Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Friday, September 17, 2021
ರಹಮತ್ ತರೀಕೆರೆ - ರಾಜಶೇಖರ್ ಜತೆ ಒಂದು ದಿನ/ G. Rajashekhar / Rahamath Tarikere/
ರಾಜಶೇಖರ್ ಜತೆ ಒಂದು ದಿನ
(ಅವರಿಗೆ 75 ತುಂಬಿದ ನೆಪದಲ್ಲಿ ಈ ಹಳೆಯ ಲೇಖನ)
ಖುಶವಂತ ಸಿಂಗರ `ಟ್ರೈನ್ ಟು ಪಾಕಿಸ್ತಾನ್’ ಕೃತಿ ಕುರಿತ ಸಂವಾದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋದವನು, ಮಾರನೇ ದಿನ ಜಿ. ರಾಜಶೇಖರ್ ಅವರ ಮನೆಗೆ ಹೋದೆ. ಭೇಟಿಯ ನೆಪದಲ್ಲಿ ಅವರ ಸಂದರ್ಶನವನ್ನೂ ಮಾಡಬೇಕಿತ್ತು. ನಮ್ಮಿಬ್ಬರ ಭೇಟಿಗೆ ಗೆಳೆಯರಾದ ಫಣಿರಾಜ್ ಹಾಗೂ ಸಂವರ್ತ ಸಾಹಿಲ್, ಪೂರ್ವಭಾವಿ ಭೂಮಿಕೆ ಕಲ್ಪಿಸಿದ್ದರು. ನಾನು ಹೋದ ದಿನ ಉಡುಪಿಯಲ್ಲಿ ಆಗಸಕ್ಕೆ ಹುಚ್ಚು ಹಿಡಿದಂತೆ ಪ್ರಳಯಕಾಲದ ಮಳೆ. ಬಳ್ಳಾರಿಯ ಬಿಸಿಲಿನಿಂದ ಹೋಗಿದ್ದ ನಾನು ಥಂಡಿಗೆ ಥರಥರಿಸುತ್ತಿದ್ದೆ. ಆಟೊದಲ್ಲಿ ಇರುವಾಗಲೇ ಇರಿಸಲು ಬಡಿದು ಅರ್ಧ ಒದ್ದೆಯಾಗಿದ್ದೆ; ಆಟೊ ಇಳಿದು, ಗೇಟುತೆಗೆದು ಮನೆಬಾಗಿಲಿಗೆ ಹೋಗುವಷ್ಟರಲ್ಲಿ ಇನ್ನರ್ಧ ತೊಯ್ದುಹೋದೆ.
ರಾಜಶೇಖರ್ ಅವರ ಮನೆ, ಉಡುಪಿಯ ದಕ್ಷಿಣದಿಕ್ಕಿನ ಅಂಚಿನಲ್ಲಿರುವ ಕೊಳಂಬೆ ಪ್ರದೇಶದಲ್ಲಿದೆ; ನೀರು ಜುಳುಜುಳಿಸುವ ತೋಡುಗಳೂ ಹಸಿರುಹೊಮ್ಮಿಸುವ ಭತ್ತದ ಗದ್ದೆಗಳೂ ಕಂಗು-ತೆಂಗಿನ ತೋಟಗಳೂ ಅದನ್ನು ಸುತ್ತುವರೆದಿವೆ. ಹಾಡುಹಗಲೇ ಜೀರುಂಡೆಯ ಜೀಕಾರವೂ ನವಿಲಿನ ಪರಾಕೂ ಅಲ್ಲಿ ಕೇಳಿಸುತ್ತದೆ. ಕಾಂಪೌಂಡಿನ ಗೋಡೆಯ ಮೇಲೆ ಹಸಿರುಪಾಚಿ ಹಬ್ಬಿಕೊಂಡು ನಡುನಡುವೆ ಫರ್ನ್ ಸಸ್ಯಗಳು ಬೆಳೆದಿವೆ; ಇನ್ನು ಕಾಂಪೌಂಡಿನೊಳಗೆ ಬೆಳೆದಿದ್ದ ಹೂಗಿಡಗಳ ಹಳುವಿನಲ್ಲಂತೂ, ಒಂದು ಹುಲಿ ಆರಾಮಾಗಿ ಅಜ್ಞಾತವಾಸ ಮಾಡಬಹುದಿತ್ತು. ನಾನು ಸೋಜಿಗದಿಂದ ಅವನ್ನೆಲ್ಲ ನೋಡುವಾಗ, ರಾಜಶೇಖರ್ ಸಂಕೋಚ ಬೆರೆತ ಅಭಿಮಾನದಿಂದ "ಇದು ಆರ್ಡರ್ ಇನ್ ಡಿಸ್ಆ ರ್ಡರ್" ಎಂದು ವರ್ಣಿಸಿದರು.
ಅದೊಂದು ಚಿಕ್ಕಮನೆ; ಹಾಲಿನ ಮೂಲೆಯಲ್ಲಿ ಮೇಜು; ಬಗಲಿಗೇ ಒಟ್ಟಿದ ಪುಸ್ತಕರಾಶಿ. ಇನ್ನೊಂದು ಮೂಲೆಯ ಗೂಡಿನಲ್ಲಿ ಆಂಜನೇಯನ ಚಿತ್ರಪಟ. ಅದರ ಮುಂದೆ ಅವರ ಹೆಂಡತಿ ಸುಮತಿ, ಪೂಜೆ ಮಾಡಿದ ಕುರುಹು. ಅದನ್ನು ನೋಡುತ್ತ ನನಗೆ ಕಾರಂತರ`ಅಳಿದಮೇಲೆ’ ನೆನಪಾಯಿತು. ಅದು ರಾಜಶೇಖರ್ ಬಹಳ ಆಸ್ಥೆಯಿಂದ ಮತ್ತೆಮತ್ತೆ ವಿಶ್ಲೇಷಣೆ ಮಾಡಿರುವ ಕಾದಂಬರಿ. 'ನಾವು ವೈಯಕ್ತಿಕವಾಗಿ ನಾಸ್ತಿಕರಾಗಿರಬಹುದು. ಆದರೆ ಇಂಟಿಗ್ರಿಟಿಯುಳ್ಳ ಆಸ್ತಿಕರ ಶ್ರದ್ಧೆಯನ್ನು ಗೌರವಿಸುವುದು ಒಂದು ದೊಡ್ಡಮೌಲ್ಯ' ಎಂದು ಪ್ರತಿಪಾದಿಸುವ ಕೃತಿ.
ನಮ್ಮ ಮಾತುಕತೆಯದ್ದಕ್ಕೂ ಸೋನೆ ಶೃತಿ ಹಿಡಿದಿತ್ತು. ಸುಮತಿಯವರು ನನಗೆ ಬಿಸಿಬಿಸಿ ಅನ್ನ ಸಾರು, ಹುರಿದ ಹಪ್ಪಳ, ಕುಂದಾಪುರ ಕಡೆಯ ಉಪ್ಪಿನಕಾಯಿಯ ಊಟ ಬಡಿಸಿದರು; ನಡುನಡುವೆ ರಾಜಶೇಖರ್ `ನಮ್ಮನೇಲಿ ಯಾರಿಗೂ ಒಳ್ಳೇ ಟೀ ಮಾಡೋಕೆ ಬರೋಲ್ಲಾರಿ; ನಾನೇ ಮಾಡಬೇಕು. ಅಣ್ಣನಿಗೆ (ಮಗ ವಿಷ್ಣುವಿಗೆ ಅವರು ಕರೆಯುವುದು ಹಾಗೆ.) ಈಗ ಟೀಬೇಕು’ ಎಂದು ಎದ್ದುಹೋಗಿ, ಕೈಯಾರೆ ಟೀಮಾಡಿ ತರುತ್ತಿದ್ದರು; ಅವರ ಕೈಚಹ ಕುಡಿಯಲು `ಅಪ್ಪ ಟೀ ಚೆಂದ ಮಾಡ್ತಾರೆ’ ಎಂದು ವಿಷ್ಣು ಕಣ್ಣುಮಿಟುಕಿಸಿ ಪುಸಲಾಯಿಸುತ್ತಿದ್ದರು.
ನಾನು ರಾಜಶೇಖರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಲ ಕಂಡಿದ್ದೇನೆ. ಯಾವಾಗಲೂ ಅವರ ಚಹರೆ ಸರಿಸುಮಾರು ಒಂದೇ ತರಹ; ಹೇಗೆಂದರೆ-ತುಸು ಬಿಗಿದುಕೊಂಡ ಮುಖ; ಹಳೇಮಾದರಿಯ ದಪ್ಪ ಫ್ರೇಮಿನ ಕನ್ನಡಕದೊಳಗೆ ತೀಕ್ಷ್ಣನೋಟ ಹರಿಸುವ ಗಾಬರಿಗೊಂಡಂತೆ ತೋರುವ ಕಣ್ಣು; ಸರಿಯಾಗಿ ಬಾಚದ ತಲೆಗೂದಲು; ಕಪ್ಪು ಚೌಕಳಿಯ ಶರ್ಟು. ಆರ್ಡರ್ ಇನ್ ಡಿಸಾರ್ಡರ್. ಹಾಲಿನ ಇನ್ನೊಂದು ಭಾಗದಲ್ಲಿ ಅವರು ಹೆಂಡತಿ ಜತೆ ತೆಗೆಸಿಕೊಂಡ ಎರಡು ಚಿತ್ರಪಟಗಳಿದ್ದವು. ಒಂದು-ಮದುವೆಯಾದ ಹೊಸತರಲ್ಲಿ ತೆಗೆಸುಕೊಂಡಿದ್ದು. ನಗುಮುಖದ ಯುವಕನ ಸೌಮ್ಯತೆ ಲಾಸ್ಯವಾಡುತ್ತಿದೆ. ಇನ್ನೊಂದು-ನಿವೃತ್ತಿಯ ದಿನ ತಾಂತ್ರಿಕ ಕಾರಣಕ್ಕೆ ತೆಗೆಸಿಕೊಂಡಿದ್ದಿರಬೇಕು- ನೆರಿಗೆ ಸಡಿಲಗೊಂಡಿರದ ಬಿಗುಮುಖ ಗುರುಗುಟ್ಟುತಿದೆ.
ರಾಜಶೇಖರರ ಮುಖದ ಚಿಂತನಶೀಲ ಗಾಂಭೀರ್ಯಕ್ಕೆ ಅವರ ಸ್ವಭಾವದಲ್ಲಿ ಅರ್ಧ ಕಾರಣವಿದ್ದರೆ, ಅವರ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿರುವುದು ಇನ್ನರ್ಧ ಕಾರಣ. ಅವರ ನನ್ನ ಮೊದಲ ಭೇಟಿ ನೆನಪಾಗುತ್ತಿದೆ. ಮಡಿಕೇರಿಯಲ್ಲಿ ಪಟ್ಟಾಭಿರಾಮ ಸೋಮಯಾಜಿಯವರು ಸಂಘಟಿಸಿದ್ದ ಕಾರ್ಯಕ್ರಮವದು. ರಾಜಶೇಖರ ಅವರನ್ನು ಮೊದಲ ಸಲ ಕಾಣುವ ಪುಳಕದಲ್ಲಿ ನಾನು ಭೇಟಿಯಾದೆ. ಅವರು ಕೈಕುಲುಕಿ ನಿರ್ಭಾವುಕವಾಗಿ `ಹ್ಞಾ! ಯಾವಾಗ ಬಂದ್ರಿ?’ ಎಂಬ ವಾಕ್ಯಬಿಟ್ಟರೆ ಹೆಚ್ಚೇನೂ ಆಡಲಿಲ್ಲ. ನನಗೆ ತುಸು ನಿರಾಶೆಯಾಗಿತ್ತು. ಬಹುಶಃ ಅವರು ಅಂದಿನ ಕಾರ್ಯಕ್ರಮದ ಬಗ್ಗೆ ತವಕಿತರಾಗಿದ್ದರು. ಕಾರಣ, ಕಾರ್ಯಕ್ರಮ ತಡೆಯಲು ಎದುರಾಳಿಗಳು ಭಯಂಕರ ತಯಾರಿ ಮಾಡಿಕೊಂಡಿದ್ದರಿಂದ, ವಾತಾವರಣ ಬಿಗುವಾಗಿತ್ತು. ಪೋಲಿಸರ ಸಂಖ್ಯೆ ನಮ್ಮನ್ನು ಮೀರಿಸುವಷ್ಟಿತ್ತು. ರಾಜಶೇಖರರ ಆತಂಕ ನಿಜವಾಗುವಂತೆ ಅಂದಿನ ಕಾರ್ಯಕ್ರಮ ನಡೆಯಲಿಲ್ಲ. ಸುರು ಆಗುತ್ತಿದ್ದಂತೆಯೇ ಪಡ್ಚ. ನಾವೆಲ್ಲ ಪೆಟ್ಟುತಿನ್ನದೇ ಮರಳಿದ್ದೇ ದೊಡ್ಡ ಸಂಗತಿ.
ನಾನು ಮಾತುಕತೆಗೆ ಮನೆಗೆ ಹೋದ ದಿನ ಅವರು, ಕರಿಬಿಳಿಯ ಉದ್ದಗೆರೆಯಿರುವ ಅಂಗಿ ಹಾಗೂ ಆಗಸನೀಲಿಯ ಚೌಕುಳಿಲುಂಗಿ ಧರಿಸಿದ್ದರು. ವಯಸ್ಸಿನ ಕಾರಣದಿಂದ ದೇಹ ನಸುಬಾಗಿತ್ತು. ಆದರೆ ಲವಲವಿಕೆಯಿತ್ತು. ನಾಲ್ಕೈದು ತಾಸು ಕಾಲ, ಸಾಹಿತ್ಯದ ಬಗ್ಗೆ, ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ, ಒಳನೋಟಗಳಿಂದ ಕೂಡಿದ ಮಾತುಕತೆಯನ್ನು ನಡೆಸಿಕೊಟ್ಟರು. ನಾನು ಕಳೆದ ೨೫ ವರುಷಗಳಲ್ಲಿ ಮಾಡಿದ ಅತ್ಯತ್ತಮ ಸಂದರ್ಶನವದು. ಇದು 'ನ್ಯಾಯ ನಿಷ್ಠುರಿಗಳ ಜತೆಯಲ್ಲಿ' ಸಂಪುಟದಲ್ಲಿ ಅಚ್ಚಾಯಿತು.
ಎದುರು ನಾನೊಬ್ಬನೇ ಇದ್ದರೂ, ರಾಜಶೇಖರ್ ದೊಡ್ಡಸಭೆಯನ್ನು ಸಂಬೋಧಿಸುವಂತೆ ಏರುದನಿಯಲ್ಲಿ ಮಾತಾಡುತ್ತಿದ್ದರು; ಮತೀಯ ರಾಜಕಾರಣದ ಚರ್ಚೆ ಬಂದಾಗಲೆಲ್ಲ ಉದ್ವಿಗ್ನತೆಯಿಂದ ಅವರ ದನಿ ವ್ಯಗ್ರಗೊಳ್ಳುತ್ತಿತ್ತು. ಆದರೆ ಹುಟ್ಟೂರಾದ ಗುಂಡ್ಮಿ, ತಮ್ಮ ಬಾಲ್ಯ, ತಾಯಿ, ತಂದೆ, ಅಲ್ಲಿನ ಪರಿಸರ, ಅಡುಗೆ ಇತ್ಯಾದಿ ವಿಷಯ ಬಂದಾಗ, ದನಿ ಮೃದುಗೊಂಡು ಆಪ್ತತೆ ತನ್ಮಯತೆ ಪಡೆಯುತ್ತಿತ್ತು-ಕುವೆಂಪು ಮಲೆನಾಡಿನ ವಿಷಯ ಬಂದರೆ ಭಾವುಕರಾಗುವ ಹಾಗೆ. ಬದುಕಿನ ಸಣ್ಣಸಂಗತಿಗಳಿಗೆ ಮಿಡಿಯುವ ಅವರ ಆಸ್ಥೆ ಮತ್ತು ಜೀವನ ಪ್ರೀತಿಗಳು, ಅವರಲ್ಲಿರುವ ಪ್ರತಿರೋಧ ಪ್ರಜ್ಞೆಯಷ್ಟೇ ತೀವ್ರವಾಗಿದ್ದವು.
ರಾಜಶೇಖರ್ ಆದಿನ ಒಳ್ಳೇ ಮೂಡಲ್ಲಿದ್ದರು. ಅವರಲ್ಲಿರುವ ಹಾಸ್ಯಪ್ರಜ್ಞೆ ಸುಳಿಸುಳಿಯಾಗಿ ಹೊರಹೊಮ್ಮುತಿತ್ತು. ಅವರು ಸಾಮಾನ್ಯವಾಗಿ ಉಡುಪಿ ಬಿಟ್ಟು ಹೆಚ್ಚು ಹೊರ ಹೋದವರಲ್ಲ. ಉಡುಪಿಯ ಜತೆ ಅವರಿಗೆ ಆಪ್ತವಾದ ಗಾಢವಾದ ನಂಟಿತ್ತು. ಹಿಂದೊಮ್ಮೆ ನನ್ನ ಗುರುಗಳಾದ ಪುಣೇಕರ್ ಅವರು ಉಡುಪಿಯಲ್ಲಿ ವಾಸವಿದ್ದ ವಿಷಯ ಪ್ರಸ್ತಾಪಕ್ಕೆ ಬಂತು. ಆಗ ರಾಜಶೇಖರ್ ಹೇಳಿದರು: "ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದು ಗೊತ್ತಲ್ಲ? ಅವರಿದ್ದ ಮನೆಯಲ್ಲಿಯೇ ಅಡಿಗರು ಇದ್ರು. ಅದೊಂದು ಹಳೇ ಕಾಲದ ಮನೆ. ಅದರ ಎದುರು ಒಂದಿಷ್ಟು ಖಾಲಿ ಜಾಗ ಇತ್ತು. ಅದನ್ನು ಹಾಗೇ ಹಾಳು ಬಿಟ್ಟಿದ್ರು. ಪುಣೇಕರ್ ಆಗಲಿ, ಅವರ ನಂತರ ಬಂದ ಅಡಿಗರಾಗಲಿ, ಇವರಿಬ್ಬರಿಗಿಂತ ಮೊದಲಿದ್ದ ವಿ.ಎಂ.ಇನಾಂದಾರ್ ಆಗಲಿ, ಮೂರೂ ಪುಣ್ಯಾತ್ಮರು ಒಂದು ಗಿಡಾನೂ ಅಲ್ಲಿ ನೆಡಲಿಲ್ಲ. ಆ ಮನೆಗೊಂದು ಮೊಗಸಾಲೆ ಇತ್ತು. ಅಲ್ಲಿ ಈ ಮೂವರು ಸಂಜೆ ವಿರಾಜಮಾನರಾಗಿರುತ್ತಿದ್ದರು. ಅಡಿಗರಂತೂ ಒಂದಾದ ಮೇಲೊಂದು ಸಿಗರೇಟ್ ಸುಡ್ತಾ ಇದ್ದರು." ಮಾತಿನ ಮಧ್ಯೆ ಕೆಲವು ಪತ್ರಿಕೆಗಳ ವಿಷಯ ನುಸುಳಿತು. "ನಾನು ಅವನ್ನು ಓದುವುದಿಲ್ಲ" ಎಂದೆ. ಅವರು ತುಸು ಅಸೂಯೆಯಿಂದ ``ನೀವು ಅದೃಷ್ಟವಂತರು ಕಂಡ್ರಿ. ದಾರೀಲಿ ನಡೀವಾಗ ಸೈಡಲ್ಲಿ ಬಿದ್ದಿರೋ ಮಲಕ್ಕೆ ಬೇಡವೆಂದೂ ನಮ್ಮ ದೃಷ್ಟಿಹೋಗುತ್ತೆ'' ಎಂದು ಸ್ವಗೇಲಿ ಮಾಡಿಕೊಂಡರು.
ರಾಜಶೇಖರ್ ಗೆ, ಸಾಹಿತ್ಯ ಕ್ಷೇತ್ರದಾಚೆ ಇರುವ ಸಾರ್ವಜನಿಕ ವ್ಯಕ್ತಿಗಳ ಬರೆಹ-ಮಾತುಗಾರಿಕೆ ಬಗ್ಗೆ ಬಹಳ ಆಸಕ್ತಿಯಿತ್ತು "ನೀವು ಗದುಗಿನ ತೋಂಟದಾರ್ಯ ಸ್ವಾಮಿಗಳ ಭಾಷಣದಿಂದ, ಅದರಲ್ಲೂ ಅವರ ಕನ್ನಡದಿಂದ ಬಹಳ ಪ್ರಭಾವಿತರಾಗಿದ್ದಿರಿ ಅಂತ ಕೇಳೀದೀನಿ. ಯಾವ ಸನ್ನಿವೇಶ ಅದು?" ಎಂದು ಕೇಳಿದೆ. `` ತೋಂಟದಾರ್ಯ ಸ್ವಾಮಿಗಳೂ, ನಿಡುಮಾಮಿಡಿ ಸ್ವಾಮಿಯವರೂ ಮತ್ತು ನಾನೂ, ಮಂಗಳೂರಿನ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದೆವು. ಇಬ್ಬರದೂ ಒಂದು ಜುಗಲಬಂದಿ ನಡೀತು ಸ್ವಲ್ಪಹೊತ್ತು-'ಎಷ್ಟು ಸೊಗಸಾಗಿ ಮಾತಾಡಿದಿರಿ ತಾವು' ಅಂತ ಒಬ್ಬರು. 'ಇಲ್ಲಿಲ್ಲ. ತಾವು ತುಂಬ ಚೆನ್ನಾಗಿ ಮಾತಾಡಿದಿರಿ' ಅಂತ ಇನ್ನೊಬ್ಬರು. ಅದರೆ ಇಬ್ಬರೂ ಸೊಗಸಾಗಿ ಮಾತಾಡಿದ್ದರು. ಗದುಗಿನ ಸ್ವಾಮಿಗಳಂತೂ ಬಹಳ ಸಹಜವಾಗಿ ಮಾತಾಡಿದ್ದರು'' ಎಂದು ಸಂತೋಷದಲ್ಲಿ ನೆನೆದರು.
ಹಳೇ ಉಡುಪಿ ಶಹರಿನ ಚಹರೆ ಚರ್ಚೆಗೆ ಬಂತು. ಆಗ ರಾಜಶೇಖರ್ ಬನ್ನಂಜೆಯಲ್ಲಿದ್ದ ಒಂದು ಗುಡಿಯನ್ನು ನೆನೆಸಿಕೊಂಡು ನುಡಿದರು: ``ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್ನ ವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ'' ಎಂದರು. ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕøತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು. ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನಗಿರಿ ಕುರಿತ ಕಾರ್ಯಕ್ರಮದಲ್ಲಿ, ಶಬನಂ ವೀರಮಾನ್ವಿ ಹಾಡಿದ ಕಬೀರ್ ಭಜನನ್ನು ಕೇಳಿ ಅವರು `ಹಾ! ಎಂಥಾ ಎನರ್ಜಿ ಮತ್ತು ತನ್ಮಯಗೊಳಿಸುವ ಶಕ್ತಿಯಿದೆ ಈ ಕಂಠಕ್ಕೆ’ ಎಂದು ಆನಂದಪಟ್ಟಿದ್ದನ್ನು ನೆನೆಸಿಕೊಂಡೆ. ನಾಸ್ತಿಕರು ಅಥವಾ ಕೋಮುವಾದ ಮೂಲಭೂತವಾದ ವಿರೋಧ ಮಾಡುವವರು, ಜನತೆಯ ಧಾರ್ಮಿಕ ಲೋಕಗಳ ಬಗ್ಗೆ ಗೌರವವುಳ್ಳವರು; ಅಲ್ಲಿರುವ ಕಲೆ ಸೌಂದರ್ಯಗಳ ಬಗ್ಗೆ ಪ್ರೀತಿಯುಳ್ಳವರು- ಎಂದರೆ ಕೆಲವರು ನಂಬುವುದಿಲ್ಲ. ಶಕ್ತಿ ರಾಜಕಾರಣವು ಧರ್ಮವನ್ನು ತನ್ನ ಹತ್ಯಾರದಂತೆ ಬಳಸುವುದನ್ನು ವಿರೋಧಿಸುವುದು ಬೇರೆ: ನಿತ್ಯ ಜೀವನದಲ್ಲಿ ಸಾಮಾನ್ಯ ಜನ ಬದುಕುವ ಧರ್ಮವನ್ನು ಮನ್ನಿಸುವುದು ಬೇರೆ ಎಂದರೆ, ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಕೆಲವರು ಇವುಗಳ ನಡುವಿನ ಫರಕನ್ನು ಉದ್ದೇಶಪೂರ್ವಕವಾಗಿ ಮರೆಯಿಸಿ, 'ವಿಚಾರವಾದಿ' 'ಬುದ್ಧಿಜೀವಿ' ಲೇಖಕರು' ಎಂಬುವರನ್ನು 'ಸಮಾಜದ ಕ್ಷೇಮಕ್ಕಾಗಿ ನಿವಾರಿಸಬೇಕಾದ ಪೀಡೆಗಳು' ಎಂಬ ಗೊಂದಲದ ಸನ್ನಿವೇಶವನ್ನು ನಿರ್ಮಾಣ ಮಾಡಿರುವರು. ಈ ಸನ್ನಿವೇಶವೇ ಲೇಖಕರ ಹತ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ನಿಜವಾದ ವಿಚಾರವಾದವು, ಧರ್ಮದ ಹೆಸರಲ್ಲಿರುವ ಮತೀಯ ರಾಜಕಾರಣವನ್ನು ನಿರಾಕರಿಸುತ್ತಲೇ, ಪರಂಪರೆಯಿಂದ ಬಂದ ಜೀವನ ಕ್ರಮಗಳ ಬಗ್ಗೆ, ಅದು ಸೃಷ್ಟಿಮಾಡಿರುವ ಅಡುಗೆ, ವಾಸ್ತು, ಇತ್ಯಾದಿ ಕ್ಷೇತ್ರಗಳಲ್ಲಿರುವ ಕುಶಲತೆ ಬಗ್ಗೆ ಅಪಾರ ಶ್ರದ್ಧೆ ತೋರುತ್ತದೆ. ಇದು ಕಾರಂತ ಕುವೆಂಪು ಅವರಿಂದ ಕನ್ನಡದಲ್ಲಿ ಹರಿದು ಬಂದಿರುವ ಪರಂಪರೆ. ಲೋಹಿಯಾ ಅವರು ಮಹಾನ್ ವಿಚಾರವಾದಿ. ಆದರೆ ಅವರ `ರಾಮಕೃಷ್ಣಶಿವ' ಲೇಖನ ಸಾಂಸ್ಕøತಿಕ ಆಸ್ಥೆಯಿರುವ ಮನಸ್ಸು ಮಾತ್ರ ಬರೆಯುವಂಥದ್ದು. ರಾಜಶೇಖರ್ ಇಂಥಾ ಪರಂಪರೆಗೆ ಸೇರಿದ ಚಿಂತಕರು.
ರಾಜಶೇಖರ್ ಜೀವವಿಮಾ ಕಛೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದವರು. ಕಳೆದ ದಶಕದಿಂದ ಕೋಮಸೌಹಾರ್ದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೀವಮಾನ ಉದ್ದಕ್ಕೂ ಬೇರೆಬೇರೆ ಜನಪರ ಚಳುವಳಿಗಳ ಭಾಗವಾದವರು; ಸಾವಿರಾರು ಬೀದಿಭಾಷಣಗಳನ್ನು ಮಾಡಿದವರು. ಅವರ ವಿಮರ್ಶೆ ಓದುವುದು ಮತ್ತು ಭಾಷಣ ಕೇಳುವುದು ಎಂದರೆ, ಸಾಹಿತ್ಯವನ್ನೂ ಅದರ ಘನತೆಯಲ್ಲಿ, ಸಮಾಜವನ್ನು ಅದರ ಸಂಕೀರ್ಣತೆಯಲ್ಲಿ, ಅರಿಯುವ ಕ್ರಮವೇ ಆಗಿದೆ. ಅವರ ಚಿಂತನೆ ಮತ್ತು ಭಾಷೆಗಳಲ್ಲಿರುವ ತೀಕ್ಷ್ಣತೆಗೂ ವ್ಯಕ್ತಿತ್ವದಲ್ಲಿರುವ ತಳಮಳಿಕೆಗೂ ಕಾರಣ, ಅವರ ಸೂಕ್ಷ್ಮಸಂವೇದನೆ ಮಾತ್ರವಲ್ಲ, ಹಾಲಿ ಕರಾವಳಿ ಕರ್ನಾಟಕದ ಪ್ರಕ್ಷುಬ್ಧ ಸನ್ನಿವೇಶ ಕೂಡ.
ಮಾತುಕತೆಯಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಬಹಳ ಸಲ `ನನಗೆ ಗೊತ್ತಿಲ್ಲ' ಎಂದು ವಿವರಣೆ ಶುರುಮಾಡುತ್ತಿದ್ದರು. ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರಷ್ಟು ಓದಿದವರು ಕನ್ನಡದಲ್ಲಿ ಕಡಿಮೆ. ಅವರಷ್ಟು ಆಳವಾದ ವ್ಯಾಪಕವಾದ ಓದನ್ನು ವಿಶ್ವವಿದ್ಯಾಲಯಗಳಲ್ಲಿರುವ ನಾವು ಮಾಡಿದ್ದರೆ, ನಮ್ಮ ವಿದ್ಯಾರ್ಥಿಗಳು ಏನೇನಾಗಿರುತ್ತಿದ್ದರೊ? ಆ ದಿನದ ಮಾತುಕತೆಯಲ್ಲಿ ನನಗೆ ಅವರು ಆಂಗ್ಲ ಶಿಕ್ಷಕರಾಗಿದ್ದ ಸಂಗತಿ ಆಕಸ್ಮಿಕವಾಗಿ ತಿಳಿಯಿತು. ಅವರ ಇಂಗ್ಲೀಶ್ ಓದು ಕೂಡ ವ್ಯಾಪಕ. ಅವರೊಬ್ಬ ಅದ್ಭುತ ಕನ್ನಡ ಗದ್ಯಕಾರ. ಕನ್ನಡದಲ್ಲಿ ಅವರಂತೆ ಮುಕ್ಕಾಗದ ನೈತಿಕ ಪ್ರಜ್ಞೆ ಮತ್ತು ಧೀಮಂತಿಕೆಯುಳ್ಳ ಚಿಂತಕರು ವಿರಳ. ಕನ್ನಡ ಬರೆಹದಲ್ಲಿರುವ ಜಡತೆ ಮತ್ತು ಲಯಗೇಡಿತನ ಕಂಡಾಗಲೆಲ್ಲ ಹರಿಹಾಯುತ್ತಿದ್ದ ಲಂಕೇಶ್, ತಮ್ಮ ಸಾಯುವ ಕೊನೆಯ ಕ್ಷಣಗಳಲ್ಲಿ ಬರೆದ ಟಿಪ್ಪಣಿ, ರಾಜಶೇಖರ ಅವರ ಪ್ರಾಂಜಲವಾದ ಕನ್ನಡವನ್ನು ಕುರಿತಾಗಿತ್ತು. ಬಾಳಿಡೀ ಪ್ರತಿರೋಧ ಮತ್ತು ಆಕ್ಟಿವಿಸಂನಿಂದ ಜಗಜಗಿಸಿದ ರಾಜಶೇಖರ್ ಅವರಲ್ಲಿ, ಮತೀಯವಾದವು ದೇಶವನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ನಿರಾಶೆಯಿತ್ತು; ಅವರು ಮತ್ತಷ್ಟು ಹತಾಶೆಯ ಗಳಿಗೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂದೂ ಅನಿಸಿತು. ಒಳ್ಳೆಯ ಮಾತುಗಾರರಾದ ಅವರು, ಮಾತು ಮತ್ತು ಬರೆಹದ ನಿಷ್ಫಲತೆಯನ್ನೂ ಅರಿತವರು. ಸದ್ಯದ ಚಾರಿತ್ರಿಕ ಸನ್ನಿವೇಶವೇ ಅವರ ಬರೆಹ ಮತ್ತು ಮಾತಿಗೆ ತೀವ್ರತೆಯನ್ನೂ ವಿಷಾದದ ಗುಣವನ್ನೂ ತಂದುಕೊಟ್ಟಂತೆ ತೋರಿತು.
``ನೀವು ಅಷ್ಟೊಂದು ಬೀದಿಭಾಷಣ ಮಾಡಿದವರು. ಆದರೆ ಸೆಮಿನಾರುಗಳಲ್ಲಿ ಬರಕೊಂಡು ಬಂದು ಮಾತಾಡ್ತೀರಲ್ಲ, ಯಾಕೆ?" ಎಂದೆ. "ಎಕ್ಸಟೆಂಪರ್ ಮಾತಾಡೋ ಧೈರ್ಯವೇ ಇಲ್ಲ ನನಗೆ. ಮೈಕ್ ಮುಂದೆ ನಿಂತು ಮಾತಾಡುವಾಗ ಯೋಚನೆ ಮಾಡಿಕೊಂಡು ಬಂದಿದ್ದ ಮಾತೆಲ್ಲ ಮರೆತೇ ಹೋಗುತ್ತೆ. ನನಗೆ ಅಲ್ಲಲ್ಲೇ ನಿಂತುಗೊಂಡು ಸೃಷ್ಟಿ ಮಾತಾಡೋವಷ್ಟು ಸೃಜನಶೀಲತೆ ಇಲ್ಲ. ಕಿ.ರಂ. ಮಾಡ್ತಿದ್ದರಂತೆ ಅದನ್ನ. ಕಿ.ರಂ. ಭಾಷಣ ಮಾಡೋಕೆ ಪುಟಗಟ್ಟಲೆ ನೋಟ್ಸ್ ಮಾಡ್ಕೊಂಡು ಹೋಗ್ತಾರೆ. ಮೈಕ್ ಮುಂದೆ ನಿಂತುಕೊಳ್ತಾರೆ. ಆಮೇಲೆ ಅದನ್ನು ನೋಡೋದೇ ಇಲ್ಲವಂತೆ. ಮಾಡ್ಕೊಂಡಿರೋ ನೋಟ್ಸೇ ಬೇರೆ; ಎದುರುಗಡೆ ಬಂದು ಹೇಳೋದೇ ಬೇರೆ. ಆ ತರಹದ ಕುಶಲತೆ ನನ್ನ ಹತ್ತರ ಇಲ್ಲ. ಮಾತಿಗೆ ತಡವರಿಸೋದೇ ಜಾಸ್ತಿ. ಸುಮಾರಷ್ಟು ಡಿಸಾಸ್ಟರಸ್ ಎಕ್ಸ್ ಪೀರಿಯನ್ಸ್ ಆಗಿವೆ ನನಗೆ'' ಎಂದರು. "ನೀವು ಮೇನ್ ಸ್ಟ್ರೀಂ ಪತ್ರಿಕೆಗಳಲ್ಲಿ ಯಾಕೆ ಬರೆಯೋಲ್ಲ?" ಎಂದೆ. "ನಾನು ಬರೆದಿದ್ದನ್ನು ಅವರು ಹಾಕುವುದಿಲ್ಲ. ನಾನು ಹಿಂದೆ ಬರೆಯುತ್ತಿದ್ದುದು `ಲಂಕೇಶ್ ಪತ್ರಿಕೆ'ಗೆ; ನಂತರ 'ಗೌರಿಲಂಕೇಶ್'ಗೆ. ಈಗ ಎರಡೂ ಇಲ್ಲ. ನನಗೆ ಬರೆಸುವವರ ಪ್ರಚೋದನೆಯೇ ಇಲ್ಲವಾಗಿದೆ'' ಎಂದು ಜವಾಬಿಸಿದರು.
ಹೊರಡುವಾಗ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡೆ. ಅವರನ್ನು ನಗಿಸಬೇಕೆಂದು ನಾನೂ ವಿಷ್ಣುವೂ ಯತ್ನಿಸಿದೆವು. ತುಸುವೇ ತುಟಿ ಅರಳಿಸಿದರು. ಆಹೊತ್ತಿಗೆ ಮಳೆನಿಂತಿತ್ತು. ಆಗಸ ಹೊರಪಾಗಿತ್ತು. ಬರುತ್ತ ಅವರ ಕಾನನ ಸದೃಶ ಹಿತ್ತಲಿನಿಂದ ಒಂದು ಹೂಗಿಡದ ಸಸಿಯನ್ನು ಹಿಡಿದುಕೊಂಡು ಬಂದೆ.
53 Comments
Chandrashekhar Nangali
ನನ್ನನ್ನು ತುಂಬಾ ಪ್ರಭಾವಿಸಿದವರು ಜಿ.ಆರ್.ದ್ವಯರು (ಜಿ.ರಾಮಕೃಷ್ಣ & ಜಿ.ರಾಜಶೇಖರ್ )😍😍
Subscribe to:
Post Comments (Atom)
No comments:
Post a Comment