Powered By Blogger

Sunday, October 3, 2021

ಗಿರಿಜಾ ಶಾಸ್ರಿ - ಕೆ. ಸತ್ಯನಾರಾಯಣ ಅವರ " ಅವರವರಭವಕ್ಕೆ , ಓದುಗರ ಭಕುತಿಗೆ "/ GIRIJA SHASTRY / K. Satyanarayana

ಕೆ. ಸತ್ಯನಾರಾಯಣ ಅವರ "ಅವರವರ ಭವಕ್ಕೆ ಓದುಗರ ಭಕುತಿಗೆ..." ನಮಗೆ ಗೊತ್ತಿರುವುದು ಭಾವ ಮತ್ತು ಭಕ್ತಿ. 'ಭವಿ' ಎನ್ನುವ ಶಬ್ದ ಕೂಡ ಇದೆ. ಆದರೆ ಅದು ಭಕ್ತಿಗೆ ವಿರುದ್ಧನೆಲೆಯದು. ಇಲ್ಲಿ ಭವ ಮತ್ತು ಭಕ್ತಿ ಎರಡನ್ನೂ ಒಟ್ಟಿಗೆ ತಂದಿದ್ದಾರೆ. ಅವು ಪ್ರತ್ಯೇಕವಾಗಿ ಇರುವುದಿಲ್ಲ. ಬದುಕಿನಲ್ಲಿ ಒಟ್ಟಿಗೇ ಇರುತ್ತವೆ. ಭೌತಿಕ ಮತ್ತು ಅಭೌತಿಕ ಸಂಘರ್ಷಗಳು ( ಇದು ಒಂದರೊಳಗೆ ಇನ್ನೊಂದು ಹೊಗುವ, ಸೃಜನಶೀಲ ಮತ್ತು ಆತ್ಮ ಕಥನದ ನಡುವಿನ ಸಂಘರ್ಷವೂ ಇರಬಹುದು) ಬದುಕಿನ ವಾಸ್ತವಗಳು. ಎನ್ನುವುದನ್ನು ಹೇಳುತ್ತಿದ್ದಾರೇನೋ ಎಂದೆನಿಸುತ್ತದೆ. ಸ್ವ ದ ಪರಿವೀಕ್ಷಣೆಯ ಪರಿಯನ್ನು ಪರೀಕ್ಷೆಗೆ ಒಡ್ಡಿದ್ದಾರೆ ಎಂದೂ ಎನಿಸುತ್ತದೆ. ಅವರ ಇತರ ಸೃಜನಾತ್ಮಕ ಮತ್ತು ಗದ್ಯ ಕೃತಿಗಳಲ್ಲಿ ಎದ್ದು ಕಾಣುವ ಮಧ್ಯಮ ಮಾರ್ಗ( grey area) ಮೇಲಿನ ಯೋಚನೆಗೆ ಸಮರ್ಥನೆ ನೀಡುತ್ತದೆ. 'ಓದುಗರ ಭಕುತಿಗೆ' ಎಂದಿದ್ದರೂ ಕೂಡ ಅದು ಓದುಗರ ಭವವನ್ನೂ ನಿರ್ದೇಶಿಸುತ್ತಿದೆ ಎಂದೆನಿಸುತ್ತದೆ. ಲೇಖಕರ ಭವವನ್ನು ಓದುಗರು ತಮ್ಮ ಭವಗಳ ಮೂಲಕವಾಗಿಯೇ ಅರ್ಥಮಾಡಿಕೊಳ್ಳುತ್ತಾರೆ.ನಾವು ಓದುವುದೆಂದರೆ ನಮಗೆ ಪರಿಚಯವಾದದ್ದರ ಮೂಲಕವೇ ಅಪರಿಚಿತವಾದದ್ದರಕಡೆಗೆ ಸಾಗುವುದಲ್ಲವೇ? ಇಲ್ಲಿ ಓದುಗ ಮತ್ತು ಲೇಖಕರನ್ನು ಒಟ್ಟಾಗಿಯೇ ಅಧ್ಯಯನದ ಗ್ರಹಿಕೆಗೆ ತೆಗೆದುಕೊಂಡಿರುವುದು ಈ ಕೃತಿಯ ಮಹತ್ವ ಮತ್ತು ಹೊಸತನ. ಇಲ್ಲಿ ಕಾಣುವುದು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಅವರ ವ್ಯಾಪಕ ಓದು. (ಗಾಂಧಿ, ವರ್ಜೀನಿಯಾ ವುಲ್ಫ್ , ಡಾಲಸ್ಟಾಯ್ ಮುಂತಾದವರ ಬರಹಗಳ ಮಹತ್ವವನ್ನು ಪ್ರಸ್ತಾಪಿಸಿರುವುದು) ಅವುಗಳ ಜೊತೆಗೆ ಕನ್ನಡ ಏಳು ಲೇಖಕರ ಗೋಪಾಲಕೃಷ್ಣ ಅಡಿಗ, ಯು.ಆರ್ . ಅನಂತಮೂರ್ತಿ, ಭೈರಪ್ಪ, ಲಂಕೇಶ್, ಸಿದ್ಧಲಿಂಗಯ್ಯ ತೇಜಸ್ವಿ ( ಜೀವನ ಚರಿತ್ರೆ) ಅವರ ಆತ್ಮಕಥಾನಕಗಳ ಭಾಗಗಳನ್ನು ತುಲನಾತ್ಮಕವಾಗಿ ನೋಡಿರುವುದು. ಬರಹಗಾರನೊಬ್ಬನಿಗೆ ಆತ್ಮಚರಿತ್ರೆ ಬರೆಯುವ ಅಗತ್ಯವಾದರೂ ಏನು? ಯಾವ ಕಾರಣಕ್ಕಾಗಿ ಬರೆಯಬೇಕು? ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆ ಇವುಗಳ ನಡುವಿನ ಅಂತರವಾದರೂ ಏನು? ಅವುಗಳ ಸಾಮ್ಯ ಮತ್ತು ಭಿನ್ನತೆ, ಆತ್ಮಚರಿತ್ರೆ ಯ ಇತಿಹಾಸ, ಸ್ವರೂಪ ವ್ಯಾಖ್ಯೆ ಮುಂತಾದ ತಾತ್ವಿಕ ಚರ್ಚೆ ಈ ಕೃತಿಯ ಮೊದಲ ಭಾಗದಲ್ಲಿದೆ. ಪ್ರತಿಯೊಬ್ಬ ಲೇಖಕನೂ ತನ್ನ ಬಾಲ್ಯ, ಯೌವ್ವನ ವೃದ್ಧಾಪ್ಯ , ಸಾವಿನ ವಾಸನೆ ( ಸಿದ್ಧಲಿಂಯ್ಯನವರ ಹೊರತಾಗಿ) ಮುಂತಾದವುಗಳನ್ನು ಹೇಗೆ ಅನುಸಂಧಾನ ಮಾಡುತ್ತಾನೆ? ಹಾಗೆ ಮಾಡುವಾಗ ಏಳು ಜನರಲ್ಲಿ ಕಂಡು ಬರುವ ವೈಶಿಷ್ಟ್ಯ ಮತ್ತು ಭಿನ್ನತೆಗಳನ್ನು ಬಹಳ ವಿವರವಾಗಿ ಚರ್ಚಿಸಿದ್ದಾರೆ. ಇವುಗಳನ್ನು ನಿರ್ವಹಿಸುವುದರಲ್ಲಿ ಲೇಖಕರ ಅಪ್ರಜ್ಞಾಪೂರ್ವಕ ವೆಂದು ಮೇಲು ನೋಟಕ್ಕೆ ಕಾಣಿಸುವ ಆದರೆ ಪ್ರಜ್ಞಾಪೂರ್ವಕವಾದ ವಿಸ್ಮೃತಿ ಮತ್ತು ನೆನಪುಗಳು ಕಣ್ಣಾಮುಚ್ಚಾಲೆಯಾಡುವ ( ಜಾಣಮರೆವು) ಸ್ವರೂಪವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಈ ಅವಲೋಕನೆಯಲ್ಲಿ ಲೇಖಕರು ತಮ್ಮ ಆತ್ಮಚರಿತ್ರೆಯನ್ನೂ ಗಮನಕ್ಕೆ ತೆಗೆದುಕೊಂಡಿರುವುದು ವಿಶೇಷ. ಎಲ್ಲವನ್ನೂ ಬಿಚ್ಚಿಡಬೇಕೇ? ಯಾವುದನ್ನು ಬಚ್ಚಿಡಬೇಕು? ಆತ್ಮಚರಿತ್ರೆ ಬರಹ ಒಡ್ಡುವ ಆರಂಭ ಮತ್ತು ಮುಕ್ತಾಯದ ಸವಾಲುಗಳು ಯಾವ ಸ್ವರೂಪದ್ದು? ಲೇಖಕನ ಬರಹದ ಶೈಲಿಯಲ್ಲಿಯೇ ಸತ್ಯದ ಅನಾವರಣಕ್ಕಿಂತ ಹೆಚ್ಚಾಗಿ ಓದುಗರನ್ನು ಮೆಚ್ಚಿಸುವ ಧೋರಣೆಯೇ ಅಡಗಿದೆಯೇ? ಸ್ವಾನುಕಂಪದಿಂದ ಆಗುವ ಮಾನಸಿಕ ವಾಸ್ತವ ಪ್ರಯೋಜನಗಳಾದರೂ ಏನು? ಹೀಗೆ ಬಿಚ್ಚಿಡುವ ಮತ್ತು ಬಚ್ಚಿಡುವ ಯತ್ನದಲ್ಲಿ ಲೇಖಕನಿಗೆ ಸಾಮಾಜಿಕ ಬದ್ಧತೆಯೇನಾದರೂ ಇರಬೇಕೇ? ಲೇಖಕನ ಸ್ವಾತಂತ್ರ್ಯ ದ ಹುರುಪನ್ನು ಓದುಗರು ಹೇಗೆ ಸ್ವೀಕರಿಸಬಲ್ಲರು? ಮುಂತಾದ ಅನೇಕ ಪ್ರಶ್ನೆಗಳನ್ನು ಈ ಕೃತಿ ಎತ್ತುತ್ತದೆ. ತಮ್ಮ ಕಾಲದ ಮಹತ್ವ ದ ಸಂದರ್ಭಗಳಾದ, ಬೂಸ ಪ್ರಕರಣ, ತುರ್ತು ಪರಿಸ್ಥಿತಿ, ಬರಹಗಾರ ರ ಒಕ್ಕೂಟದ ಸಂದರ್ಭಗಳಲ್ಲಿ ಕೆಲವು ಲೇಖಕರ ಪ್ರತಿಕ್ರಿಯೆಗಳನ್ನು ದಾಖಲಿಸಿರುವುದು ಬಹಳ ಮುಖ್ಯವಾದ ಸಂಗತಿ. ನನಗೆ ಇರುವ ಒಂದೇ ಆಕ್ಷೇಪವೆಂದರೆ ಇಲ್ಲಿನ ಲೇಖಕಿಯರ ಗೈರು ಹಾಜರಿ. ಇಲ್ಲಿರುವ ಲೇಖಕರೆಲ್ಲ ತಮ್ಮ ಬದುಕಿನಲ್ಲಿ ಸುಳಿದ ಹೆಣ್ಣುಗಳ ಬಗ್ಗೆ ಅವರೊಡನೆ ಇದ್ದ ಸಂಬಂಧಗಳ ಬಗ್ಗೆ ಕೆಲವರು ನಿರ್ಭಿಡೆಯಾಗಿ, ಪ್ರಬುದ್ಧವಾಗಿ ( ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ) ಇನ್ನೂ ಕೆಲವರು ಸೂಕ್ಷ್ಮ ವಾಗಿ, (ಅಡಿಗರು)ಮತ್ತೊಬ್ಬರು ಹಸಿ ಹಸಿಯಾಗಿ, ವಕ್ರವಾಗಿ ನೋಡಿದ್ದಾರೆ. ಭೋಗದ ಸಾಮಾಗ್ರಿಯಾಗಿ ಕಂಡಿದ್ದಾರೆ. (ಲಂಕೇಶ್), ಬೇರೆಯವರ ಬಂಧಗಳ ಮೂಲಕ ಕಂಡಿದ್ದಾರೆ ( ಸಿದ್ದಲಿಂಗಯ್ಯ) ಭೈರಪ್ಪನವರಿಗೆ ಬಾಲ್ಯದ ಬಡತನವೇ ಮುಖ್ಯವಾಗಿ ಕೌಟುಂಬಿಕ ಬಿರುಕುಗಳೇ ಹೆಚ್ಚಾಗಿ ಕಂಡಿವೆ. ಆದರೂ ಇವರು ಯಾರೂ ಹೆಣ್ಣನ್ನು ಗಂಭೀರವಾಗಿ ತೆಗೆದುಕೊಂಡವರಲ್ಲ ಎಂಬ ಲೇಖಕರ ಧ್ವನಿಯನ್ನು ಬಸವರಾಜ ಕಲ್ಗುಡಿಯವರು ಮುನ್ನುಡಿಯಲ್ಲಿ ಸರಿಯಾಗಿಯೇ ಗಮನಿಸಿದ್ದಾರೆ. ಅಲ್ಲಲ್ಲಿ ಇಂದಿರಾ ಲಂಕೇಶ್ ಮತ್ತು ರಾಜೇಶ್ವರಿಯವರ ಬರಹಗಳನ್ನು ಉಲ್ಲೇಖಿಸಿರುವುದು ಸಮಾಧಾನಕರವಾಗಿ ಕಂಡರೂ ಅವರು ಪೂರ್ಣಪ್ರಮಾಣದ ಲೇಖಕಿಯರಲ್ಲ,‌ ಅಲ್ಲದೇ ಏಳು ಲೇಖಕರ ಜೀವನ ಚರಿತ್ರೆ ಯ ಬಗ್ಗೆ ನಡೆಸಿರುವ ಗಂಭೀರ ಅಧ್ಯಯನಕ್ಕೆ ಆನುಷಂಗಿಕವಾಗಿ ಒದಗಿ ಬಂದಿರುವ ಭಾಗಗಳಂತೆ ಮಾತ್ರ ಅವು ಕಾಣುತ್ತವೆ ಈ ನೆಲೆಯಲ್ಲಿ ಅನುಬಂಧದಲ್ಲಿ ಒದಗಿಸಲಾಗಿರುವ ಸಂಗೀತ ಕೋಣೆ ಮತ್ತು ಜೆ.ಕೆ. ಅವರಬಗ್ಗೆ ಬರೆದ ರಾಧಾಹೇಳಿದ ಕತೆ ಬಹಳ ಮಹತ್ವವಾದುದು. ಕನ್ನಡದ ಮಹಿಳಾ ಆತ್ಮ /ಜೀವನ ಚರಿತ್ರೆ ‌ಮತ್ತು ಇತರ ಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಜೀವನ ಚರಿತ್ರೆ ಗಳಲ್ಲಿ ಒಂದನ್ನಾದರೂ ಪೂರ್ಣ ಅಧ್ಯಯನಕ್ಕೆ ಒಳಪಡಿಸಿದ್ದರೆ ಅಧ್ಯಯನಕ್ಕೆ ಒಂದು ಅಖಂಡವಾದ ದೃಷ್ಟಿ ಪ್ರಾಪ್ತವಾಗುತ್ತಿತ್ತು ಎಂಬುದು ನನ್ನ humble ಆದ ಅನಿಸಿಕೆ. ಮಹಿಳಾ ಆತ್ಮ ‌ಚರಿತ್ರೆಯನ್ನು ದಲಿತ ಆತ್ಮ ಚರಿತ್ರೆಯೊಂದಿಗೆ ( ಇದರ ಉಲ್ಲೇಖ ಕ್ವಚಿತ್ತಾಗಿ ಈ ಕೃತಿಯಲ್ಲಿ ಬಂದಿದೆ) ತೌಲನಿಕವಾಗಿ ಯಾರಾದರೂ ಅಭ್ಯಾಸಮಾಡಿದರೆ ಅದು ಒಂದು ಸಾಂಸ್ಕೃತಿಕ ಅಧ್ಯಯನವಾದೀತು. ಭಾರತೀಯ ಭಾಷೆಗಳ ಮಹಿಳಾ ಆತ್ಮ ಚರಿತ್ರೆಗಳು ( ಉದಾ: ಊರ್ಮಿಳಾ ಪವಾರ್, ಬಾಮಾ, ಮಾಧವಿ ದೇಸಾಯಿ,ಅಮೃತಾಪೀತಂ ಮುಂತಾದವರು) ಪ್ರತ್ಯೇಕ ಅಧ್ಯಯನವನ್ನೇ ಬೇಡುತ್ತದೆ. ಇದು ನಮ್ಮ ಕಾಲದ ತುರ್ತುಕೂಡಾ ಆಗಿದೆ ಎಂದಷ್ಟೇ ಹೇಳ ಬಯಸುವೆ. ಕೆ. ಸತ್ಯನಾರಾಯಣ ಅವರು ಆತ್ಮಚರಿತ್ರೆಗೆ ಸಂಬಂಧಿಸಿದಂತೆ ಬಹಳ ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಶ್ರೀಧರ್ ಅವರು ಹೇಳಿರುವ ಮಾತು ಸರಿಯಾಗಿಯೇ ಇದೆ. ಮುಂದಿನ‌ವರು ಕೈಗೊಳ್ಳುವ ಅಧ್ಯಯನಗಳಿಗೆ ಇದು ದಾರಿಮಾಡಿ ಕೊಡಲಿ ಎಂದು ಆಶಿಸುತ್ತೇನೆ. ಮುಖ್ಯವಾಗಿ ಈ ಕೃತಿಯ ಅಧ್ಯಯನದ ಶಿಸ್ತು, ಕೃತಿಯ ಕೊನೆಗೆ ಅವರು ಕೊಟ್ಟಿರುವ ಆಕರಗಳು, ಅಧ್ಯಯನದ ವಿಭಾಗ ಕ್ರಮ ಎಲ್ಲವೂ ಹೊಸದೆಂದೆನಿಸಿ ಇದೊಂದು ಎಂಫಿಲ್ ಅಥವಾ ಪಿ.ಎಚ್.ಡಿ ಪ್ರಬಂಧದ ಹಾಗೆ ಕಂಡಿತು. ಅವರ ಮಾತುಗಳಲ್ಲೇ ಹೇಳುವುದಾದರೆ ಈಗ ಈ ಪದವಿಗಳನ್ನು ಕಟ್ಟಿಕೊಂಡು ಅವರು ಏನು ಮಾಡಬೇಕಾಗಿದೆ? ಈಗಾಗಲೇ ಅವರಿಗೆ ಗೌರವ ಡಾಕ್ಟರೇಟ್ ದೊರಕಿದೆ. ಇಂತಹ ಅಧ್ಯಯನಶೀಲ ಪುಸ್ತಕವನ್ನು ಪ್ರಕಟಿಸಿದ, ಅದನ್ನು ಪ್ರೀತಿಯಿಂದ ನಮಗೂ ಕಳುಹಿಸಿದ ಮಿತ್ರರಾದ ಕೆ.ಸತ್ಯನಾರಾಯಣ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು. ಪರಸ್ಪರ ಪ್ರಕಾಶನ: ೧೯೨೧.ಬೆಂಗಳೂರು ಅಧಿಕೃತ ಮಾರಾಟಗಾರರು ವಂಶಿ ಪಬ್ಲಿಕೇಷನ್ಸ್ ನೆಲಮಂಗಲ 97430 5511

No comments:

Post a Comment