Powered By Blogger

Wednesday, March 29, 2023

ಸುಧಾ ಆಡುಕಳ - ಮರೆಯಾದ ಲೇಖಕಿ ಮಾಲಿನಿ ಮಲ್ಯರು

ಮರೆಯಾದ ಮಾಲಿನಿ ಮೇಡಂ ಪ್ರತಿಸಲ ಉತ್ತರಕನ್ನಡದಿಂದ ನಮ್ಮ ಕೆಲಸದ ಸ್ಥಳವಾದ ಸುಳ್ಯಕ್ಕೆ ಹೋಗುವಾಗಲೂ ಸಾಲಿಗ್ರಾಮ ಬಂದಾಗ ಬಸ್ ನಿಂದ ಹೊರಗೊಮ್ಮೆ ಇಣುಕುತ್ತಿದ್ದೆ. ಕಾರಣಗಳು ಎರಡು, ಒಂದು ವಿವೇಕಾನಂದರ ಹೆಸರಿನಲ್ಲಿ ಚಂದ್ರಶೇಖರ ಉಡುಪ ಅವರು ನಡೆಸುತ್ತಿದ್ದ ಡಿವೈನ್ ಪಾರ್ಕ್ ಮತ್ತು ಇನ್ನೊಂದು ಮಾಲಿನಿ ಮಲ್ಯ ಅವರ ಶಿವರಾಮ ಕಾರಂತ ಅಧ್ಯಯನ ಕೇಂದ್ರ. ಹತ್ತು ವರ್ಷಗಳಲ್ಲಿ ಒಮ್ಮೆಯೂ ಇಳಿದು ನೋಡಲಾಗದ ಈ ಊರಿಗೆ ಮುಂದೊಂದು ದಿನ ವರ್ಗಾವಣೆಗೊಂಡು ಬಂದೆವು. ಮೊದಲ ವಾರದಲ್ಲಿಯೇ ಮನೆಯಲ್ಲಿರುವ ನಾಲ್ಕೈದು ಮಕ್ಕಳನ್ನು ಜತೆಗೆ ಕಟ್ಟಿಕೊಂಡು ಎರಡೂ ಕೇಂದ್ರಗಳಿಗೆ ಭೇಟಿನೀಡಿದೆವು. ಡಿವೈನ್ ಪಾರ್ಕಿನ ಮೊದಲ ಭೇಟಿಯೇ ಕೊನೆಯ ಭೇಟಿಯೂ ಆಯಿತು. ಆದರೆ ಮಾಲಿನಿ ಮಲ್ಯ ಅವರೊಂದಿಗಿನ ಆತ್ಮೀಯತೆ ಬೆಳೆಯುತ್ತಲೇ ಹೋಯಿತು. ಹಾಗೆಲ್ಲ ಸುಲಭಕ್ಕೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳುವವರಲ್ಲ ಅವರು. ಬದುಕಿನ ಬವಣೆಗಳು ಮತ್ತು ಹತ್ತಿರದವರಿಂದಲೇ ಆದ ಅವಮಾನ ಮತ್ತು ಅವಹೇಳನಗಳು ಎಲ್ಲರನ್ನು ಸಂಶಯಿಸುವಂತೆ ಅವರ ವ್ಯಕ್ತಿತ್ವವನ್ನು ರೂಪಿಸಿದ್ದವು ಅನಿಸುತ್ತದೆ. ಅವರನ್ನು ಭೇಟಿಯಾದಾಗಲೆಲ್ಲ ನಾನು ಬರಿಯ ಕೇಳುಗಳಾಗಿರುತ್ತಿದ್ದೆ. ಕನ್ನಡ ಸಾಹಿತ್ಯ ಲೋಕದ ಅದೆಷ್ಟು ದಿಗ್ಗಜರನ್ನು ಸರಕ್ಕನೆ ಅವರು ಸುಲಿದು ಎದುರಿಗಿಡುತ್ತಿದ್ದರು. ಸಭ್ಯ ಮುಖವಾಡದ ಹಿಂದಿನ ಅಸಲಿಯತ್ತನ್ನು ಮುಲಾಜಿಲ್ಲದೇ ಹೇಳುತ್ತ ಹೋಗುತ್ತಿದ್ದರು. ಜತೆಜತೆಯಲ್ಲಿ ತಮ್ಮನ್ನು ಸುತ್ತಲ ಜಗತ್ತು ವ್ಯಾಖ್ಯಾನಿಸಿದ ಬಗೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಿದ್ದರು. ಸ್ಥಳೀಯಳಲ್ಲದ ಕಿರಿಯ ಸ್ನೇಹಿತೆಯಂತೆ ನಾನು ಕಾಣುತ್ತಿದ್ದುದರಿಂದಲೋ ಏನೋ ಭೇಟಿಯಾದಾಗಲೆಲ್ಲ ತಾಸುಗಟ್ಟಲೆ ಜೀವನದ ಪ್ರವರಗಳನ್ನು ಒಪ್ಪಿಸುತ್ತಿದ್ದರು. ಒಂದೆರಡು ವರ್ಷಗಳ ನಂತರ ಅವರ ಟ್ರಸ್ಟ್ ನ ಭಾಗವಾಗಿ ನನ್ನನ್ನೂ ಸೇರಿಸಿದರು. ಅವರ ಜಿಗುಟುತನದ ಪರಿಚಯವಿದ್ದ ನಾನು ಹಿಂಜರಿಕೆಯಿಂದಲೇ ಒಪ್ಪಿದ್ದೆ. ಮೊದಲ ವರ್ಷಗಳಲ್ಲಿ ಅಲ್ಲಿ ನಡೆಯುತ್ತಿದ್ದ ವಾರಾಂತ್ಯದ ಯಕ್ಷಗಾನ ತರಗತಿಗೆ ನನ್ನ ಮಗನೂ ಹೋಗುತ್ತಿದ್ದುರಿಂದ ಪ್ರತಿ ಭಾನುವಾರ ಒಂದೆರಡು ಗಂಟೆಗಳ ಹರಟೆ ಖಾಯಂ ಆಗಿತ್ತು. ವರ್ಷದಲ್ಲಿ ಎರಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ನನ್ನ ರಚನೆಯ ರಾಧಾ, ನೃತ್ಯಗಾಥಾ, ಚಿತ್ರಾ ಎಲ್ಲವೂ ಅಲ್ಲಿ ಪ್ರದರ್ಶನಗೊಂಡವು. ಪ್ರದರ್ಶನ ನಡೆದಾಗ ಬೇಡವೆಂದರೂ ವೇದಿಕೆಗೆ ಕರೆದು ಸನ್ಮಾನ ಮಾಡುತ್ತಿದ್ದರು. ಶಿವರಾಮ ಕಾರಂತರ ಬ್ಯಾಲೆಯ ಭಾಗವಾಗಿದ್ದ ಸುಧೀರ ಕೊಡವೂರು ಅವರ ಸಖ್ಯವೂ ಇದಕ್ಕೆ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ ಟ್ರಸ್ಟನ್ನು ಅವರ ನಂತರ ನಡೆಸುವ ಬಗೆಗಿನ ಚಿಂತನೆಯಲ್ಲಿ ವ್ಯಸ್ತರಾಗಿದ್ದರು. ಅದರ ನಡುವೆಯೂ ಬಾಳಿಗೊಂದು ಉತ್ತರ ಎಂಬ ಕೃತಿಯನ್ನು ಪ್ರಕಟಿಸಿ ನನಗೂ ಪ್ರತಿ ನೀಡಿದ್ದರು. ಕುವೆಂಪು ಭಾಷಾಭಾರತಿಯ ಸಹಯೋಗದೊಂದಿಗೆ ಒಂದಿಷ್ಟು ಪ್ರಕಟಣೆಗಳನ್ನು ಮಾಡಿ ಕಾರ್ಯಕ್ರಮ ಆಯೋಜಿಸಿದ್ದರು. ನನ್ನ ಸಾಹಿತ್ಯಾಸಕ್ತ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ ಆ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯವೂ ನನಗೆ ದಕ್ಕಿತ್ತು. ಟ್ರಸ್ಟ ಬೇರೊಂದು ಸಂಸ್ಥೆಗೆ ವರ್ಗಾವಣೆಯಾದಾಗ ನಾನು ಹೊರಬಂದಿದ್ದೆ. ಅದರ ನಂತರವೂ ಅವರ ಭೇಟಿಗೆಂದು ಮನೆಗೆ ಒಂದೆರಡು ಸಲ ಹೋಗಿದ್ದೆ. ಆದರೆ ಅನಾರೋಗ್ಯದಿಂದ ಅವರು ಬೆಂಗಳೂರು ಸೇರಿದ್ದರು. ಅವರನ್ನು ಸಂಪರ್ಕಿಸಲು ಇದ್ದುದು ಮನೆಯ ಲ್ಯಾಂಡ್ ನಂಬರ್ ಮಾತ್ರ. ಅವರು ಮೊಬೈಲ್ ಬಳಸುತ್ತಿರಲಿಲ್ಲ. ಪೆನ್ ಕೂಡ ಹಿಡಿಯಲು ಅವರಿಗೆ ಸಾಧ್ಯವಿಲ್ಲದ್ದರಿಂದ ಬರೆಯಲು ಟೈಪ್ ರೈಟರ್ ಬಳಸುತ್ತಿದ್ದರು. ಹಾಗಾಗಿ ಕೊನೆಯ ಹಂತದಲ್ಲಿ ಮಾತಾಡಿಸಬೇಕೆಂಬ ಬಯಕೆ ಹಾಗೆಯೇ ಉಳಿದುಹೋಯ್ತು. ಇಲ್ಲಿ ಬರೆಯಲಾಗದ ಅವರ ಅದೆಷ್ಟೋ ಒಡಲಾಳದ ಮಾತುಗಳು ಈ ಗಳಿಗೆಯಲ್ಲಿ ಮತ್ತೆ ನೆನಪಾಗಿ ಮನಸ್ಸು ತಳಮಳಿಸುತ್ತಿದೆ. ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಹೀಗೆ ಸಾಹಿತಿಗಳೊಬ್ಬರ ಎಲ್ಲ ಸ್ಮೃತಿಗಳನ್ನು, ಬರಹಗಳನ್ನು, ಬಳಸಿದ ವಸ್ತುಗಳನ್ನು, ಅವರ ಎಲ್ಲ ಸೃಜನಶೀಲ ಅಭಿವ್ಯಕ್ತಿಗಳನ್ನು ಜತನದಿಂದ ಬೇರೊಬ್ಬರು ಸಂಗ್ರಹಿಸಿಟ್ಟ ದಾಖಲೆ ಇಲ್ಲವೇನೊ? ಶಿವರಾಮ ಕಾರಂತರ ಎಲ್ಲವನ್ನೂ ಅಷ್ಟು ಜೋಪಾನವಾಗಿ, ಕಿಂಚಿತ್ ಧೂಳುಗಟ್ಟದಂತೆ ಕೊನೆಯ ಉಸಿರಿನವರೆಗೆ ಕಾಪಾಡಿದ ಬದ್ಧತೆ ಅವರದ್ದು. ಅದಕ್ಕೆಂದೇ ಉದ್ದಾಮರನೇಕರ, ಸ್ಥಳೀಯರ ದ್ವೇಷವನ್ನೂ ಅವರು ಕಟ್ಟಿಕೊಂಡಿದ್ದರು. ಎಷ್ಟು ಹೊತ್ತಿಗೆ ಯಾರೇ ಬಂದರೂ ಮಗುವಿನ ಸಡಗರದಿಂದ ಎಲ್ಲವನ್ನೂ ಕರೆದು ತೋರಿಸುತ್ತಿದ್ದರು. ಆದರೆ ಫೋಟೋ ತೆಗೆಯುವುದನ್ನೂ ನಿಷೇಧಿಸುವಷ್ಟು ಕಠಿಣರಾಗಿದ್ದರು. ಯಾರಾದರೂ ಕೃತಿಹಕ್ಕನ್ನು ಕದ್ದಾರೆಂಬ ಭಯ ಅವರನ್ನು ಅಷ್ಟು ಕಾಡುತ್ತಿತ್ತು ಅನಿಸುತ್ತದೆ. ಅವರ ಜೀವನದ ಕಡೆಯ ವರ್ಷಗಳಲ್ಲಿ ಜತೆಗಾತಿಯಾಗಿದ್ದ ಅಕ್ಕನನ್ನು ಕಳಕೊಂಡ ನಂತರ ಒಂದಿಷ್ಟು ಇಳಿದುಹೋಗಿದ್ದರು. ಎಷ್ಟೆಲ್ಲವನ್ನು ಹೇಳಿಕೊಂಡರೂ ಇನ್ನೆಷ್ಟನ್ನೋ ಹೇಳಿಕೊಳ್ಳಲಾಗದ ಜ್ವಾಲಾಮುಖಿಯೊಡಲ ಬೆಟ್ಟದಂತೆ ಅವರು ಕಾಣುತ್ತಿದರು. ಒಮ್ಮೆ ಕೋಪಗೊಳ್ಳುತ್ತಾ, ಇನ್ನೊಮ್ಮೆ ನಗುತ್ತಾ ತಮ್ಮದೇ ಹಾವಭಾವದೊಂದಿಗೆ ತಮನ್ನು ಯಾಮಾರಿಸಲು ಬಂದವರ ಕಥೆ ಹೇಳುವ ಅವರ ಚಿತ್ರ ಕಣ್ಣಿಗೆ ಕಟ್ಟಿದಂತಿದೆ. ಶಿವರಾಮ ಕಾರಂತರು ಬಳಸುತ್ತಿದ್ದ ಕಾರನ್ನು ಲಕ್ಷಗಟ್ಟಲೆ ಖರ್ಚುಮಾಡಿ ಸುಸ್ಥಿತಿಗೆ ತಂದು ಪ್ರದರ್ಶನ ಮಾಡಿದ ದಿನದಂದು ಅವರು ಕಾರು ಮತ್ತು ಕಾರಂತರು ಕುರಿತು ಮಾತಾಡಿದ ಭಾಷಣ ಅವರ ಅತ್ಯುತ್ತಮ ಭಾಷಣಗಳಲ್ಲೊಂದು. ಎಷ್ಟೆಲ್ಲ ನೆನಪುಗಳು! ಅವರು ಕಾಪಿಟ್ಟ ಕಾರಂತರ ಸ್ಮೃತಿಗಳು ನಾಳಿನ ಜನರಿಗಾಗಿ ಹಾಗೆಯೇ ಉಳಿಯಲಿ, ಅವರ ಹೆಸರಿನೊಂದಿಗೆ ಎಂಬುದಷ್ಟೇ ಈ ಕ್ಷಣದ ಹಾರೈಕೆ. ಹೋಗಿಬನ್ನಿ ಮಾಲಿನಿ ಮೇಡಂ. ನಿಮ್ಮ ಋಣ ಜಗದ ಮೇಲಿದೆ... https://m.facebook.com/story.php?story_fbid=837262576704298&id=100012616905097&mib

No comments:

Post a Comment