮಾಡೋದಿಲ್ಲ. ಹಾಸ್ಯ ಭಾಷಣವನ್ನೂ ಹತ್ತಾರು ಕಡೆ ಮಾಡಿದ್ದೇನೆ, ರೇಡಿಯೋ ಭಾಷಣ ಕೇಳಿದ ನೂರಾರು ಮಂದಿ ಅಭಿಮಾನಿಗಳಿದ್ದಾರೆ. ಪರಿಚಿತರ 83ಕೃತಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದೇನೆ. ಪುಸ್ತಕಕ್ಕಾಗಿ ಪತ್ರ: ಕೆಲ ಮಕ್ಕಳಂತೂ ಇಂತಹ ಪುಸ್ತಕ ಬೇಕೆಂದು ಪತ್ರ ಬರೆದು ನನ್ನಿಂದ ಧರ್ಮಕ್ಕೆ ತರಿಸಿಕೊಳ್ಳುತ್ತಾರೆ(ಹಣಕ್ಕಿಂತ ಅವರು ಓದುತ್ತಾರೆನ್ನೋದೇ ಮುಖ್ಯ) ಉಗ್ರಾಣ, ಅಸಾಮಾನ್ಯ ಕನ್ನಡಿಗ, ಗೊರೂರು, ಶಿವರಾಮ ಕಾರಂತ ಸಹಿತ 50ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಶ್ರೀರಾಮ ವಿಠಲ ಸಹಿತ ಅನ್ಯ ಗೌರವಗಳಿಗೂ ಪಾತ್ರನಾಗಿದ್ದೇನೆ. ಸದ್ದಿಲ್ಲದ ದಾನಿ: ನನ್ನ ಸಾಲವನ್ನೆಲ್ಲಾ ಮಕ್ಕಳೇ ತೀರಿಸಿದ್ದಾರೆ. ಪಿಂಚಣಿ ಮನೆ ಖರ್ಚಿಗೆ, ಪುಸ್ತಕ ಹಂಚಿಕೆಗೆ ಬಳಕೆಯಾಗುತ್ತಿದೆ. ಬಜಗೋಳಿಯ ಬಡಕುಟುಂಬವೊಂದರ ಕಷ್ಟಕ್ಕೆ ಸದ್ದಿಲ್ಲದೆ ಒಂದು ಲಕ್ಷ ರೂ. ಸಾಲ ಮಾಡಿ ನೆರವು ಒದಗಿಸಿದ್ದು ಕಂತಿನಲ್ಲಿ ತೀರಿಸುತ್ತಿದ್ದೇನೆ. ಬಾಗಲೋಡಿ ದೇವರಾಯರು, ಶಾಂತಾರಾಮ ಸೋಮಯಾಜಿ, ಗೊರೂರು ನನ್ನಿಷ್ಟದ ಸಾಹಿತಿಗಳಾಗಿದ್ದಾರೆ. ಸುಹಾಸಂ 25: ಸಮಾನ ಮನಸ್ಕರ ಜತೆ ಸೇರಿ ಸ್ಥಾಪಿಸಿದ ಸುಹಾಸಂ(ಸುಹಾಸ ಹಾಸ್ಯ ಪ್ರಿಯರ ಸಂಘ) ಬೆಳ್ಳಿ ಹಬ್ಬ ಕಂಡಿದೆ. 10ರಿಂದ 15ಕ್ಕೆ ಸೀಮಿತವಾಗಿದ್ದ ಸುಹಾಸಂ ಕಾರ್ಯಕ್ರಮಕ್ಕೆ ಕಿದಿಯೂರು ಹೋಟೆಲ್ ನೆಲೆಯಾಗಿದೆ. 25ವರ್ಷದಿಂದ ತಿಂಡಿ ಖರ್ಚು ಹೊರತು ಬಾಡಿಗೆಯಿಲ್ಲದೆ ಸಾಹಿತ್ಯ ಸೇವೆಗೆ ನೀಡುತ್ತಿರುವ ಸಹಕಾರವಂತೂ ಸ್ಮರಣೀಯ. ಸುಹಾಸಂ ಮೂಲಕ ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತಿಗಳನ್ನು ಕರೆಸಿ ಉಪನ್ಯಾಸ, ಪುಸ್ತಕ ಬಿಡುಗಡೆ ಮಾಡಲಾಗಿದೆ. ದ್ವೇಷ ಬಿಟ್ಟು ಪ್ರೀತಿಸಿ: ದೇವರು ಪ್ರತ್ಯಕ್ಷರಾದರೆ ಬದುಕಿನ ನೋವೆಲ್ಲಾ ಮಾಯ ಮಾಡು ಎನ್ನುವುದೇ ಮೊದಲ ಬೇಡಿಕೆ. ನನಗೆ ಕೋಪ ಬರೋದು ಕಡಿಮೆ, ಬಂದರೂ ನಾನಾ ಸಮಾಧಾನ ಮಾಡಿಕೊಳ್ತೇನೆ(ಕೋಪ ಮಾಡಿ ಪ್ರಯೋಜನವಿಲ್ಲ!), ಯಾರನ್ನೂ ದ್ವೇಷಿಸಬಾರದು, ಎಲ್ಲರನ್ನೂ ಪ್ರೀತಿಸಬೇಕೆನ್ನುವುದು ನನ್ನ ಬದುಕಿನ ತತ್ವ, ಸಿದ್ಧಾಂತವಾಗಿದೆ. ನೂರಾರು ಜನರ ಸ್ನೇಹ, ಅನ್ಯರಿಗೆ ಸಹಾಯ ಮಾಡುವುದರಿಂದ ನಮ್ಮ ಬದುಕಿನ ಉದ್ಧಾರ ಸಾಧ್ಯ. ಸೃಷ್ಟಿ ಆಸ್ವಾದಿಸಿ: ಮಕ್ಕಳು, ವಿದ್ಯಾರ್ಥಿಗಳು, ಯುವಜನತೆ ಉತ್ತಮ ಯೋಚನೆ, ಯೋಜನೆಗಳಲ್ಲಿ ನಿರತರಾಗಬೇಕೇ ಹೊರತು ಕೆಟ್ಟ ಚಿಂತನೆ ಸಲ್ಲದು. ತೃಪ್ತಿ ಸಿಗುವ ಕೆಲಸ ಮಾಡಿ, ನಿಮ್ಮದೇ ಇಸಂ ಇರಲಿ, ಸೋಮಾರಿಗಳಾಗಬೇಡಿ, ಪ್ರಗತಿಪ್ರಿಯರಾಗಿ. ಗಿಡ, ಮರ, ಪ್ರಕೃತಿ ಸಹಿತ ಸೃಷ್ಟಿಯ ಸೌಂದರ್ಯ ಆಸ್ವಾದಿಸಿ, ಬೇಸರವಾದರೆ ಆಕಾ, ಪಶು, ಪಕ್ಷಿಯನ್ನಾದರೂ ನೋಡಿ. ಕಷ್ಟಗಳಿಗೆ ಸ್ಪಂದಿಸಿ: ಜನರು ಸ್ವಾರ್ಥ ತೊರೆದು ಅನ್ಯರ ಕಷ್ಟಗಳಿಗೆ ಸ್ಪಂದಿಸುವುದೇ ಮಾನವೀಯ ಬದುಕಿನ ಗುಟ್ಟು. ಸಾಹಿತ್ಯ ಓದಬೇಕು, ಬದುಕಿನಲ್ಲಿ ಕೈ ಬಾಯಿ ಸ್ವಚ್ಛವಾಗಿಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಸರ್ವತೋಮುಖ ಸಂತೋಷ, ಶಾಂತಿ, ನೆಮ್ಮದಿ ಕೊಡುವ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು. ................................... ಸಾಹಿತ್ಯ ಸರಸ್ವತಿಯ ವಿಶಿಷ್ಟ ಪರಿಚಾರಕ ಕು. ಗೋ. ಚಲಿಸುವ ಪುಸ್ತಕ ಸಂಸ್ಕøತಿಯ ಪರಿವ್ರಾಜಕ ನಾನೊಬ್ಬ ಸಾಹಿತಿಯೆನ್ನುವ ಯಾವುದೇ ಹಮ್ಮಿಲ್ಲ, ಬಿಮ್ಮಿಲ್ಲ, ಕೊಂಬಿಲ್ಲ, ಕೋಳಿ ಜಂಬವೂ ಇಲ್ಲದ ಕು. ಗೋ. ಪುಸ್ತಕಗಳನ್ನು ಕೊಂಡು ಓದಬಲ್ಲವರಿಗೆ ಒಳ್ಳೆಯ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಮನೆಬಾಗಿಲಿಗೆ ಮಾರಿದ್ದಾರೆ. ಪುಸ್ತಕಗಳನ್ನು ಕೊಳ್ಳಲಾಗದವರಿಗೆ, ಓದುವ ಅಭಿರುಚಿ ಉಳ್ಳವರಿಗೆ ಉಚಿತವಾಗಿ ಪುಸ್ತಕಗಳನ್ನು ಕೊಟ್ಟು ಓದಿ ನೋಡಿ ಎಂದಿದ್ದಾರೆ, ಬೇಕೆಂದರೆ ಮತ್ತಷ್ಟು ಪುಸ್ತಕಗಳ ದಾನ ಮಾಡಿದ್ದಾರೆ. ಹೀಗೆ ಪುಸ್ತಕ ಹಂಚಿ, ಮಾರಿ, ಕು. ಗೋ. ಎಷ್ಟೊಂದು ಸಂಪಾದಿಸಿರಬಹುದಪ್ಪಾ ಎಂದು ಲೆಕ್ಕ ಹಾಕಿದರೆ ಅದು ಜನರ ಪ್ರೀತಿ, ವಿಶ್ವಾಸದ ಅಪಾರ ಸಂಪತ್ತಿನ ಹೊರತು ಬೇರೇನೂ ಇಲ್ಲ. ಸಾಹಿತಿಗಳು ಅನ್ಯರ ಪುಸ್ತಕಗಳ ಕುರಿತು ನಾಲ್ಕು ಒಳ್ಳೆಯ ಮಾತನ್ನಾಡೋದು ಬಲು ಕಡಿಮೆ, ಆದರೆ ಕು. ಗೋ. ಮಾತ್ರ ಇದಕ್ಕೆ ಅಪವಾದ. ತಾನು ಬರೆದದ್ದೇ ಮನೆಯಲ್ಲಿ ಓದುವವರಿಲ್ಲದೆ, ಮಾರಾಟವಾಗದೆ ರಾಶಿ ಬಿದ್ದಿರುವಾಗ ಅನ್ಯರ ಪುಸ್ತಕಗಳ ಪ್ರಕಟಣೆಗೆ ಮುಂದಾಗುವ ಮಾತೆಲ್ಲಿದೆ? ಪುಸ್ತಕ ಮಾರುವವರು ಒಳ್ಳೆಯ ಪುಸ್ತಕಗಳನ್ನು ಒಳ್ಳೆಯ ಓದುಗರಿಗೆ ಪುಕ್ಕಟೆಯಾಗಗಿ ಹಂಚುವುದಂತೂ ಈ ಕಲಿಯುಗದಲ್ಲಿ ವಿರಳಾತಿವಿರಳ. ಆದರೆ ಕು. ಗೋ. ಒಳ್ಳೆಯ ಪುಸ್ತಕಗಳ ಬಗ್ಗೆ ಒಳ್ಳೆಯ ಮಾತು ಮಾತ್ರವಲ್ಲ ನಾಲ್ಕು ಜನರಿಂದ ಲೇಖಕರಿಗೆ ಶಹಭಾಸ್‍ಗಿರಿ ದೊರೆವಂತೆ ಮಾಡುವ ರಾಯಭಾರಿಯೂ ಆಗಿದ್ದಾರೆ. ತನ್ನ ಮನದಲ್ಲುಳಿದವರ ಬರಹ ಪತ್ರಿಕೆಗಳಲ್ಲಿ ಬಂದರೆ ತಪ್ಪದೇ ದೂರವಾಣಿ ಕರೆ ಮಾಡಿ ಇಂದಿಗೂ ಲಲ್ಲೆಗರೆವ ಕು.ಗೋ. ಇಂದ್ರಾಳಿ ಹಯಗ್ರೀವ ನಗರದ ವಾಗ್ದೇವಿ ನಿವಾಸಿ. ಮನೆ ಮನೆಯಲ್ಲಿ ಸಾಹಿತ್ಯ ಚಟುವಟಿಕೆಯ ನಡುಮನೆಗೂ ಪ್ರೇರಕ ಶಕ್ತಿಯಾಗಿದ್ದ ಕು. ಗೋ. ಸಹೃದಯೀ ಓದುಗರ ಪರಂಪರೆ ಸೃಷ್ಟಿಯಲ್ಲಿ ನೀಡಿದ ಕೊಡುಗೆ ಅನನ್ಯ.ಜೂ. 5ರಂದು ಕಿದಿಯೂರು ಹೋಟೆಲಿನ ಶೇಷಶಯನ ಸಭಾಂಗಣದಲ್ಲಿ ನಡೆಯುವ 84ನೇ ವಸಂತ ಸಂಭ್ರಮದಲ್ಲಿ ಹಾಸ್ಯ ಬರಹಗಾರ ಶ್ರೀನಿವಾಸ ವೈದ್ಯರ ಕೃತಿ ಹಂಚಲಿದ್ದಾರೆ. ....................... ಪುಸ್ತಕಕ್ಕೆ ಸಂಬಂಧಿಸಿ ಮಸ್ತಕದಲ್ಲಿಡಬೇಕಾದ ವಿಚಾರ... *ಪಡೆದ ಪುಸ್ತಕವನ್ನು ಗೌರವ ಪ್ರತಿಯೆಂದು ಭ್ರಮಿಸಿ ಲೇಖಕರಿಗೆ, ಪ್ರಕಾಶಕರಿಗೆ ದುಡ್ಡು ಕೊಡದಿರುವುದು. *ಧರ್ಮಕ್ಕೆ ಪುಸ್ತಕ ಕೊಟ್ಟರೂ ಅದನ್ನು ಓದದಿರುವುದು. *ಪುಸ್ತಕ ಕೊಟ್ಟವರಿಗೆ ನಾಲ್ಕು ಸಾಲು ಹೊಗಳಿಯೋ ಬೈದೋ ಪತ್ರ/ಕಾರ್ಡು ಬರೆಯದಿರುವುದು *ಪುಸ್ತಕ ಬರೆಯುವವರ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುವುದು ದೋಷ ಪರಿಹಾರಕ್ಕಾಗಿ ನೀವೇನು ಮಾಡಬೇಕು? *ಯಾರದರೂ ಪುಸ್ತಕ ಒಟ್ಟರೆ ಸುಮ್ಮನೆ ತೆಗೆದುಕೊಂಡು ಚೀಲಕ್ಕೆ ಸೇರಿಸದೆ(ಸೇರಿಸಿದರೂ!) ಎಷ್ಟು ಹಣ ಕೊಡಬೇಕೆಂದು ಕೇಳಿ ಪುಸ್ತಕದ ಮೌಲ್ಯ ಸಂದಾಯ ಮಾಡಬೇಕು. *ಬೀಡಿ, ಸಿಗರೇಟು, ಚಾ, ಕಾಫಿ, ನಾಟಕ, ಸಿನಿಮಾ ಅಂತ ಖರ್ಚು ಮಾಡುವಂತೆ ಈ ಜನ್ಮದಲ್ಲಿ ಒಂದೆರಡಾದರೂ ಪುಸ್ತಕ ಹಣ ಕೊಟ್ಟು ಖರೀದಿಸುವುದು *ಸಾಹಿತ್ಯ ಸಮ್ಮೇಳನ, ಸಭೆ, ಸಮಾರಂಭ, ಕವಿಗೋಷ್ಠಿ, ಹಾಸ್ಯ ಗೋಷ್ಠಿಗಳಿದ್ದರೆ ತಪ್ಪದೇ ಹೋಗಬೇಕು, ಮಕ್ಕಳನ್ನೂ ಕರೆದೊಯ್ದು ಸರಸ್ವತಿ ಸೇವೆಗೆ ಪೆÇ್ರೀತ್ಸಾಹಿಸಬೇಕು. *ಪುಸ್ತಕ ಪ್ರೀತಿ ಬೆಳೆಸಿಕೊಂಡರೆ, ಸಂತೋಷ, ನೆಮ್ಮದಿ, ಆತ್ಮತೃಪ್ತಿ ನಮ್ಮದಾಗುತ್ತದೆ. ............................ *50,000 ಪುಸ್ತಕ ವಿತರಣೆ ಲೇಖಕರು, ಓದುಗರು, ಪ್ರಕಾಶಕರ ಮಧ್ಯೆ ಕೊಂಡಿಯಾದ ಕು. ಗೋ.(ಹೆರ್ಗ ಗೋಪಾಲ ಭಟ್ಟ) ಯಾವುದೇ ಅಸೂಯೆಯಿಲ್ಲದೆ 50,000 ಪುಸ್ತಕ ವಿತರಿಸಿದ್ದಾರೆ! *ಲೇಖಕರಿಗಿಂತ ಹೆಚ್ಚು ಸಂತೃಪ್ತಿ 15ಲಕ್ಷ ರೂ. ಮೌಲ್ಯದ 300ರಿಂದ 400 ಲೇಖಕರ(5-6 ಮಂದಿಯದ್ದು ಹೆಚ್ಚು ವಿತರಣೆ) ಪುಸ್ತಕಗಳನ್ನು ಆಸಕ್ತ ಓದುಗರ ಕೈಗೆ ನೀಡಿದ್ದಾರೆ. *ಕನ್ನಡ ಪಂಡಿತರ ಪ್ರೇರಣೆ ಮಾಧ್ಯಮಿಕ-ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರ ಕನ್ನಡ ಪಾಠದ ಕಂಪು, ಇಂಪು ಕು. ಗೋ. ಸಾಹಿತ್ಯಾಸಕ್ತಿಗೆ ಕಾರಣ. ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರ ಮುಗುಳು ಕೃಷಿಯಿಂದ ನವಚೇತನ ಪಡೆದಿದ್ದಾರೆ. *ಅಂತರ್ಜಾಲ ಸಾಹಿತಿಗಳ ಸೃಷ್ಟಿ ಸಾಹಿತ್ಯ ಓದಿನಿಂದ ಮಾಹಿತಿ ಗಳಿಕೆ, ಮನರಂಜನೆ, ಟೈಂಪಾಸ್ ಸಾಧ್ಯ. ಈಗ ಅಂತರ್ಜಾಲ, ವಾಟ್ಸ್ಯಾಪ್ ಸಾಹಿತಿಗಳ ಸೃಷ್ಟಿಯಾಗಿದೆ. ಗುಂಪುಗಾರಿಕೆಯಿಂದಾಗಿ ಕೆಲವರು ವಿಜೃಂಭಿಸುತ್ತಿದ್ದಾರೆ. *ಸಾಹಿತ್ಯ ಓದು ಮುಖ್ಯ ಹಳೆ ತಲೆಮಾರಿನ ಪುಸ್ತಕಗಳನ್ನು ಈಗಿನ ಲೇಖಕರು, ಓದುಗರು ಓದಲೇಬೇಕು. ಕನ್ನಡ ಸಾಹಿತ್ಯದ ಬಗ್ಗೆ ಯಾವುದೇ ನಿರಾಸೆ ಬೇಡ. *ಜವಾಬ್ದಾರಿ ಮರೆಯದಿರಿ ಕನ್ನಡಿಗರು ಹಾಗೂ ಸರಕಾರ ಕನ್ನಡತನದಿಂದ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಬೇಕು, ಇದು ನಮ್ಮೆಲ್ಲರ ಜವಾಬ್ದಾರಿ. *ಕು. ಗೋ. ಹೆಸರ ಹಿಂದೆ... ಕಾಲೇಜು ದಿನಗಳಲ್ಲಿ ಕುಸುಮಾ ಎಂಬ ಬೆಳದಿಂಗಳ ಬಾಲೆಯನ್ನು ಆಕೆಗೆ ಗೊತ್ತಿಲ್ಲದಂತೆ (ಒನ್ ವೇ ಲವ್) ಮನಸಾ ಪ್ರೀತಿಸುತ್ತಿದ್ದೆ. ಆಕೆಯ ಹೆತ್ತವರು ನನ್ನನ್ನು ಇಷ್ಟಪಟ್ಟು ಮದುವೆ ಪ್ರಸ್ತಾಪದೊಂದಿಗೆ ಬಂದರೂ ಸಗೋತ್ರದಿಂದಾಗಿ ಮದುವೆಯಾಗಲಿಲ್ಲ. ಅದೃಶ್ಯವಾಗಿ, ಅವ್ಯಕ್ತವಾಗಿ ಸಾಹಿತ್ಯ-ಬದುಕಿಗೆ ಕುಸುಮಾ ಇಂದೂ ಪ್ರೇರಣೆಯಾಗಿದ್ದಾಳೆ. ಮೈಸೂರಿನಲ್ಲಿದ್ದ ಅಣ್ಣನ ಹೋಟೆಲಿಗೆ ಬರುತ್ತಿದ್ದ ಕುಸುಮನಿಗೆ ಎರಡು ಇಡ್ಲಿ ಕೇಳಿದರೆ ನಾಲ್ಕಿಡ್ಲಿ ಕಟ್ಟಿಕೊಡುತ್ತಿದ್ದರು. ಕುಸುಮಾ ಹೆಸರಲ್ಲಿ ಸಾಹಿತ್ಯ ರಚಿಸುತ್ತಿದ್ದೆ. ದಾಂಪತ್ಯದ ಗಂಟು ಬೀಳದಿದ್ದರೂ ಆಕೆಯ ಹೆಸರಿನ ಒಂದಕ್ಷರವನ್ನು(ಕು) ನನ್ನ ಹೆಸರಿಗೆ ಗಂಟು ಹಾಕಿಕೊಂಡು ಕುಖ್ಯಾತನಾಗಿದ್ದೇನೆ(ಕು. ಗೋ.) .......................... *ಮಗ, ಮಗಳು: ದೊಡ್ಡ ಮಗ ಆತ್ಮಭೂತಿ ವಿಪೆÇ್ರೀ ಸಂಸ್ಥೆಯ ಉದ್ಯೋಗಿ, ವಿಷ್ಣುಮೂರ್ತಿ ಗೋ ಸಾಕಣೆಯಲ್ಲಿ ನಿರತ, ಮಗಳು ಆಶಾ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲಿನಲ್ಲಿ ಶಿಕ್ಷಕಿ. *ಅಸಹ್ಯ ನೋವು: ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಕು. ಗೋ. ಇಳಿ ವಯಸ್ಸಿನಲ್ಲಿ ಸರ್ಪ ಸುತ್ತಿನ ನೋವು ಅನುಭವಿಸಿದರೂ ಜನರ ಪ್ರೀತಿ ವಿಶ್ವಾಸದಿಂದ ವಾಕಿಂಗ್ ಸ್ಟಿಕ್ ಹಿಡಿದು ನಡೆವಷ್ಟು ಸುಧಾರಿಸಿದ್ದಾರೆ. ........................ --

No comments:

Post a Comment