Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Sunday, December 17, 2023
ನರೇಂದ್ರ ಪೈ - ಟಿ ಎನ್ ಸೀತಾರಾಮ್ ಅವರ " ನೆನಪಿನ ಪುಟಗಳು : { 2023 }
ವರ್ತಮಾನದ ತೊಗಲು ಕಳಚುತ್ತ ನೆನಪುಗಳ ರೇಷ್ಮೆ
===============================
ಆತ್ಮಕಥೆ ಅಥವಾ ವೈಯಕ್ತಿಕ ಬದುಕಿನ ನೆನಪುಗಳ ಕುರಿತ ಪುಸ್ತಕವನ್ನು ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎನ್ನುವುದೇ ಒಂದು ಕ್ಲೀಷೆ. ನಾವು ಅದನ್ನು ಒಂದು ಫಿಕ್ಷನ್ ತರ ಓದಲು ಸಾಧ್ಯವಿಲ್ಲ. ಅದರಲ್ಲಿ ಬರುವ ನೋವು, ವೇದನೆ, ಅವಮಾನ, ಸಾವು, ಸಣ್ಣತನ ಎಲ್ಲವೂ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಪ್ರತಿಕ್ಷಣ, ಪ್ರತಿದಿನ ಎಂಬಂತೆ ಅನುಭವಿಸಿದ್ದು. ಅದನ್ನು ಓದುತ್ತ, ಅವೆಲ್ಲ ನಮ್ಮನ್ನು ಎಷ್ಟೇ ಕಲಕಿದರೂ ಅದರ ಬಗ್ಗೆ ಒಂದು ಸಾಹಿತ್ಯ ಕೃತಿಯ ಕುರಿತು ಬರೆಯುವಂತೆ ಬರೆಯುವುದು ಸಾಧ್ಯವೇ ಇಲ್ಲ.
ಸಾಮಾನ್ಯವಾಗಿ ಆತ್ಮಕಥೆ, ಆತ್ಮಚರಿತ್ರೆ ಎಂಬ ಪ್ರಕಾರದ ಬಗ್ಗೆ ನನಗೆ ಸ್ವಲ್ಪ ಅಸಡ್ಡೆಯೇ ಇದೆ. ಈ ಪ್ರಕಾರದಲ್ಲಿ ಬಹುಶಃ ನಾನು ಈಚೆಗೆ ಓದಿದ ಒಂದೇ ಒಂದು ಪುಸ್ತಕ ಲಂಕೇಶರ ‘ಹುಳಿ ಮಾವಿನ ಮರ’. ತುಂಬ ಹಿಂದೆ ಎ ಎನ್ ಮೂರ್ತಿರಾಯರ ‘ಸಂಜೆಗಣ್ಣಿನ ಹಿನ್ನೋಟ’ ಬಿಟ್ಟರೆ ಬೇರೆ ಯಾವುದೂ ನೆನಪಾಗುವುದಿಲ್ಲ.
ಟಿ ಎನ್ ಸೀತಾರಾಮ್ ಅವರ ‘ಮಾಯಾಮೃಗ’ ಧಾರಾವಾಹಿ ಸಂಜೆ 4.30ಕ್ಕೆ ಪ್ರಸಾರವಾಗುತ್ತಿದ್ದ ಕಾಲಕ್ಕೆ ನಾನು ಪರೀಕ್ಷೆ ಬರೆಯುವುದಕ್ಕಾಗಿ ಎರಡೋ ಮೂರೋ ತಿಂಗಳ ರಜೆ ಪಡೆದು ಮನೆಯಲ್ಲೇ ಇದ್ದೆ. ಹಾಗಾಗಿ ಅವರು ಒಂದು ಪಾತ್ರವನ್ನು ಅದರ ಪರಿಸರ ಮತ್ತು ದೈನಂದಿನಗಳ ಜೊತೆಗೇ, ಅದು ಜೀವಂತವಾಗಿ ಇನ್ನೆಲ್ಲೋ ಅದೇ ಬದುಕನ್ನು ಬದುಕುತ್ತಿದೆ ಎಂದು ನಂಬುವಷ್ಟು ನೈಜವಾಗಿ ಕಟ್ಟುವ ಬಗೆ ನನ್ನನ್ನು ವಿಪರೀತವಾಗಿ ಆಕರ್ಷಿಸಿತ್ತು. ಹಾಗೆಯೇ ಅವರ ಧಾರಾವಾಹಿಗಳ ಅಳೆದೂ ತೂಗಿ ಆಡುವ ಡಯಲಾಗುಗಳು. ಅವರ ಧಾರಾವಾಹಿಯ ಪ್ರತಿಯೊಂದು ಸಂಭಾಷಣೆಗೂ ಯಾವುದೋ ಒಂದು ಆಳ, ಅಳೆಯಲಾಗದ ಭಾರ, ಮೌನ ಕೂಡ ಅರೆಗಳಿಗೆ ನಿಂತು ಗಮನಿಸಿದೆಯಾ ಎಂದು ಕೇಳುವಷ್ಟು ಸಶಬ್ದ. ಇವೆಲ್ಲವನ್ನೂ ಮೀರಿ ನಿಲ್ಲುವ ಕಕ್ಕುಲಾತಿ. ಎಂಥ ಕಲ್ಲೆದೆಯವರ ಕಣ್ಣೂ ಹನಿಗೂಡಬೇಕು, ಅಂಥ ಸನ್ನಿವೇಶ.
ಆಗಿನಿಂದ ಟಿ ಎನ್ ಸೀತಾರಾಮ್ ಎಂದರೆ ಏನೋ ಒಂದು ಆಕರ್ಷಣೆ, ನನ್ನವರು ಎಂಬ ಭಾವ. ಹಾಗಾಗಿ ಅವರ "ನೆನಪಿನ ಪುಟಗಳು" ಬರುತ್ತದೆ ಎಂಬ ಸುದ್ದಿ ಕೇಳಿಯೇ ರೋಮಾಂಚನಗೊಂಡ, ಪ್ರತಿ ಕಾಯ್ದಿರಿಸುವಷ್ಟು ತುದಿಗಾಲಲ್ಲಿ ನಿಂತ ಅಸಂಖ್ಯ ಮಂದಿಯಲ್ಲಿ ನಾನೂ ಒಬ್ಬ. ಪುಸ್ತಕದಂಗಡಿಯವರು ತಡ ಮಾಡಿದಂತೆಲ್ಲ ರೇಗಿದ, ಬೇರೆ ಕಡೆಯಿಂದ ತರಿಸಿಬಿಡುವಷ್ಟು ಕೆರಳಿದ ಮನುಷ್ಯ. ಮೊನ್ನೆ ಶನಿವಾರ ಕೈಸೇರಿದ್ದೇ ಓದಲು ಕುಳಿತೆ.
ಮನುಷ್ಯ ಹಿಂಸೆಗೆ ಇಳಿಯಲು ಮುಖ್ಯವಾದ ಕಾರಣ ತಾನು ವಿಕ್ಟಿಮ್ ಎಂಬ ಭಾವ ಎನ್ನುತ್ತಾರೆ. ಟಿ ಎನ್ ಸೀತಾರಾಮ್ ಅವರ ಕತೆ ಕೇಳುತ್ತ ಹೋದರೆ ನನಗನಿಸಿದ್ದು ಕೂಡ ಅದೇ. ಇವರಿಗೆ ಈ ಬದುಕಿನಲ್ಲಿ ಮತ್ತೆ ಮತ್ತೆ ತಾನು ವಿಕ್ಟಿಮೈಸ್ಡ್ ಅನಿಸಲಿಲ್ಲವೇ, ಅದನ್ನಿವರು ಹೇಗೆ ಸಂಭಾಳಿಸಿಕೊಂಡಿರಬಹುದು ಅಂತಲೇ.
"ಅಲ್ಲಿಯವರೆಗಿನ ನನ್ನ ಬದುಕಿನಲ್ಲಿ ಎಲ್ಲವೂ ಮಾಯಾಮೃಗವೇ ಆಗಿತ್ತು. ಯಾವುದೂ ಕೈಗೆ ಸಿಗುತ್ತಿರಲಿಲ್ಲ. ನಟನಾಗುವ ಆಸೆ ಇಟ್ಟುಕೊಂಡಿದ್ದೆ. ಆಗಿರಲಿಲ್ಲ. ರಂಗಭೂಮಿ ಇಷ್ಟಪಟ್ಟಿದ್ದೆ. ಕೈಗೂಡಿರಲಿಲ್ಲ. ರೈತನಾಗುವ ಆಸೆ ನೆರವೇರಿರಲಿಲ್ಲ. ದುಡ್ಡಿರಲಿಲ್ಲ. ಲಾಯರ್ ಆಗಬೇಕೆಂಬ ಆಸೆ ಇತ್ತು. ಆದರೆ ಪ್ರಾಕ್ಟೀಸ್ ಶುರು ಮಾಡಿದಾಗಲೆಲ್ಲಾ ಯಾವುದೋ ಒಂದು ಅಡ್ಡಿ ಬರುತ್ತಿತ್ತು. ನೆಮ್ಮದಿ ಇರಲಿಲ್ಲ. ಯಾವುದೂ ಸಿಕ್ಕಿರಲಿಲ್ಲ. ಎಲ್ಲವೂ ಮಾಯಾಮೃಗದಂತೆ ಕೈಯಿಂದ ದೂರ ಹೋಗಿತ್ತು." (ಪುಟ 337)
ಟಿ ಎನ್ ಸೀತಾರಾಮ್ ಅವರ "ನೆನಪಿನ ಪುಟಗಳ"ನ್ನು ಓದಿದ ಮೇಲೆ ಮನಸ್ಸಿನಲ್ಲಿ ತೀವ್ರವಾಗಿ ನಿಂತು ಬಿಡುವವರು ಇಬ್ಬರು. ಸೀತಾರಾಮ್ ಅವರ ಅಮ್ಮ ಮತ್ತು ಅವರ ಮಡದಿ ಗೀತಾ.
ಈ ಅಮ್ಮನ ಚಿತ್ರವನ್ನು ಅವರು ಎಷ್ಟೊಂದು ಆಪ್ತವಾಗಿ ಕಟ್ಟಿಕೊಡುತ್ತಾರೆಂದರೆ, ಆ ಪುಟಗಳನ್ನು ಓದುತ್ತ ಪ್ರತಿಯೊಬ್ಬ ಮಗನೂ ಅವರವರ ಅಮ್ಮನನ್ನು ನೆನೆದು ಅಳುತ್ತಾರೆ. ಎಲ್ಲ ಅಮ್ಮಂದಿರೂ ಅವರ ಮಗನ ಬಗ್ಗೆ ಒಂದೇ ತರ ಇರುತ್ತಾರೆ. ಆದರೆ ಎಲ್ಲ ಗಂಡಸರೂ ಅವರ ಅಮ್ಮನ ಬಗ್ಗೆ ಮಾತ್ರ ಬೇರೆ ಬೇರೆ ತರ ಇರುತ್ತಾರೆ. ಆದರೆ ಅಮ್ಮನನ್ನು ಕಳೆದುಕೊಂಡ ಮಗನಿಗೆ ಜೊತೆಯಾಗಿ ನಿಲ್ಲುವುದು ನೋವು ಮಾತ್ರ.
ಗೀತಾ ಬಗ್ಗೆ ಸೀತಾರಾಮ್ ಎಲ್ಲಿಯೂ ವಿಶೇಷವಾಗಿ ಹೇಳಿಯೇ ಇಲ್ಲ. ತಮ್ಮೆಲ್ಲಾ ಸ್ನೇಹಿತರನ್ನು ಮತ್ತೆ ಮತ್ತೆ ನೆನೆಯುವ, ಅವರ ಉಪಕಾರ ಸ್ಮರಿಸುವ, ಕೃತಜ್ಞತೆ ತೋರುವ ಸೀತಾರಾಮ್, ಗೀತಾ ಬಗ್ಗೆ ಹೇಳದೇನೆ ಬಹಳಷ್ಟನ್ನು ಹೇಳುತ್ತಾರೆ.
"ಎಲ್ಲಾ ಮಿನಿಸ್ಟರ್‌ಗಳು ಗೊತ್ತಿದ್ದರೂ ಒಂದು ಆರ್ಡರ್ ಪಾಸ್ ಮಾಡಿಸಿಕೊಳ್ಳಲು ನನ್ನಿಂದ ಆಗಲಿಲ್ಲ.
"ಆ ದಿನಗಳಲ್ಲಿ 25ರಿಂದ 30 ದಿನ ಟೆನ್ಷನ್‌ನಲ್ಲಿರುತ್ತಿದ್ದೆ. ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದೆ. ಧಗಧಗ ಉರಿಯುತ್ತಿದ್ದೆ. ನನ್ನ ಬಳಿ ಮಾತನಾಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ. ಮೂರು ಹೊತ್ತೂ ಎದ್ದು ಕುಳಿತಿರುತ್ತಿದ್ದೆ. ಅಮ್ಮ ಮಾತನಾಡಲು ಬಂದರೆ ರೇಗುತ್ತಿದ್ದೆ. ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದೆ ಎಂದರೆ ಅಷ್ಟು ಕೆಟ್ಟದಾಗಿ ಬೇರೆ ಯಾರೂ ವರ್ತಿಸಲು ಸಾಧ್ಯವಿಲ್ಲ.
"ಇಂಥದ್ದೇ ಒಂದು ಸಮಯದಲ್ಲಿ ಮನೆಗೆ ಬಂದರೆ ಗೀತಾ ಇರಲಿಲ್ಲ. ಎಲ್ಲಿಗೋ ಹೋಗಿದ್ದಳು. ಅವಳು ಸಾಮಾನ್ಯವಾಗಿ ಎಲ್ಲಿಗೂ ಹೋಗುತ್ತಿರಲಿಲ್ಲ. ಆದ್ದರಿಂದ ಕೊಂಚ ಆತಂಕ ಆಯಿತು. ನಾನು ಹೊರಗಡೆ ಕಾಯುತ್ತಾ ಕುಳಿತೆ. ಗೀತಾ ಬಂದಳು. ಎಲ್ಲಿಗೆ ಹೋಗಿದ್ದೆ ಎಂದು ಕೇಳಿದೆ. ಲಿಜ್ಜತ್ ಆಫೀಸಿಗೆ ಹೋಗಿದ್ದೆ ಎಂದಳು.
"ಆಗ ಲಿಜ್ಜತ್ ಪಾಪಡ್ ಎಂದು ಬರುತ್ತಿತ್ತು. ಬಸವೇಶ್ವರ ನಗರದಲ್ಲಿ ಅವರ ಆಫೀಸು. ಅವರು ನೂರು ಹಪ್ಪಳ ಲಟ್ಟಿಸಿದರೆ ಅಷ್ಟೋ ಇಷ್ಟೋ ದುಡ್ಡು ಕೊಡುತ್ತಿದ್ದರು. ಗೀತಾ ನಾನು ಹಪ್ಪಳ ಲಟ್ಟಿಸಿಕೊಡುತ್ತೇನೆ ಎಂದು ಬರೆದುಕೊಟ್ಟು ಬ೦ದಿದ್ದಳು.
"ನಮ್ಮ ಊರಲ್ಲಿ ಜಮೀನಿತ್ತು. ಈ ಗ್ಯಾರಂಟಿಯ ಕೇಸು ನನಗೆ ಸುತ್ತಿಕೊಳ್ಳುವ ಸಮಯದಲ್ಲಿ, ಮನೆಯವರಿಗೆ ತೊಂದರೆ ಆಗದಿರಲಿ ಎಂದು, ನನಗೆ ಬೇಡ ಎಂದು ಬರೆದು ಕೊಟ್ಟುಬಿಟ್ಟಿದ್ದೆ. ನಾನು ಸಂಜೆ ಹೊತ್ತು ನಾಟಕ ನೋಡುವುದರಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದೆ. ಆದರೆ ಗೀತಾಗೆ ಆ ಸಂತೋಷವೂ ಇರಲಿಲ್ಲ. ಅವಳು ಸ್ವಲ್ಪವಾದರೂ ದುಡಿಯೋಣ ಎಂದು ಅಜ್ಜತ್ ಪಾಪಡ್ ಆಫೀಸಿಗೆ ಹೋಗಿದ್ದಳು. ನನ್ನ ಬಳಿ ಏನಾದರೂ ಹೇಳಿದರೆ ನಾನೋ ಉರಿಸಿಂಗ, ಉರಿದುರಿದು ಬೀಳುತ್ತಿದ್ದೆ. ಅವಳು ಮತ್ತು ನನ್ನ ಅಮ್ಮನ ಜೊತೆ ಆಗ ನಡೆದುಕೊಂಡಿದ್ದು ನೆನೆದುಕೊಂಡರೆ ಕಸಿವಿಸಿ ಆಗತ್ತೆ. ಅಮ್ಮ ಗೌರಿಬಿದನೂರಿನಿಂದ ಬಂದರೆ ನಾನು ಸರಿಯಾಗಿ ಮಾತನಾಡುತ್ತಿರಲಿಲ್ಲ. ಅಂಥಾ ಕ್ರೌರ್ಯ ತೋರಿಸುತ್ತಿದ್ದೆ.
"ಮನುಷ್ಯರಿಗೆ ಸಣ್ಣತನಗಳಿರುತ್ತವೆ. ಅದಕ್ಕಿಂತ ಮನುಷ್ಯ ದೊಡ್ಡದಾಗಿದ್ದರೆ ಆ ಸಣ್ಣತನವನ್ನು ಗೆಲ್ಲುತ್ತಾನೆ. ಅದನ್ನು ಗೆಲ್ಲುವ ಶಕ್ತಿ ಇಲ್ಲದಿದ್ದರೆ ಸಣ್ಣತನಗಳು ಪ್ರಕಟವಾಗುತ್ತವೆ. ಆ ಸಂದರ್ಭದಲ್ಲಿ ನಾನು ಸಣ್ಣತನದ ಮುಂದೆ ಸೋತಿದ್ದೆ. ತೀರಾ ಸಣ್ಣ ಮನುಷ್ಯನ ತರ ವರ್ತಿಸಿದ್ದೆ.
"ಒಂದು ಕಡೆ ಅವಮಾನ, ಇನ್ನೊಂದು ಕಡೆ ಮನೆಯವರಿಗೆ ನೋವು, ಮತ್ತೊಂದೆಡೆ ಅಸಹಾಯಕತೆ ಎಲ್ಲವೂ ಸೇರಿಕೊಂಡಿತ್ತು. ಅದನ್ನು ಈಗ ನೆನೆದರೂ ನೋವಾಗುತ್ತದೆ, ಹಳೇ ಗಾಯವನ್ನು ಸವರಿದಂತೆ."(ಪುಟ 305)
ಬಹುಶಃ ಗೀತಾ ಬಗ್ಗೆ ಇಡೀ ಪುಸ್ತಕದಲ್ಲಿ ಇಷ್ಟೇ ಇರುವುದು. ಆದರೆ ಟಿ ಎನ್ ಸೀತಾರಾಮ್ ಅವರ ಅಂತಃಕರಣ, ಸದಾ ತನ್ನಿಂದ ಬೇರೆಯವರಿಗೆ ತೊಂದರೆಯಾಯಿತು, ನೋವಾಯಿತು, ನಷ್ಟವಾಯಿತು ಎಂಬ ಸ್ಥಿತಿ ಎಂದೂ ಬರಬಾರದೆಂಬ ಎಚ್ಚರ ಮತ್ತು ಅಂಥ ಅನುಮಾನ ಬಂದಾಗಲೆಲ್ಲ ನೋಯುತ್ತ ಉಳಿಯುವ ಗುಣ ಇಡೀ ಪುಸ್ತಕದಲ್ಲಿ ಅವರ ವ್ಯಕ್ತಿತ್ವದ ಮೇಲೆ ಫೋಕಸ್ ಮಾಡಿದಾಗಲೆಲ್ಲ ನಮ್ಮ ಮನಸ್ಸಿಗೆ ಬರುವುದು, ಅವರ ಬೆನ್ನಲ್ಲೇ ಮಸುಕು ಮಸುಕಾಗಿ ನಿಂತಂತೆ ಕಾಣಿಸುವ ಅವರ ಅಮ್ಮ ಮತ್ತು ಗೀತಾರ ಚಿತ್ರವೇ. ಟಿ ಎನ್ ಸೀತಾರಾಮ್ ಅವರ ಪ್ರಜ್ಞೆಯಲ್ಲೂ ಇದು ನಿಶ್ಚಲವಾಗಿ ನಿಂತಿರುವುದರಿಂದಲೇ ಅವರು ಹೇಳದೇನೆ ಅದು ನಮ್ಮ ಅರಿವಿಗೆ ಬರುತ್ತಲೇ ಇರುತ್ತದೆ.
ಪುಸ್ತಕದ ಆರಂಭದಲ್ಲಿಯೇ ನಮ್ಮನ್ನು ಅವರ ಅಕ್ಕ ಪದ್ಮ ಮನಸ್ಸನ್ನಾವರಿಸುತ್ತಾರೆ. ಅದೇ ರೀತಿ ಮುಂದೆ ಅವರ ತಂದೆ, ಗೆಳೆಯರು, ಅಜ್ಜಿ ಮುಂತಾದವರು, ಬದುಕಿನಲ್ಲಿ ಸೀತಾರಾಮ್ ಎದುರಿಸಿದ ತಲ್ಲಣಗಳನ್ನೂ, ನೋವು-ಸಂಕಟಗಳನ್ನೂ ಮನಸ್ಸಿನಿಂದ ಸುಲಭವಾಗಿ ಮರೆಯಾಗದಂತೆ ಮೂಡಿಸುತ್ತ ಹೋಗುತ್ತಾರೆ. ತಮ್ಮ ಬದುಕಿನಲ್ಲಿ ಬಂದು ಹೋದವರ ದೊಡ್ಡತನವನ್ನು, ಔದಾರ್ಯವನ್ನು, ಆದರ್ಶಗಳನ್ನು ಹೇಳುತ್ತ ಹೋಗುವ ಸೀತಾರಾಮ್ ತಮ್ಮ ಬಗ್ಗೆ ಹೇಳುವಾಗ ತಮ್ಮ ಸಣ್ಣತನ, ತಮ್ಮ ಆರ್ಥಿಕ ಅಶಿಸ್ತು, ಸೋಲುಗಳ ಬಗ್ಗೆ ಮಾತ್ರ ಹೇಳುತ್ತಾರೆ. ಇಂಥ ಪರೋಕ್ಷ ಚಿತ್ರವೊಂದು ಕಡೆ, ನೇರ ಚಿತ್ರವೊಂದು ಕಡೆ ಸೇರಿ ಮನಸ್ಸಿನಲ್ಲಿ ಟಿ ಎನ್ ಸೀತಾರಾಮರ ಪೂರ್ಣಚಿತ್ರ ನಮಗೆ ಸಿಗುವುದಾದರೂ ಅವರು ಈ ಪುಸ್ತಕದಲ್ಲಿ ಹೇಳಿರುವುದಕ್ಕಿಂತ ಹೇಳದೇ ಬಿಟ್ಟಿರುವುದೇ ಹೆಚ್ಚು ಅನಿಸದೇ ಇರದು. ಅದರಲ್ಲೂ ಫ್ಯಾಕ್ಟರಿಯ ವಿಚಾರಕ್ಕೆ ಬರುವಾಗ ಅದೆಲ್ಲ ಹೇಗಾಯಿತು ಎನ್ನುವ ವಿವರವೇ ಇಲ್ಲ. ಮುಂದೆ ಅದರಿಂದ ಅನುಭವಿಸಿದ್ದರ ಮೆಲುಕು ನೋಟವಷ್ಟೇ ಇದೆ.
ಮುಖ್ಯವಾಗಿ ಅವರು ಪುಟ್ಟಣ್ಣ ಕಣಗಾಲ್ ಮತ್ತು ಜಾಲಪ್ಪನವರಿಂದ ಕಲಿತಿದ್ದು ಇಲ್ಲಿ ಅತ್ಯಂತ ಮಹತ್ವದ್ದು ಅನಿಸುತ್ತದೆ. ಹಾಗೆ ನೋಡಿದರೆ ಪುಸ್ತಕದ ಉದ್ದಕ್ಕೂ ಅವರು ತಮ್ಮ ಪ್ರಾಥಮಿಕ ಶಾಲೆಯ ಅಧ್ಯಾಪಕರಿಂದ ತೊಡಗಿ, ಬಾಲ್ಯದ ಸ್ನೇಹಿತರು, ನಂತರ ಜೊತೆಯಾದವರು, ಮೋಸ ಮಾಡಿದವರು, ಮರೆಯಲಾರದ ಪಾಠ ಕಲಿಸಿದವರು - ಎಲ್ಲರಿಂದಲೂ ತಾನು ಏನು ಕಲಿತೆ ಎನ್ನುವುದನ್ನೇ ಹೇಳುತ್ತ ಹೋಗಿದ್ದಾರೆ ಅನಿಸಿದರೂ ಆಶ್ಚರ್ಯವೇನಿಲ್ಲ. ಆದರೂ ಪುಟ್ಟಣ್ಣ ಕಣಗಾಲ್ ಅವರಿಂದ ಕಲಿತಿದ್ದು ಮತ್ತು ಜಾಲಪ್ಪನವರು ಕಲಿಸಿದ್ದು ಎರಡೂ ಬಹಳ ಮುಖ್ಯ.
ಯಾರನ್ನೂ ಕೆಟ್ಟ ವ್ಯಕ್ತಿ ಎಂಬಂತೆ ಕಾಣದ, ಚಿತ್ರಿಸದ ಟಿ ಎನ್ ಸೀತಾರಾಮ್, ವಸ್ತು-ವಿಷಯದ ಎರಡೂ ಮಗ್ಗುಲನ್ನು ಗಮನಿಸಿಯೇ ಪ್ರತಿಕ್ರಿಯಿಸುವ ವ್ಯಕ್ತಿ. ತಮ್ಮ ನಾಟಕವೊಂದರ ಟೀಕೆಯಲ್ಲಿ ಲಂಕೇಶರಿಂದಲೂ ಅವರು ಕಲಿತಿದ್ದು ಅದನ್ನೇ. ಆವತ್ತಿನಿಂದಲೂ ಒಂದು ಪಾತ್ರದ ನಡೆಯ ಹಿಂದಿರಬಹುದಾದ ಕಾರ್ಯಕಾರಣ ಸಂಬಂಧವನ್ನು ತಾವು ಎರಡೂ ನಿಟ್ಟಿನಿಂದ ನೋಡಲು, ನೋಡಿ ಚಿತ್ರಿಸಲು ಕಲಿತೆ ಎಂದು ಅವರು ಹೇಳುತ್ತಾರಾದರೂ, ಅದು ಅವರಲ್ಲಿ ಆಗಲೇ ಇತ್ತು. ಒಬ್ಬ ಲಾಯರಿಗೆ ಪಾಟೀಸವಾಲು ಹೇಗೆ ನಡೆಸಬೇಕು ಎನ್ನುವುದು ಗೊತ್ತಿರಲಿಲ್ಲವೆ? ಅದರ ತಂತ್ರಗಳು ಅವರಿಗೆ ಹೇಳಿಕೊಡುವುದು ಇದನ್ನೇ ಅಲ್ಲವೆ? ಅಲ್ಲದೆ ಎಂಪಥಿ ಎನ್ನುವುದು ಅವರಿಗೆ ಹುಟ್ಟಿನಿಂದಲೇ ಇತ್ತು ಎಂದು ಯಾರೇ ಬೇಕಾದರೂ ಹೇಳಬಲ್ಲರು.
ಅದೇ ರೀತಿ ಟಿ ಎನ್ ಸೀತಾರಾಮ್ ಅವರಿಗೆ ಬದುಕಿನಲ್ಲಿ ಕಹಿಯಾದ, ಕಠಿಣವಾದ ಪಾಠ ಕಲಿಸಿದವರೂ ಅವರ ವಿರೋಧಿಗಳಾಗಿರಲಿಲ್ಲ, ಬದಲಿಗೆ ಅವರ ಜೊತೆಯವರೇ ಆಗಿದ್ದರು. ಅವರ ಇಷ್ಟಕ್ಕೆ ವಿರುದ್ಧವಾಗಿ ಅವರು ಏನೇನು ಮಾಡಬೇಕಾಯಿತೋ, ಉದಾಹರಣೆಗೆ, ನಾಟಕ ರಂಗವನ್ನು ದೂರ ಮಾಡಬೇಕಾಗಿ ಬಂದಿದ್ದರೆ, ರಾಜಕೀಯದಲ್ಲಿ ಟಿಕೇಟ್ ಪಡೆಯದೇ ಇರುವುದಕ್ಕೆ, ಲಾಯರ್ ಆಗಿ ಸೆಟ್ಲ್ ಆಗದಿರಲು, ನಟನಾಗದೇ ಇರಲು ಯಾರು ಕಾರಣರಾಗಿದ್ದರು? ಅವರ ಡಿಯರ್ ಎಂಡ್ ನಿಯರ್‌ಗಳೇ ಅವರಿಗೆ ಸುಲಭವಾಗಿ ಲಭ್ಯವಿದ್ದ ಅವಕಾಶವನ್ನು ನಿರಾಕರಿಸಿದವರು, ಪ್ರೀತಿಯಿಂದ ದೂರ ಸೆಳೆದವರು, ಅವಕಾಶ ತಪ್ಪಿಸಿದವರು. ಅವರಂಥ ವ್ಯಕ್ತಿ ರಾಜಕಾರಣಕ್ಕೆ ಹೇಳಿಸಿದವರಲ್ಲ, ಅವರ ಧಾರಾವಾಹಿ ಅತ್ಯುತ್ತಮವಾಗಿದ್ದರಿಂದಲೇ ಅದನ್ನು ಬೇರೆ ಕಡೆ ಕೊಡುವಂತಿರಲಿಲ್ಲ, ಅವರು ಒಳ್ಳೆಯ ನಟ ಆಗಿದ್ದರಿಂದಲೇ ಕಮರ್ಶಿಯಲ್ ಸಿನಿಮಾಕ್ಕೆ ಬೇಡವಾದರು(!), ಕಮರ್ಶಿಯಲ್ ಸಿನಿಮಾದಲ್ಲೆಲ್ಲ ಅವರು ನಟಿಸುವುದಿಲ್ಲ ಎಂದು ಹೇಳಿ ಬೇರೆಯವರು ಇವರಿಗೆ ಬಂದ ಅವಕಾಶ ನಿರಾಕರಿಸಿದರು! - ಹೀಗೆ!
ಈ ಪುಸ್ತಕದಲ್ಲಿ ತುಂಬ ಇಷ್ಟವಾದ ಇನ್ನೊಂದು ಮುಖ್ಯ ಸಂಗತಿ ಎಂದರೆ ಎಲ್ಲೂ ಟಿ ಎನ್ ಸೀತಾರಾಮ್ ವಿಧಿ, ನಸೀಬು, ಹಣೆಬರಹ, ಕರ್ಮ ಎಂದೆಲ್ಲ ಬಳಸದೇ ಇರುವುದು. ಇಷ್ಟೊಂದು ನೋವು, ಸೋಲು, ಇಷ್ಟಪಟ್ಟಿದ್ದನ್ನು ಮಾಡಲಾಗದ ಅಸಹಾಯಕತೆ ಎದುರಾದರೂ ಅಂಥ ಮಾತು ಬರದಿರುವುದು ಅಚ್ಚರಿ, ಮೆಚ್ಚುಗೆ, ಅಭಿಮಾನ ಮೂಡಿಸುತ್ತದೆ.
ಅತೀವ ಪಾಪಪ್ರಜ್ಞೆ, ತನಗೆ ಏನಾದರೂ ಪರವಾಗಿಲ್ಲ, ತನ್ನಿಂದ ಇನ್ನೊಬ್ಬರಿಗೆ ಕೆಡುಕಾಗಬಾರದೆಂಬ ಅತಿಯಾದ ಎಚ್ಚರ ಬಹುಶಃ ಮನುಷ್ಯನನ್ನು ಯಶಸ್ವಿಯಾಗುವುದಕ್ಕೆ ಅನರ್ಹಗೊಳಿಸುವಂಥ ಗುಣಗಳಿರಬೇಕು. ಒಂದು ಕಡೆ ಟಿ ಎನ್ ಸೀತಾರಾಮ್ ಹೀಗೆ ಬರೆಯುತ್ತಾರೆ:
"ಆ ದಿನಗಳಲ್ಲಿ ನಾನು ಒಬ್ಬ ಸಂತನ ಪಾತ್ರ, ಇನ್ನೊಂದು ಪಾಪಿಯ ಪಾತ್ರ ಎರಡನ್ನೂ ನಿಭಾಯಿಸುತ್ತಿದ್ದೆ. ನಾವು ಒಳಗೊಳಗೆ ನೋಯಿಸುತ್ತಾ ಇರುತ್ತೇವೆ. ನೋಯಿಸಬಾರದು ಅನ್ನುವ ಸಂತನ ಗುಣ ಒಮ್ಮೊಮ್ಮೆ ಮೇಲೆ ಬರುತ್ತದೆ. ಸ್ವಲ್ಪ ಹೊತ್ತು ನೋಯಿಸುವುದಿಲ್ಲ ನಾವು. ಮತ್ತೆ ಸ್ವಲ್ಪ ಸಮಯದ ನಂತರ ಪಾಪಿಯಾಗುತ್ತೇವೆ.
"ಆ ಥರದ ಸಂತ ಮತ್ತು ಪಾಪಿಯ ಪಾತ್ರ ನಿಭಾಯಿಸುವುದು ತುಂಬಾ ನೋವನ್ನುಂಟು ಮಾಡುತ್ತಿತ್ತು."
(ಪುಟ 172)
ಪಾಪಪ್ರಜ್ಞೆಗೆ ನೂರು ಸೂಜಿಗಳು ಎಂಬ ಮಾತನ್ನು ಟಿ ಎನ್ ಸೀತಾರಾಮ್ ಮತ್ತೆ ಮತ್ತೆ ನೆನೆಯುತ್ತಾರೆ. ನನಗನಿಸುವಂತೆ, ಕೊನೆಗೂ ಈ ಪಾಪಿಯನ್ನೂ, ಸಂತನನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಣದೇನೆ, ನೇರ ಹೃದಯವನ್ನೇ ಹೊಕ್ಕು ಅರ್ಥ ಮಾಡಿಕೊಂಡವರು ಹೆಚ್ಚು. ಅವರಲ್ಲಿ ಅಮ್ಮ ಮತ್ತು ಗೀತಾ ಎದ್ದು ಕಂಡರೆ, ಮಸುಕಾಗಿ ಕಾಣುವ ಸಾವಿರಾರು ಮಂದಿ ಇದ್ದರು, ಇದ್ದಾರೆ ಅನಿಸದೇ ಇರದು. ಎಷ್ಟೆಲ್ಲ ಮಂದಿ ಸೀತಾರಾಮ್ ಅವರಿಗೆ ಒದಗಿದ್ದರು, ಸಹಾಯ ಹಸ್ತ ಚಾಚಿದ್ದರು, ಜೊತೆಗೆ ನಿಂತಿದ್ದರು, ನಿಂತಿದ್ದಾರೆ ಎನ್ನುವುದನ್ನೆಲ್ಲ ಗಮನಿಸಿದರೆ ಈ ಮಾತು ಸುಳ್ಳಲ್ಲ ಎನ್ನುವುದು ಅರ್ಥವಾಗುತ್ತದೆ. ಅಷ್ಟಿದ್ದೂ ತೀರ ಅಂತರಂಗದಲ್ಲಿ ಅವರು ನೋಯುತ್ತ ಉಳಿದವರು ಎನ್ನದೆ ವಿಧಿಯಿಲ್ಲ. ತಂದೆಯವರ ಕೊನೆಯನ್ನು ನೆನೆದು ಹನಿಗಣ್ಣಾಗುವ, ಪದ್ಮಕ್ಕನ ಕಣ್ಮರೆಯ ನಿಗೂಢಕ್ಕೆ ಈಗಲೂ ಒಳಗೊಳಗೇ ಒದ್ದಾಡುವ, ಕಳೆದುಕೊಂಡವರನ್ನು ನೆನೆಯುವಾಗಲೆಲ್ಲ ಮುದುಡಿಕೊಳ್ಳುವ, ತಂಗಿ ಮದುವೆಗೆ ಮಾರಿದ ಆಸ್ತಿಯ ಬಗ್ಗೆ ನೆನೆಯುವ, ರಾತ್ರಿ ಎಲ್ಲರೂ ಮಲಗಿದ ಮೇಲೆ ಆ ಔಷಧಿ ತೆಗೆದುಕೊಂಡು ಈಚೆ ಬಂದು, ಸಿಮೆಂಟ್ ಕಟ್ಟೆಯ ಮೇಲೆ ಒಂದು ಗಳಿಗೆ ಕೂತ ಟಿ ಎನ್ ಸೀತಾರಾಮ್ ಜೊತೆ ಯಾರಿದ್ದರು?
ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ
ಶ್ಲೋಕ ರೇಷ್ಮೆ ತೊಗಲು
ಓಶೋ ಒಂದೆಡೆ ಒಂದು ಮಾತನ್ನು ಹೇಳುತ್ತಾನೆ. Our bodies are separate, minds overlap; but soul is one ಅಂತ. ನಾವೆಲ್ಲರೂ ಟಿ ಎನ್ ಸೀತಾರಾಮ್ ಜೊತೆ ಸಿಮೆಂಟ್ ಕಟ್ಟೆಯ ಮೇಲೆ ಇದ್ದೆವು, ಅವರಮ್ಮ ಮಾತ್ರವಲ್ಲ ಅನಿಸುತ್ತದೆ. ಇದನ್ನು ವಿವರಿಸಲಾರೆ.
Subscribe to:
Post Comments (Atom)
No comments:
Post a Comment