Powered By Blogger

Monday, December 26, 2022

ವಿನಯ್ ಮಾಧವ್ ಮಾಕೋನಹಳ್ಳಿ - - ರಾಜೇಶ್ ಶೆಟ್ಟಿ ಅವರ ಕಾದಂಬರಿ " ಹಾವು ಹಚ್ಚೆಯ ನೀಲಿ ಹುಡುಗಿ " { 2022 }RAJESH SHETTY

ಆ ಹುಡುಗಿ ನೀಲಿಯಾಗಿದ್ದು ಏಕೆ? ನನಗಾಗ ಹತ್ತು ವರ್ಷ ವಯಸ್ಸು ಅಂತ ಕಾಣುತ್ತೆ. ನನ್ನ ಜೀವನದ ಮೊದಲ ಐದು ವರ್ಷ ಕಳೆದ, ಕೊಡಗಿನ ಪಾಲಿಬೆಟ್ಟಕ್ಕೆ ಹೋಗಿದ್ದೆ. ಪಾಲಿಬೆಟ್ಟದಲ್ಲಿ ಸಂಬಂಧಿಕರ್ಯಾರೂ ಇಲ್ಲದಿದ್ದರೂ, ಪಾಲಿಬೆಟ್ಟದಿಂದ ಮೂರು ಕಿಲೋಮೀಟರ್‌ ದೂರದಲ್ಲಿರುವ ಮೇಕೂರಿನ ಪುಲಿಯಂಡ ಪೊನ್ನಪ್ಪ ಮತ್ತು ಲಲಿತಾಂಟಿಯ ಮನೆ ನಮಗೆ ನಮ್ಮ ಮನೆಯಂತೆಯೇ ಇತ್ತು ಮತ್ತು ಈಗಲೂ ಇದೆ. ಏಕೆಂದರೆ, ಅವರ ಮಗಳು ದಿವ್ಯ ನನ್ನನ್ನು ಎತ್ತಿ ಆಡಿಸಿದವಳು ಮಾತ್ರವಲ್ಲ, ನನ್ನ ದೊಡ್ಡಪ್ಪನ ಮಗಳು ವಾತ್ಸಲ್ಯಕ್ಕನ ಸಹಪಾಠಿಯೂ ಆಗಿದ್ದಳು. ದಿವ್ಯಳ ತಮ್ಮ ಬೋಪಣ್ಣ ಮತ್ತೆ ನಾನು ಒಂದೇ ವಯಸ್ಸಿನವರಾದ್ದರಿಂದ, ಇಂದಿಗೂ ನಾವು ಸಂಪರ್ಕದಲ್ಲಿ ಇದ್ದೇವೆ. ಹಾಗಾಗಿ ಮೇಕೂರಿನ ಪುಲಿಯಂಡ ಮನೆ ನಮಗೆ ಹೊರಗಿನದೇನಲ್ಲ. ಏನೋ ಮಾತನಾಡುತ್ತ ಲಲಿತಾಂಟಿ, ʻರೀ ವಿಜಯಮ್ಮ…. ನೆನಪಿದೆಯಾ ನೀವು ಟ್ರಾನ್ಸ್ಫರ್‌ ಆದಾಗ ಸುಧಾಕರ್‌ ಡಾಕ್ಟರ್ ಅಂತ ಇಲ್ಲಿಗೆ ಬಂದಿದ್ದರಲ್ಲ…. ಅವರು ಈಗಲೂ ವಿನಯ್‌ ನ ಕೇಳ್ತಾ ಇರ್ತಾರೆ. ಆ ಹುಡುಗ ಈಗ ಏನು ಮಾಡ್ತಾ ಇದ್ದಾನೆ? ಅಂತ,ʼ ಎಂದು ಹೇಳಿ ಇಬ್ಬರೂ ನಗತೊಡಗಿದರು. ಈ ಸುಧಾಕರ್‌ ಡಾಕ್ಟರ್‌ ಯಾರು? ಎನ್ನುವುದು ನನಗೆ ಗೊತ್ತಿರಲಿಲ್ಲ. ಅವರಿಗೆ ನಾನು ಹೇಗೆ ಗೊತ್ತು ಎನ್ನುವುದು ಅರ್ಥವಾಗದೆ, ʻಯಾರಮ್ಮ ಅದು?ʼ ಅಂತ ಕೇಳಿದೆ. ʻನೀನು ಚಿಕ್ಕವನಿದ್ದಾಗ ಅವರಿಗೆ ಏನೋ ಹೇಳಿದ್ದೆ, ಹಾಗಾಗಿ ಅವರು ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಪಾಲಿಬೆಟ್ಟ ದೊಡ್ಡದಾಯ್ತೋ ಇಲ್ಲವೋ ಗೊತ್ತಿಲ್ಲ, ನನಗಂತೂ ಇಲ್ಲಿಗೆ ಬಂದು ಒಳ್ಳೆಯದಾಯ್ತು, ಅಂತ ಹೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ಆಗಿದ್ದಿಷ್ಟೆ. ಅಣ್ಣ (ಅಪ್ಪ) ಪಾಲಿಬೆಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ, ಸಕಲೇಶಪುರಕ್ಕೆ ವರ್ಗವಾಗಿತ್ತು. ನಾವು ಹೊರಡುವ ಸಮಯದಲ್ಲಿ, ಆಗಷ್ಟೆ ಡಾಕ್ಟರ್‌ ಆಗಿದ್ದ ಸುಧಾಕರ್‌ ಎನ್ನುವವರು ಪಾಲಿಬೆಟ್ಟದಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿ ಮಾಡಲು ಬಂದಿದ್ದರಂತೆ. ವಿಪರೀತ ಮಾತನಾಡುತ್ತಿದ್ದ ನನ್ನನ್ನು ಕರೆದು, ʻಅಲ್ಲ ಮರಿ… ನೀನೇನೋ ಪಟ್ಟಣಕ್ಕೆ ಹೋಗುತ್ತೀಯ. ನಾನು ಈ ಸಣ್ಣ ಹಳ್ಳಿಯಲ್ಲಿ ಇರಬೇಕಲ್ಲ,ʼ ಎಂದರಂತೆ. ತಕ್ಷಣವೇ ನಾನು, ʻಅಂಕಲ್‌, ತಲೆ ಕೆಡಿಸಿಕೊಳ್ಳಬೇಡಿ. ಆಂಡವ ಕವಿ ಹೇಳುತ್ತಾನೆ, ಹಳ್ಳಿಗಳೇ ಬೆಳೆದು ದೊಡ್ಡ ನಗರವಾಗುತ್ತದೆ ಅಂತ. ಪಾಲಿಬೆಟ್ಟ ಕೂಡ ಬೆಳೆಯುತ್ತಿದೆ,ʼ ಎಂದು ಹೇಳಿದನಂತೆ. ಎಲ್ಲರೂ ಗೊಳ್ಳನೆ ನಕ್ಕರೆ, ಸುಧಾಕರ್‌ ಡಾಕ್ಟರ್‌ ನನ್ನ ಕೆನ್ನೆ ಹಿಂಡಿ, ʻನೀನು ಹೇಳಿದೆ ಅಂತ ಇಲ್ಲಿ ಇರುತ್ತೇನೆ. ಈ ಹಳ್ಳಿ ಬೆಳೆಯದೇ ಹೋದರೆ, ನಿನ್ನನ್ನು ಹುಡುಕಿಕೊಂಡು ಬಂದು ಮತ್ತೆ ಕೇಳ್ತೀನಿ,ʼ ಎಂದಿದ್ದರಂತೆ. ʻಸುಧಾಕರ್‌ ಡಾಕ್ಟರಿಗೆ ಒಳ್ಳೆ ಪ್ರಾಕ್ಟೀಸ್‌ ಇದೆ. ಕಾರು ತಗೊಂಡಿದ್ದಾರೆ ಮತ್ತೆ ಊರಿನಲ್ಲಿ ಸ್ವಲ್ಪ ಜಾಗ ಕೂಡ ತಗೊಂಡಿದ್ದಾರಂತೆ. ಈಗಲೂ ಅಷ್ಟೆ, ವಿನಯ್‌ ನನ್ನು ನೆನಸಿಕೊಂಡು, ಆ ಹುಡುಗ ಏನು ಮಾಡ್ತಾ ಇದ್ದಾನೆ? ಎಷ್ಟು ಚೂಟಿ ಅಲ್ವಾ? ಹಾಗೇ ಇದ್ದಾನಾ?ʼ ಅಂತ ಕೇಳ್ತಾ ಇರ್ತಾರೆ,ʼ ಅಂತ ಲಲಿತಾಂಟಿ ಹೇಳಿದರು. ʻಈ ಆಂಡವ ಕವಿ ಯಾರಮ್ಮಾ?ʼ ಅಂತ ನಾನು ಕೇಳಿದೆ. ʻಯಾರಿಗೆ ಗೊತ್ತು? ನೀನೆ ಹೇಳಿದ್ದು. ನಿನಗೇ ಗೊತ್ತಿಲ್ಲದ ಮೇಲೆ, ಇನ್ಯಾರಿಗೆ ಗೊತ್ತಿರುತ್ತೆ. ಬಾಯಿಗೆ ಬಂದ ಹಾಗೆ ಮಾತಾಡ್ತಾ ಇದ್ದೆ ನೀನು,ʼ ಅಂತ ಅಮ್ಮ ನಕ್ಕರು. ಈ ಘಟನೆ ನನ್ನ ಮನಸ್ಸಿನಲ್ಲಿ ಬಹಳಷ್ಟು ಕಾಲ ಕಾಡಿತ್ತು. ಸುಧಾಕರ್‌ ಡಾಕ್ಟರನ್ನು ನನ್ನ ಜೀವನದಲ್ಲಿ ಎಂದೂ ನೋಡಲಿಲ್ಲ ಮತ್ತು ಅವರು ಹೇಗಿದ್ದರು ಎನ್ನುವುದೂ ನೆನಪಿನಲ್ಲಿರಲಿಲ್ಲ. ಆದರೆ ಈ ಆಂಡವ ಕವಿ ಯಾರು? ಅವನು ಹೇಳಿದ ಎಂದು, ನಾನು ಐದನೇ ವರ್ಷದ ವಯಸ್ಸಿನಲ್ಲಿ ಆ ಮಾತನ್ನು ಹೇಗೆ ಹೇಳಿದ್ದೆ? ಎನ್ನುವುದು ಜಿಜ್ಞಾಸೆಯಾಗಿಯೇ ಉಳಿದಿತ್ತು. ಮುಂದೆ ಬೆಳೆಯುತ್ತಾ ಹೋದಾಗ, ಆಂಡವ ಕವಿ ಹಿನ್ನೆಲೆಗೆ ಹೋಗಿ, ಅವನು ಹೇಳಿದ ಮಾತಾದ ʻಹಳ್ಳಿಗಳೇ ಬೆಳೆದು ದೊಡ್ಡ ನಗರಗಳಾಗುತ್ತವೆ,ʼ ಎನ್ನುವ ಮಾತು ಕಾಡಲು ಆರಂಭಿಸಿತು. ಸಾಧಾರಣವಾಗಿ ನಮ್ಮನ್ನು ಮೇಕೂರಿಗೆ ಕರೆದುಕೊಂಡು ಹೋಗಲು ಲಲಿತಾಂಟಿ ಕಾರು ಕಳುಹಿಸುತ್ತಿದ್ದರು. ಎಷ್ಟೋ ದಿನ ಅಲ್ಲಿಯೇ ಉಳಿಯುತ್ತಿದ್ದೆವು ಕೂಡ. ಕೆಲವೊಂದು ಸಲ ನಡೆದುಕೊಂಡು ಹೋದದ್ದೂ ನೆನಪಿದೆ. ಆಗೆಲ್ಲ ತೋಟದ ಪಕ್ಕದಲ್ಲಿ ಆನೆಗಳು ಬಂದಿವೆ ಎನ್ನುವುದನ್ನು ಜನ ಸಹಜವಾಗಿ ಮಾತನಾಡುತ್ತಿದ್ದರು ಮತ್ತು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೆಚ್ಚೆಂದರೆ, ನಮ್ಮ ಓಡಾಟವನ್ನು ಅವುಗಳಿಗೆ ತಿಳಿಸಲು ಸ್ವಲ್ಪ ಜೋರಾಗಿ ಮಾತನಾಡುತ್ತಿದ್ದರು. ಅವೂ ಸಹ ಮನುಷ್ಯರು ಬಂದರೆ ಅಲ್ಲಿಂದ ಹೊರಟು ಹೋಗುತ್ತಿದ್ದವು. ಪಾಲಿಬೆಟ್ಟದಲ್ಲಿ ಆಸ್ಪತ್ರೆಯೇ ಕೊನೆಯ ಕಟ್ಟಡ. ಅಲ್ಲಿಂದ ಮೇಕೂರಿಗೆ ಬರುವಾಗ ದಾರಿಯಲ್ಲಿ ಯಾವುದೇ ಮನೆಗಳಿರಲಿಲ್ಲ. ಬಹಳಷ್ಟು ಕಾಡುಗಳಿದ್ದವು. ಈಗ ಆಸ್ಪತ್ರೆ ದಾಟಿದ ಮೇಲೆ ಸಹ ಬಹಳಷ್ಟು ಮನೆಗಳಾಗಿವೆ. ಬಹಳಷ್ಟು ಕಾಡು ಇದ್ದ ಜಾಗಗಳು ಕಾಫಿ ತೋಟಗಳಾಗಿವೆ. ಆನೆಗಳು ಈಗಲೂ ಬರುತ್ತವೆ. ಆದರೆ, ಮೊದಲಿನಷ್ಟು ಸಹಜವಾಗಿ ಯಾರೂ ಮಾತನಾಡುತ್ತಿಲ್ಲ. ಆಗ ಆನೆ ತುಳಿದು ಸಾಯುವುದು ಎನ್ನುವುದನ್ನು ಕೇಳಿದ್ದೇ ಕಡಿಮೆ. ಆದರೆ, ಈಗ ಆನೆಗಳ ಹಾವಳಿಯ ಬಗ್ಗೆ ಎಲ್ಲೆಲ್ಲೂ ಕಥೆಗಳು ಕೇಳುತ್ತಿರುತ್ತೇವೆ. ಇದು ಪಾಲಿಬೆಟ್ಟ ಅಥವಾ ಮೇಕೂರಿನ ಕಥೆಯಲ್ಲ. ಇಡೀ ಮಲೆನಾಡಿನ ಕಥೆ. ಆದರೆ, ಆಗ ಆನೆ, ಹುಲಿ, ಚಿರತೆಗಳ ಕಾಟವಿರಲಿಲ್ಲವೇ? ಅವು ಇದ್ದವು, ಆದರೆ ಕಾಟ ಇರಲಿಲ್ಲ. ಈಗೇಕೆ ಹೀಗೆ? ಅದಕ್ಕೆ ದಶಕಗಳ ಇತಿಹಾಸವಿದೆ. ನಾವು ಚಿಕ್ಕಂದಿನಲ್ಲಿ ಇದ್ದಾಗ, ಊರುಗಳಿಗೆ ಒಂದು ಗಡಿ ಇರುತ್ತಿತ್ತು. ಇರಡು ಊರಿನ ಗಡಿಗಳ ಮಧ್ಯೆ ಕಾಡು, ಹರ ಮುಂತಾದವು ಇರುತ್ತಿದ್ದವು. ಈ ಕಾಡುಗಳಲ್ಲಿ ಹಣ್ಣಿನ ಮರಗಳು ಮತ್ತು ಬಿದಿರು ಯಥೇಚ್ಚವಾಗಿ ಇರುತ್ತಿದ್ದವು ಮತ್ತು ಜಿಂಕೆ, ಕಾಡುಹಂದಿಯಂತಹ ಪ್ರಾಣಿಗಳು ಸಹ. ಈಗ ಈ ಜಾಗಗಳೆಲ್ಲ ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿವೆ. ತೋಟದಲ್ಲಿ ಕೆಲಸ ಮಾಡಲು ಕಷ್ಟ ಎಂದು ಬಿದಿರು ಮತ್ತು ಹಣ್ಣಿನ ಗಿಡಗಳನ್ನು ನೆಲಸಮ ಮಾಡಲಾಗಿದೆ. ಆಹಾರ ಹುಡುಕಿಕೊಂಡು ಬರುವ ಪ್ರಾಣಿಗಳು ಈಗ ʻಕಾಟʼವಾಗಿ ಪರಿವರ್ತನೆಗೊಂಡಿವೆ, ಅಷ್ಟೆ. ಹಳ್ಳಿಗಳು ನಗರವಾಗುವುದು ಎಂದರೆ ಹೀಗೆ ಎನ್ನುವುದು ಐದು ವರ್ಷದ ನನಗೆ ಅರ್ಥವಾಗಿರಲಿಲ್ಲ ಅಂತ ಕಾಣುತ್ತೆ. ಈ ಕಾಡುಗಳು ಹೇಗೆ ಸಾವಿರಾರು ವರ್ಷಗಳು ಉಳಿದಿದ್ದವು ಎಂದು ಯೋಚಿಸಿದಾಗ, ಅದನ್ನು ಮನುಷ್ಯರೇ ಉಳಿಸಿಕೊಂಡಿದ್ದರು ಎನ್ನುವುದು ಅರ್ಥವಾಗುತ್ತದೆ. ಪ್ರತೀ ಊರಿನ ಗಡಿಗಳಲ್ಲಿ ದೇವರ ಕಾಡು ಎನ್ನುವುದು ಸಹಜವಾಗಿ ಇರುತ್ತಿದ್ದವು. ಹಾಗೆಯೇ, ನಾಗ ಬನಗಳಿರುತ್ತಿದ್ದವು. ಯಾವುದೇ ಕಾರಣದಿಂದ ಮನುಷ್ಯರು ಈ ಕಾಡುಗಳಿಂದ ಮರ ಕಡಿಯುತ್ತಿರಲಿಲ್ಲ. ಆಗೊಮ್ಮೆ, ಈಗೊಮ್ಮೆ, ಪೂಜೆಗೆಂದು ಕಾಡಿಗೆ ಹೋಗಿ, ಮತ್ತೆ ವಾಪಾಸು ಬರುತ್ತಿದ್ದರು. ಈ ದೇವಸ್ಥಾನಗಳ ಮತ್ತು ನಾಗರ ಕಲ್ಲಿನ ಸುತ್ತ ಮುತ್ತ ನೂರಾರು ಎಕರೆ ಸಹಜ ಕಾಡು ಇರುತ್ತಿತ್ತು. ಊರಿನ ಗಡಿಗೆ ಬಂದ ಪ್ರಾಣಿಗಳು ಆ ಕಾಡುಗಳ ಮೂಲಕ ದಾಟಿ ಹೋಗುತ್ತಿದ್ದವು. ಈಗ ಆ ಕಾಡುಗಳೆಲ್ಲ ತೋಟಗಳಾಗಿ, ಬರೀ ದೇವಸ್ಥಾನ, ನಾಗರ ಕಲ್ಲುಗಳು ಉಳಿದಿವೆ. ದೇವರು ಕಾಡಿನ ಹೆಚ್ಚಿನ ದೇವಸ್ಥಾನಗಳಲ್ಲಿ ಇರುವುದು ಹೆಣ್ಣು ದೇವರುಗಳೇ. ಭಾರತದಲ್ಲಿ ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಮೊದಲನೆಯದಾಗಿ, ಹೆಣ್ಣು ಜನ್ಮದಾತೆ, ಅನ್ನದಾತೆ ಮತ್ತು ಶಕ್ತಿ. ಎರಡನೆಯದಾಗಿ, ಪ್ರಕೃತಿಯ ಸೌಂದರ್ಯವನ್ನು ಹೋಲಿಸಲು ಮನುಷ್ಯನಿಗೆ ಬೇರೆ ಹೋಲಿಕೆ ಸಿಗಲಾರದು. ಬೆಟ್ಟಗಳಲ್ಲಿ ಬಂಡೆಯಿಂದ ಬಂಡೆಗೆ ಹಾರುತ್ತಾ, ವಯ್ಯಾರದಿಂದ ಬಳುಕುತ್ತಾ ಹರಿಯುವ ನದಿಯೇ ಇರಬಹುದು, ಮೈತುಂಬಿ ನಿಂತ ಮರ, ಲತೆ, ಹೂಗಳಿರಬಹುದು. ಆ ಸೌಂದರ್ಯವನ್ನು ಹೊಗಳಲು ಹೆಣ್ಣಿಗಿಂತ ಉತ್ತಮ ಉಪಮೇಯ ದೊರಕುವುದು ಕಷ್ಟ. ಪ್ರಕೃತಿ ಎನ್ನುವುದು ಶಕ್ತಿ-ಸೌಂದರ್ಯಗಳ ಸಮ್ಮಿಳನ. ಇನ್ನುಳಿದಂತೆ ಜನಪ್ರಿಯವಾದದ್ದು ನಾಗ ಬನಗಳು. ಈ ನಾಗ ಬನಗಳ ಬಗ್ಗೆ ಯೋಚಿಸುವಾಗ ಆಶ್ಚರ್ಯವಾಗುತ್ತದೆ. ವಿಷಪೂರಿತ ಎಂದು ಭಯಪಡುವ ಈ ಸರೀಸೃಪಗಳನ್ನು ಮನುಷ್ಯ ಏಕಾಗಿ ಮತ್ತು ಹೇಗೆ ದೇವರು ಮಾಡಿದ ಎಂದು. ಈ ಹಾವುಗಳ ಬಗ್ಗೆ ನಮ್ಮ ಪುರಾಣಗಳಲ್ಲಿ ಎಷ್ಟೊಂದು ಕಥೆಗಳಿವೆ ಮತ್ತು ನಮ್ಮ ಜನಪದಗಳಲ್ಲೂ ಅಷ್ಟೇ ದಂತ ಕಥೆಗಳಿವೆ. ಹಾವಿನ ದ್ವೇಶ, ಶಾಪ ಮುಂತಾದ ಕಥೆಗಳನ್ನು ಚಿಕ್ಕಂದಿನಲ್ಲಿ ಓದುವಾಗ ಮೈ ಜುಂ ಎನ್ನುತ್ತಿತ್ತು. ಹಾವು ಕಚ್ಚಿಸಿಕೊಂಡವರ ಮೈ ನೀಲಿ ಬಣ್ಣಕ್ಕೆ ತಿರುಗಿ ಸಾಯುತ್ತಾರೆ ಎಂದು ಹೇಳುತ್ತಿದ್ದರು. ದೊಡ್ಡವರಾಗುತ್ತಾ ಬಂದಾಗ, ಹಾವಿನ ಬಗ್ಗೆ ತಿಳಿದುಕೊಳ್ಳುತ್ತಾ ಹೋದಾಗ, ಇವೆಲ್ಲ ಸಾಧ್ಯವೇ ಇಲ್ಲದ ಕಥೆಗಳು ಎನ್ನುವುದು ಮನದಟ್ಟಾಯಿತು. ಸರಿಯಾಗಿ ಕಣ್ಣೂ ಕಾಣದ, ಕಿವಿಯೂ ಇಲ್ಲದ, ತೆವಳುತ್ತಾ ಬದುಕುವ ಇದೊಂದ ಅಸಹಾಯಕ ಪ್ರಾಣಿ. ಆದರೆ, ಮನುಷ್ಯನ ಆಹಾರ ಪದಾರ್ಥಗಳನ್ನು ನಾಶ ಮಾಡುವ ಇಲಿಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದರಲ್ಲಿ ಹಾವು ಮುಂಚೂಣಿಯಲ್ಲಿರುತ್ತದೆ. ಇಲ್ಲದೇ ಹೋದರೆ, ಪ್ರಕೃತಿಯ ಆಹಾರ ಸರಪಳಿಯು ವ್ಯತ್ಯಾಸವಾಗುವ ಅಪಾಯವಿದೆ. ಬಹಳಷ್ಟು ಯೋಚಿಸಿದ ಮೇಲೆ ಅನ್ನಿಸಿತು, ಮನುಷ್ಯರು ಹಾವಿನ ವಿಷಕ್ಕೆ ಹೆದರುವಷ್ಟು ಬೇರಾವುದಕ್ಕೂ ಹೆದರುವುದಿಲ್ಲ. ಹಾಗಾಗಿ, ಪ್ರಾಣಿಗಳ ಸಂಘರ್ಷಕ್ಕೆ ಕಡಿವಾಣ ಹಾಕುತ್ತಿದ್ದ ಈ ಕಾಡುಗಳ ರಕ್ಷಣೆಗೆ ಹಾವುಗಳ ಕವಚ ತೊಡಿಸಿದ್ದರು ಎಂದು ಅನಿಸಲಾರಂಭಿಸಿದರು. ಈಗ ಏಳೆಂಟು ದಶಕಗಳಿಂದೀಚೆ ಈ ಕವಚಗಳೆಲ್ಲ ಒಡೆದು ಚೂರಾಗಿ ಹೋಗಿವೆ. ಪ್ರತೀ ಕಾಡುಗಳಲ್ಲಿ ಈ ದೇವರುಗಳ ಪೂಜೆಗೆ ಕಲ್ಲಿನಷ್ಟು ಜಾಗ ಬಿಟ್ಟು, ಉಳಿದದ್ದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಗಣಿಗಾರಿಕೆಗಾಗಿ ದೊಡ್ಡ ದೇವಸ್ಥಾನಗಳನ್ನೂ ಡೈನಮೈಟ್‌ ಹಾಕಿ ಉಡಾಯಿಸಲಾಗಿದೆ. ಕಾಡು ಸಾಂಕೇತಿಕವಾಗಿದೆ ಮತ್ತು ಪ್ರಾಣಿಗಳ ಓಡಾಟ ಕಾಟವಾಗಿದೆ. ಇದರ ಮಧ್ಯೆ ರಾಜೇಶ್‌ ಶೆಟ್ಟಿ ತನ್ನ ಹೊಸ ಕಾದಂಬರಿಯೊಂದನ್ನು ನನ್ನ ಕೈಗಿಟ್ಟ. ನಾನು ಓದುವ ಸಮಯದಲ್ಲಿ ಅದಕ್ಕೆ ಹೆಸರಿಟ್ಟಿರಲಿಲ್ಲ. ʻಏನು ಬರೆದಿದ್ದೀಯಾ?ʼ ಎಂದು ಕೇಳಿದಾಗ, ʻಅಡಲ್ಟ್‌ ಲವ್‌ ಸ್ಟೋರಿʼ ಎಂದು ಹೇಳಿದ. ನಾನು ನಕ್ಕಿದ್ದೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಸಹಸ್ರಾರು ಯುವಕರ ಕಥೆಯಂತೆ ಸಾಗಿದ ಕಥೆಯಲ್ಲಿ ಒಂದು ಹುಡುಕಾಟ ಬರುತ್ತದೆ. ಬಾಲ್ಯ ಸ್ನೇಹಿತ ಕೃಷ್ಣನನ್ನು ಹುಡುಕುತ್ತಾ ಹೊರಟ ಅಮರ್‌, ಕೃಷ್ಣನ ಸ್ನೇಹಿತೆಯನ್ನು ನೋಡುತ್ತಾನೆ. ಇಲ್ಲಿಂದಾಚೆಗೆ ಇದೊಂದು ಅರ್ಬನ್‌ ಜನಪದವಾಗಿ, ಮ್ಯಾಜಿಕಲ್‌ ರಿಯಲಿಸಮ್‌ ಗೆ ತಿರುಗುತ್ತದೆ. ಅಲ್ಲೊಂದು ಸುಂದರ ಯುವತಿ ಇದ್ದಾಳೆ. ಅವಳ ಹಿಂದೆ ಶತ ಶತಮಾನಗಳ ಜಾನಪದ ಚರಿತ್ರೆ ಇದೆ. ಆಕೆಯನ್ನು ಹಾವುಗಳು ಕಾಯುತ್ತಿವೆ ಮತ್ತು ಆಕೆಯ ತೋಳಿನಲ್ಲೂ ಹಾವಿನ ಹಚ್ಚೆ ಇದೆ. ಆದರೂ ಆಕೆಯ ಮೈ ನೀಲಿಗಟ್ಟಿದ್ದು ಏಕೆ ಮತ್ತು ಆಕೆಯ ಮೈ ನೀಲಿಗಟ್ಟಿಸಿದ ವಿಷ ಯಾವುದು? ಕಾದಂಬರಿ ಓದಿ ಮುಗಿಸುವ ಹೊತ್ತಿಗೆ ಒಂದು ನಿಟ್ಟುಸಿರು ಬಿಟ್ಟೆ. ರಾಜೇಶ್‌ ಹೇಳಿದ ʻಅಡಲ್ಟ್‌ ಲವ್‌ ಸ್ಟೋರಿʼಮತ್ತು ಅದರ ಸುತ್ತ ಬರುವ ಪಾತ್ರಗಳು ಬರೀ ನಿಮಿತ್ತ ಎನಿಸಿತು. ಆ ನೀಲಿ ಹುಡುಗಿ ಸಿಗುವ ಜಾಗಗಳೆಲ್ಲ ಒಮ್ಮೆ ಕಣ್ಣ ಮುಂದೆ ಹಾಯ್ದು ಹೋಯಿತು…. ಮಾಕೋನಹಳ್ಳಿ ವಿನಯ್‌ ಮಾಧವ

No comments:

Post a Comment