Powered By Blogger

Sunday, April 23, 2023

ಎಸ್ ಆರ್ ವಿಜಯಶಂಕರ - ಅನಿಲ್ ಗೋಕಾಕ್ ಅವರ " ಕನ್ನಡದ ವಿಸ್ಮಯ ವಿ. ಕೃ . ಗೋಕಾಕ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ವಿನಾಯಕ ಕೃಷ್ಣ ಗೋಕಾಕರು (1909-1992) ಕಳೆದ ಶತಮಾನದ ಕನ್ನಡ ಸಾಹಿತ್ಯದ ದೊಡ್ಡ ಹೆಸರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ಮುಂದೆ ಆಕ್ಸ್ ಫರ್ಡ್ ನಲ್ಲಿ ಓದಿ ಭಾರತಕ್ಕೆ ಹಿಂತಿರುಗಿದರು. ಸಾಂಗ್ಲಿ, ಹೈದರಾಬಾದ್, ವೀಸನಗರ, ಕೊಲ್ಲಾಪುರ, ಧಾರವಾಡ, ಬೆಂಗಳೂರು ಸಿಮ್ಲಾ ಹೀಗೆ ಹಲವು ಕಡೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದರು. ಅವರು ಉಪಕುಲಪತಿ ಹುದ್ದೆಯಲ್ಲಿದ್ದವರಾದರೂ ಗೋಕಾಕರ ವಿದ್ಯಾರ್ಥಿಗಳು ಅವರನ್ನು ಶೆಲ್ಲಿ, ಕೀಟ್ಸ್‌, ಶೇಕ್ಸ್‌ಪಿಯರ್ ಮೊದಲಾದವರನ್ನು ಭಾವನಾತ್ಮಕವಾಗಿ ಪಾಠ ಹೇಳಿ ತಮ್ಮ ಸಾಹಿತ್ಯಾನುಭವವಾಗಿಸಿದ ಗುರುಗಳೆಂದು ನೆನಪಿಸಿಕೊಳ್ಳುತ್ತಾರೆ. ಹಲವು ದೇಶಗಳ ಪ್ರವಾಸ ಮಾಡಿರುವ ಅವರು ಭಾರತದಲ್ಲಿ ಇಂಗ್ಲಿಷ್ ಭಾಷಾ ಬೋಧನೆ, ಸಾಹಿತ್ಯ, ಭಾಷಾ ಕಲಿಕೆಗಳಿಗೆ ಮೌಲಿಕ ಕೊಡುಗೆಯನ್ನಿತ್ತವರು. ಇಂಗ್ಲೀಷಿನಲ್ಲಿ ಬರೆಯುತ್ತಿದ್ದ ಅವರು ಬೇಂದ್ರೆಯವರ ಪ್ರಭಾವದಿಂದ ಕನ್ನಡದಲ್ಲಿ ಬರೆಯ ತೊಡಗಿದರು. ಅರವಿಂದ ತತ್ವಕ್ಕೆ ಹತ್ತಿರವಾದರು. ಗದ್ಯ, ವಿಮರ್ಶೆ, ಕಾದಂಬರಿ, ನಾಟಕ, ಮಹಾಕಾವ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡರು. ಅವರ ನವ್ಯಕಾವ್ಯ ಪ್ರಯೋಗಗಳೂ ಸೇರಿದಂತೆ- ವಿಮರ್ಶಕರು ಗೋಕಾಕರ ಸಾಹಿತ್ಯದಲ್ಲಿ ಕನಿಷ್ಟ ಆರು ಹಂತಗಳ ಬೆಳವಣಿಗೆಗಳನ್ನು ಗುರುತಿಸುತ್ತಾರೆ. ಅವರ ಜೀವನ ಯಾತ್ರೆ ಮತ್ತು ಸಾಹಿತ್ಯ ಪಯಣಗಳಿಗೆ ಹತ್ತಿರದ ಸಂಬಂಧವಿದೆ. ಇವೆರಡರೊಡನೆ ಇನ್ನಿತರ ವಿಚಾರಗಳೂ ಸೇರಿದ "ಕನ್ನಡದ ವಿಸ್ಮಯ ವಿ.ಕೃ. ಗೋಕಾಕ್" ಎಂಬ ಗ್ರಂಥವೊಂದನ್ನು ಈಚೆಗೆ ಅವರ ಸುಪುತ್ರ, ನಿವೃತ್ತ ಐ.ಎ.ಎಸ್. ಅಧಿಕಾರಿ ಅನಿಲ ಗೋಕಾಕರು ಪ್ರಕಟಿಸಿದ್ದಾರೆ. (ರಾಯಲ್ 1/4 ಆಕಾರದ 780ಕ್ಕೂ ಹೆಚ್ಚಿನ ಪುಟಗಳ ಈ ಗ್ರಂಥದ ಪ್ರಕಾಶಕರು- ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ). ತಮ್ಮ ತಂದೆಯವರ ಹುಟ್ಟಿನಿಂದ ಕೊನೆವರೆಗಿನ ಜೀವನಯಾತ್ರೆಯನ್ನು ಹಲವು ಮೂಲಗಳನ್ನು ಬಳಸಿಕೊಂಡು ಬರೆದಿದ್ದಾರೆ. ಪ್ರತಿ ಅಧ್ಯಾಯಗಳ ಕೊನೆಗಿನ ಆ ಮೂಲಗಳ ವಿವರಗಳಲ್ಲದೆ, ಈ ಸಮಗ್ರ ಕೃತಿಯೇ ಮುಂದಿನ ಗೋಕಾಕ ಸಾಹಿತ್ಯಾಧ್ಯಯನಕ್ಕೆ ಸಮರ್ಥವಾದೊಂದು ಆಕರ ಗ್ರಂಥವಾಗಿದೆ. ಗೋಕಾಕ್‌ ಅಧ್ಯಯನಕ್ಕೆ ಈ ಗ್ರಂಥ ಒದಗಿಸಬಹುದಾದ ಆಕರಗಳ ಒಂದೆರಡು ಉದಾಹರಣೆಗಳನ್ನಾದರೂ ನಾವಿಲ್ಲಿ ಗಮನಿಸಬಹುದು. ಮಹರ್ಷಿ ಅರವಿಂದರ ಜೀವನದೃಷ್ಟಿ ಹಾಗೂ ವಿಕಸನ ತತ್ವಗಳು ಜಗತ್ತಿನ ಪುನರುಜ್ಜೀವನಕ್ಕೆ ನೀಡಿದ ಕೊಡುಗೆಯನ್ನು ಚಿತ್ರಿಸುವ ಉದ್ದೇಶದಿಂದ ಗೋಕಾಕರು ರಚಿಸಿದ ʼತ್ರಿಶಂಕುವಿನ ಪ್ರಜ್ಞಾ ಪ್ರಭಾತʼ ಎಂಬ ದೀರ್ಘಕವನ 1965 ರಲ್ಲಿ ಪ್ರಕಟವಾಯಿತು. ಮುಂದೆ ಜ್ಞಾನಪೀಠ ಪ್ರಶಸ್ತಿ ಪಡೆದ ʼಭಾರತ ಸಿಂಧು ರಶ್ಮಿʼ ಕೃತಿಗೆ ಇದುವೇ ಹೇಗೆ ಮೊದಲ ಮೆಟ್ಟಿಲಾಯಿತು ಎಂಬುದನ್ನು ಈ ಗ್ರಂಥ ಗೋಕಾಕರ ಚಿಂತನೆಗಳ ಹಿನ್ನೆಲೆಯಲ್ಲಿ ತೋರಿಸಿಕೊಡುತ್ತದೆ. ಹಾಗೆಯೇ ಅವರು ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಎಡ್ವಾನ್ಸ್ಡ್ ಸ್ಟಡಿ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಅಲ್ಲಿ ಭಾರತೀಯ ಸಾಹಿತ್ಯ- ಸಂಸ್ಕೃತಿಗಳ ಬಗ್ಗೆ ನಡೆದ ವಿದ್ವತ್ ಗೋಷ್ಠಿಗಳು ಗೋಕಾಕರ ಮಹಾಕಾವ್ಯ ರಚನೆಗೆ ನೀಡಿದ ಪ್ರೇರಣೆಗಳೇನು ಎಂಬ ವಿವರವೂ ತಿಳಿಯುತ್ತದೆ. ಇಂತಹ ಗ್ರಂಥಗಳಲ್ಲಿರುವ ಮಾಹಿತಿ, ಘಟನೆಗಳು, ಉಪಕತೆಗಳು- ಎಲ್ಲವೂ ದೊಡ್ಡ ಲೇಖಕನೊಬ್ಬನ ಅಧ್ಯಯನಕ್ಕೆ ಪೂರಕ ಆಕರಗಳಾಗುತ್ತವೆ. ಈ ಕೃತಿಯ ಒಳಗೆ ಅಂತರ್ಗತವಾಗಿ ಇರುವ ಅರವಿಂದ ತತ್ವಗಳಿಂದ ಮಾಗಿದ ಗೋಕಾಕರು ಸಾಯಿಬಾಬಾ ರಿಂದ ಯಾಕೆ ಆಕರ್ಷಿತರಾದರು ಎಂಬ ಅವರ ಅಂತರಂಗ ನೋಟವನ್ನೂ ಗ್ರಂಥ ಕರ್ತರು ಕಾಣಿಸುತ್ತಾರೆ. ʼಭಾರತ ಸಿಂಧು ರಶ್ಮಿʼ ಯ ನಾಯಕ ವಿಶ್ವಾಮಿತ್ರ. ಸಪ್ತಸಿಂಧು ಎಂದರೆ ಏಳು ಸಮುದ್ರ ಅಥವಾ ನದಿಗಳು. ಈ ಮಹಾಕಾವ್ಯ ಸಂದರ್ಭದಲ್ಲಿ ಸರಸ್ವತಿ, ಸಿಂಧು ಮತ್ತು ಅದರ ಉಪನದಿಗಳಾದ ವಿತಸ್ತ (ಇಂದಿನ ಝೇಲಮ್)‌ ಸುತುದ್ರಿ (ಸತಲಜ್)‌ ಅಸಿಕಿಸಿ (ಚೆನಾಬ) ಪುರುಶ್ನಿ (ರಾವಿ) ವಿಪಾಸ (ಬಿಯಾಸ) ಹರಿಯುವ ಜಾಗ. ಅದರೊಡನೆ ಋಗ್ವೇದ ತತ್ವಗಳು, ಪೌರಾಣಿಕ ಪ್ರತಿಮಾ ಶಕ್ತಿ, ಆರ್ಯ-ದ್ರಾವಿಡ ಮಿಶ್ರ ರಕ್ತದ ರಾಜನ ಮೂಲಕ ಚಾರಿತ್ರಿಕ ಸೂಚನೆ- ಹೀಗೆ ಇದೊಂದು ಆಧುನಿಕ ಮಹಾಕಾವ್ಯ. ಸಪ್ತ ಕಿರಣ ಹಾಗೂ ಸಪ್ತಲೋಕಗಳ (ಭೂಹ, ಭುವಹ, ಸ್ವಾಹ, ಮಹರ, ಸತ್‌, ಚಿತ್‌, ಆನಂದ) ಸಾಂಕೇತಿಕತೆ ಮೂಲಕ ಕಾವ್ಯ ಚೇತನ- ಸಾಮರಸ್ಯಗಳನ್ನು ಅನ್ವಯಿಸಿ ತೋರಿಸುತ್ತದೆ. ಮಹಾಕಾವ್ಯ ರಚನೆಗೆ ಗೋಕಾಕರು ಮಾಡಿಕೊಂಡ ಹಲವು ತಯಾರಿಗಳ ವಿವರಗಳೂ ಕೃತಿಯೊಳಗೆ ಲಭ್ಯವಾಗುತ್ತವೆ. ಗೋಕಾಕರ ಸರಣಿ ಕಾದಂಬರಿ ʼಸಮರಸವೇ ಜೀವನʼ (1935, 1956, 1969) ನವೋದಯ ಚಿಂತನೆಗೆ ಗೋಕಾಕರು ನೀಡಿದ ಪ್ರಮುಖ ಕೊಡುಗೆಗಳಲ್ಲೊಂದು. 1920 ರ ದಶಕದ ಬ್ರಿಟಿಷ್‌ ಆಡಳಿತದ ಭಾರತದಿಂದ ಪ್ರಾರಂಭವಾಗುವ ಈ ಕಾದಂಬರಿ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಗಿ ಸಮುದ್ರ ದಾಟಿ ಇಂಗ್ಲೆಂಡಿನ ಆಕ್ಸ್ ಫರ್ಡ್ ತಲುಪುತ್ತದೆ. ಇದರ ಕೊನೆಯ ಭಾಗ ಗೋಕಾಕರು ಇಂಗ್ಲೀಷಿನಲ್ಲಿ ಬರೆದ ಕಾದಂಬರಿಯ ಕನ್ನಡ ಅನುವಾದ. ಲೇಖಕರ ಆತ್ಮಚರಿತ್ರೆಯನ್ನು ನೆನಪಿಸಬಲ್ಲ ಈ ಕಾದಂಬರಿ ಭಾಗಗಳ ರಚನೆಯ ಹಿನ್ನೆಲೆ ಹಾಗೂ ಜೀವನ ಚರಿತ್ರೆಯ ಸಾಂದರ್ಭಿಕ ವಿವರಗಳು ಗ್ರಂಥದ ಆಕರ ಮೌಲ್ಯವನ್ನು ಹೆಚ್ಚಿಸುತ್ತದೆ. ತಮ್ಮ ಆತ್ಮಾಭಿಮಾನ ಹಾಗೂ ತಾವು ನಂಬಿದ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ; ಮುಂದೆ ಜೀವನಕ್ಕೊಂದು ಉದ್ಯೋಗ ಇಲ್ಲದಿದ್ದರೂ ತಮ್ಮ ಹುದ್ದೆಗಳಿಗೆ ಹಲವು ಸಲ ರಾಜೀನಾಮೆ ನೀಡಿ ಹೊರಬಂದ ಗೋಕಾಕರ ತತ್ವನಿಷ್ಠೆ ಹಾಗೂ ಮನೋಸ್ಥೈರ್ಯದ ಬಗ್ಗೆ ಗೌರವ ಮೂಡುತ್ತದೆ. ಹತ್ತೊಂಬತ್ತು ಅಧ್ಯಾಯಗಳುಳ್ಳ ಈ ಗ್ರಂಥ ಗೋಕಾಕರ ಹಿರಿಯರು ಹಾಗೂ ಅವರ ಬಾಲ್ಯದ ಸವಣೂರಿನ ದಿನಗಳಿಂದ ಪ್ರಾರಂಭವಾಗಿ ಮುಂಬಯಿಯಲ್ಲಿ ಮಗನ ಮನೆಯಲ್ಲಿ ಕಳೆದ ಕೊನೆಯ ದಿನಗಳನ್ನೂ ದಾಖಲಿಸುತ್ತದೆ. ಇವುಗಳ ನಡುವೆ ಅವರು ಹಲವು ಜಾಗಗಳಲ್ಲಿ ಕೆಲಸ ಮಾಡಿದರು, ಹತ್ತಾರು ರಾಷ್ಟ್ರಗಳನ್ನು ನೋಡಿ ಬಂದರು. ಆದರೂ ಅವರ ಅಂತರಂಗದ ಆಡೊಂಬಲ ಧಾರವಾಡವೇ ಆಗಿತ್ತು. ಅದಕ್ಕೊಂದು ಪುಟ್ಟ ಸೂಚನೆ ಹೀಗಿದೆ: ಅನಾರೋಗ್ಯದಿಂದಾಗಿ ದೆಹಲಿಗೆ ಪ್ರಯಾಣ ಮಾಡಲು ಗೋಕಾಕರಿಗೆ ಸಾಧ್ಯವಾಗದು ಎಂದು ಅಂದಿನ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ. ನರಸಿಂಹರಾವ್ ತಾವೇ ಮುಂಬಯಿಗೆ ಬಂದು ಜ್ಞಾನಪೀಠ ಪ್ರಶಸ್ತಿ ನೀಡಿದರು. ಅದಾದ ಬಳಿಕ ತಮ್ಮ ಕೊನೆಯ ದಿನಗಳಲ್ಲೇ ಅದಮ್ಯ ಆಸೆಯಿಂದ ಗೋಕಾಕರು ಕಷ್ಟಪಟ್ಟು ಧಾರವಾಡಕ್ಕೆ ಹೋದ ವಿವರ ಇಲ್ಲಿದೆ. ಎಲ್ಲೂ ಅತಿ ಭಾವುಕತೆ ಇಲ್ಲದ ನಿರೂಪಣೆ, ಗ್ರಂಥದ ಆಕರ ಮೌಲ್ಯವನ್ನು ಹೆಚ್ಚು ಮಾಡಿದೆ. ಗೋಕಾಕರು ತೀರಿಹೋಗಿ 28 ವರುಷಗಳ ಬಳಿಕ ಈ ಗ್ರಂಥ ಹೊರಬಂದಿದೆ. ಇಂದಿನ ಸಾಹಿತ್ಯದ ವಿದ್ಯಾರ್ಥಿಗಳು ಅಥವಾ ಅವರ ಹಲವು ಅಧ್ಯಾಪಕರೂ ಗೋಕಾಕರನ್ನು ನೋಡಿರುವುದು ಸಾಧ್ಯವಿಲ್ಲ. ಅನೇಕ ವಿದ್ಯಾರ್ಥಿಗಳು ಡಾ. ಸುರೇಂದ್ರನಾಥ ಮಿಣಜಗಿಯವರು ಗೋಕಾಕರ ಬಗ್ಗೆ ಬರೆದಿರುವ ಮೊನೋಗ್ರಾಫ್ ಪುಸ್ತಕದ ಕೊನೆಯಲ್ಲಿರುವ ಗೋಕಾಕರ ಕೃತಿಗಳ ಪಟ್ಟಿಯನ್ನು ಗುರುತು ಹಾಕಿಕೊಳ್ಳುವುದನ್ನು ಲೈಬ್ರೆರಿಗಳಲ್ಲಿ ಗಮನಿಸಿದ್ದೇನೆ. ಬಹುಶಃ ಈ ಗ್ರಂಥದ ಮುಂದಿನ ಮುದ್ರಣದಲ್ಲಿ ಗೋಕಾಕರ ಎಲ್ಲಾ ಕೃತಿಗಳ ಮೊದಲ ಮುದ್ರಣ ವಿವರ ಸಹಿತ ಅವರಿಗೆ ಸಂದ ಪ್ರಶಸ್ತಿಗಳು, ಅವರ ಬಗ್ಗೆ ಬಂದ ಮುಖ್ಯ ಕೃತಿಗಳ ವಿವರ ಇತ್ಯಾದಿಗಳನ್ನು ಗ್ರಂಥದ ಕೊನೆಗೆ ನಮೂದಿಸುವುದರಿಂದ ಗೋಕಾಕರ ಮುಂದಿನ ಅಧ್ಯಯನಕ್ಕೂ ಸಹಕಾರಿ. ಕನ್ನಡ, ಇಂಗ್ಲಿಷ್ ಭಾಷೆಗಳು ಸೇರಿ ಗೋಕಾಕರು 75 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸುವುದರಿಂದ ಅಂತಹ ಅನುಬಂಧಗಳ ಅಗತ್ಯ ಈಗ ಹಿಂದಿಗಿಂತ ಹೆಚ್ಚಿದೆ. ಸಾಹಿತ್ಯಾಸಕ್ತರಲ್ಲ ದ ಕನ್ನಡಿಗರಿಗೂ ಗೋಕಾಕ್ ವರದಿ ಬಗ್ಗೆ ತಿಳಿದಿರುತ್ತದೆ. ಕರ್ನಾಟಕದ ಶಿಕ್ಷಣ ಪದ್ಧತಿಯಲ್ಲಿ ಕನ್ನಡಕ್ಕೆ ಕೊಡಬೇಕಾದ ಸ್ಥಾನಮಾನದ ಕುರಿತಾಗಿ ಗೋಕಾಕ ಸಮಿತಿ ನೀಡಿದ ಈ ವರದಿ ರಾಜ್ಯದಾದ್ಯಂತ ದೊಡ್ಡ ಆಂದೋಲನವನ್ನು ಸೃಷ್ಟಿಸಿತ್ತು. ಈ ವರದಿಯ ಹಿಂದೆ ಗೋಕಾಕರಿಗಿದ್ದ ಚಿಂತನಾಕ್ರಮ, ಇಂಗ್ಲಿಷ್ ಬೋಧನಾ ಕ್ರಮಗಳ ಬಗ್ಗೆ ಹೈದರಾಬಾದಿನಲ್ಲಿದ್ದಾಗ ನಿರೂಪಿಸಿದ ನೀತಿ ನಿಯಮಗಳಿಂದ ಪಡೆದ ಅನುಭವ ಇತ್ಯಾದಿ ಬಹಳ ಚರ್ಚಿತವಾಗದ ಹಲವು ವಿವರಗಳು ಇಲ್ಲಿವೆ. ಅದರೊಡನೆ ನ್ಯಾಯಾಲಯಗಳಲ್ಲಿ ಗೋಕಾಕ್ ವರದಿ ಪರ-ವಿರೋಧ ನಡೆದ ವಾದಗಳು, ನ್ಯಾಯಾಲಯದ ತೀರ್ಪು; ಹೀಗೆ ಹಲವು ಆಕರ ಸಂಗ್ರಹಗಳೂ ಸಾಹಿತ್ಯೇತರ ಆಸಕ್ತರಿಗೂ ಇದನ್ನೊಂದು ಪರಾಮರ್ಶನ ಗ್ರಂಥವನ್ನಾಗಿಸಿದೆ. ನಿತ್ಯದ ದೈನಿಕದಲ್ಲೂ ಸೃಜನಶೀಲ ಲೇಖಕರಿಗೆ ಕ್ರಿಯಾಶೀಲ ವಿವರಗಳಿರುತ್ತವೆ. ಗೋಕಾಕರಿಗೆ ಪ್ರಿಯವಾಗಿದ್ದ ಸವಣೂರಿನ ನಸ್ಯ ಹಾಕುವ ಅಭ್ಯಾಸ, ಹೊರರಾಜ್ಯಗಳಲ್ಲಿ ಕನ್ನಡಿಗರನ್ನು ಕಂಡಾಗ ಉಕ್ಕುತ್ತಿದ್ದ ಪ್ರೀತಿ, ತಮ್ಮ ಆದರ್ಶಕ್ಕಾಗಿ ಉದ್ಯೋಗಗಳಿಗೆ ರಾಜೀನಾಮೆ ನೀಡಿದಾಗಲೆಲ್ಲಾ ಸಣ್ಣಪುಟ್ಟ ಹಣಕಾಸಿನ ಬಗೆಗೂ ಮಾಡಬೇಕಾಗುತ್ತಿದ್ದ ಜಾಗೃತೆ- ಹೀಗೆ ಬದುಕಿನ ಹಲವು ವಿವರಗಳು ಹೊರಗೆ ಗಂಭೀರವಾಗಿ ಕಾಣುತ್ತಿದ್ದ ಗೋಕಾಕರ ನಿತ್ಯಜೀವನದ ಸರಳ ವ್ಯಕ್ತಿತ್ವವನ್ನು ತೋರಿಸಿಕೊಡುತ್ತದೆ. ಅವರು ಪತ್ರ ಇತ್ಯಾದಿ ದಾಖಲೆಗಳನ್ನು ಜೋಪಾನ ಮಾಡುತ್ತಿದ್ದ ಕ್ರಮದಿಂದಾಗಿ ಅವರ ಸಮಕಾಲೀನರಾಗಿದ್ದ ಕವಿ ಪೇಜಾವರ ಸದಾಶಿವರಾಯರ ಆಧುನಿಕ ಚಿಂತನೆಗೂ, ಗೋಕಾಕರ ನವೀನ ಚಿಂತನೆಗಳಿಗೂ ಇದ್ದ ವ್ಯತ್ಯಾಸಗಳನ್ನು ತೋರಿಸಿಕೊಡುತ್ತದೆ. ತೇಜಸ್ವಿಯವರ ಅಣ್ಣನ ನೆನಪುಗಳು ಪ್ರಸಿದ್ಧವಾದ ಕೃತಿ. ಅಲ್ಲಿ ಲೇಖಕರೂ ಆದ ಮಗ ತಮ್ಮ ತಂದೆ ಕುವೆಂಪು ಅವರ ಬಗ್ಗೆ ಬರೆಯುತ್ತಾ ಕೌಟುಂಬಿಕ ಕಣ್ಣಲ್ಲಿ ಬರಹಗಾರ ಕುವೆಂಪು ಬಗ್ಗೆ ಒಳನೋಟ ನೀಡುತ್ತಾರೆ. ತಾಯಿ, ಅಕ್ಕ, ಬಂಧುಗಳು ಹಾಗೂ ಗೋಕಾಕರೇ ಬರೆದಿರುವ ಸಾಹಿತ್ಯ, ಪತ್ರ, ದಿನಚರಿ- ಹೀಗೆ ಹಲವು ಆಕರಗಳಿಂದ ಅನಿಲ ಗೋಕಾಕರು ತಮ್ಮ ತಂದೆಯವರ ಬಾಳ ಪಯಣವನ್ನೂ, ಸಾಹಿತ್ಯ ಸಾಧನೆಯನ್ನೂ ಜೊತೆಯಾಗಿ ಕಾಣಿಸುತ್ತಾರೆ. ಗ್ರಂಥವನ್ನು ಓದಿದ ಯಾರಿಗೂ ಅನಿಲ ಗೋಕಾಕರ ಶ್ರಮ ಗೋಚರಿಸುತ್ತದೆ. ಇವೆರಡೂ ವಿಭಿನ್ನ ರೀತಿಯ ಕೃತಿಗಳು. ಕನ್ನಡದ ಮಹತ್ವಪೂರ್ಣ ಲೇಖಕರ ಬಗೆಗೆ ಅವರ ಮಕ್ಕಳಿಂದ ಇಂತಹ ಕೃತಿಗಳು ರಚನೆಯಾಗುವುದು ಮುಖ್ಯ ಲೇಖಕರ ಅಧ್ಯಯನಕ್ಕೊಂದು ಹೊಸ ಅಧ್ಯಾಯವನ್ನು ಸೇರಿಸುತ್ತದೆ. 30-11-2020 - ಎಸ್. ಆರ್. ವಿಜಯಶಂಕರ

No comments:

Post a Comment