Powered By Blogger

Sunday, October 25, 2020

ಗಿರಿಜಾ ಶಾಸ್ತ್ರಿ - " ಕೊಳದ ಮೇಲಿನ ಗಾಳಿ " { ಎಮ್. ಆರ್. ಕಮಲಾ -ಪು. ತಿ. ನ ಕವಿತೆಗಳ ಓದಿನ ಪರಿಣಾಮ ಪ್ರಬಂಧಗಳು }GIRIJA SHASTRI / M. R. KAMALA

 ಕಟು ಮಧುರದ ಗೀತೆ......

ಕೊಳದ ಮೇಲೆ ಬೀಸಿ ಬರುವ ಗಾಳಿಯೆಂದರೆ ತಂಪಾದ ಆಹ್ಲಾದಕರ ಗಾಳಿಯೆಂದೇ ಅರ್ಥ. ಆದರೆ ಅದು ಒಮ್ಮೊಮ್ಮೆ ಮಧ್ಯಾಹ್ನದ ಬಿರುಬಿಸಿಲಿನಲ್ಲೂ ಬೀಸಬಹುದು. ಆಗ ಆ ಗಾಳಿಗೆ ಬಿಸಿಲ ಧಗೆ ಇರುವುದು ಸಹಜ. ಜೀವನ ಎಂದರೆ ಕೇವಲ ಸುಖದ ಆಖ್ಯಾನ ಮಾತ್ರವಲ್ಲ. ಕಷ್ಟದ ಕಟು ಆಖ್ಯಾನವೂ ಹೌದು.
ಪುತಿನ ಅವರ ಕವಿತೆಗಳಲ್ಲಿ ಕಾಣುವ ಇಂತಹ ಕಟು ಮಧುರದ ಆಖ್ಯಾನದ ಜೊತೆಗೆ ಕಮಲಾ ಅನುಸಂಧಾನ ಮಾಡಿದ್ದಾರೆ.
ಪು.ತಿ.ನ ಎಂದ ಕೂಡಲೇ ನನ್ನ ನೆನಪಿನ ಬುತ್ತಿಯಿಂದ ಹೊರಗೆ ಇಣುಕುವುದು ‘ಬಹನು ಬರುತಿಹನವ್ವ ಬಂದನು ಬಂದರೇ ಗತಿ ಕಾಣೆನೇ’ ಎನ್ನುವ ಪ್ರೇಮಿಯೊಬ್ಬಳ “ಪ್ರತೀಕ್ಷೆ”ಯ ಸಾಲುಗಳು, "ಈಚಲು ಮರದ ಕೆಳಗಿ”ನ ಪ್ರಬಂಧಗಳು, ಸಾಂಪ್ರದಾಯಕ ನಿಲುವಿನಲ್ಲೂ ಒಡಮೂಡಿದ “ಅಹಲ್ಯೆ”ಯ ಬಗೆಗಿನ ಮಾನವೀಯ ಕಳಕಳಿ. ಇವುಗಳಲ್ಲಿ ಕಾಣುವ ದೃಷ್ಟಿಕೋನವೇ ಪು.ತಿ.ನ ಅವರ ಈ ಕವಿತೆಗಳಲ್ಲಿಯೂ ಬಿಡಿ ಬಿಡಿಯಾಗಿ ಕೋದುಕೊಂಡಿವೆ.
ಕೊಳದ ಮೇಲಿನ ಗಾಳಿ ಬೀಸುವಾಗ ಇಕ್ಕೆಲಗಳ ಮರಗಿಡ ಬಳ್ಳಿಗಳ ಘಮಲನ್ನೂ ಹೊತ್ತು ತರುವುದುಂಟು. ಹಾಗೆಯೇ ಪು.ತಿ.ನ ಅವರ ಕವಿತೆಗಳು ಬದುಕಿನ ಅನೇಕ ಕಷ್ಟ ಸುಖದ ಬಣ್ಣ ವಾಸನೆಗಳನ್ನು ಓದುಗರಿಗೆ ದಾಟಿಸುವ ಬಗೆಯನ್ನು ಲೇಖಕಿ ತಮ್ಮ ವೈಯಕ್ತಿಕ ಬದುಕಿನ ಆಖ್ಯಾನದ ಸಣ್ಣ ಪುಟ್ಟ ಘಟನೆಗಳೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾ, ಕವಿತೆಯನ್ನು ವಿಸ್ತರಿಸುವುದು, ಕವಿತೆಯನ್ನು ಅರ್ಥೈಸುವ ಹೊಸ ಬಗೆಯಾಗಿದೆ. ಈ ಹೊಸ ಬಗೆ ಇನ್ನಷ್ಟೇ ಸಾಹಿತ್ಯ ಲೋಕದಲ್ಲಿ ಸ್ವೀಕೃತಗೊಂಡು ಚಲಾವಣೆಗೆ ಬರಬೇಕಾಗಿದೆ. ಅದಕ್ಕೆ ಕಾಯಬೇಕಾಗಿದೆ.
ಇದು ಲೇಖಕಿಯ ವಸ್ತುನಿಷ್ಠ ಬರಹಗಳ ಮೇಲೆ ಪು.ತಿ.ನ ಕವಿತೆಗಳು ಬೀರಿದ ಪ್ರಭಾವಕ್ಕೆ ಸಾಕ್ಷಿಯೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಒಂದೆರೆಡು ಕವಿತೆಗಳನ್ನು ನೋಡಬಹುದು.
“ಪ್ರತೀಕ್ಷೆ” ಕವಿತೆಯ ಪ್ರೇಮಿಯ ತಲ್ಲಣ “ಅಹಲ್ಯೆ” ಗೀತನಾಟಕದಲ್ಲಿ ಮುಂದುವರಿದಿದೆ. ಅದರ ಒಂದು ತುಣುಕೇ "ಹೆಣ್ಣೊಬ್ಬಳ ಕಣಸು" ಕವಿತೆಯಲ್ಲಿ ಪ್ರತಿಫಲನಗೊಂಡಿದೆ. ಬದುಕಿನ ಪಯಣದ ಯಾವುದೋ ತಿರುವಿನಲ್ಲಿ ಕಾಣುವ ಒಂದು ಮುಖ ಗಕ್ಕನೆ ಹಿಡಿದು ನಿಲ್ಲಿಸುವುದುಂಟು. ಅದರ ಆಕರ್ಷಣೆ, ಸೆಳವಿಗೆ ಹೆಸರಿಲ್ಲ. ಅದು ಆ ಕ್ಷಣದ ಸತ್ಯವಷ್ಟೇ. ಅದಕ್ಕೆ ಭವಿಷ್ಯವಿಲ್ಲ. ಒಂದು ಕ್ಷಣ ಮಿಂಚಿ ಮಾಯವಾಗುವಂತಹುದು. ಹೀಗೆ ಮಿಂಚಿ ಮಾಯವಾಗುವ ಆಕರ್ಷಣೆಯನ್ನು ಹೀನವಾಗಿ ನೋಡುವುದೇಕೇ? ಎನ್ನುವುದು ಕವಿಯ ಅಭಿಪ್ರಾಯ. ಲೇಖಕಿ ಇದನ್ನು ಅನುಸಂಧಾನ ಮಾಡಿರುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಎಲ್ಲರ ಬದುಕಿನಲ್ಲಿಯೂ ಹಾದು ಹೋಗುವ ಈ ಗಳಿಗೆಗಳು ತನ್ನ ಬದುಕಿನಲ್ಲಿಯೂ ಹಾದು ಹೋಗಿವೆ ಎಂದು ಹೇಳುವುದಕ್ಕೆ ಧೈರ್ಯ ಬೇಕು. ಕವಿಯ ಸಾಂಪ್ರದಾಯಕ ಮನಸ್ಸಿನಲ್ಲಿಯೂ ಬದುಕಿನ ವಾಸ್ತವವನ್ನು ಸಹಜವೆನ್ನುವಂತೆ ಒಪ್ಪಿಕೊಳ್ಳುವ ಒಂದು ಔದಾರ್ಯದ ಸೆಲೆ ಇರುವಂತೆ, ಲೇಖಕಿಯಲ್ಲಿಯೂ ಇದೆ. ಸಾಂಪ್ರದಾಯಕತೆಯಲ್ಲಿ ಕುಡಿಯೊಡೆಯುವ ಆಧುನಿಕತೆ ಇದು. ಇದೇ ಔದಾರ್ಯ"ಪತಿತ ಪಾವನ" ಕವಿತೆಯಲ್ಲಿಯೂ ಕಂಡು ಬರುತ್ತದೆ. ರಾಮನನ್ನು ಪತಿತ ಪಾವನ ಎಂದು ಪೂಜಿಸುವ ಜನರೇ ಯಾವುದೋ ಅನಿವಾರ್ಯ ಕಾರಣಕ್ಕೆ ಕಾಲು ಜಾರಿದ ಹೆಣ್ಣನ್ನು ಪತಿತೆ ಎಂದು ಅವಳನ್ನು ಜನ ಹೀನಾಯವಾಗಿ ಕಾಣುವ ಅವರ ಪೂರ್ವಾಗ್ರಹವನ್ನು ಕವಿ ಬಯಲಿಗೆಳೆದರೆ ಲೇಖಕಿ ಇಂತಹ ಶುದ್ಧತೆಯ ಅಗತ್ಯ ವಿದೆಯೇ? ಇದು ಅಂತರಂಗಕ್ಕೆ ಸಂಬಂಧಿಸಿದ್ದು ಎನ್ನುತ್ತಾ ಹೆಣ್ಣುಮಕ್ಕಳು ಬದುಕನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿತುಕೊಳ್ಳಬೇಕು ಎಂದು ತಮ್ಮ ಊರಿನ ಪಂಚಾಯತಿಯೊಂದರಲ್ಲಿ ಹೆಣ್ಣು ಮಗಳೊಬ್ಬಳು "ನಾನು ಮುಡಿದ ಮಲ್ಲಿಗೆಯನ್ನು ಅವಳೊಂದು ಗಳಿಗೆ ಮುಡಿದಿದ್ದಾಳೆ ನಿಮಗ್ಯಾಕೆ" ಎಂದು ಗದರಿಸಿ ಓಡಿಸುವ ಉಲ್ಲೇಖ ಮಾಡುತ್ತಾರೆ.
"ರಂಗವಲ್ಲಿ" ಕವಿತೆಯಲ್ಲಿ ಮುಪ್ಪಿನ ಮುದುಕಿಯೊಬ್ಬಳು ಬೆಟ್ಟಹತ್ತಿ ದೇವಾಲಯದ ಮುಂದೆ ರಂಗೋಲಿ ಬಿಡಿಸುತ್ತಾಳೆ. ಇಲ್ಲಿ ಅವಳ ಶ್ರದ್ಧೆ ಭಕ್ತಿ ಯನ್ನು ಕವಿ ಬಯಲು ಮಾಡಿದ್ದರೆ ಲೇಖಕಿ ಮನೆಯವರ ತಿರಸ್ಕಾರಕ್ಕೆ ಒಳಗಾಗಿರುವ ಇಂದಿನ ವೃದ್ಧರ ಸ್ಥಿತಿಯ ಬಗೆಗೆ ಗಮನ ಸೆಳೆಯುತ್ತಾರೆ.
ಹೀಗೆ ಪು.ತಿ.ನ ಅವರ ಕವಿತೆಗಳನ್ನು ಒಂದು ನೆಪವಾಗಿಟ್ಟುಕೊಂಡು ಲೇಖಕಿ ಅವುಗಳ ಓದಿನ ಪರಿಣಾಮದ ಜೊತೆಗೆ ತಮ್ಮ ಬದುಕಿನ ಅನುಭವಗಳನ್ನು ಒರೆಹಚ್ಚಿ ನೋಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಒಂದು ರೀತಿಯ ಕೈಪಿಡಿಯೂ ಆಗಿದೆ. ಕಮಲಾ ಅವರಿಗೆ . ಅಭನಂದನೆಗಳು
You, Girija Shastry, Anupama Prasad and 131 others

No comments:

Post a Comment