Powered By Blogger

Thursday, July 14, 2022

ನಾಗೇಶ್ ಹೆಗಡೆ - ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ / Nagesh Hegade

ಮತ್ತೆ ವೇದಕಾಲಕ್ಕೆ ಹಾರುವ ಯಂತ್ರ [ಇಂದಿನ ಪ್ರಜಾವಾಣಿಯ ‘ವಿಜ್ಞಾನ ವಿಶೇಷʼ ಅಂಕಣದಲ್ಲಿ ಪ್ರಕಟವಾದ ನನ್ನ ಬರಹ ಇದು: ವೇದಗಳು ಹುಟ್ಟಿದ್ದೇ ಭಾರತದಲ್ಲಿ ಎಂದು ಸನಾತನವಾದಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಈ ಕುರಿತು ವಿಜ್ಞಾನಿಗಳಿಗೆ ಲಭಿಸಿದ ಸಾಕ್ಷ್ಯಗಳ ಪ್ರಕಾರ ಆರ್ಯರು ತಮ್ಮೊಂದಿಗೆ ಸಂಸ್ಕೃತಜನ್ಯ ಭಾಷೆಗಳನ್ನೂ ರಥಾಶ್ವಗಳನ್ನೂ ಹೋಮಹವನಾದಿ ವೇದಕಾಲೀನ ವಿಧಿವಿಧಾನಗಳನ್ನೂ ತಂದರು. ಕ್ರಮೇಣ ಇವೆಲ್ಲ ನಮ್ಮ ದ್ರಾವಿಡ ಸಂಸ್ಕೃತಿಯೊಂದಿಗೆ ಮಿಳಿತವಾದವು, ರೂಪಾಂತರಗೊಂಡವು, ವಿಕಾಸವಾದವು. ಆದರೆ ಸನಾತನವಾದಿಗಳು ಇದನ್ನು ಒಪ್ಪುತ್ತಿಲ್ಲ. ವೇದಕಾಲೀನ ಜ್ಞಾನವೆಲ್ಲವೂ ಇಲ್ಲಿಯೇ ಉಗಮವಾಗಿ ಆಚೀಚಿನ ಭೂಭಾಗಗಳಿಗೆ ವಿಸ್ತರಿಸಿದವು ಎಂಬುದು ಅವರ ವಾದ. ಈ ವಾದವನ್ನು ಪುಷ್ಟೀಕರಿಸಲೆಂದೇ ಹೊಸ ಡಿಎನ್‌ಎ ಪ್ರೊಫೈಲಿಂಗ್‌ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ತರಿಸಿತೆ? ಗತಕಾಲವನ್ನು ಮತ್ತೆ ಮತ್ತೆ ಕೆದಕುವ ಉದ್ದೇಶ ಏನಿದ್ದೀತು? ಇದು ಈ ಲೇಖನದ ಸಾರಾಂಶ. ] * ಅತ್ತ ಏಕನಾಥ ಶಿಂದೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದ್ದ ಅವಧಿಯಲ್ಲೇ ಬೆಂಗಳೂರಿನಲ್ಲಿ ಇನ್ನೊಬ್ಬ ಶಿಂದೆ ಇಡೀ ದೇಶದ ಚಿಂತಕರ ವಲಯದಲ್ಲಿ ಆತಂಕ ಸೃಷ್ಟಿಸಿದ್ದರು. ಇವರು ಪ್ರೊ. ವಸಂತ ಶಿಂದೆ; ಇಲ್ಲಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ‘ನಿಯಾಸ್‌‘ National Institute of Advanced Studiesನಲ್ಲಿ ಪುರಾತತ್ವತಜ್ಞ. ಆಗಿದ್ದೇನೆಂದರೆ, ಮನುಷ್ಯರ ತಳಿಗುಣ ಶೋಧನೆಗೆಂದು ಒಂದಿಷ್ಟು ಹೊಸ ಯಂತ್ರಗಳನ್ನು ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯ ತರಿಸಿಕೊಳ್ಳುತ್ತಿದೆ ಎಂದು ದಿಲ್ಲಿಯ ಪತ್ರಿಕೆಯೊಂದು ಜೂನ್‌ 1ರಂದು ವರದಿ ಮಾಡಿತು. ವಿಜ್ಞಾನ ತಂತ್ರಜ್ಞಾನ ಇಲಾಖೆಯ ಬದಲು ಸಂಸ್ಕೃತಿ ಸಚಿವಾಲಯಕ್ಕೆ ತಳಿಶೋಧದ ಯಂತ್ರಗಳೇಕೆ ಎಂದು ಮಾಧ್ಯಮಗಳು ತನಿಖೆಗೆ ಇಳಿದವು. ಭಾರತೀಯರ ಜನಾಂಗೀಯ ಲಕ್ಷಣಗಳನ್ನು ಪತ್ತೆಹಚ್ಚಲೆಂದು ಪ್ರೊ. ವಸಂತ ಶಿಂದೆಯವರ ಶಿಫಾರಸಿನ ಮೇರೆಗೆ ಡಿಎನ್‌ಎ ಪ್ರೊಫೈಲಿಂಗ್‌ ಯಂತ್ರಗಳನ್ನು ತರಿಸಲು ಸಚಿವಾಲಯ ಹೊರಟಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿತು. ಅಷ್ಟಾಗಿದ್ದೇ ತಡ, ಸರಕಾರದ ಈ ಸನ್ನಾಹವನ್ನು ವಿರೋಧಿಸಿ ದೇಶದ ಹೆಸರಾಂತ 120 ವಿಜ್ಞಾನಿಗಳು, ಇತಿಹಾಸಕಾರರು ಮತ್ತು ಸಮಾಜವಿಜ್ಞಾನಿಗಳು ಒಂದು ಜಂಟಿ ಹೇಳಿಕೆ ನೀಡಿದರು: “ಯಾರು ಮೇಲು, ಯಾರು ಕೀಳು ಎಂಬುದನ್ನು ಪತ್ತೆ ಹಚ್ಚಬೇಕೆನ್ನುವ ಇಂಥ ಅಸಂಬದ್ಧ ಮತ್ತು ಅಪಾಯಕಾರಿ ಸಂಶೋಧನೆಯನ್ನು ಕೈಗೊಂಡರೆ ಸಮಾಜದ ಶಾಂತಿಯನ್ನು ಕದಡಿದಂತಾಗುತ್ತದೆ; ಜನಾಂಗೀಯ ಸಂಶೋಧನೆಗೆ ಕೈ ಹಾಕಬೇಡಿ” ಎಂಬ ಅರ್ಥದ ಹೇಳಿಕೆ ಇವರದ್ದಾಗಿತ್ತು. ಮುಂಬೈ, ಕೋಲ್ಕತಾ, ದಿಲ್ಲಿ, ಬೆಂಗಳೂರು, ಸೋನೆಪತ್‌- ಹೀಗೆ ದೇಶದ ಪ್ರತಿಷ್ಠಿತ ವಿಜ್ಞಾನ ಕೇಂದ್ರಗಳ ತಜ್ಞರು ಒಟ್ಟಾಗಿ ದನಿ ಎತ್ತಿದ್ದೇ ತಡ, ಪ್ರೊ. ಶಿಂದೆ ತಾನು ಜನಾಂಗೀಯ ಗುಣಪತ್ತೆಗೆಂದು ಈ ಯಂತ್ರಗಳ ಶಿಫಾರಸು ಮಾಡಿಲ್ಲ ಎಂದರು. ಸಂಸ್ಕೃತಿ ಇಲಾಖೆಯೂ ಧಿಗ್ಗನೆದ್ದು ಮಾಧ್ಯಮಗಳ ‘ತಪ್ಪುʼ ವರದಿಯನ್ನು ಖಂಡಿಸಿತು. ಡಿಎನ್‌ಎ ಯಂತ್ರಗಳನ್ನು ತರಿಸುವಲ್ಲಿ ಜನಾಂಗೀಯ ಶ್ರೇಷ್ಠತೆಯನ್ನು ಹುಡುಕುವ ಉದ್ದೇಶ ಇಲ್ಲವೆಂದು ಹೇಳಿತು. ಹಾಗಿದ್ದರೆ ಯಾವ ಉದ್ದೇಶಕ್ಕೆ ಇವನ್ನು ತರಿಸಲಾಗುತ್ತಿದೆ ಎಂಬ ವಿವರಣೆಯನ್ನು ಮಾತ್ರ ಆಗ ನೀಡಲಿಲ್ಲ. ಜನಾಂಗೀಯ ಶ್ರೇಷ್ಠತೆಯ ಪ್ರಶ್ನೆ ಬಂದಾಗಲೆಲ್ಲ ವಿಜ್ಞಾನಿಗಳು ಮತ್ತು ಪ್ರಾಜ್ಞರು ಹಾವು ತುಳಿದಂತೆ ಬೆಚ್ಚುತ್ತಾರೆ. ಏಕೆಂದರೆ ತಳಿ ಶ್ರೇಷ್ಠತೆಯ ಭ್ರಮೆಯಿಂದಾಗಿಯೇ ನಾತ್ಸಿ ಜರ್ಮನಿಯಲ್ಲಿ60 ಲಕ್ಷಕ್ಕೂ ಹೆಚ್ಚು ಯಹೂದ್ಯರ ನರಮೇಧ ನಡೆದಿತ್ತು. ಅದಕ್ಕೂ ಮೊದಲು, 1920ರ ಆಜೂಬಾಜಿನಲ್ಲಿ ‘ಯೂಜೆನಿಕ್ಸ್‌‘ ಹೆಸರಿನಲ್ಲಿ ಶುದ್ಧತಳಿಯ ಮಕ್ಕಳನ್ನು ಪಡೆಯಬೇಕೆಂಬ ಹುಚ್ಚು ಅಮೆರಿಕದಲ್ಲೂ ಆವರಿಸಿತ್ತು. ಈ ಹಪಾಹಪಿಗೆ ಕೆಲಕಾಲ ವಿಜ್ಞಾನಿಗಳೂ ತಪ್ಪು ಹೆಜ್ಜೆ ಇಡುವಂತಾಗಿತ್ತು . ಆದರೆ ವಿಜ್ಞಾನದ ವಿಶೇಷ ಏನೆಂದರೆ, ಅದು ತನ್ನ ತಪ್ಪನ್ನು ತಾನು ತಿದ್ದಿಕೊಳ್ಳುತ್ತ ಸಾಗುತ್ತದೆ. 1950ರ ದಶಕದ ನಂತರ ತಳಿವಿಜ್ಞಾನ ವಿಕಾಸವಾಗುತ್ತ ಬಂದಂತೆ, ಇಡೀ ಮಾನವ ಜನಾಂಗ ಒಂದೇ ಎಂಬುದು ಗೊತ್ತಾಯಿತು. ಮನುಷ್ಯರ ಸಂಪೂರ್ಣ ತಳಿನಕ್ಷೆಯನ್ನು ರೂಪಿಸಿದ ಮೇಲೆ, ನಾಗರಿಕತೆಯ ಕೆಲವು ಭಿನ್ನತೆಗಳನ್ನು ಗುರುತಿಸಬಹುದೇ ವಿನಾ ‘ಜನಾಂಗೀಯ’ (race) ವೈವಿಧ್ಯ ಎಂಬುದು ಇಲ್ಲವೇ ಇಲ್ಲವೆಂದೂ ಜಗತ್ತಿನ ಎಲ್ಲರ ರಕ್ತದಲ್ಲೂ ಆಫ್ರಿಕನ್‌ ತಳಿಗುಣವೇ ಇದೆಯೆಂದೂ ವಿಜ್ಞಾನ ಜಗತ್ತು ಒಪ್ಪಿಕೊಂಡಿದೆ. ಹಾಗಿದ್ದರೆ ಏಕೆ ಡಿಎನ್‌ಎ ಪ್ರೊಫೈಲ್‌ ಸಲಕರಣೆಗಳ ಖರೀದಿ? ಅದಕ್ಕೆ ಹಿನ್ನೆಲೆ ಹೀಗಿದೆ: ಭಾರತದ ವಿದ್ವಜ್ಜನರಲ್ಲಿ ಎರಡು ಗುಂಪುಗಳಿವೆ: ವೇದಗಳು, ಯಜ್ಞ-ಯಾಗ, ರಥ-ಕುದುರೆ ಮತ್ತು ಅಸ್ತ್ರಶಸ್ತ್ರಗಳ ಜ್ಞಾನಪರಂಪರೆ ಹುಟ್ಟಿದ್ದೇ ನಮ್ಮಲ್ಲಿ ಎಂದು ವಾದಿಸುವ ಸನಾತನಿಗಳ ಒಂದು ಗುಂಪು; ಇವರದ್ದು, ಜಗತ್ತಿನ ಅತ್ಯಂತ ಪುರಾತನ ಸಂಸ್ಕೃತಿ ಪರಂಪರೆ ನಮ್ಮದೆಂದು ಬಿಂಬಿಸುವ ವರ್ಗ. ಇನ್ನೊಂದು ಗುಂಪಿನ ವೈಜ್ಞಾನಿಕ ಅಧ್ಯಯನದ ಪ್ರಕಾರ ಅದು ಹಾಗಲ್ಲ; ಆಫ್ರಿಕದ ಮೂಲದಿಂದ ಹೊರಟ ಒಂದು ಕವಲಿನ ಆದಿಜನರು 65 ಸಾವಿರ ವರ್ಷಗಳೀಚೆ ಮೂರು ಅಥವಾ ನಾಲ್ಕು ಅಲೆಗಳಲ್ಲಿ ಮತ್ತೆ ಮತ್ತೆ ಭಾರತ, ಬರ್ಮಾ, ಇಂಡೊನೇಶ್ಯ, ಆಸ್ಟ್ರೇಲಿಯಾ ಕಡೆ ಸಾಗಿ ನೆಲೆಸಿದ್ದಾರೆ. ಸುಮಾರು 4000 ವರ್ಷಗಳ ಈಚಿನ ಕೊನೆಯ ಅಲೆಯಲ್ಲಿ ಬಂದವರು (ಆರ್ಯರು) ತಮ್ಮ ಜತೆ ಸಂಸ್ಕೃತಜನ್ಯ ಭಾಷೆಯನ್ನೂ ರಥಾಶ್ವಗಳನ್ನೂ ತಂದಿದ್ದಾರೆ. ಹೆಚ್ಚಿನ ಪಾಲು ಉತ್ತರ ಭಾರತದಲ್ಲಿ ನೆಲೆಸಿ, ಕ್ರಮೇಣ ಅವರು ದೇಶದಲ್ಲೆಲ್ಲೆಡೆ ಬೆರತು ಹೋಗಿದ್ದಾರೆ. ಹರ್ಯಾಣಾದ ರಾಖೀಗಢಿ ಎಂಬಲ್ಲಿ ಸಿಕ್ಕ 5000 ವರ್ಷಗಳ ಹಿಂದಿನ ನಾಗರಿಕತೆಯ ಕುರುಹುಗಳಲ್ಲಿ ಮತ್ತು ಮಹಿಳೆಯ ಮೂಳೆಯಲ್ಲಿ ಸಿಕ್ಕ ಡಿಎನ್‌ಎಯಲ್ಲಿ ಈ ಯಾವ ಆರ್ಯನ್‌ ಲಕ್ಷಣಗಳೂ ಇಲ್ಲ ಎಂಬುದನ್ನು111 ವಿಜ್ಞಾನಿಗಳ ಅಂತರರಾಷ್ಟ್ರೀಯ ತಂಡವೊಂದು ಪತ್ತೆ ಹಚ್ಚಿತ್ತು. ಮಧ್ಯ ಏಷ್ಯದಲ್ಲಿ ಸಿಕ್ಕ 523 ಅಸ್ಥಿಪಂಜರಗಳ ಡಿಎನ್‌ಎ ಜೊತೆ ರಾಖೀಗಢಿಯ ಮಹಿಳೆಯ ಶರೀರದಲ್ಲಿ ಸಿಕ್ಕ ಡಿಎನ್‌ಎಯ ತಾಳೆ ನೋಡಿ ಈ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ತಾನು ಕಂಡ ಸತ್ಯವನ್ನು 2019ರಲ್ಲಿ ಘೋಷಿಸಿದೆ. ವೇದ-ರಾಮಾಯಣಗಳೆಲ್ಲ ಐದಾರು ಸಾವಿರ ವರ್ಷಗಳ ಹಿಂದಿನದಾಗಿದ್ದರೆ, ಅವು ಆಚೆ ಎಲ್ಲೋ ಸೃಷ್ಟಿಯಾಗಿದ್ದು ಎಂಬ ಧ್ವನಿ ಅವರದ್ದಾಗಿತ್ತು. ಇದರಿಂದ ಸನಾತನವಾದಿ ಗುಂಪಿಗೆ ಹಿನ್ನಡೆ ಉಂಟಾಗಿದೆ. ಹೇಗಾದರೂ ಮಾಡಿ ಇವರು ವೇದಕಾಲೀನ ಭಾರತದ ಉಜ್ವಲ ಚರಿತ್ರೆ ಕುರಿತ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿದೆ. ಮೂಲತಃ ಭಾರತದಿಂದಲೇ ಹೊರ ಜಗತ್ತಿಗೆ ಜ್ಞಾನಧಾರೆ ಹರಿದು ಸಾಗಿದೆ ಎಂಬುದನ್ನು ಇವರು ತೋರಿಸಬೇಕಾಗಿದೆ. ಈ ಗುಂಪಿಗೆ ಸೇರಿದ ಪುರಾತತ್ವ ತಜ್ಞ ಪ್ರೊ. ವಸಂತ ಶಿಂದೆ (ಇವರು ಡಿಎನ್‌ಎ ತಜ್ಞ ಅಲ್ಲ) ಮತ್ತು ಲಖ್ನೋದ ಸೂಕ್ಷ್ಮಜೀವವಿಜ್ಞಾನಿ ಡಾ. ನೀರಜ್‌ ರಾಯ್‌ ಇಬ್ಬರೂ 111 ವಿಜ್ಞಾನಿಗಳ ನಿಲುವಿಗೆ ವಿರುದ್ಧವಾಗಿ, 2019ರ ಮಾಧ್ಯಮ ಗೋಷ್ಠಿಯಲ್ಲಿ ಭಾರತವೇ ಆರ್ಯರ ಮೂಲವೆಂಬ ಹೇಳಿಕೆ ನೀಡಿದ್ದರು (ತಮಾಷೆ ಏನೆಂದರೆ, ಆರ್ಯರು ಇಲ್ಲಿನವರಲ್ಲ ಎಂದು ಪ್ರತಿಪಾದಿಸುವ ವೈಜ್ಞಾನಿಕ ಪ್ರಬಂಧದ ಸಹಲೇಖಕರ ಪಟ್ಟಿಯಲ್ಲಿ ಪ್ರೊ. ಶಿಂದೆಯ ಹೆಸರೂ ಇದೆ! ಆದರೆ ಬೆಳಗಾಗುವುದರೊಳಗೆ ಇವರು ಪಕ್ಷಾಂತರಿ ಆಗಿದ್ದರು). ನಂತರದ ಅನೇಕ ಸಂದರ್ಶನಗಳಲ್ಲೂ ಈ ಇಬ್ಬರು ತಜ್ಞರು ತಮ್ಮ ವಾದವೇ (ಅಂದರೆ ಆರ್ಯರು ಬರುವುದಕ್ಕೆ ಮೊದಲೇ ಇಲ್ಲಿ ವೇದಗಳ ರಚನೆ ಆಗಿತ್ತು; ರಾಮಾಯಣ ಮಹಾಭಾರತ ನಡೆದಿತ್ತು ಎಂಬ ವಾದ) ಶೀಘ್ರದಲ್ಲಿ ಗೆಲ್ಲಲಿದೆ ಎಂದು ಹೇಳುತ್ತಿರುವುದನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ಹೇಗೂ ದಕ್ಷಿಣ ಭಾರತದ ಅನೇಕ ಕಡೆ (ಕರ್ನಾಟಕದ ಪಿಕ್ಲಿಹಾಳ, ತೆಲಂಗಾಣಾದ ನಾಲ್ಗೊಂಡಂ, ಖಮ್ಮಮ್‌ ಮತ್ತು ಆಂಧ್ರದ ಯಲ್ಲೇಶ್ವರಂನಲ್ಲಿ) ಉತ್ಖನನ ನಡೆಯುತ್ತಿದೆ. ಅಲ್ಲೇನಾದರೂ ಶುದ್ಧ ಭಾರತೀಯ (ಅಂದರೆ ಅಪ್ಪಟ ವೇದಕಾಲೀನ) ಡಿಎನ್‌ಎ ಸಿಗುತ್ತದೋ ನೋಡುವ ಆಸೆ ಇವರದು. ಅದಕ್ಕೇ ಹೊಸ ಡಿಎನ್‌ಎ ಯಂತ್ರಗಳು ಬೇಕಾಗಿರಬಹುದು. ವೇದಕಾಲೀನ ಜ್ಞಾನ ಪರಂಪರೆ ಇಡೀ ಮನುಕುಲಕ್ಕೆ ಹೆಮ್ಮೆಯದು ಹೌದು. ಆದರೆ ಅದು ಭಾರತದಲ್ಲೇ ಅರಳಿತೋ ಅಥವಾ ವಾಯವ್ಯದಿಂದ ಬಂತೋ - ಅದು ಹೇಗೂ ಇರಲಿ, ಅದಕ್ಕೆ ನಮ್ಮದೆಂಬ ಅತಿರಂಜಿತ ಬಣ್ಣ ಬ್ಯಾಗಡೆ ಬೇಡವೆಂದು ಅನೇಕ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿ, ಟೆಸ್ಟ್‌ಟ್ಯೂಬ್‌ ಬೇಬಿ, ವಿಮಾನದಂಥ ಅತಿಶಯಗಳ ಪಟ್ಟಿಯಲ್ಲಿ ವೇದಗಣಿತ ಕೂಡ ಸೇರಿದೆ. ವೇದದಲ್ಲಿ ಇರದಿದ್ದ ಈಚಿನ ಜ್ಞಾನಪಾಂಡಿತ್ಯವನ್ನೂ ವೇದಕಾಲದ್ದೇ ಎಂದು ಪ್ರತಿಪಾದಿಸಲಾಗುತ್ತಿದೆ. 1950ರ ದಶಕದಲ್ಲಿ ಪುರಿಯ ಶಂಕರಾಚಾರ್ಯ ಭಾರತೀ ಕೃಷ್ಣತೀರ್ಥರು (ಗಣಿತ ಮತ್ತು ಸಂಸ್ಕೃತ ಎರಡರಲ್ಲೂ ಪಾಂಡಿತ್ಯ ಇದ್ದವರು) ಶ್ಲೋಕಗಳ ಮೂಲಕ ವೇದಗಣಿತವನ್ನು ಸೇರಿಸಿದ್ದಾರೆಂದು ಹೆಸರಾಂತ ಗಣಿತ ತಜ್ಞ ಎಸ್‌ ಜಿ ದಾನಿಯವರು ಬಲವಾಗಿ ಪ್ರತಿಪಾದಿಸುತ್ತ ಬಂದಿದ್ದಾರೆ. “ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ, ಮಾಧವರ ಕೊಡುಗೆಗಳೆಲ್ಲ ಶ್ಲಾಘನೀಯವೇ ಹೌದಾದರೂ, ಗತಕಾಲದ ಪರಂಪರೆಯ ಉತ್ಪ್ರೇಕ್ಷೆ ಬೇಡವೆಂದು ಪ್ರೊ. ದಾನಿ ಹೇಳುತ್ತಾರೆ. ಈಗ ಪ್ರೊ. ಶಿಂದೆಯ ವಿಚಾರಕ್ಕೆ ಮತ್ತೆ ಬರೋಣ. ಅವರ ಎಡಬಿಡಂಗಿ ನಿಲುವು ಮತ್ತು ಶ್ರೇಷ್ಠತೆಯ ಪೂರ್ವಗ್ರಹ ಇಡೀ ವಿಜ್ಞಾನಕ್ಕೇ ಅಪಚಾರವೆಂದು ಇನ್ನೊಬ್ಬ ಹೆಸರಾಂತ ವಿಜ್ಞಾನಿ ಡಾ. ಸಿ.ಪಿ. ರಾಜೇಂದ್ರನ್‌ (ಇವರೂ ಬೆಂಗಳೂರಿನ ನಿಯಾಸ್‌ನಲ್ಲಿ ಪ್ರೊಫೆಸರ್‌) ಹೇಳುತ್ತಾರೆ. ಜನಾಂಗೀಯ ಶ್ರೇಷ್ಠತೆಯ ಗೀಳಿನ ಹೊಗೆ ಈಗ ಅನೇಕ ರಾಷ್ಟ್ರಗಳಲ್ಲಿ ಮತ್ತೆ ಹೆಡೆಯಾಡುತ್ತಿರುವಾಗ ವಿಜ್ಞಾನಿಗಳು ಅದಕ್ಕೆ ಗಾಳಿ ಹಾಕಬಾರದು ತಾನೆ?

No comments:

Post a Comment