Powered By Blogger

Monday, October 11, 2021

ಸುಧಾ ಅಡುಕಳ - ಶಯ್ಯಾ ಗೃಹದ ಸುದ್ದಿಗಳು { ಕವನ ಸಂಕಲನ - ಶೋಭಾ ನಾಯಕ }

ಸುದ್ದಿಯಾದ ಶಯ್ಯಾಗೃಹದ ಸುದ್ದಿಗಳು.... ಲೈಂಗಿಕ ಮಡಿವಂತಿಕೆಯೆಂಬುದು ನಮ್ಮ ದೇಶದಲ್ಲಿ ಲಿಂಗಾಧಾರಿತವಾಗಿ ರೂಪುಗೊಂಡಿದೆ. ಶೃಂಗಾರದ ರೂಪು ತಳೆಯದೇ ಅವೆಂದಿಗೂ ಹೊರಬರಲಾರವು. ಬರುವ ಸುದ್ದಿಗಳೆಲ್ಲವೂ ಗಂಡಿನ ನೋಟಗಳೇ ಹೊರತು ಹೆಣ್ಣ ಮಾತುಗಳಲ್ಲ. ಹಾಗೆ ನೋಡಿದರೆ ನಮ್ಮ ಹಿಂದಿನ ತಲೆಮಾರುಗಳೇ ವಾಸಿ. ಗುಟ್ಟಾಗಿಯಾದರೂ ರಾತ್ರಿಯ ಅನುಭವಗಳನ್ನು ತಮ್ಮೊಳಗೆ ಹಂಚಿಕೊಂಡು ಹಗುರಾಗುತ್ತಿದ್ದರು. ಆದರೆ ಈ ಗಾಂವ್ಟಿ ಅನುಭವ ಬರಹವಾದದ್ದಂತೂ ಇಲ್ಲ. ತೊರವೆ ರಾಮಾಯಣದ ರಾಮಸೀತೆಯರ ಶಯ್ಯಾಗಾರದಿಂದ ಹಿಡಿದು ಇಂದಿನ ಬೆಡ್ ರೂಮ್ ಕಥೆಗಳೆಲ್ಲವೂ ಗಂಡಿನ ನೆಲೆಯಲ್ಲೇ ನಿರೂಪಿತ. ಆಧುನಿಕ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚಂತೆ ಸುಳಿಯುತ್ತಿದ್ದ ಹೆಣ್ಣ ಲೈಂಗಿಕತೆಯ ಒಳನೋಟಗಳು ಈ ಕವನಸಂಕಲನದಲ್ಲಿ ಬಿರುಮಳೆಯಾಗಿ ಸುರಿದಿವೆ. ಸಂಕೋಚ ಮತ್ತು ಹಿಂಜರಿಕೆಯ ಭಯಬಿಟ್ಟು ಕಾವ್ಯನಾಯಿಕೆ ತನ್ನ ಶಯ್ಯಾಗಾರದ ಖಾಸ್ ಅನುಭವಗಳನ್ನು ಬಿಚ್ಚಿಟ್ಟಿದ್ದಾಳೆ. ಎಷ್ಟು ಬೇಕೋ ಅಷ್ಟೇ ಕ್ವಚಿತ್ ಮಾತುಗಳಲ್ಲಿ ಹೇಳಬೇಕಾದುದನ್ನು ಹೇಳಿ ಮುಗಿಸುತ್ತಾಳೆ. ಸ್ವೀಕಾರದ ಹಂಗು ಮೀರಿ ಹೊರಬಂದ ಸಾಲುಗಳಿವು. ಹಾಗೆ ನೋಡಿದರೆ ಅಕ್ಕನೂ ಏನನ್ನೂ ಬಚ್ಚಿಟ್ಟುಕೊಂಡವಳಲ್ಲ. ವಸನವಳಿದ ದೇಹಕ್ಕೆ ಕೇಶರಾಶಿಯ ಮರೆಮಾಡುವ ಲೋಕ ಅದನ್ನು ಕೇಳಿಸಿಕೊಂಡಿರಲಿಲ್ಲ ಅಷ್ಟೆ. ಕವಯತ್ರಿ ಶೋಭಾನಾಯಕ ಕೇಳಿಸುವ ಛಾತಿಯಲ್ಲೇ ಹೇಳಿದ್ದಾರೆ. ಹೆಣ್ಣ ಅಭಿವ್ಯಕ್ತಿಗೆ ಹೊಸದೊಂದು ಕಾಲುದಾರಿಯನ್ನು ತೆರೆದಿದ್ದಾರೆ. ಬಟ್ಟೆಯುಟ್ಟವರ ಮುಂದೆ ಬೆತ್ತಲೆ ಕವಿತೆಗಳ ಕತ್ತು ಹಿಸುಕುವುದೂ ಒಂದು ಕೊಲೆಯೆ ಬ್ರೈಲ್ ಲಿಪಿಯಲ್ಲಿ ಬರೆದ ಶೃಂಗಾರ ಕಾವ್ಯ ನಾನು ದುರಂತವೆಂದರೆ, ಓದಬೇಕಾದ ನೀನು ಕುರುಡನಲ್ಲ ನಾನು ನರಳುವಾಗ ನಿನಗೆ ಸಿಗುವ ಸುಖದ ಹೆಸರು: ಅಹಂ ಶಯ್ಯಾಗಾರದ ಸುದ್ದಿಗಳು ಇನ್ನೊಬ್ಬರ ಬಾಯಿಯ ತಾಂಬೂಲವಾಗುವುದು ಅವರವರ ಶಯ್ಯಾಗೃಹಗಳು ಶವಾಗಾರಗಳಾದಾಗಲೇ! ಈ ನನ್ನ ಮೊಲೆಗಳು; ಸದಾ ಉರಿವ ಒಲೆಗಳು ಬರೀಹಾಲು ಬಯಸುವ ನಿನಗೆ ಬೆಂಕಿಯ ಭುಗಿಲನ್ನೂ ಕುಡಿಸಬಲ್ಲವು ಬರಿಯ ಪತಿಯಂದಿರ ಹೆಸರಿನ ವ್ರತ ಮಾಡಲೆಂದು ಪತಿವ್ರತೆಯಾದರೆ ಏನು ಬಂತು? ಅವನು ಅನುಭವ ನಾನು ಮಂಟಪ! ............... ಹ್ಹಹ್ಹಾ..... ಕವನಸಂಕಲನವನ್ನೇ ಇಲ್ಲಿ ಮತ್ತೆ ಬರೆಯಲಾರೆ. ನೀವೂ ಸಾಧ್ಯವಾದರೆ ಕೇಳಿ ಹೆಣ್ಣಿನ ಶಯ್ಯಾಗಾರದ ಸುದ್ದಿಗಳನ್ನು....

No comments:

Post a Comment