Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Wednesday, March 29, 2023
ರಮೇಶ್ ಭಟ್ ಬೆಳಗೋಡು --ಮಾಧವ ಕುಲಕರ್ಣಿ ಎಂಬ ಸವ್ಯ ಸಾಚಿ
ಮಾಧವ ಕುಲಕರ್ಣಿ ಎಂಬ ಸವ್ಯಸಾಚಿ*
ಮಾಧವ ಅನಂತರಾವ್ ಕುಲಕರ್ಣಿಯವರು ಗದುಗಿನಲ್ಲಿ ಜನಿಸಿದ್ದು ಜೂನ್ 1, 1945ರಂದು. ಕಾಲೇಜು ಶಿಕ್ಷಣದ ತನಕ ಅವರು ಕಲಿತದ್ದು ಗದುಗಿನಲ್ಲಿಯೇ. ೧೯೬೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯ ಮತ್ತು ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು . ಬದುಕಿನ ವಿವಿಧ ಘಟ್ಟಗಳಲ್ಲಿ ಇವರಿಗೆ ಅಧ್ಯಾಪಕರಾಗಿದ್ದ ಪಾ. ಲ. ಸುಬ್ರಹ್ಮಣ್ಯ, ಡಾ. ಜಿ ಎಸ್ ಅಮೂರ, ಡಾ. ಶಾಂತಿನಾಥ ದೇಸಾಯಿ ಮತ್ತು ಉಡುಪಿಯಲ್ಲಿ ಪ್ರಾಂಶುಪಾಲರಾಗಿದ್ದ ಗೋಪಾಲಕೃಷ್ಣ ಅಡಿಗರು ಇವರಿಗೆ ಕಾಲಕಾಲಕ್ಕೆ ಅಗತ್ಯವಿದ್ದ ಸಾಹಿತ್ಯಿಕ ಮಾರ್ಗದರ್ಶನವನ್ನು ನೀಡಿದರು. ಗದುಗು, ಅಂಕೋಲ, ಉಡುಪಿ ಮತ್ತು ಮೈಸೂರುಗಳಲ್ಲಿ ಅಲೆಯುತ್ತ ಬದುಕು ಮತ್ತು ಬರಹವನ್ನು ಕಟ್ಟಿಕೊಂಡ ಕುಲಕರ್ಣಿಯವರು ೨೦೦೩ರಲ್ಲಿ ಇಂಗ್ಲೀಷ್ ಅಧ್ಯಾಪನದಿಂದ ನಿವೃತ್ತರಾಗಿ ಮೊನ್ನೆಮೊನ್ನೆಯ ತನಕ ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇದು ಕುಲಕರ್ಣಿಯವರ ಬಗ್ಗೆ ಅವರ ಪರಿಚಿತರೆಲ್ಲ ಬಲ್ಲ ಸಂಗತಿಗಳು.
ಆದರೆ ಮಾಧವಕುಲಕರ್ಣಿಯವರನ್ನು ಅಕ್ಷರಶಃ ಪುಟಕ್ಕಿಟ್ಟು ಬಂಗಾರವಾಗಿಸಿದ, ಮತ್ತು ಅವರು ಎಲ್ಲೂ ಹೇಳಿಕೊಳ್ಳದ ನಲವತ್ತು ವರ್ಷಗಳ ಹೋರಾಟದ ಇನ್ನೊಂದು ಕತೆಯಿದೆ. ಅವರ ತಂದೆ ಅನಂತರಾವ್ ಕುಲಕರ್ಣಿಯವರು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ನಂಬಿದವರ ವಿಶ್ವಾಸಘಾತ ಕೃತ್ಯದಿಂದ ನೊಂದ ಅನಂತರಾವ್ ಕುಲಕರ್ಣಿಯವರು ಅಕಾಲಮೃತ್ಯುವಶರಾದಾಗ ಮಾಧವ ಕುಲಕರ್ಣಿಯವರು ತಮ್ಮ ತಂಗಿ ತಾಯಿಯೊಂದಿಗೆ ಅಕ್ಷರಶಃ ರಸ್ತೆಯಲ್ಲಿದ್ದರು. ಆದಾಯವೇ ಇಲ್ಲದ ಸ್ಥಿತಿಯಲ್ಲಿ ತಂಗಿಯ ಮದುವೆಯಾಯಿತು. ಓದು ಮುಂದುವರಿಸಿ, ಗದುಗಿನಲ್ಲಿಯೇ ಉಪನ್ಯಾಸಕನಾಗಿ ತಮ್ಮನ ವಿದ್ಯಾಭ್ಯಾಸಕ್ಕೆ ಆಧಾರವಾದರು. ಪುಟ್ಟಕುಟುಂಬಕ್ಕೆ ತಂದೆತಾಯಿ ಎಲ್ಲವೂ ಆಗಿ, ಮಾಧವ ಕುಲಕರ್ಣಿಯವರು ಹೆಚ್ಚಿನ ಅವಕಾಶವನ್ನು ಅರಸುತ್ತ ಅಂಕೋಲಕ್ಕೆ ಬಂದರು. ಮತ್ತೆ ಅಡಿಗರು ಕರೆದರೆಂದು ಉಡುಪಿಗೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಗ ಪ್ರಾಂಶುಪಾಲರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರಿಗೆ ಆತಂಕದ ದಿನಗಳಲ್ಲಿ ಆಪ್ತರಾದರು. ಅಡಿಗರು ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ಸಾಕಷ್ಟು ಶತ್ರುಗಳನ್ನು ಸೃಷ್ಟಿಸಿಕೊಂಡು ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಾಗ, ಕುಲಕರ್ಣಿಯವರೂ ಉಡುಪಿಗೆ ವಿದಾಯ ಹೇಳಬೇಕಾಗಿ ಬಂತು. ಕೈಯಲ್ಲಿ ಕೆಲಸವಿಲ್ಲದೆ, ಬಿಟ್ಟುಬಂದಿದ್ದ ಗದುಗಿಗೆ ಹಿಂದಿರುಗಿ ಒಂಭತ್ತು ತಿಂಗಳ ಅಜ್ಞಾತವಾಸ ಅನುಭವಿಸಿದರು. ಜೊತೆಯಲ್ಲಿ ಕೈಹಿಡಿದ ಹೆಂಡತಿ ಮತ್ತು ಒಂಭತ್ತು ತಿಂಗಳ ಕೈಗೂಸು. ಜೀವನೋಪಾಯಕ್ಕಾಗಿ ಗೈಡುಗಳನ್ನು ಬರೆಯುತ್ತಿದ್ದ ಆ ದಿವಸಗಳಲ್ಲಿ ಅವರು ಮತ್ತಷ್ಟು ಮಾಗಿದರು. ಮತ್ತೆ ಮೈಸೂರಿಗೆ. ಸಾಹಿತಿ ಚದುರಂಗರು ಇವರ ಕೈ ಹಿಡಿದರು. ೧೯೭೨ರಲ್ಲಿ ಮಹಾಜನ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕನಾಗಿ ಹೊಸ ಅಧ್ಯಾಯ ಆರಂಭಿಸಿದರು. ಆಗವರ ಪ್ರಾಯ ೨೭, ಅಷ್ಟೇ. ಆದರೆ, ತಮ್ಮ ಹೆಗಲಿಗೇರಿದ ಯಾವ ಸಾಂಸಾರಿಕ ಜವಾಬ್ದಾರಿಯನ್ನೂ ಅವರು ನಿರಾಕರಿಸಲಿಲ್ಲ. ಮುಂದಿನ ಮೂವತ್ತೊಂದು ವರ್ಷಗಳಲ್ಲಿ ಅವರು ಆದರಣೀಯ ಇಂಗ್ಲೀಷ್ ಪ್ರೊಫೆಸರ್ ಆಗಿ ಉಳಿದರು, ಬೆಳೆದರು; ನಿವೃತ್ತರೂ ಆದರು. ಆದರೆ ಬದುಕು ಕೈಗೂಡುತ್ತಿದ್ದ ಹೊತ್ತಿನಲ್ಲಿ ಭರವಸೆಯ ಕತೆಗಾರನಾಗಿ ರೂಪುಗೊಂಡಿದ್ದ ತಮ್ಮ ಅಶೋಕ ಕುಲಕರ್ಣಿ ಅಪಮೃತ್ಯುವಿಗೀಡಾದರು. ಹರೆಯದ ಮಗಳು ವಿಧಿವಶಳಾದಳು. ಪತ್ನಿ ತೀರಿಕೊಂಡರು. ವೈಯಕ್ತಿಕ ಬದುಕಲ್ಲಿ ಸಾವು ನೋವುಗಳು ಸಾಲಾಗಿ ಬಂದು ಅವರನ್ನು ಪರೀಕ್ಷಿಸುತ್ತಲೇ ಇದ್ದವು. ತಮ್ಮ ಅಳಲನ್ನು ಅವರು ಯಾರಲ್ಲೂ ಹಂಚಿಕೊಳ್ಳಲೂ ಇಲ್ಲ, ಯಾರೊಬ್ಬರ ಕನಿಕರಕ್ಕಾಗಿ ಹಾತೊರೆಯಲೂ ಇಲ್ಲ.
ಮೊನ್ನೆಮೊನ್ನೆ ಮೈಸೂರುಬಿಟ್ಟು ಮಗನೊಂದಿಗೆ ಬೆಂಗಳೂರಿಗೆ ಹೋಗುವ ತನಕವೂ ಅವರು ವಾಸವಿದ್ದದ್ದು ಇ.ಡಬ್ಲ್ಯೂ.ಎಸ್ ಮನೆಯಲ್ಲಿಯೇ. ಇವೆಲ್ಲ ವ್ಯವಹಾರದಲ್ಲಿ ಅವರ ಸೋಲನ್ನು ತೋರಿಸಿದಂತೆಯೇ ಗೃಹಸ್ಥ ಧರ್ಮ ಪರಿಪಾಲನೆಯಲ್ಲಿ ಅವರ ಯಶಸ್ಸನ್ನು ಹೇಳುತ್ತವೆ. ಡಿವಿಜಿಯವರು ಹೇಳಿದಂತೆ, ಕೊನೆಗೆ ಉಳಿಯುವುದು ಈ ಯಶಸ್ಸು ಮಾತ್ರ.
***
ಮಾಧವ ಕುಲಕರ್ಣಿಯವರ ಸಾಹಿತ್ಯ ಯಾತ್ರೆಯ ಎರಡನೆಯ ಪರ್ವ ಶುರುವಾದದ್ದು ಅವರು ಮೈಸೂರಿಗೆ ಬಂದು ಔದ್ಯೋಗಿಕವಾಗಿ ನೆಲೆನಿಂತ ನಂತರವೇ. ಎರಡನೆಯ ಪರ್ವ ಎಂದದ್ದು ಯಾಕೆಂದರೆ, ಮೊದಲ ಪರ್ವದ ಸಾಹಿತ್ಯಿಕ ಯಾತ್ರೆಯ ಅವಧಿಯಲ್ಲಿ, ಕಾಲೇಜು ದಿನಗಳ ಕೊನೆಯ ವರ್ಷದಲ್ಲಿ ಸ್ನೇಹಿತರೊಡನೆ ಕೈಜೋಡಿಸಿ "ಹೊಸಗೊಂದಲ"ವೆಂಬ ವಿದ್ಯಾರ್ಥಿ ಕತೆಗಾರರ ಕಥಾಸಂಕಲನವೊಂದನ್ನು ಪ್ರಕಟಿಸಿದ್ದರು ಎಂದೆನಷ್ಟೆ? ಅದರಲ್ಲಿ ಅವರ ಮೊದಲ ಕತೆ "ಸುಧಾಮ" ಕಾಣಸಿಗುತ್ತದೆ. ವಿದ್ಯಾರ್ಥಿಯಾಗಿದ್ದಾಗಲೇ ಇವರದೊಂದು ಸಣ್ಣಕತೆ ‘ಸಂಕ್ರಮಣ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಂದಿನ ಕತೆ ಅಡಿಗರ ‘ಸಾಕ್ಷಿ’ಯಲ್ಲಿ ಪ್ರಕಟವಾಯಿತು. ಅವರ ಬಿಡಿ ಕತೆಗಳೂ ವಿಮರ್ಶಾ ಲೇಖನಗಳೂ ಈ ಅವಧಿಯಲ್ಲಿ ಪ್ರಕಟವಾಗತೊಡಗಿದ್ದವು. ಸಾಕ್ಷಿಯಲ್ಲಿ ರಾಮಾನುಜನ್ ಮತ್ತು ಬೇಂದ್ರೆ ಕಾವ್ಯವನ್ನು ಕುರಿತು ಕೀರ್ತಿನಾಥ ಕುರ್ತುಕೋಟಿಯವರ ಲೇಖನಗಳಿಗೆ ಪ್ರತಿಕ್ರಿಯಾತ್ಮಕ ಲೇಖನಗಳನ್ನು ಬರೆದು ಗುರುತಿಸಲ್ಪಟ್ಟರು. ಒಂದಿಷ್ಟು ಸಮಯ ಇವರು "ಪ್ರಜ್ಞೆ" ಎಂಬ ಸಾಹಿತ್ಯಿಕ ದ್ವೈಮಾಸಿಕವನ್ನೂ ನಡೆಸಿದ್ದರು. ನವೋದಯಕಾಲದ ಬರವಣಿಗೆಯನ್ನು ಹೋಲುವ ಸಣ್ಣಕತೆಗಳೂ, ನವ್ಯಮಾರ್ಗದ ವಿಮರ್ಶಾಲೇಖನಗಳೂ ಅವರನ್ನು ಗದುಗು, ಉಡುಪಿಗಳಲ್ಲಿ ಮಾತ್ರವಲ್ಲ, ಹಳೆಯ ಮೈಸೂರು ಭಾಗದಲ್ಲಿಯೂ ಪ್ರತ್ಯೇಕವಾದ ಗುರುತಿಸುವಿಕೆಗೆ ಪಾತ್ರರನ್ನಾಗಿಸಿದವು. ಅವರು ಮೈಸೂರಿಗೆ ಬಂದು ನೆಲೆನಿಂತಮೇಲೆ ಅವರ ಮೊದಲ ಕತಾಸಂಕಲನ "ವಜ್ರ" ೧೯೮೦ರಲ್ಲಿ ಪ್ರಕಟವಾಯಿತು. ವಜ್ರ ಕತೆಯು ಪದವೀಪೂರ್ವ ತರಗತಿಗಳಿಗೆ ಕನ್ನಡ ಪಠ್ಯವಾಗಿಯೂ ಆಯ್ಕೆಯಾಯಿತು.
ಮಾಧವ ಕುಲಕರ್ಣಿಯವರು "ಪ್ರಶಾಂತ ಪ್ರಕಾಶನ" ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ, ತಮ್ಮ ಆರ್ಥಿಕ ಜವಾಬ್ದಾರಿಯನ್ನು ಹಗುರಮಾಡಿಕೊಳ್ಳಲು ಪ್ರಯತ್ನಿಸಿದ ದುರಂತ ಕತೆಯನ್ನೂ ಇಲ್ಲಿ ನೆನಪಿಸಿಕೊಳ್ಳ ಬಹುದು. ಈ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾದ ಹಲವು ಪತ್ತೆದಾರಿ ಕಾದಂಬರಿಗಳನ್ನು ಬರೆದ "ಚೈತನ್ಯ" ಎಂಬ ಜನಪ್ರಿಯ ಪತ್ತೆದಾರಿ ಕಾದಂಬರಿಕರ್ತೃ ಸ್ವತಹ ಕುಲಕರ್ಣಿಯವರೇ. ಈ ಸಂಸ್ಥೆಯಿಂದ ಪ್ರಕಟವಾದ ಹತ್ತಾರು ಸಾಮಾಜಿಕ ಕಾದಂಬರಿಗಳ ಲೇಖಕಿ ಕೆ. ಶ್ರೀದೇವಿ ಎಂದರೆ ಕುಲಕರ್ಣಿಯವರ ಪತ್ನಿ ಮತ್ತು ಈ ಕಾದಂಬರಿಗಳನ್ನು ಬರೆಯುತ್ತಿದ್ದುದು ಕುಲಕರ್ಣಿಯವರೇ ಎಂದು ಕೆಲವರಷ್ಟೇ ಬಲ್ಲರು. ಕುಲಕರ್ಣಿಯವರಿಗೆ ಸಗಟುಖರೀದಿಯ ವ್ಯಾವಹಾರಿಕ ಜಾಣ್ಮೆ ಇದ್ದಂತಿರಲಿಲ್ಲ. ಪ್ರಕಾಶನ ವ್ಯವಹಾರದಲ್ಲಿ ಅವರೇನೂ ಗಳಿಸಿದಂತಿಲ್ಲ. ಈ ಸೋಲಿನಿಂದ ಹತಾಶರಾಗಿ ಒಂದಿಷ್ಟು ದಿನ ಅವರು ಅಧ್ಯಾತ್ಮದ ಬೆನ್ನು ಹತ್ತಿದ್ದರಂತೆ.
ಅವರ ಸಾಹಿತ್ಯಯಾತ್ರೆಯ ಮೂರನೆಯ ಪರ್ವಕ್ಕೆಂದು ಮತ್ತೆರಡು ದಶಕ ಕಾಯಬೇಕಾಗಿ ಬಂತು. "ವಜ್ರ" ಸಣ್ಣ ಕತಾಸಂಕಲನ ಪ್ರಕಟವಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ಮಾಧವ ಕುಲಕರ್ಣಿಯವರ ಎರಡನೆಯ ಕತಾ ಸಂಕಲನ "ಉದ್ಯಾನವನ ಮತ್ತು ಇತರ ಕತೆಗಳು" ಪ್ರಕಟವಾಯಿತು. ಈ ನಡುವೆ, ೨೦೦೨-೦೩ ರ ಸುಮಾರಿಗೆ ನನ್ನ ಕತಾಸಂಕಲನ "ಮನುಷ್ಯರನ್ನು ನಂಬಬಹುದು" ಪ್ರಕಟಣೆಗೆ ಸಿದ್ಧವಾಗುತ್ತಿತ್ತು. ಅದರಲ್ಲಿದ್ದ ಒಂದು ಕತೆಯನ್ನು, ಹಿಂದೆ ಪತ್ರಿಕೆಯಲ್ಲಿ ಪ್ರಕಟವಾದಾಗ ಮೆಚ್ಚಿಕೊಂಡು ನಾಲ್ಕು ಒಳ್ಳೆಯ ಮಾತುಗಳನ್ನು ಕೀರ್ತಿನಾಥ ಕುರ್ತುಕೋಟಿಯವರು ಬರೆದಿದ್ದ ಹಿನ್ನೆಲೆಯಲ್ಲಿ ನನ್ನ ಕತಾಸಂಕಲನದ ಮುನ್ನುಡಿಗಾಗಿ ಅವರನ್ನು ಸಂಪರ್ಕಿಸಿದ್ದೆ. ಆಗವರು ತಾವು ಮುನ್ನುಡಿ ಬರೆದಿದ್ದ, "ಉದ್ಯಾನವನ" ಕತಾಸಂಕಲನದ ಕುರಿತು ಮತ್ತು ಕತೆಗಾರ ಮಾಧವ ಕುಲಕರ್ಣಿಯವರ ಕುರಿತು ಬಹಳ ಪ್ರೀತಿಯ ಮಾತುಗಳನ್ನಾಡಿದ್ದರು. ವಿಷಾದ ದರ್ಶನವೊಂದನ್ನು ಮಾಧವ ಕುಲಕರ್ಣಿಯವರು ಕಟ್ಟಿಕೊಟ್ಟ ಸೊಗಸನ್ನು ಕುರ್ತುಕೋಟಿಯವರು ಸೊಗಸಾಗಿ ಬಣ್ಣಿಸಿದ್ದರು. ೨೦೦೬ರಲ್ಲಿ "ವರ್ಧಮಾನ" ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬನಾಗಿದ್ದ ನನ್ನ ಮಂದೆ "ಉದ್ಯಾನವನ" ಕತಾಸಂಕಲನ ಬಂದಾಗ, ಅದಾಗಲೇ ಕೀರ್ತಿಶೇಷರಾಗಿದ್ದ ಕುರ್ತುಕೋಟಿಯವರ ಸೂಕ್ಷ್ಮವಾದ ವಿಶ್ಲೇಷಣೆಯನ್ನು ಮತ್ತೆ ನೆನಪಿಸಿಕೊಂಡೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಪತ್ರಿಕೆ "ಗಾಂಧಿಬಜಾರ್"ನಲ್ಲಿ ನಾನು ಮಾಧವ ಕುಲಕರ್ಣಿಯವರ ಸಣ್ಣಕತೆಗಳ ಬಗ್ಗೆ ವಿವರವಾಗಿ ಬರೆಯುವಾಗ, "ಉದ್ಯಾನವನ"ವನ್ನು ಮಾಧವ ಕುಲಕರ್ಣಿಯವರ ಮ್ಯಾನಿಫೆಸ್ಟೋ ಎಂದು ಹೇಳಲೂ ಮುಖ್ಯಕಾರಣ ಈ ಕತೆಯಲ್ಲಿ ಕುರ್ತುಕೋಟಿಯವರು ಗುರುತಿಸಿದ ಅನನ್ಯ ವಿಷಾದದರ್ಶನ.
ಕುರ್ತುಕೋಟಿಯವರು ಬರೆದದ್ದು: "ಉದ್ಯಾನವನ ಕತೆ ಒಂದು ಸುಸೂತ್ರವಾದ ಕತೆಯನ್ನೇನೋ ಹೇಳುತ್ತದೆ. ನಿವೃತ್ತರಾಗಿ ಮೈಸೂರಿಗೆ ಬಂದು ನೆಲೆಸುವ ಪದ್ಮನಾಭರಾಯರು ಕೊಂಡಮನೆಯನ್ನು ಮಾರಿ ಮಗನ ಜೊತೆಗೆ ಅಮೇರಿಕಕ್ಕೆ ಹೋಗಬೇಕೆನ್ನುವ ಪರಿಸ್ಥಿತಿಗೆ ಕಾರಣಗಳೇನೆಂದು ಕತೆ ಹುಡುಕತೊಡಗಿದೆ. ಬೇರುಗಳನ್ನು ಕಳೆದುಕೊಂಡವರ ಗತಿ ಇದೇ ಎಂದು ಸೂಚಿಸಬೇಕಾಗಿದೆಯೆ? ಹಣದ ಶಕ್ತಿಯಿಂದ ಏನನ್ನೂ ಕೊಂಡುಕೊಳ್ಳಬಲ್ಲೆ ಎಂಬ ವೆಂಕೋಬ ಶೆಟ್ಟಿಯಂಥವರ ಕಾರಸ್ಥಾನವೇ ಇದಕ್ಕೆ ಕಾರಣವೇ? ಬೋಗನ್ ವಿಲ್ಲಾದ ಬಳ್ಳಿ ಹಬ್ಬಿರುವ ಉದ್ಯಾನವನದಲ್ಲಿ ಲಾರಿಗಳು ಬಂದು ನಿಲ್ಲುವ ವ್ಯಾಪಾರೀ ಸಂಸ್ಕೃತಿಯ ಅಬ್ಬರವೇ? ವಾಹನಗಳು ಕಿಕ್ಕಿರಿದು ಮನೆಯ ಒಳಗೇ ಬಂದು ಮನೆಗಳನ್ನು ಕೆಡವುತ್ತಿರುವ ಹೊಸ ಸಂಸ್ಕೃತಿಯ ಮೂಲಸೆಲೆ ಎಲ್ಲಿದೆ? ಅಥವಾ ಕ್ರಾಂತಿ ಎಂದರೆ ಇದೇ ಇರಬಹುದೇ? ಮೊಹೆಂಜದಾರೋ ಹರಪ್ಪಾದಲ್ಲಿಯ ಲಿಪಿಯನ್ನು ಓದುತ್ತ ಕಷ್ಟಪಟ್ಟು ತಯಾರಿಸಿದ ಪ್ರಬಂಧವನ್ನು ಅವರ ವಿದ್ಯಾರ್ಥಿಯೇ ತನ್ನ ಹೆಸರಿನಲ್ಲಿ ಪ್ರಕಟಿಸುವಾಗ ನಾಗರಿಕ ಗೂಂಡಾಗಿರಿ ಎಷ್ಟು ಅತಿರೇಕಕ್ಕೆ ಹೋಗಬಹುದು ಎಂದು ಸೂಚಿಸುವ ಉದ್ದೇಶವಿದೆಯೆ? ಮುಖ್ಯವಾಗಿ ಇಲ್ಲಿರುವುದು ಒಡೆತನದ ಪ್ರಶ್ನೆ. ಕೊಂಡುಕೊಂಡ ಮನೆ ತನ್ನದಾಗುವ ಸಾಧ್ಯತೆಯನ್ನು ಸಮಾಜ ಮತ್ತು ಕಾಯಿದೆ ಒಪ್ಪಿಕೊಂಡಿವೆ. ಇದಿಲ್ಲದಿದ್ದರೆ ಗೆದ್ದುಕೊಂಡು ಒಡೆತನವನ್ನು ಸ್ಥಾಪಿಸಬಹುದು. ಇದನ್ನು ಬಿಟ್ಟರೆ ಬೇರೊಂದು ಬಗೆಯ ಒಡೆತನವೂ ಸಾಧ್ಯವೆ? ಪ್ರಪಂಚದ ರಾಜಕೀಯವು ಮನೆಗಳನ್ನು ಕೆಡವಿ ಗೋಡೆಗಳನ್ನು ನಿಲ್ಲಿಸುತ್ತದೆ; ಹರಿಯುವ ನದಿಗಳನ್ನು ತಡೆಗಟ್ಟಿ, ಕಾಡುಗಳನ್ನು ಸವರಿ ನೆಲವನ್ನು ಬಂಜೆಯಾಗಿಸುತ್ತದೆ. ಫ್ಯಾಕ್ಟರಿಗಳನ್ನು ನಿರ್ಮಿಸಿ ನಿಸರ್ಗವನ್ನು ಮೈಲಿಗೆ ಮಾಡಿ, ಫ್ಯಾಕ್ಟರಿಗಳನ್ನು ಮುಚ್ಚಿ ಜನರು ಹಸಿವಿನಿಂದ ಸಾಯುವಂತೆ ಮಾಡುತ್ತದೆ. ಎಲ್ಲ ರಾಜಕೀಯದ ಗುರಿಯೂ ಜಗತ್ತಿನ ವಿನಾಶವೇ."
ತಮ್ಮ ಐವತ್ತನೆಯ ವಯಸ್ಸಿನ ಆಸುಪಾಸಿನಲ್ಲಿ ಮಾಧವ ಕುಲಕರ್ಣಿಯವರು ಬರೆದಿದ್ದ "ಉದ್ಯಾನವನ " ಸಣ್ಣ ಕತೆ ಅವರ ಸಾಹಿತ್ಯಿಕ ಬದುಕಿನ ಒಂದು ಮಹತ್ವದ ಹೊರಳುಹಾದಿಯ ಮೈಲಿಗಲ್ಲು. ಮೂರನೆಯ ಜಗತ್ತಿನ ಅರ್ಥವ್ಯವಸ್ಥೆ ಆಮೂಲಾಗ್ರವಾಗಿ ಪರಿವರ್ತಿತವಾಗುತ್ತಿದ್ದ ಒಂದು ಹೊತ್ತಿನಲ್ಲಿ ಮಧ್ಯಮ ವರ್ಗದ ನಂಬಿಕೆಗಳು ‘ರಿ-ಡಿಫೈನ್’ ಆದ ಕೆಲವು ಸಂಗತಿಗಳನ್ನು ತಮ್ಮ ಹಲವು ಕತೆಗಳಲ್ಲಿ ಮಾಧವ ಕುಲಕರ್ಣಿಯವರು ಮತ್ತೆ ಮತ್ತೆ ತಂದಿರುವರಾದರೂ ‘ಉದ್ಯಾನವನ’ದಲ್ಲಿ ಅವರ ನಿರೂಪಣಾಶಕ್ತಿಯ ಸಮಗ್ರ ಎನ್ನಬಹುದಾದ ದುಡಿಮೆ ಕಾಣಸಿಗುತ್ತದೆ. ನಿಸ್ಪೃಹ ಬದುಕನ್ನು, ಬದುಕಿನ ಬೇರುಗಳನ್ನು ಅಲುಗಿಸಬಹುದಾದ ವಿಚಾರಗಳನ್ನು, ನವ್ಯ ಮತ್ತು ನವ್ಯೋತ್ತರ ದಿನಗಳ ಪ್ರಾತಿನಿಧಿಕ ಎನ್ನಬಹುದಾದ ಕತೆಗಾರರು ಕಂಡ ಕ್ರಮಕ್ಕೂ ಮಾಧವ ಕುಲಕರ್ಣಿಯವರು ಕಂಡಕ್ರಮಕ್ಕೂ ಇರುವ ಮಹದಂತರವನ್ನು ಗುರುತಿಸಲು ನೆರವಾಗುವ ಮತ್ತು ಆ ಅಂತರದ ಮೌಲ್ಯೀಕರಣ ಮಾಡುವ ಕತೆಯಿದು. ಮಾಧವ ಕುಲಕರ್ಣಿಗಳ ಪ್ರಾತಿನಿಧಿಕ ಕತೆಗಳ, ಅದರಲ್ಲೂ ಮುಖ್ಯವಾಗಿ ಉದ್ಯಾನವನ ಕತೆಯ ಮುಖ್ಯಸ್ರೋತ - ಬದಲಾಗುವ ಅರ್ಥ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹಳೆಯ ತಲೆಮಾರಿನ ಜೀವನಕ್ರಮದ ಸ್ಥಿತ್ಯಂತರ. ಬದುಕಿಗೆ ಗಮ್ಯವೇ ಇಲ್ಲದಿರುವುದು ಹೊಸತಲೆಮಾರನ್ನು ಕಾಡಿದ ಸಂಗತಿಯಾದರೆ, ಬದುಕಿಗೆ ಇಲ್ಲಿಯತನಕ ಸೌಂದರ್ಯವನ್ನು ಕೊಟ್ಟಿದ್ದ ಗಮ್ಯವನ್ನು ಕೈಬಿಡುವುದು ಹಳೆಯ ತಲೆಮಾರನ್ನು ತಳ್ಳಂಕಕ್ಕೆ ತಳ್ಳಿದ ಸಂಗತಿ. ಈ ತಳ್ಳಂಕವನ್ನೇ ಕತೆಯಾಗಿಸಿದವರಲ್ಲಿ ಮಾಧವ ಕುಲಕರ್ಣಿಯವರು ಪ್ರಾತಿನಿಧಿಕರು ಎನ್ನುವುದನ್ನು ಸ್ಪಷ್ಟಪಡಿಸಿದ ಕತೆ "ಉದ್ಯಾನವನ".
ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಎತ್ತಿಕೊಂಡು ಮಾಧವ ಕುಲಕರ್ಣಿಯವರು ಹಲವು ಕತೆಗಳನ್ನು ಬರೆದಿರುವರಾದರೂ ‘ಮನೆಪಾಠ’ ಮತ್ತು ‘ಒಂದು ಪ್ರೇಮಪತ್ರ’ ಕೊಂಚ ವಿಶಿಷ್ಟವಾದ ಕಾರಣಗಳಿಂದ ಇಲ್ಲಿ ಉಲ್ಲೇಖಾರ್ಹ. ‘ಮನೆಪಾಠ’ದಲ್ಲಿ ಐತಾಳರ ಪಾತ್ರ ನಿರ್ವಹಣೆಯಲ್ಲಿ ಮಾಧವ ಕುಲಕರ್ಣಿಯವರು ಎಷ್ಟು ಸೂಕ್ಷ್ಮವಾಗಿ ತೊಡಗಿಕೊಳ್ಳುತ್ತಾರೆಂದರೆ, ಅವರು ತಮ್ಮ ಆತ್ಮಚರಿತ್ರೆಯನ್ನೇ ಬರೆದುಕೊಳ್ಳುತ್ತಿದ್ದಾರೆಂದು ಒಮ್ಮೊಮ್ಮೆ ಅನ್ನಿಸದಿರದು. ಶಿಕ್ಷಣಕ್ಷೇತ್ರದಲ್ಲಿ ಅವರಿಗುಂಟಾದ ಭ್ರಮನಿರಸನದ ದಾಖಲೆಯಂತೆ ಕಾಣಿಸುವ ಇನ್ನೊಂದು ಕತೆ ‘ಒಂದು ಪ್ರೇಮ ಪತ್ರ’. ಈ ಎರಡೂ ಕತೆಗಳು ಆರ್ಥಿಕ ಉದಾರೀಕರಣವು ಶಿಕ್ಷಣರಂಗದ ಮನುಷ್ಯರನ್ನು ಎತ್ತ ಒಯ್ಯುತ್ತಿದೆ ಎಂಬುದನ್ನು ವಿಶ್ಲೇಷಿಸುವ ಮತ್ತು ಈ ನಿಟ್ಟಿನಲ್ಲಿ ಮಾಧವ ಕುಲಕರ್ಣಿಯವರ ವಿಷಾದವನ್ನೂ ದುಗುಡವನ್ನೂ ಚಿತ್ರಿಸಿದ ಪ್ರಯತ್ನಗಳಂತಿವೆ. ಮಾಧವ ಕುಲಕರ್ಣಿಯವರ ಸಾಹಿತ್ಯಯಾತ್ರೆಯ ಮೂರನೆಯ ಪರ್ವದಲ್ಲಿ ಇಂತಹ ವಿಷಾದ ದರ್ಶನ ನಿಬಿಡವಾಗಿ ಕಾಣುತ್ತದೆ.
ಕುತೂಹಲದಿಂದ ಗಮನಿಸಬೇಕಾದ ಸಂಗತಿಯೆಂದರೆ ಮೊದಲ ಅರವತ್ತೆರಡು ವರ್ಷಗಳಲ್ಲಿ ಮಾಧವ ಕುಲಕರ್ಣಿಯವರು ಬರೆದದ್ದು ನಲವತ್ಮೂರು ಕತೆಗಳನ್ನು. ೧೯೬೭ರಲ್ಲಿ ಮೊದಲ ಕತೆ ಬರೆದರು ಎನ್ನುವುದನ್ನು ನೆನಪಿಸಿಕೊಂಡರೆ, ವರ್ಷಕ್ಕೊಂದು ಕತೆ ಎನ್ನುವುದು ಸರಾಸರಿ ಲೆಕ್ಕ. ಈ ಕತೆಗಳು ವಜ್ರ, ಉದ್ಯಾನವನ ಮತ್ತು ಅದೇ ಮುಖ ಸಂಕಲನಗಳಲ್ಲಿ ಪ್ರಕಟವಾದವು. ೨೦೦೭ರಲ್ಲಿ ಅವರ ‘ಅಲ್ಲಿಯತನಕದ’ ಕತೆಗಳ ಸಂಕಲನವು ಪ್ರಕಟವಾಯಿತು. ಇನ್ನೊಂದು ಮಾತನ್ನು ಕುಲಕರ್ಣಿಯವರು ಪುನರಪಿ ಹೇಳುತ್ತಾ ಬಂದದ್ದುಂಟು. " ಈ ಕತೆಗಳ ಕರಡಚ್ಚು ತಿದ್ದುವಾಗ ಇಲ್ಲಿಯ ಯಾವ ಕತೆಯನ್ನೂ ಬರೆಯಬಾರದಿತ್ತೆಂದು ನನಗೆ ಅನ್ನಿಸಲಿಲ್ಲ."
ಈ ಸಂಕಲನಕ್ಕೆ ಮುನ್ನುಡಿ ಬರೆದ ಕೃಷ್ಣಮೂರ್ತಿ ಹನೂರು ಕುಲಕರ್ಣಿಯವರ ಬರಹವನ್ನು ಗ್ರಹಿಸಲು ನೆರವಾಗುವ ಕೆಲವು ಮೌಲಿಕ ಅಭಿಪ್ರಾಯಗಳನ್ನು ಹೀಗೆ ನೀಡಿದ್ದರು :
೦೧. ಮಾಧವ ಕುಲಕರ್ಣಿಯವರ ಕಥೆಗಳ ವಸ್ತು, ವ್ಯಾಪ್ತಿ ನವೋದಯ ಕಾಲದ ಬರವಣಿಗೆಯನ್ನು ಹೋಲುತ್ತದಾದರೂ, ಒಮ್ಮೊಮ್ಮೆ ಅವುಗಳ ಹರಹು ಇನ್ನೂ ಹಿರಿದು.
೦೨. ಕಥೆ ಹೇಳುವ ಕ್ರಮದಲ್ಲಿ ಮಾತ್ರ ಕುಲಕರ್ಣಿಯವರ ಮನಸ್ಸು ಮಾಸ್ತಿಯವರನ್ನು ಹೋಲುತ್ತದೆ.
೦೩. ಮಾಧವ ಕುಲಕರ್ಣಿಯವರನ್ನು ಗದುಗಿನ ಪರಿಸರದ ಬಾಲ್ಯದ ನೆನಪು ತೀವ್ರವಾಗಿಯೇ ಕಾಡಿರುವುದರಿಂದ ಆ ಪರಿಸರದ ಎಲ್ಲಾ ಕತೆಗಳ ಮಣ್ಣಿನ ಗುಣ, ಪಾತ್ರ ಮತ್ತು ಜೀವಂತ ಭಾಷೆಯಿಂದಾಗಿ ಓದುಗರಿಗೆ ಸಂತೋಷವನ್ನು ನೀಡುತ್ತವೆ.
೦೪. ಕತೆ ತನ್ನ ಪಾಡಿಗೆ ತಾನು ಆಕರ್ಷಣೀಯ ಎನ್ನಿಸುವುದಾದರೆ ಭಾಷೆಯೆಂಬುದು ತೊಡಕಾಗುವುದಿಲ್ಲ ಎನ್ನುವುದಕ್ಕೆ ಕುಲಕರ್ಣಿಯವರ ಕತೆಗಳೇ ಸಾಕ್ಷಿಯಾಗುತ್ತವೆ.
ಅಲ್ಲಿಂದ ಮುಂದೆ, ಪಾತಾಳ ಗರಡಿ, ರಾಗದ್ವೇಷ, ಮರಳಿದ ನೆನಪು, ಪ್ರತ್ಯಕ್ಷ ಎನ್ನುವ ನಾಲ್ಕು ಕಥಾ ಸಂಕಲನಗಳು ಪ್ರಕಟವಾದವು. "ಕುಲಕರ್ಣಿಯವರ (೨೩) ಆಯ್ದ ಕತೆಗಳು" ೨೦೧೪ರಲ್ಲಿ ಪ್ರಕಟವಾಯಿತು. ೨೦೧೫ರಲ್ಲಿ "ಕಥಾಸಾಗರ" ಎನ್ನುವ ಅವರ ಸಮಗ್ರ ಕಥೆಗಳ ಸಂಕಲನವು ಎರಡು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಸಂಪುಟಗಳಲ್ಲಿ ೮೩ ಕತೆಗಳಿದ್ದವು. ಎಂದರೆ, ೨೦೦೭ರಿಂದ ೨೦೧೫ರ ಅವಧಿಯ ಎಂಟು ವರ್ಷಗಳಲ್ಲಿ ಅವರು ನಲವತ್ತು ಕತೆಗಳನ್ನು ಬರೆದಿದ್ದರು.
ಐವತ್ತು ವರ್ಷಗಳ ಬರವಣಿಗೆಯ ಬದುಕಿನಲ್ಲಿ, ಹೀಗೆ ಮಾಧವ ಕುಲಕರ್ಣಿಯವರು ಮೂರು ಪರ್ವಗಳಲ್ಲಿ ಎಂಬತ್ತಮೂರು ಕತೆಗಳುಳ್ಳ ಏಳು ಕಥಾಸಂಕಲನಗಳನ್ನು (ವಜ್ರ, ಉದ್ಯಾನವನ, ಅದೇ ಮುಖ, ಪಾತಾಳಗರಡಿ, ರಾಗದ್ವೇಷ, ಮರಳಿದ ನೆನಪು ಮತ್ತು ಪ್ರತ್ಯಕ್ಷ) ರಚಿಸಿದ್ದರು. ಅವರ ಆಯ್ದಕತೆಗಳ ಎರಡು ಸಂಕಲನಗಳೂ ಸಮಗ್ರ ಕತೆಗಳ ಎರಡು ಸಂಪುಟಗಳೂ ಈ ಅವಧಿಯಲ್ಲಿ ಪ್ರಕಟವಾಗಿದ್ದವು. ಆದರೆ, ಅವರು ಕತೆಗಳೊಂದಿಗೆ ವಿಮರ್ಶೆಯನ್ನೂ ಬರೆಯುತ್ತಿದ್ದುದರಿಂದ ಮತ್ತು ವಿಮರ್ಶೆಯು ಗಾತ್ರದಲ್ಲಿ ಅಗಾಧವಾದುದರಿಂದ ಸಾರಸ್ವತ ಲೋಕ ಅವರನ್ನು ವಿಮರ್ಶಕರೆಂದೇ ಗುರುತಿಸುತ್ತದೆ. ಸ್ವತಃ ವಿಮರ್ಶಕರಾಗಿದ್ದ ಕುಲಕರ್ಣಿಯವರಿಗೆ ತಮ್ಮ ಕತೆಗಳ ಸಾಧ್ಯತೆಯ ಅರಿವಿತ್ತು. "ವಿಮರ್ಶೆಯು ದೂಢಿಸಿಕೊಂಡ ಅಭ್ಯಾಸದಿಂದ ಬಂದ ಮಾರ್ಗ. ಕಥಾಬರವಣಿಗೆ ನನ್ನ ಜನ್ಮಜಾತ ಸ್ವಭಾವ" ಎಂದು ಅವರೇ ಒಮ್ಮೆ ಹೇಳಿದ್ದುಂಟು. ಅದಕ್ಕೆ ಅವರೇ ಗುರುತಿಸಿಕೊಂಡ ಕಾರಣವೂ ಇತ್ತು, "ಕಥೆಗಳನ್ನು ಬರೆಯುವಾಗ ದಕ್ಕುವ ಸೃಜನಶೀಲತೆಯ ಆನಂದವೇ ಬೇರೆ. ವಿಮರ್ಶೆಯನ್ನು ಬರೆಯುವಾಗ ಬೇರೆಯವರ ಕೃತಿಗಳಿಂದಸಿಗುವ ಅನುಭವವೇ ಬೇರೆ." ಒಂದಂತೂ ನಿಜ. ಎರಡೂ ಮಾರ್ಗಗಳಲ್ಲಿ ಅವರ ದುಡಿತದ ಶ್ರದ್ಧೆ, ಆಸಕ್ತಿ ಮತ್ತು ಆತ್ಮವಿಶ್ವಾಸ ಅನುಪಮವಾದದ್ದು. ಇದೇ ಐವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಕುಲಕರ್ಣಿಯವರು ತಲಸ್ಪರ್ಷಿ ಎನ್ನಿಸುವ ಹಲವು ವಿಮರ್ಶಾ ಲೇಖನಗಳನ್ನು ರಚಿಸಿದ್ದು ಮಾತ್ರವಲ್ಲ, ಅವರ ಹದಿನಾಲ್ಕು ವಿಮರ್ಶಾ ಲೇಖನಗಳ ಸಂಕಲನಗಳೂ ಪ್ರಕಟವಾದವು. ಜೀವಂತ ಧೋರಣೆಗಳು, ತುಡಿತ, ಯೋಚನೆಗಳು ಮತ್ತು ಲೇಖನಗಳು, ವಿಧ ವಿಧ ನಾನಾ ವಿಧ, ಪ್ರಮಾಣ, ಕಾರಂತರ ಕಾದಂಬರಿಗಳು, ಗಿರೀಶ ಕಾರ್ನಾಡರ ನಾಟಕ ಪ್ರಪಂಚ, ಅನಂತ ಮೂರ್ತಿಯವರ ಸಾಹಿತ್ಯದ ಒಲವು ನಿಲುವುಗಳು, ಬಂಧ ಬಂಧುರ, ಪರಿಭಾವ, ಜ್ಞಾನಪೀಠ ಕೃತಿನೋಟ, ಭೈರಪ್ಪನವರ ಕಾದಂಬರಿ ಪ್ರಪಂಚ, ಕಂಬಾರರ ಅಭಿವ್ಯಕ್ತಿ ಮಾರ್ಗ ಮತ್ತು ನಾನು ಬರೆದ ಮುನ್ನುಡಿಗಳು ಎಂಬ ಈ ಹದಿನಾಲ್ಕು ಸಂಕಲನಗಳು ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯ ಅದ್ಭುತ ದಾಖಲೆಯಾಗಿರುವುದು ಮಾತ್ರವಲ್ಲ, ಯಾರ ಮುಲಾಜೂ ಇಲ್ಲದೇ ಬರೆವ ವಿಮರ್ಶೆ ಹೇಗಿರುತ್ತದೆ ಎಂಬ ಅಧ್ಯಯನಾರ್ಹ ಮಾದರಿಯಾಗಿಯೂ ಕಾಣಿಸುತ್ತವೆ.
ಕನ್ನಡದ ಇಪ್ಪತ್ತೈದು ಶ್ರೇಷ್ಠ ಕಾದಂಬರಿಗಳನ್ನು ಗುರುತಿಸಿ, ಅವುಗಳನ್ನು ವಿಮರ್ಶಿಸಿ ಬರೆದ "ಇಪ್ಪತ್ತೈದು ಆಯ್ದ ಕಾದಂಬರಿಗಳ ವಿಮರ್ಶೆ" ಎಂಬ ಕೃತಿಯ ಮುನ್ನುಡಿಯಲ್ಲಿ ಅವರು ಹೇಳಿದ ವಿಮರ್ಶಕನ ಸಂದಿಗ್ಧತೆ ಅರ್ಥಪೂರ್ಣವಾದುದು. "ನನಗಿಂತ ಹಿರಿಯರು ಮತ್ತು ಈಗ ನಮ್ಮೊಡನೆ ಇಲ್ಲದವರ ಕಾದಂಬರಿಗಳ ಮೇಲೆ ಬಹಳ ನಿಷ್ಠುರವಾಗಿ ಬರೆಯುವಾಗ ಆ ಅಂಥ ಕಾದಂಬರಿಕಾರರ ನೆನಪು ನನ್ನನ್ನು ಕಾಡಿದೆ. ಆದರೆ ವಿಮರ್ಶೆಯಲ್ಲಿ, ಇಂಥ ವೈಯಕ್ತಿಕ ಸಂಬಂಧಗಳಿಗೆ ಸ್ಥಾನವಿಲ್ಲ. ಇಂಥ ಬರಹಗಳು ವರ್ತಮಾನದಲ್ಲಿ ಪ್ರಚಲಿತವಿರುವ ಕಾದಂಬರಿಕಾರರು ಭವಿಷ್ಯದಲ್ಲಿ ಎಷ್ಟು ಕಾಲ ನಿಲ್ಲಬಲ್ಲರೆಂಬುದನ್ನು ನಿರ್ಧರಿಸಲು ಸಹಾಯ ಮಾಡಬಹುದು."
ವಿಮರ್ಶಕರು ಸೃಜನಶೀಲ ಸಾಹಿತ್ಯದ ಇತರ ಪ್ರಕಾರಗಳಲ್ಲಿ ಕೈಯಾಡಿಸಿದ ಅಪರೂಪದ ಸವ್ಯಸಾಚಿತ್ವಕ್ಕೆ ಕುಲಕರ್ಣಿಯವರು ಅಧ್ಯಯನಾರ್ಹ ಮಾದರಿಯೂ ಹೌದು. ಹಾಗೆ ನೋಡಿದರೆ, ಅವರು ಅನಂತಮೂರ್ತಿಯವರ ಮಾರ್ಗಕ್ಕೆ ಸಲ್ಲುವವರು. ಹಿಂದೆ ತಿಳಿಸಿದ ಹದಿನಾಲ್ಕು ವಿಮರ್ಶಾ ಸಂಕಲನಗಳು, ಮತ್ತು ಏಳು ಕತಾ ಸಂಕಲನಗಳೊಂದಿಗೆ ಅವರು ಎರಡು ಕಾದಂಬರಿಗಳು (ಉನ್ನತ ಸರಸ್ವತಿ ಮತ್ತು ಕ್ರಾಂತಿ; ಮೂರನೆಯ ಕಾದಂಬರಿ ಈಗ ಮುದ್ರಣದಲ್ಲಿದೆ.), ಒಂದು ಕವನ ಸಂಕಲನ (ಮುಸುಕಿದೀ ಮಬ್ಬಿನಲಿ), ಎರಡು ಸಂಪಾದಿತ ಗ್ರಂಥಗಳು (ಸಹಸ್ಪಂದನ ಮತ್ತು ಕಾವ್ಯ ಸಂಕ್ರಾಂತಿ), ಹೋಮಿಯೋಪತಿ ಕುರಿತು ಒಂದು ಪುಸ್ತಕ, ಮಾತ್ರವಲ್ಲ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ವಿ.ಕೃ. ಗೋಕಾಕರ ವ್ಯಕ್ತಿ ಚಿತ್ರಣದ ಅನುವಾದ ಮತ್ತು ಭಾರತ - ಭಾರತೀ ಪುಸ್ತಕ ಸಂಪದಡಿ ಒಂದು ಮಕ್ಕಳ ಸಾಹಿತ್ಯ ಕೃತಿಯನ್ನೂ ರಚಿಸಿದ್ದಿದೆ. ಅವರು ಚೈತನ್ಯ ಎಂಬ ಕಾವ್ಯನಾಮದಲ್ಲಿ ಬರೆದ ಪತ್ತೆದಾರಿ ಕಾದಂಬರಿಗಳ ಮತ್ತು ಪತ್ನಿ ಶ್ರೀದೇವಿಯವರ ಹೆಸರಲ್ಲಿ ಬರೆದ ಸಾಮಾಜಿಕ ಕಾದಂಬರಿಗಳ ಲೆಕ್ಕ ನನಗಂತೂ ಸಿಕ್ಕಿಲ್ಲ.
***
ಮಾಧವ ಕುಲಕರ್ಣಿಯವರು ನನ್ನ ಹೃದಯಕ್ಕೆ ಹೆಚ್ಚು ಹತ್ತಿರವಾದದ್ದು ಅವರ ಮುನ್ನುಡಿಗಳಿಂದ. ಅವರು ಕಂಬಾರ, ಭೈರಪ್ಪ, ದಬಾಕು, ಅಕಬರ ಅಲಿ, ಸಿಪಿಕೆ, ಡಾ. ಮೊಗಸಾಲೆ, ದೇಶಪಾಂಡೆ ಸುಬ್ಬರಾಯ ಮೊದಲಾದ ಹಿಂದಿನ ತಲೆಮಾರಿನವರ ಬರಹಗಳನ್ನು ಪ್ರೀತಿಸಿ, ಗೌರವಿಸಿ ಮುನ್ನುಡಿಗಳನ್ನು ಬರೆದಷ್ಟೇ ಆರ್ದ್ರ ಹೃದಯಿಗಳಾಗಿ ಹೊಸತಲೆಮಾರಿನ ಹೇಮಾ ಪಟ್ಟಣ ಶೆಟ್ಟಿ, ಉಭಯ ಭಾರತಿ, ತಿಲಕನಾಥ ಮಂಜೇಶ್ವರ, ಅನಸೂಯಾ ಸಿದ್ದರಾಮ ಮೊದಲಾದವರ ಕೃತಿಗಳಿಗೆ ಮುನ್ನುಡಿ ಭಾಗ್ಯ ಒದಗಿಸಿದ್ದುಂಟು. ವಿಮರ್ಶಕನಿಗೆ ಇಂಥ ವೈವಿದ್ಯಮಯ ಸಂಪರ್ಕ ಸೇತುವೆಗಳು ಇರಲೇಬೇಕೆಂಬ ಅವರ ಅಭಿಪ್ರಾಯ ಸಮರ್ಥನೀಯವಾದುದು. ಈ ನಿಟ್ಟಿನಲ್ಲಿ ಅವರು "ವಿಮರ್ಶೆಯ ಅಭಾವದಲ್ಲಿ ಮುನ್ನುಡಿಯೇ ಕೊನೆಯ ವಿಮರ್ಶೆಯಾಗಬಹುದೆಂಬ ಅಪಾಯ ಬಂದೊದಗಿರುವುದರಿಂದ ವಿಮರ್ಶಕರು ಮುನ್ನುಡಿ ಬರೆಯುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ" ಎಂದೂ ಅಭಿಪ್ರಾಯಪಟ್ಟದ್ದಿದೆ.
ಮಾಧವ ಕುಲಕರ್ಣಿಯವರು ತಮ್ಮ ತಂದೆ ತೀರಿಹೋದನಂತರ ಜವಾಬ್ದಾರಿ ಹೊತ್ತು ಪ್ರೀತಿಯಿಂದ ಸಲಹಿ ಮಾರ್ಗದರ್ಶನವಿತ್ತು ತಮ್ಮ ಅಶೋಕ ಕುಲಕರ್ಣಿಗೆ ಬದುಕುಕಟ್ಟಿಕೊಟ್ಟ ವಿವರಗಳನ್ನು ಹಿಂದೆ ನೀಡಿದೆನಷ್ಟೆ? ಅಶೋಕ ತನ್ನ ಐವತ್ತಾರನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ ತೀರಿಕೊಂಡ. ಆರುವರ್ಷಗಳ ನಂತರ ಅಶೋಕ ಕುಲಕರ್ಣಿಯವರ ಕತೆಗಳ ಸಂಕಲನ "ಮಾರಿಕೊಂಡವರು" ಪ್ರಕಟವಾಯಿತು. ಅದಕ್ಕೆ ಮಾಧವ ಕುಲಕರ್ಣಿಯವರು ಬರೆದ ಮುನ್ನುಡಿಯನ್ನು “ಅಶೋಕ ಕುಲಕರ್ಣಿ ಸಮಗ್ರ" ಕೃತಿಗೆ ಮಾಧವ ಕುಲಕರ್ಣಿಯವರೇ ಬರೆದ ಮುನ್ನುಡಿಯೊಂದಿಗೆ ಹೋಲಿಸಿ ನೋಡಬೇಕು. ಮೊದಲನೆಯದು ತೀರಾ ವಸ್ತುನಿಷ್ಠ ಕೃತಿ. ಎರಡನೆಯದು ಮುನ್ನುಡಿಯ ಮಿತಿಗಳನ್ನು ದಾಟಿ, ಸೃಜನಶೀಲ ಸೃಷ್ಟಿಯ ಗಡಿಹೊಕ್ಕು ಎಂಥವರ ಹೃದಯವನ್ನೂ ಕಲುಕಿಬಿಡಬಲ್ಲ ಬರಹ. ಓದುಗನನ್ನು ದೀರ್ಘಕಾಲ ಕಾಡುತ್ತಾ ಉಳಿಯುವ ಬರಹವದು.
***
ಮಾಧವ ಕುಲಕರ್ಣಿಯವರನ್ನ ಕೆಲವು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅವರು ಆಯ್ಕೆಯ ಪರಿಗಣನೆಗೆ ತಮ್ಮ ಸಾಹಿತ್ಯಿಕ ಕೃತಿಗಳನ್ನು ಕಳುಹಿಸದೇ ಹೋದಾಗಲೂ, ತೀರ್ಪುಗಾರರೋ ಸಂಚಾಲಕರೋ ಪರಿಗಣನೆಯ ಅವಧಿಯಲ್ಲಿ ಪ್ರಕಟವಾದ ಕುಲಕರ್ಣಿಯವರ ಕೃತಿಗಳನ್ನು ಪ್ರಕಾಶಕರಿಂದ ತರಿಸಿಕೊಂಡ ಪ್ರಕರಣಗಳನ್ನು ನಾನು ಬಲ್ಲೆ. ಇಂತಹ ಘಟನೆಗಳು ಪ್ರಶಸ್ತಿ ಪುರಸ್ಕಾರಗಳನ್ನು ಹೆಚ್ಚು ಪಾರದರ್ಶಕವಾಗಿಸುತ್ತವೆ.
ಕುಲಕರ್ಣಿಯವರಿಗೆ ಪ್ರಾಪ್ತವಾದ ಒಂದು ಪ್ರತಿಷ್ಠಿತ ಪುರಸ್ಕಾರವೆಂದರೆ ಅವರ "ಕಾರಂತರ ಕಾದಂಬರಿಗಳು" ಗ್ರಂಥಕ್ಕೆ ಪ್ರಾಪ್ತವಾದ ಸಿಂಧಗಿಯ "ಬೇಂದ್ರೆ ಪ್ರಶಸ್ತಿ". ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲು ಕೀರ್ತಿನಾಥ ಕುರ್ತುಕೋಟಿಯವರು ಗುಜರಾತಿನ ಆನಂದದಿಂದ ಬಂದಿದ್ದರು. ತಮ್ಮ ಭಾಷಣದಲ್ಲಿ ಅವರು "ಅದೇಮುಖದಂತಹ ಕತೆಯನ್ನು ಮಾಧವ ಕುಲಕರ್ಣಿಯನ್ನು ಬಿಟ್ಟರೆ ಇನ್ನಾರೂ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ" ಎಂದೂ ಹೇಳಿದ್ದರು. ಕುಲಕರ್ಣಿಯವರ "ಉದ್ಯಾನವನ" ಕತಾಸಂಕಲನಕ್ಕೆ ವರ್ಧಮಾನ ಪ್ರಶಸ್ತಿ ಪ್ರಾಪ್ತವಾಗಿದೆ. ಅವರ ಜೀವಮಾನ ಸಾಧನೆಗಾಗಿ ಕಾಂತಾವರ ಪ್ರಶಸ್ತಿ ಮತ್ತು ಗಳಗನಾಥ ಪ್ರಶಸ್ತಿಗಳೂ ಲಭ್ಯವಾಗಿವೆ. ಅವರ ಒಟ್ಟು ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿದ್ದು ಬಿಟ್ಟರೆ ನಮ್ಮ ಸಾಹಿತ್ಯ ಪರಿಷತ್ತಾಗಲೀ, ಸಾಹಿತ್ಯ ಅಕಾಡೆಮಿಗಳಾಗಲೀ ಅವರನ್ನು ಗೌರವಿಸಿ ತಮ್ಮನ್ನೇ ಗೌರವಿಸಿಕೊಳ್ಳುವ ಪುಣ್ಯಕಾರ್ಯವನ್ನು ಮಾಡಲಿಲ್ಲ. ಸ್ವಾಭಿಮಾನಿಗಳಾದ ಕುಲಕರ್ಣಿಯವರು ಇಂತಹ ಗೌರವಕ್ಕಾಗಿ ಯಾರಲ್ಲೂ ಅಂಗಲಾಚಲೂ ಇಲ್ಲ ಎನ್ನುವುದನ್ನು ಅವರ ಸನಿಹದಲ್ಲಿದ್ದು ನಾನು ಬಲ್ಲೆ.
***
ಮಾಧವ ಕುಲಕರ್ಣಿಯವರು ಬರೆಯಲು ತೊಡಗಿದ್ದು ೧೯೬೭ರಲ್ಲಿ. ಸದ್ದುಗದ್ದಲವಿಲ್ಲದೆ 66 ವರ್ಷಗಳು ಕಳೆದು ಹೋಗಿವೆ.
ಈಗ ಅವರಿಲ್ಲ.
ಆದರೆ ಅವರ ಹೆಜ್ಜೆಗುರುತುಗಳು ನಮ್ಮ ತಲೆಮಾರಿನ ವಿಮರ್ಶಕರಿಗೆ ಅನುಕರಣೀಯ ಮತ್ತು ಅನುಸರಣೀಯವಾಗಿ ಉಳಿದುಕೊಳ್ಳುತ್ತವೆ.
Shivarama Herle P
ಓಂ ಶಾಂತಿ
Subscribe to:
Post Comments (Atom)
No comments:
Post a Comment