Powered By Blogger

Friday, July 2, 2021

ನಾಗೇಶ್ ಹೆಗಡೆ - " ಬೆಳಕಿನ ಬೆಳಕಿಂಡಿ "’ ಯನ್ನೇಕೆ ಮುಚ್ಚಿ ಹೋದಿರಿ ಸುಧೀಂದ್ರ ? /Haldodderi Sudhindra

"ಬೆರಗಿನ ಬೆಳಕಿಂಡಿ"ಯನ್ನೇಕೆ ಮುಚ್ಚಿ ಹೊರಟಿರಿ ಸುಧೀಂದ್ರ? ಇಂದು ನಮ್ಮನ್ನಗಲಿದ ಮಿತ್ರ ಸುಧೀಂದ್ರ ಹಾಲ್ದೊಡ್ಡೇರಿಯವರ ಕುರಿತ ನನ್ನ ಪುಟ್ಟ, ಅವಸರದ ಶ್ರದ್ಧಾಂಜಲಿ ಇಲ್ಲಿದೆ. "ಬುಕ್‌ಬ್ರಹ್ಮ" ಜಾಲತಾಣದ ದೇವು ಪತ್ತಾರ್‌ ಕೋರಿಕೆಯ ಮೇರೆಗೆ ಬರೆದ ಈ ಲೇಖನವನ್ನು ಇಲ್ಲೂ ಪ್ರಕಟಿಸಲು ಅವರು ಅನುಮತಿ ನೀಡಿದ್ದಾರೆ. * ಸೂಪರ್‌ ಸಾನಿಕ್‌ ಕಕ್ಷೆಯಲ್ಲಿ ಕಣ್ಮರೆಯಾದ ಸುಧೀಂದ್ರ ಅವರು ರಾಕೆಟ್‌ ತಜ್ಞರಾಗಿದ್ದರು. ರಾಕೆಟ್‌ ವೇಗದಲ್ಲಿ ಅವರ ಬರೆವಣಿಗೆ ಸಾಗಿತ್ತು. ಅವರ ಕೊನೆಯ ಬರಹ ಜುಲೈ ೧ರ ʼಸುಧಾʼದಲ್ಲಿ ಪ್ರಕಟವಾಗಿತ್ತು. ಅದು ಸೂಪರ್‌ಸಾನಿಕ್‌ “ಕಾಂಕಾರ್ಡ್‌” ವಿಮಾನಗಳ ಬಗೆಗಿತ್ತು. ಅದರ ಶಿರೋನಾಮೆ “ಮೀರಬಹುದೆ ಸದ್ದನೂ -ವೇಗದಾ ಸರಹದ್ದನೂ” ಎಂದಿತ್ತು. ಬರೆವಣಿಗೆಯ ವಿಷಯದಲ್ಲಿ ಅವರು ವೇಗದ ಸರಹದ್ದನ್ನು ಮೀರಿ ಸಾಗುತ್ತಿದ್ದರು. ಅದೆಷ್ಟು ವೇಗ ಎಂದರೆ ಅವರಿಗೆ ಇಂದೇ ಅನುಪಮಾ ನಿರಂಜನ ಪ್ರಶಸ್ತಿ ಘೋಷಣೆಯಾಗಿದ್ದನ್ನು ಗಮನಿಸಲೂ ಪುರುಸೊತ್ತಿಲ್ಲದಂತೆ ದೂರ ಸಾಗಿಬಿಟ್ಟರು. ಹಿಂದೆಂದೂ ಮರಳದ ಕಕ್ಷೆಯಲ್ಲಿ. ಹತ್ತು ದಿನಗಳ ಹಿಂದೆ ಅವರು ಕಾರನ್ನು ಓಡಿಸುತ್ತ ಹಟಾತ್‌ ಅಸ್ವಸ್ಥರಾಗಿ ಆಸ್ಪತ್ರೆ ಸೇರುವ ಮುನ್ನಾ ದಿನ, ಉತ್ಸಾಹದ ಪುಟಿಚೆಂಡಾಗಿ ನನ್ನೊಂದಿಗೆ ಸುದೀರ್ಘ ವಾಟ್ಸಾಪ್‌ ಸಂವಾದದಲ್ಲಿ ತೊಡಗಿದ್ದರು. ನಾನು ಅವರಿಗೆ ಶಾಭಾಸ್‌ ಹೇಳಿದ್ದೆ -ಏಕೆಂದರೆ ಆ ಒಂದು ವಾರದಲ್ಲಿ ಅವರ ನಾಲ್ಕು ಲೇಖನಗಳು “ಪ್ರಜಾವಾಣಿ”ಯಲ್ಲಿ ಪ್ರಕಟವಾಗಿದ್ದವು. ಹಾಲ್ಡೊಡ್ಡೇರಿ, ಸುಕ್ಷೀರಸಾಗರ, ಸುಧೀಂದ್ರ ಹೀಗೆ ವಿವಿಧ ಹೆಸರುಗಳಲ್ಲಿ ಬಂದಿದ್ದವು. ಜೊತೆಗೆ “ಸುಧಾ”ದಲ್ಲಿ 5G ಕುರಿತು ಅವರದ್ದೇ ಮುಖಪುಟ ಲೇಖನವೂ ಪ್ರಕಟವಾಗಿತ್ತು. ಅದರ ಮುಂದಿನ ಸಂಚಿಕೆಯಲ್ಲೇ ಕಾಂಕಾರ್ಡ್‌ ವಿಮಾನಗಳ ಕುರಿತ ವಿಶೇಷ ಲೇಖನವೂ ಶೆಡ್ಯೂಲ್‌ ಆಗಿತ್ತು. ಅದೂ ಈಗ ಪ್ರಕಟವಾಗಿದೆ. ಅದಕ್ಕಿಂತ ತುಸು ಮುಂಚೆ “ತರಂಗ” ವಾರಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿತ್ತು. “ಸುಕ್ಷೀರಸಾಗರ” ಎಂಬ ಅವರ ಹೊಸ ಹೆಸರಿನ ಬಗ್ಗೆ ಅವರನ್ನು ನಾನು ತುಸು ಚುಡಾಯಿಸಿದ್ದೆ. ಶುಭ ಹಾರೈಸಿದ್ದೆ: “ಕ್ಷೀರಧಾರೆಯಂತೆ ನಿಮ್ಮ ಲೇಖನಗಳು ಹೀಗೆ ನಿರಂತರ ಹರಿದು ಬರುತ್ತಿರಲಿ” ಎಂದು ವಾಟ್ಸಾಪ್‌ ಮಾಡಿದ್ದೆ. ಅದಕ್ಕೆ ಅವರು, "ಸರ್. ನೀವೆಲ್ಲಾ ನನ್ನ ಆರಂಭಿಕ ಬರಹಗಳನ್ನು ಪ್ರೋತ್ಸಾಹಿಸಿದವರುˌ ಪ್ರೀತಿಯ ಒತ್ತಾಯದಿಂದ ಬರೆಸಿದವರು. ಜತೆಗೆ ಬರಹದ ಉತ್ಕೃಷ್ಟತೆಯ ಬೆಂಚ್'ಮಾರ್ಕ್ ಎಳೆದು ಅದನ್ನು ಮೇಲೇರಿಸುತ್ತಲೇ ಹೋದವರು. ಆ ಬೆಂಚ್'ಮಾರ್ಕ್ ನನಗೆಂದೂ ಗಗನಕುಸುಮವಾಗಿಸಿದವರು. ಎಲ್ಲಕ್ಕೂ ಮಿಗಿಲಾಗಿˌ ಕೋಡು ಮೂಡುವಷ್ಟು ಪ್ರೋತ್ಸಾಹಿಸಿದವರು. ವಂದನೆಗಳು ಎಂದರೆ ತೀರಾ ಔಪಚಾರಿಕವಾಗಿಬಿಡುತ್ತದೆ." ಎಂದು ಉತ್ತರಿಸಿದ್ದರು. ಕನ್ನಡ ವಿಜ್ಞಾನ ಲೇಖಕರಲ್ಲಿ ಶರವೇಗದ ಬರಹಗಾರರು ಅವರಾಗಿದ್ದರು. ವಿಜಯ ಕರ್ನಾಟಕದಲ್ಲಿ ʼನೆಟ್‌ನೋಟ” ಅಂಕಣ ಬರೆಯುತ್ತಿದ್ದರು. ಸಂಯುಕ್ತ ಕರ್ನಾಟಕದಲ್ಲಿ “ಸೈನ್ಸ್‌ ಕ್ಲಾಸ್‌” ಎಂಬ ಅಂಕಣ ಮತ್ತು ಕಸ್ತೂರಿಯಲ್ಲಿ “ನವನವೋನ್ಮೇಷ” ಎಂಬ ಅಂಕಣಗಳನ್ನು ಬರೆಯುತ್ತಿದ್ದರು. ತನ್ನ ಅಕ್ಷರದಾಟಕ್ಕೆ ಮೂರು ಅಂಕಣಗಳು ಸಾಲದೇನೊ ಎಂಬಂತೆ ಈಚೆಗೆ ಸುಧಾ-ಪ್ರಜಾವಾಣಿ ಬಳಗಕ್ಕೂ ಪುಂಖಾನುಪುಂಖ ಬರೆಯತೊಡಗಿದ್ದರು. ದಿನದಿನದ ತಮಾಷೆಯ ʼಚುರುಮುರಿʼ ಅಂಕಣಕ್ಕೂ ಅವರು ಬರೆಯತೊಡಗಿದ್ದರು. ಜ್ಯೋತಿ ಆರುವ ಮುನ್ನ ಪ್ರಖರವಾಗಿ ಉರಿಯುತ್ತದೆ ಎಂಬ ಮಾತು ನಿಜವಿದ್ದೀತೆ? ಇಂದಿನ ವಿಜ್ಞಾನ- ತಂತ್ರಜ್ಞಾನದ ಪೈಪೋಟಿಯನ್ನು ಒಂದು ಶೀತಲ ಸಮರವೆಂದೇ ಕರೆಯುವುದಾದರೆ ಆ ಸಮರಾಂಗಣದ ಪ್ರತ್ಯಕ್ಷ ವೀಕ್ಷಕ ವಿವರಣೆ ಇವರಿಂದಲೇ ಬರುತ್ತಿತ್ತು. ಕನ್ನಡದ ಮಟ್ಟಿಗೆ ಇವರು ವಾರ್‌ ರಿಪೋರ್ಟರ್‌! ಅದು ಯುದ್ಧವಿಮಾನಗಳ ಬಗ್ಗೆ ಇರಲಿ, ಕ್ಷಿಪಣಿಗಳ ಬಗ್ಗೆ ಇರಲಿ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಇರಲಿ ಅಥವಾ ಜೈವಿಕ ತಂತ್ರಜ್ಞಾನದ ʼಕಟಿಂಗ್‌ ಎಜ್‌ʼನಲ್ಲಿರುವ ತಂತ್ರಕ್ರಾಂತಿಯ ವಿಷಯವೇ ಇರಲಿ. ಇವರ ತಾಜಾ ವಿಶ್ಲೇಷಣೆ ಅಂದೇ ರೆಡಿ ಇರುತ್ತಿತ್ತು. ಅದು ಮತ್ತೆ ನೀರಸ ವಿಶ್ಲೇಷಣೆ ಆಗಿರುತ್ತಿರಲಿಲ್ಲ. ಸರಸ ಸಂವಹನವಾಗಿರುತ್ತಿತ್ತು. ಅದರಲ್ಲಿ ತಮಾಷೆ ಇರುತ್ತಿತ್ತು. ಚುರುಕಿನ ಮಾತು ಇರುತ್ತಿದ್ದವು, ಕೊಂಕುಗಳಿರುತ್ತಿದ್ದವು. ಉದಾಹರಣೆಗೆ, ಯಂತ್ರೋಪಕರಣಗಳ ಬಿಸಿಯನ್ನು ಕಡಿಮೆ ಮಾಡಲೆಂದು ಈಗೀಗ ಬಳಕೆಯಾಗುತ್ತಿರುವ ಬೆಳ್ಳಿ ಮತ್ತು ವಜ್ರದ ಹರಳುಗಳ ಬಗ್ಗೆ ಬರೆಯುತ್ತ, “ಇವನ್ನೇ ತುಸು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಮಡದಿಯರ ತಾಪ ಕಡಿಮೆ ಮಾಡುವ ಸದವಕಾಶ ಗಂಡಂದಿರಿಗೆ ಸಿಕ್ಕಿದೆ” ಎನ್ನುತ್ತಾರೆ. ಏಕಾಣುಜೀವಿಗಳೊಂದಿಗೆ ಸಹಬಾಳ್ವೆ ಮಾಡುವ ಕುರಿತ ಲೇಖನದ ಕೊನೆಯಲ್ಲಿ “ಬ್ಯಾಕ್ಟೀರಿಯಾಗಳ ಬಗ್ಗೆ ನಮಗಿರುವ ತಿಳುವಳಿಕೆ ಬ್ಯಾಕ್ಟೀರಿಯಾ ಗಾತ್ರದಷ್ಟೇ ಅಲ್ಪ ಪ್ರಮಾಣದ್ದು” ಎಂದೊಮ್ಮೆ ಬರೆದಿದ್ದರು. ತೀರ ಈಚಿನ ಲೇಖನದಲ್ಲಿ “ನಮ್ಮ ಇಡೀ ದೇಶದ ಜಾಳಾಗಿರುವ ಸಂಪರ್ಕ ಬಲೆಯನ್ನು ಹೊಲಿಯಲೆಂದೇ 5ಜಿ ಎಂಬ ಸೂಜಿ ಬಂದಿದೆ. ಚಿನ್ನದ ಸೂಜಿ ಎಂದ ಮಾತ್ರಕ್ಕೇ ಕಣ್ಣಿಗೆ ಅದನ್ನು ಚುಚ್ಚಿಕೊಳ್ಳಲಾಗುವುದಿಲ್ಲ” ಎಂದು ಬರೆದಿದ್ದರು. ಹೇಳಿಕೇಳಿ ಪತ್ರಕರ್ತರ ಗರಡಿಯ ನೆರಳಲ್ಲೇ ಬೆಳೆದವರು. ಅವರ ತಂದೆ ಎಚ್‌ ಆರ್‌ ನಾಗೇಶ ರಾವ್‌ “ಸಂಯುಕ್ತ ಕರ್ನಾಟಕ”ದ ಸಹಾಯಕ ಸಂಪಾದಕರಾಗಿದ್ದರು. ಹಾಗಾಗಿ ಕನ್ನಡ ಭಾಷೆಯ ಬಗ್ಗೆ, ಸಾಹಿತಿಗಳ ಬಗ್ಗೆ, ಸಾಹಿತ್ಯದ ಬಗ್ಗೆ ಮೊದಲಿನಿಂದಲೂ ಅಭಿರುಚಿಯನ್ನು ಸುಧೀಂದ್ರ ಬೆಳೆಸಿಕೊಂಡಿದ್ದರು. ತಮ್ಮ ತಂದೆಯ ಅಗಲಿಕೆಯ ಹೊಸದರಲ್ಲಿ ಪತ್ರಿಕಾರಂಗದ ಎಲ್ಲ ಖ್ಯಾತರನ್ನು ಒಗ್ಗೂಡಿಸಿ “ಸುದ್ದಿ ಜೀವಿ ನಾಗೇಶರಾವ್‌” ಹೆಸರಿನ ಸಂಸ್ಮರಣ ಸಂಚಿಕೆಯನ್ನು ಹೊರತಂದರು (ಅದರಲ್ಲಿ ಎಚ್‌.ಎಸ್‌.ದೊರೆಸ್ವಾಮಿಯವರದೇ ಆಶಯ ಮಾತು ಇತ್ತು). ಮದ್ರಾಸ್‌ ಐಐಟಿಯಲ್ಲಿ ಎಮ್‌ ಟೆಕ್‌ ಪದವಿ ಪಡೆದು ಬೆಂಗಳೂರಿನ IISc, DRDO, HAL ಮುಂತಾದ ಎಲ್ಲ ಸುವಿಖ್ಯಾತ ತಂತ್ರಜ್ಞಾನ ಸಂಸ್ಥೆಗಳಲ್ಲೂ ಕೆಲಸ ಮಾಡುತ್ತಿರುವಾಗಲೂ ಕನ್ನಡದ ವಿಜ್ಞಾನ ಲೇಖನಗಳನ್ನು ಓದಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ನಾನವರಿಗೆ ಬರೆಯಲು ಪ್ರೋತ್ಸಾಹಿಸುತ್ತಿದ್ದೆ. ತನ್ನದು ಬರೀ ಎಂಜಿನಿಯರಿಂಗ್‌ ಕ್ಷೇತ್ರವೆಂತಲೂ ಅದನ್ನು ಕನ್ನಡದಲ್ಲಿ ಬರೆಯುವುದು ಹೇಗಪ್ಪಾ ಅಂತ ಅವರು ಹಿಂಜರಿಯುತ್ತಿದ್ದರು. ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದಾಗ ಅವರೊಮ್ಮೆ ಬ್ರಝಿಲ್‌ ದೇಶಕ್ಕೆ ಹೋಗಿದ್ದರು. ತಿರುಗಿ ಬಂದ ತಕ್ಷಣ ಪ್ರವಾಸ ಕಥನವನ್ನು ಬರೆದು ಕೊಡಲು ಅವರಿಗೆ ಹೇಳಿದೆ. ಅದರಲ್ಲಿ ತಾಂತ್ರಿಕ ವಿಷಯಗಳನ್ನು ಬದಿಗಿಟ್ಟು ಬರೀ ಮಾನವಿಕ ಸಂಗತಿಗಳನ್ನು ಬರೆಯಿರಿ ಎಂದೆ. ಅದು ಸುಧಾದಲ್ಲಿ ಪ್ರಕಟವಾಯಿತು. ಅವರೊಳಗಿದ್ದ ಕನ್ನಡ ಸಂಪದ ಸಮೃದ್ಧವಾಗಿ ಹೊರಬಂತು. ಕ್ರಮೇಣ ತಾಂತ್ರಿಕ ವಿಷಯಗಳನ್ನೂ ಸರಳ ಭಾಷೆಯಲ್ಲಿ ಬರೆಯತೊಡಗಿದರು. ವಿಜ್ಞಾನ ಬರಹಗಾರರ ಕಮ್ಮಟಗಳಿಗೆ ಹಾಜರಾಗಿ ತಮ್ಮ ಪ್ರತಿಭೆಗೆ ಹೊಸ ಹೊಳಪು ಪಡೆದು ಸೊಗಸಾಗಿ ಬರೆಯತೊಡಗಿದರು. ಅಂಕಣ ಬರಹಗಾರರಾದರು. “ನಿಮ್ಮ ಅಂಕಣ ಬರಹಗಳನ್ನೆಲ್ಲ ಸಂಕಲನವಾಗಿ ತರುತ್ತಾ ಇರಿ” ಎಂದು ಅವರಿಗೆ ಆಗಾಗ ನಾನು ಹೇಳುತ್ತಿದ್ದೆ. “ಕಳೆದ ವಾರ ಬರೆದಿದ್ದು ಈಗಲೇ ಹಳಸಾಗಿ ಹೊಸದು ಬರ್ತಾ ಇರುತ್ತವಲ್ಲ? ಪುಸ್ತಕ ರೂಪದಲ್ಲಿ ಬರೋದರಲ್ಲಿ ಅದು ಪೂರ್ತಿ ಹಳಸಲು ಆಗಿರುತ್ತದೆ” ಎನ್ನುತ್ತಿದ್ದರು. ಆದರೂ ಅವರಿವರ ಒತ್ತಾಯದಿಂದ “ನೆಟ್‌ ನೋಟ”, “ಸದ್ದು! ಸಂಶೋಧನೆ ನಡೆಯುತ್ತಿದೆ”, “ಬಾಹ್ಯಾಕಾಶವೆಂಬ ಬೆರಗಿನಂಗಳ” ಮತ್ತು “ಬೆರಗಿನ ಬೆಳಕಿಂಡಿ” ಹೆಸರಿನ ಪುಸ್ತಕಗಳನ್ನು ಹೊರತಂದರು. [ಈ ಪುಸ್ತಕದ ಬಿಡುಗಡೆಗೆ ನನ್ನನ್ನೇ ಕರೆದಿದ್ದರು. ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಆ ದಿನಪತ್ರಿಕೆಯ ವಾರ್ಷಿಕ "ಅಕ್ಷಯ ತದಿಗೆ" ಹಬ್ಬದ ದಿನ ಬಿಡುಗಡೆ ಇತ್ತು. ಅಂದು ನಾನಾಡಿದ ಮಾತುಗಳನ್ನು ಈಚಿನ ಅಕ್ಷಯ ತದಿಗೆಯಂದು ಸುಧೀಂದ್ರ ನನಗೆ ಮತ್ತೆ ನೆನಪಿಸಿದ್ದರು. ] ಅವರ ಪುಸ್ತಕಗಳಲ್ಲಿನ ವಿಷಯ ಸೂಚಿಯನ್ನು ನೋಡಿದರೇ ಅವರ ಕನ್ನಡ ಪ್ರತಿಭೆಯ ಬಗ್ಗೆ ನಾವು ಬೆರಗಾಗುತ್ತೇವೆ. ಬೇಹುಗಾರ ಉಪಗ್ರಹಗಳ ಲೇಖನಕ್ಕೆ “ದೊಡ್ಡಣ್ಣನ ಹದ್ದಿನ ಕಣ್ಣು”; ಕೊಳೆನೀರಲ್ಲಿ ಸೊಳ್ಳೆಗಳು ಜನಿಸದಂತೆ ಮಾಡುವ ತಂತ್ರಜ್ಞಾನಕ್ಕೆ “ಸೊಳ್ಳೆಗೆ ಕೊಳ್ಳಿ, ನ್ಯಾನೊ ಈರುಳ್ಳಿ”, ಅರಿವಳಿಕೆ ಔಷಧಗಳ ಲೇಟೆಸ್ಟ್‌ ಅವತಾರಗಳ ಬಗೆಗಿನ ಲೇಖನಕ್ಕೆ “ಮಿದುಳಿನ ನರಳಿಕೆ ತಪ್ಪಿಸುವ ಅರಿವಳಿಕೆ” ಹೀಗೆ... ಈ ಅರಿವಳಿಕೆ ಲೇಖನಕ್ಕೆ ಅವರು ಎಷ್ಟೊಂದು ದೇಶಗಳ ಈಚಿನ ಮಾಹಿತಿಗಳನ್ನು ಕಲೆಹಾಕಿದ್ದರು. ಮಿದುಳಿನ ಕಾರ್ಯಾಚರಣೆ ಹೇಗಿರುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಕಂಡುಕೊಂಡ ಇಇಜಿ, ಎಮ್‌ಆರ್‌ಐ, ಎಫ್‌ಎಮ್‌ಆರ್‌ಐ ಸಾಧನಗಳ ಬಗ್ಗೆ ಚರ್ಚಿಸುತ್ತ ಅವರು ಬರೆದ ಕೊನೆಯ ಪ್ಯಾರಾವನ್ನು ನಾನಿಲ್ಲಿ ಕಾಪಿ ಮಾಡುತ್ತೇನೆ: [ಅದಕ್ಕೊಂದು ವಿಶೇಷ ಕಾರಣವಿದೆ] “ಎಲ್ಲವೂ ಎಣಿಕೆಯಂತೆ ನಡೆದರೆ ಕೆಲ ವರ್ಷಗಳಲ್ಲಿ ಮಿದುಳಿನ ಎಲ್ಲ ಕಾರ್ಯಚಟುವಟಿಕೆಗಳೂ ನಮ್ಮ ಎಣಿಕೆಗೆ ಸಿಗಬಹುದು. ಇದು ಸಾಧ್ಯವಾದಲ್ಲಿ ಮಿದುಳನ್ನು ನಮ್ಮ ಕೈಗೊಂಬೆಯಂತೆ ಕುಣಿಸಬಹುದೆ? ಹೌದಾದರೆ ಇಲ್ಲಿ “ನಮ್ಮ” ಎಂಬುದು ಯಾರಿಗೆ ಅನ್ವಯವಾಗುತ್ತದೆ? ಆ ಮಾತು ಬದಿಗಿರಲಿ, ಇಡೀ ಮಿದುಳಿನ ನರಮಂಡಲವನ್ನು ʼಕಾಪಿʼ ಮಾಡಲು ಸಾಧ್ಯವಾದಲ್ಲಿ, ಅತ್ಯಂತ ಉತ್ತಮ ಕಾರ್ಯಕ್ಷಮತೆಯ ರೊಬಾಟ್‌ಗಳನ್ನು ರೂಪಿಸಬಹುದು. ಅವುಗಳಿಗೆ ತುಂಬಬಹುದಾದ ಬುದ್ಧಿಮತ್ತೆಯನ್ನು ನಮ್ಮ ಮಟ್ಟಕ್ಕೇರಿಸಿಕೊಳ್ಳಲು ಪ್ರಯತ್ನಿಸಬಹುದು”. ಇದನ್ನು ಬರೆದ ಸುಧೀಂದ್ರ ಹಾಲ್ಡೊಡ್ಡೇರಿಯವರು ಕಳೆದ ಹತ್ತು ದಿನಗಳಿಂದ ಪ್ರಜ್ಞಾಶೂನ್ಯರಾಗಿ ಹೈಟೆಕ್‌ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದಲ್ಲಿದ್ದರು. ಅವರ ಮಿದುಳಿಗೆ ಚೇತರಿಕೆ ನೀಡಲೆಂದು ಬೆಂಗಳೂರಿನ ಲೇಟೆಸ್ಟ್‌ ಟೆಕ್ನಾಲಜಿಯೆಲ್ಲ -ಸಿಟಿ ಸ್ಕ್ಯಾನ್‌, ಎಮ್‌ ಆರ್‌ಐ, ಎಪ್‌-ಎಮ್‌ಆರ್‌ಐ ಎಲ್ಲವುಗಳ ಪ್ರಯೋಗ ನಡೆಯಿತು. ಅವರ ಮಿದುಳು ಹೊರಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿತ್ತೊ, ನಾಳಿನ ಜಗತ್ತನ್ನು, ಆಚಿನ ಜಗತ್ತನ್ನು ಸ್ಕ್ಯಾನ್‌ ಮಾಡುತ್ತಿತ್ತೊ ಒಂದೂ ಗೊತ್ತಾಗಲಿಲ್ಲ. ಅವರ ಮಿದುಳನ್ನು ಕಾಪಿ ಮಾಡುವಂತಾಗಿದ್ದಿದ್ದರೆ, ಅದೆಷ್ಟೊಂದು ಜ್ಞಾನ, ತಂತ್ರಜ್ಞಾನದ ಬಗ್ಗೆ ಅದೆಷ್ಟು ಕುತೂಹಲ, ಅದೆಷ್ಟು ಕನ್ನಡ ಪ್ರಜ್ಞೆ, ಅದೆಷ್ಟು ಸಂವಹನ ಪ್ರತಿಭೆ, ಅದೆಷ್ಟು ವಿನಯವಂತಿಕೆ, ಅದೆಷ್ಟು ತಮಾಷೆ, ಅದೆಷ್ಟು ಸಜ್ಜನಿಕೆ, ಅದೆಷ್ಟು ಬಗೆಯ ಸಂವಹನ ಕೌಶಲ, ನಾಳಿನ ಪೀಳಿಗೆಯ ಬಗ್ಗೆ ಅದೆಷ್ಟು ಆಸ್ಥೆ, ಅದೆಷ್ಟೊಂದನ್ನು ನಮಗೆ ತಿಳಿಸಬೇಕೆಂಬ ತವಕ ಎಲ್ಲವುಗಳ ಬಹುದೊಡ್ಡ ನಿಕ್ಷೇಪವೇ ನಮಗೆ ಸಿಗುತ್ತಿತ್ತು. ತುಸು ಅವಸರ ಮಾಡಿದಿರಿ ಸುಧೀಂದ್ರ; ಅದ್ಯಾವುದನ್ನೂ ನಾಳಿನ ಜಗತ್ತಿಗೆ ವರ್ಗಾವಣೆ ಮಾಡುವ ಮೊದಲೇ ಹೊರಟುಬಿಟ್ಟಿರಿ. ಗ್ರಹತಾರೆಗಳನ್ನು ತಲುಪಬೇಕೆಂಬ ಮನುಷ್ಯ ಅದಮ್ಯ ಆಸಕ್ತಿಗಳ ಬಗ್ಗೆ ಅಷ್ಟೊಂದು ಬರೆದ ನೀವು ತುಸು ತ್ವರಿತವಾಗಿ ಖುದ್ದಾಗಿ ತಾರಾಲೋಕವನ್ನು ಸೇರಿಕೊಂಡಿರಿ. ನಾವು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರು “ಅಳಿವಿನಂಚಿನ ಜೀವಿಗಳು, ಹುಷಾರಾಗಿರಬೇಕು” ಎಂದು ನಾನು ಆಗಾಗ ನಮ್ಮ ಗುಂಪಿನಲ್ಲಿ ತಮಾಷೆ ಮಾಡುತ್ತಿದ್ದುದು ನೆನಪಿದೆಯೆ ಸುಧೀಂದ್ರ? ಈ ಪುಟ್ಟ ಗುಂಪಿನಿಂದ ವಿದಾಯ ಹೇಳಿದ್ದು ಸರಿಯೆ?

No comments:

Post a Comment