Powered By Blogger

Sunday, October 17, 2021

ಶೂದ್ರ ಶ್ರೀನಿವಾಸ್ -ರಾಮಚಂದ್ರ ಶರ್ಮ / Ramachandra Sharma / Shudra Srinivas/

ರಾಮಚಂದ್ರ ಶರ್ಮ ನಾಲ್ಕು ಮಾತು ಬಿ.ಸಿ.ರಾಮಚಂದ್ರ ಶರ್ಮ ಎಂದಾಕ್ಷಣ ನೆನಪಿನ ನಾನಾ ಸಂಗತಿಗಳು ಗರಿಗೆದರಿ ನಿಲ್ಲುತ್ತವೆ. ಯಾಕೆಂದರೆ ಅಷ್ಟರಮಟ್ಟಿಗೆ ಅವರು ತಮ್ಮ ಬದುಕಿನ ಕಾಲಘಟ್ಟದಲ್ಲಿ ಕ್ರಿಯಾಶೀಲರಾಗಿದ್ದವರು.ಅದರಲ್ಲೂ ನವ್ಯಕಾವ್ಯದ ಪ್ರಾರಂಭದ ಹಂತದಲ್ಲಿ ಅದರ ಬಗ್ಗೆ ನಡೆಯುತ್ತಿದ್ದ ಎಲ್ಲಾ ವಿಧವಾದ ವಾಗ್ವಾದ , ಸಂವಾದಗಳಲ್ಲಿ ಗೋಪಾಲಕೃಷ್ಣ ಅಡಿಗರು ಮತ್ತು ರಾಮಚಂದ್ರ ಶರ್ಮ ಅವರು ಅದಕ್ಕೆ ಚೇತೋಹಾರಿತನ ತುಂಬಿದವರು. ಇವರಿಗೆ ಪೂರಕವಾಗಿ ಯು.ಆರ್.ಅನಂತಮೂರ್ತಿ , ಲಂಕೇಶ್, ಶಾಂತಿನಾಥ ದೇಸಾಯಿ ,ಕೆ.ವಿ.ತಿರುಮಲೇಶ್, ಹೆಚ್.ಎಂ.ಚನ್ನಯ್ಯ ಮುಂತಾದವರ ಮಾತು ಮತ್ತು ಬರವಣಿಗೆ ಆ ಎಲ್ಲಾ ವಾಗ್ವಾದಗಳಿಗೆ ಚೈತನ್ಯಶೀಲತೆಯನ್ನು ತಂದುಕೊಡುತ್ತಿತ್ತು. ನಾವು ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದಾಗ ರಾಮಚಂದ್ರ ಶರ್ಮ ಅವರು ವಿದೇಶದ ಇಥಿಯೋಪಿಯಾದಿಂದ ವರ್ಷಕ್ಕೊಮ್ಮೆ ಬೆಂಗಳೂರಿಗೆ ಬಂದಾಗ ಕಡ್ಡಾಯವಾಗಿ ನಾವು ಅವರ ಕವಿತೆಗಳ ಓದು ಮತ್ತು ಮಾತು ಕೇಳಿಸಿಕೊಳ್ಳುವ ಸದಾವಕಾಶ ಲಭಿಸಿತ್ತು.ಅದರಲ್ಲೂ ನಾನು ಆನರ್ಸ್ ವಿದ್ಯಾರ್ಥಿಯಾಗಿದ್ದಾಗ ಅವರ ಕವಿತೆಗಳ ಚರ್ಚೆ ಎಷ್ಟು ಗಂಭೀರವಾಗಿ ನಡೆಯುತ್ತಿತ್ತು. ಇಪ್ಪತ್ಮೂರು ವರ್ಷ ಇಥಿಯೋಪಿಯಾ , ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತಮಟ್ಟದ ಶಿಕ್ಷಣ ತಜ್ಞರಾಗಿ ಕೆಲಸ ನಿರ್ವಹಿಸಿದ ಮೇಲೆ ಭಾರತಕ್ಕೆ ಹಿಂದಿರುಗಿ ಬಂದರು. ಇಲ್ಲಿಗೆ ಬಂದ ಮೇಲೆ ಸುಮಾರು ಇಪ್ಪತ್ನಾಲ್ಕು ವರ್ಷಗಳಿಗೂ ಮೇಲ್ಪಟ್ಟು ಅವರ ಜೊತೆಗಿನ ಸ್ಮರಣೀಯ ಒಡನಾಟವನ್ನು ಮರೆಯಲು ಸಾದ್ಯವಿಲ್ಲ. ಇದಕ್ಕೆ ಕೇಂದ್ರ ವ್ಯಕ್ತಿಯಾಗಿ ಲಂಕೇಶ್ ಅವರು ಸಾಂಸ್ಕೃತಿಕ ಸಂಪರ್ಕ ಸೇತುವೆಯಾಗಿದ್ದರು.ಅಲ್ಲಿ ಕೆ.ಮರುಳಸಿದ್ದಪ್ಪ, ಡಿ.ಆರ್.ನಾಗರಾಜ್ , ಕವಿ ಸಿದ್ಧಲಿಂಗಯ್ಯ , ಡಾ.ಕೆ.ಎಂ.ಶ್ರೀನಿವಾಸ ಗೌಡ , ಬಸವರಾಜ ಅರಸ್ ,ಅಗ್ರಹಾರ ಹಾಗೂ ಹೊರಗಡೆಯಿಂದ ತೇಜಸ್ವಿ ,ಕೆ.ರಾಮದಾಸ್, ಯು.ಆರ್.ಅನಂತಮೂರ್ತಿ, ಲಕ್ಷ್ಮೀಶ ತೊಳ್ಪಾಡಿ ,ಕೆ.ವಿ.ತಿರುಮಲೇಶ್ ,ಕಿ.ರಂ.ನಾ ಮುಂತಾದವರು ಬಂದಾಗ ಮಾತುಕತೆಗೆ ಎಂಥ ಅನನ್ಯತೆ ತುಂಬಿಕೊಳ್ಳುತ್ತಿತ್ತು.ಆಗ ಸಾಹಿತ್ಯ ಕುರಿತ ಲವಲವಿಕೆಯ ಮಾತು ಮತ್ತು ಕಾವ್ಯದ ಓದು ಆಪ್ತವಾಗಿರುತ್ತಿತ್ತು. ಶರ್ಮ ಅವರಿಗೆ ಕಾವ್ಯದ ಓದು ಮತ್ತು ಅದನ್ನು ಕುರಿತ ಮಾತುಕತೆ ಎಂದರೆ ಎಲ್ಲಿಲ್ಲದ ಚೈತನ್ಯ ಶೀಲತೆ ತುಂಬಿಕೊಳ್ಳುತ್ತಿತ್ತು.ಅಂದರೆ : ಕಾವ್ಯ ಮತ್ತು ಸಾಹಿತ್ಯದ ಬಗ್ಗೆ ಅವರಿಗೆ ಅಷ್ಟೊಂದು ಆರಾಧನೆಯ ಭಾವ ಇತ್ತು.ಈ ಕಾರಣದಿಂದ ಅವರು ತಮ್ಮೊಂದಿಗೆ ವಿದೇಶದಿಂದ ತಂದ ಕಾರಿನಲ್ಲಿ ಡಿ.ಆರ್ ಮತ್ತು ನಾನು ಕರ್ನಾಟಕದ ಎಂತೆಂಥ ಕಡೆ ಸುತ್ತಾಡಿದ್ದೇವೆ. ಕಾರು ಓಡಿಸುವಾಗ ಅತ್ಯಂತ ಮೌನಿಯಾಗಿ ನಮ್ಮ ತುಂಟತನದ ಮಾತುಗಳಿಗೆ ಸ್ಪಂದಿಸುತ್ತಿದ್ದ ಕ್ರಮವೇ ಅಪೂರ್ವವಾದದ್ದು. ' ಶೂದ್ರ ' ದ ಎಲ್ಲಾ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.ಹಾಗೆ ನೋಡಿದರೆ ಅವರ ' ಈ ಶತಮಾನದ ನೂರು ಇಂಗ್ಲೀಷ್ ಕವಿತೆಗಳು ' ಸಂಕಲನವನ್ನು ಶೂದ್ರ ವೇದಿಕೆ ಮೂಲಕ ಬಿಡುಗಡೆ ಮಾಡುವಾಗ ಎಂಥ ಹಿರಿಯ ಲೇಖಕರೆಲ್ಲ ಭಾಗಿಯಾಗಿದ್ದರು. ಮುಂದೆ ' ಜಾಗೃತ ಸಾಹಿತ್ಯ ಸಮಾವೇಶ ' ನಡೆದಾಗ ನಮ್ಮೊಂದಿಗೆ ಎಷ್ಟು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಅವರೊಂದಿಗೆ ಅವರ ' ಅನನ್ಯ ' ವೇದಿಕೆಯ ಜೊತೆ ' ಶೂದ್ರ ' ಸೇರಿಸಿಕೊಂಡು ತಿಂಗಳ ಕೊನೆಯ ಶನಿವಾರ ಎಂತೆಂಥ ಅರ್ಥಪೂರ್ಣ ಸಂವಾದಗಳನ್ನು ನಡೆಸಿದೆವು. ಇದಕ್ಕೆ ಡಿ.ಆರ್ ಮತ್ತು ಕಿ.ರಂ ಅವರ ಮಾರ್ಗದರ್ಶನ ಇತ್ತು.ಮತ್ತೊಂದು ‌ ಲವಲವಿಕೆಯ ಭಾಗವಹಿಸುವಿಕೆ ಎಂದರೆ : ಪ್ರತಿವಾರ ಎರಡು ದಿವಸ ನಾವು ಕಾರ್ಡ್ಸ್ ಆಡಲು ಲಂಕೇಶ್ ಅವರ ಕಛೇರಿಯಲ್ಲಿ ಸೇರಿದಾಗ ಎಷ್ಟು ತನ್ಮಯತೆಯಿಂದ ಭಾಗಿ ಯಾಗುತ್ತಿದ್ದರು.ಅವರಿಗೆ ಕಾವ್ಯದಷ್ಟೇ ಕಾರ್ಡ್ಸ್ ಆಡುವುದರ ಬಗ್ಗೆ ಗಾಢವಾದ ವ್ಯಾಮೋಹವಿತ್ತು.ಇಂಥ ತುಂಬು ಮನಸ್ಸಿನ ವ್ಯಕ್ತಿತ್ವದ ಶರ್ಮ ಅವರು ಡಿ.ಆರ್ ಮತ್ತು ಲಂಕೇಶ್ ನಿಧನರಾದಾಗ ತುಂಬಾ ವೇದನೆಗೆ ಒಳಗಾಗಿದ್ದರು.ಹಾಗೆಯೇ ನಾನು ಅವರ ಕೊನೆಯ ದಿನಗಳ ದೈಹಿಕ ನೋವನ್ನು ಹತ್ತಿರ ದಿಂದ ಕಂಡವನು.ಈ ಕೃತಿಯನ್ನು ನನಗೆ ನಾನಾ ಕಾರಣಗಳಿಗಾಗಿ ಪ್ರಿಯರಾದ ಶಾ.ಬಾಲೂರಾವ್ ಅವರ ಬಹುದೊಡ್ಡ ವ್ಯಕ್ತಿತ್ವಕ್ಕೆ ಅರ್ಪಿಸುತ್ತಿರುವೆ.ಅವರು ಶರ್ಮ ಅವರಿಗೂ ಆಪ್ತರಾಗಿದ್ದವರು. ಇಂಥ ಮಹತ್ವದ ಲೇಖಕ ಮತ್ತು ಕವಿ ರಾಮಚಂದ್ರ ಶರ್ಮ ಅವರನ್ನು ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬರೆದು ಕೊಡಲು ಕವಿ ಸಿದ್ದಲಿಂಗಯ್ಯ ಮತ್ತು ಅದರ ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ಅವರು ಸೂಚಿಸಿದಾಗ ಸಂತೋಷದಿಂದ ಒಪ್ಪಿಕೊಂಡೆ. ಆದರೆ ಮತ್ತೆ ಮತ್ತೆ ಒತ್ತಡ ತರುತ್ತಿದ್ದವರು ಕವಿ ಸಿದ್ದಲಿಂಗಯ್ಯ ಅವರು. ಕೊನೆಗೆ ನಾನು ಸಿದ್ದಪಡಿಸಿ ಕೊಟ್ಟಾಗ ಸಂತೋಷದಿಂದ ನನಗೆ ಧನ್ಯವಾದ ಸೂಚಿಸಿದ್ದರು.ಅವರು ಆಸ್ಪತ್ರೆಗೆ ಹೋಗುವ ನಾಲ್ಕು ದಿವಸಗಳ ಮುಂಚೆ " ಗುರುಗಳೇ ಜಾಗ್ರತೆ ಪುಸ್ತಕ ಹೊರ ತರುತ್ತೇವೆ.ಬಿಡುಗಡೆಯ ಕಾರ್ಯಕ್ರಮ ಇಟ್ಟುಕೊಳ್ಳೋಣ " ಎಂದಿದ್ದರು.ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವೆ. ಹಾಗೆಯೇ ಮತ್ತೆ ಮತ್ತೆ ಒತ್ತಡ ತಂದು ಬರೆಸಿದ ಮಹಾಲಿಂಗೇಶ್ವರ ಭಟ್ ಅವರಿಗೆ ಋಣಿಯಾಗಿರುವೆ. ಇದನ್ನು ಬರೆಯುವ ವಿಷಯ ತಿಳಿದು ನನ್ನ ಗುರುಗಳು ಮತ್ತು ಮಾರ್ಗದರ್ಶಕರಾದ ಡಾ.ಕೆ.ಮರುಳಸಿದ್ದಪ್ಪ ಅವರು " ಶೂದ್ರ ಸಂತೋಷ ನೀವು ಬರೆಯುತ್ತಿರುವುದು. ಜಾಗ್ರತೆ ಬರೆದು ಕೊಡಿ " ಎಂದಿದ್ದರು.ಇದೇ ಸಮಯದಲ್ಲಿ ಗೆಳೆಯರಾದ ಪ್ರೊ.ದಂಡಪ್ಪ , ಡಾ.ಎಚ್.ಎಸ್.ಮಾಧವರಾವ್ ಮತ್ತು ಬಸವರಾಜ ಮೇಗಲಕೇರಿ ಅವರಿಗೆ ಕೃತಜ್ಞತೆ ಗಳನ್ನು ಅರ್ಪಿಸುವೆ.ಹಾಗೆಯೇ ಸುಂದರವಾದ ಶರ್ಮರ ಭಾವಚಿತ್ರ ಕೊಟ್ಟ ಪ್ರಸಿದ್ಧ ಛಾಯಾಗ್ರಾಹಕ ಎ.ಎನ್.ಮುಕುಂದ್, ಅಕಾದೆಮಿಯ ಸುರೇಶ್ ಅವರಿಗೆ. ಶೂದ್ರ ಶ್ರೀನಿವಾಸ್ ಬೆನ್ನುಡಿ ಬಿ.ಸಿ.ರಾಮಚಂದ್ರ ಶರ್ಮ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿದ್ದವರು. ಕವಿಯಾಗಿ ,ಕಥೆಗಾರರಾಗಿ ಹಾಗೂ ಅನುವಾದಕರಾಗಿ ಅತ್ಯಂತ ಮಹತ್ವದ ಲೇಖಕರು.( 1925-2005 ) ಅಷ್ಟೇ ಅಲ್ಲ ಶಿಕ್ಷಣ ತಜ್ಞರಾಗಿ ಇಪ್ಪತ್ಮೂರು ವರ್ಷ ಇಥಿಯೋಪಿಯಾ ಜಾಂಬಿಯಾ ಮುಂತಾದ ದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ ವಾಪಸ್ಸು ಬಂದರು.ನವ್ಯಕಾವ್ಯ ಸಂದರ್ಭಕ್ಕೆ ಬಹು ದೊಡ್ಡ ಕೊಡುಗೆಯನ್ನು ಕೊಟ್ಟವರು.ಅವರ ಶ್ರೀಮತಿ ಪದ್ಮ ಮತ್ತು ಶರ್ಮ ಅವರು ಜೊತೆಗೂಡಿ ಕನ್ನಡದ ಕೆಲವು ಮುಖ್ಯ ಕೃತಿ ಗಳನ್ನು ಇಂಗ್ಲೀಷ್ ಭಾಷೆಗೆ ಅಚ್ಚುಕಟ್ಟಾಗಿ ಅನುವಾದಿಸಿ ವಿಮರ್ಶಕರ ಮೆಚ್ಚಿಗೆ ಪಡೆದರು.ತಮ್ಮ ಬದುಕಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಲೋಕಕ್ಕೆ ಕೆಲವು ಅಪೂರ್ವ ಮೆಲುಕು ಹಾಕಬಹುದಾದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ------ ಸಾಹಿತ್ಯ ಅಕಾದೆಮಿಯ ' ಭಾರತೀಯ ಸಾಹಿತ್ಯ ನಿರ್ಮಾಪಕರು ' ಮಾಲಿಕೆಗಾಗಿ ಬಿ.ಸಿ.ರಾಮಚಂದ್ರ ಶರ್ಮ ಅವರ ವ್ಯಕ್ತಿತ್ವ ಮತ್ತು ಬರವಣಿಗೆಯನ್ನು ಕುರಿತು ಬರೆದು ಕೊಟ್ಟಿರುವ ಶೂದ್ರ ಶ್ರೀನಿವಾಸ್ ಅವರು ಕನ್ನಡದ ಹಿರಿಯ ಲೇಖಕರು.' ಶೂದ್ರ ' ಸಾಹಿತ್ಯ ಪತ್ರಿಕೆಯ ಮೂಲಕ ನಾಲ್ಕು ದಶಕಗಳಿಗೂ ಮೇಲ್ಪಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮುಖ್ಯರಾಗಿರು ವಂಥವರು.ಲೇಖಕರಾಗಿ ,ಕಾದಂಬರಿಕಾರ ರಾಗಿ ,ಕಥೆಗಾರರಾಗಿ , ಅಂಕಣಕಾರ ರಾಗಿ, ಜೀವನಚರಿತ್ರೆಕಾರರಾಗಿ ಗಂಭೀರವಾಗಿ ತೊಡಗಿಸಿಕೊಂಡವರು. ಪ್ರವಾಸ ಕಥನ ಕೂಡ ಇವರಿಗೆ ಪ್ರಿಯವಾದ ವಿಷಯ. ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರ್ತಿಸಿಕೊಂಡಿದ್ದಾರೆ.

No comments:

Post a Comment