Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Wednesday, November 8, 2023
ಜ್ಯೊತಿ ಗುರುಪ್ರಸಾದ್ - ಲೇಖಕಿ ಶಾರದಾ ಭಟ್ ಅವರೊಂದಿಗೆ ಒಂದು ಸಂಜೆ-Kannada Writer Sharada Bhat
ಇಂದು ಕೋಟೇಶ್ವರದ ಆಚಾರ್ಯ ಆಸ್ಪತ್ರೆಯಲ್ಲಿ ಸಂಧಿಸಿದ ದಿವಂಗತ ಲೇಖಕಿ ತಾರಾಭಟ್ ಅವರ ತಂಗಿ ಶಾರದಾ ಭಟ್ ಅವರನ್ನು ಸಂಧಿಸಿ ಅವರಿಗಾದ ಸಂತಸದ ಒಂದು ಫೋಸನ್ನು ಸೆರೆಹಿಡಿಯಲು ಸಾಧ್ಯವಾದದ್ದು ಹೀಗೆ. ಚಿತ್ರದಲ್ಲಿ ಅವರನ್ನು ಗಮನಿಸುತ್ತ ಕಾಳಜಿ ವಹಿಸಿರುವ ಅವರ ಕುಟುಂಬ ಸ್ನೇಹಿತರೂ ವೈದ್ಯರೂ ಆದ ಡಾ.ಭಾಸ್ಕರ್ ಆಚಾರ್ಯ ಅವರೂ ಸಹ ಇದ್ದಾರೆ. ಮೊನ್ನೆ ತಾನೇ ತಾರಾಭಟ್ ಅವರ ಕಣ್ಮರೆಯ ಸುದ್ದಿ ತಿಳಿದು ಮನಸ್ಸು ಶಾರದಾ ಭಟ್ ಅವರನ್ನು ಕಾಣಲು ಹಂಬಲಿಸುತ್ತಿತ್ತು. ನಿನ್ನೆಯೆಲ್ಲ ಅವರು ಎಲ್ಲಿದ್ದಾರೆಂದು ತಿಳಿದುಕೊಳ್ಳುವ ಶೋಧನೆ ನಡೆಸಿ ಕೊನೆಗೆ ಪ್ರೊ.ಮುರಳೀಧರ ಉಪಾಧ್ಯ ಅವರು ಒದಗಿಸಿದ ಆಸ್ಪತ್ರೆಯ ಲಿಂಕಿನಲ್ಲಿ ಸಿಕ್ಕ ಡಾ.ಭಾಸ್ಕರ್ ಆಚಾರ್ಯರ ಫೋನ್ ನಂಬರಿಂದ ಶಾರದಾ ಭಟ್ ಅವರನ್ನು ಇಂದೇ ಸಂಧಿಸಲು ಸಾಧ್ಯವಾಯಿತು. ಶಾರದಾ ಭಟ್ ಮತ್ತು ತಾರಾಭಟ್ ಸಹೋದರಿಯರು ತಂಗಿದ ಆಚಾರ್ಯ ಆಸ್ಪತ್ರೆಯ 105 ನಂಬರ್ ಕೋಣೆಯಲ್ಲಿ ಈಗ ಅಚೆಬದಿಯ ಹಾಸಿಗೆ ಬರಿದಾಗಿದೆ. ಶಾರದಾ ಭಟ್ ಅವರು ಅಕ್ಕನ ಅಗಲಿಕೆಯ ನೋವು, ವೈಯಕ್ತಿಕ ಅನಾರೋಗ್ಯದ ನೋವು ಎಲ್ಲವನ್ನೂ ಭರಿಸಿ ಉಳಿದ ದಿನಗಳನ್ನು ಎದುರಿಸುವ ಧೈರ್ಯದಲ್ಲಿ ಮುಖದ ಮೇಲಿನ ಒಂದು ನಗೆಯನ್ನು ಉಳಿಸಿಕೊಂಡಿದ್ದಾರೆ. ನನ್ನನ್ನು ಗಟ್ಟಿಯಾಗಿ ಹೆಸರು ಕರೆದು ಗುರುತು ಹಿಡಿದು ಸಂತಸ ವ್ಯಕ್ತಪಡಿಸಿದರು, ನನ್ನ ಭೇಟಿ ಅವರ ಮುಖವನ್ನು ಸ್ವಲ್ಪವಾದರೂ ಅರಳಿಸುವಲ್ಲಿ ಸಫಲವಾಯಿತು ಎನ್ನುವುದೇ ನನ್ನ ಇಂದಿನ ತೃಪ್ತಿ. ನಾನು ಕೈಯ್ಯಾರೆ ಬಿಡಿಸಿಕೊಟ್ಟ ಕಿತ್ತಲೆ ಹಣ್ಣು, ಬಾಳೆ ಹಣ್ಣುಗಳನ್ನು ಮಗುವಿನಂತೆ ಬಾಯಿತುತ್ತು ತೆಗೆದುಕೊಂಡು ಮನಸಾರೆ ತಿಂದರು. ಸಾಧ್ಯವಾದಷ್ಟು, ಅಗಲಿರುವ ಅಕ್ಕನನ್ನು ನೆನೆದು ಮಾತಾಡಿದರು. ನೆನಪಿರುವಷ್ಟು ಸ್ವಲ್ಪ ಮಾತಾಡಿದರು. ನನ್ನನ್ನು ವಾಪಸ್ ಕಳಿಸಲು ಮನಸ್ಸೇ ಇಲ್ಲ. " ನೀರು ಕುಡಿಸಿ" , " ಕೈ ಮೇಲೆ ತುರಿಸುತ್ತದೆ, ನೀವಿಕೊಡಿ" ಎಂದು ಕೇಳುತ್ತ " ಇನ್ನೂ ಸ್ವಲ್ಪ ಹೊತ್ತು ಇರಿ" ಎಂದು ಅವರು ಆತ್ಮೀಯವಾಗಿ ಒತ್ತಾಯಿಸುವಾಗ ಇಲ್ಲವೆನ್ನಲಾಗದೆ ಊಟಕ್ಕೆ ಹೋಗುವುದನ್ನೂ ಮುಂದೂಡಿ ಸಾಕಷ್ಟು ಹೊತ್ತು ಅವರ ಜೊತೆಗಿದ್ದು ಅವರ ಅನುಮತಿ ತೆಗೆದುಕೊಂಡು ಅವರು " ಹೂಂ" ಎಂದಮೇಲೆಯೇ ಅವರು ನಗುಮುಖದಿಂದ " ಬೈ" ಹೇಳಿದ ಮೇಲೆಯೇ ಹೊರಟೆನು. ಒಂದು ಕಾಲದಲ್ಲಿ ನನ್ನನ್ನು , ನನ್ನ ಬರವಣಿಗೆಯನ್ನು ಅತ್ಯಂತ ಆದರಾಭಿಮಾನಗಳಿಂದ ಕಂಡಿದ್ದ ಉಡುಪಿಯ ಸೋದರಿಯರು, ತಾರಾ ಭಟ್ ಮತ್ತು ಶಾರದಾ ಭಟ್. ಈಗ ಅವರ ಇರುವಿಕೆ ತಿಳಿದಮೇಲೆ ಇಷ್ಟು ತುರ್ತಾಗಿ ಅವರ ಒಂದು ಭೇಟಿಯನ್ನಾದರೂ ಮಾಡದಿರಲು ಸಾಧ್ಯವೇ?! ಮಾತಿನ ಮಧ್ಯೆ ಅವರ ಅಕ್ಕ ತಾರಾಭಟ್ ರನ್ನು " ತುಂಬಾ ಒಳ್ಳೇವ್ಳು, ದಿಟ್ಟ ಲೇಖಕಿ, ಹೋರಾಟಗಾರ್ತಿ, ಮಹಿಳಾ ಪರ ಚಿಂತಕಿ ಎಂದೆಲ್ಲ ನೆನೆದರು. ಇನ್ನೇನು ದುಃಖ ಹೆಚ್ಚಿಸಿಕೊಳ್ಳಬೇಕು ಎನ್ನುವಾಗ ನಾನು ಸಕಾರಾತ್ಮಕವಾಗಿ ಅವರ ಮನಸ್ಸನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತ " ಆಗಿಹೋಗಿದ್ದಕ್ಕೆ ಈಗ ಚಿಂತಿಸಬಾರದಲ್ಲವೇ? ವಿಚಾರವಂತರು ನೀವು. ಈಗ ನಿಮಗೆ ಯಾವುದು ಸಾಧ್ಯವೋ ಆ ಒಳಿತಿನ ಧ್ಯಾನವೇ ನಿಮ್ಮನ್ನು ಕಾಪಿಡುವುದಲ್ಲವೇ" ಎಂದಾಗ " ಹೌದು, ಹೌದು" ಎಂದು ಮಗುವಿನಂತೆ ಒಪ್ಪಿಕೊಳ್ಳುವ ಅವರ ಕೊರಳನ್ನು ಕೇಳುವುದು ನೋವಿನ ಸಂದರ್ಭದಲ್ಲಿಯೂ ಹಿತವೆನಿಸಿತ್ತು. ಕೆಲವೆಲ್ಲ ನೆನಪುಗಳು ಅವರಿಗೆ ಮರೆತು ಹೋಗಿದೆ. ಆದರೆ ಪತ್ರಕರ್ತೆಯಾಗಿ ದುಡಿದು ಸಂಪಾದನೆ ಮಾಡಿದ್ದು ಸ್ವಾಭಿಮಾನದಿಂದ ಬದುಕಿದ್ದು ನೆನಪಿದೆ. ಉದಯವಾಣಿಯಲ್ಲಿ ' ವಾರೆನೋಟ' ಎಂಬ ವಿಡಂಬನಾತ್ಮಕ ಅಂಕಣ ಬರೆದದ್ದು, ' ಲಘು ಬಿಗು' ಎಂಬ ಸಣ್ಣ ಕಥಾ ಸಂಗ್ರಹ, ' ಅವ್ಯವಸ್ಥೆ' ಎಂಬ ಕಾದಂಬರಿಯನ್ನು ' ಕನ್ನಡ ಪ್ರಭ' ಕ್ಕೆ ಧಾರಾವಾಹಿಯಾಗಿ ಬರೆದದ್ದು, ' ಪದರುಗಳು' ಧಾರಾವಾಹಿಯನ್ನು ' ತರಂಗ' ಕ್ಕೆ ಬರೆದದ್ದು, ವಾರ್ತಾಭಾರತಿಗೆ ಅಂಕಣ ಬರೆದದ್ದು ಎಲ್ಲವನ್ನೂ ನೆನೆದರು. ವಾರ್ತಾಭಾರತಿ ಸಂಪಾದಕರಾದ ಬಷೀರರ ನೆನಪಿದೆ ಎಂದರು. ಅವರ ಬಳಿ ಮಾತಾಡುವಿರಾ ಎಂದು ಫೋನ್ ಮಾಡಿಕೊಟ್ಟು ಮಾತಾಡಿಸಿದಾಗ ಆದಷ್ಟು ಮಾತಾಡಿ ಖುಷಿಪಟ್ಟರು. ಅಚ್ಚರಿಯ ಮತ್ತು ವಿಷಾದದ ಸುದ್ದಿಯೆಂದರೆ ಅವರ ಒಂದು ಪುಸ್ತಕವೂ ಈಗ ಅವರ ಬಳಿ ಇಲ್ಲ! ಡಾ. ಭಾಸ್ಕರ ಆಚಾರ್ಯರು ತಮ್ಮ ಪುಸ್ತಕ ಭಂಡಾರದಲ್ಲಿದ್ದರೆ ಹುಡುಕಿ ಒದಗಿಸುವೆ ಎಂದಿದ್ದಾರೆ. ಶಾರದಾ ಭಟ್ ಅವರ ಅಣ್ಣನ ಮಗ ಶಿವಮೊಗ್ಗದಲ್ಲಿರುವ ಅಜಯ್ ಅವರೂ ಸಹ ಈ ಸಹೋದರಿಯರ ಪುಸ್ತಕಗಳು ಬೆಳಕು ಕಾಣಲು ಯಾರಾದರೂ ಹವಣಿಸುವುದಾದರೆ ತನ್ನ ಬೆಂಬಲವಿರುವುದೆಂದಿದ್ದಾರೆ. ಹಿರಿಯ ಕವಯಿತ್ರಿ ಸವಿತಾ ನಾಗಭೂಷಣ್ ಅವರು ಅವರ ಬಳಿ ಇರುವ ತಾರಾಭಟ್ ಪುಸ್ತಕಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಓದಲು ದೊರೆಯುವಂತೆ ಮಾಡುವ ಸನ್ನಾಹಕ್ಕೆ ಸನ್ನದ್ಧರಾಗಿದ್ದಾರೆ. ಹೀಗೆ ಒಂದು ಕಾಲದಲ್ಲಿ ದಿಟ್ಟವಾಗಿ ಬಾಳಿ ಬದುಕಿದ ಈ ಸೋದರಿಯರ ಬಾಳ್ವೆಯ ಬರಹಕ್ಕೆ ನ್ಯಾಯ ಸಿಗುವಂತಾದರೆ ಅದೊಂದು ದೊಡ್ಡ ಸಂಗತಿ.
ಆಸ್ಪತ್ರೆಯಲ್ಲಿ ತಾರಾಭಟ್ ಅವರ ಇಂಗ್ಲಿಷ್ ಆವೃತ್ತಿಯ ' ಲೋಟಸ್ ಪಾಂಡ್' ಮತ್ತು ' ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ' , ಪರಿಧಿಯಿಂದಾಚೆಗೆ' ಕಥಾ ಸಂಕಲನಗಳು, ' ಸರ್ವಾಧಿಕಾರಿ' ನಾಟಕ ದೊರೆತು ಕಣ್ಣು ತೇವವಾಗಿ ಅವರನ್ನೇ ಕಂಡಂತಾಯಿತು...
Labels:
sharada bhat,
ಮಹಿಳಾ ಸಾಹಿತ್ಯ
Location:
Udupi, Karnataka, India
Subscribe to:
Post Comments (Atom)
No comments:
Post a Comment