Powered By Blogger

Saturday, September 19, 2020

ಮಂಗಳಾ ನಾಗರಾಜ ರಾವ್ - ಬಿ. ವಿ. ಕಾರಂತರು ನಾನು ಕಂಡಂತೆ B. V . KARANTH by MANGALA NAGARAJA RAO

 ಸೆಪ್ಟೆಂಬರ್ 19 ಕಾರಂತರ ಹುಟ್ಟುಹಬ್ಬ ಎಂದು ಎಲ್ಲರೂ ನಂಬಿದ್ದೇವೆ. ಹಾಗೆಂದುಕೊಂಡೇ ನಾವೂ 30 ವರುಷದ ಹಿಂದೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದೆವು. ಆಗ ಅವರು ’ಯಾರು ನಿಮಗೆ ಹೇಳಿದ್ದು. ಇಲ್ಲ, ಇವತ್ತು ನನ್ನ ಹುಟ್ಟು ಹಬ್ಬ ಅಲ್ಲ. ಯಾವತ್ತು ಅಂತ ನನಗೂ ಗೊತ್ತಿಲ್ಲ. ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಲಿ ಅಂತ ಸೆಪ್ಟೆಂಬರ್ 19 ಅಂತ ಇಟ್ಟುಕೊಂಡಿದ್ದೇನೆ. 19-9-1929!” ಅಂದಿದ್ದರು. ಬಹುಶಃ ನಮಗೂ ನೆನಪಿಸಿಕೊಳ್ಳಲು ಸುಲಭವಾಗಲಿ ಎಂದಿರಬಹುದು ಅಂದುಕೊಂಡೇ ಇವತ್ತು ನೆನಪಿಸಿಕೊಳ್ಳುತ್ತಿದ್ದೇವೆ.

ಕಾರಂತರು ಎನ್.ಎಸ್.ಡಿ ಗೆ ಸೇರಿಕೊಳ್ಳಲು ಹೋದಾಗ ಅಲ್ಲಿ ಕೇಳಿದರು,. ’ನೀನು ಎಲ್ಲಿಂದ ಬಂದಿದ್ದೀಯ” ಅಂತ. ಅದಕ್ಕೆ ಕಾರಂತರು”ಕರ್ನಾಟಕದಿಂದ’ ಎಂದರಂತೆ. ಅದಕ್ಕೆ ಅವರು “ನಾಟಕವನ್ನು ಯಾಕೆ ಆಯ್ಕೆ ಮಾಡಿಕೊಂಡೆ” ಅಂದಾಗ, ಕಾರಂತರು “ಹೆಸರಿನಲ್ಲೇ ಇದೆಯಲ್ಲಾ…. ಕರ್….. ನಾಟಕ್! ಅಂತ, ಹಾಗಾಗಿ ನಾಟಕ ಮಾಡೋಕೆ ಬಂದಿದೀನಿ” ಎಂದರಂತೆ.
ಕರ್ ನಾಟಕ್ ಎಂದ ನಾಟಕದ ಮೇಷ್ಟ್ರು……ನಾ ಕಂಡಂತೆ
ಮೇಷ್ಟ್ರು ನಮಗೆ ಸಿಕ್ಕಿದ್ದೇ ಎಂಬತ್ತರ ದಶಕದ ಕಡೆಯಲ್ಲಿ. ಅವರ ಸಂಭ್ರಮದ, ಉತ್ಸಾಹದ, ಚೈತನ್ಯದ, ಸಂತೋಷದ, ಶಕ್ತಿವಂತ ದಿನಗಳಲ್ಲಿ ನಮಗವರು ಸಿಗಲೇ ಇಲ್ಲ. ಅವರ ಆ ಕಾಲದ ಕೆಲಸಗಳೆಲ್ಲವನ್ನು ನಾವು ಕಾಗೆ ಗುಬ್ಬಿ ಕತೆಗಳ ಹಾಗೆ ಕೇಳಿ ತಿಳಿದುಕೊಂಡಿದ್ದೇವೆಯೇ ಹೊರತು ನೋಡಿಯಲ್ಲ. ಅವರ ಕಷ್ಟದ, ನಿರಂತರವಾಗಿ ಖಿನ್ನರಾಗಿದ್ದಂತಹ, ದುಃಖದಿಂದ ಕೂಡಿದ ದಿನಗಳಲ್ಲಿ ನಮಗವರು ರಂಗಾಯಣದಲ್ಲಿ ಸಿಕ್ಕರು. ಅಂತಹ ಪರಿಸ್ಥಿತಿಯಲ್ಲಿ ನಾವು ಪರಸ್ಪರ ಪಡೆದುಕೊಂಡಿದ್ದು. ಅಪಾರ. ಆ ಕಾಲಘಟ್ಟದಲ್ಲಿ, ಅವರ ಆ ಮನಸ್ಥಿತಿಯಲ್ಲಿ, ಏಳೆಂಟು ವರುಷಗಳ ನಿರಂತರ ರಂಗದುಡಿಮೆಯ ಸಂದರ್ಭದಲ್ಲಿ ನಾವು ಅವರೊಡನೆ ಕಳೆದ ಒಂದೊಂದು ದಿನಗಳು ನಮ್ಮ ಜೀವನದ ಸಾರ್ಥಕ ಕ್ಷಣಗಳು. ರಂಗದಿಗ್ಗಜರೆನಿಸಿಕೊಂಡ ಬಿ.ವಿ.ಕಾರಂತರು ಕೆಲವರಿಗೆ ಭೀಷ್ಮರಾಗಿ, ಮತ್ತೂ ಕೆಲವರಿಗೆ ದ್ರೋಣರಾಗಿದ್ದರು; ನಾಟಕದ ನಿರ್ದೇಶಕರಾಗಿದ್ದರು; ರಂಗಸಂಗೀತದ ಗುರುವಾಗಿದ್ದರು. ಉತ್ತರಭಾರತದ ಜನಕ್ಕೆ ಬಾಬಾ ಆಗಿದ್ದರು; ನಮಗೆ ಮೇಷ್ಟ್ರಾಗಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಇಡೀ ರಂಗಭೂಮಿಯ ಜನಕ್ಕೆ, ರಂಗಾಸಕ್ತರಿಗೆ “ಕಿಂದರಿಜೋಗಿ” ಆಗಿದ್ದರು. ಬಿ.ವಿ.ಕಾರಂತರು ಎಂದಾಕ್ಷಣ ನಮಗೆ ಅವರು ನೆನಪಾಗುವುದು ಮೇಷ್ಟ್ರಾಗಿಯೇ ಹೊರತು ಎಲ್ಲರೂ ಗುರುತಿಸುವ ಹಾಗೆ ಭಾರತದ ಮಹಾನ್ ರಂಗನಿರ್ದೇಶಕರಾಗಿ ಅಲ್ಲ. ಮೇಷ್ಟ್ರು ನಮ್ಮನ್ನು ಸುತ್ತಲೂ ಕೂಡಿಸಿಕೊಂಡು ಚಂದ್ರನನ್ನು ತೋರಿಸುತ್ತಾ ತುತ್ತು ನೀಡುವ ಅಮ್ಮನ ಹಾಗೆ; ಸುತ್ತಲೂ ಕುಳಿತ ಮಕ್ಕಳಿಗೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳುವ ಅಜ್ಜನ ಹಾಗೆ ರಂಗಭೂಮಿಯ ಪಾಠಗಳನ್ನು ಕಲಿಸಿದ್ದಾರೆ, ಅರ್ಥೈಸಿದ್ದಾರೆ, ಬೆಳೆಸಿದ್ದಾರೆ. ಅದಕ್ಕೇ ನಮಗೆ ಅವರೊಡನೆ ಭಯ, ಭಕ್ತಿ, ಪ್ರೀತಿಯ ಜೊತೆಗೆ ಜಗಳವಾಡುವ ಸಲಿಗೆಯೂ ಇತ್ತು. ರಂಗಾಯಣದ ಪ್ರಾರಂಭದ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ನಾವೆಲ್ಲರೂ ಅವರೊಡನೆ ಟೊಂಕ ಕಟ್ಟಿ ಕೆಲಸ ಮಾಡಿದ್ದೇವೆ. ಅದರ ಬಗ್ಗೆ ನಮಗೆ ಖುಷಿ ಇದೆ. ಸಂತೋಷ ಇದೆ. ಸಾರ್ಥಕತೆ ಇದೆ.
ಈಗ ಅವರು ನಮ್ಮನ್ನಗಲಿ ಹತ್ತೊಂಬತ್ತುವರುಷಗಳೇ ಸಂದು ಹೋಗಿವೆ. ಅವರು ಅಗಲಿದ ನಂತರದ ಕೆಲದಿನಗಳು ನಮ್ಮನ್ನಾವರಿಸಿದ ಖಾಲಿತನವೇ ಮತ್ತೆ ಮತ್ತೆ ನಮ್ಮನ್ನು ಕೆಲಸ ಮಾಡಲು ಪ್ರೇರೇಪಿಸಿದೆ. ಅಂದು ಅವರಾಡಿದ ಮಾತುಗಳು ಇಂದು ನಮ್ಮನ್ನು ನಿತ್ಯವೂ ಎಚ್ಚರಿಸುತ್ತಲೇ ರಂಗಭೂಮಿಯಲ್ಲಿ ಉಳಿಯುವಂತೆ ಮಾಡಿದೆ. ಹಾಗಾಗಿ ಅವರಿಲ್ಲ ಎಂದು ಈಗ ನಮಗನ್ನಿಸುವುದಿಲ್ಲ. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ನಮಗವರು ಜೊತೆಯಲ್ಲಿದ್ದಾರೆ. ಅವರೊಡನೆ ಕಳೆದ ಅಂದಿನ ದಿನಗಳ ನೆನಪಿಗೆ ಜಾರಿಕೊಂಡರೆ ಅವರು ನೀಡಿರುವ ರಂಗಾನುಭವ ಅಪಾರ. ಅವರಂದು ಆಡಿದ ಮಾತುಗಳು ಇಂದು ನಮಗೆ ಅರ್ಥವಾಗುತ್ತಿವೆ. ಅವರು ಅಗಲಿ ಹೋಗುವ ಮುನ್ನ ಆಡಿದ ಅಸಂಖ್ಯ, ಅಸಂಗತ ವಿಷಯಗಳು ಇನ್ನೂ ನಮ್ಮನ್ನು ಕಾಡುತ್ತಲೇ ಇವೆ. ನಾವು ಅವರೊಡನೆ ಬೆಳೆದು ಬಂದಿದ್ದೇ ಹೀಗೆ. ಅವರಾಡುವ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಬಹಳ ಶ್ರಮ ಪಟ್ಟಿದ್ದೇವೆ. ಕಣ್ಣರಳಿಸಿ ಸುಮ್ಮನೇ ಕೇಳಿಸಿಕೊಂಡ ಕ್ಷಣಗಳಲ್ಲಿ “ನಿಮಗೆ ಅರ್ಥವಾಗೋಲ್ಲ” ಎಂದು ಬಯ್ಸಿಕೊಂಡಿದ್ದೇವೆ. ನಮ್ಮ ಪೆದ್ದುತನಗಳಿಗೆ ಅವರು ಸಿಟ್ಟು ಮಾಡಿಕೊಳ್ಳಲಾಗದೆ ತಲೆ ಚಚ್ಚಿಕೊಂಡು ಒದ್ದಾಡುವುದನ್ನು ಕಂಡಿದ್ದೇವೆ.
ಹಾಗೆಯೇ ನಂತರದ ದಿನಗಳಲ್ಲಿ ಅವರಾಡಿದ ಮಂತ್ರಕ್ಕೆ ತಿರುಮಂತ್ರ ಒಡ್ಡಿದಾಗ ಅಚ್ಚರಿಯಿಂದ ನಮ್ಮನ್ನು ಅಡಿಯಿಂದ ಮುಡಿಯವರೆಗೂ ದೃಷ್ಟಿಸಿ ಗಡ್ಡದ ಮರೆಯಲ್ಲಿ ಸೊಟ್ಟ ನಗೆ ನಕ್ಕು ನನಗೆ ಬೇಕಾದದ್ದು ಇದೇ ಎನ್ನುವಂತೆ ನೆಟ್ಟಗೆ ಮುಂದೆ ಸಾಗಿದ್ದನ್ನು ನೋಡಿದ್ದೇವೆ. ಅವರು ಅಷ್ಟು ದೊಡ್ಡ ವ್ಯಕ್ತಿಯಾಗಿದ್ದರೂ ನಮ್ಮೊಡನೆ ಮನೆಯವರಂತೆ ಬೆರೆಯುತ್ತಿದ್ದರು. ನಾವು ಅವರೊಡನೆ ಮನಸ್ಸು ಬಿಚ್ಚಿ ಮಾತಾಡಿದ್ದೇವೆ; ಜಗಳವಾಡಿದ್ದೇವೆ; ಭಿನ್ನಾಭಿಪ್ರಾಯವನ್ನು ಯಾವ ಎಗ್ಗಿಲ್ಲದೇ ನಿರ್ಭೀತಿಯಿಂದ ಹೇಳಿದ್ದೇವೆ. ಒಪ್ಪದ ವಿಷಯಗಳಿಗೆ ತಕರಾರು ತೆಗೆದಿದ್ದೇವೆ. ಮುನಿಸಿಕೊಂಡು ಮಾತು ಬಿಟ್ಟಿದ್ದೇವೆ. ಇದಾವುದನ್ನೂ ತಾನು ಗಮನಿಸಿಯೇ ಇಲ್ಲ ಎಂಬಂತೆ ಮೇಷ್ಟ್ರು ನಮ್ಮೊಡನೆ ಮತ್ತೆ ಸಹಜವಾಗಿಯೇ ವರ್ತಿಸಿದ್ದಾರೆ. ಅವಕಾಶ ಸಿಕ್ಕಾಗ ಚುಚ್ಚು ನುಡಿಗಳಿಂದ ಹಂಗಿಸಿದ್ದಾರೆ. ತೀರಾ ಸಾಮಾನ್ಯನಂತೆ ವರ್ತಿಸಿ ಅನಗತ್ಯ ಅವಮಾನಿಸಿದ್ದಾರೆ. ಅವರ ರೀತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ಪರೀಕ್ಷಿಸಿದ್ದಾರೆ. ಆದರೆ ಅವರೆಂದಿಗೂ ಯಾರಿಗೂ ದುಷ್ಟರಾಗಲಿಲ್ಲ. ರಂಗಭೂಮಿಯಲ್ಲಿ ಈ ಎಲ್ಲಾ ಭಾವನೆಗಳು ಸಂಚಾರಿ ಭಾವ. ಬಹಳ ದಿನ ಉಳಿಯುವುದಿಲ್ಲ ಎಂದು ಸಮಾಧಾನ ಮಾಡುತ್ತಲೇ ಸಂಚಾರಿ ಭಾವ, ಸ್ಥಾಯಿ ಭಾವಗಳ ಪಾಠ ಮಾಡಿದ್ದಾರೆ.
ನಮಗೆ ಅವರು ಮಾಡಿಸಿದ ನಾಟಕಗಳು ಆರು. ಅದರಲ್ಲಿ ಮೂರು, ಮಕ್ಕಳ ನಾಟಕಗಳಾದರೆ ಮೂರು ದೊಡ್ಡವರಿಗಾಗಿ ಮಾಡಿದ ನಾಟಕಗಳು. ಮೊದಲಿಗೆ ಅವರು ಹಾರ್ಮೋನಿಯಂ ಹಿಡಿದು ನಾಟಕದ ಹಾಡುಗಳನ್ನು ಕಲಿಸಿ ನಂತರ ರಿಹರ್ಸಲ್ ಪ್ರಾರಂಭಿಸುತ್ತಿದ್ದರು. ರಿಹರ್ಸಲ್ ಶುರುವಾಯ್ತು ಅಂದರೆ ಸಾಕು ಅವರ ಕೆಲಸದ ರಿದಂ ಬದಲಾಗಿ ಬಿಡೋದು. ಅವರ ನಾಟಕಗಳ ತಾಲೀಮಂತು ಸಂಭ್ರಮದಿಂದ ಕೂಡಿರುತ್ತಿದ್ದವು. ಅವರು ಯಾರೊಬ್ಬರನ್ನೂ ಸುಮ್ಮನಿರಲು ಬಿಡುತ್ತಿರಲಿಲ್ಲ. ಅವರ ಕಣ್ಣು ಮತ್ತು ಕಿವಿ ಅತ್ಯಂತ ಚುರುಕಾಗಿದ್ದವು. ಅವರ ಕಣ್ಣು ತಪ್ಪಿಸಿ ನಾವೇನೂ ಮಾಡುವ ಹಾಗಿರಲಿಲ್ಲ. ಹಾಗೆಯೇ ನಾವು ಮೆಲ್ಲಗೆ ಉಸುರಿದ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಅವರ ಕಿವಿ ಚುರುಕಾಗಿರುತ್ತಿತ್ತು ಮತ್ತು ಅರ್ಥ ಮಾಡಿಕೊಳ್ಳುವಷ್ಟು ಸೂಕ್ಷ್ಮಮನಸ್ಸು ಅವರದಾಗಿತ್ತು. ಅಭಿನಯದ ಕಡೆಗೆ ಅವರು ಕೆಲಸ ಮಾಡುತ್ತಿದ್ದ ರೀತಿಯೂ ಅಷ್ಟೆ. ಅವರೆಂದು ಯಾರನ್ನೂ ಹಿಡಿದು ತೀಡ್ತಾ ತೀಡ್ತಾ ಕೂರುತ್ತಿರಲಿಲ್ಲ. ಗುಂಪನ್ನು ಹಿಡಿದು ಬಿಡುತ್ತಿದ್ದರು. ಯಾರಿಗೂ ಅವರು ಹೀಗೆ ಮಾಡು ಎಂದು ಹೇಳುತ್ತಿರಲಿಲ್ಲ. ಆದರೆ ಈ ತರಹ ಮಾಡು ಎಂದು ತಿಳಿಸುತ್ತಿದ್ದರು. ಆಗ ನಟನಿಗೆ ಅವನದೇ ಆದಂತಹ ಒಂದು ಆವರಣ ಸಿಗುತ್ತಿತ್ತು.
ತನ್ನ ಗ್ರಹಿಕೆಗೆ ಅನುಸಾರವಾಗಿ, ದೈಹಿಕ ಭಾಷೆಗನುಗುಣವಾಗಿ ಕೆಲಸ ಮಾಡಿಕೊಳ್ಳಲು ಸ್ವಾತಂತ್ರ್ಯ ಇರುತ್ತಿತ್ತು. ಅವರು ಯಾವತ್ತೂ ಗುಂಪಿನ ದೃಶ್ಯಗಳಿಗೆ, ಗುಂಪು ಇರುವಂತಹ ನಾಟಕಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಅವರು ರಂಗಭೂಮಿಯಲ್ಲಿ ಒಬ್ಬನನ್ನು ಅಥವಾ ಒಬ್ಬಳನ್ನು ನೋಡಲು ಇಷ್ಟಪಡುತ್ತಿರಲಿಲ್ಲ. ಒಂದು ಸಮೂಹವನ್ನು ನೋಡುವುದಕ್ಕೆ ಹಾತೊರೆಯುತ್ತಿದ್ದರು. ಅವರ ಹೆಚ್ಚು ಕಡಿಮೆ ಎಲ್ಲ ನಾಟಕಗಳಲ್ಲು ಗುಂಪು ದೃಶ್ಯಗಳು ವಿಜೃಂಬಿಸಿವೆ. ಮೇಷ್ಟ್ರಿಗೆ ನಟರ ಗುಂಪು ಎದ್ದು ಕಾಣಿಸಬೇಕಿತ್ತು. ಯಾವಾಗಲೂ ಹೇಳುತ್ತಿದ್ದರು. – ” ಗುಬ್ಬಿ ಕಂಪನಿಯಿಂದ ಒಬ್ಬ ರಾಜಕುಮಾರ್ ಹುಟ್ಟಿ ಬಂದರೆ ನನಗೆ ಗುಂಪು ಗುಂಪು ರಾಜಕುಮಾರ, ಬಾಲಕೃಷ್ಣ, ನರಸಿಂಹರಾಜರು ಹುಟ್ಟಿ ಬರಬೇಕು ಎಂದು. ಯಾರು ಯಾವಾಗ ಯಾವ ಪಾತ್ರ ಬೇಕಾದರೂ ಮಾಡುವಷ್ಟು ಪರಿಣಿತರಿರಬೇಕು. ಇದೇ ನನ್ನ ಕನಸು” ಎಂದು ಹೇಳುತ್ತಿದ್ದರು. ಕಿಂದರಿ ಜೋಗಿ ನಾಟಕದ ಪ್ರದರ್ಶನ ನಡೆಯುತ್ತಿತ್ತು. ಕೊನೆಯ ದಿನ ಎಲ್ಲ ಪಾತ್ರಗಳ ಹೆಸರಿನಲ್ಲಿ ಚೀಟಿ ಬರೆದು ಲಾಟರಿ ಹಾಕಿ ಯಾರಿಗೆ ಯಾವ ಪಾತ್ರ ಬರುತ್ತದೋ ಅದನ್ನು ನಿರ್ವಹಿಸಬೇಕು ಎಂದು ಪ್ರೇಕ್ಷಕರ ಮುಂದೆಯೇ ಅದನ್ನು ಹೇಳಿ ನಮ್ಮನ್ನು ಅಂತಹ ಒಂದು ಸಾಹಸಕ್ಕೆ ಕರೆದೊಯ್ದಿದ್ದರು.ಜೊತೆಗೆ ಪ್ರೇಕ್ಷಕರನ್ನೂ ಮಾನಸಿಕವಾಗಿ ಸಿದ್ಧಗೊಳಿಸಿದ್ದರು. ಸಂಸರ ಬಿರುದೆಂತೆಂಬರ ಗಂಡ ಮತ್ತು ಮಂತ್ರ ಶಕ್ತಿ ನಾಟಕಗಳ ಬಗ್ಗೆ ಅವರಿಗೆ ತುಂಬಾ ಒಲವಿತ್ತು. ” ಅವೆರಡು ತುಂಬಾ ಕಷ್ಟವಾದ ನಾಟಕಗಳು ಅವುಗಳನ್ನು ಮಾಡೋಕೆ ತುಂಬಾ ಪರಿಣಿತರಾದ ತಂಡವೇ ಬೇಕು. ಅದೇ ನನ್ನ ಕನಸು” ಎಂದು ಹೇಳುತ್ತಿದ್ದರು.
ಇನ್ನು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅವರು ಎಂದೂ ಯಶಸ್ಸಿನತ್ತ ಗಮನವಿಡುತ್ತಿರಲಿಲ್ಲ. “ಕಿಂದರಿಜೋಗಿ” ಯಂಥ ಯಶಸ್ವಿ ನಾಟಕ ಕೊಟ್ಟು ಇಡೀ ಮೈಸೂರಿನ ಮಕ್ಕಳಿಗೆಲ್ಲ ಹುಚ್ಚೆಬ್ಬಿಸಿದ್ದು ಎಷ್ಟು ಸತ್ಯವೋ ಅಷ್ಟೇ ಸತ್ಯ “ಮರ ಹೋತು ಮರ ಬಂತು ಡುಂ ಡುಂ ಡುಂ” ನಾಟಕ ವಿಳಾಸಕ್ಕೆ ಸಿಗದೆ ತೋಪಾದದ್ದು. ಅವರು ತುಂಬಾ risk ತಗೋತಿದ್ದರು. ನಾಟಕ ಹೇಗಪ್ಪಾ ಸಾಧ್ಯ ಎಂದು ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಷ್ಟು ಹೆದರಿಸುತ್ತಿದ್ದರು. ಕೆಲವು ಬಾರಿ ಅಷ್ಟೇ ಸಂತೋಷ, ಸಂಭ್ರಮ, ತಮಾಷೆಗಳ ಮದ್ಯೆ ಸಲೀಸಾಗಿ ನಾಟಕ ಮುಗಿಸುತ್ತಿದ್ದರು. “ಎಲ್ಲಾ ನಾಟಕಗಳಿಗೂ ಅದರದ್ದೇ ಆದ destiny ಇರತ್ತೆ. ನಾವು ಬಲವಂತವಾಗಿ ಯಶಸ್ವಿಗೊಳಿಸೋಕೆ ಆಗಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಹೋಗಬೇಕು ಅಷ್ಟೆ. ಯಶಸ್ಸು ನಿಮಿತ್ತ ಅಷ್ಟೆ. ಯಶಸ್ಸು ಎಂಬುವುದು ಆಗುವುದು. ಮಾಡುವುದಲ್ಲ” ಎಂಬ ಸತ್ಯವನ್ನು ತಿಳಿಸುತ್ತಾ “ನಾವು ಅದರ ಬೆನ್ನು ಹತ್ತಬಾರದು” ಎಂದು ಹೇಳುತ್ತಿದ್ದರು. ಈ ಮಾತು ಕೇವಲ ನಾಟಕ ತಯಾರಿಗಲ್ಲದೆ ನಮಗೆ ಜೀವನಕ್ಕೂ ಅಳವಡಿಸಿಕೊಳ್ಳಬೇಕಾದ ಪಾಠ ಎಂಬುದರಲ್ಲಿ ಸಂಶಯವಿಲ್ಲ.
ಇದೇ ಸಂದರ್ಭದಲ್ಲಿ ಮತ್ತೊಂದು ಮಾತು ನೆನಪಾಗುತ್ತಿದೆ. ನಾವೆಲ್ಲಾ ರಂಗಾಯಣಕ್ಕೆ ಬಂದ ಹೊಸತು. ಹೀಗೆ ರಂಗಭೂಮಿಯ ಬಗೆಗೆ, ಅಲ್ಲಿನ ಅನಿಶ್ಚಿತ ಬದುಕಿನ ಬಗೆಗೆ, ಮುಂದೆ ಎದುರಿಸಬೇಕಾದ ಕಷ್ಟಗಳ ಬಗೆಗೆ ಕಾರಂತರು ಹೇಳುತ್ತಲೇ ಇರುತ್ತಿದ್ದರು. ಒಂದು ದಿನ ಅವರು “ನೀವೆಲ್ಲ ಇಲ್ಲಿ ಒಳ್ಳೆಯ ಕಲಾವಿದರಾಗೋಕೆ ಬಂದಿದೀರ, ಸಂತೋಷ. ಒಳ್ಳೆಯ ಕಲಾವಿದರೂ ಆಗ್ತೀರಿ. ಅದರಲ್ಲಿ ನನಗೆ ಅನುಮಾನ ಇಲ್ಲ. ಆದರೆ ಮುಖ್ಯವಾಗಿ ಒಳ್ಳೆಯ ಮನಷ್ಯರಾಗಬೇಕು ಅನ್ನೋದನ್ನು ಮರೀಬೇಡಿ. ನೀವು ಒಳ್ಳೆಯ ನಟ-ನಟಿಯರಾಗದಿದ್ದರೂ ನನಗೆ ಬೇಸರ ಆಗಲ್ಲ. ಆದರೆ ನೀವು ಒಳ್ಳೆಯ ಮನುಷ್ಯರಾಗದಿದ್ದರೆ ನನಗೆ ತುಂಬಾ ನೋವಾಗತ್ತೆ.” ಎಂದು ಎಚ್ಚರಿಸಿದ್ದರು.
ಮೇಷ್ಟ್ರು ಕೆಲವು ಬಾರಿ ಸಿಕ್ಕಾಪಟ್ಟೆ ಬಯ್ಯುತ್ತಿದ್ದರು. ನಮಗೆ ಅವರು ಯಾಕೆ ಬಯ್ಯುತ್ತಿರಬಹುದು ಎಂದು ಕೂಡ ಅರ್ಥವಾಗುತ್ತಿರಲಿಲ್ಲ. ಇನ್ನು ಕೆಲವು ಬಾರಿ ಅಷ್ಟೇ ಹೊಗಳುತ್ತಿದ್ದರು. ಒಂದಲ್ಲ ಒಂದು ಬಾರಿ ಎಲ್ಲರಿಗೂ ಈ ರೀತಿ ಅನುಭವವಾಗಿತ್ತು. ಕೆಲವು ಸಲ ನಾವು ಸಿಟ್ಟು ಮಾಡಿಕೊಂಡು ಮಾತು ಬಿಟ್ಟಿದ್ದು ಉಂಟು. ಕೆಲವರು ಸಂಸ್ಥೆಯನ್ನು ಬಿಡುವ ಯೋಚನೆಯನ್ನೂ ಮಾಡಿದ್ದರು. ನಮ್ಮ ಈ ಅಸಮಧಾನದ ವಾಸನೆ ಅವರಿಗೆ ತಟ್ಟಿರಬೇಕು. ಹಾಗಾಗಿ ಒಂದು ದಿನ ಈ ವಿಷಯದ ಬಗ್ಗೆ ಪ್ರಸ್ತಾಪ ಬಂದಾಗ ಅವರು ಹೀಗೆ ಹೇಳಿದ್ದರು. “ಶಿಷ್ಯವರ್ಗದಲ್ಲಿ ಎಲ್ಲಾ ತರಹದ ಶಿಷ್ಯರಿರುತ್ತಾರೆ. ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಕೆಲವರು ಅರ್ಜುನನ ರೀತಿ ಇರುತ್ತಾರೆ. ಆಗ ಅವರು ಎಷ್ಟೇ ಒಳ್ಳೇ ಕೆಲಸ ಮಾಡಿದರೂ ತಿವಿಯುತ್ತಲೇ ಇರಬೇಕಾಗತ್ತೆ. ಯಾಕೆಂದರೆ ಹಾಗೆ ಮಾಡುವುದರಿಂದ ಅವರು ಸಿಟ್ಟಿಗೆದ್ದು ಮತ್ತಷ್ಟು ಒಳ್ಳೆಯ ಕೆಲಸ ಮಾಡ್ತಾರೆ. ಆದರೆ ಕರ್ಣನ ತರಹ ಇರುವವರು ಸ್ವಲ್ಪ ಉತ್ತಮ ಕೆಲಸ ಮಾಡಿದರೂ ಹೊಗಳಬೇಕಾಗತ್ತೆ. ಯಾಕೆಂದರೆ ಅವರಿಗೆ ಹಾಗೆ ಮಾಡದೇ ಹೋದರೆ ಮುದುಡಿಹೋಗಬಹುದು ಅನ್ನೋ ಆತಂಕ ನನಗೆ.” ಎಂದಿದ್ದರು.
ನಾಟಕ ಎನ್ನುವುದು ಕೇವಲ ರಂಗದ ಮೇಲಿನ ಕ್ರಿಯೆ ಅಷ್ಟೇ ಆಗಬಾರದು. ಅದೊಂದು ಸಂಭ್ರಮವಾಗಬೇಕು. ಇಡೀ ಆವರಣದ ಮೂಲಕ ಪ್ರೇಕ್ಷಕನನ್ನು ಸಿದ್ಧಗೊಳಿಸಬೇಕು. ಪ್ರವೇಶದ ದ್ವಾರ, ಪ್ರವೇಶದ ದಾರಿ, ಛಾಯಾಚಿತ್ರ ಮತ್ತು ಭಿತ್ತಿಚಿತ್ರಗಳ ಪ್ರದರ್ಶನ, ಹಿತಕರವಾದ ಸಂಗೀತ, ಇಡೀ ಆವರಣವನ್ನು ಆವರಿಸಿಕೊಳ್ಳುವಂತಹ ಸುಗಂಧದ (ಸಾಮ್ರಾಣಿ ಅಥವಾ ಊದುಬತ್ತಿಯ ವಾಸನೆ- ಅಂದರೆ ಪೂಜೆಯಂಥ ಆಚರಣೆಯ ಮೂಲಕವಲ್ಲ) ಮೂಲಕ ಇಡೀ ಆವರಣಕ್ಕೊಂದು ಆಹ್ಲಾದಕರವಾದ ಭಾವ ಮೂಡುವಂತಹ ಆವರಣ ಸೃಷ್ಟಿಯಾಗುವುದರ ಕಡೆಗೆ ಕಾರಂತರು ಹೆಚ್ಚು ಮಹತ್ವ ಕೊಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮೇಷ್ಟ್ರಿಗೂ, ಅರುಣ್ ಸಾಗರನಿಗೂ ಜೋರು ಮಾತುಕತೆಯಾಗಿ ಮೇಷ್ಟ್ರು ಅವನನ್ನು ಚೆನ್ನಾಗಿ ಬಯ್ದಿದ್ದರು. ತನ್ನ ಕೆಲಸದ ಬಗ್ಗೆ, ತನ್ನ ಕಲ್ಪನೆಗಳನ್ನು ಸಾಕ್ಷಾತ್ಕರಿಸುವುದರ ಬಗ್ಗೆ ಎಂದೂ ರಾಜಿಯಾಗದ ಅರುಣ್ ಸಾಗರನಿಗೆ ಮೇಷ್ಟ್ರ ಬಗ್ಗೆ ಅಸಾಧ್ಯ ಕೋಪ ಬಂದಿತ್ತು. ರಾತ್ರಿ 10 ಗಂಟೆಯಾಗಿ ನಾವೆಲ್ಲ ನಮ್ಮ ನಮ್ಮ ರೂಮಿಗೆ ಹೊರಡುವ ವೇಳೆ ಅವನನ್ನು ಬರುವಂತೆ ಕರೆದರೂ ಅವನು ಬರದೇ ಇಡೀ ರಾತ್ರಿ ಕೆಲಸ ಮಾಡಿ ರಂಗಾಯಣದ ಆವರಣವನ್ನು ಸಿಂಗರಿಸಿಬಿಟ್ಟಿದ್ದ. ಆದರೆ ಸಿಟ್ಟು ಇನ್ನೂ ಆರಿರಲಿಲ್ಲ. ನಾವು ಮಾರನೇ ದಿನ 6 ಗಂಟೆಗೆ ನಮ್ಮ ಬೆಳಗಿನ ತರಗತಿಗೆ ಒಬ್ಬೊಬ್ಬರಾಗಿ ಬರುತ್ತಿದ್ದರೆ, ಅರುಣ ರಾತ್ರಿಯಿಡೀ ಕೆಲಸ ಮುಗಿಸಿ ರೂಮಿನ ಕಡೆಗೆ ನಡೆದಿದ್ದ. ಮೇಷ್ಟ್ರು ಕೂಡ ನಮ್ಮೊಡನೆ ಬಂದರು. ಬಂದವರೇ ಅರುಣನನ್ನು ಕಂಡು ನಗುತ್ತಾ ಅವನನ್ನು ಸಂತೈಸಿ ಅವನ ಕೆಲಸಕ್ಕೆ ಮೆಚ್ಚುಗೆ ಸೂಸಿ, “ನೀನು ಈ ಕೆಲಸ ಮಾಡ್ತೀಯ ಅಂತ ನನಗೆ ಗೊತ್ತಿತ್ತು. ಅದಕ್ಕೆ ಹಾಗೇ ಬಯ್ದಿದ್ದು” ಎಂದಾಗ ಅರುಣ ನಿರುತ್ತರ. ಅವರ ಮೇಲಿನ ಸಿಟ್ಟು ಮಂಗಮಾಯ!. ಅರುಣನಿಗೆ ನಿದ್ದೆ ಮಾಡಲು ಹೋಗುವಂತೆ ಹೇಳಿ ನಮ್ಮೊಡನೆ ರಂಗಾಯಣದಂಗಳದೊಳಗೆ ನಡೆದುಬಂದರು. ಮೇಷ್ಟ್ರು ನಮ್ಮನ್ನು ಭಾವನಾತ್ಮಕವಾಗಿ ನಿಭಾಯಿಸುತ್ತಿದ್ದ ರೀತಿಯೇ ಹೀಗೆ .
ಮೇಷ್ಟ್ರು ಎಂದೂ, ಯಾವತ್ತೂ, ಯಾವ ಗಳಿಗೆಯಲ್ಲೂ ಅಪ್ಪಿ ತಪ್ಪಿ ಕೂಡ ಅವಾಚ್ಯ ಎಂದು ಕರೆಸಿಕೊಳ್ಳುವಂತಹ ಯಾವ ಬಯ್ಗಳವನ್ನೂ ಬಳಸಿದವರಲ್ಲ. ಆದರೆ ಅವುಗಳ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದರು. ಅವರು ಬಯ್ಗಳಗಳಿಗೆ ಸಂಬಂಧಿಸಿದಂತೆ ಈ ರೀತಿ ವಿಶ್ಲೇಷಣೆ ಮಾಡುತ್ತಿದ್ದರು. “ಬ್ರಾಹ್ಮಣ ಬಯ್ಗಳಗಳು – ಅಂದರೆ, ಮನೆ ಹಾಳಾಗಿ ಹೋಗ, ನೆಗೆದು ನೆಲ್ಲಿಕಾಯಿ ಆಗಿ ಹೋಗ, ಬೆಂಕಿ ಹಾಕ, ನಾಶ್ನ ಆಗಿಹೋಗ, ಮುಂತಾದವು destructive ಆದ ಬಯ್ಗಳಗಳು. ಆದರೆ ಶೂದ್ರ ಬಯ್ಗಳಗಳು – ಅಂದರೆ, ಅಮ್ಮ……..ಅಕ್ಕ…….. ಮುಂತಾದ ಸಂಬಂಧ ಬೆಳೆಸುವ productive ಬಯ್ಗಳಗಳು ಅಂತ. ಬಯ್ಗಳಗಳಲ್ಲಿಯೂ ಎಷ್ಟೊಂದು ವೈವಿಧ್ಯತೆ ಇದೆ ನೋಡಿ. ಅವುಗಳಿಗೂ ಅದರದೇ ಆದ pitch, tone, volume ಎಲ್ಲಾ ಇರುತ್ತೆ. ಗಮನಿಸಿ ನೋಡಿ. ನಮ್ಮಲ್ಲಿ ಕೆಲವರಿಗೆ ಚೆನ್ನಾಗಿ ಬಯ್ಯೋಕು ಬರಲ್ಲ( ಅವರೂ ಸೇರಿಕೊಂಡಂತೆ) ಎಂದು ಹೇಳುತ್ತಿದ್ದರು.
ಸಿ.ಬಸವಲಿಂಗಯ್ಯ ಅವರ ನಿರ್ದೇಶನದ ವೋಲೆ ಸೋಯಂಕನ ’ರೋಡ್ ’ ನಾಟಕ ಮಾಡುವ ಸಂದರ್ಭದಲ್ಲಿ ಬಯ್ಗಳಗಳಿಗೆ, ಪೋಲಿ ಮಾತುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಮತ್ತೊಮ್ಮೆ ಕುಸುಮಬಾಲೆ ನಾಟಕ ಮಾಡುವ ಸಂದರ್ಭದಲ್ಲಿ ದೇವನೂರ ಮಹದೇವ ಅವರನ್ನು ರಂಗಾಯಣಕ್ಕೆ ಆಹ್ವಾನಿಸಿದ್ದೆವು. ’ಕುಸುಮಬಾಲೆ’ ಯ ಬಗ್ಗೆ ಅಭಿಪ್ರಾಯ ವಿನಿಮಯ, ಚರ್ಚೆ, ಪ್ರಶ್ನೆ……. ಇವುಗಳು ಹೀಗೆ ನಡೆಯುತ್ತಿರುವಾಗ ಮೇಷ್ಟ್ರು ದೇವನೂರ ಅವರನ್ನು ಕುರಿತು, ’ನಿಮ್ಮ ಕಾದಂಬರಿಯಲ್ಲಿ ಬಯ್ಗಳಗಳನ್ನು ಚೆನ್ನಾಗಿ ಬಳಸಿದೀರಿ. ಅಷ್ಟೊಂದು ವಿಧವಿಧವಾದ ಬಯ್ಗಳಗಳು ನಿಮ್ಮೊಳಗೆ ಹೇಗೆ ಹುಟ್ಟಿದವು ಎಂದಾಗ, ದೇವನೂರು ತಮ್ಮ ಮಾಮೂಲು ಶೈಲಿಯಲ್ಲಿ ಪಟಕ್ಕನೆ ಉತ್ತರ ಕೊಡದೆ ಸಿಗರೇಟಿನ ಧಂ ಅನ್ನು ಒಂದೆರಡು ಬಾರಿ ಎಳೆದು, ಮತ್ತೆ,…ಅದು……ಅದು…….ಎನ್ನುತ್ತಾ, ’ನೋಡಿ ಸಾ..ಬ್ರಾಂಬರಿಗೆ ಓಂ ಅಂದ್ರೂ ಒಂದೆ, ದಲಿತರಿಗೆ ನಿಮ್ಮಮ್ಮನ್ ಅಂದ್ರೂ ಒಂದೆ” ಎಂದಾಗ ಎಲ್ಲರೂ ತಬ್ಬಿಬ್ಬು. ಆಗ ಮೇಷ್ಟ್ರು ಎಲ್ಲರ ಕಡೆಗೊಮ್ಮೆ ದೃಷ್ಟಿ ಹಾಯಿಸಿ ’ಅದು ಹೇಗೆ’ ಎಂದರು. ಆಗ ದೇವನೂರು ಅವರು ‘ನೋಡಿ ಸಾ.. ಬ್ರಾಂಬರ ಮನೇಲಿ, ಎದ್ದೇಳೋ…. ಮಗೂ.. ಸಂಧ್ಯಾವಂದನೆ ಮಾಡೋ….ಪೂಜೆ ಮಾಡೋ ಅಂತಾರೆ…. ಅದೇ ದಲಿತರ, ಶೂದ್ರರ ಮನೇಲಿ ಮೂಲೆಗೆ ಮಲಗಿರೋ ಮಕ್ಕಳನ್ನ, ಜಾಡಿಸಿ ಒದೆಯೋ ಆ ಸೂ…ಮಗನ್ನ, ತಿಕಕೆ ಬಿಸಿಲು ಬಡಿದ್ರೂ ಇನ್ನೂ ಮಲಗೇ ಅವ್ನೆ…… ಅಂತ ಶುರು ಮಾಡ್ತೀವಿ. ಅಂದರು.
ಒಂದು ಕ್ಷಣ ಸುಮ್ಮನಾದ ಮೇಷ್ಟ್ರು ನಂತರ “ನಟರಿಗೆ ರಂಗಭೂಮಿಯಲ್ಲಿ ಬಯ್ಗಳಗಳೂ ಮುಖ್ಯ. ಅವುಗಳ ಬಗ್ಗೆ ಒಂದು ಕಮ್ಮಟ ಮಾಡಬೇಕು’ ಎಂದರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ, ನಾಟಕಗಳಲ್ಲಿ ಬೆಳಗಾಗುವುದು ಎಂದರೆ ಸಾಕು, ಎಂ.ಎಸ್.ಸುಬ್ಬಲಕ್ಷ್ಮಿಯ ಸುಪ್ರಭಾತವೋ, ಇಲ್ಲಾ, ರೇಡಿಯೋದಲ್ಲಿ ಬರುವ ಯಾವುದಾದರೂ ಬೆಳಗಿಗೆ ಸಂಬಂಧಪಟ್ಟ ಜಾನಪದ ಗೀತೆಯನ್ನೋ ಕೇಳಿಸುತ್ತಾ, ರಂಗೋಲಿ ಹಾಕುತ್ತಲೋ, ಪೇಪರ್ ಎಸೆಯುತ್ತಲೋ ಬೆಳಗಾಯಿತು ಎಂಬುದನ್ನು ತೋರಿಸಿಬಿಡುತ್ತೇವೆ. ಆದರೆ ಎರಡು ಭಿನ್ನ ಸಂಸ್ಕೃತಿಗಳ ಸಾಕಾರದಂತೆ ಅಂದು ನಮ್ಮ ಮುಂದೆ ಎರಡು ರೀತಿಯ ಸಂಸ್ಕೃತಿಗಳನ್ನು ತಿಳಿಸಿ ಹೇಳುವಂತಹ ಎರಡು ಮಾನವೀಯ ವ್ಯಕ್ತಿತ್ವಗಳು ನಿಂತಿದ್ದರು.. ನಿಜವಾದ ಅರ್ಥದಲ್ಲಿ ವಾಸ್ತವ ಬದುಕಿನ ಬಗೆಗೆ ತಿಳಿಸಿ ಹೇಳುತ್ತಿದ್ದರು.
ಹುಟ್ಟು ಮತ್ತು ಸಾವಿನ ಬಗ್ಗೆ ಮೇಷ್ಟ್ರು ಹೀಗೆ ಹೇಳುತ್ತಿದ್ದರು. “ಹುಟ್ಟು routine, ಆದರೆ ಸಾವು creative”. ರಂಗಭೂಮಿಯಲ್ಲಿ ಸಾಯುವಾಗ ಸುಮ್ಮನೆ ದೊಪ್ ಎಂದು ಬಿದ್ದು ಬಿಟ್ಟರೆ ಆಗೋದಿಲ್ಲ. “ಸಾವು ತುಂಬಾ creative, ಎಷ್ಟು ರೀತಿ ಸಾಯಬಹುದು! ಸಾಯೋನು ಕಾಲನ್ನು ಮೇಲೆತ್ತಿಕೊಂಡು ಕೂಡ ಸಾಯಬಹುದು. ಎಲ್ಲರೂ ಒಂದೇ ರೀತಿ ಸಾಯೋದಿಲ್ಲ ನೋಡಿ” ಎಂದು ಹೇಳುತ್ತಿದ್ದರು. ಅವರ ನಿರ್ದೇಶನದ “ಚಂದ್ರಹಾಸ” ನಾಟಕದಲ್ಲಿ ಪುಳಿಂದಕನ ಜೊತೆ ಹೋರಾಡಿದ ಹುಲಿ ಕೊನೆಗೆ ಸಾವನ್ನಪ್ಪಿ ಕೆಳಗೆ ಬೀಳುತ್ತದೆ. ಹುಲಿ ಸತ್ತಿತು ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಸತ್ತ ಹುಲಿ ಎದ್ದು ಪುಳಿಂದಕನ ಬೆನ್ನ ತಟ್ಟಿ ಚೆನ್ನಾಗಿ ಕೊಂದೆ ಎಂಬರ್ಥದಲ್ಲಿ ಶಹಬಾಸಗಿರಿ ಕೊಟ್ಟು ಮತ್ತೆ ಸತ್ತು ಬೀಳುತ್ತದೆ. ಆಗ ಪ್ರೇಕ್ಷಕನ ತುಟಿಯಂಚಿನಲ್ಲಿ ನಗು ಹಾದುಹೋಗುತ್ತದೆ. ಪುಳಿಂದಕನಾಗಿ ಮಹದೇವ ಮತ್ತು ಹುಲಿಯಾಗ ಕೃಷ್ಣಕುಮಾರ್ ನಾರ್ಣಕಜೆ ನಟಿಸುತ್ತಿದ್ದರು. ಸತ್ತು ಬಿದ್ದಂತೆ ನಟಿಸಿದ ಕೃಷ್ಣನಿಗೆ ಮೇಷ್ಟ್ರು ’ಸತ್ತ ಮೇಲೆ ಏನು ಮಾಡಬಹುದು ಅಂತ ಯೋಚನೆ ಮಾಡು. ನಿಮ್ಮ ದಕ್ಷಿಣ ಕನ್ನಡದ ಯಕ್ಷಗಾನದಲ್ಲಿ ಏನು ಮಾಡುತ್ತಾರೆ” ಎಂದು ಅವನನ್ನು ಮೇಲೆ ಹೇಳಿದಂತೆ ಮಾಡಲು ಪ್ರೇರೇಪಿಸಿದ್ದರು. ಕಾರಂತರು ತಮ್ಮ ಕಡೆಯ ದಿನಗಳಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಇನ್ನೇನು ವೆಂಟಿಲೇಟರ್ಸ್ ತೆಗೆದ ತಕ್ಷಣ ಹೊರಟೇ ಬಿಡುವರು ಎಂಬ ಆತಂಕದಲ್ಲಿ ಹಾಸ್ಪಿಟಲ್ ನ ಮುಂದೆ ನೆರೆದಿದ್ದ ಅಸಂಖ್ಯ ಅಭಿಮಾನಿ ಪ್ರೇಕ್ಷಕರಿಗೆ ವೆಂಟಿಲೇಟರ್ಸ್ ತೆಗೆದ ತಕ್ಷಣ ತಮ್ಮ ಆರೋಗ್ಯಸ್ಥಿತಿಯನ್ನು ಮತ್ತೆ ಮಾಮೂಲು ಸ್ಥಿತಿಗೆ ತರಿಸಿಕೊಂಡು ಎಲ್ಲರ ನಿರೀಕ್ಶೆಯನ್ನು ಸುಳ್ಳು ಮಾಡಿದ್ದರು. ಇನ್ನೇನು ಕಾರಂತರು ಸರಿ ಹೋಗಿಬಿಡ್ತಾರೆ ಎಂಬ ಆಸೆಯಿಂದ ಸ್ವಲ್ಪ ಮಟ್ಟಿಗೆ ನಿರಾಳರಾಗುತ್ತಿದ್ದಂತೆಯೇ ತಮ್ಮ ಪ್ರಯಾಣವನ್ನು ಮುಗಿಸಿ ಮತ್ತೊಮ್ಮೆ ಆಘಾತವನ್ನುಂಟುಮಾಡಿದ್ದರು. ನಾವು ರಂಗಾಯಣಕ್ಕೆ ಸೇರಿಕೊಂಡ ಹೊಸದರಲ್ಲಿ ಅವರು ಸದಾ ಹೇಳುತ್ತಿದ್ದ ಪಾಠ ನೆನಪಾಗುತ್ತದೆ. -“Actor should break the expectation of the audience.
ರಂಗಾಯಣದ “ಭೂಮಿಗೀತ” ರಂಗಮಂದಿರ ಕೂಡ ಈ ಕಾರಣಕ್ಕಾಗಿಯೇ ನಿರ್ಮಿಸಲ್ಪಟ್ಟಿತ್ತು. ನಾಟಕ ಎಲ್ಲಿ ನಡೆಯುತ್ತದೆ ಎಂಬುದು ಪ್ರೇಕ್ಷಕರಿಗೆ ಗೊತ್ತಾಗಬಾರದು. ಬೆಳಕು ಬಂದೆಡೆ ನಾಟಕ ನೋಡುವಂತಾಗಬೇಕು ಎನ್ನುತ್ತಿದ್ದರು. ರಂಗದ ನಾಲ್ಕೂ ಬದಿಯಲ್ಲಿ ನಾಟಕ ಮಾಡುವ ಅವಕಾಶ ಇತ್ತು. ನಾಟಕದಿಂದ ನಾಟಕಕ್ಕೆ ಜನ ಕುಳಿತುಕೊಳ್ಳುವ ಸ್ಥಳ ಕೂಡ ಬದಲಾಗುತ್ತಿತ್ತು. “ಮಗ್ಗದವರು” ನಾಟಕಕ್ಕೆ ಜನ ಮದ್ಯದಲ್ಲಿ ನೆಲದ ಮೇಲೆ ಕುಳಿತು ಸುತ್ತಲೂ ನೋಡುತ್ತಿದ್ದರು. “ಭೂಮಿಗೀತ” ನಾಟಕಕ್ಕೆ ಜನ ಮೂರು ದಿಕ್ಕುಗಳಲ್ಲಿ ಕುಳಿತು ನಾಟಕ ನೋಡುತ್ತಿದ್ದರು. “Midsummer nights dream” ನಾಟಕಕ್ಕೆ ಪ್ರೇಕ್ಷಾಂಗಣವೇ ರಂಗಭೂಮಿಯಾಗಿ, ರಂಗಭೂಮಿ ಪ್ರೇಕ್ಷಾಂಗಣವಾಗಿತ್ತು. ಈ ರೀತಿ ನಾಟಕದಿಂದ ನಾಟಕಕ್ಕೆ ಬದಲು ಮಾಡಿಕೊಳ್ಳಬಹುದಾದಂತಹ ಚಲನಾಶಕ್ತಿ “ಭೂಮಿಗೀತ” ರಂಗಮಂದಿರಕ್ಕೆ ಇತ್ತು. ಕಾರಂತರು ಎಂದೂ ತಮ್ಮ ಕಲ್ಪನೆಗೆ ಚೌಕಟ್ಟು ಹಾಕಿಕೊಳ್ಳುತ್ತಿರಲಿಲ್ಲ. ಅವರಿಗೆ ಕಣ್ಣು ಹಾಯಿಸಿದ ಕಡೆಗೆ ನಾಟಕ ಕಾಣಿಸಬೇಕಿತ್ತು. ಅವರ ಕಲ್ಪನೆ ಚೌಕಟ್ಟಿನೊಳಗೆ ಸಿಲುಕುತ್ತಿರಲಿಲ್ಲ.
ಸಾಮಾನ್ಯವಾಗಿ ಮೇಷ್ಟ್ರು ಎಂದೂ ಮದುವೆ, ಮುಂಜಿ, ತಿಥಿ, ಹಬ್ಬ ಎಂದು ಎಲ್ಲಿಗೂ ಹೋದವರಲ್ಲ. ರಂಗಭೂಮಿ ಅವರಿಗೆ ಸರ್ವಸ್ವ ಆಗಿತ್ತು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಅವರು ಯೋಚನೆ ಮಾಡುತ್ತಿದ್ದುದು ರಂಗಭೂಮಿ ಬಗ್ಗೆಯೇ. ಒಂದು ಸಲ ಸಿಂಧುವಳ್ಳಿ ಅನಂತಮೂರ್ತಿಯವರ ಮನೆಯಲ್ಲಿ, ಅವರು ಸಾಕಿದ್ದ ಪ್ರೀತಿಯ ನಾಯಿ ’ರಂಗಣ್ಣ’ ತೀರಿಕೊಂಡ. ’ರಂಗಣ್ಣ’ನನ್ನು ಬಹಳವಾಗಿ ಹಚ್ಚಿಕೊಂಡಿದ್ದ ಅನಂತಮೂರ್ತಿಯವರು ಅವನು ಸತ್ತಿದ್ದಕ್ಕೆ ತಿಥಿ ಮಾಡಲು ನಿರ್ಧರಿಸಿದ್ದರು. ಮತ್ತು ಅದಕ್ಕೆ ರಂಗಭೂಮಿಯ ಗೆಳೆಯರನ್ನು ಕರೆದಿದ್ದರು. ಎಂದೂ ಅಂತಹ ಸಮಾರಂಭಗಳಿಗೆ ಹೋಗದ ಮೇಷ್ಟ್ರು ’ಇದು ನಾಯಿ ತಿಥಿ ಅಲ್ಲವಾ, ಹಾಗಾಗಿ ನಾನು ಹೋಗ್ತೀನಿ’ ಎಂದು ಹೊರಟಿದ್ದರು. ಅವರಿಗೆ ನಾಯಿಗಳೆಂದರೆ ವಿಪರೀತ ಪ್ರೀತಿ. ಯಾವುದೇ ನಾಯಿ ಸಿಕ್ಕರೂ ಅವುಗಳೊಡನೆ ಮಾತಾಡಲು ಶುರು ಮಾಡುತ್ತಿದ್ದರು. ಅವರೇ ಸಾಕಿದ್ದ ’ನಿಂಜ’ನಿಗೆ ಸಂಗೀತ ಪಾಠ ಕೂಡ ಮಾಡುತ್ತಿದ್ದರು.
ನಾವು ರಂಗಾಯಣದವರು ’ಹಿಪ್ಪೋಲಿಟಸ್’ ನಾಟಕ ತೆಗೆದುಕೊಂಡು ಅಮೇರಿಕಾದ La.ma.ma experimental theatre group ನಲ್ಲಿ ಪ್ರದರ್ಶಿಸಲು ನ್ಯೂಯಾರ್ಕ್ ಗೆ ಹೋಗಿದ್ದೇವು. ಲಾ.ಮಾ.ಮ ಸಂಸ್ಥೆಯ ಮುಖ್ಯಸ್ಥೆ ಅಲೆನ್ ಸ್ಟ್ಯೂವರ್ಟ್ ನಮ್ಮೆಲ್ಲರನ್ನು ವಿಚಾರಿಸುತ್ತ “where is Karanth?’ ಎಂದು ಮೇಷ್ಟ್ರಿಗಾಗಿ ಹುಡುಕಾಡುತ್ತಿದ್ದರು. ಮೇಷ್ಟು ಅಲ್ಲಿಯೇ ನಿಂತಿದ್ದರು. ಬಹುಶಃ ಆಕೆ ಕಾರಂತರನ್ನು ಸೂಟು ಬೂಟಿನಲ್ಲಿ ನಿರೀಕ್ಷಿಸಿದ್ದರೇನೋ. ನಾವು ಇವರೇ ಕಾರಂತರು ಎಂದು ಆಕೆಗೆ ಹೇಳಿದಾಗ, ಆಕೆ ಆಶ್ಚರ್ಯದಿಂದ ಮೇಷ್ಟ್ರತ್ತ ನೋಡಿ ಉದ್ಗಾರಗಳೊಂದಿಗೆ ಅವರೆಡೆಗೆ ಹೋಗಿ ಲೊಚಕ್ಕನೆ ಮುತ್ತಿಟ್ಟಿದ್ದರು. ಮೇಷ್ಟ್ರಿಗೆ ತಮ್ಮ ಶಿಷ್ಯವರ್ಗದ ಮುಂದೆ ಈ ರೀತಿ ನಡೆದಿದ್ದು ಮುಜುಗರ, ನಾಚಿಕೆಯನ್ನು ತರಿಸಿತ್ತು. ಕೆಂಪಗಾಗಿಬಿಟ್ಟರು. ನಾವು ಮೊಟ್ಟಮೊದಲ ಬಾರಿಗೆ ಮೇಷ್ಟ್ರು ಆ ರೀತಿ ನಾಚಿಕೊಂಡದ್ದನ್ನು ನೋಡಿದೆವು. ನಾವೆಲ್ಲ ಬರುತ್ತಿದ್ದ ನಗುವನ್ನು ಹತ್ತಿಕ್ಕಿಕೊಂಡು ಆಲೆನ್ ಸ್ಟೂವರ್ಟ್ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆವೆ. ಆಕೆ ತನ್ನ್ ಮಾತುಗಳನ್ನು ಮುಗಿಸಿ ಹೊರಟ ತಕ್ಷಣ ಮೇಷ್ಟ್ರು ನಮ್ಮೆಡೆಗೆ ತಿರುಗಿ ’ಮತ್ತೆ ಇದನ್ನು ಪ್ರೇಮಂಗೆ ಹೇಳಬೇಡಿ” ಎಂದು ನಗುತ್ತಾ ಹೊರಟುಬಿಟ್ಟರು.
ಮೇಷ್ಟ್ರು ತಮ್ಮ ರಂಗಭೂಮಿ ಜೀವನದಲ್ಲಿ ಯಶಸ್ಸಿನ ತುದಿಗೇರಿದ್ದಾರೆ. ಕೆಟ್ಟ ಸೋಲುಗಳನ್ನು ಅನುಭವಿಸಿದ್ದಾರೆ. ಅವಮಾನಗಳನ್ನು ನುಂಗಿದ್ದಾರೆ. ಕಳಕೊಂಡಿದ್ದಾರೆ. ಪಡೆದುಕೊಂಡಿದ್ದಾರೆ. ಇಷ್ಟೆಲ್ಲದರ ಮದ್ಯೆಯೂ ಅವರು ರಂಗಭೂಮಿಯಲ್ಲಿ ಮತ್ತೇನು ಹೊಸದು ಮಾಡಬಹುದು ಎಂದೇ ಯೋಚನೆ ಮಾಡುತ್ತಿದ್ದರು. ರಂಗಭೂಮಿಯಲ್ಲಿ ಇರುವವರನ್ನು ಹೇಗೆ ಅಲ್ಲಿಯೇ ಉಳಿಯುವ ಹಾಗೆ ಮಾಡುವುದು ಎಂಬ ವಿಷಯದ ಬಗ್ಗೆ ಯಾವಾಗಲೂ ತಲೆ ಕೆಡಿಸಿಕೊಳ್ಳುತ್ತಿದ್ದರು. ಅಲ್ಲದೆ ರಂಗಭೂಮಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇರುವುದರಿಂದ ನಾವು ರಂಗಾಯಣಕ್ಕೆ ಆಯ್ಕೆಯಾಗಿ ಬಂದ ಹುಡುಗಿಯರ ಬಗ್ಗೆ ತುಂಬಾ ಕಾಳಜಿ ಮಾಡುತ್ತಿದ್ದರು. ನಮ್ಮೆಲ್ಲರ ಕೈಯಲ್ಲೂ ರಂಗಭೂಮಿಯಲ್ಲೇ ಉಳಿಯುತ್ತೇವೆ ಎಂದು ಭಾಷೆ ತೆಗೆದುಕೊಂಡಿದ್ದರು. ರಂಗಾಯಣದ ಸಂದರ್ಶನಕ್ಕೆ ಒಟ್ಟು ಎಂಟು ಹುಡುಗಿಯರು ಬಂದಾಗ ಭೂಪಾಲ್ ಪ್ರಕರಣದಿಂದ ತೀರಾ ಹಣ್ಣಾಗಿದ್ದ ಕಾರಂತರು “ಅಲ್ಲಾ, ಭೂಪಾಲ್ ಕೇಸ್ ನಂತರವೂ, ನಾನು ರಂಗಾಯಣ ಶುರು ಮಾಡ್ತೀನಿ ಅಂದಾಗ ಎಂಟು ಜನ ಹುಡುಗಿಯರು ಬಂದಿರೋದು ನೋಡಿದರೆ ಆಶ್ಚರ್ಯ ಆಗತ್ತೆ. ಜೊತೆಗೆ ಸಂತೋಷವೂ ಆಗತ್ತೆ’, ಎಂದು ಶ್ರೀ.ಎಂ.ಪಿ.ಪ್ರಕಾಶ ಬಳಿ ಹೇಳಿದ್ದರಂತೆ. ಇನ್ನೂ ಒಂದು ತಮಾಷೆಯ ವಿಷಯ ಅಂದರೆ, ರಂಗಭೂಮಿಯಲ್ಲಿ ಹುಡುಗಿಯರು ಕಡಿಮೆ ಇರುವುದರಿಂದ ರಂಗಾಯಣದ ಎಲ್ಲ ಹುಡುಗಿಯರಿಗೂ ಹೆಣ್ಣು ಮಕ್ಕಳೇ ಹುಟ್ಟಲಿ ಎಂದು ಹಾರೈಸಿದ್ದರು. ಅವರ ಬಾಯಿಯ ಹರಕೆಯೋ ಏನೋ ರಂಗಾಯಣದ ಹುಡುಗಿಯರೆಲ್ಲರಿಗೂ ಹೆಣ್ಣು ಮಕ್ಕಳೇ ಹುಟ್ಟಿರುವುದು ಕೂಡ ವಿಶೇಷ.
ಹೀಗೆ ಅವರ ಬಗ್ಗೆ ಹೇಳುತ್ತಾ ಹೋದರೆ ಅದೆಷ್ಟು ನೆನಪುಗಳು! ಹೇಳೀದ್ದಕ್ಕಿಂತ ಹೇಳದೇ ಉಳಿದದ್ದೇ ಜಾಸ್ತಿ ಇದೆ. ಎಲ್ಲಿಂದ ಶುರು ಮಾಡಬೇಕೋ, ಎಲ್ಲಿಗೆ ಮುಗಿಸಬೇಕೋ ಎಂಬುದು ಗೊತ್ತಾಗಲಾರದಷ್ಟು ಅನುಭವಗಳನ್ನು, ನೆನಪುಗಳನ್ನು ಅವರು ನಮ್ಮೊಡನೆ ಬಿಟ್ಟು ಹೋಗಿದ್ದಾರೆ. ನಿರಂತರವಾಗಿ ರಂಗಭೂಮಿಯ ಕೆಲಸ ಮಾಡುತ್ತಲೇ ಇದ್ದ ಮೇಷ್ಟ್ರು ಎಂದೂ ವಿಶ್ರಾಂತಿ ತೆಗೆದುಕೊಂಡವರಲ್ಲ. fresh ಆಗಬೇಕು ಅಂದರೆ ಮತ್ತೆ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ವಿಶ್ರಾಂತಿ ಪಡೆಯುವುದಲ್ಲ ಎನ್ನುತ್ತಿದ್ದರು. ಕೊನೆಯ ಎರಡು ತಿಂಗಳು ಮಾತ್ರ ಅವರು ಕೆಲಸ ಮಾಡಲು ಶಕ್ತಿ ಕಳಕೊಂಡಿದ್ದರು. ಕೆಲಸ ಮಾಡೋಕೆ ಆಗದಿದ್ದ ಮೇಲೆ ಯಾಕಿರಬೇಕು ಎಂದು ಪರಿತಪಿಸುತ್ತಿದ್ದರು. ನಾವುಗಳು ಯಾರಾದರೂ ಹೋಗಿ ರಂಗಭೂಮಿಯ ಬಗ್ಗೆ ಮಾತಾಡಲು ಶುರು ಮಾಡಿದರೆ ದೇಹದ ಎಲ್ಲ ಶಕ್ತಿಯನ್ನು ಕಣ್ಣಿಗೇ ತಂದುಕೊಂಡಂತೆ ಕಣ್ಣಿನಲ್ಲಿ ಹೊಳಪು ತಂದುಕೊಂಡು ಸುಸ್ತಾಗುವವರೆಗೂ ಮಾತಾಡುತ್ತಿದ್ದರು.
ಅಪರಿಮಿತದ ಕತ್ತಲೆಯೊಳಗೆ
ವಿಪರೀತದ ಬೆಳಕು ಅದೆ
ಕತ್ತಲೆ ಅದೆ ಬೆಳಕು ಅದೆ
ಸೋಜಿಗವೋ ಸೋಜಿಗ
ಎಲ್ಲರಿಗೂ ಸೋಜಿಗವೆನಿಸಿಬಿಟ್ಟಿದ್ದ ಮೇಷ್ಟ್ರು ಈಗ ನಮ್ಮೊಡನಿಲ್ಲ. ಅವರ ನೆನಪುಗಳ ಗಂಟು ಹೊತ್ತು ನಾವು ಕ್ರಮಿಸಬೇಕಾದ ದಾರಿ ಇನ್ನೂ ದೂರ ಇದೆ. ನಾವೀಗ ನಮ್ಮ ಶಕ್ತಿ, ಯೋಗ್ಯತೆಗಳಿಗೆ ಅನುಸಾರವಾಗಿ ಕೆಲಸ ಮಾಡುತ್ತಾ ಸಾಂಸ್ಕೃತಿಕವಾಗಿ ಭ್ರಷ್ಟರಾಗದೇ ಉಳಿಯುವುದಷ್ಟೇ ನಾವು ಅವರಿಗರ್ಪಿಸಬಹುದಾದ ನಮನ.
Image may contain: 1 person, eyeglasses, beard and closeup
You, Raviraj Hp, Moorthy Deraje and 170 others
124 Comments
46 Shares

No comments:

Post a Comment