Powered By Blogger

Sunday, December 6, 2020

ಶಶಿಧರ ಹಾಲಾಡಿ - ತಾಳಿಕೋಟೆ ಯುದ್ದದ ನಂತರವೂ ಹೋರಾಡಿದ ವಿಜಯನಗರದ ಅರಸ/ Shashidhara Halady / Talikote War

ತಾಳಿಕೋಟೆ ಯುದ್ಧದ ನಂತರವೂ ಹೋರಾಡಿದ ವಿಜಯನಗರದ ಅರಸ * ಶಶಿಧರ ಹಾಲಾಡಿ ------ ಹಂಪೆಯನ್ನು ಹಾಳು ಹಂಪೆ ಎಂದು ಬ್ರಿಟಿಷರು ಕರೆದರು. ಅವರ ಹೆಚ್ಚಿನ ವಿಚಾರಗಳನ್ನು ಅನುಕರಣೆ ಮಾಡುವ ನಮ್ಮವರು, ಹಾಳು ಹಂಪೆ ಎಂಬ `ವಿಶೇಷಣ'ವನ್ನು ನಿರಂತರವಾಗಿ ಉಪಯೋಗಿಸುತ್ತಲೇ ಬಂದರು. ಹಾಳು ಹಂಪೆ, ಅಳಿದುಳಿದ ಹಂಪೆ, ರೂಯಿನ್ಸ್ ಆಫ್ ಹಂಪಿ ಇವೇ ಮೊದಲಾದ ಶಬ್ದಗಳಿಗೆ ನಮ್ಮವರು ಎಷ್ಟು ಒಗ್ಗಿ ಹೋಗಿz್ದÉೀವೆಂದರೆ, 15-16ನೆಯ ಶತಮಾನದಲ್ಲಿ ಇಡೀ ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ನಗರ ಎನಿಸಿದ್ದ ಹಂಪೆಯನ್ನು ಆ ರೀತಿ ಕರೆದಾಗ, ಹೆಚ್ಚಿನವರಿಗೆ ಬೇಸರ ಎನಿಸುವುದೇ ಇಲ್ಲ! ಹಂಪೆಯ ವಿವರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪುಸ್ತಕಗಳು ಸಹ `ಹಾಳು ಹಂಪೆ' ಎಂಬ ಶಬ್ದವನ್ನು ಉಪಯೋಗಿಸುತ್ತಿವೆ. ಇವುಗಳ ಪೈಕಿ `ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು' ಎಂಬ ಪುಸ್ತಕವನ್ನು ರಚಿಸಿದ ಲೇಖಕಿ, ಸಂಶೋಧಕಿ ವಸುಂಧರಾ ದೇಸಾಯಿಯವರು ಹಂಪಿಯ ಕುರಿತು ಅಭಿಮಾನವನ್ನು ತೋರಿ, ತುಸು ಭಿನ್ನವಾಗಿ ಕಾಣುತ್ತಾರೆ. ಹಾಳು ಹಂಪೆ ಎಂದು ಕರೆಯುವ ಬದಲು, ಉಳಿದಿರುವ ಹಂಪಿ ಎಂದು ಕರೆಯೋಣ ಎಂಬ ಅವರ ಅಭಿಮತ ನಿಜಕ್ಕೂ ಸಕಾರಾತ್ಮಕ. 1565ರ ಯುದ್ಧದಲ್ಲಿ ವಿಜಯನಗರ ಸೇನೆಯು ಸೋತು ಹೋದ ನಂತರ, ಹಂಪೆಯಲ್ಲಿ ಏನು ಉಳಿಯಿತು ಎಂಬುದನ್ನು ಗುರುತಿಸಿ, ಅಭಿಮಾನ ಪಟ್ಟು ಬೆಲೆಕೊಡೋಣ ಎಂಬ ವಿಚಾರವು ಒಳ್ಳೆಯದೇ. ನಮ್ಮ ನಾಡಿನ ಜನಸಾಮಾನ್ಯರಲ್ಲಿ ಒಂದು ತಿಳಿವಳಿಕೆ ಇದೆ. 1565ರ ತಾಳಿಕೋಟೆ ಯುದ್ಧದ ನಂತರ, ವಿಜಯ ನಗರ ಅರಸರು ಹಂಪೆಯನ್ನು ತೊರೆದರು ಮತ್ತು ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ಅಭಿಪ್ರಾಯ ಅದು. ಈ ತಿಳಿವಳಿಕೆಯ ಮೊದಲ ಭಾಗ ನಿಜ - ಹಂಪೆಯತ್ತ ಧಾವಿಸುತ್ತಿದ್ದ ಶತ್ರು ಸೈನ್ಯಕ್ಕೆ ಬೆದರಿ, ರಾಜಪರಿವಾರವು ಪೆನುಕೊಂಡೆಗೆ ಸಾಗಿ, ಅಲ್ಲಿಗೆ ರಾಜಧಾನಿಯನ್ನು ಬದಲಿಸಲಾಯಿತು. ಆದರೆ, ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ತಿಳಿವಳಿಕೆ ಪೂರ್ತಿ ನಿಜವಲ್ಲ. ತಾಳಿಕೋಟೆ ಯುದ್ಧದ ನಂತರ, ಹಂಪೆಯನ್ನು ಪುನರ್ ನಿರ್ಮಿಸಿ, ವಿಜಯನಗರ ಸಾಮ್ರಾಜ್ಯವನ್ನು ಮತ್ತೆ ಕಟ್ಟಲು ಪ್ರಯತ್ನಗಳೇ ನಡೆದಿಲ್ಲ ಎಂಬ ತಿಳಿವಳಿಕೆ ನಮ್ಮ ರಾಜ್ಯದ ಜನಸಾಮಾನ್ಯರಲ್ಲಿದೆ. ಇದಕ್ಕೆ ಒಂದು ಕಾರಣವೆಂದರೆ, ಆ ಸಾಮ್ರಾಜ್ಯದ ನಂತರದ ಹೋರಾಟದ ಜಾಗಗಳು, ರಾಜಧಾನಿ ಎನಿಸಿದ್ದ ಪೆನುಗೊಂಡೆ, ಚಂದ್ರಗಿರಿಗಳು ನೆರೆಯ ರಾಜ್ಯದಲ್ಲಿ ಸೇರಿಹೋಗಿದ್ದು. ಈ ಹಿನ್ನೆಲೆಯಲ್ಲೇ, ಹಂಪೆಯ ಸ್ಥಿತಿಯನ್ನು ವಿಶ್ಲೇಷಿಸುವ ಕೆಲವು ಟೀಕಾಕಾರರು, ಹಂಪೆಯಲ್ಲಿ ವೈಷ್ಣವ ದೇಗುಲಗಳು ಮಾತ್ರ ನಾಶಗೊಂಡಿವೆ, ಶೈವ ದೇವಾಲಯಗಳು ಮತ್ತು ವಿರೂಪಾಕ್ಷನ ಮಂದಿರವು ಏಕೆ ಸುಸ್ಥಿತಿಯಲ್ಲಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ವಿರೂಪಾಕ್ಷ ದೇಗುಲ ಮಾತ್ರ ಸುಸ್ಥಿತಿಯಲ್ಲಿರುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೆಲವರು ಬಹುವಾಗಿ ಚರ್ಚಿಸಿದ್ದುಂಟು. ಆ ನಂತರದ ದಶಕಗಳಲ್ಲಿ, ಹಂಪೆಯನ್ನು ಮತ್ತೆ ಕಟ್ಟುವ ಪ್ರಯತ್ನಗಳು ನಡೆದಿದ್ದವು ಮತ್ತು ಬಿಷ್ಟಪ್ಪಯ್ಯನ ಗೋಪುರ ಎಂಬ ಬೃಹತ್ ನಿರ್ಮಾಣವನ್ನು ಮಾಡಿಸಿದ ಬಿಷ್ಟಪ್ಪಯ್ಯನಂತಹ ಕೆಲವು ಹೋರಾಟಗಾರರು ಅಲ್ಲಿ ಪುನರ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದರು ಎಂಬ ವಿಚಾರವನ್ನು ಹೆಚ್ಚು ಪ್ರಚಾರಕ್ಕೆ ತರುವ ಅವಶ್ಯಕತೆ ಇದೆ. 1567ರ ಸಮಯದಲ್ಲಿ ಪೆನುಕೊಂಡೆಯಲ್ಲಿ ನೆಲಸಿದ್ದ ರಾಜ ತಿರುಮಲರಾಯನೂ ಹಂಪೆಯನ್ನು ಮತ್ತೊಮ್ಮೆ ಕಟ್ಟಲು ಪ್ರಯತ್ನ ನಡೆಸಿದ್ದುಂಟು. 1565ರ ಸೋಲಿನ ನಂತರ, ವಿಜಯ ನಗರ ಸಾಮ್ರಾಜ್ಯವು ತೀವ್ರ ಹೊಡೆತ ತಿಂದರೂ, ನಂತರದ ವರ್ಷಗಳಲ್ಲಿ ವಿಜಯನಗರ ಅರಸರು ಸಾಕಷ್ಟು ಹೋರಾಟ ನಡೆಸಿದ್ದರು. ತಾಳಿಕೋಟೆಯ ಯುದ್ಧದಲ್ಲಿ ರಾಜಧಾನಿಯನ್ನೇ ಕಳೆದುಕೊಳ್ಳುವಂತಹ ದೊಡ್ಡ ಸೋಲನ್ನು ಅನುಭವಿಸಿದ್ದು ನಿಜ. ಆದರೆ, ಆ ನಂತರದ ಅರಸರು ಶಕ್ತಿ ಕುದುರಿಸಿಕೊಂಡು, ತಮ್ಮ ವೈರಿಗಳ ವಿರುದ್ಧ ಸಾಕಷ್ಟು ಹೋರಾಟವನ್ನು ನಡೆಸಿದರು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯು ಪೆನುಗೊಂಡೆಗೆ ಬದಲಾದ ನಂತರ, ಗೋಲ್ಕೊಂಡಾ ಮತ್ತು ಬಹಮನಿ ಸುಲ್ತಾನರ ಸೇನೆಯ ವಿರುದ್ಧ ಹೋರಾಟ ನಡೆಸಿದವರಲ್ಲಿ ವೆಂಕಟಪತಿ ರಾಜು ಅಥವ ಎರಡನೆಯ ವೆಂಕಟ ಪ್ರಮುಖ ರಾಜ. 1565ರಲ್ಲಿ ಅಳಿಯ ರಾಮರಾಯನು ತಾಳಿಕೋಟೆ ಯುದ್ಧದಲ್ಲಿ ಹತನಾದ ನಂತರ, ತಿರುಮಲ ದೇವರಾಯ (1565-1572) ಮತ್ತು ಒಂದನೇ ಶ್ರೀರಂಗ (1572-1586) ರಾಜ್ಯದ ಚುಕ್ಕಾಣಿ ಹಿಡಿದರು. ಪೆನುಗೊಂಡೆಯ ಹೊಸ ರಾಜಧಾನಿಯನ್ನು ಕಟ್ಟುತ್ತಾ, ಉತ್ತರದಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದ ವೈರಿಪಡೆಯನ್ನು ಎದುರಿಸುವ ದೊಡ್ಡ ಸವಾಲು ಅವರ ಮುಂದಿತ್ತು. ಜತೆಯಲ್ಲೇ, ಕೆಲವು ಪಾಳೇಗಾರರು ಸ್ವತಂತ್ರರಾಗಲು ಬಯಸುತ್ತಿದ್ದರು. ಈ ನಡುವೆ, ವೈರಿಪಡೆಯ ದಾಳಿ ತಾಳಲಾರದೆ ಒಂದೊಂದಾಗಿ ಪ್ರಾಂತ್ಯಗಳು ಕೈತಪ್ಪುತ್ತಾ ಹೋದವು. ರಕ್ಷಣಾತ್ಮಕ ಆಡಳಿತ ನಡೆಸುತ್ತಾ, ಶಕ್ತಿಯನ್ನು ಕುದುರಿಸಿಕೊಳ್ಳುವಲ್ಲೇ ಅವರ ಗಮನ ಕೇಂದ್ರೀಕರಿಸಬೇಕಾಯಿತು. ಕೈಲಾದಷ್ಟು ಸಾಮ್ರಾಜ್ಯವನ್ನು ತಮ್ಮ ವಶದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವ ಅನಿವಾರ್ಯತೆ. ತಾಳಿಕೋಟೆ ಯುದ್ಧದಲ್ಲಿ ತಮ್ಮ ಪಡೆಯ ಬಹುದೊಡ್ಡ ಸಂಖ್ಯೆಯ ಸೈನಿಕರನ್ನುಕಳೆದುಕೊಂಡದ್ದರಿಂದ, ಹೊಸ ಸೈನ್ಯವನ್ನುಕಟ್ಟಿ, ಬೆಳೆಸುವ ಕಾರ್ಯವೂ ಆಗಬೇಕಿತ್ತು. ಕಳೆದುಕೊಂಡ ಸಾಮ್ರಾಜ್ಯದ ಭಾಗಗಳನ್ನುಮರಳಿ ಪಡೆಯುವಲ್ಲಿ ಸಕಾರಾತ್ಮಕ ಹೆಜ್ಜೆಯಿಟ್ಟ ರಾಜನೆಂದರೆ, ಎರಡನೆಯ ವೆಂಕಟ ಅಥವಾ ವೆಂಕಟಪತಿ ರಾಜು. ತಾಳಿಕೋಟೆ ಯುದ್ಧವಾಗಿ 20 ವರ್ಷಗಳ ನಂತರ ಅಧಿಕಾರಕ್ಕೆ ಬಂದ ವೆಂಕಟಪತಿರಾಜು, 1586ರಿಂದ 1614ರ ತನಕ ರಾಜನಾಗಿದ್ದ. ಮೂರು ದಶಕಗಳ ಆತನ ಆಳ್ವಿಕೆಯು, ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮರಳಿ ಪಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸಿತು. ತಾಳಿಕೋಟೆ ಯುದ್ಧದ ನಂತರ ಎರಡು ದಶಕಗಳ ತನಕ ಶಕ್ತಿ ಕುದುರಿಸಿಕೊಳ್ಳುವ ಪ್ರಯತ್ನ ಮಾಡಿದ ವಿಜಯನಗರ ಸಾಮ್ರಾಜ್ಯವು, ವೆಂಕಟಪತಿ ರಾಜನ ಕಾಲದಲ್ಲಿ, ಕಳೆದುಕೊಂಡಿದ್ದ ಭೂಭಾಗಗಳ್ನು ಮರಳಿ ಪಡೆಯಲು ಪ್ರಾಮಾಣೀಕ ಪ್ರಯತ್ನ ನಡೆಸಿತು. ವೆಂಕಟಪತಿ ರಾಜನ ಮೂರು ದಶಕಗಳ ಯಶಸ್ವಿ ಆಡಳಿತ ಮುಗಿಯುವ ಸಮಯದಲ್ಲಿ, ವಿಜಯನಗರದ ಗಡಿಯು ಉತ್ತರದತ್ತ ಚಲಿಸಿ, ಕೃಷ್ಣಾ ನದಿಯನ್ನು ತಲುಪಿತ್ತು ಎಂಬ ವಿಚಾರವು, ಆತನ ಹೋರಾಟದ ಯಶಸ್ಸನ್ನು ತೋರಿಸುತ್ತದೆ. ಆ ಒಂದು ಕಾಲಘಟ್ಟದ ಯಶಸ್ಸು, ಐತಿಹಾಸಿಕ ಕಾಲಮಾನದಲ್ಲಿ ಸೀಮಿತ ಎಂದೇ ಹೇಳಬಹುದಾದರೂ, ವಿಜಯನಗರದ ಅರಸು ಮನೆತನವು ಮರಳಿ ತನ್ನ ವೈಭವವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು ಎಂದು ತೋರಿಸಿಕೊಡುತ್ತದೆ. ವೆಂಕಟಪತಿ ರಾಜು ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ, 1588ರಲ್ಲಿ ನಡೆದ ಪೆನ್ನಾರ್ ಯುದ್ಧವು ಇಲ್ಲಿ ಗಮನಾರ್ಹ. ವಿಜಯನಗರ ಸೈನ್ಯವು ಗೋಲ್ಕೊಂಡಾ ಸೈನ್ಯವನ್ನು ಪೆನ್ನಾರ್ ನದಿಯ ದಡದಲ್ಲಿ ಸೋಲಿಸಿದ ನಂತರ, ಇನ್ನೂ ಉತ್ತರಕ್ಕೆ ಹೋಗಿ ಕೃಷ್ಣಾ ನದಿಯ ತನಕ ಸಾಮ್ರಾಜ್ಯವನ್ನು ವಿಸ್ತರಿಸಿತು. ಪೆನ್ನಾರ್ ಯುದ್ಧದಲ್ಲಿ ವೈರಿ ಪಡೆಯ ಸುಮಾರು 50,000 ಸೈನಿಕರು ಹತರಾದರು ಎಂದು ದಾಖಲಾಗಿದೆ. ಮದ್ದುಗುಂಡುಗಳನ್ನು ಬಳಸುತ್ತಿದ್ದ, ಫಿರಂಗಿಗಳನ್ನೂ ಬಳಸುತ್ತಿದ್ದ ಗೋಲ್ಕೊಂಡಾ ಮಿತ್ರಪಡೆಯನ್ನು ಸೋಲಿಸಿದ್ದು ಆಗಿನ ಕಾಲದ ಒಂದು ಅಭೂತಪೂರ್ವ ಸಾಧನೆ. ಗೋಲ್ಕೊಂಡದ ಕುತುಬ್ ಶಾ ಸೈನ್ಯವು 1588ರಲ್ಲಿ ಪೆನುಕೊಂಡೆಯ ಮೇಲೆ ಆಕ್ರಮಣ ನಡೆಸಿದಾಗ, ಅವನನ್ನು ನಿಯಂತ್ರಿಸಲು ವೆಂಕಟಪತಿ ರಾಜು ಅನುಸರಿಸಿದ್ದು ವಿಶಿಷ್ಟ ತಂತ್ರವನ್ನು. ಅದಕ್ಕೂ ಮೊದಲು ಅದೋನಿ, ಗಂಗಡಿಕೋಟ ಮೊದಲಾದ ಕೋಟೆಗಳನ್ನು ಸುಲಭವಾಗಿ ಸೋಲಿಸಿ, ಪೆನುಕೊಂಡೆಯನ್ನು ಆ ವೈರಿ ಸೇನೆ ಮುತ್ತಿಗೆ ಹಾಕಿತ್ತು. ಆ ಶಕ್ತಿಯುತ ಸೈನ್ಯವನ್ನು ಒಮ್ಮೆಗೇ ಎದುರಿಸುವುದಕ್ಕಿಂತ, ಕುಟಿಲತೆಗೆ ಕುಟಿಲತೆಯೇ ಮದ್ದು ಎಂಬ ತಂತ್ರವನ್ನು ಅನುಸರಿಸಲು ವೆಂಕಟಪತಿರಾಜು ನಿರ್ಧರಿಸಿದ. ತಾನು ಈಗ ಯುದ್ಧ ಮಾಡುವುದಿಲ್ಲ, ಬದಲಾಗಿ ಸಂಧಾನಕ್ಕೆ ಬರುತ್ತೇನೆ ಎಂಬ ಸಂದೇಶವನ್ನು ಕಳಿಸಲಾಯಿತು. ಗೋವಿಂದರಾಜು ತಿಮ್ಮ ಮತ್ತು ಪಾಪಯ್ಯ ಚೆಟ್ಟಿ ಎಂಬ ಇಬ್ಬರು ದಳಪತಿಗಳು ಗೋಲ್ಕೊಂಡ ಸುಲ್ತಾನರ ಬಳಿಗೆ ಸಂಧಾನಕ್ಕೆ ಹೋದರು. ಇವರ ಮಾತುಗಳನ್ನು ನಂಬಿದ ಗೋಲ್ಕೊಂಡದ ಸುಲ್ತಾನ ತುಸು ನಿರಾಳವಾದ. ಆ ಸಮಯದಲ್ಲಿ ಜಗದೇವ ಮೊದಲಾದ ದಳಪತಿಗಳು ಸುಮಾರು 30,000 ಸೈನಿಕರನ್ನು ರಹಸ್ಯವಾಗಿ ಪೆನುಕೊಂಡೆಯ ಕೋಟೆಯೊಳಗೆ ಸೇರಿಸಿದರು. ತಂಜಾವೂರಿನ ಅಚ್ಯುತಪ್ಪ ನಾಯಕನಿಗೆ ಸಂದೇಶ ಕಳಿಸಿ, ಸೈನ್ಯ ಕಳುಹಿಸುವಂತೆ ಕೇಳಿಕೊಳ್ಳಲಾಯಿತು. ತಂಜಾವೂರಿನ ರಘುನಾಥ ನಾಯಕನ ನೇತೃತ್ವದಲ್ಲಿ ಬಂದ ಸೇನಾ ತುಕಡಿಯು, ಗೋಲ್ಕೊಂಡಾ ಸೈನ್ಯದ ಮೇಲೆ ಆಕ್ರಮಣ ಮಾಡಿತು. ಇತ್ತ ಪೆನುಗೊಂಡೆಯ ಸೈನಿಕರು, ವೈರಿಪಡೆಯ ಮೇಲೆ ಆಕ್ರಮಣ ಮಾಡಿದರು. ಒಮ್ಮೆಗೇ ತಮ್ಮ ಮೇಲೆ ಆಕ್ರಮಣ ನಡೆದದ್ದು ಕಂಡು ಬೆದರಿದ ಗೋಲ್ಕೊಂಡಾ ಸೈನ್ಯವು, ಕಾಲಿಗೆ ಬುದ್ಧಿ ಹೇಳಬೇಕಾಯಿತು. ವೆಂಕಟಪತಿ ರಾಜು ಅಲ್ಲಿಗೆ ಸುಮ್ಮನಾಗಲಿಲ್ಲ. ಇದುವರೆಗೆ ರಕ್ಷಣಾತ್ಮಕ ಹೆಜ್ಜೆಗಳನ್ನು ಅನುಸರಿಸುತ್ತಿದ್ದ ವಿಜಯನಗರ ಸೈನ್ಯವು, ಈಗ ಆಕ್ರಮಣದ ತಂತ್ರವನ್ನು ಅನುಸರಿಸಿತು. ಗೋಲ್ಕೊಂಡಾ ಸೈನ್ಯವನ್ನು ಅಟ್ಟಿಸಿಕೊಂಡು ಹೊರಟಿತು. ಅಲ್ಲಲ್ಲಿ ದಾರಿಯುದ್ದಕ್ಕೂ ಸಣ್ಣಪುಟ್ಟ ಯುದ್ಧಗಳಾದವು. ಈ ಯುದ್ಧಗಳ ವಿವರಗಳನ್ನು ಬಿಂಬಿಸುವ ತಾಮ್ರಶಾಸನಗಳೂ ದೊರೆತಿವೆ. ಪ್ರತಿ ಘರ್ಷಣೆಯಲ್ಲೂ, ಗೋಲ್ಕೊಂಡಾ ಸೈನ್ಯವು ಸ್ವಲ್ಪ ಸ್ವಲ್ಪವೇ ದುರ್ಬಲಗೊಳ್ಳುತ್ತಾ ಹೋಯಿತು. ಗೋಲ್ಕೊಂಡಾದ ರಾಜು ಕುತುಬ್ ಶಾ ತನ್ನ ಸೈನ್ಯದೊಡನೆ ಬಹು ಬೇಗನೆ ತನ್ನ ಊರಿಗೆ ವಾಪಸು ಹೊರಟ. ಈ ನಡುವೆ ಮಳೆಗಾಲ ಆರಂಭವಾಯಿತು. ಗೋಲ್ಕೊಂಡ ಸೈನ್ಯವು ಮುಂದುವರಿದು ಪೆನ್ನಾ ನದಿ ತೀರಕ್ಕೆ ಬಂದು ತಲುಪಿತು. ಆಗ ಪೆನ್ನಾ ನದಿಯಲ್ಲಿ ಪ್ರವಾಹ. ತಕ್ಷಣ ನದಿಯನ್ನು ದಾಟಿ, ತನ್ನ ಸಾಮ್ರಾಜ್ಯವನ್ನು ಸೇರಿಕೊಳ್ಳಲು ಗೋಲ್ಕೊಂಡಾ ದೊರೆಗೆ ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಪೆನ್ನಾ ನದಿಯ ದಡದಲ್ಲಿ ಸಿಕ್ಕಿಹಾಕಿಕೊಂಡ ಗೋಲ್ಕೊಂಡಾ ಸೈನ್ಯವು, ತನ್ನನ್ನು ಹಿಂಬಾಲಿಸಿ ಬರುತಿದ್ದ ವೆಂಕಟಪತಿ ರಾಜುವಿನ ಸೈನ್ಯವನ್ನು ಎದುರಿಸುವ ಪ್ರಯತ್ನ ಮಾಡಿತು. ಸಾಕಷ್ಟು ಫಿರಂಗಿಗಳನ್ನು ಹೊಂದಿದ್ದ ಸೇನೆಯು, ತನ್ನ ರಕ್ಷಣೆಗಾಗಿ ಫಿರಂಗಿ ಗುಂಡುಗಳನ್ನು ಉಡಾಯಿಸತೊಡಗಿತು. ಪೆನುಕೊಂಡೆಯ ಸೈನ್ಯವು ಇದರಿಂದ ಆರಂಭಿಕ ಹಾನಿಯನ್ನು ಅನುಭವಿಸಿದರೂ, ಫಿರಂಗಿಗಳ ಹೊಡೆತವು ಕ್ರಮೇಣ ಕಡಿಮೆಯಾಗಲೇ ಬೇಕಾಯಿತು. ಆ ಕ್ಷಣವನ್ನು ಕಾಯುತ್ತಿದ್ದ ಪೆನುಗೊಂಡೆಯ ಸೈನ್ಯವು ವೈರಿ ಪಡೆಯ ಮೇಲೆ ಆಕ್ರಮಣ ಮಾಡಿತು. ಆಗ ಗೋಲ್ಕೊಂಡಾ ಸೈನ್ಯವು ಅನುಭವಿಸಿದ ಸೋಲು ಮತ್ತು ನೋವು ಅಪಾರ ಎನ್ನಲಾಗಿದೆ. ಪೆನ್ನಾರ್ ನದಿಯ ಪ್ರವಾಹವು ವೈರಿಪಡೆಯ ರಕ್ತದಿಂದ ತುಂಬಿ ಹೋಯಿತು ಎಂದು ನಂತರ ರಚಿಸಲಾದ ತೆಲುಗಿನ ಕಾವ್ಯದಲ್ಲಿ ವರ್ಣಿಸಲಾಗಿದೆ. ಆ ಯುದ್ಧದಲ್ಲಿ, ಗೋಲ್ಕೊಂಡಾ ಮಿತ್ರ ಪಡೆಯ ಸುಮಾರು 50,000 ಸೈನಿಕರು ಹತರಾದರು ಎಂದು ಹೇಳಲಾಗಿದೆ. ತನ್ನ ಸೈನ್ಯವು ಸೋಲುವುದನ್ನು ಕಂಡ, ಕುತುಬ್ ಶಾ, ಕಷ್ಟಪಟ್ಟು ನದಿ ದಾಟಿ, ತನ್ನ ರಾಜ್ಯದತ್ತ ಪಲಾಯನ ಮಾಡಬೇಕಾಯಿತು. ಪೆನ್ನಾರ್ ನದಿ ದಂಡೆಯಲ್ಲಿ ಕುತುಬ್ ಶಾ ಸೈನ್ಯವನ್ನು ನಾಶ ಮಾಡಿದ ವೆಂಕಟಪತಿ ರಾಜುವಿನ ಸೇನೆಯು, ಇನ್ನೂ ಮುಂದಕ್ಕೆ ಸಾಗಿ, ಕೃಷ್ಣಾ ನದಿಯ ತನಕ ವೈರಿಯನ್ನು ಅಟ್ಟಿಸಿಕೊಂಡು ಹೋಯಿತು. ಈ ಯುದ್ಧದ ಪ್ರಮುಖ ಸಾಧನೆ ಎಂದರೆ, ವಿಜಯನಗರ ಸಾಮ್ರಾಜ್ಯವು 1565ರ ನಂತರ ಕಳೆದುಕೊಂಡಿದ್ದ ಭಾಗದ ಸಾಕಷ್ಟು ಪಾಲನ್ನು ಮರಳಿ ಪಡೆದದ್ದು. ಜತೆಗೆ, ಸಾಮ್ರಾಜ್ಯದ ಗಡಿಯು ಉತ್ತರಕ್ಕೆ ಚಾಚಿ, ಕೃಷ್ಣಾ ನದಿಯ ದಡದ ತನಕ ವಿಸ್ತರಣೆಗೊಂಡಿತು. ಇದಾದ ನಂತರದ ಒಂದೆರಡು ದಶಕಗಳ ಕಾಲ, ವಿಜಯ ನಗರ ಸಾಮ್ರಾಜ್ಯವು ಹೊರಗಿನ ವೈರಿಪಡೆಗಳ ಆಕ್ರಮಣದಿಂದ ಸಾಕಷ್ಟು ರಕ್ಷಣೆ ಪಡೆಯಿತು. ಆದರೆ, ಆ ರಾಜಮನೆತನದ ಅದೃಷ್ಟ ಸರಿ ಇರಲಿಲ್ಲ ಎಂದೇ ಹೇಳಬಹುದು. ವಿಜಯನಗರ ಅರಸು ಮನೆತನದ ಒಳಜಗಳಗಳು, ಅಳಿಯ ರಾಮರಾಯ ನೇಮಕ ಮಾಡಿದ್ದ ಬೇಜವಬ್ದಾರಿ ಅಧಿಕಾರಿಗಳ ಕುತಂತ್ರ, ವಿವಿಧ ಪ್ರಾಂತ್ಯಗಳ ಸಾಮಂತರು ಸಾಮ್ರಾಜ್ಯದ ವಿರುದ್ಧ ತಿರುಗಿ ಬೀಳಲು ನಡೆಸಿದ ಪ್ರಯತ್ನ ಮೊದಲಾದ ವಿದ್ಯಮಾನಗಳು ಸಾಮ್ರಾಜ್ಯದ ಸುಗಮ ಆಡಳಿತಕ್ಕೆ ತೊಡಕುಗಳನ್ನು ಉಂಟುಮಾಡುತ್ತಿದ್ದವು. ಈ ನಡುವೆ 1592ರಲ್ಲಿ ರಾಜಧಾನಿಯನ್ನು ಪೆನುಕೊಂಡೆಯಿಂದ ಚಂದ್ರಗಿರಿಗೆ ಬದಲಾಯಿಸಲಾಯಿತು. ತಿರುಪತಿ ಬೆಟ್ಟಗಳ ತಪ್ಪಲಲ್ಲಿದ್ದ ಈ ಕೋಟೆಯಲ್ಲಿ ಹಿಂದೆ ಕೃಷ್ಣ ದೇವರಾಯನು ತನ್ನ ಬಾಲ್ಯ ಕಳೆದಿದ್ದ. ತಿರುಪತಿಯ ದಾರಿಯಲ್ಲಿರುವ ಚಂದ್ರಗಿರಿಯ ಕೋಟೆಯಲ್ಲಿದ್ದ ಅರಮನೆಗಳು ಇಂದಿಗೂ ಸುಸ್ಥಿತಿಯಲ್ಲಿ ಉಳಿದುಕೊಂಡಿದೆ. (ಚಿತ್ರ ನೋಡಿ) 1604ರಲ್ಲಿ ರಾಜಧಾನಿಯನ್ನು ವೆಲ್ಲೂರಿಗೆ ಬದಲಿಸಲಾಯಿತು. ವೆಂಕಟಪತಿರಾಜುವಿಗೆ ನಾಲ್ವರು ಹೆಂಡಿರಿದ್ದರೂ, ಮಕ್ಕಳಾಗದ ಕಾರಣ, ಅವರ ಸೋದರನ ಮಗ ಎರಡನೆಯ ಶ್ರೀರಂಗನನ್ನು ಉತ್ತರಾಧಿಕಾರಿಯನ್ನಾಗಿ ಆರಿಸಬೇಕಾಯಿತು. 1614ರಲ್ಲಿ ವೆಂಕಟಪತಿ ರಾಜು ಮೃತಪಟ್ಟಾಗ, ಎರಡನೆಯ ಶ್ರೀರಂಗ ಅಧಿಕಾರಕ್ಕೆ ಬಂದ. ಆದರೆ, ಆ ಸಮಯಕ್ಕಾಗಲೇ, ಅರಸೊತ್ತಿಗೆಯಲ್ಲಿ ಕುಟಿಲ ಕಾರಸ್ಥಾನಗಳು ನಡೆಯಲು ಆರಂಭವಾಗಿದ್ದು, ನಾಲ್ಕೇ ತಿಂಗಳಲ್ಲಿ ಆತ ಸಾಯುವಂತಾಯಿತು. ಜತೆಯಲ್ಲೇ ರಾಜ ಪರಿವಾರದ ಭೀಕರ ಕೊಲೆಗಳು ನಡೆದವು. ವಿಜಯನಗರ ಸಾಮ್ರಾಜ್ಯದ ನಿಜವಾದ ಪತನ ಈಗ ಆರಂಭವಾಯಿತು. ವೆಂಕಟಪತಿ ರಾಜನ ಉತ್ತರಾಧಿಕಾರಿ ಎರಡನೆಯ ಶ್ರೀರಂಗನು ಕೇವಲ ನಾಲ್ಕು ತಿಂಗಳುಗಳ ಕಾಲ ಅಧಿಕಾರ ನಡೆಸಿ, ತನ್ನ ಪರಿವಾರದೊಡನೆ ಸಾಯಬೇಕಾಗಿ ಬಂದದ್ದರಿಂದ, ಆ ಹಿಂದಿನ ಮೂರು ದಶಕಗಳ ಹೋರಾಟದ ಫಲವನ್ನು ಅನುಭವಿಸಲು ಆ ಅರಸೊತ್ತಿಗೆಯಿಂದ ಸಾಧ್ಯವಾಗಲಿಲ್ಲ. ವೆಂಕಟಪತಿ ರಾಜುವಿನ ಸೈನ್ಯವು ಕೃಷ್ಣಾ ನದಿಯ ತನಕ ಸಾಮ್ರಾಜ್ಯ ವಿಸ್ತರಿಸಿದ್ದು ನಿಜವಾದರೂ, ಅದರ ಯಶಸ್ಸು ಅರಸೊತ್ತಿಗೆಗೆ ಸಿಗಲೇ ಇಲ್ಲ. ಒಳಜಗಳಗಳಿಂದಾಗಿ, ಆ ಅರಸೊತ್ತಿಗೆ ವಿಷಣ್ಣವಾಯಿತು. ರಾಜ್ಯ ಕುಂದಿತು. ಕರ್ನಾಟಕದ ಭಾಗವಾಗಳಾಗಿ ಮುಂದುವರಿಯಬಹುದಾಗಿದ್ದ ವಿಶಾಲ ಭೂಪ್ರದೇಶಗಳು ವಿವಿಧ ರಾಜರುಗಳ ಆಳ್ವಿಕೆಗೆ ಸೇರಿಹೋದವು. ಅದೇನೇ ಇದ್ದರೂ, ವೆಂಕಟಪತಿ ರಾಜು ಅಥವಾ ಎರಡನೆಯ ವೆಂಕಟನ ಸಾಹಸವು ಆಗಿನ ಕಾಲಮಾನದಲ್ಲಿ ಅಪೂರ್ವವಾದದ್ದು. ತಾಳಿಕೋಟೆ ಯುದ್ಧದಲ್ಲಿ ಕಳೆದುಕೊಂಡಿದ್ದ ಸಾಮ್ರಾಜ್ಯವನ್ನು ಮರಳಿ ಪಡೆಯಲು ಧೀಮಂತ ಹೋರಾಟ ನಡೆಸಿದ ಈತನು, ಸಾಕಷ್ಟು ಭಾಗಗಳನ್ನು ಮರಳಿ ಪಡೆದು, ಗೋಲ್ಕೊಂಡಾ ಸುಲ್ತಾನನ್ನು ಮಣಿಸಿದ್ದ. ಈ ವಿವರಗಳು ಮತ್ತು ತಾಳಿಕೋಟೆ ಯುದ್ಧದ ನಂತರದ ಮೂರು ದಶಕಗಳ ಅವಧಿಯಲ್ಲಿ ವಿಜಯನಗರ ಅರಸರು ಪ್ರತಿ ಹೋರಾಟ ನಡೆಸಿದ ವಿವರಗಳು ಜನಸಾಮಾನ್ಯರಿಗೆ ತಲುಪಬೇಕು. ರಾಜ್ಯಗಳ ಮರು ವಿಂಗಡಣೆಯಿಂದಾಗಿ, ಪ್ರಸಿದ್ಧ ಹಂಪೆಯು ಕರ್ನಾಟಕದಲ್ಲಿ ಉಳಿದು, ಚಂದ್ರಗಿರಿ, ಪೆನುಕೊಂಡೆ, ವೆಲ್ಲೂರುಗಳು ನಮ್ಮ ನೆರೆ ರಾಜ್ಯಗಳಲ್ಲಿ ಹಂಚಿ ಹೋಗಿರುವುದರಿಂದಾಗಿ, ಈ ರಾಜಧಾನಿಗಳ ಇತಿಹಾಸದ ಪಕ್ಷಿನೋಟವನ್ನು ಸಮಗ್ರವಾಗಿ ಗ್ರಹಿಸಲು ನಮ್ಮ ರಾಜ್ಯದವರಿಗೆ ತುಸು ತೊಡಕುಗಳಿವೆ. ಅದನ್ನು ಪರಿಹರಿಸಿಕೊಂಡು, ವಿಜಯನಗರ ಸಾಮ್ರಾಜ್ಯವು, 1565ರ ಸೋಲಿನ ನಂತರವೂ ಕೆಲವು ದಶಕಗಳ ಕಾಲ ಪ್ರತಿಹೋರಾಟ ನಡೆಸಿ, ಆ ಅಭಿಯಾನದಲ್ಲಿ ಸಾಕಷ್ಟು ಯಶಸ್ಸನ್ನು ಸಹ ಗಳಿಸಿತ್ತು ಎಂಬ ಸತ್ಯವನ್ನು ಜನಸಾಮಾನ್ಯರು ಅರಿಯಬೇಕಾದ ಅವಶ್ಯಕತೆ ಇದೆ. (ಚಿತ್ರ : ಚಂದ್ರಗಿರಿಯಲ್ಲಿರುವ (ತಿರುಪತಿ) ವಿಜಯನಗರ ಅರಸರ ಅರಮನೆ) (raghothamarao c ಅವರು ಪೆನ್ನಾರ್ ಯುದ್ದದ ಕು ರಿತು , ಇಂಗ್ಲಿಷ್ ನಲ್ಲಿ ಇತ್ತೀಚೆಗೆ ಒಂದು ವಿಡಿಯೋ ಮಾಡಿದ್ದು, ಸಾಕಷ್ಟು ವಿವರ ಹಂಚಿಕೊಂಡಿದ್ದು, ಅಲ್ಲಿನ ಕೆಲವು ಮಾಹಿತಿಯನ್ನು ಇಲ್ಲಿ ಬಳಸಲಾಗಿದೆ. Thanks Raghothama Rao C

No comments:

Post a Comment