Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Tuesday, July 27, 2021
Raghunath Krishnamachar -ಕೆ. ಸತ್ಯನಾರಾಯಣ ಅವರ " ಕಪಾಳ ಮೋಕ್ಷ "
ಕೆ.ಸತ್ಯನಾರಾಯಣ ಅವರ' ಸ್ವಭಾವ ಚಿತ್ರಗಳೆಂಬ ಕಾಲಯಾನದ ರೂಪಕಗಳು :
ಈ ರೂಪಕಗಳಿಗೆ ಹಲವು ಆಯಾಮಗಳು ಇವೆ. ಅವುಗಳ ಪೈಕಿ ಕೆಲವು:
೧: ಭಾಷಿಕ : ನಮ್ಮ ತಲೆಮಾರು ಎದುರಿಸಿದ ಪೆಡಂಭೂತಗಳಲ್ಲಿ ಇಂಗ್ಲಿಷ್ ಭಾಷೆಯು ಒಂದು. ಅದು ಹೇಗೆ ಭಯಾನಕವೊ ಹಾಗೆ ಆಕರ್ಷಕವೂ ಆದ ಮಾಯಾವಿನಿ .ಹದಿಹರೆಯದವರ ಈ ತಲ್ಲಣಗಳನ್ನು ಅವರ. ಮೂರು ಸ್ವಭಾವ ಚಿತ್ರಗಳು ಬಿಂಬಿಸುತ್ತವೆ( ನೆಹರೂ ಎಂಬ ಗೌಡರು, ಕ್ಲೋಸ್ ಪೇಟೆ ಅಯ್ಯನವರ ಇಂಗ್ಲಿಷ್ ಗೀಳು, ಖಾದ್ರಿಯವರ ಇಂಗ್ಲಿಷ್ ಪ್ರೀತಿಗೆ ಜೈ) ಅದರ ವಿರುದ್ದ ಅವರು ನಡೆಸಿದ ಹೋರಾಟ , ನಂತರ ನಡೆಸಿದ ಅನುಸಂಧಾನಗಳು
ವೈನೋದಿಕ ದಾಟಿಯಲ್ಲಿ ಅಭಿವ್ಯಕ್ತಿ ಪಡೆದಿವೆ.
೨: ಸ್ತ್ರೀ ಲೋಕ: ಗರತಿಯರಿಂದ ವೇಶ್ಯೆಯವರೆಗೆ ಇವರ ವ್ಯಾಪ್ತಿ ಇದೆ. ಅಮ್ಮಯಪ್ಪ ಮತ್ತು ಶನಿವಾರದ ಸ್ವರ್ಣಾಂಬ ಗರತಿಯರಿಗೆ ನಿದರ್ಶನಗಳು. ಮೊದಲಿನದರಲ್ಲಿನ ಗರತಿ ಬದುಕಿರುವಾಗ ಗಂಡನ ಕರೆಗೆ ಕ್ಯಾರೆ ಅನ್ನದೆ ಶೃಂಗಾರದಲ್ಲಿ ತೊಡಗಿ ,ಸತ್ತ ಮೇಲೆ ಅವನ ಕರೆಗಾಗಿ ಗೋಳಾಡುತ್ತಾಳೆ. ಎರಡನೆಯದರಲ್ಲಿ ಗಂಡ ಕರೆದುಕೊಂಡು ಹೋಗಲು ಬರುವನೆಂದು ಶೃಂಗಾರ ಮಾಡಿಕೊಂಡು ಅವನ ಪ್ರತೀಕ್ಷೆಯಲ್ಲಿ ಕಳೆದ ಶನಿವಾರಗಳು ಕಡೆಗೆ ಅವನು ಬಾರದೆಯೆ ಹೋದಾಗ ಮಾಮೂಲು ಶನಿವಾರಗಳಾಗಿ ಬಿಡುವ ದುರಂತವನ್ನು ಚಿತ್ರಿಸಲಾಗಿದೆ. ಎರಡನೇ ಬಗೆಯ ಗರತಿಯರಲ್ಲಿ ಎರಡನೇ ಹೆಂಡತಿಯರು ಬರುತ್ತಾರೆ. ಅದು ಬಹುತೇಕ ಗಂಡಸರಿಗೆ ಒಂದು ಪ್ರತಿಷ್ಠೆಯ ಸಂಗತಿ. ಕೆಲವು ಮಾಡೆಲ್ ಗಳಿಗೆ ಎರಡನೇ ಹೆಂಡತಿ ಎನಿಸಿಕೊಳ್ಳಲು ಪೈಪೋಟಿ. ಮೂರನೆಯ ಹಂತದಲ್ಲಿ ಬರುವ ವೇಶ್ಯೆ ಗರತಿಯಾಗಿ ಇರಲು ಬಿಡದ ಸಮಾಜ ಅವಳು ಅನಿವಾರ್ಯವಾಗಿ ವೇಶ್ಯೆಯಾದಾಗ ಅವಳ ಬಳಿಗೆ ಗರತಿಯರು ತಮ್ಮ ಸಂಸಾರವನ್ನು ನೇರ್ಪುಗೊಳಿಸಲು ಸಲಹೆಗಾಗಿ ಬರುವ ವೈಪರೀತ್ಯ( ನಂಜಮ್ಮ). ಕಾರಂತರ ಮೈಮನಗಳ ಮಂಜುಳೆಯ ವಿಸ್ತೃತ ರೂಪ . ಇದರ ನಡುವೆ ಇರುವ ಇನ್ನೊಂದು ಬಗೆ ಮಿಡ್ ವೈಫ್ ಮತ್ತು ಮೇಡಂಗಳದು. ಅವರದು ಸಡಿಲ ನೈತಿಕತೆಯೆಂದು ಸಮಾಜವೆ ತೀರ್ಮಾನಕ್ಕೆ ಬಂದು ಅವರ ಸ್ಥಿತಿಯ ದುರುಪಯೋಗ ಪಡಿಸಿಕೊಳ್ಳಲು ನೋಡುವ ವೈಪರೀತ್ಯ.
೩:ಅಲ್ಪಸಂಖ್ಯಾತ ಸಮುದಾಯದವರು: ಹದಿಹರೆಯದ ಸಮಯದಲ್ಲಿ ಕೇವಲ ಮನುಷ್ಯ ಸಂಬಂಧವಾಗಿದ್ದುದು , ಕಾಲ ಸರಿದಂತೆ ತಮ್ಮ ಅಸ್ಮಿತೆಯನ್ನು ಅನಿವಾರ್ಯವಾಗಿ ತಮ್ಮ ಸಮುದಾಯದ ಜತೆಗೆ ಗುರುತಿಸಿಕೊಳ್ಳಬೇಕಾದ ಸ್ಥಿತಿಗೆ ಬರುವ ತಲ್ಲಣಗಳನ್ನು ಯಾಕೂಬ ಎನ್ನುವ ಪ್ರಬಂಧ ದಲ್ಲಿ ಆರ್ದ್ರವಾಗಿ ಸೆರೆಹಿಡಿಯಲಾಗಿದೆ.
೪: ಭದ್ರತೆಯ ನಡುವಿನ ಅಭದ್ರತೆಯ ತಲ್ಲಣಗಳನ್ನು ಅದರ ಹಿಂದಿನ ಸರ್ಕಾರದ ಕ್ರೌರ್ಯವನ್ನು ಅಂಚೆಯ ಣ್ಣ ಪದ್ಮನಾಭನನ್ನು ಕುರಿತ ಪ್ರಬಂಧದಲ್ಲಿ ಬಯಲುಗೊಳಿಸಿದ ರೀತಿ ಅನನ್ಯವಾಗಿದೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದರು ಖಾಯಂ ಆಗದ ಅಂಚೆಪೇದೆಗಳ ದುರಂತ ಇದು .
೫ ರಾಜಕೀಯ ವ್ಯಕ್ತಿಗಳು: ಲೇಖಕರ. ಹದಿಹರೆಯದಲ್ಲಿ ಇವರ ಜತೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದ ಶಾಸಕರು , ಇವರು ಸರ್ಕಾರದ ಅಧಿಕಾರಿಗಳಾದಾಗ ಪಕ್ಕದಲ್ಲಿ ಕೂಡಲು ಬಿಡದೆ, ಚಾಲಕನ ಪಕ್ಕ ಕೂರಲು ನಿರ್ದೇಶಿಸುವುದು ಆದ ಬದಲಾವಣೆಯ ದ್ಯೋತಕವಾಗಿದೆ.
೬: ಕ್ರೌರ್ಯದ ಒಡಲಲ್ಲಿ ಜಿನುಗುವ ವಾತ್ಸಲ್ಯ: ಪುಸ್ತಕದ ಶೀರ್ಷಿಕೆಯ ಪ್ರಬಂಧ ಕಪಾಳಮೋಕ್ಷ ಮತ್ತು ಸಾಮಿಲ್ ನ ಜಗಣ್ಣ ಮೇಲ್ನೋಟಕ್ಕೆ ಕ್ರೂರವಾಗಿ ನಡೆದುಕೊಂಡರು, ಮೊದಲ ಪ್ರಬಂಧದಲ್ಲಿ ತಂಗಿಯ ಬಗೆಗಿನ ವಾತ್ಸಲ್ಯ ಅವಳಿಗೆ ಅನ್ಯಾಯ ಮಾಡುವವರ ವಿರುದ್ಧ ನೀಡುವ ಶಿಕ್ಷೆಯಾಗಿ ಪ್ರಕಟವಾದರೆ, ಎರಡನೆಯ ಪ್ರಬಂಧದ ಜಗಣ್ಣ ಜತೆಗೆ ಕೆಲಸಮಾಡುವವರಿಗೆ ಕ್ರೂರವಾಗಿ ದಂಡಿಸಿದರೂ, ಮನೆಯಲ್ಲಿ ಮೊಮ್ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು ತಿನ್ನಿಸುವುದರ ಮೂಲಕ ಅವನ ವಾತ್ಸಲ್ಯ ಭಾವನೆ ವ್ಯಕ್ತಗೊಳ್ಳುತ್ತದೆ.
೭: ಪರಸ್ಥಳದವರನ್ನು ತನ್ನಲ್ಲಿ ಒಬ್ಬನನ್ನಾಗಿ ಸ್ವೀಕರಿಸಬಲ್ಲ ಗ್ರಾಮೀಣ ಜಗತ್ತಿನ ಔದಾರ್ಯದ ನಿದರ್ಶನವಾಗಿ ಇಲ್ಲಿಗೆ ತಮಿಳು ನಾಡಿನಿಂದ ಬಂದು ನೆಲೆಸಿದ ಪಳನಿಸ್ವಾಮಿಯನ್ನು ಕುರಿತ ಪ್ರಬಂಧವನ್ನು ನೋಡಬಹುದು.
ಹೀಗೆ ಬಹುಮುಖಿಯಾಗಿ ವ್ಯಕ್ತಿತ್ಚವನ್ನು ಗ್ರಹಿಸಲು ಕಲಿಸಿದ ವಾರ್ತಾ ಇಲಾಖೆಯ ಜವಾನ ಚೌಡಯ್ಯ ಮತ್ತು ರಾಜ್ಯಶಾಸ್ತ್ರ ಕಲಿಸಿದ ಗುರುಗಳು ಶಿವಶಂಕರ ಪ್ಪನವರನ್ನು ನೆನಪು ಮಾಡಿಕೊಳ್ಳುತ್ತಾರೆ. ಅಂತೆಯೇ ಸಾಹಿತ್ಯಕವಾಗಿ ಗಿರೀಶ್ ವಾಘ್ ರಿಂದ ಪಡೆದ ಮಾರ್ಗದರ್ಶನವನ್ನು . ಇದು ಲೇಖಕರ ಪ್ರಾಮಾಣಿಕತೆ ಮತ್ತು ಕೃತಜ್ಞತೆಗೆ ನಿದರ್ಶನ.
ಈ ಎಲ್ಲಾ ಸ್ವಭಾವಚಿತ್ರಗಳ ಹಿಂದಿನ ಮೂಲ ದ್ರವ್ಯವೆಂದರೆ ಅನುಭೂತಿ. ಇದಕ್ಕೆ ನಿದರ್ಶನವಾಗಿ ಅವರ ಸೊಸೆ ಮದುವೆ ಮಂಟಪದಲ್ಲಿ ಬೆವರು ಸುರಿಸುತ್ತಿದ್ದ ಮಗನ ಬೆವರನ್ನು ಒರೆಸಿ ,ಸಂತೈಸುವ ಚಿತ್ರದಲ್ಲಿ ಅದರ ಸ್ವರೂಪವನ್ನು ಮನಗಾಣಬಹುದು. ಅವರು ಬಳಸುವ ಭಾಷಾಶೈಲಿ : ಬೇಕೂಪ, ಯೋಕ್ತಿ, ಲವಡಿಮಗ, ಕೌನ್ಸಿಲಿಂಗ್, ಪದಾರ್ಥ, ಇತ್ಯಾದಿ, ಅವರು ಚಿತ್ರಿಸುವ ಸ್ವಭಾವಗಳನ್ನು ಪರಿಣಾಮ ಕಾರಿಯಾಗಿ ವ್ಯಕ್ತಪಡಿಸುವಲ್ಲಿ ಸಮರ್ಥವಾಗಿವೆ. ಈ ಪ್ರಬಂಧಗಳ ಮೂಲಕ ನಮ್ಮ ಕಾಲಯಾನದ ಪಲ್ಲಟಗಳನ್ನು ಅನನ್ಯವಾಗಿ ಸೆರೆಹಿಡಿಯಲು ಸಾಧ್ಯವಾಗಿರುವುದು ಲೇಖಕರ ಸಂವೇದನಾಶೀಲತೆಗೆ ಸಾಕ್ಷಿಯಾಗಿದೆ. ಅಭಿನಂದನೆ.
Subscribe to:
Post Comments (Atom)
No comments:
Post a Comment