Blog Sakheegeetha publishes Pro. Muraleedhara Upadhya Hiriadka's book reviews , Vedios and gives links to best articlesand Vedios on Kannada and Indian Literature
Sunday, August 8, 2021
ರಂಗನಾಥ ಕಂಟನಕುಂಟೆ - ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು { ಕಿ. ರಂ. ನಾಗರಾಜ್ }
ಕಣ್ಣಳತೆಯಲ್ಲಿ ಸುಳಿದಾಡುತ್ತಿದ್ದ ಸಾವು
ಮೇಶ್ಟ್ರು ಕಿರಂ ಎಂಬ ‘ಶಕ್ತಿ’ ನಮ್ಮನ್ನು ಅಗಲಿ ಇಂದಿಗೆ ಹನ್ನೊಂದು ವರ್ಶಗಳು ಕಳೆದಿವೆ. ಅವರು ಇಲ್ಲವಾಗಿ ಕನ್ನಡ ವಿದ್ವತ್ ಲೋಕ ಅನಾಥವಾಯಿತು ಎಂಬುದು ಎಶ್ಟು ನಿಜವೋ ವೈಯಕ್ತಿಕವಾಗಿ ನನಗೆ ವಿಪರೀತ ಅನಾಥ ಭಾವ ಕಾಡಿದೆ. ಇಂದಿಗೂ ಕಾಡುತ್ತಿದೆ. ಅವರು ತೋರಿದ ಸ್ವಾರ್ಥವಿಲ್ಲದ ಕಕ್ಕುಲತೆಯನ್ನು ಮತ್ತೊಬ್ಬರಿಂದ ಪಡೆಯಲಾಗದು. ಅದನ್ನು ಪಡೆಯಲು ಮನಸ್ಸು ಕೂಡ ಒಪ್ಪಿಕೊಳ್ಳದು.
ವಿದ್ವತ್ ವಲಯದ ಅಸಂಖ್ಯ ಜನರ ಜೊತೆಗೆ ನಂಟಿದ್ದರೂ ಮೇಶ್ಟ್ರು ಜೊತೆಗಿನ ಆ ನಂಟು ಬೇರೆಯ ಬಗೆಯದು. ಅವರ ಮನದ ಮತ್ತು ಮನೆಯ ಬಾಗಿಲು ಸದಾ ತೆರೆದೇ ಇರುತ್ತಿತ್ತು. ಅದರೊಳಗೆ ಹೊಗಲು ಯಾವುದೇ ಅನುಮತಿ ಬೇಕಿರಲಿಲ್ಲ. ಒಂದಿಶ್ಟು ಜ್ಞಾನಾಸಕ್ತಿ, ವಿಶ್ವಾಸ, ನಂಬಿಕೆ ಮತ್ತು ಅವರ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ಅವರು ಇದ್ದಂತೆ ಅವರನ್ನು ಒಪ್ಪಿಕೊಳ್ಳುವ ಮನಸ್ಸಿದ್ದರೆ ಸಾಕಿತ್ತು. ಎಂತಹ ವಿಶಮ ಪರಿಸ್ಥಿತಿಯಲ್ಲಿಯೂ ಅರಿವಿನ ಕಡಲಿಗೆ ಇಳಿದುಬಿಡುತ್ತಿದ್ದರು. ವಿಶಮ ಸ್ಥಿತಿಯಲ್ಲಿಯೂ ಗಾಢಮೌನದ ಪ್ರಪಾತದಿಂದ ಮೇಲೆದ್ದು ಬಂದು ಅರಿವಿನ ಬೆಳಕಿನಲ್ಲಿ ಹೊಳೆದುಬಿಡುತ್ತಿದ್ದರು. ಅದ್ಯಾವ ಶಕ್ತಿಯೋ ಏನೋ ಮತ್ತೆ ಮತ್ತೆ ಅವರ ಬಳಿ ಕೂರುವಂತೆ ಸೆಳೆಯುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಯಾವ ಪೂರ್ವಾನುಮತಿಯೂ ಇಲ್ಲದೆ ಅವರ ಮನೆಗೆ ಹೋಗುತ್ತಲೇ ಇದ್ದೆ.
ಈ ನಡುವೆ ಪಿಎಚ್.ಡಿ ಅಧ್ಯಯನಕ್ಕೆ ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆಯುವ ಹಂಬಲದಿಂದ ಹಲವು ತಾಂತ್ರಿಕ ತೊಡಕುಗಳನ್ನು ಎದುರಿಸಿದ್ದೆ. ಮತ್ತೋರ್ವ ‘ದಿಗ್ಗಜ’ರ ಮೋಟುಕಾಲುಗಳು ತೊಡರಿಕ್ಕಿದ ಕಾರಣ ವರ್ಶಗಳ ಕಾಲ ಕಾದು ಅವರನ್ನೇ ಮಾರ್ಗದರ್ಶಕರನ್ನಾಗಿ ಪಡೆದಿದ್ದೆ. ಅವರೂ ಸಂತೋಶದಿಂದ ಒಪ್ಪಿ ಮಾಗದರ್ಶಕರಾಗಿದ್ದರು. ಇದು ಅವರನ್ನು ಮತ್ತೆ ಮತ್ತೆ ಭೇಟಿ ಮಾಡಲು, ಅವರ ಜೊತೆಗೆ ಕಾಲ ಕಳೆಯಲು ಅವಕಾಶವನ್ನು ಒದಗಿಸಿಕೊಟ್ಟಿತ್ತು. ಪಿಎಚ್.ಡಿ ಅಧ್ಯಯನದ ಅನುಭವದ ತೂಕ ಒಂದು ಕಡೆಯಾದರೆ, ಅವರ ಜೊತೆಗೆ ಕಳೆದ ಕಾಲದ ಅನುಭವ ಮತ್ತು ಪಡೆದ ಅರಿವಿನದು ಮತ್ತೊಂದು ತೂಕ. ಅವರು ಪಿಎಚ್.ಡಿ ಮಾರ್ಗದರ್ಶಕರಾಗಿದ್ದರೆಂಬುದೇ ಒಂದು ಪದವಿಗೆ ಸಮವೆನ್ನಿಸಿದೆ.
ಅಂತಹ ಪದವಿಯನ್ನು ನೀಡಿ ಹೋಗಿರುವ ಕಿರಂ ಸದಾ ಕಾಡಿಸುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅವರು ಇಲ್ಲವಾದ ಮೊದಲ ದಿನಗಳಲ್ಲಿ ದಿನವೂ ನೆನಪಾಗಿದ್ದಾರೆ. ಕನಸುಗಳಲ್ಲಿಯೂ ಮತ್ತೆ ಮತ್ತೆ ಪ್ರತ್ಯಕ್ಶರಾಗಿದ್ದಾರೆ. ಅದೇನು ಕಾಂತಗುಣವೋ ಏನೋ ಅಂತು ಮೇಶ್ಟ್ರು ಕಾಡಿಸುತ್ತಲೇ ಇದ್ದಾರೆ. ಹೀಗೆ ಕಾಡುವ ಕಿರಂ ಜೊತೆಗೆ ದಶಕಗಳ ಕಾಲ ಒಡನಾಡುವ ಅವಕಾಶ ದೊರೆತದ್ದೇ ಒಂದು ಮಹತ್ವದ ಮತ್ತು ಹೆಮ್ಮೆಯ ಸಂಗತಿಯೆಂದು ಭಾವಿಸಿರುವೆ.
ಹೀಗೆ ಒಡನಾಟವಿದ್ದ ಕಿರಂ ಅವರನ್ನು ಯಾವುದೇ ಅನುಮತಿಯಿಲ್ಲದೆ ಭೇಟಿ ಮಾಡಬಹುದಿತ್ತು. ಅವರು ಔಪಚಾರಿಕತೆಗೆ ಫೋನ್ ಮಾಡಿ ಬನ್ನಿ ಎಂದು ಹೇಳುತ್ತಿದ್ದರೂ ಹದಿನೈದು ವರ್ಶಗಳ ಒಡನಾಟದಲ್ಲಿ ಎಂದೂ ಫೋನ್ ಮಾಡಿ ಭೇಟಿಯಾಗಿಲ್ಲ. ಇದರಿಂದ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಎಶ್ಟೋ ಸಾರಿ ಅವರಿಲ್ಲದೆ ಸುಮ್ಮನೆ ಮರಳಿ ಬಂದದ್ದಿದೆ. ಆದರೂ ಅವರನ್ನು ಭೇಟಿಯಾಗುವಾಗ ಎಂದೂ ಫೋನ್ ಮಾಡಿ ಅನುಮತಿ ಪಡೆದು ಭೇಟಿ ಮಾಡಿಲ್ಲ. ಅನುಮತಿಯಿಲ್ಲದೆ ಭೇಟಿ ಮಾಡಿದಾಗ ಅವರೆಂದೂ ವಾಪಸ್ಸು ಕಳಿಸಿಲ್ಲ. ಕೊನೆಯ ಭೇಟಿಯೂ ಹೀಗೆಯೇ ನಡೆದಿತ್ತು.
ಆಗಸ್ಟ್ 7, 2010ರಂದು ಕೂಡ ಎಂದಿನಂತೆಯೇ ಭೇಟಿ ಮಾಡಿದ್ದೆ.
ಆದರೆ ಈ ಭೇಟಿಗೆ ಒಂದು ಸಂದರ್ಭ ಸೃಶ್ಟಿಯಾಗಿತ್ತು. ಅದೇನೆಂದರೆ ಆ ವರ್ಶ ನ್ಯಾಶನಲ್ ಪದವಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾಗಿತ್ತು. ಅಲ್ಲಿಗೆ ಕಿರಂ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗುತ್ತಿದ್ದರು. ಅಧ್ಯಯನ ಕೇಂದ್ರ ಸ್ವಾಯತ್ತವಾಗಿದ್ದ ಕಾರಣ ಅದರ ಪಠ್ಯಕ್ರಮ ಸಿದ್ದಪಡಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಕಾಲೇಜಿನಲ್ಲಿಯೇ ನಡೆಯುತ್ತಿದ್ದವು. ಎಂ.ಎ. ತರಗತಿಗಳ ಉತ್ತರ ಪತ್ರಿಕೆಗಳಿಗೆ ಎರಡು ಮೌಲ್ಯಮಾಪನಗಳು ನಡೆಯುವ ಕಾರಣ ಬಾಹ್ಯ ಮೌಲ್ಯಮಾಪನಕ್ಕೆ ನನ್ನನ್ನು ಆಹ್ವಾನಿಸಿದ್ದರು. ಕಿರಂ ಅವರೇ ನನ್ನ ಹೆಸರನ್ನು ಸೂಚಿಸಿದ್ದರಂತೆ. ಆ ಹೊತ್ತಿಗೆ ನನ್ನ ಪಿಎಚ್.ಡಿ. ಮುಗಿದು ಅದು ಪುಸ್ತಕರೂಪದಲ್ಲಿ ಪ್ರಕಟವಾಗಿ ಸಾಕಶ್ಟು ಚರ್ಚೆಯಾಗತೊಡಗಿತ್ತು. ಹಾಗಾಗಿ ಭಾಶಾವಿಜ್ಞಾನದ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕಾಲೇಜಿನ ಆಹ್ವಾನದ ಮೇರೆಗೆ ಭಾಗಿಯಾಗಿದ್ದೆ. ಮೌಲ್ಯಮಾಪನದ ಕೆಲಸವು ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮುಗಿದಿತ್ತು.
ಆ ನಂತರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಚ್.ಎಸ್. ಮಾಧವರಾವ್ ಮತ್ತು ಇತರರ ಜೊತೆಗೆ ಊಟ ಮಾಡಿದೆವು. ಊಟದ ನಡುವೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಗಮಿಸಿ ಭಾಶಾವಿಜ್ಞಾನ ವಿಶಯ ಬೋಧಿಸಲು ಮಾಧವರಾವ್ ಅವರು ಕೇಳಿದ್ದರು. ನಾನು ಬರುವುದಾಗಿ ಒಪ್ಪಿಕೊಂಡಿದ್ದೆ. ಊಟ ಮುಗಿಸಿದಾಗ ಸುಮಾರು ಮೂರು ಗಂಟೆಗಳಾಗಿದ್ದವು. ಕಿರಂ ಮೌಲ್ಯಮಾಪನಕ್ಕೆ ಬಾರದ ಕಾರಣ ಅವರನ್ನು ಭೇಟಿಯಾಗಲು ಬಯಸಿದೆ. ನ್ಯಾಶನಲ್ ಕಾಲೇಜಿನಿಂದ ಅವರ ಆರ್.ವಿ. ರಸ್ತೆಯ ಮನೆ ಕಾಲ್ನಡಿಯ ದೂರವಶ್ಟೇ ಇತ್ತು. ಹಾಗಾಗಿ ಮೌಲ್ಯಮಾಪನ ಮುಗಿಸಿ ನೇರವಾಗಿ ಮೇಶ್ಟ್ರ ಮನೆಯ ಕಡೆಗೆ ನಡೆದುಕೊಂಡೇ ಹೊರಟೆ. ಮನೆ ತಲುಪುವ ಹೊತ್ತಿಗೆ ಸಮಯ ಮೂರುಕಾಲಾಗಿತ್ತು. ಮೇಶ್ಟ್ರು ಒಬ್ಬರೇ ಮನೆಯಲ್ಲಿದ್ದರು. ಹಾಸಿಗೆಯ ಮೇಲೆ ಕೂತಿದ್ದರು. ಆದರೆ ವಿಪರೀತ ದಣಿದಂತೆ ಕಾಣುತ್ತಿದ್ದರು. ಒಂದೇ ಸಮನೇ ಬೆವರುತ್ತಲೂ ಇದ್ದರು. ಸ್ವಲ್ಪ ಹೊತ್ತಾದ ಮೇಲೆ, ‘ಸರ್, ಆರೋಗ್ಯ ಸರಿಯಿಲ್ಲವೇ?’ಎಂದೆ. ಹಾಗೇನಿಲ್ಲ. ಯಾಕೋ ಸ್ವಲ್ಪ ಅನ್‍ಈಸಿ ಕಣ್ಡ್ರೀ ಅಂದರು. ಮತ್ತೆ ಯಾಕೋ ಬೆನ್ನು ಹಿಡಿದಂತೆ ಅನ್ನಿಸುತ್ತಿದೆ ಎಂದರು. ಮತ್ತೆ, ‘ಸರ್ ಊಟವಾಯಿತೇ?’ ಎಂದೇ ಇನ್ನೂ ಇಲ್ಲ ಎಂದರು. ಸರ್, ಅಸಿಡಿಟಿ ಇರಬಹುದು. ಏನನ್ನಾದರೂ ತಿನ್ನಿ ಎಂದೇ. ಮನೆಯಲ್ಲಿ ಆಗ ಅಡಿಗೆ ಇದ್ದಂತೆ ಕಾಣಲಿಲ್ಲ. ರೆಡಿಯಿದ್ದ ಆಪಲ್ ಜೂಸ್ ಅನ್ನು ಫ್ರಿಜ್‍ನಿಂದ ತೆಗೆದರು. ಅಡಿಗೆ ಮನೆಯಿಂದ ಗ್ಲಾಸ್ ತಂದುಕೊಟ್ಟೆ. ಒಂದು ಲೋಟ ಜ್ಯೂಸ್ ಕುಡಿದರು. ಆ ನಂತರ ಕೊಂಚ ರಿಲ್ಯಾಕ್ಸ್ ಆದಂತೆ ಕಂಡರು. ಇದೆಲ್ಲಾ ಸುಮಾರು ಹೊತ್ತು ನಡೆಯಿತು. ಆದರೆ ನಿರಂತರವಾಗಿ ಬೆವರುತ್ತಲೇ ಇದ್ದರು. ನನಗೆ ಇವರ ಆರೋಗ್ಯವೇನೋ ಹದಗೆಟ್ಟಿದೆ ಎಂದು ಅನ್ನಿಸುತ್ತಲೇ ಇತ್ತು. ಆದರೆ ಅವರಿಗೆ ಏನನ್ನೂ ಹೇಳಲಾಗುತ್ತಿರಲಿಲ್ಲ. ಈ ನಡುವೆ ಮೌಲ್ಯಮಾಪನದ ಬಗೆಗೆ ಕೇಳಿದರು. ಎಲ್ಲವನ್ನೂ ವಿವರಿಸಿ ಹೇಳಿದೆ. ನಂತರ ನ್ಯಾಶನಲ್ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಬರಲು ಆಹ್ವಾನಿಸಿರುವುದನ್ನು ಹೇಳಿದೆ. ‘ಒಳ್ಳೆಯದಾಯಿತು ಬಿಡ್ರಿ’ ಎಂದು ಸಂತಸಪಟ್ಟರು. ಅವರು ತೀರಿಕೊಂಡ ನಂತರ ನಾನು ನ್ಯಾಶನಲ್ ಕಾಲೇಜಿನಲ್ಲಿ ಪೂರ್ಣಾವಧಿಗೆ ಕೆಲಸಕ್ಕೆ ಸೇರಿಕೊಂಡೆ.
ಅಂದು ಅವರಿಗೆ ಬೆಳಗಿನಿಂದಲೇ ಆರೋಗ್ಯ ಸರಿಯಿರಲಿಲ್ಲ. ಇದನ್ನು ಬೆಳಗ್ಗೆ ಅವರ ಜೊತೆಗಿದ್ದ ಅಪ್ಪು ಖಚಿತಪಡಿಸಿದ್ದಾರೆ. ಅವರು ಒಂದು ಬಗೆಯ ಸಂಕಟ ಮತ್ತು ಅನ್ಯಮನಸ್ಕತೆಯನ್ನು ಅನುಭವಿಸುತ್ತಿದ್ದರಂತೆ. ಬೆಳಗ್ಗೆ ತಿಂಡಿ ತಿನ್ನದೆ ಮಧ್ಯಾಹ್ನ ಒಟ್ಟಿಗೆ ಊಟ ಮಾಡುವುದಾಗಿಯೂ ಅಪ್ಪುಗೆ ತಿಳಿಸಿದ್ದರಂತೆ. ಅವರಿಗೆ ಕೆಲಸವಿದ್ದ ಕಾರಣ ಊಟದ ಸಮಯಕ್ಕೆ ಬರಲು ಸಾಧ್ಯವಾಗಿಲ್ಲವೆಂದು ಅಪ್ಪು ಹೇಳಿದರು. ಹಾಗಾಗಿ ಅಂದು ಒಬ್ಬರೇ ಮನೆಯಲ್ಲಿದ್ದು ತಮ್ಮೊಳಗೆ ನರಳಿದ್ದರೆನ್ನಿಸುತ್ತದೆ. ಸಂಜೆ ಸುಚಿತ್ರ ಸಭಾಂಗಣದಲ್ಲಿ ಬೇಂದ್ರೆಯವರ ಸಾಹಿತ್ಯದ ಕುರಿತು ಉಪನ್ಯಾಸವಿದ್ದ ಕಾರಣ ಸಂಕಟದ ನಡುವೆಯೇ ಅದಕ್ಕೂ ಸಿದ್ದವಾಗುತ್ತಿದ್ದರು. ಐದು ಗಂಟೆಯಾದ ಕಾರಣ ಮನೆಯಿಂದ ಆಟೋದಲ್ಲಿ ಹೊರಟೆವು. ಗಾಂಧಿ ಬಜಾರಿಗೆ ಬಂದು ಅಲ್ಲಿ ಅಸಿಡಿಟಿಗೆ ಮತ್ತು ಇತರೆ ಕೆಲವು ಮಾತ್ರೆಗಳನ್ನು ತೆಗೆದುಕೊಂಡು ತಿಂದರು. ನಂತರ ಅಲ್ಲಿಂದ ನೇರವಾಗಿ ಸುಚಿತ್ರಾಗೆ ತಲುಪಿದೆವು. ಆಗಲೂ ಮೇಶ್ಟ್ರು ದಣಿದೇ ಇದ್ದರು. ವಿಪರೀತ ಬೆವರುತ್ತಿದ್ದರು. ಮೇಶ್ಟ್ರನ್ನು ಸ್ವಾಗತಿಸಲು ವಿಜಯಮ್ಮ ಬಂದರು. ಅವರು ಮೇಶ್ಟ್ರನ್ನು ನೋಡಿ ಕೊಂಚ ಗಲಿಬಿಲಿಗೊಂಡರು. ಮಧ್ಯಾಹ್ನದಿಂದ ನಡೆದ ಎಲ್ಲವನ್ನು ಅವರಿಗೆ ವಿವರಿಸಿದೆ. ಅವರು ಊಟ ಮಾಡದೇ ಇದ್ದದ್ದನ್ನು ತಿಳಿಸಿದೆ. ಕೂಡಲೇ ಇಡ್ಲಿ ತರಿಸಿ ತಿನ್ನಲು ವ್ಯವಸ್ಥೆ ಮಾಡಲಾಯಿತು. ಅವರಿಗೆ ತರಿಸಿದ್ದ ಎರಡು ಇಡ್ಲಿಯಲ್ಲಿ ಒಂದನ್ನು ಮಾತ್ರ ತಿಂದರು. ಮತ್ತೊಂದು ಉಳಿಸಿದರು. ನಂತರ ಕಾಫಿ ಕುಡಿದು ಸಿಗರೇಟು ಸೇದಿದರು. ಆರು ಗಂಟೆಗೆ ಉಪನ್ಯಾಸ ಆರಂಭವಾಯಿತು. ಬೇಂದ್ರೆಯ ಸಾಹಿತ್ಯ ಕುರಿತು ದೀರ್ಘವಾಗಿ ಮಾತನಾಡಿದರು. ‘ಜೋಗಿ’ ಪದ್ಯ ಓದಿ ವಿವರಿಸಿದರು. ಎಂಟುಗಂಟೆಯವರೆಗೂ ಮಾತುಕತೆ ನಡೆಯಿತು. ಮಾತುಕತೆ ಮುಗಿಯುವ ಹೊತ್ತಿಗೆ ಮತ್ತಶ್ಟು ದಣಿದಿದ್ದರು. ಬೆವರುತ್ತಲೇ ಇದ್ದರು. ಹಾಗಾಗಿ ಅವರು ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಬೇಗನೆ ಮನೆಗೆ ಕರೆದುಕೊಂಡು ಬಂದೆವು. ನಾನು ಮತ್ತು ಅಪ್ಪು ಜೊತೆಯಲ್ಲಿ ಬಂದೆವು. ನಂತರ ವಾಸುದೇವಮೂರ್ತಿ ಮತ್ತು ಪ್ರದೀಪ್ ಮಾಲ್ಗುಡಿ ಬಂದರು. ಕೆಲ ಸಮಯದ ನಂತರ ವಾಸುದೇವ್ ಮತ್ತು ಪ್ರದೀಪ್ ಅವರನ್ನು ಮನೆಗೆ ಹೋಗಲು ಮೇಶ್ಟ್ರು ತಿಳಿಸಿದರು. ನಾವಿಬ್ಬರೂ ಅಲ್ಲಿಯೇ ಇದ್ದೆವು. ಅವರನ್ನು ಆಸ್ಪತ್ರೆಗೆ ಹೋಗಲು ಒಪ್ಪಿಸುತ್ತಿದ್ದೆವು.
ಮನೆಗೆ ಬಂದ ನಂತರ ಅವರಲ್ಲಿ ಮತ್ತಶ್ಟು ಬಳಲಿಕೆ ಚಡಪಡಿಕೆ ಇತ್ತು. ಇದನ್ನು ಗಮನಿಸಿ ಸರ್, ಆರೋಗ್ಯದಲ್ಲೇನೋ ವ್ಯತ್ಯಾಸವಾಗಿದೆ. ಡಾಕ್ಟರನ್ನು ಭೇಟಿ ಮಾಡೋಣವೆಂದೆ. ಅವರಿಗೂ ಅದೇನನ್ನಿಸಿತೋ ಏನೋ? ಆಗಲಿ ನಡೀರಿ ಎಂದರು. ಆಟೋ ಹತ್ತಿ ಗಾಂಧಿ ಬಜಾರಿಗೆ ಬಂದೆವು. ಅಲ್ಲಿ ಅವರಿಗೆ ಯಾರೋ ಪರಿಚಯದ ವೈದ್ಯರು ಇದ್ದರಂತೆ. ಆದರೆ ರಾತ್ರಿ ಎಂಟೂವರೆ ಹೊತ್ತಿಗೆ ಪರಿಚಯದ ಕ್ಲಿನಿಕ್ ಮುಚ್ಚಿತ್ತು. ಅಲ್ಲಿಂದ ನಿಧಾನವಾಗಿ ಗಾಂಧಿ ಬಜಾರ್ ಸರ್ಕಲ್ ಬಂದೆವು. ಅಲ್ಲಿ ದಿಢೀರ್ ಕುಸಿದು ಬಿದ್ದರು! ನಾವು ಗಾಬರಿಗೊಂಡೆವು. ಕೂಡಲೇ ಪಕ್ಕದಲ್ಲಿದ್ದ ಆಟೋ ಒಳಗೆ ಮೇಶ್ಟ್ರನ್ನು ಎತ್ತಿಹಾಕಿಕೊಂಡು ಸಮೀಪದಲ್ಲಿದ್ದ ಶೇಖರ್ ಆಸ್ಪತ್ರೆಗೆ ಹೋದೆವು. ಅದೇನನ್ನಿಸಿತ್ತೋ ಮೇಶ್ಟ್ರು ಹೇಳಿದರೂ ಕೂಡ ವಾಸುದೇವ್ ಹೋಗಿರಲಿಲ್ಲ. ನಮ್ಮನ್ನೇ ಹಿಂಬಾಲಿಸಿ ಬಂದಿದ್ದರು. ಅವರೂ ಸೇರಿದಂತೆ ಆಸ್ಪತ್ರೆಗೆ ಹೋದೆವು. ಅಲ್ಲಿನ ವೈದ್ಯರು ಹೃದಯಾಘಾತ ಆಗಿರುವುದನ್ನು ಖಚಿತ ಪಡಿಸಿದರು. ಅಲ್ಲಿಯವರೆಗೂ ಪ್ರಜ್ಞಾಹೀನರಾಗಿದ್ದ ಮೇಶ್ಟ್ರರು ದಿಡೀರನೇ ಮೇಲೆದ್ದು ಕೂತರು. ಮೈಕೊಡವಿಕೊಂಡರು. ‘ನನ್ನನ್ನು ಇಲ್ಲಿಗ್ಯಾಕೆ ಕರೆತಂದಿರಿ’ ಎಂದರು. ನಾವು ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಮೌನವಾಗಿದ್ದೆವು. ನಂತರ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದೆವು. ಅದಕ್ಕೆ ನನಗೇನಾಗಿದೆ? ಡಾಕ್ಟ್ರ್ ಸುಮ್ಮನೇ ಏನೇನೋ ಹೇಳುತ್ತಾರೆ ಎಂದರು. ನಾವು ಮತ್ತೂ ಒತ್ತಾಯಿಸಿದಾಗ ಮೇಶ್ಟ್ರು ಕೊಂಚ ಯೋಚಿಸಿ ಇಲ್ಲಿ ಬೇಡ. ಸೌತ್ ಎಂಡ್ ಸರ್ಕಲ್‍ನಲ್ಲಿರುವ ಬೆಂಗಳೂರು ಆಸ್ಪತ್ರೆಗೆ ದಾಖಲಾಗುವೆನೆಂದರು.
ಆಗಲಿ ಎಂದು ಎಲ್ಲರೂ ಒಪ್ಪಿದೆವು. ನಂತರ ಆಚೆಗೆ ಬಂದು, ನನಗೆ ಏನೂ ಆಗಿಲ್ರಿ. ಸ್ವಲ್ಪ ಅನ್‍ಈಸಿ ಆಗಿದೆ ಅಶ್ಟೇ ಅಂದರು. ಅವರ ಜೊತೆಗೆ ಹೆಚ್ಚು ಮಾತನಾಡುವ ಹಾಗೆ ಇರಲಿಲ್ಲ. ಅವರನ್ನು ಹೇಗೋ ಒಪ್ಪಿಸಿ ‘ಸರ್, ಕೂಡಲೇ ಆಸ್ಪತ್ರೆಗೆ ದಾಖಲಾಗಲೇಬೇಕೆಂದು ಡಾಕ್ಟ್ರ್ ಹೇಳಿದ್ದಾರೆ ಎಂದೆವು. ‘ನಡೀರಿ ಹೊರಡೋಣ’ ಎಂದು ಹೇಳಿ ಹೊರಡಿಸಿಕೊಂಡು ಶೇಖರ್ ಆಸ್ಪತ್ರೆಯಿಂದ ಹೊರಟೆವು. ಆಟೋದಲ್ಲಿ ಬರುವಾಗ ಮತ್ತೆ ಮನೆಯ ಸಮೀಪದಲ್ಲಿ ಹಾದುಹೋಗುತ್ತಿದ್ದ ಕಾರಣ ‘ಮನೆಗೆ ಹೋಗಿ ನಂತರ ಆಸ್ಪತ್ರೆಗೆ ಹೋಗೋಣ’ ಎಂದರು. ಮನೆಗೆ ಹೋಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದೆಂದು ಭಾವಿಸಿ ಮನೆಗೆ ತೆರೆಳಿದೆವು. ಮನೆಯನ್ನು ಹೊಕ್ಕವರೇ ‘ಏನ್ ಪುಟ್ದೆ, ಒಂಚೂರು ಅಕ್ಕಿಯಿಟ್ಟು ಅನ್ನ ಮಾಡಾಕಾಗಲ್ವ? ಎಂದರು. ಬಹುಶ ಹಸಿವು ಹೆಚ್ಚಾದಂತೆ ಅನ್ನಿಸುತ್ತದೆ. ಬೆಳಗ್ಗೆಯಿಂದಲೂ ಸರಿಯಾಗಿ ಏನನ್ನೂ ತಿಂದಿರಲಿಲ್ಲ. ಸುಚಿತ್ರಾದಲ್ಲಿ ಒಂದು ಇಡ್ಲಿ ತಿಂದದ್ದು ಬಿಟ್ಟರೆ ಮತ್ತೇನನ್ನೂ ತಿಂದಿರಲಿಲ್ಲ. ಮಧ್ಯಾಹ್ನ ಕುಡಿದಿದ್ದ ಆಪಲ್ ಜ್ಯೂಸ್ ಕೊಡಿ ಎಂದು ಕೇಳಿ ಒಂದು ಗುಟುಕು ಕುಡಿದರು. ನಂತರ ನೀರು ತರಲು ಹೇಳಿ ವಾಶ್ ರೂಮಿಗೆ ಹೋದರು. ಅಡಿಗೆ ಮನೆಗೆ ಹೋಗಿ ನೀರು ತರಲು ಹೋದೆ. ಮರಳಿ ಹೊತ್ತಿಗೆ ವಾಶ್ ರೂಮಿನಿಂದ ಬರುತ್ತಿದ್ದವರು ಅಲ್ಲಿಯೇ ಕುಸಿದು ಬಿದ್ದರು. ಕುಡಿದ ಆಪಲ್ ಜ್ಯೂಸ್ ವಾಂತಿಯಾಯಿತು. ಎರಡನೇ ಬಾರಿಗೆ ಕುಸಿದು ಬಿದ್ದರು. ತಂದ ನೀರನ್ನೂ ಕುಡಿಯಲಿಲ್ಲ. ಇದನ್ನು ಕಂಡ ಕೊನೆಯ ಮಗಳು ಚಂದನ ಜೋರಾಗಿ ಕೂಗಿಕೊಂಡಳು. ನಮಗೆ ಇನ್ನಶ್ಟು ಗಾಬರಿಯಾಗಿ ಕೂಡಲೇ ಆಟೋ ತಂದು ಮೇಶ್ಟ್ರನ್ನು ಎತ್ತಿಹಾಕಿಕೊಂಡು ಬೆಂಗಳೂರು ಆಸ್ಪತ್ರೆಗೆ ಕಡೆ ತೆರಳಿದೆವು. ಸ್ವಾದೀನ ಕಳೆದುಕೊಂಡು ಕುಸಿದು ಬಿದ್ದವರನ್ನು ಎತ್ತುವುದು ಅದೆಶ್ಟು ಕಶ್ಟದೆಂದೂ ಆಗ ಅರ್ಥವಾಯಿತು. ಅಪ್ಪು ಜಾಧವ್ ಮತ್ತು ನಾನು ಅವರನ್ನು ಎತ್ತಿಕೊಂಡು ಆಟೋದಲ್ಲಿ ಮಲಗಿಸಿಕೊಂಡೆವು. ಅವರು ನಮ್ಮ ತೊಡೆಯ ಮೇಲೆ ಮಗುವಿನಂತೆ ಮಲಗಿದ್ದರು. ದೇಹ ತಣ್ಣಗಾಗುತ್ತಲೇ ಇತ್ತು. ಮಂಕುಬಡಿದವರಂತಿದ್ದ ನಾವಿಬ್ಬರು ಆಸ್ಪತ್ರೆ ಬಳಿ ಇಳಿದೆವು. ತುರ್ತುಘಟಕದ ಸಿಬ್ಬಂದಿ ಸ್ಟ್ರೆಚರ್ ತಂದರು. ಮೇಶ್ಟ್ರನ್ನು ಇಳಿಸಿ ಸ್ಟ್ರೆಚರ್ ಮೇಲೆ ಮಲಗಿಸಿದೆವು. ಒಳಗೆ ಹೋದ ಕೂಡಲೇ ಪರೀಕ್ಶಿಸಿದ ವೈದ್ಯರು ‘ಹಿ ಇಸ್ ನೋ ಮೋರ್’ ಎಂದರು! ನಮ್ಮ ಬಳಿ ಮಾತು ಉಳಿದಿರಲಿಲ್ಲ.
ಆ ಹೊತ್ತಿಗೆ ನಾನು ಗರಬಡಿದಂತಾಗಿದ್ದೆ. ಮಧ್ಯಾಹ್ನ ಮೂರುಕಾಲಿನಿಂದ ಪ್ರತಿಕ್ಶಣವೂ ಮೇಶ್ಟ್ರ ದೇಹದ ಚಲನೆಯದೇ ಭಯವಿತ್ತು. ಎಲ್ಲವೂ ಕೈಮೀರಿ ನಡೆಯುತ್ತಲೇ ಇತ್ತು. ಆದರೆ ನಮ್ಮ ಕಣ್ಣಳತೆಯಲ್ಲಿಯೇ ಸಾವು ಸುಳಿದಾಡುತ್ತಿತ್ತೆಂದು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಇಲ್ಲಿ ಯೋಚಿಸುವುದಕ್ಕೂ ಅಳುವುದಕ್ಕೂ ಪುರಸೊತ್ತಿರಲಿಲ್ಲ. ಮಾರನೆಯ ದಿನ ಅವರ ಶವಸಂಸ್ಕಾರವಾದ ನಂತರ ರಾತ್ರಿ ಮನೆಗೆ ಬಂದ ಮೇಲೆ ಕಣ್ಣಳತೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಅರಿವಿಲ್ಲದೆಯೇ ಕಣ್ಣೀರು ಕೋಡಿಗರಿಯುತ್ತಿತ್ತು. ಆ ನಂತರವೇ ಮನಕ್ಕಿಡಿದಿದ್ದ ಮಂಕುತನ ಇಳಿದಿದ್ದು. ಇಂದು ಯಾಕೋ ಎಲ್ಲ ನೆನಪಾಯಿತು. ಇದನ್ನು ಬರೆಯಬೇಕೆನ್ನಿಸಿತು. ಇಂದು ಬರೆದೆ. ನಡುವೆ ಅಪ್ಪುಗೆ ಫೋನ್ ಮಾಡಿದೆ. ಎರಡು ಗಂಟೆಗಳ ಕಾಲ ಮಾತಾಡಿದೆವು. ಅಸಂಖ್ಯ ವಿಚಾರಗಳು ನಡುವೆ ಹಾದುಹೋದವು. ಮಾತಿನ ಮಧ್ಯೆ ಅಪ್ಪು ಕಣ್ಣುಗಳು ಒದ್ದೆಯಾಗುತ್ತಲೇ ಇದ್ದವು. ಅವರು ದಶಕದ ನಂತರವೂ ಇಂದು ದುಖಿಃತರಾದರು. ವಾರದಿಂದಲೂ ಕಿರಂ ಧ್ಯಾನದಲ್ಲಿಯೇ ಇರುವೆ. ಅವರು ಕಾಡುತ್ತಲೇ ಇದ್ದಾರೆ. ಇದು ಹೀಗೆಯೇ ಇರುತ್ತದೆ. ಯಾಕೆಂದರೆ ಅವರು ತಮಗೆ ಸಮನಾಗಿ ನನ್ನನ್ನು ಭಾವಿಸಿದ್ದು ಅಂತಹ ಪ್ರೀತಿ ತೋರಿಸಿದ್ದನ್ನು ಮರೆಯಲು ಹೇಗೆ ಸಾಧ್ಯ?
ಹೀಗಿದೆ. ಮೇಶ್ಟ್ರ ಜೊತೆಗಿನ ನನ್ನ ಕೊನೆಯ ಭೇಟಿ.
ಅವರಿಲ್ಲ. ಅವರ ವಿಚಾರ ನನ್ನೊಳಗಿವೆ. ಅವರ ವ್ಯಕ್ತಿತ್ವ ಕೈಹಿಡಿದು ಮುನ್ನಡೆಸುತ್ತಿದೆ.
ಇದಲ್ಲವೇ ಅವರು ಅಸಂಖ್ಯರಲ್ಲಿ ಉಳಿಸಿಹೋಗಿರುವ ಬೆಳಕು?
-ರಂಗನಾಥ ಕಂಟನಕುಂಟೆ
Labels:
ಕಿ. ರಂ. ನಾಗರಾಜ್
Location:
Udupi, Karnataka, India
Subscribe to:
Post Comments (Atom)
No comments:
Post a Comment