Powered By Blogger

Thursday, September 3, 2020

ಅವವಿಂದ ಚೊಕ್ಕಾಡಿ - ಪಿ. ಬಿ. ಪ್ರಸನ್ನರ " ಉರಗವೇಣಿಯರೆಲ್ಲ ಕೇಳಿ " { ಕಥಾಸಂಕಲನ -2020 } P. B. PRASANNA

ಕೋಮಲತೆ ಮೈವೆತ್ತ ಕತೆಗಳು
------------------------------------
* ಅರವಿಂದ ಚೊಕ್ಕಾಡಿ
ಮಿತ್ರ ಪಿ. ಬಿ. ಪ್ರಸನ್ನ ಅವರು ಅವರ ಹೊಸ ಕಥಾ ಸಂಕಲನ 'ಉರಗವೇಣಿಯರೆಲ್ಲ ಕೇಳಿ' ಯನ್ನು ಕಳಿಸಿಕೊಟ್ಟಿದ್ದಾರೆ. ಅವರ ಪ್ರೀತಿಗೆ ಕೃತಜ್ಞ. ಕತೆ, ಕವಿತೆ, ಕಾದಂಬರಿ- ಇವೆಲ್ಲ ಓದಿ ಕೆಲವು ಸಮಯದ ನಂತರ ನನಗೆ ನೆನಪು ಉಳಿಯುವುದಿಲ್ಲ. ಯಾರದೊ ಕತೆಯನ್ನು ಇನ್ಯಾರದ್ದೊ ಕತೆ ಎನ್ನುವ ಎಡವಟ್ಟುಗಳೆಲ್ಲ ಆಗುತ್ತವೆ. ಇತಿಹಾಸ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ- ಇಂತಾದ್ದೆಲ್ಲ ಒಮ್ಮೆ ಓದಿದ್ದು ಅಚ್ಚಳಿಯದಂತೆ ನೆನಪಿನಲ್ಲಿ ಉಳಿಯುತ್ತದೆ. ಮತ್ತು ಯಾವ ಪುಟದಲ್ಲಿ ಏನಿದೆ ಎಂದೂ ಹೇಳಬಲ್ಲೆ. ಆದ್ದರಿಂದ ಕತೆಗಳ ಬಗ್ಗೆ ಓದಿದಾಗ ಅನಿಸಿದ್ದನ್ನು ಈಗಲೇ ಹೇಳಿಬಿಡುತ್ತೇನೆ.
'ಬಳೆ' ಮತ್ತು 'ಉರಗವೇಣಿಯರೆಲ್ಲ ಕೇಳಿರಿ' ಈ ಎರಡು ಕತೆಗಳು ನನಗೆ ಉಳಿದ ಕತೆಗಳಿಗಿಂತ ಬೇರೆಯೇ ಆಗಿ ಇಷ್ಟವಾದವು. 'ಉರಗವೇಣಿಯರೆಲ್ಲ ಕೇಳಿರಿ' ಯು ಮನೋವೈಜ್ಞಾನಿಕ ತಳಹದಿಯ ಕತೆ. ಬದುಕಿನ ಹತಾಶೆಗಳು, ಸೋಲುಗಳು ಹೇಗೆ ಮನುಷ್ಯನನ್ನು ಸೈಕಲಾಜಿಕಲ್ ಆಗಿ ದುರ್ಬಲಗೊಳಿಸುತ್ತಾ ಸಾಗಿ ಭ್ರಾಮಕ ಸ್ಥಿತಿಯನ್ನು ವಾಸ್ತವೀಕರಣಗೊಳಿಸುತ್ತವೆ ಎಂಬುದನ್ನು ಈ ಕತೆಯಲ್ಲಿ ಪ್ರಸನ್ನ ಅದ್ಭುತವಾಗಿ ಹೇಳಿದ್ದಾರೆ. ಮತ್ತು ಮನೋವೈಜ್ಞಾನಿಕ ನೆಲೆಯಲ್ಲಿ ಅದು ಹೆಚ್ಚು ಅಧ್ಯಯನ ಯೋಗ್ಯವಾದ ಕತೆಯಾಗಿದೆ.
ಹತಾಶೆ ಮತ್ತು ಸೋಲುಗಳು 'ಬಳೆ' ಯಲ್ಲೂ ಇವೆ. ಆದರೆ 'ಬಳೆ' ಯ ನಾಯಿಕೆ ಸರಸ್ವತಿ ಟೀಚರ್ ಹತಾಶೆಯ ಒಡಲಿನಲ್ಲೆ ಯಾವ ರೀತಿ ಬೆಳೆದು ಕಠೋರ ವಾಸ್ತವವನ್ನು ಅಣಕಿಸುವ ಹಾಗೆ ತನ್ನನ್ನು ತಾನು ಸಶಕ್ತವಾಗಿ ಸ್ಥಾಪಿಸಿಕೊಳ್ಳುತ್ತಾರೆ ಎನ್ನುವುದೂ, 'ಉರಗವೇಣಿಯರೆಲ್ಲ ಕೇಳಿ' ಯ ದಿವ್ಯ ಮತ್ತು ಮಾಧವ ಹತಾಶೆಯನ್ನೆ ಆಪ್ತವಾದ ದಾಂಪತ್ಯದ ಬೇರುಗಳಾಗಿ ಮಾಡಿಕೊಳ್ಳಬಹುದಾಗಿದ್ದ ಎಲ್ಲ ಸಾಧ್ಯತೆಗಳಿದ್ದೂ ಹೇಗೆ ತಮ್ಮನ್ನು ತಾವೇ ಕರಗಿಸಿಕೊಳ್ಳುತ್ತಾ ಹೋಗುತ್ತಾರೆ ಎನ್ನುವುದು ಅದ್ಭುತವಾದ ರೂಪಕಗಳಾಗಿವೆ.
ಶಿಕ್ಷಣದಲ್ಲಿ ಕಲೆಯನ್ನು ಬಳಸುವ ಬಗ್ಗೆ ಬಹಳ ಚರ್ಚೆಗಳಿವೆ. ಅದು ಸರಿಯೂ ಹೌದು. ಆದರೆ ಅಲ್ಲಿ ವಹಿಸಲೇ ಬೇಕಾದ ಎಚ್ಚರದ ಬಗ್ಗೆ ನಾವು ಚರ್ಚಿಸುತ್ತಿಲ್ಲ. ನನ್ನ ವಿದ್ಯಾರ್ಥಿಗಳ ಬಳಿ ನಾಟಕ ಮಾಡಿಸುವಾಗ ಕಲೆಯ ಮಿತಿಯ ಬಗ್ಗೆ ಎಚ್ಚರಿಸಿಯೇ ಅವರನ್ನು ನಾನು ವೇದಿಕೆಗೆ ಹತ್ತಿಸುತ್ತೇನೆ. ಕಲೆ ಆಕರ್ಷಕ. ಒಂದು ನೃತ್ಯ ಮಾಡಿದರೆ ಇನ್ನೊಂದು ಮಾಡುವ, ಮತ್ತೊಂದು ಮಾಡುವ ಎನಿಸುತ್ತದೆ. ಕಲೆ ಕಲಾವಿದನನ್ನು ಸೆಳೆಯಬಲ್ಲುದು. ಚಪ್ಪಾಳೆಗಳು ಹುಚ್ಚೆಬ್ಬಿಸಬಲ್ಲವು. ಆದರೆ ಒಂದು ಶೈಲಿಗೆ ಒಗ್ಗಿಕೊಂಡ ಕಲಾವಿದ ನಿಧಾನವಾಗಿ ಜನರಿಗೆ ಮಾಮೂಲಿಯಾಗುತ್ತಾನೆ. ಸೌಂದರ್ಯ, ಶಕ್ತಿ ಹೊರಟುಹೋದ ಹಾಗೆ ಬೇಡದವನಾಗುತ್ತಾನೆ. ಈ ಎಲ್ಲವನ್ನೂ 'ಉರಗವೇಣಿಯರೆಲ್ಲ ಕೇಳಿ' ಯು ಪರಿಣಾಮಕಾರಿ ರೂಪಕದ ಮೂಲಕವೆ ಹೇಳುತ್ತಾ ಹೋಗುತ್ತದೆ.
ಆದರೆ ಜ್ಞಾನ ಯಾರನ್ನೂ ಆಕರ್ಷಿಸುವುದಿಲ್ಲ. ಒಂದು ಪುಸ್ತಕವನ್ನು ಓದಿದಾಗ ಇನ್ನೊಂದು ಪುಸ್ತಕವನ್ನು ಓದೋಣವೆಂದ ಅನಿಸುವುದಿಲ್ಲ. ಹತ್ತಿರ ಹೋದವನನ್ನು ದೂರ ತಳ್ಳುವುದೆ ಜ್ಞಾನದ ಸ್ವಭಾವ. ಆಗಲೂ ಪಟ್ಟು ಹಿಡಿದು ಬಿಡದವನಿಗೆ ಮಾತ್ರ ಅದು ದೊರಕುವುದು. ಆದರೆ ಎಂತಹ ಘೋರ ಹತಾಶೆಯಲ್ಲೂ ಅದು ಮನುಷ್ಯನನ್ನು ಸೋಲಲು ಬಿಡುವುದಿಲ್ಲ. ವಯಸ್ಸು, ಅನಾರೋಗ್ಯ, ರೂಪ ಯಾವುದರ ಹಂಗೂ ಅದಕ್ಕಿಲ್ಲ. ನಾಯಿಕೆ ಸರಸ್ವತಿ ಟೀಚರ್ ಬಳಿ ಇರುವ ಚಿನ್ನದ ಬಳೆಗಾಗಿ ಹಪಹಪಿಸುವ ಮಗಳು, ತನ್ನವರೆನ್ನುವ ಯಾರೂ ಜೊತೆಯಿಲ್ಲದೆ ವೃದ್ಧಾಶ್ರಮವಾಸಿಯಾದ ಎಪ್ಪತ್ತು ವರ್ಷ ವಯಸ್ಸಿನ ಅಜ್ಜಿ ತೆಗೆದುಕೊಳ್ಳುವ ನಿರ್ಧಾರದ ತೇಜಸ್ಸನ್ನು ನಿರಾಕರಿಸಲು ಯಾರಿಗೂ ಆಗುವುದಿಲ್ಲ. ತನ್ನ ತಾಯಿಯನ್ನು ಹತಾಶೆಯಲ್ಲಿರಿಸಿ ಮದರ್ಸ್ ಡೇ ಆಚರಣೆಯ ವೈಭವೋಪೇತವಾದ ಸಿದ್ಧತೆಯನ್ನು ಮಾಡುವ ಸರಸ್ವತಿ ಟೀಚರ್ ಮಗಳು ವಿಡಂಬನೆಯನ್ನು ಸೃಷ್ಟಿಸಬಲ್ಲಳೆ ಹೊರತು ಯಾವ ಪರಿಣಾಮವನ್ನೂ ಬೀರಲಾರಳು. ಸರಸ್ವತಿ ಟೀಚರ್ ತೆಗೆದುಕೊಳ್ಳುವ ನಿರ್ಧಾರದ ಎದುರಿಗೆ ಆಕೆ ತರಗೆಲೆಯ ಹಾಗೆ ಹಾರಿ ಹೋಗುತ್ತಾಳೆ. 'ಉರಗವೇಣಿ' ಯಲ್ಲಿ ಎಲ್ಲವೂ ಇದ್ದರೂ ಕಲೆಯ ಹಿಂದೆ ಜ್ಞಾನದ ಬ್ಯಾಕ್ ಅಪ್ ಇಲ್ಲದೆ ನಾಯಿಕೆ ಕರಗುತ್ತಾ ಹೋಗುತ್ತಾಳೆ.
ಇಲ್ಲಿನ ಕತೆಗಳು ಹೆಚ್ಚು ಕಮ್ಮಿ 1980-90ರ ಕಾಲದ ದಕ್ಷಿಣ ಕನ್ನಡದ ಸಾಮಾಜಿಕ ಸನ್ನಿವೇಶದ ಗಾಢವಾದ ಅನುಭವಗಳಿಂದ ಒಡಮೂಡಿದ ರೀತಿಯಲ್ಲಿದೆ. ಒಂಥರಾ ಅನಂತಮೂರ್ತಿಯವರ ' ಮೌನಿ' ಕತೆಯ ಅಪ್ಪಣ್ಣ ಭಟ್ಟ-ಕುಪ್ಪಣ್ಣ ಭಟ್ಟರನ್ನು ನೆನಪಿಸುವ 'ಅನಾಹತ ನಾದ' ಕತೆಯ ಕೇಶವ ಮತ್ತು ಅಬೂಬಕರ್ ಪಾತ್ರಗಳು ದಕ್ಷಿಣ ಕನ್ನಡದ ಸಾಮಾಜಿಕ ಜೀವನದ ಭಾಗವಾಗಿದ್ದ ಮತ್ತು 60 ದಾಟಿದ ವಯೋವೃದ್ಧರಲ್ಲಿ ಈಗಲೂ ಇರುವ ಸಂಬಂಧಗಳ ಸ್ವರೂಪವನ್ನು ಬಿಚ್ಚಿಡುತ್ತದೆ. ಪತ್ನಿ ಮೃತಳಾದ ಮೇಲೆ ದೇವರ ಸಾಮಗ್ರಿಗಳಿಗೆಲ್ಲ ಮಠದಲ್ಲಿ ವಿಲೇವಾರಿ ಮಾಡಿ ಊರಿನ‌ ಮನೆಯನ್ನು ಬಿಟ್ಟು ಮಗ-ಸೊಸೆಯೊಂದಿಗಿರಲು ಹೋಗುವುದು;ಅಲ್ಲಿ ಮಡಿಯನ್ನು ಪಾಲಿಸಲು ಸರಿಗಟ್ಟಾಗದೆ ಊರಿಗೆ ಮರಳಿದಾಗ ಬಾಲ್ಯದ ಮಿತ್ರ ಅಬೂಬಕರ್ ಸಿಗುವುದರ ಮೂಲಕ ಕತೆ ಬೆಳೆಯುತ್ತದೆ. ಅಬೂಬಕರ್ ಗೆ ದನ ಸಾಕುವ ಹುಚ್ಚು. ಅಬೂಬಕರ್ ಮಗನಿಗೆ ಅಪ್ಪ ದನ ಸಾಕುವುದೇ ಕಿರಿಕಿರಿ. ಕೇಶವ ಮಗ-ಸೊಸೆಯಿಂದ ತಿರಸ್ಕೃತನಾದವನು. ಅಬೂಬಕರ್ ಮಗ ತಿರಸ್ಕರಿಸುತ್ತಾ ಇರುವವನು. ಕೇಶವ ಪುರೋಹಿತರನ್ನೆಲ್ಲ ಕರೆದು ಗೃಹಪ್ರವೇಶವನ್ನೆಲ್ಲ ಮಾಡಲು ಅಬೂಬಕರ್ ನಾಯಕ. ಬಂದ ಜನರು ಏನೋ ಹೇಳಿದರೆಂದು ಹೊರಟು ಹೋಗುವ ಅಬೂಬಕರ್ ಬಾರದೆ ತಾನು ಊಟ ಮಾಡುವುದಿಲ್ಲವೆಂದು ಕೇಶವ. "ನಿನ್ನ ಹೆಂಡತಿಯ ಬಗ್ಗೆ ನೀನು ಹೇಳಲೇ ಇಲ್ಲ" ಎಂದು ಕೇಶವ ಕೇಳಿದಾಗ ಅಬೂಬಕರ್ ಸಹಜವಾಗಿ," ಅವಳು ಅಲ್ಲಾಹುವಿನ ಬಳಿಗೆ ಹೋದಳು" ಎಂದಷ್ಟೆ ಹೇಳುವುದು. ಆ ಒಂದು ಮಾತೇ ಕೇಶವನಿಗೆ ಎಲ್ಲವನ್ನೂ ಅರ್ಥ ಮಾಡಿಸುವುದರಲ್ಲಿ ಪ್ರಸನ್ನ ಮಾತಿಗೆ ಇರುವ ನಿಜವಾದ ಶಕ್ತಿಯನ್ನೂ ಓದುಗನಿಗೆ ಅರ್ಥ ಮಾಡಿಸುತ್ತಾರೆ. ಕಡೆಗೆ ಅಬೂಬಕರ್ ದನ ಮತ್ತು ಕರು ಕೇಶವನ ಮನೆಗೆ ಬಂದು ವಯೋವೃದ್ಧರಾದ ಕೇಶವ ಮತ್ತು ಅಬೂಬಕರ್ ಕೇಶವನ ಮನೆಯಲ್ಲೆ ಶಾಶ್ವತವಾಗಿ ಸೆಟ್ಲ್ ಆಗುವುದು ಒಂದು ಹೃದ್ಯ ಕಾವ್ಯವಾಗಿ ಓದುಗನಲ್ಲಿ ಉಳಿಯುತ್ತದೆ.
ಇದು ಓದುಗನಲ್ಲಿ ಉಳಿಯುವ ಕತೆಯಾದರೆ,'ದತ್ತು' ಕತೆಯು ಓದುಗನಲ್ಲಿ ಬೆಳೆಯುವ ಕತೆ. ತುಸು 'ತ್ರಿವೇಣಿ' ಅವರ 'ಬೆಳ್ಳಿ ಮೋಡ' ದ ಇಂದಿರೆಯನ್ನು ಹೋಲುವ ಹೆಣ್ಣು ಸಾವಿತ್ರಿ ಈ ಕತೆಯ ನಾಯಿಕೆ. ಇಂದಿರೆಗೆ ಇರುವ ಪಕ್ವತೆಯ ದೃಢತೆ ಸಾವಿತ್ರಿಗೆ ಇಲ್ಲ ಎನ್ನುವುದು ಸಾವಿತ್ರಿಯನ್ನು ಇಂದಿರೆಯಿಂದ ಪ್ರತ್ಯೇಕಿಸುವ ಅಂಶ. ಗಂಡ ಹೇಳಿ ಮಗುವನ್ನು ದತ್ತು ತೆಗೆದುಕೊಳ್ಳುವ ಸಾವಿತ್ರಿ ಮಗು ಕಪ್ಪು ಎಂಬ ಕಾರಣಕ್ಕೆ ಮನೆಯವರಿಂದ ತಿರಸ್ಕೃತಳಾಗಿ ತೌರು ಸೇರುತ್ತಾಳೆ. ಡೈವರ್ಸ್ ತೆಗೆದುಕೊಂಡು ಹೊರಡುವಾಗ "ಇನ್ನೊಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ" ಎನ್ನುವ ಅವಳ ಮಾತುಗಳು ಛಲವಾದದಲ್ಲಿ 'ಗಿರಿ' ಯನ್ನು ಭವಿಷ್ಯದ ಆಸರೆಯಾಗಿ ನೋಡುವ ತ್ರಿವೇಣಿಯವರ ಇಂದಿರೆ ಕಾಣಿಸುತ್ತಾಳೆ. ಅಲ್ಲಿ ಇಂದಿರೆಯ ಬದುಕೂ ಓದುಗನಲ್ಲಿ ಬೆಳೆಯುತ್ತದೆ. ಇಲ್ಲಿ ಸಾವಿತ್ರಿಯೂ ಓದುಗನಲ್ಲಿ ಬೆಳೆಯುತ್ತಾಳೆ.
'ಆವಲ್ಲಿಗೆ ಪಯಣವಯ್ಯ', 'ಅಗಣಿತ ತಾರಾ ಗಣಗಳ ನಡುವೆ', 'ಭವದಲಿ ಬರಿದೆ...' ಯಂತಹ ಕತೆಗಳು ಬಹಳ ನವಿರಾದ ಆಪ್ತ ಕತೆಗಳು. ಪ್ರಸನ್ನ ಅವರ ಎಲ್ಲ ಕತೆಗಳಲ್ಲೂ ಕಂಡು ಬರುವ ಹಿತವಾದ ಅಂಶವೆಂದರೆ ಅಲ್ಲಿ ಪಾತ್ರಗಳು ಬದುಕುತ್ತವೆ. ಅವುಗಳಿಗೆ ಜೀವಂತಿಕೆ ಇದೆ. ಮತ್ತು ಪಾತ್ರಗಳು ಸ್ವತಂತ್ರವಾಗಿವೆ; ಅರ್ಥಾತ್ ಪಾತ್ರಗಳನ್ನು ಕತೆಗಾರ ತನ್ನಿಷ್ಟದಂತೆ ಚಲನೆಗೆ ಒಡುವುದಿಲ್ಲ.‌ಸಹಜವಾಗಿ ಚಲಿಸುತ್ತವೆ.'ಆವಲ್ಲಿಗೆ ಪಯಣವಯ್ಯ' ದ ನಾಯಿಕೆ ಪೂರ್ವಿ ತನ್ನ ಮಗನನ್ನು ಮದುವೆಯಾಗುತ್ತಿಯಾ? ಎಂದು ಕೇಳುವ ಗುಲಾಬಿಗೆ ಉತ್ತರಿಸುವ ಸಿಡುಕು ಎಷ್ಟು ಸಹಜವೊ ಪೂರ್ವಿಯೇ ಗುಲಾಬಿಗೆ ಫೋನ್ ಮಾಡಿ,"ಅಮ್ಮ, ನಾನು‌ ನಿಮ್ಮ‌ಸೊಸೆ ಪೂರ್ವಿ" ಎನ್ನುವುದು ಕೂಡ ಅಷ್ಟೇ ಸಹಜ. ಪಾತ್ರಗಳ ಈ ಸಹಜತೆಯಲ್ಲಿ ನಡೆವಳಿಕೆಯಲ್ಲಿ ಪರಿವರ್ತನೆಯನ್ನು ತರುವುದು ಪಾತ್ರಗಳಿಗೆ ಆಗುವ ಅನುಭವಗಳು ಅವರ ಆಲೋಚನೆಯ ಮೇಲೆ ಉಂಟು ಮಾಡುವ ಪರಿಣಾಮಗಳೇ ಹೊರತು ಕತೆಗಾರನ ಮಧ್ಯಪ್ರವೇಶವಲ್ಲ. 'ಅಗಣಿತ ತಾರಾ ಗಣಗಳ ನಡುವೆ' ಯಲ್ಲಿ ಹೈಸ್ಕೂಲ್ ದಿನಗಳ ಗಾನ ಜೋಡಿ ಮತ್ತೆಂದೂ ಭೇಟಿಯಾಗದೆ ವೃದ್ಧಾಶ್ರಮವಾಸಿಗಳಾದಾಗ ಮತ್ತೆ ಗಾನ ಜೋಡಿಯಾಗುವುದು ಬುದ್ಧಿಯ ಭಾರವನ್ನು ಎಲ್ಲೂ ಬಳಸದೆ ಸಹಜ ಬದುಕೇ ಒಂದು ಆಧ್ಯಾತ್ಮಿಕ ಸೌಂದರ್ಯವಾಗಿ ರೂಪುಗೊಳ್ಳುವಂತೆ ಮಾಡಿದೆ. ಕತೆಯನ್ನು ಮುಟ್ಟಿದರೆ ಎಲ್ಲಿ ಕತೆಗೆ ನೋವಾದೀತೋ ಎನ್ನುವಂತಹ ಕೋಮಲತೆಯಿಂದ ಈ ಕತೆ ಓದುಗನನ್ನು ಸೂರೆಗೊಳ್ಳುತ್ತದೆ, ಮಾಗಿಸುತ್ತದೆ.
ಪ್ರಸನ್ನ ಅವರ ಭಾಷಾ ಪ್ರಯೋಗ ತುಂಬ ಚಂದ. ಪಕ್ಕಾ ದಕ್ಷಿಣ ಕನ್ನಡ,ಉಡುಪಿಯ ಕನ್ನಡದಲ್ಲಿ ಬರೆದಿದ್ದಾರೆ. "ನಾನು ಸ ಪ್ರಿನ್ಸಿಪಾಲು ಸ',' ಎಂತಕ್ಕೆ ಹೋಗುದು?",' ಅವಳನ್ನು ಪುಸ್ಕು ಮಾಡಿದ್ರು', 'ಬಿಂಗ್ರಿ ಬಿಂಗ್ರಿ ಆಯ್ತು', 'ಕಂಡಾಬಟ್ಟೆ ರೈಸಿದ್ರು', 'ಟೀಚರ್ ಟೀಚರ್ ನನ್ನ ಗುರ್ತ ಸಿಗ್ಲಿಲ್ವ?",'ಪುದುಂಕಿಸಿದರು'- ಈ ರೀತಿಯ ಅಪ್ಪಟ ದಕ್ಷಿಣ ಕನ್ನಡದ ಕನ್ನಡ ಬಳಕೆಯೇ ಇಲ್ಲವೇನೋ ಎನಿಸುವ ಹೊತ್ತಿನಲ್ಲಿ ಪ್ರಸನ್ನರ ಭಾಷೆ ಮುದಗೊಳಿಸುತ್ತವೆ. ನನಗೆ ಸ ಪ್ರಸನ್ನ ಇಷ್ಟು ಚಂದದ ಕತೆ ಹೇಳುದು ಗೊತ್ತಿರ್ಲಿಲ್ಲ.
Prasanna PB and 3 others

No comments:

Post a Comment