Powered By Blogger

Sunday, April 14, 2024

ಬೆಳಗೋಡು ರಮೇಶ್ ಭಟ್- ಕೊರ್ಗಿ ಶಂಕರ ನಾರಾಯಣ ಉಪಾಧ್ಯಾಯರ " ಅಪ್ಪಯ್ಯನ ಆಸ್ತಿ ಕತೆ "{2022 }

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ಪ್ರಯೋಗ, ಪಾರಾಯಣ, ಪೌರೋಹಿತ್ಯಗಳ ಜಗತ್ತಿಗೆ ಭೂಷಣಪ್ರಾಯರಾಗಿದ್ದ ತಮ್ಮ ತಂದೆ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಇತಿವೃತ್ತವನ್ನು, ಅವರೊಂದಿಗೆ ಬದುಕಿದ, ಬಾಳುಸವೆಸಿದ ವ್ಯಕ್ತಿಗಳಿಂದ, ಮತ್ತು ಅಂಥವರಿಂದ ಕೇಳಿದ್ದನ್ನು ನೆನಪಿಸಿಕೊಳ್ಳುತ್ತಿರುವವರಿಂದ ಕಲೆಹಾಕಲು ನಡೆಸಿದ ಅಮೂಲ್ಯ ಕ್ಷೇತ್ರಕಾರ್ಯದ ಫಲಶ್ರುತಿ ಈ ಕೃತಿ. ಇದು ಆತ್ಮಚರಿತ್ರೆಯಲ್ಲ. ಬಹುತೇಕ ಜೀವನ ಚರಿತ್ರೆ ಮತ್ತು ಸ್ಮೃತಿ ಸಂಚಯಗಳ ನಡುವೆ ಗುರುತಿಸಬಹುದಾದ ಒಂದು ಮಹತ್ವದ ಕೃತಿ. ಮಹತ್ವದ್ದು ಏಕೆಂದರೆ ಇಲ್ಲಿ ದಾಖಲಾಗಿರುವುದು ಕೇವಲ ಚರಿತ್ರೆ ಮಾತ್ರವಲ್ಲ. ಇದು ಒಂದು ತಲೆಮಾರಿನ ನಂಬಿಕೆ, ಪರಂಪರೆಯ ಮೇಲಣ ಅಭಿಮಾನ, ಜೀವನ್ಮುಖಿ ಚೈತನ್ಯ, ಆತ್ಮವಿಶ್ವಾಸ ಮತ್ತು ಸೃಜನಶೀಲತೆಯ ದಾಖಲೆಯೂ ಹೌದು. ಸೂರ್ಯನಾರಾಯಣ ಉಪಾಧ್ಯಾಯರು ’ನಂಬುವವರು’ ಮತ್ತು ಕೊನೆಯ ತನಕ ಆ ನಂಬಿಕೆಯನ್ನೇ ಬದುಕಿಗೆ ಆಧಾರವಾಗಿ ಇರಿಸಿಕೊಂಡವರು ಎಂಬ ಕಾರಣಕ್ಕೆ ಈ ಪುಸ್ತಕದ ಹೆಸರು ’ಅಪ್ಪಯ್ಯನ ಆಸ್ತಿಕತೆ.’ ಆಸ್ತಿ ಮತ್ತು ಕತೆಯ ನಡುವೆ ಸ್ವಲ್ಪ ಗ್ಯಾಪ್ ಕೊಟ್ಟಾಗ ಪುಸ್ತಕದ ಹೆಸರಿಗೆ, ಸೂರ್ಯನಾರಾಯಣ ಉಪಾದ್ಯಾಯರ ಜೀವಿತವನ್ನು ಬಲ್ಲವರಿಗೆ ವಿಶೇಷ ಅರ್ಥವೂ ಹೊಳೆಯುತ್ತದೆ. ಇದು ಆ ಅಪ್ಪಯ್ಯ ಮತ್ತು ಅವರ ಮಕ್ಕಳು ತಮ್ಮದಲ್ಲ ಎಂದು ತ್ಯಜಿಸಿದ ಆಸ್ತಿಯ ಕತೆಯೂ ಹೌದು ಎನ್ನುವುದು ಈ ಕೃತಿಯ ಕೊನೆಯ ಭಾಗವನ್ನು ಓದುವಾಗ ಮನದಟ್ಟಾಗುತ್ತದೆ. ಈ ಭಾಗದಲ್ಲಿ ಡಾ ಭಾಸ್ಕರಾನಂದ ಕುಮಾರರು ಹೇಳುವ ಮಾತೊಂದಿದೆ, "ಉಪಾಧ್ಯಾಯರೇ, ನಿಮ್ಮ ದೊಡ್ಡ ಆಸ್ತಿ ಎಂದರೆ ನಿಮ್ಮ ಮಕ್ಕಳೇ. ಅವರೆಲ್ಲ ಕಮ್ಮಿಯಾಗಲಿಕ್ಕೆ ನೀವೇನು ಕಮ್ಮಿಯಾ? ನೀವು ಸಂಪಾದಿಸಿದ ಕಾವ್ಯದ ಆಸ್ತಿಯಲ್ಲಿ, ಸಹೃದಯತೆಯ ಆಸ್ತಿಯಲ್ಲಿ ನನಗೂ ಸ್ವಲ್ಪ ಪಾಲು ಕೊಡಬೇಕು. ಆ ಆಸ್ತಿಯಲ್ಲಿ ಕೃಷಿ ಮಾಡಲಿಕ್ಕೆ ಆಗ್ತದಾ ನೋಡ್ತೇನೆ.” ಕೊರ್ಗಿ ಉಪಾಧ್ಯಾಯರು ಕಳೆದ ಶತಮಾನದ ೨೦ರ ದಶಕದಲ್ಲಿ ಆ ಭಾಗದಲ್ಲಿದ್ದ ಏಕಮಾತ್ರ ಬ್ರಾಹ್ಮಣ ಕುಟುಂಬ. ಯಾವುದೋ ಪಾಳೆಗಾರನ ಕಾಲದಲ್ಲಿ ಮಂಜೂರಾದ ಬಹುತೇಕ ಇಡೀಗ್ರಾಮದ ಉಂಬಳಿ ಕೂಡು ಕುಟುಂಬದ ಈ ಮನೆತನದ್ದು. ಪಾರಂಪರಿಕ ಕುಲವೃತ್ತಿಯಾದ ಜ್ಯೌತಿಷ, ಪೌರೋಹಿತ್ಯ , ಮಂತ್ರವಾದಗಳಲ್ಲಿ ವ್ಯಸ್ತ ಕುಟುಂಬ. ಯಾವುದೋ ಸಂದರ್ಭದಲ್ಲಿ ಚಿಕ್ಕಮ್ಮನ ಭರ್ತ್ಸನೆಗೆ ರೋಸಿಹೋಗಿ ಸೂರ್ಯನಾರಾಯಣ ಉಪಾಧ್ಯಾಯರು ಕೊರ್ಗಿಯ ಮನೆ, ಆಸ್ತಿಯನ್ನೆಲ್ಲ ಬಿಟ್ಟು ಹೆಂಡತಿ ಮಗಳೊಂದಿಗೆ ಪರಿವ್ರಾಜಕನಂತೆ ಹೊರಟು ಬಿಟ್ಟರು. ಮತ್ತೆ ಅವರ ಬದುಕೆಲ್ಲ ತಿರುಗಾಟದ್ದೇ. ತಲಕಳಲೆಯ ರಾಮಮಂದಿರದ ಅರ್ಚಕವೃತ್ತಿಯ ಸಮಯವನ್ನು ಬಿಟ್ಟರೆ ಉಪಾಧ್ಯಾಯರ ಕುಟುಂಬ ಎಲ್ಲಿಯೂ ನೆಮ್ಮದಿಯನ್ನು ಕಂಡಂತೆ ಕಾಣಿಸುವುದಿಲ್ಲ. ಇರುವ ಎಲ್ಲವನ್ನೂ ಬಿಟ್ಟು ಇಲ್ಲದುದರೆಡೆಗೆ ತುಡಿವ, ಹಾರಬಯಸುವ ಅವರ ಚರಿತ್ರೆಯೇ ಕುತೂಹಲ ಹುಟ್ಟಿಸುವಂತಹದು. ಉಪಾದ್ರು ಭಾರತ ದರ್ಶನ ಮತ್ತು ರಾಮಾಯಣ ಸಂಪುಟಗಳ ಏಜೆಂಟರಾಗಿ ಪುಸ್ತಕಗಳನ್ನು ತಲೆಮೇಲೆ ಹೊತ್ತು ಊರೂರು ತಿರುಗಿದ ಕತೆ ಗಳಗನಾಥರನ್ನು ನೆನಪಿಸುವಂತಹದು. ಜೂನ್ ೦೯, ೧೯೭೫. ವೈಶಾಖ ಮಾಸದ ಅಮಾವಾಸ್ಯೆಯಂದು ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರು ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುವಾಗ ಮಕ್ಕಳಿಗೆಂದು ಯಾವ ಭೌತಿಕ ಆಸ್ತಿಯನ್ನೂ ಬಿಟ್ಟುಹೋಗಿರಲಿಲ್ಲ. ಈ ಕೃತಿಯ ಕೊನೆಯ ಸಾಲು " ಅಪ್ಪಯ್ಯನ ಆಸ್ತಿಕತ್ವ ಮಾತ್ರ ಉಳಿದು, ಆಸ್ತಿ-ಕತೆಯು ಕೇವಲ ನೆನಪಾಗಿ ಚಿತ್ತಭಿತ್ತಿಯಲ್ಲಿ ಮಸುಳಕ್ಕರವಾಗಿ ಮರೆಯಾಗಿತ್ತು" ಎಂಬುದು ಹಲವು ಅರ್ಥಗಳಲ್ಲಿ ಅವರ ಬದುಕು ಕೊಟ್ಟ ಸಂದೇಶವೂ ಆಗಿದೆ. *** ಈ ಬೃಹದ್ ಗ್ರಂಥದ ಮೂಲಕ ಶಂಕರನಾರಾಯಣ ಉಪಾಧ್ಯಾಯರು ಸುಮ್ಮನೆ, ತಮ್ಮ ತಂದೆಯ ಕತೆ ಹೇಳುತ್ತಿಲ್ಲ. ಅವರು ತಮ್ಮ ಹಿರಿಯರು ಅಭಿಮಾನದಿಂದ ನಡೆಸಿಕೊಂಡು ಬಂದ ಪ್ರತಿಯೊಂದು ಕ್ರಿಯೆಯ ಅರ್ಥ ಮತ್ತು ಮಹತ್ವವನ್ನು ಗುರುತಿಸುತ್ತಾರೆ. ಉದಾಹರಣೆಗೆ ಉತ್ತರಕ್ರಿಯೆಯ ಕರ್ಮಕಲಾಪಗಳ ಮಂತ್ರಗಳ ಹಿಂದಿರುವ ಅಭಿಮಾನ ತತ್ತ್ವವನ್ನು ಗುರುತಿಸುವುದು. ’ಯಾವ ವಂಶ, ಯಾವ ಪಥ, ಯಾವ ಪ್ರವರ, ಯಾರ ಮಗ/ಮೊಮ್ಮಗ/ಮರಿಮಗ ಇತ್ಯಾದಿ ವಿವರ ನಮ್ಮ ಸಾಮಾಜಿಕ ಜೀವನಕ್ಕೆ ಒಂದು ಘನತೆಯನ್ನು ತಂದುಕೊಡುತ್ತದೆ. ಈ ವಿವರ ಯಾರೋ ನಮಗೆ ಹೇಳಿ ಬಾಯಿಪಾಠಮಾಡಿ ದೈನೇಸಿ ಸ್ಥಿತಿಗೆ ನಾವು ಹೋಗಬಾರದು. ಅದಕ್ಕಾಗಿ ಕನಿಷ್ಠ ಮೂರು ತಲೆಮಾರಿನ ಪಿತೃಗಳ ಹೆಸರಾದರೂ ನಾಲಗೆಯಲ್ಲಿ ನೆಲಸಲಿ ಎಂದು ಔರ್ಧ್ವದೈಹಿಕ ಕರ್ಮಕಲಾಪಗಳನ್ನು ರೂಢಿಸಿದ್ದಾರೆ. ಅಪ್ಪಯ್ಯನ ಹಿಂದಿನ ಏಳು ತಲೆಮಾರುಗಳ ಹೆಸರು ವಿಳಾಸ ಗೊತ್ತಿಲ್ಲದಿದ್ದರೂ, ಪಿತೃ, ಪಿತಾಮಹ, ಪ್ರಪಿತಾಮಹರ ನಾಮಗೋತ್ರೋಲ್ಲೇಖದಿಂದ ಪೂರ್ವಪಿತೃಪಂಕ್ತಿಯನ್ನು ಪತ್ತೆಮಾಡಲಾಗುವುದು ಎನ್ನುವುದನ್ನು ಅವರಿಲ್ಲಿ ಅರ್ಥಪೂರ್ಣವಾಗಿ ವಿವರಿಸುತ್ತಾರೆ. *** ಈ ಕತೆಯಲ್ಲಿ ಕೋಟಕನ್ನಡದ ವೈಭವವೂ ಬರುತ್ತದೆ. ವೈದೇಹಿ, ಮಿತ್ರಾ ವೆಂಕಟ್ರಾಜ್ ಬಳಸಿದ ಕ್ರಮಕ್ಕಿಂತ ಬೇರೆಯಾಗಿ. ಕತೆಯನ್ನು ಗ್ರಾಂಥಿಕ ಸಂಸ್ಕೃತ ಭೂಯಿಷ್ಠ ಕನ್ನಡದಲ್ಲಿ ಹೇಳಿದರೂ ಸಂಭಾಷಣೆ ಮಾತ್ರ ಕೋಟ ಕನ್ನಡದಲ್ಲಿ. ಕೊರ್ಗಿಯವರ ಕತೆಯಲ್ಲಿ ಮುದುಕಿಯೊಬ್ಬಳು - "ಹ್ವಾಯ್ ಮಳಿ ಶ್ರಾಯ ಅಲ್ದಾ. ಒಂದೇ ಕೊಡಿ ಹಿಡ್ಕಂಡಿರಿ. ಮಗಿನ ತಲೆ ಚಂಡಿ ಆರೆ ಜರಾ ಗಿರ ಬಪ್ಕೂ ಸಾಕ್. ಇಗಣಿ, ಈ ಮರ್ಸಣ್ಗೆ ಎಲೆ ತಕಣಿ. ಕೊಣಕೊಟ ಮಳಿಗೆ ತಡ್ಕಣತ್ ಒಡಿಯಾ." ಬಲಾಡಿಯಲ್ಲಿ ’ಸೂರಯ್ಯ ಲಾಯ್ಕ್ ಜಾತ್ಕ ಬರ್ದಿ ಕೊಡ್ತ್ರಂಬ್ರು ಎನ್ನುವ ಸುದ್ದಿ ಕರ್ಣಾಂತರ ಹಬ್ಬಿ ಅಬ್ರಾಹ್ಮಣರು ಜಾತಕ ಬರೆಸಿಕೊಳ್ಳಲಿಕ್ಕೆ ಬರುತ್ತಿದ್ದ ವಿವರ ಒಂದೆಡೆ ಬರುತ್ತದೆ (ಪು.೪೫) ಮಗು ಹುಟ್ಟಿದ ಹೊತ್ತನ್ನು ಹೇಳುವಲ್ಲಿಬಂದ ಆಸಾಮಿ ಎಷ್ಟು ಟೆಟ್ಟೆಟ್ಟೆ ಮಣೂರು (ಒಂದಕ್ಕೆ ಇನ್ನೇನೋ ಹೇಳುವುದು) ಅಂತಿದ್ದನೋ, ಜಾತ ಮುಹೂರ್ತ ನಿರ್ಣಯಿಸುವಲ್ಲಿ ಉಪಾದ್ರೂ ಸುಟ್ಸುಣ್ಣ ಆಗುತ್ತಿದ್ದರು. ಬೈಯಾಪಾಂಗೆ ಕೋಲ್ ತಾರ್ಕಿ (ಮೃಗಶಿರಾ ನಕ್ಷತ್ರ) ಪಡ್ಲಾಯಿಲಿ ಮೂರ್ ಮಾರ್ ಮೇಲ್ ತೋರ್ತಿತ್ ಕಾಣಿ. ಇನ್ನೊಂದೆಡೆ ನಗೆ ಉಕ್ಕಿಸುವ ವಿವರಣೆ. "ಮುಕ್ಳಿಗೆ ಮುಳ್ ಹೆಟ್ರೆ ಅಲ್ಲಲ್ಲಿಗೇ ಅಡ್ಚ್’ಕಂಡ್ ಅನ್ಬೈಸ್ಕ್ ಅಷ್ಟೆ. ಶಿವಾಯ್, ಕ್ವಾಣ್ಕ್ ಎತ್ತಿ ಊರಿಗೆಲ್ಲ ತೋರ್ಸುಕಾತ್ತಾ? ಮೊದ್ಮೊದ್ಲ್ ನೋವು ತಡುಕಾತ್ತಿಲ್ಲೆ ಅನ್ಸತ್. ಕಡಿಕಡೆಗೆ ಅದೇ ರೂಢಿ ಆತ್. ಎಷ್ಟ್ರವರೆಗೆ ಒಗ್ಗಿ ಹೋತ್ ಅಂದ್ರೆ, ಅಕಸ್ಮಾತ್ ಮುಕ್ಳಿಗೆ ಹೆಟ್ಟುದ್ ಕಮ್ಮಿ ಆರೆ, ಎಲ್ಲಿಂದಾರೂ ಒಂದ್ ಮುಳ್ಳನ್ ತಂದ್ ಕುತ್ಕಣ್ಕ್ ಅಂಬಷ್ಟ್" *** ಸೂರ್ಯನಾರಾಯಣ ಉಪಾಧ್ಯಾಯರ ಯಕ್ಷಗಾನ, ತಾಳಮದ್ದಳೆ ಪ್ರೀತಿಯಿಂದಾಗಿ ಹಲವು ರಸಭರಿತ ಪ್ರಸಂಗಗಳು ಮೇಲಿಂದಮೇಲೆ ಕಾಣಸಿಗುತ್ತವೆ. (೧) ಕೃಷ್ಣಸಾರಥ್ಯ - ಮಲಗಿದ ಕೃಷ್ಣನಿಗೆ ಕಾಲಬುಡದ ಅರ್ಜುನ ಮೊದಲು ಕಾಣುತ್ತಾನೆ. ಆಮೇಲೆ ಶಿರೋಭಾಗದ ಅರ್ಜುನ. ಕ್ಯಾತೆ ತೆಗೆವ ಕೌರವ ಅರ್ಥದಾರಿಯಾದರೆ ‘ಮಲಗಿದವ ಕಣ್ಣುಬಿಟ್ಟರೆ ಮೊದಲು ಕಾಣುವುದು ತಲೆಯ ಭಾಗದಲ್ಲಿರುವವನೋ, ಕಾಲ ಭಾಗದಲ್ಲಿರುವವನೋ’ ಎಂದು ಕಾಯಿಸಿಪ್ಪೆ ಗುದ್ದುತ್ತಾ ಇರುತ್ತಾನೆ. ಉಪಾದ್ರು ಒಮ್ಮೆ ಕೃಷ್ಣನಾಗಿದ್ದಾಗ ‘ಹರಹರ ನೀವಿಬ್ಬರೊಂದಾಗಿ ಬಂದುದಚ್ಚರಿಯಾಯ್ತು’ ಎಂಬ ಪದ್ಯಕ್ಕೆ ‘ಆಹಾ ನೀವಿಬ್ಬರು ಒಟ್ಟಾಗಿ ಬಂದುದನ್ನು ನೋಡಿ ಆಶ್ಚರ್ಯವಾಯಿತು’ ಎಂದು ಅರ್ಥಹೇಳಿದರಂತೆ. (೨)ಕೃಷ್ಣ ಸಂಧಾನದಲ್ಲಿ ಬಿಲ್ಲನ್ನು ಮುರಿವ ವಿದುರ ಕೌರವನನ್ನು ಛೇಡಿಸುವ ಭರದಲ್ಲಿ ‘ಮುನ್ನ ನೀನಜಪುತ್ರ ಕಾಣೆಲೋ’ ಎನ್ನುತ್ತಾನೆ. ಗಾಂಧಾರಿಯ ವೈಧವ್ಯ ನಿವೃತ್ತಿಗೆ ವಿವಾಹ ಸಂದರ್ಭದಲ್ಲಿ ಮಾಡಿದ ಪ್ರಾಯಶ್ಚಿತ್ತ ಆಡಿನೊಂದಿಗೆ ಮದುವೆಯೆಂಬ ಅನಾಧಾರಿತ ಕಾಗಕ್ಕನ ಕತೆ ಸತ್ಯವೇ ಆದರೂ ಕೌರವ ಅಜಪುತ್ರನಾಗುವುದಿಲ್ಲವಲ್ಲ ಎಂದು ಉಪಾದ್ರು ವ್ಯಥಿಸಿದ್ದು ಇದೆ. (೩) ಸೂರ್ಯ ಉಪಾದ್ರು ಹೊಗೆಸೊಪ್ಪಿನ ಕುರಿತು ‘ಮೋಹಿನಿ ಕಲಾವಿಲಾಸ’ ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದರು. ಎಂತಹ ವಿಡಂಬನೆಯೆಂದರೆ, ಈ ಕತೆಯಲ್ಲಿ ‘ತಲೆಯಲ್ಲಿ ಗಂಗೆಯನ್ನು ಹೊತ್ತದ್ದರಿಂದ ಒಮ್ಮೆ ಶಿವನಿಗೆ ವಿಪರೀತ ನೆಗಡಿಯಾಗಿ ಕಣ್ಣು, ಮೂಗು, ಬಾಯಿಗಳು ಸೋರುತ್ತಿರುವಾಗ ನಾರದರು ತಂಬಾಕಿನ ಎರಡು ಎಸಳನ್ನು ತಂದುಕೊಟ್ಟು ಹೊಗೆ ಹೀರಲು ತೋರಿಸಿಕೊಟ್ಟ. ಮುಕ್ಕಣ್ಣನ ಮೂಗುರಿ ಮಾಯವಾಯ್ತು. ಪ್ರಸನ್ನನಾದ ಪರಮೇಶ್ವರನು "ಭೂತಳದ ಮನುಜರೊಳ್ ಇದೆರಡಂ ನೋತು ಸೇವಿಪರಿಂಗೆ ಸಂಚಿತ ಪಾತಕವು ಪರಿಹಾರವಾಗುವುದೆನುತ ವರವಿತ್ತ" ‘ಕಲೆಗೆ ನಮ್ಮಿಂದ ಸಂದಾಯವಾದದ್ದು ಲೊಳಲೊಟ್ಟೆಯಾದರೂ ಕಲೆಯು ನಮಗೆ ತೆರೆಗೈಯಾಗಿ ನೀಡುವ ಸಾಂತ್ವನದ ಬೆಲೆಕಟ್ಟಲು ಸಾಧ್ಯವೆ?’ ಎಂಬಮಾತು ಈ ಕೃತಿಯ ೨೦೬ನೆಯ ಪುಟದಲ್ಲಿ ಬರುತ್ತದೆ. ತಮ್ಮ ಅನಪೇಕ್ಷಿತ ದುರ್ವ್ಯಸನಗಳಿಂದ ಕಲಾವಿದರು ಬರ್ಬಾದಾಗಿ ಹೋಗಿರಬಹುದಾದರೂ, ಜೀವನಸಂಧ್ಯೆಯಲ್ಲಿ ನಿರಾಪದವಾಗಿ ಅವರ ಜೊತೆಗೆ ಉಳಿಯುವ ಏಕೈಕ ಸಖನೆಂದರೆ ಕಲೆಯೇ. ಅದು ಭಾವದೊಳಗಿನ ಭಾವಲೋಕ. ಸೂರ್ಯನಾರಾಯಣ ಉಪಾದ್ರ ಒಳಗೊಬ್ಬ ಕಲಾವಿದನಿದ್ದ. ಕವಿಯೂ ಇದ್ದ. ಅವರು ಕೃಷ್ಣ ಸಂಧಾನ, ಪಾರಿಜಾತ, ಕಂಸವಧ, ಸತ್ಯ ಹರಿಶ್ಚಂದ್ರ ಮೊದಲಾದ ಪೌರಾಣಿಕ ನಾಟಕಗಳೊಂದಿಗೆ ಸಾಮಾಜಿಕ ನಾಟಕಗಳನ್ನೂ ರಚಿಸಿದ್ದರು. ಅವರು ರಚಿಸಿದ ಯಕ್ಷಗಾನ ಪ್ರಸಂಗಗಳು - ಭದ್ರಾಯು ಚರಿತ್ರೆ, ಅಶೋಕಸುಂದರಿ, ಗುರುದಕ್ಷಿಣೆ, ಗುರುದ್ರೋಣ ಇತ್ಯಾದಿ ಇತ್ಯಾದಿ. *** ಈ ಪ್ರಶಂಸನೀಯ ಸಂಸ್ಮರಣೆಯ ಕುರಿತು ಇವತ್ತು (೧೧.೦೪.೨೦೨೪) ಕೋಟದಲ್ಲಿ ಮಾತನಾಡಲಿದ್ದೇನೆ.

No comments:

Post a Comment