Powered By Blogger

Thursday, February 4, 2021

ಗಿರಿಜಾ ಶಾಸ್ತ್ರಿ = ಮಾಸ್ತಿ ವೆಂಕಟೇಶ ಅಯ್ಯಂಗಾರ್ { ಎಸ್. ಆರ್. ವಿಜಯಶಂಕರ } MASTHI / S. R . VIJAYASHANKARA

ಕನ್ನಡದೊಳಗೆ ಸಣ್ಣಕತೆಯ ಪರಂಪರೆಯನ್ನು ಹರಿಯಬಿಟ್ಟ ಮಾಸ್ತಿಯವರು, ಸಣ್ಣಕತೆಗಳ ಜನಕನೆಂದೇ ಪ್ರಸಿದ್ಧರಾದವರು. ಅವರು ಬರೆದ ಕತೆಗಳ ಸಂಖ್ಯೆ ನೂರು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅವು ಎಷ್ಟು ಹೊಸತಾಗಿದ್ದುವೆಂದರೆ, ಅವಗಳನ್ನು ಸಣ್ಣಕತ್ತೆಗಳು' ಎಂದು ಹಾಸ್ಯ ಮಾಡುತ್ತಿದ್ದರಂತೆ. "ರಂಗಪ್ಪನ ದೀಪಾವಳಿ' ಪ್ರಕಟವಾದಾಗ ‘ಅದೊಂದು ಕತೆಯಂತೆ, ಇನ್ನು ನಾಳೆ ನಾನು ಕೂತು “ಉಗ್ರಪ್ಪನ ಉಗಾದಿ” ಎಂದು ಬರೆಯಬೇಕೆಂದಿದ್ದೇನೆ’ ಎಂಬೆಲ್ಲಾ ಅವಹೇಳನಕ್ಕೆ ಒಳಗಾದವರು ಮಾಸ್ತಿ. ಆನಂತರ ‘ರಂಗನ ಮದುವೆ’ಯಿಂದ (1910) ಹಿಡಿದು 'ಮಾಯಣ್ಣನ ಕನ್ನಡಿ' (1983) ಯವರೆಗೆ ನೂರು ಕತೆಗಳನ್ನು ಬರೆದರು. ಜೊತೆಗೆ, ಕಥನ ಕಾವ್ಯ, ಮಹಾಕಾವ್ಯ, ಕವಿತೆಗಳು, ನಾಟಕಗಳು, ವಿಮರ್ಶೆ, ಅನುವಾದ, ಸಂಪಾದಕೀಯ ಬರಹಗಳು, ವೈಚಾರಿಕ ಬರಹಗಳು, ಪತ್ರಿಕೋದ್ಯಮ ಹೀಗೆ ಮಾಸ್ತಿಯವರು ಕನ್ನಡದಲ್ಲಿ ಮಾಡಿದ ಕೃಷಿ ಬಹಳ ಹುಲುಸಾಗಿದೆ. ಒಂದೊಂದು ಪ್ರಕಾರವನ್ನು ತೆಗೆದುಕೊಂಡೇ ಪಿಎಚ್.ಡಿ ಅಧ್ಯಯನ ಮಾಡಬಹುದು, (ಈಗಾಗಲೇ ನಮಗೆ ಗೊತ್ತಿರುವಂತೆ, ಸತ್ಯನಾರಾಯಣ ಮಲ್ಲಿಪಟ್ಟಣ ಅವರು ಮಾಸ್ತಿಯವರ ಕತೆಗಳ ಬಗ್ಗೆಯೂ, ಸುಮಾ ದ್ವಾರಕಾನಾಥ್ ಅವರು ನಾಟಕಗಳ ಕುರಿತಾಗಿಯೂ ಪಿಎಚ್.ಡಿ ಮಾಡಿದ್ದಾರೆ) ಮಾಸ್ತಿಯವರ ವಾಙ್ಮಯ ಅಷ್ಟು ಅಗಾಧವಾದುದು. ಇಂತಹ ಅಗಾಧವಾದ ಮಾಸ್ತಿಯವರ ಒಟ್ಟು ಬರಹಗಳನ್ನು ಸಂಗ್ರಹಿಸಿ ವಿಜಯಶಂಕರ ಅವರು ತಮ್ಮ ' ಮಾಸ್ತಿ ವೆಂಕಟೇಶ ಅಯ್ಯಂಗಾರ್: ಬದುಕು- ಬರಹ' ಎಂಬ ಕೃತಿಯನ್ನು ಹೊರತಂದಿರುವುದು ಬಹಳ ಮಹತ್ವದ ಸಂಗತಿ. ಇದು 'ಕರಿಯನ್ನು ಕನ್ನಡಿಯೊಳಗೆ' ತೋರಿಸುವ ಸಾಹಸದ ಕೆಲಸ. ಇದಕ್ಕಾಗಿ ಅವರನ್ನು ನಾನು ಮತ್ತು ರಘುನಾಥ್ ಅಭಿನಂದಿಸುತ್ತೇವೆ. ಈ ಕೃತಿಯ ಮೊದಲಲ್ಲಿ ಮಾಸ್ತಿಯವರ ತಾತ್ವಿಕ ಪರಿಕಲ್ಪನೆಯ ಜಿಜ್ಞಾಸೆ ಇದೆ. ಮಾಸ್ತಿಯವರ ನಂಬುಗೆ ಇರುವುದು ವಿಶಿಷ್ಟಾದ್ವೈತದಲ್ಲಿ-ಪ್ರಪತ್ತಿ ಮಾರ್ಗದಲ್ಲಿ. ಇದನ್ನು ಜಿ.ಎಸ್. ಆಮೂರ ಅವರು ತಮ್ಮ Essays on Modern Kannada literature ಕೃತಿಯಲ್ಲಿ ಮಾಸ್ತಿಯವರನ್ನು ಕುರಿತ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಅದನ್ನು ವಿಜಯಶಂಕರ ಅವರು ವಿಸ್ತರಿಸಿದ್ದಾರೆ. ಮಾಸ್ತಿಯವರ ಪ್ರಪತ್ತಿ ಮಾರ್ಗದ ಪಯಣವೆಂದರೆ ಅದು ಮಾರ್ಜಾಲ ಕಿಶೋರ ಭಾವದ ಶರಣಾಗತಿಯಿಂದ ಮರ್ಕಟ ಕಿಶೋರ ಭಾವದ ಶರಣಾಗತಿಗೆ ಬೆಳೆದುದು. ಇದು ಕುರುಡಾದ ಅನುಕರಣೆಯ ಮಾರ್ಗವಲ್ಲ. ಬದಲಾಗಿ ಪ್ರಜ್ಞಾಪೂರ್ವಕವಾಗಿ ಆತ್ಮಸಾತ್ ಮಾಡಿಕೊಂಡಿರುವುದು. ಈ ಭಕ್ತಿಯೇ 'ನಂಬುಗೆ ಹಾಗೂ ಪರಂಪರಾಗತವಾದ ಶ್ರದ್ಧೆ ಆಚರಣೆಗಳಿಂದ ಬಿಡುಗಡೆ ಪಡೆದುಕೊಂಡು ಹೇಗೆ ಸ್ವತಂತ್ರ ಹಾಗೂ ಮಾನವೀಯ ಚಿಂತನೆಗಳಾಗುತ್ತವೆ ಎಂಬುದನ್ನು ಬಹಳ ದೀರ್ಘವಾಗಿ ಇಲ್ಲಿ ಲೇಖಕರು ಚರ್ಚಿಸುತ್ತಾರೆ. ಇವೇ ರೂಪಕ ಚಿಂತನೆಗಳಾಗಿ ಅವರ ಬರಹಗಳಲ್ಲಿ ಹೇಗೆ ಯಶಸ್ವಿಯಾಗಿ ಮೈಪಡೆದಿವೆ ಎಂಬುದೇ ಈ ಕೃತಿಯ ಮೂಲ ಗ್ರಹಿಕೆಯಾಗಿದೆ. ಗದ್ಯ ಪದ್ಯದ ನಡುವಿನ ಗೆರೆಯನ್ನು ಮೀರಿದವರು ಮಾಸ್ತಿಯವರು. ಆದುದರಿಂದಲೇ ಅವರ ತಾತ್ವಿಕ ಜಿಜ್ಞಾಸೆ ಪರಸ್ಪರ ಗದ್ಯ ಪದ್ಯಗಳನ್ನು ಪ್ರಭಾವಿಸುತ್ತವೆ. ಯಶೋಧರೆ ನಾಟಕ, ಆಚಾರ್ಯರ ಪತ್ನಿ, ಸಾರಿಪುತ್ರನ ಕಡೆಯ ದಿನಗಳು, ಮುನೇಶ್ವರನ ಮರ, ಮುಂತಾದ ಕತೆಗಳಲ್ಲಿ ಮಾಸ್ತಿಯವರು ಸಂನ್ಯಾಸ ಮತ್ತು ಸಂಸಾರವನ್ನು ಎದುರು ಬದುರಾಗಿಸುತ್ತಾರೆ, ಹಾಗೆ ಮಾಡುವಾಗ ಅವರು ತೋರುವ ಉದಾರವಾದಿ ಮೌಲ್ಯಗಳ ವೈವಿಧ್ಯಮಯ ಚಿಂತನೆಯನ್ನು ಲೇಖಕರು ಅನನ್ಯವಾಗಿ ಬಿಚ್ಚಿಡುತ್ತಾರೆ. ಈ ಚಿಂತನೆಯ ವಿಸ್ತೃತ ವಾಸ್ತವತೆಯನ್ನು -ಗಂಡ ಹೆಂಡತಿಯರು 'ಒಬ್ಬರಿಗೊಬ್ಬರು ಸರಿದುಕೊಂಡು' ನಡೆಸುವ ಸಂಸಾರದ ರಕ್ಷಕ ತತ್ವ, ಸಖಿ ಸಖ ಭಾವ ಹೇಗೆ 'ಶೇಷಮ್ಮ' 'ಸುಬ್ಬಣ್ಣ' ಕಾದಂಬರಿಗಳು ಮತ್ತು 'ಮೊಸರಿನ ಮಂಗಮ್ಮ' (ಆದರೆ ಇಲ್ಲಿ ಅತ್ತೆ ಸೊಸೆ ಒಟ್ಟಾಗುವುದು ಮೂರನೆಯವರ ಕಾರಣಕ್ಕೆ. ಅಲ್ಲಿ ಅತ್ತೆ ಸೊಸೆಯರ ಸ್ವಾರ್ಥವೇ ಅಡಗಿದೆ ಎನ್ನುವುದು ನಿಜ ) ಕತೆಗಳ ಮೂಲಕ ಮುಂದುವರೆದಿದೆ ಎಂಬುದನ್ನು ನಿರೂಪಿಸಿದ್ದಾರೆ. ಮೇಲಿನ ಕತೆಗಳು ಎತ್ತುವ ವಿಭಿನ್ನ ಸಾಮಾಜಿಕ ಕೌಟುಂಬಿಕ ಪ್ರಶ್ನೆಗಳನ್ನು ಮಾಸ್ತಿಯವರು ಬಗೆ ಹರಿಸಿಕೊಳ್ಳುವಲ್ಲಿ 'ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆ'ಯೇ ಅಡಗಿದೆ. "ಮನುಷ್ಯನ ಸದ್ಗುಣಗಳನ್ನು ಎತ್ತಿ ಹಿಡಿಯುವ, ಮೌಲ್ಯಾಧಾರಿತ ಜೀವನದಿಂದ ಔನ್ನತ್ಯವನ್ನು ಸಾಧಿಸಬೇಕೆಂಬ ಆಸಕ್ತಿಯೇ ಮಾಸ್ತಿಯವರ ಸಣ್ಣಕತೆಗಳ ಉದ್ದೇಶ" ಎನ್ನುವ ಲೇಖಕರು, ಮಾಸ್ತಿಯವರ ಈ ಉದ್ದೇಶ ಅವರ 'ಮಂತ್ರೋದಯ, ವೆಂಕಟಿಗನ ಹೆಂಡತಿ, ಶ್ರೀಕೃಷ್ಣನ ಅಂತಿಮ ಸಂದರ್ಶನ, ಆಂಗ್ಲ ನೌಕಾ ಕ್ಯಾಪ್ಟನ್' ಕತೆಗಳಲ್ಲಿ ಹೇಗೆ ಸಾರ್ಥಕವಾಗಿದೆ ಎಂದು ವಿವರಿಸುತ್ತಾರೆ. “ಗಂಡು ಬರಿಯ ಗಂಡಾಗಿ ಯೋಗ್ಯತೆಯನ್ನಳೆಯದೆ, ಮಾನವನಾಗಿ ನೋಡಿದರೆ, ಒಂದು ಹೆಣ್ಣಿನ ತಪ್ಪು ಒಂದು ಗಂಡಿನ ತಪ್ಪಿಗಿಂತ ಹೆಚ್ಚಿನ ತಪ್ಪ ಆಗುವುದಿಲ್ಲ” ಎನ್ನುವ ಆಂಗ್ಲ ನೌಕಾ ಕ್ಯಾಪ್ಟನ್ ಕತೆಯ ಸಾಲುಗಳು 'ವೆಂಕಟಿಗನ ಹೆಂಡತಿ' ಕತೆಯಲ್ಲೂ ಸಾರ್ಥಕ ಪಡೆದಿರುವುದರ ಕಡೆಗೆ ಲೇಖಕರು ಗಮನ ಹರಿಸುತ್ತಾರೆ. ಮಾಸ್ತಿಯವರು ತಮ್ಮ ಚಿಂತನೆಯನ್ನು ಅನೇಕ ಬಗೆಯಲ್ಲಿ, ರೂಪಗಳಲ್ಲಿ ತಮ್ಮ ಕೃತಿಗಳಲ್ಲಿ ಮತ್ತೆ ಮತ್ತೆ ಪರೀಕ್ಷೆಗೆ ಒಳಪಡಿಸುತ್ತಾರೆ ಎನ್ನುವ ಲೇಖಕರ ಅದೇ ಮಾತುಗಳನ್ನು ಇದು ಪುಷ್ಟೀಕರಿಸುತ್ತದೆ. ಊಟಮಾಡದೇ ತನಗಾಗಿ ಕಾಯುತ್ತಿದ್ದ ತಾಯಿ ಮತ್ತು ಹೆಂಡತಿಯನ್ನು ಆಗ್ರಹ ಪೂರ್ವಕ ತನಗಿಂತ ಮೊದಲು ಊಟ ಮಾಡಬೇಕೆಂದು ಒಪ್ಪಿಸಿದ ಮಾಸ್ತಿಯವರ ಅಂತಃಕರಣವೇ ಮುಂದೆ ಕತೆ ಕಾದಂಬರಿಗಳಲ್ಲಿ ರೂಪಕ ಸದೃಶವಾಗಿ ಮೈಪಡೆದಿರುವುದನ್ನು ತಿಳಿಸುತ್ತಾರೆ. ಗಂಡು ಹೆಣ್ಣಿನ ನಡುವಿನ ಸಮ- ವಿಷಮ ಸಂಸಾರಗಳಲ್ಲಿ, ಮಾಸ್ತಿಯವರಿಗೆ ಮಹಿಳೆಯರ ಬಗ್ಗೆ ಸಹಜವಾಗಿಯೇ ಇದ್ದ ಈ ಅಂತಃಕರಣ ಕೆಲಸಮಾಡಿರುವ ರೀತಿಯನ್ನು ಲೇಖಕರು ಗುರುತಿಸುತ್ತಾರೆ. ಕೆಲವು ಕತೆಗಳಲ್ಲಿ ಹೆಣ್ಣಿನ ಬಗೆಗೆ ಕಂಡು ಬರುವ ಮಾಸ್ತಿಯವರ ಸಾಂಪ್ರದಾಯಿಕ ನಿಲುವನ್ನು ಮಾತ್ರ ಇಟ್ಟುಕೊಂಡು ಕೆಲವು ಸ್ತ್ರೀವಾದಿಗಳು ಮಾಸ್ತಿಯವರನ್ನು ಸ್ತ್ರೀವಿರೋಧಿ ಎಂದದ್ದಿದೆ. ಇಲ್ಲಿ, ಮಾಸ್ತಿಯವರ ಒಟ್ಟು ಬರಹಗಳ ಹಿನ್ನೆಲೆಯಲ್ಲಿ ಅವರ ಕೃತಿಗಳನ್ನು ವಿಶ್ಲೇಷಿಸಬೇಕೆಂಬ ಲೇಖಕರ ಅಭಿಪ್ರಾಯ ಮಾಸ್ತಿಯವರ ಬರಹಗಳಿಗೊಂದು ಅಖಂಡ ನೋಟವನ್ನು ದಯಪಾಲಿಸುತ್ತದೆ. ಆದರೆ ಕೆಳವರ್ಗ ಮತ್ತು ವಿದೇಶೀ ಕತೆಗಳಲ್ಲಿ ಕಂಡು ಬರುವ ಮಾಸ್ತಿಯವರ ಸ್ತ್ರೀಪರ ಉದಾರವಾದಿ ನಿಲುವು ಮೇಲುವರ್ಗಕ್ಕೆ ಸೇರಿದ ಕಥೆಗಳ ಸ್ತ್ರೀಪಾತ್ರಗಳಲ್ಲಿ ಕಾಣಿಸುವುದಿಲ್ಲ. ಮೇಲುಜಾತಿಯ ಹೆಣ್ಣು ಪಾತ್ರಗಳಾದ ;ಮೇಲೂರಿನ ಕುರುಡಿ ಲಕ್ಷಮ್ಮ, ಕಾಮನ ಹಬ್ಬದ ಒಂದು ಕತೆಯ ಸಾವಿತ್ರಮ್ಮ, ಕೃಷ್ಣಮೂರ್ತಿ ಯ ಹೆಂಡತಿ, ಸನ್ಯಾಸ ವಲ್ಲದ ಸಂನ್ಯಾಸ'ದ ನರಸಿಂಹಯ್ಯನ ಹೆಂಡತಿ ಈ ಪಾತ್ರಗಳೆಲ್ಲ ಪಾತಿವ್ರತ್ಯದ ಮಹಿಮೆಯನ್ನು ಸಾರುತ್ತಾರೆಯೋ ಎಂಬಂತೆ ನಡೆದುಕೊಳ್ಳುತ್ತಾರೆ. ಪಿತೃಪ್ರಧಾನ ವ್ಯವಸ್ಥೆಯ ಬಲಿಪಶುಗಳಂತೆ ಕಾಣುತ್ತಾರೆ. ಈ ವರ್ಗಕ್ಕೆ ಮಾತ್ರ ಸಂಸ್ಕೃತಿಯನ್ನು ಜತನವಾಗಿ ಕಾಪಾಡಿಕೊಂಡು ಹೋಗಲು ಬೇಕಾದ ಮೌಲ್ಯಗಳಿವೆ, ಪ್ರಾಮಾಣಿಕ ನಿಷ್ಠೆಗಳಿವೆ, ಜವಾಬ್ದಾರಿಗಳಿವೆ ಎಂಬುದು ಈ ಕತೆಗಳ ಧ್ವನಿಯಾಗಿದೆ. ಮಾಸ್ತಿಯವರನ್ನು ಈ ಮಿತಿಗಳ ಮೂಲಕವೇ ಒಪ್ಪಿಕೊಳ್ಳಬೇಕಾಗುತ್ತದೆ. ಲೇಖಕರು ಇದನ್ನು ಗಮನಕ್ಕೆ ತೆಗೆದುಕೊಂಡಂತಿಲ್ಲ. (ಮುಂದುವರೆಯುವುದು)

No comments:

Post a Comment