Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Thursday, November 26, 2020
ಗಿರಿಜಾ ಶಾಸ್ತ್ರಿ - ಕೆ. ಸತ್ಯನಾರಾಯಣ ಅವರ " ಮಹಾ ಕಥನದ ಮಾಸ್ತಿ "
ಮಾಸ್ತಿಯವರ ಬೃಹತ್ ಕಥಾಕೋಶವನ್ನು ಹೊಕ್ಕು ಹೊರಬಂದಿದ್ದಾಯಿತು. ಕೇವಲ ಕಾದಂಬರಿಯೇ ಏಕೆ,
ಕಥೆಗಳೂ ಅವುಗಳ ಅಖಂಡ ಓದು, ಗ್ರಹಿಕೆ ಮತ್ತು ಕಾಣ್ಕೆಗಳಿಂದ ಮಹಾಕಥನವಾಗಬಹುದೆಂದು (grand
narrative) ನಿರೂಪಿಸಿದ್ದೀರಿ. ಅಭಿನಂದನೆಗಳು ನಿಮಗೆ. ಮಾಸ್ತಿಯವರ ಕತೆಗಳ ಓದಿನ ಬಗೆಗಿನ ನಿಮ್ಮ
ಗ್ರಹಿಕೆ ವಿಶ್ಲೇಷಣೆಗಳು ನಿಮ್ಮ ಓದಿನ ಆಳ ಅಗಲಗಳನ್ನು ಪರಿಚಯಿಸುತ್ತದೆ. ಅವರ ಕತೆಗಳನ್ನು ನೀವು
ಕೇಳಿಸಿಕೊಂಡ, ಗ್ರಹಿಸಿದ, ಪ್ರಸ್ತುತಗೊಳಿಸಿದ ರೀತಿಗೆ "ಮಹಾಕಥನದ ಮಾಸ್ತಿ " ಎಂಬ ನಿಮ್ಮ ಅನನ್ಯ
ಅಧ್ಯಯನವೇ ಸಾಕ್ಷಿ. ಅವು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ಬಾದಶಹನ ನ್ಯಾಯ, ಪಂಡಿತನ
ಮರಣ ಶಾಸನ, ಸುಶೀಲಾ ರಜಾಕಾರ್ ಮುಂತಾದ ಮುಸ್ಲಿಂ ಕತೆಗಳು ಮೂಲಕ ವಿಶ್ಲೇಷಣೆ
ಮಾಡಿದ್ಸೀರಿ. ಅವರ ಕತೆಗಳನ್ನು ನಾವು ಕೇಳಿಸಿಕೊಳ್ಳದೇ, ಕಾಣದೇ ಹೋದದ್ದರಿಂದಲೇ ರಾಮಜನ್ಮ
ಭೂಮಿ, ಟಿಪ್ಪು ಕುರಿತ ವಾಗ್ವಾದ ಮುಂತಾದವುಗಳನ್ನು ನಿಭಾಯಿಸುವುದರಲ್ಲಿ ಹೆಣಗಾಡುತ್ತಿದ್ದೇವೆ ಎಂಬ
ನಿಮ್ಮ ಅಭಿಪ್ರಾಯ ತುಂಬಾ ಸರಿಯಾದುದು.
ಟಾಲ್ಸ್ಟಾಯ್ ಮತ್ತು ಮಾಸ್ತಿಯವರನ್ನು ಒಟ್ಟಿಗೇ ಓದುವುದರ ಮಹತ್ವವನ್ನು ತಿಳಿಸಿದ್ದೀರಿ. ಸಾವಿನ
ಸನ್ನಿಧಿಯಲ್ಲಿ ಬದುಕಿನ ಅಗಾಧತೆಯ ಪರಿಚಯ ಆಗುವುದರ ಬಗ್ಗೆ ಹೇಳಿರುವುದು ವಿಶಿಷ್ಟವಾಗಿದೆ. ಹೀಗೆ
ಜೊತೆಯಾಗಿ ಓದುವುದರಿಂದಲೇ ನಮಗೆ 'ಯಾವ ದರ್ಶನ ಹೆಚ್ಚು ಪ್ರಸ್ತುತ ಆತ್ಮೀಯ ಎಂಬುದು
ಜಾಗೃತವಾಗುತ್ತಲೇ ಹೋಗುತ್ತದೆ" ಎಂದು ಅಭಿಪ್ರಾಯ ಪಟ್ಟಿರುವುದು ಕತೆಗಳ ಹೊಸ ರೀತಿಯ ಓದಿಗೆ
ದಾರಿ ಮಾಡಿಕೊಡುತ್ತದೆ.
ಮಾಸ್ತಿಯವರ ಪ್ರಾರಂಭದ ಕತೆಗಳೇ ಅವರ ಭವಿಷ್ಯದ ಕತೆಗಳಿಗೆ ತಾತ್ವಿಕ ತಳಹದಿಯನ್ನು ನಿರ್ಮಾಣ
ಮಾಡಿದವು ಎಂಬುದನ್ನು, ಅವರ ಹಾಸ್ಯ ಪ್ರಜ್ಞೆಯ ರಂಗಪ್ಪನ ಕತೆಗಳಿಂದ ಹಿಡಿದು ದರ್ಶನರೂಪೀ
“ಮಾಯಣ್ಣನ ಕನ್ನಡಿ" (“ಬದುಕಿನ ಉದ್ದೇಶವೇನು. ಬದುಕಿನಲ್ಲಿ ಕರುಣೆ, ಪ್ರೀತಿ ತಿಳುವಳಿಕೆಯ
ಸ್ಥಾನವೇನು ಮುಂತಾದ ಜಿಜ್ಞಾಸೆ”)ಯವರೆಗಿನ ಕಥಾವಿಸ್ತಾರದಲ್ಲಿ ಈ ತಾತ್ವಿಕತೆಯ ವಿಕಾಸವನ್ನೂ
ಅದರ ಎತ್ತರವನ್ನೂ ತೆರೆದು ತೋರಿಸಿದ್ದೀರಿ.
ದಾಂಪತ್ಯ, ಕುಟುಂಬ, ಗಂಡು ಹೆಣ್ಣಿನ ಸಂಬಂಧ, ಸಾಮಾಜಿಕ , ರಾಜಕೀಯ ಧಾರ್ಮಿಕ ಸಮಸ್ಯೆಗಳು,
ನೈತಿಕತೆ, ರಾಜಧರ್ಮ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕತೆಗಳನ್ನು ಆರಿಸಿಕೊಂಡು ಅವುಗಳ
ಅನನ್ಯತೆ, ಪ್ರಸ್ತುತೆಯನ್ನು ವಿಶ್ಲೇಷಣೆ ಮಾಡುತ್ತಲೇ ಆ ಕತೆಗಳಿಗೆ ಪೂರಕವಾದ ಉಳಿದ ಕತೆಗಳನ್ನೂ
ಉಲ್ಲೇಖ ಮಾಡಿದ್ದೀರಿ. ಇದು ಮಾಸ್ತಿಯವರ ಅಖಂಡ ದೃಷ್ಟಿಕೋನವನ್ನು ಎತ್ತಿ ಹಿಡಿಯಬೇಕೆನ್ನುವ ನಿಮ್ಮ
ನಿಲುವಿಗೆ ಉದಾಹರಣೆಯಾಗಿದೆ.
ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man
ಇನ್ನು ಮಾಸ್ತಿಯವರ ಹೆಣ್ಣು ಪಾತ್ರಗಳ ಕುರಿತು. 'Woman is, man and woman put together'
ಎಂದು ಮಾಸ್ತಿಯವರೇ ಒಮ್ಮೆ ಹೇಳಿದ್ದರೆಂದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು
ಬರೆಯುತ್ತಾರೆ. (ಶ್ರೀನಿವಾಸ : ಅಭಿನಂದನಾ ಗ್ರಂಥ). ಅವರು ಮುಂದುವರೆದು " ಸ್ತ್ರೀ ಯು
ತುಳಿಯಲ್ಪಟವಳೆಂಬ ಕಾರಣಗಳಿಂದಲೋ ಏನೋ ಅವರ ಆದರವು ಅವರ ಕಡೆಗೇ ಇದೆ. ಸ್ತ್ರೀಯ
ಪ್ರಾಧಾನ್ಯವನ್ನು ಹೆಚ್ಚಿಸಿ ಆ ಮೂಲಕ ಪುರುಷನ ಪರಿಚಯ ಮಾಡಿಸುವುದು ಶ್ರೀನಿವಾಸರ ಮಾರ್ಗ"
ಎಂದು ಹೇಳುತ್ತಾರೆ.
ನೀವೂ ಕೂಡ ನಿಮ್ಮ ಕೃತಿಯಲ್ಲಿ ಮಾಸ್ತಿಯವರ ಕತೆಗಳಲ್ಲಿ ಎಲ್ಲಾ ಸ್ತ್ರೀಯರು ಅನ್ಯಾಯದ ವಿರುದ್ಧ
ಒಂದಲ್ಲಾ ಒಂದು ಬಗೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದೀರಿ. ಇದು ಮಾಸ್ತಿಯವರ
ಕೆಳವರ್ಗದ ಹೆಣ್ಣುಮಕ್ಕಳ ( ಚೆನ್ನಮ್ಮ, ಎಮ್ಮೆ ಕಳವು,ಮುನೀಶ್ವರನ ಮರ, ಪಕ್ಷಿಜಾತಿ, ದುರದೃಷ್ಟದ
ಹೆಣ್ಣು) ಪಾತ್ರಗಳಿಗಾಗಲೀ, ವಿದೇಶಿ ಪಾತ್ರಗಳಿರುವ (ಚಟ್ಟೆಕ್ಕಾರ ತಾಯಿ, ಆಂಗ್ಲ ನೌಕಾ ಕ್ಯಾಪ್ಟನ್)
ಕತೆಗಳಿಗಗಾಲೀ ಸರಿಯಿರಬಹುದೇನೋ.
ಕೃಷ್ಣಮೂರ್ತಿಯ ಹೆಂಡತಿಗೆ (ಗಂಡ ಸತ್ತ ಸುದ್ದಿ ತಿಳಿದು) "ಬಾವಿಗೆ ಬೀಳುವುದನ್ನು ಬಿಟ್ಟು ಬೇರೆ ಯಾವ
ದಾರಿ ಇದೆ" ಎನ್ನುವ ಮಾತನ್ನು ನೀವು ಒಪ್ಪುತ್ತೀರಿ. ಮಾಸ್ತಿಯವರಿಗಿಂತ ಹತ್ತಿಪ್ಪತ್ತು ವರುಷಗಳಷ್ಟು
ಹಿಂದೆಯೇ ಗುಲ್ವಾಡಿ ವೆಂಕಟರಾಯರಾಗಲೀ, ಕೆರೂರು ವಾಸುದೇವಾಚಾರ್ಯರಾಗಲೀ,
ಕಲ್ಯಾಣಮ್ಮನವರಾಗಲೀ 'ಇಂದಿರೆಯರ'ನ್ನು ನಿರ್ಮಾಣ ಮಾಡಲಿಲ್ಲವೇ? ಪ್ರಶ್ನೆಯೆಂದರೆ
ಮೇಲುಜಾತಿಯ ಹೆಣ್ಣು ಪಾತ್ರಗಳಾದ 'ಮೇಲೂರಿನ ಕುರುಡಿ ಲಕ್ಷಮ್ಮ,', 'ಕಾಮನ ಹಬ್ಬದ ಒಂದು
ಕತೆ'ಯ ಸಾವಿತ್ರಮ್ಮ, 'ಕೃಷ್ಣಮೂರ್ತಿ ಯ ಹೆಂಡತಿ', 'ಸನ್ಯಾಸವಲ್ಲದ ಸನ್ಯಾಸ'ದ ನರಸಿಂಹಯ್ಯನ
ಹೆಂಡತಿ ಈ ಪಾತ್ರಗಳ ಪ್ರತಿರೋಧವು ಪ್ರತಿರೋಧದಂತೆ ಕಾಣದೆ ಬಲಿಪಶುಗಳಂತೆ ಕಾಣುತ್ತದೆ.
ಇದನ್ನು ಪ್ರತಿರೋಧ ಎಂದರೂ ಇವರೆಲ್ಲರ ಈ ಪ್ರತಿರೋಧವು ಇಷ್ಟು ದುರ್ಬಲವಾಗಲು ಕಾರಣವೇನು?
ಬಹುಶಃ ಅವು ಪ್ರಾರಂಭದ ಕತೆಗಳು ಎನ್ನುವ ಸಮಾಧಾನ ಸಾಕೆ? ಅಥವಾ ಮೇಲು ಜಾತಿಯ
ಹೆಣ್ಣುಮಕ್ಕಳಿಗೆ ಮಾತ್ರ ಸಂಸ್ಕೃತಿಯನ್ನು ಜತನವಾಗಿ ಕಾಪಾಡಿಕೊಂಡು ಹೋಗಲು ಬೇಕಾದ
ಮೌಲ್ಯಗಳಿವೆ ಎಂಬುದನ್ನು ಸಾರುವುದೋ?. ಈ ಅನುಮಾನಕ್ಕೆ ಕಾರಣ, ತಿರುಮಲಾಂಬ ಅವರ ನಭ,
ವಿರಾಗಿನಿ ಕಾದಂಬರಿಗಳಿಗೆ ಮಾಸ್ತಿಯವರು ಕಟುವಾಗಿ ವಿಮರ್ಶಿಸಿದ್ದು (ಆಮೇಲೆ ಅವರು ಪಶ್ಚಾತ್ತಾಪ
ಪಟ್ಟದ್ದು ಬೇರೆಯ ಮಾತು). ಚಿ.ನ. ಮಂಗಳ ತಿರುಮಲಾಂಬ ಅವರನ್ನು ಮೊದಲ ಬಾರಿಗೆ ನೋಡಲು
ಮದ್ರಾಸಿಗೆ ಹೋಗಿದ್ದರಂತೆ ಆಗ ಅವರ ಎದುರಿಗೆ ಬಂದ ತಿರುಮಲಾಂಬ 'ಅವಳು ಸತ್ತು ಹೋದಳು'
ಎಂದು ಹೇಳಿದರಂತೆ.
ತಿರುಮಲಾಂಬ ಅವರ ಪ್ರಸ್ತಾಪವನ್ನು ನೀವು ಮಾಡಿದ್ದೀರಿ. 'ಬಾದಶಹನ ನ್ಯಾಯ' ಬರೆದ
ಮಾಸ್ತಿಯವರು, ಸ್ತ್ರೀಪಕ್ಷಪಾತಿಯಾದ ಮಾಸ್ತಿಯವರು ತಿರುಮಲಾಂಬ ಅವರನ್ನು ಹೀಗೆ ಹಣಿದದ್ದು
ಸರಿಯೇ ಎನ್ನುವುದು ನನಗೆ ಇಂದಿಗೂ ಕಾಡುವ ಸಂಗತಿ. ಮಾಸ್ತಿಯವರನ್ನು ಇಂತಹ ಎಲ್ಲಾ ಋಣಾತ್ಮಕ
ಅಂಶಗಳ ಜೊತೆಗೇ ನಾವು ಒಪ್ಪಿಕೊಳ್ಳ ಬೇಕಲ್ಲವೇ?
ಕೆ.ವಿ. ನಾರಾಯಣ ಮತ್ತು ಎಚ್.ಎಸ್ ರಾಘವೇಂದ್ರರಾವ್ ಅವರು ಮಾಸ್ತಿಯವರೊಡನೆ ನಡೆಸಿದ
ಸಂದರ್ಶನದಲ್ಲಿ ಅವರ ಮಿತಿಗಳನ್ನು (ಪ್ರಶ್ನೆಗಳನ್ನು ಎದುರಿಸುವ ರೀತಿ) ನೀವು ನಿಷ್ಪಕ್ಷಪಾತಿಯಾಗಿ
ಗುರುತಿಸಿದ್ದೀರಿ ಇದು ಇತ್ಯಾತ್ಮಕ ಅಂಶ.
ಮಾಸ್ತಿಯವರನ್ನು ಅವರ ಕತೆಗಳನ್ನು ನವೋದಯದ ಆನಂತರದವರು, ಮುಖ್ಯವಾಗಿ ನವ್ಯ
ವಿಮರ್ಶಕರು ಅರ್ಥಮಾಡಿಕೊಂಡಿದ್ದಕ್ಕಿಂತ ಅಪಾರ್ಥಮಾಡಿಕೊಂಡಿದ್ದೇ ಹೆಚ್ಚು. ಅವರ ಕತೆಗಳಲ್ಲಿ
ಕಾಣುವ ಮನುಷ್ಯನ ಧಾರಣ ಶಕ್ತಿಯನ್ನು, ಕೇಡಿನ ಪರಿಕಲ್ಪನೆಯನ್ನು ಲೇವಡಿಮಾಡಿದವರೇ ಬಹಳ.
ಇಂತಹ ಒಂದು ತಪ್ಪು ಕಲ್ಪನೆಯನ್ನು ನಿಮ್ಮ ಅಧ್ಯಯನ ಶೀಲ ಕೃತಿಯಲ್ಲಿ ಸರಿಪಡಿಸಲು ಪ್ರಯತ್ನಿಸಿದ್ದೀರಿ.
ಮಾಸ್ತಿಯವರ ಕಥಾ ಲಕ್ಷ್ಯವಾದ “ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ
ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯಲ್ಲಿ” (ಯಶವಂತ ಚಿತ್ತಾಲರು) ಮಾಸ್ತ್ತಿಯವರು
ಗ್ರ್ರಹಿಸಿದ್ದೆಷ್ಟು, ಕಂಡೆದ್ದೆಷ್ಟು?, ಕಂಡದ್ದನ್ನು ಇನ್ನೊಬ್ಬರಿಗೆ ಕತೆಮಾಡಿ ಹೇಳುವಲ್ಲಿ ಮಾಸ್ತಿಯವರ ಯಾವ
ನಂಬಿಕೆಗಳು ಬದುಕಿನ ಧೋರಣೆಗಳು ಕೆಲಸಮಾಡಿವೆ
Labels:
k. satyanarayana,
masti,
ಮಾಸ್ತಿ
Location:
Udupi, Karnataka, India
Subscribe to:
Post Comments (Atom)
No comments:
Post a Comment