Powered By Blogger

Saturday, January 8, 2022

ರಮೇಶ್ ಭಟ್ ಬೆಳಗೋಡು -ಕೆ. ಪಿ ರಾವ್ ಅವರ " ವರ್ಣಕ " { ಕಾದಂಬರಿ -2021 }K. P. RAO

ಗಹನವಾದ ಸಂಪ್ರಬಂಧಕ್ಕೆ ಕಥನದ ಅನುಭೂತಿ ವರ್ಣಕ (ಕಾದಂಬರಿ) ಲೇ: ಪ್ರೊ ಕೆ. ಪಿ. ರಾವ್ ಪ್ರಕಾಶಕರು; ಅಂಕಿತ ಪುಸ್ತಕ ಪುಟಗಳು: ೪೮೦ ಬೆಲೆ: ರೂ ೪೫೦ ಒಂದು ಕಾದಂಬರಿಯಲ್ಲಿ ಕತೆ ಎಷ್ಟು ಮುಖ್ಯ, ವೈಚಾರಿಕ ಜಿಜ್ಞಾಸೆ ಎಷ್ಟು ಮುಖ್ಯ ಎಂಬ ಕುತೂಹಲಕಾರಿ ಪ್ರಶ್ನೆಗೆ ನವ್ಯ ಮತ್ತು ನವ್ಯೋತ್ತರ ಸಂದರ್ಭಗಳ ಕನ್ನಡ ಕಾದಂಬರೀ ಸಾಹಿತ್ಯ ನಮಗೆ ಕೊಟ್ಟ ಉತ್ತರವನ್ನು ಮತ್ತೊಮ್ಮೆ ವಿಶ್ಲೇಷಣೆಗೆ ಒಡ್ಡುವಂತೆ ಮಾಡಬಲ್ಲ ಕಾದಂಬರಿ, ನಾಡೋಜ ಕೆ ಪಿ ರಾಯರ ‘ವರ್ಣಕ’. ನಾವು ಬಳಸುವ ಗಣಕ ಯಂತ್ರ (ಕಂಪ್ಯೂಟರ್) ಕ್ಕೆ ಕನ್ನಡ ಕಲಿಸಿದ ತಂತ್ರಜ್ಞ ಕಿನ್ನಿಕಂಬಳ ಪದ್ಮನಾಭ ರಾವ್ ಹೊಸತರಲ್ಲಿ ಅಡಗಿದ ಹಳತೆಂಬ ನಿಗೂಢವನ್ನು ಅರಸುವ ಅಪರೂಪದ ಋಷಿರೂಪದ ವಿಜ್ಞಾನಿ. ಅವರಿಗೆ ವಿಜ್ಞಾನ ಮತ್ತು ವೈದಿಕ ಅಧ್ಯಯನಗಳೆರಡೂ ಕರತಲಾಮಲಕ ಸಂಗತಿಗಳು. ಭಾಷಾ ಶಾಸ್ತ್ರದ ಬೆಳವಣಿಗೆಯನ್ನು ಇತಿಹಾಸ ಮತ್ತು ವಿಜ್ಞಾನದ ತಳಹದಿಯಲ್ಲಿ ಗುರುತಿಸಲು ಅವರು ಬಳಸುವ ‘ತಕ್ಷಶಿಲೆಯಲ್ಲಿ ನೀಡುವ ಉಪನ್ಯಾಸ’ವೆನ್ನುವುದು ಹಲವು ಅರ್ಥಗಳಲ್ಲಿ ಕೆ ಪಿ ರಾಯರು ಸಂವಾದವನ್ನು ಅರ್ಥೈಸುವ ರೀತಿಗೊಂದು ರೂಪಕ. ಇಲ್ಲಿ ಅವರಿಗೆ ಹೇಳುತ್ತಿರುವ ಕಥೆಗಿಂತಲೂ ಕಥೆಗೆ ಕಾರಣವಾದ ಭಾಷಾಪರಂಪರೆಯ ಕುರಿತು ಮತ್ತು ಪರಂಪರೆಯನ್ನು ಪ್ರಶ್ನಿಸುವ ‘ಅಪಾಣಿನೀಯ’ ನಿರಾಕರಣೆಯ ಕುರಿತು ಕುತೂಹಲವಿದ್ದಂತಿದೆ. ಕೆ ಪಿ ರಾಯರು ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡ೦ತೆ ‘ಈ ನೀಳ್ಗತೆಯು ಒಂದು ಕಥೆ ಅಲ್ಲ. ಭಾಷೆಯ ಮೇಲೆ ಬರೆದ ಪ್ರಬಂಧದ ಅಕ್ಷರರೂಪ.’ ‘ಪ್ರದರ್ಶನಕ್ಕಾಗಿ ಪ್ರಬಂಧಕ್ಕೆ ಬೇರೆಬೇರೆ ರೀತಿಯ ಅಲಂಕಾರಗಳನ್ನು ಮಾಡಬೇಕಾಯಿತು. ಉಡುಗೆ ತೊಡುಗೆಗಳನ್ನು ಸೇರಿಸಬೇಕಾಯಿತು’ ಎನ್ನುವ ಲೇಖಕರು ಈ ಕೃತಿಯಲ್ಲಿ ‘ನಿರುಪಾಧಿಕ (absolute) ಸತ್ಯವೆನ್ನುವುದು ಒಂದು ತಾತ್ಕಾಲಿಕ ಭ್ರಮೆ’ ಎಂಬ ಸತ್ಯ(!)ವನ್ನು ಹೇಳಲು ಪ್ರಯತ್ನಿಸಿದ್ದಾರೆ. ಕನ್ನಡ ಸಾಹಿತ್ಯದ ಮಟ್ಟಿಗೆ ಇದೊಂದು ವಿಶಿಷ್ಟವಾದ ಪ್ರಯತ್ನವೇ. ಆಕ್ಸ್‌ಫರ್ಡ್ ವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದ ಭಾರತೀಯ ಮೂಲದ ಪ್ರೊಫೆಸರ್ ಶಂಭು ಮಹಾಜನರು ನಿವೃತ್ತರಾಗಿ ಯಾವಜನಸಂಪರ್ಕವನ್ನೂ ಬಯಸದೆ ಒಂಟಿಯಾಗಿ ನೆಲೆಸಿದ್ದರು ಎಂಬಲ್ಲಿಂದ ಈ ಕತೆ ಆರಂಭವಾಗುತ್ತದೆ. ಪ್ರೊ. ಶಂಭು ಮಹಾಜನರನ್ನು ತಕ್ಷಶಿಲಾ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿರುವ ಭಾಷಾಶಾಸ್ತ್ರದ ವಿಶ್ವಸಮ್ಮೇಳನದ ಸರ್ವಾಧ್ಯಕ್ಷ ಪದಕ್ಕೆ ಆಹ್ವಾನಿಸುತ್ತಿರುವ ಅಲ್ಲಿನ ಕಂಪ್ಯೂಟರ್ ಭಾಷಾಶಾಸ್ತ್ರದ ಪ್ರೊಫೆಸರ್ ಡಾ. ಮಹಮದಾಲಿಯು ಒಂದುಕಾಲದಲ್ಲಿ ಶಂಭುಮಹಾಜನರ ಶಿಷ್ಯನಾಗಿದ್ದವನು. ‘ಭಾರತದ ಭಾಷೆಗಳ ಮೇಲೆ ವೇದಗಳ ಭಾಷಾರಚನೆಯ ಪ್ರಭಾವ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿ, ಆಕ್ಸ್‌ಫರ್ಡ್ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ನಿವೃತ್ತರಾಗಿರುವ ಶಂಭುಮಹಾಜನರಿಗೆ ಈಗ ವಯಸ್ಸು ೭೨. ಮರಾಠಿ/ಹಿಂದಿಯಲ್ಲಿ ಬಾಹತ್ತರ ಎಂದರೆ ೭೨. ಬೇಂದ್ರೆಯವರ ‘ಬಾ ಹತ್ತರ’ವನ್ನು ನೆನಪಿಸುವ ೭೨. ಈ ವಯಸ್ಸಿನಲ್ಲಿ ಭಾರತದ ಭೂಖಂಡ ತನ್ನನ್ನು ಮಹಮದಾಲಿಯ ಮೂಲಕ ಬಾ ಹತ್ತಿರ ಎಂದು ಕರೆಯುತ್ತಿದೆಯೆ? ಆ ನೆವದಲ್ಲಿ ಅವರಿಗೆ ಮಂಗಳೂರು ಗುರುಪುರದ ಸಮೀಪದ ತಮ್ಮ ಹುಟ್ಟೂರು ಕರೆಯುತ್ತಿದೆ ಎನ್ನಿಸಿ, ಹುಟ್ಟೂರಲ್ಲಿ ಒಂದುವಾರವಿದ್ದು ಇಸ್ಲಾಮಾಬಾದಿಗೆ ಪಯಣಿಸುವ ಯೋಜನೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಸುಮಾರು ನಲವತ್ತು ವರ್ಷಗಳ ಹಿಂದೆ ಸೌರಯುಗಾದಿಯ ಮುನ್ನಾ ದಿನ ಹುಟ್ಟೂರಿಗೆ ಬಂದಿದ್ದವರು, ಸಂಪ್ರದಾಯನಿಷ್ಠ ತಂದೆ ತಾಯಿಯರಲ್ಲಿ ತನ್ನ ಸಹೋದ್ಯೋಗಿ ಕಾರ್ನೇಲಿಯಾ ಎಂಬ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗುವ ನಿರ್ಣಯವನ್ನು ಹೇಳಿಕೊಂಡು, ತಂದೆಯ ಕೋಪಕ್ಕೆ ಕಾರಣರಾಗಿ, ಲಂಡನ್ನಿಗೆ ಹಿಂದಿರುಗಿದವರು. ಊರಿನ ಮನೆಯಲ್ಲಿ ಕಳಚಿಟ್ಟ ಕೋಟಿನ ನೆನಪಿಲ್ಲದವನಂತೆ’ ಹುಟ್ಟೂರಿನ ಋಣ ಕಡಿದುಕೊಂಡು ಪರದೇಶವನ್ನು ಸ್ವದೇಶವೆಂದು ಎಣಿಸಿಕೊಂಡಿದ್ದವರು ಸುದೀರ್ಘಕಾಲದ ಬಳಿಕ ಹುಟ್ಟೂರನ್ನು ನೆನಪಿಸಿಕೊಂಡಿದ್ದರು. ಶಂಭುಮಹಾಜನರು ವಿಮಾನಮಾರ್ಗವಾಗಿ ಲಂಡನ್‌ನಿಂದ ಮುಂಬೈ ಮೂಲಕ ಹುಟ್ಟೂರು ತಲುಪಿ, ಅಲ್ಲಿಂದ ವಿಮಾನಮೂಲಕ ಲಾಹೋರ್ ತಲುಪಲು ಯೋಜಿಸಿದ್ದರಾದರೂ ಕೊನೆಯ ಕ್ಷಣದಲ್ಲಿ ವಿಮಾನದ ಬದಲು ಟ್ರೈನಿನಲ್ಲಿ ಪಯಣಿಸುತ್ತಾರೆ. ನೂರು ವರ್ಷಗಳ ಹಿಂದೆ ಬ್ರಿಟಿಷ್ ಇಂಡಿಯಾದ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯದ ಮಂಗಳೂರಿನಿಂದ ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯದ ಪೇಶಾವರಗಳ ನಡುವೆ ಓಡುತ್ತಿದ್ದ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ಎಂಬ ಟ್ರೈನಿನ ಶತಮಾನದ ನೆನಪಿಗೆ ಎರಡೂ ದೇಶಗಳು ಪ್ರಾಯೋಗಿಕವಾಗಿ ಓಡಿಸಹೊರಟ ವಿಶೇಷ ರೈಲಿನಲ್ಲಿ ತಕ್ಷಶಿಲೆ ತಲುಪುವ ಅವಕಾಶವನ್ನು ಅವರು ಬಳಸಿಕೊಳ್ಳುತ್ತಾರೆ. ಚಾರಿತ್ರಿಕ ಸಂಗತಿಯನ್ನು ಬದಿಗಿಟ್ಟುನೋಡಿದರೆ ಈ ಜಿ. ಟಿ. ಎಕ್ಸ್‌ಪ್ರೆಸ್ ಕೆ ಪಿ ರಾಯರು ಹೇಳುವ ಕಥೆಯ ಮೂಲಸ್ರೋತಕ್ಕೊಂದು ವಿನಮ್ರ ರೂಪಕದಂತಿದೆ. ಕಿರು ಅವಧಿಯಲ್ಲಿ ಘಟಿಸುವ ಕತೆಗೆ ಸಮಾನಾಂತರವಾಗಿ ಶಂಭುಮಹಾಜನರು ನೆನಪಿಸಿಕೊಳ್ಳುವ ಅವರ ಪೂರ್ವಜರ ಕಥೆ ಹಾಗೂ ಅದಕ್ಕೆ ಪೂರಕವಾದ ಮೇಲ್ಪತ್ತೂರು ನಾರಾಯಣ ಭಟ್ಟತಿರಿಪಾದರ ಕಥೆ ಮತ್ತು ತಕ್ಷಶಿಲೆಯಲ್ಲಿ ಶಂಭುಮಹಾಜನರು ಕನಸುವ ೨೪೨೨ ವರ್ಷಗಳ ಹಿಂದಿನ ಕೌಟಿಲ್ಯರು ಸಂಪಾದಿಸಿದ ಮೂರುದಿನಗಳ ವಿಚಾರ ಸಂಕಿರಣದ ವರದಿಗಳು ಕಾದಂಬರಿಯ ಮೂರು ಭಾಗಗಳಲ್ಲಿ ಮಂಡಿಸಲ್ಪಟ್ಟಿವೆ. ಮೂರು ಪ್ರತ್ಯೇಕ ಕಾದಂಬರಿಗಳಾಗಬಲ್ಲ ಕಥನವನ್ನು ಜೊತೆಗೂಡಿಸುವ ಭಾಷೆಯ ಬಹುತ್ವದ ಕುರಿತ ಜಿಜ್ಞಾಸೆ ಮತ್ತು ಭಾಷಾ ವೈವಿದ್ಯದ ಅನನ್ಯತೆಯ ಕುರಿತ ಸಂವಾದದಂತಹ. ಡ್ರೈ ವಿಷಯವನ್ನು ಕೆ ಪಿ ರಾಯರು ಜಾಣ್ಮೆಯಿಂದಲೇ ಪ್ರಸ್ತುತಪಡಿಸುತ್ತಾರೆ. ಕಾದಂಬರಿಯ ಮೊದಲ ಭಾಗದಲ್ಲಿ ಕೆ ಪಿ ರಾಯರು ತಮ್ಮ ಹುಟ್ಟೂರಿಗೆ ಸನಿಹದ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿದ್ದ ಉದಾರಮನೋಭಾವದ ವಿದ್ಯಾದಾನ, ಅಕ್ಷರಪ್ರಜ್ಞೆ ತಮ್ಮವರೆಗೆ ಹರಿದುಬಂದು ತಮ್ಮಂತಹ ಹಲವರನ್ನು ಉದ್ಧರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಶಿಕ್ಷಣ ಕ್ರಮದ ವಿಶ್ಲೇಷಣೆಯನ್ನು ನಡೆಸುತ್ತಾರೆ. ‘ಕಂಬಳದ ಕಪ್ಪೆಗೆ ಆಕ್ಸ್’ಫರ್ಡಿನ ಜ್ಞಾನಸಮುದ್ರದಲ್ಲಿ ಮುಕ್ತವಾಗಿ ವಿಹರಿಸುವ ಅವಕಾಶ ಪ್ರಾಪ್ತವಾಗಲು ಕಾರಣವಾದ ಶಿಕ್ಷಣಕ್ರಮದಲ್ಲಿನ ಬದಲಾವಣೆಯ ಪ್ರಸ್ತಾಪಮಾಡುತ್ತಾ ಅವರಿಲ್ಲಿ ಪಂಜೆ ಮಂಗೇಶರಾಯರು ಆಗುಮಾಡಿಕೊಟ್ಟ ‘ಹಳೆಯ ಕನ್ನಡದ ಬೇರಿನ ಮೇಲೆ ಹೊಸ ಇಂಗ್ಲೀಷಿನ ಚಿಗುರಿನ ಕಸಿ’ಯನ್ನು ನೆನಪಿಸುತ್ತಾರೆ. ಕಾದಂಬರಿಯ ಎರಡನೆಯ ಭಾಗದಲ್ಲಿ ಜಿ.ಟಿ ಎಕ್ಸ್‌ಪ್ರೆಸ್ ಟ್ರೈನ್ ಪ್ರಯಾಣದ ಅನುಭವ ಒಂದು ಅನುಭೂತಿಗೆ ಕಾರಣವಾಗುವ ಕಥೆ ಬರುತ್ತದೆ. ಟ್ರೈನು ದಕ್ಷಿಣದಿಕ್ಕಿಗೆ ಹೋಗತೊಡಗಿದಾಗ ಪ್ರೊ. ಮಹಾಜನರಿಗೆ ತಮ್ಮ ಅಜ್ಜನ ಕಥೆಗಳ ನೆನಪಾಗುತ್ತದೆ. ಅವರ ಕಾಲದಲ್ಲಿ ಅಧ್ಯಯನವೇ ಜೀವನ ಎಂದುಕೊಂಡವರಿಗೆ ದಕ್ಷಿಣದ (ಕೇರಳದ) ಕಡೆಗೆ ಹೋಗುವುದು ಅನಿವಾರ್ಯವಾಗಿತ್ತು. ಅವರ ಮೊಮ್ಮಗನಾದ ತಾವು ಕಲಿಯಲು ಹೋಗಿದ್ದು ಉಳಿದ ದಿಕ್ಕುಗಳಿಗೇ ಆದರೂ ಈಗ ಉತ್ತರಕ್ಕೆ ದಕ್ಷಿಣದ ಮೂಲಕ ಹೋಗುವಂತಾಗಿದೆ. ಕಾದಂಬರಿಯ ಮೂರನೆಯ ಭಾಗ ವೈಚಾರಿಕ ದೃಷ್ಟಿಯಿಂದ ಮಹತ್ವವಾದುದು. ಅಲ್ಲಿ ಪಂಡಿತರ ವಾಕ್ಸಮರಗಳ ಮೌಖಿಕ ಪರಂಪರೆಯ ಅನಾಹುತಗಳ ಪ್ರಸ್ತಾಪ ಬರುತ್ತದೆ. ‘ಸೋತವನ ವಿದ್ವತ್ತಿಗೆ ಬೆಲೆಕೊಡದೇ ಪರಾಜಿತನನ್ನು ಅವಮಾನಿಸಿ ದಂಡಿಸುವುದು ಕೊನೆಯಾಗಬೇಕು. ಸಮರದ ಬದಲಿಗೆ ಸಹಮತ, ವಾಗ್ವಾದದ ಬದಲು ಸಂವಾದ ಸಾಧ್ಯವಾಗಬೇಕು. ಗುಣಗಳು ಉಳಿಯಬೇಕು. ದೋಷಗಳನ್ನು ಸುಧಾರಿಸುವ ಅವಕಾಶವಿರಬೇಕು’ ಎನ್ನುವ ತರ್ಕ ಇಲ್ಲಿ ಕಾಣಿಸುತ್ತದೆ. ಅಗ್ನಿಪೂಜಕ ವೈದಿಕರ ಭಾಷೆ ಮತ್ತು ಅಲೆಮಾರಿ ಕಿರಾತಕರ ಭಾಷಾ ವೈವಿದ್ಯಗಳ ಹೋಲಿಕೆಯ ಮೂಲಕ ‘ಜೀವನಶೈಲಿಯು ಭಾಷೆಯ ಬಂಧವನ್ನು ನಿಶ್ಚಯಿಸುತ್ತದೆ’ ಎಂಬ ತರ್ಕವೂ ಇಲ್ಲಿ ಬರುತ್ತದೆ. ಭಾಷಾವೈವಿಧ್ಯದ ಅನನ್ಯತೆಯ ವಿಚಾರವೂ ಪ್ರಸ್ತಾಪಿತವಾಗುತ್ತದೆ. ಮನನೀಯವಾದ ಮಾತೊಂದು ಈ ಭಾಗಕ್ಕೆ ಶೋಭೆ ಕೊಡುತ್ತದೆ, "ನಮ್ಮ ಸಂಪ್ರದಾಯದಲ್ಲಿ ನಾವು ಯಾವುದನ್ನೂ ಅಂತಿಮ ಉತ್ತರ ಎಂದು ಭಾವಿಸುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಮಾತುಗಳು ಬದಲಾಗುವಂತೆ ಉತ್ತರಗಳೂ ಬದಲಾಗುತ್ತವೆ. ನಾಳೆ ಇದೇ ವಿಷಯ ಮಾತನಾಡಿ ಎಂದರೆ ನಮ್ಮ ಕತೆ ಬೇರೆಯೇ ಇರಬಹುದು. ಭವಿಷ್ಯದಲ್ಲಿ ಏನಿರಬಹುದು ಎಂಬುದು ನಮಗೂ ತಿಳಿದಿಲ್ಲ. ಇದೇ ಮಾನವ ಸೃಷ್ಟಿಯ ವೈಚಿತ್ರ್ಯ ಮತ್ತು ಸೌಂದರ್ಯ." ಆದರೆ ಇಲ್ಲಿ ಕಾದಂಬರಿಯು ಕಥನ ಸ್ವರೂಪದಿಂದ ಪ್ರಬಂಧ ಸ್ವರೂಪದತ್ತ ವಾಲಿಕೊಳ್ಳುವ ಅಪಾಯವನ್ನು ಅಲ್ಲಗೆಳೆಯುವಂತಿಲ್ಲ. ಒಂದು ಗಹನವಾದ ಸಂಪ್ರಬಂಧದಂತಿರುವ ಇಲ್ಲಿನ ವೈಚಾರಿಕ ವಿಶ್ಲೇಷಣೆಗಳ ನಡುವೆ ಕೆ ಪಿ ರಾಯರು ನೆನಪಿಸಿಕೊಳ್ಳುವ ಹಲವು ತಮಾಶೆಯ ಸಂಗತಿಗಳು ಗಂಭೀರಸ್ವಭಾವದ ಲೇಖಕರೊಳಗಿನ ತುಂಟತನವನ್ನು ಪರಿಚಯಿಸುತ್ತವೆ. ಉದಾಹರಣೆಗೆ: (೧) ಪ್ರತಿದಿನ ಸಂಜೆ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸಿದ ಮೇಲೆ ಮನೆಯವರೆಲ್ಲರೂ ಮನೆಮಾತಿನಲ್ಲಿ ತಮ್ಮತಮ್ಮ ಅಹವಾಲುಗಳನ್ನು ದೇವರಿಗೆ ಸಾದರಪಡಿಸುವುದು ನಿತ್ಯಕರ್ಮವಾಗಿತ್ತು. ಅವರ ನೆರಮನೆಯ ಪ್ರಭುಗಳ ಪುಟ್ಟಮಗಳು, ಶಂಭುವಿನ ಮನೆದೇವರ ಭಾಷೆ ಬೇರೆಯಾದದ್ದರಿಂದ, ತನ್ನಮನೆಮಾತು ಕೊಂಕಣಿಯಲ್ಲಿದ್ದರೆ ಈ ದೇವರಿಗೆ ತಿಳಿಯುವುದೋ ಇಲ್ಲವೋ ಎಂಬ ಸಂಶಯದಿಂದ ತುಳುವಿನಲ್ಲೇ ಅಹವಾಲು ಸಲ್ಲಿಸುತ್ತಿದ್ದಳು. ದೇವರಿಗೆ ಎಲ್ಲಾ ಭಾಷೆಗಳು ತಿಳಿಯುವುದೇ ಇಲ್ಲವೇ ಎಂಬ ಶಂಭುವಿನ ಸಂಶಯಕ್ಕೆ ಇನ್ನೂ ಸಮಾಧಾನ ದೊರಕಿಲ್ಲ. (೨) ಶಂಭುಮಹಾರಾಜರ ಹೆಂಡತಿ ತನ್ನ ಮಾತೃಭಾಷೆ ರೊಮಾನಿಯನ್ ನಲ್ಲಿ ನಾಯಿ ವಿಕ್ಟರ್ ನ ತಾಯಿಯ ಜೊತೆ ಮಾತನಾಡುತ್ತಿದ್ದಳು. ಈಗ ನಾಯಿಮರಿ ವಿಕ್ಟರ್, ರೊಮಾನಿಯನ್ ಭಾಷೆಯಲ್ಲಿ ‘ತಿನ್ನು ಮುದ್ದು ಹುಡುಗಾ ತಿನ್ನು’ ಎಂದರೆ ಮಾತ್ರ ಊಟಮಾಡುತ್ತದೆ. ವಿಕ್ಟರನ ಮಾತೃಭಾಷೆ ರೊಮಾನಿಯನ್! (೩) ಪ್ರೊಫೆಸರರನ್ನು ಶಾಲೆಗೆ ಸೇರಿಸುವಾಗ ಅವರ ಅಪ್ಪ ಶಾಲೆಯ ರಿಜಿಸ್ಟರಿನಲ್ಲಿ ಮಾತೃಭಾಷೆ ಕನ್ನಡ ಎಂದು ಬರೆಸಿದ್ದರು. ಆದರೆ ತಾಯಿ ಕಾತ್ಯಾಯಿನಿಗೆ ತಿಳಿಯುತ್ತಿದ್ದ ಭಾಷೆ ಮರಾಠಿ ಒಂದೇ. ಭಾಷೆಯ ಕುರಿತು ಕೆ ಪಿ ರಾಯರು ಒಂದು ಮನೋಜ್ಞವಾದ ಸಂದೇಶವನ್ನು ನೀಡುತ್ತಾರೆ. "ವಿದ್ಯೆ ಮತ್ತು ಜ್ಞಾನಾರ್ಜನೆ ಎಲ್ಲರಿಗೂ ಎಟುಕಬಲ್ಲ ಸೊತ್ತಾಗುತ್ತಿರುವ ಈ ಕಾಲದಲ್ಲಿ... ವಸ್ತುವಿನ ವಿಷಯದ ಅರಿವಾಗಬೇಕಾದರೆ ಹಿಂದಿನವರಂತೆ ವಿವರವಾದ ಭಾಷ್ಯಗಳನ್ನೋ ಟೀಕೆಗಳನ್ನೋ ಟಿಪ್ಪಣಿಗಳನ್ನೋ ಅನುಸರಿಸುವ ಮುನ್ನ ವಸ್ತುವಿನ ಮೇಲೆ ಪ್ರೀತಿ ಹುಟ್ಟಿಸುವ ಮತ್ತು ಕುತೂಹಲಮೂಡಿಸುವ ಪ್ರವೇಶಿಕೆಗಳನ್ನು ರಚಿಸಬೇಕಾಗುತ್ತದೆ... ಅಗತ್ಯಕ್ಕಿಂತ ಹೆಚ್ಚು ಶುಷ್ಕ ಪಾಂಡಿತ್ಯದಲ್ಲಿ ತಲೆಕೆಡಿಸಿಕೊಳ್ಳದೆ ಆಹ್ಲಾದಕರವಾದ ಭಾಷೆಯಲ್ಲಿ ಕಾವ್ಯಾತ್ಮಕವಾಗಿ ಅದು ರಚನೆಯಾಗಬೇಕೆಂದು ನನ್ನ ಬಯಕೆ." ಅದು ಈ ಕಾದಂಬರಿಯಲ್ಲಿ ಬಹುತೇಕ ಸಾಧ್ಯವೂ ಆಗಿದೆ. ***

No comments:

Post a Comment