Powered By Blogger

Monday, November 16, 2020

ಎಮ್ ಆರ್. ಕಮಲ - ಅವು ಪದಗಳಲ್ಲ , ದನಿಗಳಲ್ಲ /M R. Kamala / Pablo Neruda

ಅವು ಪದಗಳಲ್ಲ, ದನಿಗಳಲ್ಲ -ಎಂ. ಆರ್. ಕಮಲ ಪ್ಯಾಬ್ಲೋ ನೆರೂಡನ ಸಮಗ್ರ ಕಾವ್ಯವನ್ನು ಪರೀಕ್ಷೆಗಾಗಿ ಓದುವಾಗ ಅವಳಿಗೆ ಹತ್ತೊಂಬತ್ತು ವರ್ಷ. ಅವನ ಒಂದೊಂದೇ ಕವಿತೆಯನ್ನು ಎದೆಗಿಳಿಸಿಕೊಳ್ಳುತ್ತಿದ್ದಾಗ ವಿಚಿತ್ರವಾಗಿ ಕಾಡಿದ್ದು ಅವನ `ಕಾವ್ಯ' ಎಂಬ ಕವಿತೆ! ಕವಿತೆಯೇ ಕವಿಯನ್ನು ಅರಸಿಕೊಂಡು ಬಂದು ಬರೆಸಿಕೊಳ್ಳುವುದೇ ಕವಿತೆಯ ವಸ್ತು. ಅದು ಎಲ್ಲಿಂದ ಹೇಗೆ ಬಂತು ಎನ್ನುವುದು ಕವಿಗೆ ತಿಳಿಯುವುದೇ ಇಲ್ಲ. ನದಿಯಿಂದಲೋ, ಶಿಶಿರ ಋತುವಿನಿಂದಲೋ ಒಟ್ಟಿನಲ್ಲಿ ನಿಸರ್ಗದಿಂದ ಬಂದಿದ್ದರೂ ಬಂದಿರಬಹುದೇನೋ ಎಂದು ಕವಿಗೆ ಅನ್ನಿಸುತ್ತದೆ. ಆದರೆ ಅವು ಪದಗಳಲ್ಲ, ದನಿಗಳಲ್ಲ, ಮೌನವಲ್ಲ . ಕತ್ತಲಿನ ಕೊಂಬೆಯಿಂದ, ಭಾವಾತಿರೇಕದ ಬೆಂಕಿಯಿಂದ, ಯಾವುದೋ ರಸ್ತೆಯಲ್ಲಿ, ಒಬ್ಬಂಟಿ ಇದ್ದವನನ್ನು, ಯಾರಿಗೂ ಗುರುತು ಪರಿಚಯವಿಲ್ಲದವನನ್ನು ಬಂದು ಮುಟ್ಟಿ ಎಳೆದು ತಂದುಬಿಟ್ಟಿತು! ಕವಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಆತ್ಮದೊಳಗೊಂದು ಕದಲಿಕೆ ಆರಂಭವಾಗಿದ್ದು ನಿಜ. ಆ ಬೆಂಕಿ ಎಂಥದ್ದೆಂದು ಕಂಡುಕೊಳ್ಳಲು ಪ್ರಯತ್ನಪಟ್ಟು ದುರ್ಬಲವಾದ ಮೊದಲ ಸಾಲೊಂದನ್ನು ಬರೆದ. ಅವನು ಬರೆದದ್ದರ ಬಗ್ಗೆ ಅಂಥ ಆತ್ಮವಿಶ್ವಾಸವು ಇರಲಿಲ್ಲ. ಆ ಸಾಲಿನಲ್ಲಿ ಸತ್ವವೇ ಇರಲಿಲ್ಲ. ಆದರೂ ಅದು ಸ್ವರ್ಗದ ಬಾಗಿಲನ್ನು ತೆರೆಸಿತು. ಗ್ರಹ, ತಾರೆಗಳತ್ತ ಒಯ್ದಿತು. ಮರುಭೂಮಿಯಂತಿದ್ದ ಭೂಮಿಯಲ್ಲಿ ಗಿಡಗಳು ಹುಟ್ಟಿ, ಹೂವರಳಿ ಜೀವಂತಿಕೆ ಮೂಡಿತು. ಕಾವ್ಯದ ಗುಲಾಮನಾಗಿ ಕೆಲವೊಮ್ಮೆನೋವನ್ನು ಅನುಭವಿಸಬೇಕಾಯಿತು. ಆದರೆ ನಕ್ಷತ್ರಗಳೊಂದಿಗೆ ಓಡುತ್ತ, ಎದೆ ಹಗುರಾಗಿ ಗಾಳಿಯಲ್ಲಿ ತೇಲಿತು. ಈ ಇಂಥ ಮಂಕು ಕವಿದ ಗಳಿಗೆಗಳಲ್ಲಿ ತನ್ನನ್ನು ಕೈಹಿಡಿದು ನಡೆಸುತ್ತಿರುವುದೇನು, ನಕ್ಷತ್ರದಿಂದ ನಕ್ಷತ್ರಕ್ಕೆ ಕಾಲಿಡಲು ಅನುವು ಮಾಡಿಕೊಡುತ್ತಿರುವ ಶಕ್ತಿ ಯಾವುದು? ಅಂಗೈ ಅಗಲದ ಜಾಗದಲ್ಲಿ ಕಣ್ಮನ ಸೆಳೆವ ಹೂದೋಟವನ್ನು ನಿರ್ಮಿಸಿಕೊಂಡ ಬಗೆ ಹೇಗೆ? ಎದೆಯ ಕತ್ತಲನ್ನು ಬಗೆದು ಬಗೆದು ಮಿಂಚು ಮರಿಗಳ ತಂದಿದ್ದು ಹೇಗೆ ಎಂದೆಲ್ಲ ಯೋಚಿಸುತ್ತಾಳೆ. ಬಹುಶಃ ಓದು, ಬರವಣಿಗೆಯೇ! `ಅರ್ಥಶಾಸ್ತ್ರ'ವನ್ನೇ ವ್ಯಾಸಂಗಕ್ಕೆ ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದರೂ `ಅರ್ಥ' ಅವಳ ಬದುಕಿನಲ್ಲಿ ವಿಶೇಷ ಅರ್ಥ ಪಡೆದುಕೊಳ್ಳಲೇ ಇಲ್ಲ. ಬದುಕಿನ ಕಾವ್ಯ ಅರ್ಥವಾದ ಹಾಗೆ ಗಣಿತ ತಿಳಿಯಲೇ ಇಲ್ಲ . ಅದರ ಬಗ್ಗೆ ಹೆಮ್ಮೆ, ಕೀಳರಿಮೆ ಯಾವುದೂ ಇಲ್ಲ. ಅವಳು ತನ್ನನ್ನು ಕವಿಯೆಂದು ಗುರುತಿಸಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಯಾರು ಕವಿಯಲ್ಲ? ಬರೆದವರು ಮಾತ್ರವೇ ಎಂಬ ಪ್ರಶ್ನೆ ಅವಳನ್ನು ಕಾಡುತ್ತಿರುತ್ತದೆ. ಬರೆದವರಲ್ಲೂ `ಆಹಾ ಕವಿ' `ಓಹೋ ಕವಿ' ಎನಿಸಿಕೊಂಡವರು ಕವಿಗಳೇ? ಮೊದಲಿನಿಂದಲೂ ಅವಳು ಈ ಸಾಂಸ್ಕೃತಿಕ ರಾಜಕಾರಣಗಳಿಂದ ದೂರ, ಬಹುದೂರ! ಯಾರಾದರೂ ತನ್ನ ಬರಹವನ್ನು ಮೆಚ್ಚಿದರೆ ಮನಸ್ಸು ಅರಳುವುದು ಮಾತ್ರ ಸುಳ್ಳಲ್ಲ. ಬದುಕಿನ ಕವಿತೆಯೇ ಅವಳಿಗೆ ಬರೆದ ಕವಿತೆಗಳಿಗಿಂತ ಹೆಚ್ಚು ಪ್ರಿಯ. ಅಲ್ಲೇ ಬಡಿದಾಡಿ ಹೊಸ ಲಯ, ಛಂದಸ್ಸನ್ನು ಕಂಡುಕೊಂಡಿದ್ದಾಳೆ, ಮಾರ್ಗವನ್ನು ಅರಸಿದ್ದಾಳೆ, ದೇಸಿಯಲ್ಲಿ ನಿಂತಿದ್ದಾಳೆ. ದಿನ ದಿನದ ರಗಳೆಯ ಸಾಂಗತ್ಯವೂ ಅಲ್ಲೇ. ಪ್ರತಿಕ್ಷಣ ತನ್ನ ವಿದ್ಯಾರ್ಥಿಗಳ ಬದುಕನ್ನು ಕವಿತೆಯಾಗಿಸುವುದು ಹೇಗೆ ಎಂದೇ ಆಲೋಚಿಸಿದ್ದಾಳೆ. * ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಅವಳು ಕವಿತೆ ಬರೆಯುತ್ತಲೇ ಇದ್ದಾಳೆ. ಯಾರೋ ಬೈದಾಗ, ಅವಮಾನಿಸಿದಾಗ, ಎದೆಯ ತಳಮಳಗಳನ್ನು ತಾಳದೆ ಹೋದಾಗ, ಪ್ರೀತಿ ಹುಟ್ಟಿದಾಗ, ಖುಷಿಯಾದಾಗ, ನಿಸರ್ಗದೊಂದಿಗೆ ಒಡನಾಡಿದಾಗ, ಕೆಲಸದ ಒತ್ತಡ ತಾಳಿಕೊಳ್ಳುವುದು ಅಸಾಧ್ಯವಾಗಿದ್ದಾಗ ಹೀಗೆ ಎಲ್ಲ ಗಳಿಗೆಗಳಲ್ಲೂ ಕವಿತೆಗಳನ್ನೇ ಆಶ್ರಯಿಸಿದ್ದಾಳೆ. ಬರೆದ ಕವಿತೆಗಳಲ್ಲಿ ಶೇಕಡಾ ಹತ್ತನ್ನು ಕೂಡ ಪ್ರಕಟಿಸಲಿಲ್ಲ. ಪ್ರಕಟಣೆ ಮಾಡಬೇಕು ಎಂದೂ ಅನ್ನಿಸಲಿಲ್ಲ. ಕವಿತೆ ತನ್ನನ್ನೇಕೆ ಅರಸಿ ಬಂದಿತು ಎಂದು ನೆರೂಡನಂತೆ ಅವಳು ಯೋಚಿಸಿದ್ದಾಳೆ. ಅವಳು ಬಹಳ ಹಿಂದೆ ವಿಸಾವ ಸಿಂಬೋಸ್ಕಳ ಕವಿತೆಯೊಂದನ್ನು ಅನುವಾದಿಸಿದ್ದಳು. ಅದರ ಕೆಲವು ಸಾಲುಗಳು ಇಂದು ನೆನಪಿಗೆ ಬರುತ್ತಿವೆ. `ಕವಿತೆ ಬರೆಯದ ಎಷ್ಟೋ ಕುಟುಂಬಗಳು ನಮ್ಮ ಸುತ್ತಮುತ್ತೆಲ್ಲ ಇವೆ. ಈ ಸಾಂಕ್ರಾಮಿಕ ಒಮ್ಮೆ ಹರಡಿತೆಂದರೆ ತಡೆಯುವುದು ಕಷ್ಟ ಜಲಪಾತದಂತೆ ಧುಮ್ಮಿಕ್ಕುತ್ತದೆ ತಲೆತಲಾಂತರಕ್ಕೆ ಹರಿದು ಸುಳಿಗೆ ಸಿಕ್ಕಿಸುತ್ತದೆ' ಕವಿತೆ ಮತ್ತು ಬದುಕಿನ ಕವಿತೆ ಸೃಷ್ಟಿಸಿದ ಸುಳಿಯಲ್ಲಿ ಅವಳು ಸಂತೋಷದಿಂದಲೇ ಸಿಕ್ಕಿಕೊಂಡಿದ್ದಾಳೆ. ಬಿಟ್ಟುಬಿಡಿ. * ಈ ಭಾರದ ದಿನಗಳಲ್ಲಿ ಎಷ್ಟೊಂದು ಕಲೆಗಳು, ಎಷ್ಟೊಂದು ಜನರ ಮನಸ್ಸನ್ನು ಹಗುರಗೊಳಿಸುತ್ತಿವೆ. `ಕಲೆ' (Arts ) ಯನ್ನೇ ತಿರಸ್ಕರಿಸಿ ನಿರ್ಮಿಸಿದ ಕೃತಕ ಸಮಾಜ ಬಹುಶಃ ಈಗ ಆತ್ಮಾವಲೋಕನ ಮಾಡಿಕೊಳ್ಳಬಹುದೇನೋ! (#ಕ್ವಾರಂಟೈನ್ ಪುಸ್ತಕದಿಂದ ಈ ಲೇಖನ ...ಪುಸ್ತಕ ಬೇಕಾದವರು ಸಂಪರ್ಕಿಸಬಹುದು...ಬದುಕು ಬಣ್ಣವೇ ಆಗಿದ್ದ ಕಾಲದ ಒಂದು ಫೋಟೋ )

No comments:

Post a Comment