Powered By Blogger

Monday, December 26, 2022

ಅನಸೂಯಾ ರಾಮಯ್ಯ ಮಾಲಗೊಂಡಹಳ್ಳಿ- - ಎನ್ ಸಂಧ್ಯಾರಾಣಿ ಅವರ ಕಾದಂಬರಿ -" ಇಷ್ಟು ಕಾಲ ಒಟ್ಟಿಗಿದ್ದು "{ 2022 }

ಕೃತಿ : ಇಷ್ಟು ಕಾಲ ಒಟ್ಟಿಗಿದ್ದು . . . ಲೇಖಕರು : ಎನ್. ಸಂಧ್ಯಾ ರಾಣಿ ಪ್ರಕಾಶಕರು : ಸಾವಣ್ಣ ಎಂಟರ್ ಪ್ರೈಸಸ್, ಬೆಂಗಳೂರು ಕೃತಿಯ ಅರ್ಪಣೆಯ ಮಾತುಗಳಲ್ಲಿನ ಕೊನೆಯ ಸಾಲು " ನಾನು ಕಂಡ , ಮೆಚ್ಚಿದ ,ಮರುಗಿದ ,ಬೆರಗಾದ ಎಲ್ಲಾ ಹೆಣ್ಣು ಜೀವಗಳಿಗೆ " ತುಂಬಾ ಆಪ್ತವಾಗುವ ಈ ಮಾತುಗಳು ಮನ ಮುಟ್ಟುತ್ತವೆ. ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ಪ್ರಖ್ಯಾತ ಸಂಗೀತಕಾರ ನೀಲ ಲೋಹಿತರ ಪತ್ನಿ ಕಾತ್ಯಾಯಿನಿ ಅವರ ಸಂದರ್ಶನದ ವೇಳೆ ಲೇಖಕಿಯು ಒಂದು ಪ್ರಶ್ನೆ ಕೇಳಿದಾಗ ಅವರ ಮುಖಭಾವದ ಬದಲಾವಣೆಯೊಂದಿಗೆ ಕಣ್ಣೀರಧಾರೆಯ ಬಗ್ಗೆ ಹೇಳುವಾಗ ಓದುಗರಿಗೂ ಪ್ರತ್ಯಕ್ಷ ಅನುಭವದಂತೆ ಆರ್ದ್ರತೆಯ ಅನುಭವ ಆಗುತ್ತದೆ. ಈ ಪ್ರಸಂಗವು ಕೃತಿಯ ಸಂವೇದನಾ ಶೀಲತೆಗೆ ಸಾಕ್ಷಿಯಾಗಿದೆ. ಈ ಕಾದಂಬರಿ ಮುಖ್ಯವಾಗಿ ನಾಲ್ಕು ಸ್ತ್ರೀ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಸ್ತ್ರೀ ಪಾತ್ರಗಳಲ್ಲಿ ಕೆಲವು ಪಾತ್ರಗಳ ಧೋರಣೆ ನಮ್ಮಂತಹ ಪೀಳಿಗೆಯವರಿಗೆ ಅತಿರೇಕವೇನೋ ಎನಿಸಿದರೂ ಅದೆಷ್ಟು ಗಟ್ಟಿಯಾಗಿವೆ ಎಂದರೆ ಓದುತ್ತಾ ಹೋದಂತೆ ಸಹಜವೇನೋ ಅನಿಸುವಷ್ಟರ ಮಟ್ಟಿಗೆ. ಇಲ್ಲಿನ ಸಹಜವಾದ ಕಥನ ಶೈಲಿಯಿಂದ ಪಾತ್ರಗಳು ನಮ್ಮಕಣ್ಮುಂದೆ ನಿಲ್ಲುತ್ತವೆ. ಇಲ್ಲಿನ ಪಾತ್ರಗಳ ಸಂಭಾಷಣೆ ನಮ್ಮನ್ನು ಅದೆಷ್ಟು ಕಾಡುತ್ತವೆ ಎಂದರೆ ನಾನಂತು ಸಂಭಾಷಣೆಗಳಿಗಾಗಿಯೇ ಈ ಕೃತಿಯನ್ನು ಎರಡು ಬಾರಿ ಓದಿದೆ. ಅದೇ ಈ ಕಾದಂಬರಿಯ ಜೀವಾಳವೆಂದರೆ ತಪ್ಪಾಗಲಾರದು. ಇಲ್ಲಿನ ಪ್ರತಿಯೊಂದು ಪಾತ್ರಗಳಲ್ಲೂ ಸಹಜ ಜೀವಂತಿಕೆಯಿದೆ. ಕಥಾನಕ ಪರಿಸರದ ಚಿತ್ರಣದಲ್ಲಿ ನೈಜತೆಯು ಹಾಸುಹೊಕ್ಕಾಗಿದೆ. ಆ ಕಾಲಕ್ಕೆ ಪುಟ್ಟ ತಾಯಿ ಚಿಚ್ಚಿ, ಚೆನ್ನಮ್ಮ ಹಾಗೂ ಬಸಮ್ಮಕ್ಕ ತಮ್ಮದೇ ರೀತಿಯಲ್ಲಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡೇ ಬಂಡಾಯವೆದ್ದು ಗೆದ್ದವರು.ಇಂದಿನ ಅರುಂಧತಿ, ಗೌರಿಯರಿಗೆ ಹೋಲಿಸಿದರೆ ಅವರೇನು ಕಡಿಮೆಯಲ್ಲ. ಕೃತಿಯ ಬೆನ್ನುಡಿಯ ಮಾತುಗಳನ್ನು ಓದಿದಲ್ಲಿ ಸ್ವತಃ ಲೇಖಕಿಗೂ ಇಪ್ಷವಾದಂಥ ಪರಿಣಾಮಕಾರಿ ಸಂಭಾಷಣೆಗಳನ್ನು ಗಮನಿಸಬಹುದು. ಬೆನ್ನುಡಿಯಲ್ಲಿ ಇಲ್ಲದ ನನಗೆ ತುಂಬಾ ಇಷ್ಟವಾದಂಥ ಕೆಲವು ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು 1.ಸರೋಜಿನಿಯ ಸ್ವಗತ : ಕೋರ್ಟಿನ ಆ ಹಸಿರು ಹಾಳೆಗಳ ಮೇಲಿನ ಎರಡು ಸಹಿ ನನ್ನನ್ನು ಮತ್ತೆ ನಿರಂಜನ ಪೂರ್ವದ ಸರೋಜಿನಿಯನ್ನಾಗಿಸಬಲ್ಲದೆ. ತಾವಿಬ್ಬರೂ ಜೊತೆಯಾಗಿ ಕಳೆದ ಆ 25 ವರ್ಷಗಳ ಸಾಂಗತ್ಯವನ್ನು ಶೂನ್ಯವಾಗಿಸ ಬಹುದೆ ಎಂದು ಸುಮ್ಮನಾಗುತ್ತಾಳೆ . 2.ಹೇಡಿತನ ಒಂದೊಂದ್ಸಲ ಒಳ್ಳೆತನದ ವೇಷ ಹಾಕಿಕೊಳ್ಳುತ್ತೆ 3. ಪರಿಚಯ ಜಾಸ್ತಿ ಆದ ಹಾಗೆ ಬೆರಗು ಸಾಯುತ್ತ ಹೋಗುತ್ತೆ ಆದರೆ ಅಷ್ಟರಲ್ಲಿ ಸಂಬಂಧ ಅಭ್ಯಾಸ ಆಗಿಹೋಗಿರುತ್ತದೆ . ಅದನ್ನು ನಿಭಾಯಿಸೋದು ವಾಡಿಕೆ ಆಗಿಹೋಗಿರುತ್ತದೆ ಅಥವಾ ಅದಕ್ಕೆ ಪರ್ಯಾಯ ಸಿಕ್ಕಿರೋಲ್ಲ. ನಿಮ್ಮಪ್ಪ ನಿಗೆ ಯಾವತ್ತೂ ಪರ್ಯಾಯಗಳ ಕೊರತೆ ಆಗಲೆ ಇಲ್ಲ ನೋಡು 4. ಬದುಕಲು ಬೇಕಾಗುವ ಬಹುಮುಖ್ಯ ಕಾರಣ ಇನ್ನೊಂದು ಜೀವಕ್ಕೆ ನನ್ನ ಅಗತ್ಯವಿದೆ. ಅದರ ಇರುವಿಕೆ ನನ್ನ ಇರುವಿಕೆ ಅನ್ನು ಅವಲಂಬಿಸಿದೆ ಎನ್ನುವ ಅರಿವು ಮತ್ತೊಬ್ಬರಿಗೆ ನಾವು ಬೇಕು ಎನ್ನುವುದೇ ಇಳಿವಯಸ್ಸಿಗೆ ದೊಡ್ಡ ಟಾನಿಕ್. ಬಹುಶಃ ಅದಕ್ಕೆ ಮೊಮ್ಮಕ್ಕಳೆಂದರೆ ಆ ಪರಿ ಪ್ರೀತಿ. 5. ನಿಜವಾದ ಕೆಡುಕು ಶಾಪ ಇರೋದಲ್ಲ ಮಗಳೆ. ಶಾಪ ಇದೆ ಎಂದು ಕೈಚೆಲ್ಲಿ ಕೂರುವುದು ಕೆಡುಕು. ಕೃತಿಯಲ್ಲಿನ ಪ್ರಮುಖ ಪಾತ್ರಗಳ ನಡುವೆ ನಮ್ಮ ಮನದಾಳಕ್ಕೆ ಇಳಿದು ನೆಲೆಸುವ ಪಾತ್ರವೆಂದರೆ ಸರೋಜಿನಿ. ' ಒಮ್ಮೆ ಕದಡಿದ ಕೊಳವು ಮತ್ತೆ ತಿಳಿಯಾಗಿರಲು ತಳದಿ ಮಲಗಿಹ ಕಲ್ಲು ನಿನ್ನ ನೆನಪು ನೂರು ಜನಗಳ ನಡುವೆ ನಕ್ಕು ನಲಿದಾಡಿದರೂ ಧುತ್ತನೆರಗುವ ದುಗುಡ ನಿನ್ನ ನೆನಪು ಎಲ್ಲ ವಾದದ ಕಡೆಗೆ ಆವರಿಸೊ ಮೌನದ ತರ್ಕ ಮೀರಿದ ಭಾವ ನಿನ್ನ ನೆನಪು ' ಮುರಿದ ದಾಂಪತ್ಯದ ನಡುವೆಯೂ ಅವಳನ್ನು ಕಾಡುತ್ತಿದ್ದ ಗಂಡನ ನೆನಪುಗಳ ತೀವ್ರತೆಯನ್ನು ತಿಳಿಸಲು ಮೇಲಿನ ಸಶಕ್ತ ಅನನ್ಯ ರೂಪಕಗಳೇ ಸಾಕು. ವಿವಾಹ ವಿಚ್ಛೇದನವನ್ನು ಕುರಿತ ಅವಳ ಮಾತುಗಳು, ಮೊಮ್ಮಕ್ಕಳನ್ನು ಪ್ರೀತಿಸುವುದರ ಬಗ್ಗೆ, ಒಂದು ರೀತಿಯಲ್ಲಿ ಎಲ್ಲಾ ಮದುವೆಗಳು ಅಫೋಷಿತ open marriage ಎನ್ನುವ ಅವಳ ಅಭಿಪ್ರಾಯ, ಮದುವೆಯನ್ನು ಕುರಿತು ಮಗಳು ತೆಗೆದುಕೊಂಡ ತೀರ್ಮಾನದ ಬಗ್ಗೆ ಅವಳ ತಲ್ಲಣಗಳು, ಇನಾಯಳ ಸಂಸಾರದ ಬಗ್ಗೆ ಅವಳ ಸಲಹೆಗಳು ಎಲ್ಲವೂ ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಸಫಲವಾಗಿವೆ ಒಲ್ಲದ ದಾಂಪತ್ಯದಿಂದ ತಣ್ಣಗೆ ದೂರ ಸರಿದ ರೀತಿ, ಅವಳ ನಿರ್ಭಾವುಕತೆಯಿಂದ ನಿರಂಜನನು ಜೀವಂತ ಶವದಂತಾದ ರೀತಿಯನ್ನು ನೋಡಿದಾಗ ರಾಮಾಯಣದ ಸೀತೆಯಿಂದ ತಿರಸ್ಕರಿಸಲ್ಪಟ್ಟ ರಾಮನ ನೆನಪಾಯಿತು. ಆ ಬಗ್ಗೆ ಗಂಡನು ಬರೆದುಕೊಂಡಾಗ ಅವಳಿಗೆ ನೋವಾಗಿದ್ದು ಅವಳಿಗಾಗಿ ಅಲ್ಲ ಅವನಿಗಾಗಿ ಅಂದರೆ ಪ್ರೀತಿಯ ಜಾಗದಲ್ಲೀಗ ಕರುಣೆ ಅಥವಾ ಮರುಕದ ಭಾವ ಮನೆ ಮಾಡಿತ್ತು. ಶಾಪದ ಪರಿಹಾರವಾಗಿ ಉಶ್ವಾಪದ ಪ್ರಸ್ತಾಪ ಎಲ್ಲವೂ ಅವಳ ಮಾಗಿದ ವ್ಯಕ್ತಿತ್ವದ ಘನತೆಯನ್ನು ತೋರುವುದರೊಂದಿಗೆ ಅವಳ ಮನೆತನದ ಶಾಪಕ್ಕೆ expiry date ಆಯ್ತು ಎನ್ನುವ ನಿರಾಳ ಭಾವನೆ ಓದುಗರ ಮನದಲ್ಲೂ ಮೂಡುತ್ತದೆ. ಬಸಮ್ಮಜ್ಜಿ ಮತ್ತು ಸರೋಜಿನಿಯ ಬಾಳಲ್ಲಿರುವ ಏಕೈಕ ಸಾಮ್ಯತೆ ಎಂದರೆ ಇಬ್ಬರೂ ತಮಗೆ ಒಲಿದ ಗಂಡಸರು ತಮ್ಮಿಂದ ವಿಮುಖರಾಗಿ ದೂರ ಸರಿದಾಗ ತಣ್ಣಗೆ ಪ್ರತಿಕ್ಷಿಯಿಸುವುದು. ಬಸಮ್ಮಜ್ಜಿಗೆ ಇಲ್ಲದ ಹಕ್ಕು ಸರೋಜಿನಿಗಿದ್ದರೂ ಅದನ್ನು ನಿರ್ಲಕ್ಷಿಸಿದ್ದು ಅವಳ ಗಟ್ಟಿ ವ್ಯಕ್ತಿತ್ವಕ್ಕೆ ಒಪ್ಪುತ್ತದೆ. ಆರ್ಥಿಕ ಸ್ವಾತಂತ್ರ್ಯ, ಅಧಿಕಾರ ಎಲ್ಲವೂ ಇದ್ದು ಆರುಂಧತಿಯ ತನ್ನ ಪ್ರೀತಿಗೆ ಅಪಾತ್ರನಾದ ವಿವಾಹಿತನಿಗೆ ಒಲಿಯುವುದು, ಗೋಗರೆಯುವುದು, ಮಗುವಿಗಾಗಿ ಹಂಬಲ ಇದೆಲ್ಲವನ್ನೂ ನೋಡಿದಾಗ ಪ್ರೀತಿಯ ಸುಳಿಗೆ ಸಿಲುಕಿದ ಹೆಣ್ಣಿನ ಮನಸ್ಥಿತಿ ಮಾತ್ರ ಯಾವ ಕಾಲಕ್ಕೂ ಒಂದೇ ಎಂದು ಅನ್ನಿಸುವುದು. ಇನಾಯ ಗಂಡನಿಂದ ಹೊಡೆತ ತಿಂದು ಸಿಟ್ಟಿಗೆದ್ದರೂ, ತನ್ನನ್ನು ತನ್ನತನವನ್ನು ಬಿಡದೆ ಗಂಡನನ್ನು ಕ್ಷಮಿಸುವುದು ಒಳ್ಳೆಯ ತೀರ್ಮಾನವೇ ಆದರೂ ಅದರ ಹಿಂದಿರುವುದು ಪ್ರೀತಿ ಮಾತ್ರ ಎಂಬುದನ್ನು ನಿರಾಕರಿಸುವಂತಿಲ್ಲ. ಇನ್ನು ಸರೋಜಿನಿಯ ಮಗಳು ಗೌರಿಯ ಪ್ರಕಾರ ' ಹೆಣ್ಣನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ವಿಷಯವೇ ಪ್ರೀತಿ ' ಆತ್ಮವಿಶ್ವಾಸವನ್ನಾದರೂ ಕುಗ್ಗಿಸುವ ಪ್ರೀತಿ ಬೇಕೇ ? ಎನ್ನುವ ಅವಳೂ ಪ್ರೀತಿಸಿ ಹೊಂದಾಣಿಕೆಯಾದಲ್ಲಿ ಮಾತ್ರ ಮದುವೆ ಅನ್ನುವ ಹಂತಕ್ಕೆ ಬರುತ್ತಾಳೆ. ಅಭಿಜ್ಞಾಳು ಸಹಾ ಷರತ್ತಿಲ್ಲದ ಲೀವ್ ಇನ್ ರಿಲೇಶನ್ ಶಿಪ್ ಗೆ ಒಪ್ಪಿ ಮದುವೆಯಾದರೂ ಭಾವನಾತ್ಮಕವಾಗಿ ಪೊಸೆಸಿವ್ನೆಸ್ ಇರಬೇಕು ಎನ್ನುವ ಹಂತಕ್ಕೆ ಬರುತ್ತಾಳೆ. ಈ ಎಲ್ಲ ಹೆಣ್ಣುಗಳು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಿದ್ದರೂ ಗಂಡಿನ ಪ್ರೀತಿಗಾಗಿ ಹಂಬಲಿಸುತ್ತಾರೆಂದರೆ ಸರ್ವಕಾಲಕ್ಕೂ ಹೆಣ್ಣಿಗೆ ಬೇಕಾದ್ದು ಪ್ರೀತಿ ಅದು ಅವರನ್ನು ದುರ್ಬಲಗೊಳಿಸಿದರೂ ಅಚ್ಚರಿಯಿಲ್ಲ ಎಂಬುದಕ್ಕೆ ಅವರ ಜೀವನದ ಗತಿಗಳೇ ಸಾಕ್ಷಿ. ಪುರುಷ ಪಾತ್ರಗಳಾದ ನಿರಂಜನ ಮತ್ತು ಶ್ರೀನಿವಾಸ ರೆಡ್ಡಿ ಪ್ರೀತಿಗೆ ಅಪಾತ್ರರಾಗಿದ್ದು ಹೆಣ್ಣಿನ ದೌರ್ಬಲ್ಯದೊಡನೆ ಆಟ ಆಡುವ ಪುರುಷ ಪ್ರಧಾನ ಸಮಾಜದ ಪ್ರತಿನಿಧಿಗಳಂತೆ ಕಾಣುತ್ತಾರೆ.ರಾಮಚಂದ್ರನ ವರ್ತನೆಯೂ ಸ್ಟಲ್ಪ ಅತಿರೇಕವೇ ಎನಿಸುತ್ತದೆ. ಮ್ಯಾಥ್ಯೂ ಪ್ರೀತಿಯ ಹಂಬಲವಿರುವ ಓಬ್ಬ ಪ್ರಾಮಾಣಿಕನಾಗಿ ಕಾಣುತ್ತಾನೆ. ಕೃತಿಯ ಶೀರ್ಷಿಕೆಯು ಅದೆಷ್ಟು ಸೂಕ್ತವಾಗಿದೆಯೆಂಬುದು ಕೃತಿಯ ಹೂರಣವನ್ನು ಸವಿದಾಗಲೆ ಅರಿವಾಗುವುದು. ಇನ್ನು ಕೃತಿಯನ್ನು ಓದಿ ಮುಗಿಸಿದ ನಂತರ ಮುಖಪುಟದತ್ತ ಗಮನ ಹರಿದಾಗ ತೆರೆದ ಬಾಗಿಲ ಚಿತ್ರವನ್ನು ನೋಡಿದಾಗ ಇಲ್ಲಿನ ಎಲ್ಲಾ ಪಾತ್ರಗಳೂ ಸಹಾ ತೆರೆದ ಬಾಗಿಲಂತೆಯೆ ಮನ ಬಿಚ್ಚಿ ಮುಕ್ತವಾಗಿ ಮಾತನಾಡುತ್ತವೆ. ತಾತ್ಕಾಲಿಕ ತಂಗುದಾಣದಲ್ಲಿ ಇರುವಂತೆ ಮುಖಪುಟದಲ್ಲಿ ಕಾಣುವ ಪುರುಷರ ಉಡುಗೆ ಗಳು ಸರೋಜಿನಿ, ಅರುಂಧತಿ ಹಾಗೂ ಅಭಿಜ್ಞಾ ಇವರುಗಳ ಬಾಳಲ್ಲಿ ಬಂದು ಹೋದ ಪುರುಷ ಪಾತ್ರಗಳ ಸಂಕೇತವಾಗಿರ ಬಹುದೆ ಎನಿಸಿತು. ಲೇಖಕಿಯು ಇದು ಉಪಸಂಹಾರವಲ್ಲ ಎಂದು ಹೇಳಿದರೂ ಸಹ ಗಟ್ಟಿಗಿತ್ತಿಯರಾದ ಇಲ್ಲಿನ ಸ್ತ್ರೀ ಪಾತ್ರಗಳು ನೆಮ್ಮದಿಗಾಗಿ ತಮ್ಮದೇ ಮಾರ್ಗದಲ್ಲಿ ಭರಪೂರ ಆತ್ಮವಿಶ್ವಾಸದ ಜೊತೆಗೆ ಮುನ್ನಡೆ ಸಾಧಿಸುವ ಮೂಲಕ ಪೂರ್ಣವಿರಾಮ ಹಾಕಿದ್ದಾರೆ ಸಮಸ್ಯೆಗಳು ಬಂದಾಗ ಕೈಚೆಲ್ಲಿ ಕೂರದೇ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬುದನ್ನು ಸರೋಜಿನಿಯ ಜೀವನ ಸಾದರ ಪಡಿಸಿದೆ. ಕೈಗೆತ್ತಿಕೊಂಡ ಮೇಲೆ ಓದಿ ಮುಗಿಸದೆ ಬಿಡಲಾಗದ ಕೃತಿ ಎನ್ನಬಹುದು. ಅನಗತ್ಯವಾದ ಯಾವುದೂ ಎಲ್ಲಿಯೂ ಕಾಣದೆ ಓದುಗರನ್ನು ತನ್ನದೇ ಗುಂಗಿನಲ್ಲಿಡುವಷ್ಟು ಸಶಕ್ತವಾದ ಸಂವೇದನಾಶೀಲ ಕಾದಂಬರಿ . ಎಂ. ಆರ್. ಅನಸೂಯ .

No comments:

Post a Comment