Powered By Blogger

Sunday, August 29, 2021

ನಿತ್ಯಾನಂದ ಬಿ ಶೆಟ್ಟಿ - ಮಾರ್ಗಾನ್ವೇಷಣೆ { ಸಾಹಿತ್ಯ ಸಂಶೋಧನೆಯ ರೀತಿ ನೀತಿ -2021 }NITHYANANDA B SHETTY

ಮಾರ್ಗಾನ್ವೇಷಣೆ { ಸಾಹಿತ್ಯ ಸಂಶೋಧನೆಯ ರೀತಿ ನೀತಿ } - ಬಿ. ನಿತ್ಯಾನಂದ ಶೆಟ್ಟಿ MARGANVESHANE { KANNADA }<-An Introduction to Kannada Literary research } Author - Nithyananda B shetty Publisher -Arathi N Shetty , BESUGE PUBLICATIONS Address - BESUGE -HOSAHALLI ROAD,DIBBURU POST-572106 - PHONE-9353877377 EMAIL-1besugetrust@gmail.com Price-rs 350 First impression-2021

Tuesday, August 24, 2021

ಎಚ್ . ಎಸ್ . ವೆಂಕಟೇಶಮೂರ್ತಿ - ಭಕ್ತಿ ಕೇವಲ ಶರಣಾಗತಿಯೇ ?: Dr. H.S. Venkateshamoorthy

ರಹಮತ್ ತರೀಕೆರೆ - ಸೂಫಿ ಪಂಥದ ಪ್ರಮುಖ ತಾತ್ವಿಕ ನೆಲೆಗಳು : Rahamath Tarikere

ರಾಜ್ಯದೆಲ್ಲೆಡೆ ಭಾಷಾ ಪ್ರಾಧ್ಯಾಪಕರು ಕಂಗಾಲು! | Udayavani – ಉದಯವಾಣಿ/National Education Policy

ರಾಜ್ಯದೆಲ್ಲೆಡೆ ಭಾಷಾ ಪ್ರಾಧ್ಯಾಪಕರು ಕಂಗಾಲು! | Udayavani – ಉದಯವಾಣಿ

ರಘುನಾಥ ಚ. ಹ ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ /Raghunath

ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ | Prajavani

ವಿಜ್ಞಾನೇಶ್ವರನ ಮಿತಾಕ್ಷರ ---------------- Vijnaneshwara's Mitakshara ----...

Sunday, August 15, 2021

ಗಿರಿಜಾ ಶಾಸ್ತ್ರಿ - ಡಿ. ಆರ್. ನಾಗರಾಜ್ ಎಂಬ ರೂಪಕ/ D. R. NAGARAJ

ಡಿ.ಆರ್. ಎನ್ ಎಂಬ ರೂಪಕ ಮೆಷ್ಟ್ರರ ಹುಟ್ಟು ಹಬ್ಬದ ನೆನಪಿಗೆ 1979 ಜೂನ್ ಜುಲೈ ತಿಂಗಳು. ನಾವು ಕನ್ನಡ ಎಂ.ಎ.ಗೆ ಸೇರಿದ ಹೊಸತು. ಒಂದು ದಿನ ಉದ್ದನೆಯ, ಗಡ್ಡ ಧಾರಿಯಾದ ‌ಶ್ಯಾಮಲವರ್ಣದ ವ್ಯಕ್ತಿಯೊಬ್ಬರು ತರಗತಿಗೆ ಬಂದರು. ಕನ್ನಡಕದ ಹಿಂದೆ ಉಜ್ವಲವಾಗಿ ಹೊಳೆಯುವ ಅಗಲ ಕಣ್ಣುಗಳು. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯಾತ್ಮಕ ತರಗತಿ ಎಂದೆನಿಸುತ್ತದೆ. ತಲೆಯೊಳಗೆ ಏನೂ ಹೊಗಲಿಲ್ಲ. ಕನ್ನಡ ಮಾತನಾಡುತ್ತಿದ್ದಾರೆ ಎಂದೇ ಎನಿಸಲಿಲ್ಲ. ವಿಶಿಷ್ಟ ಶಬ್ದಾರ್ಥಕೋಶ, ವಿಶಿಷ್ಟ ಐಡಿಯಾಲಜಿ ತರಗತಿಯಿಂದ ಹೊರಗೆ ಬಂದಾಗ ಎಲ್ಲವೂ ಅಯೋಮಯ. ನಾಲ್ಕೂ ಬದಿಗೆ ಸುತ್ತಲೂ ತರಗತಿಗಳು, ಅಧ್ಯಾಪಕರ ಕೊಠಡಿಗಳು. ಮಧ್ಯೆ ಕುವೆಂಪು ಅವರ ಕುಪ್ಪಳಿಯ ಮನೆಯಲ್ಲಿರುವ ಹಾಗೆ ಅಗಲ ತೊಟ್ಟಿ. ಅಲ್ಲಿ ಹುಲ್ಲು ಬೆಳೆದಿತ್ತು. ಮೂಲೆಗಳಲ್ಲಿ ಅಲ್ಲಲ್ಲಿ‌ ಶಾಸನ ಕಲ್ಲುಗಳನ್ನು ನೆಡಲಾಗಿತ್ತು. ತರಗತಿಯ ಯಾವುದೋ ಒಂದು ಕೋಣೆಯಿಂದ ಹೊರಬಂದು, ಆ ಕಟ್ಟೆ ಇಳಿದು ಮ್ಯಾಕ್ಸಿ ತೊಟ್ಟ ಹುಡುಗಿಯೊಬ್ಬಳು ನಮ್ಮ ಬಳಿಗೆ ಧಾವಿಸಿ ಬಂದು "ಹೇಗಿತ್ರೇ ಡಿ.ಆರ್.ಎನ್ ಕ್ಲಾಸು? "ಎಂದಳು. ಹೀಗೆ ಕೇಳಿದ ಹುಡುಗಿ ಬೇರಾರು ಅಲ್ಲ ನಮ್ಮ ಸೀನಿಯರ್ ತರಗತಿಯಲ್ಲಿದ್ದ ಕಮಲಾ- ಇಂದಿನ ಈ ಫೇಸ್ ಬುಕ್ಕಿನ ಹೀರೋಯಿನ್ ಕಮಲಾ ಮೇಟಿಕುರ್ಕಿ. "ಕಲ್ಕಿ ಕಲ್ಕಿ ಎನ್ನುತ‌ ಚೀರಿ ಕನಸೊಡೆದೆದ್ದೆ ಇನ್ನೆಲ್ಲಿಯ ನಿದ್ದೆ"..... "ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು......ಪೋಲೀಸರ ದೊಣ್ಣೆಗಳು ಏಜಂಟರ ಕತ್ತಿಗಳು....." ಡಿ.ಆರ್ ಎನ್ ಅವರು ನಮಗೆ ಕುವೆಂಪು ಅವರ ಕವಿತೆಗಳ ಸಂಕಲನ 'ಕೋಗಿಲೆ ಮತ್ತು ಸೋವಿಯತ್ ರಷ್ಯಾ' ಪಾಠಮಾಡುತ್ತಿದ್ದರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿದ್ರೋಹದ ಸಾತತ್ಯದ ರೂಪವನ್ನು ಬಯಲಿಗೆಳೆಯುತ್ತಿದ್ದರೆನಿಸುತ್ತದೆ. ನನಗೋ ಕನ್ನಡ ಸಾಹಿತ್ಯದ ಅ.ಬ.ಕ. ಗೊತ್ತಿರಲಿಲ್ಲ. ಬಿ.ಎ. ತರಗತಿಯಲ್ಲಿ ಐಚ್ಛಿಕ ವಿಷಯವಾಗಿ ಮಾತ್ರ ಕನ್ನಡ ಸಾಹಿತ್ಯವನ್ನು ಓದಿದ್ದೆ. ಕುಮಾರವ್ಯಾಸ, ಭಾಸನ ನಾಟಕಗಳು, ನವ್ಯ ವಿಮರ್ಶೆ ( ಗಿರಡ್ಡಿ ಗೋವಿಂದರಾಜ), "ಜೈಸಿದನಾಯ್ಕ" ಮುಂತಾದ ಪುಸ್ತಕಗಳನ್ನು ಪರೀಕ್ಷೆಗಾಗಿ ಓದಿದ್ದೆನೇ ಹೊರತು ನನಗೆ ನಿಜವಾಗಿ ಕನ್ನಡ ಸಾಹಿತ್ಯದ ಬಗ್ಗೆ ಗಂಭೀರವಾದ ಆಸಕ್ತಿ ಇರಲಿಲ್ಲ. ಆದ್ದರಿಂದಲೇ ಕುವೆಂಪುವನ್ನೂ, ಸಿದ್ದಲಿಂಗಯ್ಯನವರನ್ನು ಸೇರಿಸಿಯೇ ಓದಿಕೊಂಡುಬಿಟ್ಟಿದ್ದೆ. ನವೋದಯ, ನವ್ಯ ಗೊತ್ತಿರಲಿಲ್ಲ. ಬಂಡಾಯವಂತೂ ಮೊದಲೇ ಗೊತ್ತಿರಲಿಲ್ಲ. ಯಾಕೆಂದರೆ ಬಂಡಾಯ ಆಗ ತಾನೇ ಕಣ್ತೆರೆಯುತಿತ್ತು. 'ಹೋರಾಟದ ಸಾಗರದೊಳ'ಕ್ಕೆ ನಮ್ಮನ್ನು ಅನಾಮತ್ತು ತಳ್ಳಿಬಿಟ್ಟವರಲ್ಲಿ ಡಿ.ಆರ್.ಎನ್ ಜೊತೆಗೆ, ಸಿದ್ಧಲಿಂಗಯ್ಯ, ಕಾಳೇಗೌಡ ನಾಗವಾರ, ಬರಗೂರು ರಾಮಚಂದ್ರಪ್ಪ, ಮುಂತಾದ ಗುರುಗಳಿದ್ದರು. ಪಕ್ಕದ ಇತಿಹಾಸ ವಿಭಾಗದಿಂದ ಚಂದ್ರಶೇಖರ್, ಹೊರಗಿನಿಂದ ಸಿ.ಜಿ.ಕೃಷ್ಣ ಸ್ವಾಮಿ ಮುಂತಾದವರು ಆಗಾಗ್ಗೆ ವಿಭಾಗಕ್ಕೆ ಬರುತ್ತಿದ್ದರು. ಡಿ ಆರ್‌ಎನ್ ಎಂದರೆ ಈ ಎಲ್ಲಾ ಪಟಾಲಂನ್ನು ಜೊತೆಗೇ ಸುತ್ತಿಕೊಂಡು ತಿರುಗುವ ಸೂರ್ಯನ ಹಾಗಿದ್ದರು. ನಾವು ಕೂಡ ಗಿರಗಿರನೆ ಸುತ್ತುತ್ತಿದ್ದೆವು. ನಾನು ಇಂಗ್ಲಿಷ್ ಎಂ.ಎ. ಮಾಡುವಾಗ ಓದಿದ ಇಂಗ್ಲಿಷ್ ಸಾಹಿತ್ಯಕ್ಕಿಂತ ಕನ್ನಡ ಎಂ.ಎ. ಕಲಿಯುವಾಗ ಓದಿದ ಇಂಗ್ಲಿಷ್ ಸಾಹಿತ್ಯವೇ ಹೆಚ್ಚು. ಕನ್ನಡ ಸಾಹಿತ್ಯದ ನೆಪದಲ್ಲಿ ಜಾಗತಿಕ ಸಾಹಿತ್ಯದ ಪರಿಚಯವಾದದ್ದು ಕನ್ನಡ ಅಧ್ಯಯನ ಕೇಂದ್ರದಲ್ಲೇ. "ಸ್ನಾನ ಮಾಡಿಕೊಂಡು ಬಂದ ಅನ್ನಾ ತನ್ನ ಕೂದಲನ್ನು ಒಣಗಿಸಿಕೊಳ್ಳುತ್ತಿದ್ದಾಗ ಅವಳ ಕೈಬೆರಳುಗಳ ಸೌಂದರ್ಯವನ್ನು ನಿಮಗ್ನವಾಗಿ ವರ್ಣಿಸುವುದನ್ನು ನೋಡಿದರೆ, ಅನ್ನಾಳ ನಿಜವಾದ ಪ್ರೇಮಿ ವ್ರೋನ್ಸ್ ಕಿ ಅಲ್ಲ, ಅದು ಟಾಲ್ ಸ್ಟಾಯೇ" ! ಡಿ.ಆರ್ ಎನ್ ಅವರು ಮಲೆಗಳಲ್ಲಿ ‌ಮದುಮಗಳು ಪಾಠಮಾಡುತ್ತಿದ್ದಾಗ ಅವರು ಟಾಲ್ ಸ್ಟಾಯ್ ಬಗ್ಗೆ ಹೇಳುತ್ತಿದ್ದಾರೋ ಇಲ್ಲ ಕುವೆಂಪು ಬಗ್ಗೆ ಹೇಳುತ್ತಿದ್ದಾರೋ? ಕನ್ನಡ ಸಾಹಿತ್ಯದ ‌ಪ್ರಾಥಮಿಕ ಶಾಲೆಯಲ್ಲಿದ್ದ ನನಗೆ ಅನುಮಾನಬರುತ್ತಿತ್ತು. ಸಾಂಸ್ಕೃತಿಕ ಸಮಾನಾಂತರತೆ ಎಂದರೆ ಏನೆಂಬುದು ತಲೆಗೆ ಹೊಗುತ್ತಿರಲಿಲ್ಲ. ಅವರು ತೀವ್ರವಾಗಿ ವ್ಯಾಖ್ಯಾನಿಸುತ್ತಿದ್ದ ಟ್ಯಾಗೋರ್ ‌ಅವರ' Later poems' ಅಂತೂ ನನಗೆ ಕಬ್ಬಿಣದ ಕಡಲೆಯೇ ಆಗಿತ್ತು. "ಮನುಷ್ಯ ಕೆ ರೂಪ್,‌ ನನ್ನಜ್ಜನಿಗೊಂದು ಆನೆ‌ ಇತ್ತು, ಪಾತುಮ್ಮಳ ಆಡು ಮತ್ತು ಬಾಲ್ಯಕಾಲ ಸಖಿ, ಸಾಹಿಬ್ ಬೀಬಿ ಔರ್ ‌ಗುಲಾಮ್ , ಏಣಿ ಮೆಟ್ಟಿಲುಗಳು" ಹೀಗೆ ನಮಗೆ ಅರೆದು ಕುಡಿಸಿದ ಇನ್ನೂ ಎಷ್ಟೋ ಪಠ್ಯಗಳು ಈಗ ನೆನಪಿಗೆ‌ ಬಾರವು. ಒಮ್ಮೊಮ್ಮೆ ಅವರು ತಮ್ಮ ಹಾಸ್ಟೆಲ್ ರೂಮಿನಲ್ಲೋ, ಸೆಂಟ್ರಲ್ ಕಾಲೇಜಿನ ಮರದಡಿಯಲ್ಲೋ ನಮಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಹಾಸ್ಟೆಲ್ ರೂಮಿನಲ್ಲಿ ಇದ್ದದ್ದು ಒಂದು ಮಂಚ ಮತ್ತು ಒಂದ.ಕುರ್ಚಿ. ಮಂಚದ ಮೇಲೆ ಹುಡುಗರೆಲ್ಲಾ ಕುಳಿತುಕಡೊಂಡು ಬಿಡುತ್ತಿದ್ದರು. ನಾವು ಹುಡುಗಿಯರು ನೆಲದ ಮೇಲೆ ವಿಧೇಯವಾಗಿ‌ ಕುಳಿತುಕೊಳ್ಳುತ್ತಿದ್ದೆವು. ಮೇಷ್ಟ್ರ ಗಮನ ಎಷ್ಟು ಸೂಕ್ಷ್ಮವಾಗಿ ಇರುತ್ತಿತ್ತೆಂದರೆ "ಮೇಲೆ ಕೂತ್ಕೋಳ್ಳದನ್ನ ಕಲಿಬೇಕ್ರೀ" ಎಂದು ಹೇಳುತ್ತಿದ್ದರು. ಇನ್ನೊಮ್ಮೆ ಅವರ ಮನೆಗೆ ಹೋದಾಗ "ರೇಷ್ಮೆ ಸೀರೆ ಉಡುವುದನ್ನು ನಿರಾಕರಿಸಬೇಕ್ರಿ" ಎಂದಿದ್ದರು. ಹುಡುಗಿಯರು ಸರಳವಾಗಿರುವುದನ್ನು, ‌ಸಬಲವಾಗಿರಬೇಕೆನ್ನುವ ಪಾಠ, ನಮಗೆ ಪಠ್ಯವಲ್ಲದೇ, ತರಗತಿಯ ಹೊರಗೆ ಅವರ ಜೊತೆಗೆ ನಡೆಸುವ ಮಾತುಕತೆಗಳ ಮೂಲಕವೂ ದೊರಕುತ್ತಿತ್ತು. ನಾನು ಬಿ.ಎ. ಓದುವಾಗಲೇ ಸನಾತನ ಧರ್ಮ, ಪಾವಿತ್ರ್ಯ ಅಲೌಕಿಕ ಸತ್ಯ ಹೀಗೆ ಏನೇನೋ ಅಸಂಬದ್ಧ ಪ್ರಲಾಪಗಳನ್ನು ಒಂದು ನೋಟ್ ಬುಕ್ಕಿನಲ್ಲಿ ಬರೆದಿದ್ದೆ. ಅವುಗಳನ್ನು ಕವಿತೆಗಳೆಂದು ನನಗೆ ನಾನೇ ಕರೆದುಕೊಂಡುಬಿಟ್ಟಿದ್ದೆ. ಒಮ್ಮೆ ಡಿ.ಆರ್.ಎನ್ ಅವರ ಕೈಯಲ್ಲಿ ಆ ನೋಟ್ ಪುಸ್ತಕ ವನ್ನಿಟ್ಟು ಅವರ ಅಭಿಪ್ರಾಯ ಕೇಳಿದ್ದೆ. ಸ್ವಲ್ಪ ದಿನಗಳಾದವು ಮೇಷ್ಟ್ರು ಸಿಕ್ಕಾಗಲೆಲ್ಲಾ ನನ್ನ ಕವಿತೆಗಳನ್ನು ಹೊಗಳಿಯಾರೆಂಬ ಆಸೆ. ಕಾಯುತ್ತಿದ್ದೆ. ನನಗೆ ಯಾವತ್ತೂ ರಿಜೆಕ್ಟ್ ಆಗುವ‌ ಭಯ ಒಳಗೊಳಗೇ ಕಾಡುತ್ತಿದ್ದರೂ ಭಂಡ ಧೈರ್ಯ ಮಾಡಿ ನಾಲ್ಕೈದು ಬಾರಿ 'ಕವಿತೆಗಳ' ಬಗ್ಗೆ ಕೇಳಿದ್ದೆ. ಕೊನೆಗೆ ಒಮ್ಮೆ ಕರ್ನಾಟಕಾನ ಗ್ರಂಥಾಲಯದ ಮೇಲೆ ‌ಭೂತಬಂಗಲೆಯಂತಿದ್ದ ಅವರ ಕೋಣೆಯೊಳಗೆ ನುಗ್ಗಿ ಬಿಟ್ಟೆ. ಅವರ ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು. ಬೇರೆಯವರ ಕೆಲವು ಸಶಕ್ತ ಕವಿತೆಗಳನ್ನು ಓದಿದರು. ಏನೂ ಹೇಳದೆ ನನ್ನ ಪುಸ್ತಕ ನನಗೆ ಮರಳಿ ಕೊಟ್ಟರು. ಮನೆಗೆ ಬಂದವಳೇ ಅದನ್ನು ನೀರೊಲೆಯೊಳಗೆ ಹಾಕಿಬಿಟ್ಟೆ. ಬದುಕಿನ ವಾಸ್ತವ ಅನುಭವಗಳ ಆಧಾರವಿಲ್ಲದ ಆ ನನ್ನ 'ಸನಾತನ ಮೌಲ್ಯಗಳು' ಉರಿದು ಬೂದಿಯಾಗಿ ಹೋದವು. ಎಂ.ಎ. ಎರಡನೆಯ ವರುಷದ ಕೊನೆಗೆ ಬಂದಾಯಿತು. ಸ್ನೇಹಿತರಾದ ಕೃಷ್ಣಮೂರ್ತಿ ಮತ್ತು ಗೀತಾಚಾರ್ಯ ಅವರ ಸಂಪಾದಕತ್ವದಲ್ಲಿ "ಸಂವಾದ" ಎನ್ನುವ ಅಧ್ಯಯನ ಕೇಂದ್ರದ ಕನ್ನಡ ಸಂಘದ ಪತ್ರಿಕೆ ಪ್ರಕಟವಾಯಿತು. ಅದಕ್ಕೆ ನನ್ನ ಹೊಸ ಕವಿತೆಯೊಂದನ್ನು , ಅದು ತಿರಸ್ಕೃತವಾಗಬಹುದೆಂಬ ಅನುಮಾನದಿಂದಲೇ ಕೊಟ್ಟಿದ್ದೆ. ಒಂದು ದಿನ ಹೀಗೆಯೇ ನಾವೆಲ್ಲಾ ಗೆಳತಿಯರು ತರಗತಿಯ ಕಟ್ಟೆಯೇಲೆ ಕುಳಿತಿದ್ದೆವು. ಎದುರಿಗೇ ಡಿ.ಆರ್ ಎನ್ ಅವರ ಸ್ಟ್ಯಾಫ್ ರೂಂ. ಯಾರೋ ಬಂದು ಡಿ.ಆರ್.ಎನ್ ಮೇಷ್ಟ್ರು ಕರೆಯುತ್ತಿದ್ದಾರೆಂದು ನನಗೆ ಹೇಳಿದರು. ನಾನು ಒಳಗೆ ಹೋದೆ . ಅವರ ಕೈಯಲ್ಲಿ ಸಂವಾದ ಪತ್ರಿಕೆ ! "ಚೆನ್ನಾಗಿ ಬರೆದಿದ್ದೀರಲ್ರೀ" ಎಂದರು. ನನಗೆ ತಲೆ ಗಿರ್ರನೆ ತಿರಗುವಂತಾಯ್ತು.,"keep it up" ಎಂದರು. ಅದೇ ನನ್ನ ಮೊದಲ ಕವನ ಸಂಕಲನದ ಮೊದಲ ಕವಿತೆಯಾಯಿತು "ಹೆಣ್ಣೊಬ್ಬಳ ದನಿ" ಎಂದು ಅದಕ್ಕೆ ಹೆಸರಿಟ್ಟೆ. ಸುಖಸಾಗರ್ ಹೊಟೆಲ್ ನಲ್ಲಿ ಎಂ.ಎ. ವಿದಾಯ ಕೂಟ ಮುಗಿದು ಹೊರಟಾಗ, ನನ್ನ ಬಳಿ ಬಂದು ‌" you are an intelligent girl" ಎಂದಿದ್ದರು. ನನಗೆ ಕೋಡು ಮೂಡಿತ್ತು!!! ಕನ್ನಡ ಅಧ್ಯಯನ ಕೇಂದ್ರದ ಎರಡು ‌ವರುಷಗಳ ಅನುಭವ ಕೊಟ್ಟ ಸಂಸ್ಕಾರ ವಿಶಿಷ್ಟವಾದುದು. ಮಹತ್ವವಾದುದು. ಮಾನವೀಯ ಮೌಲ್ಯಗಳ ಜಾಡು ಹಿಡಿಸಿದ ವಿಭಾಗವನ್ನೂ ಅಲ್ಲಿನ ಗುರುಗಳನ್ನೂ ನಾನು ಮರೆಯುವಂತೆಯೇ ಇಲ್ಲ. ಎಂ. ಎ. ಮುಗಿದನಂತರವೂ ಡಿ.ಆರ್.ಎನ್ ಮೇಷ್ಟ್ರ ಮನೆಗೆ ಅನೇಕ ಬಾರಿ ಹೋಗಿದ್ದೇನೆ. ಅವರ ಪಾಠ ಕೇಳಲು ಜೀವ ಬಿಡುತ್ತಿದ್ದವರು ಎಷ್ಟೋ ಮಂದಿ. ಅವರಲ್ಲಿ ನನ್ನ ಸಹಪಾಠಿ ಗಿರಿಜಾ ಕೂಡ ಒಬ್ಬಳು. ಅವಳು ಎಷ್ಟು ಗಟ್ಟಿಗಿತ್ತಿಯಂದರೆ ಕೊನೆಗೆ ಅವರನ್ನೇ ಜೀವನದ ಸಂಗಾತಿಯನ್ನಾಗಿಸಿಕೊಂಡುಬಿಟ್ಟಳು. ಶಂಕರಾಚಾರ್ಯ, ನಾಗಾರ್ಜುನ ಕುರಿತ ಅವರ ಶಾಸ್ತ್ರಾರ್ಥಗಳು, ಸಂವಾದಗಳು, ಅಲ್ಲಮನ ಬಗಗೆ ಚರ್ಚೆಗಳು, ಅಭಿನವಗುಪ್ತನ ಚಿಂತನೆ,ಗೃಹವಾದಿನಿ ಮತ್ತು ಬ್ರಹ್ಮವಾದಿನಿ ಕುರಿತಾದ ಸ್ತ್ರೀವಾದದ ಹೊಸನೆಲೆ, ಶಕ್ತಿ ಶಾರದೆಯ ಮೇಳ ಮುಂತಾದವು ಕನ್ನಡ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧವಾಗಿವೆ. ನನಗೆ ಇವುಗಳನ್ನು ಓದಿ ಪೂರ್ತಿಯಾಗಿ ಅರಗಿಸಿಕೊಳ್ಳುವ ಸಾಮರ್ಥ್ಯ ಇನ್ನೂ ಬಂದಿಲ್ಲ. ಇನ್ನು ಬರುವುದೂ ಕಾಣೆ! ತಮಿಳು ಕಾವ್ಯ ಮೀಮಾಂಸೆಯ ಹಾಗೆ ಪ್ರತ್ಯೇಕವಾದ ಕನ್ನಡ ಸಾಹಿತ್ಯ ಮೀಮಾಂಸೆಯೊಂದು ಇರಬೇಕೆಂದು ಪ್ರಯತ್ನಿಸಿದ ಮೊದಲಿಗರಲ್ಲಿ ಅವರೂ ಒಬ್ಬರು. ಸಾಹಿತ್ಯ ವಿಮರ್ಶೆಗೆ ಹೊಸ ರೂಪ ತೊಡೆಸಿದವರು. 'ಬಂಡಾಯ ಸಾಹಿತ್ಯ' ವೇದಿಕೆ ಹತ್ತಿದ ಮೊದಲ ದಿನಗಳಲ್ಲಿ ತಮ್ಮ ಸಹೋದ್ಯೋಗಿಗಳ ಜೊತೆ ಅವರ ಲಗುಬಗೆಯ ಓಡಾಟ ಕಣ್ಣಿಗೆ ಕಟ್ಟಿದಂತಿದೆ. ಅಂತಹ ಹರಿಕಾರರೊಬ್ಬರ ಶಿಷ್ಯ ಕೋಟಿಯಲ್ಲಿ ನಾನೂ ಒಬ್ಬಳೂ ಎನ್ನುವ ಹೆಮ್ಮೆ ನನಗೆ ಎಂದಿಗೂ ಇದೆ. ಅವರೆಂದರೆ ಕಣ್ಣಿಗೆ ಕಾಣುವಷ್ಟು ವಿಸ್ತರಿಸಿಕೊಳ್ಳುವ ಸಮುದ್ರದ. ನಾವು ಮೊಗೆಯುವಷ್ಟೇ ನಮಗೆ ದಕ್ಕುವುದು. ಅಂತಹ‌ ಗುರು ಬದುಕಿದ್ದರೆ ಅವರಿಗೆ‌ ಈಗ ಅರವತ್ತೇಳು ತುಂಬುತ್ತಿತ್ತು. ಆದರೆ ಅವರು ತಮ್ಮ ನಲವತ್ತೇಳರ ವಯಸ್ಸಿನಲ್ಲೇ ವಿದಾಯ ಹೇಳಿಬಿಟ್ಟರು. ಆದರೆ ಕನ್ನಡ ಸಾಹಿತ್ಯ ವಿಮರ್ಶೆಯ ಹಾದಿಯಲ್ಲಿ ಗಾಢವಾದ ಗೆರೆ ಮೂಡಿಸಿ ನಡೆದು ಬಿಟ್ಟರು. ಸುಮಾರು ಮೂವತ್ತೈದು ವರುಷಗಳ ಹಿಂದೆ ಮುಂಬಯಿ ವಿ. ವಿ. ಕನ್ನಡ ವಿಭಾಗದಲ್ಲಿ ಶ್ರೀನಿವಾಸ ಹಾವನೂರರು ಏರ್ಪಡಿಸಿದ "ರಸ ವ್ಯಾಖ್ಯಾನ" ಕಾರ್ಯಕ್ರಮಕ್ಕೆ ಬಂದು 'ಒಡಲಾಳದ' ದ ಬಗ್ಗೆ ಮಾತನಾಡಿದ್ದರು. ನಾವು ಆಗ ಮುಂಬಯಿಯ ಮುಲುಂಡ್ ಎಂಬ ಪ್ರದೇಶದಲ್ಲಿ ಒಂದು ಬಾಡಿಗೆ‌ ಮನೆಯಲ್ಲಿದ್ದೆವು. ಆಗ ಅಲ್ಲಿಗೆ ಬಂದು ‌ನಮ್ಮ ಆತಿಥ್ಯ‌ ಸ್ವೀಕರಿಸಿದ್ದರು ಪುಟ್ಟ ಗೌರಿ ಗೋಡೆಯ ಮೇಲೆ ಬಿಡಿಸುವ ನವಿಲಿನ ಚಿತ್ರದಂತೆ ಅವರ ನೆನಪುಗಳು ಗರಿಗೆದರುತ್ತಿವೆ. ಅವರ ಸೃಜನಶೀಲತೆಯ ರೂಪಕವಾಗಿ ಹೊಳೆಯುತ್ತಿದೆ.

Sunday, August 8, 2021

ವಿವೇಕ ಶ್ಯಾನುಭಾಗ - ಸಂದರ್ಶನ Vivek Shanabhaga | Mukha Mukhi | Face To Face | Interview | Devu Pattar ...

ಸವಿತಾ ನಾಗಭೂಷಣ -- ಭಾವ ಶುದ್ದಿ ಮಾಡೋ {Savitha Nagabhushana}

ಭಾವ ಶುದ್ಧಿ ಮಾಡೋ....... ******************* ಸಿಟ್ಟು ಮಾಡಲೇನು ಬೆಟ್ಟು ತೋರಲೇನು ಗೀರಿ ಗೀರಿ ಗೀರಿ ಗಾಯಗೊಳಿಸಲೇನು.... ಹೊಡೆದು ಹಾಕಲೇನು ಬಡಿದು ಹಾಕಲೇನು ಸಿಗಿದು ಸಿಗಿದು ಸಿಗಿದು ಸಿಪ್ಪೆ ಮಾಡಲೇನು..... ನೇಣು ಹಾಕಲೇನು ಗೋಣು ಮುರಿಯಲೇನು ಉಗಿದು ಉಗಿದು ಉಗಿದು ಉರಿಯ ಹಚ್ಚಲೇನು.... ಭಂಗ ಮಾಡಿ ಲಿಂಗ ಮಾಡದಂತೆ ಸಂಗ ಬಗೆದು ಬಗೆದು ಬಗೆದು ಭಿನ್ನ ಮಾಡಲೇನು..... ಬುಸ್ಸೆಂದರೇನು ಉಸ್ಸೆಂದರೇನು ಹಲ್ಲು ಕಡಿದರೇನು ಹುಲ್ಲು ತುಳಿದರೇನು ಬೇಶಾಯಿತೇನು ಲೇಸಾಯಿತೇನು..... ಸೊಕ್ಕಿದವನ ಕುಕ್ಕಿ ಕುಕ್ಕಿ ಕುಕ್ಕಿ ಕುಕ್ಕಿ ಜೀವ ತೆಗೆದರೇನು ಗರುವ ಅಳಿವುದೇನು.... ಬಿಕ್ಕಿ ಬಿಕ್ಕಿ ಅತ್ತೆ ಮುಕ್ಕಿ ಮುಕ್ಕಿ ಸತ್ತೆ ಎಷ್ಟು ಬೆಂದರೇನು ಎಷ್ಟು ನೊಂದರೇನು ತಗ್ಗಲಿಲ್ಲ ಅವನು ಬಗ್ಗಲಿಲ್ಲ ಅವನು ತಿದ್ದಿ ತಿದ್ದಿ ತೀಡಿ ಭಾವ ಶುದ್ದಿ ಮಾಡೋ ಗುದ್ದಿ ಗುದ್ದಿ ಬುದ್ಧಿ ಭಾವ ಶುದ್ದಿ ಮಾಡೋ.... ಬೇಡಿಕೊಂಡೆ ಶಿವನ ಹಾಡಿಕೊಂಡೆ ಕವನ *★ಸವಿತಾ ನಾಗಭೂಷಣ

ರಂಗನಾಥ ಕಂಟನಕುಂಟೆ - ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು { ಕಿ. ರಂ. ನಾಗರಾಜ್ }

ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು ಮೇಶ್ಟ್ರು ಕಿರಂ ಎಂಬ ‘ಶಕ್ತಿ’ ನಮ್ಮನ್ನು ಅಗಲಿ ಇಂದಿಗೆ ಹನ್ನೊಂದು ವರ್ಶಗಳು ಕಳೆದಿವೆ. ಅವರು ಇಲ್ಲವಾಗಿ ಕನ್ನಡ ವಿದ್ವತ್ ಲೋಕ ಅನಾಥವಾಯಿತು ಎಂಬುದು ಎಶ್ಟು ನಿಜವೋ ವೈಯಕ್ತಿಕವಾಗಿ ನನಗೆ ವಿಪರೀತ ಅನಾಥ ಭಾವ ಕಾಡಿದೆ. ಇಂದಿಗೂ ಕಾಡುತ್ತಿದೆ. ಅವರು ತೋರಿದ ಸ್ವಾರ್ಥವಿಲ್ಲದ ಕಕ್ಕುಲತೆಯನ್ನು ಮತ್ತೊಬ್ಬರಿಂದ ಪಡೆಯಲಾಗದು. ಅದನ್ನು ಪಡೆಯಲು ಮನಸ್ಸು ಕೂಡ ಒಪ್ಪಿಕೊಳ್ಳದು. ವಿದ್ವತ್ ವಲಯದ ಅಸಂಖ್ಯ ಜನರ ಜೊತೆಗೆ ನಂಟಿದ್ದರೂ ಮೇಶ್ಟ್ರು ಜೊತೆಗಿನ ಆ ನಂಟು ಬೇರೆಯ ಬಗೆಯದು. ಅವರ ಮನದ ಮತ್ತು ಮನೆಯ ಬಾಗಿಲು ಸದಾ ತೆರೆದೇ ಇರುತ್ತಿತ್ತು. ಅದರೊಳಗೆ ಹೊಗಲು ಯಾವುದೇ ಅನುಮತಿ ಬೇಕಿರಲಿಲ್ಲ. ಒಂದಿಶ್ಟು ಜ್ಞಾನಾಸಕ್ತಿ, ವಿಶ್ವಾಸ, ನಂಬಿಕೆ ಮತ್ತು ಅವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ಅವರು ಇದ್ದಂತೆ ಅವರನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೆ ಸಾಕಿತ್ತು. ಎಂತಹ ವಿಶಮ ಪರಿಸ್ಥಿತಿಯಲ್ಲಿಯೂ ಅರಿವಿನ ಕಡಲಿಗೆ ಇಳಿದುಬಿಡುತ್ತಿದ್ದರು. ವಿಶಮ ಸ್ಥಿತಿಯಲ್ಲಿಯೂ ಗಾಢಮೌನದ ಪ್ರಪಾತದಿಂದ ಮೇಲೆದ್ದು ಬಂದು ಅರಿವಿನ ಬೆಳಕಿನಲ್ಲಿ ಹೊಳೆದುಬಿಡುತ್ತಿದ್ದರು. ಅದ್ಯಾವ ಶಕ್ತಿಯೋ ಏನೋ ಮತ್ತೆ ಮತ್ತೆ ಅವರ ಬಳಿ ಕೂರುವಂತೆ ಸೆಳೆಯುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಯಾವ ಪೂರ್ವಾನುಮತಿಯೂ ಇಲ್ಲದೆ ಅವರ ಮನೆಗೆ ಹೋಗುತ್ತಲೇ ಇದ್ದೆ. ಈ ನಡುವೆ ಪಿಎಚ್.ಡಿ ಅಧ್ಯಯನಕ್ಕೆ ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆಯುವ ಹಂಬಲದಿಂದ ಹಲವು ತಾಂತ್ರಿಕ ತೊಡಕುಗಳನ್ನು ಎದುರಿಸಿದ್ದೆ. ಮತ್ತೋರ್ವ ‘ದಿಗ್ಗಜ’ರ ಮೋಟುಕಾಲುಗಳು ತೊಡರಿಕ್ಕಿದ ಕಾರಣ ವರ್ಶಗಳ ಕಾಲ ಕಾದು ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರೂ ಸಂತೋಶದಿಂದ ಒಪ್ಪಿ ಮಾಗದರ್ಶಕರಾಗಿದ್ದರು. ಇದು ಅವರನ್ನು ಮತ್ತೆ ಮತ್ತೆ ಭೇಟಿ ಮಾಡಲು, ಅವರ ಜೊತೆಗೆ ಕಾಲ ಕಳೆಯಲು ಅವಕಾಶವನ್ನು ಒದಗಿಸಿಕೊಟ್ಟಿತ್ತು. ಪಿಎಚ್.ಡಿ ಅಧ್ಯಯನದ ಅನುಭವದ ತೂಕ ಒಂದು ಕಡೆಯಾದರೆ, ಅವರ ಜೊತೆಗೆ ಕಳೆದ ಕಾಲದ ಅನುಭವ ಮತ್ತು ಪಡೆದ ಅರಿವಿನದು ಮತ್ತೊಂದು ತೂಕ. ಅವರು ಪಿಎಚ್.ಡಿ ಮಾರ್ಗದರ್ಶಕರಾಗಿದ್ದರೆಂಬುದೇ ಒಂದು ಪದವಿಗೆ ಸಮವೆನ್ನಿಸಿದೆ. ಅಂತಹ ಪದವಿಯನ್ನು ನೀಡಿ ಹೋಗಿರುವ ಕಿರಂ ಸದಾ ಕಾಡಿಸುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅವರು ಇಲ್ಲವಾದ ಮೊದಲ ದಿನಗಳಲ್ಲಿ ದಿನವೂ ನೆನಪಾಗಿದ್ದಾರೆ. ಕನಸುಗಳಲ್ಲಿಯೂ ಮತ್ತೆ ಮತ್ತೆ ಪ್ರತ್ಯಕ್ಶರಾಗಿದ್ದಾರೆ. ಅದೇನು ಕಾಂತಗುಣವೋ ಏನೋ ಅಂತು ಮೇಶ್ಟ್ರು ಕಾಡಿಸುತ್ತಲೇ ಇದ್ದಾರೆ. ಹೀಗೆ ಕಾಡುವ ಕಿರಂ ಜೊತೆಗೆ ದಶಕಗಳ ಕಾಲ ಒಡನಾಡುವ ಅವಕಾಶ ದೊರೆತದ್ದೇ ಒಂದು ಮಹತ್ವದ ಮತ್ತು ಹೆಮ್ಮೆಯ ಸಂಗತಿಯೆಂದು ಭಾವಿಸಿರುವೆ. ಹೀಗೆ ಒಡನಾಟವಿದ್ದ ಕಿರಂ ಅವರನ್ನು ಯಾವುದೇ ಅನುಮತಿಯಿಲ್ಲದೆ ಭೇಟಿ ಮಾಡಬಹುದಿತ್ತು. ಅವರು ಔಪಚಾರಿಕತೆಗೆ ಫೋನ್ ಮಾಡಿ ಬನ್ನಿ ಎಂದು ಹೇಳುತ್ತಿದ್ದರೂ ಹದಿನೈದು ವರ್ಶಗಳ ಒಡನಾಟದಲ್ಲಿ ಎಂದೂ ಫೋನ್ ಮಾಡಿ ಭೇಟಿಯಾಗಿಲ್ಲ. ಇದರಿಂದ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಎಶ್ಟೋ ಸಾರಿ ಅವರಿಲ್ಲದೆ ಸುಮ್ಮನೆ ಮರಳಿ ಬಂದದ್ದಿದೆ. ಆದರೂ ಅವರನ್ನು ಭೇಟಿಯಾಗುವಾಗ ಎಂದೂ ಫೋನ್ ಮಾಡಿ ಅನುಮತಿ ಪಡೆದು ಭೇಟಿ ಮಾಡಿಲ್ಲ. ಅನುಮತಿಯಿಲ್ಲದೆ ಭೇಟಿ ಮಾಡಿದಾಗ ಅವರೆಂದೂ ವಾಪಸ್ಸು ಕಳಿಸಿಲ್ಲ. ಕೊನೆಯ ಭೇಟಿಯೂ ಹೀಗೆಯೇ ನಡೆದಿತ್ತು. ಆಗಸ್ಟ್ 7, 2010ರಂದು ಕೂಡ ಎಂದಿನಂತೆಯೇ ಭೇಟಿ ಮಾಡಿದ್ದೆ. ಆದರೆ ಈ ಭೇಟಿಗೆ ಒಂದು ಸಂದರ್ಭ ಸೃಶ್ಟಿಯಾಗಿತ್ತು. ಅದೇನೆಂದರೆ ಆ ವರ್ಶ ನ್ಯಾಶನಲ್ ಪದವಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾಗಿತ್ತು. ಅಲ್ಲಿಗೆ ಕಿರಂ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗುತ್ತಿದ್ದರು. ಅಧ್ಯಯನ ಕೇಂದ್ರ ಸ್ವಾಯತ್ತವಾಗಿದ್ದ ಕಾರಣ ಅದರ ಪಠ್ಯಕ್ರಮ ಸಿದ್ದಪಡಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಕಾಲೇಜಿನಲ್ಲಿಯೇ ನಡೆಯುತ್ತಿದ್ದವು. ಎಂ.ಎ. ತರಗತಿಗಳ ಉತ್ತರ ಪತ್ರಿಕೆಗಳಿಗೆ ಎರಡು ಮೌಲ್ಯಮಾಪನಗಳು ನಡೆಯುವ ಕಾರಣ ಬಾಹ್ಯ ಮೌಲ್ಯಮಾಪನಕ್ಕೆ ನನ್ನನ್ನು ಆಹ್ವಾನಿಸಿದ್ದರು. ಕಿರಂ ಅವರೇ ನನ್ನ ಹೆಸರನ್ನು ಸೂಚಿಸಿದ್ದರಂತೆ. ಆ ಹೊತ್ತಿಗೆ ನನ್ನ ಪಿಎಚ್.ಡಿ. ಮುಗಿದು ಅದು ಪುಸ್ತಕರೂಪದಲ್ಲಿ ಪ್ರಕಟವಾಗಿ ಸಾಕಶ್ಟು ಚರ್ಚೆಯಾಗತೊಡಗಿತ್ತು. ಹಾಗಾಗಿ ಭಾಶಾವಿಜ್ಞಾನದ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕಾಲೇಜಿನ ಆಹ್ವಾನದ ಮೇರೆಗೆ ಭಾಗಿಯಾಗಿದ್ದೆ. ಮೌಲ್ಯಮಾಪನದ ಕೆಲಸವು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮುಗಿದಿತ್ತು. ಆ ನಂತರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಚ್.ಎಸ್. ಮಾಧವರಾವ್ ಮತ್ತು ಇತರರ ಜೊತೆಗೆ ಊಟ ಮಾಡಿದೆವು. ಊಟದ ನಡುವೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಗಮಿಸಿ ಭಾಶಾವಿಜ್ಞಾನ ವಿಶಯ ಬೋಧಿಸಲು ಮಾಧವರಾವ್ ಅವರು ಕೇಳಿದ್ದರು. ನಾನು ಬರುವುದಾಗಿ ಒಪ್ಪಿಕೊಂಡಿದ್ದೆ. ಊಟ ಮುಗಿಸಿದಾಗ ಸುಮಾರು ಮೂರು ಗಂಟೆಗಳಾಗಿದ್ದವು. ಕಿರಂ ಮೌಲ್ಯಮಾಪನಕ್ಕೆ ಬಾರದ ಕಾರಣ ಅವರನ್ನು ಭೇಟಿಯಾಗಲು ಬಯಸಿದೆ. ನ್ಯಾಶನಲ್ ಕಾಲೇಜಿನಿಂದ ಅವರ ಆರ್.ವಿ. ರಸ್ತೆಯ ಮನೆ ಕಾಲ್ನಡಿಯ ದೂರವಶ್ಟೇ ಇತ್ತು. ಹಾಗಾಗಿ ಮೌಲ್ಯಮಾಪನ ಮುಗಿಸಿ ನೇರವಾಗಿ ಮೇಶ್ಟ್ರ ಮನೆಯ ಕಡೆಗೆ ನಡೆದುಕೊಂಡೇ ಹೊರಟೆ. ಮನೆ ತಲುಪುವ ಹೊತ್ತಿಗೆ ಸಮಯ ಮೂರುಕಾಲಾಗಿತ್ತು. ಮೇಶ್ಟ್ರು ಒಬ್ಬರೇ ಮನೆಯಲ್ಲಿದ್ದರು. ಹಾಸಿಗೆಯ ಮೇಲೆ ಕೂತಿದ್ದರು. ಆದರೆ ವಿಪರೀತ ದಣಿದಂತೆ ಕಾಣುತ್ತಿದ್ದರು. ಒಂದೇ ಸಮನೇ ಬೆವರುತ್ತಲೂ ಇದ್ದರು. ಸ್ವಲ್ಪ ಹೊತ್ತಾದ ಮೇಲೆ, ‘ಸರ್, ಆರೋಗ್ಯ ಸರಿಯಿಲ್ಲವೇ?’ಎಂದೆ. ಹಾಗೇನಿಲ್ಲ. ಯಾಕೋ ಸ್ವಲ್ಪ ಅನ್‍ಈಸಿ ಕಣ್ಡ್ರೀ ಅಂದರು. ಮತ್ತೆ ಯಾಕೋ ಬೆನ್ನು ಹಿಡಿದಂತೆ ಅನ್ನಿಸುತ್ತಿದೆ ಎಂದರು. ಮತ್ತೆ, ‘ಸರ್ ಊಟವಾಯಿತೇ?’ ಎಂದೇ ಇನ್ನೂ ಇಲ್ಲ ಎಂದರು. ಸರ್, ಅಸಿಡಿಟಿ ಇರಬಹುದು. ಏನನ್ನಾದರೂ ತಿನ್ನಿ ಎಂದೇ. ಮನೆಯಲ್ಲಿ ಆಗ ಅಡಿಗೆ ಇದ್ದಂತೆ ಕಾಣಲಿಲ್ಲ. ರೆಡಿಯಿದ್ದ ಆಪಲ್ ಜೂಸ್ ಅನ್ನು ಫ್ರಿಜ್‍ನಿಂದ ತೆಗೆದರು. ಅಡಿಗೆ ಮನೆಯಿಂದ ಗ್ಲಾಸ್ ತಂದುಕೊಟ್ಟೆ. ಒಂದು ಲೋಟ ಜ್ಯೂಸ್ ಕುಡಿದರು. ಆ ನಂತರ ಕೊಂಚ ರಿಲ್ಯಾಕ್ಸ್ ಆದಂತೆ ಕಂಡರು. ಇದೆಲ್ಲಾ ಸುಮಾರು ಹೊತ್ತು ನಡೆಯಿತು. ಆದರೆ ನಿರಂತರವಾಗಿ ಬೆವರುತ್ತಲೇ ಇದ್ದರು. ನನಗೆ ಇವರ ಆರೋಗ್ಯವೇನೋ ಹದಗೆಟ್ಟಿದೆ ಎಂದು ಅನ್ನಿಸುತ್ತಲೇ ಇತ್ತು. ಆದರೆ ಅವರಿಗೆ ಏನನ್ನೂ ಹೇಳಲಾಗುತ್ತಿರಲಿಲ್ಲ. ಈ ನಡುವೆ ಮೌಲ್ಯಮಾಪನದ ಬಗೆಗೆ ಕೇಳಿದರು. ಎಲ್ಲವನ್ನೂ ವಿವರಿಸಿ ಹೇಳಿದೆ. ನಂತರ ನ್ಯಾಶನಲ್ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಬರಲು ಆಹ್ವಾನಿಸಿರುವುದನ್ನು ಹೇಳಿದೆ. ‘ಒಳ್ಳೆಯದಾಯಿತು ಬಿಡ್ರಿ’ ಎಂದು ಸಂತಸಪಟ್ಟರು. ಅವರು ತೀರಿಕೊಂಡ ನಂತರ ನಾನು ನ್ಯಾಶನಲ್ ಕಾಲೇಜಿನಲ್ಲಿ ಪೂರ್ಣಾವಧಿಗೆ ಕೆಲಸಕ್ಕೆ ಸೇರಿಕೊಂಡೆ. ಅಂದು ಅವರಿಗೆ ಬೆಳಗಿನಿಂದಲೇ ಆರೋಗ್ಯ ಸರಿಯಿರಲಿಲ್ಲ. ಇದನ್ನು ಬೆಳಗ್ಗೆ ಅವರ ಜೊತೆಗಿದ್ದ ಅಪ್ಪು ಖಚಿತಪಡಿಸಿದ್ದಾರೆ. ಅವರು ಒಂದು ಬಗೆಯ ಸಂಕಟ ಮತ್ತು ಅನ್ಯಮನಸ್ಕತೆಯನ್ನು ಅನುಭವಿಸುತ್ತಿದ್ದರಂತೆ. ಬೆಳಗ್ಗೆ ತಿಂಡಿ ತಿನ್ನದೆ ಮಧ್ಯಾಹ್ನ ಒಟ್ಟಿಗೆ ಊಟ ಮಾಡುವುದಾಗಿಯೂ ಅಪ್ಪುಗೆ ತಿಳಿಸಿದ್ದರಂತೆ. ಅವರಿಗೆ ಕೆಲಸವಿದ್ದ ಕಾರಣ ಊಟದ ಸಮಯಕ್ಕೆ ಬರಲು ಸಾಧ್ಯವಾಗಿಲ್ಲವೆಂದು ಅಪ್ಪು ಹೇಳಿದರು. ಹಾಗಾಗಿ ಅಂದು ಒಬ್ಬರೇ ಮನೆಯಲ್ಲಿದ್ದು ತಮ್ಮೊಳಗೆ ನರಳಿದ್ದರೆನ್ನಿಸುತ್ತದೆ. ಸಂಜೆ ಸುಚಿತ್ರ ಸಭಾಂಗಣದಲ್ಲಿ ಬೇಂದ್ರೆಯವರ ಸಾಹಿತ್ಯದ ಕುರಿತು ಉಪನ್ಯಾಸವಿದ್ದ ಕಾರಣ ಸಂಕಟದ ನಡುವೆಯೇ ಅದಕ್ಕೂ ಸಿದ್ದವಾಗುತ್ತಿದ್ದರು. ಐದು ಗಂಟೆಯಾದ ಕಾರಣ ಮನೆಯಿಂದ ಆಟೋದಲ್ಲಿ ಹೊರಟೆವು. ಗಾಂಧಿ ಬಜಾರಿಗೆ ಬಂದು ಅಲ್ಲಿ ಅಸಿಡಿಟಿಗೆ ಮತ್ತು ಇತರೆ ಕೆಲವು ಮಾತ್ರೆಗಳನ್ನು ತೆಗೆದುಕೊಂಡು ತಿಂದರು. ನಂತರ ಅಲ್ಲಿಂದ ನೇರವಾಗಿ ಸುಚಿತ್ರಾಗೆ ತಲುಪಿದೆವು. ಆಗಲೂ ಮೇಶ್ಟ್ರು ದಣಿದೇ ಇದ್ದರು. ವಿಪರೀತ ಬೆವರುತ್ತಿದ್ದರು. ಮೇಶ್ಟ್ರನ್ನು ಸ್ವಾಗತಿಸಲು ವಿಜಯಮ್ಮ ಬಂದರು. ಅವರು ಮೇಶ್ಟ್ರನ್ನು ನೋಡಿ ಕೊಂಚ ಗಲಿಬಿಲಿಗೊಂಡರು. ಮಧ್ಯಾಹ್ನದಿಂದ ನಡೆದ ಎಲ್ಲವನ್ನು ಅವರಿಗೆ ವಿವರಿಸಿದೆ. ಅವರು ಊಟ ಮಾಡದೇ ಇದ್ದದ್ದನ್ನು ತಿಳಿಸಿದೆ. ಕೂಡಲೇ ಇಡ್ಲಿ ತರಿಸಿ ತಿನ್ನಲು ವ್ಯವಸ್ಥೆ ಮಾಡಲಾಯಿತು. ಅವರಿಗೆ ತರಿಸಿದ್ದ ಎರಡು ಇಡ್ಲಿಯಲ್ಲಿ ಒಂದನ್ನು ಮಾತ್ರ ತಿಂದರು. ಮತ್ತೊಂದು ಉಳಿಸಿದರು. ನಂತರ ಕಾಫಿ ಕುಡಿದು ಸಿಗರೇಟು ಸೇದಿದರು. ಆರು ಗಂಟೆಗೆ ಉಪನ್ಯಾಸ ಆರಂಭವಾಯಿತು. ಬೇಂದ್ರೆಯ ಸಾಹಿತ್ಯ ಕುರಿತು ದೀರ್ಘವಾಗಿ ಮಾತನಾಡಿದರು. ‘ಜೋಗಿ’ ಪದ್ಯ ಓದಿ ವಿವರಿಸಿದರು. ಎಂಟುಗಂಟೆಯವರೆಗೂ ಮಾತುಕತೆ ನಡೆಯಿತು. ಮಾತುಕತೆ ಮುಗಿಯುವ ಹೊತ್ತಿಗೆ ಮತ್ತಶ್ಟು ದಣಿದಿದ್ದರು. ಬೆವರುತ್ತಲೇ ಇದ್ದರು. ಹಾಗಾಗಿ ಅವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಬೇಗನೆ ಮನೆಗೆ ಕರೆದುಕೊಂಡು ಬಂದೆವು. ನಾನು ಮತ್ತು ಅಪ್ಪು ಜೊತೆಯಲ್ಲಿ ಬಂದೆವು. ನಂತರ ವಾಸುದೇವಮೂರ್ತಿ ಮತ್ತು ಪ್ರದೀಪ್ ಮಾಲ್ಗುಡಿ ಬಂದರು. ಕೆಲ ಸಮಯದ ನಂತರ ವಾಸುದೇವ್ ಮತ್ತು ಪ್ರದೀಪ್ ಅವರನ್ನು ಮನೆಗೆ ಹೋಗಲು ಮೇಶ್ಟ್ರು ತಿಳಿಸಿದರು. ನಾವಿಬ್ಬರೂ ಅಲ್ಲಿಯೇ ಇದ್ದೆವು. ಅವರನ್ನು ಆಸ್ಪತ್ರೆಗೆ ಹೋಗಲು ಒಪ್ಪಿಸುತ್ತಿದ್ದೆವು. ಮನೆಗೆ ಬಂದ ನಂತರ ಅವರಲ್ಲಿ ಮತ್ತಶ್ಟು ಬಳಲಿಕೆ ಚಡಪಡಿಕೆ ಇತ್ತು. ಇದನ್ನು ಗಮನಿಸಿ ಸರ್, ಆರೋಗ್ಯದಲ್ಲೇನೋ ವ್ಯತ್ಯಾಸವಾಗಿದೆ. ಡಾಕ್ಟರನ್ನು ಭೇಟಿ ಮಾಡೋಣವೆಂದೆ. ಅವರಿಗೂ ಅದೇನನ್ನಿಸಿತೋ ಏನೋ? ಆಗಲಿ ನಡೀರಿ ಎಂದರು. ಆಟೋ ಹತ್ತಿ ಗಾಂಧಿ ಬಜಾರಿಗೆ ಬಂದೆವು. ಅಲ್ಲಿ ಅವರಿಗೆ ಯಾರೋ ಪರಿಚಯದ ವೈದ್ಯರು ಇದ್ದರಂತೆ. ಆದರೆ ರಾತ್ರಿ ಎಂಟೂವರೆ ಹೊತ್ತಿಗೆ ಪರಿಚಯದ ಕ್ಲಿನಿಕ್ ಮುಚ್ಚಿತ್ತು. ಅಲ್ಲಿಂದ ನಿಧಾನವಾಗಿ ಗಾಂಧಿ ಬಜಾರ್ ಸರ್ಕಲ್ ಬಂದೆವು. ಅಲ್ಲಿ ದಿಢೀರ್ ಕುಸಿದು ಬಿದ್ದರು! ನಾವು ಗಾಬರಿಗೊಂಡೆವು. ಕೂಡಲೇ ಪಕ್ಕದಲ್ಲಿದ್ದ ಆಟೋ ಒಳಗೆ ಮೇಶ್ಟ್ರನ್ನು ಎತ್ತಿಹಾಕಿಕೊಂಡು ಸಮೀಪದಲ್ಲಿದ್ದ ಶೇಖರ್ ಆಸ್ಪತ್ರೆಗೆ ಹೋದೆವು. ಅದೇನನ್ನಿಸಿತ್ತೋ ಮೇಶ್ಟ್ರು ಹೇಳಿದರೂ ಕೂಡ ವಾಸುದೇವ್ ಹೋಗಿರಲಿಲ್ಲ. ನಮ್ಮನ್ನೇ ಹಿಂಬಾಲಿಸಿ ಬಂದಿದ್ದರು. ಅವರೂ ಸೇರಿದಂತೆ ಆಸ್ಪತ್ರೆಗೆ ಹೋದೆವು. ಅಲ್ಲಿನ ವೈದ್ಯರು ಹೃದಯಾಘಾತ ಆಗಿರುವುದನ್ನು ಖಚಿತ ಪಡಿಸಿದರು. ಅಲ್ಲಿಯವರೆಗೂ ಪ್ರಜ್ಞಾಹೀನರಾಗಿದ್ದ ಮೇಶ್ಟ್ರರು ದಿಡೀರನೇ ಮೇಲೆದ್ದು ಕೂತರು. ಮೈಕೊಡವಿಕೊಂಡರು. ‘ನನ್ನನ್ನು ಇಲ್ಲಿಗ್ಯಾಕೆ ಕರೆತಂದಿರಿ’ ಎಂದರು. ನಾವು ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಮೌನವಾಗಿದ್ದೆವು. ನಂತರ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದೆವು. ಅದಕ್ಕೆ ನನಗೇನಾಗಿದೆ? ಡಾಕ್ಟ್ರ್ ಸುಮ್ಮನೇ ಏನೇನೋ ಹೇಳುತ್ತಾರೆ ಎಂದರು. ನಾವು ಮತ್ತೂ ಒತ್ತಾಯಿಸಿದಾಗ ಮೇಶ್ಟ್ರು ಕೊಂಚ ಯೋಚಿಸಿ ಇಲ್ಲಿ ಬೇಡ. ಸೌತ್ ಎಂಡ್ ಸರ್ಕಲ್‍ನಲ್ಲಿರುವ ಬೆಂಗಳೂರು ಆಸ್ಪತ್ರೆಗೆ ದಾಖಲಾಗುವೆನೆಂದರು. ಆಗಲಿ ಎಂದು ಎಲ್ಲರೂ ಒಪ್ಪಿದೆವು. ನಂತರ ಆಚೆಗೆ ಬಂದು, ನನಗೆ ಏನೂ ಆಗಿಲ್ರಿ. ಸ್ವಲ್ಪ ಅನ್‍ಈಸಿ ಆಗಿದೆ ಅಶ್ಟೇ ಅಂದರು. ಅವರ ಜೊತೆಗೆ ಹೆಚ್ಚು ಮಾತನಾಡುವ ಹಾಗೆ ಇರಲಿಲ್ಲ. ಅವರನ್ನು ಹೇಗೋ ಒಪ್ಪಿಸಿ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಲೇಬೇಕೆಂದು ಡಾಕ್ಟ್ರ್ ಹೇಳಿದ್ದಾರೆ ಎಂದೆವು. ‘ನಡೀರಿ ಹೊರಡೋಣ’ ಎಂದು ಹೇಳಿ ಹೊರಡಿಸಿಕೊಂಡು ಶೇಖರ್ ಆಸ್ಪತ್ರೆಯಿಂದ ಹೊರಟೆವು. ಆಟೋದಲ್ಲಿ ಬರುವಾಗ ಮತ್ತೆ ಮನೆಯ ಸಮೀಪದಲ್ಲಿ ಹಾದುಹೋಗುತ್ತಿದ್ದ ಕಾರಣ ‘ಮನೆಗೆ ಹೋಗಿ ನಂತರ ಆಸ್ಪತ್ರೆಗೆ ಹೋಗೋಣ’ ಎಂದರು. ಮನೆಗೆ ಹೋಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದೆಂದು ಭಾವಿಸಿ ಮನೆಗೆ ತೆರೆಳಿದೆವು. ಮನೆಯನ್ನು ಹೊಕ್ಕವರೇ ‘ಏನ್ ಪುಟ್ದೆ, ಒಂಚೂರು ಅಕ್ಕಿಯಿಟ್ಟು ಅನ್ನ ಮಾಡಾಕಾಗಲ್ವ? ಎಂದರು. ಬಹುಶ ಹಸಿವು ಹೆಚ್ಚಾದಂತೆ ಅನ್ನಿಸುತ್ತದೆ. ಬೆಳಗ್ಗೆಯಿಂದಲೂ ಸರಿಯಾಗಿ ಏನನ್ನೂ ತಿಂದಿರಲಿಲ್ಲ. ಸುಚಿತ್ರಾದಲ್ಲಿ ಒಂದು ಇಡ್ಲಿ ತಿಂದದ್ದು ಬಿಟ್ಟರೆ ಮತ್ತೇನನ್ನೂ ತಿಂದಿರಲಿಲ್ಲ. ಮಧ್ಯಾಹ್ನ ಕುಡಿದಿದ್ದ ಆಪಲ್ ಜ್ಯೂಸ್ ಕೊಡಿ ಎಂದು ಕೇಳಿ ಒಂದು ಗುಟುಕು ಕುಡಿದರು. ನಂತರ ನೀರು ತರಲು ಹೇಳಿ ವಾಶ್ ರೂಮಿಗೆ ಹೋದರು. ಅಡಿಗೆ ಮನೆಗೆ ಹೋಗಿ ನೀರು ತರಲು ಹೋದೆ. ಮರಳಿ ಹೊತ್ತಿಗೆ ವಾಶ್ ರೂಮಿನಿಂದ ಬರುತ್ತಿದ್ದವರು ಅಲ್ಲಿಯೇ ಕುಸಿದು ಬಿದ್ದರು. ಕುಡಿದ ಆಪಲ್ ಜ್ಯೂಸ್ ವಾಂತಿಯಾಯಿತು. ಎರಡನೇ ಬಾರಿಗೆ ಕುಸಿದು ಬಿದ್ದರು. ತಂದ ನೀರನ್ನೂ ಕುಡಿಯಲಿಲ್ಲ. ಇದನ್ನು ಕಂಡ ಕೊನೆಯ ಮಗಳು ಚಂದನ ಜೋರಾಗಿ ಕೂಗಿಕೊಂಡಳು. ನಮಗೆ ಇನ್ನಶ್ಟು ಗಾಬರಿಯಾಗಿ ಕೂಡಲೇ ಆಟೋ ತಂದು ಮೇಶ್ಟ್ರನ್ನು ಎತ್ತಿಹಾಕಿಕೊಂಡು ಬೆಂಗಳೂರು ಆಸ್ಪತ್ರೆಗೆ ಕಡೆ ತೆರಳಿದೆವು. ಸ್ವಾದೀನ ಕಳೆದುಕೊಂಡು ಕುಸಿದು ಬಿದ್ದವರನ್ನು ಎತ್ತುವುದು ಅದೆಶ್ಟು ಕಶ್ಟದೆಂದೂ ಆಗ ಅರ್ಥವಾಯಿತು. ಅಪ್ಪು ಜಾಧವ್ ಮತ್ತು ನಾನು ಅವರನ್ನು ಎತ್ತಿಕೊಂಡು ಆಟೋದಲ್ಲಿ ಮಲಗಿಸಿಕೊಂಡೆವು. ಅವರು ನಮ್ಮ ತೊಡೆಯ ಮೇಲೆ ಮಗುವಿನಂತೆ ಮಲಗಿದ್ದರು. ದೇಹ ತಣ್ಣಗಾಗುತ್ತಲೇ ಇತ್ತು. ಮಂಕುಬಡಿದವರಂತಿದ್ದ ನಾವಿಬ್ಬರು ಆಸ್ಪತ್ರೆ ಬಳಿ ಇಳಿದೆವು. ತುರ್ತುಘಟಕದ ಸಿಬ್ಬಂದಿ ಸ್ಟ್ರೆಚರ್ ತಂದರು. ಮೇಶ್ಟ್ರನ್ನು ಇಳಿಸಿ ಸ್ಟ್ರೆಚರ್ ಮೇಲೆ ಮಲಗಿಸಿದೆವು. ಒಳಗೆ ಹೋದ ಕೂಡಲೇ ಪರೀಕ್ಶಿಸಿದ ವೈದ್ಯರು ‘ಹಿ ಇಸ್ ನೋ ಮೋರ್’ ಎಂದರು! ನಮ್ಮ ಬಳಿ ಮಾತು ಉಳಿದಿರಲಿಲ್ಲ. ಆ ಹೊತ್ತಿಗೆ ನಾನು ಗರಬಡಿದಂತಾಗಿದ್ದೆ. ಮಧ್ಯಾಹ್ನ ಮೂರುಕಾಲಿನಿಂದ ಪ್ರತಿಕ್ಶಣವೂ ಮೇಶ್ಟ್ರ ದೇಹದ ಚಲನೆಯದೇ ಭಯವಿತ್ತು. ಎಲ್ಲವೂ ಕೈಮೀರಿ ನಡೆಯುತ್ತಲೇ ಇತ್ತು. ಆದರೆ ನಮ್ಮ ಕಣ್ಣಳತೆಯಲ್ಲಿಯೇ ಸಾವು ಸುಳಿದಾಡುತ್ತಿತ್ತೆಂದು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಇಲ್ಲಿ ಯೋಚಿಸುವುದಕ್ಕೂ ಅಳುವುದಕ್ಕೂ ಪುರಸೊತ್ತಿರಲಿಲ್ಲ. ಮಾರನೆಯ ದಿನ ಅವರ ಶವಸಂಸ್ಕಾರವಾದ ನಂತರ ರಾತ್ರಿ ಮನೆಗೆ ಬಂದ ಮೇಲೆ ಕಣ್ಣಳತೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಅರಿವಿಲ್ಲದೆಯೇ ಕಣ್ಣೀರು ಕೋಡಿಗರಿಯುತ್ತಿತ್ತು. ಆ ನಂತರವೇ ಮನಕ್ಕಿಡಿದಿದ್ದ ಮಂಕುತನ ಇಳಿದಿದ್ದು. ಇಂದು ಯಾಕೋ ಎಲ್ಲ ನೆನಪಾಯಿತು. ಇದನ್ನು ಬರೆಯಬೇಕೆನ್ನಿಸಿತು. ಇಂದು ಬರೆದೆ. ನಡುವೆ ಅಪ್ಪುಗೆ ಫೋನ್ ಮಾಡಿದೆ. ಎರಡು ಗಂಟೆಗಳ ಕಾಲ ಮಾತಾಡಿದೆವು. ಅಸಂಖ್ಯ ವಿಚಾರಗಳು ನಡುವೆ ಹಾದುಹೋದವು. ಮಾತಿನ ಮಧ್ಯೆ ಅಪ್ಪು ಕಣ್ಣುಗಳು ಒದ್ದೆಯಾಗುತ್ತಲೇ ಇದ್ದವು. ಅವರು ದಶಕದ ನಂತರವೂ ಇಂದು ದುಖಿಃತರಾದರು. ವಾರದಿಂದಲೂ ಕಿರಂ ಧ್ಯಾನದಲ್ಲಿಯೇ ಇರುವೆ. ಅವರು ಕಾಡುತ್ತಲೇ ಇದ್ದಾರೆ. ಇದು ಹೀಗೆಯೇ ಇರುತ್ತದೆ. ಯಾಕೆಂದರೆ ಅವರು ತಮಗೆ ಸಮನಾಗಿ ನನ್ನನ್ನು ಭಾವಿಸಿದ್ದು ಅಂತಹ ಪ್ರೀತಿ ತೋರಿಸಿದ್ದನ್ನು ಮರೆಯಲು ಹೇಗೆ ಸಾಧ್ಯ? ಹೀಗಿದೆ. ಮೇಶ್ಟ್ರ ಜೊತೆಗಿನ ನನ್ನ ಕೊನೆಯ ಭೇಟಿ. ಅವರಿಲ್ಲ. ಅವರ ವಿಚಾರ ನನ್ನೊಳಗಿವೆ. ಅವರ ವ್ಯಕ್ತಿತ್ವ ಕೈಹಿಡಿದು ಮುನ್ನಡೆಸುತ್ತಿದೆ. ಇದಲ್ಲವೇ ಅವರು ಅಸಂಖ್ಯರಲ್ಲಿ ಉಳಿಸಿಹೋಗಿರುವ ಬೆಳಕು? -ರಂಗನಾಥ ಕಂಟನಕುಂಟೆ

Tuesday, August 3, 2021

ಲಲಿತಾ ಸಿದ್ದಬಸವಯ್ಯ - " ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ " { ಭಾವನಾ ಹಿರೇಮಠ }Lalta Siddabasavayya / Bhavana Hiremath /

ಪ್ರಿಯ ಭುವನಾ, ಪ್ರೀತಿಯಿಂದ ಸಂಕಲನ ಕಳುಹಿಸಿದ್ದೀರಿ. ಧನ್ಯವಾದಗಳು. ನೀವು ಒಬ್ಬ ಭರವಸೆಯ ಕವಿ ಎಂಬುದನ್ನು ಎರಡನೆಯ ಸಲ ಸಾಬೀತು ಮಾಡಿದ್ದೀರಿ. ವಿಶೇಷವೆಂದರೆ ಮೊದಲ "ಟ್ರಯಲ್......." ಸಂಕಲನದಿಂದ ಈ "ಮತ್ತೆ ಮತ್ತೆ ಮರ್ತ್ಯಕ್ಕಿಳಿಯುತ್ತೇನೆ" ಸಂಕಲನದವರೆಗೆ ನೀವೇನು ನಡೆದಿರೋ ಆ ನಡಿಗೆ ಫಲ ಕೊಟ್ಟಿದೆ. ಉದಾಹರಣೆಗೆ, ಎರಡನೆಯದರಲ್ಲಿ ನೀವು ಮತ್ತಷ್ಟು ಸ್ಪಷ್ಟರಾಗಿದ್ದೀರಿ ಮತ್ತು ಕವಿತೆಯೊಂದನ್ನು ನಿಷ್ಚಿತ ವಸ್ತುವಿನ ಪ್ರತಿಪಾದನೆಗೆ ಹೇಗೆ ಹೇಗೆ ಕವಿ ಬಾಗಿಸಬಹುದೋ ಆ ಎಲ್ಲ ಮಾರ್ಗಗಳಲ್ಲೂ ಪ್ರಯತ್ನಿಸಿದ್ದೀರಿ. ವೈಯಕ್ತಿಕ ಅನುಭವಗಳು ಕವಿತೆಯಾಗುವುದು ಕವಿಯ ಸ್ವಗತಗಳಾಗಿ ಬಿಟ್ಟರೆ ಓದುಗ ಕಕ್ಕಾಬಿಕ್ಕಿಯಾಗುವನು. ಮೊದಲ ಸಂಕಲನದಲ್ಲಿ ಆ ತೊಡಕು ಹೆಚ್ಚಾಗಿತ್ತು. ಈ ಸಂಕಲನ ಆ ಸ್ವಗತಗಳನ್ನು ಮೇಲುಹಂತಕ್ಕೇರಿಸಿ ಕವಿತೆ ಓದುಗ ಸ್ನೇಹಿಯಾಗುವಂತೆ ಮಾಡಿದೆ. ಅವು ಇನ್ನೂ ಸಂಪೂರ್ಣವಾಗಿ ಸ್ವಗತಗಳಿಂದ ಮೇಲೇರುವ ಮಾರ್ಗವನ್ನು ನೀವು ಕಂಡುಹಿಡಿದುಕೊಳ್ಳಬಲ್ಲರಿ. ನೀವು ಸಂಭಾಷಣೆ ನಡೆಸುವುದು ನಿಮ್ಮೊಂದಿಗೇ, ಲೋಕದೊಂದಿಗಲ್ಲ. ಕವಿಗಳು ಎರಡು ಬಗೆ, ತಮ್ಮೊಂದಿಗೇ ಮಾತನಾಡಿಕೊಳ್ಳುವ ಅಂತರ್ಮುಖದವರು.ಲೋಕದೊಂದಿಗೆ ನೇರ ಸಂವಾದಕ್ಕೆ ಇಳಿಯುವ ಬಹಿರ್ಮುಖದವರು. ನೀವು ಮೊದಲ ಪೈಕಿ. ಈ ಎರಡೂ ಬಗೆಗೆ ಕನ್ನಡದಲ್ಲಿ ಅತೀ ಹಳೆಯ ಉದಾಹರಣೆಗಳಾಗಿ ಪಂಪ ಮತ್ತು ನಾರಣಪ್ಪನನ್ನು ಕೊಡಬಹುದೇನೋ! ಪಂಪ ಜನಕ್ಕೊಪ್ಪಿಸುವುದಕ್ಕಿಂತ ತನ್ನ ಒಳ ಒಪ್ಪಿಗೆಗೆ ಮಹತ್ವ ಕೊಡುವವನು. ನಾರಣಪ್ಪ ಸಿಕ್ಕ ಅವಕಾಶದಲ್ಲೆಲ್ಲ ಲೋಕವನ್ನು ಒಪ್ಪಿಸಲು ತವಕಿಸುವವನು. ಅದಕ್ಕೇ ಅವನಿಗೆ ಹೆಚ್ಚು ಮಾತು ಬೇಕು. ಒಂದೇ ವಿಷಯವನ್ನು ಪರಿಪರಿಯಾಗಿ ವರ್ಣಿಸಬೇಕು. ನನ್ನಂಥವರು ಕಾವ್ಯಮಾರ್ಗದಲ್ಲಿ ನಾರಣಪ್ಪನ ಉಪಾಸಕರು. ನೀವು, ಜ.ನಾ.ತೇಜಶ್ರೀ ಮುಂತಾದವರು ಪಂಪ ಮಾರ್ಗಸ್ಥರು. ಹಾಗಾಗಿ ಪದಗಳ ಖರ್ಚು ನಿಮಗೆ ಕಡಿಮೆ. ಎರಡೂ ಮಾರ್ಗವನ್ನು ಕನ್ನಡದಲ್ಲಿ ನಾವು ಕಾಣಬಹುದು. ಒಬ್ಬ ಕವಿಯೇ ಎರಡೂ ಮಾರ್ಗದಲ್ಲಿ ನಡೆಯುವ ಸಾಧ್ಯತೆಯನ್ನೂ ನಾನು ಕಂಡಿದ್ದೇನೆ. ಈ ಮೂರು ಬಗೆಯ ಉದಾಹರಣೆಗೆ ಎಷ್ಟೊಂದು ಹೊಸಬರ ಹೆಸರುಗಳೇ ಮನದಲ್ಲಿ ಬರುತಲಿವೆ. ನಿಮ್ಮ ಭಾಷೆ ಈ ಸಂಕಲನದಲ್ಲಿ ಐನೋರ ಮನೆಯ ಹುಡುಗಿಯೊಬ್ಬಳು ಅಪ್ರಯತ್ನವಾಗಿ ಕೇಳುವ ಪರಂಪರೆಯ ನುಡಿಗಟ್ಟುಗಳನ್ನು ಚೆನ್ನಾಗಿ ಬಳಸಿಕೊಂಡಿದೆ. ಬಹುಶಃ ಕೊಂಚ ನಿಗವಿಟ್ಟು ಬರೆದರೆ ಆಧುನಿಕ ವಚನಗಳನ್ನೋ ತತ್ವಪದಗಳನ್ನೋ ನೀವು ಸಮರ್ಥವಾಗಿ ಬರೆಯಬಲ್ಲಿರಿ. ಇದಕ್ಕೆ ತದ್ವಿರುದ್ಧವಾಗಿ ಮುಲಾಜಿಲ್ಲದೆ ಇಂಗ್ಲಿಷ್ ನುಡಿಗಟ್ಟನ್ನು ಬಳಸಿ ಕನ್ನಡದ ತಂತಿಯಲ್ಲಿ ಇಂಗ್ಲಿಷ್ ಸುತ್ತುವ ಅಕ್ಕಸಾಲೆಯ ಸೂಕ್ಷ್ಮ ಕೆಲಸವನ್ನೂ ಸಮರ್ಪಕವಾಗಿ ಮಾಡಿದ್ದೀರಿ. ಇಷ್ಟಾದರೂ ನಿಮ್ಮ ಪ್ರಾದೇಶಿಕ ಮುದ್ರೆಹೊತ್ತ ಭಾಷೆಯನ್ನು ಬಳಸುವುದಿಲ್ಲವೆಂಬ ನನ್ನ ಹಳೆಯ ಆಕ್ಷೇಪವಿದ್ದೇ ಇದೆ. ಈ ಸಂಕಲನದ ಮೂಲಸ್ರೋತ ನನಗನಿಸಿದ ಹಾಗೆ ವಿಷಾದ ಮತ್ತು ವಿಷಾದ ಲೇಪಿತ ವ್ಯಂಗ್ಯ.... ಎಲ್ಲ ಕವನಗಳನ್ನು ಅದು ಒಂದಿಲ್ಲೊಂದು ಬಗೆಯಾಗಿ ನೆತ್ತಿಯನ್ನಾಕ್ರಮಿಸಿದೆ. ಸಂಕಲನದ ಬಹುತೇಕ ಕವನಗಳು ನನಗಿಷ್ಟವಾದವು. ಹೆಸರಿಸ ಹೋದರೆ ಅದೇ ಯಾದಿಯಾಗುತ್ತದೆ. ಕಾವ್ಯ ನಿಮಗೊಲಿದಿದೆ. ನಿಮ್ಮ ಮುಂದಿನ ನಡಿಗೆಗೆ ಶುಭಹಾರೈಕೆಗಳು. ಲಲಿತಾ ಸಿದ್ಧಬಸವಯ್ಯ ಜುಲೈ 31 2021, ಬೆಂಗಳೂರು. 8 Comments ವೀರೂ ವಸಂತ ಅಭಿನಂದನೆಗಳು