Powered By Blogger

Friday, April 12, 2024

ಡಾ / ಚಿನ್ನಪ್ಪ ಗೌಡ - ವಿವೇಕ ರೈ ಅವರ " ಬದುಕು ಕಟ್ಟಿದ ಬಗೆಗಳು "{2024 }

ಡಾ. ಬಿ. ಎ. ವಿವೇಕ ರೈ ಬದುಕು ಕಟ್ಟಿದ ಬಗೆಗಳು ಕಳೆದ ಹಲವು ವರ್ಷಗಳಿಂದ ವರ್ಷಕ್ಕೆ ಒಂದು ಅಥವಾ ಎರಡರಂತೆ ನಿರಂತರವಾಗಿ ಮಹತ್ವದ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಾ ಬಂದವರು ಗುರುಗಳಾಗಿರುವ ಡಾ. ಬಿ. ಎ. ವಿವೇಕ ರೈಯವರು. ಈ ಸಾಲಿನಲ್ಲಿ ಬಂದ ಇತ್ತೀಚೆಗಿನ ಕೃತಿ " ಬದುಕು ಕಟ್ಟಿದ ಬಗೆಗಳು". 'ನೆನಪಿನ ಸಂಸ್ಕೃತಿಯ ಬರಹಗಳು' ಎಂಬುದಾಗಿ ಈ ಕೃತಿಯಲ್ಲಿರುವ ಲೇಖನಗಳನ್ನು ಅವರೇ ಹೇಳಿದ್ದಾರೆ. ಪ್ರೊ. ರೈಯವರ ನೆನಪಿನ ಶಕ್ತಿ ಅಗಾಧವಾದುದು. ಅವರು ಭಾಷಣ ಮತ್ತು ಮಾತಿಗೆ ತೊಡಗಿದರೆ ಘಟನೆಗಳನ್ನು ಅವುಗಳ ದಿನಾಂಕ, ವರ್ಷ ಮತ್ತು ಸಂದರ್ಭಗಳನ್ನು ಕರಾರುವಾಕ್ಕಾಗಿ ಉಲ್ಲೇಖಿಸುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಓದು ಮತ್ತು ಬದುಕಿನ ಅನುಭವಗಳನ್ನು ಗಾಢವಾಗಿ ಅನುಭವದ ತೆಕ್ಕೆಗೆ ತೆಗೆದುಕೊಂಡು ನೆನಪಿನ ಕೋಶವನ್ನು ಅವರು ಕಟ್ಟುತ್ತಾ ಬಂದಿರುವುದಕ್ಕೆ ಬದುಕು ಕಟ್ಟಿದ ಬಗೆಗಳು ಕೃತಿಯ ಬರಹಗಳು ಸಾಕ್ಷಿಗಳಾಗಿವೆ. ವರ್ತಮಾನ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಸಂಸ್ಥೆಗಳು, ಸಾಂಸ್ಕೃತಿಕ ವಿದ್ಯಮಾನ ಇವು ವ್ಯಕ್ತಿ , ರಾಜಕೀಯ ಮತ್ತು ಸಾಮಾಜಿಕ ನೆಲೆಗಳಲ್ಲಿ ನೈತಿಕವಾಗಿ ಪತನಗೊಂಡು ತಲ್ಲಣ ಉಂಟುಮಾಡುತ್ತಿರುವ ಬಗ್ಗೆ ಅವರು ಮಾತುಕತೆಯ ನಡುವೆ ವಿಷಾದ ವ್ಯಕ್ತಪಡಿಸಿದ್ದುಂಟು, " ಒಳ್ಳೆಯ ಕಾಲಘಟ್ಟ ಮರೆಯಾಗುತ್ತಿದೆ. ನಮ್ಮ ಕಾಲವೇ ಅನೇಕ ಸಂಗತಿಗಳಲ್ಲಿ ಒಳ್ಳೆಯದಿತ್ತು. ಸದ್ಯಕ್ಕೆ ನಾವು ನಮ್ಮ ಕಾಲದ ಅನುಭವಗಳು ಮತ್ತು ನೆನಪುಗಳನ್ನು ಮನಸ್ಸಿಗೆ ತಂದುಕೊಂಡರೆ ಅವು ನಮಗೆ ಒಂದು ಬಗೆಯ ಸಾಂತ್ವನವನ್ನು ನೀಡಬಲ್ಲವು ಹಾಗೂ ನಮ್ಮನ್ನು ಜೀವಂತವಾಗಿ ಇಡಬಲ್ಲವು" . ಈ ಮಾತುಗಳು ಇಲ್ಲಿನ ಲೇಖನಗಳ ಆಶಯಗಳನ್ನು ಗುರುತಿಸಲು ಸಹಾಯಕವಾಗಿವೆ. ಭಾಷೆ- ಸಾಹಿತ್ಯ- ಸಂಸ್ಕೃತಿ ಮತ್ತು ಅಗಲಿದವರ ನೆನವರಿಕೆ ಎಂಬ ಎರಡು ಭಾಗಗಳಲ್ಲಿ 39 ಲೇಖನಗಳನ್ನು ಮರುಜೋಡಿಸಿ ಕೊಟ್ಟ ಉದ್ದೇಶ ಕೂಡ ಸ್ಪಷ್ಟವಾಗುತ್ತದೆ. ಲೇಖಕರ ಮಾತುಗಳು ಇಂತಿವೆ: " ಇಲ್ಲಿನ ಲೇಖನಗಳ ಒಳಗೆ ಅಂತರ್ಗತವಾದ ನನ್ನ ಚಿಂತನಾಕ್ರಮದಲ್ಲಿ ಸಾಮ್ಯಗಳಿವೆ. ಅಧ್ಯಯನ ಮತ್ತು ಅನುಭವಗಳನ್ನು ಒಟ್ಟಿಗೆ ಇಟ್ಟುಕೊಂಡು ಬದುಕಿದ ನನಗೆ ಭಾಷೆ ಸಾಹಿತ್ಯ ಸಂಸ್ಕೃತಿ ಮತ್ತು ಜನರನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಾಗುವುದಿಲ್ಲ. ನನ್ನ ಅನುಭವಕ್ಕೆ ಬಾರದ ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ಬರೆಯಲು ನನಗೆ ಸಾಧ್ಯ ಇಲ್ಲ. "ಬದುಕು ಕಟ್ಟಿದ ಬಗೆಗಳು" ಎನ್ನುವ ಪದಪುಂಜ ಇಲ್ಲಿನ ಬರಹಗಳಲ್ಲಿ ಪ್ರಸ್ತಾವಿತವಾದ ವ್ಯಕ್ತಿಗಳಿಗೆ ಅನ್ವಯ ಆಗುವಷ್ಟೇ ನನಗೂ ಅನ್ವಯ ಆಗುತ್ತದೆ. ನನಗೆ ಬದುಕಿನಲ್ಲಿ ದೊರೆತ ಅವಕಾಶಗಳು, ವ್ಯಕ್ತಿಗಳ ಸಂಸರ್ಗಗಳು ಅಪಾರ, ಅಸಾಮಾನ್ಯ ಮತ್ತು ಆಕಸ್ಮಿಕ. ಅವುಗಳ ದಾಖಲೆಗಳ ತುಣುಕುಗಳು ಇಲ್ಲಿ ಬರಹಗಳ ರೂಪದಲ್ಲಿ ಒಟ್ಟು ಸೇರಿವೆ". ಈ ಕೃತಿಗೆ ಇಟ್ಟಿರುವ " ಬದುಕು ಕಟ್ಟಿದ ಬಗೆಗಳು" ಎಂಬ ಹೆಸರಿನ ವ್ಯಾಪ್ತಿ ಹಿರಿದಾದುದು, ವಿಸ್ತಾರವಾದುದು. ಹಲವು ಆಯಾಮಗಳನ್ನು ಸೂಚಿಸುವಷ್ಟು ಸಮರ್ಥವಾಗಿವೆ. ೧. ಕನ್ನಡ, ತುಳು, ಇಂಗ್ಲೀಷ್ ಮೊದಲಾದ ಭಾಷೆಗಳು , ತುಳುನಾಡು, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಮೊದಲಾದ ಪ್ರಾದೇಶಿಕ ವಲಯಗಳು, ಸಾಹಿತ್ಯ ,ಸಂಸ್ಕೃತಿ , ಯಕ್ಷಗಾನ ಇತ್ಯಾದಿ ಕಲಾಪ್ರಕಾರಗಳು - ಇವುಗಳಿಗೆ ಸಂಬಂಧಿಸಿದ ಚಿಂತನೆಗಳು ಲೇಖಕರ ಬದುಕನ್ನು ರೂಪಿಸಿದ್ದು, ಕಟ್ಟಿದ್ದು, ಅವರಿಗೆ ಬದುಕನ್ನು ಕಟ್ಟಿಕೊಳ್ಳಲು ನೆರವಾದದ್ದು. ೨. ಕೃತಿಗಳ ಓದು, ಶೈಕ್ಷಣಿಕ ಸಂಪರ್ಕ, ನೇರ ಒಡನಾಟ ಹೀಗೆ ಬೇರೆ ಬೇರೆ ರೀತಿಗಳಲ್ಲಿ ಪ್ರೊ. ರೈಯವರು ಸಂಪರ್ಕ ಸಂಬಂಧ ಸಾಧಿಸಿದ ೧೮ ಮಂದಿ ಮಹನೀಯರ ನೆನವರಿಕೆಗಳಿವೆ. ಇವರಲ್ಲಿ ಹಿರಿಯರಿದ್ದಾರೆ, ಕವಿಗಳಿದ್ದಾರೆ, ಸಂಶೋಧಕರಿದ್ದಾರೆ, ಭಾಷಾವಿಜ್ಞಾನಿಗಳಿದ್ದಾರೆ, ಸಾಹಿತ್ಯ ಪರಿಚಾರಕರಿದ್ದಾರೆ, ಜ್ಞಾನಿಗಳಿದ್ದಾರೆ, ಗುರುಗಳಿದ್ದಾರೆ, ಸಾಹಿತಿಗಳಿದ್ದಾರೆ, ಗೆಳೆಯರಿದ್ದಾರೆ. ಹೀಗೆ ಬೇರೆ ಬೇರೆ ಜ್ಞಾನ ಶಿಸ್ತು, ವಲಯ ಮತ್ತು ವರ್ಗಕ್ಕೆ ಸೇರಿದ ಸಾಧಕರ ಕೆಲಸಗಳು ಮತ್ತು ಜೀವನಮೌಲ್ಯಗಳ ಕುರಿತ ಈ ಬರಹಗಳು ಬರಿಯ ಶ್ರದ್ಧಾಂಜಲಿ ರೂಪದವುಗಳಲ್ಲ. ಇಂತಹ ಹಿರಿಯರು ಅವರ ಬದುಕನ್ನು ಅನನ್ಯವಾಗಿ ಕಟ್ಟಿಕೊಂಡ ಬಗೆಗಳನ್ನು ಅಷ್ಟೇ ಅನನ್ಯವಾದ ರೀತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹಿರಿಯರ ಮತ್ತು ಸಮಕಾಲೀನರ ಬದುಕಿನ ಬಗೆಗಳು ಲೇಖಕರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿವೆ. ೩. ಸಾಂಸ್ಕೃತಿಕ ಕರ್ನಾಟಕವು ಬಹುಮಾದರಿಯ ಬದುಕುಗಳನ್ನು ಕಟ್ಟಿಕೊಂಡಿದ್ದ ವಿನ್ಯಾಸಗಳು ಬೆಸೆದುಕೊಂಡ ಒಂದು ಆಯಾಮ ಇಲ್ಲಿನ ಬರಹಗಳಿಗಿವೆ. ೪. ಹಿರಿಯರು ಬದುಕು ಕಟ್ಟಿದ ಬಗೆಗಳು ಕಣ್ಮರೆಯಾಗುತ್ತಿವೆ ಮತ್ತು ಬದುಕನ್ನು ಕಟ್ಟಿಕೊಳ್ಳಬೇಕಾದ ಜೀವಪರ ಬಗೆಗಳು ಕಾಣುವುದಿಲ್ಲ ಎಂಬ ವಿಷಾದವನ್ನು ಈ ಸೂಕ್ಷ್ಮಸಂವೇದೀ ಬರಹಗಳು ವ್ಯಕ್ತಪಡಿಸುತ್ತವೆ. ೫. ಸಾಧಕರು ಮತ್ತು ಲೇಖಕರ ಬದುಕು, ಲೇಖಕರ ಬರಹಗಳ ಮೂಲಕ ಅನಾವರಣಗೊಂಡ ಬದುಕು, ಲೇಖಕರ ವೈಯಕ್ತಿಕ ಬದುಕು ಮತ್ತು ಅವರದ್ದೇ ಬರಹಗಳು ತೆರೆದಿಡುವ ಬದುಕು ಹೀಗೆ ಮೂರು ಸ್ತರಗಳ ಬದುಕು ಇಲ್ಲಿನ ಬರಹಗಳಲ್ಲಿ ಬೆಸೆದುಕೊಂಡಿರುವುದನ್ನು ಕಾಣಬಹುದು. ೬. ಮಾನವೀಯತೆ, ಸಹನೆ, ಸೌಹಾರ್ದತೆ, ವ್ಯಕ್ತಿ ಘನತೆ, ಸಾಮಾಜಿಕ ನ್ಯಾಯಪರತೆ ಮೊದಲಾದ ಜೀವನ ಮೌಲ್ಯಗಳನ್ನು ವಿವರಿಸುವ ಮತ್ತು ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕವಾಗಿ ಕಟ್ಟಿದ ಪ್ರಯತ್ನಗಳನ್ನು ನಿರೂಪಿಸುವ ಇಲ್ಲಿನ ಬರಹಗಳು ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುತ್ತವೆ. ಈ ಅಂಶಗಳಿಗೆ ನಿದರ್ಶನ ಎಂಬಂತಿರುವ ಲೇಖನಗಳು : ದಕ್ಷಿಣ ಕನ್ನಡ ಎಂಬ ಭಾಷಾ ಬಾಂಧವ್ಯದ ಪ್ರಯೋಗಶಾಲೆ, ಭವಿಷ್ಯಕ್ಕಾಗಿ ಕನ್ನಡ ಕಹಳೆ, ದೇರಾಜೆ ಸೀತಾರಾಮಯ್ಯ: ಸಂಸ್ಕೃತಿ ಆಲಯದ ನ್ಯಾಯವಾದಿ, ಭಾಷಾ ವಿಜ್ಞಾನ ಮತ್ತು ತುಳು ನಿಘಂಟುವಿನ ಕೊಪ್ಪರಿಗೆ: ಡಾ.ಯು.ಪಿ. ಉಪಾಧ್ಯಾಯ, ಪ್ರೊ. ಕು.ಶಿ . ಹರಿದಾಸ ಭಟ್ಟರ ತುಳು ಜಾನಪದ ಕೊಡುಗೆ, ಸತ್ತವರ ಸಂಗದಲಿ ಹೊತ್ತು ಹೋಗುವುದು ಎನಗೆ: ಏರ್ಯ, ತುಳುವಿಗೆ ಮಾನಾದಿಗೆ ತಂದುಕೊಟ್ಟ ಡಿ.ಕೆ. ಚೌಟರು, ವಿದ್ವತ್ ಗುರು ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು, ಬಹುಶ್ರುತ ವಿದ್ವಾಂಸ ಗೆಳೆಯ ಪ್ರೊ.ಬಿ. ಸುರೇಂದ್ರ ರಾವ್, ಒಲುಮೆಯ ಆಪ್ತ ಸಾಹಿತಿ ಪ್ರೊ. ಅಮೃತ ಸೋಮೇಶ್ವರರು. ದೀರ್ಘವಾಗಿರುವ ಈ ಲೇಖನಗಳಲ್ಲಿ "ಬದುಕು ಕಟ್ಟಿದ ಬಗೆಗಳ" ವಿವರಗಳಿವೆ. " ... ಹಿರಿಯರ ಬದುಕಿನ ಹೆದ್ದಾರಿ ಕಣ್ಮರೆಯಾಗಿದೆ. ವೈಯಕ್ತಿಕ ಮತ್ತು ಸಾರ್ವತ್ರಿಕ ಬದುಕಿನಲ್ಲಿ ನೈತಿಕತೆ ಮರೆಯಾಗಿದೆ. ಹೊರನೋಟದ ಪ್ರದರ್ಶನಪ್ರಿಯತೆ ವ್ಯಕ್ತಿತ್ವದ ಮಾಪಕವಾಗಿದೆ. ತೋರಿಕೆಯ ಸಿದ್ಧಾಂತದ ಛದ್ಮವೇಷದಲ್ಲಿ ಮನುಷ್ಯ ಸಂಬಂಧಗಳು ಹೋಳು ಹೋಳಾಗಿವೆ. .... ವಿಚಾರಗಳ ಮುಖವಾಡದಲ್ಲಿ ಜನರನ್ನು ಹೊರಗಿಡುವ ಮನೋಧರ್ಮ ಬೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳು ಇಂತಹ ಒಡೆಯುವ ಪ್ರವೃತ್ತಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಿವೆ. ಕಲ್ಪಿತ ಪೂರ್ವಗ್ರಹಗಳಿಂದಾಗಿ ಜನರನ್ನು ಸಂಶಯದಿಂದ ನೋಡುವ ಕಣ್ಣುಗಳು ಕ್ರಿಯಾಶೀಲವಾಗಿವೆ....ದೊಡ್ಡ ಗಂಟಲಿನಲ್ಲಿ ಮಾತನಾಡುವುದನ್ನು ಶಕ್ತಿಯ ಪ್ರದರ್ಶನ ಎಂದು ಭ್ರಮಿಸಲಾಗುತ್ತದೆ. ಮೌನವಾಗಿ ಇರುವವರನ್ನು ನಿಷ್ಪ್ರಯೋಜಕರು ಎಂದು ಟೀಕಿಸಲಾಗುತ್ತದೆ‌. ಸಂಘರ್ಷದ ಸಂದರ್ಭದಲ್ಲಿ ಸಂಯಮವೇ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುತ್ತವೆ ಎನ್ನುವ ತಿಳುವಳಿಕೆ ಕಡಿಮೆಯಾಗಿದೆ" ( ಪು. 184). ಹಿರಿಯರು ಕಟ್ಟಿದ ಸಂಸ್ಕೃತಿಯ ಮನೆ ಕುಸಿಯುತ್ತಿದೆ ಎಂಬ ಆತಂಕ ಮತ್ತು ವಿಷಾದ !! ಹಿಂದಣ ಬದುಕಿನ ಸಾರ್ಥಕತೆ , ಸಂಭ್ರಮ, ವೈವಿಧ್ಯ , ಸೃಜನಶೀಲತೆ ಮತ್ತು ಮುಂದಣ ಬದುಕಿನ ಹಿಂಸೆ, ಕ್ರೌರ್ಯ, ತುಳಿತ, ಅತ್ಯಾಸೆ, ದುರಾಸೆ ಇವುಗಳ ನಡುವೆ ಇರುವ ನಾವೆಲ್ಲರೂ ಮುಂದೆ ಕಟ್ಟಬೇಕಾದ ಸಾಂಸ್ಕೃತಿಕ ಮಹಾಮನೆಯ ಬಗ್ಗೆ ಸಾವಧಾನವಾಗಿ ಯೋಚಿಸುವಂತೆ "ಬದುಕು ಕಟ್ಟಿದ ಬಗೆಗಳು" ಕೃತಿ ಒತ್ತಾಯಿಸುತ್ತದೆ. ಈ ಕೃತಿಯನ್ನು ಪ್ರಕಟಿಸಿರುವ ಅಂಕಿತದ ಪ್ರಕಾಶ್ ಕಂಬತ್ತಳ್ಳಿಯವರಿಗೆ ಅಭಿನಂದನೆಗಳು. ಕೆ. ಚಿನ್ನಪ್ಪ ಗೌಡ

No comments:

Post a Comment