Powered By Blogger

Saturday, October 3, 2020

ಶ್ಯಾಮಲಾ ಮಾಧವ - ಸಫಾ [ ಪ್ರಸಾದ್ ನಾಯ್ಕ್ ] SAFING SAFA -WARIS DIRIE

 ಸಫಾ

_____
ವಾರಿಸ್ ಡಿರಿ ಅವರ 'ಸೇವಿಂಗ್ ಸಫಾ' ಕೃತಿಯನ್ನು ಅನುವಾದಿಸಿದ ಪ್ರಸಾದ್ ನಾಯ್ಕ್ ಅವರ ಮಾತು -
"ಹೆಣ್ಣುಮಕ್ಕಳ ದೇಹದಿಂದ ಹಿಡಿದು ಅವರ ಬದುಕು ಹೇಗಿರಬೇಕೆಂದು ಮತ್ಯಾರೋ ನಿರ್ಧರಿಸುತ್ತಾರೆ. ಈ ವಿಚಾರದ ಬಗ್ಗೆ ತಮ್ಮದೇ ಅಂತಿಮ ನಿರ್ಧಾರವೆಂದು ಹಕ್ಕು ಸಾಧಿಸಲು ಪುರುಷನೂ, ಸಮಾಜ, ಧರ್ಮ, ಸಂಪ್ರದಾಯಗಳೂ ಸ್ಪರ್ಧೆಗೆ ಬಿದ್ದಂತೆ ಓಡೋಡಿ ಬರುತ್ತಾರೆ. ಇದು ಹೇಗಿದೆಯೆಂದರೆ, ಅವಳ ಬದುಕಿನ ಮೇಲೆ ಎಲ್ಲರದೂ ಹಕ್ಕಿದೆ, ಅವಳೊಬ್ಬಳನ್ನು ಬಿಟ್ಟು."
ಆಫ್ರಿಕಾ ಭೂಭಾಗದಲ್ಲಿ ಪ್ರಚಲಿತವಿರುವ, ಅಮಾನುಷವಾದ ಸ್ತ್ರೀ ಗುಪ್ತಾಂಗ ಛೇದನಕ್ಕೊಳಗಾಗಿ ದೈಹಿಕ, ಮಾನಸಿಕ, ಭಾವನಾತ್ಮಕ ನರಳಾಟವನ್ನನುಭವಿಸಿದ ತನ್ನಂತಹ ಅಸಂಖ್ಯಾತ ಹೆಣ್ಮಕ್ಕಳಿಗಾಗಿ ಹಾಗೂ ಮುಂದೆ ಯಾವೊಬ್ಬ ಹೆಣ್ಮಗುವೂ ಇಂತಹ ಅಸಹನೀಯ ನೋವಿನಿಂದ ನರಳದಂತೆ ಡೆಸರ್ಟ್ ಫ್ಲವರ್ ಫೌಂಡೇಶನ್ ಸಂಸ್ಥಾಪಿಸಿದಾಕೆ, ಜಗತ್ಪ್ರಸಿದ್ಧ ರೂಪದರ್ಶಿ ವಾರಿಸ್ ಡಿರಿ..
ಎಫ್.ಜಿ.ಎಮ್. - ಫೀಮೇಲ್ ಜೆನಿಟಲ್ ಮ್ಯುಟಿಲೇಶನ್ ವಿರುದ್ಧ ಜಗದಾದ್ಯಂತ ಚಳುವಳಿ ಹೂಡಿ ತನ್ನ ಯೋಜನೆಯಲ್ಲಿ ಬಧ್ಧಕಂಕಣಳಾದಾಕೆ.
ಪ್ರೀತಿಯ ವಾರಿಸ್ ಡಿರೀ, - ಎಂದು ಜಿಬೌಟಿ ಯಿಂದ ಪುಟ್ಟ ಸಫಾ ಬರೆವ ಆಕರ್ಷಕ ಪತ್ರದೊಂದಿಗೆ ತೆರೆದುಕೊಳ್ಳುವ ಕಥನವಿದು. ಸೇವಿಂಗ್ ಸಫಾ' ಎಂಬ ಶೀರ್ಷಿಕೆಯಲ್ಲಿ 1998ರಲ್ಲಿ ಬೆಳಕು ಕಂಡ ವಾರಿಸ್ ಡಿರಿಯ ಕಥನ, ಜಗದಾದ್ಯಂತ ಜನರನ್ನು ಸೆಳೆದು 2009ರಲ್ಲಿ ಡೆಸರ್ಟ್ ಫ್ಲವರ್ ಎಂಬ ಶೀರ್ಷಿಕೆಯೊಂದಿಗೆ ಚಲನಚಿತ್ರವಾಗಿ ಜಗತ್ಪ್ರಸಿದ್ಧವಾಯ್ತು. ಜೀವನದುದ್ದಕ್ಕೂ ವಾರಿಸ್ ನಡೆದ ಹೋರಾಟದ ಹಾದಿ ಅಪ್ರತಿಮವಾದುದು. ಚಿತ್ರದಲ್ಲಿ ಬಾಲ್ಯದಲ್ಲಿ ತಾನು ಅನುಭವಿಸಿದ ಆ ಅಮಾನುಷ ಹಿಂಸೆಯನ್ನು ಬಿಂಬಿಸಿದ ಸಫಾ ಎಂಬ ಬಲ್ಬಲಾದ ಆ ಪುಟ್ಟ ಬಾಲೆಯನ್ನು ತಾನು ರಕ್ಷಿಸಿದಂತೇ ಜಗತ್ತಿನ ಅಂತಹ ಎಲ್ಲ ಬಾಲೆಯರನ್ನೂ ರಕ್ಷಿಸಿ, ಶಿಕ್ಷಣದ ಮೂಲಕ ಅವರು ಹಾಗೂ ಅವರ ಕುಟುಂಬದ ಬಾಳನ್ನು ಬೆಳಗುವ ತನ್ನ ಧ್ಯೇಯದ ಸಾಕಾರವನ್ನೇ ಉಸಿರಾಡುವ ವಾರಿಸ್ ಡಿರಿಯ ಪ್ರಚ್ಛನ್ನ ವಿಚಾರದೀಪ್ತಿಯ ದೃಶ್ಯ ಕಾವ್ಯ, ಈ ಸಫಾ.
ತನ್ನ ಬಾಲ್ಯವನ್ನು ಚಿತ್ರದಲ್ಲಿ ಬಿಂಬಿಸಿದ ಸಫಾಗೆ ಈ ಎಫ್.ಜಿ.ಎಮ್.ಪ್ರಕ್ರಿಯೆಯನ್ನು ಎಂದಿಗೂ ಮಾಡುವುದಿಲ್ಲವೆಂಬ ಒಪ್ಪಂದಕ್ಕೆ ಪ್ರತಿಯಾಗಿ ಸಫಾಳ ಕುಟುಂಬದ ಸಂಪೂರ್ಣ ಏಳ್ಗೆಯ ಹೊಣೆಯನ್ನೂ ಹೊತ್ತ ಸಂಸ್ಥೆ, ಡೆಸರ್ಟ್ ಫ್ಲವರ್ ಫೌಂಡೇಶನ್.
ಪ್ರಥಮ ಅಧ್ಯಾಯದಲ್ಲಿ ಆ ಕುಟುಂಬವು ತನ್ನ ಮಾತನ್ನು ಉಳಿಸಿಕೊಳ್ಳುವುದೇ, ಇಲ್ಲವೇ ಎಂಬ ಸಂಶಯ ಕಾಡಿದಾಗ, ಅದರ ಪರಿಹಾರಕ್ಕಾಗಿ , ತಾನು ಭಾಗವಹಿಸಿದ್ದ ಯುರೋಪಿಯನ್ ಕಮಿಶನ್ ಸಮ್ಮೇಳನ ಮುಗಿದೊಡನೆ ಜಿಬೌಟಿ ಗೆ ಹೊರಡುವ ವಾರಿಸ್. ಮನದ ಪ್ರತಿಫಲನ ದಂತೆ ಅವಳು ಕಾಣುವ ರೋಚಕ ಕನಸಿನ ವರ್ಣನೆ. ಹಿಂದೂ ಮಹಾಸಾಗರದ ಹವಳದ್ವೀಪದ ಸುತ್ತ ಸಫಾಳೊಡನೆ ಕಡಲಲ್ಲಿ ಈಜುತ್ತಾ, ಕವಿದು ಬರುವ ಕಾರ್ಮೋಡ,ಗುಡುಗು, ಮಿಂಚುಗಳ ನಡುವೆ ಪುಟ್ಟ ಸಫಾ ಭಯಪಟ್ಟಂತೆ, ಆ ಕಡಲ ಚಿಪ್ಪುಗಳ ಸುಂದರ ಮಳಲ ತೀರದ ಗುಡಿಸಲಲ್ಲಿ ಸಫಾ ಅಪಾಯಕ್ಕೆ ಸಿಗುವ ಕನಸು, ಕೃತಿಯ ಉದ್ದಕ್ಕೂ ವಾರಿಸ್ ಳ ಮನದ ಕಳವಳ, ತೊಳಲಾಟದ ಚಿತ್ರವೇ ಆಗಿದೆ.
ಧರ್ಮ, ಸಮಾಜ, ಸಂಪ್ರದಾಯದ ಹೆಸರಲ್ಲಿ ತಮ್ಮ ಕರುಳ ಕುಡಿಯನ್ನೇ ಕಸಾಯಿಖಾನೆಗೆ ಕಳುಹಿಸುವ ಅಮ್ಮಂದಿರನ್ನು ಕಂಡು ತನಗಾಗುವ ಆತಂಕವನ್ನು ಹೇಳಿಕೊಂಡಿದ್ದಾರೆ , ವಾರಿಸ್.
ಗೇಟ್ ಆಫ್ ಟಿಯರ್ಸ್ ಜಲಸಂಧಿಯ ಮೇಲಿರುವ ಜಿಬೌಟಿಯ ಜಾಗತಿಕ ಮಹತ್ವದ ಚಿತ್ರಣ, ಮರುಭೂಮಿಯ ಉರಿಬಿಸಿಲು, ಧೂಳಿನ ಪಯಣದ ಚಿತ್ರಣ, ದಾರಿಯಲ್ಲಿ ಕಡು ಬಡತನದ ನಡುವೆ ಎದುರಾಗುವ ಮಿಲಿಟರಿ ಕಾವಲಿನ ಚಿತ್ರಣ, ವಾರಿಸ್ ಳ ಸಹಯಾನಿಗಳಾದ ಫರ್ದೌಝಾ, ಜೋನಾ, ಲಿಂಡಾರ ಉತ್ಕೃಷ್ಟ ನಡೆನುಡಿಯ ಚಿತ್ರಣ. ಸಫಾಳ ತಂದೆ ಇಡ್ರಿಸ್, ತಾಯಿ ಫೋಜಿಯಾ, ಬಂಧುಗಳಿಂದ ತುಂಬಿದ ಮನೆಯ ಚಿತ್ರಣ. ಇಡ್ರಿಸ್ ನ ಧಾರ್ಷ್ಟ್ಯ, ಲೋಭ, ದಬ್ಬಾಳಿಕೆಯ ಜೊತೆಗೇ ಅವನ ಹೃದಯದ ಪ್ರೀತಿ, ಮಾರ್ದವದ ಚಿತ್ರಣ ಕೃತಿಯಲ್ಲಿ ಗಾಢವಾಗಿ ಬಿಂಬಿತವಾಗಿದೆ.
ವಾರಿಸ್ ಹೆಸರಿಗೇ ಪುಟಿದು ಕುಣಿಯುವ, ಅವಳ ಮೇಲೆ ಪ್ರೀತಿಯ ಹೂಮಳೆ ಸುರಿಸುವ, ಮರುಭೂಮಿಯ ಹೂ ಎಂದೇ ವಾರಿಸ್ ಕರೆವ ಪುಟ್ಟ ಸಫಾ ಗೆಲ್ಲದ ಹೃದಯವೇ ಇರಲಿಕ್ಕಿಲ್ಲ.
'ದುಂಡನೆಯ ಕಿತ್ತಲೆಯಂತೆ ಕಾಣುತ್ತಿದ್ದ ಸೂರ್ಯದೇವನು ಬೆಳಕಿನ ರಥವೇರಿ ಹೊರಟಾಗಿತ್ತು. ಇನ್ನು ಆ ಕೇಸರಿ ಕಿರಣಗಳಿಂದ ಹೊಳೆಯುತ್ತಿದ್ದ ಹಿಂದೂ ಮಹಾಸಾಗರದ ಅಲೆಗಳನ್ನು ದಿಟ್ಟಿಸುತ್ತಿದ್ದಾಗ ನನ್ನ ಹೃದಯವು ಭಾರವಾಗಿತ್ತು.', ಎಂಬ ಪ್ರಕೃತಿ ವರ್ಣನೆ! "ಜಿಬೌಟಿಯ ದಿಗಂತದಿಂದ ಸೂರ್ಯದೇವನು ಮೆಲ್ಲನೆ ಉದಯವಾಗುತ್ತಿದ್ದರೆ, ಇತ್ತ ಆತ್ಮವಿಶ್ವಾಸವೆಂಬ ಪ್ರಖರ ಭಾಸ್ಕರನು ಆಗಲೇ ನನ್ನ ಹೃದಯದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದ!" ಈ ನಿರೂಪಣೆ ಓದುವ ಹೃದಯಗಳನ್ನೂ ಬೆಳಗಬಲ್ಲುದು.
ಆಸ್ಟ್ರಿಯಾದ ಗಿರಿ, ಝರಿಗಳ ಮನೋಹರ ಚಿತ್ರಣವೂ ಇಲ್ಲಿದೆ.
"ಎಫ್.ಜಿ.ಎಮ್.ಎಂಬ ರಕ್ತಪಿಶಾಚಿಯ ಭಯದ ನೆರಳಲ್ಲಿ ದಿನಗಳನ್ನು ದೂಡುತ್ತಿರುವ ಎಲ್ಲ ಹೆಣ್ಣು ಮಕ್ಕಳಿಗೂ ನಿನ್ನ ಮಗಳು ಆದರ್ಶಪ್ರಾಯಳೂ, ದಾರಿದೀಪವೂ ಆಗಲಿ. ವಿಶ್ವದ ಮೂಲೆಮೂಲೆಗೂ ಸಫಾಳ ಜೀವನವು ಒಂದು ಮಾದರಿಯಾಗಲಿ", ಎಂದು ಇಡ್ರಿಸ್ ನೊಡನೆ ಹೇಳುವ ವಾರಿಸ್ ಡಿರಿಯ ಮಾತು, ಈ ಕೃತಿಯ ಸಾರಸರ್ವಸ್ವ!
ಪ್ರಸಾದ್ ನಾಯ್ಕ್ ಅನುವಾದವನ್ನು ತುಂಬಾ ಮೆಚ್ಚಿರುವೆ. ಕೃತಿಯಲ್ಲಿ ಬಾರಿ ಬಾರಿಗೂ ಪ್ರಯೋಗವಾಗಿರುವ ಮುಖ್ಯವಿಷಯಕವಾದ ಪದಪ್ರಯೋಗದ ಬದಲಿಗೆ ಸ್ತ್ರೀ ಗುಪ್ತಾಂಗ ಛೇದನವೆಂಬ ಪದ ನನ್ನ ಆಯ್ಕೆಯಾಗಿರುತ್ತಿತ್ತು, ಎಂದಷ್ಟೇ ಸೂಚಿಸ ಬಯಸುವೆ.
ಪ್ರಸಾದ್ ಅವರನ್ನು ಅಭಿನಂದಿಸುತ್ತಾ, ಅವರಿಂದ ಉತ್ತಮೋತ್ತಮ ಕೃತಿಗಳನೇಕ ಬರಲೆಂದು ಆಶಿಸುತ್ತೇನೆ.
Image may contain: 1 person, closeup, text that says 'WARIS DIRIE Saving Safa ಸಫಾ ಕನ್ನಡಕ್ಕೆ: ಪ್ರಸಾದ್ ನಾಯ್ಕ್'
Girija Shastry, Sukanya Kalasa and 13 others
8 Comments
2 Shares
Like
Comment
Share

Comments

View 3 more commentsKamala Hemmige
  • 1
2astS2ponsorgdehd
 

No comments:

Post a Comment