Powered By Blogger

Tuesday, December 1, 2020

ರಾಜು ಹೆಗಡೆ - ಹಂಸ ಏಕಾಂಗಿ {ಕಬೀರನ ಪದಗಳು - ಕೇಶವ ಮಳಗಿ }

ಹಂಸ ಏಕಾಂಗಿ' ಕಬೀರರ ಮೌಲ್ಯಯುತ ಹಾಡುಗಳ, ತತ್ವಪದಗಳ ಧಾಟಿಯಲ್ಲಿರುವ ಸುಂದರ ಪದ್ಯಗಳ ಸಂಗ್ರಹ. ಮೌಲ್ಯಯುತವಾದ ಮಾತುಗಳನ್ನು ಬಾಯ್ಮಾತಿನಲ್ಲಿಯೇ ಹೇಳಿಮುಗಿಸುವ ಪರಿ ನಮಗೆ ರೂಢಿಯಾಗಿಯೇ ಬಂದ ಬಳುವಳಿ. ಹಿಂದಿನಿಂದಲೂ ಜಾನಪದ ಸೊಗಡಲ್ಲದೇ, ತತ್ವಪದ ಹರಿಕಾರರು ತಾವು ನಿಂತ ಜಾಗೆಯಲ್ಲಿಯೇ ಸಮಾಜಕ್ಕೆ ಮಾದರಿಯಾಗುವ ಮೌಲ್ಯವನ್ನು ಹೊತ್ತ ತಿಳುವಳಿಕೆ ರೂಪದ, ಬದುಕಿನ ಬದಲಾವಣೆಗೆ ಕಾರಣವಾಗುವಂತಹ ಸುಂದರ ರೂಪಕಗಳನ್ನು ಹೊತ್ತ ಪದಗಳನ್ನು ಜುಳು ಜುಳು ನದಿಯಂತೆ ಹರಿಬಿಡುತ್ತಿದ್ದರು. ಅವುಗಳ ಅರ್ಥ ಮೇಲ್ನೋಟಕ್ಕೆ ಒಂದು ರೀತಿಯಿಂದ ಗೋಚರಿಸಿದರೆ, ಆಂತರ್ಯ ಇನ್ನೊಂದು ಅರ್ಥವನ್ನು ನೀಡುತ್ತಿರುತ್ತದೆ. ಅಂತಹ ಮೌಲ್ಯಯುತವಾದ ಪದ್ಯರೂಪದ ಬರಹಗಳನ್ನು ಓದುವುದೇ ಒಂಥರಾ ಪುಳಕ. ಮೊದಲ‌ ಓದಿಗೆ ಮೋಲ್ನೋಟಕ್ಕೆ ಭಿನ್ನವಾಗಿ ಕಂಡರೂ, ಓದುತ್ತ ಓದುತ್ತ ಅದರ ಭಾವದೊಂದಿಗೆ ಬೆರೆತು ಹೆಜ್ಜೆಹಾಕುತ್ತಾ ಸಾಗಿದಂತೆ ಅದರ ಆಧ್ಯಾತ್ಮದ ಸೆಳಕಿನ ಭಾವ ಓದುಗನಿಗೆ ಆಪ್ತವಾಗಿ ಹೃದಯಕ್ಕೆ ತಟ್ಟಲಾರಂಭಿಸುತ್ತದೆ. ಅಂತಹ ಆಪ್ತವಾದ ಭಾವಸ್ಪರ್ಶ ಕಬೀರನ ಪದಗಳ ಮೂಲಕ ನನಗೆ ತಟ್ಟಿತು. ದಾರ್ಶನಿಕರ ಚಿಂತನೆಗಳೇ ಅಂತಹುದು. ಅವುಗಳಿಗೆ ಒಂಥರಾ ಮಿಂಚಿನ ಸೆಳೆತವಿರುತ್ತದೆ, ತಪ್ಪನ್ನು ತಪ್ಪೆಂದು ನೇರವಾಗಿ ಹೇಳುವ ಭಾವವಿರುತ್ತದೆ, ಸಮಾಜದ ಓರೆಕೋರೆಗಳನ್ನು ಖಂಡಿಸುವ ಗುಣವಿರುತ್ತದೆ, ಸಾಮಾಜಿಕ ಸಾಮರಸ್ಯವನ್ನು ಒಂದುಗೂಡಿಸುವ ಗುಣವಿರುತ್ತದೆ, ಜಾತಿಮತಗಳ‌ ಭೇದ ಮರೆತು ಒಂದುಗೂಡಿರೋ ಎಂಬ ಒಗ್ಗಟ್ಟಿನ ಮಂತ್ರವಿರುತ್ತದೆ. ಒಟ್ಟಿನಲ್ಲಿ ಸಮಾಜವನ್ನು ಸುಂದರಗೊಳಿಸುವ ಎಲ್ಲ ಮೌಲ್ಯಯುತವಾದ ಅಂಶಗಳು ದಾರ್ಶನಿಕರ ನಡೆನುಡಿಗಳಲ್ಲಷ್ಟೇ ಅಲ್ಲ, ಅವರಾಡುವ ಮಾತುಗಳಲ್ಲೂ ಸತ್ಯ, ನಿಷ್ಟೆ, ಪ್ರಾಮಾಣಿಕತೆ ಸ್ಪುರಿಸುತ್ತವೆ. "ಹೆಡ್ಡರಹೆಡ್ಡ, ನೀ ಬಲುದಡ್ಡ ವಿಚಾರ ಏನೈತಿ ತಿಳಕೋವಲ್ಲಿ ತೊಗಲು, ಎಲುಬು, ಉಚ್ಚೆ, ಹೇಲು ಅಷ್ಟೇ ಐತಿ ಅದರಾಗಲ್ಲಿ ಒಂದೇ ರಗತ, ಒಂದೇ ಮಾಂಸ, ಹನಿ ಒಂದರಾಗ ಜಗಾ ಐತಲ್ಲಿ. ಯಾರಂವ ಬ್ರಾಮ್ಮಣ, ಮತ್ಯಾರಂವ ಸೂದ್ರ?" ಮನುಷ್ಯನ ಅಂತರಾಳದ ಅವಲೋಕನವನ್ನೇ ಮೇಲಿನ‌ ಸಾಲುಗಳಲ್ಲಿ ಕಾಣಬಹುದು. ನಾನು ನನ್ನದು ಅಂತ ಎಷ್ಟೆಲ್ಲ ಚೌಕಟ್ಟನ್ನು ಹಾಕಿಕೊಂಡು ಬಾಳುವ, ಮೇಲ್ಜಾತಿ ಕೆಳಜಾತಿ ಎಂಬ ಗೋಡೆ ಕಟ್ಟಿಕೊಂಡ ನಮಗೆ ಮೇಲಿನ ಸಾಲುಗಳು ಚಾಕುವಿನಿಂದ ತಿವಿದಂತಿವೆ. "ಎಲ್ಲರೂ ದಹಿಸತಿರುವುದನು ಕಂಡೆ ಪ್ರತಿಯೊಬ್ಬರಿಗೂ ಅವರದೇ ಬೆಂಕಿ ಮುಟ್ಟಬಹುದಾದವರನು ನಾನಿನ್ನೂ ಭೇಟಿಯಾಗಿಲ್ಲ." "ಲೋಕ ಹುಟ್ಟಿದ್ದು ಒಬ್ಬ ತಾಯಿಯಿಂದ ಯಾವ ವಿವೇಕ ಬೋಧಿಸುವುದು ಅಗಲಿಕೆಯನ್ನು?" ಹೀಗೆ ಒಂದೊಂದು ಸಾಲುಗಳೂ ಒಂದೊಂದು ಜೀವನದರ್ಶನದ ಸತ್ಯವನ್ನು, ವೈಚಾರಿಕತೆಯ ಬೆಳಕನ್ನು ಹರಡಿಸುತ್ತವೆ. ಕತೆ, ಕಾದಂಬರಿಗಳ ಏಕತಾನತೆಯ ಓದಿನ ನಡುವೆ ಇಂತಹ ಕೃತಿಗಳ ಓದು ಹೊಸ ಚೈತನ್ಯವನ್ನು ನೀಡುತ್ತವೆ. ಹೊಸಭಾವವನ್ನು ಸ್ಪುರಿಸುತ್ತವೆ. - ರಾಜು ಹಗ್ಗದ, ಇಣಚಗಲ್ * * * 'ಹಂಸ ಏಕಾಂಗಿ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು... https://imojo.in/239txiz

No comments:

Post a Comment